ಬೆಳಿಗ್ಗೆ ತುಂಬಿಸಿಕೊಂಡ ದೋಸೆ ಡಬ್ಬಿ ಹಾಗೇ ಇದೆ ಎಂಬುದು ನೆನಪಾಯಿತು ಅವಳಿಗೆ. ಕೊಟ್ಟು ಬಿಡಲೇ ಅನಿಸಿತು ಒಮ್ಮೆ. ಮನೆಗೆ ಹೋಗಿ ತಿನ್ನಬಹುದು ತಾನು. ಆದರೆ ಇವನಿಗೆ ಬೇಕಾದದ್ದು ದುಡ್ಡು, ಊಟ ಅಲ್ಲ, ಆ ದುಡ್ಡನ್ನು ಕಬಳಿಸಲು ನಮೂನೆ ನಮೂನೆಯ ಪ್ರಯತ್ನ ಅನ್ನಿಸಿ ಮನಸ್ಸೆಲ್ಲಾ ಕಹಿಯಾಯಿತು. ಜೊತೆಗೆ ಬಾಯಿಯೂ ಕಹಿಯಾಯಿತು. ಬಾಯಿಯಲ್ಲಿ ತುಂಬಿಕೊಂಡಿದ್ದ ಎಂಜಲನ್ನು ನುಂಗಲು ಅಸಹ್ಯವಾಗಿ ಉಗುಳುವ ಒತ್ತಡ ಉಂಟಾಯಿತು.
ಸೌರಭಾ ಕಾರಿಂಜೆ ಬರೆದ ಕಥೆ “ಹಣಾಹಣಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

“ಓಲಾ ಮನಿಯಾ, ಕ್ಯಾಶಾ ಮೇಡಮ್?”

ಅಯ್ಯೋ ಇದೂ ಕ್ಯಾನ್ಸಲ್‌ ಆಗುವ ರೈಡೇನೋ ಎಂದು ಕೃತಿಗೆ ದುಖಃವಾಯಿತು. ಈ ಎಚ್‌ಎಸ್‌ಆರ್‍ ಲೇಔಟಿನಿಂದ ಆಟೋ ಹಿಡಿಯುವ ಗೋಳು ಯಾರಿಗೂ ಬೇಡ ಎಂದುಕೊಂಡಳು.

ಕೃತಿಗೂ ಎಚ್‌ಎಸ್‌ಆರ್‍ ಲೇಔಟ್‌ಗೂ ಅಂಥ ಸಂಬಂಧವೇನಿಲ್ಲ. ಆಫೀಸಿನಿಂದ ಮನೆಗೆ ಬರುವ ದಾರಿಯಲ್ಲಿ ನಡುವಿನಲ್ಲಿದೆ ಅಷ್ಟೇ. ಆಫೀಸಿನ ಸಹೋದ್ಯೋಗಿಯೊಬ್ಬರ ಜೊತೆಗೆ ಅಲ್ಲಿಯವರೆಗೆ ಕಾರ್‍ ಪೂಲ್‍ ಮಾಡಿ ಅಲ್ಲಿಂದ ಆಟೋನೋ ಕ್ಯಾಬೋ ಹಿಡಿದು ಮನೆಗೆ ಬರುವವಳು. ಅವತ್ತು ಅರ್ಧ ಗಂಟೆಯಿಂದ ವಿರಾಮ ಬೇಡದೆ ಸುರಿವ ಮಳೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹತ್ತಿರದ ಹೋಟೆಲಿಗೆ ಹೊಕ್ಕಿದ್ದಳು. ಹೊಕ್ಕವಳು ಏನೂ ತಿನ್ನದೆ ಇದ್ದರೆ ವೇಟರ್‌ಗಳ ಕೆಂಗಣ್ಣಿಗೆ ಗುರಿಯಾಗಬೇಕಲ್ಲ ಅನ್ನುವ ಸಂಕಟಕ್ಕೆ ಸಿಂಗಲ್‍ ಇಡ್ಲಿ ಹೇಳಿದ್ದಳು. ಇಡ್ಲಿ ಮುಗಿದು, ಕಾಫಿ ಹೇಳಿ, ಎರಡೂ ಮುಗಿದು ಬಿಲ್ ಬಂದರೂ ಆಟೋ ಸಿಕ್ಕಿರಲಿಲ್ಲ. ದರಿದ್ರ ಓಲಾ. ಮಳೆ ಬಂದರೆ ಯಾರೂ ಬರಲ್ಲ, ಬೈದುಕೊಂಡು ವೇಟರ್‌ಗಳ ನೋಟಕ್ಕೆ ಅಂಜದೆ, ಮತ್ತೆ ಅರ್ಧ ಗಂಟೆ ಮೊಬೈಲೊಳಗೆ ಹೊರಳಾಟದ ನಂತರ ಸಿಕ್ಕ ಆಟೋ ಇದು. ಈಗ ಕ್ಯಾಶ್ ಬೇಕೇನೋ! ಇಲ್ಲ ಅಂದರೆ ಹತ್ತಿದ ಗಾಡಿಯಿಂದ ಇಳಿಸಿಬಿಡಲು ಹಿಂದೆ ಮುಂದೆ ನೋಡುವ ಆಸಾಮಿಗಳಲ್ಲ.

ಅವರ ಜೊತೆ ಜಗಳಕ್ಕೆ ನಿಂತರೆ ಕೃತಿಗೆ ಭಯಂಕರ ರಗಳೆ. ಹಾಗೆ ನೋಡಿದರೆ ಅವಳಿಗೆ ಯಾರ ಜೊತೆ ಜಗಳಕ್ಕೆ ನಿಲ್ಲಲೂ ಕಷ್ಟ. ಯಾರಾದರೂ ಕೊಂಕು ಮಾತಾಡುವುದೋ, ಜಗಳವಾಡುವುದೋ ಮಾಡಿದರೆ ಅದನ್ನು ಅರ್ಥೈಸಿಕೊಳ್ಳಲೇ ಅವಳಿಗೆ ಕೊಂಚ ಸಮಯ ಹಿಡಿಯುತ್ತದೆ. ಜರುಗುತ್ತಿರುವ ವಿರಸದ ರುಚಿ ಹತ್ತಿದ ಕೂಡಲೇ ಅವಳಿಗೆ ವಿಚಿತ್ರವಾದ ತಲೆನೋವೊಂದು ಹತ್ತಿಬಿಡುತ್ತದೆ. ಅದರ ಗೌಜಲ್ಲಿ ಅವರಿಗೆ ತಕ್ಕುದಾದ ಉತ್ತರ ನೀಡಿ ಬೆವರಿಳಿಸಲು ಸಾಧ್ಯವೇ ಇಲ್ಲ. ಪ್ರಪಂಚದ ಮಂದಿಯಷ್ಟೇ ಒರಟಾಗಿ, ಅಷ್ಟೇ ಹರಿತವಾಗಿ ನೋಯಿಸುವ ಪ್ರತ್ಯುತ್ತರ ಅವಳಿಗೆ ಹೊಳೆಯುವಷ್ಟರಲ್ಲಿ ಆ ಕ್ಷಣ ಹೊರಳಿರುತ್ತದೆ. ಮತ್ತು ಮೊದಲೇ ಹೊಳೆಯದ್ದಕ್ಕೆ ತನ್ನ ಮೇಲೆಯೇ ಸಿಟ್ಟು ಬಂದು ನರಳುತ್ತಾಳೆ. ಒಂದೋ ಸರಳವಾದ ಸಮಸ್ಯೆಗಳಿಗೆ ಈ ರೀತಿ ಸೂಕ್ಷ್ಮವಾಗಿ ವರ್ತಿಸಬಾರದು, ಅಥವಾ ಆದಷ್ಟೂ ಸಂದಿಗ್ಧಳಿಲ್ಲದೆ ಬದುಕಬೇಕು. ಎರಡೂ ಆಗುವುದಿಲ್ಲ. ಸಂಘರ್ಷಗಳಿಲ್ಲದೆ ಬದುಕೇ ಇಲ್ಲ ಅನ್ನುವುದು ಎಂತ ನಿರಾಶಾದಾಯಕ ಸಂಗತಿ!

“ಮುಂಚೆಯೇ ಹೇಳೋದಲ್ವ? ಸರಿ, ಕ್ಯಾಶೇ ಬೇಕಿದ್ದರೆ ಕ್ಯಾನ್ಸಲ್ ಮಾಡಿ. 140 ಅನ್ತಾ ಇದೆ ಓಲಾ ಆಪ್‍. ಅಷ್ಟೇ ಕೊಡ್ತೀನಿ.” ಪರ್ಸಲ್ಲಿ ಆವತ್ತಷ್ಟೇ ವಿತ್‍ಡ್ರಾ ಮಾಡಿದ ದುಡ್ಡಿತ್ತು.

“ಬೇಡ ಬೇಡ ಮೇಡಂ. ಅಮ್ಮನ ಅಕೌಂಟಿಗೆ ಲಿಂಕ್‍ ಆಗಿದೆ ಅದು. ಸೀದಾ ಅಮ್ಮನಿಗೆ ಹೋಗತ್ತೆ”.

ಅವನು ಒಪ್ಪಿಕೊಂಡದ್ದಕ್ಕೆ ಸಮಾಧಾನದ ಉಸಿರು ಬಿಟ್ಟಳು ಕೃತಿ.

ಆಟೋ ಹೊರಟಿತು. ಎಂದಿನಂತೆ ಇಯರ್‍ ಫೋನ್‌ಗೆ ಕಿವಿ ಹಚ್ಚಿದಳು. ರಾಹತ್‍ ಫತೇ ಅಲೀ ಖಾನ್‍ ಕಿವಿಯೊಳಗೆ, ಅಲ್ಲಿಂದ ಎದೆಗೆ ಸರಾಗವಾಗಿ ಇಳಿಯುತ್ತಿದ್ದ. ಕಣ್ಮುಚ್ಚಿ ಆನಂದಿಸುವ ಸ್ಥಿತಿಗೆ ದಾಟಬೇಕು ಇನ್ನೇನು, ಹೊರಗಿನಿಂದ ರಪ್ಪಂತ ಬೀಸಿದ ಮಳೆಗಾಳಿಗೆ ನೀರು ರಾಚಿ ಒಳಬಂತು.

“ಸೈಡ್‍ ಕವರ್‍ ಇಲ್ವಾ?”

“ಯಾರೋ ಕದ್ದುಕೊಂಡು ಹೋದ್ರು ಮೇಡಂ.” ಬೀಸುವ ಗಾಳಿಯ ನಡುವೆ ಇವಳಿಗೆ ಕೇಳಲಿ ಅಂತ ಅವನು ಅರೆ ತಿರುಗಿ ಹೇಳಿದ. ಅವನ ಮುಖ ಕಾಣಲಿಲ್ಲ. ತಲೆ ತುಂಬ ಗುಂಗುರು ಕೂದಲು. ಖಾಕಿ ಶರಟು.

“ಇದನ್ನೆಲ್ಲ ಯಾರು ಕದೀತಾರೆ?” ಅವಳು ಗೊಣಗಿಕೊಂಡು ಬಟ್ಟೆ ಎಲ್ಲ ಮುದುರಿಕೊಂಡು ಕುಳಿತಳು. ಅರೆ ಬರೆ ಒದ್ದೆಯಾಗಿ ಚಳಿ ನಿಧಾನಕ್ಕೆ ಆವರಿಸುತ್ತಿತ್ತು.

“ಅಯ್ಯೋ ಮೇಡಂ. ನಿಮ್ಗೊತ್ತಿಲ್ಲ. ನಾನು ಆಟೋ ನಿಲ್ಲಿಸಿ ಸ್ನಾನ ಮಾಡ್ಕೊಂಡು ಬರೋ ಅಷ್ಟರಲ್ಲಿ ನನ್ನ ಬಟ್ಟೆನೂ ಕದ್ದಿದ್ದರು ನನ್ನ ಮಕ್ಕಳು”

“ಬಟ್ಟೆನಾ? ಬಟ್ಟೆ ಎಲ್ಲ ಇಲ್ಲಿಡ್ತೀರಾ?” ಆಟೋದವರ ಹತ್ತಿರ ಹೆಚ್ಚು ಮಾತನಾಡಬಾರದು ಅಂದುಕೊಳ್ಳುವುದು. ಕುತೂಹಲ ಹಾಳಾದ್ದು. ಆಗಾಗ ಸಂಭಾಷಣೆಗಳು ಇಣುಕಿಯೇಬಿಡುತ್ತವೆ.

ಅವನಿಗೆ ಮಾತನಾಡುವ ಉತ್ಸಾಹವಿದ್ದಂತೆ ಅನಿಸಿತು.

“ಮೇಡಂ, ನನಗೆ ಮನೆ ಇಲ್ಲ ಮೇಡಂ. ಇದೇ ಮನೆ. ಆಟೋದಲ್ಲೇ ಮಲಗ್ತೀನಿ. ಇದೇ ಎಲ್ಲ”

ಒಂದು ಗಳಿಗೆ ಅವಳಿಗೆ ನಂಬಲು ಕಷ್ಟವಾಯಿತು. ಮರುಕ್ಷಣ, ಹೌದಲ್ಲ, ಮನೆಯನ್ನು ತಾನೆಷ್ಟು ಸದರ ಮಾಡಿಕೊಂಡಿದ್ದೇನೆ. ಅದೊಂದು ಸವಲತ್ತು ಅನಿಸಿಯೇ ಇಲ್ಲ. ಅದಕ್ಕೊಂದು ಸೂಕ್ತ ಗೌರವ ಕೊಟ್ಟೇ ಇಲ್ಲ. ಒಂದು ಬೆಳಗ್ಗೆ ಎದ್ದು, ಅಡುಗೆ ಮಾಡಿ, ಮಗುವನ್ನು ಶಾಲೆಗೆ ಕಳಿಸಿ, ಯೋಗ ಅಂತೇನೋ ಮಾಡಿದ ಹಾಗೆ ಮಾಡಿ, ಸ್ನಾನ ಮುಗಿಸಿ ಅವಸರವಸರವಾಗಿ ಹೊರಟು ಹೊರಬಂದರೆ ಇಡೀ ದಿನ ಆಫೀಸಲ್ಲೇ ಹೋಗುತ್ತದೆ. ಮತ್ತೆ ಸಂಜೆ ಹೀಗೆ ವಾಪಾಸು ಹೋಗುವ ಮಹತ್ಕಾರ್ಯ. ಹೋಗಿ ಮಗುವಿಗೆ ಹೋಂ ವರ್ಕ್‍ ಮಾಡಿಸಿ ಮರುದಿನದ ತಯಾರಿ. ಮತ್ತೆ ನಿದ್ದೆ. ಒಳ್ಳೆ ಗಡಿಯಾರದ ಹಾಗಿನ ದಿನಚರಿ, ಮನೆಯಲ್ಲೇನೇನು ಮಾಡುತ್ತೇನೆ ಅನ್ನುವುದನ್ನು ತಾದ್ಯಾತ್ಮದಿಂದ ಗಮನಿಸದೆ ಬಹಳ ಕಾಲವಾಗಿ ಹೋಗಿದೆ. ಅದಿಲ್ಲದವರು ಸಿಕ್ಕಾಗಲೇ ಅದರ ಬೆಲೆ ನೆನಪಾಗುವುದು.

“ಸ್ನಾನ ಎಲ್ಲಿ ಮಾಡ್ತೀರಾ?”

“ಇಲ್ಲೇ ನಿರ್ಮಲ ಶೌಚಾಲಯದಲ್ಲಿ ಮೇಡಂ. ಗಾಡಿ ಸೈಡ್‌ಗ್‌ ಹಾಕಿ ಹೋಗಿದ್ನಾ, ಸ್ನಾನ ಮುಗಿಸಿ ಬರ್ತಾ ಬಟ್ಟೆನೂ ಇಲ್ಲ, ಮಳೆ ಕವರ್ರೂ ಇಲ್ಲ. ನನ್ನ ಹೊದಿಕೆ ಒಂದು ಬಿಟ್ಟಿದ್ದಾರೆ ನೋಡಿ ಮೇಡಂ”, ಅವನು ಹಿಂದೆ ಡಿಕ್ಕಿಯತ್ತ ಬೆಟ್ಟು ಮಾಡಿದ. ಹಿಂದಿರುಗಿ ನೋಡಿದಳು, ಬೀದಿಬದಿಯಲ್ಲಿ ಮಾರುವ ಕ್ವಾಲಿಟಿಯ ಹೊದಿಕೆ. ಪಾಪ ಅನಿಸಿತು. ಈ ಮಳೆಗೆ ಆಟೋದಲ್ಲೇ ಮಲಗುವುದು ಅಂದರೆ ಅದೆಷ್ಟು ಕಷ್ಟ!

“ಬರೇ 10 ಪರ್ಸಂಟ್‍ ಇನ್‌ಕ್ರಿಮೆಂಟ್ ಕೊಟ್ಟಿದ್ದಾರೆ ಈ ವರ್ಷ, ಹಗಲು ರಾತ್ರಿ ಕೆಲಸ ಮಾಡಿದರೂ ಏನೂ ಪ್ರಯೋಜನವಿಲ್ಲ. ಆ ಬಾಸಿಗೆ ಪ್ರೀತಿಯಾಗುವ ಹಾಗೆ ಇರಬೇಕೆಂದರೆ ಮನೆಗೇ ಹೋಗಬಾರದು. ಅದಿತಿಗೆ ಹುಷಾರಿಲ್ಲ ಅಂತ ಕಳೆದ ವಾರ ಬೇಗ ಬಂದೆ ನೋಡು, ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡು ನನಗೆ ಉದ್ಯೋಗ ಇನ್ನಷ್ಟು ಪ್ರಿಯಾರಿಟಿಯಾಗಬೇಕಂತ ಕುಯ್ದ, ಅವನಿಗೆ ಹೆಂಡತಿ ಮಕ್ಕಳಿಲ್ಲ. ನಾನೂ ಅವನ ಹಾಗೆ ಡೈವೋರ್ಸ್ ಕೊಟ್ಟು ಒಂಟಿ ಜೀವನ ನಡೆಸಬೇಕಿತ್ತಾ?” ಹಾರಾಡಿದ್ದಳು. ದುಷ್ಯಂತ ಆಫೀಸಿನಿಂದ ಬಂದ ತಕ್ಷಣ. ಕಳೆದ ವಾರ ಅವನು ಬಿಸಿನೆಸ್‍ ಟೂರ್‌ನ ನೆವದಲ್ಲಿ ಅದಿತಿಯನ್ನು ನೋಡಿಕೊಳ್ಳಲು ಲಭ್ಯನಿರಲಿಲ್ಲವೆನ್ನುವುದು ನೊರೆಯ ಕೆಳಗಿನ ಕಾಫಿಯಂತೆ ಇದ್ದೇ ಇತ್ತು. ಅಪ್ರೈಸಲ್‍ ಮೀಟಿಂಗ್‌ನಲ್ಲಿ ಬಾಸ್‍ ಕೊಟ್ಟ ಫೀಡ್‌ಬ್ಯಾಕ್‌ನ ಕಹಿಯನ್ನು ಕಾರಿ ಸಮಾಧಾನ ಮಾಡಿಕೊಳ್ಳಬೇಕಿತ್ತು ಅವಳಿಗೆ.

“ಹೋಗಲಿ ಬಿಡು, ನಾನು ಇಷ್ಟೊಂದು ದುಡೀತಾ ಇದೀನಿ, ಯಾವುದಕ್ಕೆ ಕಮ್ಮಿಯಾಗಿದೆ ಈಗ?” ಸಮಾಧಾನ ಮಾಡಲು ಅವನಿಗೆ ಬರುವುದಿಲ್ಲ. ಮತ್ತಷ್ಟು ಕೆರಳಿಸಿದ್ದ.

“ಹೆಂಗಸರು ಒಳಗೆ ಹೊರಗೆ ಎಲ್ಲ ಕಡೆ ದುಡೀಬೇಕು, ಮತ್ತು ಈ ಥರ ಮಾತು ಎರಡೂ ಕಡೆ ಕೇಳಬೇಕು. ಎಲ್ಲ ನಿನ್ನ ಸಂಬಳದಲ್ಲಿ ನಡೆಯುವ ಹಾಗೆ! ಕೆಲಸ ಬಿಡ್ತೀನಿ ನೋಡು.” ಅವನಿಗೊಂದು ಪೊಳ್ಳು ಬೆದರಿಕೆಯನ್ನು ಹಾಕಿ, ಅವನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲವಂತ ಮತ್ತಷ್ಟು ನರಳಿದ್ದಳು.

ಈಗ ಈ ಹೊದಿಕೆಯನ್ನು ಕಂಡು ನಾಚಿಕೆಯಾಯ್ತು ಅವಳಿಗೆ. ತನ್ನ 10 ಪರ್ಸೆಂಟಲ್ಲಿ ಈ ಥರದ ಎಷ್ಟು ಹೊದಿಕೆಗಳನ್ನು ಕೊಳ್ಳಬಹುದು ಅಂತ ಲೆಕ್ಕ ಹಾಕಿದರೆ ತಲೆ ಧಿಮ್ಮೆಂದಿತು.

“ಆಟೋದಲ್ಲೇ ಮಲಗಬೇಕಾ? ಮಳೆಗೆ?”

“ಇಲ್ಲ, ಇಲ್ಲೇ ರಾಜರಾಜೇಶ್ವರಿ ಅಂತ ಒಂದು ಕಲ್ಯಾಣ ಮಂಟಪ ಇದೆಯಲ್ವ ಮೇಡಂ? ಅಲ್ಲೇ ಆಟೋ ನಿಲ್ಲಿಸಿಕೋತೀನಿ. ಹೊರಗೆ ಜಗಲಿಯಲ್ಲಿ ಮಲಗೋಕೆ ಬಿಡ್ತಾರೆ. ಅವರಿಗೂ ಸೇಫ್ಟಿ, ನಮಗೂ ಒಂದು ಆಸರೆ”.

“ಯಾವೂರು ನಿಮ್ದು?”

ಇದು ಎಲ್ಲರೂ ಎಲ್ಲರಿಗೂ ಕೇಳುವ ಪ್ರಶ್ನೆ ಈ ಬೆಂಗಳೂರಿನಲ್ಲಿ. ಕೃತಿಯೂ ಇದಕ್ಕೆ ಹೊರತಲ್ಲ. ವಲಸಿಗರ ಪಟ್ಟಣ ಇದು. ಈ ಏರಿಯಾದಲ್ಲಂತೂ ಮೂಲ ಬೆಂಗಳೂರಿಗರು ವಿರಳಾತಿವಿರಳ. ತಮಿಳು, ತೆಲಗು, ಮಲಯಾಳಿಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಉತ್ತರ ಭಾರತೀಯರು ಸೇರಿಕೊಂಡುಬಿಟ್ಟಿದ್ದಾರೆ. ಎಲ್ಲರೂ ಎಲ್ಲರಿಗೂ ಈ ಪ್ರಶ್ನೆ ಕೇಳಿ ಪಡೆಯುವ ಉತ್ತರದಲ್ಲೊಂದು ಅಸ್ಮಿತೆಯನ್ನು ಹುಡುಕಿ ತೆಗೆದು ಧನ್ಯರಾಗುತ್ತಾರೆ. ಕೃತಿ ಈ ಪ್ರಶ್ನೆ ಹಾಕುವಾಗ ಉತ್ತರಿಸುವವರು ಒಂದೋ ಬೆಂಗಳೂರಿನವರಿರುತ್ತಾರೆ, ಓ ನಮ್ಮ ಬೆಂಗಳೂರಿನವರು ಅಂತ. ಇಲ್ಲ, ಕರ್ನಾಟಕದ ಯಾವುದೋ ಮೂಲೆಯಿಂದ ವಲಸೆ ಬಂದವರಿರುತ್ತಾರೆ, ಓ ನಮ್ಮ ಕನ್ನಡದೋರೆ ಅಂತ. ಇಲ್ಲ, ಅಕ್ಕ ಪಕ್ಕದ ರಾಜ್ಯಗಳಿಂದ ಬಂದವರಾದರೆ, ಓಯ್ ದಕ್ಷಿಣದೋರು ಅಂತ. ಅದಕ್ಕಿಂತ ಆಚೆ ಹೋದರೆ ಸ್ವಲ್ಪ ಅಪರಿಚಿತತೆ ಕಾಡಿ ಬೇಗ ಸುಮ್ಮನಾಗುತ್ತಾಳೆ.

“ತೀರ್ಥಹಳ್ಳಿ ಹತ್ರ ಒಂದು ಹಳ್ಳಿ ಮೇಡಂ.”

“ಬೆಂಗಳೂರಿಗೆ ಬಂದು ಎಷ್ಟು ವರ್ಷ ಆಯ್ತು?”

“14 ವರ್ಷ” ಅವನು ಉತ್ಸಾಹದಲ್ಲಿ ಉತ್ತರಿಸಿದ.

“ಫ್ಯಾಮಿಲಿ ಎಲ್ಲ?” ಕೃತಿಗೆ ಬೇಡವೆಂದರೂ ಮಾತನಾಡುವ ಉಮೇದಿತ್ತು, ಇಡೀ ದಿನ ಆಫೀಸಿನಲ್ಲಿ ಮೂಕೆತ್ತಿನಂತೆ ಕೆಲಸ ಮಾಡಿ, ನಾಲಗೆ ಇವತ್ತು ಮಾತಿಗೆ ಹವಣಿಸಿದಂತಿತ್ತು.

“ಎಲ್ಲ ಊರಲ್ಲಿದ್ದಾರೆ ಮೇಡಂ.”

ಇನ್ನೇನು ಕೇಳುವುದು ಅಂತ ಅವಳು ಸುಮ್ಮನಾದಳು.
ಅವನಿಗೆ ನಿರಾಸೆಯಾದಂತೆನಿಸಿ ತಾನೇ ಮುಂದುವರೆಸಿದ.

“ಜ್ವರ ಮೇಡಂ. ದಿನವೆಲ್ಲ ಮಲಗಿಲ್ಲ ಬೇರೆ. ಮನೆಯಲ್ಲಿ ದುಡ್ಡಿನ ಅಗತ್ಯ ತುಂಬಾ ಇದೆ. ಆಗತ್ತೆ, ನೈಟೆಲ್ಲಾ ದುಡೀತೀನಿ ಇವತ್ತು.” ಅವನು ಗೋಳು ತೋಡಿಕೊಂಡ.

ಇದು ಕೃತಿಗೆ ಹೊಸದಲ್ಲ. ಪ್ರತಿ ಆಟೋದವನಿಗೂ, ಪ್ರತಿ ಕ್ಯಾಬ್‌ನವನಿಗೂ ಕಷ್ಟಗಳ ಸರಮಾಲೆ ಕೊರಳ ಸುತ್ತಲೇ ಗಿರಕಿಯಾಡುತ್ತಿರುತ್ತದೆ.

“ಅಯ್ಯೋ ಛೇ!” ಉದ್ಗಾರವೆತ್ತಿ ತನ್ನ ಶ್ರೋತೃ ಕರ್ತವ್ಯವನ್ನು ಮುಗಿಸುತ್ತಾಳೆ ಯಾವಾಗಲೂ. ಇವತ್ತೂ ಅಷ್ಟೆಯೇ.
“ನಮ್ಮಣ್ಣ ಇದ್ದಿದ್ದರೆ ಕತೆ ಬೇರೆಯೇ ಇರುತ್ತಿತ್ತು ಮೇಡಂ. ಅವನನ್ನು ಯಾರೋ ಕೊಲೆ ಮಾಡಿದರು, ಅವನು ರೌಡಿಯಾಗಿದ್ದ ಮೇಡಂ ಊರಲ್ಲಿ.”

ಕೃತಿಗೆ ಒಮ್ಮೆ ಎದೆ ಧಸಕ್ಕೆಂದಿತು. ಎಂಥ ಫ್ಯಾಮಿಲಿ ಇವನದ್ದು, ಹೇಗೋ ಏನೋ, ನಾನ್ಯಾಕೆ ಮಾತಿಗೆ ನಿಂತೆ! ಹಲುಬಿಕೊಂಡು ಆದಷ್ಟು ಸುಮ್ಮನಿರೋಣ ಅಂದುಕೊಂಡಳು.

“ನಾವ್ಯಾರೂ ಆ ಥರ ಅಲ್ಲ ಮೇಡಂ. ನಮ್ಮಪ್ಪ ಅಂಗಡಿಯಲ್ಲಿ ಲೆಕ್ಕ ಬರಿಯೋರು. ಅವರೂ ಇಲ್ಲ ಈಗ. ಇಬ್ಬರೂ ತಂಗಿಯಂದಿರಿಗೆ ವರದಕ್ಷಿಣೆ ಸಮೇತ ಮದುವೆ ಮಾಡಿ ಕೊಟ್ಟಿದ್ದೇನೆ. ಅದರ ಸಾಲ ತೀರಿಸ್ತಾ 15 ವರ್ಷ ಕಳೆದೆ. ಎಲ್ಲ ಮುಗೀತು, ಇನ್ನೇನು ನೆಮ್ಮದಿ ಅಂದುಕೊಳ್ಳುವಾಗ ಅಮ್ಮನಿಗೆ ಹುಷಾರಿಲ್ಲ. ಕಿಡ್ನಿ ಪ್ರಾಬ್ಲಂ. ನಾನು ನಾಳೆಯೊಳಗೆ 7 ಸಾವಿರ ಕಟ್ಟಬೇಕು ಆಸ್ಪತ್ರೆಗೆ. 5 ಸಾವಿರ ಇದೆ, ಇನ್ನೂ ಎರಡು ಸಾವಿರ ಆಗಬೇಕು ನನಗೀಗ ಮನೆಯಲ್ಲಿ ಇರುವುದು ಅಮ್ಮ ಒಬ್ಬಳೇ ಮೇಡಂ. ಉಳಿಸಿಕೊಳ್ಳಬೇಕು.” ಅವನು ಕೊರಗುತ್ತಲೇ ಇದ್ದ.

ಅಮ್ಮ ಎಂದುಕೊಳ್ಳುವಾಗ ಕೃತಿಗೆ ಮನಸು ಹಸಿಯಾಯಿತು. ಸಾಯುವ ವಯಸ್ಸೇ ಅಮ್ಮನಿಗೆ? ಅನ್ಯಾಯವಾಗಿ ಹೋಗಿಬಿಟ್ಟಳು. ಅಮ್ಮ ಹೋದ ಮೇಲೆ ಊರ ಕಡೆಯ ಒಂದು ಸಂಬಂಧದ ತಂತಿಯೇ ಕಡಿದುಕೊಂಡ ಹಾಗೆ ಆಗಿದೆ. ಯಾಕೋ ಖಾಲಿ ಖಾಲಿ ಭಾವ ಊರಿಗೆ ಹೋದರೆ. ಈ ವರ್ಷ ಆಫೀಸಲ್ಲಿ ಅಪ್ರೈಸಲ್ ಟೈಮ್ ಅನ್ನುವುದೊಂದು ನೆವ ಹೂಡಿ ಅಮ್ಮನ ಶ್ರಾದ್ಧಕ್ಕೂ ಹೋಗಲಿಲ್ಲ. ಮುಟ್ಟಾದ ಕಾರಣ ಅವಳ ಹೆಸರಲ್ಲಿ ಎಲೆ-ಅನ್ನ ಹೊರಗಿಡಲೂ ಆಗಲಿಲ್ಲ. ಕಾಲ ಸರಿದಂತೆ ಅವಳ ಸಾವಿನ ತೀವ್ರತೆಯೂ ಕಮ್ಮಿಯಾಗುತ್ತಿದೆಯೇ. ತಪ್ಪಿತಸ್ಥ ಭಾವ ಆಕ್ರಮಿಸಿಕೊಳ್ಳುತ್ತಿದೆ ಅನಿಸುವಾಗಲೇ, ‘ಬದುಕಿರುವಾಗ ಅವಳನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡಿಲ್ಲವೇ?’ ಯೋಚಿಸಿ ಒಂದು ಬಗೆಯ ಹೆಮ್ಮೆ ಉಕ್ಕಿ ಬಂತು, ಮರುಕ್ಷಣವೇ ಹಾಗನಿಸಿದ್ದಕ್ಕೆ ನಾಚಿಕೆಯಾಯಿತು.

ಇಳಿಯುವ ಸಮಯ ಬಂದಿತ್ತು. ಬ್ಯಾಗ್ ಎತ್ತಿ ಹೆಗಲಿಗೇರಿಸಿಕೊಂಡವಳು ಆಟೋದಿಂದ ಒಂದು ಕಾಲು ಹೊರಗಿಟ್ಟವಳು, ಥಟ್ಟನೆ ತನಗೆ ಏನನಿಸುತ್ತಿದೆ ಎಂಬುದು ವಿವೇಚನೆಗೆ ಸಂಪೂರ್ಣವಾಗಿ ನಿಲುಕುವ ಮುಂಚೆಯೇ ಪರ್ಸಿನಲ್ಲಿದ್ದ 2 ಸಾವಿರ ರೂಪಾಯಿಗಳನ್ನು ತೆಗೆದು ಅವನತ್ತ ಚಾಚಿದಳು.

ಏನನ್ನುವುದು ಅವಳಿಗೆ ತಿಳಿಯಲಿಲ್ಲ. ಏನೇ ಹೇಳಹೋದರೂ ನಾಟಕೀಯತೆಯೇ ಆಗಿ ಬಿಡಬಹುದೆಂದು ಭಯವಾಯಿತು.

“ಇವತ್ತಿನ 2 ಸಾವಿರ ರೂಪಾಯಿ ಬಂತೆಂದುಕೊಂಡು ರೆಸ್ಟ್ ಮಾಡಿ”. ಉಗುಳು ನುಂಗುತ್ತಾ ನುಡಿದಳು.
ಅವನು ಯಾವ ಮುಲಾಜಿಲ್ಲದೆ ನೋಟನ್ನು ಪಡೆದುಕೊಂಡು, “ಥ್ಯಾಂಕ್ಸ್ ಮೇಡಂ” ನಗುತ್ತಾ ಹೇಳಿದ.
ಅಷ್ಟು ಕ್ಯಾಶುವಲ್ ಆಗಿ ಅವನು ದುಡ್ಡು ಪಡೆದುಕೊಂಡದ್ದಕ್ಕೆ ಅವಳಿಗೆ ಕಿರಿಕಿರಿಯಾಯಿತು.

“ನಿಮ್ಮ ಹೆಸರೇನು?”
“ಉಮರ್”.
“ಸರಿ ಉಮರ್, ಬರ್ತೀನಿ.” ಅಂದಳು.

ಮಳೆ ಸುರಿಯುತ್ತಲೇ ಇತ್ತು. ಅವಳಿಗೆ ಥಂಡಿ ಜೊತೆಗೆ ಸಂಕಟವೂ ಹತ್ತಿಕೊಂಡ ಹಾಗೆ.

ಆ ರಾತ್ರಿ ದುಷ್ಯಂತನಿಗೆ ಎಲ್ಲ ಕತೆ ಹೇಳಿದಳು.

“ಅವನು ಮೋಸ ಮಾಡಿರಬಹುದಾ ದುಷ್ಯಂತ್?”

“ಯಾರಿಗ್ಗೊತ್ತು?” ಅವನು ಮಾಮೂಲಿನಂತೆ ನಿರಾಸಕ್ತ. 2 ಸಾವಿರ ರೂಪಾಯಿ ಅವನಿಗೇನೂ ಚಿಕ್ಕ ವಿಷಯವಲ್ಲ. ಪೈಸೆ ಪೈಸೆ ಲೆಕ್ಕ ಹಾಕಿ ಹಿತಮಿತವಾಗಿ ವ್ಯಯಿಸುವವನು. ಆದರೆ ಕೊಟ್ಟ ಮೇಲೆ ಆ ದುಡ್ಡಿಗೆ ತಲೆಕೆಡಿಸಿಕೊಳ್ಳಲಾರ.
“ಮುಸ್ಲಿಂ ಅಂದರೂ ಕೊಟ್ಟೆ ನಾನು, ಜಾತಿಯೆಲ್ಲ ಯೋಚಿಸದೆ.” ಅವಳಿಗೆ ಒಳಗೊಳಗೆ ಚಡಪಡಿಕೆ.

“ಅವನು ಮುಸ್ಲಿಂ ಅಂತ ನೀನು ಗಮನಿಸಿದ್ದೀಯ ಅಂತ ಆದಾಗಲೇ ನಿನ್ನ ಸೆಕ್ಯುಲರಿಸಂ ಕೆಟ್ಟುಹೋಯಿತು. ಸುಮ್ಮನೆ ವ್ಯಾಲಿಡೇಷನ್‌ಗೆ ಯಾಕೆ ಪರದಾಡುತ್ತೀಯ?” ಅವನು ಯಾವತ್ತಿನದೋ ಜಗಳದ ಮುಯ್ಯಿಯನ್ನು ಇವತ್ತು ತೀರಿಸಿಕೊಳ್ಳುವವನಂತೆ ನಗಾಡಿದ.

ಅವಳಿಗೆ ಸಿಟ್ಟು ಬಂತು. ಆದರೆ ಅವನ ಹೆಸರು ಕೇಳಿ ಅನುಮಾನ ಹುಟ್ಟಿದ್ದು ಸುಳ್ಳಲ್ಲವಲ್ಲ. ನುಂಗಿಕೊಂಡು ಸುಮ್ಮನಾದಳು.

ಅವನಿಗೆ ಒಂದಾದ ಮೇಲೊಂದರಂತೆ ಕಷ್ಟಗಳು ಒದಗಿದ್ದನ್ನು ಹೇಳಿಕೊಂಡ. ಮನುಷ್ಯನಿಗೆ ಅಷ್ಟು ಕಷ್ಟ ಬರುವುದು ನಿಜವೇ? ಆದರೆ ತನಗೂ ಬಂದಿತ್ತಲ್ಲ ಒಮ್ಮೆ. ದುಷ್ಯಂತನ ಬುಸಿನೆಸ್ ಲಾಸ್, ಅಮ್ಮನ ಅನಾರೋಗ್ಯ, ತನ್ನ ಆಕ್ಸಿಡೆಂಟ್‍ ಎಲ್ಲ ಒಟ್ಟಿಗೆ ಆಕ್ರಮಿಸಿ ತನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡಲಿಲ್ಲವೇ? ಇವನ್ನೆಲ್ಲ ಹೇಳಿದರೆ ಯಾರೂ ನಂಬಲಿಕ್ಕಿಲ್ಲ ಅಂತ ತಾನೂ ಹಲ್ಲುಕಚ್ಚಿ ಕುಳಿತಿರಲಿಲ್ಲವೇ. ಆದರೆ ಇವನು ಒಮ್ಮೆಯೂ ಬೇಡ ಅನ್ನದೆ ತೆಗೆದುಕೊಂಡ! ಪ್ರಾಮಾಣಿಕನಾದರೆ ಬೇಡ ಅನ್ನಬೇಕಲ್ಲ, ಅಥವಾ ಸಾಧ್ಯವಾದಾಗ ದುಡ್ಡು ಹಿಂದಿರುಗಿಸುವ ಮಾತಾದರೂ ಆಡಬೇಕಲ್ಲ. ಅದೊಂದೂ ಇಲ್ಲದೆ, ಸುಮ್ಮನೆ ನನ್ನ ದುಡ್ಡಿನ ಮೇಲೆ ನಿಸ್ಸಂಕೋಚವಾದ ಹಕ್ಕಿರುವ ರೀತಿಯಲ್ಲಿ ವರ್ತಿಸಿದ. ತಾನಾದರೂ ಎಂಥ ಪೆದ್ದಿ. ಅಮ್ಮನ ಹೆಸರೆತ್ತಿದ್ದಕ್ಕೆ ಮನಕರಗಿ ಹೀಗೆ ದೊಡ್ಡ ಮೊತ್ತವನ್ನು ದಾನ ಮಾಡುವುದೇ? ಹಬ್ಬಕ್ಕೆ ಒಂದೊಳ್ಳೆ ಬಟ್ಟೆ ಬರುತ್ತಿತ್ತು.

ಇಮೋಷನಲ್ ಫೂಲ್‍ ತಾನು. ಇಂಥದ್ದು ಇದೇ ಮೊದಲಲ್ಲ. ಅನೇಕ ಸಲ ಅವರಿವರು ಕೇಳಿದರು ಅಂತ ಕೊಟ್ಟು ಮಂಗ ಆಗಿದ್ದಿದೆ. ಯಾರ್ಯಾರಿಗೋ ನಂಬಿ ಕೊಟ್ಟ ಸಾಲಗಳು, ಒಂದೂ ವಾಪಾಸಾಗಲಿಲ್ಲ. ದುಷ್ಯಂತನ ಕಸಿನ್‍ ಮನೆ ಕಟ್ಟಿಸುವಾಗ ಕೇಳಿದರಂತ ಅವನೇ ಬೇಡ ಅಂದರೂ ತಾನೇ ಮುತುವರ್ಜಿ ವಹಿಸಿ ಕೊಟ್ಟ ದುಡ್ಡು ಇನ್ನೂ ಬಂದಿಲ್ಲ. ಅವನ ಕಡೆಯವರು ಅಂತ ತಾನು ಬೇಧಭಾವ ಮಾಡಬಾರದು ಅನ್ನುವ ಆದರ್ಶಕ್ಕೆ ಬಿದ್ದು ಕೊಟ್ಟದ್ದು ಅದು. ದೊಡ್ಡ ಮೊತ್ತವೇ. ಹತ್ತಿರದವರು. ಮತ್ತೆ ಮತ್ತೆ ಕೇಳುವುದು ಹೇಗೆ. ಅವೆಲ್ಲ ನೆನಪಾಗಿ ದುಖಃ ಒತ್ತರಿಸಿತು.

ಮರುಗಿದಳೇ ಹೊರತು ದುಷ್ಯಂತನಿಗೆ ಹೇಳಿ ಅವನ ಕೈಲಿ ಇನ್ನಷ್ಟು ಅನ್ನಿಸಿಕೊಳ್ಳಲು ತಯಾರಿರಲಿಲ್ಲ.

ಒಂದು ಗಳಿಗೆ ಅವಳಿಗೆ ನಂಬಲು ಕಷ್ಟವಾಯಿತು. ಮರುಕ್ಷಣ, ಹೌದಲ್ಲ, ಮನೆಯನ್ನು ತಾನೆಷ್ಟು ಸದರ ಮಾಡಿಕೊಂಡಿದ್ದೇನೆ. ಅದೊಂದು ಸವಲತ್ತು ಅನಿಸಿಯೇ ಇಲ್ಲ. ಅದಕ್ಕೊಂದು ಸೂಕ್ತ ಗೌರವ ಕೊಟ್ಟೇ ಇಲ್ಲ. ಒಂದು ಬೆಳಗ್ಗೆ ಎದ್ದು, ಅಡುಗೆ ಮಾಡಿ, ಮಗುವನ್ನು ಶಾಲೆಗೆ ಕಳಿಸಿ, ಯೋಗ ಅಂತೇನೋ ಮಾಡಿದ ಹಾಗೆ ಮಾಡಿ, ಸ್ನಾನ ಮುಗಿಸಿ ಅವಸರವಸರವಾಗಿ ಹೊರಟು ಹೊರಬಂದರೆ ಇಡೀ ದಿನ ಆಫೀಸಲ್ಲೇ ಹೋಗುತ್ತದೆ. ಮತ್ತೆ ಸಂಜೆ ಹೀಗೆ ವಾಪಾಸು ಹೋಗುವ ಮಹತ್ಕಾರ್ಯ.

ಮತ್ತೆ ಕೆಲವು ದಿನಗಳ ಕಾಲ ದೂರದಿಂದ ರಾಜರಾಜೇಶ್ವರಿ ಕಲ್ಯಾಣ ಮಂಟಪ ಕಂಡಾಗಲೆಲ್ಲ ಕೃತಿಗೆ ಬೇಗುದಿಯಾಗುತ್ತಿತ್ತು. ಒಂದು ದಿನ ನಡುರಾತ್ರಿಯೋ ಬೆಳಬೆಳಗ್ಗೆಯೋ ದುಷ್ಯಂತನನ್ನು ಕರೆದುಕೊಂಡು ಇಲ್ಲಿಗೆ ಬಂದು ಅವನಿದ್ದಾನೆಯೋ ಇಲ್ಲವೋ, ಎಷ್ಟು ನಿಜವೋ ಎಷ್ಟು ಸುಳ್ಳೋ ನೋಡಿಯೇ ಬಿಡಬೇಕು. ದುಷ್ಯಂತ ಇಂತದ್ದನ್ನೆಲ್ಲ ಹಗುರವಾಗಿ ತೆಗೆದುಕೊಳ್ಳುತ್ತಾನೆ. ಕರೆದರೆ ಅವನು ನಕ್ಕು ತನಗೆ ಕಿರಿಕಿರಿ ಉಂಟಾಗುವ ಸಾಧ್ಯತೆಯೇ ಹೆಚ್ಚು. ಅಷ್ಟಕ್ಕೂ ಸುಳ್ಳಂತಾದರೆ ಆಟೋದವನನ್ನು ಮೂದಲಿಸುವ ಧೈರ್ಯವಾದರೂ ಇದೆಯಾ ತನಗೆ. ತಾನೊಂದು ಸಾಮಾಜಿಕ ಸೋಲು ಅನಿಸಿ ಖಿನ್ನಳಾದಳು.

ಅಂತೂ ಈ ಘಟನೆಯ ಗಾಢತೆ ನಿಧಾನಕ್ಕೆ ಕಡಿಮೆಯಾಯಿತು. ಎಲ್ಲೋ ಹೋಗಬೇಕಿದ್ದ ದುಡ್ಡು ಇನ್ನೆಲ್ಲೋ ಹೋಯಿತು ಅಂತ ಎಲ್ಲ ಮಧ್ಯಮ ವರ್ಗದವರ ಮಾದರಿಯಲ್ಲಿಯೇ ಅಂದುಕೊಂಡು ಸಮಾಧಾನಿಸಿಕೊಂಡಳು.
ಇವೆಲ್ಲ ಮತ್ತೆ ಭುಗಿಲೆದ್ದದ್ದು ಯೋಗಾಯೋಗ.

ಆವತ್ತು ಹೆಚ್‌ಎಸ್‌ಆರ್‍ ಲೇಔಟ್‌ನ ರಸ್ತೆಬದಿಯಲ್ಲಿ ನಿಂತುಕೊಂಡು ಮತ್ತೆ ಆಟೋಗಾಗಿ ಓಲಾ ಊಬರ್‌ನೆಲ್ಲ ಜಾಲಾಡುತ್ತಿದ್ದಳು. ಹೊಟ್ಟೆ ಚುರುಗುಡುತ್ತಿತ್ತು. ಸಂಜೆ ತಿನ್ನಲೆಂದು ಬೆಳಿಗ್ಗೆಯೇ ಎರಡು ದೋಸೆ ಡಬ್ಬಿಗೆ ಹಾಕಿಕೊಂಡಿದ್ದಳು. ಆಫೀಸಿನಲ್ಲಿ ತಿನ್ನಲು ಸಮಯವಾಗಿರಲಿಲ್ಲ. ಮತ್ತೆ ಯಾರು ಹೋಟೆಲಿಗೆ ಹೋಗಿ ಮುಲಾಜಿಗೆ ಬೀಳುವುದು, ಆಟೋ ಸಿಕ್ಕರೆ ಡಬ್ಬಿ ತೆರೆದು ತಿನ್ನಬಹುದೆಂದುಕೊಂಡಳು.

ಸ್ವಲ್ಪ ಹೊತ್ತಿಗೆ ಓಲಾ ಆಟೋ ಒದಗಿಸಿತು. ಹತ್ತಿ ಕುಳಿತಳಷ್ಟೇ.

“ಮೇಡಂಗೆ ನನ್ನ ಗುರುತು ಸಿಗಲಿಲ್ಲ”, ಅವನು ದೇಶಾವರಿ ನಗು ಬೀರಿದ.
ಅರೇ! ಅವನೇ.

ಮತ್ತೆ ಮತ್ತೆ ಅದೇ ಆಟೋ ಸಿಗುವುದು ಇಲ್ಲಿಯವರೆಗೆ ನಡೆದಿಲ್ಲ. ಬೆಂಗಳೂರಿನಲ್ಲಿ ಸಾವಿರಾರು ಆಟೋಗಳ ನಡುವೆ ಅವನೇ ಸಿಕ್ಕನೆಂದರೆ ನಂಬುವುದೇ ಕಷ್ಟ. ಇದೆಲ್ಲ ಏನೋ ಋಣಾನುಬಂಧದ ಹಾಗೆ ಅನಿಸಿತವಳಿಗೆ. ಮರುಕ್ಷಣವೇ ಕೇವಲ ಆಕಸ್ಮಿಕಗಳಿಗೆ ಹೀಗೆ ದೊಡ್ಡ ದೊಡ್ಡ ಹೆಸರು ಕೊಟ್ಟೇ ತಾನು ಮೋಸಹೋಗುವುದು ಅನಿಸಿ ಹುಷಾರಾದಳು.
ಅವನು ಮಾತಾಡಲಿ ಎಂದು ಅವಳು ಕಾದಳು. ಅವನು ಸುಮ್ಮನೇ ಇದ್ದ. ಲೆಕ್ಕಾಚಾರ ಹಾಕುತ್ತಿದ್ದಾನೇನೋ ಇವನು ಅಂತನಿಸಿ ಅವಳಿಗೆ ತಳಮಳವಾಯಿತು.

ಅವನು ಒಮ್ಮಿಂದೊಮ್ಮೆಗೆ ಹಿಂದೆ ತಿರುಗಿ, ಅವಳ ಕಾಲು ಮುಟ್ಟಲು ಪ್ರಯತ್ನಿಸಿದ. ಸರಕ್ಕನೆ ಹಿಂದಕ್ಕೆಳೆದುಕೊಂಡಳು.
“ನಿಮ್ಮ ಸಹಾಯ ಯಾವತ್ತೂ ಮರೆಯಲ್ಲ ಮೇಡಂ”.

“ಪರವಾಗಿಲ್ಲ ಬಿಡಿ”. ಮಾತಿಗಂದರೂ ದಾನಿಯ ಅಹಂಗೆ ಓಲೈಸುವಿಕೆ ಸಮಾಧಾನವನ್ನೇ ನೀಡುತ್ತದೆ.

ಅವನು ತಿರುಗಿ ರಸ್ತೆಯತ್ತ ಗಮನ ಕೇಂದ್ರೀಕರಿಸಿದ. ಆಟೋ ಹೊರ ವರ್ತುಲ ರಸ್ತೆಯನ್ನು ತಲುಪಿತು.

ಅವಳು ಅಕಾರಣವಾಗಿ ಮೊಬೈಲ್‌ನಲ್ಲಿ ಓಲಾ ಆಪ್‌ ಗಮನಿಸಿದಳು.

“ಆವತ್ತು ನಿಮ್ಮ ಹೆಸರು ಉಮರ್‍ ಅಂದ್ರಲ್ಲ? ಇದರಲ್ಲಿ ರೆಹಮಾನ್‍ ಅಂತಿದೆ?” ತನಗಾದ ಮೋಸದ ಅನಾವರಣದ ಆರಂಭವಿದು ಎಂದು ಕೊಂಚ ಸಿಟ್ಟಾದಳು. ಅವನು ಸ್ವಲ್ಪವೂ ಸಂಕೋಚವಿಲ್ಲದೆ ತನ್ನ ದುಡ್ಡು ತೆಗೆದುಕೊಂಡದ್ದು ಅವಳಿಗೆ ಇನ್ನೂ ಕಾಡುತ್ತಿತ್ತು.

“ರೆಹಮಾನೇ ಮೇಡಂ. ಆವತ್ತು ಉಮರ್ ಅಂತಂದೆ, ಉಮರ್ ನನ್ನ ಫ್ರೆಂಡ್‍ ಮೇಡಂ. ಅವನ ಹೆಸರಲ್ಲೇ ಓಡಿಸ್ತಾ ಇದ್ದೆ.”

ದುಡ್ಡು ತೆಗೆದುಕೊಂಡೂ ತನಗೆ ಸುಳ್ಳು ಹೇಳಿದ. ಕೆಡುಕೆನಿಸಿತು. ಅವನ ಸತ್ಯಕ್ಕೆ ತಾನು ಅರ್ಹಳೇ ಇರಲಿಲ್ಲವೇ? ತಾನಲ್ಲದಿದ್ದರೂ ತನ್ನ ದುಡ್ಡು!

“ಇವತ್ತಷ್ಟೇ ನನ್ನ ಲೈಸೆನ್ಸ್ ಮಾಡಿಸಿಕೊಂಡೆ ಮೇಡಂ” ಅವನು ಮತ್ತೆ ಮಾತನಾಡಿಸಿದ.

“ಇಷ್ಟು ವರ್ಷ ಲೈಸೆನ್ಸ್ ಇಲ್ಲದೇ ಓಡಿಸ್ತಿದ್ರಾ?” ಅವಳಿಗೆ ಸುಮ್ಮನಿರೋಣ ಅನಿಸಿದರೂ ಇದರ ತಳ ಶೋಧಿಸಿಯೇ ಬಿಡುವ ಛಲ.

“ಹೌದು ಮೇಡಂ”.

ಅವನು ತನ್ನ ಹೊಸ ಲೈಸೆನ್ಸ್ ಕಾರ್ಡ್ ತೋರಿಸಿದ. ದಿನಾಂಕವನ್ನು ಗಮನಿಸಿದಳು. ಇವತ್ತಿನದೇ.

ನಂತರ ಅವನಿಗೆ ಗೊತ್ತಾಗದಂತೆ ಅದರ ಫೋಟೋ ತೆಗೆದುಕೊಂಡಳು ಮೊಬೈಲಲ್ಲಿ. ಯಾಕೆಂದು ಕೇಳಿದರೆ ಅವಳಲ್ಲಿ ಉತ್ತರವಿರಲಿಲ್ಲ. ಯಾವಾಗಲೂ ಮೂರ್ಖಳಾಗುವುದೇ ತನ್ನ ಜಾಯಮಾನ. ಈ ಬಾರಿಯಾದರೂ ಹುಷಾರಾಗಿರಬೇಕು. ಯಾವುದಕ್ಕೂ ಒಂದು ಫೋಟೋ ಇರಲಿ ಅನಿಸಿತು. ಬೆಂಗಳೂರಿನ ಹಳ್ಳಕೊಳ್ಳದ ರಸ್ತೆಗಳಲ್ಲಿ ಓಲಾಡುತ್ತಾ ಸಾಗುವ ಆಟೋದಲ್ಲಿ ಕೂತು ಸರಿಯಾದ ಫೋಟೋ ತೆಗೆಯುವುದೂ ಎಂಥ ಕಷ್ಟ. 10 ಬಾರಿ ಪ್ರಯತ್ನಿಸಿದ ಮೇಲೆ ಬ್ಲರ್‍ ಅಲ್ಲದ ಒಂದು ಫೋಟೋ ಬಂತು. ಮತ್ತೆ ಅವನು ತಾನು ಫೋಟೋ ತೆಗೆಯುವುದನ್ನು ಗಮನಿಸಿದನೇನೋ ಅನಿಸಿ ಮುಜುಗರವಾಯಿತು. ಯಾರದೋ ಮನೆಗೆ ಹೋಗಿ ಅಚಾನಕ್ಕಾಗಿ ಅವರ ವೈಯಕ್ತಿಕವಾದ ಡೈರಿ ಕಣ್ಣಿಗೆ ಬಿದ್ದು ಕಣ್ಣಾಡಿಸಿದರೂ ಹುಟ್ಟುವ ಇರುಸು ಮುರುಸಿನ ಹಾಗೆ. ಅವನು ಗಾಡಿ ಓಡಿಸುವುದರಲ್ಲಿ ಮುಳುಗಿದ್ದ.

“ತೊಗೋಳಿ.” ಹಿಂದಿರುಗಿಸಿದಳು.

ಕತ್ತಲೆಯ ದಾರಿಯಲ್ಲಿ ಆಟೋ ಸಾಗುತ್ತಿತ್ತು. ಇನ್ನೊಂದು ಕಿಮೀ ಜನಸಂಚಾರವಾಗಲೀ, ಬೀದಿದೀಪವಾಗಲೀ ಇಲ್ಲ. ಅವನ ಲೈಸೆನ್ಸ್‌ ಫೋಟೋವನ್ನು ದುಶ್ಯಂತನಿಗೆ ವಾಟ್ಸಾಪ್‍ ಮಾಡಿದಳು. ಅವನದನ್ನು ನೋಡುತ್ತಾನೋ ಬಿಡುತ್ತಾನೋ ಗೊತ್ತಿಲ್ಲ. ಯಾಕೋ ನೆಮ್ಮದಿ ಅನಿಸಿತು.

“ಅಮ್ಮನಿಗೆ ಲಿವರ್ ಪ್ರಾಬ್ಲಂ ಅಂತಂದ್ರಲ್ಲ ನೀವು?” ಅವಳಿಗೆ ಚೆನ್ನಾಗೆ ನೆನಪಿತ್ತು ಅವನಮ್ಮನಿಗೆ ಕಿಡ್ನಿ ಪ್ರಾಬ್ಲಂ ಅಂತಂದಿದ್ದ ಅಂತ. ಆದರೂ ಒಂದು ಕಲ್ಲು ಬಿಸಾಕಿ ನೋಡೋಣ ಅನಿಸಿತ್ತು. ಅವನೇನಾದರೂ ಮೋಸ ಮಾಡಿದ್ದಿದ್ದರೆ ರೆಡ್‍ ಹ್ಯಾಂಡೆಡ್ ಆಗಿ ಹಿಡಿದು ಹಾಕುವ ಉಮೇದು. ಹಿಂಜರಿಕೆ ಇಲ್ಲದೆ ದುಡ್ಡು ತೆಗೆದುಕೊಳ್ಳುವವರ ಮೇಲೆ ಯಾವತ್ತೂ ಸಂಶಯ ಪಡಬೇಕಾದದ್ದೇ.

“ಕಿಡ್ನಿ ಮೇಡಂ”.

“ನಾ ಕೊಟ್ಟ ಕ್ಯಾಶ್ ಅಮ್ಮನಿಗೆ ಹೇಗೆ ತಲುಪಿಸಿದ್ರಿ?” ದಡಬಡಾಯಿಸುವನೇನೋ ಅಂದುಕೊಂಡು ಕೇಳಿದಳು.
“ನನ್ನ ಫ್ರೆಂಡ್‍ ಒಬ್ಬರಿಗೆ ಕೊಟ್ಟು, ಅವರ ಹತ್ರ ಅಮ್ಮನ ಅಕೌಂಟಿಗೆ ಟ್ರಾನ್ಸ್ಫರ್‍ ಮಾಡಿಸಿಕೊಂಡೆ ಮೇಡಂ”. ಅವನ ಬಳಿ ಉತ್ತರ ಸಿದ್ಧವಿತ್ತು.

“ಈಗ ಆರಾಮಿದ್ದಾರಾ?”

“ಪರವಾಗಿಲ್ಲ ಮೇಡಂ.”

ಇನ್ನೇನು ಕೇಳುವುದು ತೋಚದೆ ಸುಮ್ಮನಾದಳು.

“ಮೇಡಂ, ಅಮ್ಮನಿಗೆ ದಿನಾ 500 ರೂಪಾಯಿಯ ಮಾತ್ರೆ ತಿನ್ನಿಸಬೇಕು”

“ಓಹ್”.

“ನನ್ನ ಫ್ರೆಂಡ್‍ ಒಬ್ಬನ ಹತ್ರ ತುಂಬಾ ಸಾಲ ಮಾಡಿದ್ದೀನಿ, ಮೇಡಂ. ಹೇಗೆ ವಾಪಾಸ್‌ ಮಾಡೋದು ಅಷ್ಟು ದೊಡ್ಡ ಅಮೌಂಟ್‌ ಅಂತ ಯೋಚನೆಯಾಗಿ ಬಿಟ್ಟಿದೆ”

ಅವಳು ಪ್ರತಿ ನುಡಿಯಲಿಲ್ಲ.

“ಮೇಡಂ, ಊಟ ಮಾಡಿಲ್ಲ. ಜೇಬಿನಲ್ಲಿದ್ದದ್ದೆಲ್ಲ ಖಾಲಿ.” ಅವನಿಗೆ ಮತ್ತೆ ಪೀಕಿಸುವ ಆಸೆಯೆಂದರಿವಾಗಿ ಅವಳಿಗೆ ಸಿಟ್ಟು ನೆತ್ತಿಗೇರಿತು. ಅವುಡುಗಚ್ಚಿಕೊಂಡು ಸುಮ್ಮಗಾದಳು.

“ಬೆಳಿಗ್ಗೆಯಿಂದ ಲೈಸೆನ್ಸ್‌ಗೆ ಅಂತ ಕ್ಯೂನಲ್ಲಿಯೇ ಇದ್ದೆ. ನಿಮ್ಮದೇ ಬೋಣಿ ಮೇಡಂ. ದೇವರಾಣೆಗೂ ಒಂದು ಟೀನೋ ಬಿಸ್ಕತ್ತೋ ಕುಡಿದಿಲ್ಲ.”

ಬೆಳಿಗ್ಗೆ ತುಂಬಿಸಿಕೊಂಡ ದೋಸೆ ಡಬ್ಬಿ ಹಾಗೇ ಇದೆ ಎಂಬುದು ನೆನಪಾಯಿತು ಅವಳಿಗೆ. ಕೊಟ್ಟು ಬಿಡಲೇ ಅನಿಸಿತು ಒಮ್ಮೆ. ಮನೆಗೆ ಹೋಗಿ ತಿನ್ನಬಹುದು ತಾನು. ಆದರೆ ಇವನಿಗೆ ಬೇಕಾದದ್ದು ದುಡ್ಡು, ಊಟ ಅಲ್ಲ, ಆ ದುಡ್ಡನ್ನು ಕಬಳಿಸಲು ನಮೂನೆ ನಮೂನೆಯ ಪ್ರಯತ್ನ ಅನ್ನಿಸಿ ಮನಸ್ಸೆಲ್ಲಾ ಕಹಿಯಾಯಿತು. ಜೊತೆಗೆ ಬಾಯಿಯೂ ಕಹಿಯಾಯಿತು. ಬಾಯಿಯಲ್ಲಿ ತುಂಬಿಕೊಂಡಿದ್ದ ಎಂಜಲನ್ನು ನುಂಗಲು ಅಸಹ್ಯವಾಗಿ ಉಗುಳುವ ಒತ್ತಡ ಉಂಟಾಯಿತು. ಯಾವತ್ತೂ ರಸ್ತೆಯಲ್ಲಿ ಉಗುಳಿದವಳಲ್ಲ. ಮುಜುಗರ ಒತ್ತಿ ಬಂತು. ಆದರೆ ಮನಸಿಗೊದಗಿದ ಅಸಹನೆಯನ್ನು ಹೊರಹಾಕದೆ ವಿಧಿಯಿಲ್ಲ ಅನಿಸಿ ಮತ್ತಷ್ಟು, ಬಾಯಿ ತುಂಬುವಷ್ಟು ಎಂಜಲನ್ನು ತುಂಬಿಸಿಕೊಂಡು ರಪ್ಪಂತ ಉಗುಳಿದಳು. ಯಾವತ್ತೂ ಮಾಡದ ಸಾಧನೆಯೆನಿಸಿ ಎದೆಯುಬ್ಬಿ ಬರುವ ಮೊದಲೇ ಅವಳು ಉಗಿದ ಎಂಜಲು ಬೆಳ್ಳಂದೂರಿನ ಗಲೀಜು ನೀರಲ್ಲಿ ಸೇರಿ, ಮರುಕ್ಷಣವೇ ಮಾಯವಾಗಿ, ಈ ನಗರದ ನೆಲಗಾಣ್ಕೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ ಎಂಬುದು ಅವಳಿಗೆ ಒಂದು ವಿಚಿತ್ರ ನಿರಾಸೆ ತಂದಿತು.

“ಮತ್ತೆ ಜ್ವರ ಬಂದ ಹಾಗೆ ಅನಿಸತ್ತೆ ಮೇಡಂ”. ಅವನ ಧಾಡಸೀತನ ರೇಜಿಗೆ ತರಿಸುವಂತಿತ್ತು. ಅವಳು ಪ್ರತಿಕ್ರಿಯಿಸಲಿಲ್ಲ.

“ಅಮ್ಮನ ಮಾತ್ರೆಗೆ ದುಡ್ಡು ಹೊಂದಿಸೋದರಲ್ಲೇ ಆಗತ್ತೆ ಮೇಡಂ, ರೆಸ್ಟ್ ಇಲ್ಲ ಏನಿಲ್ಲ..” ಗೊಣಗುವುದನ್ನು ಮುಂದುವರೆಸಿದ. ಆವತ್ತಿನ ಮಳೆಯ ಥರವೇ ಒಂದು ಜಿಟಿಜಿಟಿಗುಟ್ಟುವಿಕೆ ಅವನ ಧ್ವನಿಯಲ್ಲಿ.

ಜೀವನದಲ್ಲಿ ಒಳ್ಳೆಯವಳಾಗಿ ಸೋತು ಸಾಕಾಗಿದೆ. ಒಳ್ಳೆಯತನದಷ್ಟು ದೊಡ್ಡ ಹುಂಬತನ ಬೇರೊಂದಿಲ್ಲ. ಒಂದು ಸಾರಿಯಾದರೂ ಅದರ ಬಂಧನವನ್ನು ದಾಟಿ ಸ್ವಲ್ಪ ಕೆಟ್ಟವಳಾಗಬೇಕು. ವ್ಯವಹಾರ ಜ್ಞಾನವಿಲ್ಲ ತನಗೆ. ಅದು ಎಲ್ಲ ಕಡೆ ಇಣುಕುತ್ತದೆ. ದುಡ್ಡು ವಸ್ತು ಕಳೆದುಕೊಳ್ಳುವುದು ಒಂದು ಕಡೆ, ಇನ್ನೊಂದು ಕಡೆ ಈ ಸೋಲಿನ ಅಳುಕು. ಈ ಬಾರಿ ತಾನು ದೃಢವಾಗಿರಬೇಕು ಎಂದು ಗಟ್ಟಿ ಮನಸ್ಸು ಮಾಡಿಕೊಂಡಳು.
ಮನೆ ಬಂತು.

ಅವಳು ಇಳಿದಳು. ಅವನು ತನ್ನತ್ತ ಒಂದು ಬಗೆಯ ನಿರೀಕ್ಷಣಾ ಭಾವದಿಂದ ನೋಡಿದ ಹಾಗೆ ಭಾಸವಾಯಿತು.
“ಹಸಿವೆ ಮೇಡಂ.” ಬೇಡಲು ಇನ್ನೇನೂ ಬಾಕಿಯಿಲ್ಲದಂತೆ ನುಡಿದ.

ಬ್ಯಾಗ್‌ನಲ್ಲಿದ್ದ ಡಬ್ಬಿಯನ್ನು ಮತ್ತಷ್ಟು ಒತ್ತಿ ಸೆಡವಿನಿಂದೆಂಬಂತೆ ಸರಸರನೆ ನಡೆದುಹೋದಳು. ಓಲಾ ಮನಿಯಿಂದ ದುಡ್ಡು ಕಟ್ ಆಗಿತ್ತು. ತಂತ್ರಜ್ಞಾನ ಮುಂದುವರೆದಂತೆ ಅನಗತ್ಯ ಮಾತುಗಳ ಹಂಗೂ ಇರದೆ ನಿರಾಳ.

ಮನೆ ಬಾಗಿಲು ತೆರೆದಿತ್ತು.

ದುಷ್ಯಂತ ಒಳ್ಳೆ ಮೂಡಲ್ಲಿದ್ದ.

“ಬಿಸಿ ಬಿಸಿ ಅಕ್ಕಿ ರೊಟ್ಟಿ ಮಾಡ್ತಾ ಇದ್ದೀನಿ, ಬೇಗ ಬನ್ನಿ ಮೇಡಂ.” ರಾಗವಾಗಿ ಕರೆದ.

“ಬೆಳಗ್ಗೆಯ ದೋಸೆ ಹಾಗೇ ಇದೆ.” ಅವಳು ಕ್ಷೀಣವಾಗಿ ನುಡಿದಳು.

“ಅಯ್ಯೋ ಹಳಸಿ ಹೋಗಿರತ್ತೆ ಅದು. ನಾನಿಲ್ಲಿ ಫ್ರೆಶ್ ಆಗಿ ಮಾಡಿಟ್ಟಿಲ್ಲವಾ? ಬಾ ಬಾ”. ಅವಳ ಬ್ಯಾಗ್‌ನಿಂದ ಡಬ್ಬಿ ತೆಗೆದು ಬಿಸಾಕಲು ಹೋದ.

ಸಿರ್ರೆಂದು ಸಿಡುಕಿತು ಅವಳಿಗೆ.

“ಆಹಾರದ ಬೆಲೆ ಗೊತ್ತಿಲ್ಲ ನಿಂಗೆ, ಅಷ್ಟು ಸುಲಭವಾಗಿ ಬಿಸಾಕ್ತೀಯ”.

ಅವನ ಮುಖ ಕೆಂಪಗಾಯಿತು. ಡಬ್ಬಿಯನ್ನು ಅಲ್ಲೇ ಕುಕ್ಕಿ ಸಿಟ್ಟಲ್ಲಿ ಹುಬ್ಬುಗಂಟಿಕ್ಕಿಕೊಂಡು ಟಿವಿ ಆನ್‍ ಮಾಡಿದ.
ಡಬ್ಬಿ ತೆರೆದಳು. ಹಂಚದೆ ತಿಂದರೆ ಪಾಪ ಎಂದು ಅಜ್ಜಿ ಹೆದರಿಸುತ್ತಿದ್ದದ್ದು ನೆನಪಾಯಿತು ಅವಳಿಗೆ. ಮನಸ್ಸು ಒಮ್ಮೆ ಹಿಂಜರಿಯಿತು. ರೆಹಮಾನನ ಮುಖವನ್ನು ಕಣ್ಣ ಮುಂದೆ ತಂದುಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ.

ವಿಲಕ್ಷಣವಾದ ಸಮಾಧಾನವಾಯಿತವಳಿಗೆ.

ದೋಸೆ ಹಾಳಾಗಿರಲಿಲ್ಲ. ಪಿಚ್ಚೆನಿಸಿತು. ಹಾಳಾಗಿದ್ದಿದ್ದರೆ ಒಳ್ಳೆಯದಿತ್ತೇನೋ.

ನಿರ್ಜೀವ ದೋಸೆಯನ್ನೊಮ್ಮೆ ಬೇಸರದಿಂದ ದಿಟ್ಟಿಸಿ ತಿನ್ನಲು ಮೊದಲು ಮಾಡಿದಳು.

ಆದರೆ ಒಣಗಿದ ಚರ್ಮದಂತಹಾ ದೋಸೆ, ಜಗಿಯುತ್ತಿದ್ದಂತೆ, ಲಾಲಾರಸದೊಂದಿಗೆ ಬೆರೆತು, ಚೂರಾಗಿ, ಹದವಾಗಿ, ಮೆದುವಾಗಿ, ಅವನಿಗೆ ಕೊಟ್ಟು ಮತ್ತೆ ಮತ್ತೆ ಪೆದ್ದಿಯಾಗುವುದನ್ನು ತಪ್ಪಿಸಿಕೊಂಡ ಭಾವಕ್ಕೇನೋ ಎಂಬಂತೆ ರುಚಿಸುತ್ತ ಬಂತು. ದೋಸೆ ಹೊಟ್ಟೆ ಸೇರುತ್ತಿದ್ದಂತೆ ತನ್ನೊಳಗೆ ಕೊನೆಗೂ ಒಂದು ಬಗೆಯ ಸ್ಥಿರತೆ ಮೂಡುತ್ತಿದೆ ಅನಿಸಿತು. ಅದರ ಬೆನ್ನಲ್ಲೇ ತಿಂದದ್ದೆಲ್ಲ ಒತ್ತರಿಸಿಕೊಂಡು ಬಂದು ಬಾತ್‌ರೂಮಿಗೆ ಓಡಿದಳು.