ಇಂಡಿಯದಿಂದ ವಲಸೆ ಬಂದವರಿಗೆ ಕ್ರಿಕೆಟ್ ಅನ್ನೋದು ಆಟಕ್ಕಿಂತ ಒಂದು ಪಟ್ಟು ಹೆಚ್ಚು. ಅದು ಧರ್ಮದಂತೆ ಎಂಬ ಅರ್ಥದಲ್ಲಿ ಅಲ್ಲ, ಆದರೆ ಅದೊಂದು ಸಾಧನ ಎಂಬ ಅರ್ಥದಲ್ಲಿ. ಇಲ್ಲಿಗೆ ಬಂದಿಳಿದ ಮೊದಲ ದಿನ ಯಾರಾದರೂ ಸ್ಥಳೀಯರೊಡನೆ ಹರಟೆ ಹೊಡೆಯಬೇಕೆಂದರೆ ಕ್ರಿಕೆಟ್ ಮಹಾ ಸಾಧನ. ವಲಸೆ ಬಂದ ಹಲವು ವರ್ಷಗಳವರೆಗೆ ಈ ಮಾತು ನಿಜ. ಕಾಲ್‌ಸೆಂಟರ್ ಆಗಲಿ, ಬಿ.ಪಿ.ಓ ಆಗಲಿ ಅವತರಿಸುವ ಮೊದಲಂತು ಇದರ ಮಹತ್ವ ಇನ್ನೂ ಹೆಚ್ಚು. ಈಗಲೂ ಅದರ ಮಹತ್ವ ಕಡಿಮೆಯೇನಿಲ್ಲ.

ಈ ಹಿನ್ನೆಲೆಯಲ್ಲಿ ಈ ವರ್ಷದ ಮೊದಲ ವಾರ ಇಲ್ಲಿಯ ಇಂಡಿಯನ್ನರಿಗೆ ಅತಿಭಾವುಕತೆಯ ದಿನಗಳು. ಎಷ್ಟೋ ಜನರು ತಲೆ ಕೆಡಿಸಿಕೊಳ್ಳುವಂತೆ ಮಾಡಿದ ದಿನಗಳು. ಹೊಸವರ್ಷದಲ್ಲಿ ಸ್ಟಾಕ್ ಬೆಲೆ ಕೆಳಕೆಳಗೆ ಜಾರುತ್ತಿರುವುದು, ಜಪಾನಿನ ವೇಲಿಂಗ್ ಹಡಗು ಆಸ್ಟ್ರೇಲಿಯಾದತ್ತ ಬರುತ್ತಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಇಂಡಿಯನ್ ಟೀಮಿನವರು ಅಳುಮುಂಜಿಗಳಂತೆ ಆಡ್ತಿದ್ದಾರೆ ಅಂತ ಕೆಲವು ಆಸ್ಟ್ರೇಲಿಯನ್ನರು ಹೇಳುತ್ತಿದ್ದರು. ಆದರೆ ಹಲವರಿಗಂತೂ ಆಸ್ಟ್ರೇಲಿಯಾದ ಟೀಮಿನ ಬಗ್ಗೆ ರೋಸಿ ಹೋದಂತೆ ಇತ್ತು. ನನ್ನ ಬಳಿ ಹಲವರು, ಪಾಂಟಿಂಗ್ ಟೀಮಿನ ಅಹಂ ಹತ್ತಿಕ್ಕಲು ನೀವೇ ಸರಿ ಎಂದು ಹೇಳಿದ್ದುಂಟು. ಇಂಡಿಯನ್ನರ ಜತೆ ಹಲವಾರು ಆಸ್ಟ್ರೇಲಿಯನ್ನರು ದನಿ ಗೂಡಿಸಿದ ಅಪರೂಪದ ದಿನಗಳಿವು. ಟೀವಿ, ರೇಡಿಯೋ ಬಿಡಿ – ಏನು ಹೇಳಬೇಕು ಅಂತ ಗೊತ್ತಾಗದೆ ತಡಬಡಾಯಿಸಿದ ದಿನಗಳು. ತಮ್ಮ ದೇಶದ ಟೀಮನ್ನೇ ತಾವು ಹೇಗೆ ಬಯ್ಯೋದು ಅನ್ನೋ ಆತಂಕ ಒಂದು ಕಡೆ, ಹೀಗೆ ಆಸ್ಟ್ರೇಲಿಯಾ ಹೇಗಾದರೂ ಮಾಡಿ ಗೆಲ್ತಾ ಹೋದರೆ ಏನು ಗತಿ ಅಂತ ಇನ್ನೊಂದು ಕಡೆ. ಆಸ್ಟ್ರೇಲಿಯಾ ಆಡ್ತಿದೆ ಅಂದರೆ ಯಾರೂ ಕ್ರಿಕೆಟ್ ನೋಡದ ದಿನಗಳು ಬಂದು ಬಿಟ್ಟರೆ?

ಇಲ್ಲೇ ಹುಟ್ಟಿದ, ಬೆಳೆದ ಹಲವಾರು ಜನ ಇಂಡಿಯನ್ ಮಕ್ಕಳು ತಮ್ಮ ಯಾವುದೋ ನಂಬಿಕೆಗೆ ಧಕ್ಕೆ ಬಂದಂತೆ ಕಂಗೆಟ್ಟು ಓಡಾಡುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದೆ ಕೆಲಸಕ್ಕೆ ಬರುತ್ತಿದ್ದಂತೆ ಕಾಣುತ್ತಿತ್ತು. ಗಂಟೆಗಟ್ಟಲೆ ಮೋಬೈಲ್‌ನಲ್ಲಿ ತಮ್ಮ ಸಂಕಟ ಹಂಚಿಕೊಂಡು ಬಡಬಡಿಸುತ್ತಿದ್ದರು. ಮೊದಲ ತಲೆಮಾರಿನ ವಲಸಿಗರಿಗಿಂತ ಇವರಿಗೆ ಯಾಕೋ ಹೆಚ್ಚು ಪೆಟ್ಟಾದಂತೆ ಕಾಣುತಿತ್ತು. ಇವೆಲ್ಲಾ ಯಾಕೆ ಹೀಗೆ, ಇಲ್ಲಿ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಪರದಾಡುತ್ತಿದ್ದೆ. ಅಷ್ಟರಲ್ಲಿ ಕುಂಬ್ಳೆ-ಪಾಂಟಿಂಗ್ “ಸಂಧಾನ”ದ ವರದಿಗಳು ಬಂದವು. ಕ್ರಿಕೆಟ್ ಜಗತ್ತಿನಲ್ಲಿ “ಶಾಂತಿ” ಬಿಗಡಾಯಿಸಿದೆ ಎಂಬ ವರದಿಗಳು ಬಂದವು. ಎರಡು ಟೀಮಿನ ನಡುವೆ ಪ್ರೀತಿ ಮಧುರತೆ ಉಕ್ಕಿ ಹರಿಯುವಂತೆ ಕಾಣತೊಡಗಿತು. ಪರ್ತ್ ಟೆಸ್ಟ್ ಶುರು ಆಗಿಬಿಟ್ಟಿತು. ಕ್ರಿಕೆಟ್‌ನಲ್ಲಿ ಆಸಕ್ತಿಯಿಲ್ಲದವರೂ (ಅಂಥವರು ಇಲ್ಲಿ ಬಹಳ ಇದ್ದಾರೆ!) ಸ್ಕೋರ್‍ ಕೇಳಲು ಶುರುಮಾಡಿದ್ದರು. ಬರೇ ಒನ್-ಡೇ ನೋಡುತ್ತಿದ್ದವರು ಟೆಸ್ಟ್ ನೋಡಬೇಕೆಂದು ಗಾಬರಿ ಹುಟ್ಟಿಸುತ್ತಿದ್ದರು. ಟೀವಿ ಚಾನಲ್‌ಗಳು, ಸ್ಪಾಂಸರ್‌ಗಳು ಬಾಯಿ ಚಪ್ಪರಿಸಿದ್ದು ನಿಮಗೂ ಕೇಳಿರಬಹುದು.

ಸಿಡ್ನಿ ಟೆಸ್ಟಲ್ಲಿ ಯಾರು ಯಾರಿಗೆ ಯಾವಾಗ ಯಾಕೆ ಏನು ಹೇಳಿದರು ಅನ್ನೋದು ಒತ್ತಟ್ಟಿಗಿರಲಿ, ಅದನ್ನು ಸ್ವಲ್ಪ ಸಮಾಧಾನವಾಗಿ ಇನ್ನಾವಾಗಲಾದರೂ ನೋಡೋಣ. ಆದರೆ ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋಲುವಂತಿದ್ದ ಕಡೆಯ ಕ್ಷಣಗಳು. ನನಗೆ ಮೊಟ್ಟ ಮೊದಲು ಹುರುಪಿನಿಂದ “Go India!” ಎಂದು sms ಕಳಿಸಿದ ಸ್ಥಳೀಯ ಪಾಂಟಿಂಗಿನ ಬಗ್ಗೆ ನನ್ನೊಡನೆ ಮುಂಚೆ ಗೊಣಗಿದ್ದವ. ಅವನ ಅಜ್ಜ ಡಾನ್‌ ಬ್ರಾಡ್‌ಮನ್ ಜತೆ ಚಿಕ್ಕಂದರಲ್ಲಿ ಕ್ರಿಕೆಟ್ ಆಡಿದ್ದನಂತೆ. ಹೀಗೆಲ್ಲಾ ಇದೆಯಲ್ಲಾ – ಈ ಸಮಾಜದ ಜತೆಗಿನ ನಂಟು ಬಲೇ ಗೋಜಲು ಎಂದುಕೊಳ್ಳುತ್ತಿದ್ದೆ. ಆದರೆ ಇಂಡಿಯ ಗೆದ್ದೊಡನೆ ತಲೆಕೆಡಿಸಿಕೊಂಡಿದ್ದ ಇಂಡಿಯನ್ ಮಕ್ಕಳು ನಿಟ್ಟುಸಿರುಬಿಟ್ಟರು. ಗೋಜಲು ಕಳೆದಂತೆ ಸಮಾಧಾನದಿಂದ ನಕ್ಕರು. ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುತ್ತಿರುವುದು ಥಟ್ಟನೆ ನೆನಪಿಗೆ ಬಂತು. ಟೀವಿ ಚಾನಲ್ ತಿರುಗಿಸಿ ವೀನಸ್ ವಿಲಿಯಮ್ಸ್‌ ಎದುರು ಆಕೆ ಚೆನ್ನಾಗಿಯೇ ಆಡಿ ಸೋತದ್ದನ್ನು ನೋಡಿದರು. ಆದರೂ ನಿಶ್ಚಿಂತೆಯಿಂದ ಮಲಗಿದರು.