ಮತ್ತೊಂದು ಚಳಿಗಾಲ..

ಪ್ರತಿ ವರ್ಷದಂತೆ ಮತ್ತೊಂದು ಚಳಿಗಾಲ
ಬೇಸಿಗೆಯ ಗಾಯಕೆ ಮದ್ದೆರೆಯುವ ಹುನ್ನಾರ
ಸುಟ್ಟು ಬೆಂದ ಅಸಂಖ್ಯ ಒಡಲು
ತಂಪಾಗುವುದೆಂದರೆ ಸುಮ್ಮನೆಯೆ!?

ಧಗಧಗನೆ ಉರಿವ ಶತಮಾನದ ಬೇಗೆ
ಆರುವುದೆಂದು ಭ್ರಮಿಸುವುದೇ ಭ್ರಮೆ
ಅವಮಾನದ ಕಿಚ್ಚಲಿ ನಿತ್ಯ ಸುಡುತ್ತಿದ್ದು
ತಣ್ಣನೆಯ ಚಾದರ ಹೊದ್ದು ಮಲಗಿದರೂ
ಸಂಕಟದ ಶಾಖ ಕ್ಷೀಣಿಸುವುದೇನು!?

ನಂಜನ್ನೇ ಸುರಿದು ಹಚ್ಚಿದ ಬೆಂಕಿಯಲಿ
ವಿಷಕನ್ಯೆಯಾಗಿಯೇ ಅಗ್ನಿಯುಗುಳುತ
ಸುಟ್ಟುಕೊಳ್ಳುತ್ತಲೆ ಬೆಳಗಿಕೊಳ್ಳುತ್ತಾ
ನೋವುಣ್ಣುತ್ತಲೆ ಬೆಳಕಾದವಳನು
ಮಳೆ ಚಳಿಯೇನು ಮಾಡಿತ್ತು!?

ಬರಲಿ ಮತ್ತೆ ಮತ್ತೆ ಚಳಿಗಾಲ!
ಹಿಮದರಾಶಿಯೇ ಸುರಿಯಲಿ ರಾಶಿ ರಾಶಿ
ಸಾವಿರದ ನಾಲಿಗೆಯ ಚಾಚಿ ಬಿಸಿ ಹೊತ್ತಿಸಿ
ಕರಗಿಸಿ,ಕುದಿಸಿ, ಅಗ್ನಿವೇಶವನ್ನೇ ತೊಡಿಸಿ
ಆಪೋಶನಗೈಯುವೆನು ನನ್ನವ್ವನ ರೀತಿ.