ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.
‘ಕಾವ್ಯಾ ಓದಿಗೆ ಹೊತ್ತಿಗೆ’ಯಲ್ಲಿ ಅಮೆರಿಕದ ಲೇಖಕ ಜಾನಥನ್ ಹೈಟ್ ಬರೆದಿರುವ ‘ದಿ ರೈಚಸ್ ಮೈಂಡ್’ ಪುಸ್ತಕದ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

ಜಾನಥನ್ ಹೈಟ್ ಬರೆದಿರುವ ‘ದಿ ರೈಚಸ್ ಮೈಂಡ್’ ಪುಸ್ತಕವಿರುವುದು ಮಾರಲ್ ಸೈಕಾಲಜಿ ಅಂದರೆ ನೈತಿಕ ಮನೋವಿಜ್ಞಾನದ ಬಗ್ಗೆ. ಪ್ರತಿಯೊಬ್ಬ ಮನುಷ್ಯನೊಳಗಿರುವ ನೈತಿಕತೆ ಸರಳವಾದುದಲ್ಲ. ಎಲ್ಲ ಜೀವಜಗತ್ತುಗಳು ತಮ್ಮ ಉಳಿವಿಗಾಗಿ ನಿರ್ಮಿಸಿಕೊಂಡ ವಿನ್ಯಾಸಗಳಂತೆಯೇ ನಮ್ಮ ಮಾನವ ಸಮಾಜವೂ ಸಂಕೀರ್ಣವಾದುದು. ಕುಟುಂಬ ಎಂಬ ಪುಟ್ಟ ರಚನೆಯಿಂದ ಶುರುವಾಗಿ ದೇಶ ಎಂಬ ಬೃಹತ್ ನಿರ್ಮಿತಿಯ ತನಕ ಈ ವೃತ್ತಗಳೊಳಗೇ ನಡೆಯುವ ರಾಜಕೀಯಗಳು ಮೇಲ್ನೋಟಕ್ಕೆ ಕಾಣದಷ್ಟು ಆಳವಾದ ಬೇರುಗಳಲ್ಲಿ ಹರಡಿಕೊಂಡಿರುತ್ತದೆ. ಆ ಬೇರುಗಳೇ ಈ ರಚನೆಗಳನ್ನೂ, ಗೊತ್ತಿಲ್ಲದೇ ಅವುಗಳ ಪೋಷಣೆ ಮಾಡುತ್ತಿರುವ ನಮ್ಮನ್ನೂ ಕಾಪಾಡುತ್ತವೆ. ಹೀಗಾಗಿ ಯಾವುದೇ ಸಂಗತಿಗಳ ಬಗ್ಗೆಯೂ ಇದು ಸರಿ, ಇದು ತಪ್ಪು ಎಂಬ ಸ್ಪಷ್ಟ ಗೆರೆಯನ್ನು ಎಳೆದುಕೊಳ್ಳುವುದು ಈ ವಿನ್ಯಾಸಗಳ ಒಳಗಡೆ ನಿಂತಾಗ ಸಹಜವಾಗಿ ತೋರುತ್ತವೆ. ಇಂಥ ಮನಸ್ಥಿತಿಯನ್ನೇ ಪ್ರಶ್ನಿಸುತ್ತದೆ, ಜಿಜ್ಞಾಸೆಗೆ ಒಳಪಡಿಸುತ್ತದೆ, ಬಗೆದು ತೋರಿಸುತ್ತದೆ ರೈಚಸ್ ಮೈಂಡ್ ಎಂಬ ಈ ಪುಸ್ತಕ.

ಈ ಪುಸ್ತಕದ ಪ್ರಸ್ತಾವನೆಯಲ್ಲಿ ಲೇಖಕರು ಯಾವುದೇ ಸಂಘರ್ಷವನ್ನು ಎದುರಿಸಬೇಕಿದ್ದರೂ ಇದು ಸರಿ, ಇದು ತಪ್ಪು ಎಂಬ ಪೂರ್ವಾಗ್ರಹಗಳನ್ನ ತೆಗೆದುಹಾಕಿ ಬಿಡಬೇಕು, ಆಗಲೇ ಸಮಸ್ಯೆಯನ್ನು ಹೊಸ ದೃಷ್ಟಿಯಿಂದ ದಿಟ್ಟಿಸೋಕೆ ಸಾಧ್ಯ ಎಂಬ ಪ್ರಸ್ತಾಪವನ್ನಿಡುತ್ತಾರೆ. ಅವರ ಪ್ರಕಾರ Intutions come first, strategic reasoning second.. ಯಾವುದನ್ನೂ ನಿರ್ಧರಿಸುವ ಮೊದಲೇ ಸರಿ ಯಾವುದು, ತಪ್ಪು ಯಾವುದು ಎನ್ನುವುದನ್ನು ತಲೆಯಲ್ಲಿಟ್ಟುಕೊಂಡೇ ನಂತರ ಅದನ್ನು ಸಮರ್ಥಿಸುವುದಕ್ಕೆ ಕಾರಣಗಳನ್ನು ಜಾಣತನದಿಂದ, ನಮಗೇ ಅರಿವಿಲ್ಲದಂತೆ ಆಯ್ದುಕೊಳ್ಳುತ್ತೇವೆ ಎಂದು ಮಂಡಿಸುತ್ತಾರೆ ಹೈಟ್. ಅಂದರೆ ಇಟ್ಯೂಶನ್ ಎಂಬುದೇ ಮೊದಲು ಬಂದು, ರೀಸನಿಂಗ್ ಅಂದರೆ ತರ್ಕಸರಣಿಯು ಆ ಅಂತರ್ದೃಷ್ಟಿಯ ಹಿಂಬಾಲಕನಂತೆ ಕರೆದಲ್ಲಿ ಬರುತ್ತದೆ ಎಂಬುದು ಅವರ ವಾದ.

(ಜಾನಥನ್ ಹೈಟ್)

ಈ ಅಂತರ್ದೃಷ್ಟಿ ಮತ್ತು ತರ್ಕಸರಣಿಯನ್ನು ಅವರು ನಾಯಿ ಮತ್ತದರ ಬಾಲಕ್ಕೆ ಹೋಲಿಸುತ್ತಾರೆ. ಶ್ವಾನ ಎಲ್ಲಿ ಹೋಗುತ್ತದೋ, ಬಾಲವೂ ಅದರ ಜೊತೆಗೆ, ಅದಕ್ಕಂಟಿಕೊಂಡು ಹೋಗಲೇ ಬೇಕು. ತನ್ನ ಪ್ರತಿರೋಧವನ್ನು ಆ ಬಾಲ ಅಲ್ಲಾಡಿಬಿಟ್ಟು ತೋರಬಹುದೇ ವಿನಃ ತನ್ನದೇ ದಾರಿಗೆ ಹೋಗುವಂತಿಲ್ಲ. ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು, ಕಾಯ್ದುಕೊಳ್ಳುವುದೇ ಕಡುಕಷ್ಟ ಎಂಬುದನ್ನು ಮನುಷ್ಯ ಸ್ವಭಾವದ ಉದಾಹರಣೆಗಳ ಸಹಿತ ಹಂತಹಂತವಾಗಿ ವಿವರಿಸುತ್ತಾರೆ ಲೇಖಕ. ಅಮೆರಿಕದಲ್ಲಿ ಡೆಮಕ್ರಾಟಿಕ್ ಮತ್ತು ರಿಪಬ್ಲಿಕನ್ ಎಂಬ ಧ್ರುವೀಕರಣ ಒಬ್ಬರ ಮುಖವನ್ನೊಬ್ಬರು ನೋಡದಷ್ಟು ದೂರಕ್ಕೆ ಈ ನಂಬಿಕೆಗಳಿಗೆ ಜೋತುಬಿದ್ದವರನ್ನು ಕರೆದೊಯ್ದುಬಿಟ್ಟಿದೆ.

2016ರ ಅಧ್ಯಕ್ಷೀಯ ಚುನಾವಣೆ ಅಮೆರಿಕದಾದ್ಯಂತ ಶಾಕ್ ವ್ಹೇವ್‌ಗಳನ್ನು ಉಂಟುಮಾಡಿತ್ತು. ಸಾಧ್ಯವೇ ಇಲ್ಲ ಎಂಬ ಫಲಿತಾಂಶವನ್ನು ನೀಡಿ ಟ್ರಂಪ್‌ರನ್ನು ಅಧ್ಯಕ್ಷೀಯ ಸ್ಥಾನದಲ್ಲಿ ಕೂಡಿಸಿತ್ತು. ಹೀಗೆ ತಾವು ಮುಳುಗಿದರೂ ಸರಿ, ಇನ್ನೊಬ್ಬರಿಗೆ ಕೇಡು ಬಗೆಯಲೇಬೇಕು ಎಂಬ ನಿರ್ಧಾರವನ್ನು ಜನಸಮೂಹ ಹೇಗೆ ಮಾಡುತ್ತದೆ, ಅವರ ನೈತಿಕ ಮನೋವಲಯ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇನ್ನೊಂದು ಮುಖದಲ್ಲಿ ಕಟ್ಟಿಕೊಡುತ್ತಾರೆ ಲೇಖಕರು. ಈ ಪುಸ್ತಕ ಬಂದಿದ್ದು 2012ರಲ್ಲಿ. 2016ರ ಚುನಾವಣೆಗಿಂಥ ತುಂಬ ಮೊದಲು. ಆದರೆ ಚುನಾವಣೆಯ ನಂತರ ಈ ಕೃತಿ ಪುಸ್ತಕಪ್ರೇಮಿಗಳಿಂದ ಮರು ವಿಮರ್ಶೆಗೆ ಒಳಪಟ್ಟಿತು.

ನೈತಿಕ ಮನೋವಿಜ್ಞಾನದ ಕುರಿತಾಗಿರುವ ಈ ಪುಸ್ತಕವನ್ನು ಎಲ್ಲರೂ ಓದಬೇಕಾಗಿಲ್ಲ, ಮನಃಶಾಸ್ತ್ರದ ವಿದ್ಯಾರ್ಥಿಗಳಷ್ಟೇ ಓದಿಕೊಂಡರೆ ಸಾಕು ಎನ್ನುವುದು ಪ್ರಜ್ಞಾವಂತ ಸಮಾಜದ ಉದಾಸೀನತೆಯಾಗುತ್ತದೆ. ಇಲ್ಲಿ ಮಂಡಿಸಿರುವ ವಿಷಯಗಳು ಈ ಕಾಲದ ಎಷ್ಟೋ ನಾಗರಿಕ ಸಮುದಾಯದ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸುತ್ತದೆ ಎನ್ನುವುದು ಓದುತ್ತಲೇ ಅನುಭವಕ್ಕೆ ಬರುತ್ತದೆ. ಧರ್ಮ ಮತ್ತು ರಾಜಕೀಯದ ನೆಪವಾಗಿ, ಮನುಷ್ಯರ ನಡುವೆ ಛೇದವೇರ್ಪಟ್ಟು ಎಲ್ಲರೂ ಒಂದೊಂದು ದಿಕ್ಕಿಗೆ ಮುಖಹಾಕಿ ನಮ್ಮನಮ್ಮ ಮೂಗಿನ ನೇರಕ್ಕೇ ಯೋಚಿಸುತ್ತಿರುವಾಗ ಒಂದೇ ಮನೆಯಲ್ಲಿ, ಆಫೀಸುಗಳಲ್ಲಿ, ಸ್ನೇಹ ವಿಶ್ವಾಸಗಳನ್ನು ಉಳಿಸಿಕೊಳ್ಳಬೇಕಾದರೆ ರಾಜಕೀಯ ಮತ್ತು ಧರ್ಮದ ವಿಷಯಗಳನ್ನು ಚರ್ಚಿಸದೇ, ಕೇವಲ ಉಭಯ ಕುಶಲೋಪರಿಗಳನ್ನು ಮಾತ್ರ ಮಾತಾಡಿಕೊಂಡಿದ್ದರೆ ಕ್ಷೇಮ ಎಂದೇ ನಾವೆಲ್ಲ ನಂಬಿಕೊಂಡಿದ್ದೇವೆ. ರಾಜಕೀಯದ ವಿಷಯವನ್ನು ಊಟದ ಟೇಬಲ್ಲಿನ ತನಕ ತಂದರೆ ಯಾರಿಗೂ ನೆಮ್ಮದಿ ಇರುವುದಿಲ್ಲ ಎನ್ನುವುದು ಎಲ್ಲರ ಅಂಬೋಣವಾಗಿದೆ. ಆದರೆ ಅದೇಕೆ ತಪ್ಪು, ಸತ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದರಿಂದ ಆಗುವ ಲಾಂಗ್ ಟರ್ಮ್ ಪ್ರಯೋಜನಗಳೇನು ಎಂಬುದನ್ನು ಹೈಟ್ ಚರ್ಚಿಸುತ್ತಾರೆ.

ಶ್ವಾನ ಎಲ್ಲಿ ಹೋಗುತ್ತದೋ, ಬಾಲವೂ ಅದರ ಜೊತೆಗೆ, ಅದಕ್ಕಂಟಿಕೊಂಡು ಹೋಗಲೇ ಬೇಕು. ತನ್ನ ಪ್ರತಿರೋಧವನ್ನು ಆ ಬಾಲ ಅಲ್ಲಾಡಿಬಿಟ್ಟು ತೋರಬಹುದೇ ವಿನಃ ತನ್ನದೇ ದಾರಿಗೆ ಹೋಗುವಂತಿಲ್ಲ.

Why good people are divided by Politics and Religion ಎನ್ನುವುದು ಈ ಪುಸ್ತಕದ ಟ್ಯಾಗ್ ಲೈನ್. ಎಲ್ಲರೂ ಒಳ್ಳೆಯ ಜನರೇ ಆಗಿರುವಾಗ ಒಂದು ತತ್ವದ ಬೆನ್ನು ಬಿದ್ದು ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೆ ಯಾಕೆ ಹೋಗುತ್ತೇವೆ, ಹಾಗೆ ಯೋಚಿಸುವಾಗ ಮನುಷ್ಯರ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೆರೆದಿಡುತ್ತಾರೆ. ಇದು ಬೆರಳ ತುದಿಗಳ ಮೇಲೆ ಇಡೀ ಜಗತ್ತು ಏಕವಾಗುವ ನವ ಮಾಧ್ಯಮದ ಕಾಲದಲ್ಲಿ ಇನ್ನಷ್ಟು ಅವಶ್ಯಕವಾದುದು. ವೈರುಧ್ಯಗಳನ್ನು ಉಳಿಸಿಕೊಂಡೇ ಸ್ನೇಹ- ಗೌರವಗಳನ್ನು ಉಳಿಸಿಕೊಳ್ಳುವುದು ಈ ಕಾಲದ ಬೇಡಿಕೆಯಾಗಿದೆ.

ಕೆಲವು ವರ್ಷಗಳ ಹಿಂದೆ ಗೇಮ್ ಆಫ್ ಥ್ರೋನ್ಸ್ ಎಂಬ ಟೀವಿ ಸಿರೀಸ್ ಎಲ್ಲ ಕಡೆಗೂ ಕುತೂಹಲ ಕೆರಳಿಸಿತ್ತು. ವೆಸ್ಟೋರಸ್ ಎಂಬ ಕಲ್ಪಿತ ರಾಜ್ಯದ ಕತೆಯದು. ಅಲ್ಲಿ ರಾಣಿ ಸರ್ಸಿಗೆ ತನ್ನ ಅವಳಿ ಸೋದರನ ಜೊತೆಗೇ ಎಂದಿನಿಂದಲೂ ದೈಹಿಕ ಸಂಬಂಧವಿರುತ್ತದೆ. ಅವಳಿಗಿರುವ ಮೂವರು ಮಕ್ಕಳೂ ಈ ಅವಳಿ ಸಹೋದರ ಜೇಮಿಯಿಂದಲೇ ಹುಟ್ಟಿದ್ದು. ಇಡೀ ರಾಜ್ಯದಲ್ಲಿ ಇದೊಂದು ಓಪನ್ ಸೀಕ್ರೆಟ್‌ನಂತೆ ಎಲ್ಲರಿಗು ಗೊತ್ತಿದ್ದರೂ ಯಾರೂ ಆ ಬಗ್ಗೆ ಬಾಯಿ ಬಿಟ್ಟು ಮಾತನಾಡದಷ್ಟು ಅಂಕೆಯಲ್ಲಿರುತ್ತಾರೆ. ಕಥನದಲ್ಲಿ ಇದೊಂದು ಸಣ್ಣ ಸಂಗತಿ. ಈ ಸಂಗತಿಯನ್ನೆತ್ತಿಕೊಂಡು ಸರಿ- ತಪ್ಪು, ತಪ್ಪಾದರೆ ಯಾಕೆ ತಪ್ಪು, ಯಾವುದೇ ಕ್ರಿಯೆ ತಪ್ಪೆಂದು ನಿರ್ಣಯಿಸಿಬಿಡುವ ಮೊದಲು ನಮ್ಮ ಮಿದುಳು ಹೇಗೆ ಯೋಚಿಸುತ್ತದೆ ಎಂಬೆಲ್ಲ ವಿವರಗಳನ್ನು ವಿಸ್ತಾರವಾಗಿ ತೆರೆದಿಡುತ್ತಾರೆ ಹೈಟ್. ಒಟಹುಟ್ಟಿದವರ ನಡುವೆ ದೈಹಿಕ ಮಿಲನ ಏರ್ಪಡುವುದನ್ನು ಕೇಳುತ್ತಲೇ ನಮ್ಮ ಒಳಗಡೆ ಅಡಗಿರುವ ನೈತಿಕತೆಗೆ ಅತಿದೊಡ್ಡ ಪೆಟ್ಟು ಬಿದ್ದಂತೆ ನಾವು ತತ್ತರಿಸುತ್ತೇವೆ. ಅದರ ಒಳಸೂಕ್ಷ್ಮಗಳನ್ನು ಹೊಕ್ಕು ಒಂದೊಂದೇ ಎಳೆಗಳನ್ನು ಬಿಡಿಸಿಡುವುದು, ಆ ಕುರಿತು ಚಿಂತಿಸುವಂತೆ ಮಾಡುವುದು ವಿಶೇಷವಾಗಿದೆ.

ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.

ಕೆಲವು ಆಸಕ್ತಿಕರ ಮಾಹಿತಿಗಳೂ ಈ ಹೊತ್ತಿಗೆಯಲ್ಲಿವೆ. ನಾವೀಗ ಎಡ, ಬಲ ಎಂದು ಆರಾಮಾಗಿ ಬಳಸುವ ಶಬ್ದಗಳು ಮತ್ತು ಅದಕ್ಕಂಟಿದ ಅರ್ಥ ಹೇಗೆ ನಿರ್ಮಾಣವಾಯಿತು ಎಂದು ಹೈಟ್ ತೆರೆದಿಡುತ್ತಾರೆ. 1789ರ ಫ್ರೆಂಚ್ ಸಂಸತ್ತಿನಲ್ಲಿ ಒಂದು ಕಾನೂನನ್ನು ಉಳಿಸಿಕೊಳ್ಳಬೇಕು ಎನ್ನುವವರೆಲ್ಲ ಬಲಕ್ಕೆ ಕುಳಿತುಕೊಳ್ಳುತ್ತಿದ್ದರಂತೆ, ಅದನ್ನು ಬದಲಿಸಬೇಕು ಎನ್ನುವವರೆಲ್ಲ ಎಡಕ್ಕೆ ಕುಳಿತುಕೊಳ್ಳುತ್ತಿದ್ದರಂತೆ. ನಾವು ಎಡ- ಬಲ ಎಂದು ಉಪಯೋಗಿಸುವ ಶಬ್ದಗಳಿಗೆ ಈ ಇತಿಹಾಸವಿದೆ.

ಲೇಖಕರು ಭಾರತದ ಭುವನೇಶ್ವರಕ್ಕೆ ಭೇಟಿ ಕೊಟ್ಟಾಗ ಅಲ್ಲಿ ನಡೆದ ಒಂದು ಘಟನೆ ಅವರನ್ನು ಚಕಿತಗೊಳಿಸುತ್ತದೆ. ಅಲ್ಲಿ ಅವರು ಒಂದು ಮನೆಗೆ ಅತಿಥಿಯಾಗಿ ಹೋಗಿರುತ್ತಾರೆ. ಮನೆಯ ಗಂಡಸು ಇವರೊಂದಿಗೆ ಕುಳಿತು ಮಾತನಾಡುತ್ತ ಊಟ ಮಾಡುವುದು, ಆತನ ಹೆಂಡತಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಮಾತುಕತೆಯಲ್ಲಿ ಭಾಗವಹಿಸದೇ ಕೇವಲ ಊಟ ಬಡಿಸಲಷ್ಟೇ ಬರುವುದು ಇವರಿಗೆ ಅತ್ಯಾಶ್ಚರ್ಯವನ್ನುಂಟು ಮಾಡುತ್ತದೆ. ಪಶ್ಚಿಮದಲ್ಲೇ ಹುಟ್ಟಿ ಬೆಳೆದ ಜಾನಥನ್ ಹೈಟ್ ಇದೊಂದು ಭಾರತೀಯ ಯೋಚನಾ ಮಾದರಿಯಿರಬಹುದೇ ಎಂಬ ಮಂಥನಕ್ಕೆ ಒಡ್ಡಿಕೊಳ್ಳುತ್ತಾರೆ. ಆದರೆ ಭಾರತದಲ್ಲೇ ಹುಟ್ಟಿ ಬೆಳೆದ ಆಧುನಿಕ ಮನಸ್ಸುಗಳಿಗೆ ಈ ಘಟನೆ ಬೇರೆಯಾಗಿ ಕಾಣಿಸಬಹುದು. ಭಾರತದ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿಗಿರುವ ಕಟ್ಟಳೆಗಳನ್ನು ಮೂಲಕ್ಕಿಳಿಯದೇ ಒಪ್ಪಿಕೊಂಡು ಬಿಡುವುದು ಸುಲಭ. ಅದೊಂದು ಯೋಚನಾ ಮಾದರಿ ಏನಲ್ಲ, ನಿಜದಲ್ಲಿ ನೋಡಬೇಕಾದರೆ ಹೆಣ್ಣಿನ ಯೋಚನೆಗಳಿಗೆ ಭಾರತದ ಕುಟುಂಬ ಪದ್ಧತಿಯಲ್ಲಿರುವ ಸ್ಥಾನ ಮನೆಯ ಇತರರು ಅನುಗ್ರಹಿಸಿದರಷ್ಟೇ ದೊರಕುವಂಥದು ಎನ್ನುವ ಸತ್ಯ ಹೊರಗಿನಿಂದ ನೋಡುವವರಿಗೆ ಗೊತ್ತಾಗಬೇಕಲ್ಲ!

ಈ ಪುಸ್ತಕದಲ್ಲಿ ‘ಹೈವ್ ಸ್ವಿಚ್’ ಎಂಬ ಸಿದ್ಧಾಂತವನ್ನು ಲೇಖಕರು ಪ್ರಚುರಪಡಿಸುತ್ತಾರೆ. ಮನುಷ್ಯರು ತೊಂಬತ್ತು ಪ್ರತಿಶತಃ ಚಿಂಪಾಂಜಿಗಳಂತೆ ಸ್ವಾರ್ಥಿಗಳಂತೆ, ಹತ್ತು ಪ್ರತಿಶತಃ ಜೇನುನೊಣಗಳಂತೆ. ಯಾವತ್ತೂ ಸ್ವಾರ್ಥಿಗಳಾಗಿಯೇ ಯೋಚಿಸಿದರೂ, ಬದುಕಿದರೂ ಎಂದಾದರೊಮ್ಮೆ ಚಿಂಪಾಂಜಿಗಳು ಜೇನುನೊಣಗಳಾಗಿ ಬದಲಾಗುವ ಈ ಹೈವ್ ಸ್ವಿಚ್ ಸಾಧ್ಯತೆಯೊಂದು ತೆರೆದೇ ಇರುತ್ತದೆ ಎಂದು ಹೇಳುತ್ತಾರೆ. ದೇಶ, ಧರ್ಮ, ಭಾಷೆ ಎಂಬ ಕಲ್ಪನೆಗಳಿಗಾಗಿ ಹೋರಾಡುವುದು, ಜನಾಂಗೀಯ ಕಲಹ ಸೃಷ್ಟಿಸುವುದು, ಎಲ್ಲೋ ಭೂಕಂಪವಾದರೆ ಇಲ್ಲಿರುವ ನಮ್ಮ ಮನಸ್ಸು ವಿಹ್ವಲಗೊಂಡು ಜಗತ್ತಿನ ಇನ್ನೊಂದು ಬದಿಯಲ್ಲಿರುವ ಅವರಿಗೆ ಸಹಾಯ ಮಾಡಲು ಹಾತೊರೆಯುವುದೆಲ್ಲ ಈ ಹೈವ್ ಸ್ವಿಚ್ಚಿನದ್ದೇ ಭಾಗ ಎಂದು ಹೈಟ್ ನಿರೂಪಿಸುತ್ತಾರೆ.

ಎಡ- ಬಲ ಎಂಬ ಧೃವೀಕರಣದ ಬಗ್ಗೆ ಅರಿವಿಟ್ಟುಕೊಂಡೇ ಒಬ್ಬರನ್ನೊಬ್ಬರು ಹೇಗೆ ಸಹಿಸಿಕೊಳ್ಳುವುದು, ನೆಮ್ಮದಿಯ ಸಮಾಜವನ್ನೂ, ತಾಣವನ್ನೂ ರೂಪಿಸಿಕೊಳ್ಳುವುದು ಎಂಬ ಸಂಗತಿಗಳು ಈ ಕಾಲದ ಬೇಡಿಕೆಯಾಗಿದೆ. ಆ ಸಂದಿಗ್ಧವನ್ನು ಎದುರಿಸಲು ಪ್ರಯತ್ನಿಸಿದ್ದು ಈ ಬರಹದ ಹಿರಿಮೆ. ಪುಸ್ತಕದ ಕೆಲ ಆಶಯ ಸಾಲುಗಳ ಜೊತೆಗೆ ಈ ಬರಹ ಮುಗಿಸುವೆ.

“So the next time you find yourself seated beside someone from another matrix, give it a try. Don’t jump right in. Don’t bring up morality until you’ve found a few points of commonality or in some other way established a bit of trust.

And when you do bring up morality, try to start with some praise, or with a sincere expression of interest.

We’re all stuck here for a while, so let’s try to work it out.”

ಅಸಹಿಷ್ಣುತೆ ಎಲ್ಲ ಕ್ಷೇತ್ರಗಳಲ್ಲೂ ಜೀವಂತವಾಗಿರುವಾಗ, ಕೇವಲ ಭಾವನೆಗಳಿಗೆ ದನಿ ಕೊಡದೇ, ಸಮಸ್ಯೆಯನ್ನು ಪ್ರಾಕ್ಟಿಕಲ್ ಆಗಿ ಹೇಗಾದರೂ ಪರಿಹರಿಸಿಕೊಳ್ಳಬಹುದೇ ಎಂಬ ಬಗೆಗಿನ ಪ್ರಯತ್ನ ಈ ಪುಸ್ತಕದಲ್ಲಿ ನಡೆದಿದೆ. ಕಾಲ ಕೆಳಗೆ ಕುಸಿಯುವ ಮರಳಿನ ಮೇಲೆ ನಿಂತಾಗ ಅಂತಃಶಕ್ತಿಯೇ ಆಸರೆಯಾದಂತೆ ಓದುತ್ತಲೇ ಒಂದು ಕ್ಷಣ ಈ ಕೃತಿ ಹಿಡಿದು ನಿಲ್ಲಿಸುವುದು.