ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಡಬೇಕು ಅನ್ನುವ ಮೆಸೇಜುಗಳನ್ನಾ ಫಾರ್ವರ್ಡ್ ಮಾಡುವುದರಲ್ಲೇ ಕಾಲ ಕಳೆವ ನಮ್ಮಗಳ ಎಷ್ಟು ಮನೆಗಳಲ್ಲಿ ಇಂದು ಹಿತ್ತಲಗಳು ಉಳಿದುಕೊಂಡಿವೆ? ಯೋಚಿಸಬೇಕಾದ ವಿಷಯ. ಹಸಿವು ತಾಳದೆ ಮಣ್ಣು ತಿಣ್ಣುವ ಮಕ್ಕಳು, ಹಸಿವು ತಾಳದೆ ಹೋದ ಜೀವಗಳು, ಸಾವುಗಳು ಪ್ರತಿಕ್ಷಣ ತಲ್ಲಣಗೊಳಿಸುತ್ತವೆ. ಹೃದಯ ಇರುವ ಯಾವನೂ ಗಾಬರಿಯಾಗುವಷ್ಟು ಹಸಿವು. ಉಪವಾಸ ಮಾಡುತ್ತಿದ್ದ ಭೂಮಿಯಲ್ಲಿ ಸಾವಾಗುವಷ್ಟರ ಮಟ್ಟಿಗಿನ ಹಸಿವು. ಇದು ನಾವು ಎದುರಿಸುತ್ತಿರುವ ಗಂಭೀರ ಸಮಸ್ಯೆ. ಹತ್ತು ಭಾರತೀಯರಲ್ಲಿ ಕನಿಷ್ಠ ಇಬ್ಬರಾದರೂ ತೀವ್ರ ಹಸಿವಿನಿಂದ ಬಳಲುತ್ತಿರುವ ಪರಿಸ್ಥಿತಿ ಇದೆ. ಇನ್ನು ಭೂಮಿಯ ಅಷ್ಟು ಜೀವಕುಲದ ಪೈಕಿ ಸರಾಸರಿ ಅರ್ಧದಷ್ಟು ಪ್ರಾಣಗಳು ಹಸಿವನ್ನು ಭೀಕರವಾಗಿ ಎದುರಿಸುತ್ತ ಇಲ್ಲವಾಗುತ್ತಿವೆ.
ಕೃಷ್ಣ ದೇವಾಂಗಮಠ ಅಂಕಣ

 

 

ಹಸಿವೆಂಬ ಹೆಬ್ಬಾವು ಬಸುರ ಹಿಡಿದರೆ ವಿಷವೇರಿತ್ತಯ್ಯ ಆಪಾದ ಮಸ್ತಕಕ್ಕೆ
ಹಸಿವಿಗನ್ನವನ್ನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗೆ
ಆತನೇ ಗಾರುಡಿಗ ಕಾಣಾ ! ರಾಮನಾಥ //

ಹಸಿವಿನ ನೇರ ಅನುಭವ ಇರುವ ಯಾವ ಮನುಷ್ಯನಿಗೂ ಹಸಿವು ಕಂಡರೆ ಅನ್ನ ನೀಡುವ ಗುಣ ಪ್ರಾಪ್ತವಾಗುತ್ತದೆ. ಹಸಿವು ನಮ್ಮ ಸುತ್ತ ಎಲ್ಲೆಲ್ಲೂ ತಾಂಡವವಾಡುತ್ತಿದೆ. ನಾವು ಅದಕ್ಕೆ ಎಷ್ಟು ಒಗ್ಗಿ ಹೋಗಿದ್ದೇವೆಂದರೆ ನಮ್ಮ ಬಡತನ ಅದರ ಚೀರಾಟದ ವಿರಾಟ ಸ್ವರೂಪವನ್ನು ಇನ್ನಿಲ್ಲದಂತೆ ಮರೆತು ಬರೀ ದುಡಿದುಡಿದು ಸಾಯುವ ಹಾಗೆ ಮಾಡಿದೆ. ನಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ಸವಾಲಾದಾಗ ಕಿತ್ತು ಕಚ್ಚಾಡಿ ತಿನ್ನುವ ರಣಹಸಿವು ಕಾಡುವಾಗ ಇನ್ನೊಬ್ಬರ ಕುರಿತು ಯೋಚಿಸುವುದೂ ಅಸಾಧ್ಯವಾದ ಹಾಗೆ ಕಾಣುತ್ತದೆ.

ಅಂತರ್ಜಾಲದಲ್ಲಿ ಸಿಕ್ಕಿ ಬಿದ್ದಂತಿರುವ ನಾವುಗಳು ರೈಲ್ವೆ ನಿಲ್ದಾನದ ಹಳಿಯಲ್ಲಿ ಬಿದ್ದ ಅನ್ನ ತಿನ್ನುವ ಮುದಿ ಜೀವವನ್ನ , ಕಸದ ತೊಟ್ಟಿಯಲ್ಲಿ ಬಿಸಾಡಿದ ನಾಯಿ, ಹಂದಿಗೆ ಆಹಾರವಾಗಬೇಕಿದ್ದ ಅನ್ನವನ್ನ ಮಕ್ಕಳು, ಹೆಂಗಸರು ಹಸಿವು ತಾಳದೆ ತಿನ್ನುವ ವಿಡಿಯೋಗಳನ್ನಾ ನೋಡಿ ಮರುಕಪಡುವಷ್ಟರ ಮಟ್ಟಿಗಿನ ಮಾತ್ರದ ಕರುಣೆ ನಮ್ಮಲ್ಲಿ ಉಳಿದು ಬಿಟ್ಟ ಹಾಗೆ ಕಾಣುತ್ತದೆ. ಹಸಿದು ಕೂಗಿ ಅಳುವ ಮಗುವಿಗೆ ತುತ್ತು ನೀಡುವ ತಾಯ್ಗುಣ ನಮ್ಮಲ್ಲಿ ಗಟ್ಟಿಯಾಗಿ ಬೇರು ಬಿಡಬೇಕಾಗಿದೆ.

ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಡಬೇಕು ಅನ್ನುವ ಮೆಸೇಜುಗಳನ್ನಾ ಫಾರ್ವರ್ಡ್ ಮಾಡುವುದರಲ್ಲೇ ಕಾಲ ಕಳೆವ ನಮ್ಮಗಳ ಎಷ್ಟು ಮನೆಗಳಲ್ಲಿ ಇಂದು ಹಿತ್ತಲಗಳು ಉಳಿದುಕೊಂಡಿವೆ? ಯೋಚಿಸಬೇಕಾದ ವಿಷಯ. ಹಸಿವು ತಾಳದೆ ಮಣ್ಣು ತಿಣ್ಣುವ ಮಕ್ಕಳು, ಹಸಿವು ತಾಳದೆ ಹೋದ ಜೀವಗಳು, ಸಾವುಗಳು ಪ್ರತಿಕ್ಷಣ ತಲ್ಲಣಗೊಳಿಸುತ್ತವೆ. ಹೃದಯ ಇರುವ ಯಾವನೂ ಗಾಬರಿಯಾಗುವಷ್ಟು ಹಸಿವು. ಉಪವಾಸ ಮಾಡುತ್ತಿದ್ದ ಭೂಮಿಯಲ್ಲಿ ಸಾವಾಗುವಷ್ಟರ ಮಟ್ಟಿಗಿನ ಹಸಿವು. ಇದು ನಾವು ಎದುರಿಸುತ್ತಿರುವ ಗಂಭೀರ ಸಮಸ್ಯೆ. ಹತ್ತು ಭಾರತೀಯರಲ್ಲಿ ಕನಿಷ್ಠ ಇಬ್ಬರಾದರೂ ತೀವ್ರ ಹಸಿವಿನಿಂದ ಬಳಲುತ್ತಿರುವ ಪರಿಸ್ಥಿತಿ ಇದೆ. ಇನ್ನು ಭೂಮಿಯ ಅಷ್ಟು ಜೀವಕುಲದ ಪೈಕಿ ಸರಾಸರಿ ಅರ್ಧದಷ್ಟು ಪ್ರಾಣಗಳು ಹಸಿವನ್ನು ಭೀಕರವಾಗಿ ಎದುರಿಸುತ್ತ ಇಲ್ಲವಾಗುತ್ತಿವೆ.

ತನ್ನ ಸಂಸ್ಕೃತಿಗೆ ಅನುಗುಣವಾಗಿ ಮತ್ತು 2ಜಿ 3ಜಿ 4ಜಿ ಪೀಳಿಗೆಗಳು ಬದಲಾಗುತ್ತ ಹೋಗುವಂತೆ ತನ್ನ ಅಗತ್ಯತೆಗಳಿಗೆ ಹೊಂದುವಂತ ಆಹಾರ ವ್ಯವಸ್ಥೆಯನ್ನು ಆಯಾ ದೇಶಗಳು, ಆಯಾ ಪ್ರದೇಶಗಳು ಪರಿಸರಕ್ಕೆ ಒಗ್ಗುವಂತೆ ಸೃಷ್ಟಿಸಿಕೊಳ್ಳುತ್ತವೆ. ಕರ್ನಾಟಕದ ಪ್ರದೇಶಾವಾರು ಆಹಾರ ಪದ್ಧತಿ ನೋಡುವುದಾದರೆ ನಮ್ಮ ಉತ್ತರ ಕರ್ನಾಟಕದಲ್ಲಿ ಜೋಳ ಮುಖ್ಯ ಆಹಾರವಾದರೆ, ದಕ್ಷಿಣ ಕರ್ನಾಟಕದಲ್ಲಿ ರಾಗಿಯೂ, ಕರಾವಳಿ ಭಾಗದಲ್ಲಿ ಅಕ್ಕಿಯೂ ಮುಖ್ಯ ಆಹಾರಗಳಾಗಿವೆ. ಗೋಧಿ ಮತ್ತು ಗೋವಿನ ಜೋಳ ಇವು ಎಲ್ಲಾ ಹೆಚ್ಚಿನ ಪ್ರದೇಶಗಳಲ್ಲಿ ಮುಖ್ಯ ಆಹಾರದ ಜೊತೆಜೊತೆಗೆ ಅಷ್ಟೇ ಮುಖ್ಯವಾದ ಆಹಾರವಾಗಿ ಈಗೀಗ ರೂಪುಗೊಂಡಿವೆ. ಆದರೆ ಸದ್ಯದ 5ಜಿ ಕಾಲಘಟ್ಟದಲ್ಲಿ ಈ ಎಲ್ಲಾ ಆಹಾರ ಧಾನ್ಯಗಳ ಉಪಯೋಗ ಈ ಮುಂಚೆ ಇದ್ದ ರೀತಿಗಿಂತ ತುಂಬಾ ದೂರ ಸಾಗಿ ಬಂದಿವೆಯಾದರೂ ಬಹಳಷ್ಟು ಹಳ್ಳಿ ಪ್ರದೇಶಗಳಲ್ಲಿ ಜೋಳ ಮತ್ತು ರಾಗಿ ಈಗಲೂ ರೊಟ್ಟಿ, ಅಂಬಲಿ, ಮುದ್ದೆಯಾಗಿಯೂ, ಅಕ್ಕಿ ಅನ್ನವಾಗಿಯೂ ಉಳಿದಿವೆ.

ಈ ಆಹಾರ ವ್ಯವಸ್ಥೆ ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡು ಅಲ್ಲಿಯ ಜನರ ಆರೋಗ್ಯವನ್ನು ಹದವಾಗಿಡುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೆಲ್ಲಾ ಈಗ ಪ್ಯಾಕೆಟ್ಟಿನ ರೂಪು ಪಡೆದುಕೊಂಡ ಮೇಲೆ ಯಾವ್ಯಾವುದೋ ಭಿನ್ನ ರೂಪಗಳನ್ನು ತಾಳಿವೆ. ಜೊತೆಗೆ ಬೇರೆ ಬೇರೆ ಆಹಾರಗಳ ಸಂಕೀರ್ಣ ಮಿಶ್ರಣಗಳು ನಮ್ಮ ಆರೋಗ್ಯವನ್ನು ಏರುಪೇರು ಮಾಡುತ್ತಾ ಸಾಗುತ್ತಿವೆ.

ಒಂದು ದೇಶದ ವ್ಯವಸ್ಥಿತತೆಯನ್ನು ಪರೀಕ್ಷಿಸುವುದು
ಅಲ್ಲಿರುವ ಕೋಟ್ಯಾಧೀಶರ ಸಂಖ್ಯೆಯಿಂದ ಅಲ್ಲ ಬದಲಾಗಿ
ಆ ದೇಶದ ಜನಗಳು ಹಸಿವಿನಿಂದ ಮುಕ್ತರಾಗಿದ್ದಾರೆಯೇ
ಎಂದು ಪರೀಕ್ಷಿಸುವುದರಿಂದ
– ಮಹಾತ್ಮ ಗಾಂಧಿ [ಆರ್ಥಿಕ ಮತ್ತು ನೈತಿಕ ಪ್ರಗತಿ, 22 ಡಿಸೆಂಬರ್ 1921]

ಗಾಂಧೀಜಿಯವರ ಈ ಹೇಳಿಕೆಯಾಚೆ ಹಸಿವಿನಿಂದ ಮುಕ್ತರಾಗಿಯೂ ಅನಾರೋಗ್ಯಗಳಿಂದ ತೊಳಲಾಡುತ್ತಿರುವ ಜನಸಂಖ್ಯೆಯನ್ನೂ ಲೆಕ್ಕಹಾಕಬೇಕಾದ ಅವಶ್ಯಕತೆ ಇದ್ದೇ ಇದೆ. ಮನುಷ್ಯನ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತ್ಯಗತ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಪೌಷ್ಠಿಕ ಆಹಾರಕ್ಕಿಂತ ಹೊಟ್ಟೆ ತುಂಬುವಷ್ಟು ಆಹಾರ ಸಿಕ್ಕರೆ ಸಾಕು ಎಂದು ಎಷ್ಟೋ ಜನ ಪರದಾಡುತ್ತಿರುವುದು ಶೋಚನೀಯ.

ಮಗು ಹುಟ್ಟಿದ ತಕ್ಷಣ ಅಳಲು ಶುರುವಿಟ್ಟುಕೊಳ್ಳುತ್ತದೆ. ಅಲ್ಲಿಂದಲೇ ಹಸಿವು ಜನ್ಮ ತಾಳುತ್ತದೆ. ಮನುಷ್ಯನ ಹೊಟ್ಟೆ ಹಸಿವಿನ ಪಾತಾಳ, ತುತ್ತು ಅನ್ನ ಸಿಕ್ಕರೆ ಸಾಕು ಅದು ಸ್ವರ್ಗ. ಮನುಷ್ಯನಾದಿಯಾಗಿ ಎಲ್ಲಾ ಜೀವರಾಶಿಗಳಿಗೂ ಹಸಿವು ಸಾಮಾನ್ಯ. ಹಸಿವು ಜೀವಕುಲದ ಮೂಲಭೂತ ಬಯಕೆ ಇಂಥ ಬಯಕೆಯನ್ನು ತೀರಿಸಿ ತೃಪ್ತಿಪಡಿಸುವ, ಹಸಿವನ್ನು ನೀಗಿಸುವ ಎಲ್ಲ ಪದಾರ್ಥಗಳನ್ನು ಆಹಾರ ಎಂದು ಕರೆಯಲಾಗುತ್ತದೆ. ಪ್ರಾಣಿ, ಪಕ್ಷಿ, ಜಲಚರ, ಉಭಯವಾಸಿಗಳು ಮೊದಲು ಇಂಥ ಆಹಾರ ಕ್ರಮವನ್ನು ಕಂಡುಕೊಂಡಿದ್ದವು. ಅವುಗಳು ಹಸಿವನ್ನು ಹೇಳಿಕೊಳ್ಳಲಾರವು ಆದರೆ ನೀಗಿಸಿಕೊಳ್ಳಬಲ್ಲವು. ಹಸಿವಿಗಾಗಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ಎರಗಿ ಭಕ್ಷಿಸುತ್ತವೆ, ಇದನ್ನೇ ಜೀವನ ಚಕ್ರ ಅಥವಾ ಆಹಾರ ಸರಪಳಿ ಅಂತ ಕರೆದಿದ್ದಾರೆ.

ಮನುಷ್ಯನ ಈವರೆಗಿನ ಶೋಧನೆಯಲ್ಲಿ ಅತ್ಯಂತ ರೋಚಕ ಮತ್ತು ಮುಖ್ಯವಾದದ್ದು ಈ ಹಸಿವನ್ನು ಇನ್ನಿಲ್ಲವಾಗಿಸಲು ಕಂಡುಕೊಳ್ಳುತ್ತಾ ಬಂದ ಆಹಾರ ವ್ಯವಸ್ಥೆ. ಮೊದಲು ಆದಿಮಾನವ ಪ್ರಾಣಿಗಳನ್ನು ಭೇಟೆಯಾಡಿ ಹಸಿ ಮಾಂಸವನ್ನು ಭಕ್ಷಿಸುತ್ತಿದ್ದನು; ನಂತರ ಆಧುನಿಕವಾಗಿ ಬದಲಾಗುತ್ತಾ ನವೀನ ಆಲೋಚನೆಗಳಿಂದ ನವನವೀನ ರೀತಿಗಳನ್ನು, ಬದುಕನ್ನು ಕಂಡುಕೊಂಡನು. ಮನುಷ್ಯ ಹಸಿವಾಗುವುದನ್ನು ಹೇಳಿಕೊಳ್ಳುತ್ತಾನಾದ್ದರಿಂದ ಬುದ್ದಿಜೀವಿ ಮತ್ತು ಮೊದಲನೆಯವನಾಗಿರುತ್ತಾನೆ. ಆದರೆ ಆಹಾರ ಕ್ರಮದ ಈ ಕಲಿಕೆಗೆ ಮನುಷ್ಯ ಯಾವಾಗಲೂ ಪ್ರಕೃತಿಗೆ ಅಂದರೆ ಪ್ರಾಣಿ-ಪಕ್ಷಿಗಳಿಗೆ ಕೃತಜ್ಞನಾಗಿರಬೇಕು. ಮನುಷ್ಯ ಸಂತತಿಯ ಗುರು ವೃಂದ ಅದು.

ಈ ಆಹಾರ ವ್ಯವಸ್ಥೆ ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡು ಅಲ್ಲಿಯ ಜನರ ಆರೋಗ್ಯವನ್ನು ಹದವಾಗಿಡುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೆಲ್ಲಾ ಈಗ ಪ್ಯಾಕೆಟ್ಟಿನ ರೂಪು ಪಡೆದುಕೊಂಡ ಮೇಲೆ ಯಾವ್ಯಾವುದೋ ಭಿನ್ನ ರೂಪಗಳನ್ನು ತಾಳಿವೆ. ಜೊತೆಗೆ ಬೇರೆ ಬೇರೆ ಆಹಾರಗಳ ಸಂಕೀರ್ಣ ಮಿಶ್ರಣಗಳು ನಮ್ಮ ಆರೋಗ್ಯವನ್ನು ಏರುಪೇರು ಮಾಡುತ್ತಾ ಸಾಗುತ್ತಿವೆ.

ಜಾಗತಿಕ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣವನ್ನು ಪತ್ತೆಹಚ್ಚಲು ಮತ್ತು ಸಮಸ್ಯೆಯ ನಿವಾರಣೆಯ ನಿಟ್ಟಿನಲ್ಲಿ ಆಗುತ್ತಿರುವ ಪ್ರಗತಿ, ಹಿನ್ನಡೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ವಾರ್ಷಿಕ ಸೂಚ್ಯಂಕ ಸಿದ್ಧಪಡಿಸಲಾಗುತ್ತದೆ. 2018ರ ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿಯ ಪ್ರಕಾರ ಮತ್ತು ಜಾಗತಿಕ ಹಸಿವು ಸೂಚ್ಯಂಕ 2019 ಜರ್ಮನಿಯ ಸ್ವಯಂಸೇವಾ ಸಂಸ್ಥೆ ‘ವೆಲ್ತ್ ಹಂಗರ್ ಲೈಫ್’ ಮತ್ತು ಐರ್ಲೆಂಡ್ ನ ‘ಕನ್ಸರ್ನ್ ವಲ್ಡ್ವೈಡ್’ ಜಂಟಿಯಾಗಿ ವರದಿ ಸಿದ್ಧಪಡಿಸಿದ್ದು, ಹಸಿವಿನಿಂದ ಬಳಲುತ್ತಿರುವ 117 ರಾಷ್ಟ್ರಗಳ ಪೈಕಿ ಭಾರತವೂ ಒಂದು. ಭಾರತದ ಸಹಾಯದಿಂದ ಸ್ವಾತಂತ್ರ್ಯ ಪಡೆದ ಬಾಂಗ್ಲಾದೇಶ ಹಸಿವು ನೀಗಿಸುವ ವಿಚಾರದಲ್ಲಿ ಪಾಕಿಸ್ತಾನಕ್ಕಿಂತಲೂ ಉತ್ತಮ ಸಾಧನೆ ತೋರಿದೆ. ಭಾರತ ಎಷ್ಟು ಬಲಾಢ್ಯ ಎಂಬ ವಿಚಾರವಾಗಿ ಪ್ರತಿದಿನವೂ ಚರ್ಚಿಸುತ್ತಿರುವ ಸಂದರ್ಭದಲ್ಲೇ ಜನರ ಹಸಿವು ನೀಗಿಸುವ ವಿಚಾರದಲ್ಲಿ ಪಾಕ್ ಗಿಂತ ಭಾರತ ಹಿಂದೆ ಉಳಿದಿರುವುದು ದಿಗಿಲು ಹುಟ್ಟಿಸುವ ವಿಷಯ.

2014ರಲ್ಲಿ ಭಾರತ 55ನೇ ಸ್ಥಾನದಲ್ಲಿತ್ತು ಈಗ 102ನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ 94ನೇ ಸ್ಥಾನದಲ್ಲಿದೆ. ಏಷ್ಯ ರಾಷ್ಟ್ರಗಳ ಜತೆಗೆ ಹೋಲಿಸಿ ನೋಡಿದರೂ ಭಾರತ ಕೊನೆಯಲ್ಲಿ ಉಳಿದಿರುವುದು ತೀವ್ರ ನೋವಿನ ಸಂಗತಿ.

ಹಸಿವೆಯೇ ಅರಿಯಲಿಲ್ಲ ನಾವು
ನೆಲದ ಹಕ್ಕಿನ ಹಾಡು ಹಾಡಲೂ ತೆರ ತೆರಬೇಕಾದೀತೆಂದು

ಹಸಿವೆಯೇ, ನಿನ್ನ ನೆಲ ; ನೆಲದೊಳಗಿನ ಮುಳ್ಳು
ಹಗಲೂ ರಾತ್ರಿ ನಮ್ಮ ಮೆದುಳನ್ನು ಚುಚ್ಚುತ್ತಿದೆ
ಕೊನೆಗೆ ಮಿದುಳೇ ಜಡವಾಗಬಹುದು

ನಾವು ಕಾಮಿಸಬಹುದಾದ
ಕೊನೆಯ ಸೂಳೆ ನೀನು
ನಿನ್ನ ಜೊತೆ ಮಲಗದಿದ್ದರೆ
ನಿನ್ನನ್ನು ಬಸುರು ಮಾಡದಿದ್ದರೆ
ನಮ್ಮ ಕುಲವಿಡೀ ಆತ್ಮಹತ್ಯೆ ಮಾಡಿಕೊಳ್ಳುತ್ತದೆ

ನಾಮದೇವ ಡಸಾಳ್ ರ ಹಸಿವು ಕವಿತೆಯ ಸಾಲುಗಳಿವು. ಕವಿತೆಯ ಕೊನೆಕೊನೆಯ ಸಾಲುಗಳನ್ನು ನೋಡಿ ವಾಚ್ಯ ಎನಿಸಿದರೂ ಕವಿತೆಯ ತೀವ್ರತೆ ವಸ್ತು ಸ್ಥಿತಿಯನ್ನು ತಟ್ಟಿಸುವಲ್ಲಿ ಯಶಸ್ವಿಯಾಗಿವೆ. ವಿಶ್ವಸಂಸ್ಥೆಯ ‘ಆಹಾರ ಮತ್ತು ಕೃಷಿ ಸಂಸ್ಥೆ FAO’ ನ ಹಳೆಯ ಅಂದರೆ ಈ ಹಿಂದೆ 2011ರ ವರದಿಯ ಪ್ರಕಾರ ವಿಶ್ವದಾದ್ಯಂತ ವ್ಯರ್ಥವಾಗುತ್ತಿರುವ ನಾಲ್ಕನೇ ಒಂದು ಭಾಗದಷ್ಟು ಆಹಾರ ಪದಾರ್ಥಗಳನ್ನು ಉಳಿಸಿದರೆ ಅದು ಪ್ರಪಂಚದ ಸುಮಾರು 870 ದಶಲಕ್ಷ ಜನರ ಹಸಿವನ್ನು ನೀಗಿಸುತ್ತದೆ ಎಂದು ಅಂದಾಜಿಸಿದೆ. ಅದರಲ್ಲಿ ಸುಮಾರು 194.6 ದಶಲಕ್ಷ ಭಾರತದೇಶದ್ದಾಗಿದೆ.

ಇತ್ತೀಚಿನ ‘The State of Food Security and Nutrition in the World 2018 ರ ವರದಿಯು ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವ ಸಂಖ್ಯೆಯು ಹೆಚ್ಚುತ್ತಲೇ ಸಾಗುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಹಾಗಾದರೆ 2019 ರ ಈ ವೇಳೆಗೆ ಸಂಖ್ಯೆ ಅದೆಷ್ಟು ಮಟ್ಟಿಗೆ ಹೆಚ್ಚಿದೆ ಎಂಬುದೇ ಭಯ ಹುಟ್ಟಿಸುವ ವಿಷಯ. ಹಸಿವಿನ ವಿರುದ್ಧ ಅಂತರರಾಷ್ಟ್ರೀಯ ಮೈತ್ರಿಕೂಟ(IAAH) ಒಂದಿದೆ. ಅದು ಹಸಿವು ನಿರ್ಮೂಲನೆಗೆ ಕಂಕಣ ತೊಟ್ಟ ಮೈತ್ರಿಕೂಟವಾಗಿದೆ. ಇದನ್ನು 2003 ರ ಅಕ್ಟೋಬರ್ 16 ವಿಶ್ವ ಆಹಾರ ದಿನದಂದು ಅನುಷ್ಟಾನಗೊಳಿಸಲಾಯಿತು. ವಿಶ್ವಸಂಸ್ಥೆಯ ಜೊತೆಗೂಡಿ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವವನ್ನು ಹಸಿವು ಮುಕ್ತಗೊಳಿಸಲು ಶ್ರಮಿಸುತ್ತಿದೆ. 2030ರ ಹೊತ್ತಿಗೆ ಹಸಿವು ಮುಕ್ತ ಭೂಮಿಯ ಗುರಿಯ ಸವಾಲನ್ನು ಹಲವು ದೇಶಗಳು ತೆಗೆದುಕೊಂಡಿವೆ.

ಭಾರತವು ಸಹ ಹಸಿವು ಮುಕ್ತ ಮಾಡುವತ್ತಾ ಸಾಕಷ್ಟು ಉಪಕ್ರಮಗಳನ್ನು ಅನುಸರಿಸಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಕಾರ್ಯಕ್ರಮದಡಿ ಸುಮಾರು 800 ಮಿಲಿಯನ್ ಜನರನ್ನು ಒಳಗೊಂಡ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ, ಅಂಗನವಾಡಿ, ಶಾಲೆಗಳಲ್ಲಿ ಬಿಸಿಯೂಟದ ಯೋಜನೆ, ಇಂದಿರಾ ಕ್ಯಾಂಟಿನ್ ಗಳಂಥ ಕಡಿಮೆ ಬೆಲೆಗೆ ಆಹಾರ ದೊರಕುವಂತೆ ಮಾಡುವ ಕಾರ್ಯಗಳಿಂದ ಆಹಾರ ಭದ್ರತೆ ಅಲ್ಪ ಪ್ರಮಾಣದಲ್ಲಿ ಸಾಧ್ಯವಾಗುತ್ತಿದೆ.

ಅನ್ನದಾತೋ ಸುಖೀ ಭವ! ಎಂಬ ನಾಣ್ಣುಡಿ ನಮ್ಮಲ್ಲಿ ಜನಜನಿತ. ಹಸಿವು ಮತ್ತು ಅನ್ನದಾತರಿಗೆ ಕರುಳ ಸಂಬಂಧವಿದೆ. ಭಾರತದಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯನ್ನು ಹೊಂದಿರುವ ರೈತರ ಸಂಖ್ಯೆ ಅಧಿಕವಿದೆ. ಅವರೆಲ್ಲಾ ಸಾಲಭಾದೆ, ಬೆಳೆನಾಶ, ಸರಿಯಾದ ಬೆಲೆ ಸಿಗದಿರುವಿಕೆ ಇಂಥ ಹಲವಾರು ಸಮಸ್ಯೆಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದಲ್ಲದೆ ಹೆಚ್ಚಿನ ಆಹಾರ ನಷ್ಟವು ಕೃಷಿಯ ಕಟಾವು, ಶೇಖರಣೆ ಹಾಗು ಸಾಗಾಟದ ಸಂದರ್ಭದಲ್ಲಿಯೇ ಆಗುತ್ತಿರುವುದು ಹಿಡಿ ಮುಷ್ಟಿ ಕಷ್ಟ ಪಟ್ಟು ಬೆಳೆದ ಆಹಾರವು ಬೆರಳ ಸಂದಿಗಳಿಂದ ಜಾರಿ ಬೆಳೆದು ನಿಂತ ಮಕ್ಕಳು ಕೈಗೆ ಸಿಗಲಿಲ್ಲ ಎಂಬಂತಾಗಿದೆ.

ಇದರಿಂದ ರೈತರಿಗೆ ಆಹಾರ ಪೂರೈಕೆ ಕಷ್ಟವಾದರೆ ಕೊಳ್ಳುವ ಗ್ರಾಹಕರಿಗೆ ದುಪ್ಪಟ್ಟು ಹಣ ಕೊಟ್ಟು ಕೊಳ್ಳುವ ಸಂಕಷ್ಟ. ಹೀಗೆ ಇನ್ನೂ ಬಹಳ ಕಾರಣಗಳಿಂದ ಹಸಿವನ್ನು ಇನ್ನಿಲ್ಲವಾಗಿಸುವುದು ಅಷ್ಟೇನು ಸುಲಭವಾದ ಕೆಲಸವಾಗಿ ಉಳಿದಿಲ್ಲ. ಜನರ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೂ ನಾವು ಈಗಾಗಲೇ ರೂಢಿಸಿಕೊಂಡ ಮತ್ತು ರೂಪಿಸಿಕೊಳ್ಳುತ್ತಿರುವ ಆಹಾರ ವ್ಯವಸ್ಥೆಗೂ ಪರಸ್ಪರ ಸಂಬಂಧವಿದೆ. ವಿವೇಚನಾರಹಿತ ಪ್ರಾಣಿಗಳ ಬೇಟೆ, ಸಸ್ಯ ಸಂಪತ್ತಿನ ನಾಶ ಇವುಗಳನ್ನು ಜೀವಕೇಂದ್ರಿತ ದೃಷ್ಟಿಯಿಂದ ನಿಲ್ಲಿಸಬೇಕು. ಮನುಷ್ಯ ಕೇಂದ್ರಿತ ನೆಲೆಯಲ್ಲಿ ಕೆಲವು ಆಹಾರಗಳ ನಿಷೇಧಗಳು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಅನ್ನಕ್ಕಾಗಿ ಬೇರೆಯವರ ಆಹಾರವನ್ನು ಕಸಿಯಬಾರದಲ್ಲವೇ ಹಾಗೆಯೇ ನಮ್ಮ ಆಹಾರವನ್ನು ಹಂಚುವುದರಲ್ಲಿ ಮಾತ್ರವೇ ನಿಜವಾಗಿಯೂ ಖುಷಿ ಇದೆ. ಪ್ರಾಣಿಗಳ ಆಹಾರವನ್ನು ಪ್ರಾಣಿಗಳಿಗೆ ಬಿಟ್ಟುಕೊಡುವುದೇ ನ್ಯಾಯ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅನ್ನುವ ಜನಪದರ ದೃಷ್ಟಿ ನಮಗೆ ದಾರಿದೀಪವಾಗಬೇಕು.

ಕೊನೆಗೆರಡು ನನ್ನಲ್ಲಿ ಉಳಿಸಿಕೊಳ್ಳಲಾಗದ ಮಾತುಗಳಿವೆ. ಹಸಿವು ಇನ್ನಿಲ್ಲವಾಗಬೇಕು ಸರಿ. ಮನುಷ್ಯ ತನ್ನಷ್ಟೂ ಶಕ್ತಿಯನ್ನು ಹಸಿವ ಕೊಲ್ಲಲು ಉಪಯೋಗಿಸಿದರು ಹಸಿವು ಅಳಿಯದು. ಮನುಷ್ಯ ಇಷ್ಟರ ಮಟ್ಟಿಗೆ ಸದಾ ಕ್ರಿಯಾಶೀಲನಾಗಿದ್ದಾನಾದರೆ ಅದು ಹಸಿವಿನಿಂದ ಮಾತ್ರ. ಇನ್ನಷ್ಟು ಮುಂದುವರಿಯುತ್ತಾನೆ ಅಥವಾ ಇನ್ನಿಲ್ಲವಾಗುತ್ತಾನಾದರೆ ಅದೂ ಹಸಿವಿನಿಂದಲೇ. ಹಸಿವು ಕಾಲದ ಅಪೇಕ್ಷೆ, ಅದು ಅಜರಾಮರ, ಅಮರತ್ವ ಯಾವಾಗಲೂ ಅದರ ಪಾಲು.