ನಿಮಗೆ ಗೊತ್ತೇ, ಇವತ್ತಿನ ಇಡೀ “ಕ್ಲೌಡ್”, ಲಿನಕ್ಸ್ ಮೇಲೆ ಕೂತಿದೆ. ಹಾಗೆ ನೋಡಿದರೆ ಜಗತ್ತಿನ ಮುಕ್ಕಾಲು ಭಾಗ ಸಾಫ್ಟವೇರ್ ಲಿನಕ್ಸ್ ಮೇಲೆ ಓಡುತ್ತಿದೆ. ಅದೆಲ್ಲ ಬಿಡಿ, ನಮ್ಮ ನಿಮ್ಮ ಕೈಯಲ್ಲಿರುವ ಮಾಣಿಕ್ಯ, ಜಗತ್ತನ್ನು ಚದುರಂಗದಂತೆ ಆಡಿಸುತ್ತಿರುವ ಆಂಡ್ರಾಯ್ಡ್ ಫೋನ್, ಲಿನಕ್ಸ್ ನ ರೂಪಾಂತರ. ಅಂದರೆ ಲಿನಕ್ಸ್ ಎಂಬ ಉಚಿತ ಮನೆಗೆ ಗೂಗಲ್ ಇನ್ನೊಂದಷ್ಟು ಸುಣ್ಣ ಬಣ್ಣ ಹೊಡೆದುಮೊಬೈಲ್ ಒಳಗೆ ಹಿಡಿಸುವುಂತೆ ಮಾಡಿ ಕೊಟ್ಟಂತೆ. ಅಂದರೆ ಇವತ್ತು ಕಮ್ಯೂನಿಸ್ಟ್ ಎಂದರೆ ಮೂಗು ಮುರಿಯುವ ನಾವು ನೀವೆಲ್ಲ ನಮ್ಮ ಜೇಬಿನಲ್ಲೇ ಕಮ್ಯೂನಿಸ್ಮ್ ಕರುಣಿಸಿದ ಪ್ರಾಡಕ್ಟನ್ನು ಹೊತ್ತು ತಿರುಗುತ್ತಿದ್ದೇವೆ. ಅದರಲ್ಲೆ ಜೀವನ ನಡೆಸುತ್ತಿದ್ದೇವೆ.
ಮಧುಸೂದನ್ ವೈ.ಎನ್ ಅಂಕಣ

 

ಕಂಪ್ಯೂಟರ್ಸ್ ಗೆ ತೀರ ಪರಕೀಯರಾಗಿರುವ ಓದುಗರಿಗೆ ಸಣ್ಣ ಪೀಠಿಕೆ ಕೊಟ್ಟು ಮುಂದೆ ಮುಖ್ಯ ವಿಷಯಕ್ಕೆ ಬರುತ್ತೇನೆ.

ವಿಂಡೋಸ್ ಯಾರಿಗೆ ತಾನೆ ಗೊತ್ತಿಲ್ಲ? ನಾವು ನೀವು ಬಳಸುವ ಡೆಸ್ಕಟಾಪ್ ಲ್ಯಾಪಟಾಪ್ ಗಳಲ್ಲಿರುವ ಆಪರೇಟಿಂಗ್ ಸಿಸ್ಟಂ ಮೈಕ್ರೋಸಾಫ್ಟ್ ಕಂಪನಿಯ “ವಿಂಡೋಸ್”. ಇದನ್ನು ಬರೆದವನು(ಕಂಪ್ಯೂಟರ್ ಭಾಷೆಯಲ್ಲಿ ಸಾಫ್ಟವೇರ್ ಅನ್ನು ಬರೆಯಲಾಗುತ್ತದೆ, ತಯಾರಿಸಲ್ಲ) ಕಂಪನಿಯ ಒಡೆಯ ಬಿಲ್ ಗೇಟ್ಸ್. ಜಗತ್ತಿನ ಅತಿ ದೊಡ್ಡ ಶ್ರೀಮಂತ. ನಾವೂ ನೀವೂ ಕೊಟ್ಟ ಹಣದಿಂದಲೇ ಇವನು ಶ್ರೀಮಂತನಾಗಿರುವುದು ಎಂದು ಬಿಡಿಸಿ ಹೇಳಬೇಕಿಲ್ಲ. ಆದರೆ ವಿಂಡೋಸ್ ನ ಪ್ರತಾಪ ಇಲ್ಲಿಗೇ ಮುಗಿಯುತ್ತದೆ. ಇನ್ನೊಂದು ಆಪರೇಟಿಂಗ್ ಸಿಸ್ಟಂ ಇದೆ, ಲಿನಕ್ಸ್(Linux) ಅಂತ. ಇದು ವಿಂಡೋಸ್ ನ ಅಪ್ಪ, ಅದರಪ್ಪ ಅನ್ನಬಹುದು. ಯಾಕೆಂದರೆ ವಿಂಡೋಸ್ ನಾವು ನೀವು ಉಪಯೋಗಿಸುವ ಸಣ್ಣಪುಟ್ಟ ಕಂಪ್ಯೂಟರ್ ಗಳಲ್ಲಿ ಮಾತ್ರ ಬಳಸಬಹುದು. ಅದನ್ನೂ ದಿನಕ್ಕೊಂದು ಸಲ ರೀಬೂಟ್ ಮಾಡಬೇಕು. ಆದರೆ ಡಿಫೆನ್ಸ್, ಸ್ಪೇಸ್ ಸೈನ್ಸ್, ಫೈನಾನ್ಸ್, ಫ್ಲೈಟ್ ಸಿಸ್ಟಂ, ಟೆಲಿಕಾಂ ಇನ್ನೂ ಮುಂತಾದ ಕಡೆ ಎಲ್ಲ ಕಡೆ, ಎಲ್ಲೆಲ್ಲಿ ಶಕ್ತಿಯುತ, ವರ್ಷಾನುಗಟ್ಟಲೆ ನಿರಂತರವಾದ ಸ್ಥಿರವಾದ ಸೇವೆ ಬೇಕಾಗುತ್ತೋ ಅಲ್ಲೆಲ್ಲ ಬಳಸುವುದು ಪರಿಪೂರ್ಣತೆಗೆ ಹತ್ತಿರವಿರುವ ಈ ಲಿನಕ್ಸ್ ಅನ್ನು. ಹಾಗಿದ್ದರೆ ಊಹಿಸಿಕೊಳ್ಳಿ, ಈ ಲಿನಕ್ಸ್ ಬರೆದ ಅದರ ಒಡೆಯ ಅದಿನ್ನೆಷ್ಟು ದುಡ್ಡು ಮಾಡಿರಬೇಡ? ಬಹುಶಃ ಬಿಲ್ ಗೇಟ್ಸ್ ನ ನೂರರಷ್ಟು?

ಇಲ್ಲ, ಇದನ್ನು ಬರೆದವ, ಲಿನಸ್(Linus) ಟೋರ್ವಾಲ್ಡ್ಸ್ ಹಾಗೇನು ದುಡ್ಡು ಮಾಡಲಿಲ್ಲ. ಹಾಗೆಲ್ಲ ಅವನು ಇದಕ್ಕೆ “ಚಾರ್ಜ್” ಮಾಡಿದ್ದರೆ ನಾವಿವತ್ತು ಬಹುಶಃ ಪ್ರತಿ ಸಲ ಎಟಿಎಂ ನಿಂದ ದುಡ್ಡು ಇರಿವಾಗ ಎಟಿಎಂ ಬಳಸಿದ್ದಕ್ಕೋಸ್ಕರ ಅವನ ಜೇಬಿಗೆ ಒಂದು ರುಪಾಯಿಯೋ ಹತ್ತು ಪೈಸೆಯೋ ಇಳಿಸಬೇಕಾಗುತ್ತಿತ್ತು. ಉದಾಹರಣೆಗೆ ಎಟಿಎಂ ಹೇಳಿದೆ. ಇನ್ನೂ ನೂರಾರು ಕಡೆ ನೂರಾರು ವಿಧಗಳಲ್ಲಿ ನಮ್ಮಿಂದ ಅವನಿಗೆ ಹಣ ಸಂದಾಯವಾಗಬೇಕಾಗುತ್ತಿತ್ತು. ಆದರೆ ಅವನೇನು ಮಾಡಿದ ಗೊತ್ತೇ, ತನ್ನ ಕುಡಿ ಲಿನಕ್ಸನ್ನು ಉಚಿತವಾಗಿ ಲೋಕಕ್ಕೆ ಹಂಚಿಬಿಟ್ಟ! ಯಾಕೆ ಹಾಗೆ ಮಾಡಿದ ಅವನು? ಒಂದು ಕಂಪನಿ ಶುರು ಮಾಡಿ ಲಿನಕ್ಸನ್ನು ಮಾರಾಟಕ್ಕಿಟ್ಟು ತಾನೂ ಅಗರ್ಭ ಶ್ರೀಮಂತನಾಗಿ ಬಡದೇಶಗಳಿಗೆ ಭೇಟಿ ಕೊಟ್ಟು ಬಂದಿದ್ದರಲ್ಲಿ ಒಂದಷ್ಟನ್ನು ದಾನ ಮಾಡಿ ತಾನೂ ಒಬ್ಬ ದೊಡ್ಡ ಫಿಲಾಂತ್ರಫಿಸ್ಟ್, ಪರೋಪಕಾರಿ ಎಂದೆನಿಸಿಕೊಳ್ಳಬಹುದಿತ್ತಲ್ಲವೇ?

ಹಲವಾರು ದೇಶಗಳ ಪ್ರಧಾನಿಗಳ ಹಸ್ತ ಲಾಘವ ಮಾಡಿಕೊಳ್ಳುತ್ತ ಅವರ ಜೊತೆ ಟೀ ಕುಡೀತಾ ಅವರ ದೇಶಗಳ ಪಾಲಿಸಿಗಳಲ್ಲಿ ಮೂಗು ತೂರಿಸುತ್ತ ದೊಡ್ಡ ಗೌರವ ಸಂಪಾದಿಸಬಹುದಿತ್ತಲ್ಲವೇ? ಹಾಗೇನೂ ಮಾಡದೆ ಲಿನಸ್ ಈಗಲೂ ಒಂದು ಆಫೀಸಲ್ಲಿ ಕುಳಿತು ತನಗಿಷ್ಟವಾದ ಸಾಫ್ಟವೇರ್ ಬರೆಯುವ ಕೆಲಸವನ್ನೇ ಮಾಡುತ್ತಿದ್ದಾನೆ. ಲಿನಕ್ಸ್ ಬರೆದು ದಶಕದ ನಂತರ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದ ನಂತರ ತನ್ನ ಕೋಡ್ ಮ್ಯಾನೇಜ್ ಮಾಡಲು ಸರಿಯಾದ ಸಾಫ್ಟವೇರ್ ಇಲ್ಲವೆಂದು ಇನ್ನೊಂದು ಲಿನಕ್ಸ್ ನಷ್ಟೇ ಪರಿಣಾಮಕಾರಿ “ಗಿಟ್” ಎಂಬ ಸಾಫ್ಟವೇರ್ ಬರೆಯುತ್ತಾನೆ. ಅದನ್ನೂ ಜಗತ್ತು ಎರಡೂ ಕೈಗಳಿಂದ ಬಾಚಿಕೊಳ್ಳುತ್ತೆ.

ಲಿನಸ್ ಗೂ ಬಿಲ್ ಗೇಟ್ಸ್ ಗೂ ವ್ಯಕ್ತಿಗತವಾಗಿ ಗುಣಗಳು ಬೇರೆ ಇದ್ದವಂತ ಕಾಣತ್ತೆ. ಅವರಿಬ್ಬರ ಬಾಲ್ಯ ಭಿನ್ನವಾಗಿದ್ದಿರಬಹುದು. ಗೇಟ್ಸ್ ಹುಟ್ಟಿ ಬೆಳೆದದ್ದು ಅಮೇರಿಕಾದಲ್ಲಿ. ಕ್ಯಾಪಿಟಲಿಸ್ಟ್ ದೇಶ. ಲಿನಸ್ ಹುಟ್ಟಿದ್ದು ಫಿನ್ ಲ್ಯಾಂಡಿನಲ್ಲಿ. ಇದು ನಾರ್ಡಿಕ್ ಮಾಡೆಲ್ಲಿನ (Nordic Model) ದೇಶ. ಅಂದರೆ ಇಲ್ಲಿ ಒಂಚೂರು ಸೋಶಿಯಿಲಿಸ್ಮ್, ಒಂಚೂರು ಕಮ್ಯೂನಿಸ್ಮ್, ಒಂಚೂರು ಕ್ಯಾಪಿಟಲಿಸ್ಮ್ ಕಲಸಿ ಅತಿಯಾದ ಏರುಪೇರಿಲ್ಲದ, ಸಮಾನ ಸುಖೀ ಸಮಾಜದ ಆದರ್ಶಗಳ ಮೇಲೆ ನಡೆಯುವ ದೇಶಗಳ ಗುಂಪಿಗೆ ಸೇರಿದ್ದು. (ನಾರ್ವೆ, ಡೆನ್ಮಾರ್ಕ್, ಐಲ್ಯಾಂಡ್, ‍ಫಿನ್ ಲ್ಯಾಂಡ್, ಸ್ವೀಡನ್ ದೇಶಗಳು ನಾರ್ಡಿಕ್ ಮಾಡೆಲ್ಲಿನ ರಾಜಕೀಯ ವ್ಯವಸ್ಥೆ ಹೊಂದಿವೆ). ಈ ದೇಶಗಳಲ್ಲಿ ಶಿಕ್ಷಣ, ಆರೋಗ್ಯ ಎಲ್ಲರಿಗೂ ಸಮಾನ, ಸಂಪೂರ್ಣ ಉಚಿತ. ಮತ್ತು ನಿವೃತ್ತಿ ಹೊಂದಿದ ಮೇಲೆ ಎಲ್ಲರಿಗೂ ಪಿಂಚಣಿ ಗ್ಯಾರಂಟಿ. ಇನ್ನೊಂದಿದೆ, ಅಲ್ಲಿ ಎಲ್ಲರೂ ಕಡ್ಡಾಯ ಒಂದು ವರ್ಷ ಆರ್ಮಿ ಸೇವೆ ಸಲ್ಲಿಸಬೇಕು ಇಲ್ಲವೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನೆನಪಿರಲಿ ಇವೆಲ್ಲ ಚಿಕ್ಕ ಚಿಕ್ಕ ದೇಶಗಳು, ಚಿಕ್ಕ ಸಂಸಾರ ಚೊಕ್ಕ ಸಂಸಾರವೆಂಬಂತೆ ಸುಖವಾಗಿ ಬಾಳುತ್ತಿರುವ ದೇಶಗಳು. ಆದರೆ ಇವುಗಳಿಗಿಂತ ಚಿಕ್ಕ ದೇಶಗಳು ಅದ್ವಾನ ಆಗಿರೊ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದಾವಲ್ಲವೇ.

(ಬಿಲ್ ಗೇಟ್ಸ್)

ಗೇಟ್ಸ್ ನ ತಂದೆ ಲಾಯರ್ ಆಗಿದ್ದವರು, ತಾಯಿ ಬಿಸಿನೆಸ್ ವುಮೆನ್. ತಾಯಿಯ ಅಪ್ಪ ಬ್ಯಾಂಕ್ ಒಂದರ ಪ್ರೆಸಿಡೆಂಟ್. ಲಿನಸ್ ನ ತಂದೆ ಕಮ್ಯೂನಿಸ್ಟ್ ಪಕ್ಷದ ರಾಜಕಾರಣಿ. ತಾಯಿ ಪತ್ರಕರ್ತೆ. ಅಮ್ಮನ ಅಪ್ಪ ಲೆಕ್ಚರರ್, ಅಪ್ಪನ ಅಪ್ಪ ಪತ್ರಕರ್ತ ಹಾಗೂ ಕವಿ. ಹಾಗೆ ನೋಡಿದರೆ ಲಿನಸ್ ನ ಸಂಬಂಧಿಗಳೆಲ್ಲ ಒಂದಲ್ಲ ಒಂದು ರೀತಿ ಶಿಕ್ಷಣ, ಮಾಧ್ಯಮ, ಸಾಹಿತ್ಯ, ರಾಜಕೀಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದವರು. ಮುಂದೆ ಲಿನಸ್ ನ ತಂದೆ ತಾಯಿ ಕಾರಣಾಂತರಗಳಿಂದ ಬೇರೆ ಆಗುತ್ತಾರೆ. ತಾಯಿ ಕಷ್ಟ ಪಟ್ಟು ಹಗಲು ರಾತ್ರಿ ದುಡಿದು ಲಿನಸ್ ಮತ್ತು ಆತನ ತಂಗಿ ಸಾರಾಳನ್ನು ಬೆಳೆಸುತ್ತಾಳೆ. ಅವನ ಬಾಲ್ಯವು ಬಡತನದಿಂದ ಸವೆದಿರುವಂತೆ ಕಾಣುತ್ತದೆ.

ಲಿನಸ್ ಮತ್ತು ಗೇಟ್ಸ್ ಇಬ್ಬರೂ ತಮ್ಮ ಕಾಲೇಜು ದಿನಗಳಲ್ಲಿ Nerds ಗಳಾಗಿದ್ದರು. ಕನ್ನಡದಲ್ಲಿ ಇದಕ್ಕೆ ಸರಿಯಾದ ಪದವಿಲ್ಲ. ನರ್ಡ್ ಅಂದರೆ ಯಾವಾಗಲೂ ಓದುವ ಪೈಕಿಯ ಆದರೆ ಕೇವಲ ಪುಸ್ತಕದ ಬದನೇಕಾಯಿಗಳಲ್ಲದ ಬಹಳ ಬುದ್ಧಿವಂತರೆಂದರ್ಥ. ಗೇಟ್ಸ್ ಮುಂದೆ ಕಂಪನಿ ತೆರೆದು ವಿಂಡೋಸ್ ನ ದೊಡ್ಡ ಮಟ್ಟಕ್ಕೆ ಒಯ್ಯುತ್ತಾನೆ. ನಿಜಕ್ಕೂ ವಿಂಡೋಸ್ ಕ್ರಾಂತಿಕಾರಿ ಅವಿಷ್ಕಾರವೇ ಸರಿ. ಆದರೆ ಅದರ ಹುಟ್ಟಿನ ಸುತ್ತಮುತ್ತ ಹಲವಾರು ಊಹಾಪೋಹ ದಂತಕತೆಗಳಿವೆ. ಅದನ್ನೆಲ್ಲ ಬರೆಯಲು ಇಲ್ಲಿ ಜಾಗವಿಲ್ಲ.

ಅಲ್ಲಿ ಎಲ್ಲರೂ ಕಡ್ಡಾಯ ಒಂದು ವರ್ಷ ಆರ್ಮಿ ಸೇವೆ ಸಲ್ಲಿಸಬೇಕು ಇಲ್ಲವೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನೆನಪಿರಲಿ ಇವೆಲ್ಲ ಚಿಕ್ಕ ಚಿಕ್ಕ ದೇಶಗಳು, ಚಿಕ್ಕ ಸಂಸಾರ ಚೊಕ್ಕ ಸಂಸಾರವೆಂಬಂತೆ ಸುಖವಾಗಿ ಬಾಳುತ್ತಿರುವ ದೇಶಗಳು. ಆದರೆ ಇವುಗಳಿಗಿಂತ ಚಿಕ್ಕ ದೇಶಗಳು ಅದ್ವಾನ ಆಗಿರೊ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದಾವಲ್ಲವೇ.

ಲಿನಸ್ ತನ್ನ ಕಾಲೇಜು ದಿನಗಳಲ್ಲಿ ಮಿನಿಕ್ಸ್ ಎಂಬ ಆಪರೇಟಿಂಗ್ ಸಿಸ್ಟಂ ಬಳಸ್ತಾ ಅದು ಅವನ ಅಗತ್ಯಕ್ಕೆ ಸರಿಯಾಗಿ ಹೊಂದದೆ ತಾನೇ ಕೂತು ಬರೆದ ಆಪರೇಟಿಂಗ್ ಸಿಸ್ಟಂ ಲಿನಕ್ಸ್. ಬರೆದು, ಒಬ್ಬ ಸಾಮಾನ್ಯ ಕಾಲೇಜು ಹುಡುಗನಂತೆ ನೋಡಿ ನಾನೊಂದು ಸಾಫ್ಟವೇರ್ ಬರೆದಿದ್ದೀನಿ ಎಂದು ಇಂಟರ್ನೆಟ್ಟಿನಲ್ಲಿ ಹರಿಯಬಿಟ್ಟ. ಆಮೇಲೆ ಅದು ಜ್ವಾಲೆಯಂತೆ ಹರಡಿ ಇವತ್ತು ಇಡೀ ಜಗತ್ತನ್ನು ಆವರಿಸಿರುವುದು ಇತಿಹಾಸ. ಮೊದಲು ಅದಕ್ಕೆ Freax ಎಂದು ಹೆಸರಿಟ್ಟಿದ್ದ, ಆಮೇಲೆ ಅದು ಹೇಗೋ ಅವನ ಹೆಸರಿನ ಅನುಸಾರ ಲಿನಕ್ಸ್ ಎಂದು ಮರುನಾಮಕರಣಗೊಂಡಿತು. ಆಶ್ಚರ್ಯವೇನು ಗೊತ್ತೇ, ಅವನು ಹರಿಯಬಿಟ್ಟ ಲಿನಕ್ಸ್ ಬಳಸಿದ್ದವರಿಂದ ಅವನು ಬಯಸಿದ್ದು ಹಣವನ್ನಲ್ಲ, ಬದಲಾಗಿ ಗ್ರೀಟಿಂಗ್ ಕಾರ್ಡುಗಳನ್ನ. ಜಗತ್ತಿನ ಗೊತ್ತೇ ಇರದ ಮೂಲೆ ಮೂಲೆಗಳಿಂತ ತನಗೆ ಗ್ರೀಟಿಂಗ್ ಕಾರ್ಡ್ ಬರಲಾರಂಭಿಸಿದ ಮೇಲೇನೆ ಅವನಿಗೆ ತಾನು ಎಂತಹ ಪರಿಣಾಮಕಾರಿ ಆಪರೇಟಿಂಗ್ ಸಿಸ್ಟಂ ಬರೆದಿದ್ದೇನೆಂದು ಅರಿವಾಗಿದ್ದು. ಇದರ ಬಗ್ಗೆ ಅವನು ಏನು ಹೇಳುತ್ತಾನೆಂದು ಅವನ ಬಾಯಿಂದಲೇ ಕೇಳೋಣ:(ಅವನ ಆತ್ಮಕತೆಯಿಂದ ಎತ್ತಿಕೊಂಡ ಸಾಲುಗಳು).

Actually I didn’t want the money for a variety of reasons. When I originally posted Linux, I felt I was following in the foot-steps of centuries of scientists and other academics who built their work on the foundation of others – on the shoulders of giants, in the words of Sir Isaac Newton. Not only was I sharing my work so that others could find it useful, I also wanted feedback(okay, and praise). It didn’t make sense to charge people who could potentially help me improve my work. I suppose I would have approached it all differently if I hadn’t been raised in Finlad, where anyone exhibiting the slightest sign of greediness is viewed with suspicion, if not envy. (This changed a bit since the days when Nokia phones started making their way into pockets of world over, boosting the bank accounts of numerous Finns). And yes, I undoubtedly would have approached the whole no-money thing a lot differently if I had not been brought up under the influence of a diehard academic grandfather and a diehard communist father.

ಈ ರೀತಿ ಒಬ್ಬ ಶಿಕ್ಷಣ ತಜ್ಞ ತಾತ, ಕಮ್ಯೂನಿಸ್ಟ್ ತಂದೆಯ ಪ್ರಭಾವದಿಂದ ಲಿನಸ್ ಸಾಫ್ಟವೇರ್ ಜಗತ್ತಿನಲ್ಲಿ ದೊಡ್ಡ ಕ್ರಾಂತಿ ಹುಟ್ಟುಹಾಕುತ್ತಾನೆ. ನಿಮಗೆ ಗೊತ್ತೇ, ಇವತ್ತಿನ ಇಡೀ “ಕ್ಲೌಡ್”, ಲಿನಕ್ಸ್ ಮೇಲೆ ಕೂತಿದೆ. ಹಾಗೆ ನೋಡಿದರೆ ಜಗತ್ತಿನ ಮುಕ್ಕಾಲು ಭಾಗ ಸಾಫ್ಟವೇರ್ ಲಿನಕ್ಸ್ ಮೇಲೆ ಓಡುತ್ತಿದೆ. ಅದೆಲ್ಲ ಬಿಡಿ, ನಮ್ಮ ನಿಮ್ಮ ಕೈಯಲ್ಲಿರುವ ಮಾಣಿಕ್ಯ, ಜಗತ್ತನ್ನು ಚದುರಂಗದಂತೆ ಆಡಿಸುತ್ತಿರುವ ಆಂಡ್ರಾಯ್ಡ್ ಫೋನ್, ಲಿನಕ್ಸ್ ನ ರೂಪಾಂತರ. ಅಂದರೆ ಲಿನಕ್ಸ್ ಎಂಬ ಉಚಿತ ಮನೆಗೆ ಗೂಗಲ್ ಇನ್ನೊಂದಷ್ಟು ಸುಣ್ಣ ಬಣ್ಣ ಹೊಡೆದುಮೊಬೈಲ್ ಒಳಗೆ ಹಿಡಿಸುವುಂತೆ ಮಾಡಿ ಕೊಟ್ಟಂತೆ. ಅಂದರೆ ಇವತ್ತು ಕಮ್ಯೂನಿಸ್ಟ್ ಎಂದರೆ ಮೂಗು ಮುರಿಯುವ ನಾವು ನೀವೆಲ್ಲ ನಮ್ಮ ಜೇಬಿನಲ್ಲೇ ಕಮ್ಯೂನಿಸ್ಮ್ ಕರುಣಿಸಿದ ಪ್ರಾಡಕ್ಟನ್ನು ಹೊತ್ತು ತಿರುಗುತ್ತಿದ್ದೇವೆ. ಅದರಲ್ಲೆ ಜೀವನ ನಡೆಸುತ್ತಿದ್ದೇವೆ.

ಲಿನಸ್ ಲಿನಕ್ಸ್ ನ ಮೂಲ ರೂಪ ಬರೆದನಷ್ಟೇ. ಆಮೇಲೆ ಅದನ್ನು ತಿದ್ದಿ ತೀಡಿ ತಿನ್ನಿಸಿ ಬೆಳೆಸಿ ಇವತ್ತಿನ ಹಂತಕ್ಕೆ ತಂದು ನಿಲ್ಲಿಸಿರುವುದು “ಫ್ರೀ ಸಾಫ್ಟವೇರ್ ಮೂವ್ ಮೆಂಟ್” ಎಂಬ ಸಾಫ್ಟವೇರ್ ಜಗತ್ತಿನ ಕಮ್ಯೂನಿಸ್ಟ್ ರೂಪದ ಹೋರಾಟದಲ್ಲಿ ನಂಬಿಕೆಯಿಟ್ಟಿರುವ ಅಪಾರ ಎಂಜಿನಿಯರ್ ಗಳ ಬಿಡುವಿನ ಸಮಯದಲ್ಲಿ ನೀಡಿದ ಶ್ರಮದಾನ. ಇದರ ಬಗ್ಗೆ ವಿಸ್ತಾರವಾಗಿ ಬೇರೆ ಯಾವಾಗಲಾದರೂ ಬರೆಯುತ್ತೇನೆ. ಏನು ಹೇಳ್ತಿದ್ದೀನೆಂದರೆ ಈ ಕೆಟ್ಟ ಪಕ್ಷ ರಾಜಕಾರಣವನ್ನೆಲ್ಲ ಬದಿಗಿಟ್ಟು, ಐಡಿಯಾ ಬಗ್ಗೆ ಯೋಚಿಸಿ. ಇದರ ಹುಟ್ಟಿಗೆ ಕಾರಣ, ಮೂಲೋದ್ದೇಶ ಇದರ ಅಗತ್ಯತೆ ಹಾಗೂ ಸಾರ್ಥಕತೆ ಬಗ್ಗೆ ಯೋಚಿಸಿ.

ಕತೆಗಾರ್ತಿ ಅಪರ್ಣ ಎಚ್ ಎಸ್ ಅವರ “ಫೀನಿಕ್ಸ್” ಎಂಬ ಕತೆಯಲ್ಲಿ ಒಂದು ಸಾಲು ಬರುತ್ತೆ, “ಇಲ್ಲದವರಿಂದಲೇ ಕಿತ್ತು ತಿನ್ನೋ ಈ ಜಗತ್ತನ್ನು ನೋಡಿದ ಮೇಲೇನೂ ಕೂಡ ಜೀವನದಲ್ಲಿ ಒಂದು ಸರ್ತಿನಾದರೂ ಕಮ್ಯನಿಷ್ಟ್ ಸಿದ್ಧಾಂತ ಆಕರ್ಷಿಸಲಿಲ್ಲ ಅಂದ್ರೆ ಅವನೂ ಒಬ್ಬ ಮನುಷ್ಯನಾ? ಅವನಿಗೆ ಭಾವನೆಗಳಿವೆ ಅನ್ನಬಹುದಾ?”. ಇದನ್ನು ಮುಂದುವರೆಸಿ ನನಗೆ ಅನಿಸುವುದೇನೆಂದರೆ, ಒಂದು ಸರ್ತಿ ಅನ್ನೋದಕ್ಕಿಂತ ಮನುಷ್ಯ ತನ್ನ ಬದುಕಿನುದ್ದಕ್ಕೂ ಎದೆಯ ಒಂದು ಮೂಲೇಲಿ ಯಾವಾಗಲೂ ಒಂದಂಶ ಒಂದೇ ಒಂದಂಶ ಕಮ್ಯೂನಿಸ್ಮ್ ಐಡಿಯಾ ಉಳಿಸಿಕೊಂಡುಬಿಟ್ಟರೆ, ಸಮಾಜ ಎಷ್ಟೋ ಮಟ್ಟಿಗೆ ಸ್ವಸ್ಥವಾಗಿರಲಿಕ್ಕೆ ಸಾಧ್ಯ ಅಂತ. ನಾ ಪಾರ್ಟಿ ರಾಜಕಾರಣ ಹೇಳ್ತಿಲ್ಲ. ಆಸೆ ಮೋದಿ ರಾಹುಲರ ಎದೆಯಲ್ಲೂ ಒಂದಂಶ ಇರಲಿ ಅಂತ.

ಒಂದು ವೇಳೆ ಲಿನಸ್ ಗೇಟ್ಸ್ ಜಾಗದಲ್ಲಿದ್ದು ಲಿನಕ್ಸ್ ಮೈಕ್ರೋಸಾಫ್ಟ್ ಪ್ರಾಡಕ್ಟ್ ಆಗಿದ್ದರೆ ಏನಾಗುತ್ತಿತ್ತು? ವಿಂಡೋಸ್ ವಿಧಿಯೇ ಲಿನಕ್ಸ್ ಗೂ ಒದಗುತ್ತಿತ್ತು. ವಿಂಡೋಸ್ ಸಧ್ಯಕ್ಕೆ ಹತ್ತನೇ ವರ್ಶನ್ ನಲ್ಲಿದೆ. ಇದು ಅದರ ಕೊನೆಯ ವರ್ಷನ್ ಎಂದು ಮೈಕ್ರೋಸಾಫ್ಟ್ ಘೋಷಿಸಿಯಾಗಿದೆ. ಆಗಾಗ ಕ್ರಾಷ್ ಆಗುವ ಕೆಟ್ಟ ಆಪರೇಟಿಂಗ್ ಸಿಸ್ಟಂ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಉದ್ದಕ್ಕೂ ಲಿನಕ್ಸ್ ಬಗ್ಗೆ ಅನಾದರದ ಭಾವನೆ ಇಟ್ಟುಕೊಂಡಿದ್ದ ಗೇಟ್ಸ್ ಕೊನೆಗೂ ಒಂದಿನ linux is greatest operating system ಎಂದು ಒಪ್ಪಿಕೊಂಡಾಗಿದೆ. ಒಂದು ಕಾಲದಲ್ಲಿ ಮೈಕ್ರೋಸಾಫ್ಟ್ ಸೀಯೀವೋ (CEO) ಸ್ಟೀವ್ ಬಾಲ್ಮರ್ Open source community ಯನ್ನು ಕ್ಯಾನ್ಸರ್ ಎಂದು ಹೀಗೆಳೆದು ಅದೇ ಕಂಪನಿ ಕಾಲಾನಂತರ Open source community ಯನ್ನು ಎರಡೂ ಬಾಹುಗಳಿಂದ ತಬ್ಬಿಕೊಂಡಾಗಿದೆ. ಸಧ್ಯಕ್ಕೆ ಲಿನಕ್ಸ್ ಗೆ ಪರ್ಯಾಯ ಆಪರೇಟಿಂಗ್ ಸಿಸ್ಟಂಗಳೇ ಇಲ್ಲ. ಆಪರೇಟಿಂಗ್ ಸಿಸ್ಟಂ ವಿಭಾಗದಲ್ಲಿನ ಸಂಶೋಧನೆಯ ಫಲಾಫಲ ಅಷ್ಟಕ್ಕಷ್ಟೇ. ಈಗಲೂ ಎಲ್ಲ ಆಪರೇಟಿಂಗ್ ಸಿಸ್ಟಂಗಳ ಮೂಲ ಸಿದ್ಧಾಂತಗಳು ಮೂವತ್ತು ನಲವತ್ತು ವರ್ಷಗಳ ಹಿಂದೆ ಇದ್ದವೇ ಆಗಿವೆ. ಈ ವಿಭಾಗದಲ್ಲಿ ಮಹತ್ತರವಾದದ್ದು ಏನಾದರೂ ಘಟಿಸಬೇಕೆಂದರೆ ಅದು ರನ್ ಆಗಬೇಕಿರುವ ಹಾರ್ಡ್ ವೇರ್ ವಿಭಾಗದಲ್ಲಿ ಚಮತ್ಕಾರಿಕ ಸಂಶೋಧನೆ ಆಗಬೇಕು.

Moore’s law ಸಾರ್ವಕಾಲಿಕ ನಿಲ್ಲೋಲ್ಲ. ಕೊನೆಗೊಂದು ಹೇಳಿಬಿಡ್ತೀನಿ, ಅಚಾನಕ್ಕಾಗಿ ಎಂಜಿನಿಯರಿಂಗ್ ಗೆ ಸೇರಿ ಎಲಕ್ಟ್ರಾನಿಕ್ಸ್ ಓದಿ ರೂಢಿಯಂತೆ ಸಾಫ್ಟವೇರ್ ಕಂಪನಿ ಹೊಕ್ಕಿದ್ದ ನನಗೆ ಇಲ್ಲಿ ಇಂಥದ್ದೇ ಇಷ್ಟವಾದ ಕೆಲಸ ಮಾಡಬೇಕೆಂಬ ಯಾವ ಕನಸೂ ಇರಲಿಲ್ಲ. ಹಾಗಾಗಿ ಕಂಪನಿ ಸೇರಿದ ಮೇಲೆ ಅದು ಲಕ್ಕೋ ಪಕ್ಕೋ ಲಿನಕ್ಸ್ ವಿಭಾಗದಲ್ಲಿ ಬಿದ್ದು ಬಿಟ್ಟೆ. ಹಾಗಾಗಿ ಹತ್ತು ವರ್ಷಗಳಿಂದ ಲಿನಕ್ಸ್ ಮೇಲೆ ನನಗೆ ಅನ್ನದ ರುಣವಿದೆ. ಲಿನಕ್ಸ್ ಜ್ಞಾನ ಮತ್ತು ಸಾಮಾಜಿಕ ಕಳಕಳಿಯ ಒಟ್ಟು ಮೊತ್ತ. ಜಗತ್ತನ್ನು ಉದ್ಧರಿಸಲು ಬರೀ ಜ್ಞಾನವೂ ಸಾಕಾಗಲ್ಲ, ಬರೀ ಕಳಕಳಿಯೂ ಸಾಕಾಗಲ್ಲ.