ಶಿವಪ್ಪನಿಗೆ ಆಗ ೧೪ ವರ್ಷ ವಯಸ್ಸು. ಊರಲ್ಲಿನ ಶಾಲೆಯನ್ನು ಬಿಟ್ಟು ಬಂದು ಬೆಂಗಳೂರು ಸೇರಿದ್ದ. ಅಮ್ಮ ತೀರಿಕೊಂಡ ಮೇಲೆ ಅಪ್ಪ ಇನ್ನೊಂದು ಮದುವೆ ಆಗಿದ್ದ. ಆ ಮಲತಾಯಿಯ ದ್ವಂದ್ವ ಪ್ರೀತಿಯ ಮುಂದೆ ಸಂಕುಚಿತಗೊಂಡ ಅವನ ಮನಸ್ಸು ಆಕಾಶವನ್ನು ಬಯಸಿತ್ತು. ಆ ವಯಸ್ಸಲ್ಲೇ ಬರವಣಿಗೆಯನು ಮೈಗೂಡಿಸಿಕೊಂಡು, ಆಗಲೇ ಹಳ್ಳಿಯಲ್ಲಿ ಹೆಸರಾಗಿದ್ದ ಹುಡುಗ ಅವನು. ಹೊಸ ಅವ್ವನ ಕಾಟ ತಾಳದೆ ನೇಕಾರ ಶಂಭಯ್ಯನ ಜೊತೆ ಸೇರಿ ಅಪ್ಪನಿಗೆ ಹೇಳಿಯೇ ಊರು ಬಿಟ್ಟಿದ್ದ.

ಕಿರಣ ಅಕ್ಕಿ ಬರೆದ ವಾರದ ಕತೆ

 

‘ಲೇ ಮಾದೇವಿ.. ಒಂದ್ ಸ್ವಲ್ಪ್ ಛಾ ಮಾಡಲಾ..’ ಮಂಡಕ್ಕಿ ಡಬ್ಬಿಯನ್ನು ಅಟ್ಟದಿಂದ ಕೆಳಗಿಳಿಸುತ್ತ ಹೇಳಿದ ಶಿವಪ್ಪ.

ಸುಣ್ಣದ ಬಣ್ಣವ ಮರೆತ ನಾಲ್ಕು ಗೋಡೆಗಳು, ಅಲ್ಲಲ್ಲಿ ಮಣ್ಣಿನ ತೇಪೆಗಳು ಹಾಗು ಒಂದು ಬಾಗಿಲು, ಇಷ್ಟು ಬಿಟ್ಟು ಒಂದು ಕಿಟಕಿಯೂ ಇಲ್ಲದ ಅತೀ ಸಾಧಾರಣ ಕೋಣೆಯದು. ಕಟ್ಟಿಗೆಯ ಹಲಿಗೆಯನ್ನು ಅಟ್ಟವನ್ನಾಗಿ ಮಾಡಿ, ಅದರ ಮೇಲೆ ಬೆರಳೆಣಿಕೆಯಷ್ಟು ಆಕಾರಗೆಟ್ಟ ಅಲ್ಯೂಮಿನಿಯಂ ಡಬ್ಬಿಗಳಲ್ಲಿ ಇಡೀ ಸಂಸಾರವನ್ನು ಅವಿತಿಟ್ಟವಳು ಮಾದೇವಿ. ಅವಳು ಆರದಂತೆ ನೋಡಿಕೊಳ್ಳುತ್ತಿದ್ದ ಒಲೆಯ ಬೆಂಕಿಯು ಆ ಪುಟ್ಟ ಕೋಣೆಯ ಜೀವದಂತೆ ಕಾಣುತ್ತಿತ್ತು. ಅವಳ ಗಂಡ ಶಿವಪ್ಪ, ಅದ್ಯಾವುದೋ ಕನಸಿನ ಬೆನ್ನು ಹತ್ತಿ ಹದಿನೈದು ವರ್ಷದ ಹಿಂದೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಸಧ್ಯಕ್ಕೆ ಒಂದು ಸಿಮೆಂಟ್ ಫ್ಯಾಕ್ಟರಿಯಲ್ಲಿ ದಿನಗೂಲಿಗೆ ಕೆಲಸ ಮಾಡುತ್ತಾ ತನ್ನ ಹೆಂಡತಿ, ಮಗುವಿನ ಜೊತೆ ಸಾಕಾರ ಬದುಕಾಗಿದ್ದ.

ಬಲಗೈ ಇಂದ ಒಲಿ ಇದ್ದಿಲನ್ನು ಊದುಗೋಳಿಯಲ್ಲಿ ಆಡಿಸುತ್ತಾ, ‘ಮಂಡಕ್ಕಿ ತಿಂತಿರ್ರಿ.. ವಲಿ ಮ್ಯಾಲೆ ಇಟ್ಟೀನಿ ಛಾ ಕ ‘ ಎಂದು ಹೇಳಿ ಮಂಡಕ್ಕಿಯನ್ನು ಹಾಕಿಕೊಳ್ಳಲು ಹಳೆ ಪೇಪರ್ ತುಂಡುಗಳನ್ನು ಶಿವಪ್ಪನತ್ತ ಸರಿಸಿದಳು ಮಾದೇವಿ.

‘ಯಪ್ಪಾ.. ನಾನೂ ತಿಂತೇನಿ ನಿನ್ ಕೂಡ’ ಶಿವಪ್ಪನ ಮಗ ಈರಣ್ಣ ಬಂದು ಅಪ್ಪನ ತೊಡೆಯ ಮೇಲೆ ಕುಳಿತ.

ಈರಪ್ಪನಿಗೆ ಈಗ ಏಳು ವರ್ಷ. ಮೂರೇ ಮೂರು ಬೇರೆ ಬೇರೆ ಬಣ್ಣಗಳ ಗುಂಡಿಯಿದ್ದ ದಿನಾ ತೊಡುವ ಅಂಗಿ, ಗುಂಡಿಯ ಅಭಾವದಿಂದ ತನ್ನ ಅಸ್ತಿತ್ತ್ವವನ್ನು ತೋರಿಸುತ್ತಿರುವ ಪುಟ್ಟ ಗುಣಗಡಿಗೆ, ಹಳದಿ ಉಡದಾರದಿಂದ ಬಿಗಿದ ನೀಲಿ ಚಡ್ಡಿಯನ್ನುತೊಟ್ಟ ಈರಣ್ಣ ನೋಡಲು ಥೇಟ್ ಅಪ್ಪನ ಹೋಲಿಕೆ. ಕಿವಿ ಮಾತ್ರ ಅವರಮ್ಮನ ಹಾಗೆ. ‘ಊರಗಲ, ಆನೆ ಕಿವಿ’ ಎಂದು ಆಗಾಗ ಹೇಳಿ ನಗುತಿದ್ದ ಶಿವಪ್ಪ.

ಮಂಡಕ್ಕಿ ತಿನ್ನುತ್ತ ಅದರ ಕೆಳಗೆ ಹಾಸಿದ್ದ ಪೇಪರ್ ನತ್ತ ಬೊಟ್ಟು ಮಾಡಿ ಈರಣ್ಣ ‘ಯಪ್ಪಾ.. ಇವಾ ಯಾರು? ಕೈಯಾಗ ಏನ ಹಿಡದಾನ??’ ಎಂದು ಕೇಳಿದ.

‘ಅವ್ರು ಚಂದ್ರಶೇಖರ ಕಂಬಾರರು ಈರಣ್ಣ, ಜ್ಞಾನಪೀಠ ಪ್ರಶಸ್ತಿ ತಗೊಳಾಕತ್ತಾರ’. ಅದೇ ಫೋಟೋ ಕೆಳಗೆ ಬರೆದಿದ್ದನ್ನು ಓದಿ ಹೇಳಿದ ಶಿವಪ್ಪ.

‘ಯಪ್ಪಾ ಪೇಪರ್ ಒಳಗ ಫೋಟೋ ಬರಬೇಕಂದ್ರ ಏನ್ ಮಾಡ್ಬೇಕು?’

‘ಪೇಪರ್ ಒಳಗ ಹೆಸರು ಬರಬೇಕಂದ್ರ ಏನರ ಛೊಲೋ ಕೆಲಸ ಮಾಡಿರಬೇಕು, ಇಲ್ಲಂದ್ರ ನಾಕ್ ಜನಕ್ಕ ಒಳ್ಳೇದು ಮಾಡಿರಬೇಕು’.

‘ಯಪ್ಪಾ ನೀನು ಛೊಲೋ ನ ಅದಿ.. ನಿನ್ನ ಫೋಟೋ ನು ಬಂದಿತ್ತೇನ್ ಪೇಪರ್ ಒಳಗ ಎಂದರೆ?’

ಮಗನ ಪ್ರತಿ ಪ್ರಶ್ನೆಗೆ ಸಾರ್ಥಕ ಶಾಲೆ ಆಗುತ್ತಿದ್ದ ಶಿವಪ್ಪ ಯಾಕೋ ಈ ಪ್ರಶ್ನೆಗೆ ಸುಮ್ಮನಾದ. ಏನೋ ಯೋಚಿಸಿ ಮತ್ತೆ ಹೇಳಿದ; ‘ಇಲ್ಲ ಈರಣ್ಣ ನಾ ಅಂಥಾ ಕೆಲಸ ಏನೂ ಮಾಡಿಲ್ಲ ಇಲ್ಲಿ ತನಕ. ನೀ ಓದಿ ದೊಡ್ದಾವ ಆದ್ರ, ನಿಂದೂ ಬರತ್ತ ಹೆಸರು ಪೇಪರ್ ಒಳಗ’.

‘ನಿ ಬಶೀ ಒಳಗ ಹಾಕೊಂಡ್ ಕುಡಿ ಛಾ, ಅಪ್ಪನ ಗತೆ ಮಾಡಬ್ಯಾಡ’. ಇಬ್ಬರಿಗೂ ಛಾ ಕೊಡುತ್ತ ಈರಣ್ಣನಿಗೆ ಹೇಳಿದಳು ಮಾದೇವಿ.

ಸಂಜೆಯಾಯಿತು. ಹಸಿರು ಬಣ್ಣದ ಹಳೇ ಕಬ್ಬಿಣದ ಟ್ರಂಕ್ ಅನ್ನು ಹರಡಿಕೊಂಡು ಕುಂತಿದ್ದ ಶಿವಪ್ಪ. ಮಾದೇವಿಯ ಒಲೆಯ ಹೊಗೆಯು ತೆರೆದ ಬಾಗಿಲಿನಿಂದ ಒಳ ಬರುತ್ತಿದ್ದ ಸಂಜೆಯ ಸೂರ್ಯನ ಕಿರಣಗಳನ್ನು ಪರೀಕ್ಷಿಸಿ ಮನೆಯೊಳಗೆ ಬಿಡುತ್ತಿತ್ತು. ಅದನ್ನು ಒಂದೇ ಗೈರು ಹಾಜರಿನ ದೃಷ್ಟಿಯಿಂದ ನೋಡುತ್ತ ಹಳೆ ನೆನಪುಗಳಲ್ಲಿ ಕಳೆದುಹೋಗುತ್ತಿದ್ದ ಶಿವಪ್ಪ.

**********

‘ಪೇಪರ್!!

‘ಟ್ರಿನ್.. ಟ್ರಿನ್….. ‘

ಸೈಕಲ್ ಘಂಟೆಯನ್ನು ಬಾರಿಸುತ್ತ ಕೈಯಲ್ಲಿದ್ದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯನ್ನು ಹಳದಿ ಕಾಂಪೌಂಡ್ ಒಳಗೆ ಎಸೆಯುತ್ತ ಶಿವೂ ಮುಂದೆ ಸಾಗಿದ್ದ.

ಶಿವಪ್ಪನಿಗೆ ಆಗ ೧೪ ವರ್ಷ ವಯಸ್ಸು. ಊರಲ್ಲಿನ ಶಾಲೆಯನ್ನು ಬಿಟ್ಟು ಬಂದು ಬೆಂಗಳೂರು ಸೇರಿದ್ದ. ಅಮ್ಮ ತೀರಿಕೊಂಡ ಮೇಲೆ ಅಪ್ಪ ಇನ್ನೊಂದು ಮದುವೆ ಆಗಿದ್ದ. ಆ ಮಲತಾಯಿಯ ದ್ವಂದ್ವ ಪ್ರೀತಿಯ ಮುಂದೆ ಸಂಕುಚಿತಗೊಂಡ ಅವನ ಮನಸ್ಸು ಆಕಾಶವನ್ನು ಬಯಸಿತ್ತು. ಆ ವಯಸ್ಸಲ್ಲೇ ಬರವಣಿಗೆಯನು ಮೈಗೂಡಿಸಿಕೊಂಡು, ಆಗಲೇ ಹಳ್ಳಿಯಲ್ಲಿ ಹೆಸರಾಗಿದ್ದ ಹುಡುಗ ಅವನು. ಹೊಸ ಅವ್ವನ ಕಾಟ ತಾಳದೆ ನೇಕಾರ ಶಂಭಯ್ಯನ ಜೊತೆ ಸೇರಿ ಅಪ್ಪನಿಗೆ ಹೇಳಿಯೇ ಊರು ಬಿಟ್ಟಿದ್ದ. ಅವಳ ನಡಾವಳಿಗಳನ್ನು ಕಂಡು ಗೊತ್ತಿದ್ದ ಅಪ್ಪನು ತಡೆಯದೇ ಮಗನನ್ನು ಬೀಳ್ಕೊಟ್ಟಿದ್ದ.

ಸಂಜೆಯಾಯಿತು. ಹಸಿರು ಬಣ್ಣದ ಹಳೇ ಕಬ್ಬಿಣದ ಟ್ರಂಕ್ ಅನ್ನು ಹರಡಿಕೊಂಡು ಕುಂತಿದ್ದ ಶಿವಪ್ಪ. ಮಾದೇವಿಯ ಒಲೆಯ ಹೊಗೆಯು ತೆರೆದ ಬಾಗಿಲಿನಿಂದ ಒಳ ಬರುತ್ತಿದ್ದ ಸಂಜೆಯ ಸೂರ್ಯನ ಕಿರಣಗಳನ್ನು ಪರೀಕ್ಷಿಸಿ ಮನೆಯೊಳಗೆ ಬಿಡುತ್ತಿತ್ತು. ಅದನ್ನು ಒಂದೇ ಗೈರು ಹಾಜರಿನ ದೃಷ್ಟಿಯಿಂದ ನೋಡುತ್ತ ಹಳೆ ನೆನಪುಗಳಲ್ಲಿ ಕಳೆದುಹೋಗುತ್ತಿದ್ದ ಶಿವಪ್ಪ.

‘ಏನ್ ಮರೀ.. ಪ್ರಜಾವಾಣಿ ಇದೆಯಾ??’ ದಾರಿಯಲ್ಲಿ ಒಬ್ಬ ಕನ್ನಡಕ ಹಾಕಿದ ಅಂಕಲ್ ಕೇಳಿದರು.

‘ಹುಂ ಸರ್! ಇದೇ. ಒಂದೂವರೆ ರುಪಾಯಿ’. ಪೇಪರ್ ಕೊಟ್ಟು, ದುಡ್ಡನ್ನು ತನ್ನ ಅಂಗಿಯ ಕಿಸೆಗೆ ಹಾಕಿ ಮತ್ತೆ ಸೈಕಲ್ ತುಳಿದ.

ಟ್ರಿನ್.. ಟ್ರಿನ್…

ಬಸವೇಶ್ವರ ನಗರದ ಒಂದು ಗಲ್ಲಿಯ ಪೇಪರ್ ಡೆಲಿವರಿ ಜವಾಬ್ದಾರಿ ಶಿವುನದಾಗಿತ್ತು. ಬೆಳಿಗ್ಗೆ ಐದು ಘಂಟೆಗೆ ಎಲ್ಲ ಪೇಪರ್ ಹೊಂದಿಸಿ, ತುಸು ಹೊತ್ತು ಅದರಲ್ಲಿನ ಸಮಾಚಾರಗಳಲ್ಲಿ ತಿಳಿದಷ್ಟು ಓದಿ ಆಮೇಲೆ ಪೇಪರ್ ಹಾಕಲು ಹೋಗುವುದು ಅವನ ನಿತ್ಯದ ರೂಢಿ. ವಿಜಯ ಕರ್ನಾಟಕದ ‘ಆಣಿ ಮುತ್ತು ‘, ಟೈಮ್ಸ್ ಆಫ್ ಇಂಡಿಯಾ ದ ‘ದಿ ಸ್ಪೀಕಿಂಗ್ ಟ್ರೀ’, ಉದಯವಾಣಿಯ ವಸಂತ ಶೆಟ್ಟಿ ಅಂಕಣಗಳು ಹೀಗೆ ಕೆಲವುಗಳನ್ನು ತಪ್ಪದೇ ಓದುತ್ತಿದ್ದ.

ಹಳ್ಳಿಯಲ್ಲಿನ ಚಿನ್ನೂರು ಮಾಸ್ತರರು ‘ಛಂದ ಬರೀತಿಯಲ್ಲೋ ಶಿವೂ, ಪೇಪರ್ ನೊಳಗ ಹಾಕ್ಸೋಣ ತಡಿ ಒಮ್ಮೆ’ ಅಂತ ಹೇಳಿದ್ದನ್ನು ದಿನವೂ ನೆನಪು ಮಾಡಿಕೊಳ್ಳುತ್ತಿದ್ದ. ೨೦೦ ರೂ ಮಾಶಾಸನ ಕೊಡುವ ಹಾಲು ಮಾರುವ ಕೆಲಸವನ್ನು ಬಿಟ್ಟ ಅವನು, ೧೫೦ ರುಪಾಯಿ ಕೊಡುವ ಪೇಪರ್ ಹಾಕುವ ಕೆಲಸವನ್ನು ಮಾಡಲು ಕಾರಣವೂ ಇದೇ ಬರವಣಿಗೆಯ ಆಸಕ್ತಿಯಾಗಿತ್ತು. “ನಾನೂ ಒಂದಿನ ಲೇಖಕ ಆಗ್ತೀನಿ, ಪೇಪರ್ ಗಳಲ್ಲಿ ನನ್ನ ಅಂಕಣವೂ ಬರುತ್ತೆ” ಎಂದುಕೊಳ್ಳುತ್ತಿದ್ದ. ಪೇಪರ್ ಹಾಕುವಾಗ ಸುತ್ತ ಮುತ್ತಲಿನ ಜನರನ್ನು ಗಮನಿಸುತ್ತಿದ್ದ, ಆ ವಯಸ್ಸಿನಲ್ಲೇ ತನ್ನ ಬರವಣಿಗೆಗೆ ಬೇಕಾದ ಪಾತ್ರಗಳನ್ನೂ ತನಗರಿವಿಲ್ಲದಂತೆಯೇ ಹುಡುಕುತ್ತಿದ್ದನೇನೋ. ಮನಸ್ಸು ಸದಾ ಜಾಗೃತವಾಗಿರುತ್ತಿತ್ತು.

ದಿನಾ ಒಂದೇ ಜಾಗದಲ್ಲಿ ಪೇಪರ್ ಹಾಕುತ್ತಿದ್ದ ಕಾರಣ, ಆ ಜಾಗದ ಬಹಳ ಜನರ ಪರಿಚಯವೂ ಅವನಿಗಿತ್ತು. ಕೆಲವರ ಮುಖ ಪರಿಚಯ, ಕೆಲವರ ನಗು ಪರಿಚಯ, ಕೆಲವರ ಧ್ವನಿ ಪರಿಚಯ, ಇನ್ನೂ ಕೆಲವರ ಒಡನಾಟವೂ ಇತ್ತು. ರೂಫಿನ ಮನೆಯ ಅಂಕಲ್, ಹಳದಿ ಕಾಂಪೌಂಡ್ ಚೈತ್ರಕ್ಕ, ವಾಕಿಂಗ್ ಮೇಷ್ಟ್ರು, ಉದ್ದ ಸ್ವೆಟರಿನ ಮಿಲ್ಟ್ರಿ ಅಜ್ಜ, ಹೀಗೆ ಕೆಲ ಪರಿಚಯಗಳಿಗೆ ಹೀಗೆಲ್ಲ ಹೆಸರುಗಳನ್ನಿಟ್ಟುಕೊಂಡಿದ್ದ. ದೊಡ್ಡ ಮನೆ ಆಂಟಿ ಮಾತ್ರ ಇವನಿಗೆ ಸಾಕಷ್ಟು ಪ್ರೀತಿಯನ್ನು ಕೊಡುವ ಜೊತೆಗೇ, ಅವನನ್ನು ಮಾತಾಡಿಸಿ, ತಿನ್ನಲು ಏನಾದರೊಂದು ತಿಂಡಿ ತಿನಿಸನ್ನೂ ಕೊಡುತ್ತಿದ್ದರು. “ ಶಿವೂ, ನಿನ್ನೆ ಜಾಮೂನು ಮಾಡಿದ್ದೆ, ತಗೋ, ನಿಮ್ಮ ಅಂಕಲ್ ನಿನ್ನೆ ತಂದಿದ್ರು” ಅಂತ ಬಿಸ್ಕೆಟ್, ಹೀಗೆ ಏನಾದರು ಕೊಡುತ್ತಲೇ ಇದ್ದರು. ಅದಕ್ಕೇ ಇಲ್ಲದ ಅವ್ವನ ಪ್ರೀತಿಯ ಕಿರುನೋಟವು ಅವರಲ್ಲಿ ಕಂಡಂತಾಗಿ ಅಷ್ಟರಲ್ಲೇ ಖುಷಿಪಟ್ಟುಕೊಂಡು ದಿನಾಲು ದೊಡ್ಮನೆ ಆಂಟಿಯನ್ನು ಮಾತನಾಡಿಸಿಯೇ ಶಿವು ಮುಂದಕ್ಕೆ ಹೋಗುತ್ತಿದ್ದನು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಜನರನ್ನು ದೂರಂದಿಂದಲೇ ಗಮನಿಸುತ್ತಿದ್ದ ಶಿವೂ, ತನ್ನ ಕಲ್ಪನೆಗೆ ತಕ್ಕಂತೆ ಒಬ್ಬೊಬ್ಬರಿಗೂ ಒಂದೊಂದು ಕಥೆಯನ್ನು ತನ್ನ ಮನದಲ್ಲೇ ಹೊಂದಿಸಿಕೊಂಡಿದ್ದ. “ವಾಕಿಂಗ್ ಅಂಕಲ್ ನಡ್ಕೊಂಡೆ ಹೋಗ್ತಾರೆ, ಆದರೆ ಅವರ ಹೆಂಡತಿ ಕಾರ್ ನಲ್ಲಿ ಓಡಾಡ್ತಾರೆ, ನಮ್ಮ ಎರಡನೇ ಅಮ್ಮನ ಥರ ಇರ್ಬೇಕು ಆ ಆಂಟಿ. ಚೈತ್ರಕ್ಕ ಪಾಪ, ಯಾವಾಗಲು ಓದ್ತಾ ಇರ್ತಾಳೆ, ಅವರಮ್ಮ ಆಡೋಕೆ ಬಿಡಲ್ಲ ಅನ್ಸತ್ತೆ ಅವಳನ್ನ. ದೊಡ್ಡ ಮನೆ ಆಂಟಿ ತುಂಬಾ ಒಳ್ಳೇವ್ರು, ಅವರ ಅಂಕಲ್ ಯಾವಾಗಲು ಕುಂತು ಪೇಪರ್ ಓದ್ತಾ ಇರ್ತಾರೆ ಪಾಪ ಕಾಲಿಗೆ ಏನಾದರೂ ಆಗಿರಬೇಕೋ ಏನೋ!, ಅವರ ನಾಯಿ ಬಡ್ಡಿ ಮಗಂದು ನನ್ನ ನೋಡಿ ಯಾವಾಗ್ಲೂ ಬೊಗಳುತ್ತೆ.” ಹೀಗೆ ಕೆಲುವು ಊಹೆಗಳು ಅವನ ತಲೆ ಮತ್ತು ಮನಸ್ಸು ಎರಡರಲ್ಲೂ ತುಂಬಿರುತ್ತಿದ್ದವು. ಅಷ್ಟೇ ಅಲ್ಲ, ಎಂಟನೇ ಮೇನ್ ನಲ್ಲಿನ ರಿಟೈರ್ಡ್ ಕಾಲೇಜ್ ಪ್ರೊಫೆಸರ್ ಪರಿಚಯವೂ ಹೇಗೋ ಆಗಿಹೋಗಿ, ದಿನವೂ ಅವರಿಗೆ ತನ್ನ ಕವನ-ಕಥೆಗಳನ್ನ ಓದಿ ಹೇಳುತ್ತಿದ್ದ. ಅವರು ನಕ್ಕು ದುಬ್ಬ ಚಪ್ಪರಿಸಿ ‘ಭಲೇ’ ಎಂದರೆ ಹಿರಿ ಹಿರಿ ಹಿಗ್ಗುತ್ತಿದ್ದ. ಅವರೂ ಇವನ ಬರವಣಿಗೆಗಳನ್ನು ಪತ್ರಿಕೆಯವರಿಗೆ ಪೋಸ್ಟ್ ಮಾಡಿಸುತ್ತಿದ್ದರು. ತನ್ನ ಹೆಸರು ಪತ್ರಿಕೆಯಲ್ಲಿ ಬಂದರೆ ಹಳ್ಳಿಯಲ್ಲಿನ ಅಪ್ಪ ಎಷ್ಟು ಖುಷಿಪಡುತ್ತಾನೆ, ಚಿನ್ನೂರು ಮಾಸ್ತರರು ಶಾಲೆಯಲ್ಲಿ ತನ್ನ ವರ್ಗದ ಎಲ್ಲರಿಗೂ ಓದಿ ಹೇಳುತ್ತಾರೆ, ಸತ್ತು ಸ್ವರ್ಗದಲ್ಲಿರೋ ಅವ್ವ ಅಲ್ಲಿಂದಲೇ ಖುಷಿಯಲ್ಲಿ ಆಕಾಶದ ತುಂಬೆಲ್ಲ ಹರಡುತ್ತಾಳೆ ಅಂತೆಲ್ಲ ಯೋಚಿಸುತ್ತಿದ್ದ.

“ನಾನೂ ಒಂದಿನ ಲೇಖಕ ಆಗ್ತೀನಿ, ಪೇಪರ್ ಗಳಲ್ಲಿ ನನ್ನ ಅಂಕಣವೂ ಬರುತ್ತೆ” ಎಂದುಕೊಳ್ಳುತ್ತಿದ್ದ. ಪೇಪರ್ ಹಾಕುವಾಗ ಸುತ್ತ ಮುತ್ತಲಿನ ಜನರನ್ನು ಗಮನಿಸುತ್ತಿದ್ದ, ಆ ವಯಸ್ಸಿನಲ್ಲೇ ತನ್ನ ಬರವಣಿಗೆಗೆ ಬೇಕಾದ ಪಾತ್ರಗಳನ್ನೂ ತನಗರಿವಿಲ್ಲದಂತೆಯೇ ಹುಡುಕುತ್ತಿದ್ದನೇನೋ. ಮನಸ್ಸು ಸದಾ ಜಾಗೃತವಾಗಿರುತ್ತಿತ್ತು.

ಆವತ್ತೊಂದಿನ ಎಂದಿನಂತೆ ಪೇಪರ್ ಹಾಕಲು ದೊಡ್ಡ ಮನೆ ಹತ್ತಿರ ಹೋದಾಗ ಸೈಕಲ್ ಘಂಟೆಯನ್ನು ಬಾರಿಸಿ ಆಂಟಿ ಬರುವುದಕ್ಕಾಗಿ ಕಾದು ನಿಂತ. ಆಂಟಿ ಬರದೇ ಹೋದಾಗ ಕಾಂಪೌಂಡ್ ಒಳಗೆ ಮಲಗಿದ್ದ ನಾಯಿಯ ಮೇಲೆ ಪೇಪರ್ ಎಸೆದರೆ ಅದು ತನ್ನ ನೋಡಿ ಬೊಗಳಿ ಆ ಸದ್ದಿಗೆ ಆಂಟಿ ಬರಬಹುದು ಎಂದು ಯೋಜನೆ ಮಾಡಿ, ಸರಿಯಾಗಿ ಅದಕ್ಕೆ ಗುರಿ ಇಟ್ಟು ಜೋರಾಗಿ ಪೇಪರ್ ಎಸೆದ. ನಾಯಿ ಮಿಸುಗಲಿಲ್ಲ. “ಹಾಂ?! ಇದೇನಪ್ಪ.. ಬಡ್ಡಿ ಮಗಂದು ಸುಮ್ನೆ ಇದ್ಯಲ್ಲ ಇವತ್ತು.” ಎರಡು ನಿಮಿಷ ಕಾದು ಸೈಕಲ್ ನಿಂದ ಕೆಳಗಿಳಿದು, ಮನೆಯತ್ತ ಹೆಜ್ಜೆ ಹಾಕಿದ. ಆ ಮನೆ ಬರುವುದರೊಳಗೆ ಆಂಟಿ ಕೊಡುವ ತಿನಿಸುಗಳ ನೆನೆದು ತುಸು ಹೊಟ್ಟೆ ಹಸಿವು ತಂತಾನೇ ಆಗಿರುತ್ತಿತ್ತು, ಅದೇ ಆಸೆಯಿಂದಲೋ ಅಥವಾ ಆಂಟಿಯನ್ನು ಮಾತನಾಡಿಸಿ ಹೋಗಬೇಕೆಂದೋ ನಾಯಿಯನ್ನು ನೋಡುತ್ತ ಅದರಿಂದ ದೂರವನ್ನು ಕಾಯ್ದು ಗೋಡೆ ಹಿಡಿದುಕೊಂಡು ಕಾಂಪೌಂಡ್ ಒಳಗೆ ಹೋಗಿ ಬಾಗಿಲು ಇಣುಕಿದ. ಯಾರೂ ಕಾಣಲಿಲ್ಲ. ಪಡಸಾಲಿ (ಡ್ರಾಯಿಂಗ್ ರೂಂ) ನಿಶಬ್ದವಾಗಿತ್ತು. ಮತ್ತೆ ‘ಆಂಟಿ’ ಎಂದು ಜೋರಾಗಿ ಕೂಗಿದ, ಅಷ್ಟೊತ್ತಿಗೆ ಅಲ್ಲಿದ್ದ ಫೋನ್ ರಿಂಗಣಗೊಂಡಿತು. ಆ ಸದ್ದಿಗೆ ಬರಬಹುದು ಎಂದು ಊಹಿಸಿದ!.. ಆದರೆ ಒಂದು ಸುತ್ತು ಕರೆದು ಫೋನ್ ಕೂಡ ಸುಮ್ಮನಾಯಿತು. ಆಗವನಿಗೆ ಯಾಕೋ ಅನುಮಾನ ಶುರುವಾಗಿ ಯಾರದರೂ ಬೈದರೂ ಪರವಾಗಿಲ್ಲ ಎಂದು ಪಡಸಾಲಿಯ ಒಳಗಡೆ ಹೋಗಿ ಆಂಟಿಯನ್ನು ಕೂಗುತ್ತಲೇ ರೂಂ ನತ್ತ ನಡೆದ. ರೂಂ ನಲ್ಲಿ ಬೆಡ್ ನ ಕೆಳಗೆ ನೋಡಿದರೇ ಏನೋ ಅನಾಹುತ ಘಟಿಸಿ, ಆಂಟಿ ನೆಲಕ್ಕೆ ಬಿದ್ದಿದ್ದಾರೆ. ಅವರ ಕುತ್ತಿಗೆಯಿಂದ ರಕ್ತ ಹರಿಯುತ್ತಿದೆ. ಆಗಲೇ ರಕ್ತ ಅರ್ಧ ರೂಂ ನ ತುಂಬೆಲ್ಲ ಹರಡಿದೆ. ಒಂದುಕ್ಷಣ ಏನು ಮಾಡಬೇಕೆಂದು ತಿಳಿಯದೇ ಜೋರಾಗಿ ಕಿರುಚಿಕೊಂಡು ಅಲ್ಲಿ ಕ್ಷಣವೂ ನಿಲ್ಲಲಾಗದೆ ಶರವೇಗದಲ್ಲಿ ಹೊರ ಓಡಿಬಂದ. ಕಾಂಪೌಂಡ್ ಆಚೆ ನಿಂತು ಜೋರು ಮತ್ತಷ್ಟು ಜೋರಾಗಿ ಕಿರುಚಿ ವಿಚಿತ್ರವಾಗಿ ಅಳತೊಡಗಿದ.. ಅವನ ಮೈಯೆಲ್ಲ ಗದಗದ ನಡುಗುತ್ತಿತ್ತು.

ಹದಿನೈದೇ ನಿಮಿಷದಲ್ಲಿ ದೊಡ್ಡ ಮನೆಯ ತುಂಬಾ ಜನಜಂಗುಳಿ. ಅದೆಷ್ಟೋ ಬಂಧುಗಳು, ಬೈಕ್, ಕಾರ್ ಗಳು, ಪೊಲೀಸರು, ಪತ್ರಿಕೆಯವರು, ಟಿವಿ ಚಾನೆಲ್ ನವರು ಅಲ್ಲಿ ಸೇರಿದ್ದರು. ಪಕ್ಕದ ಮನೆಯ ರಾವ್ ಅಂಕಲ್ ಶಿವೂನನ್ನು ತಮ್ಮ ಮನೆಯೊಳಗೇ ಕೂರಿಸಿ ನೀರು, ಬಿಸ್ಕೆಟ್ ಅನ್ನು ಕೊಟ್ಟು ಸಮಾಧಾನ ಮಾಡುತ್ತಿದ್ದರು. ಆ ಕಿರಿ ವಯಸ್ಸಿಗೆ ಜೀರ್ಣವಾಗದ ದೃಶ್ಯವನ್ನು ನೋಡಿ ಧೃತಿಗೆಟ್ಟು ಕಂಗಾಲಾದ ಶಿವೂ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ನೆರೆದ ಜನರೆಲ್ಲ ಬೊಟ್ಟು ಮಾಡಿ “ಅದೇ ಹುಡುಗನಂತೆ ಮೊದಲು ಶಾರದಮ್ಮನವರನ್ನು ನೋಡಿದ್ದು” ಎಂದು ಪರಸ್ಪರ ಹೇಳಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಕೆಲ ಪತ್ರಿಕೆಯವರು ರಾವ್ ಅಂಕಲ್ ಸಹಾಯ ಕೇಳಿಬಂದು ಶಿವೂನನ್ನು ಮಾತನಾಡಿಸತೊಡಗಿದರು. ಹೆದರಿದ ಶಿವೂನನ್ನು ಆ ಮನೆಯ ಆಂಟಿ ಬೆವರು ಒರೆಸುತ್ತ ಅವರಿಗೆ ಉತ್ತರಿಸುವಲ್ಲಿ ಸಹಕರಿಸುತ್ತಿದ್ದರು. ಶಿವೂ ರಿಪೋರ್ಟರ್ ಗಳ ಪ್ರಶ್ನೆಗಳಿಗೆ ನಡುಗುತ್ತಲೇ ತೋಚಿದಷ್ಟು ಉತ್ತರಿಸಿದ. ಒಂದು ಘಂಟೆಯ ನಂತರ ಆ ಜನಜಂಗುಳಿ ಮಾಯವಾಯಿತು. ಅಲ್ಲಿ ನೆರೆದಿದ್ದ ಪೊಲೀಸರು ಸತ್ತು ಬಿದ್ದಿದ್ದ ಆ ದೊಡ್ಡ ಮನೆ ನಾಯಿಯನ್ನು ಸಾಗಿಸುತ್ತಿದ್ದಿದ್ದ ದೃಶ್ಯ ಕಿಟಕಿಯಿಂದ ಶಿವೂನ ಕಣ್ಣಿಗೆ ಬಿದ್ದಿತ್ತು. ಯಾಕದು ಇವತ್ತು ಬೊಗಳಲಿಲ್ಲ ಎಂಬ ಅವನ ಪ್ರಶ್ನೆಗೆ ಉತ್ತರ ತಿಳಿಯಿತು. ಆನಂತರ ಶಿವೂನನ್ನು ತಕ್ಕ ಮಟ್ಟಿಗೆ ವಿಚಾರಿಸಿ ಪೊಲೀಸರು ತಮ್ಮ ಜೀಪಿನಲ್ಲೇ ಅವನನ್ನು ಶಂಭಯ್ಯನ ರೂಮಿಗೆ ತಂದು ಬಿಟ್ಟರು. ಶಿವೂ ಅಳುತ್ತಳುತ್ತ ಶಂಭಯ್ಯನ್ನನ್ನು ಅಪ್ಪಿಕೊಂಡವ ಎಷ್ಟು ಹೊತ್ತಾದರೂ ಬಿಟ್ಟಿರಲೇ ಇಲ್ಲ.

ಮರುದಿನ ಶಿವೂ ಪೇಪರ್ ಹಾಕಲು ಹೋಗಲಿಲ್ಲ, ಶಂಭಯ್ಯನ ನೇಯುವ ಕೆಲಸದಲ್ಲೇ ತುಸು ಸಹಾಯ ಮಾಡಿದ. ಆವತ್ತಿನ ಪೇಪರ್ ತಂದ ಶಂಭಯ್ಯ ಶಿವೂಗೆ ತೋರಿಸಿದ. ಪೇಪರ್ ನ ಮೊದಲನೇ ಪುಟದ ಕೆಳಭಾಗದಲ್ಲಿ ದೊಡ್ಡ ಮನೆಯ ಫೋಟೋ ಇತ್ತು, ಅದರ ಮೂಲೆಯಲ್ಲಿ ಪಾಸ್ ಪೋರ್ಟ್ ಸೈಜ್ ನಲ್ಲಿ ಶಿವೂ ಫೋಟೋ ಸಹ ಇತ್ತು. ‘ನಸುಕಿನಲ್ಲೇ ಭಾರಿ ದರೋಡೆ!’ ಎಂದು ದೊಡ್ಡಕ್ಷರದಲ್ಲಿ ಬರೆದಿತ್ತು. ಹಿಂದಿನ ಪುಟದಲ್ಲಿ ಹುಚ್ಚಿಯಂತೆ ಬಿದ್ದಿದ್ದ ಆಂಟಿಯ ಫೋಟೋ ಕಂಡು ಹೆದರಿದ ಶಿವು. ‘ಲೇ ಶಿವು .. ಪೇಪರ್ ಒಳಗ ಹೆಸರು ಬರಬೇಕು ಅಂತ ಯಾವಾಗಲೂ ಅಂತಿದ್ದಿಲಾ.. ನೋಡ್ ಇವತ್ತ ಬಂದೆತಿ. ಫೋಟೋನೂ ಹಾಕ್ಯರ ಮಳ್ಳ-ಸೂಳೆಗಂಡ್ರು’ ಅಂತ ಹೇಳಿ ನಕ್ಕ ಶಂಭಯ್ಯ. ನಗುಬಾರದೆ ಶಿವೂ ಆ ಪೇಪರ್ ಅನ್ನು ಬದಿಗೆ ಇಟ್ಟು ಶಂಭಯ್ಯನ ಹತ್ತಿರಕ್ಕೆ ಸರಿದ. ಶಂಭಯ್ಯ ಶಿವೂನ ತಲೆ ಸವರಿ ಮತ್ತೆ ಹಗ್ಗ ನೇಯತೊಡಗಿದ.

ಮಾದೇವಿಯ ಪಾತ್ರೆಗಳ ಸದ್ದಿಗೆ ಆ ಹಳೆಯ ಟ್ರಂಕ್ ನಿಂದ ಹೊರಬಂದ ಶಿವಪ್ಪನಿಗೆ ಅಂಗಳದಲ್ಲಿ ಆಡುತ್ತಿದ್ದ ಈರಣ್ಣನ ಸದ್ದು ಕೇಳಿತು. ಕೈಯ್ಯಲ್ಲಿ ಗಾಳಿಗೆ ತಿರುಗುವ ಬಣ್ಣದ ಚಕ್ರವ ಹಿಡಿದು ಓಡುತಿದ್ದ ಈರಣ್ಣ ಬಾಯಿಯಿಂದ ಸದ್ದು ಮಾಡುತಿದ್ದ…’ಜೀೕೕೕೕೕೕೕೕ………’