ಕೇವಲ ಒಂದೇ ಒಂದು ಭಾನುವಾರ

ನನ್ನ ಭಾನುವಾರವ ನನಗೆ ಬಿಟ್ಟುಬಿಡಿ
ಇಡೀ ವಾರದ ಧಾವಂತಕ್ಕೆ ಬ್ರೇಕು ಹಾಕಿ,
ಒಂದಷ್ಟು ನಿಧಾನ ದಿನ ಕಳೆಯುತ್ತೇನೆ…

ದಿನ ಪತ್ರಿಕೆಯಲ್ಲಿ ಪದಬಂಧ ತುಂಬುತ್ತಾ
ಬೆಳ್ಳಂಬೆಳಗ್ಗೆ ಬಿಸಿ ಕಾಫಿಯ ಗುಟುಕರಿಸಿ,
ಸೋಮಾರಿತನವನ್ನಷ್ಟು ಆಸ್ವಾದಿಸುತ್ತೇನೆ…

ಚಲ್ಲಾಪಿಲ್ಲಿ ಹರಡಿದ ವಸ್ತುಗಳ ಆಯ್ದು
ಸ್ವಸ್ಥಾನ ಸೇರಿಸಿ ಒಪ್ಪ ಓರಣಗೊಳಿಸಿ,
ಸಮಾಧಾನವಾಗಿ ಸಂಭ್ರಮಿಸುತ್ತೇನೆ…

ಅಂಕೆ ಮೀರಿ ಬೆಳೆದ ಉಗುರ ಕತ್ತರಿಸಿ
ದಣಿದ ಮುಖಕೆ ಹರ್ಬಲ್ ಪ್ಯಾಕ್ ಹಾಕಿ,
ಹಾಡುಗಳ ಕೇಳುತ್ತಾ ವಿರಮಿಸುತ್ತೇನೆ…

ಮಾತಾಡಿ, ಮಾತಾಡಿ ದಣಿದ ಮನಕೆ
ಮುಂದಿನ ವಾರಕ್ಕೆ ಚೈತನ್ಯ ತುಂಬಲು,
ಶುದ್ಧ ಏಕಾಂತದ ಮೌನ ನೀಡುತ್ತೇನೆ…

ಹಸಿದಾಗ ಬಯಸಿದ ಅಡುಗೆಯ ಮಾಡಿ
ಹೊಟ್ಟೆ ತುಂಬಾ ಆರಾಮವಾಗಿ ಉಂಡು,
ಮಧ್ಯಾಹ್ನದ ಜೊಂಪು ನಿದ್ದೆಗೆ ಮಣಿಯುತ್ತೇನೆ…

ಸಂಜೆ ವೇಳೆಗೆ ಟೆರೇಸಿನಲ್ಲಿ ಅಡ್ಡಾಡುತ್ತಾ
ಕಛೇರಿಯೊಳಗೆ ಕರಗುತ್ತಿದ್ದ ಸೂರ್ಯಾಸ್ತವ,
ಕಣ್ತುಂಬಿಕೊಳ್ಳುತ್ತಾ ಕಳೆದುಹೋಗುತ್ತೇನೆ…


ಶ್ರುತಿ ಬಿ ಆರ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಪಿ.ಎಚ್‌.ಡಿ ಪದವಿ ಪಡೆದಿದ್ದಾರೆ

ಪ್ರಸ್ತುತ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜೀರೋ ಬ್ಯಾಲೆನ್ಸ್‌ ಇವರ ಚೊಕ್ಕಲ ಕವನ ಸಂಕಲನ