ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕೃತಿಯನ್ನು ಕನ್ನಡದ ಲೇಖಕಿ ಸುಧಾ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಟ್ಯಾಗೋರರು ಮಾಡಿದ ಭಾಷಣವನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ. ವಿದ್ವಾಂಸ, ತತ್ವಜ್ಞಾನಿ ಆಗಿದ್ದ ಟ್ಯಾಗೋರರು ಈ ಭಾಷಣದಲ್ಲಿ ತಮ್ಮ ಬಗ್ಗೆ ಹಾಗೂ ಜಗತ್ತನ್ನು ತಾವು ಅರ್ಥೈಸಿಕೊಂಡ ಬಗ್ಗೆ ವಿವರಿಸಿದ್ದಾರೆ. ಗಂಗೆಯ ತಟದಲ್ಲಿ ಕಳೆದ ದಿವ್ಯ ಏಕಾಂತದ ಕ್ಷಣಗಳು ನೀಡಿದ ಪ್ರತಿಫಲನವಾಗಿ ಕವನಗಳು ಹೇಗೆ ಒಲಿದು ಬಂದವು ಎಂಬುದನ್ನು ಹೇಳಿದ್ದಾರೆ.

 

ಕೊನೆಗೂ ನಿಮ್ಮ ನಾಡಿಗೆ ನಾನು ಬರುವಂತಾದ ಬಗ್ಗೆ ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಕೆಲಸವನ್ನು ಗುರತಿಸಿ ನನಗೆ ನೋಬೆಲ್ ಪಾರಿತೋಷಕ ನೀಡಿ ಗೌರವಿಸುತ್ತಿರುವ ನಿಮಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ನನಗೆ ನೋಬೆಲ್ ಬಂದಿದೆಯೆಂದು ಇಂಗ್ಲೆಂಡಿನ ನನ್ನ ಪುಸ್ತಕದ ಪ್ರಕಾಶಕರು ತಂತಿ ಸಂದೇಶವನ್ನು ಕಳಿಸಿದ ಆ ಮಧ್ಯಾಹ್ನ ನಾನು ನನ್ನ ಶಾಲೆಯಲ್ಲಿದ್ದೆ. ಕೆಲವು ಅತಿಥಿಗಳೊಂದಿಗೆ ಸೇರಿಕೊಂಡು ನಾವೆಲ್ಲ ಕಾಡಿಗೆ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದೆವು. ಇನ್ನೇನು ನಾವೆಲ್ಲರೂ ಹೊರಡಬೇಕೆನ್ನುವಾಗ ಒಬ್ಬ ಓಡೋಡಿ ಬಂದು ನನಗೆ ತಂತಿ ಸಂದೇಶವನ್ನು ನೀಡಿದ. ನಾನು ಆ ಸಂದೇಶಕ್ಕೆ ವಿಶೇಷ ಗಮನ ನೀಡದೇ ಸುಮ್ಮನೆ ಅದನ್ನು ಮಡಚಿ ಕಿಸೆಯಲ್ಲಿಟ್ಟುಕೊಂಡು, ನಮ್ಮ ಗಮ್ಯವನ್ನು ತಲುಪಿದ ನಂತರ ವಿರಾಮದಲ್ಲಿ ಓದಿಕೊಂಡರಾಯಿತು ಎಂದುಕೊಂಡೆ. ನನ್ನ ಜೊತೆಯಲ್ಲಿ ಗಾಡಿಯಲ್ಲಿರುವ ಆಂಗ್ಲಸಂದರ್ಶಕರಿಗೆ ವಿಷಯ ಅದಾಗಲೇ ತಿಳಿದಿತ್ತು ಅನಿಸುತ್ತದೆ. ಅವರು ಸಂದೇಶವನ್ನು ಕೂಡಲೇ ಓದುವಂತೆ ನನ್ನನ್ನು ಒತ್ತಾಯಿಸಿದರು. ನಾನು ಓದಿದೆ, ಆದರೆ ನನಗೆ ತಕ್ಷಣಕ್ಕೆ ಅದನ್ನು ನಂಬಲಾಗಲಿಲ್ಲ. ಅದರಲ್ಲಿ ಬರೆದುದು ಏನೋ ತಪ್ಪಾಗಿದೆ ಅಥವಾ ನಾನು ಓದಿಕೊಂಡಿರುವುದರಲ್ಲೇ ಏನೋ ತಪ್ಪಿದೆ ಎಂದು ನನಗೆ ಅನಿಸಿತು. ಕೊನೆಯಲ್ಲಿ ನಾನು ನನಗ ನೋಬೆಲ್ ಬಂದಿದೆಯೆಂಬ ಸತ್ಯವನ್ನು ಒಪ್ಪಿಕೊಳ್ಳಬೇಕಾಯಿತು. ನನ್ನ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಈ ವಿಷಯ ತಿಳಿದಾಗ ಉಂಟಾದ ಆನಂದವನ್ನು ನೀವು ಊಹಿಸಿಕೊಳ್ಳುವಿರೆಂದು ಭಾವಿಸುವೆ. ನನ್ನನ್ನು ತೀವ್ರವಾಗಿ ತಟ್ಟಿದ ಸಂಗತಿಯೆಂದರೆ ನನ್ನನ್ನು ಪ್ರೀತಿಸುವ ಮತ್ತು ನಾನು ಬಹುವಾಗಿ ಪ್ರೀತಿಸುವ ಈ ಮಕ್ಕಳು ನನಗೆ ಬಂದ ಗೌರವವನ್ನು ತಾವು ಪ್ರೀತಿಸುವ ವ್ಯಕ್ತಿಗೆ ಬಂದ ಗೌರವವೆಂದು ಹೆಮ್ಮೆಪಟ್ಟುಕೊಂಡದ್ದು. ನಾನು ಈ ಗೌರವವನ್ನು ನನ್ನ ಶಾಲೆಯ ಎಲ್ಲ ಮಕ್ಕಳಿಗೆ ಮತ್ತು ನನ್ನ ದೇಶಬಾಂಧವರಿಗೆ ಅರ್ಪಿಸಲು ಬಯಸುತ್ತೇನೆ.

ಆ ಮಧ್ಯಾಹ್ನವಿಡೀ ಇದೇ ಸಂಭ್ರಮದಲ್ಲಿ ಕಳೆದುಹೋಯಿತು ಮತ್ತು ರಾತ್ರಿ ನಾನು ಮನೆಯ ಛಾವಣಿಯಲ್ಲಿ ಒಬ್ಬನೇ ಹೋಗಿ ನಿಂತುಕೊಂಡೆ. ನನ್ನಲ್ಲಿ ಪ್ರಶ್ನೆಯೊಂದು ಮೂಡಿಬಂತು. ಪಶ್ಚಿಮದಿಂದ ಬಹಳ ದೂರದಲ್ಲಿರುವ, ಸಾಗರ, ಕಣಿವೆ ಮತ್ತು ಪರ್ವತಗಳಿಂದ ಬೇರ್ಪಟ್ಟಿರುವ, ಬೇರೆಯೇ ಜನಾಂಗಕ್ಕೆ ಸೇರಿದ ನಾನು ಬರೆದ ಕವಿತೆಗಳು ಅಲ್ಲಿಂದ ಪಶ್ಚಿಮಕ್ಕೆ ಹೇಗೆ ತಲುಪಿದವು? ನಿಜವಾಗಿಯೂ ಇದು ನನ್ನ ಕಾವ್ಯದ ಶ್ರೇಷ್ಠತೆಯ ಬಗ್ಗೆ ಕೇಳಿಕೊಂಡ ಪ್ರಶ್ನೆಯಲ್ಲ, ನನ್ನ ಒಳಗನ್ನೇ ನಾನು ಪ್ರಾಮಾಣಿಕವಾಗಿ ಕೇಳಿಕೊಂಡ ಪ್ರಶ್ನೆಯಾಗಿದೆ.

ನಾನು ನನ್ನ ಜೀವನದ ಪ್ರಾರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ ಸಾಗಿದೆ. ನಾನು 25 ವರ್ಷದವನಿದ್ದಾಗ ಗಂಗಾನದಿಯಲ್ಲಿ ತೇಲುವ ಹಡಗಿನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದೆ. ಶರದೃತುವಿನಲ್ಲಿ ಹಿಮಾಲಯದ ತಪ್ಪಲಿನಿಂದ ವಲಸೆ ಬರುವ ಬಾತುಕೋಳಿಗಳು ಮಾತ್ರವೇ ನನ್ನ ಸಂಗಾತಿಗಳಾಗಿದ್ದರು. ಆ ಏಕಾಂತದಲ್ಲಿ ಸೂರ್ಯರಶ್ಮಿಗಳಿಂದ ಅಲಂಕಾರಗೊಂಡ ಆಕಾಶವನ್ನು ನಾನು ಮದಿರೆಯಂತೆ ಕುಡಿಯುತ್ತಿರುವ ಅನುಭವವಾಗುತ್ತಿತ್ತು, ಹರಿವ ನದಿಯ ಪಿಸುಮಾತು ಕೇಳುತ್ತಿತ್ತು, ಪ್ರಕೃತಿಯ ರಹಸ್ಯಗಳೆಲ್ಲ ಅನಾವರಣಗೊಳ್ಳುತ್ತಿತ್ತು. ಹೀಗೆ ಏಕಾಂಗಿಯಾಗಿ ನಾನು ಕನಸು ಕಾಣುತ್ತಾ, ಕನಸುಗಳಿಗೆ ಕವನದ ರೂಪ ನೀಡುತ್ತಾ, ಕಲಿಯುತ್ತಾ ನನ್ನೆಲ್ಲ ಯೋಚನೆಗಳನ್ನು ಕಲ್ಕತ್ತಾದ ಜನತೆಯೊಂದಿಗೆ ಪತ್ರಿಕೆ ಮತ್ತು ಸಾಹಿತ್ಯ ಸಂಚಿಕೆಗಳ ಮೂಲಕ ಹಂಚಿಕೊಳ್ಳುತ್ತಿದ್ದೆ. ನಿಮಗೆಲ್ಲ ಈಗ ನಾನು ಹೇಳುವ ಈ ಏಕಾಂತವಾಸದ ಕತೆ ತೀರ ವಿಚಿತ್ರವೆನಿಸಬಹುದು, ಏಕೆಂದರೆ ಪಶ್ಚಿಮದ ಕವಿಗಳು ಅಥವಾ ಲೇಖಕರು ಹೀಗೆ ತಮ್ಮ ಯೌವ್ವನದ ಬಹುಪಾಲು ದಿನಗಳನ್ನು ಪೂರ್ಣ ಏಕಾಂತದಲ್ಲಿ ಕಳೆದಿರುವ ಬಗ್ಗೆ ನನಗೆ ಅರಿವಿಲ್ಲ. ಅದು ನಿಮ್ಮ ಪರಿಸರದಲ್ಲಿ ಸಾಧ್ಯವಿಲ್ಲವೆಂದೇ ನಾನು ಭಾವಿಸಿರುವೆ, ಏಕೆಂದರೆ ನಿಮ್ಮ ಜಗತ್ತಿನಲ್ಲಿ ಏಕಾಂತಕ್ಕೆ ಜಾಗವಿಲ್ಲವೆಂಬುದು ನನಗೆ ಗೊತ್ತು.

ನನ್ನ ಬದುಕು ಹೀಗೆಯೇ ಸಾಗಿತ್ತು. ನನ್ನ ಪ್ರಾಂತ್ಯದ ಹೊರಗೂ ನನ್ನ ಹೆಸರು ಹಬ್ಬಿತ್ತಾದರೂ ನಾನವರ ಪಾಲಿಗೆ ಅದೃಶ್ಯ ವ್ಯಕ್ತಿಯಾಗಿಯೇ ಇದ್ದೆ. ಇದರಿಂದಾಗಿ ಜನಜಂಗುಳಿಯಿಂದ ತಪ್ಪಿಸಿಕೊಳ್ಳಲು ನನಗೆ ಸಾಧ್ಯವಾಯಿತು. ದೀರ್ಘ ಏಕಾಂತವಾಸದ ನಂತರ ನನ್ನೊಳಗೆ ಭಿನ್ನ ಆಲೋಚನೆಗಳು ಮೊಳೆಯತೊಡಗಿದವು. ನನ್ನ ಕನಸುಗಳಿಗೆ ಆಕಾರ ನೀಡುತ್ತಾ, ಜೀವನದ ಸಮಸ್ಯೆಗಳ ಬಗ್ಗೇ ಧೇನಿಸುತ್ತಾ ಕುಳಿತುಕೊಳ್ಳದೇ ಜನರಿಗಾಗಿ ಏನಾದರೂ ಮಾಡಬೇಕೆಂದು ಅನಿಸತೊಡಗಿತು. ನನ್ನ ಸಹಜೀವಿಗಳ ಸೇವೆಗಾಗಿ ಏನಾದರೂ ಮಾಡಲೇಬೇಕೆಂದು ಯೋಚಿಸತೊಡಗಿದೆ. ಆಗ ನನ್ನ ಮನಸಿಗೆ ಬಂದ ಒಂದೇ ಕೆಲಸವೆಂದರೆ ಮಕ್ಕಳಿಗೆ ಕಲಿಸುವುದು. ಅದರರ್ಥ ಕಲಿಸುವಿಕೆಯಲ್ಲಿ ನನಗೆ ವಿಶೇಷ ಪರಿಣಿತಿಯಿದೆಯೆಂದಲ್ಲ. ಏಕೆಂದರೆ ನಾನೇ ಶಾಲಾಶಿಕ್ಷಣವನ್ನು ಪೂರ್ಣಪ್ರಮಾಣದಲ್ಲಿ ಪಡೆದವನಲ್ಲ. ಕೆಲವೊಮ್ಮೆ ಇದನ್ನು ನಾನು ಮಾಡಬಲ್ಲೆನೆಂಬ ವಿಶ್ವಾಸ ಮೂಡುತ್ತಿರಲಿಲ್ಲವಾದರೂ ಪ್ರಕೃತಿಯನ್ನು ನಾನು ಗಾಢವಾಗಿ ಪ್ರೀತಿಸಿದ್ದುದರಿಂದ ಮಕ್ಕಳನ್ನು ಪ್ರೀತಿಸಬಲ್ಲೆ ಎಂಬ ಅರಿವು ನನಗಿತ್ತು. ಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸುವ ನನ್ನ ಮುಖ್ಯ ಉದ್ದೇಶವೆಂದರೆ ಅವರಿಗೆ ಬದುಕಿನ ಬಗೆಗಿನ ಸ್ವಾತಂತ್ರ್ಯ, ಸಂತೋಷಪಡುವ ಮುಕ್ತ ಅವಕಾಶ ಮತ್ತು ಪ್ರಕೃತಿಯೊಂದಿಗಿನ ಅನುಸಂಧಾನವನ್ನು ಕಲಿಸುವುದಾಗಿತ್ತು. ಸ್ವತಃ ನಾನೇ ನನ್ನ ಶಿಕ್ಷಣದಲ್ಲಿ ಇವುಗಳ ಬಗ್ಗೆ ತೀವ್ರವಾದ ಅಡೆತಡೆಗಳನ್ನು ಅನುಭವಿಸಿದ್ದೆ ಮತ್ತು ಮಕ್ಕಳು ಇಂದಿಗೂ ಅದನ್ನು ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಶಿಕ್ಷಣವೆಂಬ ಯಂತ್ರವು ಅವರು ಅತೀವವಾಗಿ ಬಯಸುವ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಪುಡಿಗಟ್ಟುತ್ತಿದೆ. ನನ್ನ ಉದ್ದೇಶವು ಮಕ್ಕಳಿಗೆ ಅದನ್ನು ಮರಳಿಸುವುದಾಗಿತ್ತು.

ನನ್ನ ಸುತ್ತಲೂ ಕೆಲವು ಹುಡಗರಿದ್ದರು. ಅವರಿಗೆ ನಾನು ಕಲಿಸತೊಡಗಿದೆ ಮತ್ತು ಅವರನ್ನು ಸಂತೋಷವಾಗಿಡಲು ಪ್ರಾರಂಭಿಸಿದೆ. ನಾನವರ ಸಹ ಆಟಗಾರನಾಗಿದ್ದೆ, ಸ್ನೇಹಿತನಾಗಿದ್ದೆ. ಅವರ ಜೀವನದ ಅನುಭವಗಳನ್ನು ನಾನು ಹಂಚಿಕೊಂಡೆ ಮತ್ತು ಅವರ ಗುಂಪಿನಲ್ಲಿರುವ ದೊಡ್ಡ ಮಗು ನಾನೆಂದು ಭಾವಿಸಿದೆ. ನಾವೆಲ್ಲರೂ ಒಂದಾಗಿ ಈ ಸ್ವಚ್ಛಂದ ವಾತಾವರಣದಲ್ಲಿ ಬೆಳೆಯತೊಡಗಿದೆವು.

ಮಕ್ಕಳ ಉತ್ಸಾಹ, ಸಡಗರ ಮತ್ತು ಅವರ ಮಾತುಕತೆ, ಹಾಡುಗಳು ಸುತ್ತಲಿನ ಗಾಳಿಯಲ್ಲಿ ಸಂತೋಷದ ಅಲೆಗಳನ್ನು ಮೂಡಿಸಿದವು, ಮತ್ತೆ ನಾನು ದಿನವೂ ಆ ಗಾಳಿಯಲ್ಲಿ ಉಸಿರಾಡುತ್ತಿದ್ದೆ. ಸಂಜೆ ಸೂರ್ಯ ಮುಳುಗುವಾಗ ಮರಗಿಡಗಳು ನೆಲದಲ್ಲಿ ಬಿಡಿಸುವ ನೆರಳಿನ ಚಿತ್ತಾರವನ್ನು ವೀಕ್ಷಿಸುತ್ತಾ ನಾನು ಏಕಾಂಗಿಯಾಗಿ ಕುಳಿತುಕೊಳ್ಳುತ್ತಿದ್ದೆ. ಅಪರಾಹ್ನದ ಮೌನದಲ್ಲಿ ಮಕ್ಕಳ ಖುಶಿಯ ಕೇಕೆಯ ದನಿ ಕೇಳುತ್ತಿತ್ತು. ಅವರ ಈ ಹರ್ಷೋದ್ಘಾರ ನನಗೆ ಭೂಮಿಯೆದೆಯಿಂದ ಕಾರಂಜಿಯಂತೆ ಪುಟಿದುಬಂದು ಆಗಸವೂ ಮಿತಿಯಲ್ಲವೆಂಬಂತೆ ಬೆಳೆಯುತ್ತಾ ಹೋಗುವ ಮರಗಿಡಗಳ ಉತ್ಸಾಹದಂತೆ ಭಾಸವಾಗುತ್ತಿತ್ತು. ಇಡಿಯ ಮಾನವ ಜನಾಂಗದ ಖುಶಿಯ ಕೇಕೆಯಂತೆ ಅದು ಕೇಳುತ್ತಿತ್ತಲ್ಲದೇ ಆಗಸದ ಮೇರೆಯನ್ನೂ ಮೀರಿ ಹರಿಯುವ ಮಾನವನೆದೆಯ ಮಾನವೀಯತೆಯ ಎಳೆಯ ಪ್ರತಿಮೆಯೆಂಬಂತೆ ಅನಿಸುತ್ತಿತ್ತು. ನಾನದನ್ನು ನನ್ನ ಹೃದಯದ ಹೃದಯದಿಂದ ಅನುಭವಿಸುತ್ತಿದ್ದೆ.

ಈ ರೀತಿಯ ವಾತಾವರಣ ಮತ್ತು ಪರಿಸರದಲ್ಲಿ ನಾನು ಗೀತಾಂಜಲಿಯನ್ನು ಬರೆಯತೊಡಗಿದೆ. ಭಾರತದ ಆಗಸದ ನಕ್ಷತ್ರಗಳಡಿಯಲ್ಲಿ ಕುಳಿತು ಅದನ್ನು ನನಗೆ ನಾನೇ ಹಾಡಿಕೊಳ್ಳುತ್ತಿದ್ದೆ. ಸೂರ್ಯೋದಯದ ಬೆಳಗಿನಲ್ಲಿ, ಸೂರ್ಯಾಸ್ತದ ಸಂಜೆಗಳಲ್ಲಿ ನಾನು ಈ ಹಾಡುಗಳನ್ನು ಬರೆಯುತ್ತಿದ್ದೆ. ಇನ್ನೂ ವಿಸ್ತಾರವಾದ ಜಗದ ಹೃದಯವನ್ನು ನಾನು ಸಂಧಿಸುವ ದಿನಗಳು ಬರುವುದೆಂಬ ನಿರೀಕ್ಷೆಯಲ್ಲಿ ಬರೆಯುತ್ತಿದ್ದೆ.

ಉತ್ಸಾಹಭರಿತ ಮಕ್ಕಳ ಸಹವಾಸದಿಂದ ನಾನು ಏಕಾಂತವನ್ನು ಮೀರತೊಡಗಿದೆ ಮತ್ತು ನನ್ನ ಸಹಜೀವಿಗಳಿಗಾಗಿ ನಾನು ಮಾಡುತ್ತಿರುವ ಸೇವೆಯು ವಿಸ್ತಾರವಾದ ಜಗತ್ತಿನ ನನ್ನ ತೀರ್ಥಯಾತ್ರೆಯ ಒಂದು ಭಾಗವಾಗಿತ್ತು. ಇದರಿಂದಾಗಿ ಹೊರಜಗತ್ತಿಗೆ ನಾನು ತೆರೆದುಕೊಳ್ಳಲು ಸಾಧ್ಯವಾಯಿತು. ಪಾಶ್ಚಿಮಾತ್ಯರ ಮಾನವೀಯತೆಯ ಸೆಲೆಯನ್ನು ಸ್ಪರ್ಶಿಸಲು ಅವಕಾಶವೊದಗಿತು. ನನಗೆ ತಿಳಿದಿತ್ತು ಪ್ರಸ್ತುತ ಕಾಲವು ಅತಿಶಯವಾದ ಶಕ್ತಿಯಿಂದ ಕೂಡಿದ ಪಶ್ಚಿಮದ ಜನರದ್ದಾಗಿದೆಯೆಂದು. ನಾನು ನನ್ನ ಜೀವನ ಮುಗಿಯುವ ಮೊದಲೊಮ್ಮೆ ಪಶ್ಚಿಮಕ್ಕೆ ಬರಬೇಕು, ವಿಶೇಷ ಶಕ್ತಿ ಮತ್ತು ಪ್ರತಿಭೆಯನ್ನು ಮೈಗೂಡಿಸಿಕೊಂಡ ಇಲ್ಲಿಯ ಜನರನ್ನೊಮ್ಮೆ ಭೇಟಿಯಾಗಬೇಕೆಂದು ಯೋಚಿಸುತ್ತಿದ್ದೆ. ಹಾಗಾಗಿ ನಾನು ಹೊರಬಂದೆ.

ಗೀತಾಂಜಲಿಯ ಪದ್ಯಗಳನ್ನು ಬೆಂಗಾಲಿಯಲ್ಲಿ ಬರೆದಾದ ಮೇಲೆ ಅವುಗಳನ್ನು ಇಂಗ್ಲಿಷಿಗೆ ಅನುವಾದಿಸಿದೆ. ಭಾಷೆಯ ಮೇಲೆ ನನಗಿರುವ ಪ್ರಭುತ್ವದ ಬಗೆಗಿನ ಕೀಳರಿಮೆಯಿಂದ ಪ್ರಕಟಣೆಯ ಹಂಗಿಲ್ಲದೇ ಈ ಕೆಲಸವನ್ನು ನಾನು ಮಾಡಿದ್ದೆ. ಪಶ್ಚಿಮಕ್ಕೆ ಬರುವಾಗ ನನ್ನ ಕೈಯಲ್ಲಿ ಗೀತಾಂಜಲಿಯ ಹಸ್ತಪ್ರತಿಯಿತ್ತು. ನಿಮಗೆಲ್ಲಾ ತಿಳಿದಿರುವಂತೆ ಇವುಗಳನ್ನು ಬ್ರಿಟೀಷ್ ಜನರ ಮುಂದೆ ಓದಿದಾಗ, ಓದಿಸಿದಾಗ ಅವರು ಅದನ್ನು ಪ್ರಕಟಿಸುವ ಇರಾದೆಯನ್ನು ವ್ಯಕ್ತಪಡಿಸಿದರು. ನನ್ನನ್ನು ಅವರು ಒಪ್ಪಿಕೊಂಡರು ಮತ್ತು ಪಶ್ಚಿಮದ ಹೃದಯವು ತಡವಿಲ್ಲದೇ ನನಗೆ ತೆರೆದುಕೊಂಡಿತು.

ಐವತ್ತು ವರ್ಷಗಳಿಂದ ಈ ಎಲ್ಲವುಗಳಿಂದ ದೂರವುಳಿದ, ಪಶ್ಚಿಮದಿಂದಲೂ ದೂರವಾದ ನನ್ನನ್ನು ಇದೀಗ ಮತ್ತೆ ತಮ್ಮದೇ ಕವಿಯೆಂದು ಒಪ್ಪಿಕೊಂಡ ಪಾಶ್ಚಿಮಾತ್ಯರ ನಡೆ ನನ್ನನ್ನು ಅಚ್ಚರಿಯ ಕಡಲಿನಲ್ಲಿ ಮುಳುಗಿಸಿದೆ. ಅಚ್ಚರಿಯ ನಡುವೆಯೇ ನನಗೆ ನನ್ನ ಏಕಾಂತದ ಧ್ಯಾನ, ಪಶ್ಚಿಮದ ಚೈತನ್ಯ ಎರಡೂ ಸೇರಿ ನನ್ನ ಕವನಗಳಲ್ಲಿ ಅಡಕವಾಗಿರುವ ಆಳವಾದ ಶಾಂತಿಯ ಅನುಭವ, ಪ್ರಶಾಂತತೆ, ಶಾಶ್ವತತೆಯ ಹುಡುಕಾಟ ಮತ್ತು ನಿಖರವಾದ ಭಾವಗಳ ಅಭಿವ್ಯಕ್ತಿಯು ತೀವ್ರ ಚಟುವಟಿಕೆಯಿಂದ ಕೂಡಿದ ಪಾಶ್ಚಿಮಾತ್ಯರ ಶಾಂತಿಯ ಹುಡುಕಾಟಕ್ಕೆ ಹೊಸದೊಂದು ಆಯಾಮವನ್ನು ನೀಡಿದವು ಅನಿಸುತ್ತದೆ. ಅವರು ಹೃದಯಪೂರ್ವವಾಗಿ ಹುಡುಕುತ್ತಿದ್ದ ಅಗಣಿತ ಶಾಂತಿಯನ್ನು ನನ್ನ ಕವನಗಳಲ್ಲಿ ಕಂಡುಕೊಂಡರು. ಇವೆಲ್ಲವೂ ನನಗೆ ನನ್ನ ಯೌವ್ವನದ ದಿನಗಳಲ್ಲಿ ಗಂಗೆಯ ತಟದಲ್ಲಿ ಕಳೆದ ದಿವ್ಯ ಏಕಾಂತದ ಕ್ಷಣಗಳು ನೀಡಿದ ಪ್ರತಿಫಲನವಾಗಿದ್ದವು. ಆ ದಿನಗಳ ದಿವ್ಯ ಶಾಂತಿಯು ನನ್ನ ಸ್ವಭಾವದಲ್ಲಿ ಆಡಕವಾಗಿತ್ತು, ಕವನಗಳ ಮೂಲಕ ಹೊರಬಂದಿತು ಮತ್ತು ಇದನ್ನು ಪಶ್ಚಿಮದ ವ್ಯಕ್ತಿಗಳಿಗೂ ತಲುಪಿಸಲು ಸಾಧ್ಯವಾಯಿತು, ಅವರು ಅದನ್ನು ಗೌರವಪೂರ್ವಕವಾಗಿ ಒಪ್ಪಿಕೊಂಡರು.

ಪಶ್ಚಿಮದಿಂದ ಬಹಳ ದೂರದಲ್ಲಿರುವ, ಸಾಗರ, ಕಣಿವೆ ಮತ್ತು ಪರ್ವತಗಳಿಂದ ಬೇರ್ಪಟ್ಟಿರುವ, ಬೇರೆಯೇ ಜನಾಂಗಕ್ಕೆ ಸೇರಿದ ನಾನು ಬರೆದ ಕವಿತೆಗಳು ಅಲ್ಲಿಂದ ಪಶ್ಚಿಮಕ್ಕೆ ಹೇಗೆ ತಲುಪಿದವು? ನಿಜವಾಗಿಯೂ ಇದು ನನ್ನ ಕಾವ್ಯದ ಶ್ರೇಷ್ಠತೆಯ ಬಗ್ಗೆ ಕೇಳಿಕೊಂಡ ಪ್ರಶ್ನೆಯಲ್ಲ, ನನ್ನ ಒಳಗನ್ನೇ ನಾನು ಪ್ರಾಮಾಣಿಕವಾಗಿ ಕೇಳಿಕೊಂಡ ಪ್ರಶ್ನೆಯಾಗಿದೆ.

ನಾನು ಈ ಗೌರವವನ್ನು ನನ್ನ ವೈಯಕ್ತಿಕ ಸಾಧನೆಯನ್ನಾಗಿ ಸ್ವೀಕರಿಸಬಾರದೆಂಬ ಅರಿವು ನನಗಿದೆ. ಇದು ನನ್ನೊಳಗಿರುವ ಪೌರಾತ್ಯವು ಪಶ್ಚಿಮಕ್ಕೆ ನೀಡಿದ ಕೊಡುಗೆಯಾಗಿದೆ. ಹಾಗೆಂದು ಪೌರಾತ್ಯವು ಆಧ್ಯಾತ್ಮಿಕ ಮಾನವೀಯತೆಯ ತಾಯಿ ಮತ್ತು ಪಾಶ್ಚಿಮಾತ್ಯವು ಅಲ್ಲ ಎಂದಲ್ಲ. ಪಶ್ಚಿಮದ ಮಕ್ಕಳು ಆಟವಾಡಿ ದಣಿವಾದಾಗ, ಆಟದಲ್ಲಿ ಗಾಯಗೊಂಡಾಗ ಅಥವಾ ಹಸಿವೆಯಾದಾಗ ಅವರ ಮುಖವನ್ನು ಪೂರ್ವದ ಪ್ರಶಾಂತ ತಾಯಿಯತ್ತ ತಿರುಗಿಸುತ್ತಾರೆಯೇ? ಅವರಿಗೆ ಆಹಾರವು ಪೂರ್ವದಿಂದ ಬರಬೇಕು ಮತ್ತು ತೀರ ಆಯಾಸಗೊಂಡು ಮಲಗಿದ ರಾತ್ರಿಯನ್ನು ನಿರಾಳವಾಗಿ ಕಳೆಯಬೇಕೆಂದು ಅವರು ಬಯಸುತ್ತಾರೆಯೆ? ಅವರಿಗೆ ನಿರಾಸೆಯಾಯಿತೆ?

ನನ್ನಮಟ್ಟಿಗೆ ಹೇಳುವುದಾದರೆ ನಾನು ಪಶ್ಚಿಮವು ಪೂರ್ವದ ಕಡೆಗೆ ಮತ್ತೆ ಮುಖಮಾಡಿ ಪೋಷಣೆಯನ್ನು ಕೇಳುವ ಹೊತ್ತಿನಲ್ಲಿಯೇ ಬಂದೆ. ಏಕೆಂದರೆ ನಾನು ಪೌರಾತ್ಯರ ಪ್ರತಿನಿಧಿಯಾಗಿದ್ದೇನೆ ಮತ್ತು ಅನೇಕ ಕೊಡುಗೆಗಳನ್ನು ಪೂರ್ವದ ಸಂಗಾತಿಗಳಿಂದ ಪಡೆದಿದ್ದೇನೆ.
ಅದಕ್ಕಾಗಿಯೇ ನಾನು ನಿಮಗೆ ಭರವಸೆ ನೀಡಬಲ್ಲೆ, ನೀವು ನನಗೆ ನೀಡಿದ ಈ ಬಹುಮಾನ ನನಗಾಗಿಯೇ ವ್ಯಯವಾಗುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ ಇದನ್ನು ಸ್ವೀಕರಿಸಲು ನನಗೆ ಅಧಿಕಾರವಿಲ್ಲ. ಹಾಗಾಗಿ ನಾನಿದನ್ನು ಬೇರೆಯವರಿಗಾಗಿ ಬಳಸುತ್ತೇನೆ. ಪೂರ್ವದ ವಿದ್ಯಾರ್ಥಿಗಳು ಮತ್ತು ಮಕ್ಕಳಿಗಾಗಿ ಇದನ್ನು ಬಳಸುತ್ತೇನೆ. ಆದರೆ ಇದೊಂದು ಬೀಜದಂತೆ, ನಾನಿದನ್ನು ಭೂಮಿಯಲ್ಲಿಡುತ್ತೇನೆ, ಅದು ಬಿತ್ತಿದವರ ಬಳಿಗೆ ಬೆಳೆಯಾಗಿ, ಹಣ್ಣಾಗಿ ಪುನಃ ಮರಳುತ್ತದೆ. ನಾನು ಹೊಸದಾಗಿ ಪ್ರಾರಂಭಿಸಿದ ವಿಶ್ವವಿದ್ಯಾನಿಲಯದ ಅಭಿವೃದ್ದಿಗಾಗಿ ನಾನು ಈ ಹಣವನ್ನು ವಿನಿಯೋಗಿಸುತ್ತೇನೆ, ನನಗನಿಸುತ್ತದೆ ಆ ವಿಶ್ವವಿದ್ಯಾನಿಲಯವು ಪಾಶ್ಚಿಮಾತ್ಯ ವಿದ್ಯಾರ್ಥಿಗಳು ತಮ್ಮ ಪೌರಾತ್ಯ ಸಹೋದರರನ್ನು ಭೇಟಿಯಾಗುವ, ವಿಚಾರಗಳನ್ನು ಹಂಚಿಕೊಳ್ಳುವ, ಒಟ್ಟಿಗೆ ಕೆಲಸ ಮಾಡುವ ಮತ್ತು ಪೌರಾತ್ಯಜ್ಞಾನದ ಗಣಿಯಲ್ಲಿ ಶತಮಾನಗಳಿಂದ ಅಡಗಿರುವ ಆಧ್ಯಾತ್ಮಿಕ ಜ್ಞಾನವನ್ನು ಅಗೆದು ತೆಗೆಯುವ ಮೂಲಕ ಮಾನವೀಯತೆಗೆ ಹೊಸ ಅರ್ಥವನ್ನು ಕೊಡುವ ಜಾಗವಾಗುತ್ತದೆ.

ಭಾರತವು ನಾಗರಿಕತೆಯ ಉತ್ತುಂಗ ಕಾಲದಲ್ಲಿ ಹೊಂದಿದ್ದ ಅತ್ಯುನ್ನತವಾದ ವಿಶ್ವವಿದ್ಯಾಲಯಗಳ ಬಗ್ಗೆ ನಿಮಗೆ ತಿಳಿದಿರಬಹುದು ಅಂದುಕೊಳ್ಳುವೆ. ದೀಪವೊಂದು ಬೆಳಗಿದಾಗ ಅದರ ಸುತ್ತಲಿನ ಜಾಗಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅದು ಇಡಿಯ ವಿಶ್ವಕ್ಕಾಗಿ ಹಚ್ಚಲ್ಪಟ್ಟಿರುತ್ತದೆ. ಭಾರತದ ನಾಗರಿಕತೆಯ ವೈಭವ, ಬುದ್ಧಿವಂತಿಕೆ ಮತ್ತು ಸಂಪತ್ತಿನ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅದು ತನ್ನ ನಾಗರಿಕತೆಯನ್ನು ತನ್ನವರಿಗಾಗಿ ಮಾತ್ರವೇ ತೆರೆದಿಡಲಿಲ್ಲ. ಎಲ್ಲ ಜನಾಂಗಗಳಿಗೂ ತನ್ನ ಬಾಗಿಲುಗಳನ್ನು ತೆರೆದಿತ್ತು. ಚೈನಾದವರು, ಜಪಾನಿಗಳು, ಪರ್ಷಿಯನ್ನರು ಮತ್ತು ಎಲ್ಲ ಜನಾಂಗದ ಜನರು ಅಲ್ಲಿಗೆ ಬಂದರು, ಭಾರತದಲ್ಲಿರುವ ಅತ್ಯತ್ತಮವಾದುದನ್ನು ಪಡೆದುಕೊಳ್ಳಲು ಶಕ್ತರಾದರು, ಇದು ವಿಶ್ವದ ಮಾನವೀಯತೆಗೆ ಎಲ್ಲಾ ಕಾಲದ ಅತ್ಯತ್ತಮವಾದ ಅರ್ಪಣೆಯಾಗಿದೆ. ಭಾರತಾಂಬೆ ಅದನ್ನು ಉದಾರವಾಗಿ ಅರ್ಪಿಸುತ್ತಲೇ ಬಂದಿದ್ದಾಳೆ. ನಿಮಗೆ ತಿಳಿದಿರಬಹುದು, ನಮ್ಮ ದೇಶದ ನಂಬಿಕೆಯ ಪ್ರಕಾರ ವಿದ್ಯೆಯನ್ನು ಕಲಿಸಿದ್ದಕ್ಕಾಗಿ ಗುರುವು ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಅಪೇಕ್ಷಿಸುವುದಿಲ್ಲ, ಯಾಕೆಂದರೆ ಜ್ಞಾನವನ್ನು ಶಿಷ್ಯರಿಗೆ ಧಾರೆಯೆರೆಯುವುದು ಗುರುವಿನ ಕರ್ತವ್ಯವೆಂದು ಇಲ್ಲಿ ಭಾವಿಸಲಾಗುತ್ತದೆ. ಜ್ಞಾನವನ್ನು ಅಪೇಕ್ಷಿಸಿ ಬರುವವರಿಗೆ ಅದನ್ನು ನೀಡುವುದಕ್ಕೆ ಮಾತ್ರ ಇದು ಸೀಮಿತವಾಗಿಲ್ಲ, ಬದಲಾಗಿ ಗುರುವು ಅಗತ್ಯವಿರುವ ಎಲ್ಲರಿಗೂ ಅತ್ಯುತ್ತಮವಾದ ಉಡುಗೊರೆಯನ್ನು ನೀಡುವುದರ ಮೂಲಕ ತನ್ನ ಜೀವನದ ಧ್ಯೇಯವನ್ನು ಪೂರ್ಣಗೊಳಿಸಿಕೊಳ್ಳಬೇಕು. ಈ ಸ್ವ-ಆಭಿವ್ಯಕ್ತಿಯಿಂದಲೇ ಭಾರತದಲ್ಲಿ ಸಂಗ್ರಹವಾದ ಜ್ಞಾನವನ್ನು ಇತರರಿಗೆ ಹಂಚುವುದು ಮತ್ತು ತನ್ನಲ್ಲಿರುವ ಅತ್ಯುತ್ತಮವಾದುದನ್ನು ಜಗತ್ತಿಗೆ ನೀಡುವುದು ನನ್ನ ದೇಶಕ್ಕೆ ಸಾಧ್ಯವಾಯಿತು. ಇದೇ ಕಾರಣದಿಂದ ಭಾರತದ ಅನೇಕ ಪ್ರಾಂತ್ಯಗಳಲ್ಲಿ ವಿಶ್ವವಿದ್ಯಾನಿಲಯಗಳು ಪ್ರಾರಂಭಿಸಲ್ಪಟ್ಟವು.

ಇತ್ತೀಚಿನ ದಿನಗಳಲ್ಲಿ ನಾವು ಕಳೆದುಕೊಂಡಿರುವುದು ಮತ್ತೇನೂ ಅಲ್ಲ, ಈ ಅಸ್ಪಷ್ಟತೆಯ ತಲ್ಲಣಗಳು, ಏಕಾಂತತೆ ಮತ್ತು ಮಾನವೀಯತೆಗೆ ಆತಿಥ್ಯ ನೀಡುವ ಮತ್ತು ನಾವು ಪಡೆದ ಅತ್ಯುತ್ತಮವಾದ ಸಂಗತಿಗಳನ್ನು ಹಂಚಿಕೊಳ್ಳಲು ಜಗತ್ತನ್ನು ಕೇಳುವ ಅವಕಾಶವನ್ನು ನಾವು ಕಳೆದುಕೊಂಡಿದ್ದೇವೆ. ಶತಮಾನಗಳ ಕಾಲ ಪೌರಾತ್ಯದ ಮಾನವೀಯತೆ ಮತ್ತು ಸಂಸ್ಕೃತಿಯು ಪಾಶ್ಚಿಮಾತ್ಯದ ವಸ್ತುಶ್ರೇಷ್ಠತೆಯ ಸಂಪರ್ಕಕ್ಕೆ ಬಂದಾಗ ನಾವು ನಮ್ಮ ನಾಗರಿಕತೆಯ ಮೇಲಿದ್ದ ವಿಶ್ವಾಸವನ್ನು ಕಳೆದುಕೊಂಡೆವು. ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ನಮ್ಮ ಸಂಸ್ಕೃತಿಗೆ ಯಾವುದೇ ಸ್ಥಾನಮಾನಗಳನ್ನು ನೀಡಲಾಗಿಲ್ಲ. ಹೀಗಾಗಿ ಒಂದು ಶತಮಾನದಿಂದ ನಮ್ಮ ವಿದ್ಯಾರ್ಥಿಗಳು ತಮ್ಮ ಹಿಂದಿನ ನಾಗರಿಕತೆಯ ಮೌಲ್ಯಗಳನ್ನು ಕಳೆದುಕೊಂಡು ಸಂಪೂರ್ಣವಾಗಿ ಅಜ್ಞಾನದಿಂದಲೇ ಬೆಳೆದಿದ್ದಾರೆ. ಇದರಿಂದಾಗಿ ನಮಗೆ ಅನುವಂಶೀಯವಾಗಿ ಬಂದ ಮಹಾನ್ ಜ್ಞಾನದ ಸಂಪರ್ಕವನ್ನು ಮಾತ್ರ ಕಳೆದುಕೊಳ್ಳಲಿಲ್ಲ, ನಮ್ಮಲ್ಲಿರುವುದನ್ನು ಇತರರಿಗೆ ಕೊಡುವ ಗೌರವವನ್ನು ಕಳಕೊಂಡೆವು. ಬೇರೆಯವರಿಂದ ಸಂಸ್ಕೃತಿಯನ್ನು ಎರವಲು ಪಡೆಯುವುದನ್ನು, ಇನ್ನೊಬ್ಬರಿಂದ ಬೇಡುವುದನ್ನು, ಸದಾ ಶಾಲಾಮಕ್ಕಳ ಹಂತದಲ್ಲೇ ಉಳಿದುಹೋಗುವುದನ್ನು ರೂಢಿಸಿಕೊಂಡೆವು.

ಆದರೆ ಅವಕಾಶಗಳನ್ನು ಕಳೆದುಕೊಳ್ಳದಿರುವ ಸಮಯ ಇದೀಗ ಬಂದಿದೆ. ನಾವೀಗ ನಮ್ಮ ಕೈಲಾಗುವಷ್ಟು ಶ್ರಮಿಸಬೇಕು, ಶತಮಾನದಿಂದ ಶತಮಾನಗಳಿಗೆ ಚಲಿಸುವುದು, ದೇಶದಿಂದ ದೇಶಕ್ಕೆ ಚಲಿಸುವುದು ಮತ್ತು ನಮ್ಮ ಬಡತನವನ್ನು ಇನ್ನೊಬ್ಬರೆದುರಿಗೆ ಪ್ರದರ್ಶಿಸುವುದನ್ನು ಬಿಟ್ಟು, ನಮ್ಮ ಪೂರ್ವಜರಿಂದ ನಾವು ಪಡೆದುದನ್ನು ತಿಳಿದಿರುವುದಕ್ಕಾಗಿ ನಾವು ಹೆಮ್ಮೆಪಡಬೇಕು ಮತ್ತು ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಯಾವ ಅವಕಾಶವನ್ನೂ ಕಳೆದುಕೊಳ್ಳಬಾರದು. ಇದನ್ನು ಮಾಡಬೇಕಾದುದು ನಮ್ಮ ಜನರ ಸಲುವಾಗಿ ಮಾತ್ರವಲ್ಲ, ಮಾನವೀಯತೆಯ ಸಲುವಾಗಿಯೂ ಹೌದು. ಇವೆಲ್ಲ ಕಾರಣಗಳು ಪಾಶ್ಚಿಮಾತ್ಯ ಮತ್ತು ಪೌರಾತ್ಯ ದೇಶಗಳ ವಿದ್ಯಾರ್ಥಿಗಳು ಭೇಟಿಯಾಗುವ ಮತ್ತು ಪರಸ್ಪರ ಆಧ್ಯಾತ್ಮಿಕ ಜ್ಞಾನವನ್ನು ಹಂಚಿಕೊಳ್ಳಲು ಅನುಕೂಲವಾಗುವಂತಹ ಒಂದು ಅಂತರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟುಹಾಕುವಂತೆ ನನ್ನನ್ನು ದೃಢವಾಗಿ ಪ್ರೇರೇಪಿಸಿದವು.

ನನ್ನ ಮನಸ್ಸಿನಲ್ಲಿ ಮೂಡಿದ ಈ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ನೀವು ನೀಡಿದ ಪ್ರಶಸ್ತಿ ಕೊಡುಗೆಯಾಗಿ ಸಂದಾಯವಾಗಿದೆ ಎಂದು ಹೇಳಲು ನನಗೆ ಹೆಮ್ಮೆಯೆನಿಸುತ್ತಿದೆ. ಇದು ನನ್ನನ್ನು ಇನ್ನೊಮ್ಮೆ ಪಶ್ಚಿಮಕ್ಕೆ ಬರುವಂತೆ ಮಾಡಿದೆ ಮತ್ತು ದೂರದ ಪೂರ್ವದಲ್ಲಿ ನಿಮಗಾಗಿ ಕಾಯುತ್ತಿರುವ ಹಬ್ಬದೂಟಕ್ಕೆ ನಿಮಗೆ ಆಹ್ವಾನ ನೀಡಲು ನಾನಿಲ್ಲಿ ಬಂದಿರುವೆ. ನನ್ನ ಆಹ್ವಾನವನ್ನು ನೀವು ಮರುಪರಿಶೀಲಿಸುವುದಿಲ್ಲವೆಂದು ನಾನು ಭಾವಿಸುತ್ತೇನೆ. ನಾನು ಯುರೋಪಿನ ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ ಮತ್ತು ಅವರೆಲ್ಲರೂ ನನ್ನನ್ನು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ. ಆ ಸ್ವಾಗತಕ್ಕೆ ವಿಶೇಷವಾದ ಅರ್ಥವಿದೆ, ಪೂರ್ವಕ್ಕೆ ಪಶ್ಚಿಮದ ಅವಶ್ಯಕತೆಯಿದೆ ಮತ್ತು ಪಶ್ಚಿಮಕ್ಕೆ ಪೂರ್ವದ ಅವಶ್ಯಕತೆಯಿದೆ. ಆದ್ದರಿಂದಲೇ ಇಬ್ಬರೂ ಭೇಟಿಯಾಗಬೇಕಾದ ಸಮಯ ಈಗ ಕೂಡಿಬಂದಿದೆ.

ಇದೊಂದು ಸುಯೋಗವಾಗಿದೆ ಮತ್ತು ನಾನು ಈ ಕಾಲಘಟ್ಟಕ್ಕೆ ಸೇರಿದವನೆಂಬುದು ನನಗೆ ತುಂಬಾ ಖುಶಿಯ ವಿಷಯವಾಗಿದೆ. ಪೂರ್ವ ಮತ್ತು ಪಶ್ಚಿಮಗಳೆರಡು ಹತ್ತಿರ ಬರುತ್ತಿರುವ ಕಾಲಘಟ್ಟದಲ್ಲಿ ಈ ಮಹಾಯುಗಕ್ಕೆ ಅಭಿವ್ಯಕ್ತಿ ನೀಡುವ ಕೆಲವು ಕೆಲಸಗಳನ್ನು ನಾನು ಮಾಡಿದ್ದೇನೆ ಎಂಬುದರ ಬಗ್ಗೆಯೂ ನನಗೆ ಸಂತೋಷವೆನಿಸುತ್ತಿದೆ. ಅವರು ಪರಸ್ಪರ ಒಟ್ಟಾಗಲು ಬಯಸಿದ್ದಾರೆ. ಅವರು ಭೇಟಿಯಾಗಲು, ಹೊಸ ನಾಗರಿಕತೆಯನ್ನು ಬೆಳೆಸಲು ಮತ್ತು ಭವಿಷ್ಯದ ಶ್ರೇಷ್ಠ ಸಂಸ್ಕೃತಿಯನ್ನು ನಿರ್ಮಿಸುವಲ್ಲಿ ಕೈಜೋಡಿಸಲು ಅವರಿಗೆ ಆಹ್ವಾನವನ್ನು ನೀಡಲಾಗಿದೆ.

ನನಗೆ ಭರವಸೆಯಿದೆ, ನನ್ನ ಬರವಣಿಗೆಗಳ ಮೂಲಕ ಇಂತಹ ಅನೇಕ ವಿಚಾರಗಳು ನಿಮ್ಮನ್ನು ತಲುಪಿವೆ, ಅನುವಾದಗಳಿಂದ ಸ್ವಲ್ಪ ಅಸ್ಪಷ್ಟವಾಗಿದ್ದರೂ ಕೂಡ. ಪೂರ್ವ ಮತ್ತು ಪಶ್ಚಿಮಕ್ಕೆ ಸೇರಿದ ಕೆಲವು ಆಲೋಚನೆಗಳು, ಪೂರ್ವದಿಂದ ಪ್ರಾರಂಭಗೊಂಡು ಪಶ್ಚಿಮವನ್ನು ತಲುಪಿ ಇಲ್ಲಿಯೇ ನೆಲೆನಿಲ್ಲಬಹುದಾದ ಕೆಲವು ಆಲೋಚನೆಗಳು ಇವುಗಳನ್ನೆಲ್ಲ ಇಲ್ಲಿಯವರು ಸ್ವಾಗತಿಸಿ ಒಪ್ಪಿಕೊಂಡಿದ್ದಾರೆ. ನನ್ನ ಬರಹದಲ್ಲಿರುವ ಕಾಲದ ಅಗತ್ಯದ ದನಿಯನ್ನು ನೀವೆಲ್ಲರೂ ಗುರುತಿಸಿರುವ ಅದೃಷ್ಟ ನನ್ನದಾಗಿದೆ ಮತ್ತು ಈ ಅದ್ಭುತ ಅವಕಾಶವನ್ನು ನನಗೆ ನೀಡಿದ್ದಕ್ಕಾಗಿ ನಾನು ನಿಮಗೆ ಋಣಿಯಾಗಿದ್ದೇನೆ. ಸ್ವೀಡನ್‌ನಿಂದ ನನಗೆ ದೊರೆತ ಸ್ವೀಕೃತಿಯು ನನ್ನನ್ನು ಮತ್ತು ನನ್ನ ಕೆಲಸವನ್ನು ಪಾಶ್ಚಿಮಾತ್ಯ ಸಮುದಾಯದ ಮುಂದೆ ತಂದು ನಿಲ್ಲಿಸಿದೆ. ನನ್ನ ಏಕಾಂತನ್ನು ಮುರಿಯುವುದರ ಮೂಲಕ ಇದು ನನಗೆ ಸ್ವಲ್ಪಮಟ್ಟಿನ ತೊಂದರೆಯನ್ನೂ ನೀಡಿದೆ ಎಂಬುದು ಸತ್ಯ. ನಾನು ಎಂದಿಗೂ ಒಗ್ಗಿಕೊಳ್ಳದ ಜನಜಂಗುಳಿಯ ಮುಂದೆ ನನ್ನನ್ನು ತಂದು ನಿಲ್ಲಿಸಿದೆ, ಅದರೊಂದಿಗೆ ಇಂದಿಗೂ ಹೊಂದಾಣಿಕೆಯಾಗುತ್ತಿಲ್ಲ. ಪಶ್ಚಿಮದ ಮಾನವೀಯತೆಯ ಸಮನ್ವಯದ ಮುಂದೆ ನಿಂತಾಗ ನನ್ನ ಹೃದಯ ಸಹಜವಾಗಿಯೇ ಕುಗ್ಗುತ್ತದೆ. ನಿಮ್ಮ ಹೊಗಳಿಕೆಯ ದೊಡ್ಡ ಉಡುಗೊರೆಯನ್ನೂ ಮತ್ತು ನೀವದನ್ನು ನನಗೆ ನೀಡಿದ ಮೆಚ್ಚುಗೆಯ ರೀತಿಯನ್ನೂ ಸ್ವೀಕರಿಸಲು ನನಗೆ ನಿಜಕ್ಕೂ ಮುಜುಗರವೆನಿಸುತ್ತಿದೆ, ಜೊತೆಯಲ್ಲಿ ತುಸು ನಾಚಿಕೆಯೂ ಸೇರಿಕೊಂಡಿದೆ. ಆದರೆ ಪೂರ್ವ ಮತ್ತು ಪಶ್ಚಿಮದ ಹೃದಯಗಳನ್ನು ಒಂದುಗೂಡಿಸಲು ಒಂದು ದೊಡ್ಡ ಅವಕಾಶವನ್ನು ನೀಡಿದ್ದಕ್ಕಾಗಿ ಮತ್ತು ನನ್ನನ್ನು ಅದಕ್ಕೊಂದು ಸಾಧನವನ್ನಾಗಿ ಮಾಡಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ ಎಂದು ಮಾತ್ರ ಹೆಳಬಲ್ಲೆ. ನನ್ನ ಜೀವನದ ಕೊನೆಯವರೆಗೂ ನಾನು ಈ ಕೆಲಸವನ್ನು ಮುಂದುವರೆಸಲು ಬದ್ಧನಾಗಿದ್ದೇನೆ. ಪೂರ್ವ ಮತ್ತು ಪಶ್ಚಿಮಗಳ ನಡುವಿನ ಅಸಮಾಧಾನಗಳನ್ನು ತೊಡೆಯುವಲ್ಲಿಯೂ ನಾನು ಶ್ರಮಿಸಬೇಕಾಗಿದೆ. ಅದಕ್ಕಾಗಿ ಏನನ್ನಾದರೂ ಮಾಡಲೇಬೇಕೆಂದು ಹಂಬಲಿಸಿ ನಾನು ಹೊಸಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ.

ಯಾವ ವ್ಯಕ್ತಿಯನ್ನಾದರೂ ತಿರಸ್ಕರಿಸುವುದು, ಯಾವುದೇ ಜನಾಂಗವನ್ನು ತಿರಸ್ಕರಿಸುವುದು, ಯಾವುದೇ ಸಂಸ್ಕೃತಿಯನ್ನು ತಿರಸ್ಕರಿಸುವುದು ಭಾರತದ ಚೈತನ್ಯವೆಂದು ನಾನು ಭಾವಿಸಿಲ್ಲ. ಭಾರತದ ಚೈತನ್ಯವು ಯಾವಾಗಲೂ ಏಕತೆಯನ್ನು ಆದರ್ಶವೆಂದು ಭಾವಿಸಿದೆ, ಈ ಏಕತೆಯೆಂಬುದು ಎಲ್ಲ ಜನಾಂಗವನ್ನು, ಎಲ್ಲ ಸಂಸ್ಕೃತಿಯನ್ನು ಒಟ್ಟಿಗೆ ಗ್ರಹಿಸುತ್ತದೆಯೇ ಹೊರತು ಯಾವುದನ್ನೂ ತಿರಸ್ಕರಿಸುವುದಿಲ್ಲ. ಎಲ್ಲವನ್ನೂ ಒಂದೆ ಆತ್ಮದೊಂದಿಗೆ ಬೆಸೆಯುವುದು, ಇಡೀ ವಿಶ್ವದಲ್ಲಿ ಯಾವುದನ್ನೂ ಹೊರಗಿಡದಂತೆ ಮಾಡುವುದು ನಮ್ಮ ಆಧ್ಯಾತ್ಮಿಕ ಪರಿಶ್ರಮದ ಅಂತಿಮ ಗುರಿಯಾಗಿದೆ. ಇದನ್ನು ಪ್ರೀತಿ ಮತ್ತು ಸಹಾನುಭೂತಿಯಿಂದ ಸಾಧಿಸಲಾಗುತ್ತದೆ. ಇದು ನಿಜವಾದ ಭಾರತದ ಚೈತನ್ಯವಾಗಿದೆ. ಈಗ, ರಾಜಕೀಯದ ಅಶಾಂತಿಯ ಪರಿಸ್ಥಿತಿಯಲ್ಲಿ ಅದೇ ಭಾರತದ ಜನರು ಪಶ್ಚಿಮವನ್ನು ತಿರಸ್ಕರಿಸಬೇಕೆಂದು ಕೂಗಿದಾಗ ನನಗೆ ನೋವಾಗಿದೆ. ಇದು ಪಾಶ್ಚಿಮಾತ್ಯರಿಂದ ಕಲಿತ ಪಾಠವೆಂದು ನಾನು ಭಾವಿಸುತ್ತೇನೆ. ಅದು ನಮ್ಮ ಉದ್ದೇಶವಲ್ಲ, ಎಲ್ಲ ಮಾನವ ಜನಾಂಗಗಳನ್ನು ಒಂದುಗೂಡಿಸಲು ಭಾರತವಿದೆ.

ಹಾಗಾಗಿಯೇ ಭಾರತೀಯರಾದ ನಮಗೆ ಜನಾಂಗೀಯ ಏಕತೆಯನ್ನು ಸಾಧಿಸಲಾಗಿಲ್ಲ. ನಮ್ಮಲ್ಲಿ ಜನಾಂಗದ ಸಮಸ್ಯೆಯೆಂದರೆ ಅದು ಮಾನವೀಯತೆಗೆ ಸಂಬಂಧಿಸಿದುದಾಗಿದೆ. ನಮ್ಮಲ್ಲಿ ದ್ರಾವಿಡರಿದ್ದಾರೆ, ಮಹಮದೀಯರಿದ್ದಾರೆ, ಹಿಂದೂಗಳು ಮತ್ತು ಎಲ್ಲಾ ವಿಭಿನ್ನ ಪಂಥಗಳು ಮತ್ತು ಸಮುದಾಯಗಳಿಗೆ ಸೇರಿದವರಿದ್ದಾರೆ. ಆದ್ದರಿಂದ ರಾಜಕೀಯ ಐಕ್ಯತೆಯ ಯಾವುದೇ ಬಾಹ್ಯ ಬಂಧವು ನಮ್ಮನ್ನು ಆಕರ್ಷಿಸಲು ಸಾಧ್ಯವಿಲ್ಲ, ಅದು ನಮ್ಮನ್ನು ತೃಪ್ತಿಪಡಿಸಿದರೂ ಎಂದಿಗೂ ನೈಜವಾಗಿರಲು ಸಾಧ್ಯವಿಲ್ಲ. ನಾವು ಇನ್ನೂ ಆಳಕ್ಕೆ ಹೋಗಬೇಕಾಗಿದೆ, ವಿವಿಧ ಜನಾಂಗಗಳ ನಡುವಿನ ಏಕತೆಯ ದೊಡ್ಡ ಬಂಧವನ್ನು ನಾವು ಶೋಧಿಸಬೇಕಿದೆ. ಅದು ಎಲ್ಲಾ ಜನಾಂಗಗಳಲ್ಲೂ ಆಡಕವಾಗಿದೆ ಮತ್ತು ನಾವದನ್ನು ಸ್ವೀಕರಿಸಲು ಸಿದ್ಧರಾಗಬೇಕಿದೆ. ನಮ್ಮ ಪೂರ್ವಜರ ಅಮರವಾದ ಕೃತಿಗಳನ್ನು ನಾವು ಅನುವಂಶೀಯವಾಗಿ ಪಡೆದುಕೊಂಡಿದ್ದೇವೆ. ಏಕತೆ ಮತ್ತು ಸಹಾನುಭೂತಿಯ ಧರ್ಮವನ್ನು ಬೋಧಿಸಿದ ಮಹಾನ್ ಬರಹಗಾರರು ಹೀಗೆ ಹೇಳುತ್ತಾರೆ, “ಎಲ್ಲಾ ಜೀವಿಗಳನ್ನು ತನ್ನಂತೆ ನೋಡುವವನು ಮತ್ತು ಎಲ್ಲಾ ಜೀವಿಗಳನ್ನು ತನ್ನಂತೆ ಅರಿತುಕೊಳ್ಳುವವನು ಸತ್ಯವನ್ನು ಅರಿಯುತ್ತಾನೆ.” ಅದು ಈಗ ಮತ್ತೊಮ್ಮೆ ಸಾಕಾರಗೊಂಡಿದೆ, ಪೌರಾತ್ಯರಿಂದ ಮಾತ್ರವಲ್ಲ; ಪಾಶ್ಚಿಮಾತ್ಯರಿಂದಲೂ. ಅವರು ಈ ಮಹಾನ್ ಸತ್ಯಗಳನ್ನು ಅರಿಯಬೇಕಾಗಿದೆ, ಮನುಷ್ಯರು ಇತರ ಜನಾಂಗದವರೊಂದಿಗೆ ಮತ್ತು ಇತರ ವ್ಯಕ್ತಿಗಳೊಂದಿಗೆ ಹೋರಾಡುವುದು ಮಾತ್ರವಲ್ಲ, ಅವರ ನಿಜವಾದ ಕೆಲಸವೆಂದರೆ ಸಮನ್ವಯ ಮತ್ತು ಶಾಂತಿಯನ್ನು ಸ್ಥಾಪಿಸುವುದು ಮತ್ತು ಪ್ರೀತಿ, ಸ್ನೇಹಗಳ ಬಂಧವನ್ನು ಪೋಣಿಸುವುದು.

ನಾವು ಹೋರಾಡುವ ಮೃಗಗಳಂತಲ್ಲ. ಇದು ನಮ್ಮ ಜೀವನದ ಮೇಲೆ ಮೇಲುಗೈ ಸಾಧಿಸುವುದರ ಮೂಲಕ ಸ್ವಯಂ ಜೀವನ, ಏಕಾಂತತೆಯನ್ನು ಸೃಷ್ಟಿಸುತ್ತದೆ, ದುಃಖ, ಅಸೂಯೆ, ದ್ವೇಷ, ರಾಜಕೀಯ ಮತ್ತು ವಾಣಿಜ್ಯ ಸ್ಪರ್ಧೆಗಳಿಗೆ ಕಾರಣವಾಗುತ್ತದೆ. ನಾವು ದೈವತ್ವದ ಹೃದಯಕ್ಕೆ, ಎಲ್ಲಾ ಜನಾಂಗದವರ ಪ್ರೀತಿ ಮತ್ತು ಐಕ್ಯತೆಯ ಆಳಕ್ಕೆ ಇಳಿದರೆ ಈ ಎಲ್ಲ ಭ್ರಮೆಗಳು ಮಾಯವಾಗುತ್ತವೆ.

ಭಾರತದ ಈ ಮಹಾನ್ ದೃಷ್ಟಿಕೋನದ ಪ್ರಸ್ತುತತೆಗಾಗಿ ನಾನು ಈ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿದ್ದೇನೆ. ನಾನು ನಿಮ್ಮಲ್ಲಿ ವಿನಂತಿಸುತ್ತೇನೆ, ಅವಕಾಶವಿದ್ದಾಗಲೆಲ್ಲ ನಮ್ಮ ಬಳಿಗೆ ಬರಲು, ನಮ್ಮೊಂದಿಗೆ ಕೈಜೋಡಿಸಲು ಮತ್ತು ಈ ವಿಶ್ವವಿದ್ಯಾಲಯ ಕೇವಲ ನಮ್ಮದಾಗಿ ಮಾತ್ರವೇ ಉಳಿಯದಿರಲು ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ. ನಿಮ್ಮ ವಿದ್ಯಾರ್ಥಿಗಳು, ನಿಮ್ಮ ವಿದ್ಯಾವಂತರು ನಮ್ಮ ಬಳಿಗೆ ಬಂದು ಈ ವಿಶ್ವವಿದ್ಯಾಲಯವನ್ನು ಪೂರ್ವ ಮತ್ತು ಪಶ್ಚಿಮದ ಸಾಮಾನ್ಯ ಸಂಸ್ಥೆಯನ್ನಾಗಿ ಮಾಡಲು ಸಹಾಯ ಮಾಡಲಿ. ಅವರು ತಮ್ಮ ಕೊಡುಗೆಗಳನ್ನು ಜಗತ್ತಿಗೆ ನೀಡಲಿ, ನಾವೆಲ್ಲರೂ ಒಟ್ಟಾಗಿ ಈ ಸಂಸ್ಥೆಯನ್ನು ಜೀವಂತವಾಗಿಡುವ ಮೂಲಕ ವಿಶ್ವದ ಅವಿಭಜಿತ ಮಾನವೀಯತೆಯ ಪ್ರತೀಕವಾಗಿ ಬೆಳೆಸೋಣ.

ಇದಕ್ಕಾಗಿ ನಾನಿಂದು ನಿಮ್ಮ ಬಳಿಗೆ ಬಂದಿದ್ದೇನೆ. ಐಕ್ಯತೆಯ ಹೆಸರಿನಲ್ಲಿ, ಪ್ರೀತಿಯ ಹೆಸರಿನಲ್ಲಿ ಮತ್ತು ದೇವರ ಹೆಸರಿನಲ್ಲಿ ನಾನು ಇದನ್ನೆಲ್ಲ ನಿಮ್ಮಿಂದ ನಿರೀಕ್ಷಿಸುತ್ತಿದ್ದೇನೆ. ನೀವೆಲ್ಲರೂ ಜೊತೆಗೂಡಬೇಕೆಂಬುದೇ ನನ್ನ ಬಯಕೆ. ನಿಮಗೆಲ್ಲರಿಗೂ ಸ್ವಾಗತ.

(ರವೀಂದ್ರನಾಥ ಟ್ಯಾಗೋರ್, 26 ಮೇ 1921, ಸ್ಟಾಕ್‍ಹೋಮ್)