ಸಮುದ್ರವೆಂದರೆ ಯಾಕೋ ಸಸಾರ. ಬೇಕಾದಷ್ಟು ಜಲರಾಶಿ ಇದೆಯಲ್ಲ ಎಂಬ ಉದಾಸೀನ. ಉಪ್ಪು ನೀರಿನಿಂದ ಪ್ರಯೋಜನವಿಲ್ಲ ಎಂಬ ನಿರ್ಲಕ್ಷ್ಯ. ಆದರೆ ಈ ಉಪ್ಪುನೀರಿನ ರಾಶಿಯು ಅಪಾರ ಪ್ರಮಾಣದ ಜೀವಸಂಕುಲದ ಮಡಿಲು. ಅದು ಭೂಮಿಯನ್ನು ಅಮ್ಮನಂತೆ ಆಲಂಗಿಸಿ, ಕಾಪಾಡುತ್ತದೆ. ಸಮುದ್ರದ ಸೆರಗಿನಲ್ಲೇ ಮನುಕುಲವು ಬೆಚ್ಚನೆ ಬಾಳು ಸಾಗಿಸುತ್ತಿದೆ.
ಹಾಗಿದ್ದರೆ ಸಮುದ್ರದ ಆರೋಗ್ಯ ಈಗ ಹೇಗಿದೆ ಎಂಬ ಬಗ್ಗೆ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಪುಟ್ಟ ವಿಶ್ಲೇಷಣೆ ಇಲ್ಲಿದೆ.

 

ಸಮುದ್ರವನ್ನು ನಾವು ಎಷ್ಟೊಂದು ಅವಲಂಬಿಸಿದ್ದೇವೆ..! ಅಪಾರ ಜಲರಾಶಿಯನ್ನು ಚಾಕಚಕ್ಯತೆಯಿಂದ ಬಳಸಿಕೊಂಡು ಮನುಷ್ಯರು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದನ್ನು ಕಲಿತಿದ್ದಾರೆ. ಮನುಷ್ಯರಿಗೆ ಇರುವ ಬುದ್ಧಿವಂತಿಕೆಯಿಂದಾಗಿ ಪ್ರಕೃತಿಯ ಮೇಲೆ ಅಧಿಪತ್ಯ ಸಾಧಿಸುವುದು ಸಾಧ್ಯವಾಗಿದೆ. ಹಾಗಾದರೆ ಈ ಅಗಾಧವಾದ ಸಮುದ್ರದಲ್ಲಿ ಮನುಷ್ಯರು ನಡೆಸುವ ಅತೀವ ಚಟುವಟಿಕೆಗಳನ್ನು ಸಮುದ್ರ ತಾಳಿಕೊಳ್ಳುತ್ತದೆಯೇ? ಮುಖ್ಯವಾಗಿ ಸಮುದ್ರದಲ್ಲಿರುವ ಜೀವ ಪರಿಸರ ವ್ಯವಸ್ಥೆಯು ಮಾನವ ಚಟುವಟಿಕೆಗಳನ್ನು ತಾಳಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿಲ್ಲ.

ಇತ್ತೀಚೆಗೆ ಅಂದರೆ ಮಾರ್ಚ್ 25ಕ್ಕೆ ಈಜಿಪ್ಟ್ ನ ಸೂಯೆಜ್ ಕಾಲುವೆಯಲ್ಲಿ ಜಪಾನ್ ಮೂಲದ ಎವರ್ ಗ್ರೀನ್ ಹಡಗು ಸಿಕ್ಕಿಹಾಕಿಕೊಂಡಿತ್ತು. ಮಾನವ ನಿರ್ಮಿತ ಸೂಯೆಜ್ ಕಾಲುವೆಯು ಆಫ್ರಿಕಾ ಖಂಡವನ್ನು ಬಳಸದೇ ಏಷ್ಯಾ ಮತ್ತು ಯುರೋಪ್ ನಡುವೆ ಸಂಪರ್ಕ ಕಲ್ಪಿಸಬಲ್ಲುದು. 59 ಮೀಟರ್ ಅಗಲದ ಆ ಕಂಟೇನರ್ ಹಡಗು, ಕಾಲುವೆಯುದ್ದಕ್ಕೂ ವಾಲಿಕೊಂಡು ನಿಂತಿದ್ದರಿಂದ ಐದು ದಿನಗಳ ಕಾಲ ಈ ಕಾಲುವೆಯಲ್ಲಿ ಹಡಗು ಸಂಚಾರ ಬಂದ್ ಆಗಿತ್ತು. ಹಾಗಾಗಿ ಸಮುದ್ರದಲ್ಲಿ ನಿರ್ಮಾಣವಾದ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕೊಂಡ ಹಡಗುಗಳ ಸಂಖ್ಯೆ ಬರೋಬ್ಬರಿ 369. ವಿವಿಧ ರಾಷ್ಟ್ರಗಳ ಸರಕು ಸಾಗಾಣಿಕೆಯ ಹಡಗುಗಳು ಹೀಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಇಡೀ ಜಗತ್ತಿನ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಯಿತು. ಮಧ್ಯಪ್ರಾಚ್ಯದಿಂದ ಜಗತ್ತಿನ ವಿವಿಧೆಡೆಗೆ ತೈಲ ಸಾಗಿಸುವ ಹಡಗುಗಳು, ಈ ಕಾಲುವೆಯಲ್ಲಿ ಕಾಯುತ್ತ ನಿಲ್ಲಬೇಕಾಯಿತು. ಕೆಲವು ಹಡಗುಗಳು ಹೀಗೆ ನಿರ್ಮಾಣವಾದ ಟ್ರಾಫಿಕ್ ಜಾಮ್ ನಲ್ಲಿ ಕಾಯದೇ ಆಫ್ರಿಕಾವನ್ನು ಸುತ್ತುವರೆದು ಅಂದರೆ ಒಂಭತ್ತು ಸಾವಿರ ಕಿಮೀ ಹೆಚ್ಚುವರಿ ದೂರವನ್ನು ಕ್ರಮಿಸಿದ್ದರಿಂದ, ಬೆಲೆ ಏರಿಕೆಯ ಬಿಸಿಯೂ ಜನರನ್ನು ತಟ್ಟಲಾರಂಭಿಸಿತು.

(ಸೂಯೆಜ್ ಕಾಲುವೆಯ ಸ್ಯಾಟಲೈಟ್ ನೋಟ)

ಈ ಕಾಲುವೆಯಲ್ಲಿ ಕಳೆದ ವರ್ಷ ಹತ್ತೊಂಭತ್ತು ಸಾವಿರ ಹಡಗುಗಳು ಸಂಚರಿಸಿದ್ದು ಒಂದು ಶತಕೋಟಿ ಟನ್ ಗಿಂತ ಹೆಚ್ಚು ಸರಕು ಸಾಗಿಸಿದ್ದವು. ಮಳೆಗಾಳಿಯಿಂದಾಗಿ ಸೂಯೆಜ್ ಕಾಲುವೆಯ ದಂಡೆಯ ಕೆಸರಿನ ದಿಬ್ಬಕ್ಕೆ ಸಿಕ್ಕಿಹಾಕಿಕೊಂಡಿದ್ದ ಹಡಗನ್ನು ಅಂತೂ ಇಂತೂ ತೆರವು ಮಾಡಿಸಿದ ಬಳಿಕ, ದಿನದ ಇಪ್ಪತ್ನಾಲ್ಕು ಗಂಟೆಯೂ ಈ ಕಾಲುವೆಯಲ್ಲಿ ನಿರಂತರವಾಗಿ ಹಡಗುಗಳು ಸಂಚರಿಸಲು ವ್ಯವಸ್ಥೆ ಮಾಡಲಾಯಿತು. ಹಾಗಾದರೂ ಬಾಕಿ ಉಳಿದ ಹಡಗುಗಳ ಸಂಚಾರಕ್ಕೆ ಮೂರುವರೆ ದಿನಗಳು ಬೇಕಾಗಬಹುದು ಎಂದು ಸೂಯೆಜ್ ಕಾಲುವೆ ಪ್ರಾಧಿಕಾರ ಹೇಳಿತ್ತು.

ಕೋವಿಡ್ 19 ಸೋಂಕಿನ ಬಾಧೆಯಿಂದ ಕಂಗಾಲಾಗಿರುವ ಜಗತ್ತು, ಮಾರ್ಚ್ ಕೊನೆಯ ವಾರದಲ್ಲಿ ಈ ಹಡಗಿನಿಂದಾಗಿ ಉಂಟಾದ ಅವಾಂತರದಿಂದಾಗಿ ಕಂಗೆಟ್ಟಿತ್ತು. ಸರಕುಗಳ ಅಭಾವ, ಬೆಲೆ ಏರಿಕೆಯ ಬಿಸಿ ಹೆಚ್ಚುವ ಬಗ್ಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಚಿಂತಿತವಾಗಿದ್ದವು. ಈ ಸೂಯೆಜ್ ಕಾಲುವೆಯಲ್ಲಿ ಸಂಚಾರ ವ್ಯತ್ಯಾಸ ಉಂಟಾದ ಘಟನೆಯು ಮನುಷ್ಯರು ಸಮುದ್ರವನ್ನು ಜಲಮಾರ್ಗವನ್ನು ಹೇಗೆ ಮತ್ತು ಎಷ್ಟೊಂದು ತೀವ್ರವಾಗಿ ಅವಲಂಬಿಸಿದ್ದಾರೆ ಎಂಬ ವಿಚಾರವನ್ನಷ್ಟೇ ಹೇಳುತ್ತದೆ.

ಇನ್ನು ಭಾರೀ ಪ್ರಮಾಣದ ತ್ಯಾಜ್ಯಕ್ಕೆ ಭಾರವನ್ನು ಕಟ್ಟಿ ಅದನ್ನು ಸಮುದ್ರಕ್ಕೆ ಸುರಿಯುವ, ರಾಸಾಯನಿಕಗಳನ್ನು ಚೆಲ್ಲಿ ಬಿಡುವ, ಹಡಗುಗಳ ಅಪಘಾತದಿಂದ ಮಾಲಿನ್ಯ ಉಂಟಾಗುವ, ಹಡಗುಗಳಿಂದ ಕಚ್ಚಾತೈಲ ಸೋರಿಕೆಯಾಗುವ, ವಿಷ ವಸ್ತುಗಳ ಸೋರಿಕೆ ಆಗುವ ಪ್ರಕರಣಗಳೆಲ್ಲವೂ, ಸಮುದ್ರದ ಆರೋಗ್ಯವನ್ನು ಹದಗೆಡಿಸುವಂಥವೇ.

ಸಮುದ್ರದಲ್ಲಿರುವ ವಿವಿಧ ರೂಪದ ಸಂಪತ್ತನ್ನು ಪಡೆಯುವ ಪ್ರಯತ್ನಗಳು ಕೂಡ ಅಪಾರ ಹಾನಿ ಉಂಟು ಮಾಡುತ್ತವೆ. ಉದಾಹರಣೆಗೆ ಮೀನುಗಾರಿಕೆ ಕ್ಷೇತ್ರವನ್ನು ಗಮನಿಸಿದರೆ, ಮೀನುಗಾರಿಕೆಯ ನೆಪದಲ್ಲಿ ಸಮುದ್ರವನ್ನೇ ಚೊಕ್ಕಟವಾಗಿ ಗುಡಿಸಿಬಿಡುವಷ್ಟು ಸಾಮರ್ಥ್ಯವನ್ನು ಮನುಷ್ಯರು ಪಡೆದಿದ್ದಾರೆ. ತಂತ್ರಜ್ಞಾನ ಬಳಸಿ ಮೀನುಗಾರಿಕೆ ನಡೆಸುವ ವಿನಾಶಕಾರೀ ಸ್ವರೂಪವು ದಂಗು ಬಡಿಯುವಂತಿದೆ. ತಂತ್ರಜ್ಞಾನ ಆಧಾರಿತ ವಿನಾಶಕಾರೀ ವಿಧಾನಗಳಲ್ಲಿ ‘ಬಾಟಂ ಟ್ರಾಲ್ ಬೋಟಿಂಗ್ʼ ಎಂಬುದು ಅತ್ಯಂತ ಕೆಟ್ಟ ವಿಧಾನ. ಸಮುದ್ರದ ತಳಕ್ಕೆ ತೆರಳಿ ಅಲ್ಲಿ ಎಕರೆಗಟ್ಟಲೆ ಜಾಗಕ್ಕೆ ಎಳೆಬಲೆ (ಸಣ್ಣ ಕಣ್ಣಿನ ಬಲೆ) ಯನ್ನು ಹರಡಿ ಅಲ್ಲಿಂದ ಇಡೀ ಬಲೆಯನ್ನು ಸರಕ್ಕನೇ ಮೇಲೆತ್ತಿಬಿಡುವ ತಂತ್ರವಿದು. ಚೀಲದಂತೆ ಮೇಲಕ್ಕೆದ್ದು ಬರುವ ಬಲೆಯಲ್ಲಿ ಕೇವಲ ಮೀನುಗಳಷ್ಟೇ ಇರುವುದಿಲ್ಲ. ಸಮುದ್ರದ ಲಕ್ಷೋಪಲಕ್ಷ ಜೀವಿಗಳು, ಜೀವವ್ಯವಸ್ಥೆ, ಹುಳುಹುಪ್ಪಟೆಗಳೆಲ್ಲವೂ ಅದರೊಳಗೆ ಸೇರಿರುತ್ತದೆ. ಅಷ್ಟೇ ಈ ತಂತ್ರಗಾರಿಕೆಯಿಂದಾಗಿ ತಿನ್ನಲು ಅಗತ್ಯವಿಲ್ಲದ ಡಾಲ್ಫಿನ್, ಆಮೆ, ವೇಲ್ ಮುಂತಾದವುಗಳ ಮರಿಗಳಿಗೂ ಹಾನಿಯಾಗುತ್ತವೆ.

ಮನುಷ್ಯರಿಗೆ ಇರುವ ಬುದ್ಧಿವಂತಿಕೆಯಿಂದಾಗಿ ಪ್ರಕೃತಿಯ ಮೇಲೆ ಅಧಿಪತ್ಯ ಸಾಧಿಸುವುದು ಸಾಧ್ಯವಾಗಿದೆ. ಹಾಗಾದರೆ ಈ ಅಗಾಧವಾದ ಸಮುದ್ರದಲ್ಲಿ ಮನುಷ್ಯರು ನಡೆಸುವ ಅತೀವ ಚಟುವಟಿಕೆಗಳನ್ನು ಸಮುದ್ರ ತಾಳಿಕೊಳ್ಳುತ್ತದೆಯೇ?

ಹೀಗೆ ತಳದಿಂದ ಮೇಲೆತ್ತುವ ಬಲೆಯ ಚೀಲದಲ್ಲಿರುವ ಎಲ್ಲ ಜೀವಿಗಳೂ ಮನುಷ್ಯ ಸೇವನೆಗೆ ಬೇಕಾಗಿರುವುದಿಲ್ಲ. ಮೀನುಗಳು ಜಾಸ್ತಿ ಪ್ರಮಾಣದಲ್ಲಿ ಸಿಗಲಿ, ದೊಡ್ಡ ಲಾಭ ಬರಲಿ ಎಂಬ ಆಸೆಯಿಂದ ಈ ತಂತ್ರಗಾರಿಕೆಯನ್ನು ಬಳಸಲಾಗುತ್ತದೆ. ಆದರೆ ಹೀಗೆ ಸಮುದ್ರದ ಜೀವ ಪರಿಸರವನ್ನು ಹಾಳು ಮಾಡಿದಲ್ಲಿ, ಅದನ್ನು ಮತ್ತೆಂದೂ ಸರಿ ಮಾಡುವುದು ಸಾಧ್ಯವಾಗುವುದಿಲ್ಲ. ಸಮುದ್ರದ ಮೀನುಗಳಷ್ಟೇ ಅಲ್ಲ, ಜೀವ ಸಂಕುಲವನ್ನೇ ಕೊಂದು ಹಾಕುತ್ತದೆ. ವರ್ಲ್ಡ್ ವೈಲ್ಡ್ ಲೈಫ್ ಫಂಡ್ (WWF) ಅಂದಾಜಿನ ಪ್ರಕಾರ, ತಂತ್ರಜ್ಞಾನ ಆಧಾರಿತ ವಿನಾಶಕಾರೀ ಪದ್ಧತಿಯಲ್ಲಿಯೇ ನಾವು ಮೀನುಗಾರಿಕೆ ಮುಂದುವರೆಸಿದರೆ, 2048ರ ವೇಳೆಗೆ ಸಮುದ್ರದಲ್ಲಿ ಮೀನುಗಳೇ ಉಳಿದಿರುವುದಿಲ್ಲ!

ಬ್ಲಾಸ್ಟ್ ಫಿಶ್ಶಿಂಗ್ ಅಥವಾ ಡೈನಮೈಟ್ ಫಿಶ್ಶಿಂಗ್ ಪದ್ಧತಿಯನ್ನು ಜಗತ್ತಿನ ಹೆಚ್ಚಿನ ದೇಶಗಳು ನಿಷೇಧಿಸಿವೆ. ಆದರೆ ಆಗ್ನೇಯಾ ಏಷ್ಯಾ ಭಾಗದಲ್ಲಿ ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ ಎನ್ನಲಾಗಿದೆ. ಸಮುದ್ರದಾಳದಲ್ಲಿ ಮೀನಿನ ಹಿಂಡುಗಳನ್ನು ಗುರುತಿಸಿ ಅಲ್ಲಿ ಸ್ಫೋಟ ನಡೆಸಿ, ತಕ್ಷಣವೇ ಬಲೆಬೀಸಿ ಅವುಗಳನ್ನು ಕಬಳಿಸಲಾಗುತ್ತದೆ. ಈ ಸ್ಫೋಟದ ಸದ್ದಿಗೆ, ಎಷ್ಟೋ ಸಮುದ್ರ ಜೀವಿಗಳು ಸತ್ತೇ ಹೋಗುತ್ತವೆ.

ಭೂಭಾಗದಲ್ಲಿ ಮನುಷ್ಯರು ಹೊಂದಿರುವ ಸಂಪತ್ತನ್ನು ನಿರ್ವಹಣೆ ಮಾಡಲು, ಸಾಗಾಟ ಮಾಡಲು ಸಮುದ್ರದ ಅಗತ್ಯವಿದೆ ಎಂಬುದು ಒಂದು ವಿಚಾರವಾದರೆ, ನಮಗೆ ಅಗತ್ಯವಿರುವ ಇನ್ನಷ್ಟು ಸಂಪತ್ತನ್ನು ಸಮುದ್ರವೇ ಕೊಡುತ್ತದೆ ಎಂಬುದು ಮತ್ತೊಂದು ವಿಚಾರ. ಅಷ್ಟೇ ಅಲ್ಲ, ಭೂಭಾಗದಲ್ಲಿರುವ ಜೀವಿಗಳಿಗೆ ಉಸಿರಾಡಲು ಬೇಕಾದ ಆಮ್ಲಜನದ ಪೈಕಿ ಅರ್ಧಭಾಗದಷ್ಟು ಆಮ್ಲಜನಕವನ್ನು ಸಮುದ್ರಾಕಾಶವು ಕೊಡುತ್ತದೆ. ಆದರೆ ಸಮುದ್ರದ ಆರೋಗ್ಯದತ್ತ ಮನುಷ್ಯರು ಮಾತ್ರ ಕಿಂಚಿತ್ತೂ ಗಮನ ಹರಿಸುವುದಿಲ್ಲವಲ್ಲ. ಅತ್ತ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರದ ಜೀವಿಗಳು ಕಂಗಾಲಾಗಿವೆ. ಇತ್ತ ಮನುಷ್ಯರ ವಿಪರೀತ ಚಟುವಟಿಕೆಗಳು ಅವುಗಳ ನೆಲೆಗಳನ್ನು ನಾಶ ಮಾಡುತ್ತಿವೆ.

(ಫೋಟೋ: ಶ್ರೀಹರ್ಷ)

ಈ ಎಲ್ಲ ಅಂಶಗಳನ್ನು ಗಮನಿಸಿದ ಸರ್ಕಾರೇತರ ಸಂಸ್ಥೆ ‘ಗ್ರೀನ್ ಪೀಸ್’ ಸಮುದ್ರದ ರಕ್ಷಣೆಯ ಕುರಿತು ಅಭಿಯಾನವೊಂದನ್ನು ಕೈಗೆತ್ತಿಕೊಂಡಿದೆ. ಮನುಷ್ಯರಿಗೆ ಮುಂದಿನ ದಿನಗಳಲ್ಲಿಯೂ ಕ್ಷೇಮಕರವಾದ ಪರಿಸರ ಸಿಗಲಿ ಎಂಬ ಪರೋಕ್ಷ ಆಶಯದ ಮತ್ತೊಂದು ರೂಪವೇ “ಸಮುದ್ರ ರಕ್ಷಣೆ”ಯ ಈ ಪ್ರಯತ್ನ. ಜಗತ್ತಿನ ವಿವಿಧೆಡೆಗಳಲ್ಲಿ ಈಗಾಗಲೇ ಇರುವ ಸಾಗರ ಸಂರಕ್ಷಣಾ ವಲಯ (ಓಷಿಯನ್ ಸ್ಯಾಂಕ್ಚಯರಿ)ಯವನ್ನು ಸಂಪರ್ಕಿಸಿ, ಆ ಪ್ರದೇಶವನ್ನು ಕಟ್ಟುನಿಟ್ಟಾಗಿ ಕಾಪಿಡುವಂತೆ ಆಗ್ರಹಿಸುತ್ತಿದೆ. ಭಾರತದಲ್ಲಿ ಇಂತಹ ಆರು ಸಂರಕ್ಷಿತ ವಲಯಗಳಿವೆ. ಹೀಗೆ ಕಾಪಿಟ್ಟ ಲಕ್ಷಗಟ್ಟಲೆ ಎಕರೆ ಸಮುದ್ರ ವ್ಯಾಪ್ತಿಯಲ್ಲಿ ಯಾರೂ, ವಿನಾಶಕಾರೀ ತಂತ್ರಗಾರಿಕೆ ಬಳಸಿ ಚಟುವಟಿಕೆಗಳನ್ನು ನಿರ್ವಹಿಸುವಂತಿಲ್ಲ.

ವಿಶ್ವಸಂಸ್ಥೆಯಲ್ಲಿ, ಜಗತ್ತಿನ ವಿವಿಧ ದೇಶಗಳ ಸರ್ಕಾರಗಳು ‘ಜಾಗತಿಕ ಸಾಗರ ಒಪ್ಪಂದ’ವೊಂದನ್ನು ಮಾಡಿಕೊಂಡು ಅದಕ್ಕೆ ಬದ್ಧರಾಗಿ ನಡೆದುಕೊಂಡರೆ, ಸಮುದ್ರದ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳಬಹುದೇನೋ ಎಂಬ ತರ್ಕ ಈ ಸಂಸ್ಥೆಯದ್ದು. ಈ ಸಂದೇಶವನ್ನು ಹೊತ್ತು, ವಿವಿಧ ದೇಶಗಳ ಜನರ ಗಮನ ಸೆಳೆದು ಜಾಗೃತಿ ಸೃಷ್ಟಿಸುವ ಆಶಯದೊಂದಿಗೆ, ಗ್ರೀನ್ ಪೀಸ್ ಶಿಪ್ ಆರ್ಕಟಿಕ್ ಸನ್ ರೈಸ್ ಈಗಾಗಲೇ ಹಿಂದೂ ಮಹಾಸಾಗರದಲ್ಲಿ ತೇಲುತ್ತ ಸಾಗಿದೆ. ಸಮುದ್ರ ಎದುರಿರುವ ಸವಾಲುಗಳ ಬಗ್ಗೆ ಮಾಹಿತಿ ನೀಡುವುದು ಈ ಹಡಗಿನ ಉದ್ದೇಶ. ಈಗಾಗಲೇ ಹಿಂದೂ ಮಹಾಸಾಗರದ ವಾಯವ್ಯ ಭಾಗದಲ್ಲಿ ಅಕ್ರಮ ಮೀನುಗಾರಿಕೆಯ ವರಸೆಗಳನ್ನು ಅದು ಗುರುತಿಸಿದೆ. ‘ಸಯಾ ಡಿ ಮಲಾ’ ದಂಡೆಯಲ್ಲಿ ಸಮುದ್ರ ಹುಲ್ಲುಗಾವಲಿದೆ. ಇಂಗಾಲವನ್ನು ಹೀರುವ ಜಗತ್ತಿನ ವಿಸ್ತಾರವಾದ ಹುಲ್ಲುಗಾವಲುಗಳ ಪೈಕಿ ಇದೂ ಒಂದಾಗಿದೆ. ಇಂತಹ ಮುಖ್ಯ ವಿಚಾರಗಳನ್ನು ಮುನ್ನೆಲೆಗೆ ತಂದು ಸರ್ಕಾರಗಳ ಮನವೊಲಿಸಿ ಜಾಗತಿಕ ಒಪ್ಪಂದ ರೂಪಿಸಿದರೆ 2030ರ ವೇಳೆಗೆ ಶೇ 30ರಷ್ಟು ಸಮುದ್ರ ಭಾಗವನ್ನು ಕಾಪಿಡಬಹುದೇನೋ.

ಹೀಗೆ ಸಮುದ್ರವನ್ನು ಮನುಷ್ಯರ ಚಟುವಟಿಕೆಗಳಿಂದ ಮುಕ್ತಗೊಳಿಸಿದರೆ, ಅಲ್ಲಿ ಜೀವಿಸಂಕುಲಗಳು ತಮ್ಮಷ್ಟಕ್ಕೆ ತಾವೇ ಬದುಕುತ್ತ, ಈ ತಾಪಮಾನ ಏರಿಕೆಯ ವಿರುದ್ಧ ಹೋರಾಡುತ್ತ, ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದು ಅಭಿಯಾನದ ಹಿಂದಿರುವ ಉದ್ದೇಶ.

(ಫೋಟೋಗಳು: ಅಂತರ್ಜಾಲ)

ಸಂರಕ್ಷಣೆ ಎನ್ನುವುದು ಜಾಗತಿಕ ಮಟ್ಟದಲ್ಲಿ ನಡೆದರೆ ಒಳ್ಳೆಯದು ಎನ್ನುತ್ತಾರೆ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಸಂಶೋಧಕರಾದ ಡಾ. ರಾಮಚಂದ್ರ ಭಟ್. “ಸಂರಕ್ಷಣೆಯ ನಿಟ್ಟಿನಲ್ಲಿ ಒಪ್ಪಂದವೊಂದಕ್ಕೆ ದೇಶಗಳು ಸಹಿ ಹಾಕುವುದಷ್ಟೇ ಅಲ್ಲ, ಈ ನಿಟ್ಟಿನಲ್ಲಿ ನಿಯಮ ರೂಪಿಸಲು ಉತ್ಸುಕವಾಗಬೇಕು. ಅವುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಕಾರವಾರದ ಸೀ ಬರ್ಡ್ ನೌಕಾನೆಲೆಯು 8,500 ಎಕರೆ ಪ್ರದೇಶವನ್ನುಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿದೆ. ನೌಕಾನೆಲೆಯು ಅತ್ತ ವಿಶಾಲವಾದ ಸಮುದ್ರದ ವ್ಯಾಪ್ತಿಯಲ್ಲಿಯೂ ಸಾರ್ವಜನಿಕ ಚಟುವಟಿಕೆಗಳನ್ನು ನಿಷೇಧಿಸಿದೆ. ಅಂತಹ ಪ್ರದೇಶಗಳನ್ನೂ ಸಮುದ್ರ ಜೀವಿಗಳ ರಕ್ಷಣೆಗಾಗಿ ಮೀಸಲಿಡಬಹುದು” ಎಂದು ಡಾ. ಭಟ್ ಹೇಳುತ್ತಾರೆ.

‘ನದಿಯು ಸಮುದ್ರವನ್ನು ಸೇರುವ ಅಳಿವೆ ಬಾಗಿಲುಗಳು ಸಿಆರ್ ಝಡ್ 1ರ ವ್ಯಾಪ್ತಿಯಲ್ಲಿ ಉಲ್ಲೇಖವಾದರೂ, ಅದನ್ನು ಸಂರಕ್ಷಿತ ಪ್ರದೇಶವೆಂದು ಸರ್ಕಾರಗಳು ಅಧಿಸೂಚನೆ ಹೊರಡಿಸಲು ಹಿಂದೇಟು ಹಾಕುತ್ತವೆ. ಯಾವುದೇ ಒಪ್ಪಂದಗಳು, ಕಾನೂನುಗಳು ಇರಲಿ, ಅವು ಎಷ್ಟರ ಮಟ್ಟಿಗೆ ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತಿವೆ ಎಂಬ ಹಂತದಲ್ಲಿ ಅವುಗಳ ಯಶಸ್ಸು ಅಡಗಿದೆ’ ಎಂಬುದು ಅವರ ನಿಲುವು.


ನೀರು ನೆಲ ಗಾಳಿಯ ಸಂರಕ್ಷಣೆಯ ವಿಧಾನಗಳು ಯಾವುದೇ ಆಗಿರಲಿ, ಅವುಗಳು ದೀರ್ಘಕಾಲ ಉಳಿಯಬೇಕು ಎಂಬ ಆಶಯ ಸಂರಕ್ಷಕರ ಮನಸ್ಸಿನಲ್ಲಿದ್ದಾಗ, ಒಪ್ಪಂದಗಳು, ನಿಯಮಗಳು ಜಾರಿಯಲ್ಲಿರುತ್ತವೆ. ಜೊತೆಗೆ ಮಾಲಿನ್ಯ ಸೃಷ್ಟಿಯಾಗದಂತೆ ಜಾಗೃತಿ ಮೂಡಿಸುವುದು ಅಷ್ಟೇ ಅಗತ್ಯ.