ದ್ವೀಪಗಳು

ಆಕಸ್ಮಿಕಗಳ ಸಾಗರದಲಿ ತೆರಪಿಲ್ಲದ ಭೋರ್ಗರೆತದಾಟ
ಅಲೆಗಳ ಮೇಲೆ ವಿಲಕ್ಷಣ ದ್ವೀಪಗಳ ತೇಲಾಟ
ಅಲ್ಲಿ ಬೆಳಕು ನೆರಳಿನ ಕಣ್ಣು ಮುಚ್ಚಾಲೆಯಾಟ
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ

ದ್ವೀಪಗಳಲಿ ವೈಚಿತ್ರ್ಯಗಳ ಸಾಲು ಸಾಲು ಮೆರವಣಿಗೆ
ಬಂಧನದಿ ಸಿಲುಕಿ ತಿಳಿಯದ ಹಗರಣಗಳ ಉರವಣಿಗೆ
ವ್ಯರ್ಥದಾಲಾಪ ಅರ್ಥೈಸಲಾಗದ ಒಣ ಒಗಟು
ಬಿಟ್ಟೋಡಲಾಗದ ಬಿಡದ ಸರಕು ಗಂಟು ಗಂಟು
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ

ದ್ವೀಪಗಳ ಒಳಾಂಗಣದಲ್ಲಿ ಅಗಾಧ ತಾಕಲಾಟ
ತಪ್ಪಿಸದಂತೆ ಸಿಲುಕಿ ಹೆಣಗಾಟ ಬಿರುಗಾಳಿಯ ಆರ್ಭಟ
ಮೇರೆ ಮೀರದಂತೆ ಬಂಧಿಸಿಡುವ ಹೋರಾಟ
ಒಣ ತರಗೆಲೆಯೋ ಹಸಿ ಗರಿಕೆಯೋ ಮಿಸುಕದು ಗಟ್ಟಿ ಅಂಟು
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ

ಆಕಸ್ಮಿಕಗಳ ಸಾಗರವೇ ದೊಡ್ಡ ಗೋಜಲಿನ ಮೂಟೆ
ಆ ದ್ವೀಪಗಳ ನಿರ್ಮಿತಿ ಇನ್ನೊಂದು ತರಲೆಗಳ ಮೂಟೆ
ಅಸ್ತಿತ್ವದ ಭರವಸೆ ನಂಬುಗೆ ಇಲ್ಲದ ಕಂತೆಗಳ ಕೂಟ
ಆದರೂ ಅನುಕ್ಷಣ ಅದೇನೋ ಆತುರದ ಹುಡುಕಾಟ
ಮುಗಿಲ ಮೊಗದಿ ಸೋಜಿಗದ ಗೂಢ ನಗುವಿನಾಟ