”ಈಗ ಹಿಂತಿರುಗಿ ನೋಡಿದಾಗ ನಂಗನ್ನಿಸೋದು ನಮ್ಮಪ್ಪನಿಗೆ ಸಿನೆಮಾಗಳ ಬಗ್ಗೆ ಇದ್ದ ಧೋರಣೆ ನನ್ನ ಪ್ರವೃತ್ತಿಯನ್ನ ಇನ್ನಷ್ಟು ಬಲಗೊಳಿಸಿತು. ಅದೇ ಈವತ್ತು ನಾನೇನಾಗಿದೀನೋ ಅದಕ್ಕೆ ಪ್ರೇರಣೆ ನೀಡಿತು. ಆತ ಒಬ್ಬ ಕಟ್ಟುನಿಟ್ಟಿನ ಮಿಲಿಟರಿ ಹಿನ್ನೆಲೆ ಹೊಂದಿದ್ದ ವ್ಯಕ್ತಿ. ಆದರೆ ವಿದ್ಯಾವಂತರು ಕೂಡ ಸಿನೆಮಾ ನೋಡುವುದನ್ನ ಒಪ್ಪದಿದ್ದ ಕಾಲದಲ್ಲಿ ತನ್ನ ಮನೆಮಂದಿಯನ್ನೆಲ್ಲ ನಿಯಮಿತವಾಗಿ ಸಿನೆಮಾಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಸಿನೆಮಾ ನೋಡುವುದರಲ್ಲಿ ಶೈಕ್ಷಣಿಕ ಮೌಲ್ಯವಿದೆ ಅನ್ನೋ ತನ್ನ ನಂಬಿಕೆಯನ್ನ ಆತ ಎಂದೂ ಬದಲಿಸಲಿಲ್ಲ”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮೊದಲ ಅಧ್ಯಾಯ.

 

ಅಲ್ಲಿ ಮಂದಬೆಳಕಿತ್ತು. ಅಲ್ಲಿ ನಾನಾಗ ಮೈತೊಳೆಸುವ ಟಬ್ಬಿನಲ್ಲಿ ಬೆತ್ತಲೆಯಾಗಿ ಟಬ್ಬನ್ನು ಹಿಡಿದು ತೂಗಾಡುತ್ತಾ ಬಿಸಿನೀರಲ್ಲಿ ಆಟ ಆಡುತ್ತಿದ್ದೆ. ಎರಡು ಇಳಿಜಾರು ಹಲಗೆಗಳ ಮಧ್ಯದಲ್ಲಿ ಟಬ್ಬಿತ್ತು. ಟಬ್ಬನ್ನ ಅಲುಗಾಡಿಸಿದಾಗ ನೀರು ಸಿಡಿದು ಶಬ್ದ ಬರುತ್ತಿತ್ತು. ಅದು ಸಖತ್ ಇಂಟರೆಸ್ಟಿಂಗ್ ಅನ್ನಿಸಿ ನನ್ನ ಶಕ್ತಿಯನ್ನೆಲ್ಲ ಹಾಕಿ ಟಬ್ಬನ್ನ ಅಲುಗಾಡಿಸುತ್ತಿದ್ದೆ. ಇದ್ದಕ್ಕಿದ್ದಂತೆ ಅದು ಬೋರಲಾಗಿಬಿಟ್ಟಿತು. ಆ ಕ್ಷಣದಲ್ಲಾದ ಗಾಬರಿ ಮತ್ತು ಆ ಕ್ಷಣ ಕಾಡಿದ ಅನಿಶ್ಚತತೆ ನಂಗೆ ಚೆನ್ನಾಗಿ ನೆನಪಿದೆ. ಟಬ್ ಮೊಗಚಿಕೊಂಡು ಬೆತ್ತಲೆ ದೇಹ ಒದ್ದೆಯಾಗಿ ಜಾರುತ್ತಿದ್ದ ಆ ಹಲಗೆಗಳ ನಡುವೆ ಬಿದ್ದಾಗ, ತಲೆಯ ಮೇಲೆ ಏನೋ ಬಿದ್ದು ನೋವಾದದ್ದು ನಿಚ್ಚಳವಾಗಿ ನೆನಪಿದೆ. ಪ್ರಜ್ಞೆ ಬೆಳೆದ ಮೇಲೆ ಈ ಘಟನೆ ಆಗೀಗ ನಂಗೆ ನೆನಪಾಗುತ್ತಿತ್ತು. ಅದೊಂದು ಕ್ಷುಲ್ಲಕ ಘಟನೆ ಅನ್ನಿಸಿದ್ದರಿಂದ ದೊಡ್ಡವನಾಗುವವರೆಗೂ ಆ ಘಟನೆಯ ಬಗ್ಗೆ ಮಾತಾಡಿರಲಿಲ್ಲ. ಬಹುಶಃ ನಾನಾಗ ಇಪ್ಪತ್ತು ವರ್ಷದವನಿರಬೇಕು, ನನ್ನಮ್ಮನ ಹತ್ತಿರ ಹೀಗಾಗಿತ್ತು ಅಂತ ಅದ್ಯಾವುದೋ ಸಮಯದಲ್ಲಿ ಹೇಳಿದೆ. ಅವಳು ಅಚ್ಚರಿಯಿಂದ ನನ್ನತ್ತ ನೋಡಿ: ಅದು ಬಹುಶಃ ನಮ್ಮಪ್ಪನ ಹುಟ್ಟೂರಿನಲ್ಲಿ ನಮ್ಮ ತಾತನ ನೆನಪಿಗೆ ನಡೆದ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ನಡೆದಿರಬೇಕು. ನಾನಾಗ ಒಂದು ವರ್ಷದ ಮಗು ಅಂದಳು.

ಆ ಮಂದಬೆಳಕಿನ ಜಾಗವಿತ್ತಲ್ಲ ಅದು ನಮ್ಮಪ್ಪ ಹುಟ್ಟಿದಾಗ ಅಡುಗೆಮನೆ ಮತ್ತು ಬಚ್ಚಲುಮನೆಯಾಗಿ ಬಳಸುತ್ತಿದ್ದ ಜಾಗ. ನಮ್ಮಮ್ಮ ನಂಗೆ ಸ್ನಾನ ಮಾಡಿಸಲು ಆ ಟಬ್ಬಿನಲ್ಲಿ ಬಿಸಿನೀರು ಹಾಕಿ ನನ್ನ ಕೂಡಿಸಿ ನಿಲುವಂಗಿ ತೆಗೆದಿಟ್ಟುಬರಲು ಪಕ್ಕದ ಕೋಣೆಗೆ ಹೋಗಿದ್ದಳು. ಇದ್ದಕ್ಕಿದ್ದ ಹಾಗೆ ನಾನು ಜೋರಾಗಿ ಅತ್ತದ್ದನ್ನು ಕೇಳಿ ಓಡಿಬಂದು ನೋಡಿದಳಂತೆ ನಾನು ಟಬ್ಬಿಂದ ಜಾರಿ ನೆಲದ ಮೇಲೆ ಬಿದ್ದು ಅಳುತ್ತಿದ್ದೆ. ನನ್ನ ತಲೆಯ ಮೇಲೆ ಅದೇನೋ ಬಿತ್ತು ಅಂದಿದ್ದೆನಲ್ಲ ಅದು ಬಹುಶಃ ನೇತು ಹಾಕುವ ಎಣ್ಣೆ ದೀಪ. ಅದನ್ನ ನಾನು ಚಿಕ್ಕವನಿರುವಾಗ ಬಳಸುತ್ತಿದ್ದರು ಅಂತ ಅಮ್ಮ ಹೇಳಿದಳು.

ಈ ಮೈತೊಳೆಯೋ ಟಬ್ಬಿನ ನೆನಪೇ ನನ್ನ ಬಗೆಗಿನ ನನ್ನ ಮೊದಲ ನೆನಪು. ನಾನು ಹೇಗೆ ಹುಟ್ಟಿದೆ ಅನ್ನೋದು ಸಹಜವಾಗಿ ನೆನಪಿರಲು ಸಾಧ್ಯನವಿಲ್ಲ. ನನ್ನ ದೊಡ್ಡಕ್ಕ ಹೇಳುತ್ತಿರುತ್ತಾಳೆ ‘ನೀನು ವಿಚಿತ್ರ ಮಗುವಾಗಿದ್ದೆ’ ಅಂತ. ಅಮ್ಮನ ಹೊಟ್ಟೆಯಿಂದ ಹೊರಬಂದಾಗ ನಾನು ಅಳಲೇ ಇಲ್ಲವಂತೆ. ಮುಷ್ಠಿಗಳನ್ನ ಸೇರಿಸಿ ಬಿಗಿಯಾಗಿ ಹಿಡಿದಿದ್ದೆನಂತೆ. ಅಂತೂ ಇಂತೂ ಅವರು ನನ್ನ ಎರಡೂ ಕೈಗಳನ್ನೂ ಬೇರೆ ಮಾಡಿ ನೋಡಿದಾಗ ನನ್ನ ಅಂಗೈಯಲ್ಲಿ ಗಾಯವಾಗಿತ್ತಂತೆ.

ನಂಗೇನೋ ಈ ಕತೆ ಸುಳ್ಳು ಅನ್ನಿಸುತ್ತೆ. ನಾನೇ ಮನೆಯಲ್ಲಿ ಚಿಕ್ಕವನಾದ್ದರಿಂದ ನನ್ನ ರೇಗಿಸೋಕೆ ಈ ಕತೆ ಹೇಳಿರಬೇಕು ಅಂತನ್ನಿಸುತ್ತೆ. ಒಂದುವೇಳೆ ನಾನು ಹಾಗೆ ಹುಟ್ಟಿದ್ದರೆ ಇಷ್ಟೊತ್ತಿಗೆ ಮಿಲೇನಿಯರ್ ಆಗಿಬಿಡುತ್ತಿದ್ದೆ. ರೋಲ್ಸ್-ರಾಯ್ ಕಾರಿನಲ್ಲಿ ಸುತ್ತಾಡುತ್ತಿದ್ದೆ. ಈ ಟಬ್ಬಿನ ಘಟನೆ ಬಿಟ್ಟರೆ ಇನ್ನೊಂದಿಷ್ಟು ಆ ಸಮಯದ ಘಟನೆಗಳು ನೆನಪಿವೆ. ಅವೆಲ್ಲ ಹೇಗಿದೆ ಅಂದರೆ ಮಗುವಾಗಿ ನನ್ನ ದಾದಿಯ ಹೆಗಲ ಮೇಲೆ ಮಲಗಿ ನೋಡುವಾಗ ನನ್ನ ಪಾಯಿಂಟ್ ಆಫ್ ವೀವ್(point of view) ನಲ್ಲಿ ಸೆರೆಹಿಡಿದ ಆದರೆ ಔಟ್ ಆಫ್ ಫೋಕಸ್ (out of focus) ಆದ ಚಿತ್ರಗಳಂತಿವೆ.

ಆ ಮಂದಬೆಳಕಿನ ಜಾಗವಿತ್ತಲ್ಲ ಅದು ನಮ್ಮಪ್ಪ ಹುಟ್ಟಿದಾಗ ಅಡುಗೆಮನೆ ಮತ್ತು ಬಚ್ಚಲುಮನೆಯಾಗಿ ಬಳಸುತ್ತಿದ್ದ ಜಾಗ. ನಮ್ಮಮ್ಮ ನಂಗೆ ಸ್ನಾನ ಮಾಡಿಸಲು ಆ ಟಬ್ಬಿನಲ್ಲಿ ಬಿಸಿನೀರು ಹಾಕಿ ನನ್ನ ಕೂಡಿಸಿ ನಿಲುವಂಗಿ ತೆಗೆದಿಟ್ಟುಬರಲು ಪಕ್ಕದ ಕೋಣೆಗೆ ಹೋಗಿದ್ದಳು. ಇದ್ದಕ್ಕಿದ್ದ ಹಾಗೆ ನಾನು ಜೋರಾಗಿ ಅತ್ತದ್ದನ್ನು ಕೇಳಿ ಓಡಿಬಂದು ನೋಡಿದಳಂತೆ ನಾನು ಟಬ್ಬಿಂದ ಜಾರಿ ನೆಲದ ಮೇಲೆ ಬಿದ್ದು ಅಳುತ್ತಿದ್ದೆ.

ಅದರಲ್ಲಿನ ಚಿತ್ರವೊಂದು ವೈರ್ ನೆಟ್ ಮೂಲಕ ನೋಡಿದ್ದು. ಬಿಳಿ ಬಟ್ಟೆ ಹಾಕ್ಕೊಂಡು ಬಾಲನ್ನು ಕೋಲಿಂದ ಹೊಡೆದಾಗ ಅದು ಗಾಳಿಯಲ್ಲಿ ತೇಲುತ್ತಾ ಕುಣೀತಿದ್ದರೆ ಇವರೆಲ್ಲ ಅದರ ಹಿಂದೆ ಓಡುತ್ತಿದ್ದರು. ಅದನ್ನ ಹಿಡಿದು ಇನ್ನೊಂದು ದಿಕ್ಕಿಗೆ ಹೊಡೀತಿದ್ದರು. ಆಮೇಲೆ ನಂಗೊತ್ತಾಯ್ತು ಆ ನೆಟ್ ಮೂಲಕ ನಾನು ನೋಡಿದ್ದು ಬೇಸ್ಬಾಲ್ ಆಟ ಆಡುತ್ತಿದ್ದವರನ್ನ ಅಂತ. ಆ ಮೈದಾನ ನಮ್ಮಪ್ಪ ಟೀಚರ್ ಆಗಿದ್ದ ಜಿಮ್ನಾಸ್ಟಿಕ್ಸ್ ಸ್ಕೂಲಿನಲ್ಲಿತ್ತು. ನನ್ನೊಳಗೆ ಬೇಸ್ ಬಾಲ್ ಪ್ರೀತಿಯ ಆಟವಾಗಿ ಬೇರೂರಲು ಕಾರಣ ಅಷ್ಟು ಚಿಕ್ಕವನಾಗಿದ್ದಾಗಿಂದ ನಾನದನ್ನ ನೋಡ್ತಾ ಬಂದಿರೋದು.

ಹೀಗೆ ನನ್ನ ದಾದಿಯ ಹೆಗಲ ಮೇಲೆ ಮಲಗಿದ್ದಾಗಿನ ಇನ್ನೊಂದು ನೆನಪು: ದೂರದಿಂದ ಬೆಂಕಿ ನೋಡಿದ್ದು. ನಮ್ಮ ಮತ್ತು ಬೆಂಕಿಯ ನಡುವೆ ಕಪ್ಪು ನೀರಿತ್ತು. ನನ್ನ ಮನೆಯಿದ್ದಿದ್ದು ಟೊಕಿಯೋದ ಒಮೊರಿ ಜಿಲ್ಲೆಯಲ್ಲಿ. ಬಹುಶಃ ಆ ಜಾಗ ಓಮೊರಿ ಸಮುದ್ರ ತೀರ, ಟೊಕಿಯೊದ ಕೊಲ್ಲಿ ಪ್ರದೇಶ. ಬೆಂಕಿ ತುಂಬ ದೂರದಲ್ಲಿ ಕಾಣಿಸುತ್ತಿತ್ತು. ಬಹುಶಃ ಹನೆಡದ ಹತ್ತಿರವಿರಬಹುದು (ಈಗದು ಟೋಕಿಯೊದ ಅಂತಾರಾಷ್ಟ್ರೀಯ ನಿಲ್ದಾಣಗಳಲ್ಲೊಂದು). ಆ ದೂರದ ಬೆಂಕಿ ನೋಡಿ ಭಯದಿಂದ ಅತ್ತಿದ್ದೆ. ನಂಗೀಗಲೂ ಬೆಂಕಿ ಅಂದರೆ ಇಷ್ಟವಿಲ್ಲ. ಅದರಲ್ಲೂ ರಾತ್ರಿ ಆಕಾಶ ಬೆಂಕಿಯಿಂದ ಕೆಂಪಾಗಿ ಬಿಡೋದನ್ನ ನೋಡಕ್ಕಾಗಲ್ಲ. ಇವತ್ತಿಗೂ ಆ ಭಯದಿಂದ ಹೊರಬರಲು ಆಗಿಲ್ಲ.

ಈ ವಯಸ್ಸಿಗೆ ಸಂಬಂಧಿಸಿದ ಕಡೆಯ ನೆನಪೊಂದಿದೆ. ಆಗಲೂ ನಾನು ದಾದಿಯ ಹೆಗಲ ಮೇಲಿದ್ದೆ. ನಾವು ಆವಾಗಾವಾಗ ಒಂದು ಕತ್ತಲುಕೋಣೆಗೆ ಹೋಗುತ್ತಿದ್ದೆವು. ಎಷ್ಟೋ ವರ್ಷಗಳ ನಂತರ ಇದು ಮತ್ತೆ ಮತ್ತೆ ನೆನಪಾಗೋದು. ನಂಗೆ ಅದೇನಿರಬಹುದು ಅಂತ ಆಶ್ಚರ್ಯ. ಒಂದಿನ ಇದ್ದಕ್ಕಿದ್ದ ಹಾಗೆ ನಾನೀ ರಹಸ್ಯವನ್ನ ಶರ್ಲಾಕ್ ಹೋಮ್ಸ್ ನ ತರಹ ಭೇದಿಸಿದೆ. ಆಗ ಅರ್ಥವಾಯಿತು: ನನ್ನ ದಾದಿ ನನ್ನ ಹೆಗಲ ಮೇಲೆ ಹಾಕ್ಕೊಂಡೇ ಟಾಯ್ಲೆಟ್ ಗೆ ಹೋಗ್ತಿದ್ದಳು. ಛೇ ಎಂತಹ ಅವಮಾನ!

ಎಷ್ಟೋ ವರ್ಷಗಳ ನಂತರ ಆ ದಾದಿ ನನ್ನ ನೋಡೋಕೆ ಬಂದಿದ್ದಳು. ಆರಡಿ ಎತ್ತರದ ಅರವತ್ತೆಂಟು ಕೆಜಿಯ ನನ್ನ ನೋಡ್ತಾ “ಎಷ್ಟು ಬೆಳೆದುಬಿಟ್ಟಿದಿಯಲ್ಲಪ್ಪ” ಅಂತ ಹೇಳ್ತಾ ನನ್ನ ಮಂಡಿಗಳನ್ನ ಬಳಸಿ ಅತ್ತುಬಿಟ್ಟಳು. ಅವಳು ನಂಗೆ ಹಿಂದೆ ಮಾಡಿದ್ದ ಅವಮಾನಕ್ಕೆ ಅವಳಿಗೆ ಸರಿಯಾಗಿ ಬೈಯಬೇಕಂತಿದ್ದೆ. ಆದರೆ ಆ ಮುದುಕಿಯನ್ನ ನೋಡಿ ಕರಗಿಹೋದೆ. ಸುಮ್ಮನೆ ಆಕೆಯನ್ನ ನೋಡುವುದನ್ನ ಬಿಟ್ಟು ಬೇರೇನೂ ಮಾಡಲಾಗಲಿಲ್ಲ.

ಕೆಲವು ಕಾರಣಗಳಿಂದ ನಾನು ನಡೆಯಲು ಕಲಿತ ಮತ್ತು ನರ್ಸರಿ ಸ್ಕೂಲಿಗೆ ಸೇರಿದ ಕಾಲದ ನೆನಪುಗಳು ಅಷ್ಟು ಗಾಢವಾಗಿಲ್ಲ. ಒಂದೇ ಒಂದು ದೃಶ್ಯ ಮಾತ್ರ ನೆನಪಿದೆ. ಅದು ಗಾಢಬಣ್ಣಗಳಲ್ಲಿ ನೆನಪಿದೆ.

ಲೊಕೇಷನ್: ಸ್ಟ್ರೀಟ್ ಕಾರ್ ಕ್ರಾಸಿಂಗ್. ರಸ್ತೆಯ ಮತ್ತೊಂದು ಬದಿಯಲ್ಲಿ, ಮುಚ್ಚಿದ್ದ ರೈಲ್ವೇ ಗೇಟ್, ನಮ್ಮಪ್ಪ, ಅಮ್ಮ ಮತ್ತು ಅಕ್ಕಂದಿರು, ಅಣ್ಣ. ನಾನೊಬ್ಬನೇ ರಸ್ತೆಯ ಮತ್ತೊಂದು ಬದಿ ನಿಂತಿದ್ದೆ. ನಾಯಿಯೊಂದು ಬಾಲ ಆಡಿಸುತ್ತಾ ನಾನು ಮತ್ತು ನನ್ನ ಮನೆಯವರು ನಿಂತಿದ್ದ ಮಧ್ಯದಲ್ಲಿನ ರಸ್ತೆಯಲ್ಲಿ ಅದನ್ನ ದಾಟಲು ಹಿಂದಕ್ಕೆ ಮುಂದಕ್ಕೆ ಬಾಲ ಅಲ್ಲಾಡಿಸಿಕೊಂಡು ಓಡಾಡ್ತಿತ್ತು. ಹಾಗೆ ಸುಮಾರು ಸಾರಿ ಮಾಡಿ ನಾನಿದ್ದ ದಿಕ್ಕಿಗೆ ಬರುವಾಗ ಇದ್ದಕ್ಕಿದ್ದ ಹಾಗೇ ಬಂದ ರೈಲಿಗೆ ಸಿಕ್ಕಿಹಾಕಿಕೊಂಡಿತು. ಕಣ್ಮುಂದೆಯೇ ಆ ಬಿಳಿ ನಾಯಿಯ ದೇಹ ಅರ್ಧತುಂಡಾಗಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಸಶಿಮಿಗಾಗಿ (ಜಪಾನಿ ಹಸಿಮಾಂಸ ಭಕ್ಷ್ಯ) ಕತ್ತರಿಸಿಟ್ಟ ಕೆಂಪುಹಸಿಮೀನಿನ ತುಂಡುಗಳ ಹಾಗೆ ಕಾಣುತ್ತಿತ್ತು.

ಈ ಭಯಂಕರ ದೃಶ್ಯಕ್ಕೆ ಸಂಬಂಧಿಸಿದ ಹಾಗೆ ಮತ್ತೇನೂ ನೆನಪಿಲ್ಲ. ಬಹುಶಃ ಆ ಶಾಕ್ ನಿಂದ ನಾನು ಪ್ರಜ್ಞೆತಪ್ಪಿರಬಹುದು. ಅದಾದ ಮೇಲೆ ಸುಮಾರು ಬಿಳಿ ನಾಯಿಗಳನ್ನ ನನ್ನ ಮುಂದೆ ಬುಟ್ಟಿಗಳಲ್ಲಿ, ಬಟ್ಟೆಗಳಲ್ಲಿ ಸುತ್ತಿ ಜನ ತೋಳುಗಳಲ್ಲಿ ಎತ್ತಿಕೊಂಡು ಬಂದದ್ದು ಮಸುಕಾಗಿ ನೆನಪಿದೆ. ಬಹುಶಃ ನನ್ನ ಕಣ್ಮುಂದೆ ಸತ್ತ ನಾಯಿಯಂತಹದ್ದೇ ನಾಯಿಯನ್ನು ನಂಗೆ ಕೊಡಿಸಲು ಅಪ್ಪ ಅಮ್ಮ ಹುಡುಕುತ್ತಿದ್ದರು. ನಮ್ಮಕ್ಕಂದಿರ ಪ್ರಕಾರ ನಂಗೆ ಅವರ ಈ ಪ್ರಯತ್ನಗಳ ಬಗ್ಗೆ ಸ್ವಲ್ಪ ಕೂಡ ಕೃತಙ್ಞತೆ ಇರಲಿಲ್ಲ. ಬದಲಿಗೆ ಬಿಳಿನಾಯಿಯನ್ನು ತೋರಿಸಿದ ತಕ್ಷಣ ಹುಚ್ಚುಹಿಡಿದವನ ಹಾಗೆ ‘ಬೇಡ! ಬೇಡ!’ ಅಂತ ಕಿರುಚಿಕೊಳ್ಳುತ್ತಿದ್ದೆನಂತೆ. ಬಿಳಿನಾಯಿ ಬದಲು ಕರಿನಾಯನ್ನ ತಂದು ತೋರಿಸಿದ್ದರೆ ಒಳ್ಳೆಯದಿತ್ತಲ್ವಾ? ಆ ಬಿಳಿನಾಯಿಗಳು ನಡೆದ ಘಟನೆಯನ್ನ ನಂಗೆ ನೆನಪಿಸುತ್ತಿತ್ತೇನೋ? ಈ ಘಟನೆಯಾಗಿ 30 ವರ್ಷಗಳ ಮೇಲಾಗಿದೆ, ಆದರೂ ಈಗಲೂ ಕೂಡ ಕೆಂಪುಮೀನಿನ ಮಾಂಸದಿಂದ ಮಾಡಿದ ಸಶಿಮಿ ತಿನ್ನಕ್ಕೆ ನನಗೆ ಆಗಲ್ಲ. ಮನಸ್ಸಿನ ಮೇಲಾದ ಆಘಾತದ ತೀವ್ರತೆಯಿಂದಾಗಿ ನನ್ನ ನೆನಪು ಗಾಢವಾಯಿತು ಅನ್ನಿಸುತ್ತೆ. ನನ್ನ ಮತ್ತೊಂದು ನೆನಪು ಕೂಡ ರಕ್ತಕ್ಕೆ ಸಂಬಂಧಿಸಿದ್ದು. ತಲೆಗೆ ಪೆಟ್ಟು ಬಿದ್ದಿದ್ದ ನನ್ನಣ್ಣನನ್ನು ತಲೆಗೆ ಕಟ್ಟಿದ್ದ ರಕ್ತಸಿಕ್ತವಾಗಿದ್ದ ಕೆಂಪುಬ್ಯಾಂಡೇಜಿನೊಂದಿಗೆ ಮನೆಗೆ ಹೊತ್ತು ತಂದಿದ್ದರು. ಅವನು ನನಗಿಂತ ನಾಲ್ಕು ವರ್ಷ ದೊಡ್ಡವನು. ನಾನಿನ್ನೂ ಸ್ಕೂಲಿಗೆ ಸೇರಿರಲಿಲ್ಲ. ಅವನು ಒಂದನೆಯದೋ ಎರಡನೆಯದೋ ಕ್ಲಾಸಿನಲ್ಲಿದ್ದ. ಜಿಮ್ನಾಸ್ಟಿಕ್ ಸ್ಕೂಲಿನಲ್ಲಿ ಎತ್ತರದ ತೊಲೆಯೊಂದರ ಮೇಲೆ ಬ್ಯಾಲೆನ್ಸ್ ಮಾಡ್ತಾ ನಡೀತಿರಬೇಕಾದರೆ ಗಾಳಿ ಬೀಸಿ ಬಿದ್ದುಬಿಟ್ಟಿದ್ದ. ಕೂದಲೆಳೆಯ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡಿದ್ದ.

ನಾನೊಬ್ಬನೇ ರಸ್ತೆಯ ಮತ್ತೊಂದು ಬದಿ ನಿಂತಿದ್ದೆ. ನಾಯಿಯೊಂದು ಬಾಲ ಆಡಿಸುತ್ತಾ ನಾನು ಮತ್ತು ನನ್ನ ಮನೆಯವರು ನಿಂತಿದ್ದ ಮಧ್ಯದಲ್ಲಿನ ರಸ್ತೆಯಲ್ಲಿ ಅದನ್ನ ದಾಟಲು ಹಿಂದಕ್ಕೆ ಮುಂದಕ್ಕೆ ಬಾಲ ಅಲ್ಲಾಡಿಸಿಕೊಂಡು ಓಡಾಡ್ತಿತ್ತು. ಹಾಗೆ ಸುಮಾರು ಸಾರಿ ಮಾಡಿ ನಾನಿದ್ದ ದಿಕ್ಕಿಗೆ ಬರುವಾಗ ಇದ್ದಕ್ಕಿದ್ದ ಹಾಗೇ ಬಂದ ರೈಲಿಗೆ ಸಿಕ್ಕಿಹಾಕಿಕೊಂಡಿತು. ಕಣ್ಮುಂದೆಯೇ ಆ ಬಿಳಿ ನಾಯಿಯ ದೇಹ ಅರ್ಧತುಂಡಾಗಿ ರಕ್ತದ ಮಡುವಿನಲ್ಲಿ ಬಿದ್ದಿತ್ತು.

ನನ್ನ ಚಿಕ್ಕಕ್ಕ ರಕ್ತಸಿಕ್ತವಾಗಿದ್ದ ಅವನನ್ನ ನೋಡುತ್ತಲೇ “ಅಯ್ಯೋ ಅವನ ಬದಲು ನಾನು ಸಾಯಬಾರದಾ!” ಅಂತ ಕಿರುಚಿದ್ದು ಸ್ಪಷ್ಟವಾಗಿ ನೆನಪಿದೆ. ನಾನು ಕೂಡ ಈ ರೀತಿಯ ಅತಿಭಾವುಕ ಮತ್ತು ತರ್ಕಬದ್ಧವಾಗಿ ಯೋಚಿಸದ ಗುಂಪಿನಿಂದ ಬಂದವನು ಅನ್ನಿಸುತ್ತೆ. ಜನ ನಮ್ಮನ್ನು ಸೂಕ್ಷ್ಮಜ್ಞರು, ಉದಾರಿಗಳು ಅಂತ ಹೊಗಳುತ್ತಾರೆ. ಆದರೆ ನಂಗನ್ನಿಸುವುದು ಅತಿಭಾವುಕತೆ ಮತ್ತು ಅಸಂಗತತೆ ನಮ್ಮ ರಕ್ತದಲ್ಲೇ ಇದೆ ಅಂತ. ಮೊರಿಮುರ ಗಕ್ವೆನ್ ಸ್ಕೂಲಿಗೆ ಸೇರಿದ ನರ್ಸರಿ ಶಾಲೆಗೆ ನನ್ನ ಸೇರಿಸಿದ್ದರು. ಆದರೆ ನಾನಲ್ಲಿ ಏನು ಮಾಡಿದೆ ಅಂತ ನೆನಪಿಲ್ಲ. ನಂಗೆ ನೆನಪಿರುವುದು ಒಂದೇ: ನಾವಲ್ಲಿ ತರಕಾರಿ ತೋಟ ಬೆಳೆಸಬೇಕಿತ್ತು. ನಾನು ಕಡಲೆಕಾಯಿಗಳನ್ನ ಬಿತ್ತಿದ್ದೆ. ಆ ವಯಸ್ಸಿನಲ್ಲಿ ನಂಗೆ ಒಳ್ಳೆಯ ಜೀರ್ಣಶಕ್ತಿ ಇರಲಿಲ್ಲ. ಹಾಗಾಗಿ ಕಡಲೆಕಾಯಿ ಹೆಚ್ಚು ತಿನ್ನಕ್ಕೆ ಕೊಡ್ತಿರಲಿಲ್ಲ. ಬಹುಶಃ ಅದಕ್ಕೆ ನಾನು ಕಡಲೆಕಾಯಿ ಬಿತ್ತಿರಬೇಕು. ಸ್ವಂತವಾಗಿ ನಾನೇ ಹೆಚ್ಚು ಕಡಲೆಕಾಯಿ ಬೆಳೆಯಬೇಕು ಅನ್ನೋದು ನನ್ನ ಪ್ಲಾನ್ ಆಗಿತ್ತು. ಆದರೆ ಕಡಲೆಕಾಯಿ ಸುಗ್ಗಿಯಾಗುವಷ್ಟೇನು ಬೆಳೆ ಬಂದ ನೆನಪಿಲ್ಲ.

ಬಹುಶಃ ಇದೇ ಸಮಯದಲ್ಲಿರಬೇಕು ನಾನು ಮೊದಲನೇ ಸಿನೆಮಾ ನೋಡಿದ್ದು. ನಮ್ಮ ಮನೆಯಿದ್ದ ಓಮೊರಿಯಿಂದ ತಚಿಯಾಯ್ ಗವ ಸ್ಟೇಷನ್ ವರೆಗೂ ನಡೆದುಕೊಂಡು ಹೋಗಿ ಅಲ್ಲಿಂದ ಶಿನಾಗಾವ ಕಡೆಗೆ ಹೋಗುವ ರೈಲು ಹತ್ತಿ ಅಒಮೊನೊ ಯೊಕೊಚೊ ಅನ್ನೋ ಸ್ಟೇಷನ್ನಿನಲ್ಲಿ ಇಳಿಯುತ್ತಿದ್ದೆವು. ಅಲ್ಲೊಂದು ಥಿಯೇಟರ್ ಇತ್ತು. ಅಲ್ಲಿ ಬಾಲ್ಕನಿಯಲ್ಲಿ ಮಧ್ಯಭಾಗದಲ್ಲಿ ಕಾರ್ಪೆಟ್ ಹಾಸಿರುತ್ತಿತ್ತು. ಅಲ್ಲಿ ನಮ್ಮ ಮನೆಯವರೆಲ್ಲ ನೆಲದ ಮೇಲೆ ಜಪಾನಿ ಶೈಲಿಯಲ್ಲಿ ಕೂತು ಸಿನೆಮಾ ನೋಡುತ್ತಿದ್ದೆವು. ನಂಗೆ ನರ್ಸರಿ ಸ್ಕೂಲಿನಲ್ಲಿ ಇರೋವಾಗ, ಪ್ರೈಮರಿ ಸ್ಕೂಲಿನಲ್ಲಿ ಇರೋವಾಗ ಏನು ನೋಡಿದ್ದೆ ಅಂತ ನೆನಪಿಲ್ಲ. ನಂಗೆ ಅದರಲ್ಲಿದ್ದ ಕಾಮಿಡಿಯ ಭಾಗ ಕೋಡಂಗಿ ತರಹ ವೇಷ ಹಾಕಿ ಮಾಡುವುದು ಇಂಟರೆಸ್ಟಿಂಗ್ ಅನ್ನಿಸಿತ್ತು. ಒಂದು ದೃಶ್ಯದಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿಯೊಬ್ಬ ಉದ್ದ ಬಿಲ್ಡಿಂಗನ್ನು ಅಳೀತಾನೆ. ಈ ದೃಶ್ಯ ನಂಗೆ ನೆನಪಿದೆ. ಅವನು ತಾರಸಿಯ ಮೇಲೆ ಬಂದವನೇ ಕೆಳಗೆ ಕತ್ತಲು ಕವಿದಿದ್ದ ಕಣಿವೆಯೊಳಗೆ ಧುಮುಕುತ್ತಾನೆ. ಬಹುಶಃ ಇದು ಫ್ರೆಂಚ್ ಸಿನೆಮಾ ಜಿಗೋಮಾರ್. ಇದರ ನಿರ್ದೇಶಕ ವಿಕ್ಟೋರಿನ್ ಜಾಸ್ಸೆಟ್. ಇದು ಜಪಾನಿನಲ್ಲಿ ಮೊದಲು ಬಿಡುಗಡೆಯಾಗಿದ್ದು ನವೆಂಬರ್ 1911ರಲ್ಲಿ.

ಮತ್ತೊಂದು ನೆನಪಿರುವ ದೃಶ್ಯದಲ್ಲಿ ಹಡಗಿನಲ್ಲಿ ಹುಡುಗ ಮತ್ತು ಹುಡುಗಿ ಸ್ನೇಹಿತರಾಗುತ್ತಾರೆ. ಹಡಗು ಮುಳುಗುತ್ತಿರುತ್ತೆ. ಹುಡುಗ ಆಗಲೇ ತುಂಬಿದ್ದ ಲೈಫ್ ಬೋಟಿನೊಳಗೆ ಹೆಜ್ಜೆಯಿಡುವ ಸಮಯದಲ್ಲಿ ಮುಳುಗುತ್ತಿದ್ದ ಹಡಗಿನಲ್ಲೇ ಉಳಿದುಕೊಂಡಿದ್ದ ಹುಡುಗಿಯನ್ನು ನೋಡುತ್ತಾನೆ. ಅವನು ಆ ಹುಡುಗಿಗೆ ಲೈಫ್ ಬೋಟ್ ಹತ್ತಲು ಜಾಗ ಕೊಟ್ಟು ತಾನು ಹಡಗಿನಲ್ಲೇ ಉಳಿದುಕೊಳ್ಳುತ್ತಾನೆ. ಅವಳಿಗೆ ಕೈಬೀಸುತ್ತಾನೆ. ಇದು ಬಹುಶಃ ಇಟ್ಯಾಲಿಯನ್ ಕಾದಂಬರಿ ‘ದಿ ಹಾರ್ಟ್’ ಅನ್ನೋ ಕಾದಂಬರಿ ಆಧಾರಿತ ಸಿನೆಮಾ.

ನಂಗೆ ಕಾಮಿಡಿ ಸಿನೆಮಾ ಹೆಚ್ಚು ಇಷ್ಟ ಆಗೋದು. ಒಂದು ದಿನ ನಾವು ಥಿಯೇಟರ್ ಗೆ ಹೋದಾಗ ಅಲ್ಲಿ ಕಾಮಿಡಿ ಸಿನೆಮಾ ಇರಲಿಲ್ಲ ಅಂತ ನಾನು ಅತ್ತುಕರೆದು ರಂಪ ಮಾಡಿದ್ದೆ. ನಮ್ಮಕ್ಕಂದಿರು ಹೇಳ್ತಾರೆ, ಆವತ್ತು ನಾನೆಷ್ಟು ಗಲಾಟೆ ಮಾಡಿದ್ದೆ ಅಂದ್ರೆ ಪೋಲಿಸಿನವರು ನನ್ನ ಕರ್ಕೊಂಡು ಹೋಗೋಕೆ ಬಂದು ಬಿಟ್ಟಿದ್ದರಂತೆ. ನಂಗೆ ಭಯವಾಗಿತ್ತು.

ಅದೇನೇ ಇರಲಿ ಈ ವಯಸ್ಸಿನಲ್ಲಿ ಸಿನೆಮಾಗಳ ಸಂಪರ್ಕಕ್ಕೆ ನಾನು ಬಂದದ್ದಕ್ಕೂ ಆಮೇಲೆ ನಿರ್ದೇಶಕನಾಗಿದ್ದಕ್ಕೂ ಏನೂ ಸಂಬಂಧವಿಲ್ಲ. ದಿನನಿತ್ಯದ ಮಾಮೂಲಿ ಬದುಕಿಗೆ ಪರದೆಯ ಮೇಲಿನ ಚಲಿಸುವ ಚಿತ್ರಗಳು ತುಂಬುತ್ತಿದ್ದ ಖುಷಿಯನ್ನಷ್ಟೇ ಎಂಜಾಯ್ ಮಾಡ್ತಿದ್ದೆ. ನಗೋದು, ಹೆದರಿಕೊಳ್ಳೋದು, ಬೇಜಾರು ಮಾಡ್ಕೊಳ್ಳೋದು, ಅಳೋದು ಇದನ್ನೆಲ್ಲ ಆಸ್ವಾದಿಸ್ತಿದ್ದೆ.

ಈಗ ಹಿಂತಿರುಗಿ ನೋಡಿದಾಗ ನಂಗನ್ನಿಸೋದು ನಮ್ಮಪ್ಪನಿಗೆ ಸಿನೆಮಾಗಳ ಬಗ್ಗೆ ಇದ್ದ ಧೋರಣೆ ನನ್ನ ಪ್ರವೃತ್ತಿಯನ್ನ ಇನ್ನಷ್ಟು ಬಲಗೊಳಿಸಿತು. ಅದೇ ಈವತ್ತು ನಾನೇನಾಗಿದೀನೋ ಅದಕ್ಕೆ ಪ್ರೇರಣೆ ನೀಡಿತು. ಆತ ಒಬ್ಬ ಕಟ್ಟುನಿಟ್ಟಿನ ಮಿಲಿಟರಿ ಹಿನ್ನೆಲೆ ಹೊಂದಿದ್ದ ವ್ಯಕ್ತಿ. ಆದರೆ ವಿದ್ಯಾವಂತರು ಕೂಡ ಸಿನೆಮಾ ನೋಡುವುದನ್ನ ಒಪ್ಪದಿದ್ದ ಕಾಲದಲ್ಲಿ ತನ್ನ ಮನೆಮಂದಿಯನ್ನೆಲ್ಲ ನಿಯಮಿತವಾಗಿ ಸಿನೆಮಾಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಸಿನೆಮಾ ನೋಡುವುದರಲ್ಲಿ ಶೈಕ್ಷಣಿಕ ಮೌಲ್ಯವಿದೆ ಅನ್ನೋ ತನ್ನ ನಂಬಿಕೆಯನ್ನ ಆತ ಎಂದೂ ಬದಲಿಸಲಿಲ್ಲ.

ನನ್ನಪ್ಪನ ಕ್ರೀಡೆಗಳ ಬಗೆಗಿನ ಧೋರಣೆ ಕೂಡ ಇದೇ ರೀತಿ ನನ್ನ ಮೇಲೆ ಪ್ರಭಾವ ಬೀರಿದೆ. ಆತ ಮಿಲಿಟರಿ ಅಕಾಡೆಮಿಯನ್ನ ಬಿಟ್ಟ ಮೇಲೆ ಜಿಮ್ನ್ಯಾಶಿಯಂ ಸ್ಕೂಲು ಸೇರಿದ. ಅಲ್ಲಿ ಜಪಾನಿ ಸಾಂಪ್ರದಾಯಿಕ ಯುದ್ಧಕಲೆಗಳಾದ ಜುಡೋ ಮತ್ತು ಕೆಂಡೋ ಕತ್ತಿವರಸೆಯ ಜೊತೆಗೆ ಎಲ್ಲ ರೀತಿಯ ಆಟಗಳಿಗೂ ಸೌಲಭ್ಯಗಳನ್ನ ಕಲ್ಪಿಸಿದ. ಆತನೇ ಜಪಾನಿನಲ್ಲಿ ಮೊದಲನೇ ಈಜುಕೊಳ ಕಟ್ಟಿಸಿದ್ದು. ಬೇಸ್ ಬಾಲ್ ಆಟವನ್ನ ಜನಪ್ರಿಯಗೊಳಿಸಲು ಶ್ರಮಿಸಿದ. ಎಲ್ಲ ರೀತಿಯ ಆಟಗಳನ್ನು ಪ್ರಚಾರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದ. ಆತನ ಐಡಿಯಾಗಳು ನನ್ನೊಂದಿಗಿವೆ. ಚಿಕ್ಕವನಿದ್ದಾಗ ನಾನು ತುಂಬ ರೋಗಿಷ್ಠ ಹಾಗೂ ದುರ್ಬಲನಾಗಿದ್ದೆ. ನನ್ನ ಈ ಸ್ಥಿತಿಯ ಬಗ್ಗೆ ನನ್ನಪ್ಪ ಯಾವಾಗಲೂ ದೂರುತ್ತಿದ್ದ. “ನೀನು ಮಗುವಾಗಿದ್ದಾಗ ನೀನು ಶಕ್ತಿವಂತನಾಗಲಿ ಅಂತ ಯೊಕೊಜುನ (ಸುಮೋ ವ್ರೆಸ್ಟಲರ್ ಚಾಂಪಿಯನ್) ಉಮೆಗತಾನಿ ಕೈಗೆ ಎತ್ತಿಕೊಳ್ಳಲು ಕೊಟ್ಟಿದ್ದೆವು” ಅಂತಿದ್ದ. ಅದೇನೇ ಆದರೂ ನಾನು ನಮ್ಮಪ್ಪನ ಮಗ. ನಂಗೆ ಆಟಗಳನ್ನು ನೋಡೋದು ಆಡೋದು ಎರಡೂ ಇಷ್ಟ. ಆಟಗಳನ್ನ ಏಕಾಗ್ರಚಿತ್ತನಾಗಿ ಶಿಸ್ತಿನಿಂದ ನೋಡ್ತೀನಿ. ಇದು ನಿಚ್ಚಳವಾಗಿ ನನ್ನಪ್ಪನ ಪ್ರಭಾವ.

(ಮುಂದುವರಿಯುವುದು)

ತನ್ನ ಆತ್ಮಕತೆ SOMETHING LIKE AN AUTOBIOGRAPHY ಗೆ ಅಕಿರ ಕುರಸೋವ ಬರೆದ ಮುನ್ನುಡಿಯ ಕೆಲ ಭಾಗಗಳು.

ಯುದ್ಧಕ್ಕೆ ಮೊದಲು ಮನೆಮದ್ದನ್ನು ಮಾರುವವರು ಊರಲೆಲ್ಲ ಸುತ್ತುತ್ತಿದ್ದರು. ಇಂಥದ್ದನ್ನು ಮಾರುವವರ ಹತ್ತಿರ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿದ ಒಂದು ಮದ್ದಿತ್ತು. ಆ ಮದ್ದು ಕತ್ತರಿಸಿದ ಗಾಯಗಳಿಗೆ, ಸುಟ್ಟಗಾಯಗಳಿಗೆ ಬಹಳ ಪರಿಣಾಮಕಾರಿ. ಮುಂದೆ ನಾಲ್ಕು ಕಾಲು, ಹಿಂದೆ ಆರು ಕಾಲಿರೋ ಕಪ್ಪೆಯನ್ನ ನಾಲ್ಕುಕಡೆ ಕನ್ನಡಿಗಳಿರೋ ಪೆಟ್ಟಿಗೆಯಲ್ಲಿ ಹಾಕಿಇಡುತ್ತಿದ್ದರು. ಕಪ್ಪೆ ತನ್ನನ್ನೇ ತಾನು ಎಲ್ಲ ಕಡೆಗಳಿಂದಲೂ ನೋಡಿ ಆಶ್ಚರ್ಯಸಂತೋಷಗಳಿಂದ ಬೆವರುತ್ತಿತ್ತು. ಆ ಬೆವರಿನಲ್ಲಿ ಎಣ್ಣೆಯ ಅಂಶ ಇರ್ತಿತ್ತು. ಆ ಬೆವರನ್ನ ಒಟ್ಟುಮಾಡಿಕೊಂಡು 3,721 ದಿವಸ ವಿಲೋ ರೆಂಬೆಯಿಂದ ತಿರುವುತ್ತಾ ಕುದಿಸುತ್ತಿದ್ದರು. ಹೀಗೆ ಕುದಿಸಿದಾಗ ಆ ಮದ್ದು ತಯಾರಾಗ್ತಿತ್ತು.
ನನ್ನ ಬಗ್ಗೆ ಬರೆದುಕೊಳ್ಳುವಾಗ ನಾನು ಆ ಪೆಟ್ಟಿಗೆಯಲ್ಲಿನ ಕಪ್ಪೆಯ ಹಾಗೆ ಅನ್ನಿಸಿತು. ಅದು ನಂಗಿಷ್ಟವಾದರೂ ಆಗದಿದ್ದರೂ ನನ್ನನ್ನೇ ನಾನು ಬೇರೆ ಬೇರೆ ಆಯಾಮಗಳಿಂದ ನೋಡಿಕೊಳ್ಳಬೇಕಾಯಿತು. ನಾನೇನು ಆ ಹತ್ತು ಕಾಲಿನ ಕಪ್ಪೆ ಅಲ್ಲ. ಆದರೂ ಕನ್ನಡಿಯಲ್ಲಿ ನೋಡಿಕೊಂಡಾಗ ನಾನು ಕೂಡ ಆ ಕಪ್ಪೆಯ ಹಾಗೆ ಜಿಡ್ಡು ಜಿಡ್ಡಾಗಿ ಬೆವರಿದೆ.
ನಾನು ಗಮನಿಸದೆ ಹೋದರೂ ಸಂದರ್ಭಗಳು ಸಂಚು ಮಾಡಿ ನನ್ನನ್ನ 71 ವರ್ಷದವನ್ನಾಗಿಸಿಬಿಟ್ಟಿದೆ. ಹಿಂತಿರುಗಿ ನೋಡಿದಾಗ ನಾನು ಏನು ತಾನೇ ಹೇಳಬಹುದು? ಎಷ್ಟೋ ವಿಷಯಗಳು ಘಟಿಸಿವೆ ಅಂತಷ್ಟೇ ಅಲ್ವಾ? ಬಹಳ ಜನ ನಂಗೆ ಆತ್ಮಕತೆ ಬರೆಯಲು ಹೇಳಿದರು. ಆದರೆ ಈ ಮುಂಚೆ ನಂಗೇನೂ ಬರೀಬೇಕು ಅಂತೇನೂ ಅನ್ನಿಸಿರಲಿಲ್ಲ. ಯಾಕೆಂದರೆ ನಂಗೆ ಮಾತ್ರ ಇಂಟರೆಸ್ಟಿಂಗ್ ಅನ್ನಿಸೋಂಥದ್ದನ್ನ ದಾಖಲು ಮಾಡಿ ಬಿಟ್ಟುಹೋಗೋದರಲ್ಲಿ ನಂಗೆ ಆಸಕ್ತಿಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಏನಾದರೂ ಬರೆದರೆ ಅದು ಸಿನೆಮಾಗಳ ಬಗ್ಗೆ ಮಾತ್ರ ಬೇರೆ ವಿಷಯಗಳ ಬಗ್ಗೆ ಅಲ್ಲ. ಅಂದರೆ “ನಾನು” ಅಂತಂದಾಗ ಅದರಲ್ಲಿ “ಸಿನೆಮಾ”ನ ಕಳೆದುಬಿಟ್ಟರೆ ಉಳಿಯೋದು “ಸೊನ್ನೆ”ಯಷ್ಟೇ….

ಜೆನ್ ರೆನೊಯರ್

ಹೆಚ್ಚೇನಿಲ್ಲ ಕಳೆದ ಕೆಲವು ದಿನಗಳ ಹಿಂದೆ ಆತ್ಮಕತೆ ಬರಿಯಲ್ಲ ಅನ್ನೋ ನಿರ್ಧಾರವನ್ನ ಬದಲಿಸಿದೆ. ಫ್ರೆಂಚ್ ನಿರ್ದೇಶಕ ಜೆನ್ ರೆನೊಯರ್ ನ ಆತ್ಮಕತೆಯನ್ನ ಓದಿದ ಮೇಲೆ ನನ್ನ ನಿರ್ಧಾರ ಬದಲಿಸಿದೆ. ಒಂದು ಸಾರಿ ಅವನನ್ನ ಭೇಟಿ ಮಾಡಿದ್ದೆ. ಜೊತೆಯಲ್ಲಿ ಇಬ್ಬರೂ ಊಟ ಮಾಡಿದ್ವಿ. ಆಗ ಬಹಳಷ್ಟು ವಿಷಯಗಳ ಬಗ್ಗೆ ಮಾತಾಡಿದ್ವಿ. ಅವನನ್ನ ಮಾತಾಡಿಸಿದಾಗ ನಂಗನ್ನಿಸಿದ್ದು ಈ ಅಸಾಮಿ ಕೂತು ಆತ್ಮಕತೆ ಬರಿಯೋನಲ್ಲ ಅಂತ. ಅವನು ಆತ್ಮಕತೆ ಬರೆದ ಅಂದಾಗ ನನ್ನೊಳಗೆ ಅರಿವಿನಸ್ಪೋಟವಾಯ್ತು.

ಮುನ್ನುಡಿಯಲ್ಲಿ ಜೆನ್ ರೆನೊಯರ್ ಬರೀತಾನೆ: “ನನ್ನ ಹಲವು ಗೆಳೆಯರು ಆತ್ಮಕತೆ ಬರಿ ಅಂತ ಒತ್ತಾಯ ಮಾಡಿದರು. ಅವರಿಗೆ ಇಲ್ಲಿವರೆಗೂ ಕಲಾವಿದನೊಬ್ಬ ಕ್ಯಾಮರ ಮತ್ತು ಮೈಕ್ರೋಫೋನ್ ಮೂಲಕ ತನ್ನನ್ನ ತಾನು ಅಭಿವ್ಯಕ್ತಿಸಿದ್ದು ಸಾಲದು ಅನ್ನಿಸಿತ್ತು. ಅವರಿಗೆ ಆ ಕಲಾವಿದ ಯಾರು ಅಂತ ಗೊತ್ತಾಗಬೇಕಿದೆ.”

ಹಾಗೇ ಮುಂದೆ ಬರೀತಾನೆ..

“ಸತ್ಯ ಏನಪ್ಪ ಅಂದ್ರೆ ನಾವು ಗೆಳೆಯ ಅಂದುಕೊಂಡಿರೋ ಈ ವ್ಯಕ್ತಿ ಆಗಿರುವುದೇ ಹಲವು ತದ್ವಿರುದ್ಧವಾದ ಅಂಶಗಳಿಂದ. ಚಿಕ್ಕವನಾಗಿದ್ದಾಗ ನರ್ಸರಿ ಸ್ಕೂಲಲ್ಲಿ ಅವನ ಗೆಳೆಯರಿದ್ದರು, ಅವನು ಕೇಳಿದ ಮೊದಲ ಕತೆಗೆ ಅವನೇ ನಾಯಕನಾಗಿದ್ದ, ಅವನ ಹತ್ತಿರ ಇದ್ದ ನಾಯಿ ಕೂಡ ಅವನ ಕಸಿನ್ ಯುಗೆನೆದು. ನಮ್ಮ ಅಸ್ತಿತ್ವ ಕೇವಲ ನಮ್ಮಲಿಲ್ಲ. ನಮ್ಮನ್ನ ರೂಪಿಸಿದ ಪರಿಸರದಲ್ಲಿದೆ…” ನಾನು ಏನಾಗಿದಿನೋ ಅದಾಗಲು ಕಾರಣರಾದ ಆ ಎಲ್ಲ ವ್ಯಕ್ತಿಗಳನ್ನ, ಘಟನೆಗಳನ್ನ ನಾನು ನೆನಪಿಸಿಕೊಳ್ಳಲು ಯತ್ನಿಸಿದೆ.

ನಾನು ಈ ಪುಸ್ತಕದಲ್ಲಿ ಅಧ್ಯಾಯಗಳನ್ನ ಈ ಕ್ರಮದಲ್ಲಿ ಜೋಡಿಸುವ ಹಿಂದೆ ಜೆನ್ ರಿನೊಯರ್ ನ ಮಾತುಗಳು ಮತ್ತು ಅವನನ್ನು ಭೇಟಿಯಾದಾಗ ನಂಗನ್ನಿಸಿತ್ತಲ್ಲ ನಾನು ಇವನು ಬೆಳೆದ ಹಾಗೆ ಬೆಳೀಬೇಕು ಅಂತ ಆ ಕಾರಣ ಕೆಲಸಮಾಡಿದೆ. ಮೊದಲು ಜಪಾನಿಸ್ ಪತ್ರಿಕೆ ಶುಕಾನ್ ಯೊಮಿಯುರಿಯಲ್ಲಿ ಪ್ರಕಟವಾದಾಗ ಇವು ಈ ಕ್ರಮದಲ್ಲಿರಲಿಲ್ಲ.
ನಾನು ಬೆಳೆದಂತೆಲ್ಲ ನಾನು ಹೋಲುವ ಮತ್ತೊಬ್ಬ ವ್ಯಕ್ತಿ ಅನ್ನಿಸಿದ್ದು ಅಮೆರಿಕೆಯ ಸಿನಿಮಾ ನಿರ್ದೇಶಕ ದಿವಗಂತ ಜಾನ್ ಫೋರ್ಡ್. ಆತ ತನ್ನ ಆತ್ಮಕತೆ ಬರೆಯಲಿಲ್ಲ ಅಂತ ನಂಗೆ ಬೇಜಾರಿದೆ. ಹ್ಞಾಂ! ಈ ಇಬ್ಬರು ದೃಶ್ಯಮಾಧ್ಯಮದ ಪ್ರವೀಣರರಿಗೆ ಹೋಲಿಸಿದಾಗ ನಾನೇನು ಕಡಿಮೆಯವನಲ್ಲ! ಆದರೆ ಇಷ್ಟೊಂದು ಜನ ನಾನೆಂತಹ ಮನುಷ್ಯ ಅಂತ ತಿಳ್ಕೋಬೇಕು ಅಂತಿದಾರೆ ಅಂದರೆ ಅವರಿಗಾಗಿ ಬರಿಯೋದು ನನ್ನ ಕರ್ತವ್ಯ ಅನ್ನಿಸ್ತಿದೆ. ನಾನು ಬರೆದದ್ದನ್ನ ಆಸಕ್ತಿಯಿಂದ ಓದ್ತಾರೆ ಅನ್ನೋ ಯಾವುದೇ ನಂಬಿಕೆ ನಂಗಿಲ್ಲ. ನಾನ್ಯಾಕೆ ಈ ಕತೆಯನ್ನ 1950ಕ್ಕೆ ರೊಶೋಮನ್ ಮಾಡಿದ ಕಾಲಕ್ಕೆ ನಿಲ್ಲಿಸಿದೆ (ಇದಕ್ಕೆ ಕಾರಣಗಳನ್ನ ಆಮೇಲೆ ಚರ್ಚೆ ಮಾಡ್ತೀನಿ) ಅನ್ನೋದನ್ನ ವಿವರಿಸಬೇಕು. ನನ್ನನ್ನೇ ನಾನು ಅವಮಾನಕ್ಕೆ ಒಳಪಡಿಸ್ಕೊಳ್ಳಬೇಕಾದರೂ ಹೆದರಬಾರದು ಅಂತ ನಿರ್ಧರಿಸಿಯೇ ಈ ಸರಣಿಯನ್ನ ಬರೆಯಲು ಕೂತೆ. ನನ್ನ ಕಿರಿಯ ಸಹದ್ಯೋಗಿಗಳಿಗೆ ಮಿತ್ರರಿಗೆ ಹೇಳಿದ್ದ ಮಾತುಗಳನ್ನೇ ನಂಗೂ ಹೇಳಿಕೊಂಡೆ. ಒಂಥರ ಆತ್ಮಕತೆ ಅನ್ನಬಹುದಾದ ಈ ಬರವಣಿಗೆ ಮಾಡುವಾಗ ಹಲವು ಸಾರಿ ಹಲವರೊಂದಿಗೆ ಕೂತು ಮಾತಾಡುತ್ತಾ ನನ್ನ ನೆನಪುಗಳನ್ನ ತಾಜಾ ಮಾಡಿಕೊಂಡಿದಿನಿ.