ದೇವರಾಗಲಿ ದುಃಖ, ಸುಖದ ಸೈತಾನನ ಇದಿರಿನಲಿ..

ಸುಖ ದುಃಖ ಹಂಚಿಕೊಳ್ಳಲೊಂದು ಜೀವ ಬೇಕು
ಹೀಗೆಲ್ಲ ಹಲುಬಿದವನ ಗುಂಡಿಕ್ಕಿ ಸುಡಬೇಕು
ಸುಖಕ್ಕೇನು, ಯಾರೊಂದಿಗೂ ಹಂಚಿಕೊಳ್ಳಲು ಬಲ್ಲೆ
ಹೊತ್ತು ಗೊತ್ತಿಲ್ಲ, ಎಲ್ಲಿಯೂ ಸೂರೆಗೈಯ್ಯಲು ಬಲ್ಲೆ

ಹಗಲಿನಲಿ, ನಟ್ಟಿರುಳಿನಲಿ, ಸುರಿವ ಸಾಯಂಕಾಲಗಳಲಿ
ತುಟಿಗಳಲಿ, ಕಟಿಗಳಲಿ, ಜೂಜಿನಲಿ, ಮೋಜಿನಲಿ
ಮಧುಶಾಲೆಯಲಿ ಮತ್ತು ಮುತ್ತುಗಳ ಮಾರುವೆಡೆಯಲ್ಲಿ
ಸುಖವೆಂದರೆ ಸರಳ, ನಿನ್ನೆಡೆಗಿನ ನಿಯತ್ತು ತಪ್ಪುವುದು

ಆದರೆ ದುಃಖದ ಕಥೆ ಹಾಗಲ್ಲ, ಅದಕೆ ನೀನಷ್ಟೇ ಬೇಕು
ನಿನ್ನ ತೊಡೆಯ ಮೇಲೇ ಮಲಗಿ ಹಾಡು ಹಾಡಬೇಕು
ನಿನ್ನ ಇಳಿಬಿದ್ದ ಕೂದಲು ನನ್ನ ಕಣ್ಣೀರ ಒರೆಸಬೇಕು
ಅಲ್ಲಿ ಧಾರಾಕಾರ ಬೆಳಕಿನ ಮಳೆ ಸುರಿಸಬೇಕು..

ನಿನ್ನೆದೆಯ ಮಿದುವಿನಲಿ ಸುಖಿಸದೆಯೂ ನರಳಬೇಕು
ನೆತ್ತಿಯ ಮೇಲೆ ನೀನಿತ್ತ ಹೂಮುತ್ತು ಅರಳಬೇಕು
ಸೆಳೆದು ಬಿಗಿದಪ್ಪಿದರೆ ಸಾಕು, ಅಬ್ಬರಿಸಿ ಹರಿಯಬೇಕು
ಮರೆಯಬೇಕು, ಕಾಲದ ಪರಿವೆಯನೇ ತೊರೆಯಬೇಕು

ಸುಖವೆಂದರೆ ವಿಟಪುರುಷರು ಹೊರಡುವ ಹಾದಿ,
ಕುಡಿದು ತೂರಾಡುತ್ತಾ, ಕಾಮನಗರಿಯ ಕಡೆಗೆ
ದುಃಖ ಹಾಗಲ್ಲ, ನಿನ್ನೊಲವ ರಥಬೀದಿಯೇ ಬೇಕು
ಶರಧಿ ಗಂಭೀರ, ಮೆರೆವ ರಾಜಠೀವಿಯ ನಡಿಗೆ

ದುಃಖ ತಾಪವಲ್ಲ, ಕೋಪವಲ್ಲ, ಅಭಿಶಾಪವೂ ಅಲ್ಲ
ಅದು ಮುರಿದು ಕಟ್ಟುವುದು, ಮತ್ತೊಮ್ಮೆ ಹುಟ್ಟುವುದು
ಚಿಟ್ಟೆಯಾಗುವುದು, ಭಾವಕೋಶಗಳ ಹರಿದು ಹೊರಬಂದು
ಹರಿದು ಘನವಾಗುವುದು, ಗಟ್ಟಿ ಮನವಾಗುವುದು
ಕಂಗಳಲಿ ಪುಷ್ಪವೃಷ್ಟಿ, ಎದೆಯೊಡೆದ ನಾರೀಕೇಳ
ದೇವರಾಗಲಿ ದುಃಖ, ಸುಖದ ಸೈತಾನನ ಇದಿರಿನಲಿ..

 

ಸವಿರಾಜ್ ಆನಂದೂರು ವೃತ್ತಿಯಿಂದ ಮೂಡುಬಿದಿರೆಯ ಮೈಟ್ ನಲ್ಲಿ ಹಿರಿಯ ಸಹಾಯಕ ಪ್ರಾಧ್ಯಾಪಕ.
ಪ್ರವೃತ್ತಿಯಿಂದ ಹವ್ಯಾಸಿ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಹಾಗೂ ರಂಗಭೂಮಿ ಕಲಾವಿದ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)