ನಿಮ್ಮಪ್ಪ ಹ್ಯಾಂಗೇ ಇರಲಿ ಅವನು ನಮ್ಮ ಕಣ್ಮುಂದೆ ಇರಬೇಕು. ಅಂವ ನನ್ನ ಪಾಲಿನ ದೇವರು. ನನ್ನ ಹಣೆಬರಹದಾಗ ಏನಿದೆಯೋ ಅದು ಆಗಿ ಹೋಗಿದೆ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಆತನ ಜೊತೆ ಮದುವೆಯಾದೆ. ಅಂತಹ ಗಂಡನ ಜೊತೆ ಹ್ಯಾಂಗ ಸಂಸಾರ ಮಾಡ್ತಿಯೋ ಏನೋ ಅಂತ ಆಡಿಕೊಳ್ಳತಿದ್ದರು. ಅವರ ಮಾತಿಗೆ ನಾನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಿದ್ದರೂ ಆತ ಹೇಳದೇ ಕೇಳದೇ ಹೋಗಿದ್ದಾನೆ. ಈಗ ಎಲ್ಲರ ಅನುಮಾನ ನಮ್ಮ ಮ್ಯಾಲೇ ಬರುವಂಗ ಆಗ್ತಿದೆ. ಯಾರಿಗೆ ಕೇಳೋದು ಎಲ್ಲಿ ಹುಡುಕೋದು? ಅಂತ ಯೋಚಿಸಿ ಕಣ್ತುಂಬಾ ನೀರು ತಂದಳು.
ಶರಣಗೌಡ ಬಿ ಪಾಟೀಲ, ತಿಳಗೂಳ ಬರೆದ ಸಣ್ಣ ಕತೆ “ಎಲ್ಲರಂತವನಲ್ಲ!” ನಿಮ್ಮ ಈ ಭಾನುವಾರದ ಓದಿಗೆ

ಶಂಭೂನ ಊರು ಬಹಳ ದೊಡ್ಡದೇನಲ್ಲ. ಇನ್ನೂರು ಮುನ್ನೂರು ಮನೆ ಅಷ್ಟೇ. ಆದರೆ ಹೈವೇಗೆ ಹೊಂದಿಕೊಂಡ ಕಾರಣ ಸಣ್ಣ ದೊಡ್ಡ ವಾಹನಗಳ ಓಡಾಟ ಹೆಚ್ಚಾಗಿತ್ತು. ಬೇರೆ ಬೇರೆ ಕಡೆ ಹೋಗೋ ಜನ ಕೂಡ ಇದೇ ರಸ್ತೆಯ ಮೂಲಕ ಹಾದು ಹೋಗುತ್ತಿದ್ದರು. ಜನದಟ್ಟಣೆ ಹೆಚ್ಚಾಗಿರುವ ಕಾರಣ ರಸ್ತೆಯ ಅಕ್ಕ ಪಕ್ಕ ಹೋಟೆಲು, ಕಿರಾಣಾ ಅಂಗಡಿ, ಟೇಲರ ಅಂಗಡಿ, ಝರಾಕ್ಸ್‌, ಪಂಕ್ಚರ್‌ ಅಂಗಡಿ ಹೀಗೆ ಹತ್ತು ಹಲವು ಅಂಗಡಿ ತಲೆಯೆತ್ತಿ ವ್ಯಾಪಾರ ವಹಿವಾಟು ನಡೆಸುತಿದ್ದವು. ಎಲ್ಲಕ್ಕಿಂತ ಹೆಚ್ಚಿನ ವ್ಯಾಪಾರ ಹೋಟೆಲ್ಲುಗಳಲ್ಲೇ ಕಂಡುಬರುತಿತ್ತು. ವಗ್ರಾಣಿ, ಮಿರ್ಚಿ ಭಜೀ, ಸೇವಾ ಚೂಡಾ, ಬೂಂದಿ ಜಿಲೇಬಿಯಂಥಹ ವೈವಿಧ್ಯಮಯ ತಿಂಡಿ ತಿನಿಸು ಹೋಟೆಲ ಮುಂದೆ ಪೇರಿಸಿಟ್ಟಿದ್ದು ಕಣ್ಣಿಗೆ ಬಿದ್ದಾಗ ಸಹಜವಾಗಿ ಬಾಯಲ್ಲಿ ನೀರೂರುತಿತ್ತು. ನಿತ್ಯ ನೂರಾರು ಜನ ಹೋಟೆಲಿಗೆ ಬಂದು ಬಾಯಿ ಚಪ್ಪರಿಸಿ ಹೋಗುತಿದ್ದರು. ಇದರಿಂದ ಹೋಟೆಲ್‌ ಮಾಲಿಕರ ಗಲ್ಲಾ ಪೆಟ್ಟಿಗೆ ಬಹು ಬೇಗ ಭರ್ತಿಯಾಗಿ ಊರಲ್ಲಿ ಅವರೇ ಶ್ರೀಮಂತರಾಗಿದ್ದರು. ಶಂಭೂ ಮಾತ್ರ ಯಾವ ಹೋಟೆಲಿನಲ್ಲೂ ಚಹಾ ನಾಷ್ಟಾ ಮಾಡಿದವನಲ್ಲ. ಮುಂಜಾನೆ ಮನೆಯಿಂದ ಊಟ ಮುಗಿಸಿ ಹೈವೇ ಪಕ್ಕದ ಬೇವಿನ ಮರದ ಕಟ್ಟೆಗೆ ಬಂದು ಕೂಡುತಿದ್ದ ರಸ್ತೆಗೆ ಹೋಗಿ ಬರುವ ಮೋಟಾರ ಗಾಡಿ ಹೊಸ ಪ್ರಯಾಣಿಕರ ಹೊಸ ಹೊಸ ಮುಖ ನೋಡುತ್ತಾ ಕಾಲ ಕಳೆಯುತಿದ್ದ. ಸಾಯಂಕಾಲವಾಗುತಿದ್ದಂತೆ ಅಲ್ಲಿಂದ ಎದ್ದು ಮನೆ ಕಡೆ ತೆರಳುತ್ತಿದ್ದ. ಇದೇ ಇವನ ನಿತ್ಯದ ದಿನಚರಿಯಾಗಿತ್ತು. ಶಂಭೂ ಯಾವುದೇ ಕೆಲಸ ಮಾಡದಿದ್ದರು ಇವನಿಗೆ ಯಾರೂ ಸೋಮಾರಿ ಅಂತ ಹೇಳುತ್ತಿರಲಿಲ್ಲ. ಇವನು ಒಂದು ರೀತಿಯ ಮುಗ್ಧ ಮನುಷ್ಯ ಅಂತ ಅನುಕಂಪ ತೋರುತಿದ್ದರು.

ಶಂಭೂ ಬೇವಿನ ಕಟ್ಟೆಗೆ ಕುಂತಾಗ ಸುಮಾರು ಜನ ದಾರಿಗೆ ಹೋಗಿ ಬರುವವರು ಮಾತಾಡಿಸುತಿದ್ದರು. ಊಟ ತಿಂಡಿಯ ಬಗ್ಗೆ ವಿಚಾರಿಸುತಿದ್ದರು. ಅವರ ಮಾತಿಗೆ ತಲೆಯಾಡಿಸಿ ಮುಗುಳ್ನಗೆ ಬೀರುತಿದ್ದ. ಚಹಾ ಕುಡಿಯಲು ನಾಷ್ಟಾ ಮಾಡಲು ಯಾರಾದರೂ ಕರೆದರೆ ನಾನು ಊಟ ಮಾಡಿ ಬಂದಿದ್ದೇನೆ. ನಾಷ್ಟಾ ಚಹಾದ ಅಭ್ಯಾಸ ನನಗಿಲ್ಲ ಅಂತ ನಯವಾಗಿ ನಿರಾಕರಿಸುತಿದ್ದ.

ಶಂಭೂ ಯಾರ ಮುಲಾಜಿಗೂ ಬೀಳುವವನಲ್ಲ ಯಾವುದಕ್ಕೂ ಆಸೆ ಪಡುವವನಲ್ಲ. ಇವನಂಥ ಮನುಷ್ಯ ಸಿಗೋದೇ ಅಪರೂಪ ಅಂತ ಅನೇಕರು ತಾರೀಫ ಮಾಡುತಿದ್ದರು. ಶಂಭೂ ಸುಮ್ಮನೆ ಕುಳಿತದ್ದು ನೋಡಿ ನಿನೂ ಏನಾದರು ವ್ಯಾಪಾರ ಉದ್ಯೋಗ ಮಾಡಬಾರದಾ? ನಮ್ಮ ಊರಾಗ ಹೋಟೆಲ್ ಇಟ್ಟವರು ಎಷ್ಟೋ ಜನ ಶ್ರೀಮಂತರಾಗಿದ್ದಾರೆ… ಅಂತ ಯಾರಾದ್ರು ಪ್ರಶ್ನಿಸಿ ಸಲಹೆ ನೀಡಿದರೆ ನನಗೇನು ಲೆಕ್ಕ ಪತ್ರ ಬರ್ತಾದಾ? ನಾನು ಹೋಟೆಲ್ ಇಟ್ಟರ ಫಾಯದಾ ಆಗುವ ಬದಲು ಲುಕ್ಸಾನ ಆಗೋದು ಗ್ಯಾರಂಟಿ. ಎಲ್ಲರೂ ಪುಕ್ಕಟೆ ಚಹಾ ನಾಷ್ಟಾ ಮಾಡಿ ಹೋಗ್ತಾರೆ ಅಂತ ತನ್ನ ಬಗ್ಗೆ ತಾನೇ ವಾಸ್ತವ ಹೇಳುತಿದ್ದ. ಶಂಭೂನ ಮಾತು ನಗೆ ತರಿಸುತಿತ್ತು. ಇವನು ಯಾರ ಜೊತೆಗೂ ತಂಟೆ ತಕರಾರು ಜಗಳ ಜೂಟಿ ಮಾಡಿದವನಲ್ಲ. ಶಂಭೂ ದೇವರಂತ ಮನುಷ್ಯ ಅಂತ ಅನೇಕ ಜನ ವರ್ಣನೆ ಮಾಡುತಿದ್ದರು. ಶಂಭೂ ದೇವರಂಥವನಾದರೆ ವರ ಕೊಡ್ತಾನಾ? ಅಂತ ಕೆಲವರು ಹಾಸ್ಯ ಮಾಡುತಿದ್ದರು. ಶಂಭೂ ವರ ಕೊಟ್ಟರೂ ಕೊಡಬಹುದು. ಯಾರಲ್ಲಿ ಯಾವ ಶಕ್ತಿ ಇರ್ತಾದೆ ಅಂತ ಯಾರಿಗೆ ಗೊತ್ತು… ಯಾರನ್ನೂ ನಾವು ಕೇವಲವಾಗಿ ನೋಡಬಾರದು ಅಂತ ಹೇಳುತಿದ್ದರು.

ಅವತ್ತು ಶಂಭೂ ಕಾಣೆಯಾಗಿದ್ದಾನೆ ಅನ್ನುವ ಸುದ್ದಿ ಊರ ತುಂಬ ಹರಡಿತು. ಹೋಟೆಲು ಕಿರಾಣಿ ಅಂಗಡಿ ಗುಡಿಗುಂಡಾರದ ಮುಂದೆ ಕುಳಿತವರೆಲ್ಲರೂ ಇವನ ವಿಷಯವೇ ಚರ್ಚಿಸಿ ಆತ ಎಲ್ಲಿಗೆ ಹೋದ? ತನ್ನ ಪಾಡಿಗೆ ತಾನಿರುತಿದ್ದ. ಬೇವಿನ ಕಟ್ಟೆಗೆ ಒಬ್ಬನೇ ಕೂತಿರುತಿದ್ದ. ಯಾರಿಗು ಹೊರೆ ಆಗಿರಲಿಲ್ಲ ಯಾವ ಕೆಲಸಾ ಮಾಡದಿದ್ದರು ಹೆಂಡತಿ ಗಂಗವ್ವ ಇವನ ಮ್ಯಾಲ ಒಂದಿನಾನೂ ಕೋಪ ಮಾಡ್ಕೋತಿರಲಿಲ್ಲ. ಸಂಸಾರದ ಎಲ್ಲ ಜವಾಬ್ದಾರಿ ಅವಳೇ ನಿಭಾಯಿಸುತಿದ್ದಳು. ಖರ್ಚಿಗೆ ರೊಕ್ಕಾನೂ ಕೊಡತಿದ್ದಳು. ಅಂತಹ ಪುಣ್ಯಾತಗಿತ್ತಿ ಹೆಂಡತಿ ಸಿಕ್ಕಿದ್ದು ಆತನ ಪುಣ್ಯ. ಆದರೂ ಮನೆ ಬಿಟ್ಟು ಯಾಕೆ ಹೋದ? ಅಂತಹ ಸಮಸ್ಯೆ ಏನಾಗಿತ್ತು ಅಂತ ಚರ್ಚಿಸಿದರು. ಶಂಭೂ ಮುಂಜಾನೆ ಎಂದಿನಂತೆ ಊಟ ಮುಗಿಸಿ ಹೊರಗೆ ಬಂದಿದ್ದ. ರಾತ್ರಿಯಾದರು ಮನೆಗೆ ಬರದಿದ್ದಾಗ ಸಹಜವಾಗಿ ಗಂಗವ್ವಳಿಗೆ ಗಾಬರಿಯಾಯಿತು. ತಕ್ಷಣ ಮಗನಿಗೆ ಕರೆದು ನಿಮ್ಮಪ್ಪ ಯಾಕೋ ಮನೆಗೆ ಬಂದಿಲ್ಲ. ಅಡುಗೆ ಮಾಡಿ ಆಗಲೇ ತಾಸಾಯಿತು. ನೀನೇ ಹೋಗಿ ಕರಕೊಂಡು ಬಾ ಅಂತ ಹೇಳಿದಾಗ ಶಂಕ್ರು ಅವ್ವನ ಮಾತಿಗೆ ತಲೆಯಾಡಿಸಿ ಓದುವ ಪುಸ್ತಕ ಮಡಚಿಟ್ಟು ನೇರವಾಗಿ ಹೈವೇ ಕಡೆ ಬಂದು ಅಪ್ಪ ಕೂಡೋ ಜಾಗವೆಲ್ಲ ಹುಡುಕಿದ. ಕಾಣದೇ ಹೋದಾಗ ಅನೇಕರಿಗೂ ವಿಚಾರಿಸಿದ. ನಿಮ್ಮಪ್ಪಗ ಇವತ್ತು ಆ ಬೇವಿನ ಕಟ್ಟಿಮ್ಯಾಲ ನೋಡೇ ಇಲ್ಲ ಅಂತ ಹೇಳಿದರು. ಆಗ ಇವನು ದಿಕ್ಕುತೋಚದೆ ವಾಪಸ್ ಬಂದು ಅಪ್ಪ ಎಲ್ಲೂ ಕಾಣಸ್ತಿಲ್ಲ ಅಂತ ಹೇಳಿದ.

ಮಗನ ಮಾತು ಗಂಗವ್ವಳಿಗೆ ಕ್ಷಣಕಾಲ ಗಾಬರಿ ತರಿಸಿತು. ನಿಮ್ಮಪ್ಪ ಎಲ್ಲಿಗೆ ಹೋಗ್ತಾನೆ? ಏಕಾಏಕಿ ಕಾಣಸ್ತಿಲ್ಲ ಅಂದರ ಏನರ್ಥ? ಸರಿಯಾಗಿ ಹುಡುಕೀದೋ ಇಲ್ಲವೋ ಅಂತ ಪ್ರಶ್ನಿಸಿದಳು. ಹುಡುಕುವ ಜಾಗಾ ಯಾವದೂ ಉಳಿದಿಲ್ಲ ನಮ್ಮೂರೇನು ದೊಡ್ಡದಾ? ಅಂತ ಪ್ರಶ್ನಿಸಿದ. ನಿಮ್ಮಪ್ಪ ಹ್ಯಾಂಗೇ ಇರಲಿ ಅವನು ನಮ್ಮ ಕಣ್ಮುಂದೆ ಇರಬೇಕು. ಅಂವ ನನ್ನ ಪಾಲಿನ ದೇವರು. ನನ್ನ ಹಣೆಬರಹದಾಗ ಏನಿದೆಯೋ ಅದು ಆಗಿ ಹೋಗಿದೆ. ಅದರ ಬಗ್ಗೆ ನನಗ್ಯಾವ ಬೇಸರವೂ ಇಲ್ಲ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಆತನ ಜೊತೆ ಮದುವೆಯಾದೆ. ಅಂತಹ ಗಂಡನ ಜೊತೆ ಹ್ಯಾಂಗ ಸಂಸಾರ ಮಾಡ್ತಿಯೋ ಏನೋ ಅಂತ ಆಡಿಕೊಳ್ಳತಿದ್ದರು. ಅವರ ಮಾತಿಗೆ ನಾನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಿದ್ದರೂ ಆತ ಹೇಳದೇ ಕೇಳದೇ ಹೋಗಿದ್ದಾನೆ. ಈಗ ಎಲ್ಲರ ಅನುಮಾನ ನಮ್ಮ ಮ್ಯಾಲೇ ಬರುವಂಗ ಆಗ್ತಿದೆ. ನನ್ನ ಎದೆ ಢವಢವ ಅಂತಿದೆ. ಯಾರಿಗೆ ಕೇಳೋದು ಎಲ್ಲಿ ಹುಡುಕೋದು? ಅಂತ ಯೋಚಿಸಿ ಕಣ್ತುಂಬಾ ನೀರು ತಂದಳು. ಅಪ್ಪ ಹಿಂಗ್ಯಾಕ ಮಾಡಿದ? ದಿನಾ ಕತ್ತಲಾಗುವದರೊಳಗ ಮನೆಗೆ ಬರುತಿದ್ದ. ಈಗ ಯಾರ ಕಣ್ಣಿಗೂ ಬೀಳದೇ ಎಲ್ಲಿಗೋ ಹೋಗಿದ್ದಾನೆ. ಹೋಗುವ ವಿಷಯ ಹೇಳಿ ಹೋದರೆ ನಮಗ್ಯಾವ ಆತಂಕವೂ ಆಗ್ತಿದಿಲ್ಲ… ಅಂತ ಮುಖ ಸಪ್ಪಗ ಮಾಡಿ ಹೇಳಿದ.

ನಾನು ಹೋಟೆಲ್ ಇಟ್ಟರ ಫಾಯದಾ ಆಗುವ ಬದಲು ಲುಕ್ಸಾನ ಆಗೋದು ಗ್ಯಾರಂಟಿ. ಎಲ್ಲರೂ ಪುಕ್ಕಟೆ ಚಹಾ ನಾಷ್ಟಾ ಮಾಡಿ ಹೋಗ್ತಾರೆ ಅಂತ ತನ್ನ ಬಗ್ಗೆ ತಾನೇ ವಾಸ್ತವ ಹೇಳುತಿದ್ದ. ಶಂಭೂನ ಮಾತು ನಗೆ ತರಿಸುತಿತ್ತು. ಇವನು ಯಾರ ಜೊತೆಗೂ ತಂಟೆ ತಕರಾರು ಜಗಳ ಜೂಟಿ ಮಾಡಿದವನಲ್ಲ. ಶಂಭೂ ದೇವರಂತ ಮನುಷ್ಯ ಅಂತ ಅನೇಕ ಜನ ವರ್ಣನೆ ಮಾಡುತಿದ್ದರು. ಶಂಭೂ ದೇವರಂಥವನಾದರೆ ವರ ಕೊಡ್ತಾನಾ? ಅಂತ ಕೆಲವರು ಹಾಸ್ಯ ಮಾಡುತಿದ್ದರು.

ನಿಮ್ಮಪ್ಪ ಎಲ್ಲರಂಥ ಮನುಷ್ಯ ಇದ್ದಿದ್ದರೆ ನಾನೇನೊ ಯೋಚನೆ ಮಾಡತಿರಲಿಲ್ಲ. ಆತ ಇಲ್ಲೇ ಹುಟ್ಟಿ ಬೆಳೆದರು ಒಂದಿನಾ ಕೂಡ ಊರ ಸೀಮೀ ದಾಟಿದವನಲ್ಲ. ಅವನು ಮದುವೆಗೆ ಮುಂಚೆನೂ ಹಾಗೇ ಇದ್ದ. ನಿಮ್ಮ ಅಜ್ಜ ಅಜ್ಜಿ ಇವನಿಗೆ ಯಾವ ಕೆಲಸಾನೂ ಹಚ್ಚದೆ ಎಲ್ಲ ಕೆಲಸ ತಾವೇ ಮಾಡತಿದ್ದರು. ಈಗ ನಾನೂ ಹಾಗೇ ಮಾಡತಿದ್ದೀನಿ. ಮನೆಗೆ ಏನಾದರು ಬೇಕಾದರೆ ಸಂತೆ ಪ್ಯಾಟೀಗಿ ಹೋಗೋದಿದ್ದರ ಅವನಿಗೆ ಮೋಟಾರ ಗಾಡಿ ಗೊತ್ತಾಗೋದಿಲ್ಲ, ಲೆಕ್ಕ ಪತ್ರ ಬರೋದಿಲ್ಲ… ಅಂತ ನಾನೇ ಹೋಗ್ತೀನಿ. ನಿನ್ನ ಗಂಡ ಹುಚ್ಚನೂ ಅಲ್ಲ ಶ್ಯಾಣ್ಯಾನೂ ಅಲ್ಲ. ಎಲ್ಲಾ ಕೆಲಸ ನೀನೇ ಮಾಡತಿ ಪಾಪ ಅಂತ ಅನೇಕರು ನನ್ನ ಮ್ಯಾಲ ಅನುಕಂಪ ತೋರಿಸ್ತಾರ. ಇನ್ನೂ ಕೆಲವರು ವ್ಯಂಗ್ಯವಾಗಿ ಏನೇನೋ ಮನಸ್ಸಿಗಿ ಹತ್ತುವಂಗ ಮಾತಾಡತಾರ. ವ್ಯಂಗ್ಯದ ಮಾತು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡತೀನಿ. ಆದರೂ ಇವನು ಹಿಂಗ ಮಾಡ್ತಾನಂತ ಕನಸು ಮನಸಿನ್ಯಾಗೂ ಯೋಚನೆ ಮಾಡಿರಲಿಲ್ಲ. ನಾನೇನು ಇವನಿಗೆ ಕಮ್ಮೀ ಮಾಡಿದ್ದೆ. ಯಾಕೋ ನಮ್ಮ ಟೈಮೇ ಛೊಲೋ ಇಲ್ಲ ಅಂತ ನಿಟ್ಟುಸಿರು ಬಿಟ್ಟಳು.

ಶಂಭೂ ಕಾಣೆಯಾದ ಸುದ್ದಿ ತಿಳಿಯುತ್ತಲೇ ಜನ ಗಂಗವ್ವಳಿಗೆ ವಿಚಾರಿಸಲು ಬರತೊಡಗಿದರು. ಇವಳು ಹೊರ ಪಡಸಾಲೆ ಕಂಬಕ್ಕೆ ಬೆನ್ನು ಹಚ್ಚಿ ಶೂನ್ಯ ದಿಟ್ಟಿಸುತಿದ್ದಳು. ಮುಖದಲ್ಲಿ ಲವಲವಿಕೆ ಇರಲಿಲ್ಲ. ಯಾಕೆ ಚಿಂತೆ ಮಾಡ್ತಿ ಅವನೇನು ಸಣ್ಣ ಮಗೂನಾ ಇಂದಿಲ್ಲ ನಾಳೆ ಬಂದೇ ಬರ್ತಾನೆ. ಚಿಂತಿ ಮಾಡಿದರ ಬಂದು ಬಿಡ್ತಾನಾ? ಅಂತ ಓಣಿಯ ಭೀಮವ್ವ ಸಮಜಾಯಿಸಿ ನೀಡಲು ಮುಂದಾದಳು. ನಿನ್ನ ಗಂಡ ಯಾಕೆ ಹೋದ? ಆತನ ಜೊತೆ ಏನಾದರು ಜಗಳಾ ಗಿಗಳಾ ಮಾಡೀದೇನು? ಅಂತ ಅಗಸೀಮನಿ ಮಲ್ಲಮ್ಮ ಪ್ರಶ್ನಿಸಿದಳು. ಇವಳೇನು ಜಗಳಾ ಆಡ್ತಾಳೆ? ಒಂದಿನಾನೂ ಸಿಟ್ಟು ಮಾಡಿಕೊಂಡಿದ್ದು ನಾನು ನೋಡೇ ಇಲ್ಲ. ಅಂತ ಭೀಮವ್ವ ವಾಸ್ತವ ಹೇಳಿದಾಗ. ಶಂಭೂ ಒಬ್ಬನೇ ಹೋಗೋ ಮನುಷ್ಯ ಅಲ್ಲ. ಯಾರೋ ಒತ್ತಾಯ ಮಾಡಿ ಕರಕೊಂಡ ಹೋಗಿರಬೇಕು. ಯಾರ ಜೊತೆ ಹೋಗ್ಯಾನ ಅನ್ನೋದು ಪತ್ತೆ ಹಚ್ಚಿದರೆ ಎಲ್ಲ ತಾನೇ ಗೊತ್ತಾಗ್ತದೆ ಅಂತ ಗುಂಡಮ್ಮ ಮಾತಿನ ಮಧ್ಯ ಅಭಿಪ್ರಾಯ ಹೊರ ಹಾಕಿದಳು. ಅವನೇನು ಎಲ್ಲರಂಗ ಶ್ಯಾಣ್ಯಾ ಮನುಷ್ಯನಾ ಕರಕೊಂಡ ಹೋಗಲು. ಅವನ ಜರೂರತ ಯಾರಿಗಿದೆ? ಶ್ಯಾಣ್ಯಾ ಇದ್ದೋರಿಗೆ ಕರಕೊಂಡ ಹೋಗೋದಿಲ್ಲ, ಇನ್ನು ಇಂತಹವನಿಗೆ ಯಾರು ಕರಕೊಂಡ ಹೋಗ್ತಾರೆ ಅಂತ ಭೀಮವ್ವ ಮಾತು ಮುಂದುವರೆಸಿದಳು.

ಎಲ್ಲ ಗಂಡಸರು ಊರಾಗೇ ಇದ್ದಾರೆ ಯಾರೂ ಬೇರೆ ಕಡೆ ಹೋಗಿಲ್ಲ. ಇವನೊಬ್ಬನೇ ಕಾಣಸ್ತಿಲ್ಲ ಅಂತ ರಾಮಪ್ಪ ವಾಸ್ತವ ಹೇಳಿದಾಗ ಅವನಿಗೆ ಏನೋ ತ್ರಾಸ ಇದ್ದಿರಬೇಕು. ಒಳಗಿನ ವಿಷಯ ಯಾರಿಗೆ ಗೊತ್ತು ಅಂತ ಮಲ್ಲಮ್ಮ ಅನುಮಾನ ಹೊರ ಹಾಕಿದಳು. ಅವನಿಗೇನು ತ್ರಾಸ ಇರ್ತಾದೆ ಸಂಸಾರೆಲ್ಲ ಗಂಗವ್ವಳೇ ನಡೆಸ್ತಾಳೆ ಆತನದು ಬರೀ ಉಣ್ಣೋದು ಮಲಗೋದು ಎರಡೇ ಕೆಲಸಾ.. ಅಂತ ಭೀಮವ್ವ ಹೇಳಿದಾಗ, ಶಂಭೂ ಜೀವನಾ ಬ್ಯಾಸರಾಗಿ ಏನಾದರು ಹೆಚ್ಚು ಕಡಿಮೆ ಮಾಡಿಕೊಂಡರು ಮಾಡಿಕೊಂಡಿರಬೇಕು. ಸ್ವಲ್ಪ ಬಾವಿ ಕೆರೀ ಹುಡಕಬೇಕು ಅಂತ ಚಂದವ್ವ ಸಲಹೆ ನೀಡಿದಳು. ಅವಳ ಮಾತು ಕೇಳಿ ಗಂಗವ್ವಳ ದುಃಖ ಉಕ್ಕಿ ಬಂದು ಜೋರಾಗಿ ಅಳಲು ಆರಂಭಿಸಿದಳು. ನೀನು ಏನೇನೋ ಇಲ್ಲದ ವಿಚಾರ ಹೇಳಿ ಇವಳ ಮನಸ್ಸಿಗೆ ಮತ್ತಷ್ಟು ದುಃಖ ತರಸಬ್ಯಾಡ. ಆತ ಹಂಗೇನೂ ಮಾಡಿಕೊಳ್ಳೋ ಮನುಷ್ಯ ಅಲ್ಲ. ಉರಿಯೋ ಬೆಂಕಿಗೆ ತುಪ್ಪ ಸುರೀತಿಯಲ್ಲ ಅಂತ. ಎಲ್ಲರೂ ಚಂದವ್ವಗ ಬೈದು ಬಾಯಿ ಮುಚ್ಚಿಸಿದರು.

ಅದೇ ಸಮಯ ಮನೆಯ ಮುಂದೆ ಬಿಳಿ ಬಣ್ಣದ ಕಾರೊಂದು ಬಂದು ನಿಂತಿತು. ಕಾರು ನೋಡಿ ಎಲ್ಲರು ಅದರ ಕಡೆ ಕುತೂಹಲದಿಂದ ನೋಡತೊಡಗಿದರು. ಶಂಭೂ ಕಾರಿನಿಂದ ಕೆಳಗಿಳಿದ. ಆತನ ಜೊತೆ ಇನ್ನೂ ಮೂರು ಜನರಿದ್ದರು. ಶಂಭೂನ ಉಡುಗೆ ತೊಡುಗೆ ಎಲ್ಲವೂ ಬದಲಾಗಿದ್ದವು. ಹೊಸ ಅಂಗಿ ಧೋತಿ ಹಾಕಿಕೊಂಡು ಮದಿಮಗ ಕಂಡಂತೆ ಕಾಣಿಸುತಿದ್ದ. ಎಲ್ಲರೂ ಇವನಿಗೆ ಸುತ್ತುವರೆದು ಎಲ್ಲಿಗಿ ಹೋಗೀದಿ ಮಾರಾಯ? ಎಲ್ಲರಿಗೂ ನಿನ್ನದೇ ಚಿಂತೆ ಆಗಿತ್ತು. ನಿನ್ನೆಯಿಂದಲೂ ಗಂಗವ್ವ ಒಂದು ತುತ್ತು ಅನ್ನ ಹನಿ ನೀರು ಬಾಯಿಗೆ ಹಾಕೊಂಡಿಲ್ಲ ಅಂತ ಪ್ರಶ್ನಿಸಿದರು. ಶಂಭೂ ಅವರ ಮಾತಿಗೆ ಉತ್ತರಿಸಲು ಮುಂದಾದಾಗ ನಾನೇ ಕರಕೊಂಡ ಹೋಗಿದ್ದೆ. ನಮ್ಮ ಊರು ಪಕ್ಕದೂರು. ನಮಗ ಬಹಳ ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೋದ ವರ್ಷ ಶಂಭೂ ಬೇವಿನ ಕಟ್ಟಿಗೆ ಕುಳಿತಾಗ ನಮಗೆ ಮಕ್ಕಳಿಲ್ಲದ ವಿಷಯ ತಿಳಿಸಿದ್ದೆ. ಆಗ ಶಂಭೂ ಕ್ಷಣ ಕಾಲ ಯೋಚಿಸಿ ಒಂದು ವರ್ಷದೊಳಗೆ ಮಗು ಹುಟ್ಟತಾದೆ ಅಂತ ಹೇಳಿದ. ಆ ಮಾತು ನಿಜವಾಗಿದೆ. ನಮಗೆ ಮಗು ಹುಟ್ಟಿದೆ ಅದೇ ಖುಷಿಯಲ್ಲಿ ಬಟ್ಟೆ ಆಯೇರಿ ಮಾಡಲು ಇವನಿಗೆ ಕರೆದುಕೊಂಡ ಹೋಗಿದ್ದೆ ಅಂತ ಹೇಳಿದ. ಆತನ ಮಾತು ಆಶ್ಚರ್ಯ ತರಿಸಿತು. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿ ಶಂಭೂ ಎಲ್ಲರಂತವನಲ್ಲ ದೇವರಂಥವನು ಆಗಾಗ ವರಾನೂ ಕೊಡ್ತಾನೆ ಅಂತ ಮುಗ್ಳನಗೆ ಬೀರಿದರು!