1.
ಹಾರಿಹೋಗಬೇಕಿತ್ತು ನಾವು
ಅಲ್ಲೆಲ್ಲೋ ಮಿಂಚಿ ಮರೆಯಾದ ಸಿಡಿಲಾಚೆಗಿನ ಭೂಮಿಗೆ
ಕಡಲಾಚೆಗಿನ ಕ್ಷತಿಜದಂಚಿಗೆ
ಮಡಿಲಾಚೆಗಿನ ತುಡಿತದೂರಿಗೆ
ಆದರೀಗ
ಅಲ್ಲಿ ಜೋರು ಮಳೆಯಂತೆ
ಎಲ್ಲ ಕೊಚ್ಚಿಹೋಗಿದೆಯೆಂತೆ
ಥೇಟ್ ನನ್ನೊಳಗಿನ ಹಾಗೆ

2.
ಸುರಿವ ಮಳೆನೀರ ಜಲಪಾತಕ್ಕೆಲ್ಲ ಹೆಸರಿಡುವರೇ
ಒಳಗ ಬೇಗುದಿಗೆಲ್ಲ ಹೆಸರಿಡಲಾಗುವುದಿಲ್ಲ
ಬರೀ ಕುದಿಯುತ್ತದೆ
ಬತ್ತುತ್ತದೆ
ಮತ್ತೆ ಮಳೆ ಅದದೇ  ಮಳೆ
ಸುರುವಿಲ್ಲ ಕೊನೆಯಿಲ್ಲದಾವರ್ತದಲ್ಲಿ
ಧೋ ಎಂದು ಧುಮುಕಿಬಿಡಬೇಕು
ಮತ್ತೆ ಮಳೆಯಾಗುವ ಮುನ್ನ

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

 

 

 

 

 

 

 

 

3.
ಒದ್ದೆರೆಕ್ಕೆಯ ಪುಕ್ಕ ಬಿಡಿಸಹೋದರೆ ಒಳಗೆಲ್ಲ ಮಳೆ ಹೊಯ್ಯುತ್ತದೆ
ಎಳೆಎಳೆಯಾಗಿ  ಬಿಚ್ಚಿ ಹರಡಿ ಕೂತಿರುವೆ
ಉಳಿದ ರೆಕ್ಕೆಯ ಪುಕ್ಕದ ಗರಿಯ
ಉಣ್ಣೆರೆಕ್ಕೆಯ ಹನಿ ಆರುವುದಿಲ್ಲ
ನಾ ಹರವುವುದ ಬಿಡುವುದಿಲ್ಲ

4.
ತಿಂಗಳಿಡೀ ಹೊಯ್ದ ಹುಯಿಲಿಗೆ ಹಬ್ಬಿನಿಂತ
ಹೆಬ್ಬಂಡೆಯೆಡೆಯ ಬಳ್ಳಿ
ಹೊಕ್ಕುಳ ಹರಿದು ಹೊರನಡೆದಂತೆ
ನಾಜೂಕು ನಡೆದೇಬಿಟ್ಟೆ
ಅದಕ್ಕಿನ್ನು  ಹೂ ಬಿಡುವುದಿಲ್ಲ ಎಷ್ಟು ಮಳೆ ಹೊಯ್ದರೂ

5.
ಬಯಲಲ್ಲಿ  ಒದ್ದೆಯಾಗುವುದೇ ಒಳಿತು
ಬಿಸಿಲು ಬಂದಲ್ಲೆಲ್ಲ ಬಾನು ಕಂಡೀತು
ಮಳೆನಿಂತರೂ ಮರದಡಿಗೆ ಮಳೆ ನಿಲ್ಲುವುದಿಲ್ಲ

6.
ಬಾ ಅಲ್ಲೆಲ್ಲೋ ಹನಿಸುತ್ತಿದೆ ನೋಡು
ಹನಿ ಕಟ್ಟುವಾ  ಹಗುರಾಗುವ
ಹನಿವ ತನುವಿಗೆಲ್ಲಿ ಮೋಡದ ಹಂಗು
ಕೆನ್ನೆಗೂ ಬೆನ್ನಿಗೂ  ನಡುವಿನ ಅಂತರದ ಲೆಕ್ಕ ಕೇಳಿದರೆ  ಹೇಳಬಲ್ಲೆಯಾ
ನನ್ನ ಹುಚ್ಚುತನದ ಭಾಗವಾಗುವಷ್ಟು ಹುಚ್ಚುಪ್ರೀತಿ ನಿನಗಿರಲಿಲ್ಲ ಬಿಡು ಹುಡುಗಾ