ರೇ ಒಂದು ವಿಶಿಷ್ಟ ಭಂಗಿಸತ್ಯಜಿತ್ ರೇ ಅವರ ನೋಟವೂ ಬೇರೆ, ಮಾರ್ಗವೂ ಬೇರೆ.ಅದನ್ನವರು ಅವರ ಚಿತ್ರಗಳ ಮೂಲಕ ಆಗುಮಾಡಿದ್ದರು. ಬಸವರಾಜು ಬರೆದ ಈ ವಾರದ ವಿಶೇಷ.

ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲೊಂದು ಛಾಯಾಚಿತ್ರ ಪ್ರದರ್ಶನವಿತ್ತು. ಅದು ಬೆಂಗಳೂರಿನ ಸಿನಿಪ್ರಿಯರ ಮಟ್ಟಿಗೆ ತೀರಾ ಅಪರೂಪ ಮತ್ತು ಅವಿಸ್ಮರಣೀಯ ಪ್ರದರ್ಶನ. ಅದಕ್ಕೆ ಕಾರಣ- ಭಾರತೀಯ ಸಿನಿಮಾ ಎಂದಾಕ್ಷಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಣ್ಣರಳಿಸಿ ನೋಡುವ ವ್ಯಕ್ತಿಗೆ ಸಂಬಂಧಿಸಿದ್ದು. ಅದನ್ನು ಆಗುಮಾಡಿದ್ದವರು ನಿಮಾಯ್ ಘೋಷ್. ಚಿತ್ರಪಟವಾಗಿ ಗೋಡೆಗಳನ್ನು ಅಲಂಕರಿಸಿದ್ದವರು ಸತ್ಯಜಿತ್ ರೇ.

ಇಪ್ಪತ್ತೈದು ವರ್ಷಗಳ ಕಾಲ ಸತ್ಯಜಿತ್ ರೇ ಅವರೊಂದಿಗೆ ಒಡನಾಡಿದ ನಿಮಾಯ್ ಘೋಷ್, ರೇ ಅವರ ಸರಿಸುಮಾರು ಎಲ್ಲಾ ಚಿತ್ರಗಳಿಗೆ ಸ್ಟಿಲ್ ಕ್ಯಾಮರಾಮನ್ ಆಗಿ ಕೆಲಸ ಮಾಡಿದವರು. ರೇ ಅವರ ಬೆಳ್ಳಿತೆರೆಯ ರಮ್ಯ ಬದುಕಿನೊಂದಿಗೆ ಬೆಸೆದುಕೊಂಡವರು. ಇಂತಹ ವ್ಯಕ್ತಿ ಸತ್ಯಜಿತ್ ರೇ ಅವರ ಚಿತ್ರಗಳ ಸ್ಥಿರಚಿತ್ರ ಛಾಯಾಗ್ರಾಹಕನಾಗಿದ್ದುಕೊಂಡೇ, ಚಿತ್ರೀಕರಣದ ಸಮಯದಲ್ಲಿ, ಅವರ ಅರಿವಿಗೆ ಬರದ ಹತ್ತು ಹಲವು ಭಾವ ಭಂಗಿಗಳ ಅಪರೂಪದ ಚಿತ್ರಗಳನ್ನೂ ಸೆರೆ ಹಿಡಿದಿದ್ದರು. ಅವತ್ತು ಅವನ್ನೆಲ್ಲ ಅಲ್ಲಿ ಪ್ರದರ್ಶನಕ್ಕಿಟ್ಟಿದ್ದರು.

ಆ ಚಿತ್ರಗಳನ್ನೆಲ್ಲ ನೋಡುತ್ತಿದ್ದಂತೆ ಸತ್ಯಜಿತ್ ರೇ ಅವರ `ಪಥೇರ್ ಪಾಂಚಾಲಿ’ ತಲೆ ತುಂಬಿಕೊಂಡಿತು. ಅದೇ ಗುಂಗಿನಲ್ಲಿ ಮನೆಗೆ ಬಂದು, ಹಿಂದೊಮ್ಮೆ ಓದಿದ್ದ ಬರಹವೊಂದಕ್ಕೆ ಪುಸ್ತಕಗಳ ರ್ಯಾಕ್ ನತ್ತ ಕೈಯಾಡಿಸಿದೆ. ಅದು 1971ರಲ್ಲಿ, ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ ಸಾಹಿತ್ಯಕ ತ್ರೈಮಾಸಿಕ `ಸಾಕ್ಷಿ’ ಸಂಚಿಕೆ. ಅದರಲ್ಲಿ ಸತ್ಯಜಿತ್ ರೇ ಅವರು `ನಾನೇಕೆ ಚಿತ್ರ ನಿರ್ಮಿಸುತ್ತೇನೆ’ ಎಂಬ ಬಗ್ಗೆ ಬರೆದ ಪುಟ್ಟ ಟಿಪ್ಪಣಿಯನ್ನು ಕನ್ನಡೀಕರಿಸಲಾಗಿದೆ. ಅದು ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರ ಚಿತ್ರಪ್ರೇಮ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಅದು ಹೀಗಿದೆ: `ನಾನು ಯಾಕಾಗಿ ಚಿತ್ರ ತಯಾರಿಸುತ್ತೇನೆ ಎಂದು ಯಾರಾದರೂ ಕೇಳಿದರೆ ಉತ್ತರ ಹೇಳುವುದು ನನಗೆ ಸುಲಭವಲ್ಲ. ಅದಕ್ಕೆ ಸರಿಯಾದ ಅಥವಾ ಒಳ್ಳೇ ಕಾರಣಗಳು ಇಲ್ಲ ಎಂಬುದಲ್ಲ, ಕಾರಣಗಳು ಅನೇಕ ಇದ್ದಾವೆ ಎಂಬುದೇ. ಚಿತ್ರ ತಯಾರಿಸುವುದರಲ್ಲಿ ನನಗೆ ಪ್ರೀತಿ- ಎಂಬುದೇ ಈ ಪ್ರಶ್ನೆಗೆ ನಿಜವಾದ ಉತ್ತರ ಎನ್ನಿಸುತ್ತದೆ. ಚಿತ್ರ ನಿರ್ಮಾಣದ ಹಂತಹಂತದಲ್ಲೂ, ಕ್ಷಣಕ್ಷಣದಲ್ಲೂ ನನಗೆ ಸವಿ ಕಾಣುತ್ತದೆ. ನನ್ನದಕ್ಕೆ ನಾನೇ ಚಿತ್ರಲೇಖ ಬರೆದುಕೊಳ್ಳುತ್ತೇನೆ, ಸಂಭಾಷಣೆ ರಚಿಸಿಕೊಳ್ಳುತ್ತೇನೆ. ಹಾಗೆ ಮಾಡುವುದರಲ್ಲೇ ನನಗೆ ಖುಷಿ. ರಚನೆ, ನಟರ ಆಯ್ಕೆ, ಅಭಿನಯ, ನಿರ್ದೇಶನ, ಗ್ರಹಣ, ಸಂಕಲನ- ಈ ಒಂದೊಂದೂ ನಿಜವಾಗಿ ರೋಮಾಂಚಕಾರಿ; ಇವೆಲ್ಲ ಕೂಡಿ ಹೊಸದಾದ ಒಂದು ಸ್ವತಂತ್ರ `ಬದುಕು’ ನಿರ್ಮಿತವಾಗುತ್ತದೆ.

`ನಿಜವಾದ ರಚನಾತ್ಮಕ ಕ್ರಿಯೆಗಳಷ್ಟೇ ಅಲ್ಲದೆ, ಬೇರೆ ಕಾರಣಗಳಿಗಾಗಿ ಕೂಡ ಚಿತ್ರ ನಿರ್ಮಾಣ ರೋಮಾಂಚಕಾರಿ ಎನ್ನಿಸುತ್ತದೆ. ಅದು ನನ್ನನ್ನು ನನ್ನ ದೇಶದ ನನ್ನ ಜನರ ಸಮೀಪಕ್ಕೆ ಕೊಂಡೊಯ್ಯುತ್ತದೆ. ಒಂದೊಂದು ಚಿತ್ರವೂ ಆತ್ಮಶಿಕ್ಷಣಕ್ಕೆ ದಾರಿ ತೋರಿಸುತ್ತದೆ, ನನ್ನ ಸುತ್ತ ಇರುವ ಬದುಕಿನ ಅಪರಂಪಾರ ವೈವಿಧ್ಯವನ್ನು ಕಾಣಿಸಿಕೊಡುತ್ತದೆ; ಈ ದೃಶ್ಯ-ಶಬ್ದಗಳ, ಈ ಪರಿಸರದ ತಲೆತಿರುಗಿಸುವಂಥ ವಿರೋಧ ವೈವಿಧ್ಯಗಳು- ಯಾವ ನಿರ್ಮಾತನಿಗಾದರೂ ಇದೊಂದು ಸವಾಲು- ಇವುಗಳನ್ನು ಎತ್ತಿ ಸಂಗತಗೊಳಿಸಿ ಹೊಸ ಕಲಾಸೃಷ್ಟಿಯಾಗಿ ಕಟ್ಟಿ ನಿಲ್ಲಿಸುವುದು.

ಅಪೂರ್ ಸಂಸಾರ್ ಚಿತ್ರದ ಒಂದು ದೃಶ್ಯ

`ನನ್ನ ಮೊದಲ ಚಿತ್ರ `ಪಥೇರ್ ಪಾಂಚಾಲಿ’ಗೆ ಮೊದಲು ನನಗೆ ಗೊತ್ತಿದ್ದ ಬಂಗಾಲದ ಜೀವನ ಮೇಲುಮೇಲಿನದ್ದು. ಈಗ ಮಾತ್ರ ಅದು ನನಗೆ ಕಿಂಚಿತ್ತಾದರೂ ಗೊತ್ತು ಎನ್ನಬಲ್ಲೆ; ಅದರ ನೆಲ, ಋತುಗಳು, ಗಿಡಗಳು, ಕಾಡುಗಳು, ಹೂಗಳು; ಹೊಲದಲ್ಲಿ ದುಡಿವ ಹೆಂಗಸರು, ಬಾವಿಯ ಬಳಿ ಹರಟುವ ಹೆಂಗಸರು, ಮಳೆ ಬಿಸಿಲಲ್ಲಿ ಆಡುವ ಮಕ್ಕಳು; ಪ್ರಪಂಚದ ಎಲ್ಲ ಕಡೆ ಆಡುವ ಹಾಗೇ ಆಡುವ ಮಕ್ಕಳು. ಈಗ ನನಗೆ ಕಲ್ಕತ್ತಾ ಗೊತ್ತು. ಪ್ರಪಂಚದ ಯಾವುದೇ ನಗರದ ಹಾಗೆ ಇದಿಲ್ಲ. ಆದರೆ ಇಲ್ಲೂ ಜನ ಲಂಡನ್, ನ್ಯೂಯಾರ್ಕ್, ಟೋಕಿಯೋಗಳಲ್ಲಿ ಹೇಗೋ ಹಾಗೇ ಹುಟ್ಟುತ್ತಾರೆ, ಬದುಕುತ್ತಾರೆ, ಪ್ರೇಮಿಸುತ್ತಾರೆ. ಈ ವೈಶಿಷ್ಟ್ಯ ಮತ್ತು ಸಾಂಗತ್ಯ- ಇದು ನನ್ನನ್ನು ಬೆರಗುಗೊಳಿಸುತ್ತದೆ. ಈ ಬೆರಗನ್ನೇ ನನ್ನ ಚಿತ್ರಗಳಲ್ಲಿ ಕಾಣಿಸಲು ಯತ್ನಿಸುತ್ತೇನೆ.’

ತಮ್ಮ ಚಿತ್ರಗಳ ಬಗ್ಗೆ ಹೀಗೆ ಆತ್ಮವನ್ನೇ ವಿಶ್ವಾಸಕ್ಕಿಟ್ಟು ಮಾತನಾಡಬಲ್ಲ ಚಿತ್ರನಿರ್ದೇಶಕರ ಪೈಕಿ ಸತ್ಯಜಿತ್ ರೇ ಅಗ್ರಗಣ್ಯರು. ಅದಕ್ಕೆ ಕಾರಣ ಅವರ ನೈಜ ಪ್ರತಿಭೆ ಮತ್ತು ಅವರು ಕೊಟ್ಟ ಸೃಜನಶೀಲ ಕೃತಿಗಳು. ರೇ ಅವರ ಕೌಟುಂಬಿಕ ಹಿನ್ನೆಲೆ ಸಾಕಷ್ಟು ಶ್ರೀಮಂತವಾಗಿಯೇ ಇತ್ತು- ಬೌದ್ಧಿಕವಾಗಿಯೂ ಕೂಡ. ತಾತನ ಕಾಲದ ಪ್ರಿಂಟಿಂಗ್ ಪ್ರೆಸ್ ಕೆಲಸ ಅಪ್ಪನಿಂದ ರೇವರೆಗೆ ರಕ್ತದಲ್ಲಿಯೇ ಹರಿದುಬಂದಿತ್ತು. ಭಾಷೆ-ಬರವಣಿಗೆಯನ್ನು ಕಲಿಸಿ ಕರಗತ ಮಾಡಿತ್ತು. ಬರವಣಿಗೆಯ ಜೊತೆ ಜೊತೆಗೆಯೇ ಜಾಹೀರಾತು, ಪೋಸ್ಟರ್, ಬುಕ್ ಕವರ್ ಗಳನ್ನು ಕೂಡ ಡಿಸೈನ್ ಮಾಡಬಲ್ಲವರಾಗಿದ್ದರು. ತಾವು ಹುಟ್ಟಿ ಬೆಳೆದ ಕಲ್ಕತ್ತಾ ಕುತೂಹಲಗಳ ಕೇಂದ್ರವಾಗಿ, ಬಗೆದಷ್ಟು ಬೆರಗುಟ್ಟಿಸುವ ನಗರವಾಗಿ ಕಣ್ಣಮುಂದೆ ಕುಣಿದಾಡುತ್ತಲಿತ್ತು. ಬಿಭೂತಿ ಭೂಷಣ್ ಬಂಧೋಪಾದ್ಯರ ಕಾದಂಬರಿ ಕಾಡುತ್ತಿತ್ತು. ಸುತ್ತಣ ಪರಿಸರ, ಬಂಗಾಲದ ಬಡತನ, ಕೌಟುಂಬಿಕ-ಸಾಮಾಜಿಕ ಸ್ಥಿತಿ-ಗತಿ, ಹೊಸ ತಲೆಮಾರಿನ ತಲ್ಲಣಗಳು… ಎಲ್ಲವೂ ರೇ ಅವರಲ್ಲಿ ಹೊಸದೊಂದು ಹುಟ್ಟಿಗೆ ಕಾತರಿಸುತ್ತಿದ್ದವು, ತಲೆಯ ತುಂಬ ಸಿನಿಮಾವೆಂಬ ಕನಸನ್ನು ತುಂಬಿದ್ದವು.

ಅದೇ ಸಮಯದಲ್ಲಿ ರೇ ಅವರು ಲಂಡನ್ ಗೆ ಪ್ರವಾಸಕ್ಕೆಂದು ಹೋದವರು, ಅಲ್ಲಿ ಇಟಲಿಯ ಚಿತ್ರನಿರ್ದೇಶಕ ವಿಟ್ಟೋರಿಯಾ ಡಿ ಸಿಕಾ ಅವರ `ದಿ ಬೈಸಿಕಲ್ ಥೀಫ್’ ಚಿತ್ರ ನೋಡುತ್ತಾರೆ. ಬದುಕಿಗಾಧಾರವಾದ ಬಡವನ ಬೈಸಿಕಲ್ ಕದಿಯುವ ಮತ್ತೊಬ್ಬ ಬಡವನ ಕತೆಯುಳ್ಳ ಆ ಚಿತ್ರ ರೇ ಅವರನ್ನು ಗಾಢವಾಗಿ ಕಾಡುತ್ತದೆ. ಸರಿ-ತಪ್ಪುಗಳ ನಡುವಿನ ತಾಕಲಾಟ, ಆ ತಳಮಳವನ್ನು ತೆರೆಯ ಮೂಲಕ ತಲುಪಿಸುವ ತಂತ್ರ, ಪಾಶ್ಚಿಮಾತ್ಯರ ನವವಾಸ್ತವಿಕತೆಯ ಪಾಠಗಳನ್ನು ಅರಿತು ಅರಗಿಸಿಕೊಳ್ಳುತ್ತಾರೆ. ಸಿನಿಮಾ ಗುಟ್ಟನ್ನು, ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದರ ಜೊತೆಗೆ ಜಪಾನಿನ ಚಿತ್ರನಿರ್ದೇಶಕ ಅಕಿರ ಕುರೋಸವಾ ಅವರ `ರಶೋಮೋನ್’, ತಮ್ಮವರೇ ಆದ ಬಿಮಲ್ ರಾಯ್ ಅವರ `ದೋ ಬಿಘಾ ಜಮೀನ್’ ಚಿತ್ರಗಳು ರೇ ಅವರನ್ನು ಪ್ರೇರೇಪಿಸುತ್ತವೆ. ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಸತ್ಯಜಿತ್ ರೇ, ತಾವು ಕಂಡಿದ್ದು, ಕೇಳಿದ್ದು, ಕಲಿತದ್ದೆಲ್ಲವನ್ನು- ತಾಯಿಯ ಗರ್ಭದಿಂದ ಹೊರಬಂದ ಮಗುವಿನಂತೆ- 1955ರಲ್ಲಿ ಮಾಡಿದ `ಪಥೇರ್ ಪಾಂಚಾಲಿ’ ಚಿತ್ರದಲ್ಲ್ಲಿ ಕಾಣಿಸುತ್ತಾರೆ.

ಬಂಗಾಲದ ಬಡತನ, ಬಡವರ ಅಸ್ಥಿರ ಬದುಕು ರೇ ಅವರನ್ನು ಅಲ್ಲಾಡಿಸಿತ್ತು. ಅವರ ಹಸಿಹಸಿಯಾದ ಅಸಹಾಯಕ ಸ್ಥಿತಿಯನ್ನು ಅಷ್ಟೇ ನೈಜವಾಗಿ ಬೆಳ್ಳಿತೆರೆಗಿಳಿಸುವ ಉತ್ಕಟ ಆಸೆಯಿಂದ ಬಣ್ಣ ಬಳಸದೆ, ಹೊಸಬಟ್ಟೆಗಳಿಲ್ಲದೆ, ನುರಿತ ಕಲಾವಿದರಿಲ್ಲದೆ, ಮಳೆ-ಗಾಳಿ-ರೈಲುಗಳನ್ನು ಸಂಕೇತಗಳಂತೆ ಬಳಸಿ ಪಥೇರ್ ಪಾಂಚಾಲಿಯನ್ನು ಮಾಡಬೇಕೆಂಬ ಹಠಕ್ಕೆ ಬೀಳುತ್ತಾರೆ. ಆ ಹಾದಿಯಲ್ಲಿ ಹತ್ತು ಹಲವು ಕಷ್ಟ-ನಷ್ಟಗಳನ್ನು ಅನುಭವಿಸುತ್ತಾರೆ. ಹಣಕಾಸಿನ ತೊಂದರೆಯಾದಾಗ ಹೆಂಡತಿಯ ಒಡವೆಗಳನ್ನೇ ಒತ್ತೆಯಿಟ್ಟು ಚಿತ್ರೀಕರಣ ಮುಂದುವರೆಸುತ್ತಾರೆ. ಹೀಗೆ ಸಮಸ್ಯೆಗಳನ್ನು ಸಂಭಾಳಿಸಿಕೊಂಡು, ಪ್ರತಿಭೆಯನ್ನು ಪಣಕ್ಕಿಟ್ಟು ಮಾಡಿದ `ಪಥೇರ್ ಪಾಂಚಾಲಿ’ ಬಂಗಾಲಿ ಭಾಷೆಯನ್ನು ಮೀರಿ, ಭಾರತೀಯ ಚಿತ್ರವಾಗಿ ಬೆಳೆದು, ಅಂತಾರಾಷ್ಟ್ರೀಯ ಮಟ್ಟದ ಮನ್ನಣೆಯನ್ನು ತಂದುಕೊಟ್ಟಿತು. ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳ ಸಾಲಿಗೆ ಸೇರಿಹೋಯಿತು.

ಅಪರಾಜಿತೊ ಚಿತ್ರದ ದೃಶ್ಯ

ಇದೇ ಸಮಯದಲ್ಲಿ, ಆ ಕಾಲಕ್ಕೇ ಹಾಲಿವುಡ್ ಚಿತ್ರಗಳ ಅತ್ಯಂತ ಕಟು ವಿಮರ್ಶಕ ಎಂದು ಹೆಸರು ಮಾಡಿದ್ದ, ಖ್ಯಾತ ಚಿತ್ರನಿರ್ದೇಶಕ ಡೇವಿಡ್ ಲೀನ್ ಚಿತ್ರಗಳಾದ `ಲಾರೆನ್ಸ್ ಆಫ್ ಅರೇಬಿಯಾ’ ಮತ್ತು `ಡಾಕ್ಟರ್ ಜಿವಾಗೊ’ಗಳನ್ನು ಅಕ್ಕಪಕ್ಕದಲ್ಲಿಟ್ಟು ಉಗ್ರವಾಗಿ ಟೀಕಿಸಿ ಬರೆದಿದ್ದ ಜಾನ್ ಸೈಮನ್ ಎಂಬ ಅಮೆರಿಕಾದ ವಿಮರ್ಶಕ, ಸತ್ಯಜಿತ್ ರೇ ಅವರ `ಪಥೇರ್ ಪಾಂಚಾಲಿ’ಯನ್ನು ವಸ್ತುನಿಷ್ಠ ವಿಮರ್ಶೆಗೊಳಪಡಿಸಿ, ಭಾರತೀಯ ಬಡತನದ ನೆಗಟಿವ್ ಅನ್ನು ಬೆಳ್ಳಿತೆರೆಗೆ ತಂದ ಸಮರ್ಥ ಚಿತ್ರ ಎಂದು ಹಾಡಿ ಹೊಗಳುತ್ತಾನೆ.

ವಿಪರ್ಯಾಸವೆಂದರೆ, ಆಗ ರಾಜ್ಯಸಭಾ ಸದಸ್ಯೆಯಾಗಿದ್ದ, ಹಿಂದಿ ಚಿತ್ರರಂಗದಲ್ಲಿ ಅಭಿನೇತ್ರಿಯಾಗಿ ಮಿಂಚಿದ್ದ, ಕಲಾಜಗತ್ತಿನ ಆಳ-ಅಗಲಗಳನ್ನು ಅರಿತಿದ್ದ ನರ್ಗೀಸ್, `ಭಾರತೀಯ ಬಡತನದ ಕ್ಷುಲ್ಲಕ ಪ್ರದರ್ಶನ’ ಎಂದು ರಾಜ್ಯಸಭೆಯಲ್ಲಿ `ಪಥೇರ್ ಪಾಂಚಾಲಿ’ ಚಿತ್ರವನ್ನು ಲೇವಡಿ ಮಾಡುತ್ತಾರೆ.

ಭಾರತದ ಬಡತನವನ್ನು ಬಿಕರಿಗಿಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರಗಳನ್ನು ಗಳಿಸುವ ತಂತ್ರ ಆಗಲೇ ಇತ್ತು. ಈಗ ಅದು ಅರವಿಂದ ಅಡಿಗರ `ವೈಟ್ ಟೈಗರ್’ ಪುಸ್ತಕ ಮತ್ತು `ಸ್ಲಂಡಾಗ್ ಮಿಲಿಯನೇರ್’ ಚಿತ್ರಗಳ ಮೂಲಕ ಇನ್ನೂ ಜೀವಂತವಿದೆ ಎಂದು ವಾದಿಸುವವರಿಗೇನು ಕೊರತೆಯಿಲ್ಲ. ಆದರೆ ಸತ್ಯಜಿತ್ ರೇ ಅವರ ನೋಟವೂ ಬೇರೆ, ಮಾರ್ಗವೂ ಬೇರೆ. ಅವತ್ತಿನ ಬಂಗಾಲದ ಪರಿಸ್ಥಿತಿ, ಪಾಶ್ಚಿಮಾತ್ಯರ ನವವಾಸ್ತವಿಕತೆಯ ಪ್ರಭಾವಗಳ ಜೊತೆಗೆ ಮನುಷ್ಯ ಸಂಬಂಧಗಳ ಸೂಕ್ಷ್ಮವನ್ನು ಅರಿತು ಮನುಷ್ಯತ್ವ ಮುಖ್ಯ ಎಂದು ಪ್ರತಿಪಾದಿಸಿದ ರೇ ಅವರು, `ನೋಡಿದ ಚಿತ್ರ ಚಿತ್ತ ಕೆಡಿಸಬೇಕು, ನಮ್ಮನ್ನು ಬೆಳೆಸಬೇಕು, ಅಂತರಂಗವನ್ನು ಅಲ್ಲಾಡಿಸಬೇಕು, ಅರಳಿಸಬೇಕು’ ಎಂಬ ಗ್ರಹಿಕೆಯುಳ್ಳವರಾಗಿದ್ದರು. ಅದನ್ನವರು ಅವರ ಚಿತ್ರಗಳ ಮೂಲಕ ಆಗುಮಾಡಿ ಸಿನಿಮಾಗಳ ಬಗ್ಗೆ ಜನರಲ್ಲಿದ್ದ ಭಾವನೆಯನ್ನೇ ಬದಲಿಸಿದ್ದರು. ಹಾಗಾಗಿಯೇ, ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠೆಯ ಪ್ರಶಸ್ತಿಯಾದ `ಅಕಾಡೆಮಿ ಅವಾರ್ಡ್’ ರೇ ಅವರನ್ನು ಹುಡುಕಿಕೊಂಡು ಬಂತು. ಜಾಗತಿಕ ಸಿನಿಮಾಜಗತ್ತು ಭಾರತೀಯ ಸಿನಿಮಾಗಳನ್ನೂ ಕಣ್ಬಿಟ್ಟು ನೋಡುವಂತಾಯಿತು.

ಪಥೇರ್ ಪಾಂಚಾಲಿ ಚಿತ್ರದ ಒಂದು ದೃಶ್ಯ

ಕತೆ, ಚಿತ್ರಕತೆ, ಸಂಭಾಷಣೆ, ಸಂಕಲನ, ಛಾಯಾಗ್ರಹಣ, ನಿರ್ದೇಶನ… ಕೊನೆಗೆ ಅವರ ಚಿತ್ರದ ಟೈಟಲ್ ಕಾರ್ಡ್ ಕೂಡ ಅವರೇ ಡಿಸೈನ್ ಮಾಡಿಕೊಳ್ಳುವಷ್ಟು ಪರಿಣತರು. ಮತ್ತು ಅವರ ಚಿತ್ರಕ್ಕೆ ಅವರೇ ಮೊದಲ ವಿಮರ್ಶಕರು. ಈ ಸಕಲಕಲಾವಲ್ಲಭನ ನಿರ್ದೇಶನವೆಂದರೆ ನಿರಂತರ ಹುಡುಕಾಟ, ಸಾಮೂಹಿಕ ಸಂವಾದ, ಆರೋಗ್ಯಕರ ಸಮಾಜಕ್ಕೆ ಸೋಪಾನ ಎನ್ನುವ ವಿನಯವಂತ ಕೂಡ. ಇವರ ಅಪೂರ್ವ ಕೃತಿಗಳಾದ ಪಥೇರ್ ಪಾಂಚಾಲಿ, ಅಪರಾಜಿತೊ, ಅಪೂರ್ ಸಂಸಾರ್ ಗಳನ್ನೊಳಗೊಂಡ ಮೂವತ್ತೇಳು ಚಿತ್ರಗಳು ಇವನ್ನೇ ಹೇಳುತ್ತವೆ. ಆಶ್ಚರ್ಯವೆಂದರೆ, ರೇ ಮೂಲತಃ ಬೆಂಗಾಲಿ ಭಾಷೆಯ ಅತ್ಯುತ್ತಮ ಕತೆಗಾರರು. ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿರುವ ಪ್ರಕಾಶಕರು. ಈಗಾಗಲೇ ಸತ್ಯಜಿತ್ ರೇ ಬಗ್ಗೆ ಪ್ರೀತಿ ಮತ್ತು ಕುತೂಹಲವಿರುವವರೆಲ್ಲ ಕಣ್ಣಾಡಿಸಿರಬಹುದಾದ ಅವರ `ಅವರ್ ಫಿಲ್ಮ್ಸ್, ದೇರ್ ಫಿಲ್ಮ್ಸ್’ ಪುಸ್ತಕ, ಅವರ ಚಿತ್ರಬದುಕಿನ ಪುಟಗಳನ್ನು ಬಿಡಿಸಿಟ್ಟ ಅದ್ಭುತ ಕೃತಿ.

ಅತ್ಯುತ್ತಮ ಚಿತ್ರನಿರ್ದೇಶಕ, ಅದಕ್ಕಿಂತ ಹೃದಯವುಳ್ಳ ಅಪ್ಪಟ ಮನುಷ್ಯ. ಜಾಗತಿಕ ಮಟ್ಟದಲ್ಲಿ ಭಾರತದ ಭಾವುಟ ಹಾರಿಸಿದ ಅಪರೂಪದ ಅಪ್ಪಟ ಪ್ರತಿಭಾವಂತ. ಇಂತಹ ಸತ್ಯಜಿತ್ ರೇ ಅವರು ಹುಟ್ಟಿದ್ದು ಮೇ 2,1921ರಂದು, ಸತ್ತಿದ್ದು ಏಪ್ರಿಲ್ 23,1992ರಂದು. ಹುಟ್ಟು ಆಕಸ್ಮಿಕ ಸಾವು ಸಹಜವೆಂಬ ಮಾತಿದೆ. ರೇರಂತಹ ವ್ಯಕ್ತಿಗಳು ಈ ಆಕಸ್ಮಿಕ-ಸಹಜಗಳನ್ನೂ ಮೀರಿದ ಮಹಾನುಭಾವರು. ಸ್ಮರಣಿಕೆಗೆ ಯೋಗ್ಯವಾದವರು.

(ಚಿತ್ರಗಳು: ಸಂಗ್ರಹದಿಂದ)