ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ. ಇಂಥ ಮಾನವೀಯ ಆಸಕ್ತಿಯ ಮೂಲಕ ಹೋಗದಿದ್ದರೆ ಅಕಾಡೆಮಿಕ್ ವಲಯದಲ್ಲಿ ಹಳೆಗಳನ್ನಡದ ಸೊಗಡು ಉಳಿಯುವುದಿಲ್ಲ.
ಪ್ರೊ. ಷ.ಶೆಟ್ಟರ್ ಅವರೊಟ್ಟಿಗೆ ಡಾ. ಗೀತಾ ವಸಂತ ಅವರು ನಡೆಸಿದ್ದ ಮಾತುಕತೆ…

 

ಇತಿಹಾಸ ಮತ್ತು ಪ್ರಾಕ್ತಾನ ಶಾಸ್ತ್ರದ ವಿದ್ವತ್ ವಲಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾದವರು ಪ್ರೊ. ಷ.ಶೆಟ್ಟರ್. ಜಡ ಅಧ್ಯಯನ ಮಾದರಿಗಳನ್ನು ಮೀರಿ ಸಂಶೋಧನೆಗೆ ಅಂತರ್ ಶಿಸ್ತೀಯ ಆಯಾಮಗಳನ್ನು ವಿಸ್ತರಿಸುವ ಮೂಲಕ ಸಮಗ್ರ ದೃಷ್ಟಿಕೋನವನ್ನು ಅವರು ಕಟ್ಟಿಕೊಟ್ಟರು. ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ವಾಙ್ಮಯ ಲೋಕವನ್ನು ಅವರು ಪರಿಭಾವಿಸುವ ಪರಿ ಸೂಕ್ಷ್ಮ ಒಳನೋಟಗಳಿಂದ ಕೂಡಿದೆ. ಲಿಪಿಯ ಇತಿಹಾಸದ ಕುರಿತು ಶೆಟ್ಟರ್ ರವರು ತೋರಿದ ಆಸಕ್ತಿ ಕನ್ನಡ ಭಾಷಾ ಚರಿತ್ರೆಯ ಸಂಶೋಧನೆಗೆ ಹೊಸ ಆಯಾಮವೊಂದನ್ನು ನೀಡಿತು. ಕನ್ನಡದ ಹಳಮೆ, ಪ್ರಾಚೀನ ಪರಂಪರೆಗಳ ಅಧ್ಯಯನವೆಂದರೆ ಗ್ರಂಥಸಂಪಾದನೆ, ಕವಿ-ಕೃತಿ-ಕಾಲ ನಿರ್ಣಯಗಳ ಚರ್ಚೆಗೇ ಸೀಮಿತವಾಗಿದ್ದ ಅಧ್ಯಯನದ ಪರಿಧಿಗಳನ್ನು ಹಿಗ್ಗಿಸುವ ಮೂಲಕ ಶಟ್ಟರ್ ಬರಹಗಳು ಹೊಸ ಸಂಚಲನ ಮೂಡಿಸಿದವು.

ರಾಜಕೀಯ ಇತಿಹಾಸವನ್ನೇ ಸಮುದಾಯದ ಇತಿಹಾಸವೆಂದು ಬಿಂಬಿಸುವ ಸ್ಥಗಿತ, ಪೂರ್ವಗ್ರಹಪೀಡಿತ ನೋಟವನ್ನು ಪಲ್ಲಟಗೊಳಿಸುವಲ್ಲಿ ಷ.ಶಟ್ಟರ್ ಸಂಶೋಧನೆಗಳು ತೊಡಗಿಕೊಂಡಿವೆ. ಇತಿಹಾಸ ಅಧ್ಯಯನದಲ್ಲಿ ಅನುಷಂಗಿಕವಾಗಿ ಪ್ರಸ್ತಾಪವಾಗುವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳ ವಿಚಾರವನ್ನೇ ಮುಖ್ಯನೆಲೆಯಾಗಿಸಿಕೊಂಡು ಜೀವಪರ ಇತಿಹಾಸದ ಮರುನಿರ್ಮಾಣದಲ್ಲಿ ತೊಡಗಿಕೊಂಡಿರುವ ಬಗೆಯಿಂದಾಗಿ ಅವರು ಹೆಚ್ಚು ಪ್ರಸ್ತುತರಾಗುತ್ತಾರೆ. ಕಾಲ, ದೇಶ, ಧರ್ಮ, ಭಾಷೆ, ಲಿಪಿ, ಸಾಹಿತ್ಯ, ರಾಜಕೀಯ ಎಲ್ಲವನ್ನೂ ಭಿನ್ನಜಾಡಿನಲ್ಲಿ ಹುಡುಕುವ ಹಾಗೂ ಅರಿಯುವ ಸಂವೇದನಾಶೀಲತೆ ಹಾಗೂ ವಿದ್ವತ್ತುಗಳ ಅಪೂರ್ವ ಸಂಗಮದಂತಿರುವ ಅವರ ವ್ಯಕ್ತಿತ್ವವೇ ನಮ್ಮ ಕಾಲದ ಮಾದರಿಯಾಗಿ ಅವರನ್ನು ನೋಡುವಂತೆ ಮಾಡುತ್ತದೆ.

ಸಮಾಜದ ಪ್ರತಿಷ್ಠಿತರ ಪದರಗಳಲ್ಲಿ ಹಾಯ್ದುಹೋಗುವ ಇತಿಹಾಸ ಅಧ್ಯಯನವನ್ನು ಅಲಕ್ಷಿತಲೋಕದ ಅಂಚುಗಳಿಗೂ ವಿಸ್ತರಿಸುವುದಕ್ಕೆ ಐತಿಹಾಸಿಕ ದೃಷ್ಟಿಕೋನದ ಜೊತೆ ಸಾಮಾಜಿಕ ದೃಷ್ಟಿಕೋನವೊಂದು ಬೇಕು. ಸತ್ಯವನ್ನು ದಾಖಲೆಗಳ ಮೂಲಕ ಸ್ಥಿರೀಕರಿಸುವ ಮಾದರಿಗಳ ಆಚೆಗೆ ಅನುಕ್ತವಾದ, ಮೌನದಲ್ಲಿ ಅದ್ದಿಹೋದ ಸದ್ದುಗಳನ್ನು ಕೇಳುವ ಸಹೃದಯತೆಯೂ ಬೇಕಾಗುತ್ತದೆ. ಇದರೊಂದಿಗೆ ಸಮಚಿತ್ತದ ವಿವೇಕಯುಕ್ತ ದೃಷ್ಟಿಯೂ ಕೆಲಸಮಾಡಬೇಕಾಗುತ್ತದೆ. ಎಚ್.ಎಸ್.ಶಿವಪ್ರಕಾಶರು ಸೂಕ್ತವಾಗಿ ಗುರುತಿಸಿರುವಂತೆ “ಬ್ರಾಹ್ಮಣ ಮತ್ತು ಕ್ಷತ್ರಿಯರ ಸುತ್ತ ಹೆಣೆದಿದ್ದ ಇತಿಹಾಸವನ್ನು ಮಧ್ಯಮ ಮತ್ತು ಕೆಳಸ್ತರದವರೆಗೂ ವಿಸ್ತರಿಸಿ, ಸಮಾಜಕ್ಕಾಗಿ ಜೀವತೆತ್ತ ಗೌಡ, ಮಾದಿಗ, ಚರ್ಮಕಾರ ಇನ್ನಿತರ ಶೂದ್ರರಿಗೆ ಸ್ಥಾನಕಲ್ಪಿಸಿಕೊಟ್ಟಿದ್ದಾರೆ” ಎಂಬ ಮಾತು ಷ.ಶೆಟ್ಟರ್ ರವರ ಸಾಮಾಜಿಕ ಜವಾಬ್ದಾರಿಯನ್ನು ಒಳಗೊಂಡ ವಿದ್ವತ್ ಮಾದರಿಯೊಂದಕ್ಕೆ ಅಪೂರ್ವ ನಿದರ್ಶನವೆಂಬಂತಿದೆ. ವಿಶಾಲ ಹಾಗೂ ಸಮಗ್ರ ಚಿಂತನೆಯಿಂದ ಮಾತ್ರ ಒದಗುವ ಅರಿವು ಇದು. ಹಳಗನ್ನಡದ ಜೀವಸ್ವರಗಳನ್ನು ಅನನ್ಯವಾಗಿ ಕೇಳಿಸಿದ ಷ.ಶೆಟ್ಟರ್ ಅವರೊಂದಿಗೆ ನಡೆಸಿದ ಲೋಕಾಭಿರಾಮವಾದ ಮಾತುಕತೆ ಇದು.

ಪ್ರಶ್ನೆ: ಇತಿಹಾಸಜ್ಞರಾದ ನೀವು ಕನ್ನಡ ಭಾಷಾಲೋಕಕ್ಕೆ ಪ್ರವೇಶಿಸಿದ್ದು ಹೇಗೆ?

ಶೆಟ್ಟರ್: ಇದೊಂದ ಆಕಸ್ಮಿಕ. ಹಿಂದೆ ನಾನು ‘ಸಾವನ್ನು ಆಹ್ವಾನಿಸುವ’ ಜೈನ ಪರಂಪರೆಯನ್ನು ಶೋಧಿಸುವ ಸಂದರ್ಭದಲ್ಲಿ ಹಳೆಗನ್ನಡಕ್ಕೆ ಹೋಗಲೇಬೇಕಿತ್ತು, ಜೈನ ಧಾರ್ಮಿಕ ಶ್ಲೋಕಗಳನ್ನು ಒಡೆದು ಕಥಾರೂಪದಲ್ಲಿ ಸೃಷ್ಟಿಸುತ್ತಾರೆಂಬ ಸುಳಿವು ಸಿಕ್ಕಿತು. 1980ರಲ್ಲಿ ಮೊದಲು ಪಂಪನ ಆದಿಪುರಾಣ ಓದಿದೆ. ಹಳೆಗನ್ನಡ ಕಾವ್ಯಗಳ ಗೀಳು ಹೀಗೆ ಶುರುವಾಯಿತು.

ಪ್ರಶ್ನೆ: ಕನ್ನಡ ಪ್ರಾಚೀನ ಕಾವ್ಯಗಳು ಇತಿಹಾಸ ಸಂಶೋಧನೆಯಲ್ಲಿ ಹೇಗೆ ನೆರವಾದವು?

ಶೆಟ್ಟರ್: ಶಾಸನಗಳಂತೆ ಕಾವ್ಯಗಳೂ ಇತಿಹಾಸಕ್ಕೆ ಆಕರಗಳೇ. ಉದಾಹರಣೆಗೆ: ‘ಸಮಾಧಿ’ ಪದಕ್ಕೆ ಸಂಬಂಧಿಸಿದ ಕತೆ ಪಂಪನಲ್ಲಿ ಹೇಗೆ ಬೆಳೆದುಬಂದಿದೆ, ರನ್ನನಲ್ಲಿ ಯಾವ ರೂಪ ತಳೆದಿದೆ ಎಂದು ಗುರುತಿಸುತ್ತಾ ಹೋಗುವುದು ಆಸಕ್ತಿ ಮೂಡಿಸಿತು. ಎಂಬತ್ತರ ದಶಕದಲ್ಲಿ ವೀರಗಲ್ಲುಗಳ ಬಗ್ಗೆ ಬರೆಯುತ್ತಿದ್ದೆ. ಕಾವ್ಯಗಳಲ್ಲಿ ಹೆಚ್ಚು ಹೆಚ್ಚು ಮಾಹಿತಿ ಸಿಗುತ್ತಾಹೋಯಿತು. ರಾಷ್ಟ್ರಕೂಟರ ಇತಿಹಾಸ ಬರೆಯಲು ಕವಿರಾಜಮಾರ್ಗ ಬಹುಮುಖ್ಯ ಆಕರ. ಹೀಗೆ ಹಳೆಗನ್ನಡ ಕಾವ್ಯಲೋಕದೊಳಗೆ ಪ್ರವೇಶವಾಯಿತು.

ಪ್ರಶ್ನೆ: ಭಾಷಾ ಚರಿತ್ರಕಾರರಾಗಿ ಕನ್ನಡದಲ್ಲಿ ನಿಮ್ಮ ಪಾತ್ರ ತುಂಬ ದೊಡ್ಡದು. ಈ ಅನುಭವದ ಅನನ್ಯತೆಯ ಕುರಿತು ಹೇಳಿ..

ಶೆಟ್ಟರ್: ಭಾಷೆಗೂ ಒಂದು ಚರಿತ್ರೆಯಿದೆ. ಕನ್ನಡದಲ್ಲಿ ಭಾಷಾ ಚರಿತ್ರೆ ಬರೆದಿರಲಿಲ್ಲ. ತುಂಬ ಹಿಂದೆಯೇ ಗೋವಿಂದ ಪೈ ಅಂಥವರು ನಡೆಸಿದ ಸಂಶೋಧನೆಗಳ ಕುರಿತು ಗೌರವವಿವರಿಸಿಕೊಂಡೇ ಈ ಮಾತು ಹೇಳುತ್ತಿದ್ದೇನೆ. ಭಾಷೆಯ ಚರಿತ್ರೆಯಲ್ಲಿ ಲಿಪಿಯ ಚರಿತ್ರೆಯೂ ಬರುತ್ತದೆ. ಇಂಥ ಹೊಸಕ್ಷೇತ್ರಕ್ಕೆ ನಾನು ತುಡುಗುದನ ನುಗ್ಗಿದಂತೆ ನುಗ್ಗಿದೆ. ಸಿದ್ಧಮಾದರಿಗಳು ಇಲ್ಲದಿರುವುದರಿಂದ ಸ್ವಾತಂತ್ರ್ಯವೂ ಇತ್ತು ಸವಾಲೂ ಇತ್ತು. ಎಲ್ಲಿ ಹಸಿರಿತ್ತೋ ಅಲ್ಲಿ ಮೇಯುವ ಸ್ವಾತಂತ್ರ್ಯ! ಬಳಸಿಕೊಂಡೆ.

ಪ್ರಶ್ನೆ: ಲಿಪಿಯ ಇತಿಹಾಸವನ್ನು ಕುರಿತು ನಿಮ್ಮ ಸಂಶೋಧನೆ ಏನನ್ನು ಹೈಲೈಟ್ ಮಾಡಲಿಚ್ಛಿಸುತ್ತದೆ?

ಶೆಟ್ಟರ್: ನನಗೆ ಬೇಕಾದದ್ದು ಸಮಗ್ರತೆ. ಭಾಷೆ ಹೇಗೆ ಹುಟ್ಟಿತು, ಬೆಳೆಯಿತು, ಏನೇನನ್ನು ಮುಖಾಮುಖಿಯಾಯಿತು, ಏನೆಲ್ಲವನ್ನು ಸ್ವೀಕರಿಸಿತು, ಯಾವಾಗ ಪ್ರಬುದ್ಧಾವಸ್ಥೆಗೆ ಬಂತು ಎಂಬ ಇತಿಹಾಸ. ನನ್ನ ಅಧ್ಯಯನ ಭಾಷಾವಿಜ್ಞಾನದ ಮಾದರಿಗಿಂತ ಭಿನ್ನ. ಲಿಪಿಯ ಇತಿಹಾಸದ ಜೊತೆ ಬಿಚ್ಚಿಕೊಳ್ಳುವ ಸಾಂಸ್ಕೃತಿಕ ಇತಿಹಾಸ ಕೂಡ ಕುತೂಹಲಕಾರಿ.

ಪ್ರಶ್ನೆ: ಪ್ರಸ್ತುತ ಸಂದರ್ಭದಲ್ಲಿ ‘ಬಹುತ್ವ’ದ ಕುರಿತು ಆಲೋಚಿಸುತ್ತಿದ್ದೇವೆ, ಮಾತನಾಡುತ್ತಿದ್ದೇವೆ. ಹಳೆಗನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಆಧರಿಸಿ ನಿಮ್ಮ ನಿರೀಕ್ಷಣೆಗಳು ಏನು?

ಶೆಟ್ಟರ್: ಬಹುತ್ವದ ಆಶಯಗಳು ಹಳೆಗನ್ನಡ ಕಾವ್ಯದ ತುಂಬ ಹಬ್ಬಿಕೊಂಡುಬಿಟ್ಟಿದೆ. ಕವಿರಾಜಮಾರ್ಗದಿಂದ ಕುಮಾರವ್ಯಾಸನವರೆಗೂ, ಮಾರ್ಗ ದೇಸಿಯ ಸಮನ್ವಯದಿಂದ ಹಿಡಿದು ಕಾವ್ಯವಸ್ತುವಿನ ನಿರ್ವಹಣೆಯಲ್ಲೂ ಅದು ಢಾಳಾಗಿ ಕಾಣಿಸುತ್ತದೆ. ಹಳೆಗನ್ನಡ ಭಾಷೆಯ ಬಗ್ಗೆ ಹೇಳುವುದಾದರೆ ಅದು ಸಂಸ್ಕೃತ ಪ್ರಾಕೃತಗಳನ್ನು ಜೀರ್ಣಿಸಿಕೊಂಡಿತು. ಆದರೆ ಶರಣಾಗಲಿಲ್ಲ. ವಿಶೇಷತಃ ದ್ರಾವಿಡ ಭಾಷೆಗಳಿಂದ ತನ್ನನ್ನು ರೂಪಿಸಿಕೊಂಡಿತು.

ಪ್ರಶ್ನೆ: ಪ್ರಾಕೃತ – ಸಂಸ್ಕೃತ – ಕನ್ನಡ ಅನುಸಂಧಾನದ ಬಗೆಗೆ ತುಂಬ ಮಹತ್ವದ ಮಾತುಗಳನ್ನು ಆಡುತ್ತಿದ್ದೀರಿ..

ಶೆಟ್ಟರ್: ಇದು ಇತ್ತೀಚಿಗಿನ ಹುಚ್ಚು. ನಾನು ಅಧ್ಯಾಪಕನಾಗಿದ್ದ ಸಮಯದಲ್ಲೇ ಬಹುಭಾಷಿಕ ನೆಲೆ ಹಾಗೂ ಭಾಷೆಗಳ ನಡುವಿನ ಆಂತರಿಕ ಸಂಬಂಧಗಳ ಜಿಜ್ಞಾಸೆ ನಡೆಸುತ್ತಲೇ ಇದ್ದೆ. ಪಾಠ ಮಾಡುತ್ತಿರುವ ಸಂದರ್ಭದಲ್ಲಿ ಇಂಥ ಅನೇಕ ಹೊಳಹುಗಳು ಬರುತ್ತಿದ್ದವು. ಆಗ ವಿದ್ಯಾರ್ಥಿಗಳಿಗೆ ಬೇಕಾದುದಕ್ಕಿಂತ ಹೆಚ್ಚಿನ ವಿಷಯಗಳನ್ನು ಹೇಳುತ್ತ ಹೋಗುತ್ತಿದ್ದೆ. ಆಗ ಇವೆಲ್ಲ ಹರಳುಗಟುತ್ತಹೋದವು. ಆದರೆ ವೃತ್ತಿಜೀವನದ ಒತ್ತಡಗಳಲ್ಲಿ ಇದನ್ನೆಲ್ಲ ಬರೆಯಲಾಗಲಿಲ್ಲ. ಆಗ ಕಂಡ ಕನಸನ್ನು ನಿವೃತ್ತಿ ಜೀವನದಲ್ಲಿ ನನಸುಮಾಡಿಕೊಳ್ಳುತ್ತಿದ್ದೇನೆ.

ಪ್ರಶ್ನೆ: ಇತಿಹಾಸಕಾರರಾಗಿ ನೀವು ದೇಸಿ ಭಾಷೆಗಳ ಅನನ್ಯತೆಯನ್ನು ಹೇಗೆ ಗುರುತಿಸುತ್ತೀರಿ?

ಶೆಟ್ಟರ್: ಭಾಷಾ ಇತಿಹಾಸಕ್ಕೆ ಹಲವು ಮುಖಗಳಿವೆ ಎಂಬುದನ್ನು ಮರೆಯಬಾರದು. ಶಾಸನಗಳನ್ನು ಆಕರವಾಗಿಸಿ ಅಧ್ಯಯನ ಮಾಡುವಾಗ ಮೊದಲೆಲ್ಲ ಭಾಷೆ ಅಷ್ಟು ಮುಖ್ಯವಾಗದೇ, ವಿಷಯ ಮಾತ್ರ ಮುಖ್ಯವಾಗಿರುತ್ತಿತ್ತು. ಪ್ರಾಕೃತ ಶಾಸನಗಳು ಬಹುದೊಡ್ಡ ಆಕರಗಳಾಗಿದ್ದರೂ, ಭಾಷಿಕ ಅಧ್ಯಯನಗಳಾಗಲಿಲ್ಲ. ಇನ್ನು ಸಂಸ್ಕೃತಕ್ಕೆ ಬಂದರೆ ಸಂಸ್ಕೃತ ಒಳ್ಳೆಯ ಭಾಷೆ ಆದರೆ ಅದರ ವೈಭವೀಕರಣ ಸಲ್ಲ. ಪಂಡಿತವಲಯದಲ್ಲಿ ಸಂಸ್ಕೃತದ ಕುರಿತಾದ ಮೇಲರಿಮೆ ಇದೆ. ದೇಸಿ ಭಾಷಾವಲಯದ ನಿರ್ಲಕ್ಷ್ಯವಿದೆ. ದೇಸೀ ಭಾಷೆಗಳು ಏಕೆ ಮುಖ್ಯವೆಂದರೆ ಅವುಗಳು ಬಹುತ್ವವನ್ನು ಉಸಿರಾಡುತ್ತವೆ. ನೀವು ಆಗ ಬಹುತ್ವದ ಕುರಿತು ಕೇಳಿದಿರಲ್ಲಾ… ಕನ್ನಡಗಳು, ಪ್ರಾಕೃತಗಳು ಇವೆ. ಸಂಸ್ಕೃತ ಏಕಮುಖಿ. ಅಲ್ಲಿ ಪ್ಲುರಾಲಿಟಿಯನ್ನು ನೋಡಲಾಗುವುದಿಲ್ಲ.

ಪ್ರಾಕೃತ ಅಧ್ಯಯನ ಮಾಡಿದವರು ಜೈನರು. ಜೈನರೂ ಕರ್ನಾಟಕದಲ್ಲಿ ಪ್ರಾಕೃತಬಿಟ್ಟು ಕನ್ನಡವನ್ನೇ ಬಳಸಿದರು. ಪ್ರಾಕೃತವೆಂದರೆ ‘ಜನಭಾಷೆ’ ಎಂಬರ್ಥ ಮೂಲದಲ್ಲಿದೆ. ಜೈನಧರ್ಮ ಎಲ್ಲೆಲ್ಲಿ ಹೋಯಿತೋ ಅಲ್ಲಿನ ಜನಭಾಷೆಯೇ ಪ್ರಾಕೃತವೆಂದೆನಿಸಿತು. ಏಳು, ಎಂಟನೇ ಶತಮಾನದ ಒಂದು ಶಾಸನದಲ್ಲಿ ‘ಪ್ರಾಕೃತ ಕನ್ನಡ’ ಎಂಬ ಉಲ್ಲೇಖ ಆಧಾರ ದೊರೆತಿದೆ. ನಾನು ಭಾಷಾವಿಜ್ಞಾನಿಯಲ್ಲ; ಪ್ರಾಕೃತ ಪಂಡಿತನಲ್ಲ ಆದರೆ ಇತಿಹಾಸಮಾತ್ರ ಹೇಳಬಲ್ಲೆ.

ಎಚ್.ಎಸ್.ಶಿವಪ್ರಕಾಶರು ಸೂಕ್ತವಾಗಿ ಗುರುತಿಸಿರುವಂತೆ “ಬ್ರಾಹ್ಮಣ ಮತ್ತು ಕ್ಷತ್ರಿಯರ ಸುತ್ತ ಹೆಣೆದಿದ್ದ ಇತಿಹಾಸವನ್ನು ಮಧ್ಯಮ ಮತ್ತು ಕೆಳಸ್ತರದವರೆಗೂ ವಿಸ್ತರಿಸಿ, ಸಮಾಜಕ್ಕಾಗಿ ಜೀವತೆತ್ತ ಗೌಡ, ಮಾದಿಗ, ಚರ್ಮಕಾರ ಇನ್ನಿತರ ಶೂದ್ರರಿಗೆ ಸ್ಥಾನಕಲ್ಪಿಸಿಕೊಟ್ಟಿದ್ದಾರೆ” ಎಂಬ ಮಾತು ಷ.ಶೆಟ್ಟರ್ ರವರ ಸಾಮಾಜಿಕ ಜವಾಬ್ದಾರಿಯನ್ನು ಒಳಗೊಂಡ ವಿದ್ವತ್ ಮಾದರಿಯೊಂದಕ್ಕೆ ಅಪೂರ್ವ ನಿದರ್ಶನವೆಂಬಂತಿದೆ.

ಪ್ರಶ್ನೆ: ಧರ್ಮ ಹಾಗೂ ಪ್ರಭುತ್ವದ ಸಂಕೀರ್ಣ ಸಂಬಂಧದ ಹಿನ್ನೆಲೆಯಲ್ಲಿ ಹಳೆಗನ್ನಡ ಸಾಹಿತ್ಯ ನಿಮಗಿಂದು ಹೇಗೆ ಕಾಣಿಸುತ್ತದೆ?

ಶೆಟ್ಟರ್: ಅಂದಿನ ಬಹುತೇಕ ಕವಿಗಳು ಪುರಾಣಕವಿಗಳನ್ನು ಅನುಕರಿಸಿ ಕಾವ್ಯರಚನೆ ಮಾಡಿರುತ್ತಾರೆ. ಉದಾ: ರಾಮಾಯಣ, ಮಹಾಭಾರತ, ಮಹಾಪುರಾಣ… ಹಾಗೆ ಮಾಡುವಾಗ ಅವರು ದೇಸಿಯನ್ನೂ ಒಳಗೊಳ್ಳುತ್ತಾರೆ. ವಿಕ್ರಮಾರ್ಜುನವಿಜಯದಲ್ಲಿ ಆಗುವಂತೆ ಸಮಕಾಲೀನ ವಿವರಗಳೂ ಅಲ್ಲಿ ಸಮಾವೇಶಗೊಳ್ಳುತ್ತವೆ. ಧರ್ಮ ಮತ್ತು ಕಾವ್ಯಧರ್ಮಗಳ ಸಮನ್ವಯ ಆ ಕಾಲಕ್ಕೆ ಬೇಕಾದ ಒಂದು ಅಗತ್ಯವಾಗಿತ್ತು. ಆದಿಪುರಾಣದಲ್ಲಿ ಧರ್ಮದ ತಾತ್ವಿಕತೆಯನ್ನು ಹೇಳಿದ್ದರೆ, ವಿಕ್ರಮಾರ್ಜುನ ವಿಜಯದಲ್ಲಿ ವೃತ್ತಿಧರ್ಮವೇ ಮುಖ್ಯ. ಜೈನನಾಗಿ ಧರ್ಮಕ್ಕೆ ಬದ್ಧನಾಗಿರುವ, ಕ್ಷತ್ರಿಯನಾಗಿ ವೃತ್ತಿಧರ್ಮ ನಿಭಾಯಿಸುವ ದ್ವಂದ್ವ ಆ ಕಾಲದಲ್ಲಿ ಇತ್ತು. ಕಾವ್ಯದಲ್ಲಿ ಶಾಂತಿಯನ್ನು ಪ್ರತಿಪಾದಿಸುವ ಚಾವುಂಡರಾಯ ಯುದ್ಧಕ್ಕೂ ಹೋಗುತ್ತಾನೆ. ಅಲ್ಲಿ ಆತ ಯುದ್ಧವೀರನಾಗೇ ಇರಬೇಕು. ಇಬ್ಬಗೆಯ ಧರ್ಮವನ್ನು ನಿರ್ವಹಿಸುವ ಅನಿವಾರ್ಯತೆ ಕಾಲದ್ದು.

ಪ್ರಶ್ನೆ: ಇತಿಹಾಸಕ್ಕೆ ಯುದ್ಧ, ಗೆಲುವು, ವಿಸ್ತರಣೆ ಮುಖ್ಯ. ಸಮುದಾಯದ ವಿಕಾಸ ಮುಖ್ಯವಾಗುವುದಿಲ್ಲ ಅಲ್ಲವಾ?

ಶೆಟ್ಟರ್: ಹೌದು. ರಾಜಕೀಯ ಇತಿಹಾಸವೇ ಮುಖ್ಯವಾಗಿ ನಮ್ಮಲ್ಲಿ ಬಿಂಬಿತವಾಗಿದೆ. ರಾಜ ಮಹಾರಾಜರ ಕೊಡುಗೆಗಳ ಕುರಿತು ಅಧ್ಯಯನ ಮಾಡುವಾಗ ದಾನ, ಧರ್ಮ ಹಾಗೂ ರಚನಾತ್ಮಕ ಕಾರ್ಯಗಳ ಉಲ್ಲೇಖ ಬರುತ್ತದೆ. ಅಶೋಕನ ಕಾಲದಲ್ಲಿಯೂ ಹಾಗೆ. ಧರ್ಮದ ಜೊತೆ ಯುದ್ಧವೂ ಇತ್ತು ಆದರೆ ಇದರಾಚೆಗಿನ ವಿಕಾಸ ಮುಖ್ಯ. ಅಂಥವನ್ನು ಚಾವುಂಡರಾಯನಲ್ಲಿ, ಅಶೋಕನಲ್ಲಿ ಕಾಣುತ್ತೇವೆ.

ಪ್ರಶ್ನೆ: ಸೋತವರ ಚರಿತ್ರೆ ಇದೆಯಾ?

ಶೆಟ್ಟರ್: ಅದನ್ನು ಹೇಳಲು ಆಸಕ್ತಿ ಇರುವುದಿಲ್ಲ ಅವಕಾಶವೂ ಇರುವುದಿಲ್ಲ. ಸೋತವರ ಇತಿಹಾಸವನ್ನು ಗೆದ್ದವರು ಹೇಳುತ್ತಿರುತ್ತಾರೆ. ಸಾಲುಗಳ ಮಧ್ಯದ ಮೌನದಲ್ಲಿ ಇರುವ ಇಂಥ ಚರಿತ್ರೆಯನ್ನು ಹುಡುಕಬೇಕು. ಹುಡುಕಿದಾಗ ಇತಿಹಾಸ ಗಟ್ಟಿಯಾಗುತ್ತದೆ.

ಪ್ರಶ್ನೆ: ಇತಿಹಾಸ ಮರೆಮಾಚಿದ್ದನ್ನು ಕೆಲವೊಮ್ಮೆ ಕಾವ್ಯಗಳಲ್ಲಿ ಕಾಣಲು ಸಾಧ್ಯ ಅಲ್ಲವಾ? ಉದಾ: ಜನ್ನ ಚಿತ್ರಿಸಿದ ಅಮೃತಮತಿಯಂಥ ಸವಾಲಿನ ಪಾತ್ರಗಳು ಸ್ಥಾಪಿತ ಚಿಂತನೆಗಳಾಚೆ ಬೇರೇನೋ ಹೇಳುತ್ತವೆ… ಧರ್ಮ, ಅರ್ಥ, ಕಾಮ, ಮೋಕ್ಷಗಳ ಹಂಬಲ ಬರೀ ಬ್ಲಾಕ್ ಆ್ಯಂಡ್ ವೈಟ್ ನಲ್ಲಿ ಚಿತ್ರಿಸಲಾಗುವುದಿಲ್ಲ.. ಅದು ಹೆಣ್ಣಿನ ಕಣ್ಣಿನಲ್ಲಿ ಬೇರೆಯೇ ಇರಬಹುದು.

ಶೆಟ್ಟರ್: ಮಹಾರಾಣಿಯರು ವೈಭವದ ಆಳದಲ್ಲಿ ನರಳುವುದು ಯಾರಿಗೂ ಕಾಣುವುದಿಲ್ಲ. ಅದು ದಾಖಲಾಗುವುದಿಲ್ಲ. ಇದು ಸೈಕಾಲಜಿಗೆ ಸಂಬಂಧಿಸಿದ್ದು. ಇನ್ನು ನೈತಿಕ-ಅನೈತಿಕ, ಸೌಂದರ್ಯ-ಕುರೂಪ ಎಂಬ ಮಾನದಂಡಗಳೂ ತಾತ್ವಿಕವಾಗಿ ಬೇರೆ, ಅನುಭವವಾಗಿ ಬೇರೆಯೇ ಇರಬಹುದು. ಯುದ್ಧದಲ್ಲಿ ಗೆಲ್ಲುವುದು ಅಂದರೆ ಸಂಪತ್ತನ್ನು ದೋಚುವುದೇ ಆಗಿತ್ತು. ಈ ಸಂಪತ್ತಿನಲ್ಲಿ ಹೆಣ್ಣೂ ಬರುತ್ತಾಳೆ! ಅದು ಹೆಣ್ಣಿನ ಮೇಲೆ ಸಾಧಿಸುವ ವಿಜಯವೂ ಹೌದು. ಮಾಸ್ತಿ ಕಲ್ಲುಗಳನ್ನು ಅವುಗಳಿಗೆ ಸಂಬಂಧಿಸಿದ ಕಥನಗಳೊಂದಿಗೆ ನೋಡಿದಾಗ ಭಿನ್ನ ಆಯಾಮಗಳು ದೊರೆಯಬಹುದು. ಧರ್ಮದ ಹೆಸರಿನಲ್ಲಿ ನಡೆದುಬಂದ ದೇವದಾಸಿ ಪದ್ಧತಿಯದೂ ಇದೇ ಕತೆ. ದೇವದಾಸಿ ಪದಕ್ಕೆ ಪರ್ಯಾಯವಾಗಿ ಪೋಟಿ, ಬೋಡಿ, ಸೂಳೆ, ಬಸದಿ ಎಂಬೆಲ್ಲ ಪದಗಳು ಶಾಸನಗಳಲ್ಲಿ ಸಿಗುತ್ತವೆ. ಆದರೆ ಆ ಪದಗಳಿಗೆ ಈಗಿರುವಂತೆ ಬೆಲೆವೆಣ್ಣು ಎಂಬರ್ಥವಿರಲಿಲ್ಲ. ಮುತ್ತು ಕಟ್ಟುವ ಸಂಪ್ರದಾಯದಲ್ಲೂ ದೇವರ ಮುತ್ತು, ಗರತಿಮುತ್ತು, ಸೂಳೆಮುತ್ತು ಎಂಬೆಲ್ಲ ವಿಧಗಳಿದ್ದವು. ಸೂಳೆಗೆ ಎಡಮೊಲೆಯ ಮೇಲೆ ಮುದ್ರೆಯೊತ್ತುವ ವಾಡಿಕೆ ಇತ್ತು. ಅವಳ ಮಗಳಿಗೆ ಮಗನಂತೆ ಆಸ್ತಿಯ ಅಧಿಕಾರವಿತ್ತು. ಇವೆಲ್ಲ ಅತ್ಯಂತ ಸಂಕೀರ್ಣ ಸಂಗತಿಗಳು.

ಧರ್ಮದ ವಿಚಾರದಲ್ಲಿ ಸ್ವತಂತ್ರವಾಗಿ ಉಳಿದ ಮಹಿಳೆಯರನ್ನು ಕರ್ನಾಟಕದಲ್ಲಿ ಕಾಣುತ್ತೇವೆ. ಮಾಚಿಕಬ್ಬೆ ಶೈವನನ್ನು ಮದುವೆಯಾದರೂ ತನ್ನ ಧರ್ಮವನ್ನು ಬದಲಿಸಲಿಲ್ಲ. ವೈಷ್ಣವ ದೊರೆ ವಿಷ್ಣುವರ್ಧನನನ್ನು ಮದುವೆಯಾದರೂ ತನ್ನ ಜೈನ ಅಸ್ಮಿತೆಯನ್ನೂ ಶಾಂತಲೆ ಉಳಿಸಿಕೊಳ್ಳುತ್ತಾಳೆ. ಜನ್ನನ ಯಶೋಧರ ಚರಿತೆಯಲ್ಲೂ ಇಂಥದೇ ಚಿತ್ರಣವಿದೆ. ಕಾವ್ಯಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯನ್ನು ನಿರ್ಮಾಣ ಮಾಡುವುದು ಸಾಧ್ಯ. ಪೂರ್ವಗ್ರಹೀತದಿಂದ ಹೊರಡದೇ ಕ್ರಿಟಿಕಲ್ ಆಗಿರುವುದು ಮುಖ್ಯ. ಕಾವ್ಯ – ಶಾಸನಗಳ ವಸ್ತುವಿಗೆ ಏನು ಹೋಲಿಕೆ – ವ್ಯತ್ಯಾಸಗಳಿವೆ ಎಂದು ಗಮನಿಸಿ ಇತಿಹಾಸ ಬರೆಯಬೇಕಾಗುತ್ತದೆ.

ಪ್ರಶ್ನೆ: ಕನ್ನಡ ಲಿಪಿ, ಭಾಷೆ, ಸಾಂಸ್ಕೃತಿಕ ಇತಿಹಾಸಗಳ ಕುರಿತು ನಿಮ್ಮ ಭಿನ್ನ ಜಾಡಿನ ಸಂಶೋಧನೆ ಕನ್ನಡ ಸಂಶೋಧನೆಗೆ ಕಸುವು ತುಂಬಿದೆ. ನಿಮ್ಮ ಈ ದಾರಿಯನ್ನು ಮುಂದುವರೆಸುವ ಬಗೆ ಹೇಗೆ?

ಶೆಟ್ಟರ್: ಸಂಶೋಧನೆಯಲ್ಲಿ ವಿಷಯವನ್ನು ನಿರ್ಧರಿಸುವುದು, ವಸ್ತುವನ್ನು ನಿಷ್ಕರ್ಷೆ ಮಾಡುವುದು ಮುಂತಾದ ಮೆಥಡಾಲಜಿಗೆ ಸಂಬಂಧಿಸಿದ ಸಂಗತಿಗಳು. ಮೆಥಡಾಲಜಿ ಕೂಡ ಒಂದು ವಿದ್ಯೆ. ಪಾಶ್ಚಿಮಾತ್ಯರು ಅದರಲ್ಲಿ ಶ್ರಮಿಸಿದ್ದಾರೆ, ಚರ್ಚೆಗಳು ನಡೆದಿವೆ. ಇತಿಹಾಸಕಾರರು, ಸಮಾಜಶಾಸ್ತ್ರಜ್ಞರು ಇದನ್ನು ಬಳಸಿಕೊಳ್ಳುತ್ತಾರೆ. ಕನ್ನಡ ಸಂಶೋಧನೆ ಹೆಚ್ಚುಪಾಲು ಆ ಚರ್ಚೆಗಳನ್ನು ಒಳಗೊಳ್ಳುವುದಿಲ್ಲ. ಮೊದಲೇ ಹೇಳಿದಂತೆ ತುಡುಗುದನದಂತೆ ನಾನು ಈ ಕ್ಷೇತ್ರಕ್ಕೆ ನುಗ್ಗಿದೆ. ಖಂಡಿತ ಈ ದಾರಿ ಮುಂದುವರೆಯುತ್ತದೆ.

ಪ್ರಶ್ನೆ: ಹಳೆಗನ್ನಡವನ್ನು (ಕಾವ್ಯ-ಶಾಸ್ತ್ರ) ವರ್ತಮಾನದಲ್ಲಿ ಓದುವ ಅಗತ್ಯವಿಲ್ಲ ಎಂದು ಭಾವಿಸುವ ಪ್ರವೃತ್ತಿ ಅನೇಕ ಯುವಜನರಲ್ಲಿದೆ. ಇಂಥ ಸಂದರ್ಭದಲ್ಲಿ ಹಳಗನ್ನಡವನ್ನೂ ಕ್ಲಾಸ್ ರೂಂಗಳಲ್ಲಿ ಬೋಧಿಸುವ ವಿಧಾನ ಹೇಗಿರಬೇಕು? ಮೇಷ್ಟ್ರುಗಳಿಗೆ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ ಏನು?

ಶೆಟ್ಟರ್: ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ. ಇಂಥ ಮಾನವೀಯ ಆಸಕ್ತಿಯ ಮೂಲಕ ಹೋಗದಿದ್ದರೆ ಅಕಾಡೆಮಿಕ್ ವಲಯದಲ್ಲಿ ಹಳೆಗಳನ್ನಡದ ಸೊಗಡು ಉಳಿಯುವುದಿಲ್ಲ.

ಸಂ: ಲಿಪಿಯಿಂದ ಆರಂಭಿಸಿ, ಸಾಹಿತ್ಯ, ಸಂಸ್ಕೃತಿ, ಸಮಾಜ, ಸಂಶೋಧನೆ, ರಸಾಸ್ವಾದನೆ.. ಹೀಗೆ ಹಲವು ನೆಲೆಗಳಲ್ಲಿ ತಮ್ಮ ಲಹರಿಯನ್ನು, ಗಂಭೀರ ಕಾಣ್ಕೆಗಳನ್ನು ಹಂಚಿಕೊಂಡ ಷ.ಶೆಟ್ಟರ್, ಧಾರವಾಡ ಪೇಡಾ ತಿನ್ನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಅವರ ಮೆಲು ಮಾತಿನ ವಿನಯಬೆರೆತ ವಿದ್ವತ್ತು ಕನ್ನಡದ ಭಾಗ್ಯ.