ಲೋಹಿಯಾ, ತೇಜಸ್ವಿ, ಶಾಂತವೇರಿ, ಲಂಕೇಶ್  ಅವರಂಥ ವ್ಯಕ್ತಿಗಳು ಬರೆದಿಟ್ಟಿದ್ದ ಥಿಯರಿಗಳು ಈ ಸೊಕ್ಕಿನವಳು ಕಲಿಸಿದಷ್ಟು ಮನಕ್ಕೆ ಅಚ್ಚೊತ್ತುವಂತೆ ಕಲಿಸಲಿಲ್ಲ. ಮತ್ತೆ ನನಗೆ ಸಮಾಜವಾದದ ಪ್ರಾಯೋಗಿಕ ಬದುಕು ಅಂತ ಕಂಡುಬಂದದ್ದು ಬೇರೆ ದೇಶಗಳನ್ನು ಸುತ್ತಿದಾಗಲೇ! ಆದರೆ ಅದು ಸಂಪೂರ್ಣ ಸಮಾಜವಾದವಲ್ಲ. ಕ್ಯಾಪಿಟಲಿಸಂ ಜನರು ಉದ್ಯಮಿಗಳ ಮೇಲೆ ಹೆಚ್ಚು ಖರ್ಚು ಮಾಡುವಂತೆ ಮಾಡಲು ತೆರಿಗೆ ದುಡ್ಡನ್ನೇ ಸರಕಾರದ ಮೂಲಕ ವಾಪಸ್ಸು ಹಂಚುವ ವ್ಯವಸ್ಥೆ ಅದು! ಸಂವಿಧಾನದಲ್ಲಿ ಸಮಾಜವಾದ ಅಂತ ಬರೆದುಕೊಂಡಿದ್ದರೂ ಅದನ್ನು ಸಮಾಜದಲ್ಲಿ ನೋಡುವ ಕಣ್ಣುಗಳು ನಮಗಿನ್ನೂ ಬಲಿತಿಲ್ಲ. ಅಂತಸ್ತು, ಜಾತಿಗಳ ದಟ್ಟ ಹೊಗೆ ಕಣ್ಣಿನ ಸುತ್ತಲೂ ಪೊರೆಗಟ್ಟಿದೆ.
ಶ್ರೀಹರ್ಷ ಸಾಲಿಮಠ ಅಂಕಣ

 

ಕ್ರಿ.ಶ.ಎರಡು ಸಾವಿರನೆಯ ಇಸವಿಯ ಹೊತ್ತಿಗೆ ಅಧಿಕೃತವಾಗಿ ಮತ್ತು ಬಲವಾದ ಪಾದಗಳೊಂದಿಗೆ ಸಮಾಜವಾದಿ ಪರದೆಯನ್ನು ಸರಿಸಿ ಜಾಗತೀಕರಣ ಮತ್ತ ಉದಾರೀಕರಣಗಳು ಇಂಡಿಯಾ ದೇಶದೊಳಗೆ ಕಾಲಿಟ್ಟಿದ್ದವಷ್ಟೇ. ಇಂದು ದುಡಿದು ತೆರಿಗೆ ಕಟ್ಟುತ್ತಿರುವ ಪೀಳಿಗೆಗಳ ಹೊಚ್ಚ ಹೊಸ ಕನಸುಗಳಿಗೆ ಉಕ್ಕಿನ ರೆಕ್ಕೆಯನ್ನು ಜೋಡಿಸಿದ ಯುಗವದು. ಭೌತಿಕವಾಗಿ ಮಾನಸಿಕವಾಗಿ ಜನರಿಗೆ ಅಗಾಧವಾದ ವಿಸ್ತಾರದ ಜಗತ್ತನ್ನು ತೋರಿಸಿದ ಹೊಸ ಕಾಲ.

ಅದಾಗಲೇ ಹಳ್ಳಿಗಳಲ್ಲಿ ಭೂಮಾಲಿಕರು ತಮಗೆ ದುಡಿಯಲು ಜನ ಸಿಗುತ್ತಿಲ್ಲ ಎಂದು ಹಲುಬತೊಡಗಿದ್ದರು. ಕೆಲವು ಅಡಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಯುವ ನಿಪುಣರನ್ನು ಕೈಕಾಲು ಕಟ್ಟಿ ಕರೆದುಕೊಂಡು ಬರುವ ಪರಿಸ್ಥಿತಿ ಇತ್ತು. ಇವರದೇನು ಹಂಗು ಅಂತ ತಾವೇ ಅಡಿಕೆ ಕೊಯ್ಯಲು ಹೋಗಿ ಸೊಂಟ ಬಿದ್ದು ಹೋಗಿ ಕೈಕಾಲು ಬೇನೆ ಬಂದು ಎರಡು ದಿನ ಜ್ವರ ಬಂದು ಮಲಗಿ ಎದ್ದಮೇಲೆ ಬೆಚ್ಚಗೆ ಬೆಳೆದ ತಮ್ಮ ಮಾಂಸಖಂಡ ಮೂಳೆಗಳಿಗೆ ಈ ಕಸುಬು ಮಾಡುವ ಶಕ್ತಿ ಇಲ್ಲ ಎಂಬ ಅರಿವಾಗಿ ಮತ್ತೆ ಅದೇ ಜನರ ಕೈಕಾಲು ಹಿಡಿಯುವ ಪರಿಸ್ಥಿತಿ. ಹಳ್ಳಿಗಳಿಂದ ನಗರಗಳಿಗೆ ಜನ ಗುಳೇ ಹೊಗುತ್ತಿದ್ದುದು. ನಗರಗಳಿಂದ ಮಹಾನಗರಗಳಿಗೆ ಮಹಾನಗರಗಳಿಂದ ವಿದೇಶಗಳಿಗೆ ಗುಳೇ ಹೋಗುವ ಹೊಸ ಪ್ರವೃತ್ತಿ ಹಳ್ಳಿ, ನಗರಗಳು, ಮಹಾನಗರಗಳನ್ನು ವೃದ್ಧಾಶ್ರಮವನ್ನಾಗಿ ಪರಿವರ್ತಿಸತೊಡಗಿದ್ದವು. ಇನ್ನೂ ಜಾಗತಿಕರಣದ ವಿರುದ್ಧ ಕ್ಷೀಣ ದನಿಯನ್ನು ಉಳಿಸಿಕೊಂಡಿದ್ದ ಕೆಲ ನಿರ್ದೇಶಕರು ಇವೇ ವಿಷಯಗಳ ಮೇಲೆ ಚಲನಚಿತ್ರಗಳನ್ನು ನಿರ್ಮಿಸಿ ಪ್ರಶಸ್ತಿಗಳನ್ನು ಕೊರಳಿಗೆ ನೇತಾಡಿಸಿಕೊಳ್ಳತೊಡಗಿದ್ದರು.

ಕುಚೋದ್ಯವೆಂದರೆ ಈ “ಕ್ಲಾಸ್” ಎನಿಸಿಕೊಂಡ ಜಾಗತೀಕರಣದ ಸಿನಿಮಾಗಳನ್ನು ದುಬಾರಿ ಮಾಲ್ ಗಳಲ್ಲಿ ನಡೆಯುತ್ತಿದ್ದ ಸಿನಿಮಾ ಹಬ್ಬಗಳಲ್ಲಿ ನೋಡುತ್ತಿದ್ದುದೇ ಜಾಗತೀಕರಣದ ಕಾರಣದಿಂದ ಹೆಚ್ಚಿನ ದುಡಿಮೆ ಕಂಡುಕೊಂಡಿದ್ದ ಚಲನಚಿತ್ರ ಪ್ರೇಮಿಗಳು!

ಇಂತಿಪ್ಪ ಸಮಯದಲ್ಲಿ ಬರೀ ಕೃಷಿಗೆ ಮಾತ್ರವಲ್ಲ ಮನೆಕಟ್ಟುವ ತರಗಾರ ಕೆಲಸಕ್ಕೆ, ಕಬ್ಬಿಣ ಕಟ್ಟುವ ಕೆಲಸಕ್ಕೆ, ವರ್ಕ್ ಶಾಪ್ ಗಳಿಗೆ, ಗೋಡೆಗೆ ಬಣ್ಣ ಬಳಿಯುವ ಕೆಲಸಗಳಿಗೆಲ್ಲ ಕಾರ್ಮಿಕರು ಸಿಗದಂತಾಗತೊಡಗಿದರು. ಮನೆಗೆಲಸದವರೂ ಇದಕ್ಕೆ ಹೊರತಾಗಿರಲಿಲ್ಲ. ಪಾತ್ರೆ, ಕಸ, ಬಟ್ಟೆ ಇತ್ಯಾದಿ ಕೆಲಸಗಳಿಗೆ ಮಧ್ಯಮ ವರ್ಗದ ಗಂಡ ಹೆಂಡತಿ ಇಬ್ಬರೂ ದುಡಿಯುವ ಮನೆಗಳಿಗೆ ಮನೆಗೆಲಸದವರು ಅನಿವಾರ್ಯ ಬಂಧುಗಳಾಗಿದ್ದರು.

ಹಿಂಗೆ ನಮ್ಮ ಮನೆಗೂ ಕೆಲಸದವರು ಬರುವುದು, ಕೆಲಸ ಬಿಡುವುದು ಸಾಮಾನ್ಯವಾಗಿತ್ತು. ಹಿಂಗೆ ಒಬ್ಬಾಕೆ ವಾಡಿಕೆಯಂತೆ ಬಿಟ್ಟಾಗ ನಮ್ಮಮ್ಮ ಹೊಸಬಳೊಬ್ಬಳನ್ನು ಹುಡುಕಲು ಮೊದಲು ಮಾಡಿದರು. ಅಕ್ಕಪಕ್ಕದಲ್ಲಿದ್ದವರ್ಯಾರೋ ಒಬ್ಬಳಿದ್ದಾಳೆ ಆದರೆ ಆಕೆಗೆ ಬಹಳ ಸೊಕ್ಕು ಅಂತ ಎಲ್ಲರೂ ಮಾತಾಡಿಕೊಳ್ಳುತ್ತಾರೆ ಅಂತ ಹೇಳಿದರು. ನಮ್ಮಮ್ಮ ಹೆಚ್ಚಿನ ಪ್ರಯೋಗಕ್ಕೆ ಬಹುಷಃ ಸಿದ್ಧರಿರಲಿಲ್ಲ. ಆಕೆಯನ್ನೇ ಕಳಿಸಲು ಹೇಳಿದರು. ಆ ಸೊಕ್ಕಿನವಳು ಎರಡು ದಿನ ಬಿಟ್ಟು ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡಳು.

ಆವಾಗೆಲ್ಲ ಎಲ್ಲರ ಮನೆಯಲ್ಲಿ ಪದ್ಧತಿಯಿತ್ತು. ಹಿಂದಿನ ದಿನ ಉಳಿದ ಊಟವನ್ನು ಒಟ್ಟು ಮಾಡಿ ಕೆಲಸದವರಿಗೆ ಕೊಡುತ್ತಿದ್ದರು. ಕೆಲಸದವರು ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ಹಾಗೆಯೇ ಈ ಸೊಕ್ಕಿನವಳಿಗೂ ನಮ್ಮಮ್ಮ ಬುತ್ತಿ ಮಾಡಿ ಇಟ್ಟಿದ್ದರು. ಆದರೆ ಆಕೆ ಅದನ್ನು ತೆಗೆದುಕೊಳ್ಳದೇ “ನಮಗೆ ಕೊಡೋದಿದ್ದರೆ ಬಿಸಿ ಊಟ ಕೊಡಿಯಮ್ಮಾ..ಇಲ್ಲ ಬೇಡ. ನಾವು ಮನೆಯಲ್ಲೇ ಬಿಸಿ ಅಡುಗೆ ಮಾಡಿಕೊಳ್ಳುತ್ತೇವೆ.” ಅಂತ ಹೇಳಿದಳು. ನನಗೆ ಎರಡೂ ಕೈಯೆತ್ತಿ ಚಪ್ಪಾಳೆ ತಟ್ಟಬೇಕೆನ್ನಿಸಿತು. ಆಕೆಗೆ ಎಲ್ಲರೂ ಏಕೆ “ಸೊಕ್ಕಿನವಳು” ಅಂತ ಕರೆಯುತ್ತಾರೆ ಎಂಬುದು ಗೊತ್ತಾಯಿತು. ಬಡವರ ಸ್ವಾಭಿಮಾನ, ಆತ್ಮಗೌರವ ಸಿರಿವಂತರಿಗೆ ಸೊಕ್ಕಲ್ಲದೇ ಮತ್ತೆ ಇನ್ನು ಹೇಗೆ ಕಂಡೀತು? ಅದರಲ್ಲೂ ಹೆಣ್ಣುಮಗಳು ಸ್ವಾಭಿಮಾನದಿಂದ ಮಾತನಾಡುವುದನ್ನು ಸಹಿಸಲಾದೀತೆ? ನಮ್ಮಮ್ಮ ಮರುಮಾತನಾಡಲಿಲ್ಲ. ಬೇರೆ ಯಾರಾದರೂ ಆಗಿದ್ದರೆ ಸಂಬಳ ಕೊಡುವುದಲ್ಲದೇ ಊಟ ಕೊಡುತ್ತಿದ್ದೇವೆ ಮತ್ತೇನು ಕಿರಾತಕ ಬುದ್ದಿ ಈ “ಸೊಕ್ಕಿನವಳದು” ಎನ್ನುತ್ತಿದ್ದರೇನೋ! ನಮ್ಮಮ್ಮ ಮರುದಿನದಿಂದ ನಮಗೆಲ್ಲ ಮಾಡುವ ಅಡುಗೆಯನ್ನೇ ಸ್ವಲ್ಪ ಹೆಚ್ಚು ಮಾಡಿ ಆಕೆಗೂ ಬಿಸಿಬಿಸಿಯದೇ ಬಡಿಸುತ್ತಿದ್ದರು.

ಬಹುಷಃ ಇದು ನಾನು ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಕಲಿತ ಸಮಾಜವಾದದ ಪಾಠ. ಈ ಸೊಕ್ಕಿನವಳು ನನ್ನ ಮೊದಲ ಸಮಾಜವಾದದ ಗುರು! ಲೋಹಿಯಾ, ತೇಜಸ್ವಿ, ಶಾಂತವೇರಿ, ಲಂಕೇಶ್ ಇತ್ಯಾದಿಗಳು ಬರೆದಿಟ್ಟಿದ್ದ ಥಿಯರಿಗಳು ಈ ಸೊಕ್ಕಿನವಳು ಕಲಿಸಿದಷ್ಟು ಮನಕ್ಕೆ ಅಚ್ಚೊತ್ತುವಂತೆ ಕಲಿಸಲಿಲ್ಲ. ಮತ್ತೆ ನನಗೆ ಸಮಾಜವಾದದ ಪ್ರಾಯೋಗಿಕ ಬದುಕು ಅಂತ ಕಂಡುಬಂದದ್ದು ಬೇರೆ ದೇಶಗಳನ್ನು ಸುತ್ತಿದಾಗಲೇ! ಆದರೆ ಅದು ಸಂಪೂರ್ಣ ಸಮಾಜವಾದವಲ್ಲ. ಕ್ಯಾಪಿಟಲಿಸಂ ಜನರು ಉದ್ಯಮಿಗಳ ಮೇಲೆ ಹೆಚ್ಚು ಖರ್ಚು ಮಾಡುವಂತೆ ಮಾಡಲು ತೆರಿಗೆ ದುಡ್ಡನ್ನೇ ಸರಕಾರದ ಮೂಲಕ ವಾಪಸ್ಸು ಹಂಚುವ ವ್ಯವಸ್ಥೆ ಅದು! ಸಂವಿಧಾನದಲ್ಲಿ ಸಮಾಜವಾದ ಅಂತ ಬರೆದುಕೊಂಡಿದ್ದರೂ ಅದನ್ನು ಸಮಾಜದಲ್ಲಿ ನೋಡುವ ಕಣ್ಣುಗಳು ನಮಗಿನ್ನೂ ಬಲಿತಿಲ್ಲ. ಅಂತಸ್ತು, ಜಾತಿಗಳ ದಟ್ಟ ಹೊಗೆ ಕಣ್ಣಿನ ಸುತ್ತಲೂ ಪೊರೆಗಟ್ಟಿದೆ.

ವಿದ್ಯಾರ್ಥಿ ಜೀವನದಲ್ಲಿ ಕ್ಯಾಪಿಟಲಿಸಂ ಎಂದರೆ ಬಣ್ಣದ ಕನಸು ಸೋಷಲಿಸಂ ಎಂದರೆ ನಾವು ಬದುಕುವ ವಾಸ್ತವ ಎಂದೇ ನಮ್ಮ ಒಳಪ್ರವೃತ್ತಿ ಭಾವಿಸಿರುತ್ತದೆ. ಆದರೆ ದುಡಿಮೆಯ ಜಗತ್ತಿಗೆ ಕಾಲಿಟ್ಟಾಗಲೇ ಅದು ಉಲ್ಟಾ ಎಂದು ಗೊತ್ತಾಗುತ್ತದೆ. ನಮ್ಮ ದುಡಿಮೆ ಕ್ಯಾಪಿಟಲಿಸಂ ನಲ್ಲಿ ಮತ್ತು ಖರ್ಚು, ಸಾಮಾಜಿಕ ಭದ್ರತೆಗಳೆಲ್ಲ ಸೋಷಲಿಸಂ ನಲ್ಲಿ ಅಂದುಕೊಳ್ಳುವುದು ಒಂದು ದೊಡ್ಡ ಭ್ರಮೆ. ಕ್ಯಾಪಿಟಲಿಸಂ ನಮಗೆ ದುಡಿಯಲು ಎಷ್ಟು ಪ್ರೇರೇಪಿಸುತ್ತದೋ ಹಣ ಖರ್ಚು ಮಾಡಲೂ ಸಹ ಅಷ್ಟೇ ಅನಿವಾರ್ಯತೆಗಳನ್ನು ತಂದೊಡ್ಡುತ್ತದೆ.

ವೈಯಕ್ತಿಕವಾಗಿ ನಾನು ಭಾಗಷಃ ಇದರಿಂದ ತಪ್ಪಿಸಿಕೊಂಡೆ ಎನ್ನಬಹುದು. ನನ್ನ ಸಮಾಜವಾದದ ಕಾರ್ಯವೈಖರಿಗಳು ನಾನು ಕೆಲಸ ಮಾಡುವ ಕಂಪನಿಗಳ ಮ್ಯಾನೇಜರುಗಳಿಗೆ ಮಗ್ಗುಲ ಮುಳ್ಳುಗಳಾಗಿದ್ದವು. ನಾನು ಎಲ್ಲರಂತೆ ರಜೆ ಕೋರುತ್ತಿರಲಿಲ್ಲ. “ನಾನು ರಜೆ ತೆಗೆದುಕೊಳ್ಳುತ್ತಿದ್ದೇನೆ” ಎಂದು ಮಾಹಿತಿ ನೀಡುತ್ತಿದ್ದೆ. ನಿನಗೆ ರಜೆ ನೀಡಲಾಗುವುದಿಲ್ಲ ಎಂದು ಉತ್ತರ ಬಂದರೆ “ನಾನು ರಜೆ ಕೇಳುತ್ತಿಲ್ಲ. ಇವತ್ತು ರಜೆ ತೆಗೆದುಕೊಳ್ಳುತ್ತಿರುವ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇನಷ್ಟೇ!” ಎಂದು ನೇರವಾಗಿ ಹೇಳುತ್ತಿದ್ದೆ.

ಈ ಸೊಕ್ಕಿನವಳಿಗೂ ನಮ್ಮಮ್ಮ ಬುತ್ತಿ ಮಾಡಿ ಇಟ್ಟಿದ್ದರು. ಆದರೆ ಆಕೆ ಅದನ್ನು ತೆಗೆದುಕೊಳ್ಳದೇ “ನಮಗೆ ಕೊಡೋದಿದ್ದರೆ ಬಿಸಿ ಊಟ ಕೊಡಿಯಮ್ಮಾ..ಇಲ್ಲ ಬೇಡ. ನಾವು ಮನೆಯಲ್ಲೇ ಬಿಸಿ ಅಡುಗೆ ಮಾಡಿಕೊಳ್ಳುತ್ತೇವೆ.” ಅಂತ ಹೇಳಿದಳು. ನನಗೆ ಎರಡೂ ಕೈಯೆತ್ತಿ ಚಪ್ಪಾಳೆ ತಟ್ಟಬೇಕೆನ್ನಿಸಿತು.

ನಾನು ಕ್ಯಾಂಪಸ್ ಇಂಟರ್ ವ್ಯೂ ನಲ್ಲೇ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಎಂಬ ಕಂಪನಿಗೆ ಆಯ್ಕೆಯಾಗಿದ್ದೆ. ಈ ಕಂಪನಿಗೆ ಸಂದರ್ಶನ ನೀಡಿ ಆಯ್ಕೆಯಾಗುವುದಲ್ಲದೇ ಅದರಲ್ಲಿ ಕೆಲಸ ಮಾಡಬೇಕಾದ ವಿವಿಧ ತಂಡಗಳಿಗೆ ಆಯ್ಕೆಯಾಗಲು ಮತ್ತೆ ಸಂದರ್ಶನ ನೀಡಬೇಕಾಗುತ್ತಿತ್ತು. ಈ ರೀತಿಯ ಸಂದರ್ಶನಗಳಿಗೆಲ್ಲ ಹೋದಾಗ ಸಂದರ್ಶನ ಮಾಡುವ ಟೀಂ ಲೀಡರುಗಳು ಮತ್ತು ಮ್ಯಾನೇಜರುಗಳು ನೇರವಾಗಿಯೇ “ನೀನು ದಿನಕ್ಕೆ ಎಷ್ಟು ತಾಸು ಕೆಲಸ ಮಾಡಬಲ್ಲೆ?” ಎಂದು ಕೇಳುತ್ತಿದ್ದರು. ನಾನು “ಎಂಟು ತಾಸು ಅಂತ ಹೇಳುತ್ತಿದ್ದೆ.”

“ಅಯ್ಯೋ ಅಷ್ಟೇನೆ? ನಮ್ಮ ತಂಡದವರೆಲ್ಲಾ ಹನ್ನೆರಡು ಹದಿನಾಲ್ಕು ತಾಸು ಕೆಲಸ ಮಾಡುತ್ತೇವೆ ಗೊತ್ತಾ?” ಅಂತ ಹೇಳುತ್ತಿದ್ದರು.

ಪ್ರತೀ ತಂಡ ಮುಖ್ಯಸ್ಥರೂ ಹೀಗೆ ಹೇಳುವಾಗ ಯಾವ ತಂಡ ಹೆಚ್ಚು ಕೆಲಸ ಮಾಡಬೇಕೆಂಬ ಸ್ಪರ್ಧೆಗೆ ಬಿದ್ದಿದ್ದರೇನೋ ಎನ್ನಿಸುತ್ತಿತ್ತು. ಅವರನ್ನು ಮೆಚ್ಚಿಸಲು ನನ್ನ ಅನೇಕ ಗೆಳೆಯರು ಸಂದರ್ಶನದಲ್ಲಿ ಹತ್ತು ಹನ್ನೆರಡು ತಾಸು ಕೆಲಸ ಮಾಡುತ್ತೇವೆಂದು ಹೇಳುತ್ತಿದ್ದರು. ಅದರಲ್ಲೊಬ್ಬ ಹದಿನೆಂಟು ತಾಸು ಅಂತ ಹೇಳಿದರೂ ಅಲ್ಲಿದ್ದವರು “ಅಷ್ಟೇನಾ?” ಅಂತ ಕೇಳಿದರಂತೆ!

ಕಾರ್ಮಿಕ ಹಕ್ಕುಗಳು, ಕಾರ್ಮಿಕ ಇಲಾಖೆ, ಕಾರ್ಮಿಕ ಸಂಘ ಇತ್ಯಾದಿಗಳು ಇದ್ದಾವೆ ಎಂಬುದೂ ಸಹ ಬಹುತೇಕ ಗೆಳೆಯರಿಗೆ ಕಲ್ಪನೆಯೂ ಇರಲಿಲ್ಲ. ಕೆಲಸಕ್ಕೆ ಸೇರುವಾಗಲೇ ನಾವು ಯಾವುದೇ ಕಾರ್ಮಿಕ ಸಂಘಟನೆಯನ್ನು ಸೇರುವಂತಿಲ್ಲ ಹಾಗೂ ಹುಟ್ಟುಹಾಕುವಂತಿಲ್ಲ ಎಂದು ಮುಚ್ಚಳಿಕೆಯನ್ನು ಸೇರಿಸಿ ಸಹಿ ಹಾಕಿಸಿಕೊಳ್ಳುತ್ತಿದ್ದರು. ನನಗೆ ಅಲ್ಪಸಲ್ಪ ತಿಳಿದಿರುವಂತೆ ಈ ರೀತಿ ಸಹಿ ಹಾಕಿಸಿಕೊಳ್ಳುವುದು ಅನೈತಿಕ ಮಾತ್ರವಲ್ಲ ಕಾನೂನು ಬಾಹಿರ ಕೂಡಾ! ಆದರೆ ಇಲ್ಲಿಯವರೆಗೆ ಇದನ್ನು ಪ್ರಶ್ನಿಸಿ ಯಾರೂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಹಾಗಿಲ್ಲ. ಆದರೆ ಬಹುತೇಕ ಗೆಳೆತರು ತಮ್ಮ ಘನತೆ ಸ್ವಾತಂತ್ರ್ಯ, ಯವ್ವನ ಮತ್ತು ಶಕ್ತಿಗಳನ್ನೆಲ್ಲ ಮೇಲಿನವರಿಗೆ ಮರುಮಾತಿಲ್ಲದೇ ಅಡವಿಟ್ಟುಬಿಡುತ್ತಿದ್ದರು. ಅವರದೂ ತಪ್ಪೆಂದು ನಾನು ಹಂಗಿಸುವಂತಿಲ್ಲ. ಯಾಕೆಂದರೆ ನನ್ನ ಗೆಳೆಯರಲ್ಲಿ ಬಹುತೇಕರು ಬಡ ಮತ್ತು ಕೆಳಮಧ್ಯಮ ವರ್ಗದಿಂದ ಬಂದವರು. ಹುಟ್ಟಿದ ಮಗನನ್ನೆ ಜೀವ ತೇಯ್ದು ಸಾಕಿ ಆತನ ಜೀವನ ಆತನ ಆಸಕ್ತಿಗೆ ತಕ್ಕಂತೆ ತೇಲಿಹೋಗುವುದನ್ನು ಬ್ಲಾಕ್ ಮೇಲ್ ಗಳ ಮೂಲಕ ಒಡ್ಡುಗಟ್ಟಿ ತಡೆದು ಇಂಜಿನಿಯರಿಂಗ್ ಓದಿಸಿರುತ್ತಿದ್ದರು.

ತಮ್ಮ ತಂದೆ ತಾಯಿಗಳನ್ನು ಸಾಕುವುದಲ್ಲದೇ ಅವರು ತಮ್ಮ ಯೌವನದ ಅತಿಯಾದ ಚಟುವಟಿಕೆಯನ್ನು ಹತ್ತಿಕ್ಕಿಕೊಳ್ಳಲಾಗದೇ ಹಿಂದೆ ಹಿಂದೆಯೇ ಹುಟ್ಟಿಸಿದ ತಮ್ಮಂದಿರಿಗೆ ಓದಿಸುವುದು ಮತ್ತು ತಂಗಿಯರಿಗೆ ವರದಕ್ಷಿಣೆ ಒಟ್ಟುಹಾಕಿ ಬೇರೊಂದು ಇದೇ ರೀತಿಯ ಗಂಡಸಿಗೆ ಸಾಗಹಾಕುವ ಜವಾಬ್ದಾರಿಯೂ ಇರುತ್ತಿತ್ತು. ಬಹುತೇಕ ತಾಯ್ತಂದೆಯರು ತಾವು ಹೆಚ್ಚುವರಿ ಮಕ್ಕಳನ್ನು ಹಡೆಯುವುದೇ ಮೊದಲ ಕೂಸಿಗೆ ಜವಾಬ್ದಾರಿ ಹೊಂದಿಸಲು ಎಂದು ಭಾವಿಸಿದಂತಿತ್ತು. ತಾಯ್ತಂದೆಯರ ಹೊರೆಯನ್ನು ಅವರು ಚಿಕ್ಕಂದಿನಿಂದ ಹುಟ್ಟುಹಾಕಲ್ಪಟ್ಟ ಪಾಪಪ್ರಜ್ಜೆಯ ಬುಟ್ಟಿಯೊಳಗೆ ಗಂಟುಕಟ್ಟಿಕೊಂಡ ನಿಷ್ಪಾಪಿ ಜೀವಗಳಾದರೂ ಏನು ಮಾಡಿಯಾವು ತಮ್ಮ ಜೀವನವನ್ನು ಕ್ಯಾಪಿಟಲಿಸಂ ಗೆ ಅಡವಿಡುವುದರ ಹೊರತುಪಡಿಸಿ? ಅದೂ ಅಲ್ಲದೇ ತಮ್ಮ ತಾಯ್ತಂದೆಯರು ತಮ್ಮ ಬಗ್ಗೆ ಹೆಮ್ಮೆ ಪಡಬೇಕು ಎಂಬ “ಪಿಯರ್ ಪ್ರೆಶರ್” ಒಂದು ಬೇರೆ ಇರುತ್ತಿತ್ತಲ್ಲ!

ನನಗೆ ಅಂತಹ ಹೆಚ್ಚಿನ ತೊಂದರೆಗಳೇನಿರಲಿಲ್ಲ. ಬರೀ ಇಂಜಿನಿಯರಿಂಗ್ ಮಾಡಿ ಒಂದು ಮನೆ ಕಟ್ಟಿಸಿಕೊಂಡು ಜೀವನ ಪೂರ್ತಿ ಸಾಲದಲ್ಲೇ ಒದ್ದಾಡುವಂತಿದ್ದರೆ ಅಂತಹ ಅಲ್ಪತೃಪ್ತ ದಾರಿತಪ್ಪಿದ ಹೆಮ್ಮೆಗೆ ಎಷ್ಟು ಬೆಲೆ ಕೊಟ್ಟು ಏನಾಗಬೇಕಿದೆ? ಹಾಗಾಗಿ ನಾನು ಕೊಂಚಮಟ್ಟಿಗೆ ಸ್ವತಂತ್ರನಾಗಿದ್ದೆ. ದಿನಕ್ಕೆ ಎಂಟು ತಾಸು ಕೆಲಸ ಮತ್ತು ಬೇಕಾದಾಗ ರಜೆ ನನ್ನ ಹಕ್ಕುಗಳು. ನನಗೆ ಜೀವನ ಮಾಡುವುದಕ್ಕೆ ಹಣ ಕೊಡುವುದರ ಬದಲಾಗಿ ನಾನು ನನ್ನ ವಾರದ ನಲವತ್ತು ಗಂಟೆ ನಿಮಗೆ ಬಾಡಿಗೆ ಕೊಡುತ್ತಿದ್ದೇನಷ್ಟೇ. ಅದಕ್ಕಿಂತ ಹೆಚ್ಚಾಗಿ ನನ್ನನ್ನು ಖರೀದಿ ಮಾಡಿಕೊಂಡಂತೆ ನಡೆಸಿಕೊಳ್ಳುವುದು ಸರಿಯಲ್ಲ ಎಂಬುದು ನನ್ನ ಖಚಿತ ನಿಲುವಾಗಿತ್ತು. ಸೂಕ್ತವಾದ ಸಾಮಾಜಿಕ ಬಂಡವಾಳ ಮತ್ತು ಗಟ್ಟಿಯಾದ ಆರ್ಥಿಕ ಹಿನ್ನೆಲೆಯಿರದೆ ಇಂತಹದ್ದೊಂದು ನಿಲುವು ಹೊಂದಿರಲು ನನಗೆ ಸಾಧ್ಯವಿತ್ತೆ ಎಂದು ಒಮ್ಮೊಮ್ಮೆ ಯೋಚಿಸುತ್ತೇನೆ. ಆದರೆ ಯಾವತ್ತೂ ಕಾಣದ ಸಂದರ್ಭಗಳನ್ನು ಕಲ್ಪಿಸಿಕೊಂಡು ವಿವಿಧ ಫಲಿತಾಂಶಗಳನ್ನು ಲೆಕ್ಕ ಹಾಕಿಕೊಳ್ಳುವುದು ಕಡುಕಷ್ಟಕರವಾಗಿ ಕಂಡುಬಂದು ಸುಮ್ಮನಾಗುತ್ತೇನೆ.

ಈ ನಡುವಿನ ಓದಿನಲ್ಲಿ ಹೊಯ್ಸಳರ ರಾಜ ವೀರಬಲ್ಲಾಳನಲ್ಲಿ ಲೆಕ್ಕ ಬರೆಯುವ ಕೆಲಸ ಮಾಡಿಕೊಂಡಿದ್ದ ಹರಿಹರ ದೊರೆಯಾಳ್ವಿಕೆಯ ವಿರುದ್ಧ ಬಂಡೆದ್ದು ರಾಜೀನಾಮೆ ಪತ್ರ ಬಿಸಾಕಿ ಬರುವ ಪ್ರಸಂಗವು ನನ್ನ ಗಮನ ಸೆಳೆದಿತ್ತು. ಇದೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ.

“ಪೋಗೆನೆ ಪೋಪ ಬಾರೆಲವೊ ಬಾರೆನೆ ಜೀಯ ಹಸಾದವೆಂದು ಬೆಳ್ಳ್ ಆಗುತೆ ಬರ್ಪ ಮಾಣೆಲವೊ ಸುಮ್ಮನಿರೆಂದೊಡೆ ಸುಮ್ಮನಿರ್ಪ ಮತ್ರಾಗಳೆ ಝಂಕಿಸಲ್ ನಡುಗಿ ಬೀಳುವ ಸೇವೆಯ ಕಷ್ಟವೃತ್ತಿಯಂ ನೀಗಿದನೆಂದು ನಿಮ್ಮ ದೆಸೆಯಿಂ ಕರುಣಾಕರ ಹಂಪೆಯಾಳ್ದನೆ!”

ಹೋಗೆಂದರೆ ಹೋಗುವ ಬಾರೆಂದರೆ ಆಗಲಿ ಜೀಯ ಎಂದು ಬರುವ ಏನು ಸುಮ್ಮನಿರು ಎಂದರೆ ಸುಮ್ಮನಿರಬೇಕು, ಬೈದರೆ ಬೆದರಿ ನಡುಗಬೇಕಾದ ಕಷ್ಟಕರವಾದ ಕೆಲಸವನ್ನು ಬಿಟ್ಟು ಹೊರಬಂದೆ ಅಂತ ತನ್ನ ಇಷ್ಟದೈವ ಹಂಪೆಯಾಳ್ದನಲ್ಲಿ ಹರಿಹರ ಹೇಳಿಕೊಳ್ಳುತ್ತಾನೆ.

ರಾಜೀನಾಮೆ ಕೊಟ್ಟು ಹಂಪೆಯಲ್ಲಿ ಬಂದು ವಿರುಪಾಕ್ಷನ ಗುಡಿಯ ಎದುರಿನ ಪುಷ್ಕರಣಿಯ ಬಳಿ ಸೂರು ಕಟ್ಟಿಕೊಂಡು ನೆಲೆಗೊಳ್ಳುತ್ತಾನೆ. ಅಲ್ಲಿಂದ ಮುಂದಕ್ಕೆ ಕನ್ನಡ ಸಾಹಿತ್ಯಕ್ಕೆ ರಗಳೆಯಂತಹ ಹೊಸ ಮಾದರಿ ಸಿಗುತ್ತದೆ. ಪ್ರಭುಲಿಂಗಲೀಲೆಯಂತಹ ಗ್ರಂಥಗಳು ಸಿಗುತ್ತವೆ. ಶರಣ ಚಳುವಳಿಯ ವ್ಯಾಪಕ ದಾಖಲೆಯಾಗಿ ಹರಿಹರನ ಕೃತಿಗಳು ಬಳಕೆಯಾಗುತ್ತವೆ.

ಅದರೆ ಜಾಗತೀಕರಣದ ನಂತರದ ಜನಸಾಮಾನ್ಯರ ಬದುಕಲ್ಲಿ ಆದ ಮಹತ್ತರ ಬದಲಾವಣೆಗಳು ಕೆಲವು ಪ್ರಶ್ನೆಗಳನ್ನೆಬ್ಬಿಸುತ್ತವೆ. ಬಲಿಷ್ಠ ಜಾತಿಯ ಮಧ್ಯಮ ವರ್ಗದ ಕಣ್ಣಿನಿಂದ ನೋಡುವುದಾದರೆ ಇದೊಂದು ಎಲ್ಲರಿಗೂ ಸಮಾನ ಘನತೆಯನ್ನು ತಂದುಕೊಟ್ಟ ವ್ಯವಸ್ಥೆ. ಅನೇಕರು ಮನೆ ಕಟ್ಟಿಸಿಕೊಂಡರು, ತಾಯ್ತಂದೆಯರ ಸಾಲ ತೀರಿಸಿದರು, ಕಾರು ಕೊಂಡರು, ದೂರದ ದೇಶಗಳಿಗೆ ಹೋಗಿಬಂದರು, ತಾಯ್ತಂದೆಯರಿಗೆ ವಿದೇಶಗಳನ್ನು ಸುತ್ತಿಸಿದರು. ಹಿಂದೊಮ್ಮೆ ಇದ್ದ ಸಮಾಜವಾದದ ಕಾಲದಲ್ಲಿ ಇದೆಲ್ಲ ಸಾಧ್ಯವಿತ್ತೆ? ಎಂದು ಪ್ರಶ್ನಿಸುವವರಿದ್ದಾರೆ. ಪಡೆದುಕೊಂಡ ವರ್ಗಕ್ಕೆ ಇಷ್ಟು ಮಾತ್ರ ಕಾಣುತ್ತದೆ, ಕಳೆದುಕೊಂಡ ವರ್ಗ ದೊಡ್ಡ ಗೋಡೆಯೊಂದರ ಹಿಂದೆ ಅಡಗಿಕೊಂಡಿದೆ. ಅವಕ್ಕೆ ಕಳೆದುಕೊಂಡಿದ್ದೇವೆ ಎನ್ನುವುದೂ ಸಹ ಗೊತ್ತಿಲ್ಲ. ಅಲ್ಲೂ ಅಷ್ಟಿಷ್ಟು ದುಡ್ಡಾಡುತ್ತಿದೆ. ಅದೇ ತಮಗೆ ಹೊಸದಾಗಿ ದಕ್ಕಿದ್ದು ಅಂದುಕೊಂಡಿದ್ದಾರೆ. ಆದರೆ ಪ್ರಾಕೃತಿಕ ಮತ್ತು ಸಾಮಾಜಿಕ ಸಂಪನ್ಮೂಲಗಳಲ್ಲಿ ತಮ್ಮ ಪಾಲು ಕಡಿಮೆಯಾಗಿದೆ, ತಮ್ಮ ಪಾಲನ್ನು ಮತ್ತೊಂದು ವರ್ಗ ದೋಚಿಕೊಂಡಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ.

ಕಳೆದುಕೊಂಡ ಪಾಲಿಗೆ ಹೋಲಿಸಿದರೆ ಅವರ ಕೈಯಲ್ಲಿ ಆಡುತ್ತಿರುವ ದುಡ್ಡು ಪುಡಿಗಾಸೂ ಸಹ ಅಲ್ಲ ಎಂಬುದು ಅವರ ಅರಿವಿಗೆ ನಿಲುಕುತ್ತಿಲ್ಲ. ಕ್ಯಾಪಿಟಲಿಸಂ ನಲ್ಲಿ ಎಲ್ಲರೂ ಶ್ರೀಮಂತರಾಗುವ ಸಾಧ್ಯತೆಗಳಿಲ್ಲ. ಬಲವಾಗಿದ್ದವರು ಹಾಳೆಯ ದುಗ್ಗಾಣಿ ಕೊಟ್ಟು ದುರ್ಬಲರ ಸಂಪನ್ಮೂಲಗಳನ್ನು ದೋಚುವುದಷ್ಟೇ!