ಈ ಎಲ್ಲ ಕವಿತೆಗಳೂ ವಿವಿಧ ವಿಷಯಗಳನ್ನು ಕುರಿತು ಮಾತನಾಡಿವೆ. ಧರ್ಮ, ರಾಜಕೀಯ, ಪ್ರಭುತ್ವ, ನಿರಂಕುಶಾಧಿಕಾರ, ಕೋಮುವಾದ, ಧರ್ಮಾಂಧತೆ, ಬಡತನ, ಹಸಿವು, ಗೊಡ್ಡು ಸಂಪ್ರದಾಯ, ಪ್ರೇಮ, ಅಗಲಿಕೆ, ಸಾವು ಇತ್ಯಾದಿಗಳು ಸೇರಿಕೊಂಡಿವೆ. ಕಾವ್ಯದ ಕುರಿತು ಹೆಚ್ಚು ಗಂಭೀರ ಚರ್ಚೆಗಳಾಗುತ್ತಿಲ್ಲ ನಿಜ. ಆದರೆ ನಿಜವಾದ ಕಾವ್ಯಕ್ಕೆ ಇಂಥ ಔಪಚಾರಿಕ ಚೌಕಟ್ಟುಗಳೇಕೆ ಬೇಕು? ಸತ್ವಯುತವಾದ ಕಾವ್ಯ ಎಂದೆಂದಿಗೂ ತನ್ನ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ. ಇಂಥ ಹೊತ್ತಿನಲ್ಲಿ ಚಾಂದ್‌ರಂಥವರು ಭರವಸೆಯನ್ನು ಹುಟ್ಟಿಸುತ್ತಿದ್ದಾರೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಚಾಂದ್‌ ಪಾಷಾ ಎನ್.ಎಸ್. ‘ಒದ್ದೆಗಣ್ಣಿನ ದೀಪʼ ಕವನ ಸಂಕಲನದ ಕುರಿತು ಬರೆದಿದ್ದಾರೆ

ಒದ್ದೆಗಣ್ಣಿನ ದೀಪ ಚಾಂದ್ ಪಾಷ ಎನ್.ಎಸ್ ಅವರ ಎರಡನೆಯ ಕವನಸಂಕಲನ. ಈ ಹಿಂದೆ “ಚಿತ್ರ ಚಿಗುರುವ ಹೊತ್ತು” ಕವನಸಂಕಲನವನ್ನು ಪ್ರಕಟಿಸಿದ್ದಾರೆ. ಮೊದಲ ಸಂಕಲನದ ಒಂದು ಕವಿತೆಯ ಶೀರ್ಷಿಕೆಯನ್ನೇ ಎರಡನೆಯ ಸಂಕಲನಕ್ಕೆ ಬಳಸಿಕೊಂಡಿರುವುದು ವಿಶೇಷ ಎನಿಸುತ್ತದೆ. “ಚಿತ್ರ ಚಿಗುರುವ ಹೊತ್ತು” ಸಂಕಲನದಲ್ಲೇ ಚಾಂದ್ ಅವರು ಕಾವ್ಯದ ಕುರಿತು ಭರವಸೆ ಹುಟ್ಟಿಸಿದ್ದರು. ಅಲ್ಲಿಯ ಕವಿತೆಗಳು ಪ್ರತಿರೋಧದ ಮಾದರಿಯಂಥವು. ಎರಡನೆಯ ಸಂಕಲನದಲ್ಲೂ ಆ ಬಗೆಯ ಕವಿತೆಗಳು ಸಾಕಷ್ಟಿವೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುತ್ತಲೇ ಕಾವ್ಯ ಧರ್ಮಕ್ಕೂ ಮನುಷ್ಯ ಧರ್ಮಕ್ಕೂ ನ್ಯಾಯವನ್ನು ಒದಗಿಸಿದ್ದಾರೆ. ಪ್ರಸ್ತುತ ಕವನಸಂಕಲನದಲ್ಲಿ ನಲವತ್ತೆರಡು ಕವಿತೆಗಳಿವೆ. ಈ ಎಲ್ಲ ಕವಿತೆಗಳೂ ವಿವಿಧ ವಿಷಯಗಳನ್ನು ಕುರಿತು ಮಾತನಾಡಿವೆ. ಧರ್ಮ, ರಾಜಕೀಯ, ಪ್ರಭುತ್ವ, ನಿರಂಕುಶಾಧಿಕಾರ, ಕೋಮುವಾದ, ಧರ್ಮಾಂಧತೆ, ಬಡತನ, ಹಸಿವು, ಗೊಡ್ಡು ಸಂಪ್ರದಾಯ, ಪ್ರೇಮ, ಅಗಲಿಕೆ, ಸಾವು ಇತ್ಯಾದಿಗಳು ಸೇರಿಕೊಂಡಿವೆ. ಕಾವ್ಯದ ಕುರಿತು ಹೆಚ್ಚು ಗಂಭೀರ ಚರ್ಚೆಗಳಾಗುತ್ತಿಲ್ಲ ನಿಜ. ಆದರೆ ನಿಜವಾದ ಕಾವ್ಯಕ್ಕೆ ಇಂಥ ಔಪಚಾರಿಕ ಚೌಕಟ್ಟುಗಳೇಕೆ ಬೇಕು? ಸತ್ವಯುತವಾದ ಕಾವ್ಯ ಎಂದೆಂದಿಗೂ ತನ್ನ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ. ಇಂಥ ಹೊತ್ತಿನಲ್ಲಿ ಚಾಂದ್‌ರಂಥವರು ಭರವಸೆಯನ್ನು ಹುಟ್ಟಿಸುತ್ತಿದ್ದಾರೆ. ಹಿಂದಿನ ಕಾವ್ಯ ಪರಂಪರೆಯನ್ನು ಆಧುನಿಕ ಕನ್ನಡ ಕಾವ್ಯದ ಸಂದರ್ಭಕ್ಕೆ ಹೋಲಿಸುವುದಕ್ಕಿಂತಲೂ ಮುಖಾಮುಖಿಯಾಗಿಸುವ ಅನಿವಾರ್ಯತೆಯಂತೂ ಅವಶ್ಯಕವಾಗಿ ನಡೆಯಬೇಕಿದೆ.

(ಚಾಂದ್‌ ಪಾಷಾ ಎನ್.ಎಸ್.)

ಚಾಂದ್ ಅವರ ಎಲ್ಲ ಕವನಗಳೂ ರೂಪಕಗಳಿಂದ ತುಂಬಿಹೋಗಿವೆ. ‘ನಿಶ್ಯಬ್ದ ನಿಲ್ಲುತ್ತಲೇ ಇಲ್ಲ’ ಸರ್ವಾಧಿಕಾರ ಮತ್ತು ಸರ್ವಾಧಿಕಾರಿಯ ಕುರಿತು ಕಟುವಾಗಿ ಬರೆದ ಕವಿತೆ. ಪ್ರಜೆಗಳ ಗೋಳು ಕೇಳಬೇಕಾದವರು, ಅವರ ಗೋಣನ್ನೇ ಹಿಸುಗುವ ಸ್ಥಿತಿಯನ್ನು ಸೃಷ್ಠಿಸಿದರೆ ಹೊಣೆಯಾರು? ಎಂದು ಹಲವು ಸಂದರ್ಭಗಳನ್ನು ಉಲ್ಲೇಖಿಸುತ್ತಾರೆ.

“ಕ್ರಾಂತಿಯಾಗಲಿ ಎನ್ನುವ ಗೋಡೆ ಬರಹವನ್ನು
ಮೊನ್ನೆಯಷ್ಟೇ ಬಂಧಿಸಿದ್ದಾರೆ!
ಬೇಡಿ ಬಿಗಿಸಿಕೊಂಡ ಕವಿತೆ ಈಗಲೂ ಲಾಕಪ್ಪನಲ್ಲಿದೆ
ಸತ್ತವರ ಹೆಸರಿನ ಮೌನಾಚರಣೆಗಳ ಲೆಕ್ಕ ತಪ್ಪಿದೆ
ಸರಿ ದಾಖಲೆ ನೀಡಲು ನೆನ್ನೆ ರಾತ್ರಿಯಿಂದಲೇ
ಆದೇಶ ಹೊರಟಿದೆಯಂತೆ..!

ಮಾತಿನ ಮಹಲುಗಳ ಎಷ್ಟು ಕಟ್ಟಿದರೂ
ಮೌನದ ಗುದ್ದಲಿ ಮಗಿಸಿಬಿಡುತ್ತಿದೆ
ಅರಚುವ ಅರಸನೆದುರು ಮಿಶ್ಯಬ್ದ ನಿಂತು ನ್ಯಾಯ ಕೇಳುತ್ತಲೇ ಇದೆ
ಈ ನಿಶ್ಯಬ್ದ ನಿಲ್ಲಿಸಲು ನಗರದಲ್ಲಿ ಕರ್ಫ್ಯೂ ಹಾಕಲಾಗಿದೆ.”
(ನಿಶ್ಯಬ್ಧ ನಿಲ್ಲುತ್ತಲೇ ಇಲ್ಲ)

ಮಾತನಾಡುವ ದನಿಗಳನ್ನು ವ್ಯವಸ್ಥಿತವಾಗಿ ದಮನಗೊಳಿಸುವ ನೀತಿ ಅಪಾಯಕಾರಿಯಾದುದು ಎಂದು ಕವಿ ಹೇಳುತ್ತಿರುವುದು ನಿಜವೆನಿಸುತ್ತದೆ.

ಪ್ರೇಮದ ಕುರಿತು ಉತ್ಕಟ ಭಾವದ ಅನೇಕ ಕವಿತೆಗಳನ್ನು ಈ ಸಂಕಲನದಲ್ಲಿ ಕಾಣಬಹುದಾಗಿದೆ. ಪ್ರೇಮವನ್ನು ಮಾಡಿ ಪ್ರೇಮಿಯನ್ನು ಉಳಿಸಿಕೊಳ್ಳಲಾಗದ ಕೊರತೆ ಚಾಂದ್ ಅವರ ಕವಿತೆಗಳ ಉದ್ದಕ್ಕೂ ಕಂಡುಬರುತ್ತದೆ. ಇಲ್ಲಿ ಶಾಶ್ವತವಾಗಿ ಉಳಿದಿರುವುದು ಪ್ರೀತಿ ಮಾತ್ರ..

“ಅವಳೆಂದರೆ ವಿಪರೀತ ಚಳಿಗಾಲ” ಕವಿತೆ ಕೊಂಚ ಗಝಲ್ ಮಾದರಿಯಂತೆ ಕಂಡುಬಂದರೂ ಬಂಧ, ಛಂದಸ್ಸಿನ ದೃಷ್ಟಿಯಲ್ಲಿ ಸಂಪೂರ್ಣವಾಗಿ ಹೋಲುವುದಿಲ್ಲ. ಪ್ರಕೃತಿಯಲ್ಲೇ ಕಾಣುವ ಅನೇಕ ಸಂಗತಿಗಳು ರೂಪಕಗಳಾಗಿ ಮೈದಳೆಯುವ ಚೆಲುವನ್ನು ಕವಿತೆಗಳನ್ನೋದಿಯೇ ಅನುಭವಿಸಬೇಕು.

“ಕಂಬಳಿಯ ಹೊದ್ದು ಮಲಗಿದ ನಕ್ಷತ್ರಗಳಿಗೂ ನೆಗಡಿಯಾಗಿದೆ
ನಡು ರಾತ್ರಿಯಲಿ ಸೂರ್ಯ ಉದಯಿಸಿದ
ಕನಸು ಬಿದ್ದಿದೆಯಂತೆ ಚಂದ್ರನಿಗೆ.!
ಆಕಾಶದ ತುಂಬಾ ಮಂಜಿನ ಹನಿಗಳು ಮೌನರಾಗ ಹಾಡುವಾಗ
ಅಪ್ಪುಗೆಯ ಅವಸರದಲಿ ತೋಳುಗಳು ತೆರೆದುಕೊಂಡಾಗ,
ತಂಗಾಳಿ ಬಂದಿತು
ಅವಳೆಂದರೆ ವಿಪರೀತ ಚಳಿಗಾಲ

*****

ಕಾದ ಕನ್ನಡಿಯ ತುಂಬ ಬಿಸಿ ಬೇನೆಗಳ ಬಿಂಬ
ತುಸು ಬಂದು ಮುಖ ತೋರಿಸಿ ಹೋಗು
ಚಂದ್ರನೆದೆಯ ಕಾದ ಕಾವಲಿಮೇಲೆ
ಅಮಲೇರುವ ಅಮವಾಸ್ಯೆಯ ಚೆಲ್ಲಿ ಹೋಗು.
ಇರುಳುಗಳ ಇತಿಹಾಸ ತೀರಾ ತ್ರಾಸದಾಯಕ ನಿನ್ನ ಹೊರತು
ಮೈ ಮರೆತಾದರೆ ಮುತ್ತಿಟ್ಟು ಬಿಡು,
ಚಳಿಯು ಚದುರಿ ಹೋಗುವ ಹಾಗೆ
ಆದರೂ, ಅವಳೆಂದರೆ ವಿಪರೀತ ಚಳಿಗಾಲ..!
(ಅವಳೆಂದರೆ ವಿಪರೀತ ಚಳಿಗಾಲ)

ಚಳಿ ಮತ್ತು ಪ್ರೇಮವನ್ನು ಸಮೀಕರಿಸುತ್ತಲೇ ಒಂದು ವಿಶಿಷ್ಟ ಎಳೆಯೊಂದನ್ನು ಹೊಸೆದುಬಿಡುತ್ತಾರೆ. ಇಂಥ ಮಾದರಿಯ ಅನೇಕ ಪ್ರೇಮದ ಕವಿತೆಗಳು ಚಾಂದ್ ಅವರ ಪ್ರತಿಭೆಯ ಜೊತೆಗೆ ಬಳಸಬಹುದಾದ ಸಾಧ್ಯತೆಗಳನ್ನು ಓದುಗರಿಗೆ ತೆರೆದಿಡುತ್ತದೆ.

‘ಆಸ್ಮಾಳಿಗೆ’ ಕವಿತೆಯನ್ನೂ ಪ್ರೇಮದ ವ್ಯಾಪ್ತಿಗೇ ಸೇರಿಸಬಹುದು. ಕವಿ ಕಳೆದುಹೋದವಳ ನೆನಪಿನ ಗುಂಗಿನಲ್ಲೇ ಇದ್ದಂತಿದೆ. ಆ ನೆನಪುಗಳೇ ಸಾಕಲ್ಲವೇ ಬದುಕಲು? ಪ್ರೇಮವಾದವರನ್ನೆಲ್ಲ ಬದುಕಿನಂತ್ಯದವರೆಗೂ ಸಾಂಗತ್ಯದಲ್ಲಿರಬೇಕೆಂದು ಬಯಸುವುದು ಸಮಾಜದ ಚೌಕಟ್ಟಿನಲ್ಲಿ ತಪ್ಪು ಎನ್ನುವುದು ಕವಿಗೆ ಸ್ಪಷ್ಟವಾಗಿದೆ.

“ಕಾಡ ಹಾದಿಯಲ್ಲು ಬಿತ್ತಿದ ನವಿಲ ಹೆಜ್ಜೆಗಳೊಡನೆ ಸ್ಪರ್ಧೆಗಿಳಿಬೇಡ
ಪಾಪ ಬಡಪಾಯಿ ನವಿಲು ಒಮ್ಮೆಯಾದರೂ
ವಿಶ್ವಸುಂದರಿಯ ಕಿರೀಟ ತೊಡಲಿ!
ನೀ‌ ತೊಟ್ಟು ಬಿಟ್ಟ ಕಿರೀಟಗಳೆಲ್ಲ ವಿಶ್ವದಾಖಲೆಯಲ್ಲಿ ದಾಂಧಲೆ ಮಾಡುತ್ತಿವೆ
ನಿನ್ನ ಮುಂಗುರುಳಿನ ಮೌನವನ್ನು ಬರೆದಿಡಲು ಅನುಮತಿ ಕೊಡು,
ನಿನ್ನ ಹೊಗಳುವ ಕವಿಯೊಬ್ಬನ ಕವಿತ್ವಕ್ಕೂ ಜೀವ ಬರಲಿ..!
(ಆಸ್ಮಾಳಿಗೆ)

ಇದು ಪ್ರೀತಿಸಿದ, ಪ್ರೀತಿಸುವ ಜೀವದ ಕುರಿತು ಇರುವ ಕವಿಯೊಬ್ಬನ ಸ್ವಗತ. ಆಶ್ಚರ್ಯವೆಂದರೆ ಇಂಥ ಹಂತಗಳನ್ನು ದಾಟಿ ಬದುಕಿನ ಸುಳಿಯಲ್ಲಿ ಬಸವಳಿದ ಪ್ರತಿಯೊಬ್ಬರ ಕಥೆಯೂ ಇದೇ ಆಗುವುದು ವಿಶೇಷ.

“ಅಕ್ಷರದವ್ವ” ಸಾವಿತ್ರಿ ಬಾಯಿ ಫುಲೆ ಅವರನ್ನು ಕುರಿತ ಕವಿತೆ. ಅಕ್ಷರದವ್ವ ಅವಮಾನಗಳ ಬೆಂಕಿಯಲ್ಲಿ ಸುಟ್ಟರೂ ಫೀನಿಕ್ಸ್‌ನಂತೆ ಎದ್ದುಬಂದು ಅಕ್ಷರ ಕ್ರಾಂತಿಯನ್ನೇ ಮಾಡಿದವರು. ಅವರನ್ನು ಕೃತಜ್ಞಾಪೂರ್ವಕವಾಗಿ ಸ್ಮರಿಸಿದ್ದಾರೆ. ಹಿಂಸಿಸಿದವರ ಕ್ರೌರ್ಯವನ್ನೂ ಬಿಚ್ಚಿಟ್ಟಿದ್ದಾರೆ.

“ಮನುತನದ ಸಗಣಿ ಗಂಜಳವ ಎಷ್ಟು ಎರಚಿದರೂ
ಅಕ್ಷರಗಳು ನಾರಲಿಲ್ಲ, ಪಾತಾಳವ ಸೇರಲಿಲ್ಲ
ಭೂಮಿಗೆ ಬಿದ್ದ ಅಕ್ಷರಗಳು ಆಲಗಳಾಗಿ
ಆಳುತ್ತಿವೆ ಇಂದು ಮನುಸಂಸ್ಕೃತಿಯನ್ನು!
ಹೇಗೆ ಸಹಿಸಿದೆ ತಾಯಿ ಅಂದು ನೀನು
ಕಡಲಗಣ್ಣಿನಲ್ಲಿ ಪುರುಷಾರ್ಥದ ಬೆಂಕಿಯನ್ನು ಹೇಗೆ ನಂದಿಸಿದೆ ನೀನು!

ಅಕ್ಷರದವ್ವ ನಿನ್ನೆಸರ ಹಣತೆ ಹಚ್ಚಿದ್ದೇವೆ ಇಂದು ನಾವು
ಬೀಸುವ ಗಾಳಿಗೂ ನೀ ಕಲಿಸಿದ ಸಹನೆ ಈಗಲೂ ಉಸಿರಾಡುತ್ತಿದೆ
ನಿನ್ನ ತಾಳ್ಮೆಯನು, ಸ್ವತಂತ್ರತೆಯ ಸ್ವಾಭಿಮಾನವನು
ನಮಗೂ ಕಲಿಸು ತಾಯಿ
ಅಕ್ಷರದವ್ವ ನಮಗೂ ಕಲಿಸು ತಾಯಿ..”
(ಅಕ್ಷರದವ್ವ)

“ಮುದಿ ಯೌವ್ವನಿಗ” ಇಡೀ ಸಂಕಲನದಲ್ಲಿ ನನಗಿಷ್ಟವಾದ ಕವಿತೆ. ಯಾರ ಹಂಗೂ ಇಲ್ಲದೆ ಕಾಲ ಸರಿಯುತ್ತಿರುತ್ತದೆ. ಈ ಕಾಲದ ಸುಳಿಗೆ ಎಲ್ಲರೂ ಬಲಿಪಶುಗಳೇ. “ಗಡಿಯಾರದ ಮುಳ್ಳ ಹಿಡಿದುಕೋ ಭದ್ರ, ಗಡಿಯಾರ ನಕ್ಕಿತ್ತು ಎಂಥ ಚಪಲ” ಎಂದು ಜಿ.ಎಸ್. ಎಸ್. ಅವರ ಮಬ್ಬಿನಿಂದ ಮಬ್ಬಿಗೆ ಕವಿತೆಯ ಸಾಲುಗಳು ನೆನಪಾಗುತ್ತವೆ.

ಚಾಂದ್ ಅವರ “ಮುದಿ ಯೌವ್ವನಿಗ” ಬಹುಮುಖಿ ಚಿಂತನೆಗೆ ಹಚ್ಚುತ್ತದೆ. ವಯಸ್ಸಾಗುತ್ತಿರುವ ಪ್ರತಿ ಯುವಕನ ಮಾನಸಿಕ ತಲ್ಲಣಗಳನ್ನೂ, ಆತನ ತೊಳಲಾಟಗಳನ್ನೂ ಒಟ್ಟಿಗೆ ಹಿಡಿದಿಟ್ಟಿರುವ ಕವಿತೆ. ಇಂಥ ಪರಿಸ್ಥಿತಿಗೆ ಯಾರನ್ನು ಹೊಣೆಗಾರರನ್ನಾಗಿಸುವುದು? ಸಮಾಜವನ್ನೇ? ಆಳುವ ವರ್ಗದವ ಸೋಗಲಾಡಿತನವನ್ನೋ, ಕೌಟುಂಬಿಕ ಸಮಸ್ಯೆಗಳನ್ನೋ? ಪ್ರಶ್ನೆಗಳು ಸಾಲಾಗಿ ನಿಲ್ಲುತ್ತವೆ.

ಜಡ್ಡುಹಿಡಿದ ವ್ಯವಸ್ಥೆಯಿಂದ ಬೇಸತ್ತ ಯುವ ಜನಾಂಗ ನಿಧಾನವಾಗಿ ತನ್ನ ಬಗ್ಗೆ ಇರುವ ಎಲ್ಲಾ ವಿಶ್ವಾಸಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ತಲುಪುವ ನೈರಾಶ್ಯದ ಸ್ಥಿತಿ ಇದು. ಹೆಗಲಿಗಿರುವ ಜವಾಬ್ದಾರಿ ಮತ್ತು ನಿರುದ್ಯೋಗಿತನದ ಖಾಲಿತನ ಆತ್ಮಾವಲೋಕನಕ್ಕೂ ಎಡೆ ಮಾಡಿಕೊಡುವುದು ವಿಶೇಷ. ಕವಿತೆಯ ಕೊನೆಯ ಸಾಲುಗಳು ಚಿಂತೆಗೀಡು ಮಾಡುತ್ತವೆ.

“ಮುದಿ ಯೌವ್ವನಿಗನ ಎದೆ ಮೇಲಿನ ಕೂದಲುಗಳು ಬಣ್ಣ ಬದಲಿಸುತ್ತಿವೆ
ನೆರೆಗೂದಲಿನ ನಡುವೆ ಬದುಕ ಹಪಹಪಿಸುವ ಕರಿಗೂದಲಿಗೂ
ಕೊನೆಯಾಸೆಯೊಂದಿದೆ
ಸಾಯುವ ಮೊದಲೆ ಮದುವೆ ಆಗಬೇಕು
ಇಲ್ಲವೆ ಸರ್ಕಾರಿ ನೌಕರಿ ಸಿಗಬೇಕು! ಅಷ್ಟೇ..!”
(ಮುದಿ ಯೌವ್ವನಿಗ)

ಮದುವೆ; ಸರ್ಕಾರಿ‌ ನೌಕರಿಗಳು ಮಧ್ಯಮ ಕುಟುಂಬದ ಪ್ರತಿ ಯುವಜನರ ಅವಶ್ಯಕತೆಯಾಗಿರುತ್ತವೆ. ಕಾಣದ ಕೈಗಳಿಂದಲೋ, ಪರಿಸ್ಥಿತಿಯಿಂದಲೋ ಇವೆರಡೂ ದಕ್ಕದಿದ್ದಾಗ ಮನುಷ್ಯ ಹತಾಶನಾಗುತ್ತಾನೆ. ಇಲ್ಲವೇ ಏಕಾಂಗಿಯಾಗುತ್ತಾನೆ. ಹೀಗಾಗಿ ಇದೊಂದು ಅತ್ಯುತ್ತಮ ಕವಿತೆ.

ಸಾವಿನ ಕುರಿತ ಅನನ್ಯ ಕವಿತೆ “ಈ ಸಾವನ್ನೊಮ್ಮೆ ಸ್ವಾಗತಿಸು”

”ಪ್ರತಿ ರಾತ್ರಿಗಳು ನಿನ್ನ ನೆನಪಿನ ಕುಣಿಕೆಗೆ ಬದುಕನೊಪ್ಪಿಸಿ
ಸತ್ತು ಮಲಗಿದ ಶವ ಕಂಡು
ಕರಗಿದ ಕತ್ತಲೆಗೂ ಕಣ್ಣೀರು ಬಂದೀತು!
ಹೂತಿಟ್ಟ ಬಯಕೆಗಳ ಗಂಟನ್ನೊಮ್ಮೆ ಬಿಚ್ಚಿ ನೋಡು
ಬರಿಗೈಯ ಬಡವನ ರೇಖೆಯಲ್ಲೂ ನೋವಿನ ನಕಾಶೆ ಕಾಣಬಹುದು!
ಅಳಿದುಳಿದ ಬದುಕ ಹಿಡಿದು ಹಿಂಸಿಸು
ಬಾ ಈ ಸಾವನ್ನೊಮ್ಮೆ ಸ್ವಾಗತಿಸು..”
(ಈ ಸಾವನ್ನೊಮ್ಮೆ ಸ್ವಾಗತಿಸು.!)

ಸಾವಿನ ಬಗ್ಗೆ ಪ್ರೀತಿಯಿರುವುದಕ್ಕೇ ಬದುಕಿನ ಬಗ್ಗೆ ಕವಿಗೆ ಗೌರವವಿದೆ. ಸಾವನ್ನು ಸ್ವಾಗತಿಸುವ ಎದೆಗಾರಿಕೆ ಇರುವುದು ಬಹುಶಃ ಸಂತನನ್ನು ಬಿಟ್ಟರೆ ಕವಿಗೆ ಮಾತ್ರ ಇರಬೇಕು..

ಚಳಿ ಮತ್ತು ಪ್ರೇಮವನ್ನು ಸಮೀಕರಿಸುತ್ತಲೇ ಒಂದು ವಿಶಿಷ್ಟ ಎಳೆಯೊಂದನ್ನು ಹೊಸೆದುಬಿಡುತ್ತಾರೆ. ಇಂಥ ಮಾದರಿಯ ಅನೇಕ ಪ್ರೇಮದ ಕವಿತೆಗಳು ಚಾಂದ್ ಅವರ ಪ್ರತಿಭೆಯ ಜೊತೆಗೆ ಬಳಸಬಹುದಾದ ಸಾಧ್ಯತೆಗಳನ್ನು ಓದುಗರಿಗೆ ತೆರೆದಿಡುತ್ತದೆ.

ಕತ್ತಲೆ, ನಕ್ಷತ್ರ, ಚಂದಿರ ಇತ್ಯಾದಿ ರೂಪಕಗಳು ಮತ್ತೆ ಮತ್ತೆ ಕಾಣಿಸಿದರೂ ಅವು ನೂತನ ಬಟ್ಟೆಯನ್ನೇ ಧರಿಸಿವೆ. “ಕತ್ತಲೆಯ ಕಣ್ಣು” ಭರವಸೆಯ ಕವಿತೆ. ಧೈರ್ಯವನ್ನೂ, ಸಾಂತ್ವನವನ್ನೂ ತುಂಬುವ ಕವಿತೆ.

“ಗತಕಾಲದ ನೆನಪಿಗೆ ನೋವಿನ ಸಣ್ಣ ಗಾಯವಿದೆ
ಮಾಗುವುದೇ ಬೇಡ ಮಣ್ಣಲ್ಲಿ ಮುಚ್ಚಿಡು
ಬೇರುಗಳ ಎದೆಯಲ್ಲಿ ಮುಲಾಮಿನ ಮೌನವಿದೆ
ಮಾತಾಡದಿರು,ಅಕ್ಷರಗಳೆಲ್ಲ ಅತ್ತಯ ಬಿಡಲಿ
ಸತ್ತು ಮಲಗಿದ ಬದುಕು ಎದ್ದು ಬರಲಿ
ಬೆಳಕ ಗುಡಿಸುವ ಕತ್ತಲೆಯ ಕಣ್ಣೂ ಕೂಡ ಸ್ವಚ್ಚವಾಗದೇನು?”
(ಕತ್ತಲೆಯ ಕಣ್ಣು)

“ಸಾಗರದಲ್ಲೊಂದು ಮಮತೆಯ ದೋಣಿ” ತನ್ನ ದಾರಿಯನ್ನು ಕಂಡುಕೊಳ್ಳುತ್ತಿರುವ ಹೊಸ ಮನುಷ್ಯನ ಸ್ವಗತ. ಮಮತಾ ಸಾಗರ ಅವರ ಮಾತುಗಳು ಕವಿಯನ್ನು ಪ್ರಭಾವಿಸಿವೆ. ಅವರ ಮಾತುಗಳೇ ಕವಿಯ ಕಾವ್ಯದ ದಾರಿಗೆ ಹೂಗಳನ್ನು ಸುರಿದಿವೆ.
ಇಲ್ಲಿ ಕವಿಗೆ ತನ್ನ ನಡಿಗೆಯ ಬಗ್ಗೆ ಸ್ಪಷ್ಟ ನಿಲುವು ಮತ್ತು ಗುರಿ ಇದೆ.

“ಕವಿತೆ ಹುಟ್ಟುವುದಲ್ಲ ಕಟ್ಟುವುದು
ನೀಲಾಕಾಶದ ನಿಹಾರಿಕೆಗಳ ನೋವು ಗೊತ್ತಿರಬೇಕು ಅಂದಿದ್ದಿರಿ
ನಾನೀಗ ನೂರು ನೆನಪ ಹೆಣೆದು
ಒಂದೇ ಪದ್ಯ ಬರೆಯುತ್ತಿದ್ದೇನೆ
ನೀವು ನೀತಿಗೇಡಿ ಆಗದೆ ಜಾತಿಗೇಡಿ ಆಗಬೇಕೆಂದಿದ್ದೀರಿ
ನಾನೀಗ ಜಾತಿಯ ಚಪ್ಪಲಿ ತೊಡದೆ ಬರಿಗಾಲಿನಲ್ಲಿ ನಡೆಯುತ್ತಿರುವೆ..!”
(ಸಾಗರದಲ್ಲೊಂದು ಮಮತೆಯ ದೋಣಿ)

ಗೌರಿ ಲಂಕೇಶರನ್ನು ಕೊಂದ ಘಟನೆಗೆ ಪ್ರತಿರೋಧವೆಂಬಂತೆ “ಕೊಂದದ್ದು ಒಬ್ಬ ಗೌರಿಯನ್ನು ಮಾತ್ರ” ಎಂಬ ಕವಿತೆ ಬರೆದಿದ್ದಾರೆ. ಕವಿತೆಯ ಕೊನೆಯಲ್ಲಿ

”ನಿಮ್ಮ ಪಿಸ್ತೂಲಿಗೆ ಹೆಚ್ಚುವರಿ ಗುಂಡುಗಳ ತರುವುದನು ಮರೆಯಬೇಡಿ
ಏಕೆಂದರೆ, ಸತ್ಯದ ಕವಚ ತೊಟ್ಟ ಎದೆಯ ಸೀಳುವಾಗ
ಒಂದಿಷ್ಟು ಗುಂಡುಗಳು ವ್ಯರ್ಥವಾಗಬಹುದು.”
(ಕೊಂದದ್ದು ಒಬ್ಬ ಗೌರಿಯನ್ನು ಮಾತ್ರ)

ಚಾಂದ್ ಒಬ್ಬ ಶಕ್ತಿಶಾಲಿ, ಪ್ರತಿಭಾವಂತ ಕವಿ ಎನ್ನುವುದಕ್ಕೆ ಇದಕ್ಕಿಂತ ಮತ್ತೇನು ಬೇಕು?

ಬಾವಿಯನ್ನು ತೆಗೆದವರು ದಾಹ ನೀಗಿಸಿಕೊಳ್ಳಲಾಗದೆ ಅಲ್ಲಿಂದ ಗಡೀಪಾರಾಗುವ ದಾರುಣ ಚಿತ್ರಣ “ಬದುಕ ಬಾವಿ” ಕವಿತೆಯಲ್ಲಿದೆ. ದೇವನೂರ ಮಹಾದೇವ ಅವರ ಕಾದಂಬರಿ, ಕಥೆಗಳ ಪಾತ್ರಗಳು “ಪುಟ್ಗೌರಿಯ ಪುಟ್ಟ ನವಿಲು” ಕವಿತೆಯಾಗಿವೆ.

ಅಪ್ಪನ ಕುರಿತ ಭಾವನಾತ್ಮಕ ಕವಿತೆ “ನನ್ನಪ್ಪ ಸಲೀಸಾಗಿ ಸತ್ತವನಲ್ಲ” ಕಣ್ಗಳನ್ನು ಒದ್ದೆಯಾಗಿಸುತ್ತದೆ. ಅಪ್ಪನ ನಿಭಾಯಿಸಿದ ಜವಾಬ್ದಾರಿಗಳು ಕವಿಗೆ ಬೆರಗನ್ನುಂಟು ಮಾಡಿವೆ. ಅಷ್ಟೇ ಅಲ್ಲ ಆತನಿಗೆ ಕೃತಜ್ಞತೆಯ ಅಕ್ಷರಗಳನ್ನೂ ಅರ್ಪಿಸಿವೆ.

”ಹಿಡಿಯಷ್ಟಿರುವ ಬುರಲಿ, ಕೌಂನ್ಜುಗ ಹಕ್ಕಿಯ ಭೇಟೆಯಾಡಿ
ಮಕ್ಕಳ ಹಸಿವಿಗೆ ಅಲ್ಪ ವಿರಾಮ ಇಟ್ಟವನು,
ಸಾವಿನ ಸಂತೆಯಲ್ಲಿ ಸಲೀಸಾಗಿ ಮಾರಾಟವಾಗಿ ಬದುಕಿಗೆ ಪೂರ್ಣ ವಿರಾಮವಾದವನು!

ನೆಲದ ತುಂಬ ನಕ್ಷತ್ರ ಬೀಜ ಬಿತ್ತಿ ಹೂವಾಗಿ, ಕಾಯಾಗಿ, ಹಣ್ಣಾಗುವಷ್ಟರಲ್ಲಿ
ಹಣ್ಣಾದವನು!
ನೋಡು ನೋಡುತ್ತಲೆ ಜೀವದೊಂದಿಗೆ ಜಗಳವಾಡಿ ಮಣ್ಣಾದವನು!
ನನ್ನಪ್ಪ ಸಲೀಸಾಗಿ ಸತ್ತವನಲ್ಲ.!”
(ನನ್ನಪ್ಪ ಸಲೀಸಾಗಿ ಸತ್ತವನಲ್ಲ)

ಲಂಕೇಶರ ‘ಅವ್ವ’ ಕವಿತೆಯಂತೆಯೇ ಚಾಂದ್ ಅವರ “ನನ್ನಪ್ಪ ಸಲೀಸಾಗಿ ಸತ್ತವನಲ್ಲ” ಕವಿತೆ ಅಪ್ಪನ ಕುರಿತ ಇನ್ನೊಂದು ವರ್ಷನ್ ನಂತಿದೆ..

ಮುದುಕಿಯ ಮೊಡವೆ ಕವಿತೆ ಒಂದು Abstract art ನಂತೆ ಕಾಡುತ್ತದೆ.

”ಈಗೀಗ ಮುದುಕಿಯ ಮುಖದಲೂ
ಮೊಡವೆ ಏಳುತಿವೆ
ನಾಳೆ ಯೌವ್ವನದ ಕನಸು ಬೀಳಬಹುದು!
ಪಾಚಿಗಟ್ಟಿದ ಚರ್ಮದ ಮೇಲೆ ಹೊಸ ವಸಂತ ಕಾಲು ಜಾರಲು
ಕಾಯಬೇಕು
ಇಂಗಿ ಹೋದ ಕಣ್ಣಿನಲಿ ಇರುವೆಯ ಹೆರಿಗೆಯಾಗಿ
ತೊಟ್ಟಿಲಲಿ ತವರಿನ ತೆರಿಗೆ ತೆರಬೇಕು”
(ಮುದುಕಿಯ ಮೊಡವೆ)

ಇಂಥ ಬಿಡಿಬಿಡಿ ರೂಪಕಗಳು ಕಾವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

“ಸಂತೆಯಲ್ಲಿದ್ದೇನೆ” ನಾಡಿನಲ್ಲಿ ಬದುಕಿ ಹೋದ ಈಗಲೂ ಬದುಕಿರುವ ಸಂತರ ಕುರಿತ ಕವಿತೆ. ಅಲ್ಲಮ, ಬಸವ, ಅಕ್ಕ, ಸೂಳೆ ಸಂಕವ್ವ, ಅಂಬಿಗರ ಚೌಡಯ್ಯ ಎಲ್ಲರೂ ಇಲ್ಲಿ ಪ್ರಸ್ತಾಪವಾಗಿದ್ದಾರೆ. ಕವಿ ಅವರೆಲ್ಲರ ಅನುಭಾವದ ಕಿಡಿಯನ್ನು ಎದೆಯಲ್ಲಿ ಹೊತ್ತಿಸಿಕೊಂಡಿರುವುದು ಕಾವ್ಯದಿಂದಲೇ ಸ್ಪಷ್ಟವಾಗಿ ಕಾಣುತ್ತಿದೆ..

“ಸಂತೆಯಲಿ ನಿಂತಿದ್ದೇನೆ
ಬೆಡಗಿನ ಬಟ್ಟೆಯಲಿ ನನ್ನ ಮೈ ಕೊಳ್ಳಲು
ಆದರೆ, ಅಕ್ಕನ ಅಂಗಡಿಯಲ್ಲಿ ಬಟ್ಟೆಯೇ ಇಲ್ಲ
ಬೆತ್ತಲೆಯನೆ ಉಟ್ಟ ಅವಳ ಎದುರು ಬಟ್ಟೆ ತೊಟ್ಟು ನಾನೇ ನಗ್ನನಾದೆ!
ಸುಮ್ಮನೆ ಬಂದೆ ಈ ಬಟ್ಟೆಯ ಸಂತೆಯಲಿ, ಬೆತ್ತಲೆಯ ಕೊಳ್ಳಲಾಗದೆ..”
(ಸಂತೆಯಲ್ಲಿದ್ದೇನೆ)

ಸಮಾಜದಲ್ಲಿ ಅಶಾಂತಿ‌ ಸೃಷ್ಟಿಸಲು ಆಗಾಗ್ಗೆ ಅನೇಕ ಅನವಶ್ಯಕ ಸಂಗತಿಗಳು ಚರ್ಚೆಯಾಗುತ್ತಲೇ ಇರುತ್ತವೆ. ಅವು ಅಸತ್ಯದ ಬಟ್ಟೆ ತೊಟ್ಟು ವಿಜೃಂಭಿಸುತ್ತವೆ. ಸತ್ಯ ಯಾವಾಗಲೂ ಜಯ ಇದ್ದೇ ಇರುತ್ತದೆ. ಸತ್ಯವನ್ನು ಸುಡಲು ಸಾಧ್ಯವಾಗಿವುದಿಲ್ಲ. ಸಾಕ್ಷಿಗಳೇ ಸತ್ಯವನ್ನು ಕಾಪಾಡುತ್ತವೆ. ಟಿಪ್ಪು ಇತ್ತೀಚೆಗೆ ಚರ್ಚೆಯಾಗುತ್ತಿರುವ ವ್ಯಕ್ತಿ. ಆಗ ಆತನ ಧರ್ಮದ ಬಗ್ಗೆ ಚರ್ಚೆಯಾಗುತ್ತಿದ್ದ ವಿಷಯ ಈಗ ಆತನ ಕೊಂದವರ ಬಗ್ಗೆಯೇ ಚರ್ಚೆಯಾಗುತ್ತಿದೆ. ಆತನನ್ನು ಕುರಿತ ಅತ್ಯುತ್ತಮ ಕವಿತೆ “ಹುಲಿಯ ಕಥೆ” ಯಲ್ಲಿ ಟಿಪ್ಪು ಯಾರು? ಈಗ ಟಿಪ್ಪು ಹೆಸರನ್ನು ವ್ಯವಸ್ಥೆ ಹೇಗೆಲ್ಲ ಬಳಸಿಕೊಳ್ಳುತ್ತಿದೆ ಎಂಬುದನ್ನು ಕವಿತೆಯಲ್ಲಿ ಪ್ರಸ್ತಾಪಿಸಲಾಗಿದೆ.

“ವೀರತ್ವ ಉರಿಗಡಲ ಕಂಡು
ಬಿಳಿ ತೊಗಲಿನವರ ಬೂಟು ನೆಕ್ಕಿದವರು
ಕ್ಷಮಾಪಣೆಗಳ ಸರಮಾಲೆ ಬರೆದ ಹೇಡಿ ಅಕ್ಷರಗಳಿಗೆ
ಇವನ ಚರಿತ್ರ ಬರೆಯುವಷ್ಟು ಧೈರ್ಯ ಇರಲಿಲ್ಲ..!
ನೆಲಕ್ಕೆ ಬಿದ್ದ ನೆತ್ತರದಲ್ಲೆ ನಕ್ಷತ್ರ ಲೋಕದ ನಕಾಶೆ ಬರೆದವ
ಕ್ಷಿಪಣಿಗಳ ತಂದೆ ಹೇಗಾದನು?”
(ಹುಲಿಯ ಕಥೆ)

ಕೊನೆಯ ಭೇಟಿಯೂ ಪ್ರೇಮದ ಕವಿತೆ, ಸಮಾನತೆಯ ಹರಿಕಾರ ಅಂಬೇಡ್ಕರ್ ಅವರ ಕುರಿತು ಬಹಳ ಒಳ್ಳೆಯ ಕವಿತೆಯಿದೆ.

”ನೀವು ಸುಟ್ಟ ಪುಸ್ತಕದ ಮುಖಪುಟ ಗದ್ದುಗೆಯಲ್ಲಿ
ಕೂತು, ನಿಮ್ಮ ಕೂಸುಗಳ ಎದೆಗೆ ಗುಂಡು ಇಡುವಾಗ
ಮತ್ತೊಮ್ಮೆ ಸುಟ್ಟು ಹಾಕಲು ಬೆಂಕಿಯಾಗಿ ನೀವಿಂದು ಇರಬೇಕಿತ್ತು!
ಪ್ರತಿ ರಾತ್ರಿಯ ನಮ್ಮ ಕನಸುಗಳ ವಾರಸುದಾರರಂತೆ
ವರ್ತಿಸುವ ವರ್ತಕ ನಾಯಕನ ಎದೆಗೆ
ಒದಿಯುವ ಭೀಮನೇ ನೀವಿಂದು ಒರಬೇಕಿತ್ತು”
(ನೀವಿಂದು ಇರಬೇಕಿತ್ತು)

ಕವಿತೆ ಓದುತ್ತಿದ್ದಂತೆ ಚನ್ನಣ್ಣ ವಾಲೀಕಾರರ ‘ನೀ ಹೋದ ಮರುದಿನ’ ಕವಿತೆ ನೆನಪಾಗುತ್ತದೆ. ನೋವುಂಡವರ ಸಂಕಟಗಳು ದುಃಖದ ಕಟ್ಟೆ ಒಡೆದಾಗ ಜಗತ್ತು ತಲ್ಲಣಿಸದೆ ಇರಲು ಹೇಗೆ ಸಾಧ್ಯ? ಅಕ್ಷರಗಳ ಮೂಲಕ ತನ್ನನ್ನು ತಾನು ಸಂತೈಸಿಕೊಳ್ಳುವ ಕವಿ ಬಾಬಾ ಸಾಹೇಬರನ್ನು ನೆನೆದು ಆರ್ದ್ರರಾಗಿದ್ದಾರೆ.

ಈಗಲೂ ನೆನಪಾಗುತ್ತಾಳೆ, ಮುನಿಸನ್ನಷ್ಟೆ ದಾಖಲಿಸುತ್ತಿರುವೆ, ಒಂದಿರುಳು ಕಳೆದಿದ್ದೇನೆ, ಶೀರ್ಷಿಕೆ ಇಲ್ಲದ ಕವಿತೆ, ಪ್ರೀತಿಯ ಕೆಟ್ಟ ಹೆಸರಿಡಬಹುದು, ಆಕಾಶದ ಅಂಗೈಯ ಗೆರೆ ಕವನಗಳ ತುಂಬಾ ಪ್ರೇಮದ ಘಮಲಿದೆ, ಹತಾಶೆಯ ನಿಟ್ಟಿಸುರಿದೆ, ಗಾಢವಾದ ಸಂಬಂಧದ ಸೆಳೆತವಿದೆ. ಬುದ್ಧನ ಕುರಿತೂ ಕವಿತೆಯಿದೆ.

ಪ್ರೀತಿಯ ಚಾಂದ್ ಅವರ ಕವನಗಳನ್ನೋದುವಾಗ ಲಂಕೇಶ್ ಮೇಷ್ಟ್ರು, ಎನ್ಕೆ ಹನುಮಂತಯ್ಯ, ವಾಲೀಕಾರರು, ಸಿದ್ದಲಿಂಗಯ್ಯ, ಆರಿಫ್ ರಾಜಾ, ಬಿ.ಎಂ. ಬಶೀರ್ ಇನ್ನೂ ಹಲವು ಮುಖಗಳು ಒಂದೇ ಕ್ಯಾನ್ವಾಸಿನ ಕೊಲಾಜ್‌ಗಳಂತೆ ಕಾಣುತ್ತವೆ. ಕಾವ್ಯದ ಕಡುಮೋಹವನ್ನು ಸಂಪೂರ್ಣವಾಗಿ ಆವಾಹಿಸಿಕೊಳ್ಳಲು ಅಣಿಯಾಗಿರುವ ಚಾಂದ್ ಅವರ ಬರವಣಿಗೆಗಳು ಈ ನೆಲದಲ್ಲಿ ಮೊಳೆಯುತ್ತಿರಲಿ..