ಶ್ರೀರಾಮ್ ತಮ್ಮದೇ ರೀತಿಯಲ್ಲಿ ಬರೆಯುತ್ತಿದ್ದಾರೆ ಎನ್ನುವುದಷ್ಟೆ ನನಗಿಲ್ಲಿ ಮುಖ್ಯ. ಅವರ ಅನುಭವ ವಲಯ, ಭಾಷೆ, ಚಿಂತನೆ ಅವರಿಗೇ ಸೇರಿದ್ದು, ವಿಶಿಷ್ಟವಾದ್ದು. ಅವರು ತಾನೇ ತಾನಾಗಿ ಬರೆಯುತ್ತಿರುವಷ್ಟೂ ಕಾಲ ಅವರ ಕೊಡುಗೆ ಮಹತ್ವದ್ದಾಗಿರುತ್ತದೆ. ಕೆಲವರಿಗೆ ಸಾಹಿತ್ಯವು ಜೀವನಕ್ಕೆ ಕನ್ನಡಿಯಾಗಿರಬೇಕು; ಕೆಲವರಿಗೆ ಅಷ್ಟು ಸಾಲದು, ಜೀವನವನ್ನು ಮಾರ್ಪಡಿಸುವ ಹಾಗಿರಬೇಕು; ಇನ್ನು ಕೆಲವರಿಗೆ ಏನಾದರೊಂದು ಖುಷಿಯನ್ನು, ಕನಿಷ್ಠ ಓದುವ ಖುಷಿಯನ್ನು, ಕೊಡುವಂತಿರಬೇಕು.ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು.
ಕೆ. ವಿ. ತಿರುಮಲೇಶ್ ಅಂಕಣ

 

ಕೆಲ ವರ್ಷಗಳ ಹಿಂದೆ ಯುವ ವ್ಯಕ್ತಿಯೊಬ್ಬರು ನನ್ನ ಹೈದರಾಬಾದ್ ಕ್ವಾರ್ಟರ್ಸ್ ಗೆ ಬಂದು ಬಾಗಿಲು ತಟ್ಟಿದರು. ನಾನು ಬಾಗಿಲು ತೆರೆದದ್ದೇ, ‘ನಾನು ಶ್ರೀರಾಮ್’ ಎಂದು ನಸು ನಗುತ್ತ ತಮ್ಮ ಪರಿಚಯ ಹೇಳಿಕೊಂಡರು. ಎತ್ತರದ, ತೆಳ್ಳಗಿನ, ಲಕ್ಷಣವಾದ ಯುವಕ. ಆಮೇಲೆ ಕೆಲವೇ ನಿಮಿಷಗಳ ಮಾತುಕತೆಯಲ್ಲಿ ಈ ಯುವಕ ನನಗೆ ಆತ್ಮೀಯರಾಗಿಬಿಟ್ಟರು. ಕತೆಗಾರ ಎಂ.ಎಸ್. ಶ್ರೀರಾಮ್ ವಯಸ್ಸಿನಲ್ಲಿ ನನಗಿಂತ ಒಂದು ತಲೆಮಾರಿಗಿಂತಲೂ ಹೆಚ್ಚು ಚಿಕ್ಕವರು. ಆದರೆ ವಯಸ್ಸು ಆತ್ಮೀಯತೆಗೆ ತೊಡಕಾಗುವುದಿಲ್ಲ. ನನ್ನ ಅನೇಕ ಆಪ್ತಮಿತ್ರರು ನನಗಿಂತ ಚಿಕ್ಕವರೇ. ಅವರಲ್ಲಿ ಇಂದು ಶ್ರೀರಾಮ್ ಕೂಡಾ ಒಬ್ಬರು. ನಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ಅವರು ಹೈದರಾಬಾದಿನಲ್ಲಿ ಕೆಲಸದಲ್ಲಿದ್ದರು. ಶ್ರೀರಾಮ್ ಹೆಸರನ್ನು ನಾನು ಕೇಳಿದ್ದೆನಾದರೂ ಅವರಿನ್ನೂ ಕತೆಗಾರರಾಗಿ ಪ್ರಸಿದ್ಧರಾಗಿರಲಿಲ್ಲ. ಹೈದರಾಬಾದಿನ ಕನ್ನಡ ಸಾಹಿತ್ಯ ಮಂದಿರದಿಂದ ಪ್ರಕಟವಾಗುತ್ತಿದ್ದ ‘ಪರಿಚಯ’ ಪತ್ರಿಕೆಯಲ್ಲಿ ಅವರು ಲೇಖನಗಳನ್ನು ಬರೆಯುತ್ತಿದ್ದರು. ಕ್ರಮೇಣ ಅವರ ಕತೆಗಳು ಅಲ್ಲಲ್ಲಿ ಕಾಣಿಸಿಕೊಳ್ಳಲು ಸುರುವಾದುವು. ನಂತರ ಅವರ ಕಥಾಸಂಕಲನ ‘ಮಾಯಾದರ್ಪಣ’ ಪ್ರಕಟವಾಯಿತು. ಆಮೇಲೆ ‘ಅವರವರ ಸತ್ಯ’. ಇವುಗಳಲ್ಲಿ ಯಾವುದೋ ಒಂದಕ್ಕೆ ನಾನು ಮುನ್ನುಡಿ ಬರೆಯಬೇಕೆಂದು ಶ್ರೀರಾಮ್ ಅಪೇಕ್ಷಿಸಿದ್ದರು; ಆದರೆ ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಅವರ ಮೊದಲೆರಡು ಕಥಾಸಂಕಲನಗಳಲ್ಲಿನ ಕತೆಗಳ ಕುರಿತು ಲೇಖನವೊಂದನ್ನು ಬರೆದಿದ್ದೇನೆ. ಅದು ಬಹುಶಃ ‘ಉಲ್ಲೇಖ’ ಎಂಬ ನನ್ನ ಲೇಖನ ಸಂಗ್ರಹದಲ್ಲಿ ಇದೆ. ಶ್ರೀರಾಮ್ ವಿಪುಲವಾಗಿ ಬರೆದಿಲ್ಲ ನಿಜ; ಆದರೂ ಸಾಕಷ್ಟು ಕತೆಗಳನ್ನು ಮತ್ತು ಲೇಖನಗಳನ್ನು ಬರೆದಿದ್ದಾರೆ. ಕತೆಗಾರರೆಂದೇ ಅವರಿಗೆ ಹೆಸರು. ಕತೆಗಾರರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಬರೆಯುವುದು ಇನ್ನೂ ಬಹಳಷ್ಟಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಶ್ರೀರಾಮ್ ಅವರ ಕಥಾಸಂಕಲನಗಳು:
ಮಾಯಾದರ್ಪಣ (೧೯೯೧)
ಅವರವರ ಸತ್ಯ (೧೯೯೬)
ತೇಲ್ ಮಾಲಿಶ್ (೨೦೧೦)
ಸಲ್ಮಾನ್ ಖಾನನ ಡಿಫಿಕಲ್ಟೀಸು (೨೦೧೩).

ಶ್ರೀರಾಮ್ ಗೆ ಅವರದೇ ಆದ ಶೈಲಿಯಿದೆ; ಮನುಷ್ಯ ತಾನೇ ಆದಾಗ ಆತನ ವಿಶಿಷ್ಟತೆ ಗೋಚರಿಸುತ್ತದೆ. ಈ ವಿಶಿಷ್ಟತೆಯೇ ನಾನು ಅವರ ಕತೆಗಳಲ್ಲಿ ಹೆಚ್ಚಾಗಿ ಮೆಚ್ಚಿಕೊಂಡುದು. ಅದೇನೂ ಅಪ್ಯಾಯಮಾನವಾದ ಶೈಲಿಯಲ್ಲ. ಅನಂತಮೂರ್ತಿಯವರ ಕತೆಗಳನ್ನು ತೆಗೆದುಕೊಂಡರೆ ಈ ವ್ಯತ್ಯಾಸ ಗೊತ್ತಾಗುತ್ತದೆ: ಅನಂತಮೂರ್ತಿಯವರದು ಕಕ್ಕುಲತೆಯ, ಆಪ್ಯಾಯಮಾನ ಶೈಲಿ. ಇಂದು ಬರೆಯುವ ನನ್ನ ಇನ್ನೊಬ್ಬ ತರುಣ ಮಿತ್ರ ವಿವೇಕ ಶಾನುಭಾಗ್ ಆಗಲಿ ಶ್ರೀರಾಮ್ ಆಗಲಿ ಹಾಗೆ ಬರೆಯುವುದಿಲ್ಲ. ಸ್ವಲ್ಪ ಡ್ರೈ ಶೈಲಿ ಇಬ್ಬರಲ್ಲೂ ಕಾಣಿಸುತ್ತದೆ. ಡ್ರೈ ವೈನ್ ನಂತೆ ಕೆಲವೇ ಕೆಲವರು ಮೆಚ್ಚುವಂಥದು. ಅದರಲ್ಲೂ ಶ್ರೀರಾಮ್ ರ ಕತೆಗಳಲ್ಲಿ ಭಾವ, ಭಾವುಕತೆ, ಸೆಂಟಿಮೆಂಟಲಿಸಮ್, ಪ್ರೀತಿ ಪ್ರೇಮ, ಅಥವಾ ಐಡಿಯಲಾಜಿಕಲ್ ರೋಷ ಮುಂತಾದುವು ಇಲ್ಲವೇ ಇಲ್ಲ ಎನ್ನಬೇಕು. ಶ್ರೀರಾಮ್ ಅವರದು ಒಂದು ರೀತಿಯ ವೈಚಾರಿಕ ಕಥನ; ಆದರೆ ಇಲ್ಲಿ ವಿಚಾರಗಳ ಸಂಘರ್ಷ ನಡೆಯುತ್ತದೆ ಎಂದೂ ಹೇಳಲಾಗುವುದಿಲ್ಲ. ಇದೊಂದು ತರದ ಅರ್ಬಾನಿಟಿ (ಅನಂತಮೂರ್ತಿ ಇದನ್ನು ‘ಅವರವರ ಸತ್ಯ’ದ ಮುನ್ನುಡಿಯಲ್ಲಿ ಗುರುತಿಸಿದ್ದಾರೆ ಎಂದು ಕಾಣುತ್ತದೆ). ಶ್ರೀರಾಮ್ ಹುಟ್ಟಿ ಬೆಳೆದದ್ದೇ ಪೇಟೆ ಪರಿಸರದಲ್ಲಿ. ನೌಕರಿ ಕೂಡಾ ಉನ್ನತ ಮಟ್ಟದ್ದು. ಆದ್ದರಿಂದ ಅವರಲ್ಲಿ ಹಳ್ಳಿಯ ಜೀವನ ನೀಡುವ ಮುಗ್ಧತೆಯಾಗಲಿ ಆರ್ದ್ರತೆಯಾಗಲಿ ಇಲ್ಲ. ಆದರೆ ಕಾಳಜಿ ‘ಕನ್ಸರ್ನ್’ ಇದೆ. ಇದು ಮುಖ್ಯ ಅನಿಸುತ್ತದೆ. ಈ ತರದಲ್ಲಿ ನೋಡಿದರೆ ಶ್ರೀರಾಮ್ ಆಧುನಿಕ ನಗರ ಜೀವನದ ಒಳಹೊರಗನ್ನು ತಾವು ಕಂಡಂತೆ ತಮ್ಮ ಕತೆಗಳಲ್ಲಿ ಕೊಡುತ್ತಿದ್ದಾರೆ. ಹಾಗೇ ನಕ್ಸಲಿಸಮ್ ಮುಂತಾದ ಇಂದಿನ ಬದುಕಿಗೆ ಅತಿ ಸಮೀಪವಾದ ಸತ್ಯ ಮತ್ತು ಸುಳ್ಳುಗಳನ್ನು ಅನ್ವೇಷಿಸುತ್ತಲೂ ಇದ್ದಾರೆ. ಇಂಥ ಲೇಖಕರು ಯಥಾಸ್ಥಿತಿವಾದಿಗಳು ಎಂದು ತಳ್ಳಿಬಿಡುವುದು ಸರಿಯಲ್ಲ. ಯಥಾಸ್ಥಿತಿಯನ್ನು ಚಿತ್ರಿಸುವವರು ಯಥಾಸ್ಥಿತಿವಾದಿಗಳೇ ಆಗುವುದಿಲ್ಲ. ಕ್ರೌರ್ಯವನ್ನು ಚಿತ್ರಿಸುವವರು ಕ್ರೂರಿಗಳೂ ಆಗುವುದಿಲ್ಲ. ನಿಜ ಯಾವುದು, ಸುಳ್ಳು ಯಾವುದು, ನೀತಿ ಯಾವುದು, ಅನೀತಿ ಯಾವುದು, ಹಿತ ಯಾವುದು ಅಹಿತ ಯಾವುದು ಎನ್ನುವುದರ ಪ್ರಜ್ಞೆ ಕೃತಿಗಳಲ್ಲಿ ಕೆಲಸ ಮಾಡುತ್ತಿದೆಯೇ ಇಲ್ಲವೇ ಎನ್ನುವುದು ಪ್ರಧಾನ.

ಶ್ರೀರಾಮ್ ಮನೆಮಾತು ಕನ್ನಡವಲ್ಲ, ತೆಲುಗು. ಅವರ ಓದು ಕನ್ನಡ ಸಾಹಿತ್ಯವೇನೂ ಅಲ್ಲ; ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಹಾ ಅವರ ಓದು ಅತ್ಯಂತ ಮಿತಿಯುಳ್ಳದ್ದು. ಅವರು ಕನ್ನಡವನ್ನು ನಿಭಾಯಿಸುವ ರೀತಿಯೂ ಅವರದೇ.

ಹಾಗೆಂದು ಶ್ರೀರಾಮ್ ಒಬ್ಬ ಕಟು ವಾಸ್ತವವಾದಿ ಕತೆಗಾರರೂ ಅಲ್ಲ. ಲ್ಯಾಟಿನ್ ಅಮೇರಿಕದ ಮಾಯಾವಾಸ್ತವವಾದ ಅವರನ್ನು ಆಕರ್ಷಿಸಿದ್ದಿದೆ. ಎಸ್. ದಿವಾಕರ್ ಮತ್ತು ವಿವೇಕ ಶಾನುಭಾಗ್ ಜತೆ ಸೇರಿ ‘ಮಾಯಾದರ್ಪಣ’ ಎಂಬ ಪತ್ರಿಕೆಯೊಂದನ್ನು ಹೊರತರಲು ಅವರು ಯೋಜನೆ ನಡೆಸಿದ್ದಿದೆ. ಇದರ ಗರ್ಭಪಾತ ಕೈಗೂಡದ ಜನನಕ್ಕಿಂತಲೂ ರೋಚಕವಾದ್ದು! ವಿವೇಕ ಶಾನುಭಾಗ್ ‘ದೇಶಕಾಲ’ ಸುರುಮಾಡಿದರು. ‘ಮಾಯಾದರ್ಪಣ’ ಹೊರ ಬಂದುದು ಶ್ರೀರಾಮ್ ಅವರ ಮೊದಲ ಕಥಾಸಂಕಲನವಾಗಿ.

ಶ್ರೀರಾಮ್ ಮನೆಮಾತು ಕನ್ನಡವಲ್ಲ, ತೆಲುಗು. ಅವರ ಓದು ಕನ್ನಡ ಸಾಹಿತ್ಯವೇನೂ ಅಲ್ಲ; ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಹಾ ಅವರ ಓದು ಅತ್ಯಂತ ಮಿತಿಯುಳ್ಳದ್ದು. ಅವರು ಕನ್ನಡವನ್ನು ನಿಭಾಯಿಸುವ ರೀತಿಯೂ ಅವರದೇ. ಒಮ್ಮೆ ಬೆಂಗಳೂರಿನಲ್ಲಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಅನುವಾದ ಕಮ್ಮಟವೊಂದು ನಡೆದಿತ್ತು; ಶ್ರೀರಾಮ್ ಕೂಡಾ ಭಾಗವಹಿಸಿದ್ದರು. ಅವರು ತಮ್ಮ ಅನುವಾದದಲ್ಲಿ ‘ತೆಂಗಿನ ಮರಿ’ ಎಂಬ ಪದಪ್ರಯೋಗ ಮಾಡಿದ್ದರು! ತೆಂಗಿನ ಮರಿ ಅನ್ನುವುದಿಲ್ಲ, ತೆಂಗಿನ ಗಿಡ ಅನ್ನುತ್ತಾರೆ ಎನ್ನುವುದು ಅವರ ಮನಸ್ಸಿಗೆ ಹೊಳೆದಿರಲಿಲ್ಲ. ಸರಿ, ಇಡೀ ಕಮ್ಮಟದ ಅವಧಿಯಲ್ಲಿ ಅದು ಕವಿ ರಾಮಚಂದ್ರ ಶರ್ಮರ ತಿಳಿಹಾಸ್ಯದ ಗೇಲಿಗೆ ಒಳಗಾಯಿತು. ಶ್ರೀರಾಮ್ ನೆನಪಾದಾಗಲೆಲ್ಲಾ ನನಗೆ ತೆಂಗಿನ ಮರಿಯ ನೆನಪೂ ಆಗುತ್ತದೆ! ಆದರೆ ತೆಂಗಿನ ಮರಿ ಪ್ರಯೋಗ ಸುಂದರವಾಗಿದೆ; ಜಯಂತ್ ಕಾಯ್ಕಿಣಿ ಪರಿಭಾಷೆಯಲ್ಲಿ ಅದೊಂದು ಮುದ್ದು ತಪ್ಪು, ವೆಲ್ಕಮ್ ಅಂತ ನನಗನಿಸ್ತದೆ. ಶ್ರೀರಾಮ್ ಅವರ ಕನ್ನಡದಲ್ಲಿ ಹೈದರಾಬಾದಿ ದಖ್ಖಣಿ ಉರ್ದು ಪದಗಳು ಬಂದರೂ ಅಚ್ಚರಿಯಿಲ್ಲ; ಹೈದರಾಬಾದನ್ನು ಅವರು ತಮ್ಮ ಇನ್ನೊಂದು ಮನೆಯಾಗಿ ತಿಳಿದುಕೊಂಡವರು. ತಮ್ಮದೇ ಬ್ಲಾಗ್ ನಲ್ಲಿ ಅವರು ಹೈದರಾಬಾದ್ ಕುರಿತಾಗಿ ಕೆಲವು ವಿಶಿಷ್ಟ ಲೇಖನಗಳನ್ನು ಬರೆದಿದ್ದಾರೆ. ಹೈದರಾಬಾದ್ ಕುರಿತು ನಾನು ಅನೇಕ ಕವಿತೆಗಳನ್ನು ಬರೆದಿರುವುದೂ ನಮ್ಮ ಆತ್ಮೀಯತೆಯ ಆರಂಭಕ್ಕೆ ಒಂದು ಕಾರಣವಾಗಿರಬಹುದು. ಈ ಕವಿತೆಗಳಲ್ಲಿ ಕೆಲವನ್ನು ಶ್ರೀರಾಮ್ ನನಗೇ ಕೋಟ್ ಮಾಡಿ ಅಂದದ್ದಿದೆ!

ಶ್ರೀರಾಮ್ ತಪ್ಪನ್ನು ಹೀಗೆ ಗೇಲಿಮಾಡುತ್ತಲೇ ಇಲ್ಲಿ ನನ್ನದೊಂದು ತಪ್ಪನ್ನೂ ಹೇಳಬೇಕು. ‘ತರಂಗಾಂತರ’ ಎಂಬ ನನ್ನದೊಂದು ಕಿರುಕಾದಂಬರಿಯಿದೆ. ಇದರಲ್ಲಿ ಟೀವಿ ರಿಮೋಟ್ ಕಂಟ್ರೋಲ್ ನ ಉಲ್ಲೇಖವಿದೆ. ರಿಮೋಟ್ ಹಾಳಾಗಿರುತ್ತದೆ; ಅದನ್ನು ಸರಿಪಡಿಸಲು ಕಥಾನಾಯಕ ಒಯ್ಯುತ್ತಾನೆ. ಅದುವರೆಗೆ ನನಗೆ ರಿಮೋಟ್‌ನ ಒಳಗೆ ಏನಿರುತ್ತದೆ ಎಂದು ಗೊತ್ತಿರಲಿಲ್ಲ. ಇಂಥ ತಂತ್ರಜ್ಞಾನವೆಲ್ಲ ನನಗೆ ಹೊಸದಾಗಿತ್ತು. ವಿದ್ಯುತ್ ವಯರುಗಳಿರುತ್ತವೆ ಎಂದುಕೊಂಡಿದ್ದೆ ನಾನು. ಇಲ್ಲ, ಒಳಗಿರುವುದು ಇಲೆಕ್ಟ್ರಾನಿಕ್ ಚಿಪ್ ಎಂದು ನನಗೆ ಹೇಳಿಕೊಟ್ಟುದು ಶ್ರೀರಾಮ್. ನಾನು ಮಾಡಿದ ತಪ್ಪು ಮುದ್ದು ತಪ್ಪಲ್ಲ, ಪೆದ್ದು ತಪ್ಪು!

ಶ್ರೀರಾಮ್ ಅವರ ಮೊದಲ ಉದ್ಯೋಗ ಹೈದರಾಬಾದಿನ ಸಂಸ್ಥೆಯೊಂದರಲ್ಲಿ (೧೯೮೩-೮೬). ನಂತರ ಗುಜರಾತ್ ನ ಆನಂದ್ ನ ಇರ್ಮಾದಲ್ಲಿ (೧೯೯೨-೯೭). ಮತ್ತೆ ಪುನಃ ಹೈದರಾಬಾದಿನಲ್ಲಿ. ಆಮೇಲೆ ಅಹಮ್ಮದಾಬಾದ್ ಐಐಎಮ್ ನಲ್ಲಿ ಪ್ರಾಧ್ಯಾಪಕ (೨೦೦೦-೧೦). ಅವರು ಗುಜರಾತಿನಲ್ಲಿದ್ದಾಗ ನನಗವರ ಸಂಪರ್ಕ ಕಡಿಮೆಯಾಯಿತು. ಆದರೂ ಹೈದರಾಬಾದಿಗೆ ಬಂದಾಗಲೆಲ್ಲ ನನನ್ನು ಕಾಣುತ್ತಿದ್ದರು. ನನ್ನನ್ನು ಎಲ್ಲಿ ಹುಡುಕಬೇಕೆನ್ನುವುದು ಅವರಿಗೆ ಗೊತ್ತಿತ್ತು: ಬೇರೆಲ್ಲೂ ಅಲ್ಲ, ನಮ್ಮ ಸಂಸ್ಥೆಯ ಲೈಬ್ರರಿಯಲ್ಲಿ! ಪುಸ್ತಕ ಪ್ರೀತಿ ನಮ್ಮಿಬ್ಬರನ್ನೂ ಒಂದುಗೂಡಿಸಿದ ಇನ್ನೊಂದು ಗುಣ. ನಾವು ಅದೆಷ್ಟೋ ಪುಸ್ತಕಗಳ ಬಗೆಗಿನ ಮಾಹಿತಿಗಳನ್ನು ಹಂಚಿಕೊಂಡದ್ದಿದೆ. ಶ್ರೀರಾಮ್ ರಿಂದಾಗಿ ನನ್ನ ಓದಿನ ವಿಸ್ತಾರ ಹೆಚ್ಚಾಗಿದೆ.

ಕೆ.ವಿ.ತಿರುಮಲೇಶ್ ಮತ್ತು ಎಂ.ಎಸ್.ಶ್ರೀರಾಮ್

ಕೆ.ವಿ.ತಿರುಮಲೇಶ್ ಮತ್ತು ಎಂ.ಎಸ್.ಶ್ರೀರಾಮ್

‘ಅವರವರ ಸತ್ಯ’ದ ನಂತರದ ಶ್ರೀರಾಮ್ ಕತೆಗಳು ಹೇಗಿವೆಯೋ ನನಗೆ ತಿಳಿಯದು. ಈಗ ಅವರ ‘ತೇಲ್ ಮಾಲಿಶ್’ ಎಂಬ ಮೂರನೇ ಕಥಾ ಸಂಕಲನ ಪ್ರಕಟವಾಗುತ್ತಿದೆ. ಇದರ ಬಿಡುಗಡೆ ಸಮಾರಂಭದ ಕುರಿತಾದ ಆಮಂತ್ರಣವೂ ಬಂದಿದೆ. ಈ ಕತೆಗಳನ್ನು ಒದುವ ಕುತೂಹಲ ನನಗಿದೆ. ಇವು ವೆಬ್ ಸೈಟಿನಲ್ಲಿ ಸಿಗುತ್ತವೆ ಎನ್ನುತ್ತಾರೆ ಶ್ರೀರಾಮ್; ಆದರೆ ಕತೆಗಳನ್ನು ವೆಬ್ ಸೈಟಿನಲ್ಲಿ ಓದುವುದಕ್ಕಿಂತ ಪುಸ್ತಕದಲ್ಲಿ ಓದುವುದೇ ಹೆಚ್ಚು ಸುಖಕರವೆಂದು ನಾನು ಕಾಯಲು ತಯಾರು. ಆದರೆ ಬಿಡುಗಡೆ ಸಮಾರಂಭಕ್ಕೆ ನಾನು ಬರಲಾರೆ: ದೂರ ಇದ್ದೇನೆ. ಕರ್ನಾಟಕಕ್ಕೆ ನಾನು ಸದಾ ಅನ್ಯ ಎಂದು ತಿಳಿದುಕೊಂಡರೆ ಸಾಕು. ಶ್ರೀರಾಮ್ ಸಹಾ ಹೊರನಾಡ ಕನ್ನಡಿಗರಾಗಿ ತುಂಬಾ ವರ್ಷ ಕರ್ನಾಟಕದಿಂದ ದೂರ ಇದ್ದವರು; ಹಣಕಾಸಿನ ಮ್ಯಾನೇಜ್ ಮೆಂಟ್ ಅವರ ಅಧ್ಯಯನ ವಿಷಯ, ಅದರಲ್ಲೂ ಸ್ಮಾಲ್ ಸ್ಕೇಲ್ ಇನ್ವೆಸ್ಟ್ ಮೆಂಟ್, ಕೈಗಡ ಇತ್ಯಾದಿ. ಈಗಾಗಲೇ ಹೇಳಿದಂತೆ, ಹೈದರಾಬಾದ್, ಆನಂದ್, ಅಹಮ್ಮದಾಬಾದ್ ಕಡೆ ಕೆಲಸ. ಶ್ರೀರಾಮ್ ಇಂಥ ಕಡೆ ಕೆಲಸ ಮಾಡಿದ್ದೇ ಅಲ್ಲದೆ, ಉದ್ಯೋಗದ ಅಂಗವಾಗಿ ಸಣ್ಣ ಪುಟ್ಟ ಊರುಗಳಲ್ಲೂ ಗ್ರಾಮಾಂತರಗಳಲ್ಲೂ ಸಂಚರಿಸಿದ್ದಾರೆ, ಅಲ್ಲಿನ ಜನರನ್ನು, ಸಣ್ಣ ಹಣಕಾಸಿನ ಸಂಸ್ಥೆಗಳನ್ನು ಸಂಪರ್ಕಿಸಿದ್ದಾರೆ. ರೋಮ್, ಬ್ರಸೆಲ್ಸ್ ಮುಂತಾದ ಹಲವು ವಿದೇಶೀ ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಈಗ ವಿಶ್ವಬ್ಯಾಂಕಿನ ಯೋಜನೆಯಲ್ಲಿ ಕೆಲಸ ಮಾಡುತ್ತ ಬೆಂಗಳೂರಿನಲ್ಲೇ ನೆಲಸಿರುವ ಶ್ರೀರಾಮ್ ಅಶಾಂತ ಅಫ್ಘಾನಿಸ್ತಾನದ ಕಾಬೂಲಿಗೆ ಈಚೆಗೆ ಹಲವು ಬಾರಿ ಹೋಗಿಬಂದ ಕನ್ನಡದ ಅಪರೂಪದ ಲೇಖಕರು. ಅವರ ಈ ಸುತ್ತಾಟದ ಅನುಭವಗಳು ಕತೆಗಳಲ್ಲಿ ಯಾವುದೋ ರೀತಿಯಲ್ಲಿ ಬಂದಿರುತ್ತವೆ, ಬರುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗೆ ಸಾಹಿತ್ಯೇತರ ಕ್ಷೇತ್ರಗಳಿಂದ ಮೂಡಿ ಬರುತ್ತಿರುವ ಲೇಖಕರ ಸಾಲಿಗೆ ಸೇರಿರುವ ಶ್ರೀರಾಮ್ ಅವರಿಂದ ನಾವು ಬೇರೆ ಬೇರೆ ರೀತಿಯ ಕಥಾವಸ್ತುಗಳನ್ನೂ ಕಥನಗಳನ್ನೂ ನಿರೀಕ್ಷಿಸಬಹುದು.

ಸದ್ಯ ಶ್ರೀರಾಮ್ ಒಳನಾಡ ಕನ್ನಡಿಗರು ಮಾತ್ರವೇ ಅಲ್ಲ, ರಾಜಧಾನಿಯ ಕನ್ನಡಿಗರೂ ಆಗಿದ್ದಾರೆ. ಆದ್ದರಿಂದಲೇ ಅವರ ‘ತೇಲ್ ಮಾಲಿಶ್’ ಕಥಾಸಂಕಲನಕ್ಕೆ ಪ್ರಸಿದ್ಧ ಅಂಕಿತ ಪ್ರಕಾಶನದ ಪ್ರಕಟಣ ಭಾಗ್ಯ ಬಂದಿದೆ; ಮಾತ್ರವಲ್ಲ, ‘ಬಿಡುಗಡೆ’ ಸಮಾರಂಭದ ಅದೃಷ್ಟವೂ ದೊರಕಿದೆ. ಪುಸ್ತಕ ಬಿಡುಗಡೆಯಿಲ್ಲದೆ ಈ ದಿನಗಳಲ್ಲಿ ಹೆಚ್ಚಿನ ಯಾವ ಕೃತಿಗಳೂ ಸುದ್ದಿ ಮಾಡುವುದಿಲ್ಲ; ಪತ್ರಿಕೆಯವರನ್ನು ಓಲೈಸದೆ ಅಥವಾ ಗುಂಪೊಂದನ್ನು ಕಟ್ಟಿಕೊಳ್ಳದೆ ಯಾವ ಕೃತಿಗೂ ವಿಮರ್ಶೆಯ ಭಾಗ್ಯವೂ ಸಾಮಾನ್ಯವಾಗಿ ಬರುವುದಿಲ್ಲ. ಪುಸ್ತಕಪ್ರಕಟಣೆ ನಾಮಕರಣ ಸಮಾರಂಭದಂತೆ ಸಂಭ್ರಮ ಸಮಾರಂಭವಾದರೆ ಸರಿ; ಆದರೆ ಇದೊಂದು ಅಗತ್ಯ ಆಚರಣೆ ಎನಿಸಿದರೆ ಕಷ್ಟವೇ. ಇಂಥ ಧಾವಂತಗಳು ನಮ್ಮನ್ನು ಎತ್ತ ಒಯ್ಯುತ್ತವೆ ಎನ್ನುವುದು ಒಂದು ಆತಂಕದ ಸಂಗತಿ. ಸತ್ಯದ ಮಾತುಗಳಿಗೆ ದೊಡ್ಡ ದನಿಯ ಅಗತ್ಯವಿಲ್ಲ; ದೊಡ್ಡ ದನಿಯೆಂದರೆ ಸುಳ್ಳು. ನಿಜವಾದ ಸಾಹಿತ್ಯದ ದನಿಯಂತೂ ಸಣ್ಣದು, ಸೂಕ್ಷ್ಮವಾಗಿ ಆಲಿಸದವರಿಗೆ ಕೇಳಿಸದು. ಹೀಗಿರುತ್ತ ಪುಸ್ತಕವೊಂದಕ್ಕೆ ಇಂಥದೆಲ್ಲ ಅಗತ್ಯವೇ ಎಂದು ಅಚ್ಚರಿಯಾಗುತ್ತದೆ. ಬ್ಯಾಂಡ್ ಬಾರಿಸುವವರಿಗೆ ಹೇಗೆ ಕಿವಿ ಕಿವುಡಾಗಿರುತ್ತದೋ ಕೇಳುವವರಿಗೂ ಹಾಗೆ ಆಗುತ್ತದೆ. ನನ್ನ ಗುರುಗಳೊಬ್ಬರಿದ್ದರು; ಅವರು ಕ್ಲಾಸಿನಲ್ಲಿ ಪಾಠ ಮಾಡುವಾಗ ಅತ್ಯಂತ ಎತ್ತರದ ದನಿಯಲ್ಲಿ ಮಾತಾಡುತ್ತಿದ್ದರು. ಅವರ ಕುರಿತಾಗಿ ನಮ್ಮ ಜೋಕೆಂದರೆ, ಅವರು ಏನನ್ನಾದರೂ ಒತ್ತಿ ಹೇಳಬೇಕಾದರೆ ಪಿಸುಗುಟ್ಟುವುದೊಂದೇ ದಾರಿ ಎಂಬುದಾಗಿ. . ಪುಸ್ತಕಗಳನ್ನು ಜನ ಹುಡುಕಿಕೊಂಡು ಹೋಗುವ ಕಾಲವೊಂದಿತ್ತು; ಈಗ ಪುಸ್ತಕಗಳೇ ಜನರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ. ‘ಮಾರು!’ ಎನ್ನುತ್ತದೆ ಕಾಲ; ಮಾರಲಾರದ ಪುಸ್ತಕಗಳು ಗೋಡೌನಿಗೆ, ರದ್ದಿಗೆ, ಅಥವಾ ಗ್ರಂಥಾಲಯಗಳ ಸಗಟು ಖರೀದಿಗೆ ಹೋಗುತ್ತವೆ. ಶ್ರೀರಾಮ್ ಮತ್ತು ನಾನು ಒಟ್ಟಿಗಿದ್ದರೆ ಈ ಬಿಡುಗಡೆ ಕುರಿತು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಯಾಕೆಂದರೆ ಶ್ರೀರಾಮ್ ಬಹಳ ತಮಾಷೆಯ ವ್ಯಕ್ತಿ. ಲೇಖಕನಾಗಿ ಅವರಿಗೆ ಯಾವುದೇ ಅಹಂ ಆಗಲಿ ಆತ್ಮರತಿಯಾಗಲಿ ಇಲ್ಲ. ಬಹುಶಃ ಅವರು ಇಂಥ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಹಿಂದಿ ಸೋಪ್ ಗಳ ‘ರಸಂ’ ಸಮಾರಂಭಗಳಿಗೆ ಹೋಲಿಸುತ್ತಿದ್ದರು ಎಂದು ತೋರುತ್ತದೆ! ಅಥವಾ ಮಗ ಹುಟ್ಟಿದಾಗ ಜಾಗಟೆ ಬಾರಿಸುವುದಕ್ಕೆ! ಕ್ಷಮಿಸಿ, ಹೊರನಾಡ ಅಥವಾ ಸದ್ಯಕ್ಕೆ ಪರದೇಶಿ ಕನ್ನಡಿಗನ ಸ್ವಾತಂತ್ರ್ಯ ತೆಗೆದುಕೊಂಡು ನಾನೀ ತಮಾಷೆ ಮಾಡುತ್ತಿದ್ದೇನೆ; ಒಳನಾಡಿಗೆ, ಅದರಲ್ಲೂ ರಾಜಧಾನಿಗೆ ಬಂದರೆ ನಾನೇ ಅದಕ್ಕೆ ಕಾರಣನೂ ಆಗಬಹುದು. ಈ ಹೊರನಾಡ ಕನ್ನಡಿಗರು ಕೈಗೆ ಸಿಗದ ದ್ರಾಕ್ಷಿ ಹುಳಿ ಎನ್ನುವ ಅಭಾವ ವಿರಾಗಿಗಳ ಪೈಕಿ ಎಂದು ಬೇಕಿದ್ದರೆ ಅಂದುಕೊಳ್ಳಿ! ಆದರೆ ಬಾಜಾಬಜಂತ್ರಿಯೂ ಕೆಲವು ಸಲ ಬೇಕೆನಿಸುತ್ತದೆ; ಇಲ್ಲದಿದ್ದರೆ ನಾವದನ್ನು ಮಿಸ್ ಮಾಡುತ್ತೇವೆ. ಪುಸ್ತಕ ಸಡಗರ ಯಾಕಿರಬಾರದು? ಅದೂ ಜೀವನೋತ್ಸಾಹದ ಒಂದು ವಿಧಾನವೇ. ಯಾರೂ ಪ್ಯೂರಿಟನ್ಸ್ ಆಗುವ ಅಗತ್ಯವಿಲ್ಲ. ಶ್ರೀರಾಮ್ ಗೆ ಇದೆಲ್ಲಾ ಅರ್ಥವಾಗುತ್ತದೆ. ಅವರು ಯಾವತ್ತೂ ಸ್ವಯಂ ಹಾಸ್ಯ ಕೈಬಿಡದ ಮನುಷ್ಯ. ಇದುವರೆಗೆ ಎಲ್ಲೂ ಇಂಥ ತೇಲ್ ಮಾಲಿಶ್ ಮಾಡಿಸಿಕೊಳ್ಳದ ಶ್ರೀರಾಮ್ ಅವರ ಈ ಒಂದು ಪುಟ್ಟ ಕಾರ್ಯಕ್ರಮಕ್ಕೆ ನಾನೂ ಸೇರಿದಂತೆ ಎಲ್ಲರೂ ಹಾರ್ದಿಕ ಶುಭಾಶಯ ಹೇಳಲೇಬೇಕು.

ಇಂದು ಕತೆ ಕವಿತೆ ಕಾದಂಬರಿ ಕ್ಷೇತ್ರಗಳಲ್ಲಿ ಕನ್ನಡ ಸಮೃದ್ಧವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಅನೇಕ ಯುವ ಲೇಖಕರು ಕೊಡುಗೆ ನೀಡುತ್ತಿದ್ದಾರೆ. ಇವರಲ್ಲಿ ತಾರತಮ್ಯ ವಿಮರ್ಶೆ ಮಾಡಬೇಕೆ? ತಾರತಮ್ಯವಿಲ್ಲದೆ ವಿಮರ್ಶೆ ಸಾಧ್ಯವಿಲ್ಲವೆ? ಮೌಲ್ಯಮಾಪನ ವಿಮರ್ಶೆ ಮಾಡಿದರೆ ಶ್ರೀರಾಮ್ ಎಲ್ಲಿರುತ್ತಾರೆ? ಇಂಥ ಪ್ರಶ್ನೆಗಳಿವೆ. ಇದಕ್ಕೆಲ್ಲ ನನ್ನಲ್ಲಿ ಉತ್ತರವಿಲ್ಲ. ನಾನಿಂದು ಇಡೀ ಸಾಹಿತ್ಯವನ್ನು ಒಂದು ಬೆರಗಿನ ಓದುಗನ ದೃಷ್ಟಿಯಿಂದ ನೋಡುವ ಸ್ಥಿತಿಯಲ್ಲಿದ್ದೇನೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಬರೆಯುತ್ತಿದ್ದಾರೆ. ಬೇರೆ ಬೇರೆ ಕಾರಣಗಳಿಗೆ ಬೇರೆ ಬೇರೆ ರಚನೆಗಳು ಇಷ್ಟವಾಗುತ್ತವೆ, ಅಥವಾ ಇಷ್ಟವಾಗುವುದಿಲ್ಲ. ಹೀಗಿರುತ್ತ ಶ್ರೀರಾಮ್ ತಮ್ಮದೇ ರೀತಿಯಲ್ಲಿ ಬರೆಯುತ್ತಿದ್ದಾರೆ ಎನ್ನುವುದಷ್ಟೆ ನನಗಿಲ್ಲಿ ಮುಖ್ಯ. ಅವರ ಅನುಭವ ವಲಯ, ಭಾಷೆ, ಚಿಂತನೆ ಅವರಿಗೇ ಸೇರಿದ್ದು, ವಿಶಿಷ್ಟವಾದ್ದು. ಅವರು ತಾನೇ ತಾನಾಗಿ ಬರೆಯುತ್ತಿರುವಷ್ಟೂ ಕಾಲ ಅವರ ಕೊಡುಗೆ ಮಹತ್ವದ್ದಾಗಿರುತ್ತದೆ. ಯಾವುದೇ ಮೌಲ್ಯೀಕರಣಕ್ಕೆ ಪ್ರಯತ್ನಿಸಿದಾಗಲೂ ನಾವು ಕೆಲವೊಂದು ಪೂರ್ವಗ್ರಹಗಳನ್ನೋ ಸ್ವೀಕೃತ ಐಡಿಯಾಲಜಿಗಳನ್ನೋ ಮನಸ್ಸಿನಲ್ಲಿ ಇಟ್ಟುಕೊಂಡೇ ವಿಮರ್ಶೆ ಮಾಡುತ್ತೇವೆ: ಕೆಲವರಿಗೆ ಸಾಹಿತ್ಯವು ಜೀವನಕ್ಕೆ ಕನ್ನಡಿಯಾಗಿರಬೇಕು; ಕೆಲವರಿಗೆ ಅಷ್ಟು ಸಾಲದು, ಜೀವನವನ್ನು ಮಾರ್ಪಡಿಸುವ ಹಾಗಿರಬೇಕು; ಕೆಲವರಿಗೆ ಸಾಹಿತ್ಯವು ಸಮಕಾಲೀನ ಸಮಾಜ ವ್ಯವಸ್ಥೆಯ ತೀಕ್ಷ್ಣ ವಿಮರ್ಶೆಯಾಗಿರಬೇಕು; ಇನ್ನು ಕೆಲವರಿಗೆ ಸಾಹಿತ್ಯ ಹೊಸ ಹಾಗೂ ಈಗಿರುವುದಕ್ಕಿಂತ ಉತ್ತಮ ಜೀವನ ಸಾಧ್ಯತೆಯನ್ನು ತೋರಿಸಬೇಕು; ಕೆಲವರಿಗದು ವರ್ಗ ಸಂಘರ್ಷದ ಹತ್ಯಾರವಾಗಿರಬೇಕು; ಇನ್ನು ಕೆಲವರಿಗೆ ಏನಾದರೊಂದು ಖುಷಿಯನ್ನು, ಕನಿಷ್ಠ ಓದುವ ಖುಷಿಯನ್ನು, ಕೊಡುವಂತಿರಬೇಕು. ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು. ಯಾಕೆಂದರೆ, ಲೇಖಕನೊಬ್ಬ ಏನೇ ಬರೆದರೂ ಅದು ಕೊನೆಗೂ ಓದಿಗೆ ಒಳಗಾದಾಗಲೇ ಜೀವಂತವಾಗುವುದು. ಆದರೆ ಮಾತ್ರ, ಆಗ ಒಂದು ಕತೆ ಸಾವಿರ ಕತೆಯಾಗುತ್ತದೆ. ಯಾವ ಓದಿನಲ್ಲೂ ಎಲ್ಲರೂ ಸಮ್ಮತಿಸುವ ಕೊನೆಯ ಮಾತೆಂಬುದು ಇಲ್ಲ.

ಈಚೆಗೆ ನಾನು ಅಮೇರಿಕನ್ ಚಿತ್ರಕಲಾ ಅಧ್ಯಾಪಕ ರಾಬರ್ಟ್ ಹೆನ್ರಿಯ ‘ದಿ ಆರ್ಟ್ ಸ್ಪಿರಿಟ್’ ಎಂಬ ಪುಸ್ತಕವೊಂದನ್ನು ಓದಿದೆ. ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ಇದ್ದವ ರಾಬರ್ಟ್ ಹೆನ್ರಿ. ಅವನ ಒಂದು ವಿಚಾರ ಇಲ್ಲಿ ಪ್ರಸ್ತುತ: ಹೊಸ ಕಲಾವಿದರಿಗೆ ನಾವು ಏನು ಹೇಳಬೇಕು? ಹೊಸ ಪೀಳಿಗೆಯ ಕುರಿತು ಏನು ಹೇಳಿದರೂ ಅದರಲ್ಲೊಂದು ತರದ ನಿಯಂತ್ರಣದ ಪ್ರಯತ್ನ ಇರುತ್ತದೆ ಎನ್ನುತ್ತಾನೆ ಆತ. ವಾಸ್ತವದಲ್ಲಿ ಹೊಸಬರೇ ಹಳಬರ ಮೌಲ್ಯ ಮಾಪನ ಮಾಡಬೇಕಾದ್ದು, ಉಲ್ಟಾ ಅಲ್ಲ ಎನ್ನುತ್ತಾನೆ. ಯಾಕೆಂದರೆ ಹೊಸತು ಯಾವತ್ತೂ ತೆರೆದುಕೊಂಡಿರುತ್ತದೆ: ಅದು ತನ್ನ ದಾರಿಯನ್ನು ತಾನೇ ಕಂಡುಕೊಳ್ಳಬೇಕು, ಅದಕ್ಕಾಗಿ ಅದು ಸಂಪೂರ್ಣ ಮುಕ್ತವಾಗಿರುವುದು ಅಗತ್ಯ. ಹೆನ್ರಿಯ ಈ ಮಾತು ನನಗೆ ಸಮ್ಮತ. ಹೀಗಿರುತ್ತ, ಶ್ರೀರಾಮ್ ಕುರಿತಾಗಲಿ, ಹೊಸಬರಾದ ಇನ್ನು ಯಾರ ಕುರಿತಾಗಲಿ ನನ್ನಂಥವರು ಹೆಚ್ಚೇನೂ ಹೇಳಬಾರದು; ಹೇಳಿದರೆ ಅದರಲ್ಲಿ ನಿಯಂತ್ರಿಸುವ ಆಸೆ ಇರುತ್ತದೆ; ಒಬ್ಬ ಲೇಖಕನನ್ನು ನಿಯಂತ್ರಿಸುವುದೆಂದರೆ ಇಡೀ ಸಾಹಿತ್ಯವನ್ನು ನಿಯಂತ್ರಿಸುವುದು ಎಂದು ಅರ್ಥ. ಇದೊಂದು ತರದ ಸೆನ್ಸರ್ ಶಿಪ್ ಕೂಡಾ ಹೌದು. ಕುತೂಹಲದಿಂದ ಕಾಯುವುದು ಮಾತ್ರವೇ ನಾವು ನಿಜಕ್ಕೂ ಮಾಡಬಹುದಾದ್ದು. ಹಿರಿಯ ಲೇಖಕರು ನಮ್ಮ ಬಗ್ಗೆ ಏನೂ ಹೇಳುತ್ತಿಲ್ಲ ಎನ್ನುವ ಹೊಸ ಲೇಖಕರು ಈ ಕುರಿತು ಯೋಚಿಸಬೇಕು.

ಶ್ರೀರಾಮ್ ಹಾಸ್ಯಪ್ರವೃತ್ತಿ ಬಗ್ಗೆ ಉಲ್ಲೇಖಿಸುತ್ತ ಅವರದೊಂದು ಮರೆಯಲಾಗದ ಮಾತನ್ನು ಇಲ್ಲಿ ಹೇಳಲೇಬೇಕು: ಒಮ್ಮೆ ಹೈದರಾಬಾದಿನಲ್ಲಿ ಸುಮ್ಮನೇ ಏನೇನೋ ಮಾತಾಡುತ್ತ ಕೂತಿದ್ದೆವು. ಪ್ರಾಸಂಗಿಕವಾಗಿ ಶ್ರೀರಾಮ್ ಅಂದರು: ‘ಸಾಹಿತ್ಯವೇ ದುಃಖಕ್ಕೆ ಮೂಲ.’ ಇದು ಕೇಳಿ ನನಗೆ ಗೊಳ್ಳನೆ ನಗು ಬಂತು. ಈ ಮಾತನ್ನು ಅವರು ಮರೆತಿದ್ದಾರೋ ತಿಳಿಯದು; ನಾನಂತೂ ಮರೆತಿಲ್ಲ. ಇದು ಬುದ್ಧನನ್ನು ಅಣಕಿಸುವ ಕಾರಣ ತಮಾಷೆಯೆನಿಸುತ್ತದೆ. ಆದರೆ ಇದರ ತಮಾಷೆ ಮಾತ್ರವಲ್ಲ, ವಾಸ್ತವತೆ ಕೂಡಾ ನನ್ನನ್ನು ಕಾಡಿದೆ: ಎಲ್ಲರಿಗೂ ಸಂತೋಷ ನೀಡಬೇಕಾದ, ಎಲ್ಲರೂ ಕೈಗೆತ್ತಿಕೊಳ್ಳಬೇಕಾದ ಸಾಹಿತ್ಯ ಇಂದೊಂದು ಎಳೆದಾಡುವ ಕಣವಾಗಿದೆ (contested field). ದ್ವೇಷ, ಅಸೂಯೆ, ಈರ್ಷ್ಯೆಗಳು, ಯಾವ ಯಾವುದೋ ಸಂಘರ್ಷಗಳು ಮಸೆದಾಡುತ್ತಿವೆ. ಹಸಿ ಹಸೀ ಜೀವನಕ್ಕೂ, ಜೀವನಕ್ಕೆ ದರ್ಶನ ನೀಡಬೇಕಾದ ಸಾಹಿತ್ಯ ಕ್ಷೇತ್ರಕ್ಕೂ ಏನೇನೂ ವ್ಯತ್ಯಾಸವೇ ಇಲ್ಲವೇ ಎಂದು ಸೋಜಿಗವಾಗುತ್ತದೆ. ಅಥವಾ ಸಾಹಿತ್ಯ ಇರಬೇಕಾದ್ದೇ ಹೀಗೆಯೇ? ಒಂದು ಮೋಬಿಯಸ್ ಸ್ಟ್ರಿಪ್? ಒಳ ಹೊರ ವ್ಯತ್ಯಾಸ ಹುಡುಕಲು ನಮ್ಮನ್ನು ವೃಥಾ ಓಡಿಸುವ ಒಂದು ರಚನೆ? ವ್ಯತ್ಯಾಸ ಇಲ್ಲ ಎನ್ನುತ್ತಲೇ ಇದೆ ಎನ್ನುವುದನ್ನು ನೆನಪಿಸುವಂತೆ? ಚಿನ್ನದ ಬೆಟ್ಟವನ್ನು ಚಿಂತಿಸಬೇಡ ಎಂದು ಗುರು ಹೇಳಿ ಶಿಷ್ಯ ಅದನ್ನೇ ಚಿಂತಿಸುವಂತೆ ಮಾಡಿದಂತೆ? ಶ್ರೀರಾಮ್ ಈ ಮಾತನ್ನು ಖಂಡಿತ ಮೆಚ್ಚುತ್ತಾರೆ ಎಂದುಕೊಳ್ಳುತ್ತೇನೆ, ಯಾಕೆಂದರೆ ನಾವಿಬ್ಬರೂ ಪ್ಯಾರಡಾಕ್ಸ್ ಗಳ ಈ ಮೋಬಿಯಸ್ ಸ್ಟ್ರಿಪ್ ಸುತ್ತುವ ಇರುವೆಗಳು!

ಒಮ್ಮೆ ಹೈದರಾಬಾದಿನಲ್ಲಿ ಸುಮ್ಮನೇ ಏನೇನೋ ಮಾತಾಡುತ್ತ ಕೂತಿದ್ದೆವು. ಪ್ರಾಸಂಗಿಕವಾಗಿ ಶ್ರೀರಾಮ್ ಅಂದರು: ‘ಸಾಹಿತ್ಯವೇ ದುಃಖಕ್ಕೆ ಮೂಲ.’ ಇದು ಕೇಳಿ ನನಗೆ ಗೊಳ್ಳನೆ ನಗು ಬಂತು. ಈ ಮಾತನ್ನು ಅವರು ಮರೆತಿದ್ದಾರೋ ತಿಳಿಯದು; ನಾನಂತೂ ಮರೆತಿಲ್ಲ.

 

ಕತೆಗಾರನೋ ಕವಿಯೋ ಏನು ಕೊಡುಗೆ ನೀಡಿದ್ದಾರೆ, ಕನ್ನಡ ಸಾಹಿತ್ಯ ಅವರಿಂದಾಗಿ ಶ್ರೀಮಂತವಾಗಿದೆಯೇ ಮುಂದುವರಿಯುತ್ತಿದೆಯೇ ಎಂದು ನೋಡುವುದಕ್ಕಿಂತ ಅವರೇನು ಕೊಡುಗೆ ನೀಡಿಲ್ಲ ಎಂದು ನಿಂದಿಸುವವರೇ ಹೆಚ್ಚಾಗಿರುವ ಸಂದರ್ಭದಲ್ಲಿ ಶ್ರೀರಾಮ್ ಮತ್ತು ಅವರಂಥವರನ್ನು ಟೀಕಿಸುವುದು ಬಹಳ ಸುಲಭ. ಬಹುಶಃ ಇದುವರೆಗೆ ಯಾರೂ ಶ್ರೀರಾಮ್ ಅವರನ್ನು ಟೀಕಿಸದೆ ಇರುವುದಕ್ಕೆ ಅವರು ಹೆಚ್ಚೂ ಕಡಿಮೆ ದೂರವೇ ಇದ್ದುದು. ಮುಂದೆ ಹಾಗಿರುವುದಿಲ್ಲ. ಬೆಂಗಳೂರಿಗೆ ಬಂದಿದ್ದಾರೆ. ಪುಸ್ತಕ ಬಿಡುಗಡೆಯಾಗುತ್ತಿದೆ. ಆಗ ಸಾಹಿತ್ಯವೇ ದುಃಖಕ್ಕೆ ಮೂಲ ಎಂಬ ಅವರ ಮಾತು ಮತ್ತೊಮ್ಮೆ ನಿಜವಾಗಬಹುದು. ವಿಮರ್ಶೆಯೇ ಅಲ್ಲ, ಸಾಮಾನ್ಯ ಓದು ಕೂಡಾ ಇಂದು ಗ್ರಾಂಡ್ ಇಂಕ್ವಿಸಿಶನ್ ಆಗಿಬಿಟ್ಟಿದೆ. ಜೋ ಡರ್ ಗಯಾ ವೋ ಮರ್ ಗಯಾ. ಲೇಖಕ ಹೊಗಳಿಕೆಗೆ ಮರುಳಾಗದೆ, ತೆಗಳಿಕೆಗೆ ಅಳುಕದೆ, ಮುಖ್ಯವಾಗಿ ಅವಜ್ಞೆಗೆ ನಿಷ್ಕ್ರಿಯನಾಗದೆ ಬರೆಯುತ್ತ ಇರಬೇಕು. ಶ್ರೀರಾಮ್‌ಗೆ ಅಂಥ ಸ್ಥೈರ್ಯವಿದೆ ಎನ್ನುವುದು ನನ್ನ ನಂಬಿಕೆ.