ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ? ಇನ್ನು ಯಾವೊಬ್ಬ ಕವಿಯೂ ಅನುಭವ ಇಲ್ಲದೇ ಬರೆಯಲು ಸಾಧ್ಯವೇ? ಹಾಗಂತ ಹೊಸಬರ ಕವಿತೆಗೆ ಮಿತಿಗಳೇ ಇಲ್ಲವೆಂದಲ್ಲ. ಅವುಗಳನ್ನು ನಾವು ವಸ್ತುಗಾರಿಕೆಯಲ್ಲಿ ಮತ್ತು ಕವಿತೆಯ ‘ಕಟ್ಟಡ’ದಲ್ಲಿ ಗುರುತಿಸಲು ಸಾಧ್ಯ.
ಸುರೇಶ ನಾಗಲಮಡಿಕೆಯವರ “ಹಲವು ಬಣ್ಣದ ಹಗ್ಗ” ಪುಸ್ತಕದ ಕೆಲವು ಪುಟಗಳು.

 

ಹೊಸಬರ ಕಾವ್ಯವನ್ನು ಓದುವಾಗ, ಬರೆಯುವಾಗ ಎದುರಾಗುವ ಸವಾಲುಗಳು ಹಲಬಗೆಯವು. ಈ ಶತಮಾನದ ಕಾವ್ಯದ ದಾರಿಯಲ್ಲಿ ಪರಿಶೀಲನೆ, ಸಮೀಕ್ಷೆ, ತಾತ್ವಿಕ ಚೌಕಟ್ಟು, ವಿಶ್ಲೇಷಣೆಗಳು ಏಕಕಾಲಕ್ಕೆ ಒಂದೇ ರೇಖೆಯಲ್ಲಿ ಸಿಕ್ಕರೂ ಸಿಗಬಹುದು. ಸಮಕಾಲೀನ ಸಮಾಜದಲ್ಲಿ ‘ಆಗಿರುವ’ ಆಗುತ್ತಿರುವ’ ಘಟನೆಗಳು ಒಂದು ಕಡೆಗಿದ್ದರೆ, ಮತ್ತೊಂದು ಕಡೆ ಬದುಕಿನಲ್ಲಿ ಚದುರಿದಂತೆ ಇರುವ ಸ್ವ ಚಲನೆಗಳು ಒತ್ತರಿಸಿ ಬರುತ್ತಿವೆ. ಇವರ ಕಾವ್ಯವನ್ನು ಎದುರಿಗಿಟ್ಟುಕೊಂಡು ತೀರ ಪರಂಪರೆಯನ್ನು ಅವಾಹಿಸಿಕೊಂಡು ವಿವರಿಸುವುದಾಗಲೀ, ಮತ್ತು ಪರಂಪರೆಯ ಛಂದೋಲಯಗಳನ್ನು ಬೆನ್ನಿಗಂಟಿಸಿಕೊಂಡು ಮುನ್ನಡೆಯುವುದಾಗಲೀ, ಸಮಕಾಲೀನವಾದ ಯಾವುದೋ ಒಂದು ಚಳುವಳಿಯ ತಿಳುವಳಿಕೆಯ ಹಿನ್ನೆಲೆಯಿಂದ ವಿವರಿಸಿಕೊಳ್ಳುವುದು ಬಹುತೇಕ ಕಷ್ಟ. ಹಾಗಾಗಿಯೇ ಕನ್ನಡದಲ್ಲಿ ಬರೆಯುತ್ತಿರುವ ಕವಿಗಳ ಮನೋಲೋಕ “ಏಕದಾರಿ”ದಲ್ಲ; ಅದು ‘ಬಹುದಾರಿ’ಯದು. ಆದ್ದರಿಂದಲೇ ಹೊಸಬರ ಕಾವ್ಯವನ್ನು ‘ಹಲವು ಬಣ್ಣದ ಹಗ್ಗ’ಎಂದು ಕರೆಯಲಾಗಿದೆ.

ಪಶ್ಚಿಮದಲ್ಲಿ ಈ ಕಾಲಘಟ್ಟವನ್ನು ಮತ್ತು ಬರಹದ ತಿಳುವಳಿಕೆಯನ್ನು ‘ಆಧುನಿಕೋತ್ತರ’ ‘ಸತ್ಯೋತ್ತರ’ ಮುಂತಾದ ತತ್ವಗಳಿಂದ ಕರೆದಿರುವುದು ಸರಿಯಷ್ಟೆ. ಆದರೆ ಇವುಗಳ ಗರ್ಭದ ಆಶಯಗಳು, ವೈವಿಧ್ಯತೆ ಮತ್ತು ಬಹುತ್ವದ ಆಯಾಮಗಳನ್ನು ಹೊಂದಿರುವ ಭಾರತ ಮತ್ತು ಕರ್ನಾಟಕದಂತಹ ಪ್ರದೇಶಗಳಿಗೆ ಭಿನ್ನವಾಗಬಲ್ಲವು. ಹಾಗಾದರೇ ಇವುಗಳನ್ನು ಒಳಗುಮಾಡಿಕೊಂಡು ನಮ್ಮದೇ ಮಾನದಂಡಗಳನ್ನು ಸೃಜಿಸಿಕೊಳ್ಳುವುದು ಹೇಗೆ? ಈ ಶತಮಾನದ ಕನ್ನಡದ ಕವಿಗಳು ಹಳಬರ ಯಾವ ಮಾದರಿಗಳನ್ನು ಮುರಿದು ಕಟ್ಟುತ್ತಿದ್ದಾರೆ? ಅವರು ತಮ್ಮದೇ ಜೀವನ ಮಾರ್ಗವನ್ನು ಕವಿತೆಯಂತಹ ಭಾಷಿಕ ಚೌಕಟ್ಟಿನಲ್ಲಿ ಹೇಗೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ? ಸಮಕಾಲೀನ ಜೀವನಕ್ರಮವೇ ಅವಸರದ ಮತ್ತು ವಿಛ್ಚಿದ್ರಗೊಳ್ಳುವ ಇರಾದೆಯಲ್ಲಿದ್ದಾಗ ಅವರಿಗೆ ಮುಖ್ಯವಾಗುವುದು ಯಾವುದು? ಮುಂತಾದ ಹಲಬಗೆಯ ಪ್ರಶ್ನೆಗಳು ನಮ್ಮ ದಾರಿಗಳನ್ನು ಅಷ್ಟು ಬೇಗ ಸುಗಮಗೊಳಿಸಲಾರವು. ಹಾಗಂತ ಇವುಗಳಿಗೆ ಎದರು ಬಗೆಯ ಪರಿಹಾರಗಳು ಇಲ್ಲವೇ ಇಲ್ಲ ಎಂದು ಹೇಳುವುದು ಕೂಡ ತಪ್ಪು. ಆಧುನಿಕೋತ್ತರದ ಲಕ್ಷಣಗಳಲ್ಲಿ ‘ಬಹುತ್ವ’ವೂ ಒಂದು. ಈ ಪದವನ್ನು ನಮ್ಮ ಸಾಂವಿಧಾನಿಕ ಆಶಯದಲ್ಲೇ ಕಾಣುತ್ತೇವೆ. ಆದರೇ ಅದನ್ನು ನಾವು ‘ವೈವಿಧ್ಯತೆ’ ಎಂಬ ಪದದಿಂದ ಕರೆಯಲಾಗಿದೆ. ಸಾರ್ವತ್ರಿಕ ಆಶಯವನ್ನು ಹೊಂದಿರುವ ಈ ಪದಗಳಿಗೆ ಅಂಟಿಕೊಂಡಿರುವ ರೋಗಗಳು ಭಾರತದಂತಹ ದೇಶಗಳಲ್ಲಿ ಸಾಂಕ್ರಾಮಿಕವಾಗಿ ಹರಡುತ್ತಿವೆ.

‘ರಾಷ್ಟ್ರೀಯತೆ’ ‘ಹಿಂದುತ್ವ’ ಮುಂತಾದ ಪದಗಳ ಹಿನ್ನಲೆಯಲ್ಲಿ ಮುಗ್ಧ ಜನಸಮೂಹವನ್ನು ದಿಕ್ಕುತಪ್ಪಿಸುವ ಹಾದಿಗಳು ಪ್ರಬಲಗೊಂಡಿರುವ ಈ ಶತಮಾನದಲ್ಲಿ ‘ವೈವಿಧ್ಯತೆ’ ಮತ್ತು ‘ ಬಹುತ್ವ’ಗಳು ತಮ್ಮದೇ ದಾರಿಯಲ್ಲಿ ಸ್ವಂತೀಕರಣವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಹೀಗೆ ಉಳಿಸುವ ದಾರಿಗಳು ಬರೀ ‘ಬುದ್ಧಿಜೀವಿಗಳ’ ಮತ್ತು ‘ಎಡಪಂಥ’ಗಳೇ ಆಗಬೇಕಾಗಿಲ್ಲ. ಈ ನೆಲದ ಸಮಾನತೆಯನ್ನು ತಾತ್ವಿಕವಾಗಿ ಹಾಡಿನ ಮೂಲಕ ಹರಡುವ ‘ಜನಪದ ದನಿ’ ಗಳಾದರೂ ಸಾಕು. ಮಂಟೇಸ್ವಾಮಿಯ ಪದಗಳೂ, ತತ್ವಪದಗಳೂ ಆಗಬಹುದು. ವೈವಿಧ್ಯಮಯ ಬದುಕಿನ ಈ ಸಂದರ್ಭದಲ್ಲಿ ಯಾವಕವಿಯೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಈ ಶತಮಾನದ ಹೊಸ ಕವಿಗಳು ಪರಂಪರೆಯ ‘ಆಶಯ’ಗಳ ಕಡೆಗೆ ಪ್ರಭಾವಿತಗೊಂಡಷ್ಟು ‘ಆಕೃತಿ’ಯ ಕಡೆಗೆ ಅಷ್ಟಾಗಿ ಒಲವು ತೋರಿಸಿಲ್ಲ. ಇದಕ್ಕೆ ಹಲವು ಕಾರಣಗಳೂ ಇರಬಲ್ಲವು. ಇವರು ಸಂಪ್ರದಾಯ ಬದ್ಧ ಲಯಗಾರಿಕೆಯನ್ನು ಮುರಿದು, ಆಡುಮಾತಿನ ‘ಕಥನ’ಲಯವನ್ನು ಸ್ವಾಗತಿಸಿಕೊಂಡಿದ್ದು ಕಾರಣವಿರಬಹುದು. ಆಡುಮಾತಿನ ಲಯಗಾರಿಕೆಯನ್ನು ಬಳಸುವುದು ಈ ಕಾಲಮಾನದ ವಿಶಿಷ್ಟತೆಯೂ ಕೂಡ. ಆದರೆ ಇದಕ್ಕೆ ತಕ್ಕ ಪ್ರತಿಮೆ, ರೂಪಕಗಳನ್ನು ನಿರ್ಮಿಸುವುದರಲ್ಲಿ ಸೋಲುತ್ತಿದ್ದಾರೆ. ಇಲ್ಲಿ ‘ಮಾತು’ ಅಧಿಕಗೊಂಡು ‘ಕವಿತ್ವ’ ಗೌಣವಾಗುವುದು ಸಾಮಾನ್ಯ. ಈ ಮಾತನ್ನು ಸದ್ಯಕ್ಕೆ ಬರೆಯುತ್ತಿರುವ ಎಲ್ಲ ಕವಿಗಳಿಗೂ ಅನ್ವಯಿಸಲು ಆಗದು. ಸಂಸ್ಕೃತ ಕಾವ್ಯ ಮೀಮಾಂಸೆಯ ನಿಲುವುಗಳ ಆಧಾರಗಳ ಹಿನ್ನಲೆಯಲ್ಲಿ ಈ ಶತಮಾನದ ಕಾವ್ಯವನ್ನು ಪರಿಶೀಲನೆ ಮಾಡಲು ಆಗದ ಮಾತು. ನಿರ್ದಿಷ್ಟ ಛಂದೋಲಯಗಳನ್ನು ಮೀರಿ ಇಂದಿನ ಕವಿತೆ ಕಾಣಿಸಿಕೊಂಡಿದೆ. ಆಗಲೇ ಹೇಳಿದ ಹಾಗೆ ಕನ್ನಡ ಭಾಷಿಕ ಚೌಕಟ್ಟುಗಳು ಭಿನ್ನವಾಗಿಯೇ ಬಳಕೆಗೊಳ್ಳುತ್ತಿವೆ. ಇದರ ವೈವಿಧ್ಯತೆಯನ್ನು ಅರಿಯಲು ಕೊಂಚ ಧ್ಯಾನಸ್ಥ ಸ್ಥಿತಿ ಬೇಕು.

ಆಡು ಮಾತಿನ ಲಯಕ್ಕೆ ಅನುಗುಣವಾಗಿ ಇವರು ನಿರ್ಮಾಣಮಾಡಿಕೊಳ್ಳುತ್ತಿರುವ ತಾತ್ವಿಕ ಚೌಕಟ್ಟುಗಳು ಕೂಡ ಭಿನ್ನವಾಗಿಯೇ ಕಂಡುಬರುತ್ತಿವೆ. ಹಲವು ಬಾರಿ ಕವಿತೆಯ ವಸ್ತುಗಾರಿಕೆಯಲ್ಲಿಯಲ್ಲಿಯೇ ಅವರ ತಾತ್ವಿಕತೆ ಅರಿವಾಗಬಹುದು. ನಮ್ಮ ಪೂರ್ವಸೂರಿಗಳ ಕಾವ್ಯದ ತಾತ್ವಿಕತೆಗಳನ್ನು ಹಿರಿಯ ವಿಮರ್ಶಕರು ಅಧ್ಯಯನದ ಅನುಕೂಲಕ್ಕೆ ತಕ್ಕಂತೆ ವಿಂಗಡಿಸಿಕೊಂಡಿದ್ದಾರೆ. ಆದರೆ ಇಂದು ಹಿರಿಯರ ಕಾವ್ಯವನ್ನು ಮತ್ತೊಮ್ಮೆ ನೋಡಿದಾಗಲೂ ‘ತಾತ್ವಿಕತೆಗಳ ಗರ್ಭ’ ಸೀಳಿದಂತೆ ಕಾಣುತ್ತದೆ. ಅಂದರೆ ಅಲ್ಲೂ ವೈವಿಧ್ಯತೆ ಇದೆ.

ಈ ಹಿನ್ನಲೆಯಲ್ಲಿ ಹೊಸಬರ ಕಾವ್ಯಕ್ಕೆ ‘ಸಮಾಜ’ ಮತ್ತು ‘ಮನುಷ್ಯ’ ನೇ ಕೇಂದ್ರವೆಂದು ಬಹುತೇಕ ಒಪ್ಪಿಕೊಳ್ಳಬೇಕಾಗುತ್ತದೆ. ಇದರಲ್ಲಿ ಲಿಂಗಬೇಧವೇನೂ ಇಲ್ಲ. ಚಾಂದಿನಿಯಂತ ಬದಲು ದೇಹದ ವ್ಯಕ್ತಿಯ ಕನ್ನಡ ಭಾಷಿಕ ನುಡಿಗಟ್ಟುಗಳು ನಮ್ಮ ಕಣ್ಣಮುಂದಿವೆ. ಸಮಾಜ ಮತ್ತು ಮನುಷ್ಯ ಎಂದು ಕರೆದಾಗ, ಹಿಂದೆ ನವೋದಯ ಮತ್ತು ನವ್ಯ ಕಾವ್ಯಗಳಲ್ಲಿ ಬಂದಿವೆಯಲ್ಲವೇ ಎಂಬ ಮಾತು ಕೇಳಿಸಬಹುದು. ಆದರೆ ಬದಲಾದ ಕಾಲಮಾನ, ಆಲೋಚನಾಕ್ರಮ, ವೈವಿಧ್ಯತೆ, ಆಧುನಿಕವನ್ನು ಮೀರುತ್ತಿರುವ ಜೀವನ ಕ್ರಮಗಳ ಪಲ್ಲಟಗಳು: ಎಲ್ಲಕ್ಕಿಂತ ಮುಖ್ಯವಾಗಿ ಪಶುಪಾಲನ ಸಂಸ್ಕೃತಿಯ ಅವನತಿ, ಈ ನೆಲದ ಮೂಲ ಕಸುಬು ವ್ಯವಸಾಯದ ನಾಶ: ಪ್ರಜಾಪ್ರಭುತ್ವದ ಆತಂಕಗಳು: ಮಾನವತ್ವದ ವಿಚ್ಛಿದ್ರತೆ, ಬದಲಾದ ನಗರಚಿತ್ರಗಳು; ಹಿಂದುತ್ವ ತೋರಿಸುತ್ತಿರುವ ಅಪಾಯಗಳಿಂದಾಗಿ ಸಮಾಜದ ಪ್ರಕ್ಷುಬ್ಧತೆ ಮುಂತಾದ ವಸ್ತುಗಾರಿಕೆಯನ್ನು ಹೊಸಬರ ಕಾವ್ಯದಲ್ಲಿ ಕಾಣಲು ಸಾಧ್ಯ. ಈ ಎಲ್ಲ ವಸ್ತುಗಾರಿಕೆಯನ್ನು ಬಳಸಿಕೊಂಡೇ ನಾವು ಇಂದಿನ ಕಾವ್ಯದ ತಾತ್ವಿಕತೆಯನ್ನು ‘ವೈವಿಧ್ಯತೆಯ’ ಅಥವ ‘ಬಹುತ್ವದ’ ಕಾವ್ಯ ಎಂದು ಕರೆಯಬಹುದು.

ಇಂದಿನ ಕಾವ್ಯದ ವಸ್ತು ಯಾವುದೇ ಒಂದು ಕೇಂದ್ರ ವಸ್ತುವನ್ನು ಹಿಡಿದು ಸಾಗುವುದಿಲ್ಲ. ಹಾಗಂತ ಇದು ಉದ್ದೇಶರಹಿತ ಕಾವ್ಯವಲ್ಲ. ಸದ್ಯದ ಬದುಕಿನ ಪಲ್ಲಟಗಳನ್ನು ಅನುಲಕ್ಷಿಸಿಯೇ ಕವಿತೆ ಸಾಗುತ್ತಿದೆ. ಹೀಗಿದ್ದರೂ ಹೊಸ ಕವಿ ಸವಾಲನ್ನು ಎದುರಿಸುತ್ತಿರುವುದು ಕವಿತೆಯನ್ನು ‘ಕಟ್ಟುವುದರಲ್ಲಿ’. ಆಗಲೇ ಹೇಳಿದ ಹಾಗೆ ಇಂದಿನ ಕವಿ ಆಶಯದ ಕವಿಯಾಗಿ ಹೆಚ್ಚು ಮುನ್ನೆಲೆಗೆ ಬರುತ್ತಿರುವುದು ಗೋಚರಿಸುತ್ತಿದೆ. ಆದರೆ ಇದನ್ನು ಅವರು ಬರೆದಿರುವ ಎಲ್ಲ ಕವಿತೆಗಳಿಗೂ ಅನ್ವಯಿಸಲು ಆಗದು. ಒಂದು ಸಂಕಲನದಲ್ಲಿ ಒಂದು ಕವಿತೆ ನಿಜದ ಕವಿತೆಯಾಗಿ ಗೊಚರಿಸಿದರೆ, ಇನ್ನುಳಿದ ಇಪ್ಪತ್ತು ಕವಿತೆಗಳು ಬರೀ ಮಾತುಗಳಾಗಿ ಇರುತ್ತವೆ. ಇಷ್ಟರ ನಡುವೆಯೇ ಇಂದು ಹೊಸಬರ ಕಾವ್ಯದ ಬಗ್ಗೆ ತೀರ ನಿರಾಶೆಯನ್ನು ಇಟ್ಟುಕೊಳ್ಳಬೇಕಾಗಿಲ್ಲ. ಕೆಲವು ವಿಮರ್ಶಕರು ಹೊಸಬರ ಕಾವ್ಯವನ್ನು ಅನೇಕ ಭಿನ್ನಾಭಿಪ್ರಾಯಗಳಲ್ಲಿ ಕರೆದಿರುವುದು ಸರಿಯಷ್ಟೇ. ಅವುಗಳನ್ನು ಹೀಗೆ ಪಟ್ಟಿಮಾಡಬಹುದು. ಹೊಸಬರ ಕಾವ್ಯದಲ್ಲಿ ‘ಜೀವನ ದರ್ಶನವಿಲ್ಲ’, ‘ಕವಿತೆ ನೆನಪಿನಲ್ಲಿ ಉಳಿಯುವುದಿಲ್ಲ’ ‘ಅನುಭವವಿಲ್ಲ’ ಪ್ರಮುಖವಾದ ಒಬ್ಬ ಕವಿಯ ಬಗ್ಗೆ ಬರೆದರೆ ಅಥವಾ ಮಾತನಾಡಿದರೆ, ಇಡೀ ಆ ತಲೆಮಾರಿಗೆ ಅನ್ವಯಿಸುತ್ತದೆ’. ಮುಂತಾದ ಮಾತುಗಳು ಬಿಡಿ ಓದಿನ ಫಲವಾಗಿ ಹುಟ್ಟಿಕೊಂಡರೇ, ಮತ್ತೂ ಕೆಲವು ಅರ್ಧಸತ್ಯಗಳು ಎಂತಲೇ ಹೇಳಬೇಕು.

ಇವು ಕೊಂಚ ದೊಡ್ಡವರ ಅಭಿಪ್ರಾಯಗಳಾದರೆ, ಹೊಸತಲೆಮಾರಿನಲ್ಲಿಯೇ ಕಾಣಿಸಿಕೊಳ್ಳುತ್ತಿರುವ ವಿಶೇಷಣಗಳ ರೋಗ. ತಮಗೆ ತಾವೇ ‘ಪ್ರಧಾನ’ ‘ಅಗ್ರಗಣ್ಯ’ ‘ ಪ್ರಶಸ್ತಿ ಪಡೆದ ಕೃತಿಗಳೇ ಶ್ರೇಷ್ಟವೆಂಬ ಗೀಳು. ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಕವಿತೆಯೇ ಶ್ರೇಷ್ಟ ಮುಂತಾದುವುಗಳ ಬೆನ್ನುಹತ್ತಿ ಜೀವಂತ ಕವಿತೆಯನ್ನು ನೀಡುವ ಧ್ಯಾನಸ್ಥ ಸ್ಥಿತಿಯನ್ನು ಮರೆಯುತ್ತಿದ್ದಾರೆ. ಇದರ ನಡುವೆಯೂ ತಮ್ಮ ಪಾಡಿಗೆ ತಾವು ಒಳ್ಳೆಯ ಕವಿತೆಗಳನ್ನು ಕೆಲವರು ನೀಡುತ್ತಿರುವುದು ಗಮನಿಸಬೇಕು. ಹಾಗಾಗಿ ಇದು ವಿಶೇಷಣಗಳ ಬೆನ್ನು ಹತ್ತಿ ಹೊಗುವ ಕಾಲಮಾನವಲ್ಲ. ಅಥವ ಯಾವುದೋ ಒಬ್ಬ ಕವಿಯನ್ನು ಮೆರೆಸಿ ಆತನಿಗೆ ತನ್ನ ಕಾವ್ಯದಲ್ಲಿ ಇಲ್ಲದಿದ್ದರೂ ದೊಡ್ಡಮಟ್ಟದ ತಾತ್ವಿಕತೆಯನ್ನು ಗಂಟುಹಾಕಿ, ಇನ್ನುಳಿದ ಕವಿಗಳನ್ನು ಗೌಣಗೊಳಿಸುವ ಪರಿಯೂ ‘ವೈವಿಧ್ಯಕಾವ್ಯ’ಕ್ಕೆ ಸಲ್ಲ. ನವಮಾಧ್ಯಮಗಳ ಪ್ರವೇಶಿಕೆಯಿಂದಾಗಿ ಗಟ್ಟಿಯಾದ ಕವಿತೆ ಮರೆಯಾಗಲು ಸಾಧ್ಯವೇ ಇಲ್ಲ. ಆದರೆ ಗುರುತಿಸುವ ರಾಜಕಾರಣದಿಂದಾಗಿ ಮತ್ತು ಕಣ್ತಪ್ಪಿನಿಂದಾಗಿ ಹಾಗಾಗಬಹುದು.

ಸಮಕಾಲೀನ ಜೀವನಕ್ರಮವೇ ಅವಸರದ ಮತ್ತು ವಿಛ್ಚಿದ್ರಗೊಳ್ಳುವ ಇರಾದೆಯಲ್ಲಿದ್ದಾಗ ಅವರಿಗೆ ಮುಖ್ಯವಾಗುವುದು ಯಾವುದು? ಮುಂತಾದ ಹಲಬಗೆಯ ಪ್ರಶ್ನೆಗಳು ನಮ್ಮ ದಾರಿಗಳನ್ನು ಅಷ್ಟು ಬೇಗ ಸುಗಮಗೊಳಿಸಲಾರವು. ಹಾಗಂತ ಇವುಗಳಿಗೆ ಎದರು ಬಗೆಯ ಪರಿಹಾರಗಳು ಇಲ್ಲವೇ ಇಲ್ಲ ಎಂದು ಹೇಳುವುದು ಕೂಡ ತಪ್ಪು.

ಇದರ ನಡುವೆ, ಕೆಲವರಂತೂ ಎಂಥವರಿಗೆ ಮುನ್ನುಡಿ, ಬೆನ್ನುಡಿ ಬರೆಯಬೇಕು? ಹೇಗೆ ಬರೆಯಬೇಕು? ಈ ಮೂಲಕ ಜಾತ್ಯತೀತನಾಗುವುದು ಹೇಗೆ? ನನ್ನ ಮುನ್ನುಡಿ ಯಾವ ಪ್ರಶಸ್ತಿಗಳಿಗೆ ಯೋಗ್ಯವಾಗ ಬಲ್ಲದು. ಎಂಬ ಯೋಚನೆ ಒಂದು ಕಡೆಗಿದ್ದರೇ; ಮತ್ತೊಂದು ಕಡೆ ಹೊಸಬರು ತಾನು ಯಾರ ಕಡೆ ಮುನ್ನುಡಿ ಬರೆಸಿದರೆ ಪ್ರಶಸ್ತಿ ಸಿಗಬಲ್ಲದು ಎಂಬ ಆಲೋಚನೆಯಲ್ಲಿ ಮಗ್ನವಾಗಿದ್ದಾರೆ. ಪ್ರಶಸ್ತಿಗಳ ಸಾಂಸ್ಕೃತಿಕ ಯಜಮಾನಿಕೆಗಳ ನಡುವೆಯೂ ಗಟ್ಟಿಯಾದ ಕವಿತೆಗಳಿವೆ. ಹಿಂದೆ ಕ್ರೈಸ್ಟ್ ಕಾಲೇಜ್ ಕಾವ್ಯ ಸ್ಪರ್ಧೆ ಮತ್ತು ‘ಸಂಚಯ’ ಪತ್ರಿಕೆಗಳ ಸ್ಪರ್ಧೆಯಲ್ಲಿನ ಕವಿತೆಗಳ ಗಟ್ಟಿತನ ನೋಡಿದರೂ ನಮಗೆ ಅರಿವಾಗಬಹುದು. ಇದರಲ್ಲಿ ನಾವು ಕಾಣಬೇಕಾದದ್ದು ವೈವಿಧ್ಯತೆ ಮತ್ತು ‘ನಿಜದ ಕವಿತೆ’ಯ ಮಾನದಂಡ. ಈಗ ‘ಸಂಚಯ’ ನಿಂತಿದ್ದರೆ, ಮತ್ತೊಂದು ಚಿ.ಶ್ರೀನಿವಾಸರಾಜು ಅವರ ನಂತರ ಕುಂಟುತ್ತಾ ಸಾಗುತ್ತಿದೆ. ಸದ್ಯ ಕ್ರೈಸ್ಟ್ ಕಾಲೇಜ್ ಹೊಸತಲೆಮಾರಿನ ಕವಿತೆಗಳನ್ನು ಗುರುತಿಸುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ವರ್ತಮಾನದಲ್ಲಿ ಇವುಗಳ ಅಗತ್ಯವೂ ಇಲ್ಲದಂತೆ ನವಮಾಧ್ಯಮಗಳು ಹೆಚ್ಚು ಜಾಗವನ್ನು ಹೊಸತಲೆಮಾರಿಗೆ ನೀಡುತ್ತಿವೆ. ಇದರಿಂದ ಅನುಕೂಲವೇ ಆಗಿದೆ. ಆದರೆ ಪ್ರಶ್ನೆ ಇರುವುದು ಅವುಗಳನ್ನು ಬಳಸಿಕೊಳ್ಳುವ ಬಗೆಯಲ್ಲಿ. ಆದ್ದರಿಂದ ಯಾವುದೇ ಒಂದು ಸತ್ಯ ಇಂದಿನ ಸಮಾಜಕ್ಕೆ ಅಂತಿಮವಲ್ಲ.

ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ? ಇನ್ನು ಯಾವೊಬ್ಬ ಕವಿಯೂ ಅನುಭವ ಇಲ್ಲದೇ ಬರೆಯಲು ಸಾಧ್ಯವೇ? ಹಾಗಂತ ಹೊಸಬರ ಕವಿತೆಗೆ ಮಿತಿಗಳೇ ಇಲ್ಲವೆಂದಲ್ಲ. ಅವುಗಳನ್ನು ನಾವು ವಸ್ತುಗಾರಿಕೆಯಲ್ಲಿ ಮತ್ತು ಕವಿತೆಯ ‘ಕಟ್ಟಡ’ದಲ್ಲಿ ಗುರುತಿಸಲು ಸಾಧ್ಯ.

ವಸ್ತುಗಾರಿಕೆ ಇಪ್ಪತ್ತೊಂದನೇ ಶತಮಾನದ ಕವಿತೆಗೆ ದೊಡ್ಡ ಸಮಸ್ಯೆ ಎಂದೆನಿಸುವುದಿಲ್ಲ. ಕವಿತೆಯಲ್ಲಿ ‘ವಿವರ’ಗಳ ಮೂಲಕ ‘ಸ್ವ’ ಅನುಭವಗಳು ಅಭಿವ್ಯಕ್ತಗೊಳ್ಳುತ್ತಿವೆ. ಹೊಸಬರ ಅನೇಕ ಕವಿತೆಗಳ ಗರ್ಭದಲ್ಲಿ ‘ಅವೈಯಕ್ತಿಕತೆ’ ಬಹುಮಟ್ಟಿಗೆ ದೂರವಾಗಿ ‘ವೈಯಕ್ತಿಕತೆ’ ಹೆಚ್ಚು ಒಳಗುಮಾಡಿಕೊಂಡಿರುತ್ತದೆ. ವಿವರಗಳು ಸಾಮಾಜಿಕತೆಯನ್ನು ಅಭಿವ್ಯಕ್ತಿಸುವಾಗ ಕವಿತ್ವ ಅಲ್ಲಿ ಸತ್ವಪೂರ್ಣವಾಗದೇ ಹೋಗುವ ಸಂಭವ ಹೆಚ್ಚು. ಹಲವು ಬಾರಿ ಹೊಸ ತಲೆಮಾರಿನ ಕವಿತೆ ‘ವಿವರ’ಗಳಿಂದಲೇ ಗೆದ್ದಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ ವಿವರಗಳಿಂದ ಕೂಡಿದ ಕವಿತೆ ಕವಿಯ ಕೈ ಹಿಡಿದಿಲ್ಲ. ಅನುಭವವು ಅಲ್ಲಿ ಗಟ್ಟಿಯಾಗಿದ್ದರು ‘ಹೇಳಿಕೆ’ ಗಳ ಮಟ್ಟ ನುಸುಳಿ ಕವಿತೆ ಸೋಲುತ್ತಿದೆ. ಮನುಷ್ಯ ಪರ ಮತ್ತು ಆ ಮೂಲಕ ಸಾಮಾಜಿಕತೆಯ ಕಾವ್ಯ, ವಿವರಗಳನ್ನು ಬಯಸುವುದು ಸಹಜ. ಆದರೆ ಅದಕ್ಕೆ ತಕ್ಕ ಪ್ರತಿಮೆ, ರೂಪಕಗಳನ್ನು ನಿರ್ಮಿಸುವುದು ತೀರಾ ಹೊಸಬರಿಗೆ ಸಾಧ್ಯವಾಗಬೇಕಾಗಿದೆ. ಅವರ ಸಂಕಲನದ ಒಟ್ಟು ಪದ್ಯಗಳಲ್ಲಿ ಕೆಲವು ಮಾತ್ರ ತಾಜಾತನದ ಪ್ರತಿಮೆಗಳನ್ನು ಒಳಗೊಂಡಿರುತ್ತವೆ. ಅಭಿವ್ಯಕ್ತಿಯ ಕ್ರಮವು ಅನುಭವ ಮತ್ತು ವಿವರ, ಅದಕ್ಕೆ ತಕ್ಕ ಪ್ರತಿಮೆಗಳು ಗಟ್ಟಿಗೊಂಡಾಗ ಮಾತ್ರ ಯಶಸ್ವಿಯಾಗಬಲ್ಲದು.

ಇಂದಿನ ಕವಿತೆಯಲ್ಲಿ ಹಲ ಬಗೆಯ ಅನುಭವಗಳ ಜೊತೆಗೆ ಅಭಿವ್ಯಕ್ತಿಗಳು ಭಿನ್ನವಾಗಿವೆ. ಹಾಗಾಗಿಯೇ ವಸ್ತುಗಾರಿಕೆಯೂ ಕೂಡ ಏಕರೂಪವಾಗಿಲ್ಲ. ಈಚೆಗೆ ಬಂದಿರುವ ‘ಮೀನುಪೇಟೆಯ ತಿರುವು’ (ರೇಣುಕಾ ರಮಾನಂದ), ‘ಹಲಗೆ ಮತ್ತು ಮೆದುಬೆರಳು’( ಕಾದಂಬನಿ) ‘ನಕ್ಷತ್ರ ಕವಿತೆಗಳು’ ( ನಾಗಶ್ರೀ ಶ್ರೀರಕ್ಷ) ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ (ಲಕ್ಷ್ಮಣ.ವಿ.ಎ) ‘ಕಸಬಾರಿಗೆ ಪಾದ’ (ಬಸವರಾಜ್ ಹೃತ್ಸಾಕ್ಷಿ) ‘ಕಾಲದ ರಶೀದಿ ಪುಟ’ ( ಮಧು ಬಿರಾದಾರ) ‘ಒಡೆದ ಬಣ್ಣದ ಚಿತ್ರಗಳ’ ( ಮಹಾಂತೇಶ್ ಪಾಟೀಲ) ‘ಕನಸ ಬೆನ್ನತ್ತಿ ನಡಿಗೆ’ ( ಸಿದ್ದು ಸತ್ಯಣ್ಣ) ಮುಂತಾದವರ ಸಂಕಲನಗಳಲ್ಲದೇ ಟೀನಾಶಶಿಕಾಂತ್, ಭಾರತಿ.ಬಿ.ವಿ, ಮೌಲ್ಯ.ಎಂ., ಕಾಜೂರು ಸತೀಶ, ರಂಗನಾಥ ಆರನಕಟ್ಟೆ, ಸಂದೀಪ್ ಈಶಾನ್ಯ, ಭುವನಾಹಿರೇಮಠ, ಮಂಜುಳಾ ಹುಲಿಕುಂಟೆ, ಕಾವ್ಯಶ್ರೀ ನಾಯ್ಕ, ಗಾಣಿಗೇರ ನಿರಂಜನ, ಶ್ರೀಧರ ಬನವಾಸಿ, ಕೈದಾಳ ಕೃಷ್ಣ ಮೂರ್ತಿ, ವಿಲ್ಸನ ಕಟೀಲ, ನಾಗರಾಜ ಕೋರಿ, ಪರಿಮಳ ಮುಂತಾದವರ ಬಿಡಿಕವಿತೆಗಳನ್ನು ಪರಿಗಣಿಸಬಹುದು.

ಇವರಲ್ಲದೇ ಕೊಂಚ ಹಳಬರಾದ ಆಲೂರು ದೊಡ್ಡನಿಂಗಪ್ಪ, ರುದ್ರೇಶ್ವರಸ್ವಾಮಿ, ಮಹಮದ್ ಭಾಷಾ ಗೂಳ್ಯಂ, ಚೀಮನಹಳ್ಳಿ ರಮೇಶಬಾಬು, ಆರೀಫ, ಆನಂದ ಕುಂಚನೂರು, ಅಂಕುರ್, ವಾಸುದೇವ ನಾಡಿಗ, ಆರೋಲಿ, ಟಿ.ಯಲ್ಲಪ್ಪ, ಪಿ.ಚಂದ್ರಿಕಾ, ಅಕ್ಷತಾ.ಕೆ, ಚೇತನಾ ತೀರ್ಥಹಳ್ಳಿ, ಮಹಾಯಾನ ಮಂಜುನಾಥ ಮುಂತಾದವರು ಆಗಾಗ ಬರೆದ ಪದ್ಯಗಳು ಹೊಸ ಬಗೆಯ ಅನುಭವಗಳನ್ನು ನೀಡಿವೆ. ಹೊಸ ಕಾಲಮಾನದಲ್ಲಿ ಬೇರೆ ಬೇರೆ ವಲಯಗಳಿಂದ ಕವಿತೆ ಬರೆಯುತ್ತಿರುವ ಕೃಷ್ಣಗಿಳಿಯಾರ್, ಹೃದಯಶಿವ, ಕೆ.ರವೀಂದ್ರನಾಥ್, ಚಂದ್ರಚೂಡ್, ನಾಗರಾಜ್ ವಸ್ತಾರೆ, ಹತ್ವಾರ್, ಮುಂತಾದವರ ಭಾಷಿಕ ನುಡಿಕಟ್ಟುಗಳನ್ನು, ಅನುಭವಗಳನ್ನು ನಾವು ಚರ್ಚೆಗೆ ತಗೆದುಕೊಳ್ಳದಿದ್ದರೆ ಅದು ಕೂಡ ಅಪಾಯವೇ.

ಮೇಲಿನವರಲ್ಲದೇ ಇನ್ನು ಹಲವು ಜನ ಈ ಲೇಖನದಲ್ಲಿ ಪ್ರಸ್ತಾಪವಾಗಬಹುದು. ಇದನ್ನು ಮೀರಿ ಹೊಸ ಕವಿತೆಯನ್ನು ಮರೆತರೇ ಅದು ನನ್ನ ತಿಳುವಳಿಕೆಯ ಮಿತಿಯೇ ಆಗಿರುತ್ತದೆ. ಒಂದು ಕವಿತೆ ಯಾವ ಬಗೆಯ ಅನುಭವವನ್ನು ನೀಡಬಲ್ಲದು ಎಂಬುದನ್ನು ಮೊದಲೇ ನಿರ್ಧಿರಿಸುವಾಗಲೂ ಓದುಗ ಅಥವಾ ಬರಹಗಾರನಿಗೆ ತನ್ನದೇ ಪೂರ್ವತಯಾರಿಯ ಅಗತ್ಯ ಇರಬೇಕು. ಇಲ್ಲದಿದ್ದರೆ ಅವಸರದ ತೀರ್ಮಾನಗಳಿಗೆ ತಲುಪಬೇಕಾಗುತ್ತದೆ. ನಿದರ್ಶನಕ್ಕೆ ಈಗಿನ ಹೆಣ್ಣು ಮಕ್ಕಳ ಕಾವ್ಯ ಕೇವಲ ದೇಹಮೀಮಾಂಸೆಯ ಕವಿತೆಗಳನ್ನು ಕಟ್ಟುತ್ತಿದ್ದಾರೆ ಎಂಬ ಮಾತು ಇಂದು ಹಳತಾಗುತ್ತಿದೆ. ಅಥವ ಅದನ್ನು ಸಾಮಾಜಿಕ ನೆಲೆಗೆ ಧಾಟಿಸುವಲ್ಲಿ ಭಿನ್ನವಾಗಿದೆ. ಲೈಂಗಿಕತೆ ಎಂಬುದು ‘ಸ್ವ’ಅನುಭವದ ಬೆನ್ನಲ್ಲಿ ಬಂದು ಅದು ಸಮಾಜದ ಬಹುದೊಡ್ಡ ಸವಾಲುಗಳಿಗೂ ದಾಟಬಲ್ಲದು. ವ್ಯಕ್ತಿಗತ ರಾಜಕಾರಣ, ಪ್ರಭುತ್ವದ ಬಿರುಕುಗಳು ಕೂಡ ಇವರ ಕಾವ್ಯದಲ್ಲಿ ಗೋಚರಿಸಬಲ್ಲವು. ಹಲವು ವಸ್ತುಗಳಿಗೆ ಕೈಚಾಚುವ ಕವಿತೆಗಳೇ ಇಂದು ಮುನ್ನಲೆಗೆ ಬಂದಿವೆ.


ಜಾಗತೀಕರಣವನ್ನೂ ಮೀರಿದ ಬದುಕಿನ ಪಲ್ಲಟ, ಸ್ವಂತೀಕರಣಕ್ಕೆ ಮರಳುವ ಕಾತರ:

ಮುಕ್ತಮಾರುಕಟ್ಟೆ, ತಂತ್ರಜ್ಞಾನ ಇವುಗಳಿಂದ ಬದಲಾಗಿರುವ ಜೀವನಶೈಲಿಯ ಪಲ್ಲಟ ತೀವ್ರಗತಿಯದು ಎಂದು ತಿಳಿದ ಸಂಗತಿ. ಜಾಗತೀಕರಣ ಎಂಬ ಪದವೂ ಕೂಡ ಇಂದು ಹಳತಾಗಿ, ಇಂದಿನ ‘ಜೀವನಕ್ರಮ’ವನ್ನು ತೋರಿಸುವ ಪಾರಿಭಾಷಿಕ ಪದಗಳ ಹುಡುಕಾಟವೂ ಎಲ್ಲೆ ಮೀರಿ ನಡೆಯುತ್ತಿದೆ. ವಸಾಹತೋತ್ತರದ ಬಹುಪಾಲು ಚಿಂತಕರು ಸಾಮ್ರಾಜ್ಯಶಾಹಿಯ ‘ಎದರು’ ಚಿಂತನಾಕ್ರಮವಾಗಿ ಬಹುತೇಕ ‘ದೇಸಿಯತೆ’ ಅಥವಾ ಸ್ಥಳೀಯತೆಗಳನ್ನೇ ಶೋಧಿಸಿದ್ದಾರೆ. ಇಂದು ಕೂಡ ಅದೇ ಬಗೆಯ ಶೋಧನಾ ಕ್ರಮವೂ ಅಗತ್ಯವಾಗಿದೆ. ಭಾರತ, ಮತ್ತು ಅದರ ಒಂದು ಭೂಭಾಗದ ಕರ್ನಾಟಕದಲ್ಲಿ ಜಗತ್ತಿನ ಜೀವನಶೈಲಿಗಳು ಕೇವಲ ನಗರಗಳಿಗೆ ಮಾತ್ರ ಸೀಮಿತಗೊಳ್ಳದೇ ಗ್ರಾಮಗಳನ್ನು ವ್ಯಾಪಿಸುತ್ತಿರುವುದು ಸುಳ್ಳಲ್ಲ. ಅತಿಯಾದ ಆರ್ಥಿಕ ಪಲ್ಲಟಗಳು, ಅಭಿವೃದ್ಧಿಯ ಒತ್ತಡಗಳಿಂದಾಗಿ ಈ ನೆಲದ ಬೆನ್ನೆಲುಬಾದ ಕೃಷಿಯ ಚಟುವಟಿಕೆಗಳು ನಾಶದ ಅಂಚಿಗೆ ತಲುಪಿವೆ. ಇದಕ್ಕೆ ಹೊಸ ತಲೆಮಾರಿನ ಕಾವ್ಯ ತೀವ್ರವಾಗಿ ಅಭಿವ್ಯಕ್ತಿಸಿದೆ. ಕೃಷಿಯ ನಾಶವೆಂದರೆ ಅದು ಭೂಮಿಯ ಅವನತಿಯೆಂದೇ ಭಾವಿಸಬೇಕಾಗಿದೆ.

ಇದರ ಫಲವಾಗಿ ಅವರ ಕಾವ್ಯ ಉಸಿರಾಡುವುದು ಒಂದು ನೆನಪುಗಳ ಮೂಲಕ; ಮತ್ತೊಂದು ಸ್ವಂತೀಕರಣಕ್ಕೆ ಮರಳುವ ಕಾತರ. ಗ್ರಾಮದ ದಟ್ಟ ಅನುಭವಗಳನ್ನು ಮೈಗಂಟಿಸಿಕೊಂಡು ನಗರಗಳಿಗೆ ಧಾವಿಸಿರುವ ಅನೇಕ ಕವಿಗಳು ಬದಲಾದ ಜೀವನ ಕ್ರಮವನ್ನು ಸಂದಿಗ್ಧತೆ, ದುಗುಡ, ತಲ್ಲಣಗಳಿಂದ ಎದುರುಗೊಂಡಿದ್ದಾರೆ. ಇಂದಿನ ನೆನಪುಗಳು ಕೇವಲ ‘ಇದ್ದವು’ಎಂಬ ಮಾತೇ ಅಧಿಕವಾಗಿ ಅವುಗಳನ್ನು ಮರುರೂಪಿಸುವ ಅನಿವಾರ್ಯತೆ ಕಂಡುಬರಲಾರದು. ಇಂದಿನ ಕವಿತೆ ಇವುಗಳನ್ನು ಹೇಗೆ ‘ನಿಭಾಯಿಸಿದೆ’ ಎನ್ನುವುದೇ ಮುಖ್ಯ. ಕಣ್ಮರೆಯಾಗುತ್ತಿರುವ ಆಪ್ತ ಜಗತ್ತನ್ನು ಪುನರ್ ‘ಸ್ವಂತೀಕರಣಕ್ಕೆ’ ಒಗ್ಗಿಸಿಕೊಳ್ಳುವುದು ಹೇಗೆ? ಈ ಸ್ವಂತೀಕರಣವು ಸಮಾಜದ ಮತ್ತು ವೈಯಕ್ತಿಕತೆಯಿಂದ ಜಾರುತ್ತಿರುವ ‘ಸಹ್ಯ ಬದುಕನ್ನು’ ಮರುರೂಪಿಸುವ ಕ್ರಿಯೆಯನ್ನು ತೋರಿಸುತ್ತದೆ. ಪರಂಪರೆಯನ್ನು ಮತ್ತೊಮ್ಮೆ ನಮಗೆ ಬೇಕಾದ ಬಗೆಯಲ್ಲಿ ನಿರ್ಮಿಸುವದು ಕೂಡ ಇದರ ಕೆಲಸವಾಗಿರುತ್ತದೆ.

ಈಚೆಗೆ ಬಂದ ‘ಭತ್ತ ಬೆಳೆಯುವುದೆಂದರೆ..’ (ರೇಣುಕಾ ರಮಾನಂದ) ಕವಿತೆ ತೀವ್ರವಾಗಿ ಕಸುಬೊಂದರ ನಾಶ ಮತ್ತು ಅದನ್ನು ಮರುಕಟ್ಟುವಿಕೆಯ ಯತ್ನಗಳನ್ನು ಅಭಿವ್ಯಕ್ತಿಸಿದೆ. ಅಂದರೆ, ಇದನ್ನೇ ಕಣ್ಮರೆಯಾದ ಪರಂಪರೆಯ ಜೀವನಕ್ರಮದ ಮರು ನಿರ್ಮಾಣದ ಕೆಲಸ ಎಂದು ಕರೆದೆ. ಅರ್ಥಾತ್ ‘ಸಂತೀಕರಣಕ್ಕೆ’ ಹಿಂತಿರುಗುವುದು. ‘ಭತ್ತ ಹಾಗಂದರೇನು? ಎಂಬ ಪ್ರಶ್ನೆಯೇ ಈ ಕಾಲದ ತಲ್ಲಣವಾಗಿದೆ. ‘ಅವಳಿಗೆ ಅಕ್ಕಿ ಗೊತ್ತು, ದೋಸೆಗೊತ್ತು/ ಅನ್ನ, ಪುಳಿಯೊಗರೆ, ಪಲಾವ್/ ಎಲ್ಲವೂ ಗೊತ್ತು/ಗೊತ್ತಿಲ್ಲ ಭತ್ತ’ ಎಂಬ ಸಾಧಾರಣ ಸಂವಾದಿ ರೂಪಿಯಾಗಿ ಸಾಗುವ ಕವಿತೆ ಸದ್ಯದ ಜೀವನಕ್ರಮಗಳನ್ನು ಎದುರುಗೊಂಡು ಅಂತಿಮವಾಗಿ ‘ಮುಂದಿನ ಬಾರಿ ಭತ್ತಕ್ಕೆ/ ಗೊಬ್ಬರವೂ /ನಮ್ಮದೇ’ ಎಂಬ ಈ ನೆಲದ ಮೂಲತನಕ್ಕೆ ವಾಪಸ್ಸಾಗುತ್ತದೆ. ಆದರೆ ಇದೇ ಆಶಯ ಮುಂದುವರೆಯುವುದೇ? ಎಂಬ ಪ್ರಶ್ನೆಯೂ ಇದೆ. ಈ ಬಗೆಯ ಪ್ರತಿಮೆಗಳು ಹೊಸಬರ ಕವಿತೆಗಳಲ್ಲಿ ಅನೇಕ ಬಾರಿ ಕಾಣಿಸಿಕೊಂಡಿವೆ.

‘ನೇಗಿಲು ತುಕ್ಕು ಹಿಡಿಯುತ್ತಿದೆ/ ಕುಂಟೆಯ ಮೇಳಿ ಕಳೆದು ಹೋಗಿದೆ/ ಗೆದ್ದಲು ತಿಂದ ನೊಗ ಹಾಡು ಹಗಲೇ/ಯಾರದೋ ಮನೆಯ ಉರುವಲಾಗಿದೆ’ (ವಿಠಲ ದಳವಾಯಿ) ‘ನೇಗಿಲಗೆರೆಗೆ ಬಿದ್ದ/ ಅಪ್ಪನ ಬೆವರಹನಿಯಲ್ಲಿ/ ದೇವರು ಮಿಂಚಿ ಮರೆಯಾದ’ ( ಹಂದಲಗೆರೆ ಗಿರೀಶ) ‘ಹುಟ್ಟಿಸೋ ವೀರ್ಯಕ್ಕೆ ಖಾತರಿ ಇಲ್ಲದ ಕಾಲ/ ಉದುರಿ ಬಿದ್ದಾವೋ ಪಾತರಗಿತ್ತೀಯ ಕಾಲ/ ಬೆಂಡೆಯ ಗಿಡದಾಗ ತೊಂಡಿಂಯ ಬಳ್ಯಾಗ/ ನಗುತ ನಿಂತೈತ್ಯವ್ವ ಪುಂಡೀಯ ಪಲ್ಯ’ ( ಬಸವರಾಜ ಹೃತ್ಸಾಕ್ಷಿ) ‘ನಮ್ಮದೆಯ ಬಯಲನ್ನು ನಮಗೆ ಬಿಟ್ಟುಬಿಡಿ/ ಹಾರಿಬರದಿರಲಿತ್ತ ಉಕ್ಕಿನಕ್ಕಿ/ ಮೂಡದಿರಲಿ ದೈತ್ಯ ಗಾಲಿಗಳ ಚಿತ್ತಾರ/ ಕೇಳದಿರಲಿಲೆಂದೂ ಸಿಡಿಮದ್ದುಗಳ ಮೊರೆತ’ ( ಕಾವ್ಯಶ್ರೀ ನಾಯ್ಕ) ‘ನಕ್ಕರೆ ಗುಳಿ ಬೀಳುತ್ತಿದ್ದ/ ನಮ್ಮೂರ ಹೊಲಗದ್ದೆಗಳಲ್ಲಿ/ ಈಗ ಡಾಂಬರು ರಸ್ತೆಯ ಹಳ್ಳಗಳು/ ಹೆಪ್ಪು ಗಟ್ಟಿದ ಕತ್ತಲ ಬೊಬ್ಬೆಗಳನ್ನು ಹೊಡೆದುಕೊಂಡು,/ಗುಳೆ ಎದ್ದಿರುವ ಹಕ್ಕಿಗಳು. (ಮಂಜುನಾಥ್.ಎಸ್.) ‘ಕಲಿಗಾಲದ ಈ ಕೊನೆಯಲ್ಲಿ/ ಕಲ್ಲಿನ ಕಂಬಗಳಿಗೂ, ಗೆದ್ದಲು ಗೊದ್ದ ಹತ್ತಿದೆ’ (ರಾಜೇಂದ್ರ ಪ್ರಸಾದ್) ‘ಬಿತ್ತಿದ ಬೀಜ/ ಭೂಮಿಪಾಲಾದಾಗ/ ಸಾಲದ ಬಿಸಿಲಿಗೆ ಒಣಗತೊಡಗಿತ್ತು/ ಬದುಕಿನ ಬೇರು’ ( ಮೋದೂರು ತೇಜ) ‘ಭೂಮಿಯೇ ನೀನು ನನ್ನವ್ವ/ ಬಿತ್ತಿದ ಹೊಲ/ ಪರಂಪರೆಯ ಹುದುಗಿದ ಸಮಾಧಿ/ ಸಮತೆಯ ಕನಸ ಹಂಚಿಕೊಂಡು ರಟ್ಟೆ ಜೋಡಿಸಿದ್ದೇವೆ.’( ವೀರಣ್ಣ ಮಡಿವಾಳರ) ಹೀಗೆ ಅನೇಕ ಆತಂಕಿತ ಪ್ರತಿಮೆಗಳನ್ನು ಹಲವರ ಕವಿತೆಗಳಲ್ಲಿ ಕಾಣಬಹುದು. ಈ ಪ್ರಕ್ರಿಯೆ ಕೊಂಚ ಹಳಬರಾದ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ‘ಲಕ್ಕವ್ವನ ಗುಡ್ಡ’, ರಮೇಶ ಬಾಬು ಚೀಮನಹಳ್ಳಿ, ಮಂಜುನಾಥ್ ಲತಾ, ಸತ್ಯಮಂಗಲಮಹದೇವ, ಅರುಣ್ ಜೋಳದ, ರಮೇಶ ಅರೋಲಿ, ಕುಂಚನೂರು, ರಂಗನಾಥ ಕಂಟನಕುಂಟೆ , ಸೈಫ್ ಜಾನ್ಸ್ ಮುಂತಾದವರ ಕವಿತೆಗಳಲ್ಲೂ ವ್ಯಕ್ತಗೊಂಡಿವೆ.

ಮೇಲಿನ ಕವಿತೆಗಳಲ್ಲಿ ಬಹುತೇಕ ಕೃಷಿ ಪ್ರತಿಮೆಗಳನ್ನು ಕಾಣಬಹುದು. ಇವುಗಳನ್ನು ‘ಕಾಲದ ಆತಂಕಿತ ಪ್ರತಿಮೆಗಳು’ ಎಂದು ಕರೆಯಲು ಹಲವು ಕಾರಣಗಳೂ ಇವೆ. ಈ ಬಗೆಯ ಆತಂಕಿತ ಪ್ರತಿಮೆಗಳು, ಹಳೆಯ ರೊಮ್ಯಾಂಟಿಕ್ ಮಾದರಿಯಲ್ಲಿ ‘ಸೌಂದರ್ಯ ಅನುಭವವನ್ನು’ ನೀಡಲಾರವು. ಅಥವ ನಿಸರ್ಗದ ಉನ್ಮಾದದಲ್ಲಿ ಮಿಂದೇಳುವ ರಸಾನುಭವವೂ ನೀಡಲಾರವು. ಈ ಪ್ರತಿಮೆಗಳ ಒಳಗರ್ಭಗಳು ಈ ಕಾಲಮಾನದ ಒಂದು ಅನುಭವದ, ಮತ್ತು ಗ್ರಾಮದ ನೆನಪುಗಳ ವಿನಾಶದ ಅಂಚನ್ನು ಎಡತಾಕುತ್ತಿವೆ. ಹೀಗೆ ಹೇಳುವಾಗ ಡಿ.ಆರ್.ನಾಗರಾಜ ಅವರು ಹಿಂದೆ ಬರೆದ ಲೇಖನ ‘ಆತಂಕಿತ ಹಿಂದು ಮತ್ತು ಕುಪಿತಗೊಂಡ ರೈತ’ ನೆನಪಾಗುತ್ತಿದೆ. ಇಂದು ಕುಪಿತಗೊಂಡಿರುವುದು ಕೇವಲ ರೈತ ಮಾತ್ರವಲ್ಲ, ಬದಲಿಗೆ ಆತನಿರುವ ಇಡೀ ಸಮಾಜವೇ ಕುಪಿತಗೊಂಡಿದೆ. ಹಿಂದು ‘ಇಂದು’ ಹೇಗೆ ಹೊಸಬಗೆಯ ‘ರಾಷ್ಟ್ರೀಯತೆ’ಯ ಹಿಂದೆ ಆತಂಕಿತಗೊಂಡಿದ್ದಾನೆ ಎಂಬುದನ್ನು ಕೂಡ ಇಂದಿನ ಕವಿತೆಯ ಮೂಲಕ ಮುಂದೆ ಚರ್ಚೆಗೆ ಎತ್ತಿಕೊಳ್ಳಬಹುದು. ಗಾಂಧೀಯವರ ಗ್ರಾಮ ತತ್ವಗಳನ್ನು ಈ ಕಾಲಕ್ಕೆ ಅದರಲ್ಲೂ ಮೇಲೆ ಉದ್ದರಿಸಿದ ಕವಿತೆಗಳ ಪ್ರತಿಮೆಗಳ ಬೆನ್ನಲ್ಲಿ ಅನ್ವಯಿಸಿಕೊಳ್ಳುವಾಗಲೂ ಭಿನ್ನತೆಗಳೂ, ಹಲವು ಸಾರೆ ಪುನರಾವರ್ತನೆ ಆಗಬಹುದು.

ವಸಾಹತೋತ್ತರ ಕಾಲದಲ್ಲಿ ಗಾಂಧೀಜಿಯವರ ಫಿಲಾಸಫಿ, ಅಭಿವೃದ್ಧಿಯ ವಿಚಾರದಲ್ಲಿ ಹಲಬಗೆಯ ಗೊಂದಲಗಳನ್ನು ಎದುರಿಸಿದ್ದು ತಿಳಿದ ಸಂಗತಿ. ಆದರೆ ಹೊಸಬರ ಕೃಷಿ ಚಿತ್ರಗಳ ಬೆನ್ನಲ್ಲಿ ಗಾಂಧೀ ಮತ್ತೊಮ್ಮೆ ಕಾಡುತ್ತಾರೆ. ಉಪಭೋಗವಾದದ ಸುಲಭಮಾರ್ಗವನ್ನು ಹಿಡಿಯಲು ಯತ್ನಿಸುತ್ತಿರುವ ಇಂದಿನ ಮನುಷ್ಯನಿಗೆ ‘ಭೂಮಿ’ಯ ಶಾಶ್ವತತೆಯ ಅರಿವು, ಕಸುಬುಗಳ ಪ್ರಾಮುಖ್ಯತೆಯ ಅರಿವು ಕ್ಷೀಣಿಸುತ್ತದೆಯೇ? ಎಂಬ ಆತಂಕವೂ ಇದೆ. ಏಕೆಂದರೆ ಹಿಂದೆ ನಾವು ಮೂಲಕಸುಬುಗಳ ವಿನಾಶಕ್ಕೆ ಕೇವಲ ಜಾಗತೀಕರಣವನ್ನು ದೂರುತ್ತಿದ್ದೆವು. ಆದರೆ ಇಂದು ಪ್ರಭುತ್ವಗಳ ಮತ್ತು ಅಭಿವೃದ್ದಿಗಳ ಶಾಮೀಲಿನಿಂದ(ನಮಗೆ ಬೇಕಾದ ಅಭಿವೃದ್ಧಿ ಯಾವ ಬಗೆಯದು ಎಂಬುದನ್ನು ಮೊದಲು ಅರಿಯಬೇಕು) ‘ರೈತನೇ’ ತನ್ನ ‘ಇರುವಿಕೆ’ ಯನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದಾನೆ.

ಹೆದ್ದಾರಿಗಳ ದೊಡ್ಡಮಟ್ಟದ ವಿಸ್ತರಣೆಗಳು, ಸೈಬರ್ ಕ್ರಾಂತಿಗಳೂ ಕೂಡ ಕೃಷಿ ಭೂಮಿಯ ಕಣ್ಮರೆಯ ಚಿತ್ರಗಳು ಹೊಸಬರ ಕವಿತೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿವೆ. ತಕ್ಷಣಕ್ಕೆ ‘ಲಕ್ಕವ್ವನ ಗುಡ್ಡ’ ( ಮಲ್ಲಿಕಾರ್ಜುನಗೌಡ) ‘ಪಾಳುಬಿದ್ದ ಕೆರೆಯಲ್ಲಿ ಕೊನಗಂಟಿ ಹೂವುಗಳ ಸುಗ್ಗೀಹಾಡು’ (ಗಂಗಪ್ಪ ತಳವಾರ) ‘ಉತ್ತೀತಿಯ ಹಾಡು’ ( ಕಳ್ಳಹಳ್ಳಿ ನಾರಾಯಣಪ್ಪ) ‘ಎಲ್ಲವ ಕರುಣಿಸಿದ ಸೃಷ್ಟಿ ಮೌನವಾಗಿ ಪ್ರೀತಿಸುತ್ತದೆ/ ಪಂಚಭೂತಗಳ ಋಣ ಮರೆತು ಪ್ರಾಣಹತ್ಯೆಯ ಸಂಚು ನಡೆದಿದೆ’(ಮಲ್ಲಿಕಾರ್ಜುನ ಛಬ್ಬಿಯವರ ಕವಿತೆಯ ಸಾಲುಗಳು) ‘ನಮ್ಮದೇ ಭೂಮಿಯಲಿ/ನಾವೇ ಜೀತಕ್ಕಿದ್ದು/ದಿನ ದೂಡುತ್ತಿದ್ದೇವೆ.’ ( ಎಸ್.ಕೆ. ಮಂಜುನಾಥ) ‘ಆಗಸವೂ ಬೊಗಸೆಯೊಡ್ಡಿದೆ ಭೂಮಿ ಮುಂದೆ’( ಚೀಮನಹಳ್ಳಿ ಅವರ ಈಚಿನ ಕವಿತೆ ‘ಬೊಗಸೆ’ ಕವಿತೆಯ ಸಾಲು) ‘ಕೇವಲ ಅನ್ನಕ್ಕಾಗಿ ಹೊಲಗಳನ್ನು ಮಾರಿಕೊಂಡು ಭಿಕಾರಿಗಳಾರುವವರ/ ಕೆಲವರು ಗಣಿಗಳಲ್ಲಿಯೇ ಜೀವ ಸಮಾಧಿಯಾಗಿ ಸಂಸ್ಕಾರದ ಖರ್ಚನ್ನು ಉಳಿಸಿರುವವರ ( ಎಚ್.ಆರ್. ರಮೇಶ) ಎಂಬ ಕವಿತೆಗಳು ನೆನಪಾಗುತ್ತಿವೆ.

ಇವಲ್ಲದೇ ಬಯಲುಸೀಮೆಯ ಕೃಷಿಭೂಮಿಯ ನಾಶದ ಕುರಿತು ಅನೇಕರು ಕವಿತೆ ಕಟ್ಟಿದ್ದಾರೆ. ಉತ್ತರಕರ್ನಾಟಕದಿಂದ ಬರುವ ಕವಿತೆಗಳ ಗರ್ಭದಲ್ಲಿ ‘ವಲಸೆ’ ‘ಹಸಿವು’ ‘ಬಡತನ’ದ ಚಿತ್ರಗಳು ಗೋಚರಿಸುವುದು ಕೂಡ ಈ ಬಗೆಯ ಭೂಮಿಯ ನಾಶದಿಂದಲೇ. ಹಾಗಾಗಿ ಇಲ್ಲಿ ನಾವು ಮರು ಆಲೋಚಿಸುವ ವಿಚಾರವೆಂದರೇ ಹಳ್ಳಿಯ ಬದಲಾದ ಚಿತ್ರಗಳಿಗೆ ‘ಹೊರಗಿನ’ ಜಾಗತೀಕರಣಕ್ಕಿಂತ, ‘ಒಳಗಿನ’ ಜಾಗತೀಕರಣದ ರಾಜಕಾರಣದ ಕುರಿತು. ಇಲ್ಲಿಯೇ ನಮಗೆ ಮತ್ತೊಮ್ಮೆ ಗಾಂಧೀ ಮತ್ತು ಅಂಬೇಡ್ಕರ ಅವರ ತಾತ್ವಿಕತೆಗಳು ಒತ್ತರಿಸಿಕೊಂಡು ಬರುತ್ತವೆ. ಆದರೆ ಹೊಸಬರ ಕವಿತೆಯಲ್ಲಿ ಇವರು ಹೆಚ್ಚಾಗಿ ವೈರುಧ್ಯದ ನೆಲೆಯಲ್ಲಿ ಇಲ್ಲವೇ ‘ಮಾನವತೆ’ಯ ಚೌಕಟ್ಟಿನಲ್ಲಿ ಕಾಣಿಸುತ್ತಾರೆ. ಆದರೆ ಈಗ ಬರೆಯುತ್ತಿರುವ ಅನೇಕ ಹೊಸ ಕವಿಗಳು ಒಂದು ಕಾಲಕ್ಕೆ ಕೃಷಿಯನ್ನು ಸಂಭ್ರಮದಿಂದ ಕಂಡು, ಈಗ ಅದರ ಕಳವಳವನ್ನು ಆತಂಕದಿಂದ ಎದರುಗೊಳ್ಳುತ್ತಿದ್ದಾರೆ.


ಒಳಗಿನ ರಾಜಕಾರಣವನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳದಿದ್ದಾಗ ಸಹಜವಾಗಿಯೇ ಇಂದಿನ ಮನುಷ್ಯ ಅನೇಕ ರಾಜಿಗಳಿಗೆ ಒಳಗಾಗುತ್ತಾನೆ. ಇಪ್ಪತ್ತೆರಡನೇ ಶತಮಾನದ ಪ್ರವೇಶಕ್ಕೆ ದಾಪುಗಾಲಿಡುತ್ತಿರುವ ನಾವು ಮತ್ತೆ ಕೃಷಿಯ ಮಹತ್ವವನ್ನು ಮನಗಾಣಬೇಕಿದೆ. ಈ ಆಶಯವು ಕವಿತೆಯ ಚೌಕಟ್ಟಿನಲ್ಲಿ ಬರಬಹುದೆಂದು ನಿರೀಕ್ಷೆ ಮಾಡಬಹುದು.