“ಆದರೆ ಸ್ವಲ್ಪ ದಿವಸಗಳ ನಂತರ ಅವಳು ಮತ್ತೂ ಸುದ್ದಿಯಾಗಿದ್ದು ಪದ್ದಿ ಮಗ ರಮೇಶ ಅವಳ ಮನೆಗೆ ಹೋಗಿ ಅಲ್ಲಿಯೇ ಠಿಕಾಣಿ ಹೂಡಿದಾಗ.‘ಅರೆ, ಈ ಪದ್ದಿಮಗನಿಗೆಂತ ಮಳ್ಳ ಅಂತ. ಹೋಗಿ ಹೋಗಿ ಆ ನಡತೆಗೆಟ್ಟವಳ ಮನೆಗೆ ಹೋಗಿ ಉಳಕತ್ನಲೀ’ ಎಂದು ಪಕ್ಕದ ಮನೆಯ ಶಾರದಕ್ಕ,ಯಶೋದಕ್ಕ ಎಲ್ಲ ಮಾತನಾಡಿಕೊಳ್ಳುವ ಹೊತ್ತಿಗೆ ರಮೇಶ ತಾನು ಸುರಭಿಯನ್ನು ಮದುವೆಯಾಗುತ್ತೇನೆಂದು ಕೂತಿದ್ದು ಮತ್ತೂ ಸುದ್ದಿಯಾಗಿತ್ತು.”
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಏಳನೆಯ ಕಂತು.

 

ನನಗೆ ಸೂಳೆ ಎನ್ನುವುದರ ಅರ್ಥ ತಿಳಿಯಬೇಕೆಂದು ಅನಿಸಿದ್ದು ತೀರಾ ಚಿಕ್ಕ ವಯಸ್ಸಿನಲ್ಲಿ. ಆಗ ನಾನು ನಾಲ್ಕೋ-ಐದನೆಯದ್ದೋ ತರಗತಿಯಲ್ಲಿದ್ದಿರಬಹುದು. ಅದ್ಯಾವುದೋ ಸಿನಿಮಾವೊಂದರಲ್ಲಿ ಒಬ್ಬಳು ಸೂಳೆ ಎಂದು ಎಲ್ಲರೂ ಬೈದು ಹೊಡೆದು ಅವಳನ್ನು ಅಟ್ಟುವಾಗ ಹಾಗಂದರೇನು, ಯಾಕೆ ಅವಳಿಗೆ ಹೊಡೆಯುತ್ತಿದ್ದಾರೆ, ಅವಳು ಮಾಡಿರುವ ತಪ್ಪಾದರೂ ಏನು ಎಂದು ಅರ್ಥವಾಗಿರಲಿಲ್ಲ. ಮನೆಗೆ ಬಂದು ಅಪ್ಪ-ಅಮ್ಮನಲ್ಲಿ ಹಾಗಂದರೇನೆಂದು ಕೇಳಿದಾಗ ಇಬ್ಬರೂ ಏನೂ ಹೇಳದೆ ಮಾತು ಮರೆಸಿದ್ದು ನನಗೆ ಸರಿಯಾಗಿ ನೆನಪಿದೆ. ನಂತರ ಮನೆಯ ಹಿಂದುಗಡೆಯ ಕಟ್ಟೆ ಮೇಲೆ ನಾಲ್ಕಾರು ಹೆಂಗಸರು ಕೂತು ಊರಿನ ಒಬ್ಬ ಹೆಂಗಸಿನ ಬಗ್ಗೆ ಆಡಿಕೊಂಡು ‘ಅವಳು ಅದಡೆ…ಸೂ..ಯಡೆ..’ಎಂದು ಸ್ವಲ್ಪ ತಗ್ಗಿದ ಧ್ವನಿಯಲ್ಲಿ ಮಾತನಾಡಿಕೊಂಡು ಜೋರಾಗಿ ನಕ್ಕಾಗಲೂ ಆ ಹೆಸರಿನ ಬಗ್ಗೆ ತುಂಬ ಕುತೂಹಲಗೊಂಡು ಅಮ್ಮನಲ್ಲಿ ಕೇಳಿದ್ದೆ, ಹಾಗಂದರೆ ಏನೆಂದು. ಅದಕ್ಕೆ ಅಮ್ಮ ಮೊದಮೊದಲು ಹಾರಿಕೆ ಉತ್ತರ ಕೊಟ್ಟರೂ ಕಡೆಗೆ ನನ್ನ ಹಠ ನೋಡಿ… ಅಷ್ಟು ಚಿಕ್ಕವಳಾದ ನನಗೆ ಈ ಪದದ ಅರ್ಥ ಮಾಡಿಸುವುದು ಹೇಗೆಂದು ತಿಳಿಯದೆ ಒದ್ದಾಡಿ, ಕಡೆಗೆ, “ತುಂಬ ವರ್ಷ ಮದುವೆಯಾಗದೆ ಇರುವ ಹೆಂಗಸರಿಗೆ ಹಂಗೆ ಹೇಳ್ತ’ ಎಂದುಬಿಟ್ಟಿದ್ದಳು. ‘ಹೌದಾ…ಹಂಗಾರೆ ಎಂಗ್ಳ ಶಾಲೆಯ ಆ ಅಕ್ಕೋರಿಗೆ ರಾಶಿ ವರ್ಷ ಆತು, ಮದುವೆನೇ ಆಯ್ದಿಲ್ಲೆ. ಹಂಗರೆ ಅವರು ಸೂಳೆ ಅಲ್ದಾ…’ ಎಂದು ಕೇಳಿದ್ದಕ್ಕೆ ಅಮ್ಮ ಭಯಗೊಂಡು, ‘ಅಯ್ಯೋ ಮಾರಾಯ್ತಿ, ಹಂಗೆಲ್ಲ ಈ ಶಬ್ದ ಹೇಳಲಾಗ, ದೇವ್ರಿಗೆ ಸಿಟ್ಟು ಬಂದುಬಿಡ್ತು, ಸುಮ್ಮಂಗಿರು ಶಾಪ ಕೊಡ್ತ’ ಅಂತೆಲ್ಲ ಹೇಳಿ ನನ್ನ ಬಾಯಿ ಮುಚ್ಚಿಸಿದ್ದಳು.

ಅಷ್ಟರ ನಂತರ ಯಾರಹತ್ರವೂ ಹೇಳದಿದ್ದರೂ ಆ ಅಕ್ಕೋರನ್ನು (ಶಾಲಾ ಶಿಕ್ಷಕಿ) ನೋಡಿದ ಕೂಡಲೇ ಇವರು ಅದಿರಬಹುದು ಎಂಬ ಹೆಸರು ಸುಳಿದು ಹೋಗುತ್ತಿತ್ತು. ಆದರೆ ಕಡೆಗೆ ಅವೆಲ್ಲವೂ ಮರೆತೂ ಹೋಗಿ ನಾನು ಹೈಸ್ಕೂಲೋ.. ಕಾಲೇಜಿಗೋ ಬರುವ ವೇಳೆಗೆ ಮತ್ತೆ ಆ ಶಬ್ದ ಕೇಳುವಂತಾಗಿದ್ದು ಸುರಭಿಯನ್ನು ನೋಡಿದ ಮೇಲೆ. ಅವಳ ಮೂಲ ಹೆಸರು ಏನು ಎಂದು ಯಾರಿಗೂ ಗೊತ್ತಿರಲಿಲ್ಲ.

ಸಿದ್ಧಾಪುರದಲ್ಲೊಂದು ನೆಹರೂ ಮೈದಾನವಿದೆ. ಅದರ ಮುಂದೆ ಹೆಣ್ಣುಮಕ್ಕಳ ಪ್ರೌಢಶಾಲೆ, ಗಂಡುಮಕ್ಕಳ ಪ್ರೌಢಶಾಲೆಯೆಂದು ಪ್ರತ್ಯೇಕವಾಗಿದೆ. ಅದಕ್ಕೆ ತಾಗಿದಂತೆ ರಾಘವೇಂದ್ರಸ್ವಾಮಿ ಮಠವಿದೆ. ಆ ಗಂಡುಮಕ್ಕಳ ಶಾಲೆಯ ಹಿಂದುಗಡೆ ದೊಡ್ಡದಾದ ಗುಡ್ಡವಿದೆ. ಆ ಗುಡ್ಡದ ತುದಿಯೊಂದರಲ್ಲಿ ಗುಡಿಸಲಿನಿಂದ ಅವಳು ಬರುತ್ತಿದ್ದಳು. ಅವಳ ಮನೆಯನ್ನು ಕೂಡ ನಾವ್ಯಾರೂ ನೋಡಿದವರಲ್ಲ. ಆದರೆ ಅವಳು ಪುಟ್ಟ ಮಗನೊಬ್ಬನ ಕೈ ಹಿಡಿದುಕೊಂಡು ಸಿದ್ದಾಪುರದ ಪೇಟೆ ತಿರುಗುವಾಗಲೆಲ್ಲ ಅವರಿವರು ಅವಳ ಹಿಂದೆ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ‘ಅದು ಮದುವೆಗೆ ಮುಂಚೆಯೇ ಹುಟ್ಟಿದ್ದೇ.. ಆದರೂ ಎಷ್ಟು ರಾಜಾರೋಷವಾಗಿ ಓಡಾಡ್ತು ನೋಡು’ ಎಂದೆಲ್ಲ ಹೆಂಗಸರು ಬೈಯ್ಯುತ್ತಿದ್ದರು. ಆದರೆ ಅವಳು ಮಗನ ಕೈಹಿಡಿದು ಅ ಕಾಲಕ್ಕೆ ಸ್ವಲ್ಪ ಹೊಸದೆನಿಸಿದ ಚೂಡಿದಾರವನ್ನು ಹಾಕಿ ಹೊರಟಳೆಂದರೆ ಬೀದಿಯಲ್ಲಿರುವ ಮಹಿಳೆಯರು ಹುಡುಗಿಯರೆಲ್ಲ ವಿಶೇಷವೇನೋ ನೋಡುವಂತೆ ಕುತೂಹಲದಿಂದ ನೋಡುತ್ತಿದ್ದರು. ಅವಳು ಮಾತ್ರ ಇವರೆಲ್ಲ ತನ್ನ ನೋಡುತ್ತಿದ್ದಾರೆಂದು ತಿಳಿದಿದ್ದರೂ ಯಾವುದರ ಎಗ್ಗೂ ಇಲ್ಲದೆ, ತನ್ನಷ್ಟಕ್ಕೆ ತಾನು ತಲೆ ಎತ್ತಿ ನಡೆಯುತ್ತಿದ್ದಳು ತನ್ನ ಮಗನನ್ನೂ ಕರೆದುಕೊಂಡು.

ಅವಳ ಈ ಸ್ಥಿತಿಗೆ ಕಾರಣರಾದವರು ಯಾರಿರಬಹುದು ಎಂದು ಯಾರೊಬ್ಬರೂ ಯೋಚಿಸಲಿಲ್ಲ. ಒಟ್ಟಿನಲ್ಲಿ ಅವಳನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಮಾತನಾಡುತ್ತಿರಲಿಲ್ಲ. ಆದರೇನಂತೆ… ಅವಳಂತೂ ಯಾವುದಕ್ಕೂ ಕಡಿಮೆ ಮಾಡಿಕೊಳ್ಳುತ್ತಿರಲಿಲ್ಲ. ಸಿದ್ದಾಪುರದಲ್ಲಿ ನಾಟಕ, ಸಿನಿಮಾ, ಯಕ್ಷಗಾನ ಯಾವುದೇ ಬರಲಿ ಅದನ್ನು ಒಬ್ಬಳೇಹೋಗಿ ಕೂತು ನೋಡಿ ಬರುತ್ತಿದ್ದಳು. ಅವಳು ಒಬ್ಬಳೇ ಬರುತ್ತಾಳೆ ಎಂಬುದೇ ದೊಡ್ಡ ಸುದ್ದಿ. ಸಿನಿಮಾ ಶುರುವಾಗುವುದಕ್ಕಿಂತಲೂ ಮುಂಚೆ ಅವಳನ್ನು ಎಲ್ಲರೂ ತಿರುತಿರುಗಿ ನೋಡುತ್ತಿದ್ದರು ಮತ್ತು ತಮ್ಮತಮ್ಮಲ್ಲೇ ಏನೇನೋ ಗುಸುಗುಸು ಮಾತನಾಡಿಕೊಂಡು ಕಿಸಕ್ಕನೆ ನಗುತ್ತಿದ್ದರು ಕೂಡ.

ಅವಳು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಪ್ರತಿದಿವಸ ಸಂಜೆ ಹೊತ್ತಿಗೆ ವ್ಯಾನಿಟಿ ಬ್ಯಾಗ್ ಏರಿಸಿಕೊಂಡು, ತುಟಿಗೆ ಲಿಪ್‍ ಸ್ಟಿಕ್ ಬಳಿದುಕೊಂಡು ಚೂಡಿದಾರ ಹಾಕಿಕೊಂಡು ಹೊರಡುವ ಸುರಭಿಯನ್ನು ನೋಡುವ ಹೊತ್ತಿಗೆ ಸೂ.. ಅಂದರೇನೆಂಬುದು ಅಷ್ಟೊತ್ತಿಗೆ ನನಗೆ ಅರ್ಥವಾಗಿಹೋಗಿತ್ತು. ಅದಕ್ಕೆ ಅಮ್ಮನಲ್ಲಿ ಹಾಗಂದರೇನೆಂದು ಕೇಳುವ ಸಾಹಸಕ್ಕೆ ಹೋಗಿರಲಿಲ್ಲ. ಅಷ್ಟೊತ್ತಿನಲ್ಲಿ ಪ್ಯಾಟೇಲಿ ಅವಳಿಗೆಂಥ ಕೆಲಸ. ಯಾರ್ಯಾರನ್ನು ಮರಳು ಮಾಡಿ ಬರವೇನ ದರಿದ್ರಕ್ಕೆ..’ ಎಂದೆಲ್ಲ ಅವರಿವರ ಮನೆಯ ಹೆಂಗಸರು ಹೇಳುವಾಗ, ಅದ್ಯಾರನ್ನು ಮರಳು ಮಾಡುತ್ತಾಳೆ.. ಅವಳು ಹೇಗೆ ಬದುಕುತ್ತಾಳೆ ಎಂಬೆಲ್ಲ ಕುತೂಹಲ ಮೂಡಿದ್ದಂತೂ ನಿಜ. ಆದರೆ ಜನ ಏನೇ ಆಡಿಕೊಳ್ಳಲಿ ಅವಳು ಮಾತ್ರ ಅವಳ ಪಾಡಿಗೆ ಇರುತ್ತಿದ್ದಳು ಯಾವುದನ್ನು ಕಿವಿಗೆ ಹಾಕಿಕೊಳ್ಳದೆ. ಈ ಜನ ಕೂಡ ಅವಳ ಕುರಿತು ಮಾತಾಡಿ ಆಡಿ ಬಾಯಿ ಸೋತು ಕಡೆಗೆ ಅವರೂ ಸುಮ್ಮನಾದರು.

ಆದರೆ ಸ್ವಲ್ಪ ದಿವಸಗಳ ನಂತರ ಅವಳು ಮತ್ತೂ ಸುದ್ದಿಯಾಗಿದ್ದು ಪದ್ದಿ ಮಗ ರಮೇಶ ಅವಳ ಮನೆಗೆ ಹೋಗಿ ಅಲ್ಲಿಯೇ ಠಿಕಾಣಿ ಹೂಡಿದಾಗ. ‘ಅರೆ, ಈ ಪದ್ದಿಮಗನಿಗೆಂತ ಮಳ್ಳ ಅಂತ. ಹೋಗಿ ಹೋಗಿ ಆ ನಡತೆಗೆಟ್ಟವಳ ಮನೆಗೆ ಹೋಗಿ ಉಳಕತ್ನಲೀ’ ಎಂದು ಪಕ್ಕದ ಮನೆಯ ಶಾರದಕ್ಕ, ಯಶೋದಕ್ಕ ಎಲ್ಲ ಮಾತನಾಡಿಕೊಳ್ಳುವ ಹೊತ್ತಿಗೆ ರಮೇಶ ತಾನು ಸುರಭಿಯನ್ನು ಮದುವೆಯಾಗುತ್ತೇನೆಂದು ಕೂತಿದ್ದು ಮತ್ತೂ ಸುದ್ದಿಯಾಗಿತ್ತು.

ಈ ಪದ್ದಿ ಯಾರೆಂದರೆ ಅವಳಿಗೂ ಗಂಡ ಸತ್ತು ತುಂಬ ವರ್ಷಗಳಾಗಿ, ಅಲ್ಲೇ ಗುಡ್ಡದ ಸಮೀಪ ಸ್ವಲ್ಪ ಅಕ್ರಮ ಭೂಮಿಯನ್ನೇ ಬೇಲಿಹಾಕಿ, ತನ್ನದೇ ಎಂದು ಅಲ್ಲಿ ಒಂದಷ್ಟು ತೆಂಗಿನ ಗಿಡ, ಗೇರುಗಿಡಗಳನ್ನು ಹಾಕಿಕೊಂಡು ಗುಡಿಸಲಿನಂತಹ ಮನೆ ಕಟ್ಟಿಕೊಂಡು ವಾಸವಾಗಿದ್ದಳು. ಅವಳ ಗಂಡ ಸತ್ತು ಹೋಗಿದ್ದಾನಾ ಅಥವಾ ಓಡಿ ಹೋಗಿದ್ದಾನಾ ಎಂಬುದು ಸರಿಯಾಗಿ ಗೊತ್ತಿರಲಿಲ್ಲ. ಆದರೆ ಅವಳಿಗಿರುವ ಒಬ್ಬನೇ ಮಗ ರಮೇಶ ಆಗಲೇ ಅಪಾಪೋಲಿ ಎಂದು ಹೆಸರು ಪಡೆದಿದ್ದ. ಉಡಾಫೆಯಾಗಿ ತಿರುಗುತ್ತ ಸರಿಯಾಗಿ ಓದಲೂ ಇಲ್ಲ. ಮಗನನ್ನು ಸರಿದಾರಿಗೆ ತರಬೇಕೆಂಬ ಪದ್ದಿಯ ಪ್ರಯತ್ನವೆಲ್ಲ ನೀರಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ಅಂಥ ಸಂದರ್ಭದಲ್ಲೇ ಅವನನ್ನು ನನ್ನ ಹತ್ತಿರ ಟ್ಯೂಷನ್‍ ಗೂ ಹಾಕಿದ್ದಳು ಪದ್ದಿ. ನಿನ್ನ ತಮ್ಮ ಹೇಳಿ ಅನ್ಕ ತಂಗಿ. ಎನ್ನ ಮಗಂಗೆ ಕಲಿಸಿಕೊಡು ಎಂದು ತಿಂಗಳಿಗೆ 20 ರೂ.ಕೊಟ್ಟು ಕಳಿಸುತ್ತಿದ್ದಳು. ಟ್ಯೂಷನ್‍ ಗೆ ಅವ ಬಂದರೆ ಬಂದ, ಇಲ್ಲದಿದ್ದರೆ ಇಲ್ಲ. ಹೀಗೆ ಅವ ಬರದೇ ಹೋದರೆ ಕಲಿಸುವುದಾದರೂ ಏನನ್ನು. ಕಡೆಗೊಂದು ದಿನ ಚೆನ್ನಾಗಿ ಬೈದ ಮೇಲೆ ಅವ ಬರುವುದನ್ನೇ ಬಿಟ್ಟ.

ಅವಳ ಈ ಸ್ಥಿತಿಗೆ ಕಾರಣರಾದವರು ಯಾರಿರಬಹುದು ಎಂದು ಯಾರೊಬ್ಬರೂ ಯೋಚಿಸಲಿಲ್ಲ. ಒಟ್ಟಿನಲ್ಲಿ ಅವಳನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಮಾತನಾಡುತ್ತಿರಲಿಲ್ಲ. ಆದರೇನಂತೆ… ಅವಳಂತೂ ಯಾವುದಕ್ಕೂ ಕಡಿಮೆ ಮಾಡಿಕೊಳ್ಳುತ್ತಿರಲಿಲ್ಲ. ಸಿದ್ದಾಪುರದಲ್ಲಿ ನಾಟಕ, ಸಿನಿಮಾ, ಯಕ್ಷಗಾನ ಯಾವುದೇ ಬರಲಿ ಅದನ್ನು ಒಬ್ಬಳೇಹೋಗಿ ಕೂತು ನೋಡಿ ಬರುತ್ತಿದ್ದಳು.

ಅಂಥ ಅಪಾಪೋಲಿ, ಕೆಲಸಕ್ಕೆ ಬಾರದವ ಎಂದೆಲ್ಲ ಖ್ಯಾತಿ ಪಡೆದವ ಇದ್ದಕ್ಕಿದ್ದ ಹಾಗೆ ಸುರಭಿ ಮನೆಯ ಜಗುಲಿಯಲ್ಲಿನಿಂತು ನಿನ್ನ ಮದುವೆಯಾಗುತ್ತೇನೆ ಎಂದು ಹೇಳಿ ಸುರಭಿಗೂ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದು ಮಾತ್ರ ಸಖೇದಾಶ್ಚರ್ಯವಾಗಿ ಹೋಗಿತ್ತು. ಇವನಿಗೆಲ್ಲಿಯ ಈ ನಮನಿ ಕ್ರಾಂತಿಕಾರಿ ವಿಚಾರ ತಲೆಯಲ್ಲಿ ಹೊಳೆದಿರಬಹುದು, ಯಾವ ಸಿನಿಮಾದ ಪ್ರಭಾವ ಇರಬಹುದು ಎಂದೆಲ್ಲ ಯೋಚಿಸತೊಡಗಿದರು. ಸ್ವತಃ ಸುರಭಿಗೂ ಸಿಟ್ಟು ಬಂದು ‘ಹೋಗ್ತೀಯಾ ಇಲ್ವಾ’ ಎಂದು ಮೂಲೆಯಲ್ಲಿರುವ ಪೊರಕೆ ಹಿಡಿದು ನಿಂತಳು. ಅಷ್ಟಾದರೂ ಅವ ‘ನಿನ್ನ ಎಲ್ಲರೂ ನೋಡಿ ಆಡ್ಕೋತಾರೆ. ನಾನು ನಿನ್ನ ಮದುವೆ ಆದ್ರೆ ಆ ಸಮಸ್ಯೆ ಇರೋದಿಲ್ಲ’ ಎಂದೆಲ್ಲ ಹೇಳಿಕೊಂಡು ಅಲ್ಲೇ ಜಗುಲಿಯ ಮೇಲೆ ಪಟ್ಟಾಗಿ ಕೂತುಬಿಟ್ಟ ಪರಿಗೆ ಸುರಭಿಗೆ ಏನೂ ಮಾಡಲು ತೋಚದೆ ಒಳಗೆದ್ದು ಹೋದರೆ ಅವಳ ಪುಟ್ಟ ಮಗ ಈ ರಮೇಶನ ಹತ್ರ ಬಂದು ಆಟವಾಡತೊಡಗಿದ. ಅವನದೂ ಹೆಚ್ಚೂಕಮ್ಮಿ ಆಟವಾಡ ವಯಸ್ಸೇ ಆಗಿತ್ತು.

ಎಸ್ಸೆಸ್ಸೆಲ್ಸಿಯಲ್ಲಿ 3ಸಲ ಢುಮ್ಕಿ ಹೊಡೆದು ಇನ್ನು ಅವನ ತಲೆಗೆ ಓದು ಹತ್ತೋದಿಲ್ಲ ಎಂದು ಗೊತ್ತಾಗಿ ಪದ್ದಿ ಅವನನ್ನು ಓದಿಸುವ ಆಸೆ ಬಿಟ್ಟುಬಿಟ್ಟಿದ್ದಳು. ಅಂಥವ ಸಿದ್ದಾಪುರದ ಬಸ್‍ ಸ್ಟ್ಯಾಂಡಿನಲ್ಲಿ ನಿಂತು ಪ್ಯಾಟಿಗೆ ಹೋಗಿ ಬಂದು ಮಾಡುವ ಹುಡಿಗೀರನ್ನೆಲ್ಲ ಚುಡಾಯಿಸುತ್ತಿದ್ದ ಒಂದಷ್ಟು ಸಾಬರು, ಕೊಂಕಣಿ ಹುಡುಗ್ರ ಜೊತೆಗೆ ಸೇರಿಕೊಂಡು ಸಿಗರೇಟು ಸೇದೋದು, ಕವಳ ಹಾಕಿಕೊಂಡು ಅವರ ಜೊತೆಯೇ ಬಿದ್ದಿರುತ್ತಿದ್ದ. ಆ ಹುಡುಗರೆಲ್ಲ ಶ್ರೀಮಂತರಮನೆಯ ಹುಡುಗರಾಗಿದ್ದರು. ಹಾಗಾಗಿ ಕಾಲೇಜಿಗೆ ಹೋಗುವುದು ಕೂಡ ಹೆಣ್ಣುಮಕ್ಕಳನ್ನು ನೋಡಿಕೊಂಡು ತಮಾಶೆಮಾಡಿ ಜಾಲಿಯಾಗಿರಲು ಎಂದೇ ಭಾವಿಸುವವರ ನಡುವೆ ಈ ರಮೇಶನೂ ಸೇರಿಕೊಂಡದ್ದು ಆಶ್ಚರ್ಯವೇನೂ ಆಗಿರಲಿಲ್ಲ. ಅವರೂ ಈ ರಮೇಶನನ್ನೂ ತಮಾಶೆಮಾಡಿ, ಅವನಿಂದ ಚಿಕ್ಕಪುಟ್ಟ ಕೆಲಸ ಮಾಡಿಸಿಕೊಂಡು ಆರಾಮವಾಗಿರುತ್ತಿದ್ದರು. ಅಂಥವರು ದಿನಾ ಪ್ಯಾಟಿಗೆ ಬಂದು ಹೋಗುವ ಸುರಭಿಯನ್ನು ನೋಡಿ ತಮಾಶೆಮಾಡದೇ ಬಿಟ್ಟಾರೆಯೇ? ‘ಏನಾ.. ಇವತ್ತು ನಾನು ಹೋಗುತ್ತೇನೆ ಅವಳ ಮನೆಗೆ’ ಎಂದೊಬ್ಬ ಹೇಳಿದರೆ, ‘ನೀನು ನಾಳೆ ಹೋಗೋ’ ಎಂದು ಮತ್ತೊಬ್ಬ ಹೇಳುತ್ತಿದ್ದ. ಆಗ ‘ಬೇಡಪ್ಪ ಮಾರಾಯ, ಹಾಗೆಲ್ಲ ಹೋದರೆ ಅವಳ ಗಂಡ ಬಂದುಬಿಟ್ಟರೆ.. ಅಯ್ಯೋ ಅವಳಿಗೆಲ್ಲಿಯ ಗಂಡನಾ. ಮದುವೆನೇ ಆಗ್ಲಿಲ್ಲ..’ ಹೀಗೇ ಸಾಗುತ್ತಿತ್ತು ಅವರ ಮಾತಿನ ಧಾಟಿ. ಅವಳು ಬಸ್‍ ಸ್ಟ್ಯಾಂಡ್ ಹಾದು ಹೋಗುವಾಗಲೆಲ್ಲ ಈ ಹುಡುಗರು ರೇಟೆಷ್ಟಿರಬಹುದು ಒಂದು ಸಲಕ್ಕೆ’ ಎಂದು ಅವಳಿಗೆ ಕೇಳುವಂತೆಯೇ ಹೇಳುತ್ತಿದ್ದರು. ಇಷ್ಟೆಲ್ಲ ಆದರೂ ಅವರೊಂದಿಗೆ ಸೇರಿಕೊಂಡು ಇತರೆ ಪುಂಡಾಟಿಕೆಯನ್ನು ರಮೇಶ ಮಾಡುತ್ತಿದ್ದರೂ ಸುರಭಿಯನ್ನು ಹಾಗೆಲ್ಲ ಆಡಿಕೊಳ್ಳುವುದು ಅವನಿಗ್ಯಾಕೋ ಸರಿ ಅನಿಸುತ್ತಿರಲಿಲ್ಲ. ಅದಕ್ಕೂ ಕಾರಣವಿತ್ತು. ಹಾಗೆ ಆಡಿಕೊಂಡಾಗಲೆಲ್ಲ ಅವನಿಗೆ ಅವನಮ್ಮ ಪದ್ದಿಯೇ ಕಣ್ಣುಮುಂದೆ ಬರುತ್ತಿದ್ದಳು.

ಅಮ್ಮ ಕಣ್ಣೀರು ಹಾಕುತ್ತ ಕೂರುತ್ತಿದ್ದುದು, ತಾನು ದುಡ್ಡು ಬೇಕೆಂದು ಹಠ ಮಾಡಿದಾಗಲೆಲ್ಲ ದುಡ್ಡಿಲ್ಲದೆ ಕಣ್ಣೀರು ತುಂಬಿಕೊಂಡು ‘ಎಲ್ಲಿಂದ ತರಲಿ ತಮಾ..’ ಎಂದು ಅಸಹಾಯಕತನದಿಂದ ಕೈಚೆಲ್ಲುತ್ತಿದ್ದುದು, ಆಗಾಗ ಮನೆಗೆ ಬಂದು ಹೋಗುವ ಒಡ್ಡೂರಿನ ಹೆಗಡೇರ ಬಳಿ ಅಮ್ಮ ತನ್ನ ಹೆಸರು ಹೇಳಿ ಮೈಯೆಲ್ಲ ಹಿಡಿ ಮಾಡಿಕೊಂಡು ದುಡ್ಡು ಕೇಳುತ್ತಿದ್ದುದು ಇವನ್ನೆಲ್ಲ ನೋಡಿದ ರಮೇಶನಿಗೆ ತನಗೆ ಶಾಲೆಯೂ ಬೇಡ ಎಂಥದ್ದೂ ಬೇಡ ಎಂದೆನಿಸಿದ್ದು ಅದೆಷ್ಟು ಬಾರಿಯೋ. ಅದಕ್ಕೇ ಓದನ್ನು ಅರ್ಧಕ್ಕೇ ನಿಲ್ಲಿಸಿ ತಾನೂ ಕೆಲಸಕ್ಕೆ ಸೇರಬೇಕೆಂದು ಅಲ್ಲಿಇಲ್ಲಿ ಓಡಾಡಿಕೊಂಡಿರುತ್ತಿದ್ದ. ಆದರೆ ಅವನಿಗೆ ಕೆಲಸ ಸಿಗಲಿಲ್ಲವೋ, ಇವನೇ ಸರಿಯಾಗಿ ಕೆಲಸ ಮಾಡಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲಿಯೂ ಕೆಲಸ ಇಲ್ಲದೆ ಉಂಡಾಡಿಗುಂಡನಂತೆ ಇದ್ದವನ ಕಣ್ಣುಮುಂದೆ ಇವೆಲ್ಲ ಹಾದು ಹೋಗಿ, ಸುರಭಿಯನ್ನು ಆಡಿಕೊಳ್ಳಲು ಅವನಿಗೆ ಮನಸ್ಸೇ ಆಗುತ್ತಿರಲಿಲ್ಲ. ಅದಕ್ಕೆ ಈ ಹುಡುಗರು ತಮಾಷೆ ಮಾಡಿದಾಗಲೆಲ್ಲ ಅವನು ಕೆರಳುತ್ತಿದ್ದ. ‘ನಿಮಗೇನು ಗೊತ್ತು ಅವಳಿಗಿರುವ ಕಷ್ಟ ಏನೆಂಬುದು, ಇಷ್ಟಕ್ಕೂ ನೀವೇನು ಹೋಗಿ ನೋಡಿದ್ದೀರ, ಅವಳು ಯಾರಜೊತೆ ಇದ್ದಾಳೆ ಎಂದು. ಸುಮ್‍ ಸುಮ್ನೆ ಹಾಗೆಲ್ಲ ಹೇಳಬಾರದು’ ಎಂದು ಹೇಳಿದ್ದಕ್ಕೆ ಅವರ ಗುಂಪಿನ ಪೈಕಿ ಕುಳ್ಳ ಗಿರೀಶ ‘ಏನಾ.. ಬಾರೀ ವಹಿಸ್ಕೊಂಡು ಬರ್ತಿ ಅವಳನ್ನು. ಏನ್ ಸಮಾಚಾರ’ ಎಂದು ಚುಡಾಯಿಸಿದ. ಮತ್ತೊಬ್ಬ, ‘ಈ ರಮೇಶನೇ ಹೋಗ್ತಾನೋ ಏನೋ’ ಎಂದು ಹೇಳಿದ. ಸುಮ್ನಿರಿ ಎಂದು ರಮೇಶನೂ ಅಷ್ಟೇ ಜೋರಾಗಿ ಹೇಳಿದ್ದಕ್ಕೆ, ಅಷ್ಟೆಲ್ಲ ನಿಂಗೆ ಅವಳಮೇಲೆ ಅಕ್ಕರೆ ಇದ್ದರೆ ಅವಳನ್ನು ಮದುವೆಯಾಗು ನೋಡುವಾ… ಎಂದದ್ದು ಆ ಗುಂಪಿಗೆ ಲೀಡರ್ ಆದವ ಅಕ್ರಂ. ಅವ ಹೇಳಿದ್ದು ಕೇಳಿ ಉಳಿದವರೂ ಸ್ವಲ್ಪ ದಂಗಾಗಿ ಹೋದರು.

ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡನೋ ಏನೋ.. ರಮೇಶ ಆಯ್ತು ನಾನು ಅವಳನ್ನೇ ಮದುವೆಯಾಗುತ್ತೇನೆಂದು ಅಲ್ಲಿಂದ ಹೊರಟೇಬಿಟ್ಟ, ಕಿಶೋರ, ಗಿರೀಶ ಎಲ್ಲ ಕೂಗಿ ಕರೆದರೂ ಲೆಕ್ಕಿಸದವನಂತೆ. ಅಲ್ಲಿಂದ ಸೀದಾ ಅವನು ಹೋಗಿ ಕುಳಿತದ್ದು ಸುರಭಿ ಮನೆಯ ಜಗುಲಿಯಲ್ಲಿ. ಗುಡಿಸಲಿನಂಥ ಆ ಮನೆಯಲ್ಲಿ ಸುರಭಿ ಮತ್ತು ಅವಳ ಮಗ ಮತ್ತು ಅವಳಮ್ಮ ಮೂವರು ಇರುತ್ತಿದ್ದರು. ಹೀಗೆ ಪುಟ್ಟ ಹುಡಗನಂತಿರುವ ರಮೇಶನನ್ನು ಅವಳೂ ಆಗಾಗ ಆ ಸಾಬರ ಹುಡುಗರ ಗುಂಪಿನಲ್ಲಿ ನೋಡಿದ್ದಳು. ಆ ಗುಂಪು ತನ್ನನ್ನು ಚುಡಾಯಿಸುತ್ತದೆಂದೂ ಗೊತ್ತಿತ್ತು. ಆದರೆ ಊರಿನ ಹೆಂಗಸರೇ ತನ್ನನ್ನು ಆಡಿಕೊಂಡು ನಗುವಾಗ, ಪಾಪ, ಈ ಹುಡುಗರಿಗೇನು ಗೊತ್ತಾಗುತ್ತದೆಂದು ಆ ಕುರಿತು ತಲೆಕೆಡಿಸಿಕೊಳ್ಳದೆ ಇದ್ದಳು ಸುರಭಿ. ಈ ರಮೇಶ ತನ್ನ ಹಾಗೆಯೇ ಒಂಟಿ ಹೆಂಗಸು ಪದ್ದಿಯ ಮಗ ಎಂಬುದು ಗೊತ್ತು. ಪದ್ದಿಯೂ ತನ್ನ ಹಾಗೆಯೇ ಎಂದಿದ್ದರೂ ತನಗಿಂತ ಉತ್ತಮ ಸ್ಥಿತಿಯಲ್ಲಿದ್ದಾಳೆ. ಯಾಕೆಂದರೆ ಅವಳು ಬ್ರಾಹ್ಮಣ ಹೆಂಗಸು. ತಾನು ಹೇಳಿಕೇಳಿ ಹೆಸರಿಲ್ಲದ ಜಾತಿಯವಳು. ತನಗೆ ಯಾರೆಂದರೆ ಯಾರೂ ಇಲ್ಲದವಳು. ಅಂಥ ತನ್ನ ಮನೆಗೆ ಇವ ಬಂದು ಕೂತಿದ್ದು ನೋಡಿ ಅವಳಿಗೆ ಸಿಟ್ಟು ನೆತ್ತಿಗೇರಿಬಿಟ್ಟಿತು. ತನ್ನ ಬದುಕೇ ಏರುಪೇರಾಗಿದೆ. ತಾನೇ ಮಗನನ್ನು ಸಾಕುವ, ತನ್ನ ಬದುಕನ್ನು ಮುನ್ನಡೆಸುವ ಕಷ್ಟದಲ್ಲಿದ್ದೇನೆ. ಅಂಥದ್ದರಲ್ಲಿ ಇವನದ್ದು.

ಖರೆ ಹೇಳಬೇಕೆಂದರೆ ಸುರಭಿಗೆ ಅವನು ಅಲ್ಲಿ ಬಂದು ಕೂತಾಗಲೂ ಅವನೇಕೆ ಬಂದಿದ್ದಾನೆಂದು ತಿಳಿದಿರಲಿಲ್ಲ. ಅದುವರೆಗೆ ಅವಳ ಮನೆಗೆ ಯಾರೂ ಹೀಗೆಲ್ಲ ಹಗಲು ಹೊತ್ತು ಬಂದಿರಲಿಲ್ಲ. ಅಂಥದ್ದರಲ್ಲಿ ಹರೆಯದ ಹುಡಗನೊಬ್ಬ, ಆಗಷ್ಟೇ ಮೀಸೆ ಚಿಗುರುತ್ತಿದ್ದ, ಗಡ್ಡವಿನ್ನೂ ಬರದ ಹುಡುಗನೊಬ್ಬ ಹೀಗೆ ಬಂದು ಪಟ್ಟಾಗಿ ಕುಳಿತಿದ್ದು ನೋಡಿ ಆಶ್ಚರ್ಯವಾಗಿ ‘ಯಾಕೆ ಬಂದಿದ್ದೀಯ ನೀನು.’ ‘ಸುರಬೀ ನಾನು ನಿನ್ನನ್ನು ಮದುವೆಯಾಗುತ್ತೇನೆ’ ಒಂದೇ ಏಟಿಗೆ ಹೇಳಿದ ರಮೇಶನ ಮಾತುಗಳನ್ನು ಕೇಳಿ ಒಂದುಸಲ ಸುರಭಿಗೆ ಏನು ಹೇಳುತ್ತಿದ್ದಾನೆ ಇವ ಎಂದೇ ಅರ್ಥವಾಗಲಿಲ್ಲ. ಸುಮ್ಮನೆ ಅವನನ್ನು ನೋಡುತ್ತ ನಿಂತಳು. ರಮೇಶ ಮತ್ತೆ ಮತ್ತೆ ಒತ್ತಿ ಹೇಳಿದ, ‘ನಾನು ನಿನ್ನನು ಮದುವೆಯಾಗುತ್ತೇನೆ. ಆಗ ನಿನ್ನ ಸೂಳೆ ಎಂದು ಎಲ್ಲರೂ ಆಡಿಕೊಳ್ಳುವುದು ತಪ್ಪುತ್ತದೆ’ ಎಂದ. ಅವನು ಹೇಳಿದ ಮಾತುಗಳು ನಿಧಾನಕ್ಕೆ ಅರ್ಥವಾಗತೊಡಗಿತು ಸುರಭಿಗೆ. ಅವನ ಒಂದೊಂದೇ ಮಾತುಗಳನ್ನು ಅರಗಿಸಿಕೊಳ್ಳತೊಡಗಿದಳು. ನಂತರ ಎದ್ದು ಅವನ ಕಾಲರ್ಪೆಟ್ಟಿ ಹಿಡಿದು, ‘ಏಯ್. ನೀ ಎಂತ ಎನ್ನ ಮದುವೆಯಾಗೋದು. ನನ್ನ ತಮ್ಮನ ವಯಸ್ಸು ನಿಂಗೆ. ಬುದ್ಧಿ ಇದೆಯಾ, ಮೊದಲು ಓದೋದು ಬರೆಯೋದು ನೋಡು ಹೋಗು, ನಿನ್ನಮ್ಮನನ್ನು ನೋಡಿಕೋ’ ಎಂದು ಜೋರು ಮಾಡಿದಳು.

ಆದರೂ ಮದುವೆ ಎಂಬ ಶಬ್ದವೇ ಅವಳ ಕಿವಿಗೆ ಕಾದ ಸೀಸ ಹೊಯ್ದಂತೆ ಆಗುತ್ತಿತ್ತು. ಇಂಥದ್ದೇ ಶಬ್ದವನ್ನು ಅವಳು ಅವನ ಬಾಯಲ್ಲಿ ಕೇಳಿದ್ದಳು. ಹಾಗೆ ಕೇಳುವಾಗ ಅದೆಷ್ಟು ಹಿತವಾಗಿತ್ತದು.. ಅವಳಿಗೆ ಆ ನೆನಪಲ್ಲಿ ರಮೇಶನ ಕಾಲರ್ ಪಟ್ಟಿ ಹಿಡಿದ ಹಿಡಿತ ಸಡಿಲವಾಯಿತು.

ಬಹುಶಃ ತನಗಾಗ ಇವನಷ್ಟೇ ವಯಸ್ಸಿರಬಹುದು. ಅದೆಷ್ಟು ಕನಸುಗಳು. ಅದೆಷ್ಟು ಭ್ರಮೆಗಳು. ಬದುಕೆಂದರೆ ತನಗಾಗಿಯೇ ಇರುವಂಥದ್ದು ಎಂಬ ಭ್ರಮೆ. ಅಂಥ ಭ್ರಮೆಯಲ್ಲೇ ಅವನು ಸಿಕ್ಕಿದ್ದು. ತನ್ನ ಕನಸುಗಳಿಗೆ ಬಣ್ಣ ತುಂಬಿದ್ದು. ಕೂಲಿ ಮಾಡಿ ಹೊಟ್ಟೆತುಂಬಿಸುವ ಅಪ್ಪ ಅಮ್ಮ. ಅಂಥ ಬಡತನದಲ್ಲೂ ಅದೆಂಥ ಸುಖ. ಲಾರಿ ಡ್ರೈವರ್ ಕೆಲಸ ಮಾಡುತ್ತಿದ್ದ ಅವನು ಆಗಾಗ ಪಕ್ಕದ ಮನೆಗೆ ಬರುತ್ತಿದ್ದ. ಹಾಗೆ ಬಂದ ಅವನು, ಪಕ್ಕದಲ್ಲೇ ಇರುವ ಇವಳು, ಇಬ್ಬರೂ ನೋಡುತ್ತ ಬದುಕನ್ನು ಬೆಸೆಯುವ ಕನಸುಕಂಡವರು. ಅವಳ ಕನಸಿಗೆ ನೀರೆರೆದವನು. ಅವರಿಬ್ಬರ ಕತೆ ಮನೆಯಲ್ಲಿ ಅಪ್ಪ-ಅಮ್ಮನಿಗೆ ತಿಳಿಯುವುದು ಬಹಳ ದಿವಸಗಳೇನಾಗಲಿಲ್ಲ. ಅಪ್ಪ ನಾಕು ಪೆಟ್ಟು ಕೊಟ್ಟು ಸುಮ್ಮನೇ ಮನೇಲಿ ಬಿದ್ದಾಗ, ಹೇಳಿಕೇಳಿ ಲಾರಿ ಡ್ರೈವರ್. ಇವತ್ತಿಲ್ಲಿದ್ದರೆ ಮುಂದೆ ಯಾವ ಊರೋ, ಯಾವ ಮನೆಯೋ.. ಅಂಥವನನು ನಂಬಿಕೊಂಡಿದ್ದೀಯಾ ಎಂದು ತಾಕೀತು ಮಾಡಿದರು. ಆದರೆ ಯಾವ ಎಚ್ಚರಿಕೆಯನ್ನೂ ಕೇಳುವ ವಯಸ್ಸು ಅದಾಗಿರಲೇ ಇಲ್ಲ.

ಆದರೆ ಸುರಭಿ 2 ತಿಂಗಳು ಹೊರಗಾಗದೇ ಇದ್ದಾಗ ಭಯಗೊಂಡು ಅವನನ್ನು ನೋಡುವ ಹೊತ್ತಿಗೆ ಅವ ನಾಪತ್ತೆಯಾಗಿದ್ದ. ಅದುವರೆಗೆ ಯಾವ ಲಾರಿ, ಲಾರಿ ಯಜಮಾನ ಯಾರು, ಎತ್ತ ಎಂದು ಒಂದನ್ನೂ ನೋಡದೆ ಅವನನ್ನು ಪ್ರೀತಿಸಿದವಳು ಸುರಭಿ. ಈಗ ಅವನನ್ನೆಲ್ಲೀಂತ ಹುಡುಕೋದು. ಅಪ್ಪ ಹೇಳಿದಹಾಗೆ ಯಾವ ಲಾರಿಯೋ, ಯಾವ ಊರೋ…? ಸುರಭಿಗೆ ಅಳುವುದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಅವಳು ಇಂದು ಬಂದಾನು, ನಾಳೆ, ನಾಡಿದ್ದು… ಬಂದಾನು ಎಂದು ಕಾಯುತ್ತಲೇ ಹೋದಳು. ಅವ ಮಾತ್ರ ಬರಲೇ ಇಲ್ಲ. ಅವನ ನೆನಪು ಮಾತ್ರ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಮನೆಯಲ್ಲಿ ಅಪ್ಪ ಅಮ್ಮ ಬೈದರು, ಹೊಡೆದರು. ಅವಳ ಬಸಿರನ್ನು ಇಳಿಸಲು ಏನೆಲ್ಲ ಮಾಡಿದರು. ಆದರೆ ಬಸಿರು ಇಳಿಯಲಿಲ್ಲ. ಇದೇ ಹೊತ್ತಲ್ಲಿ ಅಪ್ಪನಿಗೆ ಲಕ್ವ ಹೊಡೆದು ಮಲಗಿದಲ್ಲಿಯೇ ಆಗಿ ಕೊನೆಗೆ ತೀರಿಕೊಂಡ. ಅವ ಕೂಲಿ ಕೆಲಸ ಮಾಡುತ್ತಿದ್ದ ದೊಡ್ಡ ಹೆಗಡೇರ ತೋಟಕ್ಕೆ ಹೋಗಿ ಸುರಭಿಯೇ ಕೆಲಸ ಮಾಡತೊಡಗಿದಳು.

ಅಲ್ಲಿ ಹೆಗಡೇರ ಮಗನ ಕಣ್ಣಿಗೆ ಬೀಳುವುದು ಹೆಚ್ಚಿಗೆ ದಿವಸವಾಗಲಿಲ್ಲ. ನೋಡಲು ತೀರಾ ಚೆನ್ನಾಗಿಲ್ಲದಿದ್ದರೂ ಮಟ್ಟಸವಾದ ದೇಹಮಾಟವಿತ್ತು ಸುರಭಿಗೆ. ಅಷ್ಟು ಸಾಕಲ್ಲ. ಅಲ್ಲಿ ಕೆಲಸ ಮಾಡುತ್ತಲೇ ಸುರಭಿ ಮಗನಿಗೆ ಜನ್ಮವಿತ್ತಳು. ಏನೇ ಸುರಭಿ ನಿನ್ನೀ ಸ್ಥಿತಿಗೆ ಕಾರಣ ಯಾರೇ ಎಂದು ಕೇಳಿದವರಿಗೆಲ್ಲ ಉತ್ತರ ಹೇಳದೆ, ಅವಳ ಹಿಂದೆ ಆಡಿಕೊಂಡವರಿಗೆಲ್ಲ ಮೌನದಿಂದಲೇ ಬದುಕುತ್ತ ಬಂದಳು. ಒಮ್ಮೆ ಕೆಟ್ಟುಹೋದವಳು ಎಂದ ಮೇಲೆ ಬೇಲಿಯ ಹೂವಿನಂತೆಯೇ ಆದಳು. ಎಲ್ಲರೂ ಮೂಸುವವರೇ. ಈಗವಳಿಗೆ ಮಗನನ್ನು ಬೆಳೆಸಬೇಕು, ಅಮ್ಮನನ್ನು ನೋಡಿಕೊಳ್ಳಬೇಕು, ಇವಿಷ್ಟರ ಸಲುವಾಗಿ ತುಟಿಕಚ್ಚಿ ಹಿಡಿದು ಎಲ್ಲವನ್ನೂ ಸಹಿಸುತ್ತ ಬಂದ ಸುರಭಿಗೆ ಈಗ ತಲೆನೋವಾಗಿದ್ದು ಪದ್ದಿಮಗ ರಮೇಶ. ಅವನನ್ನು ಅವಳು ಮನೆಯಿಂದ ಕಳಿಸಲೇಬೇಕಿತ್ತು. ದಿನಾ ರಾತ್ರಿ ಬರುವ ಹೊಸಹೊಸ ಜನ, ಅವರನ್ನೆಲ್ಲ ಸಂಬಾಳಿಸುವಾಗ ಇವನಿದ್ದರೆ ಸರಿಯಲ್ಲ. ಅದಕ್ಕೆ ನಿಧಾನಕ್ಕೆ ತಿಳಿಹೇಳಿದಳು, ಬೈದಳು. ಹೊಡೆದಳು. ಏನು ಮಾಡಿದರೂ ಅವ ಅವಳ ಮನೆಯ ಜಗುಲಿ ಬಿಟ್ಟು ಅಲ್ಲಾಡುತ್ತಿಲ್ಲ. ಅವನಿಗೆ ಅವಳನ್ನು ಮದುವೆಯಾಗಿಬಿಟ್ಟರೆ ಅವಳು ರಮೇಶನ ಹೆಂಡತಿಯಾಗುತ್ತಾಳೆ. ಆಗ ಯಾರೂ ಅವಳನ್ನು ಸೂಳೆ ಎಂದು ಕರೆಯುವುದಿಲ್ಲ. ಅದುಬಿಟ್ಟರೆ ಬೇರೇನೂ ಅವನ ತಲೆಯಲ್ಲಿಲ್ಲ. ಆದರೆ ಈ ಸುದ್ದಿ ಕೇಳಿದ ಪದ್ದಿಗೆ ಸಂಕಟ ತಡೆಯಲಾಗಲಿಲ್ಲ.

‘ಸುರಬೀ ನಾನು ನಿನ್ನನ್ನು ಮದುವೆಯಾಗುತ್ತೇನೆ’ ಒಂದೇ ಏಟಿಗೆ ಹೇಳಿದ ರಮೇಶನ ಮಾತುಗಳನ್ನು ಕೇಳಿ ಒಂದುಸಲ ಸುರಭಿಗೆ ಏನು ಹೇಳುತ್ತಿದ್ದಾನೆ ಇವ ಎಂದೇ ಅರ್ಥವಾಗಲಿಲ್ಲ. ಸುಮ್ಮನೆ ಅವನನ್ನು ನೋಡುತ್ತ ನಿಂತಳು. ರಮೇಶ ಮತ್ತೆ ಮತ್ತೆ ಒತ್ತಿ ಹೇಳಿದ, ‘ನಾನು ನಿನ್ನನು ಮದುವೆಯಾಗುತ್ತೇನೆ. ಆಗ ನಿನ್ನ ಸೂಳೆ ಎಂದು ಎಲ್ಲರೂ ಆಡಿಕೊಳ್ಳುವುದು ತಪ್ಪುತ್ತದೆ’ ಎಂದ. ಅವನು ಹೇಳಿದ ಮಾತುಗಳು ನಿಧಾನಕ್ಕೆ ಅರ್ಥವಾಗತೊಡಗಿತು ಸುರಭಿಗೆ.

ಅವತ್ತು ಮೂರುಸಂಜೆಯ ಸಮಯವಿರಬಹುದು. ಸುತ್ತೆಲ್ಲ ಕತ್ತಲಾವರಿಸುತ್ತಿತ್ತು. ಆ ಸಂಜೆಯೇ ಬೀದಿ ದೀಪವೂ ಇರದ ರಸ್ತೆಯಲ್ಲಿ ರೌದ್ರಾವತಾರ ತಾಳಿ ಒಂದೇ ಸಮನೆ ಸುರಭಿಯನ್ನು ಬೈಯ್ಯುತ್ತ ಸೀದ ಸುರಭಿ ಮನೆಗೆ ಬಂದು ‘ಹಲ್ಕಟ್ ರಂಡೆ, ಎನ್ನ ಮಗನ್ನ ಮರುಳು ಮಾಡಿದೀಯನೇ… ನಿಂಗೆ ಇಷ್ಟು ಜನ ಬರ್ತಾ ಇರೋದು ಸಾಲದ, ಸೂಳೆ ಮುಂಡೆ..’ ಎಂದು ಮನೆ ಎದುರಿಗೆ ನಿಂತು ಒಂದೇ ಸಮನೆ ಬೈಯ್ಯತೊಡಗಿದಳು. ಮಗನಿಗೂ ‘ನಿಂಗೂ ಆ ಸೂಳೆರಂಡೆಯೇ ಬೇಕಾತನಾ.. ತಮಾ.. ಇಲ್ಲಿ ಅಮ್ಮನ ಕಷ್ಟ ನಿಂಗೆ ಕಾಣ್ತಿಲ್ಲೆ ಅಲ್ದಾ. ಬತ್ಯ ಇಲ್ಯಾ ಮನಿಗೆ..’ ಎಂದು ಕೂಗಾಡತೊಡಗಿದಳು. ಅವಳ ಈ ಕೂಗಾಟ ಎಷ್ಟೊತ್ತಾದರೂ ಮುಗಿಯದೇ ಇರದ್ದು ನೋಡಿ ಸ್ವಲ್ಪ ಕತ್ತಲಾದ ಮೇಲೆ ಹೊರಬಂದ ಸುರಭಿ, ‘ನೋಡು ಪದ್ದಿ, ನೀನು ನಿನ್ನ ಮಗನ್ನ ಕರಕೊಂಡು ಹೋಗು. ನಾನಂತೂ ಅವನಿಗೆ ಹೇಳಿ ಸಾಕಾಗಿದೆ. ನೀನೇ ಕರಕೊಂಡು ಹೋಗು, ಸುಮ್ನೆ ನನ್ನ ಬೈಬೇಡ. ನನ್ನ ಸೂಳೆ ಅಂತೆಲ್ಲ ಬೈತೀಯಲ್ಲ. ನೀ ಎಂತದ್ದು ಹಂಗಾರೆ?’ ಎಂದು ಜೋರು ಮಾಡಿದಳು. ಪದ್ದಿಗೆ ಅವಳ ಮಾತು ಕೇಳಿ, ಏನು ಮಾಡಬೇಕೆಂದು ತಿಳಿಯದೇ ಸ್ವಲ್ಪಹೊತ್ತು ಸುಮ್ಮನೆ ನಿಂತವಳು, ಕಡೆಗೆ ಒಂದಷ್ಟು ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ‘ಎನ್ನ ಮಗನ್ನ ಮರಳು ಮಾಡಿದ್ದೆ ನೀನು.. ಹಾಳಾಗಿ ಹೋಗು’ ಎಂದು ಶಾಪ ಹಾಕಿ ಮನೆ ಹಾದಿ ಹಿಡಿದಳು ಮಗನ ಹೊಸ ಅವತಾರಕ್ಕೆ ಸಂಕಟಪಡುತ್ತ. ಇದನ್ನೆಲ್ಲ ಕೇಳಿದ ಸುರಭಿ, ಒಳಬಂದವಳೇ ತನ್ನ ಮಗನ ಜೊತೆ ಆಟವಾಡುತ್ತ ಕುಳಿತಿದ್ದ ರಮೇಶನಿಗೆರಡು ಬಾರಿಸಿ, ಒದ್ದು ನೂಕಿದಳು. ಹೀಗಿದ್ದೂ ಅವನು ಏಳಲಿಲ್ಲ. ಅಷ್ಟೊತ್ತಿಗಾಗಲೇ ಅವ ಅವಳ ಮನೆಗೆ ಬಂದು ಕೂತು ವಾರವಾಗಿತ್ತು.

ಇವನಿದ್ದಾನೆಂಬ ಕಾರಣಕ್ಕೆ ಯಾರನ್ನೂ ಮನೆಗೆ ಸೇರಿಸಲಿಲ್ಲ ಸುರಭಿ. ಇದರಿಂದ ಅವಳ ಆದಾಯ ಕಡಿಮೆಯಾಗುತ್ತ ಬಂತು. ಇನ್ನು ಇವನನ್ನು ಹೀಗೇ ಬಿಟ್ಟರೆ ಆಗುವುದಿಲ್ಲವೆಂದು ಸುರಭಿ ಅವರಿವರ ಸಹಾಯದಿಂದ ಒಂದು ರಾತ್ರಿ ಅವನನು ಅನಾಮತ್ತಾಗಿ ಎತ್ತಿಕೊಂಡು ಮನೆಯಿಂದ ಹೊರಹಾಕಿ ಬಾಗಿಲು ಜಡಿದು ನಿಶ್ಚಿಂತೆಯಿಂದ ನಿದ್ದೆಮಾಡಿದಳು. ಹೀಗೆ ಮಾಡಿದರೆ ಖಂಡಿತ ಅವನು ಹೋಗುತ್ತಾನೆಂದು ತಿಳಿದು. ಆದರೆ ಮಾರನೇ ದಿನ ಬೆಳಗ್ಗೆ ಬಾಗಿಲು ತೆರೆದರೆ ರಮೇಶ ಅಲ್ಲೇ ಕುಳಿತಿದ್ದಾನೆ. ಅವನ ಮೇಲೆ ಕೋಪವೂ, ಅನುಕಂಪವೂ ಎಲ್ಲವೂ ಏಕಕಾಲಕ್ಕೆ ಉಂಟಾಗಿ, ಅವನ ಮೇಲೆ ಕರುಣೆ ತೋರಿದರೆ ಮತ್ತೆ ಅಂಟಿಕೊಂಡಾನೆಂದು ಒಂದೂ ಮಾತನಾಡಿಸದೆ ಬಾಗಿಲು ಹಾಕಿಯೇ ಇದ್ದಳು. ಅವನೆದುರಿಗೇ ಮಗನ ಕೈ ಹಿಡಿದು ಸಂಜೆ ಹೊತ್ತಿಗೆ ಪ್ಯಾಟಿಗೆ ಹೊರಟಳು. ಅವಳ ಮಗ ‘ಅಮ್ಮಾ…ಅಣ್ಣ…’ ಎಂದು ರಮೇಶನನ್ನು ತೋರಿಸಿದ. ಸುಮ್ನೆ ಬಾರೋ..ಎಂದು ಮಗನನ್ನು ದರದರನೆ ಎಳೆದಂತೆ ಮಾಡಿ ಹೋದಳು.

ಈ ಎಲ್ಲವನ್ನೂ ಒಳ್ಳೆ ಯಕ್ಷಗಾನ ನೋಡಿದಂತೆ ಅಕ್ಕಪಕ್ಕದವರು ನೋಡಿಕೊಂಡು ಆಡಿಕೊಳ್ಳುವವರು ಇಬ್ಬರನ್ನೂ ಆಡಿಕೊಂಡರು. ನಗುವವರು ನಕ್ಕರು. ಒಟ್ಟಿನಲ್ಲಿ ಸಿದ್ದಾಪುರದ ಜನತೆಗೆ ಅದರಲ್ಲೂ ಅಲ್ಲಿನ ಹೆಂಗಸರಿಗೆ ಒಂದಷ್ಟು ದಿವಸ ಕಟ್ಟೆ ಪಂಚಾಯ್ತಿಯಲ್ಲಿ ಒಳ್ಳೆ ಸುದ್ದಿ ಸಿಕ್ಕಿತು. ಅವನದ್ದೇ ತಪ್ಪು, ಇವಳದ್ದೇ ತಪ್ಪು, ಪದ್ದಿ ಹಂಗೆಲ್ಲ ಮಗನನ್ನು ಸರಿಯಾಗಿ ಬೆಳೆಸಿದ್ದಿದ್ದರೆ ಇವ ಹೀಂಗೆಲ್ಲ ಎಂತಕ್ಕೆ ಆಗ್ತಿದ್ದ.. ಎಲ್ಲ ಪದ್ದಿಯದ್ದೇ ತಪ್ಪು, ಸುರಭಿದೂ ತಪ್ಪು ಎಂದೆಲ್ಲ ಈ ಸುದ್ದಿಯನ್ನು ರಸವತ್ತಾಗಿ ಹೇಳಿಹೇಳಿ ಚಟ ತೀರಿಸಿಕೊಂಡರು.

ಹೀಗೆ ಸುರಭಿ ಮನೆಯಿಂದ ಹೊರಹಾಕಿಸಿಕೊಂಡ ರಮೇಶ ಕಡೆಗೆಲ್ಲೂ ಕಾಣಿಸಲಿಲ್ಲ. ಪದ್ದಿಯ ಮನೆಗೂ ಹೋಗಲಿಲ್ಲ. ಸುರಭಿ ಮನೆಗೂ ಹೋಗಲಿಲ್ಲ. ಸುರಭಿ ಈ ಕುರಿತು ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಆದರೆ ಪದ್ದಿ ಮಾತ್ರ ಅವರಿವರ ಬಳಿ ಮಗನ ವಿಷಯ ಹೇಳಿಕೊಂಡು, ನಡುನಡುವೆ ಸುರಭಿಗೆ ಶಾಪ ಹಾಕುತ್ತ ಕಣ್ಣೀರಿಡುತ್ತಿದ್ದಳು.

ಇದಾಗಿ ಸಾಕಷ್ಟು ವರ್ಷಗಳ ನಂತರ ಅಂದರೆ ನಾವು ಆ ಊರು ಬಿಟ್ಟು ಬೆಂಗಳೂರಿಗೆ ಬಂದು ಬದುಕನ್ನು ಕಟ್ಟಿಕೊಂಡು ಅದೆಷ್ಟೋ ವರ್ಷಗಳ ನಂತರ ಊರಿಗೆ ಹೋದರೆ.. ಎಲ್ಲವೂ ಬದಲಾಗಿತ್ತು. ಪದ್ದಿಯ ಮನೆಯ ಮುಂದೆಯೇ ಹಾದು ಹೋಗುವಾಗ ‘ನೋಡು, ಪದ್ದಿಯ ಮನೆಯಿದು, ಅಲ್ಲಿಪ್ಪ ಕಾರು ಪದ್ದಿ ಮಗಂದು’ ಎಂದು ಗೆಳತಿಯರು ಹೇಳಿದರೆ ಬಾಯಿಬಿಟ್ಟುಕೊಂಡು ನೋಡತೊಡಗಿದೆ. ಅಷ್ಟೆಲ್ಲ ರಾದ್ಧಾಂತ ಮಾಡಿದ ಪುಣ್ಯಾತ್ಮ ಈಗ ಅದ್ಯಾವುದೋ ಬಿಸಿನೆಸ್ ಮಾಡಿ, ಕಾರು ತಗಂಡು, ಪದ್ದಿಯ ಹಳೆಯ ಮನೆಯನ್ನೇ ಕೆಡವಿ ದೊಡ್ಡದಾದ ಆರ್ ಸಿ ಸಿ ಬಿಲ್ಡಿಂಗ್ ಕಟ್ಟಿ, ಮದುವೆಯಾಗಿ, ಝಂ ಅಂತ ಇರುವುದನ್ನು ನೋಡಿ ಅಪಾಪೋಲಿ ಅಲೆಯುತ್ತಿದ್ದವ, ಸುರಭಿಯನ್ನು ಮದುವೆಯಾಗುತ್ತೇನೆಂದ ಅದೇ ರಮೇಶ ಇವನಾ ಎಂದು ಮೂಗಿನ ಮೇಲೆ ಬೆರಳಿಡುವಂತಾಯಿತು.

ಹೌದೂ… ಈ ಸುರಭಿ ಹೇಗಿದ್ದಾಳೆ, ಅವಳ ಮಗ ಏನುಮಾಡುತ್ತಿದ್ದಾನೆಂದು ಕೇಳಿದರೆ, ‘ಅದು ಮಾತ್ರ ಕೇಳಡ ಅಪೀ.. ಅವರು ಈ ಊರಲ್ಲೇ ಇಲ್ಲೆ. ಈ ಊರು ಬಿಟ್ಟು ಭಾಳಾ ವರ್ಷಗಳೇ ಆಗೋಯ್ದು. ಅದು ದೊಡ್ಡ ಪಂಚಾತ್ಗೆ ಎಲ್ಲ ನಡೆದು ಭಾರೀ ಗಲಾಟೆ ಆತು ಅವಾಗ’ ಎಂದು ಆಗಿನ ಕತೆ ಹೇಳತೊಡಗಿದರು..

ಅದೆಲ್ಲ ಆಗಿದ್ದು ಈ ಪದ್ದಿಯಿಂದ. ಮಗ ಮನೆಬಿಟ್ಟು ಹೋದಮೇಲೆ ತನಗಿದ್ದ ಒಂದೇ ಒಂದು ಆಧಾರವಾದ ಮಗ ಇಲ್ಲ ಎಂಬುದನ್ನು ತಡೆದುಕೊಳ್ಳಲಾಗಲಿಲ್ಲ ಅವಳಿಗೆ. ಅದಕ್ಕೆ ಊರಿನ ಮುಖಂಡರನ್ನುಕರೆದು ಪಂಚಾಯ್ತಿ ಮಾಡಿಸಿದಳು. ಈ ಸುರಭಿಯಿಂದಲೇ ಎಲ್ಲ ಆಗಿದ್ದು ಎಂದಳು. ಅಲ್ಲಿ ಸೇರಿದ ಒಬ್ಬೊಬ್ಬರೂ ಒಂದೊಂದು ರೀತಿ ಸುರಭಿ ವಿರುದ್ಧ ಮಾತನಾಡಿದರು. ಒಬ್ಬಳಿಗೆ ಮಗ ದೂರಾದ ದುಃಖವಿದ್ದರೆ ಮತ್ತೊಬ್ಬಳಿಗೆ ತನ್ನ ಗಂಡ ತನ್ನಿಂದ ದೂರವಾದ ಉರಿಯಿತ್ತು. ಯಾರ್ಯಾರಿಗೆ ಸುರಭಿ ಮೇಲೆ ಸಿಟ್ಟಿತ್ತೋ ಅವರೆಲ್ಲರೂ ಅವತ್ತು ಸೇಡು ತೀರಿಸಿಕೊಂಡರು. ಇವಳಿದ್ದರೆ ತಮ್ಮ ಯಾರ ಸಂಸಾರವೂ ನೆಟ್ಟಗಿರುವುದಿಲ್ಲ, ಇವತ್ತು ಪದ್ದಿ ಮಗ, ನಾಳೆ ಇನ್ನೊಬ್ಬಳ ಮಗ, ಮುಂದೆ ನಿಮ್ಮ ಮಕ್ಕಳನ್ನೂ ಅವಳು ಹಾದಿ ತಪ್ಪಿಸಬಹುದು ಎಂದೆಲ್ಲ ಹೇಳಿದರು. ಊರಿನ ಮುಖಂಡರಿಗೂ ಇದು ಹೌದೆನಿಸಿತು. ಎಲ್ಲ ಸೇರಿ ಅವಳಿಗೆ ಬೆದರಿಕೆ ಹಾಕಿ ಈ ಊರನ್ನೇ ಬಿಟ್ಟು ಹೋಗಬೇಕೆಂದು ತಾಕೀತು ಮಾಡಿದರು. ಇಲ್ಲದಿದ್ದರೆ ನಿನಗೆ ಬಹಿಷ್ಕಾರ ಹಾಕಲಾಗುವುದು ಎಂದು ಸುರಭಿಗೆ ಮಾತನಾಡಲೂ ಅವಕಾಶ ನೀಡದಂತೆ ಧಮಕಿ ಹಾಕಿ ಪಂಚಾಯ್ತಿಯನ್ನು ಬರಖಾಸ್ತು ಮಾಡಿದರು. ಸುರಭಿ ರಾತ್ರೋ ರಾತ್ರಿ ಅದೆಲ್ಲಿ ಹೋದಳೋ.. ಒಟ್ಟಿನಲ್ಲಿ ಮಾರನೇ ದಿನ ಬೆಳಗ್ಗೆಯಿಂದ ಅವಳ ಮನೆಯ ಬಾಗಿಲು ತೆರೆಯಲಿಲ್ಲ.

ಈಗ ಪದ್ದಿ ಮಗ ಕಾರು ತಗೊಂಡು, ಮನೆ ಕಟ್ಟಿಸಿ, ಮದುವೆಯಾಗಿ, ಎರಡು ಮಕ್ಕಳ ತಂದೆಯಾಗಿ ಹಾಯಾಗಿ ಹೆಂಡತಿ ಮಕ್ಕಳನ್ನು ಕಾರಲ್ಲಿ ಕೂರಿಸಿಕೊಂಡು ಓಡಾಡುತ್ತಾನೆ. ಹಾಗಿದ್ದರೆ ಪಾಪ… ಸುರಭಿ ಏನಾದಳು. ಎಲ್ಲಿರಬಹುದು? ಅವಳ ಮಗ ಈಗೇನು ಮಾಡುತ್ತಿರಬಹುದು. ಏನು ಓದುತ್ತಿರಬಹುದು? ಅವತ್ತು ಹಾಗೆ ಊರವರೆಲ್ಲ ಬಹಿಷ್ಕಾರ ಹಾಕಿ ಅವಳನ್ನು ಹೊರಗಟ್ಟಿದಾಗ ಅವಳೊಬ್ಬಳೇ ಆ ತಾಯಿ, ಮಗನನ್ನು ಕರೆದುಕೊಂಡು ಎಲ್ಲಿಗೆ ಹೋಗಿದ್ದಿರಬಹುದು? ಎಲ್ಲಿ ಉಳಿದುಕೊಂಡಳು….ಹೀಗೆ ಒಂದಾದರೊಂದರಂತೆ ಪ್ರಶ್ನೆಗಳು ನನ್ನ ತಲೆ ತಿನ್ನತೊಡಗಿದವು.