ನೀವು ಆ ಎರಡಗಾಲಿ scootyದ advertisement ನೋಡಿರಬೇಕಲಾ, ಅದs, ಪ್ರೀಯಾಂಕ ಛೋಪ್ರಾಂದ. ರಾತ್ರಿ ಆದ ಮ್ಯಾಲೆ ಗಾಡಿ ತೊಗೊಂಡ why should boys have all the fun ಅಂತ ಗಂಡಬೀರಿಗತೆ ತಿರಗಲಿಕ್ಕೆ ಹೋಗ್ತಾಳಲಾ. ಯಾವಗಿಂದ ಆ ad ಶುರು ಆಗೇದಲಾ ಆವಾಗಿಂದ ನನ್ನ ನಾಲ್ಕ ವರ್ಷದ ಮಗಳ ಸಹಿತ
“ಪಪ್ಪಾ, ನಂಗ ದೊಡ್ಡೊಕಿ ಆದ ಮ್ಯಾಲೆ ಸ್ಕೂಟಿ ಕೊಡಸ್ತಿ?” ಅಂತ ದಯನಾಸ ಪಟ್ಟ ಕೇಳ್ತಾಳ, ಇನ್ನ ಮಗಳ ಕೇಳ್ತಾಳ ಅಂದ್ರ ಮುವತ್ತ ದಾಟಿದ್ದ ಅವರವ್ವ ಸುಮ್ಮನ ಕೂಡ್ತಾಳ? ಅಕಿನೂ ಗಂಟ ಬಿದ್ದಾಳ. ಆದರ ದಯನಾಸ ಪಟ್ಟ ಅಲ್ಲಾ ದಮ್ಮ ಕೊಟ್ಟ.
ಒಂದ ಮಜಾ ಅಂದ್ರ ಇಕಿ ಗಾಡಿ ಕೊಡಸರಿ ಅಂತ ಗಂಟ ಬಿದ್ದಿಲ್ಲಾ
“ರ್ರೀ, ನಂಗ ಗಾಡಿ ಕಲಸರಿ” ಅಂತ ಗಂಟ ಬಿದ್ದಾಳ. ಅಕಿಗೆ ಗ್ಯಾರಂಟೀ ಅದ, ಅಕಿ ಒಮ್ಮೆ ಗಾಡಿ ಕಲತಳ ಅಂದ್ರ ಮುಂದ ಗಾಡಿ ಹೆಂಗ ನನ್ನ ಕಡೆ ಕೊಡಸಿಸಿಗೋಬೇಕು ಅಂತ. ಅಲ್ಲಾ ಹಂಗ ನಾ ಗಾಡಿ ಕೊಡಸಲಿಲ್ಲಾ ಅಂದರು ಅವರಪ್ಪರ ಅಕಿ ಕಾಟಕ್ಕ ಕೊಡಸ್ತಾನ ಅಂತ ನಂಗ ಗ್ಯಾರಂಟೀ ಅದ ಆ ಮಾತ ಬ್ಯಾರೆ. ಹಂಗ ಅವರಪ್ಪೇನರ ಗಾಡಿ ಕೊಡಸಿದರು ನಮ್ಮಪ್ಪಂದೇನ ಪೆಟ್ರೋಲ ಪಂಪ್ ಇಲ್ಲಾ ಹಿಂಗಾಗಿ ನಾ ಮುಂದ ಆ ಗಾಡಿಗೆ ಪೆಟ್ರೋಲ್ ಹಾಕಿಸಿ ಹಾಕಿಸಿ ಸಾಯಿಬೇಕ.
ಅದಕ್ಕ, ನಾ ಅಕಿ ಆ ವಿಷಯ ತಗದಾಗ ಒಮ್ಮೆ, ಮೊದ್ಲ ನೀ ಸ್ವಲ್ಪ ಮೈ ಕಡಮಿ ಮಾಡ್ಕೋ ಸ್ಕೂಟಿ ಗಾಲಿ ಸಣ್ಣವ ಇರತಾವ ನಿನ್ನ ವೇಟಿಗೆ ಹೊಳ್ಳತಾವ, ಇಲ್ಲಾ ಮೂರ ಗಾಲಿ ಸ್ಕೂಟಿ ಬಂದ ಮ್ಯಾಲೆ ಕೊಡಸ್ತೇನಿ ಅಂತ ಹೇಳಿ ಹೇಳಿ ಸಮಾಧಾನ ಮಾಡತಿರ್ತೇನಿ.
ಅಲ್ಲಾ ಇವತ್ತ ಹೆಣ್ಣಮಕ್ಕಳ ಇದ್ದ ಎಲ್ಲಾರ ಮನ್ಯಾಗು ಒಂದೊಂದ ಗಾಡಿ ಕಂಪಲ್ಸರಿ ಆಗೇದ ಬಿಡ್ರಿ, ಹಂಗ ಬರೇ ಗಂಡಸರ ಇಷ್ಟ ಗಾಡಿ ಹೊಡಿಬೇಕಂತ ಬ್ರಹ್ಮ ಏನ ಬರದಿಲ್ಲಾ ಖರೆ ಆದ್ರು ಒಟ್ಟ ಇವತ್ತ ಎಲ್ಲಾರ ಮನ್ಯಾಗು ಹೆಣ್ಣ ಮಕ್ಕಳ ಗಾಡಿ ಹೊಡಿಯೋದ ಕಾಮನ್ ಆಗಿ ಬಿಟ್ಟದ. ಹಂಗ ಒಂದ ರೀತಿಯಿಂದ ಮನ್ಯಾಗ ಒಂದ ಗಾಡಿ ಇತ್ತಂದರ ಸಣ್ಣ ಪುಟ್ಟ ಕೆಲಸಕ್ಕ ಹೆಂಡಂದರು ಗಂಡಂದರ ಮ್ಯಾಲೆ ಡಿಪೆಂಡ ಇರೋ ಅವಶ್ಯಕತೆನೂ ಇರಂಗಿಲ್ಲಾ, ತಿಂಗಳಿಗೊಮ್ಮೆ ಗಂಡ ಪೆಟ್ರೋಲಗೆ ಒಂದ್ಯಾರಡ ಸಾವಿರ ಕೊಟ್ಟ ಮೂರ ದಿವಸ ಗ್ಯಾರೇಜ ಖರ್ಚ ನೋಡ್ಕೊಂಡರ ಸಾಕ.

ಈಗ ಒಂದ ಎರಡ ತಿಂಗಳ ಹಿಂದ ನನ್ನ ಹೆಂಡತಿ ಕಜೀನ ಒಬ್ಬೊಕಿ ತನ್ನ ಗಂಡಗ ಗಂಟ ಬಿದ್ದ ಬಿದ್ದ ಜೀವಾ ತಿಂದ ತಿಂದ ಒಂದ ಸ್ಕೂಟಿ ತೊಗೊಂಡ್ಲು. ಅಕಿ ಸಣ್ಣಕಿ ಇದ್ದಾಗ ಸೈಕಲ್ ಕಲತಿದ್ಲಂತ ಹಿಂಗಾಗಿ ಒಂದ ವಾರದಾಗ ಸ್ಕೂಟಿ ಕಲತೆ ಅಂತ ಹೇಳ್ತಿದ್ಲು. ನಾ ಒಂದ್ಯಾರಡ ಸರತೆ ಅಕಿ ಗಾಡಿ ತೊಗೊಂಡ ಗೋಕುಲ ರೋಡನಾಗ ಹೋಗೊದ ನೋಡಿ ಅಕಿ ಗಂಡಗ ಫೊನ ಮಾಡಿ  “ತಮ್ಮಾ ನೀ ನಿನ್ನ ಹೆಂಡತಿದ ಇನ್ಸುರೆನ್ಸ್ ಮಾಡಸಿ ಬಿಡ, ನಿಂಗ ಭಾಳ ಲಗೂನ ಫಾಯದೇ ಆಗೊದ ಅದ” ಅಂತ ಹೇಳಿದೆ.
ಅಂವಾ “ಏ ಸಾಯಿಲಿ ಬಿಡ, ನಾ ಎಷ್ಟ ಹೇಳಿದರು ಕೇಳಲಿಲ್ಲಾ ಹಟಾ ಮಾಡಿ second hand scooty ತೂಗೊಂಡಾಳ” ಅಂತ ಬೈದಿದ್ದಾ. ಅಕಿ ಮೊದ್ಲs ಏನಿಲ್ಲದ ಹಾರಾಡೋಕಿ, ಇನ್ನ ಬುಡಕ ಗಾಡಿ ಬಂದಮ್ಯಾಲೆ ಕೇಳಬೇಕ. ಒಂದ ದಿವಸ ನಮ್ಮ ಮನಿಗೆ ಬಂದ ಗಾಡಿ ತೊರಸಿ ಧಾರವಾಡ ಫೇಡೆ ಕೊಟ್ಟ, ನನ್ನ ಹೆಂಡತಿ ಹೊಟ್ಟಿ ಉರಿಸಿ  “ಮಾಮಾ, ಅಕ್ಕಾನ ಕರಕೊಂಡ ಒಂದ ರೌಂಡ ಹೋಗಲಿ” ಅಂತ ಕೇಳಿದ್ಲು.
“ಏ, ನಿಂಗ ಡಬಲ್ ರೈಡಿಂಗ ಬರತದ ಏನ್?” ಅಂತ ಕೇಳಿದರ “ಅದಕ್ಕರಿ, ಡಬಲ್ ರೈಡಿಂಗ ಕಲಿಲಿಕ್ಕೆ ಕರಕೊಂಡ ಹೋಗ್ತೇನಿ” ಅಂದ್ಲು.
“ಏ, ನಮ್ಮವ್ವಾ, ಬ್ಯಾಡವಾ…ಮಕ್ಕಳ ಇನ್ನು ಸಣ್ಣವ ಅವ” ಅಂತ ನಾ ಬಿಡಸಿದೆ. ಅಲ್ಲಾ ಅಕಿಗೆ ಡಬಲ್ ರೈಡಿಂಗ ಕಲಿಲಿಕ್ಕೆ ನನ್ನ ಹೆಂಡತಿನ ಬೇಕಂತ. ಬೇಕಾರ ನನ್ನ ಕೂಡಿಸಿಕೊಂಡ ಡಬಲ್ ರೈಡಿಂಗ ಕಲಿತಿರ ಕಲಿ ಅನ್ನೋವ ಇದ್ದೆ ಮತ್ತೇಲ್ಲರ ನನ್ನ ಹೆಂಡತಿ ’ಯಾಕ ನಿಮ್ಮ ಮಕ್ಕಳೇನ ದೊಡ್ಡವ ಅವ ಏನ್?’ ಅಂತ ಕೇಳಿ ಗಿಳ್ಯಾಳ ಅಂತ ಸುಮ್ಮನ ಬಿಟ್ಟೆ.

ಹಂಗ ನನ್ನ ಹೆಂಡತಿನ್ನ ಕೂಡಿಸಿಗೊಂಡ ಗಾಡಿ ಕಲತರ ಡೈರೆಕ್ಟ ತ್ರಿಬಲ್ ರೈಡಿಂಗ ಕಲತಂಗ. ಹಿಂಗಾಗಿ ನಾ ನನ್ನ ಹೆಂಡತಿನ್ನ ಗಾಡಿ ಮ್ಯಾಲೆ ಕುಡಸಿಗೊಂಡರ ನನ್ನ ಸ್ಪ್ಲೆಂಡರ್ ನಾನೂ ಇಬ್ಬರು ಕೂಡೆ ಅಳಗ್ಯಾಡತೇವಿ ಇನ್ನ ಅಕಿ ಸ್ಕೂಟಿ ಅಂತು ತಳಕ್ಕ ಹತ್ತೊದ ಗ್ಯಾರಂಟಿ.
ಅವತ್ತಿನಿಂದ ನಮ್ಮ ಮನ್ಯಾಗ ನನ್ನ ಹೆಂಡತಿದ ಮತ್ತ ಸಣ್ಣಾಗಿ ಶುರು ಆತ, ರ್ರೀ ನಂಗೂ ಗಾಡಿ ಕಲಸರಿ, ಗಾಡಿ ಕಲತರ ಮಕ್ಕಳನ್ನ ಸಾಲಿಗೆ ಬಿಟ್ಟ ಬರಲಿಕ್ಕೆ ಛಲೊ ಆಗ್ತದ, ಆಟೋ ಬಿಡಸಬಹುದು, ಕಾಯಿಪಲ್ಲೆ ತರಲಿಕ್ಕೆ ಹೋಗಬಹುದು, ಹಾಲು ಮೊಸರು ತರಬಹುದು, ಮಾವನೋರನ ಕರಕೊಂಡ ದಾವಾಖಾನಿಗೆ ಹೋಗಬಹುದು ಹಂಗ ಹಿಂಗ ಅಂತ ಗಾಡಿ ತೊಗೊಂಡರ ಏನೇನ ಫಾಯದೆ ಅವ ಎಲ್ಲಾ ದಿನಾ ಕಿವ್ಯಾಗ ಊದೋಕಿ. ನಾ ಹಂಗ ಹೂಂ ಹೂಂ ಅನ್ಕೋತ ಈ ಕಿವಿಲೇ ಕೇಳಿ ಆ ಕಿವ್ಯಾಗಿಂದ ಬಿಡ್ಕೋತ ಹೊಂಟೇನಿ.
ನಮ್ಮ ‘ಸಾಲಿ’ (ಹೆಂಡತಿ ತಂಗಿ) ಅಂತು ನನಗ ಓಣ್ಯಾಗ ಗಾಡಿ ಮ್ಯಾಲೆ ಭೆಟ್ಟಿ ಆದಾಗ ಒಮ್ಮೆ ಹಾರ್ನ್ ಬಾರಿಸಿ why should boys have all the fun ಅನ್ನೋಕಿ. ಅಕಿ ಗಂಡಂದ ದೊಡ್ಡ ನೌಕರಿ, ಹಂಗ ಅಂವಾ ಗಾಡಿ, ಆ ಗಾಡಿಗೆ ಪೆಟ್ರೋಲ್ ಎಲ್ಲಾ ಅಫೊರ್ಡ ಮಾಡಬಹುದು. ಆದರ ನಾನs ಇವತ್ತೀನ ತನಕ ಒಂದ ಸ್ವಂತ ಗಾಡಿ ತೊಗೊಂಡಿಲ್ಲಾ, ಏನೋ ಕಂಪನಿ ಗಾಡಿ, ಕಂಪನಿ ಪೆಟ್ರೋಲ ಅಂತ ಒಂದ ಗಾಡಿ ಅದ ಇಲ್ಲಾಂದರ ನಾ ಏನ ಬಸ್ಸಿನಾಗ ಇಲ್ಲಾ ಆಟೋದಾಗ ಅಡ್ಡಾಡಲಿಕ್ಕೂ ನಾಚಗೋಳೊ ಮನಷ್ಯಾ ಅಲ್ಲಾ ಹಂತಾದರಾಗ ಇನ್ನ ನನ್ನ ಹೆಂಡತಿಗೆ ನಾ ಗಾಡಿ ಕೊಡಸೊದಂದರ ಮುಗದ ಹೋತ.

ಮೊನ್ನೆ ಒಂದ ವಾರದ ಹಿಂದ ಸಂಜಿ ಮುಂದ ನಾ ಮನಿಗೆ ಬರೋದಕ್ಕು ನನ್ನ ಹೆಂಡತಿ ಭಾಳ ಟೆನ್ಶನದಾಗ ಇದ್ದಳು. ಯಾಕ ಏನಾತ ಅಂತ ಕೇಳಿದರ
“ರ್ರಿ, ನಮ್ಮ ತಂಗಿ scooty ಹಾಕ್ಕೊಂಡ ಬಿದ್ದಾಳ, ಅಕಿದ ಕಾಲ fracture ಆಗೇದ” ಅಂದ್ಲು
“ಹೌದ, ಭಾಳ ಛಲೋ ಆತ ತೊಗೊ. ಮೊನ್ನೆರ kec ಮುಂದ ಗಾಡಿಮ್ಯಾಲೆ ಭೆಟ್ಟಿ ಆಗಿ why should boys have all the fun ಅಂತ ಹಲ್ಲ ಕಿಸದ ದಿಮಾಕ ಬಡದ ಹೋಗಿದ್ಲು” ಅಂದೆ. “ರ್ರಿ, ನಾ ಸಿರಿಯಸ ಆಗಿ ಹೇಳಲಿಕತ್ತೇನಿ, ನೀವು ಮಸ್ಕೀರಿ ಮಾಡ ಬ್ಯಾಡರಿ” ಅಂತ ನಂಗ ಜೋರ ಮಾಡಿದಳು.
“ಅಯ್ಯ, ಇದರಾಗ ಮಸ್ಕೀರಿ ಏನ ಬಂತಲೇ, ಸೆಕೆಂಡ ಹ್ಯಾಂಡ ಗಾಡಿ ತೊಗೊಂಡ ದೊಡ್ಡಿಸ್ತನ ಮಾಡ್ಕೋತ ಗಂಡಂದರನ ಬೈಕೋತ ಅಡ್ಯಾಡಿದರ ಹಂಗ ಆಗ್ತದ. ನಾವ ಸುಮ್ಮನಿದ್ದರು ಮ್ಯಾಲೆ ದೇವರ ಇದ್ದಾನಲಾ ಅಂವಾ ಕರೆಕ್ಟ ಮಾಡ್ತಾನ” ಅಂತ ನಾ ಅಂದೆ.
ಏನೋ ಅಕಿದ ಪುಣ್ಯಾ ಮೇನ ರೋಡನಾಗ ಆಗಿ ಹಿಂದ ಯಾವದರ ಟ್ರಕ್ ಇಲ್ಲಾ ಬಸ್ಸಿನ ಗಾಲ್ಯಾಗ ಸಿಕ್ಕಿದ್ದರ ಏನ ಮಾಡ್ತಿರಿ. ಅಲ್ಲಾ, ನಂಗ ಅಕಿ ಗಾಡಿ ಹೋಡೆಯೋದ ನೋಡೆ ಅನಸಿತ್ತ ಇವತ್ತಿಲ್ಲಾ ನಾಳೆ ಈಕಿ ಗಾಡಿ ಹಾಕ್ಕೊಂಡ ಬಿಳ್ತಾಳ ಅಂತ, ಅಕಿ ನಸೀಬ ಛಲೊ ಇತ್ತ ಗಾಂಧಿನಗರದಾಗ drainage line ಮಾಡಲಿಕ್ಕೆ ತಗದದ ತೆಗ್ಗಿನಾಗ ಹಾಕ್ಕೊಂಡ ಬಿದ್ದಿದ್ಲು. ನನ್ನ ಹೆಂಡತಿ ದಾವಾಖಾನಿಗೆ ಹೋಗಿ ನೋಡಿ ಬಂದ್ಲು. ನಾ ಅಕಿಗೆ ಗಂಡಗ ಫೋನ ಮಾಡಿ
“ಪಾಪ, ನಿನ್ನ ಹೆಂಡತಿಗೆ ಹಿಂಗ ಆಗ ಬಾರದಿತ್ತು, ಭಾಳ ಹೊಡ್ತ ಬಿದ್ದದೇನ” ಅಂತ ಕೇಳಿದೆ
“ಏ, ಕಾಲ ಫ್ರ್ಯಾಕ್ಚರ ಆಗೇದ, ರಾಡ್ ಹಾಕಬೇಕಂತ ಹೇಳ್ಯಾರ” ಅಂದಾ.
“ಏ, ಅಕಿ ಕಥಿ ಎಲ್ಲಾ ನನ್ನ ಹೆಂಡತಿ ಹೇಳ್ಯಾಳೊ ಮಾರಾಯ, ಗಾಡಿಗೆ ಭಾಳ ಹೊಡ್ತ ಬಿದ್ದದೇನ?” ಅಂತ ಕೇಳಿದೆ.
“ಏ, ಗಾಡಿ ನೆಗ್ಗಿ ನುಗ್ಗಿಕಾಯಿ ಆಗೇದೊಪಾ, ಎನಿಲ್ಲಾ ಅಂದರು ಒಂದ ಐದ ಸಾವಿರದ ಖರ್ಚ ಅದ. ಮ್ಯಾಲೆ ಇಕಿದ ದಾವಾಖಾನಿದ ಒಂದ” ಅಂದಾ
“ಇನ್ಸುರೆನ್ಸ್ ಇತ್ತ ಇಲ್ಲೊ?” ಅಂತ ನಾ ಅಂದರ
“ಏ ಅಕಿಗೆ medical insurance ಮಾಡಸಿದ್ದಿಲ್ಲೋ” ಅಂದಾ. ಪಾಪ ಅಂವಾ ಗಾಡಿಕಿಂತ ಜಾಸ್ತಿ ಹೆಂಡ್ತಿದ ವಿಚಾರ ಮಾಡಲಿಕತ್ತಿದ್ದಾ, ನಾ ಮತ್ತ ಅವಂಗ
“ಅಕಿದ ಅಲ್ಲೋ ಗಾಡಿದs?” ಅಂತ ಕೇಳಿದರ
“ಅದಕ್ಕೂ ಇದ್ದಿದ್ದಿಲ್ಲೋ, second hand ಗಾಡಿ. ಇನ್ನು ಪೇಪರ ಬ್ಯಾರೆ ನಮ್ಮ ಹೆಸರಿಲೆ ಆಗಿಲ್ಲಾ” ಅಂದಾ. ಏನ್ಮಾಡ್ತೀರಿ ಈ ಹೆಂಡಂದರ ಸುಮ್ಮನ ಕೂಡೋರಲ್ಲಾ ಗಂಡಂದರಿಗೆ ಸುಮ್ಮನ ಬದಕಲಿಕ್ಕೆ ಬಿಡಂಗಿಲ್ಲಾ. why should boys have all the fun ಅಂತ ಗಂಡಸರನ ಕಂಪೇರ ಮಾಡ್ಕೊಳಿಕ್ಕೆ ಹೋಗಿ ಒಂದಿಲ್ಲಾ ಒಂದ ಮಾಡ್ಕೋಂಡ ಬಿಡ್ತಾರ.

ಅಕಿಗೆ ಈಗ ಎರಡ ತಿಂಗಳ ಕಾಲ ಮ್ಯಾಲೆ ಭಾರ ಹಾಕಬ್ಯಾಡ, ಸಂಸಾರದ ಭಾರಾ ಎಲ್ಲಾ ಗಂಡನ ಮ್ಯಾಲೆ ಹಾಕ. ಪೂರ್ತಿ ನಿನ್ನ ಕಾಲ ಮ್ಯಾಲೆ ನೀ ನಿಲ್ಲೋ ತನಕ plaster ಹಂಗ ಇರಲಿ, ಅದರಾಗ ಟೊಂಕಕ್ಕ ಬ್ಯಾರೆ ಸ್ವಲ್ಪ ಪೆಟ್ಟ ಹತ್ತೇದ ನೀ ಪೂರ್ತಿ ಬೆಡ್ ರೆಸ್ಟ ತೊಗೊ ಅಂತ ಹೇಳಿ ಮನಿಗೆ ಕಳಸಿದರಂತ. ನಾನು ಅಕಿನ್ನ ನೋಡ್ಕೊಂಡ ಬಂದರಾತು ಅಂತ ಮೊನ್ನೆ ಅವರ ಮನಿಗೆ ಹೋದೆ.
ಅಕಿ ಪಲ್ಲಂಗ ಮ್ಯಾಲೆ ಬಿದಕೊಂಡ ನನ್ನ ನೋಡಿ ಹಲ್ಲ ಕಿಸದ
“ಬರ್ರಿ.. ಮಾಮಾ” ಅಂದ್ಲು.
“ಏನವಾ ಭಾಳ ಹಾರಡತಿದ್ದೆಲಾ, ಗಂಡಸರ ಇಷ್ಟ ಯಾಕ enjoy ಮಾಡಬೇಕು ಅಂತ, ಆತಿನ ಸಮಾಧಾನ” ಅಂದೆ. ಅಕಿಗೆ ಸಿಟ್ಟ ಬಂತ.
“ನಂದೇನ ತಪ್ಪರಿ ಮಾಮಾ, ರೋಡ ಸರಿ ಇದ್ದಿದ್ದಿಲ್ಲಾ ಹಿಂಗಾಗಿ ಬಿದ್ದೆ. more over who is having the fun now? ನಾನs ಅಲಾ, ಜನಾ ಎಳನೀರು, ಹಣ್ಣು, ಬ್ರೆಡ್ ಹಿಡಕೊಂಡ ಬರತಾರ. ತಾಸ ಗಟ್ಟಲೆ ಮನಿಗೆ ಬಂದ ಹರಟಿ ಹೊಡಿತಾರ. ನನ್ನ ಗಂಡ ಬಂದೋರಿಗೆಲ್ಲಾ ಚಹಾ ಮಾಡಿ ಕೋಡ್ತಾನ, ಮನಿ ಕೆಲಸ ಎಲ್ಲಾ ಅವನ ಮಾಡತಾನ. ನಂಗ ಒಂದಕ್ಕ ಎರಡಕ್ಕ ಬಂದ್ರ ಎತಗೊಂಡ ಬಚ್ಚಲಕ್ಕ ಕರಕೊಂಡ ಹೋಗೋದ ಸಹಿತ ಅವಂದ ಕೆಲಸ. ನಂದ ಕಾಲ ಮುರದ ರಾಡ್ ಹಾಕ್ಯಾರ ಅನ್ನೋದ ಬಿಟ್ಟರ ಬಾಕಿ ಎಲ್ಲಾ ಆರಾಮ ಇದ್ದೇನಿ. In reality, i am really having fun” ಅಂದ್ಲು.

ಏನ ಮಾಡ್ತೀರಿ ಹಿಂತಾವರಿಗೆ.  ಅಲ್ಲಾ ಹಂಗ ಅಕಿ ಹೇಳೋದ ಕರೆಕ್ಟ ಅದ ಮತ್ತ. ಈಗ ಮನ್ಯಾಗ, ಹೊರಗ ಎರಡು ಕಡೆ ದುಡದ ಸಾಯಲಿಕತ್ತಂವಾ ಅಕಿ ಗಂಡನ. ಅಕಿ ಹೆಳೋ ಹಂಗ why should boys have all the fun ಅಂತ ಅಕಿ ಈಗ ಮೂರ ತಿಂಗಳ ಗಂಡನ ಜೀವಾ ತಿಂದ ಅವನ ಕಡೆ ಬಾಣಂತನ ಮಾಡಿಸಿಗೊಂಡ ತಿರತಾಳ.
ಏನ ಮಾಡೋದ? ಎಲ್ಲಾ ಅವನ ಹಣೇಬರಹ. ಏನರ ಹಾಳ ಗುಂಡಿ ಬಿಳಲಿ ಅಂತ ಅಂವಾ ಸಾಲಾ ಮಾಡಿ ಗಾಡಿ ಕೊಡಸಿದರ ಅವನ ಹೆಂಡತಿ ಖರೇನ ಹಾಳ ಗುಂಡಿ ಬಿದ್ದ ಕಾಲ ಮುರಕೊಂಡ, ಮಲಕೊಂಡಲ್ಲೆ ಗಂಡನ ಕಡೆ ಚಾಕರಕಿ ಮಾಡಿಸಿಗೋತ why should boys have all the fun ಅನ್ನಲಿಕತ್ತಾಳ. ಎಲ್ಲಾ ಅವರವರ ಕರ್ಮ ಅನುಭವಸಬೇಕ.