ಈ ಬಹುಮುಖಿ ಸಂವಾದದ ಮೂಲಕ ಶಿವಪ್ರಕಾಶರ ಕಾವ್ಯ ಕನ್ನಡ ಸಂಸ್ಕೃತಿಯ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಯ ಮುಖ್ಯಗುಣವಾದ ಬಹುರೂಪಿತನವನ್ನು ಆವಾಹಿಸಿಕೊಂಡಿದೆ. ಕನ್ನಡ ಸಂವೇದನೆಯ ಅಸಲೀ ಗುಣವೆಂದರೆ ಅದು ಆದಿಮ ಕಾಲದಿಂದಲೂ ಅಂದರೆ ಶಂಗಂ ಸಾಹಿತ್ಯ, ಕವಿರಾಜ ಮಾರ್ಗದ ಕಾಲದಿಂದಲೂ ಹಲವು ಭಾಷೆ-ಸಂಸ್ಕೃತಿ-ಮೌಲ್ಯಗಳನ್ನು ಪ್ರತಿನಿಧಿಸುವ ಮಾರ್ಗ. ದೇಸಿ ಲೌಕಿಕ ಸಾಮಾಜಿಕ ಅನುಭಾವಿಕ ಧಾರ್ಮಿಕ ತತ್ವಶಾಸ್ತ್ರೀಯ ಅನುಭವಗಳೆಲ್ಲವನ್ನೂ ಏಕೀಭವಿಸಿಕೊಳ್ಳುವ ಗುಣವನ್ನು ಹೊಂದಿದೆ. ಇದು ಭಾರತೀಯ ಸಂಸ್ಕೃತಿಯ ಮೂಲಭೂತಗುಣವೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಹಾಗಾಗಿ ಶಿವಪ್ರಕಾಶರ ಕಾವ್ಯ ಕೇವಲ ದೇಸೀ ಅನುಸಂಧಾನದ, ಚರಿತ್ರೆಯೊಂದಿಗೆ ಮುಖಾಮುಖಿಯಾಗುವ, ನಿರ್ವಸಹಾತೀಕರಣದ ಆಶಯದ ಕಾವ್ಯ ಎಂದು ಹೇಳಲು ಸಾಧ್ಯವಿಲ್ಲ.
ಎಚ್‌.ಎಸ್. ಶಿವಪ್ರಕಾಶ್‌ ಅವರ ಕಾವ್ಯದ ಕುರಿತು ಎಸ್‌. ಸಿರಾಜ್‌ ಅಹಮದ್‌ ಬರಹ

 

ಶಿವಪ್ರಕಾಶರ ಒಟ್ಟು ಬರಹಗಳನ್ನು ಕುರಿತು ಮಾತಾಡುವಾಗ ಎದುರಿಸಬೇಕಾದ ಕಷ್ಟ ಸವಾಲು ಸೋಲುಗಳನ್ನು ಅಕ್ಕನ ಭಾಷೆಯಲ್ಲಿಯೇ ಹೇಳುವುದು ಸರಿಯೇನೋ? ಅಕ್ಕ ಚೆನ್ನಮಲ್ಲಿಕಾರ್ಜುನನನ್ನು ಕುರಿತು ಹೇಳುವಾಗ “ಮಿತಿಮೀರಿ ಹೋಹನಾ ಬೆಂಬತ್ತಿ ಹಿಡಿವುದು” ಹೇಗೆಂಬ ಆತಂಕದಲ್ಲಿದ್ದಾಳೆ. ಹಾಗೆಯೇ ಮಿತಿಮೀರಿ ಹೋಹುವ ಕಾವ್ಯವನ್ನು ಅವರ ಬರಹಗಳನ್ನು ಅರ್ಥಮಾಡಿಕೊಳ್ಳಲು ಅವುಗಳ ಬೆಂಬತ್ತಿಹೋಗುವುದು ದೊಡ್ಡದೊಂದು ಸಾಹಸವೇ ಸರಿ. ಅಂಥ ಪ್ರಯತ್ನದಲ್ಲಿ ಅಲ್ಲಿ ಇರುವುದೇನು, ನಮಗೆ ಕಾಂಬುದೇನು ಎಂಬುದರ ಬಗ್ಗೆ ನನ್ನಂಥ ಅಲ್ಪಮತಿಗಳಿಗೆ ಖಚಿತವಾದ ತಿಳುವಳಿಕೆ ಇಲ್ಲದಿದ್ದರೂ ಬೆಂಬತ್ತಿ ಹೋಗುವುದು ಮಾತ್ರ ಸರಿ. ಅಂಥ ಪ್ರಯತ್ನದ ಭಾಗವಾಗಿ ಶಿವಪ್ರಕಾಶರ ಸಮಗ್ರ ಕಾವ್ಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಕೆಲವು ಮಾತುಗಳನ್ನು ಪ್ರಸ್ತಾಪಿಸಬಹುದು.

ಶಿವಪ್ರಕಾಶರ ಕಾವ್ಯದ ದೊಡ್ಡ ಗುಣವೆಂದರೆ ಅದು ನಿರಂತರವಾಗಿ ತನ್ನೊಳಗೆ ನಡೆಸುತ್ತಿರುವ ಬಹುಮುಖಿ ಸಂವಾದ. ಈ ಸಂವಾದಕ್ಕೆ ಬಹುಸಾಧ್ಯತೆಗಳ, ಬಹು ಆಯಾಮಗಳ ವಿಶಾಲವಾದ ಆವರಣವಿದೆ. ಅವರ ಕಾವ್ಯ ಕಾಲದೇಶ ಖಂಡಾಂತರಗಳನ್ನು ಮೀರಿದ, ಚರಿತ್ರೆ, ಸಂಸ್ಕೃತಿ ಪ್ರಭುತ್ವ, ಧರ್ಮ, ರಾಜಕೀಯ, ಅಧ್ಯಾತ್ಮ ನಾಗರಿಕತೆಗಳ ಎಲ್ಲೆಕಟ್ಟುಗಳನ್ನು, ಅವುಗಳ ಕಟ್ಟುಪಾಡುಗಳನ್ನು ಮೀರಿದ ನೆಲೆಯಲ್ಲಿ ಒಂದು ಮಹಾಸಂವಾದದಲ್ಲಿ ಅದು ತೊಡಗಿಕೊಂಡಿದೆ.

ಈ ಮಹಾಸಂವಾದದಲ್ಲಿ ಯೋಗಿಗಳು, ಸಿದ್ಧರು ನಾಥರು ಕಾಪಾಲಿಕರು ಸೂಫಿಗಳು, ಜೆನ್ ತಾವೋ ತುಕಾರಾಮ ಆಮ್ರಪಾಲಿ, ವಾಸವದತ್ತ, ಅಲ್ಲಮ ಅಕ್ಕ ಬಸವಾದಿಗಳಂಥ ಎಷ್ಟು ವೈವಿಧ್ಯಮಯ ವ್ಯಕ್ತಿಗಳು ಹಾದುಹೋಗುತ್ತಾರೆ ಎಂದರೆ ಆ ವ್ಯಕ್ತಿಗಳ ಸಂದರ್ಭ, ಸಾಮಾಜಿಕ ಪರಿಸರ ಗೊತ್ತಿಲ್ಲದೆ ಹೋದರೆ ಅವರ ಕಾವ್ಯದ ಜೊತೆ ಮುಖಾಮುಖಿಯೇ ಸಾಧ್ಯವಾಗದಷ್ಟು ದೊಡ್ಡ ವ್ಯಾಪ್ತಿ ಅದಕ್ಕಿದೆ.

ಈ ಬಹುಮುಖಿ ಸಂವಾದದ ಮೂಲಕ ಶಿವಪ್ರಕಾಶರ ಕಾವ್ಯ ಕನ್ನಡ ಸಂಸ್ಕೃತಿಯ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಯ ಮುಖ್ಯಗುಣವಾದ ಬಹುರೂಪಿತನವನ್ನು ಆವಾಹಿಸಿಕೊಂಡಿದೆ. ಕನ್ನಡ ಸಂವೇದನೆಯ ಅಸಲೀ ಗುಣವೆಂದರೆ ಅದು ಆದಿಮ ಕಾಲದಿಂದಲೂ ಅಂದರೆ ಶಂಗಂ ಸಾಹಿತ್ಯ, ಕವಿರಾಜ ಮಾರ್ಗದ ಕಾಲದಿಂದಲೂ ಹಲವು ಭಾಷೆ-ಸಂಸ್ಕೃತಿ-ಮೌಲ್ಯಗಳನ್ನು ಪ್ರತಿನಿಧಿಸುವ ಮಾರ್ಗ ದೇಸಿ ಲೌಕಿಕ ಸಾಮಾಜಿಕ ಅನುಭಾವಿಕ ಧಾರ್ಮಿಕ ತತ್ವಶಾಸ್ತ್ರೀಯ ಅನುಭವಗಳೆಲ್ಲವನ್ನೂ ಏಕೀಭವಿಸಿಕೊಳ್ಳುವ ಗುಣವನ್ನು ಹೊಂದಿದೆ. ಇದು ಭಾರತೀಯ ಸಂಸ್ಕೃತಿಯ ಮೂಲಭೂತಗುಣವೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಹಾಗಾಗಿ ಶಿವಪ್ರಕಾಶರ ಕಾವ್ಯ ಕೇವಲ ದೇಸೀ ಅನುಸಂಧಾನದ, ಚರಿತ್ರೆಯೊಂದಿಗೆ ಮುಖಾಮುಖಿಯಾಗುವ, ನಿರ್ವಸಹಾತೀಕರಣದ ಆಶಯದ ಕಾವ್ಯ ಎಂದು ಹೇಳಲು ಸಾಧ್ಯವಿಲ್ಲ.

ಶಿವಪ್ರಕಾಶರು ತಮ್ಮ ಕಾವ್ಯದುದ್ದಕ್ಕೂ ಕನ್ನಡ ಸಂಸ್ಕೃತಿಯ ಹಾಗೂ ಭಾರತೀಯ ಸಂಸ್ಕೃತಿಯ ಮೂಲಸೆಲೆಗಳನ್ನು ಪ್ರಪಂಚದ ಭಿನ್ನಧಾರೆಗಳು, ಚಿಂತನಾಕ್ರಮಗಳು, ಸಂಸ್ಕೃತಿಗಳ ಜೊತೆ ಕೂಡಿಸುವ(ಜೋಡಿಸುವ ಅಲ್ಲ) ಕೆಲಸದಲ್ಲಿ ತೊಡಗಿದ್ದಾರೆ. ಅವರ ಕಾವ್ಯ ನಿಜವಾದ ಅರ್ಥದಲ್ಲಿ ಕೂಡಲಸಂಗಮವಾಗಿರುವುದು ಈ ಬಗೆಯಲ್ಲಿಯೇ.

ಸಂಸ್ಕೃತಿಗಳ ಮುಖಾಮುಖಿಯ ವಿಶಾಲಭಿತ್ತಿಯನ್ನು ಹೊಂದಿರುವ ಅವರ ಕಾವ್ಯವನ್ನು ಹಲವರು ಅಪ್ಪಟ ದೇಸೀ ಹಿನ್ನೆಲೆಯ ಕಾವ್ಯ ಎಂದು ಅರ್ಥೈಸಿರುವುದು ಉಂಟು. ಶಿವಪ್ರಕಾಶರ ಕಾವ್ಯದ ದೇಸೀತನ ಕೇವಲ ಕನ್ನಡದ ಅಥವಾ ಭಾರತೀಯ ದೇಸೀ ಪರಂಪರೆಗಳಿಂದ ಮಾತ್ರ ರೂಪುಗೊಂಡಿರದೆ ಪ್ರಪಂಚದ ಹಲವು ಧಾರೆಗಳನ್ನು ಒಳಗೊಂಡಿರುವ ನಿರಂತರ ವಿಕಸನಶೀಲ ಸಂವೇದನೆಯಾಗಿದೆ. ದೇಸಿಯೆಂದರೆ ಪ್ರಾದೇಶಿಕವಲ್ಲ. ಶಿವಪ್ರಕಾಶರು ರೂಪಿಸುತ್ತಿರುವ ದೇಸೀಯತೆಗೆ ಒಂದು ಗೊತ್ತಾದ ಪರಿಧಿಯೇ ಇಲ್ಲ. ಸುತ್ತಲಿನ ವಿಶ್ವವನ್ನು ತನ್ನೊಳಗೆ ಆಹ್ವಾನಿಸಿಕೊಳ್ಳಬಲ್ಲ ಹಾಗೆಯೇ ವಿಶ್ವದ ನೆಲೆಯಿಂದ ತನ್ನ ದೇಸೀ ಮೂಲಕ್ಕೆ ಚಲಿಸಬಲ್ಲ ನಿರಂತರ ಚಲನಶೀಲ ಸ್ಥಿತಿಯೊಂದನ್ನು ಅವರ ಕಾವ್ಯದಲ್ಲಿ ಕಾಣಬಹುದು. ಇಂಥ ಚಲನಶೀಲತೆ ಸಂಸ್ಕೃತಿಗಳ ನಡುವಿನ ಶ್ರೇಣೀಕರಣಗಳನ್ನು, ಕೃತಕ ಗಡಿಗೆರೆಗಳನ್ನು ಅಳಿಸಿ ಹಾಕುವುದರಿಂದ ಶಿವಪ್ರಕಾಶರ ಕಾವ್ಯವನ್ನು ಓದುವುದೆಂದರೆ, ಬಹುರೂಪಿಯಾದ, ಸಂಕರಶೀಲವಾದ ಸಂಸ್ಕೃತಿಯ ಹಲವು ಮರ್ಮರಗಳಿಗೆ ಕಿವಿಯಾಂತು ನಡೆಯುವುದು ಎಂದಂತಾಗುತ್ತದೆ. ಹಾಗಾಗಿಯೇ ಶಿವಪ್ರಕಾಶರು ತಮ್ಮ ಕಾವ್ಯದ ಮೂಲಕ ಹಲವು ಸಂಸ್ಕೃತಿಗಳಿಗೆ ಮುಖಾಮುಖಿಯಾಗಿಸಿ ಕನ್ನಡಕ್ಕೆ ತಂದುಕೊಟ್ಟಿರುವ ಮಹಾಪ್ರಕಾಶ ಬಹಳ ದೊಡ್ಡದು.

ಅವರು ತಮ್ಮ ಮಾತುಕತೆ-ಚರ್ಚೆಯ ಸಂದರ್ಭಗಳಲ್ಲಿ ಕನ್ನಡದ ಸಂದರ್ಭ ಎಂದೊಡನೆ, ಇರುಸುಮುರಿಸಿನಿಂದ ಕನ್ನಡದ ಸಂದರ್ಭ ಕೇವಲ ಕನ್ನಡದ ಸಂದರ್ಭವಾಗಿರಲು ಹೇಗೆ ಸಾಧ್ಯ ಎಂದು ಜಗಳಕ್ಕಿಳಿಯುತ್ತಾರೆ. ಅವರಿಗೆ ಕನ್ನಡವೆಂಬುದು ಕೇವಲ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ನಿಗದಿತ ನಮೂನೆಗೆ ಸೀಮಿತವಾಗಿರದೆ ಅದು ನಿರಂತರವಾಗಿ ಹೊಸ ಹರಿವಿಗೆ, ಹೊಸ ಸೆಳವಿಗೆ ತೆರೆದುಕೊಂಡಿರುವ ಕೂಡುಸ್ಥಲವಾಗಿದೆ. ಆದ್ದರಿಂದಲೇ ಅವರ ಕಾವ್ಯದಲ್ಲಿ ಕನ್ನಡವೆಂಬುದು ಕೇವಲ ನೆಲಮೂಲ, ಪ್ರದೇಶಮೂಲ, ಭಾಷಿಕಮೂಲಗಳಿಂದ(‘ಮೂಲವ್ಯಾಧಿಗಳಿಂದ ಹೊರತಾದ’!!) ರೂಪುಗೊಂಡ ಆಕೃತಿಯಾಗದೆ, ಹಲವು ಹರಿವುಗಳ ಸಂಕರಸ್ಥಿತಿಯಾಗಿದೆ. ಇದನ್ನು ಗುರುತಿಸಿಯೋ ಏನೋ ಕಿರಂ ನಾಗರಾಜರು ‘ಮಿಲರೇಪ’ ಸಂಕಲನಕ್ಕೆ ಬರೆದ ಮಾತುಗಳಲ್ಲಿ ಶಿವಪ್ರಕಾಶರು ನಿರ್ದಿಷ್ಟ ಓದುಗವಲಯವನ್ನು ಉದ್ದೇಶಿಸಿ ಬರೆಯುವ ಕವಿಯಲ್ಲ ಎಂದು ಆಗಲೇ ಮುನ್ನುಡಿದಿದ್ದರು.

ಶಿವಪ್ರಕಾಶರು ತಮ್ಮ ಕಾವ್ಯದುದ್ದಕ್ಕೂ ಕನ್ನಡ ಸಂಸ್ಕೃತಿಯ ಹಾಗೂ ಭಾರತೀಯ ಸಂಸ್ಕೃತಿಯ ಮೂಲಸೆಲೆಗಳನ್ನು ಪ್ರಪಂಚದ ಭಿನ್ನಧಾರೆಗಳು, ಚಿಂತನಾಕ್ರಮಗಳು, ಸಂಸ್ಕೃತಿಗಳ ಜೊತೆ ಕೂಡಿಸುವ(ಜೋಡಿಸುವ ಅಲ್ಲ) ಕೆಲಸದಲ್ಲಿ ತೊಡಗಿದ್ದಾರೆ.

ಹಾಗೆ ನೋಡಿದರೆ, ಶಿವಪ್ರಕಾಶರ ಕಾವ್ಯಕ್ಕೆ ಬೇಂದ್ರೆ ಕಂಬಾರರ ಕಾವ್ಯಕ್ಕಿರುವ ಹಾಗೆ ನಿರ್ದಿಷ್ಟವಾದ ಈಡಿಯಂ ಇಲ್ಲ. ನಿರ್ದಿಷ್ಟ ಆಕೃತಿ ರೂಪ ರಚನಾ ಶೈಲಿಯೂ ಇಲ್ಲ. ಅದು ಕವಿತೆಯೋ, ತತ್ವಪದವೋ, ಹಾಡೋ, ಲಾವಣಿಯೋ, ನವ್ಯಕವಿತೆಯೋ, ವಚನವೋ, ಖಂಡಕಾವ್ಯವೋ ಏನು ಬೇಕಾದರೂ ಆಗಬಹುದು. ನಿರ್ದಿಷ್ಟ ಈಡಿಯಂ ಇಲ್ಲದ, ನಿರ್ದಿಷ್ಟ ಶೈಲಿ, ಕಾಲದೇಶಗಳಿಗೆ ಬದ್ಧವಾಗದ ಇಲ್ಲಿನ ಸಾಂಸ್ಕೃತಿಕ ಅನುಭವ ಎಷ್ಟು ಮುಕ್ತವಾಗಿದೆಯೆಂದರೆ ಅದು ಏಕಕಾಲಕ್ಕೆ ಚರಿತ್ರೆ, ಧರ್ಮ, ಸಂಸ್ಕೃತಿ, ಆಧ್ಯಾತ್ಮ, ರಾಜಕಾರಣ, ವರ್ತಮಾನ, ಜಾನಪದ ಮೊದಲಾದ ಎಲ್ಲ ಲೋಕಗಳನ್ನು ತನ್ನೊಳಗೆ ಮೈಯಾಂತು ರೂಪುಗೊಂಡಿದೆ.

ಗಮನಿಸಬೇಕಾದ ಇನ್ನೊಂದು ಸಂಗತಿಯೇನೆಂದರೆ, ಎಲ್ಲ ಕಾಲ ದೇಶಗಳನ್ನು ಆವಾಹಿಸಿಕೊಂಡು ರೂಪುಗೊಂಡಿರುವ ಶಿವಪ್ರಕಾಶರ ಕಾವ್ಯದ ಸಾಂಸ್ಕೃತಿಕ ಭಿತ್ತಿ ಸ್ವಯಾರ್ಜಿತವಾಗಿ ಬಂದದ್ದೇ ಹೊರತು ಬಳುವಳಿಯ ರೂಪದಲ್ಲಿ ಆಯಾಚಿತವಾಗಿ ಬಂದದ್ದಲ್ಲ. ಕನ್ನಡ ವಿಮರ್ಶೆ ಈಗಾಗಲೇ ಗುರುತಿಸಿರುವಂತೆ ಕಂಬಾರರು ಜಾನಪದವೇ ಮೈವೆತ್ತಿ ಬಂದಂತಿದ್ದರೂ ಸಂವೇದನೆಯಲ್ಲಿ ಆಧುನಿಕರೇ. ಹಾಗೆಯೇ ಶಿವಪ್ರಕಾಶರು ಹುಟ್ಟು ನಗರವಾಸಿಯಾಗಿಯೂ ಸಕಲಪುರಾತನರು. ತಮ್ಮ ‘ಅಣುಕ್ಷಣಚರಿತೆ’ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ‘ಎಲ್ಲವನ್ನೂ ಅಪನಂಬಿಕೆಯಿಂದ ನೋಡುವ ನವ್ಯದ ಪ್ರವೃತ್ತಿಯೇ ಬಹಳ ಭೀಕರವಾದದ್ದು. ನನ್ನ ಪೂರ್ವಜರು(ನವ್ಯದ ಕವಿಗಳು) ಎಲ್ಲ ಬಗೆಯ ಪವಿತ್ರತೆಯನ್ನು ತಿರಸ್ಕರಿಸಿದ್ದರು. ಅದಕ್ಕಾಗಿಯೇ ನಾನು ಹೊಸಬಗೆಯ ಹುಡುಕಾಟದಲ್ಲಿದ್ದೆ’ ಎನ್ನುತ್ತಾರೆ. ತನ್ನ ಕಾವ್ಯದ ಮೂಲಭಿತ್ತಿಯನ್ನು ಹಲವು ಮೂಲಗಳಿಂದ ರೂಪಿಸಿಕೊಂಡು ತನ್ನದೇ ಹಾದಿಯನ್ನು ಸೃಷ್ಟಿಸಿಕೊಂಡವರಲ್ಲಿ ಶಿವಪ್ರಕಾಶರು ಅಗ್ರಗಣ್ಯರು. ಬೇಂದ್ರೆ, ಕಂಬಾರ, ಸಿದ್ಧಲಿಂಗಯ್ಯರಂಥ ಕವಿಗಳಿಗಿಂತ ಬಹಳ ಭಿನ್ನರಾಗುವುದೂ ಇದೇ ಕಾರಣಕ್ಕಾಗಿಯೇ.

ಅವರ ಕಾವ್ಯವನ್ನು ಒಳಹೊಗುವ ಮೂಲಕವೇ ಈ ಮಾತುಗಳನ್ನು ಇನ್ನಷ್ಟು ವಿವರಿಸಬಹುದು. ಶಿವಪ್ರಕಾಶರ ಕಾವ್ಯ ತನ್ನ ಪ್ರಾಣಶಕ್ತಿಯನ್ನು ಸಕಲಚರಾಚರಗಳನ್ನು ಸರ್ವದೇವಾನುದೇವತೆಗಳನ್ನು ಪಂಚಭೂತಗಳನ್ನು ಮತ್ತೆ ಮತ್ತೆ ಆವಾಹಿಸಿಕೊಳ್ಳುವ ಮೂಲಕ ಊರ್ಜಿತವಾಗೊಳಿಸಿಕೊಳ್ಳುತ್ತದೆ. ಆದ್ದರಿಂದಲೇ ಅವರ ಕಾವ್ಯ ಯಾರ ಜೊತೆಗಾದರೂ ಮಾತುಕತೆಗೆ ಇಳಿಯಬಲ್ಲ, ಯಾವ ಕಾಲದೇಶದ ಚರಿತ್ರೆಯನ್ನೂ ಸಮಕಾಲೀನಗೊಳಿಸಿಕೊಳ್ಳಬಲ್ಲ ಕಾವ್ಯವಾಗಿದೆ. ಅವರ ‘ಕೆಂಪುಗುಲಾಬಮ್ಮ’, ‘ಅಂಚೆಪೆಟ್ಟಿಗೆ’, ‘ರತ್ನಶೆಟ್ಟಿ’ ಕವಿತೆಗಳನ್ನು ನೋಡಿದರೆ ಈ ಮಾತುಗಳು ಇನ್ನಷ್ಟು ಸ್ಪಷ್ಟವಾಗಬಹುದು. ಅವರ ಕಾವ್ಯ ಹಲವು ಕಾಲದೇಶಗಳ ವೈವಿಧ್ಯ, ಸಂಸ್ಕೃತಿಗಳ ಬಹುತ್ವ, ಅನೇಕ ಭಾಷಾರೂಪ, ಅರ್ಥ, ಲಯಗಳ ಸಾಧ್ಯತೆಗಳ ವ್ಯಾಪ್ತಿಗಳಿಂದ ಇಡಿಕಿರಿದಿದೆ.

ಶಿವಪ್ರಕಾಶರ ಕಾವ್ಯದಲ್ಲಿ ಕಾಣುವ ಸಂಸ್ಕೃತಿ, ಬಹುತ್ವಗಳನ್ನು ಕೇವಲ ಅವುಗಳ ವೈವಿಧ್ಯದ ಕಾರಣಕ್ಕಾಗಿಯೇ ಮಹತ್ವದ್ದಾಗಿದೆ ಎಂದು ಹೇಳಬೇಕಾಗಿಲ್ಲ. ಅವರ ಬರಹಗಳಲ್ಲಿ ಆರಂಭದಿಂದಲೂ ಮರುಬರವಣಿಗೆ, ಮರುರೂಪ ಎಂಬ ಮಾತುಗಳು ಕೇಳಿಬರುತ್ತವೆ. ಅವು ಇನ್ನೊಂದು ಬಗೆಯಲ್ಲಿ ಅವರ ಬರಹಗಳ ಆಶಯವನ್ನೂ ಸೂಚಿಸುವ ಪದಗಳೂ ಆಗಿವೆ. ಅವರು ಜ್ಞಾನದೇವನ ಜೀವನವನ್ನು ಕುರಿತು ಬರೆದ ಮರುಬರವಣಿಗೆ ಕವಿತೆಯಾಗಿದೆ. ಅವರ ನಾಗಾರ್ಜುನ, ಮರುಳಶಂಕರ ದೇವ, ಸಿಂಗಿರಾಜ ಸಂಪಾದನೆ, ನದಿಯನಾಡಿನಲ್ಲಿ ಅಥವಾ ಅವರ ಈಚಿನ ಖಂಡಕಾವ್ಯವಾದ ಕರಾಲ್ ಕವಿತೆಗಳನ್ನು ನೋಡಿದರೆ, ಅವರು ಚರಿತ್ರೆಯ ಭಿತ್ತಿಯನ್ನು, ಸಂಸ್ಕೃತಿಗಳ ಮೂಲಾಧಾರಗಳನ್ನು, ನಾಗರಿಕತೆಗಳ ಮೌಲ್ಯಗಳನ್ನು, ಪ್ರಭುತ್ವದ ಜೀವಪರ ಆಶಯಗಳನ್ನು ಮರುರೂಪಿಸುವ, ಮರುರಚಿಸುವ, ಪುನರುಜ್ಜೀವನದ ಹಂಬಲದ ಕವಿಯಾಗಿದ್ದಾರೆ. ವಿಶಾಲವಾದ ಅರ್ಥದಲ್ಲಿ ಕನ್ನಡದಲ್ಲಿ ಸಂಸ್ಕೃತಿಗಳನ್ನು ಪುನರುಜ್ಜೀವನಗೊಳಿಸುವ ಹಂಬಲದ Renaissance ಕವಿಯೆಂದರೆ ಅದು ಶಿವಪ್ರಕಾಶರೇ. ಅದಕ್ಕಾಗಿಯೇ ಒಸೆನ್‍ಯೆ ಟೆಸ್ ಒನುವ್ಯೆಮೆ ಎಂಬ ನೈಜೀರಿಯಾದ ಕವಿ ಶಿವಪ್ರಕಾಶರನ್ನು ಕುರಿತು “ತನ್ನ ಕರ್ತಾರ ಶಕ್ತಿಯ ಉದ್ಯೋಗದಲ್ಲಿ ಶಿವಪ್ರಕಾಶ ಕೇವಲ ಇನ್ನೊಬ್ಬ ಕವಿಯಲ್ಲ. ಬದಲಿಗೆ ಕಾಲಜ್ಞಾನಿ. ವಂಶಾವಳಿಗಳ ಇತಿಹಾಸಕಾರ, ಪುರಾಣಕರ್ತ ಮುತ್ಸದ್ದಿ. ಆತನ ವಾಣಿ ಇಡೀ ಮನುಕುಲದ ಆತ್ಮವನ್ನು ಆವಾಹಿಸಿ ಕರೆದು ತನ್ನ ದುರಂತದ ಹಾದಿಯನ್ನು ತೊರೆಯುವಂತೆ, ತನ್ನ ಅವಶೇಷದ ಬೂದಿಗಳಿಂದ ಮರುನಿರ್ಮಾಣಮಾಡುವಂತೆ ಪ್ರೇರೇಪಿಸುತ್ತದೆ- ವೈಯುಕ್ತಿಕ ಹಾಗೂ ಸಾರ್ವಜನಿಕ ಪುನರ್ಜನ್ಮಕ್ಕೋಸುಗ” ಎಂದು ಹೇಳಿರುವುದು ಬಹಳ ಅರ್ಥಪೂರ್ಣವಾಗಿದೆ.

ಸಂಸ್ಕೃತಿ, ಬಹುತ್ವ, ಚರಿತ್ರೆಗಳಾಚೆ ಶಿವಪ್ರಕಾಶ ಕಾವ್ಯದ ಮತ್ತೊಂದು ಮುಖ್ಯ ಆಶಯವೆಂದರೆ ಅದು ಏನನ್ನೂ ಕುರಿತು ಮಿಡಿದರೂ, ಯಾವ ಕಾಲದೇಶಗಳಲ್ಲಿ ನಿಂತು ನುಡಿದರೂ ಅದು ವರ್ತಮಾನಕ್ಕೆ ತಾಕುವುದೇ ಅದರ ಮೂಲಗುಣವಾಗಿದೆ. ಅವರ ‘ಪ್ರೀತಿಯ ಸ್ನೇಹಿತ ಜೋ’ಎಂಬ ಕವಿತೆಯಲ್ಲಿ ಅಮೆರಿಕಾದ ನ್ಯೂಯಾರ್ಕಿನಲ್ಲಿ ನಿಂತು ಅಲ್ಲಿನ ಅವಳಿಗೋಪುರಗಳು ನೆಲಕ್ಕುರುಳಿದ ಘಟನೆಯನ್ನು ವಿವರಿಸುತ್ತಾ ಅಮೆರಿಕಾದ ದುಸ್ವಪ್ನ ಸೌಧಗಳು ಉರುಳಿದ ಮೇಲೂ ನಾವು ಕನವರಿಸುತ್ತಿದ್ದ ಸಂಗತಿಗಳು ಯಾಕೆ ಸಾಕಾರಗೊಳ್ಳಲಿಲ್ಲ? ಅಲ್ಲಿ ನಿಂತು ‘ಯಾಕೆ ಈ ಲೋಕದಲ್ಲಿ ಪಾಪಕ್ಕೆ ಪಾಪವೇ ಪರಿಹಾರ?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ನ್ಯೂಯಾರ್ಕಿನ ಜೋಡಿಸೌಧಗಳು ಉರುಳಿದ ವರ್ತಮಾನದಲ್ಲಿ ನಿಂತು ಅವರು ಕೇಳುತ್ತಿರುವುದು ‘ಯಾಕೆ ಈ ಲೋಕದಲ್ಲಿ ಪಾಪಕ್ಕೆ ಪಾಪವೇ ಪರಿಹಾರ?’ ಎಂಬ ಅನಾದಿ ಕಾಲದ ಪ್ರಶ್ನೆಯನ್ನೇ. ಅದೇ ರೀತಿ ಅವರ ‘ಸಿಂಗಿರಾಜ ಕಲ್ಯಾಣ’ದಂತಹ ಸುಪ್ರಸಿದ್ಧ ಕವಿತೆಗಳಲ್ಲಿ ಇತಿಹಾಸದ ಅವಶೇಷಗಳ ನಡುವೆ ನಿಂತು ಕೇಳುತ್ತಿರುವುದು ವರ್ತಮಾನದ ಪ್ರಶ್ನೆಗಳನ್ನೇ. ‘ವಡೋದರದ ಬಸ್‌ಸ್ಟ್ಯಾಂಡಿನಲ್ಲ’ ಎಂಬ ಕವಿತೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮುದುಕನೊಬ್ಬನನ್ನು ನೋಡುತ್ತ ಅವನ ಗತವನ್ನೂ, ಅನಾಗತವನ್ನೂ ಅರ್ಥಮಾಡಿಕೊಳ್ಳಬೇಕಾಗಿರುವುದು ಈ ಗಲೀಜು ಬಸ್‌ಸ್ಟ್ಯಾಂಡಿನಲ್ಲೇ ಎನ್ನುತ್ತಾರೆ. ಇದನ್ನು ಇನ್ನೊಂದು ರೀತಿಯಲ್ಲಿ ಹೀಗೆ ಹೇಳಬಹುದು. ಅವರ ಕಾವ್ಯ ಮೃಣ್ಮಯವಾದದ್ದನ್ನೂ ಚಿನ್ಮಯವಾದದ್ದನ್ನೂ ಜೊತೆಜೊತೆಯಲ್ಲಿಯೇ ಧ್ಯಾನಿಸುತ್ತ ಬಂದಿದೆ. ಅವರ ‘ಚಿಹ್ನೆಗಳು’ ಎಂಬ ಪದ್ಯದಲ್ಲಿ ಕವಿಯಾದವನ ನಿಜಕ್ಕೂ ‘ಬರವಣಿಗೆಗೂ ಮೊದಲ ಇರುವಣಿಗೆಗಳು/ ಚಿಹ್ನೆಗಳಿಗೂ ಮೊದಲ ಚಿದ್ರೂಪಗಳನ್ನು’ ಹುಡುಕಬೇಕೆಂಬ ಆಶಯವನ್ನು ಸೂಚಿಸುತ್ತದೆ. ಅವರ ಕಾವ್ಯ ಒಂದು ಕಡೆ ಚಿನ್ಮಯವಾದ (ಶುದ್ಧವಾದ ಧಾರ್ಮಿಕ ಅರ್ಥದಲ್ಲಿ ಅಲ್ಲ) ಶುದ್ಧ ಜ್ಞಾನದ ಮೂಲಕ ಅಲೌಕಿಕದ, ಆಧ್ಯಾತ್ಮದ, ಅಗಮ್ಯದ ಅನ್ವೇಷಣೆಯಲ್ಲಿ ತೊಡಗಿರುವಾಗಲೇ ಇನ್ನೊಂದು ಕಡೆ ನಮ್ಮ ಬದುಕಿನ, ಸಂಸ್ಕೃತಿಗಳ, ಚರಿತ್ರೆಯ ಹಿಂದಿನ ಇರುವಣಿಗೆಯನ್ನು ಮೃಣ್ಮಯ ಸತ್ಯಗಳನ್ನು ಹುಡುಕುತ್ತಲೇ ಇರುತ್ತದೆ.

ಅವರ ಕಾವ್ಯ ಹೀಗೆ ಚಿನ್ಮಯ-ಮೃಣ್ಮಯ ಲೋಕಗಳನ್ನು, ವರ್ತಮಾನ-ಚರಿತ್ರೆಯ ಲೋಕಗಳನ್ನು, ಗತದ-ಅನಾಗತದ, ಗಮ್ಯ-ಅಗಮ್ಯವಾದ ಲೋಕಗಳನ್ನು ಬಿಡದೆ ತಡಕುತ್ತಿರುವುದರಿಂದಲೇ ಅವರ ಕಾವ್ಯ ಕೇವಲ ಅನುಭಾವಿ ಕಾವ್ಯವೋ, ಕೇವಲ ಸಾಂಸ್ಕೃತಿಕ ಕಾವ್ಯವೋ ಆಗುವ ಅಪಾಯದಿಂದ ತಪ್ಪಿಸಿಕೊಂಡಿದೆ. ಅವರ ಇಡೀ ಕಾವ್ಯದಲ್ಲಿ ಕಾಣುವ ಒಂದು ದೊಡ್ಡ epic quest ನ ಗುಣ ಇಂಥ ಹಲವು ಲೋಕಗಳ ಹುಡುಕಾಟದಿಂದಲೇ ಬಂದಿದೆ.

ಶಿವಪ್ರಕಾಶರ ಇಡೀ ಕಾವ್ಯದಲ್ಲಿ ಭಗ್ನಗೊಂಡ, ಬಾಯಾರಿದ, ರೋಗಗ್ರಸ್ತವಾದ, ಭಿಕಾರಿಯಾದ, ಬತ್ತಲಾದ ಮತ್ತು ಈಚಿನ ‘ನೀರಿನ ಜೋಗಿ’ ಕವಿತೆಗಳಲ್ಲಿರುವಂತೆ ಬಿಕರಿಯಾದ ಲೋಕವೊಂದಿದೆ. ಇಂಥ ಲೋಕವನ್ನು ಭೀಮವ್ವನ ಎದೆಹಾಲಿನಿಂದಲೋ, ಪ್ರಾಣಶಕ್ತಿಯ ಆವಾಹನೆಯಿಂದಲೋ, ನೀರಿನ ಜೋಗಿಯ ಜಲದ ಕಣ್ಣಿನಿಂದಲೋ ಮರುರೂಪಿಸುವ ಹಂಬಲವೂ ಕಾಣುತ್ತದೆ. ಇಂಥ ಸಂದರ್ಭದಲ್ಲಿ ಶಿವಪ್ರಕಾಶರ ಕಾವ್ಯ ಕೇವಲ ಕಾವ್ಯವಾಗದೆ ಪ್ರಾರ್ಥನೆಯಾಗುತ್ತದೆ. ಮಾತು ಮಂತ್ರವಾಗುತ್ತದೆ. ಹಾಗಾಗಿಯೇ ಅವರ ಕಾವ್ಯದಲ್ಲಿ ಮತ್ತೆ ನಾಗಲಿಂಗನ ಪ್ರಾರ್ಥನೆ, ಪ್ರಾಣಶಕ್ತಿ ದೇವಿಯ ಪ್ರಾರ್ಥನೆ, ಗೋರಕ್ಷ ತನ್ನ ಗುರು ಮತ್ಸ್ಯೇಂದ್ರನಿಗಾಗಿ ಮಾಡುವ ಪ್ರಾರ್ಥನೆ, ನೀರಿನ ಜೋಗಿಯ ಪ್ರಾರ್ಥನೆಯ ಹಲವು ರೂಪಗಳನ್ನು ಕಾಣಬಹುದು. ಆದಿಮ ಸಂಸ್ಕೃತಿಗಳಲ್ಲಿ ಮೂಲತಃ ಕಾವ್ಯವೂ ಪ್ರಾರ್ಥನೆಯೇ ಎಂಬ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಚರಿತ್ರೆ, ಪ್ರಭುತ್ವ, ವಸಾಹತುಶಾಹಿ, ಆಧುನಿಕತೆ, ಬಂಡವಾಳಶಾಹಿ ಮಾರುಕಟ್ಟೆಗಳಂಥ ಹಲವು ಬಗೆಯ ವ್ಯಾಧಿಗಳಿಗೆ ಸಿಕ್ಕು ಕಂಗಾಲಾಗಿರುವ ಸಮಾಜಕ್ಕೆ ಹಾಲೂಡಿ ಪೊರೆಯುವ ಚಿಕಿತ್ಸಕ ಗುಣವನ್ನು ಶಿವಪ್ರಕಾಶರ ಕಾವ್ಯ ನಿರಂತರವಾಗಿ ಕಾಣಿಸುತ್ತದೆ.

ಕೊನೆಯದಾಗಿ ಸಾವಿರಾರು ಪುಟಗಳಿಗೂ ಹೆಚ್ಚಾಗಿರುವ ಶಿವಪ್ರಕಾಶರ ಕಾವ್ಯವನ್ನು ಓದುತ್ತಿದ್ದರೆ ಸಂಸ್ಕೃತಿಗಳ ಸಾತತ್ಯದ, ಸಾಂಗತ್ಯದ ಗುಣವೊಂದು ಎದ್ದು ಕಾಣುತ್ತದೆ. ಪ್ರಕೃತಿಯ ಯಾವುದೇ ಜೀವಜಂತುವಿನೊಂದಿಗೆ, ಸಮಾಜದ ಯಾವುದೇ ವ್ಯಕ್ತಿ ಸಂಗತಿಯೊಂದಿಗೆ ತನ್ಮಯವಾದ ಅರ್ಥಪೂರ್ಣ ಸಂಬಂಧ ಸಾಧ್ಯವಾಗದೇ ಇರುವ ದಿಕ್ಕೆಟ್ಟ ಸ್ಥಿತಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಸರಕು ಸಂಸ್ಕೃತಿ ಸೃಷ್ಟಿಸುತ್ತಿರುವ ಕ್ಷಣಭಂಗುರ ಬದುಕಿನಲ್ಲಿ, ಬಂಡವಾಳಶಾಹಿ ಯುಗ ಸೃಷ್ಟಿಸುತ್ತಿರುವ ಮೇರೆ ಮೀರಿದ ಕ್ರೌರ್ಯದ ಇಂದಿನ ಕಾಲದಲ್ಲಿ ಸಂಸ್ಕೃತಿಗಳ ಸಾಂಗತ್ಯಕ್ಕೆ, ಸಮುದಾಯಗಳ ಸಹಜೀವನಕ್ಕೆ ಬಹುದೊಡ್ಡ ಅಪಾಯ ಎದುರಾಗಿದೆ. ಇಂಥ ಸಂದರ್ಭದಲ್ಲಿ ಸಾಹಿತ್ಯ, ಕಾವ್ಯ ನಿರ್ವಹಿಸಬಹುದಾದ ಜವಾಬ್ದಾರಿ ಏನು? ಕಳಚಿಹೋದ ಬದುಕಿನ ಸುಮದಾಯದ ಸಂಸ್ಕೃತಿಗಳ ನಂಬಿಕೆಗಳ ಕೊಂಡಿಗಳನ್ನು ಮರಳಿ ಜೋಡಿಸಿಕೊಡುವುದು. ಶಿವಪ್ರಕಾಶರ ಕಾವ್ಯ ನಮಗೆ ತಿಳಿಸಿಕೊಡುತ್ತಿರುವುದು ಇದನ್ನೇ.