ಪ್ರಜಾಪ್ರಭುತ್ವವನ್ನು ಟೀಕಿಸುವವರಿಗೆ ಬೇರೆ ಯಾವ ಪದ್ಧತಿ ಯಾವ ಉತ್ತಮ ಕಾರಣಕ್ಕೆ ಬೇಕೋ ತಿಳಿಯುವುದಿಲ್ಲ. ಪ್ರಜಾಪ್ರಭುತ್ವವೊಂದನ್ನು ಬಿಟ್ಟು ಇನ್ನುಳಿದ ಯಾವುದೇ ರಾಜಕೀಯ ವ್ಯವಸ್ಥೆಯೂ ಇವರಿಗೆ ಒಪ್ಪಿಗೆಯೇ? ಪ್ರಜಾಪ್ರಭುತ್ವವೆಂದರೆ ಯಾಕೆ ಇವರಿಗೆ ಇಷ್ಟೊಂದು ಹೆದರಿಕೆ? ಹಾಂ! ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ವಿಮರ್ಶಿಸುವ ಸ್ವಾತಂತ್ರ್ಯವಿದೆ. ಇದು ಇವರಿಗೆ ಸಹ್ಯವಲ್ಲ; ಯಾಕೆಂದರೆ ಇಂಥವರು ಮೂಲಭೂತವಾದಿಗಳೂ ಏಕಪಕ್ಷೀಯರೂ ಆಗಿರುತ್ತಾರೆ. ಸಮಾನತೆಯೆಂದರೆ ಇವರಿಗೆ ಸಹ್ಯವಲ್ಲ. ತಾವು ಉತ್ತಮರೆಂದೂ ಇತರರು ಅಧಮರೆಂದೂ ತಿಳಿಯುವವರು ಇವರು. ಆದ್ದರಿಂದಲೇ ಇವರು ಪ್ರಜಾಪ್ರಭುತ್ವವನ್ನು ತಾತ್ವಿಕವಾಗಿಯಾದರೂ ಇವರು ಒಪ್ಪಲಾರರು.
ಕವಿ ಕೆ.ವಿ.ತಿರುಮಲೇಶ್ ಬರಹ

 

ಶನಿವಾರ, 16.04.2011
1966ರಲ್ಲಿ ನಾನು ಅಧ್ಯಾಪಕ ವೃತ್ತಿಯನ್ನು ಆರಂಭಿಸಿದೆ. ಈಗ ಇಸವಿ 2011. ಈ ಮಧ್ಯೆ ನಾನು ಪಿಎಚ್.ಡಿ.ಗೆ ಮೂರು ವರ್ಷ ಮತ್ತು ಇಂಗ್ಲೆಂಡ್ ನಲ್ಲಿ ಓದಲು ಒಂದು ವರ್ಷ ಬಳಸಿದ್ದನ್ನು ಕಳೆದರೆ ಸುಮಾರ 40 ವರ್ಷಗಳ ಕಾಲ ಈ ವೃತ್ತಿಯಲ್ಲಿ ಇದ್ದೇನೆ. ಎಂದರೆ ಎರಡು ತಲೆಮಾರು ಕಾಲ. ಉಜಿರೆ, ಕಾಸರಗೋಡು, ಕಲ್ಲಿಕ್ಕೋಟೆ, ಮಡಪ್ಪಳ್ಳಿ, ಹೈದರಾಬಾದು, ಅಯೋವಾ ಮತ್ತು ಸನಾದಲ್ಲಿ ನಾನು ಕಲಿಸಿದ್ದೇನೆ; ಈ ಲೇಖನ ಬರೆಯುವಾಗ ಸಹಾ ನಾನು ಸನಾದಲ್ಲಿ ಕೆಲಸದಲ್ಲಿ ಇದ್ದೇನೆ. ಇಲ್ಲಿ ಇನ್ನೂ ಎರಡನೇ ಸೆಮಿಸ್ಟರ್ ಕ್ಲಾಸುಗಳು ಆರಂಭವಾಗಿಲ್ಲ; ಆರಂಭವಾಗುವ ಲಕ್ಷಣಗಳೂ ಕಾಣಿಸ್ತ ಇಲ್ಲ. ಯಾಕೆಂದರೆ ಯುನಿವರ್ಸಿಟಿಯ ಮೂಡಲ ಮಹಾದ್ವಾರದ ಹೊರಗೆಯೇ ಪ್ರಸಿಡೆಂಟ್ ಆಲಿ ಅಹ್ಮದ್ ಸಾಲೆಯ ಮತ್ತು ಆತನ ಸರಕಾರದ ವಿರುದ್ಧ ಚಳುವಳಿ ನಡೆಸುತ್ತ ಪ್ರತಿಭಟನಕಾರರು ಡೇರೆಗಳನ್ನು ಹಾಕಿ ಕೂತಿದ್ದಾರೆ, ಹಾಗೂ ಅವರಲ್ಲಿ ಕೆಲವು ವಿದ್ಯಾರ್ಥಿಗಳೂ ಇದ್ದಾರೆ.

ಈ ಪ್ರತಿಭಟನೆ ಕಳೆದ ಸುಮಾರು ಎರಡು ತಿಂಗಳುಗಳಿಂದಲೂ ನಡೆಯುತ್ತಿದೆ. ಆದರೆ ಸದ್ಯವೇ ನಾನು ಅಧ್ಯಾಪನ ವೃತ್ತಿಯಿಂದ ಪೂರ್ತಿ ನಿವೃತ್ತನಾಗಲು ಬಯಸುವುದರಿಂದ ನನ್ನ ಔದ್ಯೊಗಿಕ ಅನುಭವ ಮತ್ತು ವಿಚಾರಗಳಲ್ಲಿ ಕೆಲವನ್ನಾದರೂ ಇಲ್ಲಿ ದಾಖಲಿಸೋಣ ಎನಿಸಿದೆ. ಸ್ವಂತ ಅನುಭವಕ್ಕಿಂತ ಹೆಚ್ಚಿನದು ಯಾವುದೂ ಇಲ್ಲ. ಆದ್ದರಿಂದ ನನ್ನ ವಿಚಾರಗಳು ಇತರರಿಗೆ ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರುತ್ತವೆ ಎಂದು ಹೇಳಲಾರೆ. ಒಬ್ಬ ಮನುಷ್ಯನ ಕತೆ ಎಲ್ಲರದೂ ಎನ್ನುವ ವಿಶ್ವಾಸದಿಂದ ಇದನ್ನು ಬರೆಯುತ್ತಿದ್ದೇನೆ.

1966ರಲ್ಲಿ ನಾನು ಇಂಗ್ಲಿಷ್ ಎಂ.ಎ. ಮುಗಿಸಿದೆ, ತಿರುವನಂತಪುರದ ಯುನಿವರ್ಸಿಟಿ ಕಾಲೇಜಿನಿಂದ. ವಿದ್ಯಾಭ್ಯಾಸ ಗಳಿಸಿಕೊಳ್ಳಲು ನಾನು ಬಹಳಷ್ಟು ಹೆಣಗಾಡಬೇಕಾಯಿತು. ಒಂದೆರದು ವರ್ಷ ಬ್ರೇಕ್ ಕೂಡಾ ಬಿತ್ತು. ಅದೆಲ್ಲ ಒಂದು ದೊಡ್ಡ ಕತೆ. ಈ ಲೇಖನದ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಆದರೆ ನನ್ನ ಆರಂಭದ ಎಲಿಮೆಂಟರಿ ಶಾಲೆಯಷ್ಟು ಪಾಪಿಷ್ಠವಾದ `ವಿದ್ಯಾಸಂಸ್ಥೆ’ಯೊಂದನ್ನು ನಾನು ನನ್ನ ಜೀವನದಲ್ಲೆಲ್ಲೂ ಕಂಡಿಲ್ಲ ಎಂದು ಮಾತ್ರ ಹೇಳಬೇಕು. ಶಾಲೆಯೊಂದು ಪಾಪಿಷ್ಠವಾಗುವುದು ಸಾಧ್ಯವೇ? ಇಲ್ಲ, ಆದರೆ ಅಲ್ಲಿನ ಮಾಸ್ತರರು, ಹೆಡ್ ಮಾಸ್ತರರು ಹಾಗಿದ್ದರು. ನನ್ನ ಆರಂಭದ ವಿದ್ಯಾಭ್ಯಾಸವನ್ನು ನಾನು ಇಂಥ ನರಕದಲ್ಲಿ ಕಳೆದೆ.

ವ್ಯಕ್ತಿಯೊಬ್ಬನ ಆರಂಭ ಹೀಗಿದ್ದರೆ ಆತನ ಮುಂದಿನ ಜೀವನ ಹೇಗಿರಬೇಕು? ಈ ಆಘಾತ ನನ್ನ ಇಡೀ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದೆ ಎಂದು ಮಾತ್ರ ಹೇಳಬಲ್ಲೆ. ಮುಂದೆ ನಾನು ಹೊದ ಹೈಸ್ಕೂಲ್ ಚೆನ್ನಾಗಿತ್ತು. ಅಲ್ಲಿಗೆ ಹೋಗದೆ ಇರುತ್ತಿದ್ದರೆ ನನಗೆ ಬಹುಶಃ ಸಾಹಿತ್ಯಾಸಕ್ತಿ ಉಂಟಾಗುತ್ತಿರಲಿಲ್ಲ. ಆದರೆ ಅಲ್ಲಿಯೂ ವರ್ಗಭೇದ ಎಂಬ ಪಿಡುಗು ಇತ್ತು. ಶ್ರೀಮಂತ ಮೇಲ್ವರ್ಗದ ಹುಡುಗರು ತಮ್ಮದೇ ಗುಂಪುಕಟ್ಟಿಕೊಂಡು ಓಡಾಡುತ್ತಿದ್ದರು; ಅಧ್ಯಾಪಕರ ಕಣ್ಮಣಿಗಳಾಗಿದ್ದವರು ಅವರೇ. ಯಾವುದೇ ಸಾಮಾಜಿಕ ಪ್ರತಿಷ್ಠೆಯಿರದ ಒಂದು ಬಡ ಬ್ರಾಹ್ಮಣ ಕುಟುಂಬದಿಂದ ಬರುತ್ತಿದ್ದ ನಾನು ಮತ್ತು ನನ್ನಂಥವರಿಗೆ ಅಲ್ಲಿ ಪಾಠದಲ್ಲಾಗಲಿ ಆಟದಲ್ಲಾಗಲಿ ಗಮನ ಸಿಗುತ್ತಿರಲಿಲ್ಲ. ಆದ್ದರಿಂದ ನಾನು ಅಲ್ಲಿಯೂ ಸಾಕಷ್ಟು ಹಿಂಸೆ, ಒಂಟಿತನ ಮತ್ತು ಮನಃಕ್ಲೇಶಕ್ಕೆ ಒಳಗಾದೆ. ಆದರೆ ನಮ್ಮ ಹೆಡ್ ಮಾಸ್ತರ್ ಬೊಳುಂಬು ಸುಬ್ರಾಯ ಭಟ್ ಇದನ್ನೆಲ್ಲ ಮೀರಿದ ವ್ಯಕ್ತಿಯಾಗಿದ್ದರು. ಯಾವಾಗಲೂ ನಗು ನಗುತ್ತ ಇದ್ದ ಅವರು ಯಾರನ್ನೂ ಹೀನಾಯವಾಗಿ ಬಯ್ದು ಬಡಿದು ಮಾಡಿದ್ದನ್ನು ನಾನು ಕಂಡೆ ಇಲ್ಲ. ಹೆಚ್ಚೆಂದರೆ ಅವರು ಕಿವಿ ಹಿಂಡಬಹುದು, ಆಗಲೂ ಅವರ ನಸುನಗು ಮಾಯುತ್ತಿರಲಿಲ್ಲ.

ಅವರು ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ರೋಮಿಯೋ ಏಂಡ್ ಜೂಲಿಯೆಟ್ ನ ಒಂದು ಭಾಗವನ್ನು ಅವರು ಪಾಠ ಮಾಡಿದ್ದು ನೆನಪಿದೆ; ಅದೇ ರೀತಿ ಏಬ್ರಹಾಮ್ ಲಿಂಕನ್ ಕುರಿತಾದ ಒಂದು ಚಿಕ್ಕ ಉಪಪಠ್ಯವನ್ನು. ಅವರಂಥ ಒಳ್ಳೇ ಇತರ ಅಧ್ಯಾಪಕರೂ ಅಲ್ಲಿದ್ದರು. ಕೆಟ್ಟವರೂ ಇದ್ದರು. ನಾನು ಪ್ರಥಮಶ್ರೇಣಿಯಲ್ಲೇ ಎಸ್ ಎಸ್ ಎಲ್ ಸಿ ಪಾಸಾದರೂ ಕಾಲೇಜಿಗೆ ಸೇರಲು ಎರಡು ವರ್ಷಗಳು ಬೇಕಾದುವು; ಮನೆಯಿಂದ ಪ್ರೋತ್ಸಾಹವಿರದ ಕಾರಣ. ನಾನು ಹಟ ಮಾಡಿಯೇ ಕಾಲೇಜು ಸೇರಿದ್ದು. ಇದರ ಪರಿಣಾಮವೆಂದರೆ ನನ್ನಿಂದ ಇಪ್ಪತ್ತು ವರ್ಷ ಹಿರಿಯರೂ ಕುಟುಂಬದ ಯಜಮಾನರೂ ಆಗಿದ್ದ ನನ್ನ ಅಣ್ಣನ ಜತೆ ಉಂಟಾದ ವಿರಸ.

ನಾನು ಕಾಲೇಜಿಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಮುಂದೆ ನಾನು ಎಲ್ಲವನ್ನೂ ಬಿಟ್ಟುಕೊಟ್ಟು ಊರು ಬಿಡಲೂ ಈ ವಿರಸವೇ ಕಾರಣವಾಯಿತು. ಈಗ ಹಿಂತಿರುಗಿ ನೋಡಿದರೆ ಅವರನ್ನಾಗಲಿ ಮನೆಯ ಇತರರನ್ನಾಗಲಿ ನಾನು ದೂರಲಾರೆ; ಯಾಕೆಂದರೆ ಅವರ ಮನೋಭೂಮಿಕೆಯೇ ಹಾಗಿತ್ತು. ಅವರಾರೂ ವಿದ್ಯಾವಂತರಾಗಿರಲಿಲ್ಲ. ಕೃಷಿಕರಾಗಿದ್ದರು. ನಾನೂ ಕುಟುಂಬವೃತ್ತಿಯನ್ನೆ ಮಾಡಿಕೊಂಡಿರಬೇಕು ಎನ್ನುವುದು ಅವರ ಒತ್ತಾಯವಾಗಿತ್ತು. ಆದರೆ ನನ್ನ ದೃಷ್ಟಿ ಆಗಲೇ ಬಹು ದೂರಕ್ಕೆ ನೆಟ್ಟಿತ್ತು.

ದೈವವಿಶ್ವಾಸವಿದ್ದ ಮನೆತನದಿಂದ ಬಂದವನು ನಾನು. ಪೂಜೆ ಮಂತ್ರಗಳೇ ಸುತ್ತ ಮುತ್ತ ಇರುತ್ತ ನಾನೂ ನೀರಿನಲ್ಲಿರುವ ಮೀನು ನೀರು ಕುಡಿಯುತ್ತಲೇ ಇರುವಂತೆ ಅವುಗಳಲ್ಲಿ ಭಾಗವಹಿಸುತ್ತಿದ್ದೆ. ಮನೆಯವರ ಜತೆ ಊರ ದೇವಾಲಯಗಳಿಗೆ ಹೋಗುತ್ತಿದ್ದೆ. ಜಾತ್ರೆಗಳು ಬಂದರೆ ಸಂತೋಷವೇ. ಆದರೆ ಚಿಕ್ಕವನಾಗಿದ್ದ ನನಗೆ ದೇವರ ಗುಡಿಯಲ್ಲಿ ಏನಾಗುತ್ತಿದೆ ಎನ್ನುವುದಕ್ಕಿಂತಲೂ ಹೊರಗೆ ಸಂತೆಯಲ್ಲಿ ಏನು ನಡೆಯುತ್ತಿದೆ ಎನ್ನುವುದರಲ್ಲೆ ಹೆಚ್ಚಿನ ಆಸಕ್ತಿಯಿದ್ದುದು. ಕ್ರಮೇಣ ಈ ದೈವ ವಿಶ್ವಾಸ ನನ್ನಿಂದ ಹೊರಟು ಹೋಯಿತು. ಅದೇನೂ ತಟ್ಟನೆ ಒಂದು ಘಟನೆಯಿಂದಾಗಿ ಹೊರಟುಹೋಯಿತು ಎನ್ನಲಾರೆ; ದೈವವಿಶ್ವಾಸ ಹಾಗೆ ಕರೆಂಟು ಹೊರಟು ಹೋಗುವಂತೆ ಹೋಗುವುದಿಲ್ಲ. ವೈಚಾರಿಕತೆ ಬೆಳೆದಂತೆ ಇಲ್ಲದಾಗುತ್ತದೆ.

ಈಗಲಾದರೂ ನಾನು ದೇವಾಲಯಗಳಿಗೆ ಭೇಟಿ ಕೊಡಬಹುದು; ವಂದಿಸಬಹುದು; ಪ್ರದಕ್ಷಿಣೆ ಬರಬಹುದು; ಪ್ರಸಾದ ಸ್ವೀಕರಿಸಬಹುದು; ಕಾಣಿಕೆ ನೀಡಬಹುದು. ದೇವರಿದ್ದಾನೆ ಎಂದಲ್ಲ, ಮನುಷ್ಯರಿದ್ದಾರೆ ಎಂದು ಮಾತ್ರ. ಸಾರಾಸಗಟಾಗಿ ಜನಸಮೂಹವನ್ನು ತಿರಸ್ಕರಿಸಲು ನನಗೆ ಇಷ್ಟವಿಲ್ಲ. ಆದರೆ ಇಂದು ವಿದ್ಯಾವಂತನಾದ ಯಾರೇ ಆಗಲಿ, ಯಾವ ಮತಧರ್ಮಕ್ಕೇ ಜನ್ಮತಃ ಸೇರಿರಲಿ, ಆತ ದೈವವಿಶ್ವಾಸಿಯಾಗಿರುವುದು ಸಾಧ್ಯವಿಲ್ಲ ಎಂದು ನನ್ನ ಮನಸ್ಸು ಹೇಳುತ್ತದೆ. ನಾವಿರುವುದು ಭೂಮಿ ಎಂಬ ಒಂದು ಉಪಗ್ರಹದಲ್ಲಿ. ಈ ಭೂಮಿ ಹುಟ್ಟಿ ಸುಮಾರು ನಾಲ್ಕೂವರೆ ಬಿಲಿಯನ್ ವರ್ಷಗಳಾಗಿವೆ; ಇದರ ಅರ್ಧಾಯುಸ್ಸು ಆಯಿತು; ಇನ್ನರ್ಧ ಇದೆ. ಎಂದರೇನು? ಭೂಮಿ ಜೀರ್ಣವಾಗುತ್ತ ಆಗುತ್ತ ಜೀವಿಗಳಿಗೆ ಉಪಯೋಗಶೂನ್ಯ ಆಗುತ್ತದೆ. ಸೂರ್ಯನೂ ಹಾಗೇ; ಒಂದಲ್ಲ ಒಂದು ದಿನ ಅದರ ಶಕ್ತಿವ್ಯಯವಾಗಿ ಕುಬ್ಜಗ್ರಹವಾಗಿ ಮೂಲೆ ಸೇರುತ್ತದೆ! (ಕ್ಷಮಿಸಿ, ಈ ಸಾಲು ಬರೆಯುತ್ತಿದ್ದಂತೆ ನನಗೆ ಅನತಿ ದೂರದಿಂದ ಫಯರಿಂಗ್ ಶಬ್ದ ಕೇಳಿಸುತ್ತಾ ಇದೆ! ಯಾರು ಯಾರನ್ನು ಹೊಡೆದು ಹಾಕುತ್ತಿದ್ದಾರೋ ತಿಳಿಯದು. ಈಗ ಮುಂಜಾನೆ ಏಳೂಕಾಲು ಗಂಟೆ. ಒಂದು ಕಪ್ ಕಾಫಿ ಕುಡಿದುಕೊಂಡು ಇದನ್ನು ಟೈಪ್ ಮಾಡ್ತ ಇದ್ದೇನೆ.)

ಅಂತರಿಕ್ಷದಲ್ಲಿ ಇಂಥ ಅಗಣಿತ ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ಅನಿಲಗಳು, ತರಂಗಗಳು ಇವೆ. ಇವೆಲ್ಲ ಹೇಗಾದುವೋ ಗೊತ್ತಿಲ್ಲ. ಗೊತ್ತಿಲ್ಲದ್ದನ್ನು ದೇವರು ಎನ್ನುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ; ಈಗ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದಷ್ಟೇ ಎಂದರೆ ಸಾಕು. ವಿದ್ಯಾಭ್ಯಾಸದ ಆರಂಭವೇ ಇದಲ್ಲವೇ? ಗೊತ್ತಿಲ್ಲದ್ದನ್ನು ಗೊತ್ತುಪಡಿಸುವುದೇ ವಿದ್ಯಾಭ್ಯಾಸ. ಇದೇ ಎಲ್ಲ ವಿಜ್ಞಾನಕ್ಕೂ ಜ್ಞಾನಕ್ಕೂ ಮೂಲ. ವಿದ್ಯೆಯನ್ನು ಒಬ್ಬ ದೇವತೆಯಾಗಿ ಕಾಣುವ ಕ್ರಮ ಹಿಂದೂ ವಿಶ್ವಾಸಿಗಳಲ್ಲಿ ಇದೆ. ಇದೊಂದು ಸುಂದರವಾದ ರೂಪಕವೇನೋ ನಿಜ. ಆದರೆ ವಿದ್ಯಾಭ್ಯಾಸ ಮನುಷ್ಯನ ಚಿಂತನಾ ಗುಣದಲ್ಲಿ ಆಗುವ ಪ್ರಕ್ರಿಯೆಯೇ ಹೊರತು ದೈವ ಕೃಪೆಯಿಂದ ಅಲ್ಲ. ದಿನಾ ಸರಸ್ವತಿಯನ್ನು ಪೂಜಿಸುತ್ತ ಕೂರುವ ವ್ಯಕ್ತಿಗೆ ಅತ್ತ ಪುಣ್ಯವೂ ಸಿಗದು, ಇತ್ತ ವಿದ್ಯೆಯೂ ಬರದು. ಆದ್ದರಿಂದ ಇದಕ್ಕೆ ಸಂಬಂಧಿಸಿದ ಕತೆಗಳೆಲ್ಲವೋ ಯಾವುದೋ ಪೌರಾಣಿಕ ಯುಗದಲ್ಲಿ ಹುಟ್ಟಿಬಂದುವು ಎಂದು ತಿಳಿಯಬೇಕಾಗುತ್ತದೆ.

ಉದಾಹರಣೆಗೆ, ಕಾಳಿದಾಸ ಹಿಂದೊಬ್ಬ ನಿರಕ್ಷರಿ ಕುರುಬನಾಗಿದ್ದ, ನಂತರ ಕಾಳಿ ಮಾತೆಯ ಅನುಗ್ರಹದಿಂದ ಆತ ತಟ್ಟನೆ ಕವಿಯಾಗಿಬಿಟ್ಟ ಎಂಬ ಕತೆಯಿದೆ; ಒಂದು ಕತೆಯಾಗಿ ಇದು ಸ್ವಾರಸ್ಯಕರ. ಆದರೆ ನಿಜದಲ್ಲಿ ಅಸಾಧ್ಯ. ಈ ಮಾತು ಇಂಥ ಎಲ್ಲಾ ಮಿಥ್ ಗಳಿಗೂ ಅನ್ವಯಿಸುತ್ತದೆ. ಆದರೆ ಪೂಜೆ ಪುರಸ್ಕಾರ, ಪ್ರಾರ್ಥನೆಗಳಿಂದ ಏನೂ ಉಪಯೋಗವಿಲ್ಲವೇ ಎಂದು ಕೇಳಿದರೆ ನಾನು ಪೂರ್ತಿಯಾಗಿ ನಿರಾಕರಿಸಲೂ ಆರೆ. ಯಾಕೆಂದರೆ ಇಂದಿನ ಸೈಕಾಲಜಿ ಹೇಳುವ ಪ್ರಕಾರ ಆಟೋ ಸಜೆಶ್ಚನ್ (ಸ್ವಯಮಾವಾಹನೆ) ಎಂಬ ಒಂದು ಪ್ರಕ್ರಿಯೆಯಿದೆ. ಒಂದು ಉದಾಹರಣೆ ಕೊಡುವುದಾದರೆ ನೀವು ಬೊಜ್ಜು ಇಳಿಸಲು ಯಾರೋ ದುಡ್ಡು ಮಾಡಲೆಂದು ಮಾರ್ಕೆಟಿಗೆ ಇಳಿಸಿದ ಒಂದು ಸುಳ್ಳು ಔಷಧಿಯನ್ನು ನಿಜವೆಂದು ನಂಬಿ ತೆಗೆದುಕೊಳ್ಳುತ್ತೀರಿ ಎಂದುಕೊಳ್ಳೋಣ. ಇದರಿಂದ ತಾತ್ಕಾಲಿಕವಾಗಿ ಸ್ವಲ್ಪ ಮಟ್ಟಿಗೆ ಬೊಜ್ಜು ಇಳಿಯುತ್ತದೆ; ಯಾಕೆಂದರೆ ನೀವದನ್ನು ಬಯಸಿರುತ್ತೀರಿ, ಅದನ್ನು ಸಾಧಿಸುವ ಇರಾದೆ ಹೊಂದಿರುತ್ತೀರಿ. ಅದೀಗೆ ನಿಮ್ಮದೇ ಒಂದು ಕಾರ್ಯಕ್ರಮವಾಗಿರುತ್ತದೆ. ಎಂದರೆ ಬೊಜ್ಜು ಇಳಿಯಲು ಬೇಕಾದ ಒಟ್ಟಾರೆ (holistic) ಕ್ರಮಗಳನ್ನು ಕೈಗೊಳ್ಳುತ್ತೀರಿ. ಅಷ್ಟೆ. ಆದರೆ ಇದು ಔಷಧಿಯ ಕಾರಣ ಅಲ್ಲ. ಪೂಜೆ, ಪ್ರಾರ್ಥನೆ ಇತ್ಯಾದಿಗಳ ಉಪಯೋಗವೂ ಹೀಗೆ ಸೀಮಿತ. ಅವು ವಿಶ್ವಾಸಿಯ ಮನಸ್ಸನ್ನು ಪಾಸಿಟಿವ್ ಆಗಿ ಸಿದ್ಧಗೊಳಿಸುತ್ತವೆ. ಅದರಿಂದ ಪ್ರೇರಿತವಾದ ಕ್ರm ನಿಮಗೆ ಪ್ರೀತಿಯದೂ ಇಷ್ಟವುಳ್ಳದ್ದೂ ಆಗುತ್ತದೆ; ಅದರಲ್ಲಿ ನಿಮಗೆ ಹಟಬೀಳುತ್ತದೆ. ಆದರೆ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕಗಳು ಬರಬೇಕಿದ್ದರೆ ದೇವಸ್ಥಾನಗಳಿಗೆ ಹೋಗಿ ಪ್ರದಕ್ಷಿಣೆ ಹಾಕಿದರೆ ಸಾಲದು, ಚೆನ್ನಾಗಿ ಕಲಿಯಲೂ ಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಗೊತ್ತಿರಬೇಕು. ಅಲ್ಲ, ಬರೇ ಕಾಳಿ ಮಾತೆಯ ಅನುಗ್ರಹ ಸಾಕು ಎನ್ನುವುದು ಅವಿದ್ಯಾವಂತರ ಲಕ್ಷಣ. ಆಟೋ ಸಜೆಶ್ಚನ್ ಕೂಡಾ ಅಸಾಧ್ಯವನ್ನು ಸಾಧ್ಯಗೊಳಿಸಲಾರದು; ಎಂದರೆ ಬೋಳಾದ ತಲೆಯಲ್ಲಿ ಕೂದಲು ಮೂಡಿಸಲಾರದು. ಭಕ್ತಿಯಿದ್ದರೆ ಏನನ್ನೂ ಸಾಧಿಸಬಹುದು ಎನ್ನುವ ನಂಬಿಕೆಯೂ ಇದೇ ವರ್ಗಕ್ಕೆ ಸೇರಿದ್ದು.

ನನಗೊಂದು ಘಟನೆ ನೆನಪಿದೆ. ನನ್ನ ವಯಸ್ಸಿನ ಹುಡುಗರು ಹೆಚ್ಚಾಗಿ ಸೈಕಲ್ ಕಲಿಯುತ್ತಿದ್ದರು. ನನಗೂ ಕಲಿಯುವ ಆಸೆಯಿತ್ತು. ಆದರೆ ಸೈಕಲ್ ಬಾಡಿಗೆಗೆ ಹಣ ಬೇಕಿತ್ತು. ನನ್ನ ಮನೆಯವರ ಪ್ರಕಾರ ಸೈಕಲ್ ಕಲಿಯುವುದು ಪೋಲಿ ಹುಡುಗರ ಲಕ್ಷಣ. ಅವರು ನನಗದನ್ನು ನಿಷೇಧಿಸಿದರು. ಇನ್ನು ಅದಕ್ಕಾಗಿ ಹಣ ಅವರು ಕೊಡುವುದಂತೂ ಅನೂಹ್ಯವಾಗಿತ್ತು. ಆಗ ಬಹುಶಃ ನನಗೆ ಏಳನೇ ವಯಸ್ಸು. ಎಲ್ಲೋ ಒಂದೆಡೆ ನೇರಳೆ ಬಣ್ಣದ ಒಂದು ಮಖಮಲ್ ಚೂರು ನನಗೆ ಬಿದ್ದು ಸಿಕ್ಕಿತು. ಆ ವಯಸ್ಸಿನಲ್ಲಿ ಬೇಗಡೆ, ಮಖಮಲ್, ಮಣಿಸರ ಮುಂತಾದ ಚೂರುಪಾರುಗಳೆಂದರೆ ಮಾಯಾ ಜಗತ್ತಿಗೆ ಸೇರಿದಂಥವು. ನಾನು ರಾತ್ರಿ ಮಲಗುವಾಗ ಆ ಮಖಮಲ್ ಚೂರನ್ನು ತಲೆ ಬದಿಯಲ್ಲಿ ಒರೆಸಿ ಇಟ್ಟುಕೊಂಡೆ: ಮುಂಜಾನೆ ನಾನೇಳುವಾಗ ನನ್ನ ಪಕ್ಕದಲ್ಲಿ ನನ್ನದೇ ಒಂದು ಸೈಕಲ್ ಇರಲಿ ಎಂದು ಆರ್ತನಾಗಿ ಬೇಡಿಕೊಂಡು. ಬಹುಶಃ ನಾನು ಅಲ್ಲಾವುದ್ದೀನನ ಅದ್ಭುತ ದೀಪದ ಕತೆ ಕೇಳಿರಬೇಕು. ನಾನು ಅಷ್ಟು ಭಕ್ತಿಯಿಂದ ಬೇಡಿದ ಮೇಲೆ ನನ್ನ ಕೋರಿಕೆ ನೆರವೇರಲೇ ಬೇಕಲ್ಲವೇ? ಆದರೆ ಬೆಳಿಗ್ಗೆ ಎದ್ದಾಗ ಪಕ್ಕದಲ್ಲಿ ಸೈಕಲ್ ಇರಲಿಲ್ಲ. ಮಖಮಲ್ ನ ಚೂರು ಹಾಗೇ ಇತ್ತು! ಇದರಿಂದ ನನ್ನ ದೈವವಿಶ್ವಾಸ ಇಲ್ಲದಾಯಿತೆ? ಹಾಗೇನೂ ಆಗಲಿಲ್ಲ. ಈಗಾಗಲೇ ನಾನಂದಂತೆ ದೈವವಿಶ್ವಾಸ ಹೊರಟು ಹೋಗುವುದು ವೈಚಾರಿಕತೆಯಿಂದಲ್ಲದೆ ಇಂಥ ನಿರಾಸೆಗಳಿಂದ ಅಲ್ಲ. ದೈವವಿಶ್ವಾಸವೆನ್ನುವುದು ಸಂಸ್ಕೃತಿಗೆ ಸಂಬಂಧಿಸಿದ ವಿಷಯ.

ಯಾವುದೇ ಸಂಸ್ಕೃತಿಗೆ ತೆರೆದಿರದ ಒಬ್ಬ ಮನುಷ್ಯನನ್ನು ಊಹಿಸಿಕೊಳ್ಳಿ. ಆತ ಕಾಡಿನಲ್ಲಿ ಹುಟ್ಟಿ ಒಂಟಿಯಾಗಿ ಬೆಳೆದಿದ್ದಾನೆಂದುಕೊಳ್ಳೋಣ. ಆತನಿಗೆ ದೇವರು ದಿಂಡಿರು, ಆಸ್ತಿಕತೆ ನಾಸ್ತಿಕತೆ ಏನೂ ಇರೋದಿಲ್ಲ. ಪುರಾತನ ಸಮಾಜಗಳು ಯಾವುದೋ ಕಾರಣಕ್ಕೆ ಸೃಷ್ಟಿಸಿದ ದೇವರು ಮತ್ತು ಇತರ ವಿಶ್ವಾಸಗಳನ್ನು ನಾವು ಈಗಲೂ ಅನುಸರಿಸುತ್ತ ಇದ್ದೇವೆ, ಯಾವುದೇ ವಿಮರ್ಶೆಗೆ ಒಳಗುಪಡಿಸದೆ. ಇದು ಅಂಧವಿಶ್ವಾಸ. ಇಂಥ ಅಂಧವಿಶ್ವಾಸ ನಮ್ಮ ಸಮಾಜದ ಆಳಕ್ಕೆ ಇಳಿದಿರುವುದರಿಂದ ಇದನ್ನು ಪ್ರೋತ್ಸಾಹಿಸುವ ಏನನ್ನೂ ಅಧ್ಯಾಪಕರಾಗಲಿ ಶಿಕ್ಷಣ ಸಂಸ್ಥೆಗಳಾಗಲಿ ಮಾಡಬಾರದು. ವಾಸ್ತವದಲ್ಲಿ ಇದನ್ನೆಲ್ಲ ಪ್ರಶ್ನಿಸುವುದೇ ಶಿಕ್ಷಣದ ಒಂದು ಕೊಡುಗೆಯಾಗಿರಬೇಕು. ಒಬ್ಬ ಅಧ್ಯಾಪಕನಾಗಿ ನನ್ನ ಮನೋಭೂಮಿಕೆಯನ್ನು ವಿವರಿಸುವುದಕ್ಕೆ ಈ ಮಾತು ಹೇಳುತ್ತಿದ್ದೇನೆ.

ನಾನು ಓದುತ್ತಿದ್ದ ಹೈಸ್ಕೂಲಿನಲ್ಲಿ ಕೆಲವೊಮ್ಮ ಪಾಠದ ಮಧ್ಯೆ ಫಕ್ಕನೆ ದೊಡ್ಡ ಕ್ಲಾಸಿನ ಕೆಲವು ವಿದ್ಯಾರ್ಥಿ ಸ್ವಯಂಸೇವಕರು ನುಗ್ಗುತ್ತಿದ್ದರು. ಅವರ ಕೈಗಳಲ್ಲಿ ತೆಂಗಿನಕಾಯಿ ಚೂರು, ಬೆಲ್ಲದ ಚೂರು ಪೇರಿಸಿದ ತಟ್ಟೆಗಳಿರುತ್ತಿದ್ದುವು. ಊರಿನ ಯಾವುದೋ ಶ್ರೀಮಂತರಿಗೆ ಮಗ ಹುಟ್ಟಿದ್ದಕ್ಕೆ ಅವರು ಇದನ್ನು ಶಾಲಾಮಕ್ಕಳಿಗೆ ವಿತರಿಸುತ್ತಿದ್ದರು ಎಂದು ಗೊತ್ತಾಗುತ್ತಿತ್ತು. ನಾವು ತಿಂದು ಖುಷಿಪಡುತ್ತಿದ್ದೆವು. ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಯಾರೊಬ್ಬನೂ ಹೀಗೆ ತೆಂಗಿನ ಚೂರು ಬೆಲ್ಲ ಹಂಚಿದ್ದು ನನ್ನ ನೆನಪಿನಲ್ಲಿಲ್ಲ. ಅಂದಿನ ದಿನಗಳಲ್ಲಿ ನಾನೀ ಕುರಿತು ಯೋಚಿಸಿದ್ದೇ ಇಲ್ಲ; ಯಾಕೆಂದರೆ ಅಂದು ನಾನೂ ಈ ಮೈಂಡ್ ಸೆಟ್ ನ ಅಂಗವೇ ಆಗಿದ್ದೆ. ಈ ಕೆಟ್ಟ ಮನಸ್ಥಿತಿಯನ್ನು ತೊಡೆಯುವ ಬದಲು ಶಾಲೆ ಅದನ್ನು ಸ್ಥಿರೀಕರಿಸುತ್ತಿತ್ತು ಎನ್ನುವುದೀಗ ನನಗೆ ಗೊತ್ತಾಗುತ್ತಿದೆ.

ನನಗೀಗ ಮೂವರು ಹೆಣ್ಣು ಮಕ್ಕಳು; ಗಂಡು ಮಗುವಿಲ್ಲ. ಅಯ್ಯೋ ಪಾಪ ಎಂಬಂತೆ ನಾನು ಮತ್ತು ನನ್ನ ಹೆಂಡತಿಯ ಕುರಿತು `ಕನಿಕರ’ ತೋರಿಸಿದವರಿದ್ದಾರೆ; ಒಹೋ ಹೆಣ್ಣು ಮಕ್ಕಳೆಂದರೆ ಲಕ್ಷ್ಮಿಯರು, ನಿಮ್ಮ ಭಾಗ್ಯವಪ್ಪಾ ಎಂದು ಇನ್ನೊಂದು ತರದಲ್ಲಿ ನುಡಿದವರಿದ್ದಾರೆ. ಇಂಥವರ ಕುರಿತು ನನಗೀಗ ಸ್ವತಃ ಕನಿಕರವಾಗುತ್ತದೆ, ನಾನರಿತದ್ದನ್ನು ಇವರಿನ್ನೂ ಅರಿತಿಲ್ಲವಲ್ಲ ಎಂದು. ಇದು ನೀತ್ಸೆಯ ದುಃಖವಾಗಿತ್ತು ಎನ್ನುವುದನ್ನು ಮರೆಯಬೇಡಿ. ನೀತ್ಸೆಯ ಜರಾತೂಷ್ಟ್ರ ಗಿರಿಯಿಂದ ಇಳಿದು ಬರುತ್ತ, ದೇವರು ಸತ್ತಿರುವ ವಿಷಯ ಇನ್ನೂ ಊರವರಿಗೆ ತಿಳಿದಿಲ್ಲವಲ್ಲ ಎಂದುಕೊಳ್ಳುತ್ತಾನೆ. ಅವನು ಹಾಗಂದುದಕ್ಕೆ ಊರವರು ಅವನಿಗೆ ಕಲ್ಲು ಹೊಡೆಯುತ್ತಾರೆ. ನಿಜವಾದ ಅಧ್ಯಾಪಕರು ಈ ಜರಾತೂಷ್ಟ್ರನಂತೆ. ಎಲ್ಲೀ ತನಕ ಸಮಾಜದ ನಂಬಿಕೆಗಳನ್ನು ಅವರು ಪ್ರಶ್ನಿಸುವುದಿಲ್ಲವೋ ಅಲ್ಲೀ ತನಕ ಸಮಾಜ ಅವರನ್ನು ಸಹಿಸುತ್ತದೆ, ಗೌರವಿಸುತ್ತದೆ ಕೂಡಾ; ಆದರೆ ಪ್ರಶ್ನಿಸತೊಡಗಿದಾಗ, ಬದಲಾಯಿಸಲು ಪ್ರಯತ್ನಿಸಿದಾಗ ಅವರನ್ನು ನಿಂದಿಸುತ್ತದೆ.

ಅಧ್ಯಾಪಕನೊಬ್ಬ ಸಾಮಾಜಿಕ ವಿಶ್ವಾಸಗಳ ವಿರುದ್ಧ ಯಾಕೆ ಹೋಗಬೇಕು, ಬರೇ ತನ್ನ ಕೆಲಸ ಮಾಡುತ್ತ ಇದ್ದರೆ ಸಾಕಲ್ಲವೇ ಎಂದು ಕೇಳಬಹುದು; ಹೀಗೆ ಕೇಳುವುದು ಮೊದ್ದುತನ. ಲೆಕ್ಕ, ಭಾಷೆ, ಚರಿತ್ರೆ, ವಿಜ್ಞಾನ, ಆಟ ಯಾವುದೂ ಸಮಾಜ ಜೀವನದಿಂದ ಹೊರತಲ್ಲ. ಒಂದಲ್ಲ ಒಂದು ಕಡೆ ಈ ವಿಷಯಗಳು ನಮ್ಮ ನರಗಳನ್ನು ಬಡಿದೇ ಬಡಿಯುತ್ತವೆ. ಡಾರ್ವಿನ್ ನ ವಿಕಾಸವಾದದ ಬಗ್ಗೆ ಕಲಿಸದೆ ನೀವು ಬಯಾಲಜಿ ಹೇಗೆ ಕಲಿಸುತ್ತಿರಿ? ಜ್ಯೋತಿಷ್ಯದ ಹುಸಿಯನ್ನು ಎತ್ತಿ ತೋರಿಸದೆ ಖಗೋಳವಿಜ್ಞಾನವನ್ನು ಹೇಗೆ ಕಲಿಸುತ್ತೀರಿ? ವರ್ಣವ್ಯವಸ್ಥೆಯ ಶೋಷಣೆಯ ಕುರಿತು ಮಾತಾಡದೆ ಸಮಾಜವಿಜ್ಞಾನವನ್ನು ಹೇಗೆ ಕಲಿಸುತ್ತೀರಿ? ಭಾಷೆ, ಸಾಹಿತ್ಯ ಕೂಡಾ ನಮ್ಮನ್ನು ನಮ್ಮ ಪೂರ್ವ ಚರಿತ್ರೆಯ ಕಡೆ ವಿಮರ್ಶಾತ್ಮಕವಾಗಿ ನೋಡಲು ಕಲಿಸುತ್ತವೆ. ಇವು ಯಾವುದನ್ನೂ ಸನಾತನ ಧರ್ಮಗಳು ಸಹಿಸುವುದಿಲ್ಲ.

ಇಲ್ಲಿ ಸನಾದಲ್ಲಿ ಒಂದು ಕ್ಲಾಸಿನಲ್ಲಿ ನಾನು ಪಠ್ಯ ಅರ್ಥಾತ್ ಟೆಕ್ಸ್ಚುವಾಲಿಟಿಯ ಬಗ್ಗೆ ಮಾತಾಡುತ್ತಿದ್ದೆ. ಟೆಕ್ಸ್ಟ್ ಎಂದರೆ ನೇಯ್ಗೆ. ಯಾವುದೇ ಪಠ್ಯವನ್ನು ನಾವು ಬಿಚ್ಚಿ ನೋಡಬಹುದು ಎಂದೆ. ತಟ್ಟನೆ ಒಬ್ಬ ವಿದ್ಯಾರ್ಥಿ But holy Quran is a revealed text; no compromise there! ಎಂದು ಅಕ್ರಮಣಕಾರಿ ಸ್ವರದಲ್ಲಿ ಅಂದ. ಇಂಥ ಪ್ರತಿಭಟನೆ ನನ್ನನ್ನು ಆತಂಕಕ್ಕೆ ಗುರಿಮಾಡುತ್ತದೆ. ಕೆಲವೊಂದು ಸಂಗತಿಗಳು ದೈವಿಕ ಎನ್ನುವುದು ವಿಶ್ವಾಸಿಗಳ ನಂಬಿಕೆ, ಆದ್ದರಿಂದ ಆ ಬಗ್ಗೆ ವಿಮರ್ಶಿಸುವುದಿರಲಿ, ಮಾತಾಡುವುದೂ ಧರ್ಮನಿಂದನೆ; ಆದ್ದರಿಂದ ಖಂಡನೀಯ ಎಂಬ ಭಾವನೆ ಎಲ್ಲಾ ಧಾರ್ಮಿಕರಲ್ಲೂ ಇದೆ. ಮತ್ತು ಈ ನಂಬಿಕೆಯನ್ನು ಕಾಪಾಡಿಕೊಂಡು ಬರುವುದೇ ಧಾರ್ಮಿಕರಾಗಿ ತಮ್ಮ ಕರ್ತವ್ಯ ಎಂದು ಹಲವರು ಅಂದುಕೊಂಡಿದ್ದಾರೆ. ಅದಕ್ಕಾಗಿ ಅವರು ಆಕ್ರಮಣಕಾರಿಗಳಾಗಲೂ ತಯಾರು. ಇಂದು ನಡೆಯುತ್ತಿರುವ ಹಲವಾರು ಹಿಂಸಾಚಾರಗಳಿಗೆ ಇದುವೇ ಕಾರಣ. ಪಾಠಪ್ರವಚನ ಸಹಾ ಈ ಅಪಾಯಗಳಿಂದ ದೂರ ಉಳಿದಿಲ್ಲ ಎನ್ನುವುದಕ್ಕೆ ಈ ಮಾತು. There is a long way to go.

ಆತ್ಮ, ಪರಮಾತ್ಮ, ಪುನರ್ಜನ್ಮ, ಕರ್ಮ, ವಿಧಿ, ಭೂತ ಪ್ರೇತ, ಸ್ವರ್ಗ ನರಕ, ಹೌರಿಗಳು, ಅಪ್ಸರೆಯರು, ಭವಿಷ್ಯವಾಣಿ, ಜ್ಯೋತಿಷ್ಯ, ದೇವಮಾನವರು, ಪವಾಡಗಳು, ಜಾತೀಯತೆ, ವರ್ಣವಾದ ಮುಂತಾದ ಸಂಗತಿಗಳಲ್ಲಿ ನಂಬಿಕೆಯಿರುವನೊಬ್ಬ ಆಧುನಿಕ ಯುಗದಲ್ಲಿ ಅಧ್ಯಾಪಕನಾಗುವುದು ಹೇಗೆ? ಅದೇ ರೀತಿ ಯಾವುದೇ ರೂಪದ ಅಸಮಾನತೆಯನ್ನು ಪ್ರತಿಪಾದಿಸುವವನೂ ಅಧ್ಯಾಪಕನಾಗಲು ಅನರ್ಹನಾಗುತ್ತಾನೆ. ನಾನು ಪ್ರಜಾಪ್ರಭುತ್ವ, ಮಾನವ ಹಕ್ಕು ಮುಂತಾದ ವಿಷಯಗಳ ಪರವಾಗಿ ಮಾತಾಡಿದಾಗ ಕೆಂಡ ಕಾರುವ ಕೆಲವರಿದ್ದಾರೆ. ಯಾಕೆಂದರೆ ಅವರಿಗೆ ಇದೆಲ್ಲ `ಪಾಶ್ಚಾತ್ಯ’ವಾಗಿ ಕಾಣುತ್ತದೆ; ಅವರಿಗೆ ನಿಜಕ್ಕೂ ಸಿಟ್ಟು ನನ್ನ ಮೇಲೆಯೋ ಅಥವಾ ಈ ತಥಾಕಥಿತ ಪಾಶ್ಚಾತ್ಯ ಮೌಲ್ಯಗಳ ಬಗ್ಗೆಯೋ ನನಗೆ ತಿಳಿಯದು. ಅದು ನನ್ನ ಮೇಲಾಗಿದ್ದು ಈ ಮೌಲ್ಯಗಳ ಬಗ್ಗೆಯಾಗದೆ ಇದ್ದಲ್ಲಿ ನನಗೆ ಸಂತೋಷವೇ; ಯಾಕೆಂದರೆ ಇಲ್ಲಿ ನಾನು ಮುಖ್ಯವಲ್ಲ, ಈ ಮೌಲ್ಯಗಳು ಮುಖ್ಯ. ಆಧುನಿಕ ಅಧ್ಯಾಪಕನೊಬ್ಬ ಹೇಗೆ ಧರ್ಮಾತೀತನೂ ವಿಚಾರವಾದಿಯೂ ಆಗಿರಬೇಕೋ ಅದೇ ರೀತಿ ಆತನಿಗೆ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಲ್ಲೂ ವಿಶ್ವಾಸವಿರಬೇಕೆಂದು ನನಗನಿಸುತ್ತದೆ.

ಧರ್ಮನಿರಪೇಕ್ಷತೆ, ಸರ್ವಸಮಾನತೆ ಮತ್ತು ವ್ಯಕ್ತಿಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಪ್ರಜಾಪ್ರಭುತ್ವದ ಮೂಲ ಎಲ್ಲೇ ಇದ್ದರೂ ಅದು ಸ್ವಾಗತಾರ್ಹವೇ. ಅದನ್ನು ದೂರುವ ವ್ಯಕ್ತಿಗಳು ಅದಕ್ಕೆ ಯಾವುದೇ ಪರ್ಯಾಯವನ್ನೂ ಸೂಚಿಸುವುದಿಲ್ಲ. ಯಾವುದು ಪರ್ಯಾಯ? ಮೊನಾರ್ಕಿ? ಓಲಿಗಾರ್ಕಿ? ಪ್ಲೂಟೋಕ್ರಸಿ, ಥಿಯೋಕ್ರಸಿ, ಹೇಜಿಯೋಕ್ರಸಿ, ಡಿಕ್ಟೇಟರ್ಶಿಪ್? ಫ್ಯೂಡಲಿಸಂ? ಕಮ್ಯೂನಿಸಂ? ಅಂಥ ಇನ್ನು ಯಾವುದೋ ಇಸಂ? ಇಲ್ಲಿ ಇವನ್ನೆಲ್ಲ ವಿವರಿಸುವ ಅಗತ್ಯವಿಲ್ಲ. ಇವು ಯಾವುವೂ ಡಿಮೋಕ್ರಸಿ ಅಲ್ಲ. ಆದರೆ ಹಲವರು ಮರುಳಾಗುವ ಕಮ್ಯೂನಿಸಂನ ಬಗ್ಗೆ ಒಂದು ಮಾತು: ಕಮ್ಯೂನಿಸಮಿನ ಅಂತಿಮ ಉದ್ದೇಶ ಎಷ್ಟೇ ಒಳ್ಳೆಯದಾಗಿದ್ದರೂ ನನಗೆ ಅದರ ವಿಧಾನದಲ್ಲಿ ವಿಶ್ವಾಸವಿಲ್ಲ. ಯಾಕೆಂದರೆ ಅದು ಏಕಪಕ್ಷೀಯ. ಆ ಮಟ್ಟಿಗೆ ಅದಕ್ಕೂ ಧರ್ಮಾಂಧತೆಗೂ ವ್ಯತ್ಯಾಸವಿಲ್ಲ. ಎರಡೂ ವಿಮರ್ಶೆಯನ್ನು ದಮನಿಸುತ್ತವೆ, ವಿಮರ್ಶಕರನ್ನು ಮತ್ತು ವಿರೋಧಿಗಳನ್ನು ನಾಶಪಡಿಸುವುದನ್ನು ಸಮರ್ಥಿಸಿಕೊಳ್ಳುತ್ತವೆ. ವರ್ಗ ಸಮಾಜ ಸಲ್ಲದು; ಆದರೆ ಈ ಕೂಡಲೇ ಮೇಲ್ವರ್ಗದವರನ್ನೆಲ್ಲ ಗುಂಡುಹಾಕಿ ಕೊಲ್ಲಬೇಕೆನ್ನುವುದು ಸರಿಯಲ್ಲ. ವರ್ಗನಾಶ ಗುರಿಯಾಗಿರಬೇಕು; ಆದರೆ ಹಿಂಸೆ ಅದರ ವಿಧಾನವಾಗಿರಬಾರದು. ಅದೇ ರೀತಿ, ಸಮಾಜದ ಮುಂದೆ ವ್ಯಕ್ತಿ ಏನೂ ಅಲ್ಲವೆಂದು ವ್ಯಕ್ತಿಯನ್ನು ದಮನಿಸುವ ತತ್ವವೂ ಸರಿಯಲ್ಲ; ವ್ಯಕ್ತಿ ಮತ್ತು ಸಮಾಜ ಪರಸ್ಪರ ಸಾವಯವ ಸಂಬಂಧದಲ್ಲಿ ಇರುವಂಥವು.

ಕ್ರಾಂತಿ ನಿಜವಾಗುವುದು ಅರಿವು ಬದಲಾದಾಗ, ಬಂದೂಕಿನಿಂದ ಬಾಯಿ ಮುಚ್ಚಿಸಿದಾಗ ಅಲ್ಲ. ಇದನ್ನೊಪ್ಪದ ಕಮ್ಯೂನಿಸಂ ಸ್ಟಾಲಿನ್ ನಂಥ ಘೋರಮಾನವರನ್ನು ಸೃಷ್ಟಿಸುತ್ತದೆ; ಮಿಲಿಯಗಟ್ಟಲೆ ಜನರ ಸಾವುನೋವುಗಳಿಗೆ ಕಾರಣವಾಗುತ್ತದೆ.

ಒಬ್ಬ ಕಮ್ಯೂನಿಸ್ಟ್ ಅಧ್ಯಾಪಕನನ್ನು ಊಹಿಸಿ ನಾನು ಭಯಪಡುವೆ; ಆದರೆ ಒಬ್ಬ ಗಣತಂತ್ರವಾದಿ ಅಧ್ಯಾಪಕನ ಜತೆ ಸುರಕ್ಷಿತನಾಗಿರುವೆ. ಕಮ್ಯೂನಿಸ್ಟ್ ಅಧ್ಯಾಪಕನೆಂದು ನಾನಿಲ್ಲಿ ಹೇಳುತ್ತಿರುವುದು ಕಮ್ಯೂನಿಸ್ಟ್ ದೇಶದ ಕಮ್ಯೂನಿಸ್ಟ್ ಅಧ್ಯಾಪಕನ ಬಗ್ಗೆ. ಈತ ನನ್ನ ವಿರುದ್ಧ ಯಾವತ್ತು ಬೇಕಾದರೂ ಡಿನೌನ್ಸ್ (ಅಧಿಕಾರಿಗಳ ಮುಂದೆ ದೂರುವುದು, ಕಮ್ಯೂನಿಸ್ಟರ ಸರ್ವತ್ರ ಕೆಲಸ) ಮಾಡಬಹುದು; ಇದು ಕಟ್ಟಾ ಧರ್ಮಾಂಧ ಸಮಾಜದಲ್ಲಿ ಧರ್ಮಗುರುಗಳ ಮುಂದೆ ನೆರೆಯವನ ಬಗ್ಗೆ ದೂರು ಹೇಳಿದಂತೆ. ಹೀಗೆ ಹೇಳಲು ಇಂಥ ವ್ಯವಸ್ಥೆಗಳು ಪ್ರೇರೇಪಿಸುತ್ತವೆ. ಗಣತಂತ್ರವಾದಿ ವೊಲ್ಟೇರನಂತೆ ನನ್ನ ಅಭಿಪ್ರಾಯವನ್ನು ಒಪ್ಪದಿದ್ದಾಗಲೂ ನಾನು ಮಾತಾಡುವ ಸ್ವಾತಂತ್ರ್ಯವನ್ನು ಮನ್ನಿಸುತ್ತಾನೆ. ಆಧುನಿಕ ಅಧ್ಯಾಪಕರು ಗಣತಂತ್ರವಾದಿಗಳಾಗಿ ಇರಬೇಕೆಂದು ನನ್ನ ಮನಸ್ಸು; ಇದರಿಂದ ಎಲ್ಲರಿಗೂ ಒಳ್ಳೆಯದು. ಹಾಗಿದ್ದಾಗ ವಿಮರ್ಶೆಗೆ, ವ್ಯಕ್ತಿವಿಕಸನಕ್ಕೆ, ರಾಷ್ಟ್ರವಿಕಸನಕ್ಕೆ, ಬಹುಳತ್ವಕ್ಕೆ ದಾರಿಯಿರುತ್ತದೆ ಹಾಗೂ ಸಮಾಜದ ಎಲ್ಲರಿಗೂ ಇದರಿಂದ ಲಾಭವಾಗುತ್ತದೆ. ಆಧುನಿಕ ವಿಜ್ಞಾನ ಬೆಳೆದು ಬಂದ ಬಗೆ ಇದನ್ನೇ ಸೂಚಿಸುತ್ತದೆ. ಆದರೆ ಸೈದ್ಧಾಂತಿಕವಾಗಿ ಕೂಡ ಕಮ್ಯೂನಿಸಂ ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ. ಪ್ರಜಾಪ್ರಭುತ್ವ ಮಾತ್ರವೇ ಭಿನ್ನಮತಗಳನ್ನು ಹತ್ತಿಕ್ಕುವುದಿಲ್ಲ. ಹಾಗಾದರೆ… ಈ `ಹಾಗಾದರೆ’ ಎಂಬವರ ತಗಾದೆಯನ್ನು ನಾನು ಆಗಾಗ ಕೇಳುತ್ತಿರುತ್ತೇನೆ. ಹಾಗಾದರೆ ಭಾರತದಲ್ಲಿ ಪ್ರಜಾಪ್ರಭುತ್ವ ಬಂದು ಅರುವತ್ತು ವರ್ಷಗಳು ಕಳೆದಿದ್ದರೂ ಯಾಕೆ ಎಲ್ಲರೂ ಸಮನಾಗಿಲ್ಲ, ಯಾಕೆ ಎಲ್ಲರಿಗೂ ಸ್ವಾತಂತ್ರ್ಯ ಬಂದಿಲ್ಲ ಎನ್ನುವುದು ಪ್ರಶ್ನೆ.

ಇದು ಪ್ರಜಾಪ್ರಭುತ್ವ ಎನ್ನುವ ರಾಜಕೀಯ ಪದ್ಧತಿಯ ತಪ್ಪಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಿಂದಿನ ಹಲವು ಶತಮಾನಗಳ ಅನ್ಯಾಯಗಳನ್ನು ಬೆನ್ನಲ್ಲಿ ಹೊತ್ತಿರುವ ದೇಶ ಇದು. ಅಷ್ಟು ಬೇಗನೆ ಬದಲಾಗುವುದಿಲ್ಲ. ಇಂದು ಅರಬ್ ದೇಶಗಳಲ್ಲಿ ಯಾಕೆ ಪ್ರಜಾಪ್ರಭುತ್ವದ ಬಗೆಗಿನ ಆಕಾಂಕ್ಷೆಗಳು ತಕ್ಷಣ ಕೈಗೂಡುತ್ತಿಲ್ಲ? ಯಾಕೆಂದರೆ ಅರಬರೂ ಕೂಡಾ ಹಿಂದಣ ಪದ್ಧತಿಗಳ ಹೊರೆಯನ್ನು ಹೊತ್ತಿದ್ದಾರೆ. ಸರ್ವಾಧಿಕಾರಿಗಳ ಕೈಕೆಳಗೆ ಅವರೊಂದು ರೀತಿಯ ಸುಖವನ್ನು ಕಂಡಿದ್ದಾರೆ. ಇದನ್ನೇ ಮೈಂಡ್ ಸೆಟ್ ಎನ್ನುವುದು. ಭಾರತದಲ್ಲಾಗಲಿ ಅರೇಬಿಯದಲ್ಲಾಗಲಿ ಈ ಮೈಂಡ್ ಸೆಟ್ ನಿಂದ ಜನರು ಹೊರಬರುವುದು ಅಷ್ಟು ಸುಲಭವಲ್ಲ. ಭಾರತದಲ್ಲಾದರೆ ದೇಶದ ಸಂವಿಧಾನದಲ್ಲಾದರೂ ಸಮಾನತೆ, ಧರ್ಮನಿರಪೇಕ್ಷತೆ, ವ್ಯಕ್ತಿಸ್ವಾತಂತ್ರ್ಯ ಮುಂತಾದ ಮೌಲ್ಯಗಳು ಇವೆಯಲ್ಲ ಎಂದು ನಾವು ಸಂತೋಷ ಪಡಬೇಕಾಗುತ್ತದೆ. ಇದನ್ನು ಕಾರ್ಯಗತಗೊಳಿಸುವುದು ಹೇಗೆ ಎಂಬ ಕುರಿತು ನಾವು ಯೋಚಿಸಬೇಕಲ್ಲದೆ ಇವುಗಳಲ್ಲೇ ಏನೋ ಕೊರತೆಯಿದೆ ಎಂದು ತಿರಸ್ಕರಿಸುವುದಲ್ಲ.

ಆದರೆ ಪ್ರಜಾಪ್ರಭುತ್ವವನ್ನು ಟೀಕಿಸುವವರಿಗೆ ಬೇರೆ ಯಾವ ಪದ್ಧತಿ ಯಾವ ಉತ್ತಮ ಕಾರಣಕ್ಕೆ ಬೇಕೋ ತಿಳಿಯುವುದಿಲ್ಲ. ಪ್ರಜಾಪ್ರಭುತ್ವವೊಂದನ್ನು ಬಿಟ್ಟು ಇನ್ನುಳಿದ ಯಾವುದೇ ರಾಜಕೀಯ ವ್ಯವಸ್ಥೆಯೂ ಇವರಿಗೆ ಒಪ್ಪಿಗೆಯೇ? ಪ್ರಜಾಪ್ರಭುತ್ವವೆಂದರೆ ಯಾಕೆ ಇವರಿಗೆ ಇಷ್ಟೊಂದು ಹೆದರಿಕೆ? ಹಾಂ! ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ವಿಮರ್ಶಿಸುವ ಸ್ವಾತಂತ್ರ್ಯವಿದೆ. ಇದು ಇವರಿಗೆ ಸಹ್ಯವಲ್ಲ; ಯಾಕೆಂದರೆ ಇಂಥವರು ಮೂಲಭೂತವಾದಿಗಳೂ ಏಕಪಕ್ಷೀಯರೂ ಆಗಿರುತ್ತಾರೆ. ಸಮಾನತೆಯೆಂದರೆ ಇವರಿಗೆ ಸಹ್ಯವಲ್ಲ. ತಾವು ಉತ್ತಮರೆಂದೂ ಇತರರು ಅಧಮರೆಂದೂ ತಿಳಿಯುವವರು ಇವರು. ಆದ್ದರಿಂದಲೇ ಇವರು ಪ್ರಜಾಪ್ರಭುತ್ವವನ್ನು ತಾತ್ವಿಕವಾಗಿಯಾದರೂ ಇವರು ಒಪ್ಪಲಾರರು; ತಾತ್ವಿಕವಾಗಿಯಾದರೂ ಒಪ್ಪಿಕೊಂಡರೇನೇ ಅದನ್ನು ಆದಷ್ಟೂ ಚೆನ್ನಾಗಿ ಕಾರ್ಯಗತಗೊಳಿಸುವುದು ಹೇಗೆ ಎಂದು ಎಲ್ಲರೂ ಸೇರಿ ಯೋಚಿಸಬಹುದು. ಅದಲ್ಲ, ಪ್ರಜಾಪ್ರಭುತ್ವವೊಂದನ್ನು ಉಳಿದು ಇತರ ಯಾವುದೇ ರಾಜಕೀಯ ವ್ಯವಸ್ಥೆ ಸರಿ ಎನ್ನುವವರು ಅದು ಯಾಕೆನ್ನುವುದಕ್ಕೆ ಕಾರಣ ಕೊಡಬೇಕಾಗುತ್ತದೆ. ಪ್ರಜಾಪ್ರಭುತ್ವ ಮಾತ್ರವೇ ಸರ್ವಾಧಿಕಾರವನ್ನು ಇಲ್ಲದಾಗಿಸುವುದು; ಉಳಿದ ಯಾವುದೇ ವ್ಯವಸ್ಥೆ (ಕಮ್ಯೂನಿಸಂ ಕೂಡಾ ಸೇರಿ) ಸರ್ವಾಧಿಕಾರಕ್ಕೆ ಎಡೆಗೊಡುತ್ತದೆ. ನನ್ನ ಪ್ರಕಾರ ಇಂದು ಮತ್ತು ಮುಂದಿನ ರಾಜಕೀಯ ವ್ಯವಸ್ಥೆ ಸರ್ವಾಧಿಕಾರದ ಮೇಲೆ ನಿಂತಿರುವುದು ಸಾಧ್ಯವಿಲ್ಲ. ಮೂಲಭೂತವಾದ ಮತ್ತು ನಿರಂಕುಶಾಧಿಕಾರದ ಕಾಲ ಕಳೆದುಹೋಗಿದೆ.

ವಿದ್ಯಾಭ್ಯಾಸಕ್ಕೂ ರಾಜಕೀಯ ಮೌಲ್ಯಕ್ಕೂ ಏನು ಸಂಬಂಧ ಎಂದು ಕೇಳಬಹುದು. ಇಷ್ಟೆ: ವಿದ್ಯಾಭ್ಯಾಸ ಮತ್ತು ಶಿಕ್ಷಣದಲ್ಲಿ ಸಮಾನತೆ, ವೈಜ್ಞಾನಿಕತೆ, ವೈಚಾರಿಕತೆ, ವಿಮರ್ಶಾತ್ಮಕತೆ, ಜಿಜ್ಞಾಸೆ, ಅಭಿಪ್ರಾಯ ಸ್ವಾತಂತ್ರ್ಯ, ಮಾನವಹಕ್ಕು, ಮುಂತಾದ ಮೌಲ್ಯಗಳನ್ನು ಇರಿಸಿಕೊಂಡು ರಾಜಕೀಯದಲ್ಲಿ ಸರ್ವಾಧಿಕಾರವನ್ನಾಗಲಿ ಧರ್ಮಾಪೇಕ್ಷತೆಯನ್ನಾಗಲಿ ಒಪ್ಪಿಕೊಳ್ಳುವುದು ಅಸಾಧ್ಯ. ಕ್ಲಾಸಿನಲ್ಲಿ ವಿದ್ಯಾರ್ಥಿಗಳು ಅಧ್ಯಾಪಕರ ಜತೆ ಸಂವಾದ ನಡೆಸುವುದರಿಂದಲೇ ಮೊದಲಾಗುತ್ತದೆ ನಿಜವಾದ ಕಲಿಕೆ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರಶ್ನೆಯ ಹಕ್ಕನ್ನೇ ನಿರಾಕರಿಸಿದರೆ ಅಲ್ಲಿ ಮತ್ತೆ ಉಳಿಯುವುದು ಗಿಣಿಪಾಠ. ಒಂದೊಂದು ಶಾಲೆಯೂ ಪ್ರಜಾಪ್ರಭುತ್ವದ ಈ ಅಂತಃಸತ್ವವನ್ನು ಒಳಗೊಂಡಿರಬೇಕು.

ಹಿಂದಿನದೆಲ್ಲವೂ ಸುಂದರ, ಹಳ್ಳಿ ಶಾಲೆಗಳು ಉತ್ತಮ, ಗುರುಕುಲ ಪದ್ಧತಿಯೇ ಶ್ರೇಷ್ಠ ಎಂದು ಮುಂತಾದ ನೋಸ್ಟಾಲ್ಜಿಕ್ ಭಾವನೆಗಳು ಕೆಲವರಲ್ಲಿದೆ. ಶಾಲೆಯೊಂದು ಸುಂದರವೋ ಉತ್ತಮವೋ ಆಗುವುದು ಅದು ಯಾವ ಕಾಲದ್ದು ಎಲ್ಲಿಯದು ಎನ್ನುವುದರ ಮೇಲೆ ಹೊಂದಿಕೊಂಡಿಲ್ಲ. ಅದು ಪ್ರತಿಪಾದಿಸುವ ಮೌಲ್ಯಗಳನ್ನು ಹೊಂದಿಕೊಂಡಿದೆ, ಹಾಗೂ ಅದು ರೂಪಿಸುವ ಅಧ್ಯಯನ ಕ್ರಮವನ್ನು ಕೂಡಾ. ಉತ್ತಮವಾದುದನ್ನು ನಾವು ಎಲ್ಲಿಂದ ಬೇಕಾದರೂ ಪಡೆದುಕೊಳ್ಳುವುದಕ್ಕೆ ಅಡ್ಡಿಯಿಲ್ಲ, ಇರಬಾರದು. ಮನುಷ್ಯರು ಮೊದಲಿಂದಲೂ ಈ ಕೊಳ್ಳುವಿಕೆ ಮಾಡುತ್ತಲೇ ಬಂದಿದ್ದಾರೆ. ಕೊಂಡರೆ ಮಾತ್ರವೇ ಕೊಡುವುದು ಸಾಧ್ಯ.

ಯಾವುದೋ ವಿಚಾರ ಲಹರಿಯಲ್ಲಿ ನಾನು ಬಹಳ ಮುಂದೆ ಬಂದುಬಿಟ್ಟೆ! ಇಲ್ಲಿ ನಾನು ಹೇಳಹೊರಟುದು ನನ್ನ ಅಧ್ಯಾಪನ ವೃತ್ತಿ ಬಗ್ಗೆ. ಆದರೆ ನನ್ನ ವೃತ್ತಿಯನ್ನು ನನ್ನ ಸಾಹಿತ್ಯಾಸಕ್ತಿ, ಜೀವನಾಸಕ್ತಿ ಮುಂತಾದವುಗಳಿಂದ ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಅಧ್ಯಯನ, ಅಧ್ಯಾಪನ, ಬರವಣಿಗೆ, ನನ್ನ ನಂಬಿಕೆಗಳು, ಸಂದೇಹಗಳು, ಚಿಂತನೆಗಳು, ಮೌಲ್ಯಗಳು ಮುಂತಾದುವೆಲ್ಲ ನನ್ನಲ್ಲಿ ಒಬ್ಬ ಮನುಷ್ಯನಾಗಿ ಇರುವಂಥ ಸಂಗತಿಗಳು. ಎಲ್ಲರಲ್ಲೂ ಇದು ಹೀಗೇ ಎಂದು ತಿಳಿದಿದ್ದೇನೆ. ಕ್ಲಾಸಿನಲ್ಲಿ ಭೌತವಿಜ್ಞಾನ ಬೋಧಿಸಿ ತನಗೆ ಯಾವಾಗ ಭಡ್ತಿ ಸಿಗುತ್ತದೆ ಎಂದು ಭವಿಷ್ಯ ತಿಳಿಯಲು ಜ್ಯೋತಿಷಿಯಲ್ಲಿಗೆ ಹೋಗುವ ಅಧ್ಯಾಪಕ ಒಂದು ಕಾಂಟ್ರಡಿಕ್ಷನ್, ಸ್ವಯಂವಿರೋಧಿ.

(ಬಶಾರ್ ಅಲ್ ಅಸಾದ್)

ಆದಿತ್ಯವಾರ, 17.04.2011
ಈಗ ಮುಂಜಾನೆ ಆರೂಕಾಲು ಗಂಟೆ. ಕಾಫಿ ಮಾಡಿಕೊಂಡು ಮತ್ತೆ ಕಂಪ್ಯೂಟರ್ ಮುಂದೆ ಕೂತಿದ್ದೇನೆ. ಈ ಲೇಖನ ಮುಂದುವರಿಸಲು. ನಿನ್ನೆ ರಾತ್ರಿ ನನಗೆ ಅನಾರೋಗ್ಯದ ಕಾರಣ ಸರಿಯಾಗಿ ನಿದ್ದೆ ಬರಲಿಲ್ಲ. ಆದರೆ ಅದೃಷ್ಟಕ್ಕೆ ಫಯರಿಂಗ್ ಸದ್ದು ಎಲ್ಲಿಂದಲೂ ಕೇಳಿಸಲಿಲ್ಲ. ಅದರರ್ಥ ಎಲ್ಲವೂ ಶಾಂತವಾಯಿತು ಎಂದೇನೂ ಅಲ್ಲ. ಇಂಥ ಪರಿಸ್ಥಿತಿಯಲ್ಲಿ ಏನು ಯಾವಾಗ ಬೇಕಾದರೂ ಆಗಬಹುದು. ಆದರೆ ನಿನ್ನೆ ಸಿರಿಯಾದ ಅಧ್ಯಕ್ಷ ಬಶಾರ್ ಅಲ್ ಅಸಾದ್ ವಿವೇಕಿಯಂತೆ ಪಾರ್ಲಿಮೆಂಟ್ನಲ್ಲಿ ಮಾತಾಡಿದ. ಅಲ್ಲೂ ಸ್ವಾತಂತ್ರ್ಯಾಪೇಕ್ಷಿಗಳನ್ನು ಹತ್ತಿಕ್ಕಲಾಗುತ್ತಿದೆ. ಅಲ್ಲೂ ಜನ ಶಾಂತಿಯುತವಾಗಿ ಪ್ರತಿಭಟಿಸುತ್ತ ಬಂದಿದ್ದಾರೆ. ಅವರ ಮೇಲೆ ಗೋಲಿಬಾರು, ಮರ್ದನ, ಬಂಧನ ಇತ್ಯಾದಿಗಳು ನಡೆದಿವೆ. ಇನ್ನೂರಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ; ಸಾವಿರಾರು ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರಿಗೆ ಆಸ್ಪತ್ರೆ ಸೌಲಭ್ಯ ಸಹಾ ನಿರಾಕರಿಸಲಾಗಿದೆ. ಕಳೆದ ನಲುವತ್ತೆಂಟು ವರ್ಷಗಳಿಂದಲೂ ಅಲ್ಲಿ ತುರ್ತು ಪರಿಸ್ಥಿತಿ! ಎಂದರೆ ಮಾನವ ಹಕ್ಕುಗಳೇ ಬಂಧನಕ್ಕೊಳಗಾಗಿವೆ.

ಪ್ರಜಾಪ್ರಭುತ್ವದ ಬಗ್ಗೆ ಲಘುವಾಗಿ ಮಾತಾಡುವ ವಿಚಾರವಾದಿಗಳಿಗೆ ಇಂಥ ರಾಜ್ಯಗಳು ಬಹುಶಃ ಆದರ್ಶಪ್ರಾಯ. ತನ್ನ ಸರಕಾರದ ದಮನ ನೀತಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿದೆ ಎಂದು ಅರಿವಾದಾಗಾಲೇ ಅಸಾದ್ ನ ರಾಗ ಬದಲಾದ್ದು. ಈಗ ಆತ ಜನರ ವ್ಯಕ್ತಿಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ, ಆತ್ಮಗೌರವ ಮುಂತಾದವುಗಳ ಬಗ್ಗೆ ಮಾತಾಡುತ್ತಿದ್ದಾನೆ; ಜನ ಬೀದಿಗೆ ಇಳಿದದ್ದೇ ಈ ಮೌಲ್ಯಗಳಿಗಾಗಿ! ರಾಜ್ಯದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ವಿದೇಶೀ ಏಜೆಂಟರುಗಳು ಕಾರಣ ಎಂದು ಇದೇ ಅಸಾದ್ ಮೊನ್ನೆ ಮೊನ್ನೆ ತನಕ ಕೂಗಾಡುತ್ತಿದ್ದ. ಪ್ರತಿ ಡಿಕ್ಟೇಟರುಗಳೂ ಹೀಗೆ ಕೂಗಾಡಿ ಸತ್ಯವನ್ನು ಮರೆಮಾಚಲು ಯತ್ನಿಸುತ್ತಾರೆ. ಅದು ಅಸಾಧ್ಯವೆನಿಸಿದಾಗಲೇ ಅವರು ಬಗ್ಗುವುದು ಮತ್ತು ಇವು ತಮ್ಮದೇ ವಿಚಾರಗಳೆಂಬಂತೆ ಜನರ ಭಾಷೆಯಲ್ಲೇ ಮಾತಾಡಲು ತೊಡಗುವುದು! ಇವರ ಕೈಯಲ್ಲಿ ಸಂಕಟಪಟ್ಟ ಜನರಿಗೆ ಇದೀಗ ಈ ಸರ್ವಾಧಿಕಾರಿಗಳ ರಕ್ಷಣೋಪಾಯದಂತೆ ಕೇಳಿಸಿದರೆ ಅಚ್ಚರಿಯಿಲ್ಲ. ತಮ್ಮ ಜನ ಬಂಡೇಳುತ್ತಿರುವುದಕ್ಕೆ ತಾವು ನಡೆಸುತ್ತ ಬಂದಿರುವ ದಮನವೇ ಕಾರಣವೆಂದು ಅವರಿಗೆ ಯಾಕೆ ಅನಿಸುವುದಿಲ್ಲವೋ ಆಶ್ಚರ್ಯವಾಗುತ್ತದೆ. ರಾಜ್ಯವೊಂದು ಉತ್ತಮ ರಾಜಕೀಯ ನಡೆಸುತ್ತಿದ್ದರೆ ಯಾವುದೇ ವಿದೇಶೀ ಕುತಂತ್ರವೂ ಅಲ್ಲಿನ ಜನರನ್ನು ಸರಕಾರದ ವಿರುದ್ಧ ಎತ್ತಿಕಟ್ಟಲಾರದು. ತಮ್ಮ ಪಾಪವನ್ನು ಇತರರ ತಲೆಗೆ ಕಟ್ಟುವುದು ಸಾಧಾರಣವಾಗಿ ಎಲ್ಲ ಸರ್ವಾಧಿಕಾರಿಗಳೂ ಮಾಡುವ ಕೆಲಸ.

ಇಂಥದೊಂದು ತುರ್ತು ಪರಿಸ್ಥಿತಿಯಲ್ಲೇ ನಾನು ಕಾಸರಗೋಡು ಬಿಟ್ಟು ಹೈದರಾಬಾದಿಗೆ ಬಂದುದು. ನಮ್ಮ ನಮ್ಮ ಸದ್ಯದ ಕಾಲವೇ ಘಟನೆಗಳಿಂದ ತುಂಬಿದುದು ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಆದರೆ ಪ್ರತಿಯೊಂದು ಕಾಲಘಟ್ಟಕ್ಕೂ ಅದರದೇ ಆದ ತಲ್ಲಣಗಳಿರುತ್ತವೆ. ನನ್ನ ಬಾಲ್ಯದ ಕಾಲಕ್ಕೆ ಅದರದೇ ತಲ್ಲಣಗಳಿದ್ದುವು. ಇವು ಮುಗಿದು ಎಲ್ಲವೂ ಪ್ರಶಾಂತವಾಗುತ್ತವೆ ಎಂಬ ನಿರೀಕ್ಷೆಯಲ್ಲಿ ನಾವು ಕಾಯುತ್ತ ಇರುತ್ತೇವೆ: ತೆರೆ ಮುಗಿಯಲು ದಂಡೆಯಲ್ಲಿ ಕಾಯುವ ಮನುಷ್ಯರಂತೆ. ಇಂದು, ನನ್ನೀ ಅಧ್ಯಾಪನ ವೃತ್ತಿಯ ಕೊನೆ ಘಟ್ಟದಲ್ಲಿರುವ ನಾನು, ಅರಬ್ಬೀ ಸ್ವಾತಂತ್ರ್ಯ ದಾಹವನ್ನು ನನ್ನದೇ ದಾಹವೆಂಬ ರೀತಿಯಲ್ಲಿ ತೆಗೆದುಕೊಂಡು ಇನ್ನೊಂದು ತಲ್ಲಣ ಅನುಭವಿಸುತ್ತಿದ್ದೇನೆ.

ಈ ಡಿಕ್ಟೇಟರುಗಳೆಲ್ಲ ಖಂಡಿತಾ ಸದ್ಯವೇ ಹೊರಟು ಹೋಗುತ್ತಾರೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ; ಆದರೆ ಮುಂದೆ ಬರುವುದು ಧರ್ಮನಿರಪೇಕ್ಷವಾದ ಪ್ರಜಾಪಭುತ್ವವೇ ಅಥವಾ ತಾಲಿಬಾನ್ ನಂಥ ಕಟ್ಟಾ ಮತೀಯ ಆಢಳಿತವೇ ಎನ್ನುವುದು ನನಗೆ ತಿಳಿಯದು. ತಾಲಿಬಾನೇ ಆದರೆ ಅದು ಸದ್ಯದ ಡಿಕ್ಟೇಟರ್ ಶಿಪ್ ಗಿಂತಲೂ ಘೋರವೇ ಸರಿ. ಯಾಕೆಂದರೆ ಈ ಡಿಕ್ಟೇಟರುಗಳಲ್ಲಿ ಹಲವರು ಬೆನೆವಲೆಂಟ್ ಇದ್ದಾರೆ. ತಮ್ಮ ತಮ್ಮ ದೇಶದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ; ಕಟ್ಟಾವಾದಿಗಳನ್ನು ಒಂದು ತರದಲ್ಲಿ ಸುಮ್ಮನಿರಿಸಿದ್ದಾರೆ; ಅಲ್ಲದೆ ತಾವು ಅಂತಾರಾಷ್ಟ್ರೀಯವಾಗಿ ಸ್ವೀಕೃತವಾಗಬೇಕು ಎನ್ನುವ ಇರಾದೆಯಲ್ಲಿ ಸ್ವಲ್ಪ ಮಟ್ಟಿಗೆ ಮಾನವ ಮೌಲ್ಯಗಳನ್ನು ಒಪ್ಪಿಕೊಂಡೂ ಇದ್ದಾರೆ. ಇಂಥವರ ಬದಲು ಮುಂದೇನಾಗುತ್ತದೆ ಎಂದು ಯಾರು ಹೇಗೆ ಹೇಳುವುದು ಸಾಧ್ಯ? ಆದರೂ ನನಗೆ ಸಿಗ್ಮಂಡ್ ಫ್ರಾಯ್ಡ್ ತನ್ನ ತೊಂಬತ್ತನೇ ವಯಸ್ಸಿನಲ್ಲೂ ಮಾನವ ವಿಕಸನದಲ್ಲಿ ಇರಿಸಿಕೊಂಡಂಥ ಒಂದು ಆಶಾವಾದ ಇದೆ; ಅಥವಾ ಅಂಥ ಆಶಾವಾದ ಇರಲಿ ಎಂದುಕೊಳ್ಳುತ್ತೇನೆ. ಎಂದರೆ ಎಲ್ಲ ಬದಲಾವಣೆಗಳೂ ಹಿಂದಿನದಕ್ಕಿಂತ ಉತ್ತಮವೇ ಇರುತ್ತವೆ ಎನ್ನುವ ಆಶಾವಾದ ಇದು.

ವಿದ್ಯೆಯನ್ನು ಒಬ್ಬ ದೇವತೆಯಾಗಿ ಕಾಣುವ ಕ್ರಮ ಹಿಂದೂ ವಿಶ್ವಾಸಿಗಳಲ್ಲಿ ಇದೆ. ಇದೊಂದು ಸುಂದರವಾದ ರೂಪಕವೇನೋ ನಿಜ. ಆದರೆ ವಿದ್ಯಾಭ್ಯಾಸ ಮನುಷ್ಯನ ಚಿಂತನಾ ಗುಣದಲ್ಲಿ ಆಗುವ ಪ್ರಕ್ರಿಯೆಯೇ ಹೊರತು ದೈವ ಕೃಪೆಯಿಂದ ಅಲ್ಲ. ದಿನಾ ಸರಸ್ವತಿಯನ್ನು ಪೂಜಿಸುತ್ತ ಕೂರುವ ವ್ಯಕ್ತಿಗೆ ಅತ್ತ ಪುಣ್ಯವೂ ಸಿಗದು, ಇತ್ತ ವಿದ್ಯೆಯೂ ಬರದು.

1966ರಲ್ಲಿ ಎಂ.ಎ. ಮುಗಿಸಿದಾಗ ನಾನು ಇಪ್ಪತ್ತೈದರ ಯುವಕ. ನಾನು ಈ ಇಂಗ್ಲಿಷ್ ಗೆ ಬಂದದ್ದಾದರೂ ಹೇಗೆ ಎನ್ನುವುದನ್ನು ಪ್ರಸ್ತಾಪಿಸಬೇಕಾಗಿದೆ. ಅದೇನೂ ನಾನು `ಇಂಗ್ಲಿಷ್ ಮೋಹ’ದಿಂದ ಆರಿಸಿಕೊಂಡ ವಿಷಯವಾಗಿರಲಿಲ್ಲ. ಆಯ್ಕೆಯಲ್ಲದ ಆಯ್ಕೆಯಾಗಿತ್ತು. ಆದರೆ ಒಮ್ಮೆ ಅದನ್ನು ಆಯ್ದುಕೊಂಡ ಮೇಲೆ ನಾನದರಲ್ಲಿ ಚೆನ್ನಾದ ಆಸಕ್ತಿ ವಹಿಸಿಕೊಂಡೆ. ನಾನು ಹೈಸ್ಕೂಲಿನಲ್ಲಿದ್ದಾಗಲೇ ಕಾಸರಗೋಡನ್ನು ಕೇರಳಕ್ಕೆ ಸೇರಿಸಿ ಆಗಿತ್ತು. ಕನ್ನಡಿಗರಿಗೆ ಸಮಾಧಾನವಾಗಲೆಂದೋ ಏನೋ ಕೇರಳ ಸರಕಾರ ಅಲ್ಲಿ ಕಾಲೇಜೊಂದನ್ನು ಸ್ಥಾಪಿಸಿತು. ಅದು ಸುರುವಾಗಿ ಹೆಚ್ಚು ವರ್ಷಗಳಾಗಿರಲಿಲ್ಲ. ನಾನು ಸೇರಿದಾಗ ಇನ್ನೂ ಅಂತಿಮ ವರ್ಷದವರು ಗ್ರಾಜುವೇಶನ್ ತೆಗೆದುಕೊಂಡಿರಲಿಲ್ಲ. ಕಾಲೇಜಿನಲ್ಲಿ ನಾಲ್ಕು ವರ್ಷಗಳು ಇದ್ದುವು. ಮೊದಲ ಒಂದು ವರ್ಷ ಪಿಯುಸಿ (ಪ್ರಿ ಯುನಿವರ್ಸಿಟಿ ಕೋರ್ಸ್), ಇಂದು ಅದು ಎರಡು ವರ್ಷಗಳ ಪ್ರಿ ಡಿಗ್ರಿ ಕೋರ್ಸ್ ಆಗಿದೆ.

ಇದೊಂದು ಕಾಂಪಸಿಟ್ ಕೋರ್ಸ್ ಆಗಿತ್ತು. ಇದರಲ್ಲಿ ವಿಜ್ಞಾನ ಮತ್ತು ಕಲೆಗೆ ಸಂಬಂಧಿಸಿದ ಎಲ್ಲ ವಿಷಯಗಳೂ ಸ್ವಲ್ಪ ಸ್ವಲ್ಪ ಇದ್ದುವು. ನಂತರ ಮೂರು ವರ್ಷಗಳ ಡಿಗ್ರಿ ಕೋರ್ಸ್. ನಾನು ಪಿಯುಸಿ ಪಾಸಾದ ವೇಳೆಗೆ ಡಿಗ್ರಿಗೆ ಇದ್ದುದು ಎಕನಾಮಿಕ್ಸ್, ಗಣಿತ ಮತ್ತು ಆಗಷ್ಟೆ ಸುರುವಾಗಬೇಕಿದ್ದ ಇಂಗ್ಲಿಷ್. ನನಗೆ ಎಕನಾಮಿಕ್ಸ್ ನಲ್ಲಿ ಆಸಕ್ತಿ ಇರಲಿಲ್ಲ; ಗಣಿತ ಕಲಿಯುವ ಹಿನ್ನೆಲೆ ಪೂರ್ವ ಸಿದ್ಧತೆಯೂ ಇರಲಿಲ್ಲ. ಅಲ್ಲದೆ ಆಗ ಅಲ್ಲಿ ಪ್ರೊಫೆಸರ್ ಮಧುಕರ ರಾವ್ ಎನ್ನುವ ಒಬ್ಬ ಆಕರ್ಷಕ ಇಂಗ್ಲಿಷ್ ಪ್ರೊಫೆಸರ್ ಇದ್ದರು. ಇವರು ಎಷ್ಟು ಚೆನ್ನಾಗಿ ಕಲಿಸುತ್ತಿದ್ದರು ಎಂದರೆ ಇಂಥವರ ಕೈಕೆಳಗೆ ಕಲಿಯುವುದೇ ಒಂದು ಭಾಗ್ಯವಾಗಿತ್ತು. ಇಂಗ್ಲಿಷ್ ಬಿ.ಎ. ಕೋರ್ಸಿಗೆ ಸೇರಿದೆ. ಈ ಕೋರ್ಸಿನಲ್ಲಿ ಇಂಗ್ಲಿಷ್ ಸಾಹಿತ್ಯ ಪ್ರಧಾನ; ಬ್ರಿಟಿಷ್ ಹಿಸ್ಟರಿ ಮತ್ತು ಲಿಟರರಿ ಕ್ರಿಟಿಸಿಸಂ ಉಪಪ್ರಧಾನ ವಿಷಯಗಳಾಗಿದ್ದುವು. ಅಂತೂ ಒಂದು ರೀತಿಯಲ್ಲಿ ಸಂಪೂರ್ಣ ಇಂಗ್ಲಿಷ್. ಅದಲ್ಲದೆ ಫಸ್ಟ್ ಲಾಂಗ್ವೆಜ್ ಇಂಗ್ಲಿಶ್ ಮತ್ತು ಸೆಕೆಂಡ್ ಲಾಂಗ್ವೆಜ್ ಕನ್ನಡ. (ಕತೆಗಾರ ಎಂ. ವ್ಯಾಸ ನನ್ನ ಸಮಕಾಲೀನರಾಗಿದ್ದರು. ಅವರು ಎಕನಾಮಿಕ್ಸ್ ಬಿ.ಎ. ಮಾಡುತ್ತಿದ್ದರು. ಫಸ್ಟ್ ಲಾಂಗ್ವೆಜ್ ಇಂಗ್ಲಿಷ್ ಮತ್ತು ಕನ್ನಡದ ಕ್ಲಾಸುಗಳಲ್ಲಿ ನಾವು ಒಟ್ಟು ಸೇರುತ್ತಿದ್ದೆವು. ಕ್ಲಾಸಿಗೆ ಹೊರತಾಗಿಯೂ ನಾವು ಗೆಳೆಯರಾಗಿದ್ದೆವು.)

ಪ್ರೊಫೆಸರ್ ಮಧುಕರ ರಾವ್ ಬಗ್ಗೆ ಹೇಳುವುದಕ್ಕೆ ತುಂಬಾ ಇದೆ. ಅವರೇನೂ ನಿರರ್ಗಳ ಇಂಗ್ಲಿಷ್ ಮಾತಾಡುವವರಾಗಿರಲಿಲ್ಲ. ಆದರೆ ಪ್ರತಿ ಮಾತೂ ಅಣಿ ಮುತ್ತಿನಂತೆ. ಅವರು ನಮಗೆ ಶೇಕ್ಸ್ಪಿಯರ್ ನ ನಾಟಕ ಕಲಿಸಿದರು; ಕೀಟ್ಸ್ ಕಲಿಸಿದರು. ಗೌಡ ಸಾರಸ್ವತ ಬ್ರಾಹ್ಮಣರಾಗಿದ್ದ ಅವರು ನಮ್ಮ ಮಟ್ಟಿಗೆ ಅತ್ಯಂತ ಸೊಫಿಸ್ಟಿಕೇಟೆಡ್ ಇಂಗ್ಲಿಷ್ ವ್ಯಕ್ತಿ ಆಗಿದ್ದರು. ಇಂಗ್ಲಿಷ್ ಸಾಹಿತ್ಯ ಮತ್ತು ಭಾಷೆ, ಅದರಲ್ಲೂ ಪದಸಂಪತ್ತಿನ ಮೇಲೆ ಅವರಿಗಿದ್ದ ಹಿಡಿತ ನಮ್ಮನ್ನು ಮರುಳುಗೊಳಿಸುವಂತಿತ್ತು. ಮಧುಕರ ರಾವ್ ಸ್ವಲ್ಪ ಬಾಗಿ ಓಲಾಡಿಕೊಂಡು ನಡೆಯುತ್ತಿದ್ದರು. ಹೆಚ್ಚಾಗಿ ಸೂಟಿನಲ್ಲಿರುತ್ತಿದ್ದರು. ಅವರು ಪ್ರತಿ ದಿನ ಇಂಗ್ಲಿಷ್ ದಿನಪತ್ರಿಕೆ ಮೇಲ್ ನ ಎಂದು ಕಾಣುತ್ತದೆ, ಕ್ರಾಸ್ ವರ್ಡ್ ಪಝ್ಲ್ ಬಿಡಿಸುವವರು, ಪೇಟೆಯ ಕ್ಲಬ್ ಗೆ ಹೋಗಿ ಬ್ರಿಜ್ ಆಡುವವರು. ಈ ಕ್ರಾಸ್ ವರ್ಡ್ ಪಝ್ಲ್ ನಲ್ಲಿ ನಮ್ಮನ್ನು ತೊಡಗಿಸಲು ಅವರು ಪ್ರಯತ್ನಿಸಿದ್ದಿದೆ. ಒಬ್ಬ ಉತ್ತಮ ಅಧ್ಯಾಪಕನಾಗಬೇಕಿದ್ದರೆ ಆತನಿಗೆ ಜೀವನಾಸಕ್ತಿ ಮುಖ್ಯ ಎನ್ನುವುದನ್ನು ಮಧುಕರ ರಾವ್ ರಿಂದ ನನಗೆ ಗೊತ್ತಾದ್ದು. ನಾನು ಅವರ ಈ ಗುಣಗಳನ್ನು ಅಳವಡಿಸಿಕೊಂಡೆ ಎನ್ನಲಾರೆ; ಅಪ್ರಜ್ಞಾಪೂರ್ವಕ ತಿಳಿದುಕೊಂಡೆ ಎಂದು ಕಾಣುತ್ತದೆ. ನಾನೇನೂ ಬ್ರಿಜ್ ಆಡುವುದಿಲ್ಲ, ಕ್ರಾಸ್ವರ್ಡ್ ಕೂಡಾ ಬಿಡಿಸುವುದಿಲ್ಲ. ಆದರೆ ನಾವು ದ್ವಿತೀಯ ವರ್ಷದಲ್ಲಿದ್ದಾಗ ನಮ್ಮೀ ಪ್ರಿಯ ಪ್ರೊಫೆಸರ್ ಕಾಸರಗೋಡಿನಿಂದ ವರ್ಗವಾಗಿ ತಲಶ್ಶೇರಿಗೆ ಹೋದರು. ನಾವು ಕೆಲವರು ಬಿ.ಎ. ಮುಗಿಸುವ ಮೊದಲೊಮ್ಮೆ ತಲಶ್ಶೇರಿಗೂ ಹೋಗಿ ಅವರನ್ನು ಮನೆಯಲ್ಲೇ ಭೇಟಿಯಾದದ್ದಿದೆ. ಅವರು ಅಂದು ನಮಗೆ ಮಧ್ಯಾಹ್ನದ ಊಟ ನೀಡಿದರು; ನಮ್ಮ ಜತೆ ತುಂಬಾ ಸಮಯ ಕಳೆದರು. ಕ್ರಾಸ್ ವರ್ಡ್ ಬಿಡಿಸುವುದು ಹೇಗೆ ಎಂಬುದನ್ನೂ ಕಲಿಸಿದರು. ಕ್ರಾಸ್ ವರ್ಡ್ ಬಿಡಿಸುವುದರಿಂದ ಪದಸಂಪತ್ತು ಹೆಚ್ಚುತ್ತದೆ ಮಾತ್ರವಲ್ಲ, ಜ್ಞಾನವೃದ್ಧಿಯೂ ಆಗುತ್ತದೆ ಎನ್ನುವುದನ್ನು ಉದಾಹರಣೆ ಮೂಲಕ ಹೇಳಿಕೊಟ್ಟರು. ಒಳ್ಳೆಯ ಅಧ್ಯಾಪಕರೊಬ್ಬರು ಹೇಗೆ ನಮ್ಮ ಮೇಲೆ ಪ್ರಭಾವ ಬೀರುತ್ತಾರೆ ಎನ್ನುವುದಕ್ಕೆ ಈ ಮಾತು ಹೇಳುತ್ತಿದ್ದೇನೆ. ಯಾಕೆಂದರೆ ಅವರಂತೆಯೇ ಹೆಚ್ಚೆಚ್ಚು ಓದುವುದು, ಹೆಚ್ಚೆಚ್ಚು ಪದಸಂಪಾದನೆ ಮಾಡುವುದು, ವಿದ್ಯಾರ್ಥಿಗಳಿಗೆ ಬೋರಾಗದಂತೆ ಪಾಠ ಮಾಡುವುದು ಇವೆಲ್ಲ ಮಧುಕರ ರಾವ್ ರಿಂದ ಕಲಿಯಬೇಕಾದ ಸಂಗತಿಗಳಾಗಿದ್ದುವು.

ಕಾಸರಗೋಡಿನಲ್ಲಿ ನಾನು ಓದುತ್ತಿದ್ದಾಗ ನನ್ನನ್ನು ಪ್ರಭಾವಿಸಿದ ಇತರ ಅನೇಕ ಅಧ್ಯಾಪಕರೂ ಇದ್ದರು. ವಾಸ್ತವದಲ್ಲಿ ವಿದ್ಯಾರ್ಥಿಗಳು ಒಬ್ಬೊಬ್ಬ ಅಧ್ಯಾಪಕರಿಂದ (ಸಹಪಾಠಿಗಳಿಂದ ಕೂಡಾ) ಒಂದೊಂದನ್ನು ಕಲಿಯುವುದು ಸಾಧ್ಯ; ನಾನಿಲ್ಲಿ ಹೇಳುವುದು ಪಠ್ಯ ವಿಷಯದ ಬಗ್ಗೆ ಮಾತ್ರ ಅಲ್ಲ, ಮನುಷ್ಯ ಗುಣದ ಬಗ್ಗೆ ಕೂಡಾ.

ಮಧುಕರ ರಾವ್ ನಮ್ಮಲ್ಲಿಂದ ವರ್ಗವಾಗಿ ಹೋಗುವುದಕ್ಕೆ ಆಗಿನ ಪ್ರಿನ್ಸಿಪಾಲ್ ಅವರನ್ನು ಇಷ್ಟಪಡದೆ ಇದ್ದುದು ಕಾರಣ ಎಂಬ ಸುದ್ದಿಯಿತ್ತು. ಇದೂ ನನಗಿಲ್ಲಿ ಮುಖ್ಯ ಅನಿಸುವುದರಿಂದ ನಮೂದಿಸುತ್ತಿದ್ದೇನೆ. ಈ ಪ್ರಿನ್ಸಿಪಾಲರ ಹೆಸರು ಕರಿಂಬುಳ ರಾಮಕೃಷ್ಣನ್ ಎಂದು. ಮಲೆಯಾಳದ ಪ್ರೊಫೆಸರ್. ತನ್ನ ವಿಷಯದಲ್ಲಿ ಪಂಡಿತರು, ಇತರ ವಿಷಯಗಳನ್ನೂ ಓದಿಕೊಂಡವರು. ಇಂಗ್ಲಿಷ್ ತಮ್ಮದೇ ರೀತಿಯಲ್ಲಿ ಚೆನ್ನಾಗಿ ಮಾತಾಡುತ್ತಿದ್ದರು. ಆದರೆ ಕಟ್ಟಾ ಮಲೆಯಾಳವಾದಿ. ಇಂಥವರನ್ನು ಸರಕಾರ ಕಾಸರಗೋಡಿನಂಥ ಸೆನ್ಸಿಟಿವ್ ಜಾಗಕ್ಕೆ ಪ್ರಿನ್ಸಿಪಾಲ್ ಆಗಿ ಕಳಿಸಬಾರದಿತ್ತು. ಇವರು ಅಚ್ಚ ಬಿಳಿ ಡಬಲ್ ವೇಷ್ಟಿ ಉಟ್ಟು ಅದರ ಮೇಲೆ ಅಚ್ಚ ಬಿಳಿ ನೀಳ್ಗೈಯ ಅಂಗಿ ಹಾಕಿಕೊಳ್ಳುತ್ತಿದ್ದರು. ಮೇಲೊಂದು ಮಡಚಿದ ಜರಿ ಶಾಲು ಒಂದು ಭುಜದ ಮೇಲೆ ಇಳಿಬಿಟ್ಟುದು. ಕಾಲಿಗೆ ಚಪ್ಪಲಿ. ಭಾರೀ ಧಡೂತಿ ವ್ಯಕ್ತಿ. ಶಿಸ್ತೆಂದರೆ ಶಿಸ್ತು. ಎಲ್ಲಾ ಅಧ್ಯಾಪಕರನ್ನೂ ವಿದ್ಯಾರ್ಥಿಗಳನ್ನೂ ಸಂಶಯದಿಂದ ನೋಡುತ್ತಿದ್ದರು. ಕೆಲವು ಸಲ ನಮ್ಮ ಜನರಲ್ ಕ್ಲಾಸಿನ ಅಧ್ಯಾಪಕರು ಬರದಿದ್ದಾಗ ನಮ್ಮ ಅವರೇ ಬಂದು ನಿಂತು ಇಡೀ ಪಿರಿಯಡ್ ಉಪದೇಶ ನುಡಿಯುತ್ತಿದ್ದರು.

ಶುಕ್ರವಾರ, 22.04.2011
ಇನ್ನೊಂದು ಶುಕ್ರವಾರ ಬಂದಿದೆ. ಮತ್ತೆ ಮುಂಜಾನೆ ಆರೂವರೆಗೆ ಕಂಪ್ಯೂಟರ್ ಮುಂದೆ ಕೂತಿದ್ದೇನೆ. ಈ ಲೇಖನವನ್ನು ಕೈಬಿಟ್ಟು ಐದಾರು ದಿನಗಳಾದುವು. ಈ ಮಧ್ಯೆ ಪ್ರತಿಭಟನಕಾರರ ಮೇಲೆ ಕತ್ತಿಯಿಂದಲೂ ಬಂದೂಕಿನಿಂದಲೂ ಆಗಾಗ ಧಾಳಿ ನಡೆಯುತ್ತಲೇ ಬಂದಿದೆ. ನಿನ್ನೆ ರಾತ್ರಿಯೂ ನನಗೆ ಗುಂಡಿನ ಸದ್ದು ಕೇಳಿಸಿತು. ನಾನು ಬರೆಯುತ್ತಿರುವ ಹಿನ್ನೆಲೆಯನ್ನು ಸೂಚಿಸಲು ಈ ಮಾತು ಹೇಳುತ್ತಿದ್ದೇನೆ.

ಕರಿಂಬುಳ ರಾಮಕೃಷ್ಣನ್ ಎಲ್ಲರನ್ನೂ ಸಂದೇಹದಿಂದ ನೋಡುವ ವ್ಯಕ್ತಿಯಾಗಿದ್ದರು. ಅವರಿಗೆ ಅವರದೇ ಆದ ಶಿಸ್ತಿನ ಕಲ್ಪನೆಯಿತ್ತು. ಅದನ್ನು ಮೀರಿದವರನ್ನು ಅವರು ಸಹಿಸುತ್ತ ಇರಲಿಲ್ಲ. ಒಮ್ಮೆ ನಾನಿದಕ್ಕೆ ಬಲಿಯಾದೆ. ಮರುದಿನ ಸ್ವಾತಂತ್ರ್ಯ ದಿನವಾಗಿತ್ತು. ಅಂದು ರಜೆ ಇದ್ದರೂ ವಿದ್ಯಾರ್ಥಿಗಳು ಬಂದು ಧ್ವಜವಂದನೆಯಲ್ಲಿ ಭಾಗವಹಿಸಬೇಕಾಗಿತ್ತು. ನಾವಿದನ್ನು ಪ್ರತಿ ವರ್ಷ ಸಂತೋಷದಿಂದಲೇ ಮಾಡುವವರು. ಆದರೆ ರಾಮಕೃಷ್ಣನ್ ಮರುದಿವಸದ ಧ್ವಜವಂದನೆಗೋಸ್ಕರ ರಿಹರ್ಸಲ್ ಇದೆಯೆಂತಲೂ ಸಂಜೆಯ ಕ್ಲಾಸು ಮುಗಿದ ಕೂಡಲೇ ವಿದ್ಯಾರ್ಥಿಗಳೂ ಅಧ್ಯಾಪಕರೂ ಆಟದ ಬಯಲಲ್ಲಿ ಸೇರಬೇಕೆಂತಲೂ ಒಂದು ಸೂಚನಾ ಪತ್ರ ಹೊರಡಿಸಿದರು. ನನ್ನ ದುರದೃಷ್ಟಕ್ಕೆ ಆವತ್ತು ನಾನೊಂದು ಹೊಸ ಶೂ ತೊಟ್ಟುಕೊಂಡಿದ್ದೆ. ಅದು ನನ್ನೆರಡೂ ಪಾದಗಳನ್ನು ಕಚ್ಚಿ ಮುಂಜಾನೆಯಿಂದಲೇ ನನಗೆ ನೋಯುತ್ತಿತ್ತು. ಕ್ಲಾಸು ಮುಗಿದು ಆದಷ್ಟೂ ಬೇಗನೆ ನನ್ನ ಕೋಣೆ ಸೇರಿ ಈ ಶೂವಿನಿಂದ ಪಾರಾಗುವುದು ನನ್ನ ಅಗತ್ಯವಾಗಿತ್ತು. ಆದ್ದರಿಂದ ಸಾಯಂಕಾಲ ಕ್ಲಾಸು ಮುಗಿದ ಕೂಡಲೇ ನಾನು ರಿಹರ್ಸಲಿಗೆ ಕಾಯದೆ ಹತ್ತಿರದ ಬಸ್ ಸ್ಟಾಂಡಿಗೆ ಹೋಗಿ ಬಸ್ ಗೆ ಕಾಯತೊಡಗಿದೆ.

ಅಲ್ಲಿ ಇನ್ನು ಕೆಲವು ವಿದ್ಯಾರ್ಥಿಗಳೂ ಇದ್ದರು. ಪ್ರಿನ್ಸಿಪಲ್ ರಾಮಕೃಷ್ಣನ್ ಅವರ ಮೇಲಂತಸ್ತಿನ ಕೊಠಡಿಗೆ ಈ ಬಸ್ ಸ್ಟಾಂಡ್ ಕಾಣಿಸುತ್ತಿತ್ತು. ತನ್ನ ಅಪ್ಪಣೆಯನ್ನು ಧಿಕ್ಕರಿಸಿ ಕೆಲವು ವಿದ್ಯಾರ್ಥಿಗಳು ಹೊರಟು ಹೋಗಲು ಬಸ್ಸಿಗೆ ಕಾದಿದ್ದಾರೆ ಎಂದು ಗೊತ್ತಾಗಿ ಅವರು ಒಬ್ಬ ಪೇದೆಯನ್ನು ಕಳಿಸಿದರು. ಗಂಗಾಧರನ್ ನಾಯರ್ (ಈತನ ಹೆಸರೂ ನನಗೆ ನೆನಪಿದೆ!) ಎಂಬ ಈತ ಪ್ರಿನ್ಸಿಪಾಲರ ಬೇಹಿನವನೂ ಆಗಿದ್ದ; ತನಗಾಗದವರ, ಅಥವಾ ಪ್ರಿನ್ಸಿಪಾಲರಿಗೆ ಆಗದವರ ಮೇಲೆ ಚಾಡಿ ಹೇಳುವುದು ಇವನ ಸ್ವಭಾವವಾಗಿತ್ತು. ಇವನು ಯಮದೂತನಂತೆ ನಮ್ಮ ಬಳಿ ಬಂದು ಪ್ರಿನ್ಸಿಪಾಲ್ ಕರೆಯುತ್ತಿದ್ದಾರೆ ಎಂದು ಹೇಳಿದ. ನನ್ನ ಜಂಘಾಬಲವೇ ಉಡುಗಿ ಹೋಯಿತು! ಸರಿ ಕಾಲಿನ ನೋವು ಸಹಿಸಿಕೊಂಡು ಪ್ರಿನ್ಸಿಪಾಲರ ಛೇಂಬರಿಗೆ ಬಂದೆ; ನನ್ನ ಜತೆ ಆ ಉಳಿದ ಮಿಕಗಳೂ ಇದ್ದರು. ಪ್ರಿನ್ಸಿಪಾಲರು ನಮ್ಮನ್ನು ಸಾಲಾಗಿ ನಿಲ್ಲಿಸಿ ಬಯ್ಗಳ ಸುರಿಮಳೆ ಕರೆದರು. ನನ್ನ ಪಾದಗಳನ್ನು ಹೊಸ ಶೂ ಕಚ್ಚಿದೆ ಎನ್ನುವುದೊಂದು ಸರಿಯಾದ ಕಾರಣವೇ ಎನಿಸಲಿಲ್ಲ ಅವರಿಗೆ; ಶೂ ತೆಗೆದಿರಿಸಬಹುದಿತ್ತಲ್ಲ ಎಂದರು. ಹೌದು! ನನಗದು ತಲೆಗೆ ಹೊಳೆಯಲೇ ಇಲ್ಲ. ಅದಕ್ಕೂ ಮುಖ್ಯವಾಗಿ ಈ ರಿಹರ್ಸಲ್ ಮುಖ್ಯವೆಂದು ನನಗೆ ಅನಿಸದೆ ಇದ್ದದ್ದು. ಅಂತೂ ಅಂದು ರಿಹರ್ಸಲ್ ಮುಗಿಸಿಯೇ ನನಗೆ ಬಿಡುಗಡೆಯಾದ್ದು.

ಇದೇ ಪ್ರಿನ್ಸಿಪಾಲ್ ನಂತರ ಒಂದು ದಿನ ಪ್ರೊಫೆಸರ್ ಮಧುಕರ ರಾವ್ ತಮ್ಮ ಛೇಂಬರ್ ನಲ್ಲಿ (ಪ್ರೊಫೆಸರರಿಗೆ ಅವರದೇ ಪ್ರತ್ಯೇಕ ಛೇಂಬರುಗಳಿದ್ದುವು) ಪಾಠದ ನಡುವಣ ಬಿಡು ವೇಳೆಯಲ್ಲಿ ಅಧ್ಯಾಪಕಿಯೊಬ್ಬಳ ಜತೆ ಕೇರಮ್ ಆಡುತ್ತಿದ್ದರು ಎನ್ನುವ ಕಾರಣಕ್ಕೆ ಅವರನ್ನು ಮುಂದಿನ ವರ್ಷ ಎತ್ತಂಗಡಿ ಮಾಡಲು ಕಾರಣ ಎಂದು ಗೊತ್ತಾಯಿತು. ಪ್ರೊಫೆಸರ್ ಒಬ್ಬರು ಕೇರಮ್ ಆಡಿದ್ದು ಒಂದು ತಪ್ಪು; ಅದೂ ಸ್ತ್ರೀಯೊಬ್ಬಳ ಜತೆ! ಕರಿಂಬುಳ ಅವರು ತಮ್ಮ ನೆಲೆಯಿಂದ ಸರಿಯಿದ್ದರೋ ಇಲ್ಲವೋ ನಾನು ಹೇಳಲಾರೆ; ಆದರೆ ಮಧುಕರ ರಾವ್ ಅತ್ಯುತ್ತಮ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನಡುವೆ ಜನಪ್ರಿಯರು ಎನ್ನುವುದಾದರೂ ಅವರಿಗೆ ಗೊತ್ತಿದ್ದಿರಬೇಕು. ಬಹುಶಃ ಕೇರಮ್ ಪ್ರಸಂಗಕ್ಕಿಂತಲೂ ಈ ಗುಣಗಳೇ ಮಧುಕರ ರಾವ್ ಅವರಿಗೆ ಮುಳುವಾದುವು. ಯಾಕೆಂದರೆ ಇವೆರಡನ್ನೂ ಈ ಹಳೆಕಾಲದ ಕರಿಂಬುಳರ ಮತ್ಸರ ಸಹಿಸಿಕೊಳ್ಳಲಿಲ್ಲ. ಮಧುಕರ ರಾವರಂಥ ಪ್ರಾಧ್ಯಾಪಕರನ್ನು ತಾವು ಹೇಗಾದರೂ ಉಳಿಸಿಕೊಳ್ಳಬೇಕು ಎನ್ನುವುದು ಅವರ ಮನಸ್ಸಿಗೆ ಬರಲಿಲ್ಲ; ಅವರನ್ನು ಅಲ್ಲಿಂದ ಹೊರಡಿಸುವ ಕುರಿತೇ ಕರಿಂಬುಳ ಯೋಚಿಸುತ್ತಿದ್ದುದು. ಇದರಿಂದ ನಮಗೆ ಮಧುಕರ ರಾವರಂಥ ಒಬ್ಬ ಅತ್ಯುತ್ತಮ ಪ್ರಾಧ್ಯಾಪಕರ ಲಾಭ ಮುಂದಿನ ವರ್ಷದಿಂದ ತಪ್ಪಿ ಹೋಯಿತು.

ಸ್ವಲ್ಪ ಸಮಯ ನಾವೆಲ್ಲ ಮಾನಸಿಕ ಖಿನ್ನತೆಗೆ ಒಳಗಾದೆವು; ಯಾಕೆಂದರೆ ಕಾಲೇಜಿನಲ್ಲಿ ಇಂಗ್ಲಿಷ್ ಬಿ.ಎ. ಸ್ಥಾಪನೆಗೆ ಮಧುಕರ ರಾವ್ ಮುಖ್ಯ ಕಾರಣ. ಅವರಿಲ್ಲದೆ ನಾವು ತಬ್ಬಲಿಗಳಂತೆ ಆಗಿಬಿಟ್ಟೆವು. (ಮಧುಕರ ರಾವ್ ಅವರ ವರ್ಗಾವಣೆಗೆ ಈ ಕೇರಮ್ ಪ್ರಸಂಗವೇ ಕಾರಣವೋ ಬೇರೇನಾದರೂ ಇತ್ತೋ ಎನ್ನುವುದು ನಮಗೆ, ಎಂದರೆ ವಿದ್ಯಾರ್ಥಿಗಳಿಗೆ, ಸರಿಯಾಗಿ ಗೊತ್ತಿರುವ ವಿಷಯವಲ್ಲ; ಕಾಲೇಜಿನಲ್ಲಿದ್ದ ಸುದ್ದಿಯನ್ನು ಮಾತ್ರ ಇಲ್ಲಿ ದಾಖಲಿಸುತ್ತಿದ್ದೇನೆ. ಆದರೆ ಕರಿಂಬುಳರಿಗೆ ಮಧುಕರ ರಾವ್ ಹಿಡಿಸುತ್ತಿರಲಿಲ್ಲ ಎನ್ನುವುದು ನಮಗೆಲ್ಲ ಸ್ಪಷ್ಟವಾಗಿ ಗೊತ್ತಿತ್ತು. ಇಬ್ಬರೂ ಪರಸ್ಪರ ಸರಿಯಾಗಿ ಮಾತಾಡುತ್ತಲೇ ಇರಲಿಲ್ಲ.)

ಇಂಗ್ಲಿಷ್ ಬಿ.ಎ. ಪಾಸು ಮಾಡಿಕೊಂಡ ಕೆಲವರು ಮುಂದೆ ಎಂ.ಎ. ಮಾಡಲು ಬೇರೆ ಬೇರೆ ಕಡೆ ಹೋದರು. ನಾನು ಕೇರಳದ ರಾಜಧಾನಿಯಾದ ತಿರುವನಂತಪುರದ ಯುನಿವರ್ಸಿಟಿ ಕಾಲೇಜು ಸೇರಿದೆ. ಅಲ್ಲಿನ ಇಂಗ್ಲಿಷ್ ವಿಭಾಗ ರಾಜ್ಯದಲ್ಲೇ ಶ್ರೇಷ್ಠ ಪ್ರಾಧ್ಯಾಪಕರಿಂದ ತುಂಬಿದೆ ಎಂಬ ಪ್ರಸಿದ್ಧಿಯಿತ್ತು. ಪ್ರೊಫೆಸರ್ ನೀಲಕಂಠನ್ ಎಂಬ ಅಯ್ಯರ್ ಬ್ರಾಹ್ಮಣ ಮುಖ್ಯಸ್ಥರಿದ್ದರು. ಆದರೆ ಇವರೇನೂ ತಮ್ಮ ಬ್ರಾಹ್ಮಣಿಕೆ ತೋರಿಸಿದವರಲ್ಲ. ನೀಲಕಂಠನ್ ಗಂಭೀರ ಸ್ವಭಾವದ ಮನುಷ್ಯ; ಅವರು ನಕ್ಕುದನ್ನು ನಾನು ನೋಡಿಯೇ ಇಲ್ಲ. ಯಾವಾಗಲೂ ಏನೋ ದುಃಖವನ್ನು ಹೊತ್ತವರಂತೆ ಇದ್ದರು. ಆದರೇನಾಯಿತು, ಚೆನ್ನಾಗಿ ಪಾಠ ಮಾಡುತ್ತಿದ್ದರು. ಸ್ಕಾಲರ್ ಶಿಪ್ (ಪಾಂಡಿತ್ಯ) ಎಂದರೇನು ಎನ್ನುವುದಕ್ಕೆ ಅವರು ಸಾಕ್ಷಿಯಾಗಿದ್ದರು. ಅವರ ಹ್ಯಾಮ್ಲೆಟ್ ಪಾಠದ ನೆನಪಿದೆ ನನಗೆ; ಈ ನಾಟಕವನ್ನು ಪಾಠ ಮಾಡುವುದು ಸುಲಭವಲ್ಲ. ಭಾಷೆ, ಪಾತ್ರರಚನೆ, ಕಥಾವಿನ್ಯಾಸ, ಮತ್ತು ಅರ್ಥದ ಮಟ್ಟಿಗೆ ಅತ್ಯಂತ ಕ್ಲಿಷ್ಟವಾದ ನಾಟಕ ಇದು. ನೀಲಕಂಠನ್ ಕ್ಲಾಸಿಗೆ ಅದ್ಭುತವಾದ ತಯಾರಿ ಮಾಡಿಕೊಂಡೇ ಬರುತ್ತಿದ್ದರು.

ತಮ್ಮಲ್ಲಿದ್ದ ಟಿಪ್ಪಣಿಗಳನ್ನೆಲ್ಲ ಮೇಜಿನ ಮೇಲೆ ಹರವಿಕೊಂಡು ಸಮಾಧಾನವಾಗಿ ಮತ್ತು ವಿವರವಾಗಿ ಪಾಠ ಮಾಡುತ್ತಿದ್ದರು. ಅವರ ಮಾತುಗಳನ್ನು ನಾನು ಟಿಪ್ಪಣಿ ಮಾಡಿಕೊಂಡು ಬಹಳ ಕಾಲ ನನ್ನ ಜತೆ ಇಟ್ಟುಕೊಂಡಿದ್ದೆ. ನೀಲಕಂಠನ್ ಅವರಿಗೆ ಪಕ್ಷಿವೀಕ್ಷಣೆಯ ಹವ್ಯಾಸವೂ ಇತ್ತು ಎನ್ನುವುದು ನಿಧಾನವಾಗಿ ನನಗೆ ಗೊತ್ತಾಗಿ ಅವರ ಕುರಿತು ಹೆಚ್ಚಿನ ಗೌರವ ಮೂಡಿತು. ಆದರೆ ತಮ್ಮ ಈ ಹವ್ಯಾಸದ ಕುರಿತು ಎಂದೂ ಅವರು ಕ್ಲಾಸಿನಲ್ಲಾಗಲಿ ಹೊರಗಾಗಲಿ ವಿದ್ಯಾರ್ಥಿಗಳ ಮುಂದೆ ಯಾಕೆ ಪ್ರಸ್ತಾಪಿಸಲಿಲ್ಲ ಎನ್ನುವುದು ಆಶ್ಚರ್ಯದ ಸಂಗತಿ. ವಿದ್ಯಾರ್ಥಿಗಳನ್ನು ಹೆಚ್ಚಾಗಿ ತಮ್ಮ ಸಮೀಪಕ್ಕೆ ಬರಗೊಡುವ ವ್ಯಕ್ತಿತ್ವವೇ ಅವರದಾಗಿರಲಿಲ್ಲ. ಈ ಮಟ್ಟಿಗೆ ಮಧುಕರ ರಾವ್ ಮತ್ತು ನೀಲಕಂಠನ್ ಬೇರೆ ಬೇರೆ.

ಒಬ್ಬೊಬ್ಬರು ಒಂದೊಂದು ತರ ಎನ್ನುವುದನ್ನು ವಿದ್ಯಾರ್ಥಿಗಳು ಬೇಗನೆ ಅರ್ಥಮಾಡಿಕೊಳ್ಳುತ್ತಾರೆ. ತನ್ನ ಮಟ್ಟಿಗೆ ಸಹಜವಾಗಿರುವುದೇ ಪ್ರತಿಯೊಬ್ಬನೂ ಮಾಡಬಹುದಾದ್ದು ಎಂದು ಕಾಣುತ್ತದೆ. ಯುನಿವರ್ಸಿಟಿ ಕಾಲೇಜಿನಲ್ಲಿ ನಾನು ಬೇರೆ ಬೇರೆ ಪ್ರಾಧ್ಯಾಪಕರಿಂದ ಬೇರೆ ಬೇರೆ ಸಂಗತಿಗಳನ್ನು ಕಲಿತುಕೊಂಡೆ ಎಂದು ಹೇಳಿದರೆ ಸಾಕು. ಟಿ. ಎಸ್. ಎಲಿಯಟ್ ಕಾವ್ಯದ ಪರಿಚಯ ಆದುದು ಅಲ್ಲಿಯೇ. ನನ್ನ ಎಂ.ಎ. ಕಾಲಾವಧಿ 1964–66. ಭಾರತವನ್ನು ಸಮಗ್ರವಾಗಿ ಬಾಧಿಸಿದ ಆಹಾರಾಭಾವ ಈ ಅವಧಿಯಲ್ಲೇ ನಡೆಯಿತು. ಕೆಟ್ಟ ವಾಸನೆ ಬರುವ ಅಕ್ಕಿಯೊಂದೇ ಊಟಕ್ಕೆ ಸಿಗುತ್ತಿದ್ದುದು. ತಾಷ್ಕಂಟಿನಲ್ಲಿ ಲಾಲ್ ಬಹಾದೂರ್ ಶಾಸ್ತ್ರಿ ನಿಗೂಢ ರೀತಿಯಲ್ಲಿ ಸಾವಿಗೀಡಾದುದೂ ಇದೇ ಕಾಲದಲ್ಲಿ. ಆ ಸುದ್ದಿಗೆ ನಾನು ದುಃಖಿಸಿದ್ದೆ.

ಆಗಿನ ಕಾಲದಲ್ಲಿ ಇಂಗ್ಲಿಷ್ ಎಂ.ಎ. ಮಾಡಿಕೊಂಡ ವ್ಯಕ್ತಿಗೆ ಉದ್ಯೋವಕಾಶಗಳು ಹೆಚ್ಚಿರಲಿಲ್ಲ. ಹಳ್ಳಿಯ ಹಿನ್ನೆಲೆಯಿದ್ದ ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉದ್ಯೋಗಕ್ಕೆ ಸೇರುವ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಕಾಸರಗೋಡು ಪೇಟೆಯ ವಿದ್ಯಾರ್ಥಿಗಳಲ್ಲಿ ಕೆಲವರು ಬಿ.ಎ. ಮುಗಿಸಿ ಇಂಥ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಕಡೆ ಒಳ್ಳೆಯ ನೌಕರಿ ಗಿಟ್ಟಿಸಿಕೊಂಡ ಬಗ್ಗೆ ನಾನು ದೂರದಿಂದ ಕೇಳಿದ್ದೆನಷ್ಟೆ. ತಿರುವನಂತಪುರದಲ್ಲೂ ನನ್ನ ಓರಗೆಯ ಕೆಲವು ವಿದ್ಯಾರ್ಥಿಗಳು ಐ.ಎ.ಎಸ್., ಐ.ಪಿ.ಎಸ್. ಮುಂತಾದ ಪರೀಕ್ಷೆಗಳಿಗೆ ಗುಪ್ತವಾಗಿ ತಯಾರಿ ನಡೆಸುತ್ತಿದ್ದರು. ಆದರೆ ಇದಕ್ಕೆಲ್ಲ ತಕ್ಕುದಾದ ಮನೆಯ ಹಿನ್ನೆಲೆ ಅಗತ್ಯವಾಗುತ್ತದೆ. ನನಗಾದರೆ ಇಲ್ಲೀವರೆಗೆ ಬಂದುದೇ ದೊಡ್ಡ ಸಂಗತಿ ಎನಿಸಿತ್ತು. ಆದ್ದರಿಂದ ಅಷ್ಟಕ್ಕೆ ತೃಪ್ತನಾಗಿ ಲೆಕ್ಚರರ್ ಕೆಲಸಕ್ಕೆ ಸೇರಿದೆ. ಇಂಗ್ಲಿಷ್ ಎಂ.ಎ. ಇದ್ದರೆ ಲೆಕ್ಚರರ್ ಕೆಲಸವಂತೂ ಆಗಿನ ಕಾಲದಲ್ಲಿ ಸಿಗುತ್ತಿತ್ತು.

ಒಂದು ವರ್ಷ ಉಜಿರೆಯಲ್ಲಿ ಆಗ ತಾನೇ ಆರಂಭವಾಗಿದ್ದ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ಸೇರಿದೆ. ಆದರೆ ಅಲ್ಲೇ ಮುಂದರಿಯುವ ಬಯಕೆ ನನಗೆ ಇರಲಿಲ್ಲ. ಖಾಸಗಿ ಕೆಲಸಕ್ಕಿಂತ ಸರಕಾರಿ ಕೆಲಸವೇ ಭದ್ರತೆ ಮತ್ತು ಸ್ವಾತಂತ್ರ್ಯ ದೃಷ್ಟಿಯಿಂದ ಚೆನ್ನಾಗಿರುವುದು ಅನಿಸಿದ್ದರಿಂದ ಅದಕ್ಕಾಗಿ ನಾನು ಕಾಯುತ್ತಿದ್ದೆ. ಕೇರಳದ ಕಲೀಜಿಯೇಟ್ ಸೇವೆಯಲ್ಲಿ ನೌಕರಿ ಸಿಗುವುದು ಖಂಡಿತವಿತ್ತು. ಒಂದೇ ವರ್ಷದಲ್ಲಿ ಅಲ್ಲಿ ಟ್ಯೂಟರ್ ಆಗಿ ಕೆಲಸ ಸಿಕ್ಕಿತು. ಮುಂದೆ ಲೆಕ್ಚರರೂ ಆದೆ. ಅಷ್ಟರಲ್ಲೇ ನಾನು ಕನ್ನಡದಲ್ಲಿ ಕವಿತೆ, ಕತೆ, ಲೇಖನಗಳನ್ನು ಬರೆಯಲು ಸುರು ಮಾಡಿದ್ದೆ. ಸರಕಾರಿ ನೌಕರಿಯಲ್ಲಿರುವವರು ಪುಸ್ತಕ ಪ್ರಕಟಿಸಬೇಕಾದರೆ ಪೂರ್ವಾನುಮತಿ ಪಡೆಯಬೇಕು ಎಂಬ ಒಂದು ಕಾನೂನು ಇತ್ತೆಂದು ತೋರುತ್ತದೆ. ಹಾಗೆಂದು ಮಿತ್ರರೊಬ್ಬರು ಹೇಳಿದರು. ಆದ್ದರಿಂದ ನನ್ನ ಮೊದಲ ಕವನ ಸಂಕಲನ ಪ್ರಕಟವಾಗುವ ಮೊದಲು ನಾನು ಇಂಥದೊಂದು ಅನುಮತಿಯನ್ನು ಕಲೀಜಿಯೇಟ್ ಇಲಾಖೆಯಿಂದ ಸ್ವಯಂಪ್ರೇರಣೆಯಿಂದ ಪಡೆದುಕೊಂಡೆ. ನಂತರ ಆ ಕಾನೂನಿಗೆ ಅರ್ಥವಿಲ್ಲವೆಂದು ನಾನದನ್ನು ಮನ್ನಿಸಲು ಹೋಗಲಿಲ್ಲ. ಯಾರೂ ನನ್ನ ತಂಟೆಗೆ ಬರಲಿಲ್ಲ.

ಈ ಸರಕಾರಿ ನೌಕರಿಯ ಒಂದು ಸಮಸ್ಯೆಯೆಂದರೆ ಆಗಾಗ ಆಗುತ್ತಿದ್ದ ವರ್ಗಾವಣೆ; ಅದರಲ್ಲೂ ಜೂನಿಯರ್ ಆದಷ್ಟೂ ಈ ವರ್ಗಾವಣೆಯೂ ಜಾಸ್ತಿ. ಎಲ್ಲಾ ಅಧ್ಯಾಪಕರೂ ಒಂದೋ ಪ್ರಖ್ಯಾತ ಕಾಲೇಜುಗಳಲ್ಲಿರಲು ಅಥವಾ ತಮ್ಮದೇ ಊರಿನ ಕಾಲೇಜುಗಳಲ್ಲಿರಲು ಬಯಸುತ್ತಾರೆ. ವಶೀಲಿ ಇರುವವರು ಇದನ್ನು ಪಡೆಯುತ್ತಾರೆ. ಇಲ್ಲದವರು ಇದಕ್ಕಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಇನ್ನು ಮಹಿಳೆಯರಿಗೆ ಹೆರಿಗೆ ರಜೆ ಬೇಕಾಗುತ್ತದೆ. ಮದುವೆ ಆದವರು ಈ ಕಾರಣ ಹೇಳಿ ಅನುಕೂಲಕರ ಸ್ಥಳಾಂತರ ಬಯಸುತ್ತಾರೆ. ಹೀಗೆ ಖಾಲಿಯಾದ ಜಾಗಗಳಿಗೆ ಜೂನಿಯರ್ ಅಧ್ಯಾಪಕರನ್ನು ಕಳಿಸುತ್ತಾರೆ. ಕೆಲಸಕ್ಕೆ ಸೇರಿದ ಕೆಲವೇ ವರ್ಷಗಳಲ್ಲಿ ನಾನೂ ಸಾಕಷ್ಟು ವರ್ಗಾವಣೆಗೆ ಗುರಿಯಾದೆ. ಹೋದಲ್ಲೆಲ್ಲ ತಾತ್ಕಾಲಿಕ ವಸತಿ. ಇದರಿಂದ ನನಗೆಲ್ಲೂ ಸ್ಥಿರವೆಂಬ ಭಾವನೆ ಬರಲೇ ಇಲ್ಲ. ಮಡಪ್ಪಳ್ಳಿ, ಕಲ್ಲಿಕ್ಕೋಟೆ, ಕಾಸರಗೋಡುಗಳ ಕಾಲೇಜುಗಳಲ್ಲಿ ಓಡಾಡಿದೆ.

ಜೂನಿಯರ್ ಅಧ್ಯಾಪಕರಿಗೆ ಹೆಚ್ಚಾಗಿ ಕೆಳ ತರಗತಿಗಳ ಪಾಠ ದೊರಕುತ್ತದೆ; ಅದರಲ್ಲೂ ಯಾರಿಗೂ ಬೇಡದ ಗದ್ಯ, ವ್ಯಾಕರಣ ಮತ್ತು ಲೇಖನ ರಚನೆ ಇತ್ಯಾದಿ. ವಿದ್ಯಾರ್ಥಿಗಳಿಗೂ ಈ ವಿಷಯಗಳೆಂದರೆ ಸಲಿಗೆ. ಈ ಕೆಳ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ: ಸುಮಾರು ಅರುವತ್ತು, ಎಪ್ಪತ್ತು; ಡಿಗ್ರೀ ಕ್ಲಾಸುಗಳಲ್ಲೂ ಇಂಗ್ಲಿಷ್ ಮೊದಲ ಭಾಷೆಯಾದ್ದರಿಂದ ಎಲ್ಲಾ ಸೇರಿ ಐವತ್ತು ಅರುವತ್ತು ವಿದ್ಯಾರ್ಥಿಗಳು ಇದ್ದೇ ಇರುತ್ತಿದ್ದರು. ಸಂಖ್ಯೆ ಜಾಸ್ತಿಯಾದಷ್ಟೂ ಪಾಠ ಎಂಬ ಕ್ರಿಯೆ ಕಷ್ಟವಾಗುತ್ತದೆ. ಶಿಸ್ತಿನ ಸಮಸ್ಯೆಯಂತೂ ಸರ್ವತ್ರ; ಅಲ್ಲದೆ ಅಧ್ಯಾಪಕ ಎಳಸು ಎಂದೊಡನೆ ವಿದ್ಯಾರ್ಥಿಗಳಿಗೆ ಇವನನ್ನು ಕೆಣಕಿ ಮಜಾ ತೆಗೆಯೋಣ ಎಂಬ ಕೆಟ್ಟ ಆಸೆಯೂ ಬರುತ್ತದೆ. ಹೇಗೆ ಕಲಿಸುವುದು ಎಂಬುದನ್ನು ಈ ಅಧ್ಯಾಪಕ ಕಲಿತಿರುವುದಿಲ್ಲ; ಯಾಕೆಂದರೆ ಅಧ್ಯಾಪನ ಎನ್ನುವುದು ಎಂ.ಎ.ಯಲ್ಲಿ ಅಧ್ಯಯನ ವಿಷಯವಾಗಿರುವುದಿಲ್ಲ. ಈ ಎಳೆ ಅಧ್ಯಾಪಕ ತಾನು ವಿದ್ಯಾರ್ಥಿಯಾಗಿಯೇ ಮುಂದೆ ಬಂದುದರಿಂದ ತರಗತಿ, ಪಾಠ, ಪರೀಕ್ಷೆ ಇತ್ಯಾದಿಗಳ ಸ್ವಾನುಭವ ಪಡೆದಿರುತ್ತಾನೆ ನಿಜ; ಆದರೆ ಇದೆಲ್ಲ ವಿದ್ಯಾರ್ಥಿಯಾಗಿ ಅಲ್ಲದೆ ಅಧ್ಯಾಪಕನಾಗಿ ಅಲ್ಲ.

ನಾನನ್ನುತ್ತಿರುವುದು, ಕಾಲೇಜ್ ಅಧ್ಯಾಪಕನಿಗೆ ಯಾವುದೇ ಅಧ್ಯಾಪಕ ತರಬೇತಿಯೂ ಇರುವುದಿಲ್ಲ. ಹಲವು ವರ್ಷಗಳ ನಂತರ ನಾನು ಹೈದರಾಬಾದಿಗೆ ಬಂದು ಇಂಥ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದೆ, ನಂತರ ಅಲ್ಲೇ ಪ್ರಾಧ್ಯಾಪಕನಾದೆ ಎನ್ನುವುದು ಮುಂದಿನ ವಿಷಯ. ಇಂಥ ಸಂದರ್ಭದಲ್ಲಿ ಎಳೆ ಅಧ್ಯಾಪಕ ಈ ವಿದ್ಯಾರ್ಥಿ ಸಂಖ್ಯೆಯ ಮುಂದೆ ಸಭಾಕಂಪನದಿಂದ ಗಡ ಗಡ ನಡುಗುತ್ತಾನೆ! ಯಾವ ಕಡೆಯಿಂದ ಸ್ವಲ್ಪ ಸದ್ದಾದರೂ ಆತಂಕಪಡುತ್ತಾನೆ. ಕರಿಹಲಗೆ ಕಡೆ ತಿರುಗಿ ಸುಣ್ಣದ ಕಡ್ಡಿಯಲ್ಲಿ ಬರೆಯುವುದಕ್ಕೇ ಭಯಪಡುತ್ತಾನೆ, ವಿದ್ಯಾರ್ಥಿಗಳು ತನ್ನ ಬೆನ್ನ ಹಿಂದೆ ಏನು ಮಾಡುತ್ತಾರೋ ತಿಳಿಯದೆ. ದಿನಕ್ಕೆ ಮೂರು ನಾಲ್ಕು ಕ್ಲಾಸುಗಳಿದ್ದರೆ ಒಂದೊಂದು ಕ್ಲಾಸೂ ಒಂದೊಂದು ಸವಾಲಿನಂತೆ ಅನಿಸುತ್ತದೆ. ವಿದ್ಯಾರ್ಥಿಗಳನ್ನು ಗದರಿಸಿ ಸುಮ್ಮನಿರಿಸಲು ಯತ್ನಿಸುತ್ತಾನೆ. ಅವರು ಕ್ಯಾರೇ ಮಾಡುವುದಿಲ್ಲ. ಗದರಿಸುವುದಲ್ಲದೆ ಇನ್ನೇನೂ ಮಾಡುವ ಅಧಿಕಾರ ಅವನಿಗಿಲ್ಲ; ಇದು ವಿದ್ಯಾರ್ಥಿಗಳಿಗೂ ಗೊತ್ತು. ಆದ್ದರಿಂದಲೇ ಗದರಿಸಿದಷ್ಟೂ ಅವರ ಗದ್ದಲ ಜಾಸ್ತಿಯಾಗುತ್ತದೆ. ರೊಚ್ಚಿಗೇಳುವ ಅಧ್ಯಾಪಕ ವಿದ್ಯಾರ್ಥಿಗಳ ಗೇಲಿಗೆ ವಸ್ತುವಾಗುತ್ತಾನೆ. ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಲಾಗದ ಗೌರವಚ್ಯುತಿ ಅವನನ್ನು ಬಾಧಿಸುತ್ತ ಇರುತ್ತದೆ. ಅವನ ಅಧ್ಯಾಪಕ ವ್ಯಕ್ತಿತ್ವ ಇನ್ನೂ ರೂಪುಗೊಳ್ಳುವ ಮೊದಲೇ ಸೊರಗುತ್ತದೆ. ಆತ ಅಧ್ಯಾಪಕ ವೃತ್ತಿಯನ್ನು ದ್ವೇಷಿಸಲು ಸುರುಮಾಡುತ್ತಾನೆ. ನನ್ನ ಆರಂಭದ ವರ್ಷಗಳಲ್ಲಿ ನಾನಿದೆಲ್ಲವನ್ನೂ ಅನುಭವಿಸಿದೆ.

ಸ್ವಲ್ಪ ಮಟ್ಟಿಗೆ ನಮ್ಮ ಅಂದಿನ ಶಿಕ್ಷಣ ಪದ್ಧತಿಯೇ ಇದಕ್ಕೆ ಕಾರಣ. ಆಗ ವರ್ಷದ ಕೊನೆಯಲ್ಲಿ ಮಾತ್ರ ಸಾರ್ವಜನಿಕ ಪರೀಕ್ಷೆ; ಪರೀಕ್ಷೆಗೆ ಮೊದಲು ಒಂದಷ್ಟು ಉರು ಹೊಡೆದರೆ ಪಾಸಾಗಬಹುದು. ಪ್ರಶ್ನೆ ಪತ್ರಿಕೆಗಳೂ ಇದಕ್ಕೆ ಅನುಕೂಲವಿದ್ದುವು. ಈಗ ಡಿಗ್ರಿ ಮಟ್ಟದಲ್ಲಿ ಸೆಮಿಸ್ಟರ್ ಪದ್ಧತಿಯಿದೆ. ಎಂದರೆ ವರ್ಷಕ್ಕೆ ಕನಿಷ್ಠ ಎರಡು ಸಲ ಪರೀಕ್ಷೆ ಬರುತ್ತದೆ. ಪ್ರಶ್ನೆ ಪತ್ರಿಕೆಗಳ ಸ್ವರೂಪವೂ ಬದಲಾಗಿದೆ. ಫೇಲು ಮಾಡಲು ವಿದ್ಯಾರ್ಥಿಗಳಿಗೆ ಸಮಯವಿಲ್ಲ.

ಇನ್ನು ಪಾಠದ ಕ್ರಮಕ್ಕೆ ಬಂದರೆ, ನನ್ನ ಅಧ್ಯಾಪಕರೆಲ್ಲ ಕ್ಲಾಸಿಗೆ ಬಂದು ಆಯಾದಿನದ ಪಠ್ಯಭಾಗವನ್ನು ವಿವರಿಸುತ್ತ ಭಾಷಣದ ರೀತಿಯಲ್ಲಿ ಪಾಠಮಾಡುತ್ತಿದ್ದರು. ನಾನು ಕಲಿಸಲು ಸುರುಮಾಡಿದಾಗಲೂ ಇದೇ ಭಾಷಣ ಪದ್ಧತಿ ಚಾಲ್ತಿಯಲ್ಲಿದ್ದುದು. ಲೆಕ್ಚರರ್ ಎಂದರೇ ಭಾಷಣ ಕೊಡುವವ ಎಂದರ್ಥ! ಕ್ಲಾಸಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿ ವಿಷಯ ಕೇಂದ್ರಿತವಾಗಿ ಚಿಂತಿಸಲು ಹಚ್ಚುವ ವಿಧಾನವೇ ಇರಲಿಲ್ಲ. (ಮಧುಕರ ರಾವ್ ಮಾತ್ರವೇ ಕೆಲವೊಮ್ಮೆ ಹೀಗೆ ಮಾಡುತ್ತಿದ್ದರು ಎಂದರೆ ಅವರ ದೂರದರ್ಶಿತ್ವ ಗೊತ್ತಾಗುತ್ತದೆ.) ಆದ್ದರಿಂದ ವಿದ್ಯಾರ್ಥಿ ಕೇವಲ ಶ್ರಾವಕ, ಪ್ರೇಕ್ಷಕ ಆಗಿರುತ್ತಾನೆ. ಇಡೀ ದಿನ ಹೀಗೆ ಅಧ್ಯಾಪಕರಿಂದ ಬೋರು ಹೊಡೆಸಿಕೊಳ್ಳುವುದು ಯಾವ ವಿದ್ಯಾರ್ಥಿಗೆ ತಾನೆ ಬೇಕಾಗಿರುತ್ತದೆ?

ಸಾಂಪ್ರದಾಯಿಕ ತರಗತಿ ವಿನ್ಯಾಸವನ್ನು ಗಮನಿಸಿ. ಇಲ್ಲೊಂದು ಕಡೆ ಪ್ಲಾಟ್ ಫಾರಮ್ ಇರುತ್ತೆ. ಅದು ಅಧ್ಯಾಪಕ ನಿಂತುಕೊಳ್ಳುವುದಕ್ಕೆ, ಅಥವಾ ಕೂತುಕೊಳ್ಳುವುದಕ್ಕೆ. ಅಧ್ಯಾಪಕನ ಹಿಂದೆ ಕರಿ ಹಲಗೆ ಇರುತ್ತದೆ, ಅದು ಅಧ್ಯಾಪಕನಿಗೆ ಬರೆಯುವುದಕ್ಕೆ. ಮುಂದೆ ಅಧ್ಯಾಪಕನಿಗೆ ಮುಖ ಮಾಡಿ ವಿದ್ಯಾರ್ಥಿಗಳು ಕುಳಿತಿರುತ್ತಾರೆ. ಇದೊಂದು ಭಾಷಣದ ಸಭೆಯ ಹಾಗೆ; ಇದು ಚರ್ಚಿನ ಪುಲ್ಪಿಟ್ ಗಳನ್ನೂ ಹೋಲುತ್ತದೆ. ಇಲ್ಲಿ ಮಾತಾಡುವುದು ಒಬ್ಬನೇ, ಎಂದರೆ ಅಧ್ಯಾಪಕ ಮಾತ್ರ. ಕರಿ ಹಲಗೆಯಲ್ಲಿ ಬರೆಯುವವನೂ ಅವನೇ. ಅಪರೂಪಕ್ಕೆ ಅಧ್ಯಾಪಕ ವಿದ್ಯಾರ್ಥಿಗಳಿಗೆ ಪ್ರಶ್ನೆಯೊಂದನ್ನು ಕೇಳಬಹುದು; ಆದರೆ ಇದು ಬೆಚ್ಚಿಸುವುದಕ್ಕೇ ವಿನಾ ಯೋಚಿಸುವುದಕ್ಕಲ್ಲ. ವಿದ್ಯಾರ್ಥಿಗಳಿಗೆ ಏನೂ ಗೊತ್ತಿಲ್ಲ; ಕಲಿಸುವುದೆಂದರೆ ಜ್ಞಾನಸಂವಹನ (ಅಧ್ಯಾಪಕನಿಂದ ವಿದ್ಯಾರ್ಥಿಗಳತ್ತ ಒಮ್ಮುಖವಾಗಿ) ಎಂಬ ಪೂರ್ವಕಲ್ಪನೆ ಇಲ್ಲಿ ಕೆಲಸಮಾಡುತ್ತದೆ. ನಾನು ವಿದ್ಯಾರ್ಥಿಯಾಗಿ ಕಲಿತುದು, ಅಧ್ಯಾಪಕನಾಗಿ ಕಲಿಸಲು ಸುರುಮಾಡಿದುದು ಇದೇ ಹಿನ್ನೆಲೆಯಲ್ಲಿ.