ಮಿನೋವನ್ ನಾಗರೀಕತೆಯನ್ನು ಯೂರೋಪ್ ಖಂಡದ ಮೊದಲ ಮುಂದುವರೆದ ನಾಗರೀಕತೆ ಎಂದು ಗುರುತಿಸಲಾಗಿದೆ. ಆಧುನಿಕ ಕಲೆ, ಸುಧಾರಿತ ಒಲೆ, ಎಲ್ಲಾ ಕಾಲಕ್ಕೂ ಸಲ್ಲುವ ಒಳಚರಂಡಿ ವ್ಯವಸ್ಥೆ, ತಮ್ಮದೇ ಆದ ಭಾಷೆ, ಲಿಪಿ, ವೈದ್ಯ ಪದ್ಧತಿ ಎಲ್ಲವನ್ನೂ ಹೊಂದಿದ್ದ ಜನ. ವಿಶೇಷತೆ ಎಂದರೆ ಅವರ ದ್ರಾಕ್ಷಿ ಮತ್ತು ಅಂಜೂರದ ಕೃಷಿ. ಕ್ರಿಸ್ತ ಪೂರ್ವದಿಂದಲೂ ಒಂದು ಜಾತಿಯ ದ್ರಾಕ್ಷಿ ಗಿಡದ ಬೇರನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಇಲ್ಲಿನ ಜನ. ಅದರಿಂದ ತಯಾರಿಸಿದ ವೈನ್ ಪೇಯ ಇಲ್ಲಿನ ವ್ಯಾಪಾರದ ಆಕರ್ಷಣೆ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಗ್ರೀಸ್‌ನ ಸ್ಯಾಂಟೋರಿನಿಯಲ್ಲಿ ಓಡಾಡಿದ ಮತ್ತಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ

ನನ್ನೂರಲ್ಲಿ ಮಕ್ಕಳು ಭಿಕ್ಷೆ ಬೇಡುವುದ ಕಂಡರೆ ತಕ್ಷಣ ಕ್ರಮ ವಹಿಸಬಲ್ಲೆ, ಆದರೆ ಇಲ್ಲಿ?! ನಮ್ಮ ದೇಶದಲ್ಲಿ ಬಿಟ್ಟರೆ ಮಕ್ಕಳು ಭಿಕ್ಷೆ ಬಿಡುವುದನ್ನು ನಾನು ಇಲ್ಲಿಯೇ ನೋಡಿದ್ದು. ಪುರಾಣ ಎಷ್ಟೇ ಸಿರಿವಂತ ಇದ್ದರೇನು ವಾಸ್ತವದಲ್ಲಿ ಭಿಕ್ಷುಕರು ತಪ್ಪಿಲ್ಲ ಗ್ರೀಸ್ ದೇಶದಲ್ಲಿ.

ಸ್ವಯಂಭೂ ಮನುವಿನ ಮಗಳು ದೇವಹೂತಿ. ಬ್ರಹ್ಮಜ್ಞಾನಿಯನ್ನು ಮದುವೆಯಾಗಲು ಬಯಸಿದಾಗ, 10000 ವರ್ಷಗಳ ನಂತರದ ತಪಸ್ಸಿಗೆ ಫಲವಾಗಿದ್ದು ಕರ್ದಮ ಋಷಿಗಳು. ಮದುವೆ ಆದಂದಿನಿಂದ ನೂರು ವರ್ಷಗಳ ಕಾಲ ತಮ್ಮ ದೇವಾರಾಧನೆಯಲ್ಲಿ ಮುಳುಗಿದವರು ಹೆಂಡತಿಯ ಮುಖವನ್ನು ಅಪ್ಪಿತಪ್ಪಿಯೂ ನೋಡಲಿಲ್ಲವಂತೆ. ಶತಮಾನದ ನಂತರ ಅಕಸ್ಮಾತಾಗಿ ಕಣ್ಣಿಗೆ ಬಿದ್ದವಳ ಜೊತೆ ಮಾತನಾಡುವಾಗ ಆಕೆ ಹೇಳಿದಳಂತೆ “ವಯಸ್ಸಿನಲ್ಲಿ ನಿಮ್ಮಿಂದ ಒಬ್ಬ ಬ್ರಹ್ಮಜ್ಞಾನಿ ಮಗನನ್ನು ಪಡೆಯಬೇಕು ಎನ್ನುವ ಆಸೆ ಇತ್ತು” ಎಂದು. ಈಗಲೂ ಆಸೆ ಪೂರೈಸಬಲ್ಲೆ ಎನ್ನುವ ವಿಶ್ವಾಸವನ್ನು ತುಂಬಿದ ಗಂಡನಾಗಿದ್ದ ಋಷಿವರ್ಯರು ಅಲ್ಲಿಯೇ ಕಾಣುತ್ತಿದ್ದ ಸರೋವರದಲ್ಲಿ ಒಂದು ಮುಳುಗು ಹಾಕಿ ಬರಲು ಹೇಳಿದರಂತೆ.

ಹೆಂಡತಿಯ ಮೂಲಭೂತ ಲಕ್ಷಣ ಎಲ್ಲವನ್ನೂ ಪ್ರಶ್ನಿಸುವುದು ತಾನೆ? ದೇವಹೂತಿಯೂ ಕಾರಣ ಕೇಳಿದಳಂತೆ. “ನನ್ನ ತಪಸ್ಸಿಗೆ ಮೆಚ್ಚಿ ಭಗವಂತನು ಪ್ರಕಟಗೊಂಡಾಗ ಅವನ ಕಣ್ಣಿನಲ್ಲಿ ಆನಂದಭಾಷ್ಫ ಸುರಿಯುತ್ತಿತ್ತು. ಅದರ ಒಂದು ಹನಿ ಬಿದ್ದು ಬಿಂದು ಈ ಸರೋವರವಾಗಿದೆ…” ಎಂದು ಅದರ ಕಾಮಧೇನು ಗುಣವನ್ನು ವರ್ಣಿಸಿದರಂತೆ. ಈ ಕಥೆ ಕೇಳಿದಾಗಿನಿಂದಲೂ ಬಿಂದು ಸರೋವರ ಎನ್ನುವ ಕನಸಿನಲ್ಲಿ ಒಮ್ಮೆಯಾದರೂ ಜೀವಿಸಿ ಬಿಡಬೇಕು ಎನ್ನುವ ಆಸೆ, ಅತಿಯಾಸೆ, ದುರಾಸೆ ಕಾಡುತ್ತಿತ್ತು. ಅದು ಅಸಾಧ್ಯ ಎಂದು ತಿಳಿದೇ ಕನಸು ಕಾಣುತ್ತಲೇ ಇದ್ದೆ. ಎಚ್ಚರವಾದಾಗ ಇದ್ದೆ ಅಂತಹದ್ದೇ ಒಂದು ಜಾಗದಲ್ಲಿ. ಗ್ರೀಸ್ ದೇಶದ ಸ್ಯಾಂಟೊರಿನೊ ಎನ್ನುವ ದ್ವೀಪ. ನಿಜದ ಬಿಂದು ಸರೋವರವೇ ಏನೋ!

ಹುಟ್ಟಿನಿಂದ ಈ ದಿನದವರೆಗೂ ಅದೇ ಸೌಂದರ್ಯವನ್ನು ಅಪ್ರಯತ್ನವಾಗಿ ಕಾಯ್ದುಕೊಂಡಿರುವ ಈ ದ್ವೀಪ ನಿಜಾರ್ಥದಲ್ಲಿ ದ್ವೀಪಗಳ ಅಮಿತಾಬ್ ಬಚ್ಚನ್. ಪ್ರಕೃತಿಗೆ ಇಷ್ಟು ಪುರುಸೊತ್ತು ಯಾವಾಗ ಸಿಕ್ಕಿತು ಇಷ್ಟು ಚಂದದ ಮತ್ತು perfect ಜಾಗ ಸೃಷ್ಟಿಸಲು, ಎನ್ನಿಸುತ್ತೆ ಸ್ಯಾಂಟೊರಿನಿ ನೋಡಿದಾಗ. UNESCO ಈ ದ್ವೀಪವನ್ನು ಪಾರಂಪರಿಕ ತಾಣ ಎಂದು ಗುರುತಿಸಿದೆ.

Blue Star Ferriesನಲ್ಲಿ ಅಥೆನ್ಸ್‌ನಿಂದ ಸ್ಯಾಂಟೊರಿನಿಗೆ ಪ್ರಯಾಣ ಶುರುವಿಟ್ಟೆ. ಸಮುದ್ರಯಾವೆಂದರೆ ಮೊದಲ ಪ್ರೀತಿಯ ಮಂಜು ಕರಗಿದಂತೆ. ಆದರೆ ಈ ದಾರಿ ಕರಗದೆ ನಿಲ್ಲುವ ಆತ್ಮಿಕ ಸ್ನೇಹದಂತೆ. ಹಡಗಿನಿಂದ ಹೊರಬಂದು ನೋಡುವ ಮೊದಲೇ ಉಸಿರಾಗಿದ್ದು ಮೌನದ ಸದ್ದು. 90.63 ಚದರ ಕಲೋಮೀಟರ್ ಅಳತೆಯಿರುವ ನೆಲದಲ್ಲಿ ಸುಮಾರು 16000ದಷ್ಟು ಇರುವ ಜನಸಂಖ್ಯೆ ಹೊಂದಿ ವಿಶಾಲ ಹೆಜ್ಜೆಗೆ ಅವಕಾಶವಾಗಿರುವ ದ್ವೀಪದಲ್ಲಿ ಜಾನ್ ಮತ್ತು ಟೊಸೋಸ್ ಎನ್ನುವ ಅಣ್ಣ ತಮ್ಮಂದಿರ ‘ಮಿಸಗೋನಿಯಾ ಹೌಸ್’ ಕಡೆಗೆ ನಡೆದೆ. ಬಸ್‍‍ಸ್ಟಾಪ್ ಎನ್ನುವ ಫಲಕಕ್ಕೆ ಸ್ವಲ್ಪವೇ ದೂರದಲ್ಲಿ ಇದ್ದೆ. ಬಸ್ ಬಂತು. ನನ್ನೊಳಗೆ ಬೆಂಗಳೂರಿನ ಧಾವಂತ ಬುಸ್ ಎಂದು ಎದ್ದು ನಿಂತಿತು. ಡ್ರೈವರ್ ತೆಳು ನಗೆ ನಗುತ್ತಾ, ನಿಧಾನವಾಗಿ ಬರಲು ಸಂಜ್ಞೆ ಮಾಡಿದ. “ಎಲ್ಲೋ ಡಾಂಕಿ ಬ್ರುವೆರೀಸ್” ಇಳಿವ ಜಾಗವಾಗಿತ್ತು. ಅದರ ಪಕ್ಕದ್ದೇ ಮೆಸಗೋನಿಯಾ ರಸ್ತೆ. ಕೆಂಪು ಮತ್ತು ಬೂದು ಬಣ್ಣದ ಸಣ್ಣಸಣ್ಣ ಹೂವುಗಳಿದ್ದ ಅಂಗಳ ಸ್ವಾಗತಿಸಿದಾಗ ಇದು ಪುರಾಣದಲ್ಲಿ ಕೇಳಿದ್ದ ಬಿಂದು ಸರೋವರದ ಹಾದಿಯೇ ಎಂದು ಖಚಿತವಾಯಿತು.

ಮಿನೋವನ್ ನಾಗರೀಕತೆಯ ಕಾಲದಲ್ಲಿ ಅಂದರೆ ಸುಮಾರು 3600 ವರ್ಷಗಳ ಹಿಂದೆ ಎದ್ದಿದ್ದ ಜ್ವಾಲಾಮುಖಿಯಿಂದ ಸುರಿದ ರಸ ಹರಿಯುತ್ತಲೇ ತಣಿವಾಗಿ ಹುಟ್ಟಿಕೊಂಡ ದ್ವೀಪ ಸ್ಯಾಂಟೋರಿನಿ. ಈ ದ್ವೀಪದ ಉದಯ, ಬಾಳ್ವೆ, ಭೂಗೋಳ, ಚರಿತ್ರೆ, ಆರ್ಥಿಕತೆ ಎಲ್ಲವನ್ನೂ ಅಲ್ಲೇ ಹತ್ತಿರದಲ್ಲಿ ಇರುವ ಆಕ್ರೋಟಿರಿ ಪುರಾತತ್ವ ಇಲಾಖೆಯ ಸೈಟ್‌ನಲ್ಲಿ ವಿವರಿಸುತ್ತಾರೆ. ಮಿನೋವನ್ ನಾಗರೀಕತೆಯನ್ನು ಯೂರೋಪ್ ಖಂಡದ ಮೊದಲ ಮುಂದುವರೆದ ನಾಗರೀಕತೆ ಎಂದು ಗುರುತಿಸಲಾಗಿದೆ. ಆಧುನಿಕ ಕಲೆ, ಸುಧಾರಿತ ಒಲೆ, ಎಲ್ಲಾ ಕಾಲಕ್ಕೂ ಸಲ್ಲುವ ಒಳಚರಂಡಿ ವ್ಯವಸ್ಥೆ, ತಮ್ಮದೇ ಆದ ಭಾಷೆ, ಲಿಪಿ, ವೈದ್ಯ ಪದ್ಧತಿ ಎಲ್ಲವನ್ನೂ ಹೊಂದಿದ್ದ ಜನ. ವಿಶೇಷತೆ ಎಂದರೆ ಅವರ ದ್ರಾಕ್ಷಿ ಮತ್ತು ಅಂಜೂರದ ಕೃಷಿ. ಕ್ರಿಸ್ತ ಪೂರ್ವದಿಂದಲೂ ಒಂದು ಜಾತಿಯ ದ್ರಾಕ್ಷಿ ಗಿಡದ ಬೇರನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಇಲ್ಲಿನ ಜನ. ಅದರಿಂದ ತಯಾರಿಸಿದ ವೈನ್ ಪೇಯ ಇಲ್ಲಿನ ವ್ಯಾಪಾರದ ಆಕರ್ಷಣೆ. ಹೊರಗಿನಿಂದ ಯಾವ ಗಿಡ, ಬೀಜವನ್ನೂ ಇಲ್ಲಿಗೆ ತರಲು ಬಿಡರು, ಇಲ್ಲಿನ ಯಾವ ಬೇರು, ಬೀಜ, ಚಿಗುರುಗಳನ್ನು ಹೊರಗೆ ತೆಗೆದುಕೊಂಡು ಹೋಗಲೂ ಅನುಮತಿ ಇಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಸಸ್ಯ ಜೀವದ ಸ್ಥಳೀಯತೆ ರಕ್ಷಿಸಿಕೊಳ್ಳಲಾಗುತ್ತಿದೆ. ನೀಲಿ ಆಗಿನ ಜನರ ಇಷ್ಟದ ಬಣ್ಣ ಇದ್ದಿತ್ತೇನೋ ಎನ್ನುತ್ತಾರೆ ಈಗಿನವರು. ಆಗಿನ ರೀತಿಯ 150 ಕಲಾಕೃತಿಗಳು ಈವರೆಗೂ ಸಿಕ್ಕಿದೆಯಂತೆ.

ಹುಟ್ಟಿನಿಂದ ಈ ದಿನದವರೆಗೂ ಅದೇ ಸೌಂದರ್ಯವನ್ನು ಅಪ್ರಯತ್ನವಾಗಿ ಕಾಯ್ದುಕೊಂಡಿರುವ ಈ ದ್ವೀಪ ನಿಜಾರ್ಥದಲ್ಲಿ ದ್ವೀಪಗಳ ಅಮಿತಾಬ್ ಬಚ್ಚನ್. ಪ್ರಕೃತಿಗೆ ಇಷ್ಟು ಪುರುಸೊತ್ತು ಯಾವಾಗ ಸಿಕ್ಕಿತು ಇಷ್ಟು ಚಂದದ ಮತ್ತು perfect ಜಾಗ ಸೃಷ್ಟಿಸಲು, ಎನ್ನಿಸುತ್ತೆ ಸ್ಯಾಂಟೊರಿನಿ ನೋಡಿದಾಗ.

ಯೇಸುವಿನ ಕಾಲಕ್ಕೂ ಮೊದಲಿನದ್ದು ಎನ್ನಲಾಗುವ olive ಮರದ ತುಂಡನ್ನು ಜೋಪಾನ ಮಾಡಿದ್ದಾರೆ. ಆಗಿನಿಂದ ಈಗಿನವರೆಗೂ ಕೆಲಸ ಮಾಡಿದ ಮಾಡುತ್ತಿರುವ Archaeologistಗಳ ಛಾಯಾಚಿತ್ರಗಳನ್ನು ತೂಗು ಹಾಕಿದ್ದಾರೆ ಇಲ್ಲಿ. ಇಷ್ಟೆಲ್ಲಾ ಮಾಹಿತಿ ನೀಡಿ, ಜಾಗವನ್ನು ತಾಳ್ಮೆಯಿಂದ ಅಚ್ಚುಕಟ್ಟಾಗಿ ತೋರಿಸಿ ಮಾರ್ಗದರ್ಶಿ ಅಲೆಕ್ಸಾಂಡ್ರಾ. ಬರೋಬರಿ ಎರಡೂ ಗಂಟೆಗಳ ಮಾತಿನ ನಂತರ, “ನಿಮಗೆ ಸುಸ್ತಿಲ್ಲದಿದ್ದರೆ ಹೇಳಿ ನಾನು ಇನ್ನೂ ಮಾತನಾಡುತ್ತೇನೆ.

Firstly I am a Greek, above that I am a woman and importantly I am theologist so i can talk and talk and talk…” ಎನ್ನುತ್ತಾ ಬೀಳ್ಕೊಟ್ಟಳು.

Akrotiri Excavation Siteನ ಒಳಗೆ ಹೋಗುವಾಗ 30-32 ವರ್ಷದ ಸಭ್ಯರಂತೆ ಕಾಣುತ್ತಿದ್ದ ನಾಲ್ಕು ಕನ್ನಡಿಗ ಗಂಡಸರ ಮಾತು ಅನಾಯಾಸವಾಗಿ ಕಿವಿಗೆ ಬಿತ್ತು. ಅವರುಗಳು ಪ್ರವಾಸ ಮಾರ್ಗದರ್ಶಿ ವಿಕ್ಕಿ ಅವಳು ಧರಿಸಿದ್ದ ಬಟ್ಟೆ ಮತ್ತು ಅವಳ ಅಂಗಾಂಗಗಳ ಬಗ್ಗೆ ಅತೀ ಎಂದರೆ ಅತೀ ಎನ್ನುವ ಅಸಭ್ಯ ಭಾಷೆಯಲ್ಲಿ ಜೋರಾಗಿ ಮಾತನಾಡುತ್ತಿದ್ದರು. ಬಹಳ ತಳಮಳಗೊಂಡೆ. ಹೋಗಿ ರಪರಪ ಬಾರಿಸಿ ಬಿಡಬೇಕು ಎನ್ನಿಸಿತು. ಆದರೆ ದೂರದೂರಿನಲ್ಲಿ ಮತ್ತೊಮ್ಮೆ ಶಕ್ತಿಗಿಂತ ಯುಕ್ತಿ ಮೇಲು ಎನಿಸಿ ನಾಲಿಗೆ ಕಚ್ಚಿಕೊಂಡೆ. ಯಾವ ಸಿದ್ಧಾಂತ ಆದರ್ಶಗಳೂ ಸ್ವಸುಸ್ಥಿರತೆಯ ವಿಷಯದಲ್ಲಿ ಬಂದಾಗ ಮಾಕಾಡೆ ಮಲಗಿ ಬಿಡುವುದು ನೋವಿನ ವಿಷಯವಾದರೂ ಸತ್ಯ. ಅಂದಹಾಗೆ ಸ್ಯಾಂಟೊರಿನಿ ಎನ್ನುವ ಹೆಸರು 13ನೆಯ ಶತಮಾನದಲ್ಲಿ ಆಳಿದ ರಾಜ ಮನೆತನ ನೀಡಿದ್ದಂತೆ. ‘ಸಂತ ಇರಿನಿ’ ಇದರ ಮೂಲ ಹೆಸರು.

ಹೌದಲ್ಲ ಮಾರ್ಗದರ್ಶಿ ವಿಕ್ಕಿ ಜೊತೆಯಲ್ಲಿ ಸುತ್ತಿದ ವಿಷಯ ತಿಳಿಸಲೇ ಇಲ್ಲವಲ್ಲ! ಸ್ಯಾಂಟೊರಿನಿ ದ್ವೀಪವು ಕಮಾರಿ ಟೌನ್, ಪಿರ್ಗೋಸ್, ಫಿರಾ, ಓಯಿಅ, ರೆಡ್ ಬೀಚ್ ಎನ್ನುವ ಸಣ್ಣ ಸಣ್ಣ ಜಾಗಗಳನ್ನು ಹೊಂದಿದೆ. ಫಿರಾ ಎನ್ನುವ ಜಾಗದಲ್ಲಿ ಆಹಾರ ಪ್ರಿಯರಿಗೆ ಮೆಕ್ಸಿಕನ್ ಊಟ ಅತ್ಯಂತ ಸ್ವಾದಿಷ್ಟ ಎನಿಸದೆ ಇರದು. ರೆಡ್ ಬೀಚ್ ಜಾಗದಲ್ಲಿ ಹೆಂಗಸರಿಗೆ ಸಾಕುಸಾಕಾಗುವಷ್ಟು ಪುರಾತನ ಶಿಲೆ, ಲೋಹ ಮತ್ತು ಕಲ್ಲುಗಳಲ್ಲಿ ಮಾಡಿರುವ ಓಲೆ, ಬಳೆ, ತಲೆ ಹಾಕಿಕೊಳ್ಳುವ ಕ್ಲಿಪ್ ಇವೆಲ್ಲಾ ಎಷ್ಟೊಂದು ವೈವಿದ್ಯಮಯ ರೀತಿಯಲ್ಲಿ ಸಿಗುತ್ತವೆ. ಹಾಂ, ಇನ್ನೊಂದು ವಿಷಯ ಫಿರಾಕ್ಕೆ ಹೋದಾಗ ಅಲ್ಲಿ ‘ಜೈಂಟ್ ಬೀನ್ಸ್’ನಲ್ಲಿ ಮಾಡಿರುವ ಸೂಪ್ ಕುಡಿಯುವುದು ಮರೆತರೆ ನಿರಾಸೆ ಖಂಡಿತ. ಎಲಿಯಾಸ್ ಮೊನಾಸ್ಟ್ರಿಯಲ್ಲಿ ಅಲ್ಲಿಯೇ ತಯಾರಾಗುವ ಜೇನುತುಪ್ಪ ಮತ್ತು ಒಣಗಿದ ಸಣ್ಣ ಟೊಮ್ಯಾಟೋ ಹಣ್ಣುಗಳು ಬಹಳ ರುಚಿಕರ. ಈ ಎಲ್ಲಾ ಜಾಗಗಳನ್ನು ತೋರಿಸಿದ್ದು ವಿಕ್ಕಿ.

ಸ್ಯಾಂಟೋರಿನಿಯಲ್ಲಿ ಸಿಕ್ಕ ಪುಸ್ತಕ ಮಳಿಗೆ Atlantis Books. ಅತ್ಯಂತ ಪುರಾತನ ಪುಸ್ತಕ ಮಳಿಗೆ 1870ರಿಂದ ಎಲ್ಲಾ ಜ್ವಾಲಾಮುಖಿ, ಭೂಕಂಪಗಳನ್ನು ತಡೆದುಕೊಂಡು ಹಾಗೆಯೇ ಇದೆಯಂತೆ ಈ ಅಂಗಡಿ. ಸಂಜೆಯಾಯಿತು. ಕಮಾರಿ ಟೌನ್ ಮಾರುಕಟ್ಟೆಯಲ್ಲಿ ಜನ ಮೋಜುಮಸ್ತಿಯ ಕೊನೆಯ ಹಂತದಲ್ಲಿ ಇದ್ದರು. ಮೈದಾನದಲ್ಲಿ ಸುರಿಯುತ್ತಿದ್ದ ಇಬ್ಬನಿಯಲ್ಲಿ ಹರೆಯ ಫುಟ್‌ಬಾಲ್ ಆಡುತ್ತಿತ್ತು. ಅಲ್ಲಿಂದ ನಾನಿದ್ದ ಜಾಗಕ್ಕೆ 3 ಕಿಲೋಮೀಟರ್. ಮನೆಯ ರಸ್ತೆಯ ಆರಂಭದಲ್ಲಿ ಒಂದ್ಹತ್ತಿಪ್ಪತ್ತು ಹೆಜ್ಜೆ ಸವೆದ ನಂತರ ಬಲಕ್ಕೆ ಕಾಣುತ್ತಿತ್ತು “Canava Roussos, 1836, Santorini Wines” ಎನ್ನುವ ಫಲಕ.

Canava ಎಂದರೆ ಗ್ರೀಕ್ ಭಾಷೆಯಲ್ಲಿ winery ಎಂದು. 1836ರಿಂದ ರೌಸಸ್ಸ್ ಕುಟುಂಬದವರು ವೈನ್ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದು ತಮ್ಮದೇ ಬ್ರಾಂಡಿನ ತರಹಾವರಿ ವೈನ್‌ಗಳನ್ನು ತಯಾರಿಸುತ್ತಿದ್ದಾರೆ. Santorini Roussos, Nykteri Roussos, Rivari Roussos, Caldera Roussos, Athiri Roussos, Mavranthiro Roussos and Nama Roussos. ಇವುಗಳು ಅಲ್ಲಿ ತಯಾರಾಗುವ ವೈನ್‌ಗಳ ಹೆಸರುಗಳು ದ್ರಾಕ್ಷಿ ಗಿಡದ ಬೇರು ಬೆಳೆಯುತ್ತಿರುವ ಹಂತದಲ್ಲೇ ಅದನ್ನು ಆಗ್ಗಿಂದಾಗ್ಗೆ ಬುಟ್ಟಿಯಾಕಾರಕ್ಕೆ ತಿರುಗಿಸುತ್ತಾ, ದ್ರಾಕ್ಷಿಗಳು ಅದರೊಳಗೇ ಬೆಳೆಯುವಂತೆ ನಿಗಧಿತ ಉಷ್ಣತೆಯಲ್ಲಿ ಕೃಷಿ ಮಾಡುವುದು ಈ ಮನೆತನದ ವಿಶೇಷತೆ.

ಅಲ್ಲಿ ಯಾವ ಯಾವ ವೈನ್‌ ಅನ್ನು ಯಾವಯಾವ ರೀತಿಯಲ್ಲಿ ಏನೇನು ರುಚಿಯಲ್ಲಿ, ಯಾವ ಸಮಯದಲ್ಲಿ ತಯಾರು ಮಾಡಲಾಗಿದೆ. ಅದರ ಮಾರುಕಟ್ಟೆ ಮಹತ್ವ ಏನು ಎಲ್ಲವನ್ನೂ ತಿಳಿಸುತ್ತಾರೆ. ರುಚಿ ನೋಡಲು ವೈನ್ ನೀಡುತ್ತಾರೆ. “ನಮ್ಮ ವೈನ್ ತಯಾರಿಕೆಯ ಇತಿಹಾಸವನ್ನು ನಾವು ದಶಕಗಳಲ್ಲಿ ಅಲ್ಲ ಸಹಸ್ರಮಾನಗಳಲ್ಲಿ ಹೇಳುತ್ತೇವೆ” ಎನ್ನುತ್ತಾರೆ ರೌಸಸ್ಸ್ ಕುಟುಂಬದವರು. Spiros Jhon Roussos, ಈತ 1979ರಲ್ಲಿ ತಯಾರು ಮಾಡಿದ wine ಅನ್ನು ಗಡಂಗುಗಳಲ್ಲಿ ಇಡಲಾಗಿದೆ. ಇನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಸದ್ಯದಲ್ಲಿಯೇ ಮಾರಾಟಕ್ಕೆ ಇಡುವ ಯೋಜನೆ ಇದೆಯಂತೆ. Canava Roussos ಒಳಗೆ ಹೋದರೆ ಅದೊಂದು ಜಗತ್ತು. ಏಕಾಂತ ಎನ್ನುವ ಸಖನನ್ನು ಹನಿಹನಿಯಾಗಿ ಚಪ್ಪರಿಸಿ ಅನುಭವಿಸುವುದಕ್ಕಾಗಿಯೇ ಜಗತ್ತನ್ನೇ ಹಸಿರು ಬಾಟಲಿಯಲ್ಲಿ ಸೆರೆಯಾಗಿಸಿ ನೀಡುವ ಅನೂಹ್ಯ ಆಕಾಶ Canava Roussos.

ಅಲ್ಲಿಂದ ಹಡಗಿನಲ್ಲಿ ಹಳೆಯ ಬಂದರಿಗೆ ಬಂದಿಳಿದು ಸಣ್ಣ ದೋಣಿಯಲ್ಲಿ ಮುಂದುವರೆದು ನೀರಿನಿಂದ ಹೆಜ್ಜೆ ಹೊರಗಿಟ್ಟಾಗ ಸಿಕ್ಕಿದ್ದು ಮೈಕನೋಸ್ ಎನ್ನುವ ದ್ವೀಪ.

“ತುಂ ರೂಠೀ ರಹೋ ಮೆ ಮನಾತಾ ರಹೂ ಇನ್ ಅದಾವೊಂಪೆ ಔರ್ ಪ್ಯಾರ್ ಆತಾ ಹೇ…. ಥೋಡೆ ಶಿಖ್ವೆ ಭೀ ಹೊ ಔರ್ ಶಿಕಾಯತ್ ಭಿ ಹೊ ಮಜ಼್ಝ ಜೀನೇಕ ಔರ್ ಹೀ ಆತಾ ಹೇ” ಅಂತ ಬದುಕಿಗೆ ಹಾಡಬೇಕು ಎನ್ನಿಸುತ್ತೆ ಇಲ್ಲಿಗೆ ಬಂದ ಕೂಡಲೇ. ಇಡೀ ದ್ವೀಪಕ್ಕೆ ನೀಲಿ ಮತ್ತು ಬಿಳಿಯ ಬಣ್ಣ ಬಳಿಯಲಾಗಿದೆ. ಸಣ್ಣಾತೀಸಣ್ಣ ಗಲ್ಲಿಗಳು, ಅವುಗಳೂ ಏರಿ ಇಳಿಯುವಂತೆ. ಇರುವ ಕೆಲವೇ ಮನೆಗಳು ಅಟ್ಟಣಿಗೆಯ ಮೇಲೆ. ಚೌಕಾಕಾರದ ಕಲ್ಲಿನ ನೆಲಹಾಸುಗಳು. ಮುಳುಗುವ ಸೂರ್ಯನನ್ನು ಅಂಗೈಯಿಗೆ ತಂದಿಡುವಂತಹ ಇಲ್ಲಿನ ಸಮುದ್ರ ತಟದಲ್ಲಿ ಕುಂತಾಗ. ಈ ಆಯುಷ್ಯದ ವಯಸ್ಸು ಎಷ್ಟಿರಬಹುದು ಎಂದು ಕೇಳಿಕೊಳ್ಳದಿದ್ದರೆ ಅದು ಮೈಕನೋಸ್ ದ್ವೀಪ ಅಲ್ಲ!

ಒಂದೋ ಎರಡೋ ಅಬ್ಬಬ್ಬಾ ಎಂದರೆ ಮೂರೊ ಗಲ್ಲಿಗಳು, ದಾಟಿ ಇತ್ತ ಕಡೆಗೆ ಬಂದರೆ ಹಿನ್ನೀರಿನ ಬಂದರು. ಅದರ ಪಕ್ಕದ ನೆಲಹಾಸುಗಳ ಮೇಲೆ ಆಲಿವ್ ಸೋಪು ಮತ್ತು ಇತರೆ ಸಾಮಾನುಗಳನ್ನು ಮಾರುವ ಅಂಗಡಿಗಳು, ಹಿಂಭಾಗಕ್ಕೆ ಆತುಕೊಂಡ ಹೋಟೆಲುಗಳು. ಮಬ್ಬು ಬೆಳಕಿನ ಪಬ್‌ಗಳೂ ಸುಂದರ ಇಲ್ಲಿ. ಅತ್ಯಂತ ಕಡಿಮೆ ಬೆಲೆಗೆ ಆಲಿವ್‌ನಲ್ಲಿ ಮಾಡಿರುವ ಸೋಪುಗಳು, ಶ್ಯಾಂಪು, ಎಣ್ಣೆಗಳು ಯಥೇಚ್ಛವಾಗಿ ಸಿಗುತ್ತವೆ ಇಲ್ಲಿ. ಅಲ್ಲಿಂದ ಒಂದೆರಡು ಗಂಟೆಗಳಲ್ಲಿ ದೂರದಲ್ಲಿ ಡೆಲೋಸ್ ಎನ್ನುವ ಮತ್ತೊಂದು ಪುರಾತನ ಶಾಸ್ತ್ರ ವಿಭಾಗಕ್ಕೆ ಸೇರಿದ ಕ್ಷೇತ್ರ. ಆಕಾಶ, ನೀರು, ಮಣ್ಣು, ಜನ ಎಲ್ಲವೂ ಬಿಳಿ ಬಣ್ಣ ಇಲ್ಲಿ. ಮತ್ತೆ ಸಿಕ್ಕಿತು ನನಗೆ Mykonos Cultural and Folklore Museum. 18ನೆಯ ಶತಮಾನದಲ್ಲಿ ಅಲ್ಲಿನ ಜನ ಬಳಸುತ್ತಿದ್ದ ಬಟ್ಟೆ, ಪಾತ್ರೆ, ಅಲಂಕಾರಿಕ ಸಾಮಗ್ರಿಗಳು, ಅಡುಗೆ ಮನೆ, ಮನೋರಂಜನೆ, ಕರಕುಶಲ ವಸ್ತುಗಳು ಹೀಗೆ ಎಲ್ಲವನ್ನೂ ಮಾದರಿಯಾಗಿ ಇಟ್ಟಿದ್ದಾರೆ ಅಲ್ಲಿ ಬೇರೆ ಎಲ್ಲೆಡೆಯೂ ಇರುವ ಸಂಗ್ರಹಾಲಯದಂತೆ.

ಈ ಪುಟ್ಟ ದ್ವೀಪ ಮಾತ್ರ ಸುಮ್ಮನೆ ಕುಳಿತು ತಿಂದು ಕುಡಿದು, ನಿದ್ದೆ ಮಾಡಿ, ಸಮುದ್ರನೋಟದ ನಶೆ ಏರಿಸಿಕೊಳ್ಳಲು ಇರುವ ಸುಂದರ ತಾಣ. ಇಲ್ಲಿಂದ ರಫಿನಾ ಎನ್ನುವ ಸಣ್ಣ ನಡುಗಡ್ಡೆಯೆಡೆಗೆ ಪಯಣಿಸಲು ಹಡಗಿನಲ್ಲಿ ಕುಳಿತು, ಹಿಂದಿರುಗಿ ಮೈಕನೋಸ್ ದ್ವೀಪನ್ನು ಕಂಡಾಗ ಅನ್ನಿಸಿದ್ದು “ಕೆಟ್ಟವನೇ ಹೋಗಾಚೆ ಅಂತ ದಬ್ಬಿ ಬಾಗಿಲು ಮುಚ್ಚಿ ಕೂತುಕೊಳ್ಳುವ ಹಾಗೂ ಇಲ್ಲ, ಆಹಾ ಸಭ್ಯ ಸುಬಗನೆ ಅಂತ ಒಳಕ್ಕೆ ಕರೆದು ಸೊಂಟಕ್ಕೆ ಚುಚ್ಚಿಕೊಂಡೇ ಇರಲಾಗೊಲ್ಲ ಬದುಕು ಎನ್ನುವ ಮಾಯಗಾರ ಥೇಟ್ ಗಂಡನ ಹಾಗೆ”. ರಫಿನಾದಿಂದ ಅಥೆನ್ಸ್ ಬರೀ 20 ನಿಮಿಷ ದೂರದಲ್ಲಿ ಇದೆ. ಮನೆಗೆ ಹಿಂದಿರುಗುವಾಗ ಪ್ರಯಾಣವನ್ನು ಅಳೆಯುವ ಮಾಪನ ಯಾವುದು ಎನ್ನುವ ಲೆಕ್ಕಾಚಾರಕ್ಕೆ ಬಿದ್ದಿದ್ದೆ. ಅವನು ಅಲೆಕ್ಸ್ ನಾನು ಅಥೀನಾ ಎಂದು Mills & Boon ಸರಣಿಯಿಂದ ಕದ್ದಿಟ್ಟುಕೊಂಡಿದ್ದ ಕನಸು ಗ್ರೀಸ್ ದೇಶವನ್ನು ಸುತ್ತಿಸಿತ್ತು.