ಇರುವೆ ಮತ್ತು ಮೊಮ್ಮಗಳು
ಹೀಗೊಂದು ಮಧ್ಯಾಹ್ನ
ಸಣ್ಣನೆ ನಿದ್ದೆ ಮುಗಿಸಿ
ಹಾಯಾಗಿ ಕಾಲು ಚಾಚಿ ಕುಳಿತು
ಓದಲು ಗುರುತಿಟ್ಟ ಪುಸ್ತಕ ತೆರೆದೆ;
ಏನೋ ಚಲಿಸಿದಂತೆ ಅನಿಸಿತು ಪುಸ್ತಕದೊಳಗೆ
ಹಗುರ ಝಾಡಿಸಿದೆ ಮಡಿಚಿಟ್ಟ ಹಾಳೆಯನ್ನು
ಉದುರಿ ಬಿದ್ದವು ನೆಲಕೆ ಅಕ್ಷರಗಳು!
ಅರೆ ಏನಿದು? ನೊಡಿದೆ ಕನ್ನಡಕ ಸರಿಪಡಿಸಿ!
ಹರಿದಾಡುತ್ತಿದ್ದವು ಒಂದಿಷ್ಟು ಇರುವೆಗಳು
ಅರಿವಿನ ಅಕ್ಷರಗಳೇ ಮೈಪಡೆದು ಚಲಿಸಿದಂತೆ!
ಕಿಲಕಿಲನೆ ನಕ್ಕಳು ನಕ್ಷತ್ರ ಹೊಳೆದಂತೆ
ಬೆನ್ನ ಹಿಂದೆ ನಿಂತ ಪುಟ್ಟ ಮೊಮ್ಮಗಳು
ಸಕ್ಕರೆ ಹಿಡಿದ ಅಕ್ಕರೆಯ ಚಿಕ್ಕ ಕೈಗಳಿಂದ
ಪಟಪಟನೆ ಚಪ್ಪಾಳೆ ತಟ್ಟುತ್ತ!
ಪುಸ್ತಕ ಎದೆಗೊತ್ತಿ ನಾನು-
ಕಂವುಚಿ ಕುಳಿತೆ ಅವಳತ್ತ ನೋಡುತ
ಇದಾವುದರ ಪರಿವೆಯಿಲ್ಲದೆ ಸಾಗುತ್ತಿದ್ದವು
ಇರುವೆಗಳು ಸಾಲು ಸಾಲು ಸಕ್ಕರೆ ಹೊತ್ತು
ಅವುಗಳತ್ತ ಮಗ್ನಚಿತ್ತ ಮೊಮ್ಮಗಳದ್ದು!
ವೈ. ಬಿ. ಹಾಲಬಾವಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ ಕ್ಷೇತ್ರ.
ಸಂಚಯ ಪತ್ರಿಕೆಯ ‘ಬೇಂದ್ರೆ ಸ್ಮೃತಿ’ ಪುಸ್ತಕ ಬಹುಮಾನ, ಎರಡು ಬಾರಿ ಸಂಕ್ರಮಣ ಪತ್ರಿಕೆಯ ‘ಸಂಕ್ರಮಣ’ ಕಾವ್ಯ ಪ್ರಶಸ್ತಿ, ಕಲಬುರ್ಗಿಯ ‘ಚಂದ್ರಶೇಖರ ಅಜಾದ್’ ಕಾವ್ಯ ಪ್ರಶಸ್ತಿಗಳು ಸಂದಿವೆ.
ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಲ್ಯಾಂಗ್ಸ್ಟನ್ ಹ್ಯೂಸ್, ನ್ಯಾನಾವೋ ಸಕಾಕಿಯ ಭಾವಾನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಕವಿತೆ, ಗಜಲ್, ರುಬಾಯಿ, ಖಿತಾಗಳನ್ನೊಳಗೊಂಡ ಹಾಗೂ ಇಂಗ್ಲೀಷ ಕವಿತೆಗಳ ಭಾವಾನುವಾದ ಪುಸ್ತಕಗಳು ಪ್ರಕಟಣೆಗೆ ಸಿದ್ಧಗೊಂಡಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

