ಅಮಟೂರು ಬಾಳಪ್ಪನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ಹೆಚ್ಚೇನೂ ಸಿಗುವುದಿಲ್ಲ. ಸಂಗೊಳ್ಳಿ ರಾಯಣ್ಣನ ಜೊತೆ ಜೊತೆಯಾಗಿ ಹೆಗಲೆಣೆಯಾಗಿ ನಿಂತು ಕಿತ್ತೂರಿನ ರಕ್ಷಣೆಗೆ ನಿಂತ ಶೂರ ಆತ. ಜೀವನ ಮೌಲ್ಯಗಳಿಗೆ ಕುಂದಾಗದಂತೆ, ದೇಶದ ರಕ್ಷಣೆಗೆ ತೊಡಕಾದಂತೆ ಜೀವನ ನಡೆಸಿದ ವ್ಯಕ್ತಿತ್ವ ಬಾಳಪ್ಪನದು. ಆತನಿಗೆ ಸಂಬಂಧಿಸಿದಂತೆ ಲಭ್ಯವಾಗುವ ಕೆಲವೇ ಮಾಹಿತಿಗಳ ಜಾಡು ಹಿಡಿದು, ಸಂಶೋಧನೆಗಳ ಆಕರಗಳನ್ನು ಬಳಸಿಕೊಮಡು 
ಬಾಳಾಸಾಹೇಬ ಲೋಕಾಪುರ ಅವರು ಬರೆದಿರುವ ಕೃತಿ’ವೀರಕೇಸರಿ ಅಮಟೂರು ಬಾಳಪ್ಪ’ . ಈ ಕಾದಂಬರಿ ಕುರಿತು ತೇಜಾವತಿ ಎಚ್‌ ಡಿ ಬರಹ

ಹಿರಿಯ ಸಾಹಿತಿಗಳಾದ ಬಾಳಾಸಾಹೇಬ ಲೋಕಾಪುರ ಅವರು ಬರೆದಿರುವ ‘ವೀರಕೇಸರಿ ಅಮಟೂರು ಬಾಳಪ್ಪ’ ಕಾದಂಬರಿ, ಐತಿಹಾಸಿಕ ಎಳೆಯನ್ನು ಇಟ್ಟುಕೊಂಡು ಹೆಣೆದಂತಹ ಒಂದು ರೋಚಕ ಕಥನ. ಇದು ಇತಿಹಾಸ ಮತ್ತು ವರ್ತಮಾನದೊಂದಿಗೆ ನಡೆಯುವ ಅನುಸಂಧಾನ. ಅಮಟೂರು ಬಾಳಪ್ಪನ ಬಗ್ಗೆ ಈವರೆಗೆ ದೊರೆತಿರುವ ಏಕೈಕ ಲಿಖಿತ ಆಧಾರವೆಂದರೆ Asiatic jouranal vol :3 (1830) ರಲ್ಲಿ ‘ಥ್ಯಾಕರೆಯನ್ನು ಕೊಂದ ಕಿತ್ತೂರಿನ ಯೋಧ ಅಮಟೂರು ಬಾಳಪ್ಪ’ ಎಂಬುದು. ಈ ಚಿಕ್ಕ ಉಲ್ಲೇಖವನ್ನು ಹೊರತುಪಡಿಸಿ ಬಾಳಪ್ಪನ ಬಗ್ಗೆ ಎಲ್ಲಿಯೂ ಮಾಹಿತಿ ದೊರಕದು. ಸಾವಿರಾರು ವರ್ಷಗಳ ಹಿಂದಿನ ಇತಿಹಾಸದ ದಾಖಲೆಗಳು ದೊರೆತಿರುವಾಗ ಎರಡು-ಮೂರು ತಲೆಮಾರುಗಳ ಹಿಂದೆ ಜೀವಿಸಿದ್ದ ವೀರಕಲಿ ಬಾಳಪ್ಪನ ಕುರಿತ ಪುಟ ಇತಿಹಾಸದ ತೆರೆಯಿಂದ ಕಣ್ಮರೆಯಾಗಿರುವುದು ಮಾತ್ರ ವಿಪರ್ಯಾಸ. ಚರಿತ್ರೆಯ ಪುಟಗಳಲ್ಲಿ ಪ್ರಜ್ವಲಿಸಬೇಕಾಗಿದ್ದ ಜ್ಯೋತಿಯೆಡೆಗೆ ಕಣ್ಣು ಹಾಯಿಸದಿರುವ ಕಾರಣ ತಿಳಿಯದು.

(ಬಾಳಾಸಾಹೇಬ ಲೋಕಾಪುರ)

ಕಿತ್ತೂರು ಸಂಸ್ಥಾನದ ಬಾಳಪ್ಪನ ಸಮಕಾಲೀನ ವೀರ ಸಂಗೊಳ್ಳಿ ರಾಯಣ್ಣನ ಬಗ್ಗೆ ಸಿಗುವಷ್ಟು ದಾಖಲೆಗಳು, ಆಕರಗಳು ಬಾಳಪ್ಪನ ಕುರಿತು ಸಿಕ್ಕುವುದಿಲ್ಲ. ಎಲೆಮರೆಯ ಕಾಯಿಯಾಗಿದ್ದ ಬಾಳಪ್ಪನ ಕುರಿತ ಮಾಹಿತಿಗಳನ್ನು ಹೆಕ್ಕಿ ತಂದು, ಇತಿಹಾಸದ ಘಟನೆಗಳೊಂದಿಗೆ ಸಂಶೋಧನೆಯ ಹರಿವನ್ನು ಸಮೀಕರಿಸಿ ದಟ್ಟ ಅನುಭವಗಳ ಮೂಲಕ ಕಲ್ಪನೆಯ ಛಾಪು ಬೆರೆಸಿ ಕಾದಂಬರಿಯ ರೂಪದಲ್ಲಿ ಬೆಳಗಿಸಿದ ಕೀರ್ತಿ ಲೋಕಾಪುರ ಅವರಿಗೆ ಸಲ್ಲುತ್ತದೆ. ಜೊತೆಗೆ ಇದೊಂದು ಮಹತ್ವದ ದಾಖಲೆ ಕೂಡಾ ಆಗಿದೆ. “ಇತಿಹಾಸವನ್ನು ಮರೆತವರು, ಇತಿಹಾಸವನ್ನು ಸೃಷ್ಟಿಸಲಾರರು” ಎಂಬ ವಾಣಿಯಿದೆ. ಇಲ್ಲಿ ಲೋಕಾಪುರರವರು ಸಿಕ್ಕ ಒಂದು ನೂಲಿನ ಎಳೆಯನ್ನು ಬಳಸಿಕೊಂಡು, ಸಂಶೋಧನೆಯ ಆಕರಗಳನ್ನು ಹುಡುಕಿಕೊಂಡು,  ಇತಿಹಾಸವನ್ನು ಸೃಷ್ಟಿಸಿ ಮತ್ತೆ ಗತಕಾಲವನ್ನು ನೆನಪಿಸುತ್ತಾರೆ. ಕೃತಿಯನ್ನು ಓದುವಾಗಲೇ ಇದರ ಹಿಂದಿನ ಸಾಕಷ್ಟು ಅಧ್ಯಯನ ಹಾಗೂ ತಯಾರಿ ನಮಗೆ ಗೋಚರಿಸುತ್ತವೆ. ಬಾಳಪ್ಪನ ಇತಿಹಾಸವನ್ನು ತಿಳಿಯುವ ಕುತೂಹಲದೊಂದಿಗೆ ಕಾದಂಬರಿಯ ಪುಟಗಳನ್ನು ತಿರುವುತ್ತಾ ಹೋದಂತೆ ಪರಕಾಯ ಪ್ರವೇಶವಾಗಿ ಕಾದಂಬರಿಯ ಪಾತ್ರಗಳೇ ನಾವಾಗಿ ತಲ್ಲೀನರಾಗಿ ಬಿಡುತ್ತೇವೆ.

ನಿರೂಪಕರು ಗೆಳೆಯರಾದ ವೀರಭದ್ರ ಕೌದಿಯರೊಡನೆ ಬಾಳಪ್ಪನ ಹುಟ್ಟೂರಾದ ಅಮಟೂರಿಗೆ ಹೋಗಿ ಅವರ ಆಳೆತ್ತರದ ಪಂಚಲೋಹದ ಮೂರ್ತಿಯ ಮುಂದೆ ಶಿವಾಜಿಗೆ ಬಾಳಪ್ಪನವರ ಬಗ್ಗೆ ತಿಳಿಸಿ ಎಂದಾಗ ತುಸು ಮೌನದ ನಂತರ ಶಿವಾಜಿ ನುಡಿದ : “ನೋಡ್ರಿ ಸರ್, ಮಹಾರಾಣಿ ಚೆನ್ನಮ್ಮಾಜಿ ಅವರ ಮೇಲೆ ನಿರಂತರ ವೈರ ಸಾಧಿಸಿ ಕಿತ್ತೂರನ್ನು ನಾಶಪಡಿಸಲು ಹೊಂಚು ಹಾಕಿದ್ದ ಥ್ಯಾಕರೆಯ ಸಮಾಧಿ ಧಾರವಾಡದಲ್ಲಿ ಇದೆ. ಅಲ್ಲದೆ ಅವನಿಗಾಗಿ ಒಂದು ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅದು ಎಲ್ಲಿ ಅಂದಿರಿ? ಚೆನ್ನಮ್ಮನ ಪಾರ್ಕ್ ನಲ್ಲಿ ಆದರೆ…” ಈ ಮಾತುಗಳಲ್ಲಿ ಒಬ್ಬ ದೇಶದ್ರೋಹಿಯ ಸಮಾಧಿಯನ್ನು ನಿರ್ಮಿಸಿರುವ ನಮ್ಮವರು ದೇಶಭಕ್ತನನ್ನು ಇತಿಹಾಸದಿಂದ ಕಣ್ಮರೆಯಾಗಿಸಿರುವ ಬಗ್ಗೆ ವಿಷಾದವಿದೆ, ವ್ಯಂಗ್ಯವಿದೆ.

ಗೆಳೆಯ ವೀರಭದ್ರ ಕೌದಿ ಕೇಳಿದ. ‘ಶಿವಾಜಿ ಅವರೇ, ಬಾಳಪ್ಪನವರ ಜಾತಿ ಯಾವುದು?ʼ ಎಂಬ ಪ್ರಶ್ನೆಗೆ ಉತ್ತರವಾಗಿ ಶಿವಾಜಿ ಹೇಳಿದ “ಬಾಳಪ್ಪನ ಕುಲಾ ಕನ್ನಡ ಮತ್ತ ಜಾತಿ ಭಾರತ. ವೀರರಿಗೆ ಕುಲದ ಕಳಂಕ ಹಚ್ಚಬ್ಯಾಡ್ರಿ ಸರ್”. ಈ ಮಾತು ಜಾತಿ – ಮತ ಗಡಿಗಳನ್ನು ಮೀರಿದ ವೈಶಾಲ್ಯತೆಯನ್ನು ವೀರರಲ್ಲಿ ಕಾಣಬೇಕೆಂಬ ದೃಷ್ಟಿಕೋನದೊಂದಿಗೆ ವರ್ತಮಾನದಲ್ಲಿ ಜ್ವಲಂತ ಪಿಡುಗಾಗಿ ಕಾಡುತ್ತಿರುವ ಜಾತಿಯ ಕಿಚ್ಚು ಹೊತ್ತಿ ಉರಿದು ಬೂದಿಯಾಗುತ್ತಿರುವ ಜನರ ಮನಸ್ಸನ್ನು ಸಾಂಕೇತಿಕವಾಗಿ ತೆರೆದಿಡುತ್ತದೆ.

ಶಿವಾಜಿಯ ಮಾತುಗಳ ಹಿನ್ನೆಲೆಯಲ್ಲಿ,  ಈ ಕತೆಯು ಆರಂಭದಲ್ಲೇ ಆಗಮಿಸುವ ಸನ್ಯಾಸಿ ಹಾಗೂ ಒಬ್ಬ ಸಪೂರ ದೇಹದ ವ್ಯಕ್ತಿಯ ಪಾತ್ರಗಳ ಪತ್ತೇದಾರಿಯ ಜಾಡು ಹಿಡಿದು ಸಾಗುವಂತೆ ಮಾಡುತ್ತವೆ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಂಡ ಹಾಗೆ ಬಸಮ್ಮ,  ಬಾಳಪ್ಪನ ಧೈರ್ಯ ಮತ್ತು ಚೆನ್ನಬಸಪ್ಪನ ಗುರಿ ನಿಖರತೆಯನ್ನು ಗುರುತಿಸುತ್ತಾಳೆ. “ಏನು ಹೊಡದ ಕೊಲ್ಲತಾನ. ಛೇ ಅವನ ಗುರಿ ಓದ ಸುಟ್ಟ ಬಾ” ಎನ್ನುವ ಮಾತುಗಳಲ್ಲಿ ಗುರಿಯನ್ನು ಸಾಧಿಸಲು ಹಿಂಸಾಮಾರ್ಗ ಸಲ್ಲದು ಎಂಬ ಪ್ರತಿರೋಧ, ಜೀವಪರ ಕಾಳಜಿಯು ಧ್ವನಿಸುತ್ತದೆ.

ಬಾಳಪ್ಪನ ಶಬ್ದವೇದಿ ವಿದ್ಯೆಯ ಕನಸು ಇಮ್ಮಡಿಯಾಗಿ ಗರಡಿ ಮನೆಯನ್ನು ಪ್ರವೇಶಿಸಿದಾಗ ಚೆನ್ನಬಸಪ್ಪನು, ಚೆನ್ನಮ್ಮಾಜಿಯ ಕೈಯಲ್ಲಿದ್ದ ಬಿಚ್ಚುಗತ್ತಿಯನ್ನು ನೋಡಿ ಪರವಶನಾದರೆ, ಬಾಳಪ್ಪನ ಕಣ್ಣುಗಳು ಆಂಜನೇಯನ ಚಿತ್ರದತ್ತ ಹೊರಳುತ್ತವೆ.

ಗುರುಗಳು ಬಾಳಪ್ಪನ ಗುರಿ ಪರೀಕ್ಷೆಗಾಗಿ ಹಕ್ಕಿಯ ಬಣ್ಣ ಕೇಳಿದಾಗ ಬಾಳಪ್ಪ “ಹಕ್ಕಿಯ ಪುಕ್ಕಗಳನ್ನು ಇಲ್ಲಿಂದಲೇ ಎಣಿಸಿ ಹೇಳಬಲ್ಲೆ” ಎನ್ನುವ ಮಾತುಗಳಲ್ಲಿ ಅವನ ಅಚಲವಾದ ಶ್ರದ್ದೆ, ಏಕಾಗ್ರತೆ, ಗುರಿಯೆಡಗಿನ ಧ್ಯಾನ, ಆತ್ಮವಿಶ್ವಾಸಗಳು ಎದ್ದುಕಾಣುತ್ತವೆ. ಗರಡಿ ಮನೆಯಲ್ಲಿನ ಕಸರತ್ತುಗಳಿಗೆ ‘ಹರಹರ ಮಹಾದೇವ’ ಎಂಬ ಉದ್ಘೋಷ ಪುಷ್ಟಿ ನೀಡುತ್ತಿತ್ತು.

ಇಲ್ಲಿ ಲೋಕಾಪುರರವರು ಸಿಕ್ಕ ಒಂದು ನೂಲಿಳೆಯನ್ನು ಬಳಸಿಕೊಂಡು ಇತಿಹಾಸವನ್ನು ಸೃಷ್ಟಿಸಿ ಮತ್ತೆ ಗತಕಾಲವನ್ನು ನೆನಪಿಸುತ್ತಾರೆ. ಇದರ ಹಿಂದಿನ ಸಾಕಷ್ಟು ಅಧ್ಯಯನ ಹಾಗೂ ತಯಾರಿ ನಮಗೆ ಗೋಚರಿಸುತ್ತವೆ.

ಬಾಳಪ್ಪನಿಗೆ ಗೋಡೆಯ ಆಚೆ ಇರುವ ವಸ್ತುಗಳು ಕೂಡಾ ಕಾಣಿಸುತ್ತವೆ ಎನ್ನುವ ಸಾಲು ಅವನ ಪ್ರತಿಭಾ ಸಾಧನೆಯನ್ನು ಸಮರ್ಥಿಸುತ್ತದೆ. ಭೂಪತಿ ಮತ್ತು ನೀಲಕಂಠ ತಾತನವರ ಗರಡಿಯಲ್ಲಿ ಬಾಳಪ್ಪ ಕೋವಿಯಿಂದ ಗುಂಡು ಹೊಡೆಯುವುದು, ಚೆನ್ನಬಸಪ್ಪ ಬಿಚ್ಚುಗತ್ತಿಯ ಅಭ್ಯಾಸ ಮಾಡುವುದರ ಚಿತ್ರಣ ಅವರ ವಿದ್ಯಾಭ್ಯಾಸದ ದಿನಗಳನ್ನು ನಿರೂಪಿಸುತ್ತದೆ.

ಗರಡಿ ಮನೆಯ ಅಭ್ಯಾಸ ಮುಗಿದು ಯುವಕರಾಗಿ ಬೆಳೆದ ವೇಳೆಗೆ ಬಾಳಪ್ಪನ ಉಡುಗೆ ತೊಡುಗೆ, ರೂಪ ಮೈಕಟ್ಟು ಶೃಂಗಾರಗಳ ವರ್ಣನೆಯು ಅವನ ವ್ಯಕ್ತಿಚಿತ್ರವನ್ನು ಕಣ್ಣೆದುರಿಗೆ ನಿಲ್ಲಿಸುತ್ತದೆ. ವಯೋಸಹಜ ಕನಸುಗಳು ಅರಳುವ ವೇಳೆ ಸೂರ್ಯಕಾಂತಿಯ ಆಗಮವಾಗಿ ಅವಳು ಆರತಿ ಬೆಳಗಿ ನಿವಾಳಿ ತೆಗೆದು ಕುಂಕುಮದಿಂದ ನಾಮ ಕೊರೆದು ದೇವರ ಆಶೀರ್ವಾದ ಕೋರುತ್ತಾರೆ.  ಜನರೆಲ್ಲಾ ಬಾಳಪ್ಪನ ಬೆನ್ನು ಗಮನಿಸುವಾಗ ಅವನು ಹಾಯ್ದು ಹೋದ ಹಾದಿಯನ್ನು ಮುಟ್ಟಿ ನಮಸ್ಕರಿಸುವುದು ಹೆಣ್ಣಿನ ಎದೆಯೊಳಗಿನ ಹರಕೆ ಎಂಬ ಮಾತು ಉಲ್ಲೇಖಿಸುತ್ತಾರೆ. ಅಂದರೆ ಈ ವರ್ಣನೆಯು ಈ ನೆಲದ ಹೆಣ್ಣುಮಕ್ಕಳ ಸಿರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ

ಪ್ರೀತಿಯ ಶಿಷ್ಯರಾದ ಪ್ರಚಂಡ “ಗುರಿಕಾರ ಬಾಳಪ್ಪನವರೆ ಮತ್ತು ಬಿಚ್ಚುಗತ್ತಿ ಚೆನ್ನಬಸಪ್ಪನವರೆ” ಎಂಬ ಸಂಬೋಧನೆಯ ಮಾತುಗಳಿಗೆ ಇಬ್ಬರೂ ಪುಳಕಗೊಂಡು ತಾವು ನಡೆದು ಬಂದ ಹೆಜ್ಜೆಗಳು ಕಣ್ಮುಂದೆ ಸರಿದು ಹೋಗುತ್ತವೆ. ಅಮಟೂರಿಗೆ ತರಿಸಿದ್ದ ಕುದುರೆಗಳಲ್ಲಿ ಬಿಳಿ ಗಂಡು ಕುದುರೆ ‘ಮಲ್ಲಾರಿ’ಯನ್ನು ಬಾಳಪ್ಪನಿಗೂ ಕಪ್ಪು ಹೆಣ್ಣು ಕುದುರೆ ‘ರೂಪರಶ್ಮಿ’ಯನ್ನು ಚೆನ್ನಬಸಪ್ಪನಿಗೂ ಉಡುಗೊರೆಯಾಗಿ ನೀಡಲಾಗುತ್ತದೆ. ಈ ಎರಡೂ ಕುದುರೆಗಳ ಸಹಿತ ಯೋಧರ ಚಿತ್ರಗಳನ್ನು ಪುಸ್ತಕದ ಹಲವು ಪುಟಗಳಲ್ಲಿ ಬಳಸಲಾಗಿದೆ. ಇಲ್ಲಿ ಕಥೆಯ ಉದ್ದಕ್ಕೂ ಬಾಳಪ್ಪನ ಜೊತೆಗಿರುವ ಮಲ್ಲಾರಿಯ ಬಾಂಧವ್ಯ ಯಾವ ಸಂಗಾತಿಯ ಪ್ರೀತಿಗೂ ಕಡಿಮೆಯಿಲ್ಲ. ಬಾಳಪ್ಪನ ಮಾತುಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಸಂಜ್ಞೆಗಳು, ಭಾವನೆಗಳಿಂದ ಅದನ್ನು ಒಂದು ಪ್ರಮುಖ ಪಾತ್ರವಾಗಿಸಿರುವುದು ಕಾದಂಬರಿಕಾರರ ಕೌಶಲವನ್ನು ತೋರಿಸುತ್ತದೆ.

ಹದವಾದ ಮನಸ್ಸುಗಳಲ್ಲಿ ಮೂಡಿದ ಆಕರ್ಷಣೆ, ಅನುರಾಗಕ್ಕೆ ಎದುರಾಗುವ ಜಾತಿಕಂದಕ ಎಂಬ ಸಮಸ್ಯೆ ಸರ್ವಕಾಲಕ್ಕೂ ಜೀವಂತವೆನ್ನುವುದು ಇಲ್ಲಿಯೂ ಸಾಬೀತಾಗಿ ಬಾಳಪ್ಪನ ಬಾಯಲ್ಲಿ “ಜಾತಿಯ ಕಂದಕವನ್ನು ದಾಟುವ ದುಸ್ಸಾಹಸ ನನಗೇಕೆ?” ಎಂಬ ಮಾತುಗಳು ಹೊರಹೊಮ್ಮುತ್ತವೆ.   ಸೂರ್ಯಕಾಂತಿಯ ಮಾತುಗಳಲ್ಲಿ ವ್ಯಕ್ತವಾಗುವ ಪ್ರಬುದ್ಧತೆಗೆ ಸಾಕ್ಷಿ ‘ಯೋಧರಿಗೆ ಎಲ್ಲಿಯ ಜಾತಿ ಇಬ್ಬರೂ ಕೂಡಿಯೇ ಕಂದಕವನ್ನು ದಾಟೋಣ, ಹೊಸ ಹಾದಿ ನಿರ್ಮಿಸೋಣ’ ಎಂಬ ಸಾಲುಗಳು. ಇಲ್ಲಿ ಒಬ್ಬ ಯೋಧನಾದವನು ವೀರನ ಧರ್ಮವನ್ನು ಕಾಪಾಡುವುದು ಕೂಡ ಮುಖ್ಯವಾಗುತ್ತದೆ. ಇಬ್ಬರ ನಡುವಿನ ಸಂಭಾಷಣೆ ಅತಿ ಎನ್ನಿಸದೆ ಕಾವ್ಯಾತ್ಮಕವಾಗಿ ಓದಿಸಿಕೊಳ್ಳುತ್ತ ರಸಮಯ ಅನುಭವವನ್ನು ನೀಡುತ್ತದೆ.

ಅಸ್ಥಿರ ಮನಸ್ಥಿತಿ, ಅನಾರೋಗ್ಯದಿಂದ ಕಾಲ ಕಳೆಯುತ್ತಿದ್ದ ಯುವರಾಜ ಶಿವಲಿಂಗರುದ್ರಸರ್ಜರು, ಮಲ್ಲಪ್ಪಶೆಟ್ಟಿಯ ತಾಳಕ್ಕೆ ಕುಣಿಯುವ ಗೊಂಬೆಯಾಗಿ ವರ್ತಿಸುವುದು ಕಿತ್ತೂರು ಸಂಸ್ಥಾನದ ಸ್ಥಂಬಗಳು ಸಡಿಲಗೊಳ್ಳುತ್ತಿರುವ ಸೂಚನೆಯನ್ನು ನೀಡುತ್ತವೆ. ಸಂಸ್ಥಾನದ ರಕ್ಷಣೆಗೆ ಒದ್ದಾಡುವ ರುದ್ರಮ್ಮ ಹಾಗೂ ಚೆನ್ನಮ್ಮರ ಬಾಂಧವ್ಯ ಕರುಳ ಕುಡಿಯ ಕಾಳಜಿ, ಪಿತೂರಿಗಳ ಬಗೆಗಿನ ಕಳವಳ ಅವರ ಮಾತುಗಳಲ್ಲಿ ಗೋಚರಿಸುತ್ತವೆ.

ಇತ್ತ ಕಿತ್ತೂರಿನ ಸಂಭ್ರಮಕ್ಕೆ ಬಾಳಪ್ಪನನ್ನು ಬೀಳ್ಕೊಡುವ ವೇಳೆ ತಾಯಿಯ ಕರುಳಲ್ಲಿ ಪ್ರೀತಿ, ತಂದೆಯ ಹೃದಯದಲ್ಲಿ ಕರ್ತವ್ಯದ ಪ್ರಜ್ಞೆಯ ಕುರಿತು ಕೃತಿಯಲ್ಲಿ ಆಪ್ತವಾದ ಮಾತುಗಳಿವೆ.  ಮಲಪ್ರಭೆಯನ್ನು ಗೆಳೆಯರಿಬ್ಬರೂ ಈಜುವಾಗ ಎದುರಾಗುವ ಮೊಸಳೆಯ ಪ್ರಸಂಗ ಮತ್ತು ನಂದಿ ಬಸವಣ್ಣನ ಗುಡಿಯಲ್ಲಿನ ಹುಲಿಯ ಪ್ರಸಂಗಗಳು ಇವರ ಶೌರ್ಯದ ಸಂಕೇತವಾದ  ರೋಚಕ ಸಂಗತಿಗಳು. ಈ ಸುದ್ದಿಯು ಇವರಿಗಿಂತ ಮೊದಲೇ ಕಿತ್ತೂರನ್ನು ತಲುಪಿ ಸಕಲ ಗೌರವದೊಂದಿಗೆ  ಅವರಿಗೆ ಅದ್ಧೂರಿ ಸ್ವಾಗತ ದೊರೆಯುತ್ತದೆ.

ಅರಮನೆಯ ಬಿಡಾರದಲ್ಲಿ ಸಂಗೊಳ್ಳಿ ರಾಯಣ್ಣನ ಭೇಟಿಯಾಗಿ ಮೂವರು ವೀರರ ಸಮಾಗಮ, ಕುಶಲೋಪರಿ ಮಾತುಗಳು, ಪರಸ್ಪರ ಗೌರವಿಸುವಿಕೆ, ಗುರುಭಕ್ತಿ ಓದುಗರಲ್ಲಿ ಒಂದು ರೀತಿಯ ರೋಮಾಂಚನವನ್ನೇ ಉಂಟುಮಾಡುವಂತಿವೆ.

ಶತ್ರುಗಳು ಯಾವಾಗಲೂ ಮನೆಯ ಬಾಗಿಲಲ್ಲೇ ಇರುತ್ತಾರೆಂಬ ಮಾತಿನಂತೆ ಮಲ್ಲಪ್ಪಶೆಟ್ಟಿ ಇಲ್ಲಿ ಅರಮನೆಯ ಕೂಳು ತಿಂದು ಎರಡು ಬಗೆಯುವ ಖಳನಾಯಕನಾದರೆ, ಅಮಟೂರು ಬಾಳಪ್ಪನು ನ್ಯಾಯ, ನಿಷ್ಠೆ, ಧರ್ಮ ಪರತೆಗಾಗಿ ಪ್ರಾಣತೆರುವ ಹುತಾತ್ಮನಾಗಿ ಕಾಣಸಿಗುತ್ತಾನೆ.

ಅರಮನೆಯಲ್ಲಿ ನಡೆಯುವ ಕುತಂತ್ರಗಳಿಗೆ ಕೊತಕೊತನೇ ಕುದಿಯುವ ಬಿಸಿರಕ್ತದ ಬುಗ್ಗೆಯಾಗಿ ಬಾಳಪ್ಪ ಎಷ್ಟೇ ತೀಕ್ಷ್ಣ ಮತಿಯಾದರೂ ಅರಮನೆಯ ಹಿರಿಯರ ಮಾತಿಗೆ ತಣ್ಣಗಾಗಬೇಕಾಗುತ್ತದೆ.

“ಇದು ಕನ್ನಡ ನಾಡಿನ ಗಂಡು ಮೆಟ್ಟಿದ ನೆಲ, ನನ್ನ ಜೀವ ಇರುವವರೆಗೂ ಕಿತ್ತೂರಿನ ಈ ರಾಜ್ಯವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ” ಎಂಬ ಈ ಮಾತುಗಳು ಬಾಳಪ್ಪನ ಕನ್ನಡಾಭಿಮಾನವನ್ನು  ಸ್ಪಷ್ಟವಾಗಿ ಸಾರುತ್ತದೆ. ಕಾದಂಬರಿಯ ಪುಟಗಳಲ್ಲಿ ಇಂತಹ ಎಷ್ಟೋ ಶಕ್ತಿಪೂರ್ಣ ಸಾಲುಗಳು ಕನ್ನಡಿಗನ ಕೆಚ್ಚೆದೆಗೆ ನಾಟುತ್ತವೆ.

ಮರಾಠ ಪೇಶ್ವೆಗಳು ಸ್ನೇಹಭೇಟಿಯ ನೆಪದಲ್ಲಿ ಮಲ್ಲಸರ್ಜ ದೊರೆಗಳನ್ನು ಪೂಣಾದ ಸೆರೆಮನೆಯಲ್ಲಿ ಇಟ್ಟಾಗ ಅವರನ್ನು ಬಿಡಿಸಲು ಮಾಡಿದ ಸಂಧಾನಸೂತ್ರ ವಿಫಲವಾಗಿ ಮಂತ್ರಿ ಗುರುಸಿದ್ದಪ್ಪನವರು ಕಾಣುವ ತಮ್ಮ ದೊರೆಗಳ ದೀನ ಸ್ಥಿತಿ ಹೃದಯ ವಿದ್ರಾವಕವೆನಿಸುತ್ತದೆ. ಕೊನೆಗೆ ಮಲ್ಲಸರ್ಜನು ಮಾರ್ಗ ಮಧ್ಯದಲ್ಲಿ ‘ಕಿತ್ತೂರು ಕಿತ್ತೂರು’ ಎಂದು ಕನವರಿಸಿದಾಗ.. ಇವರು “ಬಹಳ ದೂರ ಇಲ್ಲ ಪ್ರಭು ನಾವು ಈಗ ಕಿತ್ತೂರ ನಾಡಲ್ಲಿಯೇ ಇದ್ದೇವೆ” ಎಂದಾಗ ಕಣ್ಣಲ್ಲಿ ಹೊಳಪು ಮೂಡಿ ಸಂತೋಷಗೊಳ್ಳುತ್ತಾರೆ. ಇಲ್ಲಿ ದೊರೆ, ಸೈನಿಕ, ಪ್ರಜೆ ಯಾರೇ ಆಗಿದ್ದರೂ ತಾಯ್ನೆಲದ ಸೆಳೆತ, ತಾಯಿಯ ಮಡಿಲಲ್ಲಿ ಕಾಣುವ ಪ್ರೀತಿ ಸ್ವರ್ಗಕ್ಕೆ ಸಮನಾಗಿರುತ್ತದೆ ಎಂಬ ಆಶಯವು ಎದ್ದು ಕಾಣುತ್ತದೆ.  ಹಾಗಾಗಿ ಮಲ್ಲಸರ್ಜನೂ ತಾನು ತಾಯ್ನೆಲವನ್ನು ಸೇರಿ ನೆಮ್ಮದಿಯಲ್ಲಿ ಪ್ರಾಣ ಬಿಡುವ ಸನ್ನಿವೇಶ ಎಲ್ಲ ಕನ್ನಡಿಗರ ಹೃದಯವನ್ನು ತೇವ ಮಾಡುತ್ತದೆ.

ದೊರೆಯ ಮರಣ ನಂತರ ಬಾಳಪ್ಪ ಚೆನ್ನಮ್ಮಳ ಮಗನೆಂದೇ ಗುರುತಿಸಿಕೊಳ್ಳುತ್ತಾನೆ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರ ಮಮತೆಯ ಗಟ್ಟಿಬಂಧವನ್ನು ನಾವು ಕಾಣಬಹುದು. ಬಾಳಪ್ಪ ಮತ್ತು ರಾಯಣ್ಣ ಚೆನ್ನಮ್ಮಳ ಎರಡು ಕಣ್ಣುಗಳಾಗಿ ಕಿತ್ತೂರು ಸಂಸ್ಥಾನವನ್ನು ಕಾಯುವ ಜವಾಬ್ದಾರಿ ಹೊರುತ್ತಾರೆ. ಜೊತೆಗೆ ಚೆನ್ನಬಸಪ್ಪನು ಜೊತೆಯಾಗುತ್ತಾನೆ.

“ದೇವರ ಮೂರ್ತಿಯ ಮುಂದೆ ನಾವು ಬಾಗಿ ನಮಸ್ಕರಿಸುವುದು ನಮ್ಮ ಮನಃಶುದ್ಧಿ  ಆಗುವುದಕ್ಕಾಗಿಯೇ  ವಿನಃ ಆ ದೇವರು ಬಂದು ನಮ್ಮ ಕಷ್ಟ ಪರಿಹರಿಸುತ್ತಾನೆ ಎಂದೇನು ಅಲ್ಲ” – ಸ್ವಾಮೀಜಿ ಹೇಳುವ ಈ ಮಾತುಗಳು ದೇವರ ಬಗೆಗಿನ ಅಮೂರ್ತ ನಂಬಿಕೆಯೊಡನೆ ನಮ್ಮ ಪರಿಶ್ರಮದಿಂದ ಕ್ರಿಯೆಗಳು ಸಾಗಬೇಕೆ ವಿನಃ ವ್ರತ, ಜಪ, ಉಪವಾಸ, ಮಂತ್ರ, ಭಜನೆಗಳಿಂದ ಅಲ್ಲ. ನಮ್ಮೊಳಗಿನ ಶಕ್ತಿಯೇ ನಮ್ಮನ್ನು ಮುನ್ನಡೆಸುವುದು ಎಂಬ ವಾಸ್ತವ ಪ್ರಜ್ಞೆ ಹಾಗೂ ಆಧ್ಯಾತ್ಮಿಕ ನಿಲುವುಗಳನ್ನು ಹೇಳುತ್ತವೆ.

ಬ್ರಿಟಿಷರ ಒಡೆದು ಆಳುವ ನೀತಿ, ಭಾರತೀಯ ರಾಜಮನೆತನಗಳ ಒಳಗೆ ಹುನ್ನಾರ ಹೂಡುವ ಮಲ್ಲಪ್ಪಶೆಟ್ಟಿಯಂತಹವರ ಕಿಡಿಗೇಡಿಗಳ ಕೂಟ ವ್ಯವಸ್ಥೆಗಳು, ಸ್ನೇಹಭೇಟಿಯ ಕಪಟ ನಾಟಕಗಳು ಇವೆಲ್ಲವು ಕಣ್ಣೆದುರು ನಡೆಯುವ ನೈಜ ಘಟನೆಗಳಂತೆ ಘಟಿಸುತ್ತ ಸಾಗುತ್ತವೆ. ಸುತ್ತ ನಡೆಯುವ ಪಿತೂರಿಗಳನ್ನು ಗಂಭೀರವಾಗಿ ಪರಿಗಣಿಸದೆ ಮತ್ತೆ ಮತ್ತೆ ಕಿತ್ತೂರಿಗೆ ಆಪತ್ತನ್ನು ತಂದುಕೊಳ್ಳುವ ಪರಿಸ್ಥಿಯಲ್ಲಿ ಚೆನ್ನಮ್ಮಳನ್ನು ಬಂಧಿಸಲು ಬರುವ ಥ್ಯಾಕರೆಯನ್ನು ಜಂಗಮನ ವೇಷಧರಿಸಿ ಕುಳಿತು ಅವನ ಕುತಂತ್ರವನ್ನು ಗ್ರಹಿಸಿದ್ದ ಬಾಳಪ್ಪನು ಗುಂಡು ಹಾರಿಸುವಾಗ ಜಂಗಮನ ತತ್ವಕ್ಕೆ ಕಳಂಕವಾಗಬಾರದೆಂದು ವೇಷವನ್ನು ಕಳಚಿಡುವುದು ಅವನ ವಿಚಾರವಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಈ ಎಲ್ಲ ನಡೆಗಳ ಮೇಲೆ ನಿಗಾ ವಹಿಸಿದ್ದ ಮಲ್ಲಪ್ಪಶೆಟ್ಟಿಯ ಸಹಾಯದಿಂದ ಕುಂಪಣಿ ಸರಕಾರ ಚಾಪ್ಲಿನ್ ನ ನೇತೃತ್ವದಲ್ಲಿ ಯೋಜನೆ ರೂಪಿಸಿ ಬಾಳಪ್ಪನ ಬಲಿಗಾಗಿ ಹೊಂಚುಹಾಕುವುದು ಹಾಗೂ ಅವರಿಗೆ ಕಿತ್ತೂರನ್ನು ಆಕ್ರಮಿಸಿಕೊಳ್ಳುವುದಕ್ಕಿಂತ ಬಾಳಪ್ಪನನ್ನು ಕೊಲ್ಲುವುದೇ ಮುಖ್ಯ ಉದ್ದೇಶವಾಗಿಬಿಡುವುದು. ಬಾಳಪ್ಪನು ಎಲ್ಲ ದುಷ್ಟ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಅವರ ನಿದ್ದೆಯಲ್ಲು ಸಿಂಹಸ್ವಪ್ನವಾಗಿ ಕಾಡುವುದರಿಂದಲೇ ಬ್ರಿಟಿಷರು ಮೊದಲು ಬಾಳಪ್ಪನನ್ನು ಗುರಿಯಾಗಿಟ್ಟುಕೊಳ್ಳುತ್ತಾರೆ. ಆದರೆ ವಿಧಿಯಾಟವೆ ಬೇರೆಯಾಗಿ ಗೋಸಾಯಿಗಳ ಮಾರು ವೇಷದಲ್ಲಿದ್ದ ಅವನು ಚಾಪ್ಲಿನ್ ನನ್ನು ಕೊಲ್ಲುವ ಬದಲು ಅವನೇ ಚಾಪ್ಲಿನ್ ನಿಂದ ಕೊಲ್ಲಲ್ಪಟ್ಟಿದ್ದು ಮಾತ್ರ ನಿಗೂಢ.

ಹೀಗೆ ಒಬ್ಬ ಸಾಮಾನ್ಯ ಬಾಲಕ ಅಸಾಮಾನ್ಯನಾಗಲು ಅವನು ತುಳಿದ ಹಾದಿಗಳು ನಮ್ಮ ಸ್ಮೃತಿ ಪಟಲದಲ್ಲಿ ಹೊಸದೊಂದು ಇತಿಹಾಸವನ್ನು ಬರೆಯುತ್ತವೆ. ವೀರ ಕೇಸರಿಯ ಅಂತ್ಯ ಹೇಗಾಯಿತು ಎಂಬ ಕುರಿತು ಹಲವು ಅಭಿಪ್ರಾಯಗಳಿವೆ; ಅದರಲ್ಲಿ ಇದು ಒಂದು ಆವೃತ್ತಿ ಮಾತ್ರ ಎನ್ನುತ್ತಾ ಕತೆ ಮುಗಿಸುವ ಶಿವಾಜಿಯ ಬಾಯಲ್ಲಿ ಬರುವ ಕೊನೆಯ ಈ ಮಾತು ಎಲ್ಲರನ್ನೂ ಚಿಂತೆಗೆ ಈಡುಮಾಡುತ್ತದೆ.


“ಕಾಲದ ಕೆಸರಲ್ಲಿ ಹುಗಿದು ಹೋದ ಇತಿಹಾಸದ ಸುಕ್ಕು ಬಿಡಿಸುವವರು ಯಾರು?” ಸಿಕ್ಕು ಬಿಡಿಸುವ ಪ್ರಯತ್ನವನ್ನು ಬಾಳಾಸಾಹೇಬ ಲೋಕಾಪುರರವರು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಕಾದಂಬರಿಯನ್ನುಓದುವಾಗ ಸ್ಪಷ್ಟವಾಗುತ್ತದೆ.