ಇದು ನೋಬೆಲ್ ಪುರಸ್ಕೃತ ಐಸಾಕ್ ಬಾಶೆವಿಸ್ ಸಿಂಗರ್ ಅವರ ಆತ್ಮಕಥೆ. ಇದು ಸಿಂಗರ್ ಮೊದಲಿಗೆ ಯಿದ್ದಿಶ್ ಭಾಷೆಯಲ್ಲಿ ಅಂಕಣಬರಹದ ರೂಪದಲ್ಲಿ ಪ್ರಕಟಿಸಿದ್ದರು. ನಂತರ ಇದು ಇಂಗ್ಲಿಷ್ ನಲ್ಲಿ ಅನುವಾದವಾಯಿತು. ಇದು ಘಟನಾವಳಿಗಳು ಮತ್ತು ಬೆಲೇಸ್ ಲೇಟ್ರಸ್ ನಡುವಿನ ಸಾಹಿತ್ಯಿಕ ಪ್ರಯೋಗ ಎಂದು ಅವರೇ ಕರೆದಿದ್ದಾರೆ. ಈ ಪುಸ್ತಕ ಒಂದು ಮನೆಯವರ (ಲೇಖಕರ ಮನೆಯ) ಮತ್ತು ರಬ್ಬೀ ಕೋರ್ಟಿನ ಕಥೆಗಳನ್ನ ಹೇಳುತ್ತಾ ಹೋಗುತ್ತದೆ.
ರಬ್ಬೀಗಳ ಓದಿನ ಮನೆ, ಕೋರ್ಟ್ ಮತ್ತು ಆ ಮನೆ ಜನರ ಬದುಕು ಎಷ್ಟು ಒಂದರೊಳಗೊಂದು ಬೆಸೆದಿದೆ ಎಂದರೆ, ಎರಡನ್ನು ಬೇರ್ಪಡಿಸಿ ಕಥೆ ಹೇಳೋಕೆ ಆಗದಷ್ಟು. ರಬ್ಬೀಗಳ ಕೋರ್ಟ್ ಯಹೂದಿಗಳ ಹಳೆಯ ಒಂದು ಸಂಸ್ಥೆ. ಇದು ಜನಗಳಿಗೆ ತಮ್ಮ ಕಷ್ಟಗಳ ಹೇಳಿಕೊಳ್ಳಲು, ಸಂದೇಹಗಳ ಪರಿಹರಿಸಿಕೊಳ್ಳಲು, ಹಿಡಿದಿರುವ ಭೂತ ಬಿಡಿಸಿಕೊಳ್ಳಲು ಹೀಗೆ ಎಲ್ಲದಕ್ಕೂ ಇದು ಬೇಕೇ ಬೇಕಾಗಿತ್ತು. ಸಿಂಗರ್ ಇದನ್ನ ಬರೆದಿರುವ ಮೂಲ ಉದ್ದೇಶ ಕಣ್ಮರೆಯಾಗಿ ಹೋಗಿರುವ ಪೋಲಿಷ್ ಪರಿಸರದ ಕಥೆಗಳನ್ನ, ಅವರ ಭಾಷೆಯನ್ನ, ಕೆಲ ವ್ಯಕ್ತಿತ್ವಗಳನ್ನ ಜೀವಂತವಾಗಿರಿಸಲು.
ಸಿಂಗರ್ ಪ್ರಕಾರ ಒಬ್ಬ ಮನುಷ್ಯನ ನಿಜವಾದ ಕಥೆಯನ್ನ ಬರೆಯಲಾಗುವುದಿಲ್ಲ. ಅದು ಸಾಹಿತ್ಯಕ್ಕೂ ಮೀರಿದ ಶಕ್ತಿ. ಒಬ್ಬರ ಕಥೆ ಪೂರ್ಣ ನೀರಸವಾಗಿ ಇಲ್ಲಾ, ನಂಬಲಾರದ ಹಾಗೇ ಇರುತ್ತದೆ. ಸಿಂಗರ್ ಒಬ್ಬ ಅಪ್ಪಟ ಕಥೆಗಾರ, ಕಥೆ ಹೇಳಲೆಂದೇ ಹುಟ್ಟಿದವನು, ಅನ್ನುವಂತೆ ಕಥೆಗಳನ್ನ ಹೇಳಿದವನು. ಮಹಾಯುದ್ಧಗಳ ಮುಂಚಿನ ಅವನ ಬಾಲ್ಯದ ಲೋಕವನ್ನ, ಅದರ ಶ್ರೀಮಂತಿಕೆಯನ್ನ, ಜೀವಂತವಾಗಿ ಒಂದಿಡೀ ಜನಾಂಗದ ಶೈಲಿಯನ್ನ ದಾಖಲಿಸಿದ ಎಂದರೂ ತಪ್ಪಾಗಲಾರದು. 

ಸ್ಮಿತಾ ಮಾಕಳ್ಳಿ ಅನುವಾದಿತ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ತುಣುಕುಗಳು ಹದಿನೈದು ದಿನಕ್ಕೊಮ್ಮೆ, ಗುರುವಾರ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿವೆ

 

ತ್ಯಾಗ

ಈ ಪ್ರಪಂಚದಲ್ಲಿ ಕೆಲವು ವಿಚಿತ್ರ ವ್ಯಕ್ತಿಗಳಿದ್ದಾರೆ. ಅವರ ಆಲೋಚನೆಗಳು ಅವರಿಗಿಂತಲೂ ವಿಚಿತ್ರವಾಗಿರುತ್ತವೆ.

ವಾರ್ಸಾದ-ನಂಬರ್ 10, ಕ್ರೋಚ್ಮಲ್ನಾ ರಸ್ತೆಯಲ್ಲಿನ ನಮ್ಮ ಮನೆಯ ಹಜಾರವನ್ನು ಹಂಚಿಕೊಂಡು ಹಿರಿಯ ದಂಪತಿಗಳಿಬ್ಬರು ವಾಸವಾಗಿದ್ದರು. ಅವರು ಬಹಳ ಸರಳ ವ್ಯಕ್ತಿಗಳಾಗಿದ್ದರು. ಆತ ಕೈಕಸುಬಿ ಅಥವಾ ಅಲೆಮಾರಿ ವ್ಯಾಪಾರಿ ಇದ್ದಿರಬಹುದು. ಅಂದಹಾಗೇ ಅವರ ಮಕ್ಕಳಿಗೆಲ್ಲಾ ಮದುವೆಯಾಗಿತ್ತು. ವರ್ಷಗಳು ಉರುಳಿದರೂ ಈ ಇಬ್ಬರೂ ಅಷ್ಟೇ ಪ್ರೀತಿಯಲ್ಲಿದ್ದರೆಂದು ಅಕ್ಕ-ಪಕ್ಕದವರು ಹೇಳುತ್ತಿದ್ದರು. ಪ್ರತಿ ಸಬ್ಬಾತಿನ ಮಧ್ಯಾಹ್ನದ ಕೋಲೆಂಟ್ ನಂತರ, ಇಬ್ಬರೂ ಒಬ್ಬರಿಗೊಬ್ಬರ ತೋಳು ಬೆಸೆದು ಒಂದು ವಾಕ್ ಹೋಗುತ್ತಿದ್ದರು. ದಿನಸಿ ಅಂಗಡಿಯಾಗಲಿ, ಕಟುಕನಂಗಡಿಯಾಗಲಿ, ಎಲ್ಲಿಯಾದರೂ ಸರಿ, ಆಕೆ ವ್ಯಾಪಾರ ಮಾಡುತ್ತಿದ್ದ ಕಡೆಗಳಲ್ಲೆಲ್ಲಾ ಅವನ ಬಗ್ಗೆಯೇ ಮಾತನಾಡುತ್ತಿದ್ದದ್ದು : “ಅವನಿಗೆ ಬೀನ್ಸ್ ಅಂದರೆ ಇಷ್ಟ… ಅವನಿಗೆ ಒಳ್ಳೆಯ ಬೀಫ್ ನ ತುಂಡು ಇಷ್ಟ… ಅದರಲ್ಲೂ ಕರುವಿನದ್ದು…” ಕೆಲ ಹೆಂಗಸರು ಹೀಗೆ ಇರುತ್ತಾರೆ. ತಮ್ಮ ಗಂಡನ ಬಗ್ಗೆ ಮಾತನಾಡುವುದನ್ನು ನಿಲ್ಲಿಸೋದೆಯಿಲ್ಲ. ಅವನೋ, ಇದಕ್ಕೆ ಪ್ರತಿ ಎಂಬಂತೆ ‘ನನ್ನ ಹೆಂಡತಿ’ ಎಂದು ಹೇಳಿಕೊಳ್ಳುವ ಯಾವ ಅವಕಾಶವನ್ನೂ ಬಿಡುತ್ತಿರಲಿಲ್ಲ.

ನನ್ನ ತಾಯಿ, ರಬ್ಬಿಗಳ ವಂಶಸ್ಥೆ, ಈ ದಂಪತಿಗಳ ಕಂಡರೆ ಮುಖ ಸಿಂಡರಿಸುತ್ತಿದ್ದವಳು. ಅವಳ ಪ್ರಕಾರ ಇಂತಹ ನಡವಳಿಕೆ ಸಾಮಾನ್ಯತೆಯ ಸಂಕೇತವಾಗಿತ್ತು. ಆದರೆ, ಎಲ್ಲಾದರ ಆಚೆಗೆ ವಿಶೇಷವಾಗಿ ವಯಸ್ಸಾದ ದಂಪತಿಗಳ ನಡುವಿನ ಪ್ರೀತಿಯನ್ನ ಅಷ್ಟು ಸುಲಭವಾಗಿ ತೆಗೆದು ಹಾಕಲು ಆಗುವುದಿಲ್ಲ.

ಇದ್ದಕ್ಕಿದ್ದ ಹಾಗೇ ಒಂದು ಗಾಳಿ ಸುದ್ದಿ ಎಲ್ಲರನ್ನೂ ಚಕಿತಗೊಳಿಸಿತು; ಆ ಹಿರಿಯ ದಂಪತಿಗಳು ಡಿವೋರ್ಸ್ ತೆಗೆದುಕೊಳ್ಳಬೇಕೆಂದಿದ್ದರು.

ಇಡೀ ಕ್ರೋಚ್ಮಲ್ನಾ ರಸ್ತೆಯೇ ಕೋಲಾಹಲವಾಯಿತು. ಏನಿದರ ಅರ್ಥ..? ಇದೇಗೆ ಸಾಧ್ಯ..? ಯುವತಿಯರು ತಮ್ಮ ಕೈಗಳನ್ನು ಹಿಸುಕಿಕೊಳ್ಳುತ್ತಾ: “ಅಮ್ಮಾ, ನನಗೆ ಹುಷಾರು ತಪ್ಪುತ್ತಿದೆ! ನಾನು ಮೂರ್ಛೆ ಹೋಗುತ್ತಿದ್ದೇನೆ!”. ಇನ್ನೂ ವಯಸ್ಸಾದ ವಯಸ್ಸಾದ ಮಹಿಳೆಯರು “ಇದುವೇ ಪ್ರಪಂಚದ ಅಂತ್ಯ” ಎಂದು ಘೋಷಿಸಿದರು. ಕೋಪಗೊಂಡವರು ಎಲ್ಲಾ ಪುರುಷರನ್ನ ಶಪಿಸಿದರು: “ಒಳ್ಳೆಯದು, ಈ ಪುರುಷರು ಮೃಗಗಳಿಗಿಂತಲೂ ಕೆಟ್ಟವರೇ ಅಲ್ಲವೇ..?”. ಶೀಘ್ರದಲ್ಲೇ ಮತ್ತೊಂದು ಹೊಸ ಅತಿರೇಕದ ವರದಿ ಇಡೀ ಬೀದಿಯನ್ನು ಪ್ರಚೋದನೆಗೆ ಒಳಪಡಿಸಿತು. ಆ ಪಾಪಿ ವಿಚ್ಚೇದನ ತೆಗೆದುಕೊಳ್ಳುತ್ತಿದ್ದದ್ದು, ಇನ್ನೊಬ್ಬಳು ಯುವತಿಯನ್ನು ಮದುವೆಯಾಗಲು. ಆ ಮುದಿ ಮನುಷ್ಯನ ಮೇಲೆ ಬೈಗುಳಗಳು ಹೇಗೆಲ್ಲಾ ರಾಶಿಯಾಗಿರಬಹುದೆಂದು ನೀವು ಚನ್ನಾಗಿ ಊಹಿಸಿಕೊಳ್ಳಬಹುದು. ಅವನ ಹೊಟ್ಟೆ ಉರಿಯಲಿ, ಅವನ ಕಪ್ಪು ಹೃದಯಕೆ ನೋವಾಗಲಿ, ಅವನ ಕರುಳಿಗೆ ಬೆಂಕಿ ಬೀಳಲಿ, ಅವನ ಕೈ ಕಾಲು ಮುರಿಯಲಿ, ದೊಡ್ಡ ರೋಗ ಬರಲಿ, ಸ್ವರ್ಗದ ತೀರ್ಪು ಅವನನ್ನ ನೋಡಿಕೊಳ್ಳಲಿ!

(ಐಸಾಕ್ ಬಾಶೆವಿಸ್ ಸಿಂಗರ್)

ಹೆಂಗಸರು ಅವನಿಗೆ ಯಾವುದೇ ಬೈಗುಳಗಳ ಉಳಿಸಲಿಲ್ಲ. ಈ ಮುದಿ ಮೇಕೆ ತನ್ನ ಮದುವೆಯ ಚಪ್ಪರದ ಬದಲಾಗಿ, ಅವನ ಕಪ್ಪು ಶವಪೆಟ್ಟಿಗೆಯ ನೋಡುವಂತಾಗಲಿ. ಅವನ ಮದುವೆ ದಿನ ನೋಡಲು ಅವನು ಬದುಕಿರಬಾರದೆಂದು ಭವಿಷ್ಯ ಕೂಡ ನುಡಿದರು.

ಸ್ವಲ್ಪ ಸಮಯದಲ್ಲಿ, ನಮ್ಮ ಮನೆಯಲ್ಲಿ, ನಿಜ, ಅಸಲಿ ನಿಜ‌, ಬೆಳಕಿಗೆ ಬಂತು.

ಆ ಮುದುಕಿಯೇ ಖುದ್ದಾಗಿ ಬಂದು ನಮ್ಮಮ್ಮನ ಜೊತೆಗೆ ಈ ವಿಚಾರದ ಬಗ್ಗೆ, ಏನೆಲ್ಲಾ ಹೇಳಿದಳು ಎಂದರೇ, ಸ್ವತಃ ನಮ್ಮಮ್ಮನ ಬಿಳುಚು ಮುಖ ಮುಜುಗರದಿಂದ ಮತ್ತಷ್ಟು ಕೆಂಪೇರಿತು. ನಮ್ಮಮ್ಮ ನನ್ನನ್ನು ಆದಷ್ಟು ಅಲ್ಲಿಂದ ಓಡಿಸಲು ನೋಡಿದಳು. ಯಾಕೆಂದರೆ ನಾನು ಅದನ್ನೆಲ್ಲಾ ಕೇಳಿಸಿಕೊಳ್ಳಬಾರದೆಂದು. ಆದರೂ ನಾನು ಕೇಳಿಸಿಕೊಂಡೆ, ಏಕೆಂದರೆ ನಾನು ಕುತೂಹಲದ ಬೆಂಕಿಯಲ್ಲಿದ್ದೆ. ಆ ಹೆಂಗಸು ನನ್ನಮ್ಮನಿಗೆ ಆಣೆ ಮಾಡಿ ಕೂಡ ಹೇಳಿದಳು, ನನ್ನ ಗಂಡನ ಹೊರತಾಗಿ ಈ ಪ್ರಪಂಚದಲ್ಲಿ ನಾನು ಯಾವುದನ್ನು ಪ್ರೀತಿಸುವುದಿಲ್ಲ ಎಂದು.

“ಪ್ರೀತಿಯ ಮಹಿಳೆಯೇ”, ಅಂತ ಅವಳ ತರ್ಕವನ್ನ ಶುರುವಿಟ್ಟಳು, “ಅವನ ಕೈ ಬೆರಳ ಉಗುರನ್ನ ಉಳಿಸಲು ನಾನು ನನ್ನ ಪ್ರಾಣವನ್ನ ಬೇಕಾದರೂ ಖುಷಿಯಿಂದಲೇ ಬಿಡುತ್ತೇನೆ. ನನಗೆ ನಾನೇ ವ್ಯಥೆಯಾಗಿದ್ದೇನೆ. ನಾನು ವಯಸ್ಸಾದ ಮುರಿದ ಚೂರು, ಆದರೆ ಅವನು ಈಗಲೂ ಗಂಡಸು. ಅವನಿಗೊಬ್ಬಳು ಹೆಂಡತಿ ಬೇಕು. ಅವನು ತಾನೆ ಯಾಕೆ ನನ್ನ ಹೊರೆಯನ್ನ ಹೊರಬೇಕು? ಎಲ್ಲಿ ತನಕ ಮಕ್ಕಳು ಮನೆಯಲ್ಲಿ ಇರುವರೋ ಅಲ್ಲಿವರೆಗೂ ಎಚ್ಚರಿಕೆಯಿಂದ ಇರಬೇಕು. ಜನ ಗಾಳಿಸುದ್ದಿ ಹಬ್ಬಿಸುತ್ತಿರುತ್ತಾರೆ. ಆದರೆ ಈಗ ನನಗೆ ಅವರು ಏನೇ ಅಂದರು ಅದು ಕೇವಲ ಬೆಕ್ಕಿನ ಕೂಗಿನಂತೆ, ಲೆಕ್ಕಕ್ಕೆ ಇರುವುದಿಲ್ಲ. ನನಗೆ ಇನ್ನ ಗಂಡನ ಅಗತ್ಯವಿಲ್ಲ. ಆದರೆ, ಅವನು ಚನ್ನಾಗಿ ಇರಲಿ. ಒಳ್ಳೆಯ ತರುಣನ ಹಾಗೇ. ಅವನು ಈಗಲು ಮಕ್ಕಳನ್ನ ಕೊಡಬಲ್ಲ. ಈಗ ಅವನು ತನ್ನನ್ನು ಒಪ್ಪಿರುವ ಹುಡುಗಿಯನ್ನ ನೋಡಿದ್ದಾನೆ. ಅವಳು 30ರ ಮೇಲಿನವಳು, ಅವಳಿಗೆ ಅವಳ ಮದುವೆಯ ವಾದ್ಯವ ಕೇಳಲು ಈಗ ಕಾಲಕೂಡಿ ಬಂದಿದೆ. ಜೊತೆಗೆ ಅವಳೊಬ್ಬ ಅನಾಥೆ, ಬೇರೆಯವರ ಮನೆಯಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಾಳೆ. ಅವಳ ಜೊತೆ ಇವನು ಖಂಡಿತವಾಗಿ ಖುಷಿಯಿಂದ ಕಾಲ ಕಳೆಯುತ್ತಾನೆ. ನನ್ನ ಬಗ್ಗೆ ಹೇಳುವುದಾದರೆ, ಅವನು ಕೊಟ್ಟಿರುವುದೇ ಸಾಕು. ಸಾಕಾಗುವಷ್ಟು ಕೊಡುತ್ತಾನೆ ಕೂಡ, ಜೊತೆಗೆ ನಾನು ಸಣ್ಣ ಪುಟ್ಟ ವ್ಯಾಪಾರ ಮಾಡುತ್ತೇನೆ. ಈ ವಯಸ್ಸಿನಲ್ಲಿ ನನಗೆ ಏನು ತಾನೆ ಬೇಕು ಹೇಳು? ನನಗೆ ಅವನು ಖುಷಿಯಿಂದ ಇರುವುದ ನೋಡುವುದೊಂದೆ ಸಾಕು. ಪ್ರಮಾಣ ಕೂಡ ಮಾಡಿದ್ದಾನೆ ಅವನು, ನೂರಿಪ್ಪತ್ತು ವರ್ಷಗಳು ಕಳೆದ ಬಳಿಕ ಅವನ ಸಮಯ ಬಂದಾಗ ನಾನು ಅವನ ಪಕ್ಕದ ಸಮಾಧಿಯಲ್ಲಿ ಮಲಗುತ್ತೇನೆಂದು. ಮೇಲಿನ ಲೋಕದಲ್ಲಿ ಮತ್ತೆ ನಾನು ಅವನ ಹೆಂಡತಿಯಾಗಿರುತ್ತೇನೆ. ಸ್ವರ್ಗದಲ್ಲಿ ಅವನ ಕಾಲುಮಣೆಯಾಗಿರುತ್ತೇನೆ. ಹೀಗೆಯೇ ನಮ್ಮಿಬ್ಬರ ನಡುವೆ ಎಲ್ಲವೂ ನಿಶ್ಚಿತವಾಗಿದೆ.”

ಆ ಹೆಂಗಸು ನನ್ನ ತಂದೆಯ ಬಳಿಗೆ ಬಂದಿದ್ದರ ಕಾರಣ ಇಷ್ಟೆ, ಡಿವೋರ್ಸ್ ಗೆ ವ್ಯವಸ್ಥೆ ಮಾಡಿಸಿ ಮತ್ತೆ ಅವನ ಮದುವೆ ನಡೆಸಲು.

ನನ್ನ ತಾಯಿ ಅವಳನ್ನ ಓಲೈಸಲು ಶತಾಯ ಗತಾಯ ಪ್ರಯತ್ನಿಸಿದಳು. ಹೊರಗಿನ ಹೆಂಗಸರಂತೆಯೇ ನನ್ನ ತಾಯಿಗೆ ಈ ವ್ಯವಹಾರ ಒಂದು ರೀತಿಯಲ್ಲಿ ಇಡೀ ಹೆಣ್ಣಿನ ಕುಲಕ್ಕೆ ಅವಹೇಳನಕಾರಿಯಾಗಿ ಕಂಡಿತು. ಎಲ್ಲಾ ಮುದಿ ಗಂಡಸರು ಚಿಕ್ಕ ಪ್ರಾಯದ ಹುಡುಗಿಯರ ಮದುವೆಯಾಗಲು ತಮ್ಮ ತಮ್ಮ ಹೆಂಡತಿಯರಿಗೆ ಡಿವೋರ್ಸ್ ಕೊಡಲು ಶುರುವಿಟ್ಟರೇ ಇಡೀ ಪ್ರಪಂಚ ಎಷ್ಟು ಉತ್ತಮ ಸ್ಥಿತಿಯಲ್ಲಿರುತ್ತದೆ ಅಂತ ನನಗೆ ಅನ್ನಿಸಿತು. ಈ ಇಡೀ ಆಲೋಚನೆಯೇ ಶುದ್ಧ ಸೈತಾನನ ಕೆಲಸವೆಂದು ನಮ್ಮಮ್ಮ ಹೇಳಿದಳು, ಜೊತೆಗೆ ಇಂತಹ ಪ್ರೀತಿ ಅಪವಿತ್ರವಾದದ್ದು ಸಹ ಅಂತ. ಅವಳು ನೀತಿ ಶಾಸ್ತ್ರದ ಪುಸ್ತಕವೊಂದರಿಂದ ಉಲ್ಲೇಖಿಸಿದಳು ಕೂಡ. ಆದರೆ ಇಲ್ಲಿ ಈ ಸಾಧಾರಣ ಮಹಿಳೆಯೂ ಸಹ ಇಂತಹದನ್ನ ಉಲ್ಲೇಖಿಸಬಲ್ಲವಳಾಗಿದ್ದಳು. ಅವಳು ನಮ್ಮಮ್ಮನಿಗೆ ಹೇಗೆ ರೇಚಲ್ ಮತ್ತು ಲೇಹ್ ತಮ್ಮ ಸೇವಕಿಯರಾದ ಬಿಲ್ಹಾ ಮತ್ತು ಜಿಲ್ಪಾರನ್ನ ಜೇಕಬ್ ಗೆ ಉಪಪತ್ನಿಯರನ್ನಾಗಿ ಮಾಡಿದ್ದರೆಂದು ಕೂಡ ಹೇಳಿದ್ದಳು.

ನಾನು ಆಗ ಹುಡುಗನೇ ಆಗಿದ್ದರೂ, ಈ ವ್ಯವಹಾರದಲ್ಲಿ ಬೇರೆ ರೀತಿ ಆಲೋಚಿಸುವನೇನು ಆಗಿರಲಿಲ್ಲ. ನನಗೆ ಈ ಮದುವೆ ಮುರಿದು ಬೀಳುವುದೇ ಬೇಕಿತ್ತು. ಎಲ್ಲದಕ್ಕಿಂತ ಮೊದಲಾಗಿ, ನನಗೆ ಈ ವಿಚ್ಚೇದನದಲ್ಲಿ ಹಾಜರಿರುವುದು ಬೇಕಿತ್ತು. ಎರಡನೇಯದಾಗಿ, ಈ ಮದುವೆಗಳಲ್ಲಿ ನನಗೆ ಯಾವಾಗಲೂ ಸಿಗುವ ಸ್ಪಾಂಜ್ ಕೇಕಿನ ಚೂರು, ವೈನ್ ಅಥವಾ ಬ್ರಾಂಡಿಯ ಸಿಪ್ ಗೋಸ್ಕರ. ಮೂರನೆಯದಾಗಿ, ಇದರಿಂದ ನನ್ನ ತಂದೆ ದುಡ್ಡು ಸಂಪಾದಿಸಿದರೇ ಸ್ವೀಟ್ ಕೊಳ್ಳಲು ಒಂದಷ್ಟು ಚಿಲ್ಲರೆಗಳು ಸಿಗುವುದು. ಇದೆಲ್ಲದಕ್ಕಿಂತ ನಾನೂ ಒಬ್ಬ ಗಂಡಸೆ…

ಯಾವಾಗ ನನ್ನ ತಾಯಿಗೆ ಈ ಹೆಂಗಸನ್ನ ಬದಲಾಯಿಸಲಾಗುವುದಿಲ್ಲ ಅಂತ ಮನದಟ್ಟು ಆಯಿತೋ, ಅವಳನ್ನು ತನ್ನ ತಂದೆಯ ಬಳಿಗೆ ಕಳುಹಿಸಿದಳು, ತಕ್ಷಣವೇ ನನ್ನ ತಂದೆ ಕಾನೂನಿನ ಬಗ್ಗೆ ಚರ್ಚಿಸಲು ಶುರು ಮಾಡಿದ. ವಿಚ್ಚೇದನದ ಬಳಿಕ ಅವಳ ಹಾಲಿ ಗಂಡ ಅಪರಿಚಿತ ವ್ಯಕ್ತಿಯ ಹಾಗೆಯೇ ಎಂದು ಎಚ್ಚರಿಸಿದ ಕೂಡ. ಅಲ್ಲದೇ ಅವಳು ಮಾಜಿ ಗಂಡನ ಜೊತೆಗೆ ಒಂದೇ ಸೂರಿನಡಿಯಲ್ಲಿ ಬದುಕಲು ಅವಕಾಶವಿಲ್ಲ. ಅವನ ಜೊತೆ ಮಾತನಾಡುವಂತಿಲ್ಲ. ಇದೆಲ್ಲಾ ಅವಳಿಗೆ ತಿಳಿದಿತ್ತಾ ಅಥವಾ ಅವಳು ಅವನ ಜೊತೆಗೆ ಇರಬಹುದೆಂದು ಕಲ್ಪಿಸಿಕೊಂಡಿದ್ದಳಾ..? ಆ ಹೆಂಗಸು ತನಗೆ ಕಾನೂನು ಗೊತ್ತಿದೆ ಎಂದಳು, ಅವಳು ಅವನ ಬಗ್ಗೆ ಯೋಚಿಸುತ್ತಿದ್ದಳೇ ಹೊರತು, ಅವಳ ಬಗ್ಗೆಯಲ್ಲ. ಅವನಿಗಾಗಿ ಯಾವ ತ್ಯಾಗಕ್ಕಾದರೂ ಸಿದ್ಧಳಿದ್ದಳು. ನನ್ನ ತಂದೆ ಅವಳಿಗೆ ಉತ್ತರಿಸುವುದಾಗಿ ಹೇಳಿ, ಮರುದಿನ ಬರಲು ಹೇಳಿದರು.

ಆ ಹೆಂಗಸು ನಿರ್ಗಮಿಸಿದ ತಕ್ಷಣ, ನನ್ನ ತಾಯಿ ಅಪ್ಪನ ಓದಿನ ಕೋಣೆಗೆ ಹೋಗಿ, ಅವನ ಜೊತೆ ವಾದಕ್ಕೆ ನಿಂತಳು, ಅವಳಿಗೆ ಈ ರೀತಿಯಾಗಿ ದುಡ್ಡು ದುಡಿಯುವುದು ಬೇಕಿರಲಿಲ್ಲ. ಆ ಹಳೇ ಮುದುಕ ಒಬ್ಬ ಸ್ತ್ರೀ ಲೋಲುಪ, ಮೇಕೆಯಂತವನು, ಅಸಹ್ಯದ ಮನುಷ್ಯ, ಕಾಮಿ ಎಂದೆಲ್ಲಾ‌ ಹೇಳಿದಳು. ನೀನೇನಾದರೂ ಈ ಡೈವೋರ್ಸ್ ನ ಮಂಜೂರು ಮಾಡಿ, ಮತ್ತೊಂದು ಮದುವೆ ಮಾಡಿದ್ದೆ ಆಗಲಿ, ಇಡೀ ಕುಲ ಬಾಂದವರು ನಿನ್ನ ವಿರುದ್ಧ ಉರಿದೇಳುತ್ತಾರೆ ಎಂದು ಸಹ ಹೇಳಿದಳು. ತಂದೆ ತನ್ನ ಹಸಿಡಿಕ್ ಓದಿನ ಮನೆಗೆ ಹೋದ, ಈ ಪ್ರಕರಣದ ಸೂಕ್ಷ್ಮತೆಗಳನ್ನ ಸರಿಯಾದ ವ್ಯಕ್ತಿಗಳ ಬಳಿ ಮಾತನಾಡಲು. ಅಲ್ಲೂ ಕೂಡ ಚರ್ಚೆ ಕಾವೇರಿತು, ಕಡೆಗೆ ಎರಡು ಗುಂಪಿನವರು ಒಂದು ಒಪ್ಪಂದಕ್ಕೆ ಬಂದರು. ಅದೇನೆಂದರೇ‌ ಯಾರಿಗೂ ಕೂಡ ಮೂಗು ತೂರಿಸಲು ಹಕ್ಕಿಲ್ಲ ಎಂದು. ಒಬ್ಬ ವಿದ್ವಾಂಸ ಒಂದು ಸಾಲನ್ನು ಉಲ್ಲೇಖಿಸಿದ “ಮುಂಜಾನೆ ಬೀಜ ಬಿತ್ತಿ, ಮುಸ್ಸಂಜೆಗೆ ಕೈ ಚೆಲ್ಲಬೇಡ. ಫಲಪ್ರದವಾಗಿರು ಮತ್ತು ವೃದ್ಧಿಸು.” ಗೆಮೆರಾದ ಪ್ರಕಾರ ಇದಕ್ಕೆ ವಯಸ್ಸಾದವನೂ ಕೂಡ ಬದ್ಧನಾಗಿರಬೇಕು.

ಮರುದಿನ ಬೆಳಗ್ಗೆ ಆ ಹೆಂಗಸು ವಾಪಸು ಬಂದಾಗ, ಈ ಬಾರಿ ಅವಳ ಗಂಡನೂ ಸಹ ಬಂದಿದ್ದ, ನನ್ನ ತಂದೆ ಅವಳಿಗೆ ಅಡ್ಡ ವಿಚಾರಣೆ ಶುರುವಿಟ್ಟ. ನನ್ನನ್ನು ಓದಿನ ಕೋಣೆಯಿಂದ ಹೊರಗೆ ಕಳುಹಿಸಲಾಯಿತು. ತಂದೆ ಮುಜುಗರದಿಂದ ಮಾತನಾಡಲು ತೊಡಗಿದರು. ಹಲವು ಬಾರಿ ನಿಧಾನವಾಗಿ, ಕೆಲವು ಸಾರಿ ವೇಗವಾಗಿ, ಮತ್ತೊಂದಷ್ಟು ಬಾರಿ ಮೃದುವಾಗಿ, ಕೆಲವೊಮ್ಮೆ ಸಿಟ್ಟಿನಲ್ಲಿ.

ನಾನು ಬಾಗಿಲ ಹಿಂದೆ‌ ನಿಂತು, ಅಲ್ಪ ಸ್ವಲ್ಪ ಕೇಳಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಸ್ವಲ್ಪ ಮಾತ್ರವೇ ಕೇಳಿಸಿಕೊಳ್ಳಲಾಗಿದ್ದು. ನನಗೆ ಭಯವಾಗಿ‌ ಹೋಗಿತ್ತು. ಯಾವ ಗಳಿಗೆಯಲ್ಲಾದರೂ ಅಪ್ಪ ಸಿಡಿದು “ಕಿಡಿಗೇಡಿಗಳಾ ನೆನಪಿಡಿ, ಅವನಿನ್ನೂ ನಮ್ಮನ್ನು, ತನ್ನ ಪ್ರಪಂಚದ ಅವ್ಯವಸ್ಥೆಯ ಆಳ್ವಿಕೆಯನ್ನೂ ತ್ಯಜಿಸಿಲ್ಲ!” ಎಂದು ಅವರನ್ನ ಹೊರ ದಬ್ಬುತ್ತಾನೆಂದು, ಇದೇ ಅವನ ರೀತಿಯಾಗಿತ್ತು. ಯಾರೆಲ್ಲಾ ಕಟ್ಟಳೆಗಳ ನಿರಾಕರಿಸುತ್ತಿದ್ದರೋ ಅವರಿಗೆಲ್ಲಾ ಇದೇ ರೀತಿಯಾಗಿತ್ತು. ಒಂದು ಗಂಟೆ ಕಳೆಯಿತು, ಈಗಲೂ ಅವರಿಬ್ಬರೂ ಒಳಗೆ ಇದ್ದರು. ಆ ಮುದಿ ಮನುಷ್ಯ ನಿಧಾನವಾಗಿ ಮಾತನಾಡುತ್ತಿದ್ದ, ಮುರಿದ ಧ್ವನಿಯಲ್ಲಿ. ಆ ಹೆಂಗಸು ಗೋಗರಿಯುತ್ತಿದ್ದಳು. ಅವಳ ಧ್ವನಿ ಮೃದುವಾಗುತ್ತಾ ಹೋಗಿತ್ತು. ನಾನೂ ಗ್ರಹಿಸಿದ ಪ್ರಕಾರ, ಅವಳು ನನ್ನ ತಂದೆಯನ್ನ ಓಲೈಸುತ್ತಿದ್ದಳು. ಅವಳು, ಅವರ ನಡುವಿನ ಮಾತುಗಳನ್ನ ಪಿಸುಗುಟ್ಟಿದಳು, ಅವು ಯಾವೊಬ್ಬ ಗಂಡಸು ಒಬ್ಬ ಹೆಂಗಸಿನ ಬಾಯಿಂದ ವಿರಳವಾಗಿ ಕೇಳುವಂತವು. ಗಂಡ ಹೆಂಡತಿಯರಿಬ್ಬರು ಓದಿನ ಕೋಣೆಯಿಂದ ಆಚೆ ಬಂದಾಗ ಸಂತುಷ್ಟರಾಗಿ ಕಂಡರು. ಮುದುಕ ತನ್ನ ಕರ್ಚೀಫಿನಿಂದ ಮುಖದ ಮೇಲಿನ ಬೆವರನ್ನ ಒರೆಸಿಕೊಂಡ. ಆ ಹೆಂಗಸಿನ ಕಣ್ಣು ಯೋಮ್ ಕಿಪ್ಪೂರ್ ನ ನಂತರದ ರಾತ್ರಿಯ ಹಾಗೆ ಹೊಳೆಯುತ್ತಿತ್ತು, ಈ ಸಂತೋಷ ವರ್ಷದ ಪ್ರಾರ್ಥನೆಗಳಿಗೆ ಉತ್ತರ ದಕ್ಕಿದೆ ಎಂದು ಖಾತ್ರಿಯಾಗಿ ಭಾವಿಸಿದಾಗಲಷ್ಟೇ ಇದು ಸಾಧ್ಯ….

ನಮ್ಮಮ್ಮ ನನ್ನನ್ನು ಆದಷ್ಟು ಅಲ್ಲಿಂದ ಓಡಿಸಲು ನೋಡಿದಳು. ಯಾಕೆಂದರೆ ನಾನು ಅದನ್ನೆಲ್ಲಾ ಕೇಳಿಸಿಕೊಳ್ಳಬಾರದೆಂದು. ಆದರೂ ನಾನು ಕೇಳಿಸಿಕೊಂಡೆ, ಏಕೆಂದರೆ ನಾನು ಕುತೂಹಲದ ಬೆಂಕಿಯಲ್ಲಿದ್ದೆ. ಆ ಹೆಂಗಸು ನನ್ನಮ್ಮನಿಗೆ ಆಣೆ ಮಾಡಿ ಕೂಡ ಹೇಳಿದಳು.

ಆ ದಿನ ಮತ್ತು ಮದುವೆಯ ನಡುವಿನ ವಾರಗಳು ಉರುಳಿದಂತೆಲ್ಲಾ, ಕ್ರೋಚ್ಮಲ್ನಾ ಬೀದಿ ಆಶ್ಚರ್ಯಚಕಿತವಾಗಿಯೇ ಇತ್ತು. ಸಮುದಾಯದಲ್ಲಿ ಎರಡು ಬಣಗಳಾಗಿದ್ದವು. ಈ ಪ್ರಕರಣ ಎಲ್ಲೆಲ್ಲೂ ಚರ್ಚೆಗೊಳಗಾಗುತ್ತಲೇ ಇತ್ತು: ದಿನಸಿ ಅಂಗಡಿಯಲ್ಲಿ, ಕಟುಕನ ಅಂಗಡಿಯಲ್ಲಿ, ಯಾನಶ್ ಬಜಾರಿನ ಮೀನಿನ ತೊಟ್ಟಿಗಳಲ್ಲಿ ಮತ್ತು ಸಂತೆಯ ಹಿಂದಿನ ಹಣ್ಣಿನಂಗಡಿಯಲ್ಲಿ; ಕಲಿಯದವರ ಸಿನಗಾಗ್ ಗಳಲ್ಲಿ ಮತ್ತು ಹಾಸಿಡಿಕ್ ಓದಿನ ಮನೆಗಳಲ್ಲಿ, ಅಲ್ಲಿನ ಶಿಷ್ಯರೆಲ್ಲಾ ಒಟ್ಟುಗೂಡಿ ತಮ್ಮ ಪವಾಡ ಪುರುಷ ರಬ್ಬೀ ಮಾಡಿದ ಪವಾಡಗಳ ಬಗ್ಗೆ ಕೊಚ್ಚಿಕೊಂಡು ಎದುರಾಳಿಗಳ ಅವಮಾನಿಸಿ ಇವರ ಹಕ್ಕು ಸಾಧಿಸುವಲ್ಲಿಯೂ ಸಹ.

ಅದರಲ್ಲಿ ಹೆಚ್ಚು ಉತ್ಸುಕರಾಗಿದ್ದು ಹೆಂಗಸರೆ. ಆ ಹಳೆಯ ಹೆಂಡತಿ, ಸ್ವತಃ ಎಲ್ಲಾ ನಾಚಿಕೆ ಬಿಟ್ಟಂತಾಗಿದ್ದಳು. ಅವಳು ಸುತ್ತ ಮುತ್ತಲಿನವರಿಗೆ ತನ್ನ ಗಂಡನ ಮದುಮಗಳನ್ನ ಆಕಾಶದೆತ್ತರಕ್ಕೆ ಹೊಗಳುತ್ತಾ, ಅದೆಷ್ಟು ಬ್ಯುಸಿಯಾಗಿ ಹೋದಳು ಎಂದರೆ, ಬಾವಿ ದಂಪತಿಗಳಿಗೆ ಉಡುಗೊರೆ ತರುವುದರಲ್ಲಿ ಸ್ವತಃ ವಧುವಿನ ತಾಯಿಯೇ ಅನ್ನುವಷ್ಟು ಮದುವೆಯ ತಯಾರಿಗಳ ನೋಡಿಕೊಳ್ಳಲು ಶುರು ಮಾಡಿದಳು. ಬೇರೆ ಹೆಂಗಸರು ಅವಳನ್ನ ನೋಡಿ “ಸ್ವರ್ಗವೇ ನಮಗೇ ಸಹಾಯ ಮಾಡು -ಈ ವಯಸ್ಸಾದ ಮುದುಕಿ ಹೇಗೆಲ್ಲಾ ತನ್ನ ಬುದ್ದಿಯನ್ನು ಕಳೆದುಕೊಳ್ಳುತ್ತಿದ್ದಾಳೆ.” ಎಂದು ಅಪಹಾಸ್ಯ ಅಥವಾ ಮರುಕ ಪಟ್ಟರು. ಈ ಮುದುಕಿ ನಿಜಕ್ಕೂ ಹುಚ್ಚಿಯೇ ಇರಬೇಕು, ಅದಕ್ಕೆ ಆ ಮನೆಹಾಳ ಗಂಡ ಇವಳಿಂದ ಮುಕ್ತಿಗಾಗಿ ಇದೆಲ್ಲಾ ಮಾಡುತ್ತಿರಬೇಕು ಅಂತ ಎಲ್ಲರೂ ಒಂದೇ ಭಾವನೆಗೆ ಅಂಟಿಕೊಂಡರು. ಎಲ್ಲರೂ ಅವಳನ್ನ ಅಣಕಿಸಿದರು, ಎಲ್ಲರೂ ಆಕ್ರೋಷಕ್ಕೆ ಒಳಗಾದರು, ಎಲ್ಲರೂ ಗೊಂದಲಕ್ಕೆ ಒಳಪಟ್ಟರು. ಎಲ್ಲರೂ ಅದೇ ಪ್ರಶ್ನೆಯನ್ನು ಕೇಳಿದರು : “ಇಂತಹ ವಿಷಯಗಳು ಹೇಗೆ ಸಾಧ್ಯ?” ಅದಕ್ಕೆ ಒಂದೇ ಉತ್ತರ : “ಸರಿ, ನೀನೇ ನೋಡ್ತಿಯಲ್ಲ…”

ನಮ್ಮ ನೆರೆ ಹೊರೆಯಲ್ಲಿ ಕೆಲವು ಎಳೆ ಗೂಂಡಾಗಳು ಇದ್ದರು, ಅವರು ಹಳೆಯ ದಂಪತಿಗಳಿಗೆ ಅಥವಾ ವಧುವಿಗೆ ತೊಂದರೆ ಕೊಟ್ಟರು ಅಂತ ಕಾಣುತ್ತೆ. ಆದರೆ ನಮ್ಮ ನೆರೆಯವರು ತುಂಬಾ ಸಾಧು ಮನುಷ್ಯರು. ಬಿಳಿಗಡ್ಡದ ಮತ್ತು ಸೌಮ್ಯವಾದ ಕಣ್ಣುಗಳುಳ್ಳ ಆ ಗಂಡ ಕೂಡ ಒಳ್ಳೆಯ ಮನುಷ್ಯನೇ ಆಗಿದ್ದ. ಸಿನಗಾಗ್ಗ್ ಗೆ ನಿಯಮಿತವಾಗಿ ಹೋಗುತ್ತಲೇ ಇದ್ದ. ತನ್ನ ನಡುಗುವ ಕೈಗಳಿಂದ ತೋಳ ಸುತ್ತಲೂ ಚರ್ಮದ ತಾಯತವನ್ನ ಕಟ್ಟಿಕೊಂಡು ಗಾಯ ಮಾಡಿಕೊಳ್ಳುತ್ತಿದ್ದ. ಎಳೆಯರು ಅವನನ್ನ ಗೇಲಿ ಮಾಡುತ್ತಿದ್ದರು, ಆದರೆ ಅವನು ಯಾರಿಗೂ ಸಿಟ್ಟು ತೋರುತ್ತಿರಲಿಲ್ಲ. ಅವನು ತನ್ನ ಪ್ರಾರ್ಥನೆಯ ಶಾಲಿನ ಅಂಚಿನ ಮಡಿಕೆಗಳನ್ನ ತನ್ನ ಕಣ್ಣಿಗೆ ಒತ್ತಿಕೊಂಡು, ತನ್ನ ಮುಂದಲೆಯಲ್ಲಿ ಕಟ್ಟಿರುವ ತಾಯತಕ್ಕೆ ಮುತ್ತಿಟ್ಟ ಮೇಲೆಯೇ ಅದು ತೋಳಿಗೆ ಬರುತ್ತಿದ್ದದು. ಎಷ್ಟೇ ಅಸಾಮಾನ್ಯ ಸಂಗತಿ ನಡೆದರೂ ಸಹ, ಒಬ್ಬ ಯಹೂದಿ ಯಹೂದಿಯೆ. ನಿಜವೇನೆಂದರೆ ಇದರ ಬಗ್ಗೆ ಅವನು ತನ್ನ ಹೆಂಡತಿಯ ಬಳಿ ಮಾತನಾಡಿರಲಿಲ್ಲ. ಇದಕ್ಕೆ ವಿರುದ್ಧವಾಗಿ, ಇದೆಲ್ಲವೂ ಅವಳ ಆಲೋಚನೆಗಳೇ ಆಗಿದ್ದವು, ಇದನ್ನ ನನ್ನ ತಂದೆಯ ಬಳಿ ಸಹ ಒಪ್ಪಿಕೊಂಡಿದ್ದ. ಅವಳು ಅವನನ್ನ ಇದರಲ್ಲಿ ಮುಳುಗಿಸಿದಳು ಅಷ್ಟೆ. ಅಲ್ಲದೇ ಆ ವಧು ಬಡ ಅನಾಥ ಹುಡುಗಿ. ಮುದುಕಿ ತನ್ನಷ್ಟಕ್ಕೇ ಖುಷಿ, ಭರವಸೆ, ನಗುವಿನೊಳಗೆ ತೇಲುತ್ತಿದ್ದಳು. ಅವಳ ಕಣ್ಣುಗಳು ವಿಲಕ್ಷಣ ಸಂತೋಷವನ್ನು ಸೂಸುತ್ತಿದ್ದವು.

ಅದೇ ಸಮಯಕ್ಕೆ ಆ ಗಂಡ ಮತ್ತೆ ಹೆಂಡತಿ ವಿಚ್ಛೇದನ ಮತ್ತು ಮುಂಬರುವ ಮದುವೆ ತಯಾರಿ ಮಾಡುತ್ತಿದ್ದರು; ಜೊತೆಗೆ ಸ್ಮಶಾನದಲ್ಲಿ ಜಾಗವನ್ನೂ ಖರೀದಿಸಿದ್ದರು. ತಮ್ಮ ಅಂತಿಮ ಜಾಗವನ್ನ ನೋಡಲು ತಮ್ಮ ಗೆಳೆಯರನ್ನು ಆಹ್ವಾನಿಸಿ, ಕೇಕ್ ಮತ್ತು ಬ್ರಾಂಡಿ ನೀಡಿ ಸತ್ಕರಿಸಿದ್ದರು. ಎಲ್ಲದರ ಮಿಶ್ರಣದಂತಿತ್ತು: ಜೀವನ, ಸಾವು, ಕಾಮ, ಮಿತಿ ಇಲ್ಲದ ನಿಷ್ಟೆ ಮತ್ತು ಪ್ರೀತಿ. ಹಳಬಳಾಗುತ್ತಿದ್ದ ಹೆಂಡತಿ ಆಗಲೇ ಘೋಷಿಸಿದ್ದಳು ಕೂಡ, ಮುಂದೆ ಅವನ ಹೆಂಡತಿ ಮಗುವಿಗೆ ಜನ್ಮ ಕೊಟ್ಟಾಗ, ಮಾಜಿ ಹೆಂಡತಿಯಾಗಿ ನಾನು ಆ ಮಗುವನ್ನ ನೋಡಿಕೊಳ್ಳುತ್ತೇನೆ. ಏಕೆಂದರೆ ಆ ಯುವತಿಗೆ ಜೀವನಕ್ಕಾಗಿ ದುಡಿಯಲು ನೆರವು ಕೊಡಬೇಕಾಗುತ್ತದೆ. ಇದನ್ನ ಕೇಳಿದ ಹೆಂಗಸರು ಉಗಿದು: “ದೇವರೇ, ನಮಗೆ ಸಹಾಯ ಮಾಡು! ಸ್ವರ್ಗವೇ ನಮ್ಮನ್ನ ಸಂರಕ್ಷಿಸು! ಎಲ್ಲಾ ಕೆಟ್ಟ ಕನಸುಗಳು ಅವರಿಗೇ ಬೀಳಲಿ!” ಇತರರು “ಇದು ಖಂಡಿತವಾಗಿ ದೆವ್ವದ ಕೆಲಸವೆ, ಖುದ್ದು ಸೈತಾನದ್ದೇ” ಎಂದು ಬಹಿರಂಗವಾಗಿಯೇ ಘೋಷಿಸಿದ್ದರು. ಇದರ ಆಚೆಗೆ ಮತ್ತೂ ಇನ್ನೂ ಏನೋ ಇತ್ತು. ಆದಾಗ್ಯೂ ಎಲ್ಲರೂ ಈ ಮದುವೆಗೆ ಪೂರ್ಣ ಮನಸ್ಸಿನಿಂದ ವಿರುದ್ಧವಾಗಿದ್ದರು, ಅದು ಸಾಧ್ಯವಾದಷ್ಟು ಬೇಗ ನಡೆಯಲಿ ಎಂದು ಉತ್ಸುಕರಾಗಿದ್ದರೂ ಸಹ. ಇಡೀ ಬೀದಿಯೇ ಇದರ ಸೋಂಕಿಗೆ ಒಳಗಾಯಿತು.

ಪೇಪರಿನಲ್ಲಿ ಓದಿರಬಹುದಾದ ಅಥವಾ ನಾಟಕ ಮಂದಿರಗಳಲ್ಲಿ ನೋಡಿರಬಹುದಾದ, ಎಲ್ಲದ್ದಕ್ಕಿಂತ ಹೆಚ್ಚು ರೋಮಾಂಚನಕಾರಿಯಾದ ಬದುಕಿನ ನಾಟಕವನ್ನ ಬದುಕು ಇಲ್ಲಿ ಪ್ರಸ್ತುತ ಪಡಿಸುತ್ತಿತ್ತು.

ವಿಚ್ಚೇದನ ನಮ್ಮ ಮನೆಯಲ್ಲಿಯೇ ಆಯಿತು. ಒಬ್ಬರನ್ನೊಬ್ಬರು ಬಹಳ ಪ್ರೀತಿಯಿಂದ ಪ್ರೀತಿಸುತ್ತಿದ್ದ ಹಳಬರಿಬ್ಬರು ಹೀಗೆ ವಿಚ್ಛೇದನ ಪಡೆದಿದ್ದರು. ಬರೆಯುವವನು ತನ್ನ ಹೆಬ್ಬಾತುವಿನ ಗರಿಯ ಲೇಖನಿಯಿಂದ ಈ ಕಾಗದ ಪತ್ರವನ್ನ ಬರೆದು ಮತ್ತು ಅದರ ಶಾಯಿಯನ್ನ ತನ್ನ ಬುರುಡೆಗೆ ಒರೆಸಿಕೊಂಡ. ಯಾರಿಗೆ ಗೊತ್ತು? ಬಹುಶಃ ಅವನು ತನ್ನದೇ ಆದ ಉತ್ತಮ “ಅರ್ಧಾಂಗಿ”ಯ ಬಗ್ಗೆ ಯೋಚಿಸುತ್ತಿರಬಹುದು?… ಸಾಕ್ಷಿಗಳು ಸಹಿ ಹಾಕಿದರು. ಮುದುಕ ದಿಗ್ಭ್ರಮೆಗೊಂಡಂತೆ ಅಲ್ಲಿಯೇ ಕುಳಿತಿದ್ದ. ಅವನ ಕಣ್ಣುಗಳು ಕುಂಚದಂತಹ ಬಿಳಿ ಹುಬ್ಬುಗಳಿಂದ ಮರೆಮಾಡಲ್ಪಟ್ಟಿದ್ದವು. ಅವನ ಗಡ್ಡ ಅವನ ಎದೆಯ ಮೇಲೆ ಇಳಿಬಿದ್ದಿತ್ತು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಗಿತ್ತು‌. ಏನೆಂದರೆ ಇಲ್ಲಿ ಈ ಮುಖ್ಯ ಕಥಾನಾಯಕನೂ ಎಲ್ಲರಂತೆಯೇ ಗೊಂದಲದಲ್ಲಿದ್ದ. ಈ ವಿಚಾರ ಮೊಳೆತಿದ್ದು ಅವನ ತಲೆಯಲ್ಲಲ್ಲ. ತನ್ನ ವಿಷಣ್ಣತೆಯ ನಿವಾರಿಸಿಕೊಳ್ಳಲು ಕಾಲ ಕಾಲಕ್ಕೆ ಚಿಟಿಕೆ ನಶ್ಯೆಯನ್ನು ಎಳೆಯುತ್ತಿದ್ದ. ಸಂದರ್ಭಾನುಸಾರ ಬೆಂಚಿನ ಮೇಲೆ ಕುಳಿತಿದ್ದ ತನ್ನ ಹೆಂಡತಿಯೆಡೆಗೆ ಕಣ್ಣಾಡಿಸುತ್ತಿದ್ದ. ಸಾಧಾರಣವಾಗಿ ವಿಚ್ಛೇದನ ತೆಗೆದುಕೊಳ್ಳುವವರು, ಸಾಧಾರಣವಾದ ಹರುಕು ಮುರುಕು ಬಟ್ಟೆಗಳನ್ನ ಧರಿಸಿರುತ್ತಾರೆ, ಆದರೆ ಈ ಮುದುಕಿ ಅವಳ ರಜೆಯ ದಿನಗಳಲ್ಲಿ ಧರಿಸುವ ಬಾನೆಟ್ ಮತ್ತು ಟರ್ಕಿಯ ಶಾಲಿನಿಂದ ತನ್ನನ್ನ ತಾನು ಅಲಂಕರಿಸಿಕೊಂಡಿದ್ದಳು. ಅವಳು ತನ್ನ ನೋಡುಗರಿಗೆ ತನ್ನ ಪ್ರಖರವಾದ ನೋಟದಿಂದ ಉತ್ತರಿಸಿದ್ದಳು. ಅವಳ ಕಣ್ಣುಗಳು ಸುಮ್ಮನೆ ಬೆಂಕಿಯಂತೆ ಹೊಳೆಯುತ್ತಿದ್ದವು. “ಮಜೆಲ್ ಟೋವ್! ನೋಡು ನಿನಗಾಗಿ, ಇವೆಲ್ಲವನ್ನು ಮಾಡುತ್ತಿದ್ದೇನೆ. ನಾನು ನಿನಗೋಸ್ಕರ ನನ್ನನ್ನೇ ತ್ಯಾಗ ಮಾಡುತ್ತಿದ್ದೇನೆ. ಈ ಅರ್ಪಣೆಯನ್ನ ಉದಾರವಾಗಿ ಅರ್ಪಿಸಿಕೋ, ನನ್ನ ದೇವರೇ ಮತ್ತು ದೊರೆಯೇ… ನನಗೆ ಸಾಧ್ಯವಾಗಿದ್ದರೇ, ನಿನಗೋಸ್ಕರ ನಾನು ಬೇಕಾದರೇ ನನ್ನ ನಾಲಿಗೆಯನ್ನ ಕಟಾವಿನ ಕುಡುಗೋಲಿನಿಂದ ಕತ್ತರಿಸಿಕೊಂಡುಬಿಡುತ್ತಿದ್ದೆ.”

ನನ್ನ ತಾಯಿ ಅಸಹನೆಯಿಂದ ಅಡುಗೆಮನೆಯಲ್ಲಿ ಮೇಲೆ ಕೆಳಗೆ ಓಡಾಡುತ್ತಿದ್ದಳು. ಅವಳ ಮದುವೆಯ ವಿಗ್ ಸ್ವಲ್ಪ ಸೊಟ್ಟಗಾಗಿತ್ತು. ಸಿಟ್ಟಿನ ಕಿಡಿ ಅವಳ ಕಣ್ಣುಗಳಲ್ಲಿ ಧಗಿಸುತ್ತಿತ್ತು. ನಾನು ಅಡುಗೆ ಮನೆಗೆ ಹೋಗಿ ತಿನ್ನಲು ಏನಾದರು ಕೊಡಲು ಕೇಳಿದೆ, ಅದಕ್ಕೆ ಅವಳು ಉದ್ವೇಗದಿಂದ ಕೂಗಿದಳು.. “ಪಾತ್ರೆಯಿಂದ ಏನನ್ನೂ ತೆಗೆದುಕೊಳ್ಳದೆ ನಡಿ ಆಚೆ! ತೊಲಗು! ”

ನಾನಿನ್ನು ಸಣ್ಣ ಹುಡುಗ, ಅಲ್ಲದೇ ಅವಳ ಸ್ವಂತ ಮಗನೇ ಆಗಿದ್ದೆ. ಆದರೆ ಆ ಕ್ಷಣದಲ್ಲಿ ಅವಳಿಗೆ ನಾನು ನೀಚ ಪುರುಷರ ಗುಂಪಿನ ಸದಸ್ಯನಾಗಿ ಕಂಡಿದ್ದೆ.

ಮುದುಕಿ ತನ್ನ ಸುಕ್ಕುಗಟ್ಟಿದ ಕೈಗಳನ್ನ ಮುಂದೆ ಚಾಚಿದಾಗ, ಮುದುಕ ಅದರೊಳಗೆ ವಿಚ್ಛೇದನದ ಆಜ್ಞಾ ಪತ್ರವನ್ನಿಟ್ಟಾಗ, ಅಲ್ಲೇ ಪಕ್ಕದಲ್ಲಿ ನಾನೂ ನಿಂತಿದ್ದೆ. ನನ್ನ ತಂದೆ ಅವರಿಗೆ ಸಾಂಪ್ರದಾಯಕವಾದ ಸೂಚನೆಗಳನ್ನ ಕೊಟ್ಟ: ಅದು ಹೆಂಗಸು ತಕ್ಷಣಕ್ಕೆ ಮರು ಮದುವೆಯಾಗುವಂತಿಲ್ಲ. ಕಡ್ಡಾಯವಾಗಿ ಮೂರು ತಿಂಗಳು ಕಾಯಲೇಬೇಕು ಎಂದು.

ಹಳಬಳ ಹಲ್ಲಿಲ್ಲದ ವಸಡುಗಳು ನಗಲಾರಂಭಿಸಿದವು. ಎಂತಹ ಕಲ್ಪನೆ! ಅವಳು, ಮತ್ತೊಂದು ಮದುವೆಯ ಬಗ್ಗೆ ಆಲೋಚಿಸುವಳೆ?

ಇದು ಎಷ್ಟು ನಂತರದಲ್ಲಿ ಆಯಿತು ಎಂದು ನನಗೆ ನೆನಪಿಲ್ಲ, ಆದರೆ ನನಗೆ ಗೊತ್ತಿರುವಂತೆ ಕಡೆಯಲ್ಲಿ ಮದುವೆ ನಡೆಯಿತು, ಅದುವೇ ನನ್ನ ತಂದೆಯ ಓದಿನ ಕೋಣೆಯಲ್ಲಿ. ಮದುವೆ ಚಪ್ಪರದ ಕೆಳಗೆ ಮುದುಕ ಮತ್ತು ಸ್ಥೂಲವಾದ ಯುವತಿ ನಿಂತಿದ್ದರು. ನಾಲ್ಕು ಜನ ಗಂಡಸರು ಚಪ್ಪರದ ರಾಡುಗಳನ್ನ ಹಿಡಿದಿದ್ದರು. ಅಪ್ಪ ವರನಿಗೆ ಮತ್ತು ವಧುವಿಗೆ ಒಂದು ಸಿಪ್ ವೈನ್ ಕೊಟ್ಟರು. ಅಲ್ಲಿದ್ದವರೆಲ್ಲಾ, “ಮಜೆಲ್ ಟೋವ್!” ಹೇಳಿದರು, ಹಾಗೂ ಸ್ಪಾಂಜ್ ಕೇಕಿನ ಜೊತೆಗೆ ಬ್ರಾಂಡಿ ಕುಡಿದರು. ನಂತರ, ಇನ್ನೊಂದು ಕೋಣೆಯಲ್ಲಿ ಊಟವನ್ನ ಬಡಿಸಲಾಯಿತು. ಅಡುಗೆ ಮತ್ತು ಎಲ್ಲಾ ತಯಾರಿಗಳನ್ನ ಮೊದಲ ಹೆಂಡತಿಯೇ ಮಾಡಿದ್ದಳು. ವಧುವಿಗೆ ಹಾಕಿಕೊಳ್ಳಲು ಸರಿಯಾದ ಬಟ್ಟೆಯಿಲ್ಲದೇ ಹಾಗೂ ಅವಳಿಗೆ ತಾಯಿ ಇಲ್ಲದ ಕಾರಣ ತಾನೇ ಕೈಯ್ಯಾರೆ ಅವಳಿಗೆ ಒಳ ಉಡುಪುಗಳು, ಸ್ಲಿಪ್ ಗಳು, ಸ್ಕರ್ಟ್ ಗಳನ್ನ ಹೊಲೆದಿದ್ದಾಳಂತೆ ಎಂದು ಜನರು ಹೇಳಿದರು. ತುಂಬ ಜನ ಅಥಿತಿಗಳು ಭೋಜನಕ್ಕೆ ಬಂದರು. ನಮ್ಮ ಕೋಣೆಗಳು ತುಂಬಿ ಮತ್ತೆ ಕೆಲವರು ಹಜಾರದ ಬಳಿ ನಿಂತಿದ್ದರು.

ಸ್ವಲ್ಪ ಸಮಯಗಳ ಕಾಲ ಕ್ರೋಚ್ಮಲ್ ನ ಬೀದಿಯಲ್ಲಿ ಒಂದಷ್ಟು ಬೊಬ್ಬೆ ಮತ್ತು ಕುದಿತ ನಡೆದೇಯಿತ್ತು. ಜನ ಮುದುಕ ಮತ್ತು ಅವನ ಹೊಸ ಹೆಂಡತಿಯ ಹಿಂದೆಯೇ ಓಡುತ್ತಿದ್ದರು. ಹಾಗೂ ಇವರೇನೋ ಪ್ರದರ್ಶನ ಕೊಡುತ್ತಿರುವ ಜಾದೂಗಾರರೋ ಅಥವಾ ನಮ್ಮ ಬೀದಿಗೆ ಅಪರೂಪಕ್ಕೆ ಕಾಗದದ ಹೂಗಳನ್ನು ಮಾರಲು ಬರುತ್ತಿದ್ದ ಚೈನಿಸ್ ಪಿಗ್ ಟೇಲರೋ ಎಂಬಂತೆ ಎವೆಯಿಕ್ಕದೇ ನೋಡುತ್ತಲೇ ಇರುತ್ತಿದ್ದರು. ಆದರೆ ಸ್ವಲ್ಪ ಸಮಯದ ನಂತರ ಅವರಿಗೆ ಮಾತನಾಡಲು ಬೇರೆ ವಿಷಯಗಳು ಸಿಕ್ಕವು. ಎಲ್ಲದರ ನಂತರ ತನ್ನ ಬುದ್ದಿಯನ್ನ ಕಳೆದುಕೊಂಡಿರುವ ಈ ಮುದುಕಿಯ ಬಗ್ಗೆ ಅಸಾಮಾನ್ಯವಾದದ್ದಾರೂ ಏನು? ಅಥವಾ ಮುದುಕ ಅಡುಗೆ ಮಾಡುವವಳೊಬ್ಬಳು ಬೇಕೆಂದು ಮದುವೆಯಾದನಾ? ಜನ ಮತ್ತೆ ಹೇಳಲು ಶುರುವಿಟ್ಟರು. ಈಗಾಗಲೇ ಹಳೆ ಹೆಂಡತಿಗೆ ತಾನು ಹೀಗೆ ಮಾಡಿದ್ದರ ಪಶ್ಚಾತಾಪ ಶುರುವಾಗಿದೆಯಂತೆ. ಹೊಸ ಹೆಂಡತಿಯೂ ಮಗುವಿಗೆ ಜನ್ಮ ನೀಡಲಿಲ್ಲ‌. ಮುದುಕನೂ ಹುಷಾರು ತಪ್ಪಿದ್ದ.

ನಾನು ವಿಷಾದ ವ್ಯಕ್ತ ಪಡಿಸುತ್ತೇನೆ. ಪ್ರೀತಿಯ ಓದುಗರೇ, ನಾನು ಈ ನಾಟಕೀಯವಾದ ಅಂತ್ಯವನ್ನ ವರದಿ ಮಾಡಲಾರೆ. ಎಲ್ಲರಂತೆ, ನಾನೂ ಕೂಡ ಕಾಲ ಕ್ರಮೇಣ ಆಸಕ್ತಿ ಕಳೆದುಕೊಂಡೆ. ನನಗೆ ನೆನಪಿರುವಂತೆ ಆ ವಯಸ್ಸಾದ ಮನುಷ್ಯ ಮದುವೆಯಾದ ಸ್ವಲ್ಪ ಸಮಯಕ್ಕೆ ತೀರಿಕೊಂಡ, ಹಾಗೂ ಇಬ್ಬರು ಹೆಂಡತಿಯರು ಸಹ ಅವನ ಅಂತ್ಯಕ್ರಿಯೆಯಲ್ಲಿ ಅತ್ತರು. ನಂತರ ಆ ಹಳಬಳು ಕೂಡ ಅಟ್ಟವೊಂದರಲ್ಲಿ ತನ್ನ ಕೊನೆಯುಸಿರೆಳೆದಳು. ಅದಾಗ್ಯೂ ಕೂಡ ದುಷ್ಟ ಜ್ವಾಲೆಯೂ, ಒಲವೂ ಶಾಶ್ವತವಾಗಿ ಉರಿಯುವುದಿಲ್ಲ.

ಹೌದು, ಗಂಡ ಮತ್ತು ಹೆಂಡತಿ ಇಬ್ಬರೂ ಕಡೆಗೆ ಈಡನ್ ನಲ್ಲಿ ಒಂದಾದರೋ ಹಾಗೂ ಅವಳು ಅವನ ಕಾಲುಮಣೆಯಾದಳೋ, ನಾ ಹೇಳಲಾರೆ. ನೀವೇ ಖುದ್ದಾಗಿ ನೂರಿಪ್ಪತ್ತು ವರ್ಷಗಳ ನಂತರ ಅಲ್ಲಿಗೆ ಆಗಮಿಸಿದಾಗ -ಕ್ರೋಚ್ಮಲ್ನಾ ಬೀದಿಯ ಹಳೆಯ ನಿವಾಸಿಗಳು ವಾಸಿಸುವ ಮಹಲಿನಲ್ಲಿ ವಿಚಾರಿಸಿ ನೋಡಿ.