ಒಂದು ಸಂಜೆ ಆಕಾಶವೆಲ್ಲಾ ಮಬ್ಬಾಗಿ, ಚಳಿ ಹಿಡಿದ ಹಾಗೆ ಮುರುಟಿಕೊಂಡು ಕೂತಂತಿತ್ತು. ಮೋಡಗಳು ಆಕಳಿಸುತ್ತಾ ಮಳೆ ಸುರಿಸುವುದೋ ಬೇಡವೋ ಎಂಬಂತಿದ್ದವು. ಒಂದಷ್ಟು ಜನರು, ವಾಹನಗಳು, ಹಕ್ಕಿಗಳು, ಎಲ್ಲರೂ ಹೀಗೇ ಒಂದು ಬಗೆಯ ಆಲಸ್ಯದಲ್ಲಿ ಓಡಾಡಿಕೊಂಡ ಹಾಗಿತ್ತು. ಮನೆಯ ಎದುರು ರಸ್ತೆಯಲ್ಲಿ ಒಂದಷ್ಟು ಮಕ್ಕಳು ಫುಟ್‌ಬಾಲ್ ಆಡುತ್ತಿದ್ದರು. ಮಣ್ಣು ಮೆತ್ತಿ ಅರೆಕೆಂಪಗೆ ಕಾಣುತ್ತಿದ್ದ ಆ ಚೆಂಡು ಅವರು ಆಡಿಸಿದಂತೆ ನೆಗೆದು ಕುಣಿಯುತ್ತಾ, ಅದು ಕುಣಿದಂತೆ ಇವರು ಓಡುತ್ತಾ ಒಂದು ರೀತಿ ಚೆಂಡೂ ಮಕ್ಕಳಂತೇ ಕಾಣುತ್ತಿತ್ತು. ಲೋಕದ ಯಾವ ಪರಿವೆಯೂ ಇಲ್ಲದೆ, ಕೊನೆಗೆ ನಾನಲ್ಲಿ ನಿಂತಿರುವುದೂ ಗೊತ್ತಿಲ್ಲದೆ ಅವರೆಲ್ಲಾ ಆಡುತ್ತಿದ್ದರು.

ಅದೇ ಮಬ್ಬು ಆಕಾಶದ ಮೇಲಿಂದ ಸುಮ್ಮನೆ ಹಾಗೇ ಹಾರಿಕೊಂಡು ಹೋಗುವ ಹಕ್ಕಿಗೆ, ನಾವೆಲ್ಲಾ ಯಾವ ಅರಿವೂ ಇಲ್ಲದೆ ಆ ಮಕ್ಕಳ ಹಾಗೇ ಆಟವಾಡುವಂತೆ ಕಾಣುತ್ತಿರಬಹುದು. ಮನೆಯಲ್ಲಿರುವಾಗ ಮನೆಯಾಟ, ಶಾಲೆಗೆ ಹೋದರೆ ಶಾಲೆಯಾಟ, ಗುದ್ದಲಿ ಹಿಡಿದವನದ್ದು ಮಣ್ಣಾಟ, ಮದುವೆಯಾದರೆ ಮದುವೆಯಾಟ.. ಎಲ್ಲಾ ದಿನಾ ನಾವಾಡುವ ಆಟಗಳು. ಈ ಬದುಕು ಸಣ್ಣದು ಎನ್ನುವುದು ಎಷ್ಟು ಸುಳ್ಳು ಎಂದು ಅನ್ನಿಸುತ್ತಿತು. ಹಾಗೆಲ್ಲಾ ಇದ್ದಿದ್ದರೆ, ನಾವು ಬೋರಾದರೆ ಆಟ ಬದಲಿಸುವ ಹಾಗೆ, ಆಡಿ ಸುಸ್ತಾಗಿ ಕಣ್ಣು ಎಳೆದರೆ ನಿದ್ದೆ ಮಾಡುವ ಹಾಗೆ ಒಂದಕ್ಕೊಂದು ಸರಪಣಿ ಹೆಣೆದುಕೊಂಡು, ಸುಖದ ಜಾಡು ಹಿಡಿದುಕೊಂಡು ಮನುಷ್ಯ ಇಷ್ಟೆಲ್ಲಾ ಆಟವಾಡ ಬೇಕಾಗಿರಲಿಲ್ಲ. ಬಿದ್ದ ಗಾಯಕ್ಕೆ ಹಚ್ಚಿಕೊಳ್ಳಲು ಮುಲಾಮೂ ಇರುತ್ತಿರಲಿಲ್ಲ. ಹೀಗೆಲ್ಲಾ ಯೋಚಿಸುತ್ತಾ ಚಳಿಗೆ ಬೆಚ್ಚಗೆ ಕುಳಿತಿರುವಾಗಲೇ ನಮ್ಮ ಪರಿಚಯದ ಗೌರಕ್ಕ ಸತ್ತ ಸುದ್ದಿ ತಿಳಿಯಿತು. ಇದು ಸಾಯೋ ಆಟವಿರಬೇಕೇನೋ ಅಂದುಕೊಂಡೆ.

ನನಗೆ ಅವರ ಪರಿಚಯ ಜಾಸ್ತಿ ಇರದಿದ್ದರೂ ಅವರ ಬಗ್ಗೆ ಕೇಳಿದ್ದೆ. ಒಂದು ಸಲ ಹಂಚಿಕೊಳಲಿನ ಅವರ ಮನೆಗೂ ಹೋಗಿದ್ದೆ. ಒಂದಷ್ಟು ಮಾತು, ಅವರ ತಮ್ಮ ತೀರಿಹೋದ ಅಳು, ಮತ್ತು ಒಂದು ದೊಡ್ಡ ಸೂಟ್ ಕೇಸನ್ನು ಯಾವಾಗಲೂ ತನ್ನ ಸೆರಗಿನಲ್ಲಿ ಕಟ್ಟಿಕೊಂಡಂತೆ ಅವರು ಓಡಾಡುತ್ತಿದ್ದರು. ಈ ಲೋಕದಲ್ಲಿ ಅವರಿಗಿದ್ದ ಎರಡು ಜೀವಗಳೆಂದರೆ, ಅವರ ತಮ್ಮ, ಮತ್ತು ಹಂಚಿಕೊಳಲಿನ ರಿಕ್ಷಾ ಹಮೀದ. ತಮ್ಮ ತೀರಿ ಹೋಗಿ ಆಗಲೇ ಮೂರು ವರ್ಷವಾಗಿತ್ತು. ಈ ರಿಕ್ಷಾ ಹಮೀದ ಏನೋ ಋಣ ಕಟ್ಟಿಕೊಂಡವನಂತೆ ಯಾರೂ ಇಲ್ಲದ ಅವರನ್ನು ಆ ಇಳಿವಯಸ್ಸಿನಲ್ಲಿ ನೋಡಿಕೊಳ್ಳುತಿದ್ದ. ನಾನು ಮನಸ್ಸಲ್ಲೇ ಸುಮಾರು ಸಲ ಅವರನ್ನು ‘ಗೌರಕ್ಕ ‘ಗೌರಕ್ಕ ಎಂದು ನನ್ನಷ್ಟಕ್ಕೆ ಕರೆದುಕೊಳ್ಳುತ್ತಾ ಸಾವು ಬದುಕು ಎಂದು ಏನೇನೋ ಅಂದುಕೊಳ್ಳುತ್ತಿದ್ದೆ. ಇನ್ನೂ ಅವರು ಜೀವಂತವಾಗಿದ್ದಾರೆ ಅನ್ನಿಸುತ್ತಿತ್ತು.

ಅವರು ಹುಟ್ಟಿದ್ದು ಕುಂದಾಪುರದಲ್ಲಿ. ಅವರಿಗೆ ೧೧ನೇ ವಯಸ್ಸಿಗೆ ಮದುವೆಯಾಗಿತ್ತು. ಇವರ ಗಂಡ ಏನು ಕಾರಣಕ್ಕೋ ಇವರನ್ನು ಬಿಟ್ಟು ಬೇರೆ ಮದುವೆಯಾದರಂತೆ. ನಂತರ ಸ್ವಲ್ಪ ಸಮಯ ತಂದೆ ತಾಯಿಯೊಂದಿಗಿದ್ದು, ಎಸ್ ಎಸ್ ಎಲ್ ಸಿ ಪಾಸು ಮಾಡಿ ಹಂಚಿಕೊಳಲಿನಲ್ಲಿ ಟೀಚರಾಗಿದ್ದರು.ಅವರಿಗೆ ೭೫ ದಾಟಿರಬೇಕು. ತನ್ನ ಬದುಕಿಡೀ ಒಂಟಿಯಾಗಿ ಹೋರಾಡಿ ಅಂತಹ ಯಾವ ಸುಖವನ್ನೂ ಕಾಣದೆ, ಸತ್ತ ಮೇಲೂ ಎರಡು ದಿನ ಒಂಟಿಯಾಗಿ ಕೊಳೆತು ಯಾರಿಗೂ ಗೊತ್ತಿಲ್ಲದಂತೆ ಹೋದರು. ಎರಡು ದಿನವಾದರೂ ತೆರೆಯದ ಬಾಗಿಲು, ಮನೆ ಮುಂದೆ ಬಿದ್ದಿದ್ದ ಪೇಪರ್, ಜಗುಲಿ ತುಂಬಾ ಒಣಗಿ ಹರಿದಿದ್ದ ಹಾಲು, ಅಲ್ಲೇ ಒಂದಷ್ಟು ಒಣಗಿ ಹಾಕಿದ್ದ ಬಟ್ಟೆಗಳನ್ನು ನೋಡಿ ಪಕ್ಕದ ಮನೆಯವರು ಪೋಲಿಸರಿಗೆ ಹೇಳಿದರಂತೆ. ಪೋಲಿಸರೇ ಬಂದು ಬಾಗಿಲು ಒಡೆದರಂತೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಕೊನೆಗೆ ಪೋಸ್ಟ್ ಮಾರ್ಟಮ್ ಮಾಡದೆಯೇ ಸುಟ್ಟದ್ದು ಪುಣ್ಯ ಎಂದು ರಿಕ್ಷಾ ಹಮೀದ ಅಳುತ್ತಾ ಹೇಳುತ್ತಿದನಂತೆ. ಅವರದ್ದು ಸ್ವತಂತ್ರ ಬದುಕೋ ಬಂಧನದ ಬದುಕೋ ತಿಳಿಯದು, ಈಗಂತೂ ನೆಮ್ಮದಿಯಾಗಿ ಬಿಡುಗಡೆ ಹೊಂದಿದ್ದಾರೆ.

ಈ ರಿಕ್ಷಾ ಹಮೀದ ಅವರಿಗೆ ಎಲ್ಲಿಂದ ಸಿಕ್ಕಿದನೋ! ಅವರಿಗೆ ಎಲ್ಲಿ ಹೋಗಬೇಕಾದರೂ ಹಮೀದ ಬರುತ್ತಿದ್ದ. ತನ್ನ ಎಲ್ಲಾ ಕೆಲಸ ಬಿಟ್ಟು ಓಡಿ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿದ್ದ. ದಿನಾ ಬಂದು ಅವರನ್ನು ನೋಡಿಕೊಂಡು ಹೋಗುತ್ತಿದ್ದ. ಆದರೆ ಅವರು ನೆಂಟರ ಮದುವೆಗೆ ಹೋದವರು ತಿರುಗಿ ಊರಿಗೆ ಬಂದಿರುವ ವಿಷಯ ಹಮೀದನಿಗೆ ತಿಳಿಯದೆ, ಸತ್ತ ಮೇಲೂ ಒಂಟಿಯಾಗಿದ್ದು ಕೊಳೆತು ಹೋದರು ಎಂದು ಕೊರಗುತ್ತಿದ್ದನಂತೆ. ಅವನಿಗೆ ಅವರೊಂದು ಮಗುವಿನಂತೆಯೋ ತಾಯಿಯಂತೆಯೋ, ದೇವರಂತೆಯೋ ಕಂಡಿರಬೇಕು. ಅಷ್ಟು ವಾತ್ಸಲ್ಯ ಅವನಿಗೆ. ಹಂಚಿಕೊಳಲಿನ ರಿಕ್ಷಾ ಹಮೀದ ದಿನ ಬೆಳಗಾದರೆ ರಿಕ್ಷಾ ಓಡಿಸಿಕೊಂಡು, ಮಧ್ಯಾಹ್ನ ಇವನ ತಮ್ಮನ ಗುಜರಿ ಅಂಗಡಿಯಲ್ಲಿ ಸುಮ್ಮನೆ ಅರ್ದ ಘಂಟೆ ಕೂತು ಬರುತ್ತಾನೆ. ಗುಜರಿ ಅಂಗಡಿ ನೋಡದಿದ್ದರೆ ಇವನಿಗೇನೋ ಸಮಾಧಾನವಿಲ್ಲವಂತೆ.

“ಎಂತ ಹೇಳ್ತೀರಿ, ಮನುಷ್ರಿಗೆ ಮೂರು ಕಾಸಿನ ಬೆಲೆ ಇಲ್ಲ, ದುಡ್ಡೊಂದಿದ್ರೆ ಆಯ್ತು. ನಾವೆಲ್ಲಾ ಈ ಗುಜ್ರೀ ಸಾಮಾನಿಗಿಂತ ಕಡೆ” ಎನುತ್ತಿದ್ದ. “ಮತ್ತೆ, ಸಂಜೆ ಅಮ್ಮನನ್ನು ನೋಡಿಕೊಂಡು ಬಂದ್ರೆ ನೆಮ್ಮದಿ ನನಗೆ, ಬಡಬಡಬಡ ಮಾತಾಡ್ತಾರೆ, ಪಾಪ ಗಂಡ ಇಲ್ಲ ಮಕ್ಕಳಿಲ್ಲ, ನೆಂಟ್ರಿದ್ರೂ ಇವ್ರ ಹತ್ರ ಯಾರೂ ಬರುದಿಲ್ಲ, ಆದ್ರೂ ಇವ್ರು ಮದ್ವೆ, ಮುಂಜಿ ಅಂತ ಹೋಗುದೇ” “ಮೊನ್ನೆ ಅವ್ರ ಕಾಲಿನ ಮೇಲೆ ಇಷ್ಟು ದೊಡ್ಡ ಬಾಪು (ಬಾತುಕೊಳ್ಳುವುದು) ಬಂದಿತ್ತು. ಎಂತ ಮಾಡ್ತಾರೆ ಪಾಪ, ಶುಗರ್ ಬೇರೆ ಉಂಟು, ನಾನು ಮಾತ್ರೆ ತಂದು ಕೊಟ್ರೆ, ನುಂಗಿದ್ರು ಎದ್ರು ಸುಟ್‌ಕೇಸ್ ತಕೊಂಡು ತಿರ್ಗಾಟಕ್ಕೆ ಹೊರ್ಟದ್ದೇ ಅಮ್ಮಾ” ಎನ್ನುತ್ತಿದ್ದ.

“ತಾನ್ ಎದ್ದು ಗೇಯ್ಕ್ ಬಾನ್ ಎದ್ದ್ ಹೋಯ್ಕ್ ಯಾರೂ ಹೇಳುದ್ ಬೇಡ” ಎಂದು ಗೌರಕ್ಕ ಯಾವಾಗಲೂ ಹೇಳುತ್ತಿದ್ದರಂತೆ. “ಎಷ್ಟು ಸತ್ಯ ನೋಡಿ, ಯಾರು ಯಾರನ್ನು ಕೇಳುದಿಲ್ಲ, ನಮ್ಮ ಕೆಲ್ಸ್ ನಾವು ಮಾಡ್ಕೊಳ್‌ಬೇಕು, ನಾವು ಮಾಡಿದ್ರೆ ಉಂಟು ಇಲ್ದಿದ್ರೆ ಇಲ್ಲ, ನಮ್ಮ ತಲೆಗೆ ನಮ್ಮದೇ ಕೈ” ಎನ್ನುತ್ತಿದ್ದ.

ಗೌರಕ್ಕ ಒಂದು ಸಲ ಅವನಿಗೆ ಮೊಬೈಲ್ ಕೊಡಿಸಿದ್ದರಂತೆ. ರಿಕ್ಷಾ ಓಡಿಸುವಾಗ ಮಾತ್ರ ಅವನು ಒಂದು ಬಾರಿಯೂ ಮಾತಾಡಲಿಲ್ಲವಂತೆ. ಎಲ್ಲರಿಗೂ ಇದನ್ನು ಹೇಳುತ್ತಾನಂತೆ. ನನಗೂ ಹೇಳುತ್ತಿದ್ದ. “ನೀವು ಗಾಡಿಯಲ್ಲಿ ಹೋಗುವಾಗ ಒಂದು ಜಾಗ್ರತೆ, ನೀವು ಎಂತ ಹೇಳ್ತೀರಿ, ಈಗ ರಸ್ತೆಯೆಲ್ಲಾ ಆಕ್ಸಿಡೆಂಟಿನ ಮುದ್ದೆ, ಅಲ್ಯುಮೀನಿಯಮ್ ಪಾತ್ರದ ಹಾಗೆ ಈ ಗಾಡಿಗಳು ಲಟಕ್ಕ ಮುದ್ದೆ ಆಗುದೇ. ನಿದ್ರೆ ಬಂದ್ರೆ ಒಂದೆರಡು ನಿಮಿಷ ಗಾಡಿಯಲ್ಲೇ ರೆಸ್ಟ್ ತಕೊಂಡು ಹೋಗಿ, ಒಂದು ಐದು ನಿಮಿಷ ತಡಾದ್ರೆ ಯಾರ ಜೀವವೂ ಹೋಗುದಿಲ್ಲ” ಎಂದಿದ್ದ. ಗೌರಕ್ಕನಿಂದ ಈ ಹಮೀದನ ಪರಿಚಯವಾಗಿತ್ತು. ನಾನು ಹಮೀದನನ್ನು ನೋಡಿದ್ದು ಒಂದೇ ಬಾರಿ. ೪೦ರ ಆಸುಪಾಸಿನ ಹಮೀದ ಒಂದು ರೀತಿ ದಾರ್ಶನಿಕನಂತೆ ಕಾಣುತ್ತಿದ್ದ. ಇನ್ನೊಮ್ಮೆ ಅವನನ್ನು ನೋಡಲಾರೆ ಎಂದು ನನಗೆ ಗೊತ್ತಿತ್ತು. ಅವನಿಗೆ ಲೋಕವೆಲ್ಲಾ ಗುಜರಿ ವಸ್ತುಗಳ ಒಳಗೆ ಧೂಳು ಹಿಡಿದು ಕೂತಿರುವ ಜೀವದಂತೆ ಕಾಣುತ್ತಿರಬೇಕು. ಬದುಕಿಗೆ ಅಂಟಿಕೊಂಡಂತಿದ್ದರೂ ಅಂಟಿಕೊಳ್ಳದೆ, ಬದುಕುತ್ತಿದ್ದಾನೆ. ಅವನು ಒಂದು ಬಿಡುಗಡೆಯಂತೆ. ನಿನ್ನ ಊರಿನ ಹೆಸರು ಚೆನ್ನಾಗಿದೆ, ‘ಹಂಚಿಕೊಳಲು’ ಎನ್ನುವುದು ಎಷ್ಟು ಮೋಹಕ! ಏನಾದರೂ ಕತೆ ಇದೆಯೋ ಕೇಳಿದೆ.

ಅವನದು ದಕ್ಷಿಣ ಕನ್ನಡದ ಯಾವುದೋ ಪುಟ್ಟ ಊರಂತೆ. ಇಲ್ಲಿಗೆ ಬಂದು ಸುಮಾರು ವರ್ಷವೇ ಆಯ್ತು ಎಂದ. ಅವನಿಗೆ ಹಂಚಿಕೊಳಲಿನ ಕುರಿತು ಏನೂ ಗೊತಿದ್ದ ಹಾಗೆ ಕಾಣಲಿಲ್ಲ. ಇದರ ಸ್ಥಳನಾಮದ ಇತಿಹಾಸ ಏನಿರಬಹುದೋ ಗೊತ್ತಿಲ್ಲ. ಆ ಅರೆ ಮಲೆನಾಡಿನಲ್ಲಿ ಒಂದಷ್ಟು ಬಿದಿರಿನ ಪೊದೆಗಳನ್ನು ನೋಡಿದ್ದೆ. ಯಾವ ಕಾಲದಲ್ಲಿ ಯಾರ್ಯಾರು ಕೊಳಲು ನುಡಿಸುತ್ತಿದ್ದರೋ, ಏನೋ ಅನ್ನಿಸಿತು. ಹಂಚಿ ಎಂದರೆ ಹುಲ್ಲು ಎಂಬ ಅರ್ಥವಿದೆ. ಹುಲ್ಲು ಮೇಯುವ ಗೋವುಗಳು, ಮೇಯಿಸುವ ಗೊಲ್ಲರು, ಕೊಳಲಿನ ದನಿಯೊಂದಿಗೆ ನನ್ನದೇ ಹಂಚಿಕೊಳಲಿನ ಕನಸಿನ ಸಾಮ್ರಾಜ್ಯ ಹಿತವಾಗಿತ್ತು.

ಯಾಕೋ ಈ ಹಂಚಿಕೊಳಲನ್ನು ನೋಡಿ, ಪು.ತಿ ನರಸಿಂಹಾಚರ್ಯರ, ನೀನಾಸಂ ತಿರುಗಾಟದಲ್ಲಿ ಬಿ.ವಿ ಕಾರಂತರು ನಿರ್ದೇಶಿಸಿದ ಗೋಕುಲ ನಿರ್ಗಮನ ನಾಟಕ ಕಣ್ಮುಂದೆ ಬಂದ ಹಾಗಿತ್ತು. ಹಂಚಿಕೊಳಲು ಹಳೆಯ ಗೋಕುಲದಂತೆ ಕಾಣುತಿತ್ತು. ಆ ಆಕಾಶ, ಹಳೆಯ ಮರಗಳು, ಮಣ್ಣಿನ ಪರಿಮಳ ಎಷ್ಟು ಕೊಳಲಿನ ದನಿಗೆ, ಎಷ್ಟು ರಾಧೆಯರ ನಿಟ್ಟುಸಿರಿಗೆ ಸಾಕ್ಷಿಯಾಗಿತ್ತೋ! ನಮಗೆ ನಾವಿರುವುದೇ ಒಂದು ಪ್ರಪಂಚವಾದರೆ ಬೀಸುವ ಗಾಳಿಯ ಆಚೆಯೇ ಇನ್ನೊಂದು ದೊಡ್ಡ ಪ್ರಪಂಚವಿರಬಹುದು. ಈಗ ಹಂಚಿಕೊಳಲೇ ನನ್ನ ಪ್ರಪಂಚದ ಹಾಗಿತ್ತು. ಮೊನ್ನೆ ತನಕ ಇಲ್ಲಿ ಇದ್ದ ಗೌರಕ್ಕ, ಈಗಲೂ ಇರುವ ಹಮೀದ, ಇನ್ನು ಮುಂದೆ ಅಲ್ಲಿಗೆ ಬರುವ ಇನ್ಯಾರೋ ಮತ್ತು ಅಲ್ಲಿಂದ ಹೊರಟ ನಾನು, ಗೌರಕ್ಕನ ಗಾದೆಯಂತೆ, ಮಳೆ ಹೊಯ್ಯಲಿಕೆ ಯಾರೂ ಹೇಳಬೇಕಾಗಿಲ್ಲವೆಂಬಂತೆ ಇದ್ದೇವೆ.

ಈಗ ಎಲ್ಲಾ ಆಟ ಮುಗಿಸಿ ನಿದ್ದೆಯಾಟವಾಡೋಣ ಅನ್ನಿಸುತ್ತಿತ್ತು. ಕನಸು ಕಾಣುತ್ತಾ ನಿದ್ದೆ ಮಾಡುವುದೇ ಒಂದು ಮುಕ್ತಿಯಿರಬೇಕು.

(ಫೋಟೋಗಳು:ನಾಗಶ್ರೀ ಶ್ರೀರಕ್ಷ)