Advertisement
ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು” ಇಂದಿನಿಂದ

ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು” ಇಂದಿನಿಂದ

ಮನುಷ್ಯನಿಗೆ ಮನುಷ್ಯನೇ ಹುಟ್ಟುವ ತದ್ರೂಪಿತನ ಪುರಾತನ ಕಾಲದಿಂದಲೂ ಕುತೂಹಲ ಮೂಡಿಸಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಗ್ರೀಕ್ ಗಣಿತಜ್ಞ-ತತ್ವಶಾಸ್ತ್ರಿ ಪೈಥಾಗೊರಸ್ ಅನುವಂಶೀಯತೆಯ ಸೂತ್ರ ವೀರ್ಯದಲ್ಲಿದೆ ಎನ್ನುತ್ತಾನೆ. ಅವನ ಪ್ರಕಾರ, ವೀರ್ಯ ಪುರುಷನಿಂದ ಹೊರಬರುವ ಮುನ್ನ ದೇಹದ ಎಲ್ಲಾ ಭಾಗಗಳಲ್ಲಿ ಹರಿದು ಆ ಭಾಗಗಳೆಲ್ಲದುರ ಮಾಹಿತಿಯನ್ನೂ ಕಲೆಹಾಕಿ ತದ್ರೂಪಿ ಇರುವ ಬೀಜವಾಗುತ್ತದೆ. ಈ ಬೀಜ ಗರ್ಭವನ್ನು ಸೇರಿದಾಗ, ಆ ತದ್ರೂಪಿಗೆ ಬೇಕಿರುವ ಪೋಷಕಾಂಶ ನೀಡಿ ಅದನ್ನು ದೊಡ್ಡದು ಮಾಡುವುದಷ್ಟೇ ಹೆಣ್ಣಿನ ಕೆಲಸ.
ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಫೋಟೋ ೫೧” – ೧೯೫೨ ರಲ್ಲಿ ತೆಗೆದ ಈ ಫೋಟೋ ಅನ್ನು “ಜಗತ್ತಿನ ಅತ್ಯಂತ ಸುಂದರ ಫೋಟೋ” ಎನ್ನುವುದಿದೆ. ನಾವು ಹೇಗೆ ನಾವಾಗುತ್ತೇವೆ ಎಂಬುದರ ರಹಸ್ಯವನ್ನು ಹೊರಗೆಡುವಿದಂತಹ ಫೋಟೋ ಇದು. ಮಾನವ ಇತಿಹಾಸದಲ್ಲಿ ಇದಕ್ಕಿಂತ ಮುಖ್ಯವಾದ ಫೋಟೋ ಇರಲಿಕ್ಕಿಲ್ಲ.

ಇದು, ಅದರ ಕತೆ.

*****

ನಾವು ನಾವಾಗುವುದು ಹೇಗೆ ಅಥವಾ ಏಕೆ ಎಂಬುದು ಅತಿ ಹಳೆಯ ಪ್ರಶ್ನೆ. ನಾಯಿಯೊಂದಕ್ಕೆ ನಾಯಿ ಮರಿಯೇ ಏಕೆ ಹುಟ್ಟುತ್ತದೆ? ಮೆಣಸಿನಕಾಯಿ ಬೀಜದಿಂದ ಮೆಣಸಿನಕಾಯಿ ಗಿಡವೇ ಏಕೆ ಜನ್ಮತಾಳಬೇಕು? ಇಂತಹ ಪ್ರಶ್ನೆಗೆ ವಿವಿಧ ದೇಶ-ಸಂಸ್ಕೃತಿಗಳಲ್ಲಿ ವಿವಿಧ ಉತ್ತರಗಳನ್ನು ನೀಡಲಾಗಿದೆ. ಉದಾಹರಣೆಗೆ, ಈ ಜನ್ಮದ ಕರ್ಮಗಳು ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂಬುದೂ ಒಂದು; ಈ ಉತ್ತರದ ಪ್ರಕಾರ, ನಾಯಿ ಮರಿಯೊಂದು ಹುಟ್ಟಿದರೆ, ಅದರ ತಂದೆ-ತಾಯಿಗಳು ನಾಯಿಗಳು ಕಾರಣೀಭೂತರೆನ್ನುವುದಕ್ಕಿಂತ ಆ ಮರಿಯ ಹಿಂದಿನ ಜನ್ಮದ ಕರ್ಮಫಲವೇ ಅದರ ನಾಯಿತನವನ್ನು ನಿರ್ಧರಿಸುತ್ತದೆ. ಇಂತಹ ಉತ್ತರಗಳು ಇಂದು ಸರಳವೆನ್ನಿಸುವ ನಮ್ಮ ಹಳೆಯ ಪ್ರಶ್ನೆಗೆ ಉತ್ತರ ನೀಡುವುದರ ಬದಲು ಇನ್ನಷ್ಟು ಪ್ರಶ್ನೆಗಳನ್ನು ಇದಿರು ಹಾಕುತ್ತವೆ ಎಂಬುದು ಬೇರೆಯ ಮಾತು.

ಮನುಷ್ಯನಿಗೆ ಮನುಷ್ಯನೇ ಹುಟ್ಟುವ ತದ್ರೂಪಿತನ ಪುರಾತನ ಕಾಲದಿಂದಲೂ ಕುತೂಹಲ ಮೂಡಿಸಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಗ್ರೀಕ್ ಗಣಿತಜ್ಞ-ತತ್ವಶಾಸ್ತ್ರಿ ಪೈಥಾಗೊರಸ್ ಅನುವಂಶೀಯತೆಯ ಸೂತ್ರ ವೀರ್ಯದಲ್ಲಿದೆ ಎನ್ನುತ್ತಾನೆ. ಅವನ ಪ್ರಕಾರ, ವೀರ್ಯ ಪುರುಷನಿಂದ ಹೊರಬರುವ ಮುನ್ನ ದೇಹದ ಎಲ್ಲಾ ಭಾಗಗಳಲ್ಲಿ ಹರಿದು ಆ ಭಾಗಗಳೆಲ್ಲದುರ ಮಾಹಿತಿಯನ್ನೂ ಕಲೆಹಾಕಿ ತದ್ರೂಪಿ ಇರುವ ಬೀಜವಾಗುತ್ತದೆ. ಈ ಬೀಜ ಗರ್ಭವನ್ನು ಸೇರಿದಾಗ, ಆ ತದ್ರೂಪಿಗೆ ಬೇಕಿರುವ ಪೋಷಕಾಂಶ ನೀಡಿ ಅದನ್ನು ದೊಡ್ಡದು ಮಾಡುವುದಷ್ಟೇ ಹೆಣ್ಣಿನ ಕೆಲಸ. ಇಂತಹ ವಾದ ವೀರ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ತದ್ರೂಪಿಯ ಸೃಷ್ಟಿಯಲ್ಲಿ ಹೆಣ್ಣಿನ ಪಾತ್ರವನ್ನು ಗೌಣವಾಗಿಸುತ್ತದೆ. ಇದು ನಮಗೆ ಮನು ಧರ್ಮ ಶಾಸ್ತ್ರದ “ಗಂಡು ಬೀಜ – ಹೆಣ್ಣು ಹೊಲ” ಎನ್ನುವ ರೂಪಕವನ್ನೂ ನೆನಪಿಸಬಹುದು.

ಗ್ರೀಕ್ ಪುರಾಣದಲ್ಲಿ ಆರೆಸ್ಟೆಸ್ ಎನ್ನುವವನು ತನ್ನ ತಾಯಿ ಕ್ಲೈಟೆಮ್ನೆಸ್ಟ್ರಾಳನ್ನು ಕೊಲ್ಲುತ್ತಾನೆ. ಮಾತೃಹತ್ಯೆಯ ಆರೋಪದ ಮೇಲೆ ಅವನನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆ ಕತೆಯನ್ನು”ಆರೆಸ್ಟಿಯಾ” ಎಂಬ ದುರಂತ ನಾಟಕವನ್ನಾಗಿಸುವ ಪೈಥಾಗೊರಸನ ಸಮಕಾಲೀನ ಕವಿ ಅಷೈಲಸ್, ತನ್ನ ನಾಟಕದ ನಾಯಕ ಆರೆಸ್ಟೆಸ್ ಪರವಾಗಿ ವಾದವೊಂದನ್ನು ಮುಂದಿಡುತ್ತಾನೆ: ತಾಯಿ ಎಂದರೆ ಶಿಶುವನ್ನು ಪೋಷಿಸುವ ಇನ್ಕ್ಯುಬೇಟರ್ ಅಷ್ತ್ಟೇ! ಹೀಗಾಗಿ, ತಾಯಿಯನ್ನು ಕೊಲ್ಲುವುದು ಅಂತಹ ಘೋರ ಪಾಪವೇನಲ್ಲ!!

ಇಂದು ಪೈಥಾಗೊರಸ್ ನಮಗೆ ಬಹುಮಟ್ಟಿಗೆ ತಿಳಿದಿರುವುದು ಗಣಿತದ ಅವನ “ಪೈಥಾಗೊರಸ್ ಥಿಯರಂ” ಮೂಲಕವೇ. ಎಲ್ಲವನ್ನೂ ಗಣಿತದ ಅದರಲ್ಲೂ ಬಹುಮಟ್ಟಿಗೆ ರೇಖಾ ಗಣಿತದ ಮೂಲಕವೇ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದ ಅವನು, ಕೆಲವೊಂದು ಅಂಕಿ-ಸಂಖ್ಯೆಗಳಿಗೆ ಮತ್ತು ರೇಖಾ ಗಣಿತದ ಸೂತ್ರಗಳಿಗೆ ದೈವೀ ಶಕ್ತಿ ಇದೆ ಎಂದೇ ನಂಬಿದ್ದ.

ತ್ರಿಕೋನದಲ್ಲಿ, ಎರಡು ರೇಖೆಗಳ ವಿವರ ತಿಳಿದಿದ್ದರೆ, ಮೂರನೆಯದನ್ನು ಗಣಿತ ಶಾಸ್ತ್ರದ ಮೂಲಕ ನಿರ್ಧರಿಸಬಹುದು. ಇದನ್ನು, ಪೈಥಾಗೊರಸ್ ಮತ್ತು ಅವನ ನಂತರ ಬಂದ ತತ್ವಶಾಸ್ತ್ರಜ್ಞ ಪ್ಲೇಟೋ, “ತಂದೆ-ತಾಯಿ-ಶಿಶು” ಎನ್ನುವ “ತ್ರಿಕೋನ”ಕ್ಕೆ ಅಳವಡಿಸಿ, ತಂದೆ-ತಾಯಿಯರ ವಿವರದ ಮೂಲಕ ಶಿಶುವಿನ ಭವಿಷ್ಯ ನಿರ್ಧರಿಸಬಹುದು ಎಂದರು. ಆದರೆ, ಅವರ ಪ್ರಕಾರ ಶಿಶುವಿನ ಗುಣಗಳೆಲ್ಲಾ (“ನೇಚರ್”) ಸಂಪೂರ್ಣ ತಂದೆಯಿಂದಲೇ ಬಂದರೆ, ತಾಯಿಯ ಪಾತ್ರ ಕೇವಲ ಪೋಷಿಸುವುದಷ್ಟಕ್ಕೇ (“ನರ್ಚರ್”) ಸೀಮಿತ.

೨೦೦೦ ವರ್ಷಗಳ ಹಿಂದಿದ್ದ ಅರಿಸ್ಟಾಟಲ್, ಪ್ಲೇಟೋನ ಖಾಸಾ ಶಿಷ್ಯ. ಆದರೆ, ಅವನು ತನ್ನ ಗುರುವಿನ ವಾದವನ್ನು ಒಪ್ಪುವುದಿಲ್ಲ. ಅರಿಸ್ಟಾಟಲ್ ಬರೆದ “ಜೆನರೇಷನ್ ಆಫ್ ಅನಿಮಲ್ಸ್”, ಜೀವ ವಿಜ್ಞಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಬರಹ. ತನ್ನ ಆ ಬರಹದಲ್ಲಿ ಅವನು, ಹಲವೊಮ್ಮೆ ಮಕ್ಕಳ ಮೂಗು-ಕಣ್ಣುಗಳು ತಾಯಿಯ ಮೂಗು-ಕಣ್ಣುಗಳಂತೆಯೇ ಇರುವುದನ್ನು ಪ್ರಸ್ತಾಪಿಸುತ್ತಾನೆ. ಅಷ್ಟೇ ಅಲ್ಲ, ಕೆಲವೊಮ್ಮೆ ಇಂತಹ ತದ್ರೂಪಿತನ, ಮಕ್ಕಳಲ್ಲಿ ಕಂಡುಬರದಿದ್ದರೂ ಮೊಮ್ಮಕ್ಕಳಲ್ಲಿ ಕಾಣುವುದನ್ನೂ ಗಮನಿಸುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ, ಪೈಥಾಗೊರಸನ ವಾದದಂತೆ ತಂದೆಯ ದೇಹದಿಂದ ಮಾಹಿತಿ ಸಂಗ್ರಹಿಸುವ ವೀರ್ಯವಷ್ಟೇ ಶಿಶುವಿನ ದೇಹವನ್ನು ನಿರ್ಧರಿಸುವುದಾದರೆ ಹೆಣ್ಣು ಶಿಶು ಜನಿಸುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಎತ್ತಿ ಅದರ ಪೊಳ್ಳುತನವನ್ನು ತೋರುತ್ತಾನೆ. ಕೊನೆಗೆ ತನ್ನದೇ ಆದ ಹೊಸ ವಾದವೊಂದನ್ನು ಮಂಡಿಸುತ್ತಾನೆ.

ಅರಿಸ್ಟಾಟಲ್‌ನ ವಾದದ ಪ್ರಕಾರ, ಶಿಶುವಿನ ರೂಪರೇಷೆಯ ನಿರ್ಮಾಣದಲ್ಲಿ ತಂದೆ ಮತ್ತು ತಾಯಿ ಇಬ್ಬರ ಪಾತ್ರವೂ ಇದೆ. ತಾಯಿ, ಶಿಶುವಿನ ದೇಹಕ್ಕೆ ಬೇಕಾದ ಭೌತಿಕ ವಸ್ತು ಒದಗಿಸಿದರೆ, ಆ ವಸ್ತುವಿಗೆ ಶಿಶುವಿನ ರೂಪ ನೀಡುವ ಮಾಹಿತಿ-ಸಲಕರಣೆಯಾಗಿ ತಂದೆಯ ವೀರ್ಯ ಕೆಲಸ ಮಾಡುತ್ತದೆ. ಗರ್ಭಧಾರಣೆಯಾಗದಿದ್ದಾಗ ಋತುಸ್ರಾವ ಅಗುವುದನ್ನು ಪ್ರಸ್ತಾಪಿಸುವ ಅವನು, ಭೌತಿಕ ವಸ್ತು ಹೊರ ಹೋಗುವ ಈ ಪ್ರಕ್ರಿಯೆಯನ್ನು ತನ್ನ ವಾದದ ಪುಷ್ಟೀಕರಣಕ್ಕೆ ಬಳಸುತ್ತಾನೆ.

ಅರಿಸ್ಟಾಟಲನ ವಾದ ಸಂಪೂರ್ಣವಾಗಿ ಸರಿ ಇರದಿದ್ದರೂ, ಶಿಶುವಿನ ನಿರ್ಮಾಣದಲ್ಲಿ ತಂದೆ-ತಾಯಿ ಇಬ್ಬರ ಪಾತ್ರವೂ ಇರುವುದನ್ನು ತೋರುವ ಅವನು ಆ ನಿರ್ಮಾಣ ಕಾರ್ಯದಲ್ಲಿ “ಮಾಹಿತಿ” (ಅಥವಾ ಆಧುನಿಕ ಪರಿಭಾಷೆಯಲ್ಲಿ ಜೆನೆಟಿಕ್ ಕೋಡ್) ಸಂವಹನವಾಗುವುದನ್ನೂ ಮಂಡಿಸುತ್ತಾನೆ. ಈ ಕಾಲದ ಹಲವಾರು ವಿಜ್ಞಾನಿಗಳ ಪ್ರಕಾರ, ಇದು ನೊಬೆಲ್ ಪ್ರಶಸ್ತಿಗೆ ಅರ್ಹವಾದ ವೈಜ್ಞಾನಿಕ ಸಂಶೋಧನೆ!

*****

ಶಿಶುವಿನ ನಿರ್ಮಾಣದ ಹಿಂದೆ ಅದನ್ನು ರೂಪಿಸುವ ಅರಿಸ್ಟಾಟಲನ “ಮಾಹಿತಿ ವಾದ” ಇಂದು ನಮಗೆ ವೈಜ್ಞಾನಿಕವೆನ್ನಿಸಿದರೂ, ಅದು ಹೊಸ ಪ್ರಶ್ನೆಗಳನ್ನು ಹಾಕುತ್ತದೆ. ಆ “ಮಾಹಿತಿ” ಭೌತಿಕವಾಗಿ ಯಾವ ರೂಪದಲ್ಲಿ ಸಂವಹನವಾಗುತ್ತದೆ? ಆ “ಮಾಹಿತಿ” ಗರ್ಭಕೋಶದಲ್ಲಿ ಶಿಶುವೊಂದಕ್ಕೆ ಭೌತಿಕ ದೇಹ ನೀಡುವುದಾದರೂ ಹೇಗೆ? ಇತ್ಯಾದಿಗಳು.

ಎರಡು ಸಾವಿರ ವರ್ಷಗಳ ಹಿಂದಿನ ಅರಿಸ್ಟಾಟಲ್ ನಂತರ, ಯುಗಗಳು ಸರಿದಂತೆ, ಹೊಸದೊಂದು ವಾದವೂ ಮುನ್ನೆಲೆಗೆ ಬಂತು. ಈ ಹೊಸ ವಾದದ ಸರಳತೆಯಲ್ಲಿ ಅರಿಸ್ಟಾಟಲ್‌ನ “ಮಾಹಿತಿ ವಾದ” ಎತ್ತುವ ಪ್ರಶ್ನೆಗಳಿಗೆ ಜಾಗವೇ ಇಲ್ಲ.

ಸ್ಪರ್ಮಿಸಂ” ಎಂದು ಕರೆಯಲ್ಪಡುವ ಈ ವಾದದ ಪ್ರಕಾರ, ಪ್ರತಿ ವೀರ್ಯದ ಕಣದಲ್ಲಿಯೂ “ಕಿರು-ಮಾನವ”ನೊಬ್ಬ/ಳು (ಲ್ಯಾಟಿನ್ ನ “homunculus”) ಇರುತ್ತಾನೆ/ಇರುತ್ತಾಳೆ. ಹೀಗಾಗಿ, ಆ ಕಣ ಸ್ತ್ರೀ ಗರ್ಭಕ್ಕೆ ಸೇರಿದಾಗ, ಶಿಶುವನ್ನು ರೂಪಿಸುವ “ಮಾಹಿತಿ”ಯ ಅಗತ್ಯವೇ ಇಲ್ಲ. ಇನ್ನೂ ಜನ್ಮಿಸದಿರುವ ಆ ಶಿಶುವಿನ ವೀರ್ಯದ ಕಣದಲ್ಲಿಯೂ ಇನ್ನೊಬ್ಬ ಕಿರು-ಮಾನವನಿದ್ದಾನೆ. ಆ ಕಿರು-ಮಾನವನ ವೀರ್ಯದ ಕಣದಲ್ಲಿ ಮತ್ತೊಬ್ಬ. ಹೀಗೆ, ರಿಕರ್ಸಿವ್ ಆಗಿ ಮುಂದುವರೆಯುವುದರಿಂದಲೇ, ಮನುಷ್ಯನಿಗೆ ಮನುಷ್ಯನೇ ಹುಟ್ಟುತ್ತಾನೆ. ನಾಯಿಗೆ ನಾಯಿಯೇ ಹುಟ್ಟುತ್ತದೆ. ಮೆಣಸಿನಕಾಯಿ ಗಿಡದಿಂದ ಮೆಣಸಿನಕಾಯಿ ಗಿಡ…

(Homunculus)

ಆಡಮ್ ಮೊಟ್ಟ ಮೊದಲ ಮಾನವ; ಅವನು ದೇವನ ಆಜ್ಞೆಗೆ ವಿರುದ್ಧವಾಗಿ ನಡೆದು ಪಾಪವೆಸಗಿದ್ದರಿಂದ ಅವನ ವಂಶಜರಾದ ನಾವೆಲ್ಲಾ ಹುಟ್ಟಿನಿಂದಲೇ ಪಾಪಾತ್ಮರು. ಇದು ಕ್ರೈಸ್ತ ಧರ್ಮದ ನಂಬಿಕೆ. ಐದು ಶತಮಾನಗಳ ಹಿಂದೆ ಯೂರೋಪಿನಲ್ಲಿ ವೈಜ್ಞಾನಿಕತೆ ಬೆಳೆದಂತೆ, ಈ ನಂಬಿಕೆಯೂ ಪ್ರಶ್ನಾರ್ಹವೆನ್ನಿಸಲಾರಂಭಿಸಿದಾಗ, ಸ್ಪರ್ಮಿಸಂ ತನ್ನ ರಿಕರ್ಸಿವ್ ತರ್ಕದಿಂದ ಆ ನಂಬಿಕೆಗೆ “ವೈಜ್ಞಾನಿಕ”ವೆನ್ನಬಹುದಾದ ಅಡಿಪಾಯ ನೀಡಿತು; ಆಡಮ್ ತಪ್ಪು ಮಾಡಿದಾಗ, ನಾವೆಲ್ಲಾ ಅವನ ದೇಹದಲ್ಲಿ ಕಿರು ಮಾನವ ರೂಪದಲ್ಲಿ ಇದ್ದಿದ್ದರಿಂದ ಅವನ ತಪ್ಪಿನಲ್ಲಿ ನಾವೂ ಭಾಗಿಗಳು. ಈ ತರ್ಕ ಸ್ಪರ್ಮಿಸಂಗೆ ಧಾರ್ಮಿಕ ನಂಬಿಕೆಯ ಅಪ್ರೂವಲ್ ಸಹ ಒದಗಿಸಿ ಅದನ್ನು ಮತ್ತಷ್ಟು ಬಲಗೊಳಿಸಿತು.

ವೀರ್ಯದ ಕಣಗಳಲ್ಲಿ ಕಿರು ಮಾನವರು ಇರುವುದು ನಿಜವಾದರೆ, ಅವರು ನಮ್ಮ ಕಣ್ಣಿಗೆ ಕಾಣಬಹುದೇ? ಹದಿನೇಳನೆಯ ಶತಮಾನದ ಅಂತ್ಯದ ವೇಳೆಗೆ ಈ ಪ್ರಶ್ನೆಗೆ ಉತ್ತರವೂ ಸಿಕ್ಕಿತು. ಮೈಕ್ರೋಸ್ಕೋಪಿನ ಪಿತಾಮಹ ಎಂದೇ ಹೆಸರಾದ ಡಚ್ ವಿಜ್ಞಾನಿ ಆಂಟೋನಿ ವಾನ್ ಲೀವೆನ್‌ಹೋಕ್ ಕಿರು-ಮಾನವ ವಾದಕ್ಕೆ ಸಮರ್ಥನೆ ನೀಡದಿದ್ದರೂ, ಮನುಷ್ಯರ ಮತ್ತು ನಾಯಿಗಳ ವೀರ್ಯದಲ್ಲಿ ಬರಿಗಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು (animalcules) ಈಜಾಡುವುದನ್ನು ತೋರಿಸಿದ. ಅವನೊಂದಿಗೇ ಕೆಲಸ ಮಾಡಿದ ನಿಕೊಲಸ್ ಹಾರ್ಟ್‌ಸೂಕರ್ ಇನ್ನಷ್ಟು ಮುಂದುವರೆದು ೧೬೯೪ರಲ್ಲಿ ಪ್ರಕಟವಾದ ತನ್ನ “ಎಸ್ಸೇ ಆನ್ ಆಪ್ಟಿಕ್ಸ್” ಕೃತಿಯಲ್ಲಿ ವೀರ್ಯದ ಕಣಗಳಲ್ಲಿ ಕಾಣಬಹುದಾದ ಕಿರು-ಮಾನವನ ಚಿತ್ರವನ್ನೇ ಒದಗಿಸಿದ.

ಹೆಚ್ಚೂ ಕಡಿಮೆ ಅದೇ ಸಮಯದಲ್ಲಿದ್ದ ಇನ್ನೊಬ್ಬ ಡಚ್ ವಿಜ್ಞಾನಿ ಯಾನ್ ಸ್ವಾಮರ್‌ಡಮ್ ನ ಮೈಕ್ರೋಸ್ಕೋಪಿಗೆ ವೀರ್ಯಾಣುಗಳಲ್ಲಿ ಕಿರು-ಮಾನವರು ಕಾಣದಿದ್ದರೂ, ಕಂಬಳಿ ಹುಳ, ಕಪ್ಪೆಯ ಮೊಟ್ಟೆ ಇತ್ಯಾದಿಗಳನ್ನು ಮೈಕ್ರೋಸ್ಕೋಪಿನ ಮೂಲಕ ನೋಡಿ ಅವನೊಂದು ತೀರ್ಮಾನಕ್ಕೆ ಬಂದ: ಕಿರು-ಮಾನವನಿರುವುದು ವೀರ್ಯಾಣುವಿನಲ್ಲಲ್ಲ, ಬದಲಿಗೆ ಅಂಡಾಣುವಿನಲ್ಲಿ! ಅವನ ವಾದವನ್ನು ಓವಿಸಂ ಎನ್ನುತ್ತಾರೆ.

ಒಟ್ಟಿನಲ್ಲಿ, ಆ ಕಾಲದ ಪಂಡಿತರು, ವಿಜ್ಞಾನಿಗಳು ಒಂದು ತೀರ್ಮಾನಕ್ಕೆ ಬಂದಿದ್ದರು: ಪ್ರಾಣಿ, ಪಕ್ಷಿ, ಸಸ್ಯಗಳು ಆದಿಯಿಂದಲೇ ತಮ್ಮ ರೂಪ ಹೊಂದಿರುತ್ತವೆ; ಬೆಳೆದು ದೊಡ್ಡದಾಗುವುದಷ್ಟೆ ಉಳಿದದ್ದು. ಅವರ ಪ್ರಕಾರ ಇದೇ ಕೋತಿಯಿಂದ ಕೋತಿಯೇ ಹುಟ್ಟುವ ಒಳಗುಟ್ಟು.

*****

ಇಸವಿ ೧೮೩೧. ಇಂಗ್ಲೆಂಡ್. ರಾಬರ್ಟ್ ಫಿಟ್ಜೆರಾಲ್ಡ್ ಗೆ ಆತಂಕವೊಂದು ಕಾಡುತ್ತಿತ್ತು. ದಕ್ಷಿಣ ಅಮೆರಿಕದ ತೀರ ಪ್ರದೇಶಗಳ ಅಧ್ಯಯನಕ್ಕಾಗಿ ಬ್ರಿಟನ್ನಿನಿಂದ ಕಳುಹಿಸುತ್ತಿದ್ದ ಹಡಗೊಂದರ ಕ್ಯಾಪ್ಟನ್ ಆಗಿ ಅವನನ್ನು ಆಗಷ್ಟೇ ನೇಮಿಸಲಾಗಿತ್ತು. ಇಂತಹ ಪರ್ಯಟನೆಗಳಿಗೆ ಹೊರಟವರು ತಮ್ಮ ಮನೆ-ಮಠ ಬಿಟ್ಟು ಹಲವು ವರ್ಷಗಳ ಕಾಲ ಅತ್ಯಂತ ಸಾಹಸದಿಂದ ವಿಶಾಲ ಸಾಗರಗಳನ್ನು ದಾಟಿ ವಿಶ್ವದ ಮೂಲೆ-ಮೂಲೆಗಳನ್ನು ತಲುಪಬೇಕಿತ್ತು; ಹೆಂಡತಿ, ಮಕ್ಕಳು, ಕುಟುಂಬದವರಿಂದ ದೂರಾಗಿ ಅಪಾರ ಒಂಟಿತನ ಅನುಭವಿಸಬೇಕಿತ್ತು. ಅದರಲ್ಲೂ, ಅಂತಹ ಹಡಗುಗಳಲ್ಲಿ ಅಧಿಕಾರ ವರ್ಗದಲ್ಲಿದ್ದವರಿಗಂತೂ ಈ ಒಂಟಿತನ ಇನ್ನೂ ಹೆಚ್ಚು ಕಾಡುತ್ತಿತ್ತು; ಒಂಟಿತನದ ಬೇಸರ ಕೆಳ ವರ್ಗದ ನಾವಿಕರನ್ನು ಒಟ್ಟುಗೂಡಿಸಿ ಜಾಲಿ ಮಾಡುವ ಪೋಲಿ ಸ್ನೇಹಿತರನ್ನಾಗಿಸುತ್ತಿದ್ದರೆ, ಶಿಸ್ತಿನ ಕಾರಣದಿಂದಾಗಿ ಅಧಿಕಾರ ವರ್ಗದವರು ಅಂತರವನ್ನು ಕಾಪಾಡಿಕೊಳ್ಳಬೇಕಿತ್ತು. ಜೊತೆಗೆ, ಕೆಳ ವರ್ಗದ ನಾವಿಕರು ಅನಕ್ಷರಸ್ತ ಬಡ ಕುಟುಂಬಗಳಿಂದ ಬಂದಿದ್ದರೆ, ಅಧಿಕಾರ ವರ್ಗದವರು ಶ್ರೀಮಂತ ವಿದ್ಯಾವಂತ ಗಣ್ಯ ಕುಟುಂಬಗಳಿಂದ ಬಂದವರಾಗಿದ್ದು ಕೆಳವರ್ಗದವರೊಂದಿಗೆ ಒಂದಾಗಲು ಅವರ ಹಿನ್ನೆಲೆಯೂ ಅಡ್ಡವಾಗುತ್ತಿತ್ತು. ಏಕಾಂಗಿತನದೊಂದಿಗೇ ಹಡಗಿನ ಸಕಲ ಜವಾಬ್ದಾರಿ ಹೊತ್ತಿರುತ್ತಿದ್ದ ಕ್ಯಾಪ್ಟನ್ ಆದವನ ಸ್ಥಿತಿಯಂತೂ ಎಂತಹ ಸ್ಥಿತಪ್ರಜ್ಞನನ್ನೂ ಮನೋವ್ಯಾಧಿಗೆ ತಳ್ಳುವಂತಿರುತ್ತಿತ್ತು. ಇದು ಹಲವರನ್ನು ಆತ್ಮಹತ್ಯೆಗೂ ದೂಡಿತ್ತು. ಹೀಗೆ ಆತ್ಮಹತ್ಯೆ ಮಾಡಿಕೊಂಡ ಕ್ಯಾಪ್ಟನ್ ಗಳಲ್ಲಿ ಪ್ರಿಂಗಲ್ ಸ್ಟೋಕ್ಸ್ ಎಂಬುವವನೂ ಸಹ ಒಬ್ಬ. ಅವನ ಸಾವಿನಿಂದಾಗಿಯೇ ಈಗ ರಾಬರ್ಟ್ ಫಿಟ್ಜೆರಾಲ್ಡ್ ಅದೇ ಹಡಗಿನ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದ.

ತನ್ನ ಹಿಂದಿನ ಕ್ಯಾಪ್ಟನ್ಆತ್ಮಹತ್ಯೆಯನ್ನು ಕಣ್ಣಾರೆ ಕಂಡಿದ್ದ ರಾಬರ್ಟ್ ಫಿಟ್ಜೆರಾಲ್ಡ್, ತನ್ನ ಏಕಾಂಗಿತನವನ್ನು ಕಡಿಮೆ ಮಾಡಿಕೊಳ್ಳಲು ಒಂದು ಆಲೋಚನೆ ಮಾಡಿದ: ಹಡಗಿನಲ್ಲಿ ಒಬ್ಬ ವಿದ್ಯಾವಂತ ತರುಣನನ್ನು ತನ್ನೊಂದಿಗೆ ಕರೆದೊಯ್ಯುವುದು. ನಾವೆಯಲ್ಲಿ ಇನ್ನಾವ ಜವಾಬ್ದಾರಿಯೂ ಇಲ್ಲದ ಆ ವ್ಯಕ್ತಿಯ ಮುಖ್ಯ ಕೆಲಸ ಕ್ಯಾಪ್ಟನ್ ಗೆ ಸಂಗಾತಿಯಾಗಿ ಇರುವುದು.

ಆಗಷ್ಟೇ ಕೇಂಬ್ರಿಜ್ ಯೂನಿವರ್ಸಿಟಿಯಿಂದ ಪದವೀಧರನಾಗಿದ್ದ ಇಪ್ಪತ್ತೆರಡು ವರ್ಷದ ಚಾರ್ಲ್ಸ್ ಡಾರ್ವಿನ್ ಎಚ್.ಎಂ.ಎಸ್. ಬೀಗಲ್ ಎಂಬ ಹಡಗನ್ನು ಏರಿದ್ದು ಹೀಗೆ.

ಹಡಗಿನಲ್ಲಿ ಅವನ ಐದು ವರ್ಷಗಳ ಯಾತ್ರೆ ಪ್ರಕೃತಿಯ ವೈವಿಧ್ಯತೆಯ ಬಗೆಗೆ ಅವನ ಕಣ್ಣು ತೆರೆಸಿ, ಕೊನೆಗೆ ಅವನಿಂದ “On the Origin of Species” ಬರೆಸಿ ಜೀವ ವಿಜ್ಞಾನಕ್ಕೆ ಹೊಸದೊಂದು ಬುನಾದಿಯನ್ನೇ ಹಾಕಿತು. ಡಾರ್ವಿನ್ ತನ್ನ ಪುಸ್ತಕಗಳ ಮೂಲಕ, “ಮನುಷ್ಯರಿಗೆ ಮನುಷ್ಯರೇ ಏಕೆ ಹುಟ್ಟುತ್ತಾರೆ?” ಎಂಬ ಪ್ರಶ್ನೆಯನ್ನು ಮತ್ತಷ್ಟು ವಿಸ್ತಾರಗೊಳಿಸಿ, “ತನ್ನತನವನ್ನೇ ಸೃಷ್ಟಿಸುವ ಈ ಪ್ರಕೃತಿಯಲ್ಲಿ ಇಷ್ಟೊಂದು ವೈವಿಧ್ಯತೆ ಬಂದಿದ್ದಾರೂ ಹೇಗೆ?”, “ಅನುವಂಶಿಕತೆಯ ಹಿಂದಿನ ಮೆಕ್ಯಾನಿಸಂ ಯಾವುದು?” ಎಂಬಂತಹ ಪ್ರಶ್ನೆಗಳಿಗೂ ಉತ್ತರ ನೀಡಲು ಪ್ರಯತ್ನಿಸಿದ.

(ಡಾರ್ವಿನ್‌)

ಮೇಲಿನ ಎರಡನೆಯ ಪ್ರಶ್ನೆಗೆ ಡಾರ್ವಿನ್‌ನ ಉತ್ತರ ಹೀಗಿತ್ತು: ದೇಹದ ಪ್ರತಿ ಭಾಗವೂ “ಜೆಮ್ಯೂಲ್ಸ್” ಎಂಬ ಸೂಕ್ಷ್ಮ ಕಣಗಳನ್ನು ಸೃಷ್ಟಿಸುತ್ತವೆ. ಈ ಜೆಮ್ಯೂಲ್‌ಗಳಲ್ಲಿ ದೇಹದ ಆ ಭಾಗದ ವಿವರವಾದ ಮಾಹಿತಿ ಇರುತ್ತದೆ. ಇವು ರಕ್ತ ನಾಳಗಳ ಮೂಲಕ ಇಡೀ ದೇಹದಲ್ಲಿ ಸಂಚರಿಸಿ ಜನನಾಂಗವನ್ನು ಸೇರುತ್ತವೆ. ಹೀಗಾಗಿ ಪುರುಷ ಮತ್ತು ಸ್ತ್ರೀ ಜೆಮ್ಯೂಲ್‌ಗಳು ಸೇರಿದಾಗ ಸೃಷ್ಟಿಯಾಗುವ ಶಿಶುವಿನಲ್ಲಿ ತಂದೆ-ತಾಯಿ ಇಬ್ಬರ ದೈಹಿಕ ಗುಣಗಳ ಸಂಮಿಶ್ರಣವಾಗಿ ಅನುವಂಶಿಕತೆ ಮುಂದುವರೆಯುತ್ತದೆ.

ಡಾರ್ವಿನ್ ತನ್ನ ಈ ವಾದಕ್ಕೆ “ಪ್ಯಾನ್‌ಜೆನೆಸಿಸ್” (pangenesis: pan = all; genesis = prodcution) ಎಂಬ ಹೆಸರು ನೀಡಿದ.

ಅವನ ಈ ಪ್ಯಾನ್‌ಜೆನೆಸಿಸ್ ವಾದ ಮೇಲ್ನೋಟಕ್ಕೆ ಸರಿ ಎನ್ನಿಸಿದರೂ, ಜೆಮ್ಯೂಲ್‌ಗಳು ನಿಜವಾಗಿಯೂ ಇವೆ ಎನ್ನಲು ಅವನ ಬಳಿ ಯಾವುದೇ ಸಾಕ್ಷ್ಯವಿರಲಿಲ್ಲ. ಈಗಿನ ಹೈ ಸ್ಕೂಲ್ ವಿದ್ಯಾರ್ಥಿಗಳಿಗೂ ತಿಳಿದಿರುವಂತೆ, ಅನುವಂಶಿಕತೆಯ ಮಾಹಿತಿ ದೇಹದ ಪ್ರತಿ ಭಾಗದಲ್ಲೂ ಸೃಷ್ಟಿಯಾಗಿ ಇಡೀ ದೇಹದಲ್ಲಿ ಹರಿದು ಜನನಾಂಗವನ್ನು ಸೇರುವ ಅವನ ವಾದದಲ್ಲಿ ಹುರುಳೇ ಇರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಹೆಣ್ಣು-ಗಂಡು ಕೂಡಿದಾಗ ಅವರ ಜೆಮ್ಯೂಲ್‌ಗಳು ತಮ್ಮ ಅಸ್ಮಿತೆ ಕಳೆದುಕೊಂಡು ಅವೆರಡರ ಮಿಶ್ರಣವಿರುವ ಹೊಸ ಜೆಮ್ಯೂಲ್‌ಗಳ ಸೃಷ್ಟಿಯಾಗುತ್ತವೆ ಎಂಬ ಅವನ ವಾದ ತಪ್ಪಾಗಿತ್ತು; ವಂಶವಾಹಿ ಕಣಗಳು ಅವನೆಂದುಕೊಂಡಂತೆ ಕೆಂಪು ಬಣ್ಣದ ಪೇಂಟಿಗೆ ಬಿಳಿ ಬಣ್ಣದ ಪೇಂಟ್ ಸೇರಿದರೆ ತೆಳುಗೆಂಪು-ಗುಲಾಬಿ ಬಣ್ಣ ಸೃಷ್ಟಿಯಾಗುವಂತೆ ಬೆರೆಯುವುದಿಲ್ಲ.

ಡಾರ್ವಿನ್ ಮಹಾಚಿಂತಕ ಮತ್ತು ಪಂಡಿತ. ಸುಧೀರ್ಘ ಆಲೋಚನೆ ಮಾಡಿ, ಎಲ್ಲವನ್ನೂ ಅಳೆದೂ-ಸುರಿದೂ, ಇತರ ಪಂಡಿತರ ಪುಸ್ತಕಗಳನ್ನು ಅಧ್ಯಯನ ಮಾಡಿದ ನಂತರವೇ ತನ್ನ ವಾದಗಳನ್ನು ಮಂಡಿಸಿದವನು. ಹೀಗಾಗಿಯೇ, ಅವನ “On the Origin of Species” ಪ್ರಕಟವಾಗಲು ೨೩ ವರ್ಷ ಬೇಕಾಯಿತು; ಅವನಿಗೇ ಬಿಟ್ಟಿದ್ದರೆ ಇನ್ನೂ ತಡಮಾಡುತ್ತಿದ್ದನೇನೋ ಆದರೆ ೧೮೫೮ರಲ್ಲಿ ಆಲ್ಫ್ರೆಡ್ ರಸೆಲ್ ವ್ಯಾಲೇಸ್ ಎಂಬ ಇನ್ನೋರ್ವ ವಿಜ್ಞಾನಿ ಅಂತಹುದೇ ವಾದ ಮಂಡಿಸಲು ಸಜ್ಜಾಗಿರುವುದು ತಿಳಿದಿದ್ದರಿಂದ ಡಾರ್ವಿನ್ ತನ್ನ ಪುಸ್ತಕವನ್ನು ಆತುರದಲ್ಲಿ ಪ್ರಕಟಿಸಬೇಕಾಯಿತು. ಅವನ ಪ್ಯಾನ್‌ಜೆನೆಸಿಸ್ ವಾದದ ಪೂರ್ಣ ಮಂಡನೆಯಾಗಲು ಇನ್ನೂ ಎರಡು ದಶಕಗಳೇ ಬೇಕಾಯಿತು. ಈ ಸಮಯದಲ್ಲಿ ಅವನು ಮತ್ತಷ್ಟು ಆಲೋಚನೆ-ಅಧ್ಯಯನ ನಡೆಸಿದ. ಆಗ ಅವನು ಓದಿದ ಪುಸ್ತಕಗಳಲ್ಲಿ ೧೮೬೯ರಲ್ಲಿ ಜರ್ಮನ್ ವಿಜ್ಞಾನಿ ಹರ್ಮನ್ ಹಾಫ್‌ಮನ್ ಪ್ರಕಟಿಸಿದ್ದ ಪುಸ್ತಕವೂ ಒಂದು.

ಡಾರ್ವಿನ್, ಹರ್ಮನ್ ಹಾಫ್‌ಮನ್‌ನ ಪುಸ್ತಕ ನಿಜಕ್ಕೂ ಓದಿದ್ದನೆಂಬುದಕ್ಕೆ ಆಧಾರವಾದರೂ ಏನು? ಆ ಪುಸ್ತಕದ ಪುಟಗಳ ಮಾರ್ಜಿನ್ನಿನಲ್ಲಿ ಅವನು ಬರೆದಿದ್ದ ಟಿಪ್ಪಣಿಗಳು. ಅದರಲ್ಲೂ ಆ ಪುಸ್ತಕದ ೫೦, ೫೧, ೫೩ ಮತ್ತು ೫೪ನೆಯ ಪುಟಗಳಲ್ಲಿ ಅವನು ಬರೆದಿರುವ ಟಿಪ್ಪಣಿಗಳು ಇಂದು ಕುತೂಹಲವೆನಿಸಿವೆ – ೫೨ನೆಯ ಪುಟದಲ್ಲಿ ಯಾವುದೇ ಟಿಪ್ಪಣಿ ಇಲ್ಲದೇ ಇರುವುದರಿಂದ! ಅವನು ೫೨ ನೆಯ ಪುಟವನ್ನು ಓದಿದನೋ ಇಲ್ಲವೋ ಇಂದು ನಮಗೆ ತಿಳಿದಿಲ್ಲ. ಹಾಗೇನಾದರೂ ಓದಿದ್ದಿದ್ದರೆ, ಅವನಿಗೆ ಪ್ಯಾನ್‌ಜೆನೆಸಿಸ್/ಜೆಮ್ಯೂಲ್‌ ವಾದಕ್ಕೆ ಆಧಾರವಿಲ್ಲದಿರುವದನ್ನು ದೂರದ ಚೆಕ್ ದೇಶದ ಕ್ರೈಸ್ತ ಸನ್ಯಾಸಿಯೊಬ್ಬ ತನ್ನ ಪ್ರಯೋಗಗಳ ಮೂಲಕ ತೋರಿಸಿರುವುದರ ಅರಿವಾಗಿರುತ್ತಿತ್ತು.

ಒಟ್ಟಿನಲ್ಲಿ ಡಾರ್ವಿನ್‌ನ ಪ್ಯಾನ್‌ಜೆನೆಸಿಸ್ ವಾದ ತಪ್ಪಿದ್ದರೂ, ತಾಯಿ-ತಂದೆ ಈರ್ವರಿಂದಲೂ ಪಡೆದುಕೊಂಡ “ಮಾಹಿತಿ”, ಭೌತಿಕ ಕಣಗಳ ಮೂಲಕ ಸಂವಹಿಸಿ, ಶಿಶುವಿನ ಅನುವಂಶಿಕತೆಯನ್ನು ನಿರ್ಧರಿಸುತ್ತವೆ ಎನ್ನುವ ಹೊಳಹು ಜೀವ ವಿಜ್ಞಾನಕ್ಕೆ ಹೊಸದೊಂದು ದಾರಿಯನ್ನು ತೋರಿತು; ವಿಜ್ಞಾನಿಗಳು ಅಂತಹ ಕಣಗಳನ್ನು ಹುಡುಕಲು ಆರಂಭಿಸಿದರು.

*****

೧೮೩೦ರ ದಶಕದ ಆದಿಯಲ್ಲಿ ಇಂಗ್ಲೆಂಡಿನಲ್ಲಿ ಡಾರ್ವಿನ್ ಎಚ್.ಎಮ್.ಎಸ್. ಬೀಗಲ್ ಹತ್ತುವ ಆಲೋಚನೆಯಲ್ಲಿದ್ದರೆ, ದೂರದ (ಇಂದಿನ) ಚೆಕ್ ರಿಪಬ್ಲಿಕ್‌ನ ಹೈನ್‌ಟ್ಸೆನ್‌ಡಾರ್ಫ್ ಎಂಬ ಹಳ್ಳಿಯೊಂದರ ಬಡ ರೈತಾಪಿ ಕುಟುಂಬವೊಂದರಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ತನ್ನ ಕುಟುಂಬಕ್ಕೆ ಸೇರಿದ ಹಣ್ಣಿನ ಮರಗಳ ಆರೈಕೆಯಲ್ಲಿ ಮಗ್ನನಾಗಿದ್ದ. ಅವನ ಅಪ್ಪ-ಅಮ್ಮನಿಗೆ ತಮ್ಮ ಮಗ ಒಳ್ಳೆಯ ವಿದ್ಯಾವಂತನಾಗಬೇಕೆಂಬ ಇರಾದೆ ಇದ್ದರೂ, ಅದಕ್ಕೆ ಬೇಕಿದ್ದ ಸಿರಿತನ ಅವರಲ್ಲಿರಲಿಲ್ಲ. ಅವನು ಬೆಳೆದು ತರುಣನಾದಂತೆ, ಅವರ ಆಶಯ-ವಾಸ್ತವಗಳ ಅಂತರ ಮತ್ತಷ್ಟು ಸ್ಪಷ್ಟವಾಗತೊಡಗಿ ಕೊನೆಗೊಂದು ಆಲೋಚನೆ ಮಾಡಿದರು: ಅವನನ್ನು ಹತ್ತಿರದ ಕ್ರೈಸ್ತ ಆಶ್ರಮಕ್ಕೆ ಸೇರಿಸುವುದು.

ಗ್ರೆಗರ್ ಮೆಂಡೆಲ್ ೧೮೪೩ರಲ್ಲಿ ಬ್ರನೋ ಪಟ್ಟಣದ ಸೇಂಟ್ ಥಾಮಸ್ ಅಬ್ಬೆ ಎಂಬ ಕ್ರೈಸ್ತ ಆಶ್ರಮಕ್ಕೆ ಸೇರಿ ಸನ್ಯಾಸಿಯಾಗಿ ಕೊನೆಗೆ ಇಂದಿನ “ಫಾದರ್ ಆಫ್ ಜೆನೆಟಿಕ್ಸ್” ಆಗಿದ್ದು ಹೀಗೆ.

ಕ್ರಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದ ಸೇಂಟ್ ಥಾಮಸ್ ಅಬ್ಬೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೆಂಡೆಲ್‌ನನ್ನು ಯೂನಿವರ್ಸಿಟಿ ಆಫ್ ವಿಯೆನ್ನಾಗೆ ಕಳುಹಿಸಿತು. ಅಲ್ಲಿ ಅವನು ಗಣಿತ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನು ಅಭ್ಯಾಸ ಮಾಡಿ ಪದವೀಧರನಾಗಿ ಆಶ್ರಮಕ್ಕೆ ವಾಪಸು ಬಂದು, ಆ ಆಶ್ರಮವೇ ನಡೆಸುತ್ತಿದ್ದ ಹೈ ಸ್ಕೂಲಿನಲ್ಲಿ ವಿಜ್ಞಾನದ ಶಿಕ್ಷಕನಾಗಿ ಸೇರಿಕೊಂಡ. ಆದರೆ, ಪೂರ್ಣ ಪ್ರಮಾಣದ ಶಿಕ್ಷಕನಾಗಲು, ಟೀಚರ್ಸ್ ಎಕ್ಸಾಮ್ ಪಾಸ್ ಆಗಬೇಕಿತ್ತು. ಎರಡು ಬಾರಿ ಆ ಪರೀಕ್ಷೆ ತೆಗೆದುಕೊಂಡರೂ ಅದನ್ನು ಪಾಸ್ ಆಗಲು ಅವನಿಗೆ ಸಾಧ್ಯವಾಗಲಿಲ್ಲ.

ಆ ಕಾಲದಲ್ಲಿ ಸೇಂಟ್ ಥಾಮಸ್ ಅಬ್ಬೆಯ ಸನ್ಯಾಸಿಗಳು ಹೈ ಸ್ಕೂಲ್ ನಡೆಸುವುದರ ಜೊತೆಗೇ ತೋಟಗಾರಿಕೆ-ವ್ಯವಸಾಯಗಳಲ್ಲೂ ತೊಡಗಿದ್ದರು. ಅವರು ತಮ್ಮ ತೋಟದಲ್ಲಿ ಹೆಚ್ಚು ಇಳುವರಿ ನೀಡುವ ಹಣ್ಣು-ತರಕಾರಿ ಬೆಳೆಯಲು ವಿವಿಧ ಪ್ರಯೋಗಗಳನ್ನೂ ಮಾಡುತ್ತಿದ್ದರು. ಆಗ ಆ ಆಶ್ರಮದ ಮುಖ್ಯಸ್ತರಾಗಿದ್ದ ಸಿರಿಲ್ ನ್ಯಾಪ್ ಅವರನ್ನು ಪ್ರಶ್ನೆಯೊಂದು ಕಾಡುತ್ತಿತ್ತು: “ಸಂತತಿಯಿಂದ ಸಂತತಿಗೆ ವಂಶ ಪಾರಾಂಪರ್ಯವಾಗಿ ಯಾವ ಗುಣಗಳು ಮುಂದುವರೆಯುತ್ತವೆ ಮತ್ತು ಹೇಗೆ?”

(ಗ್ರೆಗರ್ ಮೆಂಡೆಲ್)

ಟೀಚರ್ಸ್ ಎಕ್ಸಾಮ್ ಸವಾಲನ್ನು ಎದುರಿಸಲು ವಿಫಲನಾಗಿದ್ದ ಮೆಂಡೆಲ್ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಿರ್ಧರಿಸಿದ. ಡಾರ್ವಿನ್ ಐದು ವರ್ಷಗಳ ತನ್ನ ವಿಶ್ವಪರ್ಯಟನೆಯ ನಂತರ ಆಳವಾದ ಚಿಂತನೆಯ ಮೂಲಕ ಜೈವಿಕ ವೈವಿಧ್ಯತೆಯ ಹಿಂದಿನ ಮರ್ಮ ಅರಿತುಕೊಂಡರೆ, ಮೆಂಡೆಲ್ ತನ್ನ ಹಿತ್ತಿಲಲ್ಲಿ ಪ್ರಯೋಗಗಳ ಮೂಲಕ ಅನುವಂಶಿಕತೆಯ ಗುಟ್ಟನ್ನು ಹೊರಗೆಡುವ ಪ್ರಯತ್ನದಲ್ಲಿ ತೊಡಗಿಕೊಂಡ.

ತನ್ನ ಪ್ರಯೋಗಗಳಿಗೆ ಮೆಂಡೆಲ್‌ಗೆ ಸೂಕ್ತವಾದ ಜೀವಿಯೊಂದು ಬೇಕಿತ್ತು. ಪ್ರಯೋಗಗಳು ಮುಂದುವರೆದಂತೆ ಅನುವಂಶಿಕತೆಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ ಆ ಬದಲಾವಣೆಗಳ ಲೆಕ್ಕವಿಡಲು ಅದು ಸರಳವೂ-ಕಣ್ಣಿಗೆ ಸುಸ್ಪಷ್ಟವೂ ಆಗಬೇಕಿತ್ತು: ಬಟಾಣಿ ಗಿಡ! ಬಟಾಣಿ ಎರಡು ಜಾತಿಗಳಲ್ಲಿ ಲಭ್ಯ; ಒಂದರ ಕಾಳು ಹಸಿರಾದರೆ, ಇನ್ನೊಂದರ ಬಣ್ಣ ಹಳದಿ; ಒಂದರ ಕಾಳಿನ ಮೈ ನುಣುಪಾದರೆ, ಇನ್ನೊಂದರದು ಸುಕ್ಕು; ಒಂದು ಜಾತಿಯ ಗಿಡ ಎತ್ತರಕ್ಕೆ ಬೆಳೆದರೆ ಇನ್ನೊಂದು ಕುಬ್ಜ.

೧೮೫೬ರಿಂದ ೧೮೬೩ರವರೆಗೆ ೨೮,೦೦೦ ಬಟಾಣಿ ಗಿಡಗಳನ್ನು ಪರಾಗ ಸ್ಪರ್ಶದಿಂದ ಹೊಸ ತಳಿ ಮಾಡಿ ಬೆಳಸಿ ಅವುಗಳಲ್ಲಿ ಆದ ಅನುವಂಶಿಕತೆಯ ಬದಲಾವಣೆಗಳನ್ನು ಅತ್ಯಂತ ಕರಾರುವಕ್ಕಾಗಿ ದಾಖಲಿಸಿ ಅಧ್ಯಯನ ಮಾಡಿದ ಅವನು, ೧೮೬೬ರಲ್ಲಿ “Experiments on Plant Hybridization” ಎಂಬ ತನ್ನ ಅಧ್ಯಯನವನ್ನು ಪ್ರಕಟಿಸಿದ.

ಮೆಂಡೆಲ್ ತನ್ನ ಅಧ್ಯಯನದಲ್ಲಿ ಆಧಾರ ಸಮೇತವಾಗಿ ತೋರುವಂತೆ ಅನುವಂಶಿಕತೆಯ ಗುಣಗಳು ಪ್ರತ್ಯೇಕ ಕಣಗಳ (discrete particles) ಮೂಲಕ ಸಂವಹಿಸುತ್ತವೆಯೇ ಹೊರತು ಆ ಕಣಗಳು ಮಿಶ್ರವಾಗುವುದಿಲ್ಲ. ಹಸಿರು ಮತ್ತು ಹಳದಿ ಬಟಾಣಿಗಳ ಸಂಕರವಾದಾಗ ಅದರಿಂದ ಜನಿಸುವ ಬಟಾಣಿ ಗಿಡದಲ್ಲಿ ಹಸಿರು ಅಥವಾ ಹಳದಿ ಬಟಾಣಿಗಳು ಬಿಡುತ್ತವೆಯೇ ಹೊರತು ಹಸಿರು-ಮಿಶ್ರಿತ-ಹಳದಿ ಬಣ್ಣದ ಬಟಾಣಿಗಳಲ್ಲ. ಅವನು ಈ ವಂಶವಾಹಿ ಕಣಗಳನ್ನು “ಅಂಶಗಳು” (factors) ಎಂದು ಕರೆದ.

ಆದರೆ, ಜೆನೆಟಿಕ್ಸ್ ರಂಗಕ್ಕೆ ಮೆಂಡೆಲ್ ಕಟ್ಟಿಕೊಟ್ಟ ಅಡಿಪಾಯದ ಮೇಲೆ ಏನೂ ನಿರ್ಮಾಣವಾಗಲಿಲ್ಲ. ಯೂರೋಪಿನ ಸಣ್ಣ ಊರೊಂದರಲ್ಲಿ ಟೀಚರ್ಸ್ ಎಕ್ಸಾಮಿನಲ್ಲಿ ಫೇಲ್ ಆಗಿದ್ದ ಸನ್ಯಾಸಿಯೊಬ್ಬನ ಅಧ್ಯಯನವನ್ನು ಬಹು ಮಟ್ಟಿಗೆ ಯಾರೂ ಓದಲಿಲ್ಲ. ಅಷ್ಟಕ್ಕೂ ಅವನ ಅಧ್ಯಯನ ಪ್ರಕಟವಾಗಿದ್ದೇ ಬ್ರನೋ ಪಟ್ಟಣದ ಸಣ್ಣದೊಂದು ಸಂಸ್ಥೆಯ ನಿಯತಕಾಲಿಕದಲ್ಲಿ.

೧೮೮೪ರಲ್ಲಿ ಮೆಂಡೆಲ್ ಸಾವನ್ನಪ್ಪುವ ವೇಳೆಗೆ, ಅವನೂ ಸಹ ತನ್ನ ಅನುವಂಶಿಕತೆಯ ಅಧ್ಯಯನದಿಂದ ದೂರವಾಗಿದ್ದ. ತನ್ನ ಆಶ್ರಮದ ಮುಖ್ಯಸ್ತನಾಗಿದ್ದ ಅವನಿಗೆ ವಿಜ್ಞಾನದ ಪ್ರಯೋಗಗಳಲ್ಲಿ ತೊಡಗಿಕೊಳ್ಳಲು ಸಮಯವೇ ಇರಲಿಲ್ಲ. ಹತ್ತೊಂಬತ್ತನೆಯ ಅಂತ್ಯದ ವೇಳೆಗೆ, ಮೆಂಡೆಲ್ ಮತ್ತು ಅವನ — ನಮಗೆ ನಮ್ಮತನ ನೀಡುತ್ತಲೇ ತಮ್ಮತನವನ್ನು ಕಾಪಾಡಿಕೊಳ್ಳುವ ಅಂಶಗಳ” ಥಿಯರಿಯನ್ನು ಎಲ್ಲರೂ ಮರೆತಿದ್ದರು.

*****

೧೮೭೮ರ ಬೇಸಿಗೆಯಲ್ಲಿ ಡಾರ್ವಿನ್‌ನನ್ನು ಭೇಟಿಯಾಗಲು ಡಚ್ ತರುಣನೊಬ್ಬ ಇಂಗ್ಲೆಂಡಿಗೆ ಬಂದ. ಡಾರ್ವಿನ್‌ನ ಕಟ್ಟಾ ಅಭಿಮಾನಿಯಾಗಿದ್ದ ಅವನ ಹೆಸರು ಹ್ಯೂಗೋ ಡೆಹ್ ವ್ರೀಜ಼್. ಸಸ್ಯ ಶಾಸ್ತ್ರಜ್ಞನಾದ ಡೆಹ್ ವ್ರೀಜ಼್‌ನಿಗೆ ಆ ಯಾತ್ರೆ, ಬಹು ಮಟ್ಟಿಗೆ ತನ್ನ ಹೀರೋ ಡಾರ್ವಿನ್‌ನನ್ನು ಕಣ್ಣಾರೆ ನೋಡುವ ತೀರ್ಥಯಾತ್ರೆಯಾಗಿತ್ತೇ ವಿನಃ ವೈಜ್ಞಾನಿಕ ಅನ್ವೇಷಣೆಯಾಗಿರಲಿಲ್ಲ. ಡಾರ್ವಿನ್‌ನನ್ನು ನೋಡುವ ಒಂದೇ ಉದ್ದೇಶದಿಂದ ಪರದೇಶದಿಂದ ಹಡಗು ಹತ್ತಿ ಬಂದಿದ್ದ ಅವನಿಗೆ, ಡಾರ್ವಿನ್ ಒಂದಿಗೆ ಸಿಕ್ಕ ಸಮಯ ಕೇವಲ ಎರಡು ಗಂಟೆಗೂ ಕಡಿಮೆ. ಆದರೆ, ಆ ಎರಡು ಗಂಟೆ ಅವನ ಅಧ್ಯಯನದ ದಿಕ್ಕನ್ನೇ ಬದಲಿಸಿತು. ಕೊನೆಗೆ, ಇಂದು ನಾವು ಅತಿ ಸಾಮಾನ್ಯವೆಂಬಂತೆ ಬಳಸುವ ವೈಜ್ಞಾನಿಕ ಪದವೊಂದರ ಉಗಮಕ್ಕೆ ಕಾರಣವೂ ಆಯಿತು.

(ಹ್ಯೂಗೋ ಡೆಹ್ ವ್ರೀಜ಼್)

ಡೆಹ್ ವ್ರೀ಼ಜ್ ಡಾರ್ವಿನ್‌ನನ್ನು ಭೇಟಿಯಾದ ಸಂದರ್ಭದಲ್ಲಿ ಅನುವಂಶಿಕತೆಯ ರಹಸ್ಯ ಡಾರ್ವಿನ್‌ನನ್ನು ಕಾಡುತ್ತಿತ್ತು. ಅವನು ಆ ಹೊತ್ತಿಗಾಗಲೇ ಪ್ಯಾನ್‌ಜೆನೆಸಿಸ್-ಜೆಮ್ಯೂಲ್ ವಾದವನ್ನು ಮಂಡಿಸಿದ್ದರೂ, ಆ ವಾದವನ್ನು ಬಲಪಡಿಸುವ ಯಾವುದೇ Observational ಅಥವಾ Experimental ಆಧಾರಗಳು ಅವನ ಬಳಿ ಇರಲಿಲ್ಲ. ಆ ಎರಡು ಗಂಟೆಯ ಭೇಟಿಯಲ್ಲಿ ಅವರಿಬ್ಬರೂ ಆ ವಿಷಯವನ್ನು ಚರ್ಚಿಸಿದರೋ ಇಲ್ಲವೋ ತಿಳಿಯದು, ಆದರೆ, ಆ ಭೇಟಿಯ ನಂತರ ಡೆಹ್ ವ್ರೀಜ಼್ ಸಸ್ಯ ಶಾಸ್ತ್ರವನ್ನು ಪಕ್ಕಕ್ಕಿಟ್ಟು ಅನುವಂಶಿಕತೆಯ ಅಧ್ಯಯನದಲ್ಲಿ ತೊಡಗಿದ್ದಂತೂ ನಿಜ.

ಮುಂದಿನ ಒಂದು ದಶಕದಲ್ಲಿ ಡೆಹ್ ವ್ರೀಜ಼್ ಸಾವಿರಾರು ಗಿಡಗಳ ಮೇಲೆ ಪರಾಗ ಸ್ಪರ್ಶ ಮತ್ತು ಕಸಿ ಪ್ರಯೋಗಮಾಡಿ, ಆ ಪ್ರಯೋಗಗಳ ಫಲಿತವನ್ನು ಕರಾರುವಕ್ಕಾಗಿ ದಾಖಲಿಸಿ ಡಾರ್ವಿನ್‌ನ ಪ್ಯಾನ್‌ಜೆನೆಸಿಸ್ ವಾದದ ಅಧ್ಯಯನ ನಡೆಸಿದ. ಆ ವಾದದ ಲೋಪ-ದೋಷಗಳು ಅವನಿಗೆ ಸುಸ್ಪಷ್ಟವಾದವು. ಉದಾಹರಣೆಗೆ, ಬಿಳಿ ಹೂವಿನೊಂದಿಗೆ ಕೆಂಪು ಹೂವಿನ ಪರಾಗ ಸ್ಪರ್ಶವಾದಾಗ ಉತ್ಪತ್ತಿಯಾಗುವ ಬೀಜಗಳಿಂದ ಬೆಳೆಯುವ ಗಿಡಗಳಲ್ಲಿ ಬಿಳಿಯೋ-ಕೆಂಪೋ ಹೂ ಬಿಡುತ್ತಿತ್ತೇ ಹೊರತು, ಅವು ತಿಳಿಗೆಂಪು-ಗುಲಾಬಿ ಬಣ್ಣದವದ್ದಾಗಿರಲಿಲ್ಲ. ಹಾಗೆಯೇ, ಎರಡು ಗಿಡಗಳನ್ನು ಕಸಿ ಮಾಡಿದಾಗ ಅದರ ಬೀಜಗಳು ಎರಡೂ ಗಿಡದ ಮಿಶ್ರ ಗುಣಗಳನ್ನು ಹೊಂದಿರಲಿಲ್ಲ; ಇದು “ಜೆಮ್ಯೂಲ್‌ಗಳು ಇಡೀ ಶರೀರದಲ್ಲಿ ಸಂಚರಿಸಿ ದೇಹದ ಸಮಗ್ರ ಮಾಹಿತಿಯನ್ನು ಪಡೆದು ಮುಂದಿನ ಪೀಳಿಗೆಗೆ ಮಿಶ್ರಗುಣ ನೀಡುತ್ತವೆ” ಎಂಬ ಡಾರ್ವಿನ್‌ ವಾದಕ್ಕೆ ವಿರುದ್ಧವಾಗಿದ್ದವು.

ಇವೆಲ್ಲದರ ಮಧ್ಯೆ, ಆಗಸ್ಟ್ ವೀ಼ಜ್ಮನ್ ಎಂಬ ವಿಜ್ಞಾನಿ ಡಾರ್ವಿನ್‌ನ ಜೆಮ್ಯೂಲ್ ಥಿಯರಿಯನ್ನು ಪರೀಕ್ಷಿಸಲು ಐದು ಸಂತತಿಗಳ ೯೦೧ ಇಲಿಗಳ ಬಾಲ ಕತ್ತರಿಸಿದ್ದ. ಪ್ರತಿ ಸಂತತಿಯ ತಂದೆ-ತಾಯಿಯರ ಬಾಲ ಕತ್ತರಿಸಿದರೂ, ಅವರ ಮರಿಗಳಲ್ಲಿ ಮಾತ್ರ ಬಾಲ ಇದ್ದೇ ಇತ್ತು. ಜೆಮ್ಯೂಲ್‌ ವಾದ ಸರಿಯಲ್ಲವೆನ್ನುವುದಕ್ಕೆ ಇನ್ನಷ್ಟು ಪುರಾವೆ ಸಿಕ್ಕಿತು.

ಡಾರ್ವಿನ್ ಭೇಟಿಯಾಗಿ ಎರಡು ದಶಕಗಳ ನಂತರ, ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಡೆಹ್ ವ್ರೀಜ಼್ ಒಲ್ಲದ ಮನಸ್ಸಿನಿಂದ ತನ್ನ ಗುರುವಿನ ಪ್ಯಾನ್‌ಜೆನೆಸಿಸ್ ವಾದವನ್ನು ಪಕ್ಕಕ್ಕಿಟ್ಟ; ಎಲ್ಲರೂ ಮರೆತಿದ್ದ ಮೆಂಡೆಲ್ ವಾದವನ್ನು ಅವನು ಸ್ವತಂತ್ರವಾಗಿ ಕಂಡುಕೊಂಡಿದ್ದ. ಹೆಣ್ಣು-ಗಂಡು ಬೆರೆತರೂ, ಬೇರೆಯಾಗಿಯೇ ಉಳಿವ ವಂಶವಾಹಿ ಕಣಗಳಿಗೆ ಮೆಂಡೆಲ್ “ಅಂಶ” ಎಂಬ ಹೆಸರಿಟ್ಟಿದ್ದರೆ, ಇನ್ನೂ ಡಾರ್ವಿನ್ನನ ಕಟ್ಟಾ ಅಭಿಮಾನಿಯಾಗಿಯೇ ಉಳಿದಿದ್ದ ಡೆಹ್ ವ್ರೀಜ಼್, ಡಾರ್ವಿನ್ನನ ಪ್ಯಾನ್‌ಜೆನೆಸಿಸ್ ವಾದದ ನೆನಪಿನಲ್ಲಿ “ಪ್ಯಾನ್‌ಜೀನ್” ಎಂಬ ಹೆಸರಿಟ್ಟ. ಮತ್ತು ಈ ಪ್ಯಾನ್‌ಜೀನ್‌ಗಳು ದೇಹವಿಡೀ ಸಂಚರಿಸುವುದರ ಬದಲು ಪ್ರತಿ ಜೀವಕೋಶದಲ್ಲೂ ಇರುತ್ತವೆ ವಾದವನ್ನೂ ಪ್ರತಿಪಾದಿಸಿದ.

ಕೆಲ ವರ್ಷಗಳ ನಂತರ, ಆ ಹೊತ್ತಿಗಾಗಲೇ ಹಳತಾಗಿ ಪಕ್ಕಕ್ಕಿಟ್ಟಿದ್ದಪ್ಯಾನ್‌ಜೆನೆಸಿಸ್ಥಿಯರಿಯನ್ನು ಈ “ಪ್ಯಾನ್‌ಜೀನ್” ಪದ ಮತ್ತೆ-ಮತ್ತೆ ನೆನಪಿಸಿ ಗೊಂದಲವೆಬ್ಬಿಸುತ್ತದೆಂದು ನಿರ್ಧರಿಸಿದ ಡೆನ್ಮಾರ್ಕಿನ ಸಸ್ಯಶಾಸ್ತ್ರಜ್ಞ ವಿಲ್‌ಹೆಲ್ಮ್ ಯೋಹಾನ್ಸೆನ್, ಅದನ್ನು ಕತ್ತರಿಸಿ “ಜೀನ್”ಪದವನ್ನು ಸೃಷ್ಟಿಸಿದ.

ಇಪ್ಪತ್ತನೆಯ ಶತಮಾನದ ಆದಿ ಭಾಗದ ವೇಳೆಗೆ, ವಂಶವಾಹಿ ಮಾಹಿತಿ ಕಣಗಳು ಇರುವಿಕೆಯನ್ನು ಎಲ್ಲರೂ ಒಪ್ಪಿದ್ದರು. ಅವುಗಳಿಗೆ “ಜೀನ್” ಎಂಬ ನಾಮಕರಣವೂ ಆಗಿತ್ತು. ಆದರೆ, ಅವು ಹೇಗಿರುತ್ತವೆ, ಜೀವಕೋಶಗಳಲ್ಲಿ ಎಲ್ಲಿರುತ್ತವೆ, ಹೇಗೆ ಕೆಲಸ ಮಾಡುತ್ತವೆ, ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ನಮ್ಮತನವನ್ನು ನಿರ್ಧರಿಸುವಜೀನ್‌ಗಳಿಗಾಗಿ ಹುಡುಕಾಟ ಜೀವವಿಜ್ಞಾನದ ಮುಖ್ಯ ಗುರಿಗಳಲ್ಲೊಂದಾಯಿತು.

(“ಫೋಟೋ-೫೧: ಜಗತ್ತಿನ ಅತಿ ಸುಂದರ ಫೋಟೋಗ್ರಾಫ್” ಕತೆ ಮುಂದುವರೆಯವುದು)

About The Author

ಶೇಷಾದ್ರಿ ಗಂಜೂರು

ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ