ಕತೆಯನ್ನು ಬರೆದು ಮುಗಿಸಿದ ತಕ್ಷಣ ಅವನು ‘ಕೀರಿ’ಗೆ ಫೋನಾಯಿಸಿದ. ಬಹುಶಃ ಕತೆಯನ್ನು ಅವಳು ಕೇಳಲು ಉತ್ಸುಕಳಾಗಿರಬಹುದು. ಹಾಗೆ ನೋಡಿದರೆ ಕತೆ ಈ ರೀತಿ ತಿರುವು ಪಡೆಯಲು ಒಂದು ರೀತಿಯಲ್ಲಿ ಅವಳೇ ಪ್ರೇರಣೆಯಾಗಿದ್ದಳು. ಆದರೆ ಅವನ ಕರೆ ಅವಳಿಗೆ ತಲುಪಲಿಲ್ಲ. ಪ್ರತಿ ಬಾರಿ ಕರೆ ಮಾಡಿದಾಗಲೂ “ಈ ನಂಬರ್ ಅಸ್ತಿತ್ವದಲ್ಲಿಲ್ಲ. ದಯವಿಟ್ಟು ಮತ್ತೊಮ್ಮೆ ಪರೀಕ್ಷಿಸಿ…” ಎನ್ನುವ ಮುದ್ರಿತ ಧ್ವನಿ ಕೇಳಿಸುತ್ತಿತ್ತು. ಜುಂಪೇ ಮತ್ತೆ ಮತ್ತೆ ಪ್ರಯತ್ನಿಸಿದ. ಬಹುಶಃ ಅವಳ ಫೋನಿನಲ್ಲಿ ಏನೋ ತಾಂತ್ರಿಕ ದೋಷವಿರಬೇಕು ಎಂದು ಅವನು ಭಾವಿಸಿದ.
ಸಚೇತನ ಭಟ್ ಅನುವಾದಿಸಿದ ಹರುಕಿ ಮುರಕಮಿ ಬರೆದ ಜಪಾನಿ ಕಥೆ ‘ಪ್ರತಿದಿನ ಚಲಿಸುತ್ತಿದ್ದ ಕಿಡ್ನಿಯಾಕಾರದ ಕಲ್ಲು’

 

ಜುಂಪೇಯ ಅಪ್ಪ ಆ ಮಾತನ್ನು ಸ್ಪಷ್ಟವಾಗಿ ನುಡಿದಾಗ ಜುಂಪೆ ಹದಿನಾರು ವರ್ಷದವನಾಗಿದ್ದ. ಅವರಿಬ್ಬರಲ್ಲಿಯೂ ಒಂದೇ ರಕ್ತ ಪ್ರವಹಿಸುತ್ತಿದ್ದರೂ ಪರಸ್ಪರರು ಒಟ್ಟಿಗೆ ಕುಳಿತು ಮನಸ್ಸು ಬಿಚ್ಚಿ ಮುಕ್ತವಾಗಿ ಮಾತನಾಡುವಷ್ಟು ಆತ್ಮೀಯತೆ ಅವರಲ್ಲಿ ಇರಲಿಲ್ಲ. ಇಷ್ಟಕ್ಕೂ ಜುಂಪೇಯ ಅಪ್ಪ ಯಾವತ್ತಿಗೂ ತನ್ನ ಜೀವನದ ಅನುಭವಗಳನ್ನು ಮಗನಿಗೆ ಹೇಳಿದವನಲ್ಲ. ಹೀಗಾಗಿಯೇ ಅವತ್ತು ಅಪ್ಪ ಯಾವುದೋ ಸಂಭಾಷಣೆಯ ಮಧ್ಯೆ ಇದ್ದಕ್ಕಿದ್ದ ಹಾಗೆ ಹೇಳಿದ ಮಾತುಗಳು ಇವತ್ತಿಗೂ ಜುಂಪೇಗೆ ಸ್ಪಷ್ಟವಾಗಿ ಜ್ಞಾಪಕದಲ್ಲಿದೆ.

“ಒಬ್ಬ ಪುರುಷನ ಜೀವನದಲ್ಲಿ ಬಂದು ಹೋಗುವ ಮಹಿಳೆಯರಲ್ಲಿ, ಕೇವಲ ಮೂರು ಮಹಿಳೆಯರು ಮಾತ್ರ ಅವನ ಬದುಕಿಗೊಂದು ನಿಜವಾದ ಅರ್ಥವನ್ನು ಕಲ್ಪಿಸುತ್ತಾರೆ. ಮೂರು ಮಾತ್ರ. ಅದಕ್ಕಿಂತ ಹೆಚ್ಚಿಲ್ಲ, ಕಡಿಮೆಯಿಲ್ಲ.” ಅಪ್ಪ ಹೇಳಿದ್ದ ಅಥವಾ ಘೋಷಿಸಿದ್ದ. ಅಪ್ಪ ಯಾವುದೇ ಉದ್ವೇಗವಿಲ್ಲದೆ ಅದೆಷ್ಟು ಖಚಿತವಾಗಿ ಈ ಮಾತನ್ನು ಆಡಿದ್ದನೆಂದರೆ, ಭೂಮಿ ಸೂರ್ಯನ ಸುತ್ತ ಸುತ್ತುವದು ಹೇಗೆ ಸಾರ್ವಕಾಲಿಕ ಸತ್ಯವೋ ಹಾಗೆಯೆ ಅಪ್ಪನ ಮಾತು ಸಹ ಅಷ್ಟೇ ಸತ್ಯವೆನಿಸಿತ್ತು. ಯಾವುದೋ ಸಂಭಾಷಣೆಯ ನಡುವೆ ಅನಿರೀಕ್ಷಿತವಾಗಿ ಅಪ್ಪ ಹೇಳಿದ್ದ ಈ ಮಾತಿಗೆ ಪ್ರತಿಕ್ರಿಯಿಸುವದು ಹೇಗೆಂದು ಗೊತ್ತಾಗದೆ ಅವನು ಮೌನವಾಗಿ ತಲೆಯಾಡಿಸಿದ್ದ. “ಬಹುಶಃ ಮುಂದೆ ನಿನ್ನ ಜೀವನದಲ್ಲಿ ಬಹಳಷ್ಟು ಹುಡುಗಿಯರು ಬಂದು ಹೋಗಬಹುದು…” ಅಪ್ಪ ಮುಂದುವರೆಸಿದ್ದ.. “ಆದರೆ ಒಂದು ಮಾತು ನೆನಪಿನಲ್ಲಿರಲಿ, ನಿನಗೆ ತಾಳೆಯಾಗದ ಹುಡುಗಿಯೊಟ್ಟಿಗೆ ಸಮಯ ಕಳೆಯುವದು ವ್ಯರ್ಥ…”

ಅಪ್ಪ ಹೇಳಿದ್ದ ಆ ಮಾತು ಜುಂಪೆಯ ಮನಸ್ಸಿನಲ್ಲಿ ಹಲವಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು . “ಅಪ್ಪನ ಬದುಕಿನಲ್ಲಿ ಈಗಾಗಲೇ ಆ ಮೂರೂ ಮಹಿಳೆಯರು ಬಂದು ಹೋಗಿದ್ದಾರೆಯೇ? ಅಮ್ಮ ಆ ಮೂರು ಜನರಲ್ಲಿ ಒಬ್ಬಳೇ? ಹೌದು ಎಂದಾಗಿದ್ದರೆ ಉಳಿದ ಇಬ್ಬರು ಯಾರಿರಬಹುದು?” ಇವೆಲ್ಲ ಸಲಿಗೆಯಿಲ್ಲದ ಅಪ್ಪನಲ್ಲಿ ಯಾವತ್ತಿಗೂ ಕೇಳದ, ಉತ್ತರ ಸಿಗದ, ಪ್ರಶ್ನೆಗಳಾಗಿಯೇ ಕೊನೆಯವರೆಗೂ ಉಳಿದುಕೊಂಡಿದ್ದವು.

ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಜುಂಪೇ ಮನೆಯನ್ನು ಬಿಟ್ಟು ಮುಂದಿನ ಓದಿಗೆ ಟೋಕಿಯೋ ವಿಶ್ವವಿದ್ಯಾಲಯಕ್ಕೆ ಸೇರಿದ್ದ. ಅಲ್ಲಿ ಹುಡುಗಿಯೊಬ್ಬಳೊಟ್ಟಿಗೆ ಸಂಬಂಧ ಬೆಳೆದಾಗ, ತನ್ನ ಜೀವನಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಬಲ್ಲ ಆ ಮೂರು ಹುಡುಗಿಯರಲ್ಲಿ ಇವಳೊಬ್ಬಳು ಎಂದು ಅವನಿಗೆ ಅನಿಸಿತ್ತು. ಅವಳನ್ನು ನೋಡಿದಾಗಲೇ ಅವನಿಗೆ ಈ ವಿಷಯ ಖಚಿತವಾಗಿತ್ತು. ಆದರೆ ಜುಂಪೇ ತನ್ನ ಮನಸ್ಸಿನಲ್ಲಿದ್ದ ಭಾವನೆಗಳಿಗೆ ಶಬ್ದದ ರೂಪವನ್ನು ನೀಡಿ ಅವಳ ಮುಂದೆ ನಿವೇದಿಸುವದರೊಳಗಾಗಿ, ಅವಳು ಅವನ ಆಪ್ತ ಸ್ನೇಹಿತನೊಟ್ಟಿಗೆ ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದಳು. ಹೀಗಾಗಿ ಜುಂಪೇ ಬಲವಂತದಿಂದ ಅವಳನ್ನು ತನ್ನ ಜೀವನದ ಭಾಗವಾಗಿ “ನಿಜವಾದ ಅರ್ಥವನ್ನು ಕಲ್ಪಿಸಬಲ್ಲ” ಆ ಮೂರು ಜನ ಹುಡುಗಿಯರ ಯಾದಿಯಿಂದ ಹೊರಹಾಕಬೇಕಾಯಿತು. ಜುಂಪೇ ಹೃದಯವನ್ನು ಕಲ್ಲು ಮಾಡಿಕೊಂಡು ತನ್ನ ಮನಸ್ಸಿನಿಂದ ಅವಳನ್ನು ಅಳಿಸಿ ಹಾಕಿದ್ದ. ಇದಾದ ಮೇಲೆ ಅಪ್ಪನ ಸೂತ್ರದ ಪ್ರಕಾರ ಅವನ ಜೀವನಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಬಲ್ಲ ಹುಡುಗಿಯರ ಸಂಖ್ಯೆ ಮೂರರಿಂದ ಎರಡಕ್ಕೆ ಇಳಿದಿತ್ತು.

ಪ್ರತಿ ಬಾರಿ ಹುಡುಗಿಯೊಬ್ಬಳನ್ನು ಭೇಟಿಯಾದಾಗಲೆಲ್ಲ ಜುಂಪೇಯ ಮನಸ್ಸಿನಲ್ಲಿ ಮೂಡುತ್ತಿದ್ದ ಪ್ರಶ್ನೆಯೇನೆಂದರೆ “ಇವಳು ನನ್ನ ಜೀವನಕ್ಕೆ ನೈಜ ಅರ್ಥವನ್ನು ಕೊಡಬಲ್ಲಳೇ?”. ಈ ಪ್ರಶ್ನೆ ಅವನಲ್ಲಿ ಅಸಾಧ್ಯ ಸಂದಿಗ್ಧತೆಯನ್ನು ಹುಟ್ಟುಹಾಕುತಿತ್ತು. ಮುಂದೊಂದು ದಿನ ತನ್ನ ಬದುಕಿಗೆ ಅರ್ಥ ಕೊಡಬಲ್ಲ ಹುಡುಗಿಯೊಬ್ಬಳು ಸಿಕ್ಕೇ ಸಿಗುತ್ತಾಳೆ ಎನ್ನುವ ಭರವಸೆಯಿದ್ದರೂ, ಈಗಾಗಲೇ ಒಬ್ಬಳನ್ನು ಕಳೆದುಕೊಂಡಿದ್ದರಿಂದ ಉಳಿದ ಇಬ್ಬರನ್ನು ಪತ್ತೆ ಮಾಡುವದರ ಬಗ್ಗೆ ಅವನು ಅತ್ಯ೦ತ ಜಾಗರೂಕನಾಗಿದ್ದ. ಈಗಾಗಲೇ ಒಂದು ಸಲ ತನ್ನ ಪ್ರಯತ್ನದಲ್ಲಿ ವಿಫಲನಾಗಿದ್ದರಿಂದ ಇನ್ನಿಬ್ಬರನ್ನು ಹುಡುಕಿ, ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಅವರಿಗೆ ತನ್ನ ಭಾವನೆಗಳನ್ನು ನಿವೇದಿಸುವ ತನ್ನ ಸಾಮರ್ಥ್ಯದ ಬಗೆಗೆ ಜುಂಪೇಗೆ ಆತ್ಮವಿಶ್ವಾಸ ಕಡಿಮೆಯಾಗತೊಡಗಿತ್ತು.

“ಬಹುಶ: ನಾನು ಜೀವನದಲ್ಲಿ ಅಷ್ಟೇನೂ ಮಹತ್ವವಿರದ ಸಂಗತಿಗಳನ್ನೆಲ್ಲ ಸರಿಯಾಗಿ ನಿಭಾಯಿಸಿಕೊಂಡು ಹೋದರೂ, ಯಾವುದು ಅತ್ಯಂತ ಮಹತ್ವದ್ದೋ ಅದರಲ್ಲಿ ಸೋಲುತ್ತೇನೆ” ಎನ್ನುವ ಯೋಚನೆ ಆಗಾಗ ಸುಳಿದು ಕಳವಳಗೊಳ್ಳುತ್ತಿದ್ದ.

ಪ್ರತಿ ಹೊಸ ಸಂಬಂಧದಲ್ಲೂ ಜುಂಪೆ ತನ್ನಿಂದ ತಾನೇ ಸಂಬಂಧ ಮುರಿದುಬೀಳಬಹುದಾದ ಯಾವುದೋ ಒಂದು ದಿನಕ್ಕಾಗಿ ಕಾದು ಕುಳಿತಿರುತ್ತಿದ್ದ. ಸಬಂಧವೊಂದನ್ನು ಮುರಿದುಕೊಳ್ಳುವದು ಜುಂಪೆಗೆ ಅಂತಹ ಕಠಿಣ ವಿಷಯವಾಗಿರಲಿಲ್ಲ. ಜಗಳ, ಕೂಗಾಟ, ಕಿರುಚಾಟ ಯಾವುದೊಂದೂ ಇಲ್ಲದೆ ನಯವಾಗಿ ಜಾರಿಕೊಳ್ಳುವದು ಅವನಿಗೆ ಕರಗತವಾಗಿತ್ತು. ಹಾಗೆ ನೋಡಿದರೆ ಮುಂದೊಂದು ದಿನ ಜಗಳ ಕಾಯಬಹುದೆಂದು ಅನಿಸುವ ಹುಡುಗಿಯೊಟ್ಟಿಗೆ ಅವನು ಯಾವತ್ತೂ ಸಂಬಂಧ ಬೆಳೆಸುತ್ತಿರಲಿಲ್ಲ. ತನ್ನಲ್ಲಿ ಕರಗತವಾಗಿದ್ದ ಈ ಕೌಶಲ್ಯ ತನಗೆ ಜನ್ಮದತ್ತವಾಗಿ ಬಂದಿದ್ದೆ ಅಥವಾ ತಾನು ಬೆಳೆದ ವಾತಾರಣದ ಪ್ರಭಾವವೇ ಎನ್ನುವದರ ಬಗ್ಗೆ ಅವನಿಗೆ ಯಾವಾಗಲೂ ಸಂಶಯವಿತ್ತು. ವಾತಾವರಣವೇ ಕಾರಣವೆಂದಾದರೆ ಅದಕ್ಕೆ ಅವನಪ್ಪನ ಮಾತುಗಳು ಅವನ ತಲೆಯಲ್ಲಿ ಅಚ್ಚಳಿಯದೆ ಉಳಿದಿದ್ದೆ ಕಾರಣ.

ಕಾಲೇಜಿನ ಕೊನೆಯ ವರ್ಷದಲ್ಲಿದ್ದಾಗ ಜು೦ಪೇ ಮತ್ತವನ ಅಪ್ಪನಿಗಾದ ಭಯಂಕರ ಜಗಳದ ನಂತರ, ಅವನು ಅಪ್ಪನೊಟ್ಟಿಗಿನ ಸಂಪರ್ಕವನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು ಕೊನೆಗೆ ಸಂಪೂರ್ಣವಾಗಿ ಕಡಿದುಕೊಂಡಿದ್ದ. ಅಪ್ಪನ ಜೊತೆಗಿನ ಸಂಪರ್ಕ ಪೂರ್ತಿಯಾಗಿ ಮುಚ್ಚಿಹೋಗಿದ್ದರೂ, ಅಪ್ಪ ಹೇಳಿದ್ದ ‘ಮೂರು ಮಹಿಳೆಯರ’ ಸಿದ್ಧಾಂತ ಮಾತ್ರ ಅವನ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿತ್ತು. ಕೆಲವೊಮ್ಮೆ ತಾನು ಸಲಿಂಗಕಾಮಿಯಾದರೂ ಆಗಿದಿದ್ದರೆ ಈ ಸಿದ್ಧಾಂತದಿಂದ ಮುಕ್ತಿ ಸಿಗುತ್ತಿತ್ತೇನೋ ಎಂದು ತನ್ನಷ್ಟಕ್ಕೆ ತಾನೇ ಕುಚೋದ್ಯ ಮಾಡಿಕೊಂಡಿದ್ದು ಇದೆ. ಒಳಿತೋ ಕೇಡುಕೊ ಒಟ್ಟಿನಲ್ಲಿ ಅವನ ಲೈ೦ಗಿಕ ಆಸಕ್ತಿ ಹೆಣ್ಣು ಮಾತ್ರವಾಗಿತ್ತು.

ಜುಂಪೇ ಭೇಟಿಯಾದ ಮುಂದಿನ ಮಹಿಳೆ ಅವನಿಗಿಂತ ವಯಸ್ಸಿನಲ್ಲಿ ದೊಡ್ಡವಳು ಎನ್ನುವದನ್ನು ತಿಳಿಯಲು ಬಹಳಷ್ಟು ದಿನ ಬೇಕಾಗಲಿಲ್ಲ. ಅವಳಿಗೆ ಮೂವತ್ತಾರು. ಅವನಿಗೆ ಮೂವತ್ತೆರಡು. ಜುಂಪೇಯ ಪರಿಚಯದವರೊಬ್ಬರು ಟೋಕಿಯೋದ ಮುಖ್ಯ ಬೀದಿಯೊಂದರಲ್ಲಿ ಫ್ರೆಂಚ್ ಹೋಟೆಲ್ ವೊಂದನ್ನು ತೆರೆದಿದ್ದರು ಹಾಗೂ ಅದರ ಪ್ರಾರಂಭೋತ್ಸವದ ಔತಣಕೂಟಕ್ಕೆ ಜುಂಪೇಯನ್ನು ಆಹ್ವಾನಿಸಿದ್ದರು. ಔತಣಕೂಟದಲ್ಲಿ ಜು೦ಪೇ ಹಳೆಯ ಮಿತ್ರನೊಬ್ಬನನ್ನು ಭೇಟಿ ಮಾಡುವವನಿದ್ದ. ಆದರೆ ಕೊನೆಯ ಕ್ಷಣದಲ್ಲಿ ಅವನ ಮಿತ್ರ ಕೈಕೊಟ್ಟಿದ್ದರಿಂದ ಔತಣಕೂಟದಲ್ಲಿ ಜು೦ಪೇ ಏಕಾಂಗಿಯಾಗಿ ಮೂಲೆಯಲ್ಲಿ ನಿಂತು ವೈನನ್ನು ಹೀರುವದು ಅನಿವಾರ್ಯವಾಯಿತು. ಸ್ವಲ್ಪ ಸಮಯದ ನಂತರ ಆತಿಥೇಯರಿಗೆ ಹಾರೈಸಿ ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ, ಕೈಯಲ್ಲಿ ಕಾಕ್ ಟೈಲ್ ಹಿಡಿದ ನೀಳಕಾಯದ ಮಹಿಳೆಯೊಬ್ಬಳು ಅವನನ್ನು ಸಮೀಪಿಸಿದಳು. ಅವಳನ್ನು ನೋಡಿದಾಗ ಅವನ ಮನಸ್ಸಿನಲ್ಲಿ ಸುಳಿದ ಮೊದಲ ವಿಚಾರವೆಂದರೆ “ಈ ಹೆಂಗಸಿನದು ಚಿತ್ತಾಕರ್ಷಕ ಭಂಗಿ”

“ಅಲ್ಲಿ ಮಾತನಾಡುತ್ತಿದ್ದವರಾರೋ ನೀವೊಬ್ಬ ಬರಹಗಾರರೆಂದು ಹೇಳಿದರು. ನಿಜವೇ?” ಅವಳು ಟೇಬಲಿನ ಮೇಲೆ ಕೈಯನ್ನು ಇಡುತ್ತ ಕೇಳಿದಳು.

“ಹ್ಮ್! ಒಂದರ್ಥದಲ್ಲಿ ಹೌದು” ಜುಂಪೆ ಉತ್ತರಿಸಿದ.

“ಒಂದರ್ಥದಲ್ಲಿ ಬರಹಗಾರ”
ಜುಂಪೆ ತಲೆಯಾಡಿಸಿದ.

“ಎಷ್ಟು ಪುಸ್ತಕಗಳು ಪ್ರಕಟವಾಗಿವೆ?”

“ಎರಡು ಕಥಾ ಸಂಕಲನಗಳು. ಒಂದು ಅನುವಾದಿತ ಪುಸ್ತಕ. ಹೇಳಿಕೊಳ್ಳುವಂತಹ ಜನಪ್ರಿಯ ಪುಸ್ತಕಗಳೇನು ಅಲ್ಲ.”
ಅವಳು ಒಂದು ಕ್ಷಣ ಅಡಿಯಿಂದ ಮುಡಿಯವರೆಗೆ ಅವನನ್ನು ದಿಟ್ಟಿಸಿ ತುಟಿಯಂಚಿನಲ್ಲಿ ಸಂತೃಪ್ತಿಯ ಕಿರುನಗೆಯನ್ನು ಬೀರಿದಳು.

“ಅದು ಏನೇ ಇರಲಿ, ನಾನು ಭೇಟಿ ಮಾಡಿದ ಮೊದಲ ಬರಹಗಾರರು ನೀವು…”

“ನಿಮಗೆ ನಿರಾಶೆಯಾಯಿತೇನೋ..” ಜುಂಪೇ ನುಡಿದ “ಬೇರೆಯವರ ಮುಂದೆ ತೋರಿಸಬಲ್ಲ ಯಾವ ಕೌಶಲ್ಯವೂ ಬರಹಗಾರರಿಗೆ ಇರುವದಿಲ್ಲ.
ಪಿಯಾನೋ ನುಡಿಸುವವನಾಗಿದ್ದರೆ ಒಂದು ಒಳ್ಳೆಯ ರಾಗವನ್ನು ನಿಮಗಾಗಿ ನುಡಿಸಬಲ್ಲ. ಚಿತ್ರಗಾರನಾಗಿದ್ದರೆ ಒಂದು ಸುಂದರ ಚಿತ್ರ ಬಿಡಿಸಿಕೊಡಬಲ್ಲ. ಜಾದೂಗಾರನಾಗಿದ್ದರೆ ಕ್ಷಣಾರ್ಧದಲ್ಲಿ ಒಂದು ಜಾದೂ ಮಾಡಬಲ್ಲ. ಬರೆಯುವವರು ಮಾಡುವಂತಹದ್ದು ಅಂಥದ್ದೇನು ಇಲ್ಲ.”

“ಓಹ್! ಹಾಗೇನು ಇಲ್ಲ. ಬಹುಶಃ ನಾನು ನಿಮ್ಮಲ್ಲಿನ ಕಲಾತ್ಮಕ ಸೆಳೆತವನ್ನು ಆನಂದಿಸಬಹುದೇನೋ.”

“ಕಲಾತ್ಮಕ ಸೆಳೆತ?”

“ಮಾತಿನಲ್ಲಿ ಹೇಳಲಿಕ್ಕೆ ಆಗದ ವಿಶೇಷತೆ. ಸಾಮಾನ್ಯ ಜನರಲ್ಲಿ ಕಾಣಲಿಕ್ಕೆ ಸಿಗುವಂತಹದ್ದಲ್ಲ.”

“ಹೌದೇ? ಪ್ರತಿ ದಿನ ದಾಡಿ ಮಾಡುವಾಗ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತೇನೆ. ಇಲ್ಲಿಯವರೆಗೆ ನನಗೆ ಅಂಥ ವಿಶೇಷತೆಯೇನೂ ಕಾಣಿಸಿಲ್ಲ.”

ಅವಳು ನಸುನಕ್ಕಳು. “ಯಾವ ರೀತಿಯ ಕತೆಗಳನ್ನು ನೀವು ಬರೆಯುತ್ತಿರಿ?”

“ಪ್ರತಿಯೊಬ್ಬರೂ ನನಗೆ ಈ ಪ್ರಶ್ನೆ ಕೇಳುತ್ತಾರೆ. ನಿಜ ಹೇಳಬೇಕು ಅಂದರೆ ನಾನು ಬರೆಯುವ ಕತೆಗಳನ್ನು ಇಂತದ್ದೆ ಒಂದು ಪ್ರಕಾರ ಎನ್ನುವ ಹಾಗಿಲ್ಲ. ಅವು ಒಂದು ಚೌಕಟ್ಟಿನಲ್ಲಿ ಸಿಕ್ಕಿಬೀಳುವ ಕತೆಗಳಲ್ಲ.”

ಅವಳು ಕಾಕ್ಟೇಲ್ ಗ್ಲಾಸಿನ ಮೇಲೆ ನಿಧಾನವಾಗಿ ಬೆರಳಾಡಿಸಿದಳು. “ಹಾಗಾದರೆ ನಿಮ್ಮ ಕತೆಗಳನ್ನು ಕಲ್ಪನಾ ಸಾಹಿತ್ಯ ಅನ್ನಬಹುದೇ?”

“ಅನ್ನಬಹುದೇನೋ.”

ಅವಳು ಮತ್ತೆ ಕಿರುನಗೆಯನ್ನು ಬೀರಿದಳು. “ನಿಮ್ಮ ಹೆಸರನ್ನು ನಾನು ಕೇಳಿರುವ ಸಂಭವವಿದೆಯೇ?”

“ನೀವು ಸಾಹಿತ್ಯದ ಪತ್ರಿಕೆಗಳನ್ನು ಓದುತ್ತೀರಾ?”
ಅವಳು ಇಲ್ಲವೆಂದು ತಲೆಯಾಡಿಸಿದಳು.

“ಹಾಗಾದರೆ ನನ್ನ ಹೆಸರನ್ನು ನೀವು ಕೇಳಿರಲಿಕ್ಕಿಲ್ಲ. ನಾನು ಅಂತಹ ಪ್ರಸಿದ್ಧ ಕತೆಗಾರನಲ್ಲ”.

“ಯಾವತ್ತಾದರೂ ನಿಮ್ಮ ಹೆಸರನ್ನು ಅಕೂಟಾಗಾವ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತೆ?”

“ಕಳೆದ ಐದು ವರ್ಷಗಳಲ್ಲಿ ಎರಡು ಸಲ…”

“ಆದರೆ ಪ್ರಶಸ್ತಿ ಗೆದ್ದಿಲ್ಲ?”

ಜುಂಪೇ ಉತ್ತರಿಸದೆ ನಸುನಕ್ಕ. ಅವನ ಅನುಮತಿಗೆ ಕಾಯದೆ ಅವಳು ತಾನು ಕುಳಿತಿದ್ದ ಸ್ಟೂಲ್ ನ್ನು ಅವನ ಪಕ್ಕಕ್ಕೆ ಎಳೆದು ಹಾಕಿಕೊಂಡಳು ಮತ್ತು ಒಂದೇ ಗುಟುಕಿಗೆ ಗ್ಲಾಸಿನಲ್ಲಿ ಉಳಿದಿದ್ದನ್ನು ಕುಡಿದು ಮುಗಿಸಿದಳು.

“ವ್ಯತಾಸವೇನಿದೆ? ಈ ಪ್ರಶಸ್ತಿಗಳೆಲ್ಲ ಕೇವಲ ಉದ್ಯಮ ಬೆಳೆಸುವ ತಂತ್ರಗಳು ಅಷ್ಟೇ.”

“ಬಹುಶಃ ಪ್ರಶಸ್ತಿ ಗೆದ್ದವರು ಯಾರಾದರೂ ಈ ಮಾತನ್ನು ಹೇಳಿದಿದ್ದರೆ ನಾನು ತಕ್ಷಣಕ್ಕೆ ಒಪ್ಪುತ್ತಿದ್ದೆ.”

ಅವಳು ತನ್ನ ಹೆಸರು ಕೀರಿ ಎಂದು ಅವನಿಗೆ ಹೇಳಿದಳು.

“ಹ್ಮ್! ಇಲ್ಲಿಯವರೆಗೂ ನಾನು ಕೇಳಿಲ್ಲದ ಹೆಸರು.”

ಜುಂಪೆಗೆ ಅವಳು ತನಗಿಂತ ಒಂದಿಂಚು ಜಾಸ್ತಿ ಎತ್ತರವಿದ್ದಂತೆ ತೋರಿತು. ನಸು ಕಂದು ಬಣ್ಣದ ಅವಳು ಕೂದಲನ್ನು ಕುತ್ತಿಗೆಯವರೆಗೆ ಸಣ್ಣಗೆ ಕತ್ತರಿಸಿದ್ದಳು. ಅವಳ ತಲೆ ಅತ್ಯಂತ ಸುಂದರವಾದ ಆಕಾರದಲ್ಲಿತ್ತು. ಅವಳು ತೆಳು ಹಸಿರು ಬಣ್ಣದ ಜಾಕೆಟ್ ಮತ್ತು ಮೊಣಕಾಲಿನವರೆಗೆ ಸ್ಕರ್ಟ್ ತೊಟ್ಟಿದ್ದಳು. ಜಾಕೆಟಿನ ತೋಳುಗಳನ್ನು ಮೊಣಕೈವರೆಗೆ ಮಡಚಿದ್ದಳು. ಜಾಕೆಟಿನ ಅಡಿಯಲ್ಲಿ ಸರಳವಾದ ಕಾಲರ್ ನ ಮೇಲುಡುಗೆ. ಎಲ್ಲಿಯೂ ಹೆಚ್ಚುಕಡಿಮೆ ಅನಿಸದ ಅವಳ ಸರಳವಾದ ಆದರೆ ಅವಳಿಗಷ್ಟೇ ವೈಯಕ್ತಿಕ ಅನಿಸುವ ಉಡುಪು. ಅವಳ ತುಂಬು ತುಟಿ ಅವಳ ಪ್ರತಿ ಮಾತಿನ ಕೊನೆಗೆ ತೆರೆದುಕೊಂಡು ಅಥವಾ ಮುಚ್ಚಿಕೊಂಡು ಮಾತಿನ ಅಂತ್ಯವನ್ನು ಸೂಚಿಸುತ್ತಿದ್ದವು. ಅದು ಅವಳ ಸಂಪೂರ್ಣ ವ್ಯಕ್ತಿತ್ವಕ್ಕೆ ಒಂದು ತೆರನಾದ ಜೀವಂತಿಕೆಯನ್ನೂ, ಲವಲವಿಕೆಯನ್ನು ತುಂಬಿಕೊಟ್ಟಿತ್ತು.

ಅವಳು ಯಾವುದಾದರೂ ವಿಷಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗೆಲ್ಲ ಅವಳ ಹಣೆಯಲ್ಲಿ ಪರಸ್ಪರ ಸಮಾನಾ೦ತರವಾದ ಮೂರು ನೆರಿಗೆಗಳು ಕಾಣಿಸಿಕೊಳ್ಳುತ್ತಿದ್ದವು ಮತ್ತು ಅವಳ ಯೋಚನಾ ಲಹರಿ ಮುಗಿದ ತಕ್ಷಣ ಆ ನೆರಿಗೆಗಳು ಮಾಯವಾಗುತ್ತಿದ್ದವು.

ಜುಂಪೇಗೆ ತಾನು ಅವಳತ್ತ ಆಕರ್ಷಿತನಾಗುತ್ತಿದ್ದೇನೆ ಅನಿಸುತ್ತಿತ್ತು. ಶಬ್ದಗಳಲ್ಲಿ ವಿವರಿಸಲು ಆಗದ ಅವಳ ಒಟ್ಟು ವ್ಯಕ್ತಿತ್ವದ ಯಾವುದೋ ರಹಸ್ಯ ಆಕರ್ಷಣೆ ಸತತವಾಗಿ ಅವನನ್ನು ಅವಳೆಡೆಗೆ ಸೆಳೆಯುತ್ತ, ಶಬ್ದದ ರೂಪದಲ್ಲಿ ಅವನ ಹೃದಯದಿಂದ ಹೊರಬರುತ್ತಿರುವದು ಅವನಿಗೆ ಅರಿವಾಗುತ್ತಿತ್ತು. ಇದ್ದಕ್ಕಿದ್ದಂತೆ ಪ್ರಾರಂಭವಾದ ಈ ಸೆಳೆತದಿಂದ ಆರಿಹೋಗುತ್ತಿರುವ ಗಂಟಲನ್ನು ಒದ್ದೆ ಮಾಡಿ ತನ್ನನ್ನು ತಾನು ಸಹಜ ಸ್ಥಿತಿಗೆ ತರಲು ಜುಂಪೇ ಪಕ್ಕದಲ್ಲಿ ಹಾದು ಹೋಗುತ್ತಿದ್ದ ವೈಟರನ್ನು ಕರೆದು ಒಂದು ಗ್ಲಾಸ್ ವೈನ್ ತರಲು ಹೇಳಿದ ಮತ್ತು ಯಾವತ್ತಿನಂತೆ ತನಗೆ ತಾನೇ ಪ್ರಶ್ನೆ ಮಾಡಿಕೊಳ್ಳಲು ಪ್ರಾರಂಭಿಸಿದ “ಇವಳು ನನ್ನ ಜೀವನಕ್ಕೆ ನೈಜ ಅರ್ಥವನ್ನು ಕೊಡಬಲ್ಲಳೇ? ಇವಳು ಉಳಿದೆರಡು ಹುಡುಗಿಯರಲ್ಲೊಬ್ಬಳೆ? ಇವಳನ್ನು ಹಾಗೆ ಹೋಗಕೊಡಲೇ ಅಥವಾ ಇವಳೊಟ್ಟಿಗೆ ಸಂಬಂಧ ಬೆಳೆಸಲೇ?”

“ಬರಹಗಾರನಾಗಬೇಕು ಎನ್ನುವ ಬಯಕೆ ಮೊದಲಿನಿಂದಲೂ ಇತ್ತೇ?” ಅವಳು ಕೇಳಿದಳು.

“ಹ್ಮ್ ! ಬಹುಶಃ ಬರವಣಿಗೆಯ ಹೊರತಾಗಿ ಬೇರೆ ಏನು ಮಾಡಬಹುದು ಎನ್ನುವದರ ಕುರಿತು ನಾನು ಯಾವತ್ತೂ ಯೋಚಿಸಿಯೇ ಇಲ್ಲ..”
“ಅಂದರೆ ಕನಸು ನನಸಾದ ಹಾಗೆಯೆ ಇದು..”

“ನನಗನಿಸುತ್ತೆ ನಾನು ಒಬ್ಬ ಅತ್ಯುತ್ತಮ ಬರಹಗಾರನಾಗಬೇಕೆಂದು ನನಗಿದ್ದಿತ್ತು..” ಜುಂಪೇ ತನ್ನ ಕೈಗಳೆರಡನ್ನು ಬಿಡಿಸಿಟ್ಟುಕೊಂಡ “ನಾನೀಗ ಇರುವದಕ್ಕೂ, ನಾನಾಗಬೇಕು ಅಂದುಕೊಂಡಿದ್ದಕ್ಕೂ ದೊಡ್ಡ ವ್ಯತ್ಯಾಸವಿದೆ.”

“ಪ್ರತಿಯೊಬ್ಬರೂ ಒಂದಲ್ಲ ಒಂದೆಡೆಯಿಂದ ಪ್ರಾರಂಭಿಸಲೇಬೇಕು. ನಿಮ್ಮ ಸಂಪೂರ್ಣ ಭವಿಷ್ಯತ್ತು ನಿಮ್ಮ ಮುಂದಿದೆ. ಪರಿಪೂರ್ಣತೆ ಕೂಡಲೇ ಬರುವದಿಲ್ಲ.” ನಂತರ ಅವಳು ಇದ್ದಕ್ಕಿದ್ದಂತೆ ಕೇಳಿದಳು “ನಿಮ್ಮ ವಯಸ್ಸೆಷ್ಟು?”

ಆ ಸಂದರ್ಭದಲ್ಲೇ ಅವರು ಪರಸ್ಪರರ ವಯಸ್ಸು ಎಷ್ಟು ಎನ್ನುವದನ್ನು ತಿಳಿದುಕೊಂಡಿದ್ದು. ಅವನಿಗಿಂತ ಹೆಚ್ಚು ವಯಸ್ಸಾಗಿದೆ ಎನ್ನುವದರ ಬಗ್ಗೆ ಅವಳು ಕಿಂಚಿತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಜುಂಪೇಯಂತೂ ಯಾವತ್ತಿಗೂ ಪ್ರಬುದ್ಧ ವಯಸ್ಸಿನವರನ್ನೇ ಆರಿಸಿಕೊಳ್ಳುತ್ತಿದ್ದ. ಮುಂದೆ ಯಾವತ್ತೋ ಒಂದು ದಿನ ಸಂಬಂಧ ಮುರಿದುಕೊಳ್ಳಬೇಕಾದರೆ ಸಣ್ಣ ವಯಸ್ಸಿನ ಹುಡುಗಿಯರಿಗಿಂತ ಪ್ರಬುದ್ಧರಾದ ವಯಸ್ಕ ಹೆಂಗಸರೇ ಮೇಲು ಅನ್ನುವದು ಅವನ ಅನುಭವಾಗಿತ್ತು.

“ನೀವು ಯಾವ ಕೆಲಸದಲ್ಲಿದ್ದೀರಿ?” ಜುಂಪೇ ಅವಳನ್ನು ಪ್ರಶ್ನಿಸಿದ.

ಅವಳ ತುಟಿಗಳು ಪರಿಪೂರ್ಣವಾದ ನೇರವಾದ ರೇಖೆಯನ್ನು ನಿರ್ಮಿಸಿದವು. ಮೊಟ್ಟಮೊದಲ ಬಾರಿಗೆ ಅವಳ ಭಾವ ನೈಜವಾಗಿದ್ದಂತೆ ತೋರಿತು.

“ನಾನು ಯಾವ ಕೆಲಸ ಮಾಡುತ್ತಿರಬಹುದು ಎಂದು ಅನಿಸುತ್ತದೆ”?

ಜುಂಪೇ ತನ್ನ ಗ್ಲಾಸನ್ನು ಎತ್ತಿಕೊಂಡು ವೃತ್ತಾಕಾರವಾಗಿ ಆಡಿಸಿ, ಒಂದೇ ಗುಟುಕಿಗೆ ಗ್ಲಾಸಿನಲ್ಲಿದ್ದ ಅಷ್ಟು ವೈನನ್ನು ಖಾಲಿ ಮಾಡಿದ. “ಏನಾದರು ಸುಳಿವು ನೀಡಬಹುದೇ?”

“ಯಾವ ಸುಳಿವೂ ಇಲ್ಲ. ನನ್ನ ಕೆಲಸ ಯಾವುದು ಎಂದು ಊಹೆ ಮಾಡುವದು ಅಷ್ಟು ಕಷ್ಟವೇ? ಲಕ್ಷ್ಯಕೊಟ್ಟು ಗಮನಿಸುವದು ಮತ್ತು ಒಂದು ನಿರ್ಣಯಕ್ಕೆ ಬರುವದು ನಿಮ್ಮ ಕೆಲಸದ ಅವಿಭಾಜ್ಯ ಭಾಗ.”

“ಹಾಗೇನಿಲ್ಲ” ಅವನು ಹೇಳಿದ “ಒಬ್ಬ ಬರಹಗಾರ ಮಾಡಬೇಕಾದದ್ದು ಸತತವಾಗಿ ಗಮನಿಸುವದು ಮತ್ತು ನಿರ್ಣಯವನ್ನು ಅತ್ಯಂತ ಕಟ್ಟಕಡೆಯಲ್ಲಿ ತೆಗೆದುಕೊಳ್ಳುವದು.”

“ಖಂಡಿತ” ಅವಳು “ಸರಿ ಹಾಗಾದರೆ ಸತತವಾಗಿ ಗಮನಿಸಿ ಮತ್ತು ಕಲ್ಪನೆಯನ್ನು ಉಪಯೋಗಿಸಿ.”

ಜುಂಪೇ ಮುಖವೆತ್ತಿ ಅತ್ಯ೦ತ ಶ್ರದ್ಧೆಯಿಂದ ಯಾವುದಾದರೂ ಸುಳಿವು ಸಿಗಬಹುದು ಎಂದು ಅವಳನ್ನು ಸೂಕ್ಷ್ಮವಾಗಿ ದಿಟ್ಟಿಸಿದ. ಅವಳು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು ಮತ್ತು ಅವನು ಅವಳ ಕಣ್ಣೊಳಗೆ ದಿಟ್ಟಿಸಿದ.

ಕ್ಷಣಕಾಲದ ನಂತರ ಅವನು ಹೇಳಿದ “ಸರಿ ಹಾಗಾದರೆ, ಯಾವುದೇ ಸುಳಿವು ಇಲ್ಲದೆ ನಾನು ನಿಮ್ಮ ಬಗ್ಗೆ ಊಹಿಸಿದ್ದು ಇಷ್ಟು: ನೀವು ಯಾವುದೋ ಕೆಲಸದಲ್ಲಿ ವೃತ್ತಿಪರಳು. ನೀವು ಮಾಡುವ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ನೀವು ಮಾಡುವ ಕೆಲಸಕ್ಕೆ ಅದರದ್ದೇ ಆದ ವಿಶೇಷ ಪರಿಣಿತಿ ಅಗತ್ಯ.”

“ವಾವ್! ನೀವು ಹೇಳಿದ್ದು ಸರಿಯಿದೆ. ನಾನು ಮಾಡುವ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಆದರೆ ಇನ್ನು ಸ್ವಲ್ಪ ನಿಖರವಾಗಿ ಊಹಿಸಲು ಸಾಧ್ಯವೇ?”

“ಸಂಗೀತದ ಕ್ಷೇತ್ರವೇ?”

“ಅಲ್ಲ”

“ವಸ್ತ್ರ ವಿನ್ಯಾಸ?”

“ಅಲ್ಲ”

“ಟೆನಿಸ್?”

“ಅಲ್ಲ”

ಜುಂಪೇ ತಲೆಯಲ್ಲಾಡಿಸಿದ. “ನಿಮ್ಮದು ನಸುಗಂದು ಬಣ್ಣ, ಸದೃಢ ಮೈಕಟ್ಟು, ನಿಮ್ಮ ಕೈಯಲ್ಲಿನ ಸ್ನಾಯುಗಳು ಬಿಗಿಯಾಗಿವೆ. ಬಹುಶಃ ನೀವು ಹೊರಾಂಗಣ ಕ್ರೀಡೆಗೆ ಸಂಬಂಧಿಸಿದ ಕೆಲಸವನ್ನೇನೋ ಮಾಡುತ್ತಿರಬಹುದು. ನೀವು ಹೊರಗೆ ಕೂಲಿ ಕೆಲಸ ಮಾಡುವ೦ತೇನೂ ತೋರುತ್ತಿಲ್ಲ”

ಅವಳು ತನ್ನ ಕೈತೋಳನ್ನು ಪೂರ್ತಿ ಮಡಚಿ ಕೈಯನ್ನು ಟೇಬಲ್ಲಿನ ಮೇಲಿಟ್ಟು ಹಿಂದಕ್ಕೆ ಮುಂದಕ್ಕೆ ಅವನ್ನು ಕೂಲಂಕುಷವಾಗಿ ನೋಡಿದಳು “ನೀವು ಹತ್ತಿರ ಹತ್ತಿರ ಬರುತ್ತಿರುವ ಹಾಗಿದೆ.”

“ಆದರೂ ನಾನು ಹೇಳಿದ್ದು ಸರಿಯಾದ ಉತ್ತರವಲ್ಲ?”

“ಒಂದಷ್ಟು ಸಣ್ಣ ರಹಸ್ಯಗಳನ್ನು ಹಾಗೆಯೇ ಜೋಪಾನವಾಗಿ ಕಾಪಾಡಿಕೊಳ್ಳುವದು ಅತ್ಯಂತ ಅಗತ್ಯ.” ಅವಳು ಮುಂದುವರೆಸಿದಳು. “ಆದರೆ ನಾನು ನಿಮ್ಮ ವೃತ್ತಿಪರ ಕೌಶಲ್ಯಗಳನ್ನು ಕಿತ್ತುಕೊಳ್ಳಲು ಬಯಸುವದಿಲ್ಲ- ಸತತವಾಗಿ ಗಮನಿಸುವದು ಮತ್ತು ಕಲ್ಪಿಸುವದು. ಒಂದು ಸುಳಿವನ್ನು ಕೊಡುತ್ತೇನೆ – ನಮ್ಮಿಬ್ಬರಿಗೂ ಅದು ಏಕಪ್ರಕಾರವಾದದ್ದು.”

“ಏಕಪ್ರಕಾರ ಹೇಗೆ?”

“ಅಂದರೆ, ನನ್ನ ಈಗಿನ ವೃತ್ತಿ ನಾನು ಬಾಲ್ಯ ಕಾಲದಿಂದಲೂ ಬಯಸಿದ್ದು. ನಿಮ್ಮ ಹಾಗೆಯೇ. ಆದರೆ ನಾನೀಗ ಇರುವದನ್ನು ತಲುಪುವದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ.”

“ಒಳ್ಳೆಯದು..” ಜುಂಪೇ ನುಡಿದ “ಮುಖ್ಯವಾದದ್ದು ಅದೇ ಅಲ್ಲವೇ? ನಾವು ಮಾಡುವ ಕೆಲಸ ನಮ್ಮ ಹೃದಯಕ್ಕೆ ಹತ್ತಿರವಾಗಿರಬೇಕೆ ಹೊರತು ಅನುಕೂಲಕ್ಕೆ ಮಾಡಿಕೊಂಡ ಮದುವೆಯಂತೆ ಇರಬಾರದು.”

“ಹೃದಯಕ್ಕೆ ಹತ್ತಿರವಾದದ್ದು..” ಅವನ ಶಬ್ಧ ಪ್ರಯೋಗ ಅವಳ ಮೇಲೆ ಪ್ರಭಾವ ಬಿರಿದಂತೆ ತೋರಿತು.

“ನಿಮ್ಮ ಹೆಸರನ್ನು ನಾನು ಎಲ್ಲಿಯಾದರೂ ಕೇಳಿರಬಹುದು ಎಂದು ನಿಮಗೆ ಅನಿಸುತ್ತದೆಯೇ?” ಅವನು ಪ್ರಶ್ನಿಸಿದ.

“ಬಹುಶಃ ಇಲ್ಲ.” ಅವಳು ತಲೆಯಾಡಿಸಿದಳು. “ನಾನು ಅಂತಹ ಪ್ರಸಿದ್ಧಳೇನು ಅಲ್ಲ.”

“ಆಹ್! ಪ್ರತಿಯೊಬ್ಬರೂ ಒಂದಲ್ಲ ಒಂದೆಡೆಯಿಂದ ಪ್ರಾರಂಭಿಸಲೇ ಬೇಕು”

“ಖಂಡಿತ..” ಅವಳು ನಗುತ್ತ ನುಡಿದಳು. ನಂತರ ಅವಳು ಗಂಭೀರವಾಗಿ “ನನ್ನ ವಿಷಯ ನಿಮಗಿಂತ ಒಂದರ್ಥದಲ್ಲಿ ಭಿನ್ನವಾದದ್ದು. ನಾನು ಶುರುವಾತಿನಿಂದಲೇ ಪರಿಪೂರ್ಣತೆಯನ್ನು ಕಂಡುಕೊಳ್ಳುವದು ಅತ್ಯಗತ್ಯ. ಅತ್ಯ೦ತ ಸಣ್ಣ ತಪ್ಪಿಗೂ ಜಾಗವಿಲ್ಲ. ಅಲ್ಲಿ ಎರಡನೆಯ ಅವಕಾಶವಿಲ್ಲ.”

“ಅದನ್ನು ನಾನು ಇನ್ನೊಂದು ಸುಳಿವು ಅಂದುಕೊಳ್ಳಬೇಕು?”

“ಹಾಗೂ ಅಂದುಕೊಳ್ಳಬಹುದು.”

ಹತ್ತಿರದಲ್ಲೇ ಬರುತ್ತಿದ್ದ ವೈಟರ್ ಬಳಿಯಿಂದ ಅವಳು ಮತ್ತೆರಡು ಗ್ಲಾಸನ್ನು ಕೇಳಿ ಪಡೆದಳು. ಒಂದನ್ನು ತಾನಿಟ್ಟುಕೊಂಡು ಇನ್ನೊಂದನ್ನು ಜುಂಪೆಯ ಮುಂದಿಟ್ಟಳು.

“ಚಿಯರ್…” ಅವಳು

“ನಮ್ಮ ನಮ್ಮ ವೃತ್ತಿಯಲ್ಲಿನ ಪರಿಣಿತಿಗೆ…” ಜುಂಪೆ ನುಡಿದ.

ಅವರಿಬ್ಬರ ಗ್ಲಾಸುಗಳು ತಾಕಿ ಖಣಿಲ್ ಎನ್ನುವ ಶಬ್ದ ಹೊರಹೊಮ್ಮಿತು.

“ಅಂದ ಹಾಗೆ ನಿಮಗೆ ಮದುವೆಯಾಗಿದೆಯೇ?” ಅವಳು ಪ್ರಶ್ನಿಸಿದಳು.

ಜು೦ಪೇ ಇಲ್ಲವೆಂದು ತಲೆಯಾಡಿಸಿದ.

“ನನಗೂ ಆಗಿಲ್ಲ..” ಅವಳು.

******

ಅವತ್ತು ರಾತ್ರಿ ಅವಳು ಜುಂಪೇಯ ರೂಮಿನಲ್ಲಿ ಕಳೆದಳು. ತಡ ರಾತ್ರಿಯವರೆಗೂ ಜೊತೆಗೆ ಕುಳಿತು ಹೋಟೆಲಿನಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ನೀಡಿದ ವೈನ್ ಅನ್ನು ಹೀರಿದರು ಮತ್ತು ಅವಳು ಜುಂಪೇಯೊಟ್ಟಿಗೆ ಮಲಗಿದಳು. ಮರುದಿನ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಜುಂಪೇಗೆ ಎಚ್ಚರವಾದಾಗ ಅವಳಿರಲಿಲ್ಲ. ಸದ್ದಿಲ್ಲದೆಯೇ ಜಾರಿಹೋದ ಮಧುರ ನೆನಪಿನಂತೆ ಅವಳು ಅವನ ದಿಂಬಿನ ಬಳಿ ಚಿಕ್ಕ ಚೀಟಿಯೊಂದನ್ನು ಅವನಿಗಾಗಿ ಬಿಟ್ಟು ಹೋಗಿದ್ದಳು.
“ನಾನು ಕೆಲಸದ ನಿಮಿತ್ತ ಹೋಗಬೇಕಾಗಿದೆ. ನೀನು ಬಯಸಿದರೆ ಮತ್ತೆ ನಾವಿಬ್ಬರೂ ಭೇಟಿ ಮಾಡಬಹುದು”. ಚೀಟಿಯಲ್ಲಿ ತನ್ನ ದೂರವಾಣಿ ಸಂಖ್ಯೆಯನ್ನು ಬರೆದಿದ್ದಳು.

ಅವನು ಅವಳಿಗೆ ಕರೆ ಮಾಡಿದ. ಶನಿವಾರ ರಾತ್ರಿ ಇಬ್ಬರೂ ಹೋಟೆಲವೊಂದರಲ್ಲಿ ರಾತ್ರಿಯೂಟ ಮಾಡಿದರು. ಸ್ವಲ್ಪ ವೈನ್ ಹೀರಿದ ನಂತರ ಇಬ್ಬರೂ ಜುಂಪೇಯ ರೂಮಿನಲ್ಲಿ ಸುಖಿಸಿದರು. ಮತ್ತೆ, ಮರುದಿನ ಬೆಳಿಗ್ಗೆ ಜುಂಪೇ ಏಳುವದಕ್ಕೆ ಮೊದಲೇ ಅವಳು ಹೊರಟು ಹೋಗಿದ್ದಳು. ಅವತ್ತು ಭಾನುವಾರ. ಅವಳು ಮತ್ತೆ ಜು೦ಪೇಗೋಸ್ಕರ ಚೀಟಿಯನ್ನು ಬರೆದಿಟ್ಟಿದ್ದಳು “ನಾನು ಕೆಲಸಕ್ಕೆ ಹೋಗಲೇ ಬೇಕು. ಹಾಗಾಗಿ ಸದ್ಯಕ್ಕೆ ಕಣ್ಮರೆಯಾಗುತ್ತಿದ್ದೇನೆ”. ಈಗಲೂ ಅವಳು ಕೆಲಸ ಏನು ಎನ್ನುವದು ಜುಂಪೆಗೆ ತಿಳಿದಿರಲಿಲ್ಲ. ಆದರೆ ಅವಳ ಕೆಲಸ ಬೆಳಿಗ್ಗೆ ಬೇಗ ಶುರುವಾಗುತ್ತದೆ ಮತ್ತು ಕೆಲವೊಮ್ಮೆ ಅವಳು ಭಾನುವಾರವೂ ಕೆಲಸ ಮಾಡಬೇಕಾಗುತ್ತದೆ ಎನ್ನುವದು ಮಾತ್ರ ಅವನಿಗೆ ತಿಳಿದಿತ್ತು.

ಅವರಿಬ್ಬರ ನಡುವೆ ಮಾತನಾಡಬಹುದಾದ ವಿಷಯಗಳಿಗೆ ಯಾವತ್ತೂ ಕೊರತೆಯಿರಲಿಲ್ಲ. ಅವಳು ತೀಕ್ಷ್ಣಮತಿಯಾಗಿದ್ದಳು ಮತ್ತು ಅವಳಿಗೆ ಹಲವಷ್ಟು ವಿಷಯಗಳಲ್ಲಿ ಆಳವಾದ ಜ್ಞಾನವಿತ್ತು. ಅವಳಿಗೆ ಓದು ಇಷ್ಟವಾಗಿತ್ತು. ಆದರೆ ಸಾಮಾನ್ಯವಾಗಿ ಕಥೆ ಕಾದಂಬರಿ ಸಾಹಿತ್ಯಗಳ ಬದಲಾಗಿ ವಿಜ್ಞಾನ, ಸೈಕಾಲಜಿ, ಇತಿಹಾಸ, ತಂತ್ರಜ್ಞಾನ ಇತ್ಯಾದಿ ವಿಷಯಗಳನ್ನು ಹೆಚ್ಚಾಗಿ ಓದುತ್ತಿದ್ದಳು. ಅವಳಿಗೆ ಅಸಾಧಾರಣವಾದ ಗ್ರಹಣ ಶಕ್ತಿಯಿತ್ತು. ಒಮ್ಮೆ, ಸ್ಥಳಾ೦ತರಿಸಬಹುದಾದ ಮನೆಗಳ ಇತಿಹಾಸದ ಕುರಿತು ಅವಳಿಗಿರುವ ವಿವರವಾದ ಮಾಹಿತಿಯ ಕುರಿತು ಜುಂಪೇ ಬೆರಗಾಗಿದ್ದ.

“ಸ್ಥಳಾ೦ತರಿಸಬಹುದಾದ ಮನೆ? ಅಂದರೆ ನೀನು ಮಾಡುವ ಕೆಲಸ ವಾಸ್ತುಶಾಸ್ತ್ರ ಅಥವಾ ಕಟ್ಟಡ ಸಂರಚನೆಗೆ ಸಂಬಂಧಿಸಿರಬೇಕು.”

“ಇಲ್ಲ” ಅವಳು ಹೇಳಿದಳು “ವಾಸ್ತವಕ್ಕೆ ಹತ್ತಿರವಾದ ವಿಷಯಗಳೆಂದರೆ ನನಗೆ ಆಸಕ್ತಿ ಅಷ್ಟೇ.”

ಅಷ್ಟಾದರೂ ಅವಳು ಜುಂಪೇಯ ಎರಡೂ ಕಥಾ ಸಂಕಲನಗಳನ್ನು ಓದಿ ಮುಗಿಸಿದ್ದಳು. “ನಾನು ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಇದೆಯಲ್ಲ ನಿಜ ಹೇಳಬೇಕೆಂದರೆ ನಿನ್ನ ಕತೆಗಳು ನನಗೆ ಇಷ್ಟವಾಗದಿದ್ದರೆ ನಿನಗೆ ಏನು ಹೇಳಬೇಕು ಅನ್ನುವದೆ ನನಗೆ ದೊಡ್ಡ ಚಿ೦ತೆಯಾಗಿತ್ತು. ಆದರೆ ಈಗ ಪರವಾಗಿಲ್ಲ ನನಗೆ ಸಮಾಧಾನ ಅನ್ನಿಸುತ್ತಿದೆ. ಕತೆಗಳು ಚೆನ್ನಾಗಿಯೇ ಇದ್ದವು.”

“ನಿನಗೆ ಹಿಡಿಸಿದೆ ಅಂದರೆ ನನಗೂ ಸಂತೋಷವೇ.” ಜುಂಪೇ ಸಮಾಧಾನದಿಂದ ನಿಟ್ಟುಸಿರು ಬಿಡುತ್ತ ಹೇಳಿದ. ಅವಳು ಅವನ ಕಥಾಸಂಕಲನಗಳನ್ನು ಕೇಳಿ ಪಡೆದಾಗ ಅವನಿಗೂ ಅದೇ ತೆರನಾದ ಚಿ೦ತೆಯಿತ್ತು.

“ನಿನ್ನನ್ನು ಮೆಚ್ಚಿಸಲೆಂದು ನಾನು ಈ ಮಾತುಗಳನ್ನು ಹೇಳುತ್ತಿಲ್ಲ…” ಅವಳು ನುಡಿದಳು. “ನಿನ್ನಲ್ಲಿ ಏನೋ ಒಂದು ವಿಶೇಷತೆ ಇದೆ. ಒಬ್ಬ ಅತ್ಯುತ್ತಮ ಬರಹಗಾರನಿಗೆ ಮಾತ್ರ ಇರಬಲ್ಲ ವಿಶೇಷತೆ. ನಿನ್ನ ಬಹಳಷ್ಟು ಕತೆಗಳಲ್ಲಿ ಕಾಡುವ ಮೌನವಿದೆ, ಇನ್ನು ಕೆಲವಲ್ಲಿ ಧುಮ್ಮಿಕ್ಕುವ ಉತ್ಸಾಹವಿದೆ ಮತ್ತು ಕಥೆ ಹೆಣೆಯುವ ಶೈಲಿ ಅತ್ಯಂತ ಸುಂದರವಾದುದು. ನಿನ್ನ ಬರವಣಿಗೆಗೆ ಸಮತೋಲನವಿದೆ. ಕತೆಯಾಗಲಿ, ಸಂಗೀತವಾಗಲಿ, ಚಿತ್ರಕಲೆಯಾಗಲಿ ಎಲ್ಲದಕ್ಕೂ ಸಮತೋಲನ ಅತ್ಯಗತ್ಯ. ಸಮತೋಲನವಿಲ್ಲದ ಯಾವುದನ್ನು ನೋಡಿದರೂ, ನಾನು ನೋಡುತ್ತಿರುವದು ಅನುಭವಿಸುತ್ತಿರುವದು ಅಪೂರ್ಣವೆನ್ನುವ ಭಾವ ಹುಟ್ಟಿ, ಹೊಟ್ಟೆ ತೊಳೆಸಿದಂತಾಗಿ ಅಸ್ವಸ್ಥಳಾಗುತ್ತೇನೆ. ಇದೆ ಕಾರಣಕ್ಕಾಗಿಯೇ ನಾನು ಸಂಗೀತ ಕಚೇರಿಗಳಿಂದ ಅಥವಾ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗಳಿಂದ ದೂರವುಳಿಯುವದು.”

“ಯಾಕೆಂದರೆ ನೀನು ಸಮತೋಲನವಿಲ್ಲದಿರುವದರಿಂದ ದೂರವುಳಿಯಲು ಬಯಸುತ್ತೀಯ?”

“ಹೌದು..”

“ಮತ್ತು ಅದು ಎದುರಾದರೆ ಎನ್ನುವ ಭಯದಿಂದ ನೀನು ಸಾಹಿತ್ಯ, ಸಂಗೀತಗಳಿಂದ ದೂರವಿರಲು ಬಯಸುವದು?”

“ನಿಜ..”

“ಇದು ನನ್ನ ಬುದ್ಧಿಶಕ್ತಿಗೆ ಮೀರಿದ್ದು.”

“ನನ್ನದು ತುಲಾ ರಾಶಿ. ಹೀಗಾಗಿ ಅಂತರ್ಗತವಾದ ಸಮತೋಲನವಿಲ್ಲದ, ಪರಿಪೂರ್ಣವಲ್ಲದ ಯಾವುದರ ಬಳಿಯೂ ಇರಲಾರೆ. ಅಂದರೆ ಯಾವತ್ತೂ ಇರಲಾರೆ ಎಂದಲ್ಲ…”

ಅವಳು ಮಾತನ್ನು ಅರ್ಧಕ್ಕೆ ನಿಲ್ಲಿಸಿ, ಸರಿಯಾದ ಶಬ್ದಕ್ಕಾಗಿ ತಡಕಾಡತೊಡಗಿದಳು. ಕೆಲವೊಂದು ಶಬ್ದಗಳು ಅವಳ ಬಾಯಿಯಿಂದ ಹೊರಬಂದರೂ ಅವಳಿಗೆ ಅದು ಸರಿಯೆನಿಸದೆ ಬಹುತೇಕ ಶಬ್ದಗಳು ಸಣ್ಣ ಸಣ್ಣ ನಿಟ್ಟುಸಿರಿನಲ್ಲಿ ಕೊನೆಯಾದವು. “ಸರಿ. ಪರವಾಗಿಲ್ಲ.” ಅವಳು ಶಬ್ದದ ಹುಡುಕಾಟವನ್ನು ಅಲ್ಲಿಯೇ ನಿಲ್ಲಿಸಿ ಮುಂದುವರೆಸಿದಳು “ನಾನು ಹೇಳಲಿಕ್ಕೆ ಬಯಸುವದೇನೆಂದರೆ ಒಂದಲ್ಲ ಒಂದು ದಿನ ನೀನು ಒಂದು ಸಂಪೂರ್ಣ ಕಾದಂಬರಿಯನ್ನು ಬರೆಯುತ್ತೀಯ ಮತ್ತು ಆಗ ನೀನು ಸಾಹಿತ್ಯ ಕ್ಷೇತ್ರದ ಒಬ್ಬ ಬಹುಮುಖ್ಯ ಲೇಖಕರಲ್ಲೊಬ್ಬನಾಗುತ್ತೀಯ. ಬಹುಶಃ ಅದಾಗಲು ಸಾಕಷ್ಟು ಸಮಯ ಬೇಕಾಗಬಹುದು, ಆದರೆ ಒಂದಲ್ಲ ಒಂದು ದಿನ ಆಗಿಯೇ ಆಗುತ್ತದೆ ಎನ್ನುವದು ನನ್ನ ನಂಬಿಕೆ.”

“ಇಲ್ಲ, ನನಗೆ ಕಾದಂಬರಿಗಳನ್ನು ಬರೆಯಲು ಸಾಧ್ಯವಿಲ್ಲ. ನನ್ನ ಕ್ಷೇತ್ರ ಸಣ್ಣ ಕಥೆಗಳು..” ಜುಂಪೆ

“ಅಷ್ಟಾದರೂ ಸಹ…” ಅವಳು..

ಜುಂಪೆ ಮರುನುಡಿಯಲಿಲ್ಲ. ಅವನು ಮೌನವಾಗಿ ಕುಳಿತು ಏರ್ ಕಂಡಿಷನ್ ನಿಂದ ಹೊರಬರುತ್ತಿರುವ ತಣ್ಣನೆಯ ಗಾಳಿಯ ಶಬ್ದವನ್ನು ಆಲಿಸತೊಡಗಿದ. ನಿಜ ಹೇಳಬೇಕೆಂದರೆ ಈ ಮೊದಲು ಅವನು ಸಾಕಷ್ಟು ಸಲ ಕಾದಂಬರಿಯನ್ನು ಬರೆಯಲಿಕ್ಕೆ ಪ್ರಯತ್ನಿಸಿದ್ದ. ಆದರೆ ಪ್ರತಿ ಬಾರಿಯೂ ಅವನ ಪ್ರಯತ್ನ ಅರ್ಧಕ್ಕೆ ಮೊಟಕುಗೊಳ್ಳುತ್ತಿತ್ತು. ಒಂದು ಬೃಹತ್ ಕಾದಂಬರಿ ಬರೆಯಲು ಬೇಕಾಗುವ ಏಕಾಗ್ರತೆಯನ್ನು ಕೊನೆಯವರೆಗೂ ಕಾದುಕೊಳ್ಳುವದು ಅವನಿಗೆ ಸಾಧ್ಯವಾಗಿರಲಿಲ್ಲ. ಪ್ರತಿ ಬಾರಿಯೂ ಅವನು ಹೊಸ ಉತ್ಸಾಹದಿಂದ ಕಾದಂಬರಿ ಬರೆಯಲು ಪ್ರಾರಂಭಿಸುತ್ತಿದ್ದ. ಅವನು ಬರೆಯುವ ಮೊದಮೊದಲಿನ ಅಧ್ಯಾಯಗಳಲ್ಲಿ ಉಲ್ಲಾಸವಿರುತಿತ್ತು, ಹೊಸತನವಿರುತ್ತಿತ್ತು. ಆದರೆ ಕಾದಂಬರಿಯ ಕತೆ ಮುಂದುವರಿದಂತೆ ಜು೦ಪೇಗೆ ಅರಿವಿಲ್ಲದಂತೆ ಕತೆಯ ಮೇಲಿನ ಅವನ ಹಿಡಿತ ಕಡಿಮೆಯಾಗುತ್ತಿತ್ತು. ಕ್ರಮೇಣ ಕತೆಯ ಓಘ, ಹದ ಹತೋಟಿ ತಪ್ಪಿ, ಚೇತನವನ್ನು ಕಳೆದುಕೊಂಡು ಕೊನೆಗೊಂದು ದಿನ ಸಂಪೂರ್ಣವಾಗಿ ನಿಂತುಬಿಡುತಿತ್ತು.

******

ಶರತ್ಕಾಲದ ರಾತ್ರಿ ಅವರಿಬ್ಬರೂ ಹಾಸಿಗೆಯಲ್ಲಿ ಬೆತ್ತಲಾಗಿ ಮಲಗಿದ್ದರು. ಕೀರಿ ಜು೦ಪೇಗೆ ಒರಗಿ ಮಲಗಿದ್ದಳು. ಮಂಚದ ಪಕ್ಕದಲ್ಲಿದ್ದ ಟೀಪಾಯಿಯ ಮೇಲೆ ಎರಡು ವೈನ್ ಗ್ಲಾಸುಗಳಿದ್ದವು.

“ಜುಂಪೇ?”

“ಹ್ಮ್ ..”

“ನೀನೊಬ್ಬಳನ್ನು ಪ್ರೀತಿಸಿದ್ದೆ ಅಲ್ಲವೇ? ನಿನಗೆ ಯಾವತ್ತೂ ಮರೆಯಲಾಗದಷ್ಟು..”

“ಹೌದು” ಜುಂಪೇ ಒಪ್ಪಿಕೊಂಡ “ನಿನಗೆ ಗೊತ್ತಾಯಿತೇ?”

“ಮ್..” ಅವಳು ನುಡಿದಳು. “ಹೆಂಗಸರು ಇಂತಹ ವಿಷಯದಲ್ಲಿ ಸೂಕ್ಷ್ಮಗ್ರಾಹಿಗಳು…”

“ಎಲ್ಲ ಹೆಂಗಸರು ಹಾಗಲ್ಲ…”

“ಎಲ್ಲ ಹೆಂಗಸರೂ ಹಾಗೆ ಎನ್ನುವದು ನನ್ನ ಮಾತಿನ ಅರ್ಥವಲ್ಲ..”

“ಹೌದು. ಅದು ನಿಜ..”

“ನಿನಗೆ ಅವಳನ್ನು ಭೇಟಿ ಮಾಡಲು ಸಾಧ್ಯವಿಲ್ಲ?”

“ಒಂದಷ್ಟು ತೊಡಕುಗಳಿವೆ..”

“ಮತ್ತು ಈ ತೊಡಕುಗಳನ್ನು ನಿವಾರಿಸುವ ಹಾದಿಗಳಿಲ್ಲ..”

“ಇಲ್ಲ..” ಜುಂಪೇ ಖಚಿತಪಡಿಸುವವನಂತೆ ತಲೆಯಾಡಿಸಿದ.

“ತೀವ್ರವಾಗಿ ಕಾಡುತ್ತದೆ ಅಲ್ಲವೇ?”

“ತೀವ್ರ ಹೌದೋ ಅಲ್ಲವೋ ಎನ್ನುವದು ಗೊತ್ತಿಲ್ಲ. ಆದರೆ ಕಾಡುವದ೦ತೂ ಹೌದು …”

ಕೀರಿ ಗ್ಲಾಸನ್ನು ತೆಗೆದುಕೊಂಡು ಸ್ವಲ್ಪ ವೈನನ್ನು ಹೀರಿದಳು. “ನನಗೆ ಮಾತ್ರ ಅಂಥವರು ಯಾರು ಇಲ್ಲ..” ತನ್ನಷ್ಟಕ್ಕೆ ತಾನೇ ಎನ್ನುವಂತೆ ಗೊಣಗಿಕೊಂಡಳು. “ನನಗೆ ನೀನು ಬಹಳ ಇಷ್ಟವಾಗುತ್ತಿಯ ಜುಂಪೇ. ನಿನ್ನ ಜೊತೆಯಿದ್ದಾಗಲೆಲ್ಲ ಖುಷಿಯಾಗಿರುತ್ತೇನೆ ಮತ್ತು ನನ್ನ ಮನಸ್ಸು ಅತ್ಯಂತ ಶಾಂತವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ನಿನ್ನೊಡನೆ ತುಂಬಾ ಗಂಭೀರವಾದ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂದು ನಾನು ಬಯಸುವದಿಲ್ಲ. ಇದು ನಿನಗೆ ಹೇಗೆ ಅನಿಸುತ್ತದೆ? ನಿನ್ನ ಮೇಲಿದ್ದ ಭಾರವನ್ನು ಇಳಿಸಿದ ಹಾಗೆ?”

ಜು೦ಪೇ ಅವಳ ತಲೆಗೂದಲಿನಲ್ಲಿ ಬೆರಳನ್ನಾಡಿಸಿದ. ಅವಳ ಪ್ರಶ್ನೆಗೆ ಉತ್ತರಿಸುವ ಬದಲು ಅವನು ಅವಳನ್ನು ಮರು ಪ್ರಶ್ನಿಸಿದ. “ಯಾಕೆ ಹಾಗೆ?”

“ಯಾಕೆ ನಾನು ನಿನ್ನೊಡನೆ ಯಾವಾಗಲು ಇರಲು ಬಯಸುವದಿಲ್ಲವೆಂದು?”

“ಹ್ಮ್ ..”

“ಅದು ನಿನ್ನನ್ನು ಕಾಡುತ್ತದೆಯೇ?”

“ಸ್ವಲ್ಪ..”

“ನೀನು ಎಂದಲ್ಲ ಜು೦ಪೇ. ಈ ಪ್ರತಿನಿತ್ಯದ ಗಂಭೀರ ಸಂಬಂಧವನ್ನು ಯಾರೊಟ್ಟಿಗೂ ಇಟ್ಟುಕೊಳ್ಳುವದಕ್ಕೆ ನನಗೆ ಸಾಧ್ಯವಿಲ್ಲ..” ಅವಳು ಹೇಳಿದಳು. “ನಾನು ಈಗ ಏನು ಮಾಡುತ್ತಿದ್ದೇನೋ ಅದರ ಮೇಲೆ ಸಂಪೂರ್ಣವಾಗಿ ಏಕಾಗ್ರ ಚಿತ್ತದಿಂದ ಕೆಲಸ ಮಾಡುವದು ಅತ್ಯಗತ್ಯ. ನಾನು ಇನ್ನೊಬ್ಬರೊಟ್ಟಿಗೆ ಬದುಕುವುದಾದರೆ, ಮತ್ತೊಬ್ಬರೊಟ್ಟಿಗೆ ಆಳವಾದ ಮಾನಸಿಕವಾಗಿ ಸಂಬಂಧ ಬೆಳೆಸಿದರೆ ನಾನು ಈಗ ಏನನ್ನು ಮಾಡಬೇಕು ಅಂದುಕೊಂಡಿದ್ದೇನೋ ಅದನ್ನು ಸಾಧಿಸುವದಕ್ಕೆ ಸಾಧ್ಯವಿಲ್ಲ. ಹೀಗಾಗಿ ಈ ಜೀವನ ಈಗ ಹೇಗೆ ನಡೆಯುತ್ತಿದೆಯೋ ಹಾಗೆ ಇರಲಿ ಎನ್ನುವದು ನನ್ನ ಬಯಕೆ..”

ಜುಂಪೇ ಅವಳು ಹೇಳಿದ್ದನ್ನು ಒಂದು ಕ್ಷಣ ಯೋಚಿಸಿದ. “ಅಂದರೆ ನೀನು ಮಾಡುವ ಕೆಲಸದಿಂದ ಮನಸ್ಸನ್ನು ಬೇರೆಡೆಗೆ ಹರಿಸುವದು ಬೇಡವೆಂದು?”

“ಹುಂ..”

“ನಿನ್ನ ಮನಸ್ಸು ಬೇರೆಡೆಗೆ ಹರಿದರೆ ನಿನ್ನ ಸಮತೋಲನ ತಪ್ಪಬಹುದು ಮತ್ತು ಅದು ನಿನ್ನ ವೃತ್ತಿಗೆ ಅಡ್ಡವಾಗಬಹುದು..”

“ನಿಜ.”

“ಮತ್ತು ಅಂತಹ ಅಪಾಯವನ್ನು ತಪ್ಪಿಸಲಿಕ್ಕಾಗಿ ನೀನು ಯಾರೊಬ್ಬರ ಜೊತೆಯೂ ಜೀವನ ನಡೆಸಲು ಇಷ್ಟಪಡುವದಿಲ್ಲ?”

ಅವಳು ತಲೆಯಾಡಿಸಿದಳು. “ಎಲ್ಲಿಯವರೆಗೆ ನಾನು ನನ್ನ ಈಗಿನ ವೃತ್ತಿಯಲ್ಲಿ ಇರುತ್ತೇನೋ ಅಲ್ಲಿಯವರೆಗೆ ಅದು ಸಾಧ್ಯವಿಲ್ಲ..”

“ಆದರೆ ನಿನ್ನ ವೃತ್ತಿ ಯಾವುದು ಎಂದು ನೀನು ನನಗೆ ಹೇಳುವದಿಲ್ಲ…”

“ಊಹೆ ಮಾಡು..”

“ನೀನೊಬ್ಬಳು ದರೋಡೆಕೋರಳು.”

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಎಲ್ಲಿಯೂ ಹೆಚ್ಚುಕಡಿಮೆ ಅನಿಸದ ಅವಳ ಸರಳವಾದ ಆದರೆ ಅವಳಿಗಷ್ಟೇ ವೈಯಕ್ತಿಕ ಅನಿಸುವ ಉಡುಪು. ಅವಳ ತುಂಬು ತುಟಿ ಅವಳ ಪ್ರತಿ ಮಾತಿನ ಕೊನೆಗೆ ತೆರೆದುಕೊಂಡು ಅಥವಾ ಮುಚ್ಚಿಕೊಂಡು ಮಾತಿನ ಅಂತ್ಯವನ್ನು ಸೂಚಿಸುತ್ತಿದ್ದವು. ಅದು ಅವಳ ಸಂಪೂರ್ಣ ವ್ಯಕ್ತಿತ್ವಕ್ಕೆ ಒಂದು ತೆರನಾದ ಜೀವಂತಿಕೆಯನ್ನೂ, ಲವಲವಿಕೆಯನ್ನು ತುಂಬಿಕೊಟ್ಟಿತ್ತು.

“ಖಂಡಿತವಾಗಿಯೂ ಇಲ್ಲ” ಅವಳು ಹುಸಿಮುನಿಸಿನಿಂದ ನೋಡಿದಳು. “ಎಂಥಹ ಅದ್ಭುತ ಊಹೆ. ದಯವಿಟ್ಟು ತಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಯಾವ ದರೋಡೆಕೋರನೂ ಮುಂಜಾನೆ ದರೋಡೆಗೆ ಹೊರಡುವದಿಲ್ಲ..”

“ಹಾಗಾದರೆ ಬಾಡಿಗೆ ಹಂತಕ..”

“ಹಂತಕಿ” ಅವಳು ಅವನನ್ನು ಸರಿಪಡಿಸಿದಳು. “ಅದು ಅಲ್ಲ. ಆದರೆ ನೀನು ಯಾಕೆ ಇಂತಹ ಭಯಾನಕ ಸಾಧ್ಯತೆಗಳನ್ನು ಊಹಿಸುತ್ತಿದ್ದೀಯ?”

“ಅಂದರೆ ನೀನು ಮಾಡುವದು ಕಾನೂನು ಬದ್ಧವಾದ ಕೆಲಸ..”

“ಖಂಡಿತ..”

“ಪತ್ತೇದಾರಿ ಕೆಲಸ?”

“ಅಲ್ಲ. ನನ್ನ ಕೆಲಸ ಏನು ಎನ್ನುವದನ್ನು ಊಹೆ ಮಾಡುವದನ್ನು ಇಲ್ಲಿಗೆ ನಿಲ್ಲಿಸೋಣ. ಇದಕ್ಕಿಂತ ನಿನ್ನ ಬರವಣಿಗೆಯ ಬಗ್ಗೆ ಮಾತನಾಡುವದೇ ಎಷ್ಟೋ ವಾಸಿ. ಹೇಳು, ನೀನು ಹೊಸದಾಗಿ ಏನನ್ನು ಬರೆಯುತ್ತಿದ್ದೀಯ? ಏನನ್ನಾದರೂ ಬರೆಯುತ್ತಿದ್ದೀಯ ತಾನೇ?”

“ಹೌದು, ಒಂದು ಸಣ್ಣ ಕತೆ..”

“ಯಾವ ರೀತಿಯ ಕತೆ?”

“ಬರೆದು ಮುಗಿಸಿಲ್ಲ. ಒಂದು ವಿರಾಮ ತೆಗೆದುಕೊಂಡಿದ್ದೇನೆ.”

“ಸರಿ, ವಿರಾಮದವರೆಗೆ ಏನಾಗುತ್ತದೆ ಅನ್ನುವದನ್ನು ಮಾತ್ರ ಹೇಳು..”

ಜುಂಪೇ ಮೌನಕ್ಕೆ ಶರಣಾದ. ಬರವಣಿಗೆ ಅರ್ಧದಲ್ಲಿರುವಾಗ ಅದರ ಬಗ್ಗೆ ಯಾರೊಟ್ಟಿಗೂ ಮಾತನಾಡಬಾರದು ಎನ್ನುವದು ಅವನ ಸಿದ್ಧಾಂತ. ಇಲ್ಲವಾದರೆ ಕತೆಯ ತೀವ್ರತೆ ಕಡಿಮೆಯಾಗಬಹುದು. ಬರೆಯುತ್ತಿರುವ ಕತೆಗೆ ಮಾತಿನ ರೂಪ ಕೊಟ್ಟು ಮತ್ತೊಬ್ಬರಲ್ಲಿ ಹೇಳಿಕೊಂಡಾಗ ಅವನಿಗರಿವಿಲ್ಲದಂತೆ ಕತೆಯಲ್ಲಿನ ಅದೃಶ್ಯ ಭಾವವೊಂದು ಅವನ ಹಿಡಿತಕ್ಕೆ ಸಿಗುವ ಮೊದಲೇ ಮಂಜಿನಂತೆ ಕರಗಿ ಹೋಗುತ್ತದೆ ಎನ್ನುವದು ಅವನ ನಂಬಿಕೆಯಾಗಿತ್ತು. ಅತ್ಯಂತ ನಾಜೂಕಾಗಿ ಹೆಣೆದ ಅರ್ಥ ವಿನ್ಯಾಸ ಕತೆಯಿಂದ ಕಳಚಿಬಿಡಬಹುದು ಎನ್ನುವದು ಅವನ ಭಯ. ಆದರೆ ಈಗ ಈ ಮಂಚದ ಮೇಲೆ ಮಲಗಿ ‘ಕೀರಿ’ಯ ಕೂದಲಿನಲ್ಲಿ ಕೈಯಾಡಿಸುವಾಗ, ಅವಳಿಗೆ ಕತೆಯನ್ನು ಹೇಳುವದರಲ್ಲಿ ಏನೂ ತಪ್ಪಿಲ್ಲ ಎಂದು ಒಂದು ಕ್ಷಣಕ್ಕೆ ಅವನಿಗೆ ಅನಿಸಿತು. ಇಷ್ಟಕ್ಕೂ ಕತೆಯನ್ನು ಮುಂದುವರೆಸಲಾಗದೆ ಕೆಲ ದಿನಗಳಿಂದ ಅವನು ಒದ್ದಾಡುತ್ತಿದ್ದ.

“ಕತೆಯಿರುವದು ಪ್ರಥಮ ಪುರುಷ ನಿರೂಪಣೆಯಲ್ಲಿ ಮತ್ತು ಕತೆಯ ಮುಖ್ಯ ಪಾತ್ರ ಒಬ್ಬಳು ಮಹಿಳೆ…” ಅವನು ಶುರುಮಾಡಿದನು.

“ಅವಳಿಗೆ ಸುಮಾರು ಮೂವತ್ತು ವರ್ಷವಾಗಿರಬಹುದು, ಅವಳು ಬಹು ದೊಡ್ಡ ಆಸ್ಪತ್ರೆಯೊಂದರಲ್ಲಿ ಹೆಸರಾಂತ ಆಂತರಿಕ ರೋಗಗಳ ತಜ್ಞೆ. ಅವಳು ಅವಿವಾಹಿತೆ. ಆದರೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶಸ್ತ್ರವೈದ್ಯರೊಟ್ಟಿಗೆ ಅವಳಿಗೆ ಸಂಬಂಧವಿದೆ. ಅವನಿಗೆ ಸುಮಾರು ಐವತ್ತರ ಆಸುಪಾಸಿರಬಹುದು ಮತ್ತು ಅವನಿಗೆ ಹೆಂಡತಿ ಮಕ್ಕಳಿದ್ದಾರೆ.”

ಕೀರಿ ಕತೆಯ ನಾಯಕಿಯನ್ನು ಕಲ್ಪಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಳು. “ಅವಳು ಆಕರ್ಷಕವಾಗಿದ್ದಾಳೆಯೇ?”

“ಹುಂ. ಆಕರ್ಷಕವಾಗಿದ್ದಾಳೆ. ಆದರೆ ನಿನ್ನಷ್ಟಲ್ಲ.”

ಕೀರಿ ನಸುನಕ್ಕು ಜುಂಪೇಯ ಕುತ್ತಿಗೆಗೆ ಮುತ್ತು ನೀಡಿದಳು. “ಅದು ಸರಿಯಾದ ಉತ್ತರ.”

“ನಾನು ಸಾಧ್ಯವಾದಷ್ಟು ಸರಿಯಾದ ಉತ್ತರವನ್ನೇ ಕೊಡಲು ಬಯಸುತ್ತೇನೆ.”

“ವಿಶೇಷವಾಗಿ ಹಾಸಿಗೆಯಲ್ಲಿ ಅಲ್ಲವೇ..”

“ವಿಶೇಷವಾಗಿ ಹಾಸಿಗೆಯಲ್ಲಿ.” ಅವನು ಉತ್ತರಿಸಿದ. “ಒಂದು ದಿನ ಅವಳು ಆಸ್ಪತ್ರೆಯ ಕೆಲಸದಿಂದ ವಿರಾಮ ತೆಗೆದುಕೊಂಡು ಪ್ರವಾಸಕ್ಕೆ ಹೋಗುತ್ತಾಳೆ. ಅದು ಶರತ್ಕಾಲ. ಈಗಿನ ಹಾಗೆ. ಪರ್ವತದ ಮೇಲಿರುವ ಒಂದು ಸಣ್ಣ ರೆಸಾರ್ಟಿನಲ್ಲಿರುತ್ತಾಳೆ. ಅವಳು ಉಳಿದುಕೊಂಡಿರುವ ರೆಸಾರ್ಟಿನ ಹತ್ತಿರ ಸಣ್ಣಗೆ ಹರಿಯುತ್ತಿರುವ ತೊರೆಯಲ್ಲಿ ಅವಳು ಹೆಜ್ಜೆ ಹಾಕುತ್ತಾಳೆ. ಪಕ್ಷಿವೀಕ್ಷಣೆ ಅವಳಿಗೆ ಪ್ರಿಯವಾದ ಹವ್ಯಾಸ ಮತ್ತು ಮಿಂಚುಳ್ಳಿಗಳನ್ನು ನೋಡುವದೆಂದರೆ ಅವಳಿಗೆ ಎಲ್ಲಿಲ್ಲದ ಖುಷಿ. ಯಾವತ್ತೊ ಹರಿದು ಬತ್ತಿಹೋದ ತೊರೆಯ ಸೆಲೆಯೊಂದರಲ್ಲಿ ಅವಳು ಹೆಜ್ಜೆಯಿಡುತ್ತಾಳೆ. ಅಲ್ಲಿ ಅವಳಿಗೆ ವಿಚಿತ್ರವಾದ ಕಲ್ಲೊಂದು ಕಾಣುತ್ತದೆ. ಕಪ್ಪು ಬಣ್ಣದ ನುಣುಪಾದ ಆ ಕಲ್ಲಿನಲ್ಲಿ ನಸುಗೆ೦ಪಿನ ಛಾಯೆಯಿತ್ತು ಮತ್ತು ಕಲ್ಲಿನ ಸ್ವರೂಪ ಅವಳಿಗೆ ಸಾಕಷ್ಟು ಪರಿಚಿತವಾದಂತೆ ಭಾಸವಾಗುತಿತ್ತು. ನೋಡಿದಾಕ್ಷಣ ಅವಳಿಗೆ ಅದು ಕಿಡ್ನಿಯ ಆಕಾರವಿದೆ ಎಂದೆನಿಸಿತು. ಕಲ್ಲಿನ ಬಗೆಗಿನ ಎಲ್ಲವೂ ನೈಜ ಕಿಡ್ನಿಯ ಹಾಗೆ – ಗಾತ್ರ, ಆಕಾರ, ಬಣ್ಣ ಮತ್ತು ತೂಕ.

“ಮತ್ತು ಅವಳು ಆ ಕಲ್ಲನ್ನು ಹೆಕ್ಕಿಕೊಂಡು ಮನೆಗೆ ತರುತ್ತಾಳೆ.”

“ಹೌದು..” ಜುಂಪೇ ಹೇಳಿದ “ಅವಳು ಅದನ್ನು ಆಸ್ಪತ್ರೆಗೆ ತರುತ್ತಾಳೆ ಮತ್ತು ಅದನ್ನು ಪೇಪರ್ ವೈಟ್ ಹಾಗೆ ಉಪಯೋಗಿಸುತ್ತಾಳೆ. ಕಲ್ಲಿನದು ಹೇಳಿ ಮಾಡಿಸಿದ ಗಾತ್ರ ಮತ್ತು ತೂಕ..”

“ಮತ್ತು ಆಸ್ಪತ್ರೆಗೆ ಹೇಳಿ ಮಾಡಿಸಿದಂತಹ ಆಕಾರ.”

“ಹೌದು..” ಜುಂಪೇ ಹೇಳಿದ “ಆದರೆ ಸ್ವಲ್ಪ ದಿನಗಳಾದ ಮೇಲೆ ಅವಳು ಒಂದು ವಿಲಕ್ಷಣ ಘಟನೆಯನ್ನು ಗಮನಿಸುತ್ತಾಳೆ ..”

ಕೀರಿ ಕತೆ ಮುಂದುವರೆಯುವದನ್ನು ಮೌನವಾಗಿ ನಿರೀಕ್ಷಿಸಿದಳು. ಅವಳ ಮೌನವನ್ನು ಪರೀಕ್ಷಿಸುವವನಂತೆ ಜುಂಪೇ ಮತ್ತಷ್ಟು ಮೌನಿಯಾದ.

ಜು೦ಪೇ ಉದ್ದೇಶಪೂರ್ವಕವಾಗಿ ಕತೆ ಹೇಳುವದನ್ನು ನಿಲ್ಲಿಸಿದ್ದಲ್ಲ. ಕತೆಯನ್ನು ಇಲ್ಲಿಂದ ಮುಂದಕ್ಕೆ ಕೊಂಡೊಯ್ಯಲು ಅವನು ಹೆಣಗಾಡುತ್ತಿದ್ದ. ಜು೦ಪೇ ಕತೆಯ ಈ ಭಾಗದಲ್ಲಿ ನಿಂತು ಸುತ್ತಲೂ ಒಮ್ಮೆ ದೃಷ್ಟಿ ಹಾಯಿಸಿದ ಮತ್ತು ತನ್ನೆಲ್ಲ ಬುದ್ಧಿಶಕ್ತಿಯನ್ನು ಕತೆಯ ಮುಂದಿನ ಭಾಗವನ್ನು ಕಲ್ಪಿಸಲು ವಿನಿಯೋಗಿಸಿದ. ಸ್ವಲ್ಪ ಕಾಲದ ನಂತರ ಕತೆ ಹೇಗೆ ಮುಂದುವರೆಯಬೇಕು ಎನ್ನುವದನ್ನು ನಿರ್ಧರಿಸಿದ.

“ಪ್ರತಿ ಮುಂಜಾನೆ ಕಲ್ಲು ಬೇರೆ ಬೇರೆ ಜಾಗದಲ್ಲಿ ಇರುವದನ್ನು ಅವಳು ಗಮನಿಸಿದಳು. ದಿನನಿತ್ಯ ಸಂಜೆ ಮನೆಗೆ ಹೋಗುವ ಮೊದಲು ಸಾಮಾನ್ಯವಾಗಿ ಅವಳು ಕಲ್ಲನ್ನು ತನ್ನ ಮೇಜಿನ ಮೇಲಿಟ್ಟು ಹೋಗುತ್ತಿದ್ದಳು. ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ಇಡುವದು ಅವಳ ಅಭ್ಯಾಸ. ಹೀಗಾಗಿ ಅವಳು ಪ್ರತಿದಿನ ಕಲ್ಲನ್ನು ಒಂದೇ ಜಾಗದಲ್ಲಿ ಇಡುತ್ತಿದ್ದಳು. ಆದರೆ ಮರುದಿನ ಕಲ್ಲು ಅವಳ ಕುರ್ಚಿಯ ಮೇಲೆ, ರೂಮಿನಲ್ಲಿದ್ದ ಹೂಕುಂಡದ ಮೇಲೆ ಅಥವಾ ನೆಲದ ಮೇಲಿರುತಿತ್ತು. ಮೊದಮೊದಲು ಅವಳು ತಾನೇ ಬೇರೆ ಬೇರೆ ಕಡೆ ಕಲ್ಲನ್ನು ಇಡುತ್ತಿದ್ದೇನೆ ಎಂದು ಭಾವಿಸಿದ್ದಳು. ನಂತರ ತನ್ನ ನೆನಪಿನ ಶಕ್ತಿ ಏನಾದರೂ ತನಗೆ ಆಟವಾಡುಸುತ್ತಿದೆಯೇ ಎಂದು ಯೋಚಿಸಿದಳು. ಬಾಗಿಲಿಗೆ ಅವಳು ಯಾವಾಗಲೂ ಬೀಗ ಹಾಕಿರುತ್ತಿದ್ದಳು. ಹೀಗಾಗಿ ಮತ್ತೊಬ್ಬರು ಒಳಗೆ ಬರುವ ಸಂಭವವಿರಲಿಲ್ಲ. ರಾತ್ರಿ ಪಾಳೆಯ ಕಾವಲುಗಾರನ ಬಳಿ ಒಂದು ಜೊತೆ ಕೀಗಳು ಇದ್ದರೂ, ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅವನು ಬೀಗ ತೆಗೆದು ಮತ್ತೊಬ್ಬರ ಕೊಠಡಿಗೆ ಹೊಕ್ಕುವಷ್ಟು ಧೈರ್ಯ ಅವನಿಗಿರಲಿಲ್ಲ. ಅದೂ ಅಲ್ಲದೆ ಅವಳ ಕೊಠಡಿಗೆ ಪ್ರತಿ ರಾತ್ರಿ ಹೊಕ್ಕು ಪೇಪರ್ ವೈಟ್ ಆಗಿ ಅವಳು ಉಪಯೋಗಿಸುತ್ತಿದ್ದ ಕಲ್ಲಿನ ಜಾಗವನ್ನು ಬದಲಿಸುವ ಯಾವ ಅವಶ್ಯಕತೆಯೂ ಅವನಿಗೆ ಇದ್ದಂತಿರಲಿಲ್ಲ. ಅವಳ ಕೊಠಡಿಯಲ್ಲಿ ಬೇರೆ ಯಾವ ಬದಲಾವಣೆಯೂ ಆಗುತ್ತಿರಲಿಲ್ಲ. ಕಲ್ಲಿನ ಜಾಗ ಮಾತ್ರ ಬದಲಾಗುತ್ತಿತ್ತು. ಅವಳಿಗೆ ಏನಾಗುತ್ತಿದೆ ಎನ್ನುವದೇ ತೋಚದಂತಾಯಿತು. ಅವಳ ಕೊಠಡಿಯಲ್ಲಿ ಏನಾಗುತ್ತಿರಬಹುದು? ಕಲ್ಲು ಪ್ರತಿ ರಾತ್ರಿ ಚಲಿಸುವದು ಯಾಕಿರಬಹುದು?”

“ಕಿಡ್ನಿಯಾಕಾರದ ಕಲ್ಲು ಏನನ್ನು ಮಾಡುತ್ತಿದೆಯೋ ಅದಕ್ಕೆ ಅದರದ್ದೇ ಆದ ಕಾರಣಗಳಿರಬಹುದು.” ಕೀರಿ ಆತ್ಮವಿಶ್ವಾಸದ ಧ್ವನಿಯಲ್ಲಿ ನುಡಿದಳು.
“ಕಿಡ್ನಿಯಾಕಾರದ ಕಲ್ಲಿನ ಕ್ರಿಯೆಯ ಹಿಂದೆ ಯಾವ ಕಾರಣವಿರಬಹುದು?”

“ಕಲ್ಲು ಅವಳ ಆಳದ ಯಾವುದೋ ತಂತುವನ್ನು ಮೀಟಲು ಪ್ರಯತ್ನಿಸುತ್ತಿದೆ. ಹಂತ ಹಂತವಾಗಿ. ಸುದೀರ್ಘವಾಗಿ.”

“ಒಪ್ಪಿಕೊಂಡೆ. ಆದರೆ ಯಾಕೆ ಹಾಗೆ ಮಾಡಬೇಕು?”

“ನನಗೆ ಗೊತ್ತಿಲ್ಲ…” ಕೀರಿ ಕಿಲಕಿಲ ನಗುತ್ತ ನುಡಿದಳು “ಬಹುಶಃ ಅವಳ ಪ್ರಪಂಚಕ್ಕೆ ಕಲ್ಲೆಸೆಯಲು ಪ್ರಯತ್ನಿಸುತ್ತಿರಬಹುದು.”
“ನಾನು ಈ ಜನ್ಮದಲ್ಲಿ ಕೇಳಿದ ಅತ್ಯಂತ ಕೆಟ್ಟ ಜೋಕು ಇದು..”

“ಕತೆಯ ಬರಹಗಾರ ನೀನು. ಏನಾಗಬೇಕು ಎನ್ನುವದನ್ನು ನಿರ್ಧರಿಸಬೇಕಾದವನು ನೀನಲ್ಲವೇ? ನಾನು ಕೇವಲ ಕೇಳುಗಳು.”

ಜುಂಪೇಯ ಹುಬ್ಬು ಗ೦ಟಿಕ್ಕಿದವು. ಸತತವಾಗಿ ಏಕಾಗ್ರತೆಯಿಂದ ಯೋಚಿಸುತ್ತಿರುವದರಿಂದ ಅವನಿಗೆ ಸಣ್ಣಗೆ ತಲೆ ನೋವು ಬಂದಂತಾಯಿತು. ಬಹುಶಃ ವೈನ್ ಕುಡಿದಿದ್ದು ತುಸು ಜಾಸ್ತಿಯೇ ಆಗಿರಬಹುದು. “ಕತೆ ಮುಂದುವರೆಸಲಿಕ್ಕೆ ಮುಂದಿನ ವಿಚಾರ ಹೊಳೆಯುತ್ತಿಲ್ಲ. ನಾನು ನನ್ನ ಬರೆಯುವ ಮೇಜಿನಲ್ಲಿ ಕುಳಿತುಕೊಂಡು ಕೈಯನ್ನು ಮುಂದಕ್ಕೆ ಹಿಂದಕ್ಕೆ ಆಡಿಸಿ ಯೋಚಿಸಿದರೆ ಮಾತ್ರ ಕಥೆಯನ್ನು ಹೇಗೆ ಮುಂದುವರೆಸಬಹುದು ಎನ್ನುವದು ಹೊಳೆಯಬಹುದೇನೋ. ಸ್ವಲ್ಪ ಹೊತ್ತು ನೀನು ಇಲ್ಲೇ ಇದ್ದು ಕಾಯಬಹುದೇ? ನನಗನಿಸುತ್ತಿದೆ ಕತೆಯ ಮುಂದಿನ ಭಾಗ ತನ್ನಷ್ಟಕ್ಕೆ ತಾನೇ ನನ್ನಿಂದ ಬರೆಸಿಕೊಂಡು ಹೋಗುತ್ತದೆ..”

“ನನಗೇನೂ ಅಭ್ಯ೦ತರವಿಲ್ಲ..” ಕೀರಿ ನುಡಿದಳು. ಅವಳು ಗ್ಲಾಸಿನಿಂದ ಒಂದು ಗುಟುಕು ವೈನ್ ಹೀರಿದಳು. “ನಾನು ಕಾಯುತ್ತೇನೆ. ನಿಜ ಹೇಳಬೇಕೆಂದರೆ ಕತೆ ಬಹಳ ಆಸಕ್ತಿದಾಯಕವಾಗಿದೆ. ಕಿಡ್ನಿಯಾಕಾರದ ಕಲ್ಲು ಮುಂದೇನು ಮಾಡುತ್ತದೆ ಎನ್ನುವದನ್ನು ತಿಳಿದುಕೊಳ್ಳಲು ನಾನು ಕಾತುರಳಾಗಿದ್ದೇನೆ..”

ಅವಳು ಜುಂಪೇಯನ್ನು ಹಿತವಾಗಿ ತಬ್ಬಿಕೊಂಡಳು. ನಂತರ ಸಣ್ಣಗೆ ಗುಟ್ಟೊ೦ದನ್ನು ಹೇಳುವಂತೆ ಅವನ ಕಿವಿಯಲ್ಲಿ ಪಿಸುನುಡಿದಳು “ನಿನಗೆ ಒಂದು ವಿಷಯ ಗೊತ್ತೇ ಜುಂಪೇ, ಈ ಪ್ರಪಂಚದಲ್ಲಿ ನಡೆಯುವ ಪ್ರತಿ ಕ್ರಿಯೆಯ ಹಿಂದೆ ಒಂದಲ್ಲ ಒಂದು ಕಾರಣವಿರುತ್ತದೆ.” ಜುಂಪೇಗೆ ನಿದ್ರೆ ಕವಿಯುತಿತ್ತು. ಅವನಿಗೆ ಪ್ರತಿಕ್ರಿಯಿಸಲು ಆಗಲಿಲ್ಲ. ರಾತ್ರಿಯ ಏಕಾಂತದ ನಿಶ್ಶಬ್ದದಲ್ಲಿ ಅವಳ ಮಾತಿನ ಶಬ್ಧಗಳು ವಾಕ್ಯಗಳ ಕೊಂಡಿಯನ್ನು ಕಳಚಿಕೊಂಡು ಬಿಡಿ ಬಿಡಿಯಾಗಿ ವೈನಿನ ವಾಸನೆಯೊಂದಿಗೆ ಬೆರೆತು ಅವನ ಸುಪ್ತ ಪ್ರಜ್ಞೆಯನ್ನು ನಿಧಾನಕ್ಕೆ ತಾಕುತ್ತಿದ್ದವು. “ಉದಾಹರಣೆಗೆ ಬೀಸುವ ಗಾಳಿಗೆ ಅದರದ್ದೇ ಆದ ಕಾರಣಗಳಿವೆ. ನಮ್ಮ ಕೆಲಸಕಾರ್ಯಗಳ ನಡುವೆ ನಾವು ಅದನ್ನು ಗಮನಿಸುವದಿಲ್ಲ ಅಷ್ಟೇ. ಆದರೆ ಯಾವದೋ ಒಂದು ಬಿಂದುವಿನಲ್ಲಿ ನಾವು ಅದನ್ನು ಗಮನಿಸಲು ಪ್ರಾರಂಭಿಸುತ್ತೇವೆ. ಗಾಳಿ ನಮ್ಮನ್ನು ತಾಕುವಾಗ ಅದರ ಆಳದಲ್ಲಿ ಒಂದು ಕಾರಣವನ್ನಿಟ್ಟುಕೊಂಡು ಆವರಿಸುತ್ತದೆ. ಬೀಸುವ ಗಾಳಿಗೆ ನಿನ್ನೊಳಗೆ ಇರುವದೆಲ್ಲವೂ ತಿಳಿದಿದೆ. ಕೇವಲ ಗಾಳಿಯೊಂದಕ್ಕೆ ಅಲ್ಲ. ಪ್ರತಿಯೊಂದಕ್ಕೂ, ಕಲ್ಲಿಗೂ ಸಹ. ಅವಕ್ಕೆ ನಮ್ಮ ಒಳ ಸುಳಿಗಳ ಅರಿವಿದೆ. ಅದು ನಮಗೆ ಅರಿವಾಗುವದು ಯಾವತ್ತೋ ಒಮ್ಮೆ ಮಾತ್ರ ಮತ್ತು ಹಾಗೆ ಅರಿತಾಗ ಆ ಅರಿವಿನೊಟ್ಟಿಗೆ ಬದುಕುವದನ್ನು ಬಿಟ್ಟು ನಾವು ಬೇರೇನೂ ಮಾಡಲು ಸಾಧ್ಯವಿಲ್ಲ. ಅಂತದೊಂದು ಅರಿವು ನಮ್ಮೊಳಗೆ ಇಳಿದಾಗಲೇ ನಾವು ಗಟ್ಟಿಯಾಗುವದು ನಾವು ಬದುಕುಳಿಯುವದು.”

ಮುಂದಿನ ಐದು ದಿನಗಳ ಕಾಲ ಜುಂಪೇ ತನ್ನ ಮನೆಯನ್ನು ಬಿಟ್ಟು ಹೊರಗೆಲ್ಲೂ ಹೋಗಲಿಲ್ಲ. ಬರೆಯುವ ಮೇಜಿನ ಮೇಲೆ ಕುಳಿತು ಸತತವಾಗಿ ಕಿಡ್ನಿಯಾಕಾರದ ಕಲ್ಲಿನ ಕತೆಯನ್ನು ಬರೆದು ಮುಗಿಸಿದ. ಕೀರಿ ಊಹಿಸಿದ ಹಾಗೆ ಕಿಡ್ನಿಯಾಕಾರದ ಕಲ್ಲು ಹಂತ ಹಂತವಾಗಿ ವೈದ್ಯೆಯ ಜೀವನವನ್ನು ಅಲ್ಲಾಡಿಸಲು ಪ್ರಾರಂಭಿಸಿತು. ನಿಧಾನವಾಗಿ ಆದರೆ ನಿಖರವಾಗಿ.

ಒಂದು ದಿನ ಹೋಟೆಲಿನ ರೂಮಿನಲ್ಲಿ ಅವಳ ಪ್ರಿಯಕರನ ಜೊತೆಗೆ ಹಾಸಿಗೆಯಲ್ಲಿ ಮಲಗಿದ್ದಾಗ ಅವಳು ಮೆತ್ತಗೆ ಅವನ ಬೆನ್ನಿನ ಕೆಳಗೆ ಸೊಂಟದ ಮೇಲೆ ಕೈ ಆಡಿಸಿದಾಗ ಅವಳ ಕೈಗೆ ಕಿಡ್ನಿಯಾಕಾರವನ್ನು ಸ್ಪರ್ಶಿಸಿದ ಅನುಭವವಾಯಿತು. ಕಿಡ್ನಿಯಾಕಾರದ ಕಲ್ಲು ಅಲ್ಲಿ ಸರಿದಾಡುತ್ತಿರುವದು ಅವಳಿಗೆ ಅರಿವಾಯಿತು. ತನ್ನ ಪ್ರಿಯಕರನ ದೇಹದಲ್ಲಿ ಅವಳೇ ಆ ಕಿಡ್ನಿಯನ್ನು ರಹಸ್ಯವಾಗಿ ಹುಗಿದಿಟ್ಟಿದ್ದಳು. ಅವಳ ಕೈಬೆರಳುಗಳ ನಡುವೆ ಸಣ್ಣ ಕೀಟದಂತೆ ಕಿಡ್ನಿ ಸರಿದಾಡುತ್ತ ಅವಳಿಗೆ ಕಿಡ್ನಿಯಾಕಾರದ ಸಂದೇಶಗಳನ್ನು ಕಳಿಸುತ್ತಿತ್ತು. ಅವಳು ಕಿಡ್ನಿಯ ಜೊತೆಗೆ ಮಾತನಾಡುತ್ತಿದ್ದಳು ಅವಳ ವಿಚಾರಗಳನ್ನು ಹೇಳುತ್ತಿದ್ದಳು. ಕಿಡ್ನಿಯ ನುಣುಪನ್ನು ಅವಳು ಅಂಗೈಯಲ್ಲಿ ಅನುಭವಿಸುತ್ತಿದ್ದಳು.

ದಿನ ಕಳೆದಂತೆ ವೈದ್ಯೆಗೆ ಕಿಡ್ನಿಯಾಕಾರದ ಕಲ್ಲು ಭಾರವಾಗುತ್ತಿರುವದು, ಪ್ರತಿ ರಾತ್ರಿ ಸ್ಥಳಾ೦ತರವಾಗುತ್ತ ತನ್ನ ಅಸ್ತಿತ್ವವನ್ನು ಪ್ರಕಟಿಸುವದು ಅಭ್ಯಾಸವಾಯಿತು. ಅವಳು ಇದನ್ನು ಸಹಜ ಕ್ರಿಯೆಯೆ೦ದು ಒಪ್ಪಿಕೊಂಡಳು. ಈಗ ಕಿಡ್ನಿಯಾಕಾರದ ಕಲ್ಲು ರಾತ್ರಿ ಚಲಿಸಿ ಸ್ಥಾನ ಬದಲಿಸಿದಾಗ ಅವಳಿಗೆ ಆಶ್ಚರ್ಯವಾಗುತ್ತಿರಲಿಲ್ಲ. ಅವಳು ಬೆಳಿಗ್ಗೆ ಆಸ್ಪತ್ರೆಗೆ ಬಂದಾಗ ಕಿಡ್ನಿಯಾಕಾರದ ಕಲ್ಲನ್ನು ಹುಡುಕಿ ಮತ್ತೆ ಅದರ ಜಾಗದಲ್ಲಿ ಇಡುತ್ತಿದ್ದಳು. ಈ ಕೆಲಸ ಅವಳ ದಿನಚರಿಯ ಒಂದು ಭಾಗವೇ ಆಯಿತು. ಅವಳು ರೂಮಿನಲ್ಲಿದ್ದಾಗ ಕಲ್ಲು ಚಲಿಸುತ್ತಿರಲಿಲ್ಲ. ಅದು ಬೆಕ್ಕು ಬಿಸಿಲನ್ನು ಕಾಯಿಸುತ್ತಾ ಬೆಚ್ಚಗೆ ಮಲಗಿದಂತೆ ಒಂದೆಡೆ ಮಲಗಿರುತ್ತಿತ್ತು. ಸಂಜೆ ರೂಮಿನ ಬಾಗಿಲನ್ನು ಹಾಕಿ ಅವಳು ಮನೆಗೆ ಹೋದ ನಂತರವೇ ಕಲ್ಲು ಎಚ್ಚರಗೊಂಡು ಚಲಿಸುತ್ತಿತ್ತು.

ಅವಳಿಗೆ ಬಿಡುವಾದಾಗಲೆಲ್ಲ ಕಲ್ಲಿನ ನುಣುಪಾದ, ಗಾಢ ವರ್ಣದ ಮೇಲ್ಮೈ ಸವರುತ್ತ ಸಮಯ ಕಳೆಯುತ್ತಿದ್ದಳು. ಕೆಲ ದಿನಗಳಾದಮೇಲೆ ಅವಳಿಗೆ ಕಲ್ಲಿನಿಂದ ದೃಷ್ಟಿಯನ್ನು ತೆಗೆಯುವದೇ ಕಷ್ಟವಾಗತೊಡಗಿತು. ಮೋಡಿಗೊಳಗಾದ ಹಾಗೆ ಅವಳು ಸದಾಕಾಲ ಕಲ್ಲನ್ನು ದಿಟ್ಟಿಸುತ್ತಿದ್ದಳು. ನಿಧಾನವಾಗಿ ಅವಳು ಬೇರೆಲ್ಲ ಕೆಲಸಗಳ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳತೊಡಗಿದಳು. ಅವಳಿಗೆ ಈಗ ಪುಸ್ತಕ ಓದಲು ಸಾಧ್ಯವಾಗುತ್ತಿರಲಿಲ್ಲ. ಜಿಮ್ ಗೆ ಹೋಗುವದನ್ನು ನಿಲ್ಲಿಸಿದಳು. ರೋಗಿಗಳನ್ನು ನೋಡಲು ಸಾಧ್ಯವಾಗುವಷ್ಟು ಏಕಾಗ್ರತೆ ಮಾತ್ರ ಅವಳಲ್ಲಿ ಕೊಂಚ ಉಳಿದಿತ್ತು. ಏಕಾಗ್ರತೆ ಎನ್ನುವದಕ್ಕಿಂತ ಅನುಭವದ ಆಧಾರದ ಮೇಲೆ ಮತ್ತು ವಾಡಿಕೆಯಂತೆ ಅವಳು ರೋಗಿಗಳನ್ನು ಪರೀಕ್ಷಿಸಿ ಕಳುಹಿಸುತ್ತಿದ್ದಳು.

ಅವಳು ಸಹೋದ್ಯೋಗಿಗಳ ಜೊತೆಗೆ ಮಾತನಾಡುವದರಲ್ಲಿ ಔದಾಸೀನ್ಯ ತೋರಲಾರಂಭಿಸಿದಳು. ಕ್ರಮೇಣ ಅವಳ ಹಸಿವು ಇಂಗತೊಡಗಿತು. ಅವಳ ಪ್ರಿಯಕರನ ಆಲಿಂಗನ ಸಹ ಕಿರಿಕಿರಿಯಾಗತೊಡಗಿತು. ಸುತ್ತ ಯಾರೂ ಇಲ್ಲದಿರುವಾಗ ಅವಳು ತನ್ನಷ್ಟಕ್ಕೆ ತಾನೇ ಕಲ್ಲಿನ ಜೊತೆಗೆ ಮಾತನಾಡುತ್ತಿದ್ದಳು. ಜನರು ಮೂಕ ಪ್ರಾಣಿಗಳ ಜೊತೆಗೆ ನಡೆಸುವ ಸಂಭಾಷಣೆಯಂತೆ ಕಲ್ಲು ಹೇಳುವ ಮಾತಿಲ್ಲದ ನಿಶ್ಯಬ್ದ ಶಬ್ದಗಳನ್ನು ಅವಳು ಆಲಿಸುತ್ತಿದ್ದಳು. ದಟ್ಟನೆಯ ವರ್ಣದ ಕಿಡ್ನಿಯಾಕಾರದ ಕಲ್ಲು ಈಗ ಅವಳ ಬಹುತೇಕ ಜಗತ್ತನ್ನು ನಿಯಂತ್ರಿಸುತ್ತಿತ್ತು.

ಖಂಡಿತವಾಗಿಯೂ ಕಲ್ಲು ಯಾವುದೋ ಶೂನ್ಯದಿಂದ ಸೃಷ್ಟಿಯಾಗಿ ಅವಳ ಬಳಿ ಬಂದಿದ್ದಲ್ಲ. ಕತೆ ಮುಂದುವರೆದಂತೆ ಜುಂಪೆಗೆ ಈ ಸತ್ಯ ಸ್ಪಷ್ಟವಾಗಿ ಗೋಚರಿಸಿತ್ತು. ಅದು ಅವಳೊಳಗಿನ ಯಾವುದೋ ಒಂದು ಭಾವವೇ ಆಗಿತ್ತು. ಅವಳೊಗಿನ ಯಾವುದೋ ಭಾವ ತಂತು ಕಿಡ್ನಿಯಾಕಾರದ ಕಲ್ಲನ್ನು ಮೀಟುತ್ತ ಅವಳನ್ನು ಮೂರ್ತವಾದ ಕ್ರಿಯೆಯೊಂದಕ್ಕೆ ಪ್ರೇರೇಪಿಸುತಿತ್ತು. ಅವಳಿಗೆ ಸಂಜ್ಞೆಗಳನ್ನು ಕಳುಹಿಸುತ್ತಿತ್ತು – ಕಲ್ಲಿನ ಪ್ರತಿ ರಾತ್ರಿಯ ಚಲನೆಯ ಸಂಜ್ಞೆ.
ಜುಂಪೇ ಬರೆಯುವಾಗ ‘ಕೀರಿ’ಯ ಬಗ್ಗೆ ಯೋಚಿಸುತ್ತಿದ್ದ. ಅವಳೊಳಗಿನ ಯಾವುದೋ ಅದೃಶ್ಯ ಭಾವ ಈ ಕತೆಯ ಮೇಲೆ ಪ್ರಭಾವ ಬಿರುತ್ತಿರುವಂತೆ ಅವನಿಗೆ ಭಾಸವಾಗುತಿತ್ತು. ವಾಸ್ತವಕ್ಕೆ ದೂರವಾದ ಕತೆಯನ್ನು ಬರೆಯಬೇಕೆನ್ನುವದು ಅವನ ಉದ್ದೇಶವಾಗಿರಲಿಲ್ಲ. ಅವನು ಬರೆಯಬೇಕೆಂದುಕೊಂಡಿದ್ದು ಗೊಂದಲವಿಲ್ಲದ ಮನೋವೈಜ್ಞಾನಿಕವಾದ ಕಥೆ. ಆ ಕತೆಯಲ್ಲಿ ಕಲ್ಲು ತನ್ನಷ್ಟಕ್ಕೆ ತಾನೇ ಚಲಿಸುತ್ತಿರಲಿಲ್ಲ.

ಜುಂಪೇ ಮೊದಲು ಅಂದುಕೊಂಡಂತೆ ಮಹಿಳಾ ಡಾಕ್ಟರ್ ತನ್ನ ವಿವಾಹಿತ ಪ್ರಿಯಕರನ ಜೊತೆಗೆ ಸಂಬಂಧವನ್ನು ಕಡಿದು ಕೊಳ್ಳುತ್ತಾಳೆ. ಅವಳು ಅವನನ್ನು ದ್ವೇಷಿಸುವ ಹಂತವನ್ನು ಮುಟ್ಟಿರಲಿಕ್ಕೂ ಸಾಕು ಅಥವಾ ಅವಳು ಅರಿವಿಲ್ಲದಂತೆ ಇದನ್ನೇ ಬಯಸಿರಬಹುದು.

ಒಮ್ಮೆ ಕತೆಯ ಓಘ ಅವನ ಹಿಡಿತಕ್ಕೆ ಸಿಕ್ಕಿದಾಗ ಅದನ್ನು ಬರೆಯುವದು ಅವನಿಗೆ ಕಷ್ಟವಾಗಲಿಲ್ಲ. ಸಣ್ಣಗೆ ಹಾಡೊಂದನ್ನು ಕೇಳುತ್ತ ತನಗೇ ಆಶ್ಚರ್ಯವಾಗುವಷ್ಟು ವೇಗವಾಗಿ ಅವನು ಕಥೆಯನ್ನು ಬರೆದು ಮುಗಿಸಿದ. “ವೈದ್ಯೆ ಅವಳ ಪ್ರಿಯಕರನ ಜೊತೆಗೆ ಸಂಬಂಧ ಕಡಿದುಕೊಳ್ಳಲು ನಿರ್ಧರಿಸುತ್ತಾಳೆ. “ನಾವಿಬ್ಬರು ಮತ್ತೆ ಭೇಟಿಯಾಗುವದು ಅಸಾಧ್ಯ .” ಅವನಿಗೆ ಹೇಳುತ್ತಾಳೆ. “ಇಬ್ಬರೂ ಕುಳಿತು ಮಾತನಾಡಿ ಬಗೆ ಹರಿಸಿಕೊಳ್ಳಬಹುದಲ್ಲವೇ? ಅವನು ಕೇಳಿಕೊಳ್ಳುತ್ತಾನೆ. “ಇಲ್ಲ..” ಅವಳು ದೃಢ ದನಿಯಲ್ಲಿ ನುಡಿಯುತ್ತಾಳೆ. “ಅದು ಸಾಧ್ಯವಿಲ್ಲದ ಮಾತು..”

ಮಾರನೆಯ ದಿನ ಅವಳು ಟೋಕಿಯೋದಿಂದ ಹೊರಟಿದ್ದ ಹಡಗೊಂದನ್ನು ಹತ್ತಿ, ಹಡಗಿನ ಡೆಕ್ಕಿನ ಮೇಲೆ ನಿಂತು, ಕಿಡ್ನಿಯಾಕಾರದ ಕಲ್ಲನ್ನು ಸಮುದ್ರಕ್ಕೆ ಎಸೆಯುತ್ತಾಳೆ. ಕಲ್ಲು ಆಳ ಸಮುದ್ರದಲ್ಲಿ ಮುಳುಗುತ್ತ ಭೂಮಿಯ ಅಂತರಾಳವನ್ನು ತಲುಪುತ್ತದೆ. ಅವಳು ಹೊಸ ಬದುಕನ್ನು ಪ್ರಾರಂಭಿಸುತ್ತಾಳೆ. ಕಲ್ಲನ್ನು ಬಿಸಾಡಿದ ನಂತರ ಅವಳಿಗೆ ಎಲ್ಲವೂ ಹಗುರವಾದಂತೆ ಅನುಭವವಾಗುತ್ತದೆ.

ಮಾರನೇ ದಿನ ಅವಳು ಕೆಲಸಕ್ಕೆ ಆಸ್ಪತ್ರೆಗೆ ಹೋದಾಗ ಕಲ್ಲು ಮತ್ತೆ ಅವಳ ಮೇಜಿನ ಮೇಲೆ ಕುಳಿತು ಅವಳಿಗಾಗಿ ಕಾಯುತ್ತಿತ್ತು ಮತ್ತು ಅವತ್ತಿನಿಂದ ಕೊನೆಯವರೆಗೂ ಗಾಢ ವರ್ಣದ ಕಿಡ್ನಿಯಾಕಾರದ ಕಲ್ಲು ಎಲ್ಲಿರಬೇಕೋ ಅಲ್ಲೇ ಸ್ಥಿರವಾಗಿ ಕುಳಿತಿತ್ತು.

ಕತೆಯನ್ನು ಬರೆದು ಮುಗಿಸಿದ ತಕ್ಷಣ ಅವನು ‘ಕೀರಿ’ಗೆ ಫೋನಾಯಿಸಿದ. ಬಹುಶಃ ಕತೆಯನ್ನು ಅವಳು ಕೇಳಲು ಉತ್ಸುಕಳಾಗಿರಬಹುದು. ಹಾಗೆ ನೋಡಿದರೆ ಕತೆ ಈ ರೀತಿ ತಿರುವು ಪಡೆಯಲು ಒಂದು ರೀತಿಯಲ್ಲಿ ಅವಳೇ ಪ್ರೇರಣೆಯಾಗಿದ್ದಳು. ಆದರೆ ಅವನ ಕರೆ ಅವಳಿಗೆ ತಲುಪಲಿಲ್ಲ. ಪ್ರತಿ ಬಾರಿ ಕರೆ ಮಾಡಿದಾಗಲೂ “ಈ ನಂಬರ್ ಅಸ್ತಿತ್ವದಲ್ಲಿಲ್ಲ. ದಯವಿಟ್ಟು ಮತ್ತೊಮ್ಮೆ ಪರೀಕ್ಷಿಸಿ…” ಎನ್ನುವ ಮುದ್ರಿತ ಧ್ವನಿ ಕೇಳಿಸುತ್ತಿತ್ತು. ಜುಂಪೇ ಮತ್ತೆ ಮತ್ತೆ ಪ್ರಯತ್ನಿಸಿದ. ಬಹುಶಃ ಅವಳ ಫೋನಿನಲ್ಲಿ ಏನೋ ತಾಂತ್ರಿಕ ದೋಷವಿರಬೇಕು ಎಂದು ಅವನು ಭಾವಿಸಿದ.

ಜುಂಪೇ ಮನೆಯಲ್ಲಿ ಒಬ್ಬಂಟಿಯಾಗಿ ಕುಳಿತು ಅವಳು ಮತ್ತೆ ಕರೆ ಮಾಡಬಹುದು ಎಂದು ಕಾದ. ಆದರೆ ಅವಳು ಮತ್ತೆಂದೂ ಅವನನ್ನು ಸಂಪರ್ಕಿಸಲಿಲ್ಲ. ಒಂದು ತಿಂಗಳು ಕಳೆಯಿತು. ಒಂದು ಎರಡಾಯಿತು. ಎರಡು ಮೂರಾಯಿತು . ಋತುಗಳು ಬದಲಾದವು. ಹೊಸ ವರ್ಷ ಪ್ರಾರಂಭವಾಯಿತು. ಅವನ ಕಥೆ ಫೆಬ್ರವರಿ ತಿಂಗಳ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಪತ್ರಿಕೆಯ ಮುಖಪುಟದಲ್ಲಿ ಜುಂಪೇಯ ಫೋಟೋವನ್ನು ಮುದ್ರಿಸಿ, ಅದರ ಕೆಳಗೆ ಅವನ ಕತೆಯ ಹೆಸರನ್ನು ಹಾಕಿದ್ದರು “ಪ್ರತಿನಿತ್ಯ ಚಲಿಸುವ ಕಿಡ್ನಿಯಾಕಾರದ ಕಲ್ಲು.” ಕೀರಿ ಪತ್ರಿಕೆಯನ್ನು ನೋಡಿ, ಖರೀದಿಸಿ ಓದಿ ಒಂದಲ್ಲ ಒಂದು ದಿನ ಕರೆ ಮಾಡುತ್ತಾಳೆ ಎಂದು ಅವನು ಕಾಯತೊಡಗಿದ. ಅವನ ಕಾಯುವಿಕೆಗೆ ಪ್ರತಿದಿನ ಸಿಗುತ್ತಿದ್ದುದು ಮೌನದ ಇನ್ನೊಂದು ಸ್ತರವಾಗಿತ್ತು.

ಕೀರಿ ಅವನ ಜೀವನದಿಂದ ಮಾಯವಾದ್ದರಿಂದ ಅವನು ಅನುಭವಿಸಿದ ನೋವು ಅವನು ಎಣಿಸಿದ್ದಕ್ಕಿಂತ ತೀವ್ರತರದ್ದಾಗಿತ್ತು. ಅವಳು ಬಿಟ್ಟುಹೋದ ಶೂನ್ಯ ಅವನನ್ನು ಅಲ್ಲಾಡಿಸಿತ್ತು. ಪ್ರತಿದಿನ ಲೆಕ್ಕವಿಲ್ಲದಷ್ಟು ಸಲ ಅವನು “ಕೀರಿ ಈ ಸಂದರ್ಭದಲ್ಲಿ ಇದ್ದಿದ್ದರೆ…” ಎಂದು ಅಂದುಕೊಳ್ಳುತ್ತಿದ್ದ. ಅವನು ಅವಳ ನಗುವನ್ನು ನೆನಪಿಕೊಳ್ಳುತ್ತಿದ್ದ, ಅವಳ ತುಟಿಯ ಆಕಾರವನ್ನು ನಿರ್ಧರಿಸುತ್ತಿದ್ದ ಶಬ್ದಗಳನ್ನು, ಅವಳ ಸ್ಪರ್ಶವನ್ನು ಜ್ಞಾಪಿಸಿಕೊಳ್ಳುತ್ತಿದ್ದ. ಅವನ ಪ್ರೀತಿಯ ಸಂಗೀತವಾಗಲಿ, ಅವನು ಬಹು ಇಷ್ಟಪಡುತ್ತಿದ್ದ ಲೇಖಕರ ಹೊಸ ಪುಸ್ತಕವಾಗಲೀ ಅವನ ನೋವನ್ನು ಮರೆಸಲಿಲ್ಲ. ಎಲ್ಲವೂ ಅವನಿಂದ ದೂರವಿರುವಂತೆ ಭಾಸವಾಗುತಿತ್ತು. ‘ಕೀರಿ’ ನನ್ನ ಬದುಕಿನ ಎರಡನೇ ಮಹಿಳೆ, ಜುಂಪೆ ನಿರ್ಧರಿಸಿದ.

ಜುಂಪೇ ಮತ್ತೊಮ್ಮೆ ‘ಕೀರಿ’ಯನ್ನು ಭೇಟಿಯಾಗಿದ್ದು ವಸಂತ ಕಾಲದ ಒಂದು ಮಧ್ಯಾನ್ಹ. ಭೇಟಿಯೆ೦ದರೆ ಮುಖತಃ ಭೇಟಿಯಲ್ಲ. ಅವಳ ಧ್ವನಿಯನ್ನು ಕೇಳಲು ಮಾತ್ರ ಸಾಧ್ಯವಾಯಿತು.

ಅವನು ಟ್ಯಾಕ್ಸಿಯೊಂದರಲ್ಲಿ ಟ್ರಾಫಿಕ್ಕಿನ ಸಂದಣಿಯಲ್ಲಿ ಇದ್ದ. ಡ್ರೈವರ್ ಯಾವುದೋ ಒಂದು ಎಫ್ ಎಂ ಛಾನೆಲ್ ಕೇಳುತ್ತಿದ್ದ. ‘ಕೀರಿ’ಯ ಧ್ವನಿ ರೇಡಿಯೋದಿಂದ ಕೇಳಿಸಿತು. ಮೊದಮೊದಲು ಜುಂಪೇಗೆ ಅದು ‘ಕೀರಿ’ಯದೇ ಧ್ವನಿ ಎಂದು ಅನ್ನಿಸಲಿಲ್ಲ. ಈ ಧ್ವನಿ ಅವಳ ಧ್ವನಿಯಂತೆ ಇದೆ ಎಂದು ಅವನಿಗೆ ಭಾಸವಾಯಿತು. ಮತ್ತೆ ಮತ್ತೆ ಕೇಳಿದಾಗ ಅವನಿಗೆ ಅದು ‘ಕೀರಿ’ಯದೆ ಧ್ವನಿ ಎಂದು ಖಚಿತವಾಯಿತು. ಅವಳದೇ ಶೈಲಿ, ಅವಳಿಗಷ್ಟೇ ವೈಯಕ್ತಿಕವಾಗಿದ್ದ ಮೆಲು ದನಿಯ ಉಚ್ಚಾರಣೆ ಮತ್ತು ಅವಳಿಗಷ್ಟೇ ಕರಗತವಾಗಿದ್ದ ವಾಕ್ಯಗಳ ನಡುವೆ ನಿಲ್ಲಿಸಿ ನಿಲ್ಲಿಸಿ ಮಾತನಾಡುವ ಕಲೆ.
ಜುಂಪೇ ರೇಡಿಯೋದ ವಾಲ್ಯೂಮ್ ಹೆಚ್ಚಿಸುವಂತೆ ಕೇಳಿಕೊಂಡ.

“ಖಂಡಿತವಾಗಿ ಸರ್..” ಡ್ರೈವರ್

ಅದು ರೇಡಿಯೋ ಚಾನೆಲ್ಲಿನ ಆಫೀಸಿನಲ್ಲಿ ನಡೆಯುತ್ತಿರುವ ಸಂದರ್ಶನವಾಗಿತ್ತು. ಮಹಿಳಾ ಉದ್ಘೋಷಕಿ ಪ್ರಶ್ನೆ ಕೇಳುತ್ತಿದ್ದಳು “ಹಾಗಾದರೆ ಚಿಕ್ಕವಳಾಗಿದ್ದಾಗಿನಿಂದಲೂ ನಿಮಗೆ ಎತ್ತರದ ಜಾಗಗಳೆಂದರೆ ಇಷ್ಟ..?”

“ಅದು ನಿಜ..” ಕೀರಿ ನುಡಿದಳು ಅಥವಾ ಅವಳಂತೆ ಧ್ವನಿಯುಳ್ಳವಳು. “ನನಗೆ ಬುದ್ದಿ ಬಂದಾಗಿನಿಂದಲೂ ನನಗೆ ಎತ್ತರದ ಪ್ರದೇಶಗಳಿಗೆ ಹೋಗುವದೆಂದರೆ ಇಷ್ಟ. ನನ್ನ ತಂದೆತಾಯಿಯರನ್ನು ಅತ್ಯಂತ ಎತ್ತರದ ಕಟ್ಟಡಗಳಿಗೆ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದೆ. ನಾನೊಬ್ಬಳು ವಿಲಕ್ಷಣ ಪುಟ್ಟ ಹುಡುಗಿಯಾಗಿದ್ದೆ..” ಧ್ವನಿ ನಗುತ್ತ ನುಡಿಯಿತು.

“ಅಂದರೆ ನಿಮ್ಮ ಈಗಿನ ಕೆಲಸ ಆರಂಭವಾದದ್ದು ಹಾಗೆ ಅನ್ನಿ..”

“ಮೊದಲು ನಾನು ಒಂದು ಷೇರು ವಿಶ್ಲೇಷಣಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲೇ ಈ ಕೆಲಸ ನನಗೆ ಹೊಂದುವದಿಲ್ಲ ಎಂದು ನನಗೆ ಖಚಿತವಾಗಿತ್ತು. ನಾನು ಮೂರು ವರ್ಷಗಳ ನಂತರ ಅಲ್ಲಿ ಕೆಲಸವನ್ನು ಬಿಟ್ಟೆ. ಎತ್ತರದ ಕಟ್ಟಡಗಳ ಕಿಟಕಿಯನ್ನು ತೊಳೆಯುವ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಪುರುಷ ಪ್ರಧಾನವಾದ ಆ ಕೆಲಸದಲ್ಲಿ ಒಬ್ಬಳು ಮಹಿಳೆಗೆ ಅಷ್ಟು ಸುಲಭವಲ್ಲ. ಹಾಗಾಗಿ ಮೊದಮೊದಲು ಅಲ್ಲಿ ನಾನು ಅರೆ ಕಾಲಿಕ ಕೆಲಸಗಾರಳಾಗಿದ್ದೆ.”

“ಷೇರು ವಿಶ್ಲೇಷಕಿಯಿಂದ ಕಿಟಕಿ ತೊಳೆಯುವದು, ದೊಡ್ಡ ಬದಲಾವಣೆಯೇ ಸರಿ..”

“ನಿಜ ಹೇಳಬೇಕೆಂದರೆ ಕಿಟಕಿ ತೊಳೆಯುವದೇ ಕಡಿಮೆ ಒತ್ತಡದ ಕೆಲಸವೆಂದು ನನಗೆ ಅನಿಸುತ್ತದೆ. ಏನಾದರು ಬೀಳುವುದಾದರೆ ಅದು ನಾನು ಮಾತ್ರ ಹೊರತು ಕಂಪನಿಯ ಷೇರಲ್ಲ..” ಮತ್ತೆ ನಗು.

“ಈ ಕಿಟಕಿ ತೊಳೆಯುವರು ಅಂದರೆ, ಎತ್ತರದ ಕಟ್ಟಡಗಳ ಆ ಕಡೆ ಈ ಕಡೆ ಹಗ್ಗ ಹಾಕಿ ನೇತಾಡುತ್ತಾ ಇರುತ್ತಾರಲ್ಲ ಅವರೇ ಅಲ್ಲವೇ?”

“ಹೌದು. ಏನಾದರು ಹೆಚ್ಚು ಕಡಿಮೆ ಆದರೆ ಎಂದು ಜೀವರಕ್ಷಕ ಸಲಕರಣೆಗಳನ್ನು ಕೊಟ್ಟಿರುತ್ತಾರೆ. ಆದರೆ ಕೆಲವೊಂದು ಜಾಗಗಳನ್ನು ಆ ಜೀವರಕ್ಷಕ ಸಲಕರಣೆ, ಜಾಕೆಟ್ ಹಾಕಿಕೊಂಡು ತಲುಪವುದು ಸಾಧ್ಯವಿಲ್ಲ. ನನಗೆ ಅದೇನು ಕಾಡುವ ವಿಷಯವಾಗಿರಲಿಲ್ಲ. ಎಷ್ಟೇ ಎತ್ತರವಿದ್ದರೂ, ಎತ್ತರವೆನ್ನುವದು ನನ್ನನ್ನು ಯಾವತ್ತೂ ಭಯಪಡಿಸಿಲ್ಲ ಮತ್ತು ಈ ಗುಣ ನನ್ನನ್ನು ಒಬ್ಬ ಅಮೂಲ್ಯ ಕೆಲಸಗಾರಳಾಗಿ ಮಾಡಿತು.”

“ಹಾಗಾದರೆ ನಿಮಗೆ ಪರ್ವತಾರೋಹಣವು ಇಷ್ಟ..”

“ಪರ್ವತಾರೋಹಣದಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ. ಕೆಲವು ಪರ್ವತಗಳನ್ನು ಹತ್ತಲು ಪ್ರಯತ್ನಿಸಿದ್ದೇನೆ. ಆದರೆ ಎಷ್ಟೇ ಎತ್ತರದ ಪರ್ವತವಾದರೂ ಅದರಲ್ಲಿ ನನಗೆ ಆಕರ್ಷಣೆಯಿಲ್ಲ. ನನ್ನ ಒಂದೇ ಆಸಕ್ತಿ ಎಂದರೆ ಮಾನವ ನಿರ್ಮಿತವಾದ ಭೂಮಿಯಿಂದ ಆಗಸಕ್ಕೆ ನೆಟ್ಟಗೆ ನಿಂತಿರುವ ಅತೀ ಎತ್ತರದ ಕಟ್ಟಡಗಳು. ಯಾಕೆ ಎಂದು ಕೇಳಬೇಡಿ.”

“ಈಗ ತಾವು ಅತಿ ಎತ್ತರದ ಕಟ್ಟಡಗಳ ಕಿಟಕಿಗಳನ್ನು ತೊಳೆಯುವ ಕಂಪನಿಯನ್ನು ಸ್ಥಾಪಿಸಿದ್ದೀರ..”

“ಹೌದು..” ಅವಳು ಹೇಳಿದಳು . “ನಾನು ಸ್ವಲ್ಪ ಸ್ವಲ್ಪವೇ ಹಣವನ್ನು ಉಳಿಸಿ, ನನ್ನದೇ ಆದ ಸಣ್ಣ ಕಂಪನಿಯನ್ನು ಆರು ವರ್ಷಗಳ ಹಿಂದೆ ಪ್ರಾರಂಭಿಸಿದೆ. ಖಂಡಿತವಾಗಿಯೂ ನಾನು ನನ್ನ ತಂಡದೊಡಗೂಡಿಯೇ ಹೋಗುತ್ತೇನೆ, ಆದರೆ ನನ್ನ ಕಂಪನಿಗೆ ನಾನೇ ಮಾಲೀಕಳು. ಈಗ ಬೇರೊಬ್ಬರಿಂದ ನಾನು ಆಜ್ಞೆ ಪಡೆಯುವ ಸಂದರ್ಭವಿಲ್ಲ ಹಾಗಾಗಿ ನಾನು ನನ್ನದೇ ನಿಯಮಗಳನ್ನು ನಿರ್ಧರಿಸಬಹುದು.”

“ಅದರ ಅರ್ಥ ನೀವು ಜೀವರಕ್ಷಕ ಸಲಕರಣೆಗಳನ್ನು ಹಾಕಿಕೊಳ್ಳಬಹುದು ಅಥವಾ ಬಿಡಬಹುದು…”

“ಒಂದರ್ಥದಲ್ಲಿ ಹೌದು..” ನಗು.

“ನಿಮಗೆ ಅದನ್ನು ಧರಿಸುವದು ಇಷ್ಟಾವಾಗುವದಿಲ್ಲ ಅಲ್ಲವೇ..?”

“ಇಲ್ಲ. ಅದನ್ನು ಧರಿಸಿದಾಗಲೆಲ್ಲ ನನಗೆ ನಾನು ಬೇರೊಬ್ಬಳು ಎನ್ನುವ ಭಾವ.”

“ನಿಮಗೆ ಅತೀ ಎತ್ತರದ ಜಾಗಗಳೆಂದರೆ ಇಷ್ಟ ಅಲ್ಲವೇ?”

“ಅತಿ ಎತ್ತರದ ಜಾಗಗಳು ನನ್ನನ್ನು ಕೈ ಬಿಸಿ ಕರೆಯುತ್ತಿದೆ ಎಂದೆನಿಸುತ್ತದೆ. ನಾನು ಇದಲ್ಲದೆ ಇನ್ನೊಂದು ಕೆಲಸ ಮಾಡುವದನ್ನು ಊಹೆ ಕೂಡ ಮಾಡಲಾರೆ. ನಾವು ಮಾಡುವ ಕೆಲಸ ನಮ್ಮ ಹೃದಯಕ್ಕೆ ಹತ್ತಿರವಾಗಿರಬೇಕೆ ಹೊರತು ಅನುಕೂಲಕ್ಕೆ ಮಾಡಿಕೊಂಡ ಮದುವೆಯಂತೆ ಇರಬಾರದು.”

“ಈಗ ಒಂದು ಹಾಡು ಕೇಳೋಣ..” ಉದ್ಘೋಷಕಿ ಜೇಮ್ಸ್ ಟೇಲರ್ ನ ‘ಛಾವಣಿಯ ಮೇಲೆ’ ಎನ್ನುವ ಹಾಡನ್ನು ಹಾಕುತ್ತ ಹೇಳಿದಳು “ಈ ಹಾಡು ಮುಗಿದ ಮೇಲೆ ನಾವು ಹಗ್ಗದ ಮೇಲಿನ ನಡಿಗೆಯ ಬಗ್ಗೆ ಮಾತನಾಡೋಣ..”

ರೇಡಿಯೋದಿಂದ ಹಾಡು ತೇಲಿ ಬರುತ್ತಿರುವಾಗ ಜುಂಪೆ ಡ್ರೈವರ್ ಕಡೆ ಬಾಗುತ್ತ ಕೇಳಿದ “ಈ ಹೆಂಗಸು ಏನು ಮಾಡುತ್ತಾಳೆ?”

“ಅವಳು ಹೇಳುವ ಪ್ರಕಾರ ಅವಳು ಅತಿ ಎತ್ತರದ ಕಟ್ಟಡಗಳ ಮಧ್ಯೆ ಹಗ್ಗವನ್ನು ಕಟ್ಟಿ ಅದರ ಮೇಲೆ ನಡೆಯುತ್ತಾಳೆ..” ಡ್ರೈವರ್ ವಿವರಿಸತೊಡಗಿದ. “ಕೈಯಲ್ಲಿ ಸಮತೋಲನಕ್ಕಾಗಿ ಒಂದು ಉದ್ದನೆಯ ಕೋಲನ್ನು ಹಿಡಿದುಕೊಂಡಿರುತ್ತಾಳೆ. ಒಂದು ಅದ್ಭುತವೇ ಸರಿ. ನನಗೆ ಪಾರದರ್ಶಕವಾದ ಲಿಫ್ಟ್ ನಲ್ಲಿ ಹೋಗುವಾಗಲೇ ಮೈ ನಡುಗಿದಂತಾಗುತ್ತದೆ. ಬಹುಶಃ ಈ ಹಗ್ಗದ ಮೇಲಿನ ನಡಿಗೆ ಅವಳಿಗೆ ಒಂದು ರೋಮಾಂಚನವನ್ನು ತರುತ್ತದೆ ಅನಿಸುತ್ತದೆ. ಒಂಥರ ವಿಚಿತ್ರ. ಅವಳೇನು ತುಂಬಾ ಚಿಕ್ಕ ಹುಡುಗಿ ಅನಿಸುವದಿಲ್ಲ..”

“ಅದು ಅವಳ ವೃತ್ತಿ ಇರಬಹುದೇ?” ಜುಂಪೆ ಕೇಳಿದ. ತನ್ನ ಧ್ವನಿ ಒಣಗಿರುವದು ಅವನಿಗೆ ಅರಿವಾಯಿತು. ತೂಕವಿಲ್ಲದ ಬರಿ ಒಣ ಮಾತು. ತನ್ನದಲ್ಲದ ಬೇರೆ ಯಾವುದೋ ಮಾತು ಟ್ಯಾಕ್ಸಿಯ ಛಾವಣಿಯಿಂದ ಒಳಬಂದಂತೆ ತೋರಿತು.

“ಹೌದಿರಬೇಕು. ಅವಳಿಗೆ ಒಂದಷ್ಟು ಪ್ರಾಯೋಜಕರಿರಬೇಕು. ಸ್ವಲ್ಪ ದಿನಗಳ ಹಿಂದೆಯಷ್ಟೇ ಅವಳು ಜರ್ಮನಿಯ ಪ್ರಸಿದ್ಧ ಪ್ರಾರ್ಥನಾ ಮಂದಿರದ ಬಳಿ ಒಂದು ಪ್ರದರ್ಶನವನ್ನು ನೀಡಿದ್ದಳು. ಅವಳು ಅದಕ್ಕಿಂತ ಎತ್ತರದ ಕಟ್ಟಡದ ಮೇಲೆ ಪ್ರದರ್ಶನ ಕೊಡಬೇಕು ಎನ್ನುತ್ತಾಳೆ. ಆದರೆ ಅದಕ್ಕೆ ಇನ್ನು ಸರ್ಕಾರದ ಪರವಾನಿಗಿ ಸಿಕ್ಕಿಲ್ಲವಂತೆ. ಅಷ್ಟು ಎತ್ತರಕ್ಕೆ ತಲುಪಿದ ಮೇಲೆ ಸುರಕ್ಷಿತೆಗೆ ಹಾಕುವ ಬಲೆ ಯಾವುದೇ ಪ್ರಯೋಜನಕ್ಕೆ ಬರುವದಿಲ್ಲ. ಅವಳು ಪ್ರತಿ ಬಾರಿ ಹಿಂದಿನ ದಾಖಲೆಯನ್ನು ಮುರಿಯುತ್ತ ತನಗೆ ತಾನೇ ಸವಾಲನ್ನು ಹಾಕಿಕೊಳ್ಳುತ್ತಾ ಪ್ರತಿ ಬಾರಿಯೂ ಹಿಂದಿನದಕ್ಕಿಂತ ಎತ್ತರದ ಕಟ್ಟಡವನ್ನು ಹುಡುಕಿಕೊಳ್ಳುತ್ತಾಳೆ. ಖಂಡಿತ, ಈ ಪ್ರದರ್ಶನ ಮಾತ್ರದಿಂದಲೇ ಜೀವನವನ್ನು ಸಾಗಿಸಲು ಸಾಧ್ಯವಿಲ್ಲ. ಹೀಗಾಗಿ ಕಿಟಕಿ ತೊಳೆಯುವ ಕೆಲಸವನ್ನು ಮಾಡುತ್ತಾಳೆ. ಹಾಗಂತ ಅವಳೇನು ಸರ್ಕಸ್ ತಂಡದಲ್ಲಿ ಹಗ್ಗದ ಮೇಲಿನ ನಡಿಗೆಯ ಕೆಲಸವನ್ನು ಕೊಟ್ಟರೂ ಮಾಡುತ್ತಾಳೆ ಅನಿಸುವದಿಲ್ಲ. ಈ ಜಗತ್ತಿನಲ್ಲಿ ಅವಳು ಬಯಸುವದು ಅತ್ಯಂತ ಎತ್ತರದ ಕಟ್ಟಡಗಳನ್ನು ಮಾತ್ರವ೦ತೆ. ವಿಚಿತ್ರ ಹುಡುಗಿ.

******

“ಈ ಕೆಲಸದ ಬಗೆಗಿನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅಷ್ಟು ಎತ್ತರವನ್ನು ತಲುಪಿದಾಗ ನೀವು ನಿಜವಾದ ಮನುಷ್ಯರಾಗುತ್ತೀರಿ.” ಕೀರಿ ಸ್ಪಷ್ಟವಾಗಿ ಸಂದರ್ಶಕಿಗೆ ಹೇಳಿದಳು. ನೀವು ಬದಲಾಗಲೇಬೇಕು ಅಥವಾ ಬದಲಾಗದಿದ್ದರೆ ಅಲ್ಲಿ ಉಳಿಗಾಲವಿಲ್ಲ. ನಾನು ಅತಿ ಎತ್ತರದ ಜಾಗಕ್ಕೆ ಹೋದಾಗ ಅಲ್ಲಿ ಕೇವಲ ನಾನು ಮತ್ತು ಬೀಸುವ ಗಾಳಿ. ಬೇರೆ ಏನೂ ಇಲ್ಲ. ಗಾಳಿ ಹೊದಿಕೆಯಂತೆ ನನ್ನನ್ನು ಆವರಿಸುತ್ತದೆ, ಅಲ್ಲಾಡಿಸುತ್ತದೆ. ಗಾಳಿಗೆ ನಾನು ಅರ್ಥವಾಗುತ್ತೇನೆ ಮತ್ತು ನನಗೆ ಗಾಳಿ ಅರ್ಥವಾಗುತ್ತದೆ. ನಾವಿಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುತ್ತೇವೆ ಮತ್ತು ಜೊತೆಗೆ ಸಾಗಲು ನಿರ್ಧರಿಸುತ್ತೇವೆ. ಕೇವಲ ಗಾಳಿ ಮತ್ತು ನಾನು.

ಅಲ್ಲಿ ನಮ್ಮಿಬ್ಬರ ಹೊರತಾಗಿ ಮತ್ತೊಬ್ಬರಿಗೆ ಜಾಗವಿಲ್ಲ. ಆ ಒಂದು ಕ್ಷಣವನ್ನೇ ನಾನು ಯಾವತ್ತಿಗೂ ಬಯಸುವದು. ಇಲ್ಲ, ನನಗೆ ಅಂಜಿಕೆಯಾಗುವದಿಲ್ಲ. ನಾನು ಒಮ್ಮೆ ಅತಿ ಎತ್ತರದ ಕಟ್ಟಡದ ಮೇಲಿನ ಏಕಾಗ್ರತೆಯ ಲೋಕವನ್ನು ಹೊಕ್ಕ ಮೇಲೆ ನನ್ನನ್ನು ಕಾಡುತ್ತಿರುವ ಭಯವೆಲ್ಲವೂ ದೂರವಾಗುತ್ತವೆ. ನಿರಾಳ. ನಮ್ಮ ಬೆಚ್ಚಗಿನ ಶೂನ್ಯದಲ್ಲಿ ನಾವಿಬ್ಬರು ಮಾತ್ರ. ನಾನು ಜೀವನದಲ್ಲಿ ಬಯಸುವದು, ಪ್ರೀತಿಸುವದು, ಆರಾಧಿಸುವದು ಆ ಒಂದು ಕ್ಷಣವನ್ನು ಮಾತ್ರ.

ಕೀರಿ ಭರವಸೆ ತುಂಬಿದ ಧ್ವನಿಯಲ್ಲಿ ಮಾತನಾಡುತ್ತಿದ್ದಳು. ಸಂದರ್ಶಕಿಗೆ ಕೀರಿ ಹೇಳಿರುವದೆಲ್ಲ ಅರ್ಥವಾಯಿತೇ ಎನ್ನುವದು ಜುಂಪೇಗೆ ಸ್ಪಷ್ಟವಾಗಲಿಲ್ಲ. ಸಂದರ್ಶನ ಮುಗಿದಾಗ ಜುಂಪೇ ಕಾರನ್ನು ನಿಲ್ಲಿಸಲಿಕ್ಕೆ ಹೇಳಿ, ಕಾರಿನ ಡ್ರೈವರನಿಗೆ ಹಣವನ್ನು ನೀಡಿ, ತಾನು ಹೋಗಬೇಕಾಗಿದ್ದ ಜಾಗಕ್ಕೆ ನಡೆದುಕೊಂಡೇ ತಲುಪಿದ.

ಇತ್ತೀಚಿಗೆ ಒಮ್ಮೊಮ್ಮೆ ಅವನು ತಲೆಯೆತ್ತಿ ಎತ್ತರದ ಕಟ್ಟಡಗಳನ್ನೂ ಅವುಗಳ ಮೇಲೆ ವಿಶಾಲವಾಗಿ ಹರಡಿಕೊಂಡಿರುವ ನೀಲ ಆಗಸವನ್ನೂ ದಿಟ್ಟಿಸುತ್ತಾನೆ. ಅವಳ ಮತ್ತು ಗಾಳಿಯ ನಡುವೆ ಮತೊಬ್ಬರಾರಿಗೂ ಪ್ರವೇಶವಿಲ್ಲ. ಅವನಿಗೆ ಹೊಟ್ಟೆಯಲ್ಲಿ ಅಸೂಯೆಯ ತಳಮಳವೆದ್ದು ಅಸ್ವಸ್ಥನಾಗುತ್ತಾನೆ. ಆದರೆ ಯಾರ ಮೇಲೆ ಅಸೂಯೆ? ಗಾಳಿಯ ಮೇಲೆಯೇ? ಗಾಳಿಯ ಮೇಲೆ ಅಸೂಯೆಗೊಳ್ಳುವವರು ಯಾರಿದ್ದಾರೆ?

ಜುಂಪೇ ಅದಾದ ಮೇಲೆ ಕೀರಿ ತನ್ನನ್ನು ಸಂಪರ್ಕಿಸಬಹುದು ಎಂದು ಹಲವಷ್ಟು ತಿಂಗಳುಗಳ ಕಾಲ ಕಾದಿದ್ದ. ಅವನು ಅವಳನ್ನು ನೋಡಲು ಬಯಸುತ್ತಿದ್ದ. ಅವಳೊಟ್ಟಿಗೆ ಕುಳಿತು ಹಲವಷ್ಟು ವಿಷಯಗಳ ಬಗ್ಗೆ ಮಾತನಾಡಬೇಕೆಂದು ಅನಿಸುತ್ತಿತ್ತು . ಕಿಡ್ನಿಯಾಕಾರದ ಕಲ್ಲಿನ ಬಗ್ಗೆ ಹೇಳಬೇಕಿತ್ತು. ಆದರೆ ಕರೆ ಯಾವತ್ತೂ ಬರಲಿಲ್ಲ. ಅವನು ಕರೆ ಮಾಡಿದಾಗ ‘ನಿಮ್ಮ ಕರೆ ಪೂರ್ತಿಯಾಗಿಲ್ಲ’ ಎನ್ನುವ ಮುದ್ರಿತ ಧ್ವನಿ ಕೇಳಿಬರುತ್ತಿತ್ತು. ಬೇಸಿಗೆ ಕಾಲ ಶುರುವಾಗುವ ಹೊತ್ತಿಗೆ ಅವನಲ್ಲಿ ಸಣ್ಣದಾಗಿದ್ದ ನಿರೀಕ್ಷೆ ಕ್ರಮೇಣ ಕರಗತೊಡಗಿತು.

ಅವಳಿಗೆ ಅವನನ್ನು ಪುನಃ ಭೇಟಿಯಾಗುವ ಯಾವ ಇರಾದೆಯೂ ಇರಲಿಲ್ಲ. ಮತ್ತು ಸಂಬಂಧವೊಂದು ವಿರೋಧವಿಲ್ಲದೆಯೇ, ಜಗಳವಿಲ್ಲದೆಯೇ ತಣ್ಣಗೆ ಮುರಿದಿತ್ತು – ಅವನು ಹಿಂದೆಲ್ಲ ಅಸಂಖ್ಯ ಹುಡುಗಿಯರೊಟ್ಟಿಗೆ ಮುರಿದುಕೊಂಡಿದ್ದ ಹಾಗೆ: ಯಾವತ್ತೋ ಒಂದು ದಿನ ಇದ್ದಕ್ಕಿದ್ದ ಹಾಗೆ ಸದ್ದಿಲ್ಲದೆ, ತಮ್ಮಷ್ಟಕ್ಕೆ ತಾವೇ ಕರೆಗಳು ನಿಂತುಹೋಗುತ್ತಿದ್ದವು.

(ಹರುಕಿ ಮುರಕಮಿ)

ಅವಳನ್ನು ನನ್ನ ಜೀವನದ ಭಾಗವಾಗಿ ಬಂದು ನನ್ನ ಬದುಕಿಗೊಂದು ಅರ್ಥ ಕಲ್ಪಿಸುವ ಮೂರು ಮಹಿಳೆಯರಲ್ಲಿ ಒಬ್ಬಳನ್ನಾಗಿ ಪರಿಗಣಿಸಬೇಕೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದಾಗಲೆಲ್ಲ ಅವನಿಗೆ ಅಸಾಧ್ಯ ಸಂಕಟವಾಗುತ್ತಿತ್ತು. ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ‘ನಾನು ಇನ್ನೂ ಆರು ತಿಂಗಳುಗಳಾಗಲಿ ಆಮೇಲೆ ನಿರ್ಧರಿಸುತ್ತೇನೆ’ ಎಂದುಕೊಂಡ.

ಮುಂದಿನ ಆರು ತಿಂಗಳುಗಳ ಕಾಲ ಅವನು ಅಸಾಧಾರಣ ಏಕಾಗ್ರತೆಯಿಂದ ಬರೆದ ಮತ್ತು ಸಾಕಷ್ಟು ಸಣ್ಣ ಕತೆಗಳನ್ನು ಪ್ರಕಟಿಸಿದ. ಪ್ರತಿ ಬಾರಿ ಬರೆಯುವ ಮೇಜಿನ ಮುಂದೆ ಕುಳಿತು ತನ್ನ ಕತೆಯನ್ನು ತಿದ್ದುವಾಗಲೂ ಅವನಿಗೆ ಕೀರಿಯ ನೆನಪು ಕಾಡುತ್ತಿತ್ತು. ‘ಇಲ್ಲಿ ನಾನು ಏಕಾಂಗಿಯಾಗಿ ಕುಳಿತು ಕತೆ ಬರೆಯುತ್ತಿರುವ ಈ ಕ್ಷಣದಲ್ಲಿ ಅವಳು ಯಾವುದೋ ಎತ್ತರದ ಕಟ್ಟಡದ ಮೇಲೆ ಏಕಾಂತದಲ್ಲಿ ಅವಳ ಗಾಳಿಯೊಟ್ಟಿಗೆ ಎಲ್ಲವುಗಳಿಗಿಂತ ಎತ್ತರದಲ್ಲಿ ಜೀವರಕ್ಷಕವಿಲ್ಲದೆ ಅವಳದೇ ಆದ ಗಾಢ ಏಕಾಗ್ರತೆಯಲ್ಲಿ ಮುಳುಗಿರಬಹುದು. ಎತ್ತರದ ಆ ಬಿಂದುವಿನಲ್ಲಿ ಭಯವಿಲ್ಲ. ‘ಅಲ್ಲಿ ಅವಳು ಮತ್ತವಳ ಗಾಳಿ ಮಾತ್ರ’. ಎತ್ತರದ ಏಕಾಂತದ ಬಗ್ಗೆ ಅವಳು ಹೇಳಿದ ಈ ಮಾತುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುತ್ತ, ತನ್ನ ಜೀವನದಲ್ಲಿ ಇಲ್ಲಿಯವರೆಗೆ ಬಂದು ಹೋಗಿದ್ದ ಉಳಿದೆಲ್ಲ ಮಹಿಳೆಯರಿಗಿಂತ ಹೆಚ್ಚಿನದಾದ ಯಾವುದೋ ಅವ್ಯಕ್ತ ದಿವ್ಯ ಅನುಭೂತಿ ‘ಕೀರಿ’ಯಲ್ಲಿ ಕಂಡುಕೊಂಡಿದ್ದು ಜುಂಪೆಗೆ ಅರಿವಾಯಿತು. ಅದು ಅದರದ್ದೇ ಚೌಕಟ್ಟನ್ನು ಹೊಂದಿರುವ, ಅಸಾಧಾರಣ ತೂಕದ ಆಳವಾದ ಭಾವಪರವಶತೆ. ಜುಂಪೇ ಈ ಅನುಭೂತಿಯನ್ನು ಶಬ್ದಗಳಲ್ಲಿ ಹಿಡಿದಿಡುವದು ಹೇಗೆ ಎನ್ನುವದು ತಿಳಿಯಲಿಲ್ಲ. ಅವನಿಗೆ ತಿಳಿದ ಯಾವುದರೊಟ್ಟಿಗೂ ಹೋಲಿಸಲಾಗದ ಭಾವ ತೀವ್ರತೆ. ಅವನು ತನ್ನ ಜೀವನದಲ್ಲಿ ಅವಳನ್ನು ಮತ್ತೆಂದೂ ಕಾಣದಿದ್ದರೂ ಅವನಲ್ಲಿ ಶಾಶ್ವತವಾಗಿ ಉಳಿಯಬಲ್ಲ ಭಾವ. ಅವನ ಮನಸಿನ ಯಾವುದೋ ಮೂಲೆಯಲ್ಲಿ ಅವಳೆಡೆಗೆ ಶಾಶ್ವತವಾದ ಭಾವವೊಂದು ಸಣ್ಣಗೆ ಯಾವತ್ತೂ ಆರದೆ ಉರಿಯುತ್ತಿರುವಂತೆ.

ವರ್ಷಗಳು ಉರುಳಿದಂತೆ ಜುಂಪೇ ಅವಳನ್ನು ತನ್ನ ಜೀವನದ ಎರಡನೆಯ ಮಹಿಳೆಯೆಂದು ನಿರ್ಧರಿಸಿದ. ಅವನ ಜೀವನಕ್ಕೆ ಅರ್ಥ ಕಲ್ಪಿಸಿದ ಮಹಿಳೆಯರಲ್ಲೊಬ್ಬಳು. ಈಗ ಯಾದಿಯಲ್ಲಿ ಕೇವಲ ಒಂದು ಸಂಖ್ಯೆ ಮಾತ್ರ ಮಿಕ್ಕಿತ್ತು. ಆದರೆ ಅವನಿಗೆ ಈಗ ಆ ಸಂಖ್ಯೆಯ ಕುರಿತು ಭಯವಿರಲಿಲ್ಲ. “ಸಂಖ್ಯೆಗಳು ಮುಖ್ಯವಲ್ಲ. ಎಣಿಕೆಗೆ ಅರ್ಥವಿಲ್ಲ” ಈಗ ಅವನಿಗೆ ಅರಿವಾಗಿತ್ತು. “ಎಲ್ಲಕ್ಕಿಂತ ಮುಖ್ಯವಾದದ್ದು ಮತ್ತೊಬ್ಬರನನ್ನು ಪೂರ್ತಿಯಾಗಿ ಒಪ್ಪಿಕೊಳ್ಳುವದು ಹೇಗೆ ಎನ್ನುವದನ್ನು ನಮ್ಮ ಹೃದಯದ ಅಂತರಾಳದಿಂದ ತೀರ್ಮಾನಿಸುವದು ಮತ್ತು ಆ ಒಪ್ಪಿಕೊಳ್ಳುವಿಕೆ ಅದೇ ಮೊದಲನೆಯ ಹಾಗೂ ಕೊನೆಯದಾಗಿರಬೇಕು.”

******

ಒಂದು ದಿನ ಬೆಳಿಗ್ಗೆ ಕಿಡ್ನಿಯಾಕಾರದ ಕಲ್ಲು ಟೇಬಲಿನಿಂದ ಮಾಯವಾದದ್ದನ್ನು ವೈದ್ಯೆ ಗಮನಿಸಿದಳು ಮತ್ತು ಅದು ಯಾವತ್ತೂ ಮರಳುವದಿಲ್ಲವೆಂದು ಅವಳಿಗೆ ಅರಿವಾಯಿತು.

******

ಲೇಖಕರ ಪರಿಚಯ : ಜಪಾನಿ ಕಥೆಗಾರ ಹರುಕಿ ಮುರಕಮಿ ಜನಿಸಿದ್ದು ೧೯೪೯ ರ ಜನವರಿ ೧೨ ರಂದು ಜಪಾನಿನ ಕ್ಯೋಟೋದಲ್ಲಿ. ಅವರ ಕತೆಗಳು ಜಗತ್ತಿನ ಐವತ್ತಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿವೆ. ಸಂಗೀತದ ಬಗ್ಗೆ ಅಪಾರ ಒಲವು ಹೊಂದಿರುವ ಮುರಕಮಿಯ ಕತೆಗಳಲ್ಲಿ ಏಕಾಂತದ ದಟ್ಟ ಪಾತ್ರ ಚಿತ್ರಣಗಳನ್ನು, ಸಾಮಾನ್ಯತೆಯಿಂದ ಅಸಾಮಾನ್ಯತೆಗೆ ಸಾವಕಾಶವಾಗಿ ಜರುಗುವ ಘಟನೆಗಳನ್ನು ಕಾಣಬಹುದು. ಮ್ಯಾರಥಾನ್ ಓಟಗಾರರೂ ಆಗಿರುವ ಅವರಿಗೆ ವರ್ಲ್ಡ್ ಫ್ಯಾ೦ಟಸಿ ಪ್ರಶಸ್ತಿ, ಕಾಫ್ಕ ಪ್ರಶಸ್ತಿ, ಜೆರುಸಲೇಮ್ ಪ್ರಶಸ್ತಿ ಮುಂತಾದವು ಸಂದಿವೆ.