ಒಂದು ಕಾಲಕ್ಕೆ ಭರ್ಜರಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಈಗ ವಾಸದ ಮನೆಗಳಾಗಿವೆ. ತಿಳಿ ನೀರು ಹರಿಯುತ್ತಿದ್ದ ತೋಡು ಮನುಷ್ಯನ ಕೊಳಕು ಆ ತೋಡನ್ನು ಸೇರಿ ಸೇರಿಸಿಕೊಂಡು ಕಪ್ಪಗೆ ಹರಿಯುತ್ತಿದ್ದರೆ ಇದು ಮನುಷ್ಯನ ನಾಗರೀಕತೆಯ ಹಂಬಲದ ಮುಖವಾಣಿ ಅನ್ನಿಸುತ್ತದೆ. ಒಟ್ಟು ನಮ್ಮೂರು ಮಡಿಕೇರಿ ಅಲ್ಲ ಮಡಿಯಾದಕೇರಿ ಈಗ ನಗರೀಕರಣಕ್ಕೆ ಒಳಗುಗೊಳ್ಳುವ ಹಂಬಲದಲ್ಲಿ ಮೂಲ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.
ಸುಮಾವೀಣಾ ಬರೆಯುವ ಮಡಿಕೇರಿಯಲ್ಲಿ‌ ಕಳೆದ ಬಾಲ್ಯದ‌ ನೆನಪುಗಳ ಸರಣಿ “ಕೊಡಗಿನ ವರ್ಷಕಾಲ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ಮಂಜಿನ ನಗರಿ ಮಡಿಕೇರಿ. ದಕ್ಷಿಣದ ಕಾಶ್ಮೀರ ಎನಿಸಿಕೊಂಡಿರುವ ಮಡಿಕೇರಿ ನನ್ನೂರು. ಅರಣ್ಯ ಭವನ ಮಡಿಕೇರಿ ನಗರದ ಆರಂಭದ ಸೂಚನೆ ಆದರೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಕಡೆಯ ಪಾಯಿಂಟ್. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ, ಕಲ್ಲಿನ ಫಿರಂಗಿ, ಕಲ್ಲಿನಲ್ಲಿಯೇ ಮಾಡಿರುವ ಪುಸ್ತಕದ ಮಾದರಿ ಮೊದಲ ಆಕರ್ಷಣೆ. ಅನತಿ ದೂರದಲ್ಲಿಯೇ ರೋಷನಾರ ವಸ್ತು ಸಂಗ್ರಹಾಲಯ. ಅಶ್ವಿನಿ ಹಾಸ್ಪಿಟಲ್, ಕೊಡಗು ವಿದ್ಯಾಲಯ ಈಗ ಕೇಂದ್ರೀಯ ವಿದ್ಯಾಲಯವೂ ಇದೆ, ಕೆ.ಎಸ್ಸಾರ್ಟಿಸಿ ಬಸ್ ಡಿಪೋ, ಸರಕಾರಿ ಆಸ್ಪತ್ರೆ, ಜನರಲ್ ತಿಮ್ಮಯ್ಯ ಸರ್ಕಲ್ ಟೋಲ್ಗೇಟ್, ಸೇಂಟ್ ಮೈಕಲ್ಸ್ ಚರ್ಚ್, ಡಿಸಿಸಿ ಬ್ಯಾಂಕು, ಟೌನ್ ಹಾಲ್, ಎರಡನೆ ಮಹಾಯುದ್ಧ ಹುತಾತ್ಮರ ಸ್ಮಾರಕ, ಕೋಟೆ ಆವರಣದಲ್ಲಿ, ಕೋಟೆ ಗಣಪತಿ ದೇವಸ್ಥಾನ, ಸುಂದರ ಅರಮನೆ, ನೈಜವೆಂಬಂತೆ ಇರುವ ಕಲ್ಲಿನ ಆನೆಗಳು, ವಸ್ತು ಸಂಗ್ರಹಾಲಯ, ಜಿಲ್ಲಾ ಕೇಂದ್ರ ಗ್ರಂಥಾಲಯ ಕೋಟೆ ಮುಖ್ಯ ದ್ವಾರದ ಎದಿರು ಕೊಡವ ಸಮಾಜ, ಅದರ ಕೆಳಗೆ ಇಳಿದರೆ ಓಂಕಾರೇಶ್ವರ ದೇವಸ್ಥಾನ, ಜೂನಿಯರ್ ಕಾಲೇಜು, ಮ್ಯಾನ್ಸ್ ಕಾಂಪೌಂಡ್, ಗೌಡ ಸಮಾಜ, ಲೋವರ್ ಕೊಡವ ಸಮಾಜ ಹಾಗೆ ಮೇಲೆ ಬಂದರೆ ಪೋಸ್ಟ್ ಆಫೀಸು, ನಂದಿನಿ ಬೂತ್, ಕಾವೇರಿ ಥಿಯೇರ್, ಬಸಪ್ಪ ಥಿಯೇಟರ್ ಪಾಟ್ಕರ್ ಹಾಸ್ಪಿಟಲ್, ಬ್ರಾಹ್ಮಿನ್ಸ್ ವ್ಯಾಲಿ ಇವಿಷ್ಟು ಮಡಿಕೇರಿಯ ಅರ್ಧ ನಗರ ದರ್ಶನ.

ಸಸ್ಯಶ್ಯಾಮಲೆಯ ಅಪ್ಪುಗೆಯಲ್ಲಿ ಬಂಧಿಯಾಗಿರುವ ಈ ಊರು ಈಗ ಯೌವ್ವನ ಕಳೆದುಕೊಂಡು ನೆರಿಗೆ ಕಟ್ಟಿದ ಮುಖದಂತೆ, ಬಿದ್ದ ಹಲ್ಲುಗಳಿಗೆ ತಂತಿ ಹಾಕಿಸಿಕೊಂಡಂತೆ, ಬೆನ್ನು ಬಾಗಿ ಊರುಗೋಲು ಹಿಡಿಯುತ್ತಿದೆಯೇನೋ ಅನ್ನಿಸುತ್ತಿದೆ. ಸ್ಟುವರ್ಟ್ ಹಿಲ್, ಪ್ರೈವೇಟ್ ಬಸ್ಟ್ಯಾಂಡ್, ಡೈರಿ ಫಾರ್ಮ್, ಓಲ್ಡ್ ಕ್ವಾಟ್ರಸ್, ಪಿಡಬ್ಲ್ಯೂಡಿ ಕ್ವಾಟ್ರಸ್ ಇವುಗಳು ನನ್ನ ಕಾಲದಲ್ಲಿ ಅತ್ಯಂತ ಜನಜನಿತವಾಗಿದ್ದ ಲ್ಯಾಂಡ್ ಮಾರ್ಕ್‌ಗಳು ಎನ್ನಬಹುದು. ಆದರೆ ಈಗ ಇವೆಲ್ಲ ಭಗ್ನವಾಗಿವೆ, ಪಳೆಯುಳಿಕೆಗಳಾಗಿವೆ. ಮನುಷ್ಯ ಪ್ರಕೃತಿಯೊಂದಿಗೆ ಸಾಮರಸ್ಯ ಹೊಂದದೆ ದಬ್ಬಾಳಿಕೆಗೆ ಇಳಿದದ್ದರ ಪ್ರತಿಫಲ ಅನ್ನಿಸುತ್ತದೆ.

(ಚಿತ್ರ ಕೃಪೆ: ಅಬ್ದುಲ್‌ ರಶೀದ್)

ಸ್ಟುವರ್ಟ್ ಹಿಲ್ ಅಂದರೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜು ವಿದ್ಯಾರ್ಥಿಗಳು ಹಾದು ಹೋಗುವ ರಸ್ತೆಗೆ ಅಭಿಮುಖವಾಗಿ ಇರುವ ಬೆಟ್ಟದ ಸಾಲು. 2019 ರಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಓರೆಯಾಗಿ, ಬೀಳುವುದೋ? ಬಿದ್ದೇ ಬಿಟ್ಟೀತೇನೋ ಅನ್ನುವಂತೆ ನೆಲ ನೋಡುತ್ತಾ ನಿಂತಿದೆ. ನಾವು ಓದುವಾಗ ಇದ್ದಂತೆ ಇಳಿಜಾರಲ್ಲಿ ಹಾಗೆ ಜಾರಿ ಬರುತ್ತಿದ್ದ ಜೀಪುಗಳು ಕಟ್ಟಡದ ಮೇಲಿಂದ ನಳನಳಿಸುತ್ತಿದ್ದ ಹೂಗಿಡಗಳು, ಜನರ ಚುರುಕಿನ ಓಡಾಟ ಈಗಿಲ್ಲ. ಗುಡ್ಡವೆ ಕುಸಿಯುವ ಭೀತಿಯಿಂದ ಮನೆ ಖಾಲಿ ಮಾಡಿದವರೆ ಹೆಚ್ಚು. ಅಲ್ಲೆಲ್ಲ ಹೊದರು ಹೊದರಾಗಿ ಹುಲ್ಲು ಬೆಳೆದು ಟ್ರಿಮ್ ಆಗಿ ಕಾಣುವ ಮನುಷ್ಯನ ಶೋಕಿಯನ್ನು ಅಣಕಿಸುವಂತಿದೆ. ಕಡಿದಾದ ಏರುಗಳನ್ನು ದಾಟಿ ಹೋಗುವಾಗ ‘ಮೂಡಿಮಕ್ಕಡ ಕಾಂಬಕ ಆಟೋ ಪತ್ತದೊ ಇಲ್ಲೆ’ ಎಂದು ಗಂಡು ಮಕ್ಕಳು ಹಾಸ್ಯಕ್ಕೆ ಹೇಳಿದ ಏರುಗಳು ಈಗ ಜೆಸಿಬಿಯಿಂದ ಟ್ರಿಮ್ ಆಗಿ ಸಪಾಟಾಗಿವೆ. ಕಾನ್ವೆಂಟ್ ಜಂಕ್ಷನ್ ಅಂದರೆ ಎರದು ಮೂರು ಗೂಡಂಗಡಿ ಇದ್ದದ್ದು ಈ ದಿನ ಹಿಗ್ಗಿ ಸರ್ಕಲ್ ಆಗಿದೆ. ಡೈರಿ ಫಾರ್ಮ್ ಅಂದರೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗದ್ದೆಗಳು ಪ್ರಾತ್ಯಕ್ಷಿಕೆಗಳು ನಡೆಯುತ್ತಿದ್ದ ಸ್ಥಳ ಜಡಿ ಮಳೆಯಲ್ಲಿ ನಾಟಿ ಮಾಡುವ ದೃಶ್ಯ, ಕೋಣಗಳನ್ನು ಕಟ್ಟಿಕೊಂಡು ನಡುವಿಗೆ ಪ್ಲಾಸ್ಟಿಕ್ ಕಟ್ಟಿಕೊಂಡು ಇರುತ್ತಿದ್ದ ಕಾರ್ಮಿಕರ ಮಾತಿನ ಸದ್ದು ನಮ್ಮನೆಗೆ ಕೇಳಿಸುತ್ತಿತ್ತು. ಈಗ ಪ್ರೈವೇಟ್ ಬಸ್‌ಗಳು ಹಾರ್ನ್ ಮಾಡುವ ಶಬ್ದ ಕೇಳಿಸುತ್ತದೆ. ಆ ಗದ್ದೆಯ ಸುತ್ತಲೂ ಇದ್ದ ಗಾಳಿ ಮರಗಳು ಬಿದ್ದೇ ಹೋದವೋ ಏನೋ ಅನ್ನುವ ಹಾಗೆ ಬಾಗಿ ಶಬ್ದಿಸುತ್ತಿದ್ದವು. ಬೆಳಗಾಗಿ ನೋಡಿದರೆ ಏನೂ ಆಗದೆ ಇರುತ್ತಿದ್ದವು. ಅದರ ಹಿಂದೆ ಇದ್ದ ಐಷಾರಾಮಿ ಮನೆಯ ಬಾಲ್ಕನಿ ಲೈಟಿನ ಬಿಂಬ ಕಾಣಿಸುತ್ತಿತ್ತು. ಈಗ ಮರವೂ ಇಲ್ಲ ನೀರೂ ಇಲ್ಲ. ಎಲ್ಲವೂ ಶೂನ್ಯ. ಅದೆಷ್ಟೋ ದನಗಳ ಮೇಯ್ದಾಣವಾಗಿದ್ದ ಸ್ಥಳ ಈಗ ಇರುವ ಸಾಯಿ ಹಾಕಿ ಗ್ರೌಂಡ್ ನಮ್ಮ ಕಾಲದ ಸೈಕಲ್ ಕಲಿಯುವ, ಅದೆಷ್ಟೋ ಕಿರಿಯರ ಕ್ರಿಕೆಟಿಗರ ಓನ್ ಗ್ರೌಂಡ್, ಹಿರಿಯರು ಗಿಡಗಳಿಗೆ ಸೆಗಣಿ ಎತ್ತುವವರ ತಾಣ ಈಗ ಕಬ್ಬಣದ ತಡಿಕೆ ಹಾಕಿಕೊಂಡು ಬಂಧಿಯಾಗಿದೆ.

ರಾಜಾಸೀಟು ಮಡಕೇರಿಯ ಪ್ರಮುಖ ಪ್ರವಾಸಿ ತಾಣ. ಒಂದು ಕಾಲದ ರಾಜ ರಾಣಿಯರ ವಿಹಾರ ತಾಣ. ಪುಟಾಣಿ ರೈಲ್ ಸಹ ಇಲ್ಲಿದೆ. ಪುಟಾಣಿಗಳ ಜೊತೆಗೆ ದೊಡ್ಡವರೂ ಕುಳಿತು ಖುಷಿ ಪಡ್ತಾರೆ. ಅಸಲಿಗೆ ಪುಟಾಣಿ ರೈಲ್ ಮೊದಲು ಗಾಲ್ಫ್ ಗ್ರೌಂಡಲ್ಲಿ ಇದ್ದದ್ದು ಈಗ ಇಲ್ಲಿದೆ. ಈಗ ರಾಜಸೀಟು ಹೇಗಿದೆ ಎಂದು ನೋಡಲಿಕ್ಕೆ ಬರುವುದು ಅನ್ನುವುದಕ್ಕಿಂತ ರಾಜಸೀಟಲ್ಲಿ ನಾವ್ ಹೇಗೆ ಬೀಳ್ತೀವಿ ಐ ಮೀನ್ ಫೋಟೊದಲ್ಲಿ ಹೇಗ್ ಬೀಳ್ತೀವಿ ಎಂದು ಬರುವವರೆ ಹೆಚ್ಚು. ಈಗ ಎಷ್ಟೇ ಅಂದಕಾಣಿಸಿದ್ದರೂ ಮೊದಲ ಚಂದ ಇಲ್ಲ. ಆ ರಸ್ತೆ ವ್ಯಾಪಾರಕ್ಕೆ ಅನ್ನುವ ಹಾಗಾಗಿದೆ. ಸಂಗೀತ ಕಾರಂಜಿ ಮಾಡಿರೋದು ಚೆನ್ನಾಗಿದೆ. ಅದು ನಮ್ಮ ಕಾಲದಲ್ಲಿ ನೀರಿನ ತೊಟ್ಟಿಯಾಗಿತ್ತು. ಈಗಿನ ಹಾಗೆ ತರಹೇವಾರಿ ಸ್ನ್ಯಾಕ್ಸ್ ಆಗ ಸಿಗುತ್ತಿರಲಿಲ್ಲ. ಕಡಲೆಕಾಯಿ, ನೆಲ್ಲಿಕಾಯಿ ಅಷ್ಟೇ. ಕಡಲೆಕಾಯಿ ಕೊಡಿಸಿ ಇಲ್ಲ ಅಂದರೆ ನೀರಲ್ಲಿ ಬೀಳ್ತೀವಿ ಅನ್ನುತ್ತಿದ್ದ ಕಾಲ. ಮೊದಲು ಪೆಟ್ಟು ತಿಂದು ಆನಂತರ ಬಿಕ್ಕಳಿಸುತ್ತಾ ಕಡಲೆಕಾಯಿ ತಿಂದ ಜಾಗವನ್ನು ಮರೆಯಲು ಸಾಧ್ಯವಿಲ್ಲ.

ರಾಜಾ ಸೀಟಿನಲ್ಲಿ ಸೂರ್ಯಾಸ್ತ ನೋಡುವುದು ಪ್ರವಾಸಿಗರ ತವಕವಾದರೆ ಅಲ್ಲಿಯ ಸ್ಥಳಿಯರು ಅಲ್ಲಿ ಹೋದ ಕೂಡಲೆ ನಿಂತು ನಮ್ಮ ಗದ್ದೆ ಅದೆ… ನಮ್ಮನೆ ಕಾಣಿಸ್ತಾ ಇದೆಯಾ? ವೆಹಿಕಲ್ಸ್ ಹೀಗೆ ಹೋಗೋದಲ್ವ.. ಎನ್ನುತ್ತಾ ಅವರ ಮನೆ ಗದ್ದೆ ತೋಟದ ರಸ್ತೆಗಳನ್ನು ಹುಡುಕುತ್ತಿರುತ್ತಾರೆ. ಅದೂ ಚಂದವೆ. ಇನ್ನು ಕೆಲವರು ರಾಜಾಸೀಟ್ ನೆಪ ಇಟ್ಟುಕೊಂಡು ಅಲ್ಲಿಯೇ ಇರುವ ಕುಂದೂರು ಮೊಟ್ಟೆ ದೇವಸ್ಥಾನಕ್ಕೆ ಬರುವುದಿದೆ. ಅದಕ್ಕಿಂತ ಮುಂದೆ ಹೋದರೆ ನಿಶ್ಯಬ್ದ ಕವಚದ ಹೊರಾವರಣದಲ್ಲಿ ಶಬ್ದದ ಹೂರಣ ಹೊಂದಿರುವ ಆಕಾಶವಾಣಿ ಮಡಿಕೇರಿ ನಗರದ ಗೋಡೆ ಚಿತ್ರ ಅಲ್ಲಿತ್ತು. ಈಗ ಗೊತ್ತಿಲ್ಲ!

(ಚಿತ್ರ ಕೃಪೆ: ಅಬ್ದುಲ್‌ ರಶೀದ್)

ಸ್ಟುವರ್ಟ್ ಹಿಲ್ ಅಂದರೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜು ವಿದ್ಯಾರ್ಥಿಗಳು ಹಾದು ಹೋಗುವ ರಸ್ತೆಗೆ ಅಭಿಮುಖವಾಗಿ ಇರುವ ಬೆಟ್ಟದ ಸಾಲು. 2019 ರಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಓರೆಯಾಗಿ, ಬೀಳುವುದೋ? ಬಿದ್ದೇ ಬಿಟ್ಟೀತೇನೋ ಅನ್ನುವಂತೆ ನೆಲ ನೋಡುತ್ತಾ ನಿಂತಿದೆ. ನಾವು ಓದುವಾಗ ಇದ್ದಂತೆ ಇಳಿಜಾರಲ್ಲಿ ಹಾಗೆ ಜಾರಿ ಬರುತ್ತಿದ್ದ ಜೀಪುಗಳು ಕಟ್ಟಡದ ಮೇಲಿಂದ ನಳನಳಿಸುತ್ತಿದ್ದ ಹೂಗಿಡಗಳು, ಜನರ ಚುರುಕಿನ ಓಡಾಟ ಈಗಿಲ್ಲ. ಗುಡ್ಡವೆ ಕುಸಿಯುವ ಭೀತಿಯಿಂದ ಮನೆ ಖಾಲಿ ಮಾಡಿದವರೆ ಹೆಚ್ಚು.

ಗಾಳಿಬೀಡು ಮಡಿಕೇರಿ ನಗರದ ಹೊರವಲಯ ಪ್ರದೇಶ. ಸರಕಾರಿ ಕಛೇರಿಗಳು, ನವೋದಯ ವಿದ್ಯಾಲಯ ಇಲ್ಲಿಯೇ ಇರುವುದು. ಅದನ್ನು ಬಳಸುತ್ತಾ ಬಂದರೆ ಪ್ರತಿಷ್ಟಿತ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಕಾಲೇಜು, ಮಿಲಿಟರಿ ಕ್ಯಾಂಟೀನ್, ಪೋಲಿಸ್ ಕೇಂದ್ರ ಕಛೇರಿ ಮುಂದೆ ಸರಿದರೆ ಸಂತ ಜೋಸೇಫರ ಶಾಲೆ ಇನ್ನು ಮುಂದೆ ಹೋದರೆ ಮಹದೇವ ಪೇಟೆ ನಗರ ಮಾರುಕಟ್ಟೆ, ಹಾಗೆ ಮುಂದೆ ಸರಿದರೆ ಗದ್ದುಗೆ, ಹಾಗೆ ಇಳಿದರೆ ರಾಜರಾಜೇಶ್ವರಿ ದೇವಸ್ಥಾನ, ಮತ್ತೆ ಮೇಲೆ ಬಂದು ಎಡಕ್ಕೆ ಹೊರಳಿದರೆ ಮನಮೋಹಕ ಅಬ್ಬಿ ಫಾಲ್ಸ್. ಅಬ್ಬಿ ಫಾಲ್ಸ್, ಜಲಪಾತ ಎಂದು ಕರೆಯುವರು ಅಬ್ಬೆ ಅಂದರೆ ಜಲಪಾತ ಮತ್ತೆ ಜಲಪಾತ ಅಥವಾ ಫಾಲ್ಸ್ ಪದಗಳನ್ನು ಸೇರಿಸಿ ಕರೆಯುವುದು ವಾಡಿಕೆ. ಹಾಗೆ ಮುಂದೆ ನಡೆದರೆ ಹಾಲೇರಿ ಕೊಡಗನ್ನು ಆಳಿದ ಪ್ರಮುಖ ರಾಜವಂಶಸ್ಥರ ಅರಮನೆ ಇರುವ ಸ್ಥಳ. 2019ರ ತೀವ್ರ ಗುಡ್ಡಕುಸಿತದಿಂದ ಮೂಲ ನಕ್ಷೆಯನ್ನೆ ಬದಲಿಸಿಕೊಂಡಿರುವ ಸ್ಥಳಗಳಲ್ಲೊಂದು.

2019 ರಲ್ಲಿ ಬಿದ್ದ ಮಳೆಗೆ ಗುಡ್ಡ ಕುಸಿತ ಉಂಟಾದದ್ದರ ಪರಿಣಾಮ ಪೇಟೆ ಮತ್ತು ಹಳ್ಳಿಗರ ವಾಣಿಜ್ಯ ಕೇಂದ್ರವಾಗಿದ್ದ ಪ್ರೈವೇಟ್ ಸ್ಟ್ಯಾಂಡ್ ಧರಾಶಾಹಿಯಾಗಿದ್ದು ಅಸ್ತಿತ್ವವನ್ನೇ ಕಳೆದುಕೊಂಡಂತಾಗಿದೆ. ಇನ್ನೂ ಗುಡ್ಡ ಕುಸಿಯಬಾರದು ಅನ್ನುವ ಕಾರಣಕ್ಕೆ ಬಾರೀ ಗಾತ್ರದ ಲೋಹದ ಬಲೆಯನ್ನೆ ಬೆಟ್ಟಕ್ಕೆ ಅಳವಡಿಸಿದಂತಿದೆ. ಒಂದು ಕಾಲದ ಬಸ್‌ಗಳ ನಿಲ್ದಾಣ ತಾನು ನಿಲ್ಲುವ ತಾಣವನ್ನೇ ಕಳೆದುಕೊಂಡಿದ್ದು ಅತ್ಯಂತ ವಿಷಾದ ಅನ್ನಿಸುತ್ತದೆ. ಸಾಯಿ ಹಾಕಿ ಗ್ರೌಂಡ್ ಗದ್ದೆಗೆ ಅಭಿಮುಖವಾಗಿದ್ದ ಪಿಟಿಎಸ್ ಕ್ವಾಟ್ರಸ್ ನಮಗೆ ಸುಮಧುರ ಬಾಲ್ಯವನ್ನು, ಕಲಿಕೆಯನ್ನು, ಅಸ್ತಿತ್ವವನ್ನು ಕೊಟ್ಟ ಸ್ಥಳ. ಈಗ ಹೇಗಿವೆ ಕ್ವಾಟ್ರಸ್‌ಗಳು? ಎಂದು ತರಾತುರಿಯಿಂದ ಹೋಗಿ ನೋಡುವಷ್ಟರಲ್ಲಿ ಹಳೆಯವು ಮನೆಗಳು ಅನ್ನುವ ಕಾರಣಕ್ಕೆ ಎಲ್ಲವನ್ನು ಒಟ್ಟಿಗೆ ನೆಲಸಮ ಮಾಡಿ ಇಡೀ ಪ್ರದೇಶವನ್ನು ಬಟಾಬಯಲು ಮಾಡಿ ಹಸಿರು ಬಣ್ಣದ ನೆಟ್ ಹೊದಿಸಿದ್ದನ್ನು ನೋಡಿದರೆ ಮನಸ್ಸಿಗೆ ಹೇಗಾಗಬೇಡ? ಉದ್ದೇಶ ಒಳ್ಳೆಯದೆ, ಆದರೆ ಅವೇ ನೆನಪನ್ನು ಉಸಿರಾಗಿಸಿಕೊಂಡವರಿಗೆ ಆ ಅವಸ್ಥೆಯಲ್ಲಿ ಅದನ್ನು ನೋಡಿದರೆ ಸಹಿಸಲು ಸಾಧ್ಯವೆ?

ಇನ್ನು ಒಂದು ಕಾಲಕ್ಕೆ ಭರ್ಜರಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಈಗ ವಾಸದ ಮನೆಗಳಾಗಿವೆ. ತಿಳಿ ನೀರು ಹರಿಯುತ್ತಿದ್ದ ತೋಡು ಮನುಷ್ಯನ ಕೊಳಕು ಆ ತೋಡನ್ನು ಸೇರಿ ಸೇರಿಸಿಕೊಂಡು ಕಪ್ಪಗೆ ಹರಿಯುತ್ತಿದ್ದರೆ ಇದು ಮನುಷ್ಯನ ನಾಗರೀಕತೆಯ ಹಂಬಲದ ಮುಖವಾಣಿ ಅನ್ನಿಸುತ್ತದೆ. ಒಟ್ಟು ನಮ್ಮೂರು ಮಡಿಕೇರಿ ಅಲ್ಲ ಮಡಿಯಾದಕೇರಿ ಈಗ ನಗರೀಕರಣಕ್ಕೆ ಒಳಗುಗೊಳ್ಳುವ ಹಂಬಲದಲ್ಲಿ ಮೂಲ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಅಮ್ಮನ ಪ್ರೀತಿಯ ಉಸಿರಿನಂತೆ ಬೀಸುತ್ತಿದ್ದ ಶುದ್ಧಗಾಳಿ ಈಗ ರಾಡಿಯ ಹೊಲಸನ್ನು ಸೇರಿಸಿಕೊಳ್ಳುತ್ತಿದೆ. ಪದವಿಯವರೆಗೆ ಅಲ್ಲಿಯೇ ಓದಿ ಮುಂದಿನ ಓದಿಗೆ ಕಾಲು ತೆಗೆಯುವಾಗ ಇದ್ದ ಮಡಿಕೇರಿ ಈಗ ಮಾಯವಾಗಿದೆ. ಜನರ ಮಾತಿನ ಶೈಲಿ ಭಿನ್ನವಾಗಿದೆ ಅನ್ನಿಸುತ್ತಿದೆ. ಫ್ಲೋರ್ ಮಿಲ್‌ನಿಂದ ಹಿಡಿದು ಗೂಡಂಗಡಿಗಳು ಮುಚ್ಚಿ ಬೇರೆಯ ರೂಪದಲ್ಲಿ ಇವೆ. ಇದ್ದ ಹಳೆಯ ಕಟ್ಟಡಗಳು ತೆರವಾಗಿ ಮ್ಯಾನಷನ್‌ಗಳು ಟವರ್‌ಗಳಾಗಿವೆ.

ಇನ್ನು ರಸ್ತೆ ಅಗಲೀಕರಣಕ್ಕೆ ಬಟ್ಟೆ ಕಳಚಿದಂತಾಗಿದ್ದ ಕಟ್ಟಡಗಳು ಅನುಕೂಲನೋಡಿಕೊಂಡು ಹೊಸ ಬಟ್ಟೆಯನ್ನೇ ತೊಟ್ಟಂತೆ ಇನ್ನು ಕೆಲವು ಹೀಗೆ ಇರಲಿ ಸೆರಗು ಹರಿದ ಸೀರೆಯನ್ನು, ನೆರಿಗೆ ಕಡಿಮೆಯಾದ ಸೀರೆಯನ್ನೇ ಉಟ್ಟಂತೆ ಇವೆ. ಏನ್ ಹೇಳೋದು ಅಭಿವೃದ್ಧಿ ಆಗಿದ್ದು ಒಳ್ಳೆಯದೋ? ಬದಲಾವಣೆ ಬೇಕಿತ್ತೇ? ಪ್ರಕೃತಿ ವಿಕೋಪ ಯಾಕಾಯಿತು? ಈ ಮುಂತಾದ ಪ್ರಶ್ನೆಗಳಿಗೆ ಉತ್ತರವಿಲ್ಲ! ಮಡಿಕೇರಿ ಮುದಿಯಾಗಿದ್ದರೆ ಚೆನ್ನಾಗಿತ್ತು… ಮದುವಣಗಿತ್ತಿ ಆಗ ಹೊರಟು ಮೂಲ ಸ್ವರೂಪ ಕಳೆದುಕೊಂಡಿರುವುದು ಸತ್ಯ! ಮಡಿಕೇರಿ ಅಂದರೆ ಮಳೆ; ನೆನಪಿಸಿಕೊಂಡಷ್ಟೂ ಮಳೆಯ ಖುಷಿ, ಪೇಚುಗಳು ನೆನಪಾಗುತ್ತವೆ. ಮುಂದಿನ ಬರೆಹದಲ್ಲಿ ಮಡಿಕೇರಿಯ ಮಳೆ… ಮಳೆ…. ಕುರಿತು