“ಧಿಡೀರ್ ಅಂತ ಹೀಗೆ ಒಂದು ವಾರಂತ್ಯದಲ್ಲಿ ಸಾವಿನ ಕಣಿವೆಗೆ ಹೊರಟೇ ಬಿಟ್ಟೆವು. ಸಿಯೆರ ನೆವಾಡ ಪರ್ವತ ಶ್ರೇಣಿಯ ಬದಿಯಲ್ಲಿ ನೆವಾಡ ರಾಜ್ಯದ ನೈರುತ್ಯ ದಿಕ್ಕಿನ ಅಂಚಿನಲ್ಲಿರುವ ಡೆತ್ ವ್ಯಾಲಿಗೆ ನಮ್ಮೂರಿನಿಂದ ಸುಮಾರು ಮೂರು ಘಂಟೆಗಳ ಪ್ರಯಾಣ.ಸಿಟಿಯ ಗೌಜು ಗದ್ದಲಗಳಿಂದ ದೂರ ಸಾಗುತ್ತಾ, ರಸ್ತೆಯ ಎರಡೂ ಬದಿಯಲ್ಲಿ ಕಾಣುವ ಯಕ್ಕಾ ಪಾಮ್ ಮತ್ತು ಕುರುಚುಲುಗಳನ್ನು ಸರಿಸುತ್ತ ಆವರಿಸುವ ಮೊಹಾವೆ ಮರುಭೂಮಿಯ ಅಗಾಧ, ನಿಗೂಢ ಅನುಭೂತಿಯನ್ನು ಎದೆಯೊಳಗಿಳಿಸುತ್ತ ಫ಼ರ್ನೆಸ್ ಕ್ರೀಕ್ ವಿಸಿಟರ್ ಸೆಂಟರ್ ತಲುಪಿದೆವು.”
ವಲಸೆ ಹಕ್ಕಿ ಬರೆದ ಪ್ರವಾಸ ಕಥನ.

ದಕ್ಷಿಣ ಅಮೇರಿಕ ಖಂಡದ ಅತ್ಯಂತ ತಗ್ಗಿನ ಪ್ರದೇಶ, ನೆವಾಡ ಹಾಗು ಕ್ಯಾಲಿಫ಼ೊರ್ನಿಯ ರಾಜ್ಯಗಳಲ್ಲಿ ಹರಡಿರುವ ಡೆತ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇದು ಅಮೇರಿಕೆಯೆ ಅತ್ಯಂತ ಒಣ ಹಾಗು ಗರಮಾ ಗರಂ ತಾಣ ಎಂದು ಮಗನ ಭೂಗೋಳ-ಬೀ ಸ್ಪರ್ಧೆಗೆ ತಯ್ಯಾರಿ ನಡೆಸುತ್ತಾ ಓದಿಸುವಾಗ, ಕಡು ಬೇಸಿಗೆಯ ಕುದಿ ತಾಪದ ನಿರ್ಜನ ನಿರ್ಜಲ ಕಾಲುದಾರಿಗಳಲ್ಲಿ ನಿರ್ಮಲ ಸೌಂದರ್ಯ ಅರಸಲು ಹೋಗಿ ಒಣಗಿ ಒದ್ದಾಡುವ ಶೂರರ ವೀರಗಾಥೆಗಳನ್ನು ಕೇಳುವಾಗ, ಊರು ಸುತ್ತುವ ಉತ್ಸಾಹಿಯಾದ ನನ್ನಲ್ಲಿ ಕುತೂಹಲ ಮೂಡುತ್ತಿದ್ದರೂ ಹೋಗುವ ಸಂದರ್ಭ ಮಾತ್ರ ಒದಗಿ ಬಂದಿರಲಿಲ್ಲ.

ಧಿಡೀರ್ ಅಂತ ಹೀಗೆ ಒಂದು ವಾರಂತ್ಯದಲ್ಲಿ ೨೦೧೨ರ ಡಿಸೆಂಬರ್ ಇಪ್ಪತ್ತೊಂದಕ್ಕೆ ಸಮರೇಖೆಯಲ್ಲಿ ನಿಲ್ಲದ ತಾರೆಗಳೆಲ್ಲ ಸಮನಾಗಿ ನಿಂತು ಪ್ರಸಾದಿಸಿದ ಒಂದು ಶುಭ ಮುಹೂರ್ತದಲ್ಲಿ ಸಾವಿನ ಕಣಿವೆಗೆ ಹೊರಟೇ ಬಿಟ್ಟೆವು. ಸಿಯೆರ ನೆವಾಡ ಪರ್ವತ ಶ್ರೇಣಿಯ ಬದಿಯಲ್ಲಿ ನೆವಾಡ ರಾಜ್ಯದ ನೈರುತ್ಯ ದಿಕ್ಕಿನ ಅಂಚಿನಲ್ಲಿರುವ ಡೆತ್ ವ್ಯಾಲಿಗೆ ನಮ್ಮೂರಿನಿಂದ ಸುಮಾರು ಮೂರು ಘಂಟೆಗಳ ಪ್ರಯಾಣ. ಸಿಟಿಯ ಗೌಜು ಗದ್ದಲಗಳಿಂದ ದೂರ ಸಾಗುತ್ತಾ, ರಸ್ತೆಯ ಎರಡೂ ಬದಿಯಲ್ಲಿ ಕಾಣುವ ಯಕ್ಕಾ ಪಾಮ್ (Yucca Palm) ಮತ್ತು ಕುರುಚುಲುಗಳನ್ನು ಸರಿಸುತ್ತ ಆವರಿಸುವ ಮೊಹಾವೆ ಮರುಭೂಮಿಯ ಅಗಾಧ, ನಿಗೂಢ ಅನುಭೂತಿಯನ್ನು ಎದೆಯೊಳಗಿಳಿಸುತ್ತ ಫ಼ರ್ನೆಸ್ ಕ್ರೀಕ್ ವಿಸಿಟರ್ ಸೆಂಟರ್ ತಲುಪಿದೆವು.

ರಾತ್ರಿ ತಿರುಗಿ ಊರಿಗೆ ಮರಳುವ ಉದ್ದೇಶ ಇದ್ದುದದರಿಂದ, ವಿಸಿಟರ್ ಸೆಂಟರ್ನಲ್ಲಿ ಸಿಕ್ಕ ಪಾರ್ಕಿನ ನಕಾಶೆ ಹಿಡಿದು ಸಂಜೆ ಒಳಗೆ ನೋಡಲೇಬೇಕಾದ ಸ್ಥಳಗಳನ್ನ ಶಾರ್ಟ್ ಲಿಸ್ಟ್ ಮಾಡುತ್ತಾ ನಿಂತೆವು. ನನಗೆ ಯಾವಾಗಲೂ ಹಾಗೇ! ಅಂಕಿ ಅಂಶಗಳಿರುವ ಯಾವುದೇ ಪ್ಯಾಂಪ್ಲೆಟ್ ಕೈಗೆ ಬಂದರೂ ತಕ್ಷಣ ಅದರಲ್ಲಿರುವ ವಿವರಗಳನ್ನೆಲ್ಲ ಅರಗಿಸಿಕೊಂದು ಪರೀಕ್ಷೆಗೆ (?) ಉರು ಹೊಡೆದು ರೆಡಿ ಆಗಬೆಕೆನ್ನಿಸುವಂತಹ ಅಬ್ಸೆಶನ್ ಶುರುವಾಗತ್ತೆ. ಇದು ಕಾರ್ಪೊರಲ್ ಪನಿಶ್ಮೆಂಟಿನ ಮಹಾತ್ಮೇನೇ ಇರಬಹುದು! ಜೊತೆಗೆ ಮಗರಾಯನ ತಲೆಗೂ ತುಂಬುವ ಚಪಲ. ಮರೀ, ಹಾಟೆಸ್ಟ್ ಟೆಂಪರೆಚರ್ರು ಇಲ್ಲಿ ರೆಕಾರ್ಡ್ ಆಗಿರೋದು ಎಷ್ಟು ಗೊತ್ತ? ೧೩೪ ಡಿಗ್ರಿ ಫ್ಯಾರನ್ ಹೀಟ್. ಅಂದರೆ ೫೧.೧ ಡಿಗ್ರಿ ಸೆಲ್ಸಿಯಸ್ಸು. ಹೆಂಗೆ ಕನ್ವರ್ಟ್ ಮಾಡೋದು ಹೇಳು ನೋಡಣ? ಡೆತ್ ವ್ಯಾಲಿಗೆ ಆ ಹೆಸರು ಬಂದದ್ದು ಕ್ಯಾಲಿಫ಼ೋರ್ನಿಯ ಗೋಲ್ಡ್ ರಶ್ ಸಮಯದಲ್ಲಿ. ಅದು ಯಾವಾಗಾಗಿದ್ದು ಹೇಳು? ಮರಿ ಮಾತಾಡದೆ ಅಪ್ಪನ ಕೈ ಹಿಡಿದು ಎಳೆಯುತ್ತಾ ಬೇಗ ಬೇಗ ಮುಂದೆ ನಡೆಯಿತು.

ಜ಼ಬ್ರಿಸ್ಕಿ ಪಾಯಿಂಟ್

ಪಾರ್ಕಿಂಗ್ ಲಾಟಿನಲ್ಲಿ ಕಾರು ನಿಲ್ಲಿಸಿ, ಕಾಲು ಮೈಲಿಯಷ್ಟು ದೂರ ತಗ್ಗಿನ ದಿಣ್ಣೆಯ ಮೇಲೆ ನೆಡೆದು ಜ಼ಬ್ರಿಸ್ಕಿ ಪಾಯಿಂಟ್ ತಲುಪಿದೆವು. ಮಂತ್ರಮುಗ್ಧ ಅನ್ನೊ ಪದದ ಅರ್ಥ ವ್ಯಾಪ್ತಿ ಎಲ್ಲ ಅನುಭವಕ್ಕೆ ಬಂದದ್ದು ನೂರಾರು ಮೈಲಿ ಹರಡಿದ, ಜತನದಿಂದ ಬಣ್ಣ ವಿನ್ಯಾಸಗಳನ್ನು ಸಂಯೋಜಿಸಿ ಕೆತ್ತಿದಂತೆ ಕಾಣುವ ಪದರ ಕಲ್ಲುಗಳ ದರಿ ದಿಣ್ಣೆಗಳನ್ನು (bandlands) ನೋಡಿದಾಗ. ಮಿಲಿಯನ್ ಗಟ್ಟಲೆ ವರುಷಗಳ ಗಾಳಿ ಮತ್ತು ನೀರಿನ ಭೂಕೊರೆತದಿಂದ ನಿರ್ಮಾಣಗೊಂಡಿರುವ ಈ ಭೂರಚನೆಯ ವಿಹಂಗಮ ನೋಟವನ್ನು ಸೂರ್ಯಾಸ್ತದ ಸಮಯದಲ್ಲಿ ಕ್ಯಾಮೆರಾ ಕಣ್ಣಿಂದ ಸೆರೆಹಿಡಿಯುವುದು ಅನೇಕ ಪ್ರವಾಸಿಗರ ಆದ್ಯತೆ.

ಕೆಟ್ಟನೀರಿನ ತೊಟ್ಟಿ

ಸಮುದ್ರ ಮಟ್ಟದಿಂದ ೨೮೨ ಅಡಿ ಕೆಳಗಿರುವ ಬ್ಯಾಡ್ ವಾಟರ್ ಬೇಸಿನ್ ದಕ್ಷಿಣ ಅಮೇರಿಕಾದ ಅತ್ಯಂತ ತಗ್ಗಿನ ಪ್ರದೇಶ. ಪಾರ್ಕಿಂಗ್ ಲಾಟಿಗೆ ಹೊಂದಿಕೊಂಡಂತೆ ಇರುವ ಪುಟ್ಟ ಮರದ ಸೇತುವೆ ಮೇಲೆ ನಡೆಯುತ್ತಿದ್ದಂತೆ ಎದುರಾದ ಬಟಾಬಯಲ ತುಂಬಾ ಸ್ನೋ! ಅರೆರೆ ಇದೇನು, ಎಪ್ಪತ್ತೈದು ಡಿಗ್ರಿ ಬೆಚ್ಚನೆಯ ಬಿಸಿಲಲ್ಲಿ ಎಂದು ಅಚ್ಚರಿಯಿಂದ ಹತ್ತಿರ ಹೋಗಿ ನೋಡಿದರೆ ಅದು ಹಿಮವಲ್ಲ, ಉಪ್ಪು! ಬಯಲ ತುಂಬ ಸಾಪಾಟಾಗಿ ಜೇನುಗೂಡಿನ ವಿನ್ಯಾಸದಲ್ಲಿ ಐದಾರು ಮೈಲಿಗಳವರೆಗೆ ಹರಡಿರುವ ಉಪ್ಪಿನ ಬಿಲ್ಲೆಗಳು, ಪುರಾತನ ಇತಿಹಾಸ ಪೂರ್ವದ ಕೆರೆಗಳು ಮರೆಯಾಗಿ ಉಳಿಸಿದ ಲವಣ ಮತ್ತು ಖನಿಜಗಳ ಸಾಂದ್ರ ಕೊಳಗಳ ಅವಶೇಷವಂತೆ. ತೂಬಿಲ್ಲದ ತೊಟ್ಟಿಯನ್ನು ಮತ್ತೆ ಮತ್ತೆ ತುಂಬುವ ಮಳೆನೀರು ಆವಿಯಾಗುವಾಗ ಹೀರಿದ ಕೆರೆಯ ಉಪ್ಪನ್ನು ಕೆರೆಗೆ ಚಲ್ಲುತ್ತದೆ. ಕರಕರ ಅನ್ನಿಸುವ ಉಪ್ಪಿನ ಮೈದಾನದಲ್ಲಿ ಸುಮಾರು ಹೊತ್ತು ನಡೆದಾಡಿ ಮಕ್ಕಳು ಕಾತುರದಿಂದ ಕಾಯುತ್ತಿದ್ದ ಮರಳು ದಿಣ್ಣೆಗಳೆಡೆ ಹೊರೆಟೆವು.

ಗ-ಮ-ಪ ಹಾಡುವ ಯುರೇಕಾ ದಿಣ್ಣೆ

ಮೂವತ್ನಾಲ್ಕು ಲಕ್ಷ ಎಕರೆಗಳಷ್ಟು ವಿಸ್ತಾರದ ಡೆತ್ ವ್ಯಾಲಿ ಪಾರ್ಕಿನ ಶೇಕಡ ಒಂದಕ್ಕಿಂತ ಕಡಿಮೆ ಭೂಭಾಗವು ಮರಳುದಿಣ್ಣೆಗಳಿಂದ ಆವೃತವಾಗಿದೆ. ಈ ಮರಳು ದಿಣ್ಣೆಗಳಲ್ಲಿ ಅತ್ಯಂತ ಎತ್ತರದ ಯುರೇಕಾ (೬೮೦ ಅಡಿಗಳು) ಭೂಮಿಯ ಕೆಲವೆಡೆ ಮಾತ್ರ ಕಂಡುಬರುವ ಅಪರೂಪದ ಸಿಂಗಿಂಗ್ ಡ್ಯೂನ್. ಮರಳ ಕಣಗಳು ಗುಪ್ಪೆಯ ಇಳಿಜಾರಿನಲ್ಲಿ ಒಟ್ಟಾಗಿ ಜಾರಿ ಜಾರಿ ಸರಿಯುವಾಗಲೆಲ್ಲಾ, ಗ,ಮ,ಪ ಶೃತಿಗಳಲ್ಲಿ ಯುರೇಕ ಝೇಂಕರಿಸುವುದನ್ನು ಕೇಳಬಹುದಂತೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟುಕಿಸಿ. ಅಪರೂಪದ ಈ ಹಾಡುಗಾರ್ತಿಯ ಝೇಂಕಾರ ಕೇಳಲು ಅದಮ್ಯ ಕುತೂಹಲವಿದ್ದರೂ, ಈಗಾಗಲೆ ದಣಿದಿರುವ ಚಿಳ್ಳೆ ಪಿಳ್ಳೆಗಳು ಅಷ್ಟು ದೂರ ನಡೆದು ಏರಿ ಜಾರಿ ಮಾಡುವುದರಲ್ಲಿ ತೆರೆಯುವ ಸ್ವರದ ಮುಂದೆ ಬೇರಾರ ಸಂಗೀತವು ಕೇಳುವುದಿಲ್ಲವಲ್ಲ! ಹತ್ತಿರದಲ್ಲೇ ರಸ್ತೆಯ ಬದಿಯಲ್ಲಿ ಕಾಣುವ ಪುಟ್ಟ ಮೆಸ್ಕೀಟ್ ದಿಣ್ಣೆಗಳಿಗೆ ಒಂದು ಕ್ವಿಕ್ ವಿಸಿಟ್ ಹಾಕಿ ಹೊರಡೋಣ ಎನ್ನುತ್ತ ಹೊರೆಟೆವು. ಮರಳಾಟ ಕಳೆ ಕಟ್ಟುತ್ತಿರುವಾಗಲೇ ಮಿಸ್ಟರ್ ಸೂರ್ಯ ಬಾನ ತುಂಬ ಕನ ಫೆಟ್ಟಿಗಳನ್ನೆರಚುತ್ತ so dawn has gone and we din’t say good bye ಎಂದು ಪೊಲೈಟಾಗಿ ಪಡುವಣಕ್ಕೆ ಜಾರುವ ತಯ್ಯಾರಿ ನಡೆಸಿದ.