Advertisement
ಸುಂದರ, ಸಮೃದ್ಧ ಕಾಡಿನ ರೋಚಕ ಕಥೆಗಳು: ರೂಪಾ ರವೀಂದ್ರ ಜೋಶಿ ಸರಣಿ

ಸುಂದರ, ಸಮೃದ್ಧ ಕಾಡಿನ ರೋಚಕ ಕಥೆಗಳು: ರೂಪಾ ರವೀಂದ್ರ ಜೋಶಿ ಸರಣಿ

ತುಂಬ ದಟ್ಟವಾದ ಎತ್ತರವಾದ ಮರಗಳಿಂದ ಕಂಗೊಳಿಸುವ ಕಾಡಿನಿಂದ ಆವೃತವಾದ ಆ ಗುಡ್ಡ ನೋಡುವುದೆಂದರೆ ಎಲ್ಲಿಲ್ಲದ ಖುಶಿ ನನಗೆ. ಅದರಲ್ಲಿ ಒಂದು ವಿಚಿತ್ರ ಆಕರ್ಷಣೆ ಇತ್ತು. ಹಗಲು ಅಷ್ಟು ಪ್ರೀತಿಯಿಂದ ನೋಡುವ ಗುಡ್ಡ, ರಾತ್ರಿ ಮಾತ್ರ ಭಯ ಹುಟ್ಟಿಸುತ್ತಿತ್ತು. ರಾತ್ರಿ ಊಟ ಮಾಡಿ ಕೈತೊಳೆಯಲು, ‘ವಂದ‘ ಮಾಡಲು ಹೊರಗೆ ಬಂದಾಗಲೆಲ್ಲ ನಾವು ಅತ್ತ ದೃಷ್ಟಿ ಹರಿಸುವ ಸಾಹಸವನ್ನೇ ಮಾಡುತ್ತಿರಲಿಲ್ಲ. ಆಕಸ್ಮಿಕವಾಗಿ ಕಣ್ಣು ಅತ್ತ ಹೋದರೆ ಸಾಕು, ಕಾರ್ಗತ್ತಲೆಯಲ್ಲಿ ಮಸಿ ಬಳಿದಷ್ಟು ಕರ್ರಗೆ ಬೃಹದಾಕಾರವಾಗಿ ಕುಳಿತ ಅದು, ಭಯಂಕರವಾದ ಕಲ್ಪನೆ ಮೂಡಿಸಿ, ಎದೆಯ ನಗಾರಿ ಬಡಿತ ಏರುತ್ತಿತ್ತು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹತ್ತನೆಯ ಕಂತು

ಬಿರು ಬೇಸಿಗೆಯಲ್ಲೂ ಅಲ್ಲಿ ತಣ್ಣಗಿನ ವಾತಾವರಣ. ಸೂರ್ಯ ನಡುನೆತ್ತಿಗೇರಿದರೂ ಅಲ್ಲಿ ಈಗಷ್ಟೇ ಬೆಳಗಾದಂತೆ ಮಬ್ಬು ಮಬ್ಬು ಬೆಳಕು. ಎಲ್ಲೆಲ್ಲೂ ತುಂಬಿದ ನಿಶ್ಯಬ್ಧ ಬೇಧಿಸುವಂತೆ ಚಿತ್ರ ವಿಚಿತ್ರ ದನಿ ತೆಗೆದು ಕೂಗುವ ಹಕ್ಕಿ ಪಕ್ಷಿಗಳು. ಆಗಾಗ ಜಿರ್ ್್್ ಎಂದು ಗಂಟಲುಬ್ಬಿಸಿ ಚೀರಿ ತಲೆ ಚಿಟ್ಟು ಹಿಡಿಸುವ ಜೀರುಂಡೆಗಳು. ಆಗಾಗ ಸಕುಟುಂಬ ಸಮೇತ ಕಿರುದಾರಿಯನ್ನು ದಾಟಿ ಗುರುಕ್ ಗುರುಕ್ ಎನ್ನುತ್ತ ಇನ್ನೊಂದು ಗಮ್ಯದತ್ತ ದೌಡಾಯಿಸುವ ಕಾಡು ಹಂದಿಗಳು. ಯಾವುದೋ ಪೊದೆಯಿಂದ ತಲೆಯಷ್ಟೇ ಹೊರಹಾಕಿ, ಕೊಕ್ಕೊ ಕೊಕ್ಕೊ ಕೋಯ್ ಕೋಯ್ ಎಂದು ಬೊಬ್ಬೆ ಹೊಡೆವ ಕಾಡು ಕೋಳಿಗಳು. ಧರಾಶಾಯಿಯಾಗಿ ಉದ್ದಕ್ಕೆ ಬಿದ್ದ ಒಣ ಮರವನ್ನೇ ಗರಡಿ ಮನೆಯಾಗಿಸಿ, ಮುಳ್ಳಿನ ಕಿರೀಟ ಮುಡಿದಂತಹ ತಲೆಯೆತ್ತಿ, ಎದೆಯುಬ್ಬಿಸಿ, ಜಗಳಕ್ಕಿಳಿದ ಭಂಗಿಯಲ್ಲಿ ಇದಿರು ಬದಿರು ನಿಂತ ಕೇಸರಿ, ಹಳದಿ ಮೈ ಓತಿ ಕ್ಯಾತಗಳು… ಆಹಾ.. ಒಂದೇ ಎರಡೇ… ಎಷ್ಟೆಂದು ಬಣ್ಣಿಸಲಿ… ಏನೇನು ಬಣ್ಣಿಸಲಿ.. ಈಗ ಇಷ್ಟುದ್ದಕ್ಕೆ ಓದುತ್ತ ಬಂದ ನಿಮಗೆ ಗೊಂದಲ ಆಗಿರೋದು ಪಕ್ಕಾ. ಇದೇನು ಸಿನಿಮಾದ ಸೀನಾ? ಅಥವಾ ಡಿಸ್ನಿ ವರ್ಲ್ಡ್‌ ಕಥೇನಾ? ಅಂತ… ಹೌದು ತಾನೆ?

ಇದು ಯಾವ ಕಟ್ಟು ಕಥೆಯಲ್ಲ; ನನ್ನ ಬಾಲ್ಯದಲ್ಲಿ ನಾ ಕಂಡ ನಮ್ಮ ಮಲೆನಾಡಿನ ಕಾಡಿನ ಕಿರುನೋಟ ಇದು. ನಮ್ಮ ಮನೆಯ ಹಿತ್ತಲ ಬಾಗಿಲಿಂದ ಹೊರಬಂದು ನಿಂತು ಕಣ್ಣು ಹಾಯಿಸಿದರೆ ಸಾಕು, ಭತ್ತದ ಗದ್ದೆಗಳಾಚೆಯ ಬದಿಗೆ ಒಂದು ಹಸಿರು ತುಂಬಿದ ಗುಡ್ಡ ಕಣ್ಣಿಗೆಸೆಯುತ್ತಿತ್ತು. ಅದನ್ನು ನಾವು ಆಡುಭಾಷೆಯಲ್ಲಿ “ಅಚ್ಚೇ ದಿಂಬ” (ಆಚೇ ದಿಬ್ಬ) ಎಂದು ಕರೆಯುತ್ತಿದ್ದೆವು. ತುಂಬ ದಟ್ಟವಾದ ಎತ್ತರವಾದ ಮರಗಳಿಂದ ಕಂಗೊಳಿಸುವ ಕಾಡಿನಿಂದ ಆವೃತವಾದ ಆ ಗುಡ್ಡ ನೋಡುವುದೆಂದರೆ ಎಲ್ಲಿಲ್ಲದ ಖುಶಿ ನನಗೆ. ಅದರಲ್ಲಿ ಒಂದು ವಿಚಿತ್ರ ಆಕರ್ಷಣೆ ಇತ್ತು. ಹಗಲು ಅಷ್ಟು ಪ್ರೀತಿಯಿಂದ ನೋಡುವ ಗುಡ್ಡ, ರಾತ್ರಿ ಮಾತ್ರ ಭಯ ಹುಟ್ಟಿಸುತ್ತಿತ್ತು. ರಾತ್ರಿ ಊಟ ಮಾಡಿ ಕೈತೊಳೆಯಲು, ‘ವಂದ’ ಮಾಡಲು ಹೊರಗೆ ಬಂದಾಗಲೆಲ್ಲ ನಾವು ಅತ್ತ ದೃಷ್ಟಿ ಹರಿಸುವ ಸಾಹಸವನ್ನೇ ಮಾಡುತ್ತಿರಲಿಲ್ಲ. ಆಕಸ್ಮಿಕವಾಗಿ ಕಣ್ಣು ಅತ್ತ ಹೋದರೆ ಸಾಕು, ಕಾರ್ಗತ್ತಲೆಯಲ್ಲಿ ಮಸಿ ಬಳಿದಷ್ಟು ಕರ್ರಗೆ ಬೃಹದಾಕಾರವಾಗಿ ಕುಳಿತ ಅದು, ಭಯಂಕರವಾದ ಕಲ್ಪನೆ ಮೂಡಿಸಿ, ಎದೆಯ ನಗಾರಿ ಬಡಿತ ಏರುತ್ತಿತ್ತು. ಮತ್ತೆ ಪ್ರತಿ ಬೆಳಗಿನೊಡನೆ ಆ ಭಯವೂ ಕರಗಿಬಿಡುತ್ತಿತ್ತು.

ಬೇಸಿಗೆಯ ರಜೆಯಿಡೀ ಈ ಗುಡ್ಡದ ಪರ್ಯಟನೆ ನಮ್ಮ ದಿನಚರಿಯಾಗುತ್ತಿತ್ತು. ಮೊದಲೇ ಹೇಳಿದ ಹಾಗೇ ನಮ್ಮದು ರೈತ ಕುಟುಂಬ. ಗದ್ದೆ, ತೋಟಕ್ಕಾಗಿ, ದನಕರುಗಳ ಕೊಟ್ಟಿಗೆಯಲ್ಲಿ ಹಾಸಲಿಕ್ಕಾಗಿ ಮಳೆಗಾಲದಲ್ಲಿ ಹಸಿರು ಸೊಪ್ಪು ಕಡಿದು ತಂದರೆ, ಬೇಸಿಗೆ ಪೂರ್ತಿ “ದರಕು” (ಒಣಗಿದ ಎಲೆಗಳು) ಗುಡಿಸಿ ಒಟ್ಟು ಗೂಡಿಸಿ ತರುವ ಪರಿಪಾಠವಿತ್ತು. ಅದಕ್ಕಾಗಿ ಬೆಳಗ್ಗೆ ಎಂಟಕ್ಕೆಲ್ಲಾ ಆಯಿ, ಮನೆಕೆಲಸ ಮುಗಿಸಿ, ಒಂದು ಕೈಲಿ ದರಕು ತುಂಬಿಸುವ ಹಗ್ಗದ “ಕಲ್ಲಿ” (ದರಗೆಲೆ ತುಂಬಿಸುವ ಸಾಧನ) ಇನ್ನೊಂದು ಕೈಲಿ ಕುಡುಗೋಲು ಹಿಡಿದು ಹೊರಟು ಬಿಡುತ್ತಿದ್ದಳು.  ಅವಳಿಗೆ ಸಹಾಯಕರಾಗಿ ನಾನು ಮತ್ತೂ ಸುಶಕ್ಕ (ನನ್ನ ಸಣ್ಣಕ್ಕ) ಹೊರಡುತ್ತಿದ್ದೆವು. ಗದ್ದೆ ದಾಟಿ, ಚಿಕ್ಕ ಹಳ್ಳಕ್ಕೆ ಅಡ್ಡವಾಗಿ ಹಾಕಿದ್ದ ಕಿರು “ಸಂಕ” (ದೇಸೀ ಬ್ರಿಜ್ ಅನ್ನಿ) ದಾಟಿ ಆಯಿಯ ಹಿಂದೆ ನಾವು ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದೆವು. ಮುಖಕ್ಕೆ ಅಡ್ಡವಾಗಿ ಬರುವ ಮುಳ್ಳು ಕಂಟಿಯನ್ನು ಕುಡುಗೋಲಿಂದ ಸರಿಸುತ್ತ, ಆ ನೆಟ್ಟನೆಯ ಗುಡ್ಡವನ್ನು ಆಯಿ ಸರ ಸರನೆ ಏರುತ್ತಿದ್ದರೆ, ನಾವು ಗಡಬಡಿಸಿ ತೇಕುತ್ತ ಏರಿ, ಅವಳು ಕಣ್ಣಡ್ಡವಾಗದಂತೆ ಜಾಗೃತೆ ವಹಿಸುತ್ತಿದ್ದೆವು. ಆಯಿಯ ಮೊದಲ ಗುರಿ ಕಣಗಲ ಮರದ ಬುಡ. ಅದರ ದಪ್ಪವಾದ ಅಗಲ ಎಲೆಯ ದರಕು ಪುಷ್ಕಳವಾಗಿ ಬಿದ್ದಿದ್ದರೆ, ಆಯಿ ಎಲ್ಲಿಲ್ಲದ ಹಿಗ್ಗಿನಿಂದ  ಒಂದೆರಡು ಗಿಡಗಳ ಬರಲು ಕಡಿದು ಕಸಬರಿಗೆಯಂತೆ ಮಾಡಿ ನಮ್ಮ ಕೈಗೆ ಕೊಡುತ್ತಿದ್ದಳು. ಮೂರು ಮೂಲೆಯಿಂದ ಮೂವರು ದರಕು ಗೂಡಿಸಿ ದೊಡ್ಡ ಗುಡ್ಡೆ ಮಾಡುತ್ತಿದ್ದೆವು. ಬೆಳಗಿನ ಜಾವದ ಇಬ್ಬನಿಯಲ್ಲಿ ಮಿಂದ ಆ ಒಣ ಎಲೆಗಳು ಮೆತ್ತಗಾಗಿ, ಆ ಕಲ್ಲಿಯಲ್ಲಿ ಒತ್ತಿ ಒತ್ತಿ ತುಂಬಲು ಅನುಕೂಲವಾಗುತ್ತಿತ್ತು. ಮತ್ತೆ ಬಿಸಿಲಾಯಿತೆಂದರೆ, ಅದು ಪುನಃ ಒಣಗಿ ಪುಡಿಯಾಗಿ ಬಿಡುತ್ತದೆ. ಅದಕ್ಕೇ ಬಿಸಿಲೇರುವುದರೊಳಗೇ ನಾವು ಕೆಲಸ ಮುಗಿಸಬೇಕಾಗುತ್ತಿತ್ತು.

ಅಷ್ಟು ದೊಡ್ಡ ಗುಡ್ಡೆ ಹಾಕಿದ್ದ ದರಕನ್ನು ಆಯಿ ತನ್ನ ಕಲ್ಲಿಯಲ್ಲಿ ತುಂಬಿಸಿಕೊಂಡು ಹೊತ್ತು ಮನೆಗೆ ಹೋಗಿ ಹಾಕಿ ಬರುವುದರೊಳಗೆ, ಮತ್ತೆ ಅಷ್ಟೇ ದೊಡ್ಡ ಗುಡ್ಡೆ ಒಟ್ಟುವ ಹೊಣೆ ನಮ್ಮದಾಗುತ್ತಿತ್ತು. ಅಷ್ಟು ಭಾರವನ್ನು ಹೊತ್ತು ಸರಾಗವಾಗಿ ಸಂಕದ ಮೇಲೆ ನಡೆದು ಸಾಗುವ ಆಯಿ ನಮ್ಮ ಕಣ್ಣಿಗೆ ಚಂದಮಾಮದ ಕಥೆಯ ಪರಾಕ್ರಮಿಯಂತೆ ಅನ್ನಿಸಿ ಬಿಡುತ್ತಿದ್ದಳು. ಈಗ ಅನ್ನಿಸುತ್ತದೆ, ಪಾಪ, ಬಡತನದ ಬವಣೆಯಲ್ಲಿ ಮನೆತುಂಬ ಇದ್ದ ಮಕ್ಕಳ ಹೊಟ್ಟೆ ತುಂಬಿಸುವುದೇ ಸವಾಲಾದ ಪರಿಸ್ಥಿತಿಯಲ್ಲಿ ಆಳುಗಳನ್ನಿಟ್ಟು ಕೆಲಸ ಮಾಡಿಸಲಾಗದ ಅನಿವಾರ್ಯತೆಯಲ್ಲಿ, ಆಯಿ ಅಷ್ಟು ಭಾರಕ್ಕೆ ತಲೆ ಕೊಡುವ ಸಾಹಸ ಮಾಡುತ್ತಿದ್ದಳೋ ಏನೋ. ಅಪ್ಪಯ್ಯ ಚಿಕ್ಕ ದೇವಸ್ಥಾನ ಪೂಜಾರಿ. ಅಲ್ಲಿ ದೇವರ ಪೂಜೆಗಿಂತಲೂ ಆ ದೇವಸ್ಥಾನದ ಯಜಮಾನರ ಮನೆಯವರ “ಕತ್ತೆ ಚಾಕರಿ” ಯಲ್ಲೇ ಅಪ್ಪಯ್ಯನ ಇಡೀ ದಿನ ಕಳೆದು ಹೋಗುತ್ತಿತ್ತು. ಹಾಗಾಗಿ ಮನೆಯ ಒಳ ಹೊರಗಿನ ಕೆಲಸದ ಹೊರೆ ಆಯಿಯ ಮೇಲೇ ಇತ್ತು.

ಹಾಂ… ಮತ್ತೆ ವಿಷಯಕ್ಕೆ ಬರ್ತೀನಿ. ಆಯಿ ಅತ್ತ ಹೋಗುತ್ತಿದ್ದಂತೆಯೇ ನಾವು ಕೆಲಸ ಬಿಟ್ಟು ತುಂಟಾಟಕ್ಕೆ ತೊಡಗುತ್ತಿದ್ದೆವು. ಮರದ ಮೇಲೆ ಕೂಗುವ ಹಕ್ಕಿಗಳ ದನಿ ಅನುಕರಿಸುತ್ತ, ಅವುಗಳಿಗೆ ಅಣುಕಿಸಿ, ಗೆಲುವು ಸಾಧಿಸಿದಂತೆ ಹಲ್ಲು ಕಿರಿಯುತ್ತಿದ್ದೆವು. ಗಿಡ ಮರಗಳ ಸುತ್ತ ಗಿರಿ ಗಿರಿ ಸುತ್ತಿ ಓಡಿ ಮುಟ್ಟುವ ಆಟ ಆಡುತ್ತ, ಅಲ್ಲಲ್ಲಿ ಕಾಣುವ ಚಿತ್ರ ವಿಚಿತ್ರ ಕೀಟಗಳನ್ನು ಬೆರಗು ಗಣ್ಣಿನಿಂದ ವೀಕ್ಷಿಸುತ್ತ, “ಅಯ್ಯೋ ಅದರ ಮೀಸೆ ನೋಡೇ ಎಷ್ಟುದ್ದ ಇದೆ! ಅಬ್ಬಬ್ಬಾ! ಕೆಂಪು ಕಣ್ಣು ಹ್ಯಾಂಗೆ ತಿರುಗಿಸ್ತದೆ ನೋಡು.” ಎಂದು ಒಬ್ಬರಿಗೊಬ್ಬರು ವಿವರಣೆ ಕೊಟ್ಟುಕೊಳ್ಳುತ್ತ ಮೈಮರೆತು ನಿಲ್ಲುತ್ತಿದ್ದೆವು. ಅದು ಅಷ್ಟರಲ್ಲಿ ತನ್ನನ್ನು ಸಮೀಪಿಸಿದ ಪುಟ್ಟ ಸೊಳ್ಳೆಯನ್ನೋ ನೊಣವನ್ನೋ ಗಬಕ್ಕನೆ ಹಿಡಿದು ತಿಂದರೆ, “ಶ್ಶೀ…” ಎಂದು ಮುಖ ಕಿವುಚುತ್ತಲೇ ಬೆರಗುಗಣ್ಣಿನಿಂದ ವೀಕ್ಷಿಸುತ್ತಿದ್ದೆವು. ‘ಅದು ಅದರ ಊಟ’ ಎಂದು ತಿಳಿದುಕೊಳ್ಳಲಾರದಷ್ಟು ಮುಗ್ಧರಾಗಿದ್ದೆವು ನಾವು.

ಮತ್ತೆ ಅಲ್ಲಿಂದ ಕಾಲ್ತೆಗೆದು, ಮುಂದೆ ನಡೆಯುತ್ತಿದ್ದೆವು. ಅಲ್ಲಲ್ಲಿ ನೆಲದ ಮೇಲೆ ಉದ್ದುದ್ದಕ್ಕೆ ಬಿದ್ದು ಜೀರ್ಣಾವಸ್ಥೆಯಲ್ಲಿದ್ದ ಒಣ ಮರವನ್ನೇ ಕೊರೆದು ತಮ್ಮ ಗೂಡು ಮಾಡಿಕೊಂಡು ಅತ್ತಿತ್ತ ಗುಡು ಗುಡು ಓಡಾಡುವ ವಿವಿಧ ಆಕಾರ, ಬಣ್ಣದ ಇರುವೆಗಳು ಬಲು ರಂಜಿಸುತ್ತಿದ್ದವು. ‘ಅವು ಇಷ್ಟು ಗಡಿಬಿಡಿಯಲ್ಲಿ ಎಲ್ಲಿಗೆ ಹೋಗ್ತಾವೆ?’ ಅನ್ನೋದೇ ನಮಗೆ ದೊಡ್ಡ ಪ್ರಶ್ನೆಯಾಗಿ ಬಿಡುತ್ತಿತ್ತು. ಒಮ್ಮೊಮ್ಮೆ ಆ ಇರುವೆಗಳು ತಮಗಿಂತ ದೊಡ್ಡ ದೊಡ್ಡ ಹೊರೆ ಹೊತ್ತು ಉರುಳಿದಂತೆ ನಡೆಯುವುದು ಕಂಡು, ‘ಅಯ್ಯೋ ಪಾಪಾ’ ಎಂದು ನಾವು ಉದ್ಘರಿಸುವುದೂ ಇತ್ತು.

ಹಾಗೆಯೇ ಒಂದಿಷ್ಟು ಓಡಾಡಿ, ಕಾಡು ಮಟ್ಟಿ (ಪೊದೆ) ನುಗ್ಗುತ್ತ, ಏನಾದರೂ ಹಣ್ಣು ದೊರೆತೀತೆ? ಎಂದು ಅರಸತೊಡಗುತ್ತಿದ್ದೆವು. ಕರಿ ಬೇವಿನ ಹಣ್ಣುಗಳನ್ನೋ, ಕವಳಿ ಕಾಯಿಗಳನ್ನೋ ಚಪ್ಪರಿಸುತ್ತ, ಹುಳಿ ಸೊಪ್ಪನ್ನು ಅಗಿಯುತ್ತ, ಜೋಕಾಲಿ ಆಡಲು ಜಾಗ ಹುಡುಕುತ್ತಿದ್ದೆವು. ಅಷ್ಟರಲ್ಲಿ, ಮಾರು ದೂರದ ಕುಮುಸಲು ಬಳ್ಳಿಯ ಪೊದೆ ನಮ್ಮ ಕೈ ಬೀಸಿ ಕರೆಯುತ್ತಿತ್ತು. ಈ ಕುಮುಸಲ ಬಳ್ಳಿಯ ಬಗ್ಗೆ ಸ್ವಲ್ಪ ಹೇಳಬೇಕು. ಇದೊಂದು ಥರದ ಬಳ್ಳಿ. ಇದರಿಂದ ತುಂಬ ಗಟ್ಟಿಯಾದ ನಾರಿನ ಬಿಳಲು ಹೊರಬಿದ್ದು ನೆಲಕ್ಕೆ ಕಾಲೂರಿ, ಮತ್ತೆ ಮೇಲ್ಮುಖವಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲ ಅಕ್ಕ ಪಕ್ಕದ ಮರವನ್ನು ತಬ್ಬಿ ಮುನ್ನಡೆಯುತ್ತದೆ. ಇದರ ಬಿಳಲನ್ನು ಆ ಕಾಲದಲ್ಲಿ, ಎಳೆಯದರಲ್ಲೇ ಕಡಿದು ತಂದು ಪುಟ್ಟ ಕುಕ್ಕೆಗಳನ್ನು ಹೆಣೆಯುತ್ತಿದ್ದರು. ಈ ಬಳ್ಳಿ ಬೆಳೆಯುತ್ತ ಬೆಳೆಯುತ್ತ ಮರಗಳಂತೆ ದಪ್ಪವಾಗುತ್ತ ಹೋಗುತ್ತದೆ. ಇದರ ಅಂಕು ಡೊಂಕು ಬಿಳಲುಗಳು ಅತ್ತಿತ್ತ ಹಬ್ಬಿ, ಜೋಕಾಲಿಯಂತೆ, ತೊಟ್ಟಿಲಂತೆ ಕಣ್ಣಿಗೆಸೆಯುತ್ತಿದ್ದವು. ನಾವು ಅದರಲ್ಲಿ ಕುಳಿತು ಮನಸಾರೆ ತೂಗಿಕೊಳ್ಳುತ್ತಿದ್ದೆವು. ನಂತರ, ಈ ಪೊದೆಯಲ್ಲಿ ಹಾಸಿಗೆಯಂತೆ ಹಾಸಿ ಬಿದ್ದ ಇದರ ಮೆತ್ತನೆಯ ದರಗೆಲೆಗಳನ್ನು ಕ್ಷಣಾರ್ಧದಲ್ಲಿ ಒಟ್ಟು ಮಾಡಿ, ಜಾಣ ಮಕ್ಕಳಂತೆ ಪೋಸ್ ಕೊಡುತ್ತಿದ್ದೆವು.

ಆಯಿಗೆ ದರಕಿನ ಕಲ್ಲಿ ಹೊರಿಸಿ, ಒಲ್ಲದ ಮನಸಿನಿಂದ ಅವಳ ಹಿಂದೆ ಮನೆಗೆ ಹೊರಡುತ್ತಿದ್ದೆವು. ಮತ್ತೆ ನಾಳೆ ಬರಬಹುದಲ್ಲಾ ಎಂಬ ಖುಶಿಯೊಂದು ಇರುತ್ತಿತ್ತಲ್ಲಾ.

ಮುಂದುವರಿಯುವುದು…

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ