ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ಸಂಗೀತ ಮತ್ತಿತರ ಕಲೆಗಳಲ್ಲಿ ಉತ್ಸಾಹದಿಂದ ಮುಳುಗಿ ಎದ್ದಿದ್ದೆ. ನನ್ನೊಳಗೆ ತುಂಬಿಕೊಂಡ ಈ ಎಲ್ಲ ಕಲೆಗಳ ತಿಳಿವಳಿಕೆ ಒಟ್ಟಾಗಿ ಸಿನಿಮಾ ರೂಪದಲ್ಲಿ ಬಂದಿತ್ತು. ನಾನು ಕಲಿತೆಲ್ಲ ಕಲೆಗಳನ್ನು ಸಿನಿಮಾದಲ್ಲಿ ಬಳಸಬಹುದೆಂದು ಎಂದೂ ಯೋಚಿಸಿರಲಿಲ್ಲ. ನಾನು ಬದುಕಿನಲ್ಲಿ ತುಳಿಯಲಿರುವ ಹಾದಿಗೆ ವಿಧಿ ನನಗೆ ಇಷ್ಟು ಚೆನ್ನಾಗಿ ತರಬೇತಿ ನೀಡಿ ಸಿದ್ಧಗೊಳಿಸಿದೆ ಎಂದುಕೊಳ್ಳುವಾಗೆಲ್ಲ ಅಚ್ಚರಿಯೆನಿಸುತ್ತದೆ. ಈ ಎಲ್ಲ ತರಬೇತಿಯನ್ನು ನಾನು ಅಪ್ರಜ್ಞಾಪೂರ್ವಕವಾಗಿ ಪಡೆದೆ ಎಂದು ಮಾತ್ರ ಹೇಳಬಲ್ಲೆ.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಅಧ್ಯಾಯ.

 

ಇದನ್ನು ಬರೆಯುತ್ತಿರುವಾಗ ಇದೆಲ್ಲ ಎಷ್ಟು ವಿಚಿತ್ರ ಎನ್ನುವ ಆಲೋಚನೆ ಮನಸಲ್ಲಿ ಸುಳಿದು ಹೋಗುತ್ತಿದೆ. ಆಕಸ್ಮಿಕವಾಗಿ ಸಿಕ್ಕ ಅವಕಾಶದಿಂದ P.C.L.ನತ್ತ ನಡೆದಿದ್ದೆ. ಆ ಹಾದಿ ನನ್ನನ್ನು ಸಿನಿಮಾ ನಿರ್ದೇಶಕನನ್ನಾಗಿಸಿತು. ಅದಕ್ಕೂ ಮುನ್ನ ನಾನು ಮಾಡಿದ್ದ ಕೆಲಸಗಳೆಲ್ಲವೂ ಈ ಕೆಲಸಕ್ಕೆ ಪೂರ್ವತಯಾರಿಯಂತೆ ಕಾಣತೊಡಗಿತು. ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ಸಂಗೀತ ಮತ್ತಿತರ ಕಲೆಗಳಲ್ಲಿ ಉತ್ಸಾಹದಿಂದ ಮುಳುಗಿ ಎದ್ದಿದ್ದೆ. ನನ್ನೊಳಗೆ ತುಂಬಿಕೊಂಡ ಈ ಎಲ್ಲ ಕಲೆಗಳ ತಿಳಿವಳಿಕೆ ಒಟ್ಟಾಗಿ ಸಿನಿಮಾ ರೂಪದಲ್ಲಿ ಬಂದಿತ್ತು. ನಾನು ಕಲಿತೆಲ್ಲ ಕಲೆಗಳನ್ನು ಸಿನಿಮಾದಲ್ಲಿ ಬಳಸಬಹುದೆಂದು ಎಂದೂ ಯೋಚಿಸಿರಲಿಲ್ಲ. ನಾನು ಬದುಕಿನಲ್ಲಿ ತುಳಿಯಲಿರುವ ಹಾದಿಗೆ ವಿಧಿ ನನಗೆ ಇಷ್ಟು ಚೆನ್ನಾಗಿ ತರಬೇತಿ ನೀಡಿ ಸಿದ್ಧಗೊಳಿಸಿದೆ ಎಂದುಕೊಳ್ಳುವಾಗೆಲ್ಲ ಅಚ್ಚರಿಯೆನಿಸುತ್ತದೆ. ಈ ಎಲ್ಲ ತರಬೇತಿಯನ್ನು ನಾನು ಅಪ್ರಜ್ಞಾಪೂರ್ವಕವಾಗಿ ಪಡೆದೆ ಎಂದು ಮಾತ್ರ ಹೇಳಬಲ್ಲೆ.

P.C.L.ನ ಒಳಭಾಗದಲ್ಲಿ ಜನ ಕಿಕ್ಕಿರಿದಿದ್ದರು. ಆಮೇಲೆ ತಿಳಿಯಿತು ದಿನಪತ್ರಿಕೆಯಲ್ಲಿ ಸಹಾಯಕ ನಿರ್ದೇಶಕ ಹುದ್ದೆಗೆ ನೀಡಿದ್ದ ಜಾಹಿರಾತಿಗೆ 500 ಮಂದಿ ಅರ್ಜಿ ಸಲ್ಲಿಸಿದ್ದರಂತೆ. ಕಂಪನಿ ಅದರಲ್ಲಿ ಮುಕ್ಕಾಲು ಭಾಗದಷ್ಟು ಅರ್ಜಿದಾರರನ್ನು ಅವರು ಕಳುಹಿಸಿದ್ದ ಪ್ರಬಂಧದ ಆಧಾರದ ಮೇಲೆ ನಿರಾಕರಿಸಿತ್ತು. ಆದರೂ 130ಕ್ಕೂ ಹೆಚ್ಚು ಮಂದಿ ಎರಡನೆಯ ಸುತ್ತಿಗೆ ಅಲ್ಲಿ ನೆರೆದಿದ್ದರು. ಅವರಲ್ಲಿ ಆಯ್ಕೆ ಮಾಡುವುದು ಕೇವಲ ಐವರನ್ನು ಮಾತ್ರ ಅಂತ ನನಗೆ ಗೊತ್ತಿತ್ತು. ಎರಡನೆಯ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಅನ್ನಿಸಲಿಲ್ಲ. ಆದರೆ ಆ ವೇಳೆಗೆ ಸ್ಟುಡಿಯೋ ನೋಡುವ ಕುತೂಹಲ ಹುಟ್ಟಿತ್ತು. ಹಾಗೆ ಸುತ್ತಲೂ ನೋಡಹತ್ತಿದೆ. ಸಹಜವಾಗಿ ಆಗ ಯಾವುದೇ ಚಿತ್ರದ ಶೂಟಿಂಗ್ ನಡೆಯುತ್ತಿರಲಿಲ್ಲ. ನಟರು ಎನ್ನಬಹುದಾದಂತಹವರಾರು ಅಲ್ಲಿ ಕಾಣಿಸಲಿಲ್ಲ. ಸಹಾಯ ನಿರ್ದೇಶಕ ಅರ್ಜಿದಾರರಲ್ಲಿ ಒಬ್ಬ ಕೋಟನ್ನು ತೊಟ್ಟಿದ್ದ. ಅದೇಕೋ ಕೆಲಸದ ಸಂದರ್ಶನಕ್ಕೆ ಕೋಟು ತೊಟ್ಟು ಬಂದಿದ್ದವನು ಆಗಾಗ ನೆನಪಾಗುತ್ತಲೇ ಇರುತ್ತಾನೆ. ಅವನು ನೆನಪಾದಾಗೆಲ್ಲ ಯಾಕೋ ವಿಚಿತ್ರ ಆಶ್ಚರ್ಯವಾಗುತ್ತದೆ.

ನಮ್ಮ ಪರೀಕ್ಷೆಯ ಮೊದಲಭಾಗದಲ್ಲಿ ಕಥಾಸಾರಾಂಶವನ್ನು ಬರೆಯಬೇಕಿತ್ತು. ನಮ್ಮನ್ನು ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೂ ಬರೆಯಲು ಒಂದು ವಿಷಯವನ್ನು ಕೊಟ್ಟಿದ್ದರು. ಪ್ರತಿ ಗುಂಪಿಗೂ ಒಂದೇ ವಿಷಯವಾದರೂ ಗುಂಪಿನ ಪ್ರತಿ ಅಭ್ಯರ್ಥಿಯೂ ಬೇರೆ ಬೇರೆಯಾಗಿಯೇ ಬರೆಯಬೇಕಿತ್ತು. ನಂತರ ಮೌಖಿಕ ಪರೀಕ್ಷೆಯಿತ್ತು. ನಮ್ಮ ಗುಂಪಿಗೆ ಅಪರಾಧಕ್ಕೆ ಸಂಬಂಧಿಸಿದಂತೆ ದಿನಪತ್ರಿಕೆಯೊಂದರ ಸುದ್ದಿಯನ್ನು ಕೊಟ್ಟಿದ್ದರು. ಕೊತೊಚಿಯ (Kotochi) ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದವನು ಅಸಕುಸದ (Asakusa) ನರ್ತಕಿಯನ್ನು ಪ್ರೇಮಿಸುತ್ತಾನೆ. ಇದು ನಮಗೆ ಕೊಟ್ಟಿದ್ದ ವಿಷಯ. ನನಗೆ ಕಥಾಸಾರಾಂಶ ಹೇಗೆ ಬರೆಯಬೇಕು ಅಂತಲೇ ಗೊತ್ತಿರಲಿಲ್ಲ. ಏನು ಮಾಡುವುದು ಎಂದು ತಿಳಿಯದೆ ಸುಮ್ಮನೆ ಕೂತಿದ್ದೆ. ಆಗ ಅಕಸ್ಮಾತ್ ಪಕ್ಕದಲ್ಲಿ ಕೂತು ಬರೆಯುತ್ತಿದ್ದವನ ಕಡೆಗೆ ನೋಡಿದೆ. ನನ್ನ ಪಕ್ಕದಲ್ಲಿದ್ದವನು ಬರೆದು ಬರೆದು ಚೆನ್ನಾಗಿ ಅಭ್ಯಾಸವಾಗಿ ಹೋಗಿರುವವನಂತೆ ವೇಗವಾಗಿ ಬರೆಯುತ್ತಿದ್ದ. ಮೋಸ ಮಾಡುವ ಯಾವುದೇ ಉದ್ದೇಶ ನನ್ನಲ್ಲಿ ಇಲ್ಲದಿದ್ದರೂ ಅವನು ಬರೆಯುತ್ತಿರುವುದನ್ನು ನೋಡದೇ ಇರಲಾಗಲಿಲ್ಲ. ಕತೆ ಎಲ್ಲಿ ನಡೆಯುತ್ತದೆ ಎಂದು ಮೊದಲು ನಿರ್ಧರಿಸಿ ಆಮೇಲೆ ಅದರ ಸುತ್ತ ಬರೆಯುತ್ತಾ ಹೋಗಬೇಕು ಎಂದು ಅರ್ಥವಾಯಿತು. ಇಷ್ಟು ಅರ್ಥವಾದ ಬಳಿಕ ಬರೆಯಲು ಶುರುಮಾಡಿದೆ.

ಕೈಗಾರಿಕಾ ಪ್ರದೇಶ ಮತ್ತು ಪರದೆಯ ಹಿಂದಿನ ಡ್ರೆಸ್ಸಿಂಗ್ ಕೋಣೆಯ ನಡುವಿನ ವೈರುಧ್ಯವನ್ನು ಸೂಚಿಸಲು ನಿರ್ಧರಿಸಿದೆ. ಚಿತ್ರಕಾರನಾಗಿ ಕಾರ್ಮಿಕನ ಜೀವನವನ್ನು ಕಪ್ಪಾಗಿಯೂ ನರ್ತಕಿಯನ್ನು ಗುಲಾಬಿ ಬಣ್ಣದಲ್ಲೂ ಚಿತ್ರಿಸಲಾರಂಭಿಸಿದೆ. ನನ್ನ ಕತೆಯನ್ನು ಈ ರೀತಿ ಆರಂಭಿಸಿದೆ. ಆದರೆ ನಂತರ ಏನು ಬರೆದಿದ್ದೆ ನೆನಪಿಲ್ಲ. ಬರೆದದ್ದನ್ನು ಅವರಿಗೆ ಕೊಟ್ಟ ನಂತರ ಮೌಖಿಕ ಸಂದರ್ಶನಕ್ಕೆ ತುಂಬಾ ಹೊತ್ತು ಕಾಯಬೇಕಿತ್ತು. ಬರೆದು ಮುಗಿಸುವಷ್ಟರಲ್ಲಿ ಮಧ್ಯಾಂಹ್ನವಾಗಿತ್ತು. ಪರೀಕ್ಷೆಗೆ ಬರುವ ಮುನ್ನ ಎಂದಿನಂತೆ ಬೆಳಗಿನ ಉಪಹಾರವನ್ನು ತಿಂದಿದ್ದೆ. ಹೊಟ್ಟೆ ಹಸಿವಾಗುತ್ತಿತ್ತು. ಸ್ಟುಡಿಯೊದೊಳಗೊಂದು ಕೆಫಟೆರಿಯಾ ಇತ್ತು. ಆದರೆ ನಮಗೆ ಅಲ್ಲಿ ಪ್ರವೇಶವಿದೆಯೋ ಇಲ್ಲವೋ ಗೊತ್ತಿರಲಿಲ್ಲ. ಹಾಗಾಗಿ ನನ್ನ ಪಕ್ಕದಲ್ಲಿ ಕೂತಿದ್ದವನನ್ನು ಕೇಳಿದೆ. ಅವನು ತನಗೆ ಪರಿಚಯದವರೊಬ್ಬರು ಅಲ್ಲಿಯೇ ಕೆಲಸ ಮಾಡುತ್ತಿದ್ದು ಆತನನ್ನೇ ಮಧ್ಯಾಹ್ನದ ಊಟ ಕೊಡಿಸಲು ಕೇಳೋಣ ಅಂತ ಹೇಳಿದ. ಆತ ನಮಗೆ ಊಟ ಕೊಡಿಸಿದ. ಆದರೂ ತುಂಬಾ ಹೊತ್ತು ಕಾಯಬೇಕಾಯಿತು. ನನ್ನನ್ನು ಸಂದರ್ಶನಕ್ಕೆ ಕರೆಯುವ ವೇಳೆಗೆ ಮುಸ್ಸಂಜೆಯಾಗಿತ್ತು.

ಸಹಜವಾಗಿಯೇ ಸಂದರ್ಶಕರ ಕುರಿತು ನನಗೇನೂ ತಿಳಿದಿರಲಿಲ್ಲ. ಆದರೆ ಚಿತ್ರಕಲೆಯಿಂದ ಸಂಗೀತದವರೆಗಿನ ನಮ್ಮ ಚರ್ಚೆ ಆಸಕ್ತಿಕರವಾಗಿತ್ತು. ಅದೊಂದು ಸಿನಿಮಾ ಕಂಪನಿಯ ಪರೀಕ್ಷೆಯಾದ್ದರಿಂದ ಸಿನಿಮಾ ಕುರಿತು ಕೂಡ ಮಾತನಾಡಿದೆವು. ಏನು ಮಾತಾಡಿದೆವು ಎಂದು ಸ್ಪಷ್ಟವಾಗಿ ನೆನಪಿಲ್ಲ. ಆದರೆ ಹಲವು ವರ್ಷಗಳ ನಂತರ ಯಮ ಸಾನ್ (Yama san) ಪತ್ರಿಕೆಯೊಂದಕ್ಕೆ ನನ್ನ ಕುರಿತು ಲೇಖನ ಬರೆದರು. ಅದರಲ್ಲಿ ನನಗೆ ಜಪಾನಿ ಚಿತ್ರಕಾರರಾದ ಟೆಸ್ಸಾಯ್ (Tessai), ಸೊತತ್ಸು (Sotatsu) ಹಾಗೂ ವಾನ್ ಗೊ ಇಷ್ಟವೆಂದು ಮತ್ತು ಹೇಡನ್ನ (Haydn) ಸಂಗೀತ ಇಷ್ಟವೆಂದು ಬರೆದಿದ್ದರು. ಈ ಲೇಖನವನ್ನು ನೋಡಿದಾಗ ಸಂದರ್ಶನದಲ್ಲಿ ಈ ನಾಲ್ವರು ಕಲಾವಿದರ ಬಗ್ಗೆ ಮಾತಾಡಿದ್ದು ನೆನಪಾಯಿತು. ಒಟ್ಟಿನಲ್ಲಿ ಬಹಳ ಹೊತ್ತು ಮಾತಾಡಿದ್ದೆವು.

ಮಾತಾಡುತ್ತಾ ಮಾತಾಡುತ್ತಾ ಹೊರಗೆ ಕತ್ತಲಾಗುತ್ತಿರುವುದನ್ನು ಗಮನಿಸಿದೆ. ಮೌಖಿಕ ಪರೀಕ್ಷೆಗಾಗಿ ಹೊರಗೆ ಇನ್ನೂ ಹಲವು ಅಭ್ಯರ್ಥಿಗಳು ಕಾಯುತ್ತಿರುವುದನ್ನು ಸಂದರ್ಶಕರಿಗೆ ನೆನಪಿಸಿ ಹೊರಡಲು ಅನುಮತಿ ಕೋರಿದೆ. ಯಮ ಸಾನ್ (Yama san) “ಓಹ್ ಹೌದು” ಎಂದು ಎದ್ದು ಗೌರವದಿಂದ ಬಾಗಿ ಸ್ನೇಹಪೂರ್ಣ ನಗೆ ನಕ್ಕರು. ಮನೆಗೆ ಶಿಬುಯಾ (Shibuya) ಕಡೆಯಿಂದ ಹೋಗುತ್ತಿರುವುದಾದರೆ ಸ್ಟುಡಿಯೋ ಎದುರಿಗೆ ಬಸ್ಸು ನಿಲ್ಲುತ್ತದೆ ಎಂದು ಹೇಳಿಕಳುಹಿಸಿದರು. ಬಸ್ಸು ಹತ್ತಿ ಕಿಟಕಿಯ ಪಕ್ಕ ಕೂತೆ. ಆದರೆ ದಾರಿಯುದ್ದಕ್ಕೂ ಸಮುದ್ರದಂತಹದ್ದು ಏನೂ ಕಾಣಿಸಲಿಲ್ಲ.

ನನಗೆ ಕಥಾಸಾರಾಂಶ ಹೇಗೆ ಬರೆಯಬೇಕು ಅಂತಲೇ ಗೊತ್ತಿರಲಿಲ್ಲ. ಏನು ಮಾಡುವುದು ಎಂದು ತಿಳಿಯದೆ ಸುಮ್ಮನೆ ಕೂತಿದ್ದೆ. ಆಗ ಅಕಸ್ಮಾತ್ ಪಕ್ಕದಲ್ಲಿ ಕೂತು ಬರೆಯುತ್ತಿದ್ದವನ ಕಡೆಗೆ ನೋಡಿದೆ. ನನ್ನ ಪಕ್ಕದಲ್ಲಿದ್ದವನು ಬರೆದು ಬರೆದು ಚೆನ್ನಾಗಿ ಅಭ್ಯಾಸವಾಗಿ ಹೋಗಿರುವವನಂತೆ ವೇಗವಾಗಿ ಬರೆಯುತ್ತಿದ್ದ. ಮೋಸ ಮಾಡುವ ಯಾವುದೇ ಉದ್ದೇಶ ನನ್ನಲ್ಲಿ ಇಲ್ಲದಿದ್ದರೂ ಅವನು ಬರೆಯುತ್ತಿರುವುದನ್ನು ನೋಡದೇ ಇರಲಾಗಲಿಲ್ಲ. ಕತೆ ಎಲ್ಲಿ ನಡೆಯುತ್ತದೆ ಎಂದು ಮೊದಲು ನಿರ್ಧರಿಸಿ ಆಮೇಲೆ ಅದರ ಸುತ್ತ ಬರೆಯುತ್ತಾ ಹೋಗಬೇಕು ಎಂದು ಅರ್ಥವಾಯಿತು.

ಮೂರು ತಿಂಗಳ ನಂತರ P.C.L.ನಿಂದ ಮೂರನೆಯ ಪರೀಕ್ಷೆಗೆ ಹಾಜರಾಗಲು ಪತ್ರ ಬಂತು. ಇದು ಕಡೆಯ ಪರೀಕ್ಷೆಯಾದ್ದರಿಂದ ಇದರಲ್ಲಿ ಸ್ಟುಡಿಯೋ ಮುಖ್ಯಸ್ಥರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಇದ್ದರು. ಈ ಸಂದರ್ಶನದಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯು ತನ್ನದೇ ಧಾಟಿಯಲ್ಲಿ ನನ್ನ ಕುಟುಂಬದ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ನನಗ್ಯಾಕೋ ಆತನ ದನಿಯೇ ಹಿಡಿಸಲಿಲ್ಲ. ಸಿಟ್ಟನ್ನು ತಡೆಹಿಡಿಯಲಾಗದೆ “ಇದೇನು ವಿಚಾರಣೆಯೇನು?” ಅಂತ ಕೇಳಿಬಿಟ್ಟೆ. ಸ್ಟುಡಿಯೋ ಮುಖ್ಯಸ್ಥರು (ಆಗ ಮೋರಿ ಇವಾವೊ (Mori Iwao)) ಮುಂದೆ ಬಂದು ನನ್ನನ್ನು ಸಮಾಧಾನ ಪಡಿಸಲು ಯತ್ನಿಸಿದರು. ನನಗಿಲ್ಲಿ ಕೆಲಸ ಸಿಗುವುದಿಲ್ಲ ಅಂತ ಖಾತ್ರಿಯಾಯಿತು.

ಒಂದು ವಾರದ ನಂತರ ಕೆಲಸದ ನೇಮಕಾತಿ ಪತ್ರ ಕೈಸೇರಿತು. ಆದರೆ ಆ ಅಂತಿಮ ಸುತ್ತಿನ ಸಂದರ್ಶನದಲ್ಲಿ ಸಿಕ್ಕು ಕಿರಿಕಿರಿ ಮಾಡಿದ್ದ ಕಾರ್ಯನಿರ್ವಾಹಕ ಕಾರ್ಯದರ್ಶಿ, ಅಂದು ನೋಡಿದ್ದ ಮೂರಿಂಚಿನ ದಪ್ಪ ಮೇಕಪ್ ಮಾಡಿಕೊಂಡಿದ್ದ ನಟಿಯರು ಎಲ್ಲ ರೇಜಿಗೆ ಅನ್ನಿಸಿತ್ತು. ಅಪ್ಪನಿಗೆ ನೇಮಕಾತಿ ಪತ್ರ ತೋರಿಸಿದೆ. ಕೆಲಸಕ್ಕೆ ಒಪ್ಪಿ ಬಂದೆ ಆದರೆ ನನಗೆ ಈ ಕೆಲಸಕ್ಕೆ ಹೋಗಲು ಇಷ್ಟವಿಲ್ಲ ಎಂದೆ. ನಿನಗೆ ಇಷ್ಟವಿಲ್ಲ ಅಂದರೆ ಕೆಲಸ ಯಾವಾಗ ಬೇಕಾದರೂ ಬಿಡಬಹುದು. ಆದರೆ ಏನೇ ಕೆಲಸ ಮಾಡಿದರೂ ಅದೊಂದು ಅನುಭವ. ಆದ್ದರಿಂದ ಒಂದು ತಿಂಗಳೋ ಅಥವ ಒಂದು ವಾರವೋ ಹೋಗಿ ನೋಡು ಅಂತ ಅಪ್ಪ ಹೇಳಿದರು. ಅದು ಒಳ್ಳೇ ಐಡಿಯಾ ಅನ್ನಿಸಿತು. P.C.L ಸೇರಿದೆ.

ನಾನಂದುಕೊಂಡಿದ್ದೆ ಐವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಂಡಿರುತ್ತಾರೆ ಅಂತ. ಆದರೆ ನನ್ನೊಂದಿಗೆ ಇಪ್ಪತ್ತೈದು ಮಂದಿ ಹೊಸದಾಗಿ ಕೆಲಸಕ್ಕೆ ಸೇರಿದ್ದರು. ವಿಚಿತ್ರ ಅನ್ನಿಸಿತು. ಬೇರೆ ಬೇರೆ ದಿನಗಳಲ್ಲಿ ನಡೆದ ಪರೀಕ್ಷೆಗಳಲ್ಲಿ ಐವರು ಕ್ಯಾಮೆರ ಸಹಾಯಕರು, ಐವರು ರೆಕಾರ್ಡಿಂಗ್ ಸಹಾಯಕರು, ಐವರು ಆಡಳಿತ ಸಹಾಯಕರನ್ನು ಐವರು ಸಹಾಯಕ ನಿರ್ದೇಶಕರೊಂದಿಗೆ ಆಯ್ಕೆ ಮಾಡಿದ್ದಾರೆ ಎಂದು ಆಮೇಲೆ ತಿಳಿಯಿತು. ತಿಂಗಳಿಗೆ ಆಡಳಿತ ಸಹಾಯಕರನ್ನು ಬಿಟ್ಟು ಉಳಿದವರಿಗೆ 28 ಯೆನ್ ಗಳು (ಇವತ್ತಿನ ದಿನಕ್ಕೆ ಸುಮಾರು $560). ಆಡಳಿತ ಸಹಾಯಕರಿಗೆ ಮಾತ್ರ 30 ಯೆನ್ಗಳು (ಸುಮಾರು $600). ಏಕೆಂದರೆ ಅವರಿಗೆ ಹುದ್ದೆಯಲ್ಲಿ ಮೇಲೇರುವ ಅವಕಾಶಗಳು ಕಡಿಮೆಯಿದ್ದವು. ನನಗೆ ಸಂದರ್ಶನದಲ್ಲಿ ಇರಿಸುಮುರಿಸುಂಟುಮಾಡಿದ್ದ ಕಾರ್ಯನಿರ್ವಾಹಕ ಕಾರ್ಯದರ್ಶಿಯೇ ಇದನ್ನು ವಿವರಿಸಿದ.

(ಇದೇ ಕಾರ್ಯನಿರ್ವಾಹಕ ಕಾರ್ಯದರ್ಶಿ ನಂತರದ ವರ್ಷಗಳಲ್ಲಿ ವ್ಯವಸ್ಥಾಪಕ ನಿರ್ದೇಶಕನಾದ. ಆತ ಆ ಹುದ್ದೆಯಲ್ಲಿದ್ದಾಗಲೇ ನನ್ನೊಡನೆ ಕೆಲಸಕ್ಕೆ ಸೇರಿದ್ದ ಸಹಾಯಕ ನಿರ್ದೇಶಕನೊಬ್ಬ ಬೀಳುತ್ತಿದ್ದ ಲೈಟಿನ ಕೆಳಗೆ ಸಿಕ್ಕು ಅಪಘಾತವಾಯಿತು. ಆತನ ಆರು ಪಕ್ಕೆಲಬುಗಳು ಮುರಿದು ಹೋಗಿತ್ತು. ಅಪಘಾತದ ಆಘಾತದಿಂದ ಮುಂದೆ ಆತನಿಗೆ ಅಪೆಂಡಿಸೈಟಿಸ್ ತೊಂದರೆ ಕಾಣಿಸಿಕೊಂಡಿತು. ಈ ತೊಂದರೆ ಕಾಣಿಸಿಕೊಂಡಾಗ ನಮ್ಮ ಕಾರ್ಯನಿರ್ವಾಹಕ ಕಾರ್ಯದರ್ಶಿಯು ಮುರಿದ ಪಕ್ಕೆಲುಬುಗಳಿಗೆ ಕಂಪನಿ ಜವಾಬ್ದಾರಿ ಹೊರುತ್ತದೆ. ಆದರೆ ಅಪೆಂಡಿಸೈಟಿಸ್ ಸಮಸ್ಯೆ ಕಂಪನಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದ. ಎರಡನೆಯ ಮಹಾಯುದ್ಧದ ನಂತರ ಸ್ಟುಡಿಯೋದಲ್ಲಿ ಕಾರ್ಮಿಕ ಸಂಘಟನೆ ರೂಪುಗೊಂಡಾಗ ಈತನ ವಿರುದ್ಧ ಹಲವು ಮತಗಳು ಬಿದ್ದವು.)

ಸಹಾಯಕ ನಿರ್ದೇಶಕನಾಗಿ ಸೇರಿದಾಗ ಮೊದಲಿಗೆ ನನಗೆ ಕೊಟ್ಟ ಕೆಲಸಗಳನ್ನು ನೋಡಿ ಕೆಲಸ ಬಿಟ್ಟುಬಿಡಲು ನಿರ್ಧರಿಸಿದೆ. ಅಪ್ಪ ಹೇಳಿದ್ದರು ಯಾವ ಕೆಲಸ ಮಾಡಿದರೂ ಅದೊಂದು ಅನುಭವ ಅಂತ. ಆದರೆ ನನಗೆ ವಹಿಸಿದ ಎಲ್ಲ ಕೆಲಸಗಳು ಎಂತಹುದೇ ಸಂದರ್ಭದಲ್ಲೂ ನಾನು ಮತ್ತೊಮ್ಮೆ ಮಾಡಲು ಬಯಸುವಂತಹದ್ದಾಗಿರಲಿಲ್ಲ. ನನಗಿಂತ ಸೀನಿಯರ್ ಆಗಿದ್ದ ಸಹಾಯಕ ನಿರ್ದೇಶಕರು ನಾನು ಕೆಲಸ ಬಿಡದಂತೆ ತಡೆದರು. ನಾನೀಗ ಕೆಲಸ ಮಾಡುತ್ತಿರುವ ಸಿನಿಮಾದಂತೆ ಎಲ್ಲ ಸಿನಿಮಾಗಳು ಇರುವುದಿಲ್ಲ, ನಾನೀಗ ಕೆಲಸ ಮಾಡುತ್ತಿರುವ ನಿರ್ದೇಶಕನಂತೆ ಎಲ್ಲರೂ ಇರುವುದಿಲ್ಲ ಅಂತ ಸಮಾಧಾನ ಮಾಡಿ ಭರವಸೆ ತುಂಬಿದರು.

ಅವರ ಮಾತನ್ನು ಕೇಳಿ ಎರಡನೆಯ ಕೆಲಸವನ್ನು ಒಪ್ಪಿಕೊಂಡೆ. ಯಮ ಸಾನ್ (Yama-san) ಜೊತೆಗೆ ಕೆಲಸ ಮಾಡುವಂತಾಯಿತು. ಅವರುಗಳು ಹೇಳಿದ್ದ ಮಾತು ನಿಜವಾಗಿತ್ತು. ಹಲವು ರೀತಿಯ ಸಿನಿಮಾಗಳು ಹಲವು ರೀತಿಯ ನಿರ್ದೇಶಕರು ಇರುತ್ತಾರೆ ಎನ್ನುವುದು ತಿಳಿಯಿತು. ಯಮಾಮೊಟೊ (Yamamoto) ಗುಂಪಿನೊಂದಿಗೆ ಕೆಲಸ ಮಾಡಿದ್ದು ಬಹಳ ಖುಷಿ ಕೊಟ್ಟಿತು. ಅದಾದ ಮೇಲೆ ಬೇರೆಯವರ ಜೊತೆ ಕೆಲಸ ಮಾಡಲು ಇಷ್ಟವಾಗಲೇ ಇಲ್ಲ. ಅದೊಂದು ರೀತಿ ಪರ್ವತದ ಹಾದಿಯಲ್ಲಿ ಮುಖವನ್ನು ತೀಡಿ ಹೋಗುವ ತಂಗಾಳಿಯಂತೆ ಇತ್ತು. ಕಷ್ಟಪಟ್ಟು ಬೆಟ್ಟ ಹತ್ತಿ ಹೋಗುವಾಗ ಮುಖ ನೇವರಿಸಿ ಹೊಸ ಚೈತನ್ಯವನ್ನು ತರುತ್ತದೆಯಲ್ಲ ಅಂತಹ ತಂಗಾಳಿ.

ನೀವು ತುದಿಗೆ ಹತ್ತಿರವಾಗುತ್ತಿರುವುದನ್ನು ಕಿವಿಯಲ್ಲುಸುರುತ್ತದೆಯಲ್ಲ ಆ ತಂಗಾಳಿ. ಅಲ್ಲಿ ನಿಂತು ಕೆಳಗೆ ನೋಡಿದಾಗ ಅದ್ಭುತವಾದ ವಿಹಂಗಮ ನೋಟ ನಿಮ್ಮೆದುರು ತೆರೆದುಕೊಳ್ಳುತ್ತದೆ. ಯಮಾ ಸಾನ್ (Yama-san) ನಿರ್ದೇಶಕರ ಕುರ್ಚಿಯಲ್ಲಿ ಕೂತಿದ್ದಾಗ ಅವರ ಹಿಂದೆ ನಿಂತಾಗ ನನಗೆ ಹೀಗೆ ಅನ್ನಿಸಿತ್ತು. “ಕಡೆಗೂ ಸಾಧಿಸಿಬಿಟ್ಟೆ” ಅಂತ ಹೆಮ್ಮೆಯಿಂದ ಎದೆಯುಬ್ಬಿಸಿ ನಿಂತಿದ್ದೆ. ಅವರು ಮಾಡುತ್ತಿದ್ದ ಕೆಲಸ ನಾನು ಮಾಡಲು ಇಷ್ಟಪಡುತ್ತಿದ್ದಂತಹ ಕೆಲಸ. ಪರ್ವತದ ಹಾದಿಯನ್ನೇರಿ ನಿಂತಿದ್ದೆ. ಅಲ್ಲಿನ ನೋಟ ನನ್ನೆದುರು ನೇರವಾದ ರಸ್ತೆಯೊಂದನ್ನು ತೆರೆದು ತೋರಿತ್ತು.