ಒಂದು ಮಗುವಿನ ವರ್ತನೆ ಅಸಹಜವಾಗಿ ಕಾಣಿಸುವಂತೆ, ಪುಟ್ಟ ಹುಡುಗನೊಬ್ಬ ಈ ಪರಿ ನಟಿಸುವುದು ಖಂಡಿತ ಸಾಮಾನ್ಯ ಸಂಗತಿಯಲ್ಲ. ಚಿತ್ರದುದ್ದಕ್ಕೂ ಜೆಫ್ರನ್ ಎಷ್ಟು ತೀವ್ರವಾಗಿ ಕಾಡುತ್ತಾನೆ ಎಂದರೆ, ಆತನ ಚೇಷ್ಟೆ, ಅಕ್ವೇರಿಯಂ ಒಡೆದು ಹಾಕುವ ದೃಶ್ಯ, ಟ್ರೇ ಪೂರ್ತಿ ಮೊಟ್ಟೆ ಎತ್ತಿಕೊಂಡು ಹೋಗಿ ಟೆರೇಸ್ ಮೇಲೆ ಕೂತು ಹಾಯಾಗಿ ಕೆಳಗೆ ಎಸೆಯುವ ದೃಶ್ಯ, ತಾನಿಚ್ಛಿಸಿದ್ದು ಈ ಕ್ಷಣವೇ ಬೇಕು ಎಂದು ಬಿಡದೇ ಹಠ ಮಾಡಿ ಕೂಗಾಡುವ ದೃಶ್ಯ, ಅವನ ಮಿತಿಯಿಲ್ಲದ ತರಲೆಗಳೆಲ್ಲವೂ ನಮ್ಮ ಸಹನೆಯನ್ನೂ ಮೀರಿಸುವಷ್ಟು.
ಮಲಯಾಳಂನ “ಸರ್ಕೀಟ್” ಚಿತ್ರದ ಕುರಿತು ಶರೀಫ್ ಕಾಡುಮಠ ಬರಹ
ಎಡಿಎಚ್ ಡಿ (ಚಂಚಲತೆ ಹಾಗೂ ಅತಿಚಟುವಟಿಕೆಯ ಕಾಯಿಲೆ) ಸಂಬಂಧಿತ ಕಥೆಯ ಜೊತೆಗೆ ಅನಿವಾಸಿ ಭಾರತೀಯರ ಬದುಕಿನ ಸಂಕಟಗಳನ್ನು ಸ್ವಲ್ಪಮಟ್ಟಿಗೆ ಮುಟ್ಟುವ ಮಲಯಾಳಂ ಚಿತ್ರ ಸರ್ಕೀಟ್. ಉದ್ಯೋಗ ನಿಮಿತ್ತ ಯುಎಇನಲ್ಲಿ ನೆಲೆಸಿದ ದಂಪತಿ, ಎಡಿಎಚ್ ಡಿ ಇರುವ, ಅಂದಾಜು ಐದಾರು ವರ್ಷ ವಯಸ್ಸಿನ ಮಗನನ್ನು ನೋಡಿಕೊಳ್ಳಲು ಪಡುವ ಪಾಡು, ಉದ್ಯೋಗ, ಮನೆ ನಿಭಾಯಿಸುವ ಸವಾಲು, ಮಗುವಿನ ವರ್ತನೆ ಅವರ ಬದುಕಿನಲ್ಲಿ ಉಂಟುಮಾಡುವ ಪರಿಣಾಮ… ಹೀಗೆ ಎಲ್ಲವನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ.
ಆಸಿಫ್ ಅಲಿ ಚಿತ್ರದಿಂದ ಚಿತ್ರಕ್ಕೆ ನಟನೆಯಲ್ಲಿನ ಪಕ್ವತೆಯನ್ನು ಮತ್ತಷ್ಟು ಹೆಚ್ಚಿಸುತ್ತಿರುವುದು ಕಾಣಿಸುತ್ತದೆ. ಸರ್ಕೀಟ್ ನಲ್ಲಿ ಕೂಡ ‘ಕಿಷ್ಕಿಂಧ ಕಾಂಡಂ’ ಮಾದರಿಯ ಗಂಭೀರ ಸನ್ನಿವೇಶಗಳಲ್ಲಿ ಆಸಿಫ್ ಅಭಿನಯ ಮನೋಜ್ಞವಾಗಿದೆ. ಸಿನಿಮಾದಲ್ಲಿ ಎಲ್ಲರ ಅಭಿನಯವೂ ಪಾತ್ರಕ್ಕೆ ತಕ್ಕುದಾಗಿ ಮನಮುಟ್ಟುವ ಹಾಗಿವೆ. ಬಾಲು- ಸ್ಟೆಫಿ ದಂಪತಿ ಪಾತ್ರದಲ್ಲಿ ದೀಪಕ್ ಹಾಗೂ ದಿವ್ಯಪ್ರಭ ನಟನೆ ಇಷ್ಟವಾಗುತ್ತದೆ. ಸೆಕೆಂಡ್ ಹಾಫ್ ನಲ್ಲಿ ಕಥೆಯ ತೀವ್ರತೆ ಹೆಚ್ಚಾದಂತೆ ಅದು ಎಲ್ಲ ಪಾತ್ರಗಳ ನಟನೆಯಲ್ಲಿ ಪ್ರತಿಬಿಂಬಿಸಿದ ರೀತಿ ಗಮನಾರ್ಹ.
ಈ ಸಿನಿಮಾದಲ್ಲಿ ಹೆಚ್ಚು ಬೆರಗು ಮೂಡಿಸಿದ್ದು ಜೆಫ್ರನ್ ಪಾತ್ರದಲ್ಲಿ ಒರ್ಹಾನ್ ಹೈದರ್ ಎನ್ನುವ ಪುಟ್ಟ ಹುಡುಗನ ನಟನೆ. ಅದು ನಟನೆ ಅಲ್ಲ, ಘಟನೆ ಎಂದು ಭಾಸವಾಗುವಷ್ಟು ನೈಜಾಭಿನಯ. ಎಂಥ ಅದ್ಭುತ ಪ್ರದರ್ಶನ! ಯಾವುದೇ ಸಿನಿಮಾದಲ್ಲಿ ಕೂಡ, ಸಾಮಾನ್ಯ ಪಾತ್ರಕ್ಕಾದರೂ ಮಕ್ಕಳಿಗೆ ಕಥೆ ಅರ್ಥ ಮಾಡಿಸಿ ನಟಿಸುವಂತೆ ಹೇಳುವುದು ನಿರ್ದೇಶಕರಿಗೆ ಸವಾಲಿನ ಕೆಲಸ. ಹಾಗಿರುವಾಗ ಒಂದು ಮಗುವಿನ ವರ್ತನೆ ಅಸಹಜವಾಗಿ ಕಾಣಿಸುವಂತೆ, ಪುಟ್ಟ ಹುಡುಗನೊಬ್ಬ ಈ ಪರಿ ನಟಿಸುವುದು ಖಂಡಿತ ಸಾಮಾನ್ಯ ಸಂಗತಿಯಲ್ಲ. ಚಿತ್ರದುದ್ದಕ್ಕೂ ಜೆಫ್ರನ್ ಎಷ್ಟು ತೀವ್ರವಾಗಿ ಕಾಡುತ್ತಾನೆ ಎಂದರೆ, ಆತನ ಚೇಷ್ಟೆ, ಅಕ್ವೇರಿಯಂ ಒಡೆದು ಹಾಕುವ ದೃಶ್ಯ, ಟ್ರೇ ಪೂರ್ತಿ ಮೊಟ್ಟೆ ಎತ್ತಿಕೊಂಡು ಹೋಗಿ ಟೆರೇಸ್ ಮೇಲೆ ಕೂತು ಹಾಯಾಗಿ ಕೆಳಗೆ ಎಸೆಯುವ ದೃಶ್ಯ, ತಾನಿಚ್ಛಿಸಿದ್ದು ಈ ಕ್ಷಣವೇ ಬೇಕು ಎಂದು ಬಿಡದೇ ಹಠ ಮಾಡಿ ಕೂಗಾಡುವ ದೃಶ್ಯ, ಅವನ ಮಿತಿಯಿಲ್ಲದ ತರಲೆಗಳೆಲ್ಲವೂ ನಮ್ಮ ಸಹನೆಯನ್ನೂ ಮೀರಿಸುವಷ್ಟು. ಈ ಸಿನಿಮಾ ADHD ಬಗ್ಗೆ ವೈಜ್ಞಾನಿಕ ವಿವರಣೆಗಳೊಂದಿಗೆ ಹೆಚ್ಚು ಮಾಹಿತಿ ಕೊಡದೇ ಇದ್ದರೂ ಕೂಡ, ಅದನ್ನು ಅನುಭವಿಸುತ್ತಿರುವ ಮಗುವೊಂದು ಹೇಗೆಲ್ಲ ಆಡಬಹುದು, ಅದರಿಂದ ಕುಟುಂಬದಲ್ಲಿ ಏನೆಲ್ಲ ಆಗಬಹುದು, ಅಂತಹ ಮಗುವನ್ನು ನೋಡಿಕೊಳ್ಳುವಲ್ಲಿ ಹೆತ್ತವರು ವಹಿಸಿಕೊಳ್ಳಬೇಕಾದ ಎಚ್ಚರವೇನು ಎನ್ನುವುದನ್ನು ದೃಶ್ಯೀಕರಿಸಿರುವ ರೀತಿ ಅದರ ವಿವರಣೆಗಳ ಕೊರತೆಯ ನಡುವೆಯೂ ಬಹುಪಾಲು ಮೆಚ್ಚುಗೆಯ ಸಂಗತಿ ಅನಿಸಿತು.

ಗಲ್ಫ್ ನಲ್ಲಿ ಉದ್ಯೋಗಕ್ಕಾಗಿ ನಿರಂತರ ಅಲೆದಾಡುವ ಅಮೀರ್(ಆಸಿಫ್ ಅಲಿ), ಅಲ್ಲಿ ಅನುಭವಿಸುವ ಸಂಕಟ, ಮೋಸದ ಜಾಲಗಳ ಅರಿವಿಲ್ಲದೆ ಹೋಗುವುದು, ಗೆಳೆಯರೆನಿಸಿಕೊಂಡವರ ಅಸಹಾಯಕ ಸನ್ನಿವೇಶಗಳು, ಎದುರಾಗುವ ನಂಬಿಕೆ, ಅಪನಂಬಿಕೆಯ ಪ್ರಶ್ನೆಗಳು, ತೀವ್ರವಾದ ಸಂಕಟದ ಹೊತ್ತು ತನ್ನನ್ನು ತಂದು ನಿಲ್ಲಿಸುವ ಹಂತ ಇವೆಲ್ಲವನ್ನು ಅನಿವಾಸಿ ಭಾರತೀಯರ ಬದುಕಿನ ಸಂಕಟಗಳ ಪುಟ್ಟ ಎಳೆಯಾಗಿ ಸಿನಿಮಾ ಮುಂದಿಟ್ಟಿದೆ.
ಉದ್ಯೋಗಕ್ಕಾಗಿ ಅಲೆದಾಡುವ ಕಾರಣಕ್ಕೆ ಅಮೀರ್, ಎಡಿಎಚ್ ಡಿ ಕಾರಣಕ್ಕೆ ಜೆಫ್ರನ್ ಈ ಕಥೆಯ ಕೇಂದ್ರಗಳಂತೆ ಕಾಣಿಸಿದರೂ ಕೂಡ ಅದೇ ಮಾದರಿಯ ಅನುಭವಗಳನ್ನು ದಾಟುತ್ತ, ಎಡವುತ್ತ ಸಾಗುವ ಬಾಲು- ಸ್ಟೆಫಿ ದಂಪತಿಯ ಬದುಕಿನಲ್ಲಾಗುವ ಏರುಪೇರು, ಪ್ರೀತಿ, ನಂಬಿಕೆ, ಮಾತು ಮೂಡಿಸುವ ಬಿರುಕು ಎಲ್ಲವೂ ತಣ್ಣಗೆ ಕೇಂದ್ರ ಪಾತ್ರಗಳ ಸುತ್ತ ತಿರುಗುತ್ತಲೇ ಇರುತ್ತದೆ. ಅದರ ಅನುಭವ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ದಟ್ಟವಾಗುತ್ತದೆ.
ತಾಮರ್ ಕೆ.ವಿ. ಬರೆದು ನಿರ್ದೇಶಿಸಿದ ಚಿತ್ರ ಇದು. 96 ಎನ್ನುವ ತಮಿಳಿನ ಸೂಪರ್ ಹಿಟ್ ಸಿನಿಮಾಕ್ಕೆ ಸಂಗೀತ ನೀಡಿರುವ ಗೋವಿಂದ್ ವಸಂತ ಅವರ ಸಂಗೀತ ಈ ಸಿನಿಮಾದಲ್ಲಿಯೂ ಕಾಡುತ್ತದೆ. ನಿಧಾನಗತಿಯಲ್ಲಿ ಸಾಗುವ ಸರ್ಕೀಟ್, ಅದೇ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಹೆಚ್ಚು ಓಡಲಿಲ್ಲವೇನೊ. ಕೆಲವು ಪಾತ್ರಗಳನ್ನು ಇನ್ನೂ ಗಟ್ಟಿಗೊಳಿಸಬಹುದಿತ್ತು, ಕೆಲವು ಸುಮ್ಮನೇ ಕೊಟ್ಟ ಸುಳಿವಿನಂತಹ ಎಳೆಯನ್ನು ಸ್ವಲ್ಪಮಟ್ಟಿಗೆ ಬೆಳೆಸಿ, ಹೆಚ್ಚು ನಿಧಾನ ಎನಿಸಿದ ದೃಶ್ಯಗಳಿಗೆ ಕತ್ತರಿ ಹಾಕಿ ಬಿಗಿಗೊಳಿಸಬಹುದಿತ್ತು.
ಇಡೀ ಸಿನಿಮಾದಲ್ಲಿ ಎಲ್ಲಿಯೂ ಹಾಸ್ಯ ಸುಳಿಯಿಲ್ಲ. ಆರಂಭದಿಂದ ಕೊನೆಯವರೆಗೂ ಗಂಭೀರವಾಗಿ ಸಾಗುವ ಸಿನಿಮಾ, ಕೊನೆಯಲ್ಲಿ, ನಗು- ಅಳು ತರಿಸಿ ಗೆಲ್ಲುತ್ತದೆ.

ಶರೀಫ್ ಕಾಡುಮಠ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಸಮಾಜಮುಖಿ ಮಾಸಿಕ, ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್‌ಗಳಲ್ಲಿ ಪ್ರಕಟವಾಗಿವೆ.
