‘ಹತ್ತ ದಾಸಿಯರನ ಇಟಗೊಳೊದ ಕಿಂತಾ ಒಬ್ಬ ರಾಜ ನರ್ತಕಿನ ಇಟಗೋಬೇಕು’ ಅಂತ ಒಂದ ಗಾದಿ ಮಾತ ಅದ, ಕೇಳಿರೇನ? ಅಲ್ಲಾ, ಹಿಂತಾವೇಲ್ಲಾ ನೀನ ಕೇಳಿರತಿ ಇಲ್ಲಾ ಹುಟ್ಟಿಸಿರತಿ ತೊಗೊ ಮಗನ ಅಂತ ಅನಬ್ಯಾಡರಿ. ಖರೇನ ಇದ ಒಂದ ಗಾದಿ ಮಾತ, ನಾ ಹುಟ್ಟಿಸಿದ್ದೇನ ಅಲ್ಲಾ. ಹಂಗಂತ ನಾ ಏನ ಯಾರನ ಇಟಗೊಳ್ಳಿಕ್ಕೆ ಹೊಂಟಿಲ್ಲ ಮತ್ತ, ಕಟಗೊಂಡಿದ್ದ ಒಂದನ್ನ ಸಂಭಾಳಸೋದ ರಗಡ ಆಗೇದ ಮತ್ತ ಇನ್ನೇನ ತಲಿ ಇಟಗೋತಿರಿ. ಹಂಗ ಈ ಹೆಡ್ಡಿಂಗ ನೋಡಿ ಏನ ಭಾರಿ ಟಾಪಿಕ್ ಅದ ಅಲಾ ಈ ಸರತೆ ಅಂತ ನೀವು ಮನಸ್ಸಿನಾಗ ಏನೇನರ ವಿಚಾರ ಮಾಡಬ್ಯಾಡರಿ. ‘ಹತ್ತ ದಾಸಿಯರನ ಇಟಗೊಳೊದ ಕಿಂತಾ ಒಬ್ಬ ರಾಜ ನರ್ತಕಿನ ಇಟಗೋಬೇಕು’ ಅನ್ನೋದು ನನ್ನ ‘ಫೈನಾನ್ಸ ಮ್ಯಾನೇಜಮೆಂಟ್ ಪ್ರಿನ್ಸಿಪಲ್!’

ಅಲ್ಲಾ, ಹಂಗ ಇಟಗೊಂಡಿದ್ದ ಹತ್ತ ದಾಸಿಯರನ ಬಿಟ್ಟ ಬರೇ ಒಬ್ಬ ರಾಜನರ್ತಕಿನ ಇಟಗೊಂಡರ ಖರ್ಚ ಕಡಿಮೆ ಆಗೇ ಆಗತದ ಅದರಾಗ ಏನ ದೊಡ್ಡ ಫೈನಾನ್ಸ ಮ್ಯಾನೇಜಮೆಂಟ್ ಅಂತ ಅನಸಬಹುದು ನಿಮಗ, ಆದರ ಅದು ಹಂಗ ಅಲ್ಲಾ. ನನ್ನ ಫೈನಾನ್ಸ ಮ್ಯಾನೇಜಮೆಂಟ್ ಥೇರಿನ ಬ್ಯಾರೆ. ನಂಗ ಫೈನಾನ್ಸಿಯಲ್ ಕ್ರೈಸಿಸ್ ಬಂದಾಗೊಮ್ಮೆ ನಾ ಈ ಪ್ರಿನ್ಸಿಪಲ್ ಅಪ್ಲ್ಯೈ ಮಾಡಿನ ನನ್ನ ಪ್ರಾಬ್ಲೇಮ್ ಬಗಿಹರಿಸಿಗೊಳ್ಳೊದು. ಹಂಗ ನಂಗ ಮೊದಲನೆ ಸಲಾ ದೊಡ್ಡ ಫೈನಾನ್ಸಿಯಲ್ ಪ್ರಾಬ್ಲೇಮ್ ಅಂತ ಅನಿಸಿದ್ದ ನನ್ನ ಮದುವಿ ವೇಳ್ಯಾದಾಗ. ಅಲ್ಲಾ, ಖರೆ ಅಂದ್ರ ಎಲ್ಲಾ ಪ್ರಾಬ್ಲೇಮ್ಸ್ ಹುಟ್ಟೋದ ಅಲ್ಲಿಂದ ಆ ಮಾತ ಬ್ಯಾರೆ. ಆದರ ಅದರಾಗ ನಂಗ ಫೈನಾನ್ಸಿಯಲ್ ಪ್ರಾಬ್ಲೇಮ್ ಒಂದ ಎಕ್ಸ್ಟ್ರಾ ಹುಟ್ಟಿತ್ತ. ಮೊದ್ಲಿಂದ ನಮ್ಮ ಆರ್ಥಿಕ ಪರಿಸ್ಥಿತಿ ಆರಕ್ಕ ಏರಂಗಿಲ್ಲಾ ಮೂರಕ್ಕ ಇಳಿಯಂಗಿಲ್ಲಾ ಅನ್ನೋ ಹಂಗ ಇತ್ತs. ನಮ್ಮಪ್ಪ ಹೆಂಗೋ ಕರೆ ಹಂಚಿನ ಮನ್ಯಾಗ ತನ್ನ ಜೀವನಾ ತೇಯದ ನಮ್ಮನ್ನ ದೊಡ್ಡೋವರನ ಮಾಡಿದ್ದಾ. ನಾ ಮುಂದ ಕಿರ್ಲೋಸ್ಕರದಾಗ ನೌಕರಿ ಸಿಕ್ಕ ಮ್ಯಾಲೆ ಕರೆ ಹಂಚಿನ ಮನಿಯಿಂದ ಸಿಮೆಂಟ್ ಶೀಟ್ ಔಟಹೌಸಿಗೆ ಪ್ರಮೋಶನ ತೊಗೊಂಡೆ. ಹಿಂಗ ಒಂದ್ಯಾರಡ ವರ್ಷ ಆಗೋದಕ್ಕ ಇನ್ನ ಕನ್ಯಾ ನೋಡ್ಬೇಕು ಅಂತ ಡಿಸೈಡ ಮಾಡಿದ ಮ್ಯಾಲೆ ಸಿಂಗಲ್ ಬೆಡರೂಮ್ ಔಟಹೌಸಿಗೆ ಶಿಫ್ಟ ಆದೆ. ಅದ ನಮ್ಮ ಕುಟಂಬದ ಮೊದಲನೇ ಬೆಡ ರೂಮ್ ಹೌಸ. ಆದರ ಆವಾಗಿನ್ನೂ ನಂದ ಲಗ್ನಾಗಿದ್ದಿಲ್ಲಾ ಅಂತ ಬೆಡರೂಮ್ ನಮ್ಮ ಅವ್ವಾ-ಅಪ್ಪಗ ಬಿಟ್ಟ ಕೊಟ್ಟೆ. ಪಾಪ ಅವರ ಇಷ್ಟ ದಿವಸ ಬೆಡರೂಮ್ ಇಲ್ಲದ ಮನ್ಯಾಗ ಎರಡ ಮಕ್ಕಳನ್ನ ಹಡದ ದೊಡ್ಡವರನ ಮಾಡಿದ್ರು, ಇನ್ನರ ಒಂದ ಸ್ವಲ್ಪ ಪ್ರೈವೇಸಿ ಇರಲಿ ಅಂತ ಬೆಡರೂಮ್ ಬಿಟ್ಟ ಕೊಟ್ಟಿದ್ದೆ. ಮುಂದ ನನಗ ನಾ ಲಗ್ನಾ ಮಾಡ್ಕೋಬೇಕು ಅಂತ ನೊಬೆಲ್ ವಿಚಾರ ಬಂದಾಗ ಡಬಲ್ ಬೆಡರೂಮ ಮನಿಗೆ ಶಿಫ್ಟ್ ಆದೆ.

ಹಂಗ ಡಬಲ್ ಬೆಡರೂಮ ಮನಿ ಸಿಕ್ಕರ ಮದುವೇನ ಆದಂಗ ಅಲ್ಲಲಾ, ಆ ಎರಡನೇ ಬೆಡರೂಮ ತುಂಬ ಬೇಕು ಅಂದ್ರ ಮೊದ್ಲ ಕನ್ಯಾ ಸಿಗಬೇಕು, ಎಲ್ಲಾ ಕೂಡಿ ಬರಬೇಕು, ಮಾತುಕತಿ ಆಗಬೇಕು, ಆಮ್ಯಾಲೆ ಮದುವಿ. ಆದರ ನನ್ನ ದುರ್ದೈವಕ್ಕ ನಾ ಲಗ್ನಾ ಮಾಡ್ಕೋಬೇಕು ಅಂತ ಡಿಸೈಡ ಮಾಡೋ ಪುರಸತ್ತ ಇಲ್ಲದ ಕನ್ಯಾ ಫಿಕ್ಸ್ ಆಗೇ ಬಿಟ್ಟತು. ಏನ ಕೂಡಬೇಕಿತ್ತೊ ಅದು ಕೂಡಿ ಎಂಗೇಜಮೆಂಟೂ ಆಗೆ ಬಿಡ್ತ. ಇನ್ನ ಒಮ್ಮೆ ಎಂಗೇಜಮೆಂಟ ಆದ ಮ್ಯಾಲೆ ಭಾಳ ದಿವಸ ಬಿಡಬಾರದು, ಏನಿಲ್ಲದ ಲೋಕಲ್ ಕನ್ಯಾ ಬ್ಯಾರೆ ಇವಂದೇನ ಹೇಳಲಿಕ್ಕೆ ಬರಂಗಿಲ್ಲಾ, ಗಡಿಗೆ ನೀರಕಿಂತಾ ಮೊದ್ಲ ಕಳ್ಳ ಕುಬಸಾ ಮಾಡಿಸಿದರು ಮಾಡಿಸಿದನ ಅಂತ ನಮ್ಮ ಮನಿ ಹಿರೇಮನಷ್ಯಾರೇಲ್ಲಾ ಸೇರಿ ಮದುವಿ ಡೇಟ್ ಫಿಕ್ಸ್ ಮಾಡೇಬಿಟ್ಟರು. ಅಷ್ಟರಾಗ ನಾ ಒಂಬತ್ತ ತಿಂಗಳ ಕದ್ದು ಮುಚ್ಚಿ ಹುಡಗಿ ಕರಕೊಂಡ ಅಡ್ಡ್ಯಾಡಿದ್ದೆ, ಮದುವಿ ಆದರ ಇನ್ನೂ ಮಜಾ ಮಾಡಬಹುದು ಅಂತ ಹೂಂ ಅಂದ ಬಿಟ್ಟೆ.

ಹಂಗ ನಾವು ಗಂಡಿನವರ ಆದರು ನಂಬದು ಮದುವಿ ಖರ್ಚ ಅಂತ ಇದ್ದ ಇರತದ. ಅದರಾಗ ನಮ್ಮವ್ವ ‘ಗಂಡಸ ಮಗನ ಮದುವಿ, ನಂದ ಚೊಚ್ಚಲ ಗಂಡಸ ಮಗನ ನಿಯಮ ಬಿಡಸಬೇಕು, ನಮ್ಮ ಮನ್ಯಾಗಿನ ಮೊದ್ಲನೇ ಮದುವಿ ಅವರಿಗೆ ಇದನ್ನ ಕೊಡಬೇಕು, ಇವರಿಗೆ ಅದನ್ನ ಕೊಡಬೇಕು’ ಅಂತ ದೊಡ್ಡ ಲಿಸ್ಟ ತಯಾರ ಮಾಡಲಿಕ್ಕೆ ಹತ್ತಿದ್ಲು. ನಾ ಶಾಣ್ಯಾ, ಕಿಸೆದಾಗ ಒಂದ ಹದಿನೈದ ಇಪ್ಪತ್ತ ಸಾವಿರ ರೂಪಾಯಿ ಇಟಗೊಂಡ ಲಗ್ನಾ ಮಾಡ್ಕೋಳಿಕ್ಕೆ ಹೊಂಟಿದ್ದೆ. ನಮ್ಮವ್ವನ ಲಗ್ನದ ತಯಾರಿ ನೋಡಿದ್ರ ಇದ ಎಲ್ಲೋ ಕುತಗಿಗೆ ಉರಲ ಆಗೋಹಂಗ ಕಾಣತದ ಅಂತ ಅನಸಲಿಕತ್ತ. ಅದರಾಗ ನಾ ಮದುವಿ ಮಾತುಕತಿ ಹೊತ್ತಿನಾಗ
“ಬೀಗರ ಕಡೆ ಒಂದ ಸ್ವಲ್ಪ ಜಾಸ್ತಿನ ಕೇಳರಿ, ಬಂಗಾರ ಒಂದ ಗುಂಜಿ ಕಡಿಮೆ ಆದರೂ ಅಡ್ಡಿಯಿಲ್ಲಾ ಕ್ಯಾಶ್ ಸ್ವಲ್ಪ ಜಾಸ್ತಿ ಕೇಳರಿ” ಅಂತ ಹೇಳಿದಾಗ ಮನಿ ಮಂದಿ  “ನೀ ಏನಲೇ ಅವರ ರೊಕ್ಕದಾಗ ಮದುವಿ ಮಾಡ್ಕೋಳೊಂವೇನ್? ನಿನ್ನ ಮಾರಿಗೆ ಇಷ್ಟ ಕೊಟ್ಟದ್ದ ರಗಡ ಆತ” ಅಂತ ಬರೆ ಹದಿನೈದ ಸಾವಿರ ರೂಪಾಯಿ, ಐದ ತೊಲಿ ಬಂಗಾರಕ್ಕ ಮಾತುಕತಿ ಮುಗಿಸಿ ಬಿಟ್ಟರು. ಅಂಡರವೇರ್,ಬನಿಯನ್, ಅಂಗಿ-ಚಡ್ಡಿ ಎಲ್ಲಾದರದೂ ಇದರಾಗ ಬಂತ ಅಂತ ಬ್ಯಾರೆ ಬೀಗರ ಹೇಳಿ ಬಿಟ್ಟಿದ್ದರು.

ನಾ ಖರೆ ಹೇಳ್ತೇನಿ ನಂಗ ಇವತ್ತ ಅದನ್ನ ನೆನಿಸಿಕೊಂಡರ ಇಷ್ಟ ಸಂಕಟ ಆಗಿ ಹೊಟ್ಟ್ಯಾಗ ಉರಿ ಬಿಳತದಲಾ, ನಮ್ಮ ದೋಸ್ತರೊಳಗ ಹೆಂತಿಂತಾ ಹು.ಸೊ. ಮಕ್ಕಳ ಎಷ್ಟೇಷ್ಟ ತೊಗಂಡಾರ್ರಿ, ಅವನೌನ ನನ್ನ ಹಣೇಬರಹನ ಖೋಟಿ ಅದ ಅಂತ ಅನಸ್ತದ. ಎಷ್ಟ ಸಸ್ತಾದಾಗ ಹೋದೆರಿ. ಒಂದ ಬಿಟ್ಟ ಎರಡ ಕನ್ಯಾ ನೋಡಲಿಲ್ಲಾ, ನನ್ನ ಮಾರ್ಕೇಟ ವ್ಯಾಲೂನ ನನಗ ಗೊತ್ತಾಗಲಿಲ್ಲಾ. ಕಂಡೇನೋ ಇಲ್ಲೊ ಅನ್ನೊರಂಗ ಒಂದನೇ ಕನ್ಯಾಕ್ಕ ಹೂಂ ಅಂದಿದ್ದ ಮುಂದ ಬುಟ್ಟಿ ಗಟ್ಟಲೆ ತಿಂದಂಗ ಆತ. ಇವತ್ತ ನನ್ನಂತಾ ವರಾ ಅವನೌನ ಎಷ್ಟ ಕೊಟ್ಟರು ಸಿಗಂಗಿಲ್ಲಾ. ಆದರ ಈಗ ಏನ್ಮಾಡೋದ, ಆಗಿದ್ದ ಆಗಿ ಹೋತ, ಸುಮ್ಮನ ಹಳೇದ ನೆನಸಿಗೊಂಡ ಜೀವಾ ಚುಟು ಚುಟು ಅನಿಸಿಗೊಳ್ಳೊದರಾಗ ಅರ್ಥ ಇಲ್ಲಾ. ಅದರಾಗ ಆ ಮಾತಿಗೆ ಈಗ ಹನ್ನೆರಡ ವರ್ಷ ಆಗಲಿಕ್ಕೆ ಬಂತ. ಏನೋ ಹೆಂಡತಿನ ಬಂಗಾರದಂಗ ಇದ್ದಾಳ ಅಂತ ಸುಮ್ಮನಿದ್ದೇನಿ. ಆದರ ಇದ ಅಪ್ರಿಸೀಯೇಟ್ ಆಗೊ ಬಂಗಾರ ಅಲ್ಲಾ, ವರ್ಷಾ ವರ್ಷಾ ಡೆಪ್ರಿಸೀಯೇಟ ಆಗೋದ. ಹಂಗ ದೇಹದಾಗ ಅಪ್ರಿಸೀಯೇಟ್ ಆದರು ಕ್ವಾಲಿಟಿ ಒಳಗ ಡೆಪ್ರಿಸಿಯೇಟ ಆಗಿ ಸವಕೋತ ಹೊಂಟದ. ಏನೋ ಮನಿ ಬಂಗಾರ, ನಾವೇನ ದುಡದ ತೊಗಂಡಿದ್ದಲ್ಲಾ ಅಂತ ಇಟಗೊಳೊದು.

ಇನ್ನ ನಾ ಆವಾಗ ದೊಡ್ಡಿಸ್ತನಾ ಬಡದ ತಂಗಿಗಿಂತ ಮುಂಚೆ ಲಗ್ನಾ ಮಾಡ್ಕೋಳಿಕತ್ತಿದ್ದೆ, ಹಿಂಗಾಗಿ ಬಳಗದವರ ಯಾರು ರೊಕ್ಕದ ವಿಷಯದಾಗ ಒಂದ ಚೂರು ಹೆಲ್ಪ್ ಮಾಡೊಹಂಗ ಕಾಣಲಿಲ್ಲಾ. ಅವರೇಲ್ಲಾ ಈ ಮಗಾ ರೊಕ್ಕಾ ಮಾಡ್ಯಾನ ಅದಕ್ಕ ಲಗ್ನ-ಲಗ್ನ ಅಂತ ಬಡಕೊಳಿಕತ್ತಾನ, ತಂಗಿ ಲಗ್ನಾ ಮಾಡಿ ಮಾಡ್ಕೊಂಡಿದ್ದರ ಏನ ಆಗತಿತ್ತ ಧಾಡಿ ಅವಂಗ ಅಂತ ಮಾತಾಡ್ಕೊಳ್ಳಿಕತ್ತಿದ್ದರು. ಇನ್ನ ನಾ ಹಂತಾವರ ಕಡೆ ಲಗ್ನಕ್ಕ ಸ್ವಲ್ಪ ರೊಕ್ಕಾ ಸಾಲಾ ಕೊಡರಿ ಅಂತ ಕೇಳಿದ್ದರ ನನಗ ಲಗ್ನದಾಗ ಅವರ ಕೊಡೊ ಛಲೋ ಉಡಗೊರಿನೂ ಕೊಡಲಿಕ್ಕಿಲ್ಲಾ ಅಂತ ಬಿಟ್ಟ ಬಿಟ್ಟೆ. ಆತ ತೊಗೊ ಹಂಗರ ಎಲ್ಲರ ಬ್ಯಾರೆಕಡೆ ಸಾಲಾ-ಗಿಲಾ ಮಾಡಿದರು ಅಡ್ಡಿಯಿಲ್ಲಾ ಲಗ್ನದಾಗ ಮಾತ್ರ ಯಾ ವಿಷಯದಾಗೂ ಕಾಂಪ್ರಮೈಸ್ ಮಾಡೋದ ಬ್ಯಾಡಾ ಅಂತ ಡಿಸೈಡ ಮಾಡಿದೆ. ಹಂಗ ಲಗ್ನನ ಗಂಡಸರಿಗೆ ಒಂದ ದೊಡ್ಡ ಕಾಂಪ್ರಮೈಸ ಆ ಮಾತ ಬ್ಯಾರೆ.

ಒಮ್ಮೆ ಕುತಗೊಂಡ ಮದುವಿ ಖರ್ಚಿಂದ ಒಂದ ಅಂದಾಜ ಬಜೆಟ್ ತಯಾರ ಮಾಡಿದರ ಬರೋಬ್ಬರಿ ಒಂದ ಲಕ್ಷ ರೂಪಾಯಿದ ಬಜೆಟ ರೇಡಿ ಆತ. ಇದರಾಗ ದೇವರ ಊಟದಿಂದ ಹಿಡದ, ಮದುವಿ, ಪ್ರಸ್ತ, ಸತ್ಯನಾರಯಣ ಪೂಜಾ, ಎಲ್ಲಾ ಬಂತ, ಹನೀಮೂನ ಮತ್ತ ಒಂದನೇ ಸರತೆ ಸ್ಕ್ಯಾನಿಂಗದ ಬಿಟ್ಟs ಮತ್ತ. ಇನ್ನ ಈ ರೊಕ್ಕಾ ಹೆಂಗ ಹೊಂದಸೋದು ಅಂತ ವಿಚಾರ ಮಾಡಲಿಕತ್ತೆ. ಯಾರನ ಕೇಳಬೇಕು, ಯಾರಿಗೆ ಎಷ್ಟ ಕೇಳಬೇಕು ಅಂತ ಸಾಲಾ ಕೊಡೊರದ ಲಿಸ್ಟ ಮಾಡಲಿಕತ್ತೆ.  ಹಂಗ ನಾ ಹೊರಗಿನ ಮಂದಿನ್ನ ಭಾಳ ಹಚಗೊಂಡೊಂವಾ, ಸಾಲ ಕೊಡೋರಿಗೆ ಏನ ಕಡಿಮಿ ಇದ್ದಿದ್ದಿಲ್ಲಾ. ನಾ ಮನಸ್ಸ ಮಾಡಿದ್ದರ ನನ್ನ ಮದುವಿ ಸಂಬಂಧ ಒಂದ IPOನ ತಗಿಬಹುದಿತ್ತ ಆದರೂ ಸಾಲ ಸಾಲನs ಅಲಾ, ಇವತ್ತಿಲ್ಲಾ ನಾಳೆ ಮುಟ್ಟಸ ಬೇಕ. ನಾಳೆ ಮದುವಿ ಆಗಿ ಒಂದ ತಿಂಗಳಕ್ಕ ‘ನಾ ನಿನ್ನ ಮದುವಿ ಸಂಬಂಧ ಇಷ್ಟ ಸಾಲ ಮಾಡೇನಿ’ ಅಂತ ಹೆಂಡ್ತಿ ಜೀವಾ ತಿನ್ನಲಿಕ್ಕೆ ಬರಂಗಿಲ್ಲಾ, ಅಕಿನ್ನ ತವರಮನಿಗೆ ರೊಕ್ಕಾ ತೊಗಂಡ ಬಾ ಅಂತ ಕಳಸಲಿಕ್ಕೆ ಸರಿ ಅನಸಂಗಿಲ್ಲಾ, ಇನ್ನ ಹೊಸದಾಗಿ ಲಗ್ನ ಆಗಿರತದ ಹಿಂಗಾಗಿ ನೋಡ್ಕೊಂಡ ಖರ್ಚ ಮಾಡಲಿಕ್ಕು ಬರಂಗಿಲ್ಲಾ. ಆವಾಗ ಹೆಂಡ್ತಿ ಮುಂದ ಏನೇನ ದೊಡ್ಡಿಸ್ತನ ಬಡಿಬೇಕ ಅದನ್ನ ಬಡಿಯಬೇಕ. ಅಕಿಗೆ ಏನೇನ ಬೇಕ ಅದನ್ನ ಅಕಿ ಕೊಡಸ ಅಂದರ ಕೊಡಸಬೇಕ. ಅದಕ್ಕೆಲ್ಲಾ ಈಗs ರೊಕ್ಕಾ ಹೊಂದಸಬೇಕ.

ಇವನೇಲ್ಲಾ ವಿಚಾರ ಮಾಡತೀರಬೇಕಾರ ಹೊಳಿತ ನೊಡ್ರಿ, ‘ಹತ್ತ ದಾಸಿಯರನ ಇಟಗೊಳೊದ ಕಿಂತಾ ಒಬ್ಬ ರಾಜ ನರ್ತಕಿನ ಇಟಗೋಬೇಕು’ ಅಂತ ಎಲ್ಲೋ ಕೇಳಿದ್ದ ತಲ್ಯಾಗ ಬಂತ. ಈಗ ನಾ ಒಂದ ಎಂಟ-ಹತ್ತ ಮಂದಿ ಕಡೆ ನೀ ಒಂದ ಹತ್ತ ಸಾವಿರ ಕೊಡ, ನೀ ಒಂದ ಹದಿನೈದ ಸಾವಿರ ಕೊಡ ಅಂತೇಲ್ಲಾ ಕೇಳ್ಕೋತ ಕೂಡೊದಕಿಂತಾ ಒಂದs ಕಡೆ ಲಕ್ಷ ರೂಪಾಯಿ ಕೇಳಿ ಬಿಡೋದ ಛಲೊ ಅಂತ ಡಿಸೈಡ ಮಾಡಿದೆ. ಅಂದರ ಹತ್ತ ಕಡೆ ಸಣ್ಣ ಪುಟ್ಟ ಸಾಲಾ ಮಾಡೋದಕಿಂತಾ ಒಂದ ಕಡೆ ದೊಡ್ಡ ಸಾಲಾ ಮಾಡಬೇಕು ಅಂತ ನಾ ಕಲತಿದ್ದ ಈ ಗಾದಿ ಮಾತನಿಂದ. ನೀವು ಇಟಗೊಳೊದು ಅಂತ ಅಂದರ ಏನೋ ತಿಳ್ಕೊಂಡಿದ್ದಿರಿ ಹೌದಲ್ಲ? ನಂಗೊತ್ತ ನೀವ ನನ್ನ ಬಗ್ಗೆ ಹೆಂಗ ವಿಚಾರ ಮಾಡ್ತೀರಿ ಅಂತ. ಅದಕ್ಕ ನಾ ಮೊದ್ಲ್ ಹೇಳಿದ್ದ ಇದ ನನ್ನ ಫೈನಾನ್ಸ ಮ್ಯಾನೇಜಮೆಂಟ್ ಪ್ರಿನ್ಸಿಪಲ್, ನೀವು ಸುಮ್ಮನ ಮನಸ್ಸಿನಾಗ ಏನೇನರ ಅನ್ಕೋಬ್ಯಾಡರಿ ಅಂತ. ಸೊ ಈಗ ಕ್ಲೀಯರ್ ಆತ?

ಹಂಗ ನನ್ನ ಪ್ರಕಾರ ಇದ ಭಾಳ ಕರೇಕ್ಟ್ ಮೆಥಡ್, ಸುಮ್ಮನ ಹತ್ತ ಮಂದಿ ಕಡೆ ಸಾಲಾ ಮಾಡಿ ಇವತ್ತ ಕೊಡ್ತೇನಿ ನಾಳೆ ಕೊಡ್ತೇನಿ ಅಂತ ಅವರಿಗೆ ಕಾಡಿಸಿಗೋತ, ಅವರ ಫೋನ್ ಎತ್ತಲಾರದ, ಅವರನ ನೋಡಿನೂ ನೋಡಲಾರದಂಗ ಅಡ್ಯಾಡೋದಕಿಂತಾ ಒಬ್ಬರನ ಪಟಾಯಿಸಿ ಎಷ್ಟ ಬೇಕ ಅಷ್ಟ ಸಾಲಾ ಮಾಡಿ ಬದುಕೋದ ಛಲೋ ಅಂತ ಆವಾಗಿಂದ ನಾ ಡಿಸೈಡ ಮಾಡಿದ್ದ. ಹಂಗ ಸಣ್ಣ ಪುಟ್ಟ ಅಮೌಂಟ ಸಾಲಾ ಕೊಡೊರ (ದಾಸಿಯರ ಇದ್ದಂಗ) ಸಿಕ್ಕ ಸಿಗತಾರ ಆದರ ಲಕ್ಷಗಟ್ಟಲೇ ಕೋಡೊರನ ಹುಡಕಬೇಕಲಾ, ಅದಕ್ಕ ನಾ ಹೇಳಿದ್ದ ಹಂತಾವರ ರಾಜನರ್ತಕಿ ಇದ್ದಂಗ ಅಂತ. ಅಲ್ಲಾ, ನಾ ಮೊದ್ಲ ಹೇಳಿದ್ನೇಲ್ಲಾ ನಾ ಭಾಳ ಮಂದಿಗೆ ಹಚಗೊಂಡೇನಿ ಅಂತ, ಹಿಂಗಾಗಿ ನನಗ ರಾಜನರ್ತಕಿ ಹುಡಕೋದ ಏನ ಭಾಳ ಹೊತ್ತ ಹಿಡಿಲಿಲ್ಲಾ, ಹಂಗ ನಾ ಮನಸ್ಸ ಮಾಡಿದ್ದರ ಎಂಟ-ಹತ್ತ ರಾಜನರ್ತಕಿಯರನ ಇಟಗೋಬಹುದಿತ್ತ, ಆದರ ಬ್ಯಾಡ ಯಾಕ ಸುಮ್ಮನ ಸಾಲಾ ಕೊಡೋರು ಗಟ್ಟಿ ಇದ್ದಾರಂತ ಹೂಯ್ಯಿ ಅಂತ ಸಾಲಾ ಮಾಡಬೇಕು ಅಂತ ನಂಗ ಮದುವಿಗೆ ಎಷ್ಟ ಬೇಕಿತ್ತ ಅಷ್ಟ ಸಾಲಾ ಮಾಡಿದೆ. ಯಾವದ ಕಾರಣಕ್ಕೂ ಮದುವ್ಯಾಗ ಏನೂ ಕಡಿಮಿ ಆಗಲಾರದಂಗ ನೋಡ್ಕೊಂಡೆ. ಹಂಗ ಮದುವಿ ಆಗಿ ಸಂಸಾರ ರುಟೀನ ಆದ ಮ್ಯಾಲೆ ಅಷ್ಟಿಷ್ಟ ಸಾಲಾ ತಿರಿಸಿಗೋತ ಹೋದೆ. ಅಲ್ಲಾ ಮತ್ತೇನರ ಎಮರ್ಜನ್ಸಿ ಬಂದರ ಸಾಲ ಸಿಗಬೇಕಲಾ, ಹಿಂಗಾಗಿ ಸಾಲ ನಿಯತ್ತಲೇ ವಾಪಸ ಕೊಟ್ಟೆ.

ನಾ ಮುಂದ ಜೀವನದಾಗ ಯಾವಾಗ-ಯಾವಾಗ ನಂಗ ಫೈನಾನ್ಸಿಯಲ್ ಪ್ರಾಬ್ಲೇಮ್ ಬಂದದ ಆವಾಗೇಲ್ಲಾ ಈ ಮೆಥಡ್ ಫಾಲೋವ್ ಮಾಡಿದ್ದ. ಮುಂದ ನಮ್ಮ ತಂಗಿ ಲಗ್ನದಾಗ, ನಮ್ಮಪ್ಪಗ ಆರಾಮ ಇಲ್ಲದಾಗ, ಸೈಟ ತೊಗೊಬೇಕಾರ ನಾ ಫೈನಾನ್ಸ ಮ್ಯಾನೇಜ ಮಾಡಿದ್ದ ಹಿಂಗ. ಈಗ ಮನಿ ಒಂದ ಕಟ್ಟೋದ ಬಾಕಿ ಅದ ಅದಕ್ಕೊಂದ ವ್ಯವಸ್ಥೆ ಮಾಡ್ಬೇಕು. ಅದಕ್ಕ ಒಂದ ರಾಜನರ್ತಕಿಯಿಂದ ಕೆಲಸ ಆಗಲಿಕ್ಕಿಲ್ಲಾ, ಕಡಿಮಿ ಕಡಿಮಿ ಅಂದರು ಒಂದ ಎಂಟ-ಹತ್ತ ರಾಜನರ್ತಕಿಗಳ ಬೇಕಾಗತಾರ ಇಲ್ಲಾ ಒಬ್ಬ ರಾಣಿನ ಹುಡಕಬೇಕ ಇಷ್ಟ. ನೋಡೋದು ನಮ್ಮ ನಸೀಬದಾಗ ಮನಿಕಟ್ಟೋದ ಇದ್ದರ ಸಿಕ್ಕ ಸಿಗತಾರ, ಇಲ್ಲಾಂದ್ರ ಕಟಗೊಂಡೊಕಿ ಅಂತೂ ಇದ್ದ ಇದ್ದಾಳ. ಅಕಿನ್ನ ಇಟಗೊಂಡ ಭಾಡಗಿ ಮನ್ಯಾಗ ಜೀವನಾ ಕಳೇಯೋದು. ಅಲ್ಲಾ ಇವತ್ತ ನಾ ತಗದಿದ್ದ ವಿಷಯ ನಿಮಗ ಹುಡಗಾಟಕಿ ಅನಸಬಹುದು. ಆದರ ನಾ ಹೇಳ್ತೇನಿ ಮಿಡಲ್ ಕ್ಲಾಸ ಫ್ಯಾಮಿಲಿ ಒಳಗ ದುಡ್ಡಿಂದ ದೊಡ್ಡ ಸಮಸ್ಯೆ. ಏನ ಒಂದ ವಿಶೇಷ ಕಾರ್ಯಕ್ರಮ ಅನ್ನರಿ ಇಲ್ಲಾ ತಾಪತ್ರಯ ಅನ್ನರಿ ಬಂತಂದರ ಮೊದ್ಲ ಕುತ್ತ ಬರೋದ ರೊಕ್ಕಕ್ಕ. ಅಕ್ಕಂದೊ ಇಲ್ಲಾ ತಂಗೀದೊ ಲಗ್ನಾ ಮಾಡಿ ಅಟ್ಟಬೇಕು, ಅಪ್ಪ ಅವರ ಹೆಸರಿಲಿ ಮಾಡಿ ಇಟ್ಟಿದ್ದು ಅಷ್ಟರಾಗ ಅದ, ಆವಾಗ ಏನ ಮಾಡೋದು?

ಒಮ್ಮಿಂದೊಮ್ಮಿಲೆ ಅಪ್ಪಗ ಹಾರ್ಟ ಅಟ್ಟ್ಯಾಕ ಅತು “ಇಲ್ಲಾ, ಕೆ.ಎಲ್.ಇ – ಬೆಳಗಾಂವಕ್ಕ ಒಯ್ಯರಿ, ಬ್ಲಾಕೇಜ ೮೦% ಮ್ಯಾಲೇ ಅದ, ಇಮ್ಮಿಡೀಯಟ್ ಬೈಪಾಸ್ ಮಾಡಬೇಕು” ಅಂತ ಹೇಳಿದರು ಆವಾಗ? ನಂಗೂ ನಮ್ಮ ದೋಸ್ತರಗತೆ ಮಲೇಶಿಯಾ, ಪಟಾಯಾಕ್ಕ ಹೋಗಿ ಮಸಾಜ ಮಾಡಿಸ್ಗೊಂಡ ಬರಬೇಕು ಅಂತ ಆಶಾ ಹುಟ್ಟತ, ಆವಾಗ? ಇಲ್ಲಾ ಅಜ್ಜಿಗೆ ಮೊಮ್ಮಗನ ಸ್ವಂತ ಮನಿ ಒಳಗ ಸಾಯಿಬೇಕು ಅಂತ ಕೊನೆ ಆಶೆ ಅದ, ಅದಕ್ಕ ಲಗೂನ ಮನಿ ಕಟ್ಟಸಬೇಕು ಮುಂದ? ಕೆಲವೊಮ್ಮೆ ಅಕ್ಕನೋ-ತಂಗೀನೋ ಎರಡನೇದ ಬಸರಾಗಿ ಹಡಿಲಿಕ್ಕೆ ಮತ್ತ ತವರಮನಿಗೆ ಬಂದ್ಲು, ಅಕಿದ ಮೊದ್ಲ ಕಾಂಪ್ಲಿಕೇಟೆಡ ಕೇಸ, ಸಿಜರಿನ್ ಗ್ಯಾರಂಟಿ ಇರತದ, ರೊಕ್ಕಾ ಹೊಂದಸಬೇಕು ಆವಾಗ?

ಅಲ್ಲಾ ಈ ಅಕ್ಕ-ತಂಗ್ಯಾರಂತೂ ಮದುವಿ ಆದಮ್ಯಾಲೆ ತವರಮನಿಗೆ ಕಾಂಪ್ಲಿಕೇಟೆಡ ಆ ಮಾತ ಬ್ಯಾರೆ ಆದರೂ ಹಿಂತಾವ ಒಂದ, ಎರಡ? ಪ್ರಾಬ್ಲೇಮ್ಸ್ ಏನ ಹೇಳಿ-ಕೇಳಿ ಬರತಾವ. ಹಿಂತಾದರಾಗ ಅರ್ಧಾ ಧೈರ್ಯ ಕೊಡೊದು ಇಲ್ಲಾ ಧೈರ್ಯ ಕಳೇಯೋದು ನಮ್ಮ ರೊಕ್ಕದ ಕ್ಯಾಪ್ಯಾಸಿಟಿ. ಒಮ್ಮೆ ಇದರ ವ್ಯವಸ್ಥೆ ಆತು ಅಂದರ ನೀವು ಅರ್ಧಾ ಗೆದ್ದಂಗ. ಹಂಗ ನಾವಂತೂ ಹಿಂತಾವೇನರ ಬರತಾವ ಅಂತ ರೊಕ್ಕಾ ಇಟಗೊಂಡ ಕೂತಿರಂಗಿಲ್ಲಾ, ಹೇಳಿ-ಕೇಳಿ ಮಿಡ್ಲ ಕ್ಲಾಸ ಮಂದಿ, ಸೇವಿಂಗ್ಸ್ ಏನ ಭಾಳ ಇರಂಗಿಲ್ಲಾ. ನಾವೇನ ಅಪ್ಪನ ಬೈಪಾಸಗೆ, ಅವ್ವನ ಡೈಲಾಸಿಸಗೆ, ತಂಗಿ ಬಾಣೆಂತನಕ್ಕ, ಮಗನ ಮುಂಜವಿಗೆ ಅಂತ ಸಪರೇಟ್ ಆರ್.ಡಿ ಇಲ್ಲಾ S.I.P ಏನ ಮಾಡಿರಂಗಿಲ್ಲಾ. ಎಲ್ಲಾ ಇದ್ದ ಒಂದ ಪಗಾರದಾಗ ಅಂದ್ರ ಹೆಂಗ? ಆಮ್ಯಾಲೆ ಇವನ್ನೇಲ್ಲಾ ಬಿಡಲಿಕ್ಕು ಬರಂಗಿಲ್ಲಾ ಅಂದ ಮ್ಯಾಲೆ ಸಾಲಾ ಮಾಡಲಾರದ ಬಗಿಹರೆಯಂಗಿಲ್ಲಾ. ಇನ್ನ ಸಾಲಾ ಮಾಡೋದ ಖರೆ ಅಂದ ಮ್ಯಾಲೆ ಅದಕ್ಯಾಕ ಹೆದರಬೇಕರಿಪಾ. ಕೈಗಡಾ ಮಾಡಿ ಕೆಲಸಾ ಮುಗಿಸಿಕೊಂಡ ಬಿಡೋದು, ಮುಂದಿಂದ ಮುಂದ. “ಧೈರ್ಯಂ ಸರ್ವತ್ರ ಸಾಧನಂ” ಅಂತ, ಸಾಲಾ ಕೊಡೊರಿಗೆ ಧೈರ್ಯ ಇದ್ದರ ಸಾಕ, ನಾವ ಯಾಕ ತಲಿಗೆಡಸಿಗೊಬೇಕು.

ನಾ ಹೇಳಿದ್ದ ಖರೇ ಹೌದಲ್ಲೊ? ಅಲ್ಲಾ ಹಂತಾದೇನರ ಜೀವನದಾಗ ಸಂಧರ್ಭ ಬಂದರ ನನ್ನ ಗಾದಿ ಮಾತ ನೆನಪ ಇಡರಿ, ನಿಮಗೂ ಕರೆಕ್ಟ ಅನಸಿದರ, ಹಂತಾ ಅವಶ್ಯಕತೆ ಇದ್ದರ ಫಾಲೋ ಮಾಡರಿ, ನಾ ಏನ ಅದಕ್ಕ ಪೇಟೆಂಟ ತೊಗೊಂಡಿಲ್ಲಾ ಏನಿಲ್ಲಾ. ಆದರ ರಾಜನರ್ತಕಿ ಲೆವೆಲ್ ದಾಟಿ ರಾಣಿಗೆ ಕೈಹಚ್ಚಿ ಜೀವನಾ ಸುಟಗೋ ಬಾರದ ಇಷ್ಟ.
‘ಹಾಸಿಗೆ ಇದ್ದಷ್ಟ ಕಾಲ ಚಾಚ ಬೇಕು, ಮುಟ್ಟಸೋ ತಾಕತ್ತ ಇದ್ದಷ್ಟ ಸಾಲಾ ಮಾಡಬೇಕು’ ಅಂತನೂ ಒಂದ ಗಾದಿ ಅದ. ಹಂಗ ಜೀವನದಾಗ ನಾ ಎಲ್ಲಾ ಸ್ವಂತ ರೊಕ್ಕದಾಗ ಮಾಡತೇನಿ ಅಂದರ ಸಾಧ್ಯ ಆಗಂಗಿಲ್ಲಾ. ಕೆಲವೊಮ್ಮೆ ಸಾಲಾ ಮಾಡಿ ಆದರು ಅಡ್ಡಿಯಿಲ್ಲಾ ಅನುಭವಿಸ ಬೇಕಾಗತದ ಮತ್ತ ಅದರಾಗೇನ ತಪ್ಪು ಇಲ್ಲಾ. ಹಿಂಗಾಗಿ ನಾ ಅಂತು ಖರ್ಚು-ವೆಚ್ಚ ಮಾಡಬೇಕಾರ ಭಾಳ ತಲಿ ಕೆಡಸಿಗೊಳಂಗಿಲ್ಲಾ. ಮುಂದಿಂದ ಮುಂದ ನೋಡಿದಾ ಅಂತ ಇವತ್ತ ಬದಕೋದರೊಳಗ ನಾ ಎಂದೂ ಕಾಂಪ್ರಮೈಸ ಮಾಡಿಲ್ಲಾ, ಮಾಡಂಗಿಲ್ಲಾ.