ಶ್ರೀಧರ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ.ಅಂದು ಸಂಜೆ ಪಡಸಾಲೆಯಲ್ಲಿ ಕೂತು ಓದುತ್ತಿದ್ದವಳ ಬಳಿ ಬಂದು “ನಿಂಗೆ ಗಂಡು ನಾನು ಹುಡುಕ್ತೀನಿ.ಸ್ವಲ್ಪ ಟೈಮ್ ಕೊಡೇ. ಅಲ್ಲೀವರ್ಗೂ ನೀನೂ ಓದು.ನಿನ್ನ ಕಾಲ ಮೇಲೆ ನಿಂತ್ಕೋ.” ನನ್ನ ಅಂಗೈಲಿ ಅವನ ಪುಟ್ಟ ಅಂಗೈ ಹುದುಗಿಸಿ ಹೇಳಿ ಹೋದ. ಕಣ್ಣುಗಳು ಆಕಾಶದ ಚುಕ್ಕಿಗಳಂತೆ ಶುಭ್ರವಾಗಿ ವಿಶ್ವಾಸದಿಂದ ಹೊಳೆಯುತ್ತಿದ್ದವು.ಮನಸೇಕೋ ಹೆಮ್ಮೆಯಿಂದ ಉಬ್ಬಿತು.
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಹತ್ತನೆಯ ಕಂತು.

 

ನನ್ನ ಉರಿಬಿಸಿಲ ಹಾಳೂರಿನಂಥಾ ಬದುಕಿಗೆ ತಮ್ಮ ಶ್ರೀಧರನು ತಂಪು ಹೊಂಗೆ ನೆರಳಂತಾಗಿದ್ದ. ಚಿಕ್ಕಂದಿನಲ್ಲಿ ಅವನಿಗೆ ಶಾಪ ಹಾಕಿದ್ದವಳು ಈಗ ಇವನೊಬ್ಬನಿಲ್ಲದೇ ಇದ್ದರೆ ಬದುಕು ಏನು ಗತಿಯಪ್ಪಾ ಅಂತ ಹೌಹಾರುವಷ್ಟು ಹತ್ತಿರದವನಾಗಿದ್ದ. ಕದ್ದು ಮುಚ್ಚಿ ಶಶಾಂಕನ ಸೈಕಲ್ ಹೊತ್ತು ಓಡಿ ಇಬ್ಬರೂ ಸೈಕಲ್ ಕಲಿತಿದ್ದೆವು. ಹುಡುಗರ ಸೈಕಲ್ಲೇ ಹೊಡೀಬೇಕೆಂಬ ಹಠ ಕಡೆಗೂ ಸಿದ್ಧಿಸಿತ್ತು.

ಏನೋ ಕಿತಾಪತಿ ಮಾಡಿ ಕೂಡಿಟ್ಟ ದುಡ್ಡಲ್ಲಿ ಎಮ್ ಟಿ ಬಿ ತಗೊಂಡಿದ್ವಿ. ಪಿಂಕ್ ಬಣ್ಣದ ಲೇಡಿ ಬರ್ಡ್ ಚಂದನೆಯ ಮಾರ್ವಾಡಿ ಹುಡುಗಿಯ ಹಾಗಿದ್ದರೂ ನನಗೆ ಅದರ ಬಗೆಗೆ ಆಕರ್ಷಣೆ ಹುಟ್ಟಲಿಲ್ಲ. ತಮ್ಮನೂ ಎಮ್ ಟಿ ಬಿ ಗೆ ಮಾರುಹೋಗಿದ್ದ. ಅದಷ್ಟೇ ಅಲ್ಲ.. ಹೊರಗಡೆ ಏನಾದರೂ ತಿಂದರೆ ಮನೇಲಿ ವಾಂತಿ ಮಾಡಿಸೋದೊಂದು ಬಾಕಿ ಅನ್ನೋ ಸಮಯದಲ್ಲಿ ಪಾನಿಪೂರಿ ಗೋಭಿ ತಿಂದು ಕ್ರಾಂತಿ ಮಾಡಿದ್ದವರು ನಾನು ಅವನು. ಒಂದೊಮ್ಮೆ ಎಗ್ ಪಪ್ಸ್ ಹಾಗೂ ಚಿಕನ್ ತಿಂದ ವಿಷಯ ಇದುವರೆಗೂ ನಮ್ಮಿಬ್ಬರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ. ಹಾಗೇ ಅವನು ಬೀಡಾ ತಿಂದ ವಿಷಯ ಕೂಡಾ.

ಅವನು ಸಾಬರ ಹುಡುಗರ ಸ್ನೇಹ ಮಾಡಿ ಡ್ರೈವಿಂಗ್ ಕಲಿತುಬಿಟ್ಟಿದ್ದ. ಎಲ್ಲವೂ ಗುಟ್ಟಾಗೇ ನಡೀತಿತ್ತು. ಒಮ್ಮೆ ಯಾರದ್ದೋ ಗಾಡಿ ಕಡ ತಂದು ನನ್ನ ಹಿಂದೆ ಕೂರಿಸ್ಕೊಂಡು ಸಿಟಿ ಎಲ್ಲಾ ಸುತ್ತಾಡಿಸುವಾಗ ಯಮನಂತೆ ಬಂದ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಇಬ್ಬರನ್ನೂ ಹಿಡಿದು ಸ್ಟೇಷನ್ನಿಗೆ ಎಳೆದೊಯ್ದ. ಒಂದು ಲೈಸೆನ್ಸ್ ಇಲ್ಲ, ಅಂಡರ್ ಏಜ್, ಎರಡು ನಾವು ಹೋಗಿದ್ದು ಒನ್ ವೇ, ಮೂರನೇದು ಕೈಹಿಡಿದಾಗ ನಿಲ್ಲಿಸದೇ ಟ್ರಾಫಿಕ್ ಪಿ.ಸಿ.ಗೆ ಗುದ್ದಿದ್ದು. ಬೇಕಾದಷ್ಟಾಗಿತ್ತು ಅವರಿಗೆ. ಎಷ್ಟು ದಮ್ಮಯ್ಯಗುಡ್ಡೆ ಹಾಕಿದ್ದೂ ಪ್ರಯೋಜನಕ್ಕೆ ಬರಲಿಲ್ಲ.

ಗ್ರಹಚಾರಕ್ಕೆ ಅದೇ ಸಮಯಕ್ಕೆ ಅದೇ ಬೀದೀಲಿ ಬಂದ ಮೊಸರಿನ ತಿಮ್ಮಕ್ಕನೂ, ಬಳೆಗಾರ್ತಿ ಪಾರೊತಕ್ಕನೂ ನಮ್ಮಿಬ್ಬರನ್ನು ಪೋಲೀಸರು ವಾಚಾಮಗೋಚರ ಹೊಗಳುತ್ತಿದ್ದ ವಿಷಯವನ್ನು ಮಿಂಚಿನ ವೇಗದಲ್ಲಿ ಮನೆಗೆ ಮುಟ್ಟಿಸಿದ್ದರು. ಮಾವನು ಎದ್ದೂ ಬಿದ್ದೂ ಪೇಟೆಬೀದಿಗೆ ಬರುವಷ್ಟರಲ್ಲಿ ನಮ್ಮನ್ನು ಗಾಡಿ ಸಮೇತ ಸ್ಟೇಷನ್ನಿಗೆ ಎಳೆದೊಯ್ದು ಆಗಿತ್ತು.

ದಡಬಡ ಓಡಿಬಂದ ಮಾವನಿಗೆ ಸ್ಟೇಷನ್ ಬೆಂಚಿನ ಮೇಲೆ ಹ್ಯಾಪು ಮೋರೆ ಹಾಕಿ ಕುಳಿತಿದ್ದ ಇಬ್ಬರೂ ಕಂಡೆವು. ಅವನು ಜೋರಾಗಿ ತಲೆ ಚಚ್ಚಿಕೊಂಡನು. ನಂಗೆ ಅಳು ಬಂತು. ಸ್ಟೇಷನ್ನಿಗೆ ಬಂದದ್ದಕ್ಕಲ್ಲ, ಅಮ್ಮನ ಪ್ರತಿಕ್ರಿಯೆ ಹೇಗಿರಬಹುದೋ ಎಂದು ನೆನಪಾಗಿ! ಮನೆ ಮಾನಾ ಸ್ಟೇಷನ್ ವರೆಗೂ ಹೋಯ್ತಲ್ರೋ… ಮಕ್ಳಾ.. ಅಂತಂದು ಸುಮ್ಮನಾಗುವಳಾ? ಇಲ್ಲಾ ಅಟ್ಟದ ತೊಲೆಗೆ ಸಿಕ್ಕಿಸಿದ್ದ ಬೆತ್ತ ಎತ್ತಿಕೊಳ್ಳುವಳಾ ಗೊತ್ತಿರಲಿಲ್ಲ. ಶ್ರೀಧರನು ಮಾವ ಬರುವ ಮೊದಲೇ ಅಲ್ಲಿಂದ ಓಡಲು ಏನೇನೋ ಪ್ಲಾನು ಮಾಡಿ ಪೇದೆಯ ಬಳಿ ಶಾಲೇಲಿ ನಾವಿಬ್ಬರೂ ರ್ಯಾಂಕ್ ಸ್ಟೂಡೆಂಟ್ಸ್ ಎಂತಲೂ ಮಠದ ಕೇರಿ ಬ್ರಾಹ್ಮಣರ ಮನೆ ಮಕ್ಕಳೆಂತಲೂ ಎಷ್ಟು ಗೋಗರೆದರೂ ಯಾರೂ ಗಪ್ಪೆನ್ನಲಿಲ್ಲ. ಅದುವರೆಗೆ ನಾವೇನೋ ದೊಡ್ಡ ಜಾಣರು ಅಂತ ತಿಳಿದಿದ್ದ ನಮಗೆ ನಮ್ಮ ಕಿರೀಟದ ಯಾವ ಗರಿಯೂ ಕೆಲಸಕ್ಕೆ ಬಾರದ್ದು ನೋಡಿ ಗರ ಬಡಿದಂತಾಗಿತ್ತು. ತಮ್ಮನಂತೂ ಸೋತು ಗುಬ್ಬಿಯಂತಾಗಿದ್ದ. ಒಟ್ಟಿನಲ್ಲಿ ಮಾವ ಬಂದು ಐನೂರು ರುಪಾಯಿ ಕೊಟ್ಟ ಮೇಲೆಯೇ ನಮ್ಮನ್ನ ಕೈಬಿಟ್ಟಿದ್ದು!! ದುಡ್ಡಿಗಿರೋ ಕಿಮ್ಮತ್ತು ಓದೋರಿಗೆ ಇಲ್ವಲ್ಲೋ ಪುಟ್ಟಾ..ಅಂತ ನಾನಂದದ್ದಕ್ಕೆ ‘ಪ್ರಪಂಚ ಕೆಟ್ಟೋಗಿದೆ ಕಣೇ..’ ಅಂತ ಅವನು ಉತ್ತರಿಸಿದ್ದು, ಆಮೇಲೆ ನಾವು ಆ ಮಾತಿನ ಮೇಲೆ ಕಿಚಾಯಿಸಿ ಹಲವು ಬಾರಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದು…ಮರೆಯಲಾಗದು.

……………………..

ನಾನು ಯಾವುದನ್ನೂ ವಿಷದವಾಗಿ ಹೇಳದೇ ನನಗೆ ಮದುವೆ ಬೇಡೆಂದು ತಿರಸ್ಕರಿಸಿಬಿಟ್ಟೆ. ನಿಶ್ಚಿತಾರ್ಥ ಮುರಿಯುವುದು ನಾಲ್ಕೈದು ಕೊಲೆ ಮಾಡಿದ್ದಕ್ಕೆ ಸಮವೇನೋ ಎಂಬ ಭ್ರಾಂತು ಬಂದುಬಿಟ್ಟಿತ್ತು. ಅಮ್ಮ ಏನೂ ತಿಳಿಯದೇ ಬೆಪ್ಪಾಗಿದ್ದಳು. ಮಾವ ಕೇಳಿದ್ದಕ್ಕೆ ಪ್ರಹ್ಲಾದನನ್ನೇ ಕೇಳು ಅಂದುಬಿಟ್ಟೆ. ಹುಚ್ಚು ಧೈರ್ಯದಲ್ಲಿ ಹಠ ಹಿಡಿದುಬಿಟ್ಟೆ. ಅತ್ತೆಗೋ ಇದಕ್ಕೆಲ್ಲ ಶಶಾಂಕನೇ ಕಾರಣವಿರಬೇಕೆಂದು ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಶಶಾಂಕನೂ ಹುಚ್ಚನಂತಾಗಿದ್ದ. ಎಲ್ಲೋ ನಿಂತವನು ದಿನಪೂರ್ತಿ ಅಲ್ಲೇ ನಿಂತಿರುತ್ತಿದ್ದ. ಮಾತಿಗೆ ಮುಖವೂ ಕೊಡದೇ ತಲೆತಗ್ಗಿಸಿ ನಡೆದುಬಿಡುತ್ತಿದ್ದ. ಇದು ಎಲ್ಲರಿಗೂ ಇನ್ನೂ ಅನುಮಾನ ಬಲವಾಗುವಂತೆ ಮಾಡಿತ್ತು.

ಆದರೆ ಇನ್ನೊಂದಷ್ಟು ಕೆಟ್ಟವಳಾಗೇ ಬಿಡೋಣವೆಂದು ನನಗೆ ಶಶಾಂಕ ಅಣ್ಣನೆಂದೂ, ಅವನನ್ನು ಮದುವೆಯಾಗಲು ಕನಸಿನಲ್ಲೂ ಬಲವಂತ ಮಾಡಕೂಡದೆಂದೂ ಎಲ್ಲರೆದುರೂ ಜೋರಾಗಿ ಹೇಳಿಬಿಟ್ಟೆ. ಮರುಕ್ಷಣ ಠಪ್ ಎಂಬ ಶಬ್ದದೊಡನೆ ಕೆನ್ನೆ ಜೋರು ಚುರುಗುಟ್ಟಿತು. ಅಮ್ಮ ಶಕ್ತಿಯಿದ್ದಷ್ಟೂ ಜೋರಾಗಿ ಕಪಾಳಕ್ಕೆ ಬಿಗಿದಿದ್ದಳು. “ಅಣ್ಣಯ್ಯಾ.. ಈ ಮುಂಡೆ ಅದ್ಯಾವ ಶೂದ್ರನನ್ನೋ, ಮ್ಲೇಚ್ಛನನ್ನೋ ನೋಡಿಕ್ಯಂಡಿದ್ದಾಳೋ.. ಅದುಕ್ಕೇ ಹೀಗಾಡ್ತಾಳೆ. ಇವಳ ಜಾತಕದಾಗೆ ಬೇರೆ ರಾಹು ಸರಿಯಿಲ್ಲ. ನೀಚ ಸಹವಾಸದ ಲಕ್ಷಣಗಳು ಬರೇ. ಹೀಗೇ ಬಿಟ್ರೆ ಆಗಲ್ಲ.. ಮೊದ್ಲು ಬೇರೆ ಜಾತಕ ತರ್ಸು..”

ಶ್ರೀಧರನು ಮಾವ ಬರುವ ಮೊದಲೇ ಅಲ್ಲಿಂದ ಓಡಲು ಏನೇನೋ ಪ್ಲಾನು ಮಾಡಿ ಪೇದೆಯ ಬಳಿ ಶಾಲೇಲಿ ನಾವಿಬ್ಬರೂ ರ್ಯಾಂಕ್ ಸ್ಟೂಡೆಂಟ್ಸ್ ಎಂತಲೂ ಮಠದ ಕೇರಿ ಬ್ರಾಹ್ಮಣರ ಮನೆ ಮಕ್ಕಳೆಂತಲೂ ಎಷ್ಟು ಗೋಗರೆದರೂ ಯಾರೂ ಗಪ್ಪೆನ್ನಲಿಲ್ಲ. ಅದುವರೆಗೆ ನಾವೇನೋ ದೊಡ್ಡ ಜಾಣರು ಅಂತ ತಿಳಿದಿದ್ದ ನಮಗೆ ನಮ್ಮ ಕಿರೀಟದ ಯಾವ ಗರಿಯೂ ಕೆಲಸಕ್ಕೆ ಬಾರದ್ದು ನೋಡಿ ಗರ ಬಡಿದಂತಾಗಿತ್ತು.

ಹೀಗೆ ಶುರುವಾದ ಮಾತು ನಾನು ಮನೆ ಬಿಟ್ಟು ಅದಾಗಲೇ ಯಾರ ಹಿಂದೆಯೋ ಓಡಿಯೇ ಹೋಗಿದ್ದೇನೆಂಬ ತೀರ್ಮಾನವೇ ಆಗಿಹೋದಂತೆ ತಿರುಗತೊಡಗಿತು. ಮದುವೆ ಬೇಡವೆಂದರೆ ಅದಕ್ಕೆ ಬೇರೆ ಕಾರಣವೊಂದು ಇರಬಹುದೆಂಬ ಕಿಂಚಿತ್ ಅನುಮಾನವೂ ಅವಳ ತಲೆಯಲ್ಲಿ ಸುಳಿಯದೇ ಇಡೀ ಹುಡುಗಜಾತಿಯನ್ನೇ ಶಪಿಸಲು ಶುರು ಮಾಡಿದಳು. ಅತ್ತೆಗೆ ನಾನು ಅವಳ ಮಗನನ್ನು ಮದುವೆಯಾಗುವ ಇಂಗಿತ ತೋರದ್ದು ಖುಷಿಯೇ ಆಯಿತು. ಓದುವ ವಿಷಯಕ್ಕೆ ಅದಾಗಲೇ ಬಜಾರಿ ಇಮೇಜು ಹೊತ್ತು ತಿರುಗುತ್ತಿದ್ದ ನಾನು ಅವಳಿಗೆ ಸೊಸೆಯಾಗುವುದು ಕನಸಲ್ಲೂ ನುಂಗಲಾರದ ತುತ್ತಾಗುತ್ತಿತ್ತು ಆಕೆಗೆ. ಸದ್ಯ! ತಲೆ ಮೇಲಿನ ತೂಗುಗತ್ತಿ ಸರಿದವಳಂತೆ ನೆಮ್ಮದಿಯಾದಳು. ಆದರೆ ಶಶಾಂಕನ ಅಕ್ಕ ವಿಮಲ ಇದಕ್ಕೆ ಅವಳದೇ ಬಗೆಯ ಭಾಷ್ಯ ಬರೆದಳು.

“ಆಗೋದೆಲ್ಲಾ ಒಳ್ಳೇದಕ್ಕೇ ಬಿಡೇ. ಇವನನ್ನ ನಂಬಿ ನಮ್ಮನೆ ಸೊಸೆಯಾಗಿದ್ದರೆ ನಮ್ಮಮ್ಮ ನಿನ್ನ ಹುರ್ಕೊಂಡು ತಿನ್ನೋಳು.” ಅಂತ ಸರಾಗವಾಗಿ ಹೇಳಿ ನಡೆದುಬಿಟ್ಟಳು. ಒಂದು ಕ್ಷಣ ನಗು ಬಂತು. ನನ್ನ ಮಾವನ ಇಡೀ ಸಂಸಾರವೇ ಅವರನ್ನವರು ಏನಂದುಕೊಂಡಿದಾರೆ ಅನ್ನಿಸಿತು. ನಗು ಬಂತು ಅಷ್ಟೇ..”ಹೌದು ಬಿಡೇ ವಿಮ್ಮು… ನಂಗೆ ಅದೃಷ್ಟ ಇಲ್ಲ ಬಿಡು.” ಅಂದು ಸುಮ್ಮನಾದೆ.

ಶ್ರೀಧರ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ. ಅಂದು ಸಂಜೆ ಪಡಸಾಲೆಯಲ್ಲಿ ಕೂತು ಓದುತ್ತಿದ್ದವಳ ಬಳಿ ಬಂದು “ನಿಂಗೆ ಗಂಡು ನಾನು ಹುಡುಕ್ತೀನಿ. ಸ್ವಲ್ಪ ಟೈಮ್ ಕೊಡೇ. ಅಲ್ಲೀವರ್ಗೂ ನೀನೂ ಓದು. ನಿನ್ನ ಕಾಲ ಮೇಲೆ ನಿಂತ್ಕೋ.” ನನ್ನ ಅಂಗೈಲಿ ಅವನ ಪುಟ್ಟ ಅಂಗೈ ಹುದುಗಿಸಿ ಹೇಳಿ ಹೋದ. ಕಣ್ಣುಗಳು ಆಕಾಶದ ಚುಕ್ಕಿಗಳಂತೆ ಶುಭ್ರವಾಗಿ ವಿಶ್ವಾಸದಿಂದ ಹೊಳೆಯುತ್ತಿದ್ದವು. ಮನಸೇಕೋ ಹೆಮ್ಮೆಯಿಂದ ಉಬ್ಬಿತು. “ಹೆಣ್ಣೀನ ಜನುಮಾಕಾ ಅಣ್ಣ ತಮ್ಮರು ಬೇಕು.. ಬೆನ್ನು ಕಟ್ಟುವರು ಸಭೆಯೊಳಗಾ… ನಿಂತು… ಹೊನ್ನು ಕಟ್ಟುವರು ಉಡಿಯೊಳಗಾ…” ಎಂದು ಗಟ್ಟಿಯಾಗಿ ಹಾಡಬೇಕೆನಿಸಿತು.

……………………..

ಮೊಬೈಲ್ ಆಗ ತಾನೇ ನೋಡುತ್ತಿದ್ದ ದಿನಗಳು. ನಮ್ಮ ಮಾವನ ಮನೆಗೆ ಒಂದೇ ನೋಕಿಯ ಮೊಬೈಲ್. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅದು ಮನೆಯ ಎಲ್ಲ ಸದಸ್ಯರಿಗೂ ಸೇವೆಸಲ್ಲಿಸುವುದು ಅಸಾಧ್ಯವಾಗಿತ್ತು. ಕೆಲವೊಮ್ಮೆ ಮಾವನ ಪ್ರತಿಷ್ಠೆಗೆ ಕುರುಹಾಗಿ ಅವನೊಟ್ಟಿಗೆ ದಿನವೆಲ್ಲಾ ಊರೊಳಗೆ ಸುತ್ತಾಡಿ ಬರುವುದು. ಕರೆ ಬಂದರೂ ಹೋದರೂ ದುಡ್ಡು ಕಟ್ಟಬೇಕಿದ್ದ ಕಾಲ ಅದು. ನಾವೇನೋ ಕದ್ದು ಮುಚ್ಚಿ ಗೆಳತಿಯರಿಗೆ ಫೋನು ಹಚ್ಚಿದರೆ ಕಳ್ಳತನ ಬಿಲ್ಲು ತುಂಬಿಸುವಾಗ ಬಯಲಾಗುತ್ತಿತ್ತು. ನಾನೂ ಶ್ರೀಧರನೂ ಒಂದು ದಿನ ಊರ ಹೊರಗಿನ ವೀರಭದ್ರನ ಗುಡಿಯ ಬಳಿಗೆ ಮೊಬೈಲನ್ನು ಹೊತ್ತೊಯ್ದು ಇದ್ದಬದ್ದ ಗೆಳೆಯರಿಗೆಲ್ಲಾ ವಿನಾಕಾರಣ ಕರೆ ಮಾಡಿ ಮೊಬೈಲನ್ನು ಕುಲಗೆಡಿಸಿಟ್ಟೆವು. ನಮ್ಮ ಮನೆಹಾಳುತನದ ಇಮೇಜಿಗೆ ಮತ್ತೊಂದು ಗರಿ ಅಂಟಿಸಿಕೊಂಡೆವು.

……………………..

ನನ್ನ ಪಿಯುಸಿ ಪರೀಕ್ಷೆಗೆ ದಿನಗಳಷ್ಟೇ ಬಾಕಿ ಇದ್ದವು. ಬೆಳಗಿನ ಜಾವ ಹಾಗೂ ಸಂಜೆ ಮನೆಪಾಠಕ್ಕೆ ಹೋಗಬೇಕಾಗಿತ್ತು. ಗಣಿತದ ಲೆಕ್ಚರರ್ ಮನೆಗೆ ಪಾಠಕ್ಕೆ ಬರಲಿ ಎಂದೇ ಕಾಲೇಜಿನಲ್ಲಿ ನೆಟ್ಟಗೆ ಪಾಠ ಮಾಡುತ್ತಿರಲಿಲ್ಲ. ನನಗೆ ಕಾಲೇಜೇ ಹೆಚ್ಚಾಗಿರುವಾಗ ಮನೆಪಾಠ ಕನಸಾಗೇ ಉಳೀತು. ತಬು ಪ್ರಹ್ಲಾದನ ಪ್ರಹಸನ ನಡೆದ ಮೇಲೆ ಕಾಲೇಜು ಬಿಟ್ಟುಬಿಟ್ಟಿದ್ದಳು. ಪ್ರಹ್ಲಾದನೂ ಇಲ್ಲಿ ಕೆಲಸ ಬಿಟ್ಟು ಅವನ ಊರು ಸೇರಿದ್ದ. ಒಂಥರಾ ಪ್ರಶಾಂತತೆ ಮನಸನ್ನು ಆವರಿಸಿ ನೆಮ್ಮದಿಯಾಗಿ ಓದಿಕೊಂಡಿದ್ದೆ. ಇದ್ದಕ್ಕಿದ್ದಂತೆ ಒಂದು ಬೆಳಗು ತಾತನು ಹಳ್ಳಿ ಮನೆಯಲ್ಲಿ ತೀರಿಕೊಂಡ ಸುದ್ದಿ ಬಂತು. ಉಟ್ಟ ಬಟ್ಟೆಯಲ್ಲಿ ಎಲ್ಲರೂ ಊರು ಸೇರಿದೆವು. ಹೆಂಗಸರು ಮಕ್ಕಳನ್ನು ಮನೆಯಲ್ಲೇ ಇರಿಸಿ ಮಾವಂದಿರು ಹಾಗೂ ಉಳಿದ ಗಂಡುಮಕ್ಕಳು ಆಸ್ಪತ್ರೆಗೆ ಹೋಗಿ ದೇಹ ತಂದು ಮುಂದಿನ ಕಾರ್ಯಕ್ಕೆ ಅಣಿಮಾಡಹತ್ತಿದರು. ಸತ್ತಾಗಲೂ ತಾತನ ಮುಖದ ಮೇಲೆ ಆ ಠೀವಿ ಹಾಗೇ ಇದ್ದಿರಬಹುದು ಅಂತೆಣಿಸಿ ಹೆಣ ನೋಡಲು ಕಾಯುತ್ತಿದ್ದೆ ನಾನು. ಅವನು ಯಾವಾಗಲೂ ಜಮೀನ್ದಾರಿಕೆಗೂ, ಜಹಗೀರುದಾರರಿಗೂ, ಶ್ಯಾನುಭೋಕ್ಕೆಗೂ ಇರುವ ವ್ಯತ್ಯಾಸವನ್ನು ಪರಿಪರಿಯಾಗಿ ವಿವರಿಸುವನು.

ನಾನೂ ಶ್ರೀಧರನೂ ಒಂದು ದಿನ ಊರ ಹೊರಗಿನ ವೀರಭದ್ರನ ಗುಡಿಯ ಬಳಿಗೆ ಮೊಬೈಲನ್ನು ಹೊತ್ತೊಯ್ದು ಇದ್ದಬದ್ದ ಗೆಳೆಯರಿಗೆಲ್ಲಾ ವಿನಾಕಾರಣ ಕರೆ ಮಾಡಿ ಮೊಬೈಲನ್ನು ಕುಲಗೆಡಿಸಿಟ್ಟೆವು. ನಮ್ಮ ಮನೆಹಾಳುತನದ ಇಮೇಜಿಗೆ ಮತ್ತೊಂದು ಗರಿ ಅಂಟಿಸಿಕೊಂಡೆವು.

“ನಿಮ್ಮನ್ನು ಯಾರೂ ಶ್ಯಾನುಭೋಗರ ಮೊಮ್ಮಕ್ಕಳೆಂದರೆ ಒಪ್ಪಬೇಡಿ, ಹೂ ಅನ್ನಬೇಡಿ. ನಾವು ಜಹಗೀರುದಾರರು. ಜಮೀನ್ದಾರಿಕೆ ನಮಗೆ ಬಳುವಳಿ ಬಂದದ್ದು. ಹಾಗಂತ ನಾವು ಬರೇ ಆರಂಭದ ಕುಟುಂಬವಲ್ಲ. ಅದು ಬೇರೆ ಇದು ಬೇರೆ…” ಹೀಗೆ ಪರಿಪರಿಯಾಗಿ ವಿವರಿಸುವನು. ಇದರ ತಲೆಬುಡ ಅರಿಯದ ನಾವು ಜಮೀನ್ದಾರಿಕೆ ಹಾಗೂ ಜಹಗೀರಿಯ ನಡುವಿನ ವ್ಯತ್ಯಾಸ ತಿಳಿಯಲು ದಿನವಿಡೀ ಪರದಾಡುತ್ತಿದ್ದೆವು. ಇಂದು ಅದೇ ಜಹಗೀರುದಾರನು ಎಲ್ಲ ಬಿಟ್ಟು ಖಾಲಿ ಜಗುಲಿಯ ಮೇಲೆ ತುಂಡು ಬಟ್ಟೆಯಡಿ ‘ಹೆಣ’ ಎಂದು ಕರೆಸಿಕೊಳ್ಳುತ್ತಾ ಮಲಗಿದ್ದನು.

ನಾವು ಎಂದೂ ಕಂಡರಿಯದ ಹಲವು ವಿಚಿತ್ರ ಸಂಸ್ಕಾರ ವಿಧಿವಿಧಾನಗಳು ಶುರುವಾದವು. ಮನೆಯ ಹೆಂಗಳೆಯರೆಲ್ಲಾ ಭೋರೆಂದು ಅಳುತ್ತಿದ್ದರು. ಅಮ್ಮನೋ, ತನ್ನ ದೊಡ್ಡಸ್ತಿಕೆಗೆ ಏನೂ ಕಡಿಮೆಯಾಗದಂತೆ ಅಳುತ್ತಿದ್ದಳು. ನಾನೂ ಸ್ವಲ್ಪ ಹೊತ್ತು ಅಳು ಬರುವುದೇನೋ ಎಂದು ಕಾಯ್ದು ಸುಮ್ಮನಾದರೂ ಬಿಕ್ಕಿ ನೋಡಿದೆನು. ಎಷ್ಟೇ ಕಷ್ಟಪಟ್ಟರೂ ಕಣ್ಣಿಂದ ನೀರು ಹೊರಬರಲಿಲ್ಲ. ಬದಲಿಗೆ ಸಾವಿನ ಮನೆಯ ವಿಷಾದ ಮಾತ್ರ ಮನಸು ತುಂಬಿತ್ತು. ದೂರದಿಂದ ಇದೆಲ್ಲಾ ನೋಡಿದ ಶ್ರೀಧರ “ಬಿಡೇ ಅಕ್ಕಾ.. ಅಳು ಬರದಿದ್ರೂ ಅಳಬಾರದು. ನಂಗೂ ಹಂಗೇ ಆಗಿದೆ. ಏನ್ಮಾಡಕಾಗಲ್ಲ ಬಿಡು.” ಎಂದು ತುಟಿಗಳ ಮೇಲೆ ಬೆರಳಿಟ್ಟು ಸುಮ್ಮನಿರೆಂದು ಹೇಳಿದನು. ಅಲ್ಲಿಗೆ ಅಳಲೇ ಬೇಕೆಂಬ ಸಮೂಹಸನ್ನಿಯಿಂದ ನಾನು ಹೊರಬಂದೆನು.

ಊರಿಂದ ಬರುವವರೆಲ್ಲ ಬಂದರು. ವಿದೇಶಗಳಲ್ಲಿ ನೆಲೆಸಿದ್ದವರ ಬರುವಿಕೆಗೆ ಕಾಯಕೂಡದೆಂದು ದೊಡ್ಡ ಮಾವ ತಾಕೀತು ಮಾಡಿದ. ಒಟ್ಟು ಅಷ್ಟೂ ಜನ ಗಂಡಸರ ಕಣ್ಣಲ್ಲಿ ಒಂದು ಹನಿಯೂ ಮೂಡದಿದ್ದುದು ತುಂಬಾ ಆಶ್ಚರ್ಯವೆನಿಸಿತು. ಮನೆಯಲ್ಲಿ ಸತ್ಯನಾರಾಯಣ ಪೂಜೆಯೋ ಗಣಹೋಮವೋ ಆದರೆ ಎಷ್ಟು ನಿರ್ವಿಕಾರರಾಗಿ ಅಣಿ ಮಾಡುತ್ತೇವೋ ಇಂದು ಹೆಣಕ್ಕೂ ಅಂಥದೇ ನಿರ್ವಿಕಾರ ಉಪಚಾರ ನಡೆದಿತ್ತು. ಅಲ್ಲಿಂದ ಮೂರನೇ ದಿನಕ್ಕೇ ಆಸ್ತಿ ಭಾಗವಾಗುವ ಮಾತುಕತೆಗಳು ನಡೆದವು. ಹದಿನಾರಂಕಣದ ಮನೆಯ ನಡುವಲ್ಲಿ ತೂಗುಮಂಚ ಖಾಲಿ ತೂಗುತ್ತಿತ್ತು. ನಡುಮನೆಯಲ್ಲಿ ಮಾತಿನ ಚಕಮಕಿ ಜೋರಾಗೇ ಸಾಗಿತ್ತು.

ಅಬಚಿ ಹಾಗೂ ಚಿಕ್ಕಪ್ಪ ತಮಗೆ ಏನೂ ಬೇಡವೆಂದು ಕೈಕೊಡವಿ ಹೊರಗೆ ಬಂದುಬಿಟ್ಟರು. Assets ಏನೋ ಸಮವಾಗಿ ಭಾಗವಾದವು, liabilityಯ ಭಾಗದಲ್ಲಿ ಅಮ್ಮ ನಾನು ಹಾಗೂ ತಮ್ಮ ಎಲ್ಲರಿಗೂ ಪ್ರಶ್ನೆಯಾದೆವು. ಅದರಲ್ಲೂ ನಾನು, ಹೆಣ್ಣುಮಗಳು… ಎಲ್ಲರಿಗೂ ತಲೆಹೊರೆಯಾಗುವ ಜವಾಬ್ದಾರಿ ಎಂಬುದಾಗಿ ತೀರ್ಮಾನವಾಗಿ ಗುಂಪಿನಲ್ಲಿ ಮೂರು ಜನ ಮಾವಂದಿರು ಖಡಾಖಂಡಿತವಾಗಿ ನನ್ನ ಜವಾಬ್ದಾರಿ ಬೇಡವೆಂತಲೂ, ಬೇಕಾದರೆ ಮದುವೆಯ ಖರ್ಚಿಗೆ ಧನಸಹಾಯ ಮಾಡುವುದಾಗಿಯೂ ಹೇಳಿಕೆ ಕೊಟ್ಟುಬಿಟ್ಟರು. ಅಮ್ಮನಿಗೆ ತನ್ನ ಪ್ರೀತಿಪಾತ್ರರ ನಿಜಬಣ್ಣ ಕಾಣಿಸಹತ್ತಿತ್ತು. ಆಗ ಅವಳ ಮನಸಲ್ಲಿ ಕೆಲವು ನಿರ್ಧಾರಗಳು ಗಟ್ಟಿಗೊಂಡವು. ಸೂಕ್ಷ್ಮವಾಗಿ ನನಗೂ ಶ್ರೀಧರನಿಗೂ ಎಲ್ಲ ಅರ್ಥವಾಯಿತು.

(ಮುಂದುವರಿಯುವುದು)