ಒಂದಾನೊಂದು ಕಾಲದಾಗ

(Once Upon A Time by Gabriel Imomotimi Okara)

ಮಗಾ, ಒಂದಾನೊಂದು ಕಾಲದಾಗ
ಅವರು ಮನಸ್ಸಿನ ಕಣ್ಣಿಂದ ನಗ್ತಿದ್ರು
ಆದ್ರ ಈಗ, ಭಾವ ಬತ್ತಿದ ಅವರ ಕಣ್ಣು
ನನ್ನ ನೆರಳಿನ ಬೆನ್ನಿನ್ಯಾಗ ನಿಂತು
ಹಲ್ಲಿಂದ ಮಾತ್ರ ನಗ್ಲಿಕತ್ತಾವ.

ಅದೂ ಒಂದು ಕಾಲ ಇತ್ತು
ಎಲ್ಲಾರೂ ಮನಸ್ಸಿನ ಖುಷಿನ
ಕೈ ಬೆರಳಿನ್ಯಾಗ ಅರಳಿಸಿ
ಕೈ ಕುಲುಕ್ತಿದ್ರು
ಆದ್ರ ಈಗ, ಹಂಗಿಲ್ಲ ಮಗಾ
ನನ್ನ ಖಾಲಿ ಜೋಬುಗಳನ್ನ
ಅವರ ಕೈಗಳು ಹುಡುಕಬೇಕಾದ್ರ
ಮನಸ್ಸಿಲ್ಲದನ ಕೈ ಕುಲುಕ್ತಾರ.

ನಾ ಅವರ ಮನಿ ಬಾಗ್ಲಿಗೆ
ಮೊದಲ ಹೋದಾಗ ‘ನಿಮ್ದ ಮನಿ ಅನ್ಕೊರಿ ‘
‘ಮತ್ತ ಮತ್ತ ಬನ್ರಿ’ ಅಂತಿದ್ರು
ಮತ್ತ ಹೋದಾಗೂ ನಮ್ಮನಿ ಅನ್ನೊ ಭಾವ.
ಒಮ್ಮೆ, ಇನ್ನೊಮ್ಮೆ,
ಆದರ,
ಮತ್ತೊಮ್ಮೆ ಹೋದಾಗ
ಮನಿ ಬಾಗಲ ಮುಚ್ಚಿ ಹೋದ್ವು.

ಅದ್ರಿಂದಾನss ನಾ ಭಾಳ
ವಿಚಾರ ಕಲ್ತೀನಿ ಮಗಾ,
ಬ್ಯಾರೆ ಬ್ಯಾರೆ ಮುಖಗಳ್ನ
ಬಟ್ಟಿ ಹಾಕಿದಾಂಗ ಹಾಕೂದು ಕಲ್ತೀನಿ,
ಹೇಂಗಂದ್ರ – ಪೋಟೊದಾಗಿರೊ ಹಂಗ
ನಿಂತ ನಗೆ ಹೊತ್ತು
ಮನಿಯಾಗೊಂದು ಮುಖ,
ಆಫಿಸದಾಗೊಂದು ಮುಖ,
ದಾರಿಯೊಳಗೊಂದು ಮುಖ
ಅತಿಥಿಗಳು ಬಂದಾಗ ಮತ್ತೊಂದು ಮುಖ
ಹಾಕೊದನ್ನೂ ಕಲ್ತೀನಿ ನಾ

ನಾನೂss ಬರೀ ಹಲ್ಲಿಂದ
ನಗೂದು ಕಲ್ತೀನಿ
ಮತ್ತ ಮನಸ್ಸಿಲ್ಲದಾಗೂ ನಕ್ಕು
ಕೈ ಕುಲುಕ್ತೀನಿ.
‘ಹೋದ್ರ ಸಾಕು’ ಅಂತ ಅನ್ನಿಸಿದಾಗೂ
‘ಒಳ್ಳಿ ಬನ್ರಿ’ ಅಂದು,
ಬ್ಯಾಸರ ಅನಿಸಿದ್ರೂ
‘ಭಾಳ ಖುಷಿ ಆತು ನಿಮ್ನ ನೋಡಿ’
ಅಂತ ಹೇಳೊದೂ ಕಲ್ತೀನಿ ನಾ..

ನನ್ನ ನಂಬು ಮಗಾ,
ನಾ ಮತ್ತ ಹಂಗಾ ಆಗಬೇಕು.
ಈ ಜಡ್ಡು ಗಟ್ಟಿರೊ
ಆಲೋಚನಿಗಳ್ನೆಲ್ಲಾ
ನಾ ಕಲ್ತೆ ಇಲ್ಲ ಅನ್ನೊಹಂಗಾಗ್ಬೇಕು.
ಎಲ್ಲಾಕೂ ಮೊದ್ಲು
ನಾ ನಗೂದನ್ನ ಮತ್ತ ಕಲೀಬೇಕು,
ಯಾಕಂದ್ರ ಕನ್ನಡಿ ಮುಂದ
ನಕ್ಕಾಗ ಅದು ಹಾವಿನ ಹಲ್ಲುಗಳ್ನ
ತೋರಸ್ತದ.

ಅದಕಾ ನಂಗೂ ಕಲಿಸಿ ಕೊಡು
ಮಗಾ,
ಹೆಂಗ ನಗೂದು ಅಂತ
ಕಲಿಸಿ ಕೊಡು,
ಒಂದಾನೊಂದು ಕಾಲದಾಗ
ನಾನೂ ನಗ್ತಿದ್ದೆ
ಥೇಟ್ ನಿನ್ನಂಗ…

(Gabriel Imomotimi Okara)