ಮನೆಗೆ ಒಂದು ಗಂಡು ಬೇಕು ಅನ್ನುವ ಮೋಹ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎಂಬ ಭ್ರಮೆ ಹಳ್ಳಿಯಲ್ಲಿ ಇನ್ನೂ ಇದೆ. ಎಷ್ಟೋ ವಯಸ್ಸಾದವರನ್ನು ಒಂದೋ ಹೊರ ಹಾಕಿದ್ದಾರೆ ಇಲ್ಲವೇ ಮಕ್ಕಳೇ ಹಳ್ಳಿ ಬಿಟ್ಟು ದೂರ ಇದ್ದಾರೆ. ಇದು ಗಂಡು ಹಡೆದವರ ಭಾಗ್ಯ! ಹಾಗಂತ ಎಲ್ಲ ಗಂಡು ಮಕ್ಕಳು ಹಾಗಿಲ್ಲ ಬಿಡಿ. ಹೆಣ್ಣು ಕರುಳಿನ ಗಂಡು ಹುಡುಗರು ಇನ್ನೂ ಇರುವುದಕ್ಕೆ ಮಳೆ ಬೆಳೆ ಆಗುತ್ತಿರುವುದು! ಇವರಿಗೆಲ್ಲ ಬುದ್ಧಿ ಹೇಳಿ ಪ್ರಯೋಜನ ಇಲ್ಲ ಅಂತ ಶಾಮನ ಮೇಲೆ ಬಂದ ಕೋಪವನ್ನು ಹತ್ತಿಕ್ಕಿದೆ.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ
ಪಕ್ಕದ ಹೊಲದ ಹುಸೇನಿ, ನಾಗಣ್ಣ ಅವರಿಗೆ ಮತ್ತೆ ತೊಂದರೆ ಕೊಡುವುದರ ಮೊದಲೇ ನಾನು ಹಳ್ಳಿಗೆ ಮರಳಿದೆ. ನಾನಿಲ್ಲದಾಗ ಅವರೆದುರು ಹೇಳಿದ್ದನ್ನು ನಾನು ಎದುರು ಸಿಕ್ಕಾಗ ಹೇಳುತ್ತಿರಲಿಲ್ಲ ಅವನು. ತಾನಾಗೆ ಪಂಪ್ ಸೆಟ್ ವಿಷಯದಲ್ಲಿ ನನ್ನೆದುರೇ ಜಗಳ ತೆಗೆದರೆ ಮಾತಾಡೋಣ ಅಂತ ನಾನೂ ಸುಮ್ಮನಾದೆ.
ನಾನು ಬಂದ ಮೇಲೆ, ನಾಗಣ್ಣ ಯಾವುದೋ ವೈಯುಕ್ತಿಕ ಕಾರಣಕ್ಕೆ ಒಂದೆರಡು ದಿನ ಬೆಂಗಳೂರಿಗೆ ಹೋಗಿ ಬರುತ್ತೇನೆ ಅಂತ ಅಂದರು. ಆಯ್ತು ಅಂದೆನಾದರೂ, ಅವರು ವಾಪಸ್ಸು ಬರುವವರೆಗೂ ಒಬ್ಬನೇ ಹೇಗೆ ಇರಬೇಕು ಅನ್ನುವ ಯೋಚನೆ ನನಗೆ ಶುರುವಾಯ್ತು. ಬೆಳಿಗ್ಗೆ ನಾನಾಯ್ತು ನನ್ನ ಕೆಲಸವಾಯಿತು ಅಂತ ಇರುತ್ತಿದ್ದೆನಾದರೂ ರಾತ್ರಿ ಹೇಗೆ ಕಳೆಯಲಿ ಎಂಬ ಚಿಂತೆ. ಒಬ್ಬನೇ ಮಲಗಬೇಕಲ್ಲ! ಅದೂ ಶಂಭುಲಿಂಗ ಮಾವನ ತೋಟದ ಮನೆಯಲ್ಲಿ! ದೆವ್ವ ಭೂತದ ಹೆದರಿಕೆಯಲ್ಲ. ಹಾವು ಚೇಳುಗಳು ಬಂದರೆ ಅಂತ.. ಒಟ್ಟಿನಲ್ಲಿ ಅವತ್ತಿನ ರಾತ್ರಿ ಕಳೆಯುವುದು ಹೇಗೆ ಎಂಬ ಚಿಂತೆಯಲ್ಲಿ ನಾನಿದ್ದೆ.
“ನೀ ಒಬ್ಬನೇ ಇದ್ದರೆ ನಮ್ಮ ಮನೆಯಲ್ಲೇ ಮಲಗಲು ಅಡ್ಡಿ ಇಲ್ಲೆ, ಸುಮಾರು ಜಾಗ ಇದ್ದು” ಅಂತ ಶಂಭು ಮಾವ ಅಂದಿದ್ದರಾದರೂ ಅದೊಂದು ತರಹದ ನಾಚಿಕೆ, ಮುಜುಗರ. ಅವರ ಮನೆಗೆ ಮಲಗಲು ಹೋದರೆ ನನಗೆ ಹೆದರಿಕೆ ಅಂತ ನಾನೇ ಪ್ರಚಾರ ಮಾಡಿದಂತೆ ಆಗುತ್ತಲ್ಲ. ಮೊದಲೇ ಮಾವನದು ತಮಾಷೆಯ ಸ್ವಭಾವ. ಇದೆ ವಿಷಯ ತೆಗೆದು ನನ್ನ ಶಿಷ್ಯಂದಿರ ಎದುರು ಮುಂದೊಮ್ಮೆ ನಕ್ಕರೆ ಏನು ಮಾಡೋದು? ಅದೂ ಅಲ್ಲದೆ ಎಷ್ಟು ದಿನ ಅಂತ ಅವರ ಮನೆಯಲ್ಲಿ ಮಲಗಲು ಸಾಧ್ಯ. ಅದರ ಬದಲಿಗೆ ಒಬ್ಬನೇ ಮಲಗುವುದನ್ನು ರೂಢಿಸಿಕೊಳ್ಳಲೆಬೇಕು ಅಂತ ಧೈರ್ಯ ತಂದುಕೊಂಡೆ.
ರಾತ್ರಿ ಊಟಕ್ಕೆ ಅಡಿಗೆ ಮಾಡಿಕೊಳ್ಳುವ ತಾಪತ್ರಯ ಇರಲಿಲ್ಲ. ಅವಲಕ್ಕಿ ತಿಂದು ಮುಗಿಸಿದೆ. ಟಾಯ್ಲೆಟ್ ಹೊರಗೆ ಇದ್ದ ಕಾರಣ ರಾತ್ರಿ ಜೀರ್ ಅಂತ background music ಹೊಡೆಯುವ ಹುಳು ಹುಪ್ಪಡಿ ಪ್ರಾಣಿಗಳ ಮಧ್ಯೆ ಅಲ್ಲಿಗೆ ಹೋಗುವುದು ಇನ್ನೊಂದು ಸಾಹಸ. ಹೀಗಾಗಿ ಮಲಗಿದ ನಂತರ ನಡುರಾತ್ರಿ ಅಲ್ಲಿಗೆ ಹೋಗುವ ಪ್ರಸಂಗ ತರಬೇಡ ಅಂತ ದೇವರಲ್ಲಿ ಬೇಡಿಕೊಂಡೆ! ನೀರನ್ನೂ ಹೆಚ್ಚು ಕುಡಿಯಲಿಲ್ಲ. ಮಲಗುವ ಮೊದಲು ಒಂದು ಸಲ ಹೇಗೋ ಧೈರ್ಯ ಮಾಡಿ ಹೋಗಿ ಬಂದೆ. ಅಡಿಗೆ ಮನೆಯಲ್ಲಿ ಎರಡು ಕಿಟಕಿಗಳು ಇದ್ದವು. ಅವೆರಡೂ ಹಿಂದಿನ ಕಾಡಿಗೆ ಹೊಂದಿಕೊಂಡೇ ಇದ್ದವು. ಅಲ್ಲಲ್ಲಿ ಅವಕ್ಕೆ ರಂದ್ರಗಳೂ ಇದ್ದವು. ಹೀಗಾಗಿ ಅಲ್ಲಿಂದ ಹುಳುಗಳು ಬರುವ ಸಾಧ್ಯತೆ ಇತ್ತು. ಅಡಿಗೆ ಮನೆಯ ದೀಪವನ್ನು ಆರಿಸಿ, ನಾನು ಮಲಗಿಕೊಳ್ಳುವ ಕೋಣೆಗೆ ಹತ್ತಿಕೊಂಡಿದ್ದ ಅಡಿಗೆ ಕೋಣೆಯ ಬಾಗಿಲನ್ನು ಮುಚ್ಚಿದೆ. ಹಾಸಿಗೆಯನ್ನು ತಯಾರು ಮಾಡಿ ನನ್ನ ಮೊಬೈಲ್ ಎಂಬ ಸಂಗತಿಯನ್ನು ನೆಚ್ಚಿಕೊಂಡು ಅದರಲ್ಲಿ ಏನೋ ನೋಡುತ್ತಾ, ಬರೆಯುತ್ತಾ ಕೂತೆ. ಹಾಗೆ ಸ್ವಲ್ಪ ಹೊತ್ತಿಗೆ ಅಡಿಗೆ ಮನೆಯ ಬಾಗಿಲು ಕಿರ್ರ್ ಎಂಬ ವಿಕಾರ ಶಬ್ದ ಮಾಡುತ್ತಾ ತೆರೆದುಕೊಂಡಿತು. ಒಳಗಿನ ಕಿಟಕಿಯಿಂದ ಬರುವ ಗಾಳಿಯಿಂದಲೆ ಅಂತ ಗೊತ್ತಿದ್ದರೂ ಒಂದೆರಡು ಕ್ಷಣ ಹೆದರಿಕೆ ತಂದಿತು ಆ ಶಬ್ಧ.
ಸಾಕಷ್ಟು ಹೊತ್ತಿನ ನಂತರ ಆಕಳಿಗೆ ಬರಲು ಶುರುವಾಗಿದ್ದವು. ಹಾಗೆ ಎಷ್ಟು ಹೊತ್ತು ಅಂತ ಕೂಡಲು ಸಾಧ್ಯ? ಮಲಗಲೆಬೇಕು. Light ಹಚ್ಚಿಕೊಂಡೆ ಮಲಗಿದೆ. ಬೆಳಕಿನಿಂದ ನಿದ್ದೆ ಬೇಗನೆ ಸುಳಿಯಲಿಲ್ಲವಾದರೂ ಅದ್ಯಾವಾಗಲೋ ನಿದ್ರಾ ದೇವಿಯ ವಶವಾಗಿದ್ದೆ. ಮರುದಿನ ಎದ್ದಾಗ ಒಂದೇನೋ ಸಾಧನೆ ಮಾಡಿದ ಭಾವ. ಒಬ್ಬನೇ ಮಲಗಿ ಕಳೆದೆನಲ್ಲ ಎಂಬ ಖುಷಿ. ಇವೆಲ್ಲ ಜೀವನ ಪಾಠಗಳು.
ಬೇಗನೆ ತಯಾರಾಗಿ ಹೊಲಕ್ಕೆ ಹೊರಟೆ. ಯಾಕಂದರೆ ನಾಗಣ್ಣ ಇರಲಿಲ್ಲವಲ್ಲ! ಒಂಭತ್ತೂವರೆಗೆ ಆಗಲೇ ಶಾಮ ಹೊಲಕ್ಕೆ ಬಂದಿದ್ದ. ಅಡಿಕೆ ಎಲೆ ತಂಬಾಕನ್ನು ಹಾಕಿ ಸಜ್ಜಾದ.
ಏನ್ ಮಾಡ್ಲಿ ಸರ್ ಇವತ್ತ ಅಂದ..
ಎಲ್ಲಾ ಸಸಿಗಳಿಗೆ ಮುಚ್ಚಿಗೆ ಹಾಕಿ ಅಂದೆ.
ನೈಸರ್ಗಿಕ ಕೃಷಿಯಲ್ಲಿ ಮಣ್ಣನ್ನು ಸೂರ್ಯನ ಶಾಖಕ್ಕೆ ಒಡ್ಡಬಾರದು. ಹೀಗಾಗಿ ಮುಚ್ಚಿಗೆಗೆ ತುಂಬಾ ಮಹತ್ವ. ಅದಕ್ಕೆ ಹೊದಿಕೆ ಅಂತಲೂ ಅನ್ನುತ್ತಾರೆ. ಮಣ್ಣಿನಿಂದಲೇ ಹೊದಿಕೆ ಮಾಡುವುದು ಒಂದು ವಿಧಾನವಾದರೆ, ಸಸ್ಯಗಳ ತ್ಯಾಜ್ಯಗಳನ್ನು ಬಳಸಿ ಹೊದಿಕೆ ಮಾಡಬಹುದು. ಒಣ ಹುಲ್ಲಿನ ಹೊದಿಕೆ ಇನ್ನೂ ಶ್ರೇಷ್ಠ. ಅದರೊಟ್ಟಿಗೆ ಯಾವುದಾದರೂ ನೆಲದ ಮೇಲೆ ಹಬ್ಬುವ ಬಳ್ಳಿಯ ಜೀವಂತ ಹೊದಿಕೆಯನ್ನು ಕೂಡ ಮಾಡಬಹುದು. ಒಟ್ಟಿನಲ್ಲಿ ಮಣ್ಣಿನಲ್ಲಿನ ತೇವಾಂಶ ಹೊರಗೆ ಹೋಗದಂತೆ ತಡೆಯುವುದು ಒಂದು ಉದ್ದೇಶವಾದರೆ ಅಲ್ಲಿರುವ ಸೂಕ್ಷ್ಮ ಜೀವಿಗಳನ್ನು ಹಾಗೂ ಸೂಕ್ಷ್ಮ ಬೇರುಗಳನ್ನು ಸಂರಕ್ಷಿಸುವುದು ಇನ್ನೊಂದು ಕಾರಣ. ಇದರಿಂದ ಕಳೆಗಳನ್ನೂ ನಿಯಂತ್ರಿಸಬಹುದು.
ಮುಚ್ಚಿಗೆ ಹಾಕೋಕೆ ಸಾವಿಲ್ಲದ ಗೊಬ್ಬರದ ಗಿಡಗಳ ಶಾಖೆಗಳನ್ನು ಕಡೆದು ಅದರ ಕಾಂಡ ಹಾಗೂ ಎಲೆಗಳನ್ನು ಗಿಡದ ಸುತ್ತಲೂ ಹಾಕಿಸಿ ಹೊಲದ ಬದುವಿನಲ್ಲಿ ಬೆಳೆದು ನಿಂತಿದ್ದ ಹುಲ್ಲನ್ನು ಕತ್ತರಿಸಿ ಅದನ್ನೆ ಹೊದಿಕೆ ಮಾಡಿಸಿದೆ.
ಮೊದಲೇ ಮಾವನದು ತಮಾಷೆಯ ಸ್ವಭಾವ. ಇದೆ ವಿಷಯ ತೆಗೆದು ನನ್ನ ಶಿಷ್ಯಂದಿರ ಎದುರು ಮುಂದೊಮ್ಮೆ ನಕ್ಕರೆ ಏನು ಮಾಡೋದು? ಅದೂ ಅಲ್ಲದೆ ಎಷ್ಟು ದಿನ ಅಂತ ಅವರ ಮನೆಯಲ್ಲಿ ಮಲಗಲು ಸಾಧ್ಯ. ಅದರ ಬದಲಿಗೆ ಒಬ್ಬನೇ ಮಲಗುವುದನ್ನು ರೂಢಿಸಿಕೊಳ್ಳಲೆಬೇಕು ಅಂತ ಧೈರ್ಯ ತಂದುಕೊಂಡೆ.
ಹಾಗೆ ಕೆಲಸ ಮಾಡುತ್ತಿರುವಾಗಲೆ ಶಾಮ ಮತ್ತೆ ಮಾತಿಗೆಳೆದ..
ಎಷ್ಟು ಮಕ್ಳು ಸರ ನಿಮಗ..
ಒಬ್ಳು ಮಗಳು..
ಯಾಕ್ರೀ ಅಷ್ಟಕ್ಕ ನಿಲ್ಸಿದ್ರಿ? ಒಂದು ಗಂಡು ಮಾಡಿಕೊಬೇಕಿತ್ತು?
ಇದೊಂದು ಪ್ರಶ್ನೆ ನನಗೆ ಎಷ್ಟು ಕೋಪ ಬರಿಸುತ್ತೆ ಅಂದರೆ ಎದುರಿಗಿದ್ದವನನ್ನು ಎತ್ತಿ ಕುಕ್ಕಿ ಬಿಡಬೇಕು ಅನ್ನುವಷ್ಟು! ಮನೆಗೆ ಒಂದು ಗಂಡು ಬೇಕು ಅನ್ನುವ ಮೋಹ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎಂಬ ಭ್ರಮೆ ಹಳ್ಳಿಯಲ್ಲಿ ಇನ್ನೂ ಇದೆ. ಎಷ್ಟೋ ವಯಸ್ಸಾದವರನ್ನು ಒಂದೋ ಹೊರ ಹಾಕಿದ್ದಾರೆ ಇಲ್ಲವೇ ಮಕ್ಕಳೇ ಹಳ್ಳಿ ಬಿಟ್ಟು ದೂರ ಇದ್ದಾರೆ. ಇದು ಗಂಡು ಹಡೆದವರ ಭಾಗ್ಯ! ಹಾಗಂತ ಎಲ್ಲ ಗಂಡು ಮಕ್ಕಳು ಹಾಗಿಲ್ಲ ಬಿಡಿ. ಹೆಣ್ಣು ಕರುಳಿನ ಗಂಡು ಹುಡುಗರು ಇನ್ನೂ ಇರುವುದಕ್ಕೆ ಮಳೆ ಬೆಳೆ ಆಗುತ್ತಿರುವುದು! ಇವರಿಗೆಲ್ಲ ಬುದ್ಧಿ ಹೇಳಿ ಪ್ರಯೋಜನ ಇಲ್ಲ ಅಂತ ಶಾಮನ ಮೇಲೆ ಬಂದ ಕೋಪವನ್ನು ಹತ್ತಿಕ್ಕಿದೆ.
ಹೌದ್ರಿ ನಾವೂ ವಿಚಾರ ಮಾಡಿದ್ವಿ! ಆದರ ಎರಡನೆಯದು ಗಂಡು ಆಗಿಲ್ಲ ಅಂದರೆ ಏನೂ ಮಾಡೋದು ಅಂತ ಕೈ ಬಿಟ್ವಿ.. ಅಂದೆ.
ಪ್ರಯತ್ನ ಮಾಡ್ರಿ ಸರ ಮಿಕ್ಕಿದ್ದು ಅವನಿಗೆ ಬಿಟ್ಟಿದ್ದು ಅಂದ..
ನನಗೆ ತಲೆ ಬಿಸಿ ಆಗುತ್ತಿತ್ತು. ಇವನ ಅಧಿಕಪ್ರಸಂಗ ಜಾಸ್ತಿ ಆಯ್ತು ಅನಿಸಿತು.
ಹೂಂ ಪಟ್ ಪಟ್ ಕೆಲಸ ಮುಗಸ್ರಿ.. ನನಗೂ ಎಲ್ಲೋ ಹೋಗೋದು ಅದ.. ಅಂದೆ
ನೀವು ಹೋಗೋದು ಇದ್ರ ಹೋಗ್ರಿ ಸರ.. ನಾನು ನೀವು ಹೇಳಿದ ಕೆಲಸ ಮಾಡಿ ಮುಗಸ್ತೀನಿ. ನಾವು ಮೋಸ ಮಾಡೋದಿಲ್ಲ ತೋಗೊರಿ.
ಇದೊಂದು ಇಲ್ಲಿನ ತುಂಬಾ ಜನರ ಸಾಮಾನ್ಯ ಡೈಲಾಗ್. ಅದೊಂದು ತರಹ ತಮಗೆ ತಾವೇ ಬೆನ್ನು ಚಪ್ಪರಿಸಿ ಕೊಳ್ಳುವ ವಿಧಾನ. ಹಾಗೆ ಹೇಳುತ್ತಲೆ ಮೋಸ ಮಾಡಿದ್ದ ದೇವೇಂದ್ರ ನೆನಪಾದ!
ನಾನು ಅಲ್ಲಿಂದ ಕಳಚಿದರೆ ಅವನಿಗೆ ಸಾಕಿತ್ತೇನೋ ಅಥವಾ ಅವನ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನಾನು ಬಯಸಿದ್ದೆನೋ! ಒಟ್ಟಿನಲ್ಲಿ ಪಕ್ಕದಲ್ಲಿದ್ದ ಕೆಲ ಮುಳ್ಳು ಕಂಟಿಗಳನ್ನು ಕೂಡ ಸವರಲು ಹೇಳಿ ಅಲ್ಲಿಂದ ಕಾಲ್ಕಿತ್ತೆ.
ಅದು ನಾನು ಮಾಡಿದ್ದ ದೊಡ್ಡ ತಪ್ಪು ಅಂತ ನನಗೆ ಮರುದಿನ ಬಂದಾಗ ಅರಿವಿಗೆ ಬಂತು. ಮುಳ್ಳು ಕಂಟಿಗಳ ಜೊತೆಗೆ ನಾನು ನಾಗಣ್ಣ ಹಚ್ಚಿದ್ದ ಮೂರು ಸಸಿಗಳೂ ಕೂಡ ಕಾಣದಂತೆ ಮಾಯವಾಗಿದ್ದವು! ಅದು ಅವನದೂ ತಪ್ಪಲ್ಲ. ಅಲ್ಲಿ ಸಸಿ ನೆಟ್ಟಿದ್ದು ನಮಗಷ್ಟೇ ಗೊತ್ತಿತ್ತು. ಅವನಿಗೆ ನಾನು ಹೇಳಿರಲಿಲ್ಲ. ಮುಖ್ಯವಾಗಿ ಅವನು ಕೆಲಸ ಮಾಡುವಾಗ ನಾನು ಇರಬೇಕಿತ್ತು. “ತಾನು ಮಾಡಿದ್ದು ಉತ್ತಮ ಆಳು ಮಾಡಿದ್ದು ಹಾಳು” ಎಂಬುದು ಅವತ್ತು ಮತ್ತೆ ಸಾಬೀತಾಗಿತ್ತು. ಅಂದಿನಿಂದ ಕೆಲಸದವರ ಜೊತೆಗೆ ನಾನೂ ಇರುವುದನ್ನು ರೂಢಿಸಿಕೊಂಡೆ. ಅವರ ಜೊತೆಗೆ ನಾವು ಕೆಲಸ ಮಾಡಿದರೇನೆ ಒಳ್ಳೆಯ ಫಲಿತಾಂಶ ಬರಲಿಕ್ಕೆ ಸಾಧ್ಯ
*****
ಬೆಂಗಳೂರಿಗೆ ಹೋಗಿದ್ದ ನಾಗಣ್ಣ ಮುಂದೆರಡು ದಿನಗಳಲ್ಲಿ ವಾಪಸ್ಸಾದರು. ಅವತ್ತು ಹೊಲಕ್ಕೆ ಹೋಗಿ ಖಾಲಿ ಇದ್ದ ಮೂರೂವರೆ ಎಕರೆಯಷ್ಟು ಜಾಗದಲ್ಲಿ ಏನು ಮಾಡೋದು ಅಂತ ಮತ್ತೆ ಯೋಚನೆಗೆ ಇಳಿದೆವು. ಅಲ್ಲಿದ್ದ ಆಯ್ಕೆಗಳು ಎರಡು; ಒಂದು ಭತ್ತ ಇಲ್ಲವೇ ಮುಸುಕಿನ ಜೋಳ. ಮಳೆಗಾಲ ಆಗಿದ್ದರಿಂದ ಮಳೆ ಜಾಸ್ತಿ ಹಿಡಿದರೆ ಜೋಳಕ್ಕೆ ತೊಂದರೆ ಆದೀತು ಅಂತ ಗುಡ್ಡಪ್ಪ ಹೆದರಿಸಿದರು. ಹೀಗಾಗಿ ಭತ್ತವನ್ನೆ ಬೆಳೆಯುವ ಅಂತ ನಿರ್ಧರಿಸಿದೆವು. ನಮಗೆ ಅದು ಹೊಸ ಅನುಭವ. ಎಷ್ಟೇ ಇಳುವರಿ ಬಂದರೂ ನಮಗೆ ಅಂತ ಊಟಕ್ಕೆ ವಿಷಮುಕ್ತ ಆಹಾರವಾದರೂ ಆಗುತ್ತೆ ಅಂತ ಸಿದ್ಧತೆಗೆ ತೊಡಗಿದೆವು. ಅದಕ್ಕೆ ನಮಗೆ ಸಲಹಾಕಾರರು ಗುಡ್ಡಪ್ಪ. ಅವರು ಸ್ಥಳೀಯರು ಹಾಗೂ ರಾಮಚಂದ್ರ ಮಾವನಿಗೆ ಪರಿಚಯದವರೂ ಆಗಿದ್ದರಿಂದ ಅವರನ್ನೇ ನಂಬಿ ನಮ್ಮ ಕೆಲಸ ಶುರು ಮಾಡಿದೆವು.
ಭತ್ತವನ್ನು ಬೆಳೆಯುವ ಒಂದು ವಿಧಾನವೆಂದರೆ ಹೊಲದಲ್ಲಿ ಹಾಳೆಗಳು ಎಂದು ಹೇಳಲ್ಪಡುವ ಒಂದಿಷ್ಟು ಸಣ್ಣ ಸಣ್ಣ ಭೂಭಾಗಗಳನ್ನು ಮಾಡಿ ಭೂಮಿ ಸಿದ್ಧಪಡಿಸಬೇಕು. ನಂತರ ಸಸಿಗಳನ್ನು ತಯಾರಿಸಿ ನೆಡಿಸಬೇಕು. ಅದಕ್ಕೆಲ್ಲ ತುಂಬಾ ಖರ್ಚು. ಅದೂ ಅಲ್ಲದೆ ಆಳುಗಳ ಜೊತೆಗೆ ವ್ಯವಹರಿಸುವುದು ಅಂದರೆ ಸಾಫ್ಟ್ವೇರ್ ಕಂಪನಿಯಲ್ಲಿ people management ಮಾಡುವುದಕ್ಕಿಂತ ಕಷ್ಟದ ಕೆಲಸ! ಹೀಗಾಗಿ ನಾನು ಇನ್ನೂ ಸುಲಭದ ಹಾಗೂ ಆಳುಗಳಿಗಿಂತ ಹೆಚ್ಚು ಯಂತ್ರಗಳ ಮೇಲೆ ಅವಲಂಬಿಸಿ ಭತ್ತ ಬೆಳೆಯೋಣ ಅಂತ ಹೇಳಿದೆ. ನಾವು ಮಾಡುತ್ತಿರುವ ಭತ್ತದ ಕೃಷಿ ಸಂಪೂರ್ಣ ಮಳೆಯಾಶ್ರಿತ ಆಗಿತ್ತು. ನನ್ನ ಬೋರ್ ಇತ್ತು, ಕೀಲಿ ಹಾಕಿ ಇಟ್ಟಿದ್ದೆನಾದರೂ ಅದನ್ನು ಬಳಸಲು ಪೈಪ್ ವ್ಯವಸ್ಥೆ ಇನ್ನೂ ಇರಲಿಲ್ಲ.
ಅದಕ್ಕಾಗಿ ಮೊಟ್ಟಮೊದಲು ಟ್ರಾಕ್ಟರ್ ಹೊಡೆಸಬೇಕಿತ್ತು. ಅದರಲ್ಲಿ ರೋಟರ್ ಅಂತ ಇರುತ್ತೆ. ಅದು ಮಣ್ಣನ್ನು ಬುಡಮೇಲು ಮಾಡಿ ಹಾಕುತ್ತೆ. ನೈಸರ್ಗಿಕ ಕೃಷಿಯಲ್ಲಿ ಉಳುಮೆ ಮಾಡಬಾರದು ಆದರೂ ನಮ್ಮ ಭೂಮಿ ಅದಕ್ಕೆ ಅಷ್ಟು ತಯಾರು ಆಗಿರಲಿಲ್ಲ. ಅದಕ್ಕೂ ಮೇಲಾಗಿ ನಾವು ಇನ್ನೂ ಅದಕ್ಕೆ ಸಜ್ಜಾಗಿರಲಿಲ್ಲ! ಹೀಗಾಗಿ ಸಧ್ಯಕ್ಕೆ ಟ್ರಾಕ್ಟರ್ ಹೊಡೆಸಲೆಬೇಕಿತ್ತು. ಅದಕ್ಕಾಗಿ ಗುಡ್ಡಪ್ಪ ತಮ್ಮ ಪರಿಚಯದ ಒಬ್ಬರನ್ನು ಕರೆಸಿದರು. ಅವರ ಹೆಸರು ಬಾಬು ಅಂತ ಇರಲಿ (ಇಲ್ಲಿನ ಘಟನೆಗಳು ನೈಜ ಆದರೆ ಕೆಲವು ಹೆಸರುಗಳು ಕಾಲ್ಪನಿಕ!). ಬಾಬು ಬಂದವರೇ ಕೆಲಸಕ್ಕೆ ತೊಡಗಿದರು. ನಾವು ಗಂಟೆಗೆ ಎಷ್ಟು ದುಡ್ಡು ಅಂತಲೂ ಕೇಳಲಿಲ್ಲ! ಅವರು ಮುಳ್ಳು ಕಂಟಿಗಳಿಂದ ತುಂಬಿದ ಹೊಲವನ್ನು ಹಂತ ಹಂತವಾಗಿ ತಲೆಯ ಕೂದಲನ್ನು ಕತ್ತರಿಸುವಂತೆಯೆ, ಬೋಳು ಬೋಳು ಮಾಡಿದರು. ಜೊತೆಗೆ ಇನ್ನೊಂದು ಟ್ರಾಕ್ಟರ್ ಕೂಡ ಬಂತು. ಇಬ್ಬರೂ ಸೇರಿ ಭರ್ ಭರ್ ಅಂತ ರೋಟರ್ ಹೊಡೆಯುತ್ತಿದ್ದರು. ನಮಗೆ ನಮ್ಮ ಹೊಲದಲ್ಲಿ ಒಂದು ಬೆಳೆ ತೆಗೆಯಲು ಸಿದ್ಧತೆ ಮಾಡುತ್ತಿರುವ ಪುಳಕ.
ಟ್ರಾಕ್ಟರ್ ಕೆಲಸ ಇನ್ನೇನು ಮುಗಿಯಿತು ಅನ್ನುವಾಗಲೇ ಒಂದು ದುರ್ಘಟನೆ ನಡೆಯಿತು…
(ಮುಂದುವರಿಯುವುದು…)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
Waiting for next …
ಮೇಧಾ, ಧನ್ಯವಾದಗಳು! 🙏