”ಎಲ್ಲಿನೋಡಿದರಲ್ಲಿ ನೀರು ಕಾಣಸಿಗುವ ಈ ದೇಶದಲ್ಲಿ ಈಜು ಕಲಿಯುವುದನ್ನು ಜನರು ಕಡ್ಡಾಯವೆಂಬಂತೆ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳು ಹುಟ್ಟಿ ಮೂರು ತಿಂಗಳಾದ ಕೂಡಲೇ ಅವರನ್ನು ನೀರಿಗೆ ಪರಿಚಯಿಸುತ್ತಾರೆ. ಆ ಮಕ್ಕಳು ನಾಲ್ಕು, ಐದು, ಆರು ವರ್ಷದವರಾಗುತ್ತಿದ್ದಂತೆಯೇ ಈಜು ಕಲಿತು ಡಿಪ್ಲೋಮ ಹೊಂದಿ, ಮೀನಿನಂತೆ ಈಜಬಲ್ಲವರಾಗುತ್ತಾರೆ.ಹಾಗಾಗಿ ಅವರು ನೀರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗೂ ಎತ್ತಿದ ಕೈ.”
ಸೀಮಾ ಎಸ್ ಹೆಗಡೆ ಬರೆಯುವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

 

ಇದುವರೆಗೂ ನನ್ನ ಹಲವಾರು ಸ್ನೇಹಿತರು ಕೇಳಿದ್ದಾರೆ – “ನೆದರ್ ಲ್ಯಾಂಡ್ಸ್ ನಲ್ಲಿ ಇದ್ದೀರಾ? ಆ ದೇಶದ ಎಷ್ಟೊಂದು ಭಾಗಗಳು ಸಮುದ್ರ ಮಟ್ಟಕ್ಕಿಂತ ಕೆಳಗಿವೆ ಎಂದು ಕೇಳಿದ್ದೇನೆ, ನಿಜವೇ?” ಎಂದು. ಅದರ ಬಗ್ಗೆಯೇ ಬರೆಯೋಣ ಎಂದುಕೊಂಡೆ. ಹೌದು, ನೆದರ್ ಲ್ಯಾಂಡ್ಸ್ ನ 26% ನಷ್ಟು ಜಾಗ ಸಮುದ್ರಮಟ್ಟಕ್ಕಿಂತ ಕೆಳಗಿದೆ; ಕೇವಲ 50% ಜಾಗ ಮಾತ್ರ ಸಮುದ್ರ ಮಟ್ಟಕ್ಕಿಂತ ಒಂದು ಮೀಟರ್ ನಷ್ಟು ಮಾತ್ರ ಮೇಲಿದೆ!  ಪ್ರಪಂಚದ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲೊಂದಾದ  ಆಮ್ಸ್ಟರ್ಡ್ಯಾಮ್ ನ ಸ್ಪಿಪ್ ಹೋಲ್ (Skiphol ಎಂದು ಓದಬೇಕು) ವಿಮಾನ ನಿಲ್ದಾಣ  ಸಮುದ್ರಮಟ್ಟಕ್ಕಿಂತ ನಾಲ್ಕು ಮೀಟರ್ ಗಳಷ್ಟು ಕೆಳಗಡೆಯಿದೆ! ನೀವೆಂದಾದರೂ ಆ ವಿಮಾನ ನಿಲ್ದಾಣದ ಮೂಲಕ ಹಾದು ಹೋಗಿದ್ದೀರೆಂದರೆ ಸಮುದ್ರಕ್ಕಿಂತ ನಾಲ್ಕು ಮೀಟರ್ ಕೆಳಗಡೆ ಹೋಗಿಬಂದಿದ್ದೀರೆಂದು ಅರ್ಥ!

(ಬೋಟ್ ಹೌಸ್ ಗಳು)

ಬರಿಯ ವಿಮಾನ ನಿಲ್ದಾಣವೊಂದೇ ಅಲ್ಲ, ನಾವೀಗ ವಾಸವಾಗಿರುವುದೇ ಸಮುದ್ರಮಟ್ಟಕ್ಕಿಂತ ಕೆಳಗೆ! ದೇಶದ 21% ನಷ್ಟು ಜನತೆ ಸಮುದ್ರಮಟ್ಟಕ್ಕಿಂತ ಕೆಳಗಡೆಯೇ ಜೀವನ ನಡೆಸುತ್ತಿದ್ದಾರೆ! ಸರಕಾರಕ್ಕೆ ಸಂಬಂಧಿಸಿದ ವೆಬ್ ಸೈಟ್ ಒಂದಿದೆ. ಅದರಲ್ಲಿ ನಮ್ಮ ಪೋಸ್ಟ್ ಕೋಡ್ ಹಾಕಿದರೆ ನಮ್ಮ ಮನೆ ಸಮುದ್ರಮಟ್ಟಕ್ಕಿಂತ ಎಷ್ಟು ಮೇಲೆ ಅಥವಾ ಕೆಳಗಿದೆ ಎಂಬುದನ್ನು ತಿಳಿಯಬಹುದು. ನಾನೂ ಕುತೂಹಲ ತಡೆಯಲಾರದೆ ನಮ್ಮ ಊರಿನ ಕೋಡ್ ಹಾಕಿ ನೋಡಿದೆ. ನಾವು ವಾಸವಾಗಿರುವ ಮನೆಯ ಜಾಗ ಸಮುದ್ರಮಟ್ಟಕ್ಕಿಂತ 0.8 ಮೀಟರ್ ಕೆಳಗಿದೆ! ಕಳೆದ ಆರು ವರ್ಷಗಳಿಂದ ಸಮುದ್ರಕ್ಕಿಂತ ಕೆಳಗಡೆಯೇ ಬದುಕುತ್ತಿದ್ದೇವೆ, ಹಾಗೆಂದು ವಿಶೇಷ ಅನುಭವವೇನೂ ಆಗಿದ್ದಿಲ್ಲ ಬಿಡಿ. ಎಷ್ಟೋ ಜನರು ನನಗೆ “ಇದನ್ನು ಕೇಳಲಿಕ್ಕೇ ಭಯ” ಎಂದು ಹೇಳುತ್ತಾರೆ, ನಿಜ. ಆದರೆ ಡಚ್ಚರಿಗೆ ನೀರೆಂದರೆ ಭಯವೇ ಇಲ್ಲ, ಬದಲಾಗಿ ಪ್ರೀತಿ. ಅವರು ಸಾಹಸಿ ಜನರು. ನೀರಿನೊಂದಿಗೆ ಸದಾ ಸೆಣೆಸಾಡುತ್ತಾ ಬದುಕು ಕಟ್ಟಿಕೊಂಡವರು.
ತಮ್ಮ ಪಕ್ಕದಲ್ಲಿರುವ ಸಮುದ್ರ ಮತ್ತು ಸರೋವರಗಳಿಂದ ನೆಲವನ್ನು ಕಿತ್ತುಕೊಂಡು ದೇಶವನ್ನು ದೊಡ್ಡದಾಗಿಸಿದ ಯಶೋಗಾಥೆ ಅವರದ್ದು. ಆದ್ದರಿಂದ ನೆದರ್ ಲ್ಯಾಂಡ್ಸ್ ಅನ್ನು ಭೌಗೋಳಿಕವಾಗಿ ಬೆಳೆಯುತ್ತಿರುವ ದೇಶ ಎನ್ನಲು ಅಡ್ಡಿಯಿಲ್ಲ.

ನಿಜ ಹೇಳಬೇಕೆಂದರೆ ‘ನೆದರ್ ಲ್ಯಾಂಡ್ಸ್’ ಎಂಬುದನ್ನು ಇಂಗ್ಲೀಷ್ ಭಾಷೆಗೆ ಯಥಾವತ್ತಾಗಿ ಭಾಷಾಂತರಿಸಿದರೆ ‘ಲೋ ಕಂಟ್ರೀಸ್’ (Low countries) ಎಂಬ ಅರ್ಥ ಸಿಗುತ್ತದೆ. Zuiderplaspolder ಎನ್ನುವ ಜಾಗ ನೆದರ್ ಲ್ಯಾಂಡ್ಸ್ ದೇಶದಲ್ಲಿಯೇ ಸಮುದ್ರಮಟ್ಟಕ್ಕಿಂತ ಅತ್ಯಂತ ಕೆಳಗಿರುವಂಥದ್ದು. ಅದೂ ಸುಮಾರು 6.74 ಮೀಟರುಗಳಷ್ಟು! ಇಡೀ ದೇಶವೇ ಸಮತಟ್ಟಾದ ದೇಶ, ಹುಡುಕಿದರೂ ಒಂದು ಚಿಕ್ಕ ಗುಡ್ಡ ಕಾಣಿಸುವುದಿಲ್ಲ. ದೇಶದ ದಕ್ಷಿಣ ಭಾಗದಲ್ಲಿರುವ ಫಾಲ್ಸರ್ ಬಗ್ (Vaalserberg, Falserberg ಎಂದು ಓದಬೇಕು) ಒಂದು ಗುಡ್ಡ ಮಾತ್ರ ಸಮುದ್ರಮಟ್ಟದಿಂದ ಕೇವಲ 322 ಮೀಟರ್ ನಷ್ಟು ಮೇಲಿದೆ.

ನಿಜ ಹೇಳಬೇಕೆಂದರೆ ‘ನೆದರ್ ಲ್ಯಾಂಡ್ಸ್’ ಎಂಬುದನ್ನು ಇಂಗ್ಲೀಷ್ ಭಾಷೆಗೆ ಯಥಾವತ್ತಾಗಿ ಭಾಷಾಂತರಿಸಿದರೆ ‘ಲೋ ಕಂಟ್ರೀಸ್’ (Low countries) ಎಂಬ ಅರ್ಥ ಸಿಗುತ್ತದೆ. Zuiderplaspolder ಎನ್ನುವ ಜಾಗ ನೆದರ್ ಲ್ಯಾಂಡ್ಸ್ ದೇಶದಲ್ಲಿಯೇ ಸಮುದ್ರಮಟ್ಟಕ್ಕಿಂತ ಅತ್ಯಂತ ಕೆಳಗಿರುವಂಥದ್ದು. ಅದೂ ಸುಮಾರು 6.74 ಮೀಟರುಗಳಷ್ಟು! ಇಡೀ ದೇಶವೇ ಸಮತಟ್ಟಾದ ದೇಶ, ಹುಡುಕಿದರೂ ಒಂದು ಚಿಕ್ಕ ಗುಡ್ಡ ಕಾಣಿಸುವುದಿಲ್ಲ. ದೇಶದ ದಕ್ಷಿಣ ಭಾಗದಲ್ಲಿರುವ  ಫಾಲ್ಸರ್ ಬಗ್ (Vaalserberg,  Falserberg ಎಂದು ಓದಬೇಕು) ಒಂದು ಗುಡ್ಡ ಮಾತ್ರ ಸಮುದ್ರಮಟ್ಟದಿಂದ ಕೇವಲ 322 ಮೀಟರ್ ನಷ್ಟು ಮೇಲಿದೆ.

ನೆದರ್ ಲ್ಯಾಂಡ್ಸ್ ನಲ್ಲಿ ಎಲ್ಲಿ ನೋಡಿದರಲ್ಲಿ ನೀರು ಕಾಣಸಿಗುತ್ತದೆ. ದೇಶದ ಪಶ್ಚಿಮ ಭಾಗಕ್ಕೆ ಸಮುದ್ರವಾದರೆ ದೇಶದ ಒಳಗಡೆ ಹಲವಾರು ಚಿಕ್ಕ ಸರೋವರಗಳು, ಮೂರು ದೊಡ್ಡ ಮತ್ತು ಅನೇಕ ಚಿಕ್ಕ ನದಿಗಳು, ಲೆಕ್ಕಕ್ಕೇ ಸಿಗದಷ್ಟು ಕಾಲುವೆಗಳು (canals). ದೇಶದ ಬಹುತೇಕ ಪಟ್ಟಣಗಳಲ್ಲಿ ಅನೇಕ ಸುಂದರವಾದ ಕಾಲುವೆಗಳು ಕಾಣಸಿಗುತ್ತವೆ. ಹಿಂದಿನ ಕಾಲದಲ್ಲಿ ಆ ಕಾಲುವೆಗಳು ಸಾರಿಗೆ ಮಾಧ್ಯಮವಾಗಿದ್ದವಂತೆ, ಆಂತರಿಕ ಭದ್ರತೆಯನ್ನು ಒದಗಿಸುತ್ತಿದ್ದವಂತೆ. ಈ ಕಾಲುವೆಗಳನ್ನು ಎಷ್ಟು ಯೋಜನಶೀಲರಾಗಿ, ಸುಂದರವಾಗಿ ನಿರ್ಮಿಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕೇ? ಹಾಗಿದ್ದರೆ ಗೂಗಲ್ ಮ್ಯಾಪ್ಸ್ ನಲ್ಲಿ  ಆಮ್ಸ್ಟರ್ಡ್ಯಾಮ್ ನ ನಕಾಶೆಯನ್ನು ನೋಡಿ- ಅರ್ಧಚಂದ್ರಾಕೃತಿಯಲ್ಲಿ ನಿರ್ಮಿಸಿರುವಂತ ಕಾಲುವೆಗಳು ಕಾಣಿಸುತ್ತವೆ.

(ಡೈಕ್)

ಅದೆಲ್ಲಾ ಸರಿ, ಆದರೆ ಇಷ್ಟೊಂದು ನೀರನ್ನು ಡಚ್ಚರು ಹೇಗೆ ನಿಯಂತ್ರಿಸುತ್ತಾರೆ ಎಂಬ ಪ್ರಶ್ನೆ ಹುಟ್ಟುವುದು ಸಹಜ.  ಉತ್ತರ ಇಲ್ಲಿದೆ- ಅವರು ಪ್ರಪಂಚದಲ್ಲೇ ಅತ್ಯುತ್ತಮ ನೀರಿನ ತಂತ್ರಜ್ಞಾನವನ್ನು ಹೊಂದಿದ್ದಾರೆ. ಇಂದಿಗೂ ಕೂಡ ಅದರ ಬಗ್ಗೆ ವಿವಿಧ ಸಂಶೋಧನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ನೀರನ್ನು ತಡೆಯುವ ಮುಖ್ಯ ವಿಧಾನವೆಂದರೆ ಡೈಕ್ಸ್ (dikes, ತಡೆಗೋಡೆ ಎನ್ನಬಹುದು). ನೆದರ್ ಲ್ಯಾಂಡ್ಸ್ ಹಲವಾರು ಪ್ರವಾಹಗಳನ್ನು ಎದುರಿಸಿದಂಥ ದೇಶ. ನೀರಿನ ರಭಸದ ಮುಂದೆ ಪ್ರತೀಬಾರಿ ತಲೆಬಾಗಿದಾಗಲೂ ಹೊಸಹೊಸ ಪಾಠಗಳನ್ನು ಕಲಿತಿದೆ. ಜನವರಿ 1916 ರಲ್ಲಿ ಸಂಭವಿಸಿದ ಪ್ರವಾಹ ಈ ದೇಶ ಕಂಡ ಅತಿ ದೊಡ್ಡ ಪ್ರವಾಹವಂತೆ. ದೇಶದ ವಾಯುವ್ಯ ದಿಕ್ಕಿನಲ್ಲಿರುವ ಸಮುದ್ರದ (North Sea) ನೀರು ಒಳನುಗ್ಗಿ ದೇಶವನ್ನು ನುಂಗತೊಡಗಿದಾಗ ಆ ದೇಶದ  ಜನರು ಸಮುದ್ರವನ್ನೇ ಹೆಡೆಮುರಿ ಕಟ್ಟಿ 32 ಕಿಲೋಮೀಟರುಗಳಷ್ಟು ಉದ್ದದ ಡೈಕ್ ಅನ್ನು ನಿರ್ಮಿಸಿ ಮುಂದೆಂದೂ ಸಮುದ್ರ ತಮ್ಮ ತಂಟೆಗೆ ಬರದಂತೆ ಮಾಡಿಬಿಟ್ಟರು! ಅಂತಹ ಹಲವಾರು ಡೈಕ್ಸ್ ದೇಶದ ತುಂಬಾ ಅಲ್ಲಲ್ಲಿ ಕಾಣಿಸುತ್ತವೆ. ಡೈಕ್ಸ್ ಗಳ ಮೇಲೆ ಓಡಾಡುವಾಗ ಸಮುದ್ರಮಟ್ಟಕ್ಕಿಂತ ದೇಶದ ಭೂಭಾಗ ಕೆಳಮಟ್ಟದಲ್ಲಿರುವ ಅನುಭವಕ್ಕೆ ಬರುತ್ತದೆ.

ಹೊರಗಡೆಯಿಂದ ಉಕ್ಕಿಬರುವ ಸಮುದ್ರವನ್ನು ತಡೆದರು, ಆದರೆ ಒಳಗಡೆ ಹರಿದು ಪ್ರವಾಹ ಉಂಟುಮಾಡುವ ನದಿಗಳಿಗೇನು ಮಾಡುವುದು? ಅದಕ್ಕೂ ಒಂದು ನೈಸರ್ಗಿಕ ಉಪಾಯವನ್ನು ಇವರು ಕಂಡುಕೊಂಡಿದ್ದಾರೆ. ದೇಶದಲ್ಲಿ ಹರಿಯುವ ನದಿಗಳಿಗೆ ಅವುಗಳ ನೈಸರ್ಗಿಕ ಪ್ರವಾಹಕ್ಕೆ ದಾರಿಮಾಡಿಕೊಟ್ಟರು. ಅಲ್ಲಿ ಯಾವುದೇ ವಸತಿಗಳಿರದಂತೆ ಸ್ಥಳಾಂತರಿಸಿದರು. ನದಿಗಳು ತುಂಬಿ ಎಲ್ಲೆಲ್ಲೋ ಪ್ರವಾಹವಾಗುವುದನ್ನು ತಪ್ಪಿಸಿ ಅವುಗಳ ನಿರ್ದಿಷ್ಟ ಜಾಗದಲ್ಲಿ ಮಾತ್ರ ಹರಿಯಲು ಅವಕಾಶ ಕಲ್ಪಿಸಿದರು. ಇದರಿಂದಾಗಿ ದೇಶದ ಒಳಗಡೆಯಿಂದ ಹರಿಯುವ ನೀರು ಸರಾಗವಾಗಿ ಹರಿಯುವಂತಾಯಿತು. ಇಂಥ ವ್ಯವಸ್ಥೆಯನ್ನು Room for the river ಎಂದು ಕರೆಯುತ್ತಾರೆ.

(ಡೆಲ್ಟ್ ಕಾಲುವೆ)

ನೆದರ್ ಲ್ಯಾಂಡ್ಸ್ ಹಲವಾರು ಪ್ರವಾಹಗಳನ್ನು ಎದುರಿಸಿದಂಥ ದೇಶ. ನೀರಿನ ರಭಸದ ಮುಂದೆ ಪ್ರತೀಬಾರಿ ತಲೆಬಾಗಿದಾಗಲೂ ಹೊಸಹೊಸ ಪಾಠಗಳನ್ನು ಕಲಿತಿದೆ. ಜನವರಿ 1916 ರಲ್ಲಿ ಸಂಭವಿಸಿದ ಪ್ರವಾಹ ಈ ದೇಶ ಕಂಡ ಅತಿ ದೊಡ್ಡ ಪ್ರವಾಹವಂತೆ. ದೇಶದ ವಾಯುವ್ಯ ದಿಕ್ಕಿನಲ್ಲಿರುವ ಸಮುದ್ರದ (North Sea) ನೀರು ಒಳನುಗ್ಗಿ ದೇಶವನ್ನು ನುಂಗತೊಡಗಿದಾಗ ಆ ದೇಶದ  ಜನರು ಸಮುದ್ರವನ್ನೇ ಹೆಡೆಮುರಿ ಕಟ್ಟಿ 32 ಕಿಲೋಮೀಟರುಗಳಷ್ಟು ಉದ್ದದ ಡೈಕ್ ಅನ್ನು ನಿರ್ಮಿಸಿ ಮುಂದೆಂದೂ ಸಮುದ್ರ ತಮ್ಮ ತಂಟೆಗೆ ಬರದಂತೆ ಮಾಡಿಬಿಟ್ಟರು! 

ಸಮುದ್ರವನ್ನು ಆಚೆ  ತಳ್ಳಿ ದೇಶವನ್ನು ಬೆಳೆಸಿದ ಜಾಗಗಳೆಲ್ಲಾ ಮೊದಮೊದಲು ಜವುಗು ಉಪ್ಪಿನ ಭೂಮಿಯಾಗಿದ್ದು ಯಾವುದೇ ಉಪಯೋಗಕ್ಕೆ ಬರಲಿಲ್ಲವಂತೆ. ಆಗ ಆ ಜಾಗದಲ್ಲೆಲ್ಲಾ  ಬರಿ ಸಾಸಿವೆಯನ್ನು ಮಾತ್ರ ಬೆಳೆಸಿದರಂತೆ. ಹಲವಾರು ವರ್ಷಗಳ ಕಾಲ ಸಾಸಿವೆ ಬೆಳೆದ ನಂತರ ಉಪ್ಪಿನ ಅಂಶವೆಲ್ಲಾ ಹೋಗಿ ಇಂದು ಆ ಜಾಗಗಳೆಲ್ಲಾ ಹುಲುಸಾದ ಹುಲ್ಲುಗಾವಲುಗಳಾಗಿವೆ. ಇನ್ನು ಕೆಲವು ಜಾಗಗಳನ್ನು ಹಾಗೆಯೇ ಬಿಟ್ಟು ಸಿಹಿನೀರಿನ ಸರೋವರಗಳನ್ನಾಗಿಸಿದ್ದಾರೆ. ಆರೇಳು ದಶಕಗಳ ಹಿಂದಿನ ಕತೆಯಿದು. ಆಗ ಚಿಕ್ಕಮಕ್ಕಳು ತಮ್ಮ ಅಪ್ಪ ಅಮ್ಮಂದಿರ ಜೊತೆ ಸಾಸಿವೆಯ ಗಿಡಗಳು ಹೂವಾಗಿ ಸುತ್ತಮುತ್ತಲಿನ ಜಾಗವೆಲ್ಲಾ ಹಳದಿಯಾಗಿರುವುದನ್ನು ನೋಡಲು ಹೋಗುತ್ತಿದ್ದರಂತೆ. ನನಗೊಬ್ಬ ಡಚ್ ಸ್ನೇಹಿತ ಹೇಳಿದ್ದರು- “ನನಗೆ ಏಕೆ, ಹೇಗೆ ಎಂದು ಅರ್ಥವಾಗಿರಲಿಲ್ಲ, ಆದರೆ ನನ್ನ ಅಪ್ಪ ಅಮ್ಮನ ಜೊತೆ ಹೋಗಿ ಹಳದಿ ಹೊಲವನ್ನು ನೋಡಿದ ನೆನಪಿದೆ” ಎಂದು.

ನೆದರ್ ಲ್ಯಾಂಡ್ಸ್ ನಲ್ಲಿ ಒಂದು ಜಾನಪದ ಕಥೆಯಿದೆ; ಅದನ್ನಿಲ್ಲಿ ಹೇಳಲೇಬೇಕು. ‘ಹಾಲೆಂಡ್ ಅನ್ನು ಉಳಿಸಿದ ಬಾಲಕ’. ಹ್ಯಾನ್ಸ್ ಬ್ರಿಂಕರ್ ಎಂಬ ಎಂಟು ವರ್ಷದ ಬಾಲಕ ಸಂಜೆಯ ವೇಳೆ ತನ್ನ ಮನೆಗೆ ಮರಳುತ್ತಿದ್ದಾಗ ಡೈಕ್ ನಲ್ಲಿ ಒಂದು ತೂತಾಗಿ ನೀರು ಹನಿಗಳಾಗಿ ಊರಿನ ಕಡೆ ಬೀಳುತ್ತಿದ್ದುದನ್ನು ಕಂಡ. ಅತ್ತಿತ್ತ ತಿರುಗಿ ನೋಡಿದರೆ ಯಾರೂ ಕಾಣಿಸಲಿಲ್ಲ. ಆತನಿಗೆ ಗೊತ್ತಿತ್ತು, ಆ ತೂತನ್ನು ಹಾಗೆಯೇ ಬಿಟ್ಟರೆ ಡೈಕ್ ಒಡೆದು ಊರಿಗೆ ಊರೇ ಪ್ರವಾಹದಲ್ಲಿ ಕೊಚ್ಚಿಹೋಗುತ್ತದೆ ಎಂದು. ತಕ್ಷಣ ಆತ ತನ್ನ ಕೈಬೆರಳನ್ನು ಆ ತೂತಿನಲ್ಲಿ ಸಿಕ್ಕಿಸಿ ನೀರು ತೊಟ್ಟಿಕ್ಕುವುದನ್ನು ತಡೆಯುತ್ತಾ  ಸಹಾಯಕ್ಕಾಗಿ ಕರೆಯತೊಡಗಿದ. ಅವನ ಕೂಗು ಯಾರಿಗೂ ಕೇಳಿಸಲಿಲ್ಲ, ರಾತ್ರಿಯಾಯಿತು, ಬಾಲಕ ಮಾತ್ರ ಆ ಜಾಗದಿಂದ ಕದಲಲಿಲ್ಲ. ಚಳಿಯಿಂದಾಗಿ ಅವನ ಬೆರಳು ಮರಗಟ್ಟಿಹೋಗಿತ್ತು. ಆದರೆ ಆತ ಮಾತ್ರ ಅಲ್ಲಿಂದ ಕದಲಿರಲಿಲ್ಲ. ಸಹಾಯಕ್ಕಾಗಿ ಕರೆಯುತ್ತಲೇ ಇದ್ದ. ಬೆಳಿಗ್ಗೆ ಪೂಜಾರಿಯೊಬ್ಬ ಅವನನ್ನು ಕಂಡ, ತಕ್ಷಣ ಜನರೆಲ್ಲಾ ಬಂದು ಬಾಲಕನನ್ನೂ, ಡೈಕ್ ಅನ್ನೂ ರಕ್ಷಿಸಿದರು. ಬಾಲಕನ ಶೌರ್ಯವನ್ನು ಕೊಂಡಾಡಿ ಆತನನ್ನು ‘ಹಾಲೆಂಡ್ ಉಳಿಸಿದ ಬಾಲಕ’ ಎಂಬ ಬಿರುದನ್ನಿತ್ತು ಸನ್ಮಾನಿಸಿದರು.

(ಹ್ಯಾನ್ಸ್ ಬ್ರಿಂಕರ್ )

ಈ ದೇಶದಲ್ಲಿ ತುಂಬಾ ಜನರು ಸ್ವಂತದ ದೋಣಿಯನ್ನು ಹೊಂದಿರುತ್ತಾರೆ. ಬೇಸಿಗೆಯಲ್ಲಿ ಕಾಲುವೆಗಳಲ್ಲಿ ಅದನ್ನು ನಡೆಸುವುದೆಂದರೆ ಅವರಿಗೆ ತುಂಬಾ ಇಷ್ಟ. ಶ್ರೀಮಂತರಂತೂ ಬೋಟ್ ಹೌಸ್ ಹೊಂದಿರುತ್ತಾರೆ. ಅದು ಕಾಲುವೆಗಳಲ್ಲಿ ಇರುವಂತಹ ಮನೆ. ಚಿಕ್ಕದಾದರೂ ಅದರ ನಿರ್ವಹಣೆಗೆ ತುಂಬಾ ಹಣ ವ್ಯಯಿಸಬೇಕಾಗುತ್ತದೆ ಎಂದು ಕೇಳಿದ್ದೇನೆ. ಚಳಿಗಾಲದಲ್ಲಿ ಅಲ್ಲಿರಲು ಅಸಾಧ್ಯ. ಬೇಸಿಗೆಯಲ್ಲಿ ಮಾತ್ರ ಅದರಲ್ಲಿ ಉಳಿಯುತ್ತಾರೆ. ಬೇರೆ ದೊಡ್ಡ ಮನೆಯಿದ್ದರೂ ನೀರಿನ ಮೇಲಿನ ಚಿಕ್ಕ ಬೋಟ್ ಹೌಸ್ ನಲ್ಲಿ ಇರುವುದೆಂದರೆ ಅವರಿಗೆ ತುಂಬಾ ಇಷ್ಟ!

ಹ್ಯಾನ್ಸ್ ಬ್ರಿಂಕರ್ ಎಂಬ ಎಂಟು ವರ್ಷದ ಬಾಲಕ ಸಂಜೆಯ ವೇಳೆ ತನ್ನ ಮನೆಗೆ ಮರಳುತ್ತಿದ್ದಾಗ ಡೈಕ್ ನಲ್ಲಿ ಒಂದು ತೂತಾಗಿ ನೀರು ಹನಿಗಳಾಗಿ ಊರಿನ ಕಡೆ ಬೀಳುತ್ತಿದ್ದುದನ್ನು ಕಂಡ. ಅತ್ತಿತ್ತ ತಿರುಗಿ ನೋಡಿದರೆ ಯಾರೂ ಕಾಣಿಸಲಿಲ್ಲ. ಆತನಿಗೆ ಗೊತ್ತಿತ್ತು, ಆ ತೂತನ್ನು ಹಾಗೆಯೇ ಬಿಟ್ಟರೆ ಡೈಕ್ ಒಡೆದು ಊರಿಗೆ ಊರೇ ಪ್ರವಾಹದಲ್ಲಿ ಕೊಚ್ಚಿಹೋಗುತ್ತದೆ ಎಂದು. ತಕ್ಷಣ ಆತ ತನ್ನ ಕೈಬೆರಳನ್ನು ಆ ತೂತಿನಲ್ಲಿ ಸಿಕ್ಕಿಸಿ ನೀರು ತೊಟ್ಟಿಕ್ಕುವುದನ್ನು ತಡೆಯುತ್ತಾ  ಸಹಾಯಕ್ಕಾಗಿ ಕರೆಯತೊಡಗಿದ. ಯಾರಿಗೂ ಕೇಳಿಸಲಿಲ್ಲ, ರಾತ್ರಿಯಾಯಿತು, ಬಾಲಕ ಮಾತ್ರ ಆ ಜಾಗದಿಂದ ಕದಲಲಿಲ್ಲ. ಚಳಿಯಿಂದಾಗಿ ಅವನ ಬೆರಳು ಮರಗಟ್ಟಿಹೋಗಿತ್ತು ಆದರೆ ಆತ ಮಾತ್ರ ಅಲ್ಲಿಂದ ಕದಲಿರಲಿಲ್ಲ. ಸಹಾಯಕ್ಕಾಗಿ ಕರೆಯುತ್ತಲೇ ಇದ್ದ. ಬೆಳಿಗ್ಗೆ ಪೂಜಾರಿಯೊಬ್ಬ ಅವನನ್ನು ಕಂಡ, ತಕ್ಷಣ ಜನರೆಲ್ಲಾ ಬಂದು ಬಾಲಕನನ್ನೂ, ಡೈಕ್ ಅನ್ನೂ ರಕ್ಷಿಸಿದರು. ಬಾಲಕನ ಶೌರ್ಯವನ್ನು ಕೊಂಡಾಡಿ ಆತನನ್ನು ‘ಹಾಲೆಂಡ್ ಉಳಿಸಿದ ಬಾಲಕ’ ಎಂಬ ಬಿರುದನ್ನಿತ್ತು ಸನ್ಮಾನಿಸಿದರು.

ನೀರಿನಿಂದ ಪ್ರತಿಕ್ಷಣವೂ ಸೆಣಸಾಡುತ್ತಲೇ ಇರಬೇಕಾದ ಡಚ್ಚರ ಆತ್ಮಸ್ಥೈರ್ಯವನ್ನು ಮೆಚ್ಚಲೇಬೇಕು. ಅವರಿಗೆ ತಮ್ಮ ಡೈಕ್ಸ್ ಬಗ್ಗೆ ಅಷ್ಟೊಂದು ನಂಬಿಕೆ. ನೀರನ್ನು ನಿರಂತರವಾಗಿ ನಿಯಂತ್ರಿಸುತ್ತಲೇ ಇರಬೇಕು, ಅದಕ್ಕೆ ಬೇಕಾಗುವ ಹಣಕ್ಕಾಗಿ ಸರಕಾರ ನೀರಿನ ವ್ಯವಸ್ಥೆಯ ನಿರ್ವಹಣಾ ತೆರಿಗೆಯನ್ನು (water system management tax) ವಿಧಿಸುತ್ತದೆ. ಆ ತೆರಿಗೆಯನ್ನು ವರ್ಷಕ್ಕೊಮ್ಮೆ ಪಾವತಿಸಬೇಕಾಗುತ್ತದೆ.

ಎಲ್ಲಿ ನೋಡಿದಲ್ಲಿ ನೀರು ಕಾಣಸಿಗುವ ಈ ದೇಶದಲ್ಲಿ ಈಜು ಕಲಿಯುವುದನ್ನು ಜನರು ಕಡ್ಡಾಯವೆಂಬಂತೆ ಪರಿಗಣಿಸುತ್ತಾರೆ. ಸಮಾನ್ಯವಾಗಿ ಮಕ್ಕಳು ಹುಟ್ಟಿ ಮೂರು ತಿಂಗಳಾದ ಕೂಡಲೇ ಅವರನ್ನು ನೀರಿಗೆ ಪರಿಚಯಿಸುತ್ತಾರೆ. ಆ ಮಕ್ಕಳು ನಾಲ್ಕು, ಐದು, ಆರು ವರ್ಷದವರಾಗುತ್ತಿದ್ದಂತೆಯೇ ಈಜು ಕಲಿತು ಡಿಪ್ಲೋಮ ಹೊಂದಿ, ಮೀನಿನಂತೆ ಈಜಬಲ್ಲವರಾಗುತ್ತಾರೆ. ಹಾಗಾಗಿ ಅವರು ನೀರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗೂ ಎತ್ತಿದ ಕೈ. ಚಿಕ್ಕ ಮಕ್ಕಳೂ ಕೂಡ ತಮ್ಮ ಅಪ್ಪ ಅಮ್ಮಂದಿರ ಜೊತೆ ಕಾಲುವೆ, ನದಿಗಳಲ್ಲಿ ಈಜುವುದು, ದೋಣಿ ನಡೆಸುವುದು ಸಾಮಾನ್ಯ. ಅವರ ರೋಯಿಂಗ್, ಕಯಕಿಂಗ್ (rowing, kayaking) ಚಟುವಟಿಕೆಗಳನ್ನು ನೋಡುವುದೇ ಖುಷಿ. ನಾನಂತೂ ಅಷ್ಟೊಂದು ಸಾಹಸಿಯಲ್ಲ. ಅಂತಹ ಚಟುವಟಿಕೆಗಳನ್ನು ಈ ಜನ್ಮದಲ್ಲಂತೂ ಮಾಡುವುದಿಲ್ಲ. ಹಾಗಾಗಿ ನೀರಿನಿಂದ ತುಸು ದೂರದಲ್ಲಿಯೇ ನಿಂತು ಅವರ ಚಟುವಟಿಕೆಗಳನ್ನು ಆಸ್ವಾದಿಸುತ್ತೇನೆ.

(ಚಿತ್ರಗಳು: ರಾಜೀವ ಭಟ್)