ನಾನು ಚಿಕ್ಕವನಾಗಿದ್ದಾಗಿನಿಂದ ಇಂದಿನ ತನಕ- ಅಂದರೆ ಸುಮಾರು ನಾಲ್ಕು ದಶಕಗಳಿಂದ ಜಾನುವಾರು ಗೋಸಾಕಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬೆಳೆದವನು; ಗೋ ಸಾಕಣೆಯಲ್ಲಿ ಆಸಕ್ತಿ ಹುಟ್ಟಲು ಕಾರಣ ನನ್ನಮ್ಮ (ಎ.ಪಿ.ಮಾಲತಿ). ಬಾಲ್ಯವನ್ನು ಮುಂಬಯಿಯಂಥ ದೊಡ್ದ ಪೇಟೆಗಳಲ್ಲಿ ಕಳೆದ ಅವಳು ಮದುವೆಯಾಗಿ ಬಂದದ್ದು ಪುತ್ತೂರಿನ ಹಳ್ಳಿ ಮನೆಗೆ. ಪೇಟೆಯ ಬೆಡಗಿ ಹಳ್ಳಿಗೆ ಎಷ್ಟು ಹೊಂದಿಕೊಂಡಳೆಂದರೆ, ಬೆಳಗ್ಗೆ-ಸಂಜೆ ಹಾಲು ಕರೆಯುವುದರಿಂದ ಹಿಡಿದು ಹಸುಗಳನ್ನು ಪ್ರೀತಿಯಿಂದ ಸಾಕುವುದು ಸಾಹಿತ್ಯ ಬರವಣಿಗೆಯಷ್ಟೇ ಅವಳಿಗೆ ಪ್ರಿಯ ಹವ್ಯಾಸವಾಗಿ ಹೋಯಿತು. ಇಂಥ ಪ್ರೀತಿಯೇ ಪ್ರಾಯಶ: ನನ್ನಲ್ಲೂ ಗೋವುಗಳ ಬಗ್ಗೆ ಒಂದಿಷ್ಟು ಆಸಕ್ತಿ ಹುಟ್ಟಿಸಲು ಕಾರಣವಾಯಿತೇನೋ.

ಒಂದು ಕಾಲವಿತ್ತು. ಹಟ್ಟಿ ಇಲ್ಲದೇ ಕೃಷಿಯನ್ನು ಊಹಿಸುವುದಕ್ಕೆ ಸಾಧ್ಯವಾಗದ ದಿನಗಳಿದ್ದುವು. ಆದರೆ ನಿಧಾನವಾಗಿ ಕಾಲ ಬದಲಾಗುತ್ತಿದೆ- ಮನೋಸ್ಥಿತಿಯೂ ಕೂಡ. ನನ್ನ ಮತ್ತು ತರವಾಡು ಮನೆಯಲ್ಲಿ ಚಿಕ್ಕ ಪ್ರಮಾಣದ ಡೈರಿ ಇನ್ನೂ ಉಳಿದುಕೊಂಡಿದೆ. ನನ್ನ ದೊಡ್ದಪ್ಪ ನಾಲ್ಕು ದಶಕಗಳ ಹಿಂದೆಯೇ ದೊಡ್ದ ಪ್ರಮಾಣದಲ್ಲಿ ಹಟ್ಟಿಯನ್ನು ಕಟ್ಟಿ ವೃತ್ತಿಪರತೆ ತೋರಿ ನಮಗೆ ಆದರ್ಶರಾದವರು. ಅವರ ಬಾಚಟ್ಟಿಯ ಹಟ್ಟಿ ಸುಮಾರು ಐವತ್ತು ಮೀಟರ್ ಉದ್ದವಿದೆ. ಆದರೆ ನಮ್ಮ ಹೆಚ್ಚಿನವರ ಡೈರಿ ಹಾಲು ಮಾರಾಟಕ್ಕಿಂತ ಹೆಚ್ಚಿಗೆ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಮತ್ತು ಗೋಬರ್ ಅನಿಲಕ್ಕಾಗಿ.

೧೯೭೦ರ ಹೊತ್ತಿಗೇ ನಮ್ಮ ಮನೆಗೆ ಗೋಬರ್ ಅನಿಲ ಸ್ಥಾವರ ಬಂತು. ಆ ಸ್ಥಾವರದ ರಚನೆ ತುಂಬ ವೈಶಿಷ್ಟ್ಯವಾದದ್ದು. ಸ್ಥಾವರದಲ್ಲಿ ಕಬ್ಬಿಣದ ಡ್ರಮ್ ಸೆಗಣಿಯಲ್ಲಿ ಮುಳುಗೇಳುವ ಬದಲಿಗೆ, ಹೊರ ಬಳೆಯ ಎಣ್ಣೆಯಲ್ಲಿ ಮುಳುಗೇಳುತ್ತದೆ. ಡ್ರಮ್ಮಿಗೆ ಸೆಗಣಿಯ ಸೋಕಿಲ್ಲದೇ ಇರುವ ಕಾರಣದಿಂದ ತುಕ್ಕಿನ ಅಪಾಯವಿಲ್ಲ. ಮೂವತ್ತೈದು ವರ್ಷಗಳಲ್ಲಿ ಇದು ತನಕ ಒಂದೇ ಒಂದು ಬಾರಿಯೂ ಡ್ರಮ್ಮನ್ನು  ಎತ್ತಿಲ್ಲ. ಡ್ರಮ್ ತೂತಾಗಿಲ್ಲ. ಅನಿಲ ಸ್ಥಾವರ ಮನೆಗೆ ನಿರಂತರ ಅನಿಲ ಉತ್ಪಾದನೆ ಮಾಡುತ್ತಿದೆ. ಖಾದಿ ಗ್ರಾಮೋದ್ಯೋಗ ಮುಂದಿನ ದಿನಗಳಲ್ಲಿ ಈ ರಚನೆಯನ್ನು ಕೈ ಬಿಟ್ಟಿತೆಂದು ಕೇಳಿದ್ದೇನೆ- ಯಾಕೋ ತಿಳಿಯದು. ಎಲ್ಲ ಕೃಷಿಕರ ಮನೆಯಲ್ಲಿ ಇಂಥ ಗೋ ಅನಿಲ ಸ್ಥಾವರವಿರಬೇಕು. ಅಷ್ಟರ ಮಟ್ಟಿಗೆ ನಾವು ಸ್ವಾವಲಂಬಿಗಳಾಗುತ್ತ ಇಂಧನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕೆ ಮನೆಗಳಲ್ಲಿ ಹಸುಗಳಿರಬೇಕು.

ಹಿಂದೆ ನಮ್ಮ ಹಟ್ಟಿಯಲ್ಲಿ ಗಿಡ್ಡ ಕಾಲಿನ, ಚಿಕ್ಕ ಗಾತ್ರದ, ಕಿರು ಕೆಚ್ಚಲಿನ, ರೋಗ ಬಾಧೆಗೆ ತುತ್ತಾಗದ ನಾಡ ತಳಿಗಳ ಹಸುಗಳು, ಮುರ, ಸೂರ್ತಿ ಎಮ್ಮೆಗಳಿದ್ದುವು. ಶಿಲೆ ಹಾಸಿನ ಬದಲಿಗೆ ಸೊಪ್ಪಿನ ಹಟ್ಟಿ. ಮನೆ ತುಂಬ ಝೋಂಯ್ಯುಗುಟ್ಟುತ್ತ ಮೂಗು ಕಿವಿಗಳೆನ್ನದೇ ಎಲ್ಲೆಡೆ ನುಗ್ಗುವ ನೊಣಗಳ ಕಾಟ. ಹಳ್ಳಿಯ ತಾಪತ್ರಯ.ಹಸುಗಳನ್ನು ಕಟ್ಟುವ ಕೊಟ್ಟಿಗೆ

ನಿಧಾನವಾಗಿ ನಾಡ ತಳಿಗಳ ಜಾಗದಲ್ಲಿ ಹಾಲ್ ಸ್ಟೀನ್, ಜೆರ್ಸಿ, ರಡ್ ಡೇಯಿನ್ ಮೊದಲಾದ ಭಾರೀ ಗಾತ್ರದ ವಿದೇಶೀ ತಳಿಗಳು ಬಂದುವು. ಹಟ್ಟಿಯಲ್ಲಿ ಶಿಲೆ ಹಾಸು- ಬಾಚಟ್ಟಿ ವ್ಯವಸ್ಥೆ ಬಂತು. ಗುಡ್ಡ ಬೆಟ್ಟಗಳಲ್ಲಿ, ಹುಲ್ಲುಗಾವಲುಗಳಲ್ಲಿ ಸುತ್ತಾಡಿ ಗೋಧೂಳಿಗೆ ಹಟ್ಟಿ ಸೇರುವ ದಿನಗಳು ಹಿನ್ನೆಲೆಗೆ ಸರಿದು, ಹಗ್ಗ ಸರಪಳಿಗಳಲ್ಲಿಯೇ ಹಸುಗಳು ಬಂಧಿಯಾದುವು. ಅವುಗಳೊಂದಿಗೆ ನಾವೂ ಕೂಡ. ಡೈರಿ ಅನ್ನುವುದು ಇದ್ದರೆ ಮನೆ ಮಂದಿಗೆ ಬೇರೆ ಬಂದೀಖಾನೆ ಬೇಕಿಲ್ಲ. ಕೃಷಿಯ ಬೇರೆ ಕೆಲಸಗಳನ್ನು ಒಂದೆರಡು ದಿನ ಮುಂದೂಡಬಹುದು. ಆದರೆ ಡೈರಿಯ ಕೆಲಸ ಮಾತ್ರ ಆ ದಿನದ್ದು ಆ ದಿನ ಆಗಲೇ ಬೇಕು. ಕೆಚ್ಚಲಲ್ಲಿ ಹಾಲು ಉಳಿದು ಗಟ್ಟಿಕಟ್ಟಿದರೆ ಮತ್ತೆ ಗೋವಿಂದನೇ ಬರಬೇಕು!

ಹೈಬ್ರಿಡ್ ತಳಿಗಳಿಗೆ ಬರುವ ರೋಗಗಳು ಕೂಡ ಒಂದು ಬಗೆಯಲ್ಲಿ ಹೈಬ್ರಿಡ್ಡೇ. ಅವು ಡೈರಿ ಮಾಡುವ ನಮ ಉತ್ಸಾಹವನ್ನು ನಡುಗಿಸಿ ಬಿಡುತ್ತವೆ. ಕೆಲವು ವರ್ಷಗಳ ಹಿಂದೆ ಕಾಲು-ಬಾಯಿ ರೋಗಕ್ಕೆ ತುತ್ತಾಗಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಭಾರೀ ಗಾತ್ರದ ನಾಲ್ಕೈದು ಹಾಲ್ ಸ್ಟೀನ್ ದನಗಳು ಸತ್ತೇ ಹೋದುವು- ಯಾವ ಮದ್ದಿಗೂ ರೋಗ ಜಗ್ಗಲಿಲ್ಲ. ಸತ್ತ ಅವುಗಳ ಸಂಸ್ಕಾರ ಸುಲಭವೇ? ಹಸುಗಳ ಭಾರೀ ಗಾತ್ರಕ್ಕೆ ಸಮನಾಗಿ ಏಳೆಂಟು ಅಡಿ ಉದ್ದ ಮತ್ತು ಆಳದ ಗುಂಡಿಗಳಾಗಬೇಕು. ಅರ್ಧ ಟನ್ನಿಗೂ ಮಿಕ್ಕಿದ ತೂಕವಿರುವ ಹಸುವಿನ ಕಳೇಬರವನ್ನು ಹಟ್ಟಿಯಿಂದ ಹಾಗೂ ಹೀಗೂ ಹೊತ್ತು, ಎಳೆದು ಗುಂಡಿಗೆ ಹಾಕುವಾಗ ಜೀವವೇ ಬಾಯಿಗೆ ಬಂದಂತಾಗಿತ್ತು. ಜನ ಬಲವಿಲ್ಲದೇ ಇಂಥ ಕೆಲಸಗಳು ಸಾಧ್ಯವಾಗದು.

ತಿಂಗಳುಗಳ ಹಿಂದೆ, ನನ್ನ ಹಟ್ಟಿಗೇ ಶೋಭಾಯಮಾನವಾಗಿರುವ ಘನ ಗಾಂಭೀರ್ಯದ ಶಹಿವಾಲ್ ದನ ನಡು ರಾತ್ರೆ ಕರು ಹಾಕಿತು. (ಹೆಚ್ಚಾಗಿ ಹಸುಗಳು ರಾತ್ರೆಯೇ ಕರು ಹಾಕುತ್ತವೆ. ಅಂದರೆ ಮನೆ ಮಂದಿಗೆ ಜಾಗರಣೆ). ಬೆಳಗ್ಗೆ ನೋಡುತ್ತೇನೆ- ಕರು ಹೊರಗೆ ಬಿದ್ದಿದ್ದೆನೋ ನಿಜ, ಅದರೊಂದಿಗೆ ಕರುವಿನ ಆಕಾರದಲ್ಲಿರುವ, ಮೈಮೇಲಲ್ಲೆಲ್ಲ ಗಂಟುಗಳಿದ್ದ ಗರ್ಭಕೋಶ ಕೂಡ ಹೊರಗೆ ಬಂದಿತ್ತು. ಪುಣ್ಯ, ಅರುವತ್ತೈದರ ಎಳೆಹರೆಯದ ಪಶುವೈದ್ಯರು ಬೆಳ್ಳಂಬೆಳಗ್ಗೆ ಧಾವಿಸಿ ಬಂದರು ನನ್ನ ಕರೆಗೆ. ಅವರೂ, ನಾನೂ, ನನ್ನ ಕೆಲಸದಾಳುಗಳೂ ಸೇರಿ ಗರ್ಭಕೋಶವನ್ನು ಒಳ ಸೇರಿಸಿ, ಮತ್ತೆ ಪುನ: ಹೊರ ಜಾರದಂತೆ ಹೊಲಿಗೆ ಹಾಕಿ, ಕೆಲಸ ಮುಗಿಸುವಾಗ ಬರೋಬ್ಬರಿ ಮೂರು ಗಂಟೆಗಳು ಕಳೆದಿತ್ತು. ದನದೊಂದಿಗೆ ನಾವೂ ಜನರು ಸುಸ್ತು. ಗಟ್ಟಿ ಜೀವವಾದರೂ ಈ ಎಲ್ಲ ಎಳೆದಾಟದಿಂದ ದನ ಜ್ವರಪೀಡಿತವಾಯಿತು. ನಾನಿನ್ನು ಏಳಲಾರೆ ಎಂದು ಹಠ ಹಿಡಿಯಬೇಕೇ? ದನ ಏಳದೇ ಹೋದರೆ ಅದು ಅಪಾಯಕಾರೀ ಲಕ್ಷಣ. ಗಂಟೆಗಳಲ್ಲಿ ಹೊಟ್ಟೆ ಉಬ್ಬರಿಸಿ ಜೀವ ಬಿಡುವುದಕ್ಕೆ ಸನ್ನದ್ಧವಾಗುತ್ತದೆ. ಮತ್ತೆ ಅಗಾಧ ಗಾತ್ರದ ದನವನ್ನು ಏಳಿಸುವ, ನಿಲ್ಲಿಸುವ ಸಾಹಸ ಶುರು. ಜತೆ ಜತೆಯಲ್ಲಿ ಹುಳಗಳಾಗದಂತೆ ಬೇವಿನ ಎಣ್ಣೆ, ಕರ್ಪೂರದ ಹುಡಿಯ ಸಿಂಪರಣೆ. ಎಲ್ಲ ಒಟ್ಟು ಸೇರಿ ಇಡೀ ಹಟ್ಟಿಯಲ್ಲಿ ಒಂದು ಬಗೆಯ ವಿಶಿಷ್ಟ ಮೂರಿ. ಹಾಗೂ ಹೀಗೂ ವಾರದಲ್ಲಿ ದನ ಹುಷಾರಾದಾಗ ಓಹ್, ಅದೆಂಥ ಆನಂದ, ಕೃತಾರ್ಥ ಭಾವ. ಮುಂದಿನ ಬಾರಿ ಏನಾಗಬಹುದು ಎಂಬ ಆತಂಕ ಇನ್ನೂ ಕಾಡುತ್ತಿದೆ. ಹಲವರು ದನವನ್ನು ಕೊಟ್ಟು ಬಿಡಿ ಅಂದರೂ ಮನಸ್ಸಾಗದೇ ಉಳಿಸಿಕೊಂಡಿದ್ದೇನೆ.

ಯಾವುದೇ ದನ ಕರು ಹಾಕುವ ಕಾಲಕ್ಕೆ ಆತಂಕ ಶುರುವಾಗುತ್ತದೆ. ಕಾಲು ಕೈ ಒಳಕ್ಕೆ ಸಿಕ್ಕಿಕೊಂಡು, ಅಥವಾ ಕರುವಿನ ಗಾತ್ರ ಅಗಾಧವಾಗಿದ್ದು ಹಾಕಲು ಕಷ್ಟವಾಗಿ ಕರು- ದನ ಗತಪ್ರಾಣವಾದದ್ದೂ ಇದೆ ನಮ್ಮ ಹಟ್ಟಿಯಲ್ಲಿ. ಹೊರಕ್ಕೆ ಬಾರದೇ ಗರ್ಭದೊಳಗೇ ಸಿಕ್ಕಿಕೊಂಡ ಕರುವನ್ನು ತೆಗೆಯಲು ಕರುವಿನ ಭುಜದ ಭಾಗಕ್ಕೆ ಹಗ್ಗವನ್ನು ಬಿಗಿದು, ಇನ್ನೊಂದು ತುದಿಗೆ ಬಡಿಗೆ ಸಿಕ್ಕಿಸಿ ಎರಡು ಮೂರು ಮಂದಿ ಸೇರಿ ಎಳೆದೆಳೆದು ಹೊರ ತೆಗೆವ ಗಲಾಟೆಯಲ್ಲಿ, ಕರು ಸತ್ತು ದನದ ಪಕ್ಕೆಗೆ ಪೆಟ್ಟಾಗಿ ಅದು ಮೇಲೇಳದ ಸ್ಥಿತಿಗೆ ಬಂದ ಉದಾಹರಣೆಗಳು ಎಷ್ಟೋ ಇವೆ. ಬಸರಿ ಮರದ ಸೊಪ್ಪು ತಿಂದು ನಮ್ಮ ಹಟ್ಟಿಯಲ್ಲಿ ಎರಡು ದನಗಳು ಸತ್ತದ್ದು ನೆನಪಾಗುತ್ತಿದೆ. ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ ಗೋ ಸಾಕಣೆ ಸುಲಭವಲ್ಲ. ಅದು ಸಹನೆ ಮತ್ತು ಶ್ರಮ ಎರಡನ್ನೂ ಬೇಡುತ್ತದೆ.

ಇಂದು ಗೋ ಸಾಕಣೆ ಅರ್ಥಿಕವಾಗಿ ಹಿಂದೆಂದಿಗಿಂತ ತೀವ್ರವಾಗಿ ದುಬಾರಿಯಾಗುತ್ತಿದೆ. ಹಿಂಡಿಯ ಕ್ರಯ ದಿನದಿಂದ ದಿನಕ್ಕೆ ಲಂಗುಲಗಾಮಿಲ್ಲದೇ ಏರುತ್ತಿದೆ. ಕರಾವಳಿಯ ನಮ್ಮ ಗದ್ದೆಗಳು ಅಡಿಕೆಯ ತೋಟಗಳಾಗಿವೆ, ಇಲ್ಲವೇ ಬಂಜರು ಬಿದ್ದಿವೆ. ಹಾಗಾಗಿ ನಾವು ಒಣ ಮೇವಿಗಾಗಿ ಘಟ್ಟ ಅಥವಾ ಬಯಲು ಸೀಮೆಯನ್ನು ಆಶ್ರಯಿಸಬೇಕಾಗಿದೆ. ಅಲ್ಲಾದರೂ ಅಷ್ಟೇ. ಭತ್ತ, ಜೋಳದ ಗದ್ದೆಗಳಲ್ಲಿ ಕಬ್ಬು ಅಥವಾ ಅಡಿಕೆ, ಅರಷಿಣ, ಶುಂಠಿ ಏಳುತ್ತಿವೆ. ಪರಿಣಾಮವಾಗಿ ಒಣ ಹುಲ್ಲು ಸಿಗುವುದು ದುರ್ಭರವಾಗಿ ಕ್ರಯ ಊಹಿಸಲಾಗದಷ್ಟು ಹೆಚ್ಚಿದೆ. ಹಿಡಿ ಗಾತ್ರದ ಬೈಹುಲ್ಲಿನ ಕಂತೆಗೆ ಹನ್ನೆರಡರಿಂದ ಹದಿಮೂರು ರೂಪಾಯಿ. ಲಾರಿ ಲೋಡಿಗೆ ಬರೋಬ್ಬರಿ ಇಪ್ಪತ್ತೆಂಟು ಸಾವಿರ ರೂಪಾಯಿ. ನಾನು ವರ್ಷಕ್ಕೆ ಒಂದೂವರೆ ಲೋಡ್ ಬೈಹುಲ್ಲು ಕೊಳ್ಳುತ್ತೇನೆ- ಇದು ಅನಿವಾರ್ಯ.

ಇನ್ನು ಹಿಂಡಿಯ ಕ್ರಯ ಕನಸಿನಲ್ಲೂ ಬೆಚ್ಚಿಸುವಷ್ಟು ಹೆಚ್ಚಿದೆ. ವರ್ಷದ ಹಿಂದೆ ಐವತ್ತು ಕೆಜಿ ಬೂಸಾ ಗೋಣಿಗೆ ಸುಮಾರು ಐನೂರು ರೂಪಾಯಿಗಳಷ್ಟಿತ್ತು. ಇಂದು ಆರೂನೂರೈವತ್ತರ ಗಡಿ ದಾಟಿ ಮತ್ತೂ ಮುನ್ನುಗ್ಗುತ್ತಿದೆ. ಪೆಟ್ರೋಲ್-ಡಿಸೆಲ್ ದರ ಏರುತ್ತಿದೆ ಎಂಬ ಸುದ್ದಿ ಸಾಕು- ಹಿಂಡಿಯ ಕ್ರಯ ಏರುವುದಕ್ಕೆ. ಎಷ್ಟು ಏರಿದರೂ ದನ ಸಾಕಬೇಕೆಂದರೆ ಕೊಳ್ಳುವುದು ಅನಿವಾರ್ಯ. ಅದು ಹಿಂಡಿಯ ಉತ್ಪಾದಕರಿಗೆ ಚೆನ್ನಾಗಿ ಅರಿವಿದೆ. ಗೋಬರ್ ಗ್ಯಾಸ್ ಪ್ಲಾಂಟ್

ಹಟ್ಟಿ ಗೊಬ್ಬರ ಅತ್ಯುತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಚೆನ್ನಾಗಿ ಕಳಿತ ಗೊಬ್ಬರದಲ್ಲಿ ಕೃಷಿ ಹಸನಾಗುತ್ತದೆ. ಆದರೆ ಈ ಗೊಬ್ಬರದ ಸೃಷ್ಟಿ ಹಿಂದಿನಷ್ಟು ಸರಳವಾಗಿಲ್ಲ. ನಿರಂತರವಾಗಿ ಸೊಪ್ಪು ತರಬೇಕು. ಇದಕ್ಕೆ ಕಾಡು ಬೇಕು ಮತ್ತು ಜನ ಬೇಕು. ಎರಡಕ್ಕೂ ತೀವ್ರ ಬರ. ಒಂದು ಭಟ್ಟಿ ಹಟ್ಟಿಗೊಬ್ಬರಕ್ಕೆ ಕನಿಷ್ಠ ಇಪ್ಪತ್ತೈದು ರೂಪಾಯಿ ವೆಚ್ಚವಾಗುತ್ತದೆ. ಹಾಗಾಗಿ ಹಟ್ಟಿಯ ಗಂಜಲವೆಲ್ಲವನ್ನು ಟ್ಯಾಂಕಿಗಳಲ್ಲಿ ಶೇಖರಿಸಿ ಸಿಂಪರಣೆಯ ಹೊಸ ವ್ಯವಸ್ಥೆಗಳು ಇಂದು ಜನಪ್ರಿಯವಾಗುತ್ತಿವೆ. ಕಾಲಕ್ಕೆ ತಕ್ಕ ಕೋಲದ ಇಂಥ ವ್ಯವಸ್ಥೆಗಳಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ.

ಸಬ್ಸಿಡಿ ಘೋಷಣೆಯಾದೊಡನೆ ಹಸುಗಳಿಗೆ ಖಾಯಸ್ಸು ಹೆಚ್ಚುತ್ತದೆ. ಸಬ್ಸಿಡಿ ಆಶೆಗೆ ಡೈರಿಗಳನ್ನು ಆರಂಭಿಸುವವರಿದ್ದಾರೆ. ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಡೈರಿ ಆರಂಭಿಸಿ, ಒಂದೆರಡು ವರ್ಷಗಳಲ್ಲಿ  ಸದ್ದಿಲ್ಲದೇ ಡೈರಿ ಮುಚ್ಚಿದವರೂ ಹಲವರಿದ್ದಾರೆ. ನಮ್ಮ ಕರಾವಳಿಯ ಹಳ್ಳಿಗಳಲ್ಲಿ ಇಂದು ಮನೆ ಮನೆಗಳಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರ ಮನೆಗಳಲ್ಲಿಯೂ ಪೆಕೇಟು ಹಾಲಿನ ಸಂಸ್ಕೃತಿ ಬಂದಿದೆ. ಹಳ್ಳಿಯ ಮೂಲೆಗಳಲ್ಲಿರುವ ಗೋಡಂಗಡಿಗಳಲ್ಲಿ ಇಂದು ಪೆಕೇಟು ಹಾಲು ಲಭ್ಯ ತಾನೇ. ಎಷ್ಟೋ ದೊಡ್ಡ ಕೃಷಿಕರಲ್ಲಿ ಇಂದು ಹಸುಗಳಿಲ್ಲ. ಕೃಷಿಗಾಗಿ ಕೋಳಿ, ಕುರಿ, ಆಡು ಅಥವಾ ಹಂದಿಯ ಗೊಬ್ಬರವನ್ನು ಆಶ್ರಯಿಸುತ್ತಿದ್ದಾರೆ. ಡೈರಿ ಸಾಕಣೆಯ ಕರಕರೆ ಇಲ್ಲದೇ ಅಷ್ಟರ ಮಟ್ಟಿಗೆ ನಾವು ಸ್ವತಂತ್ರರೆಂದು ಹೇಳಿಕೊಳ್ಳುವಾಗ ಆ ದನಿಯಲ್ಲಿ ಗಾಢ ನೋವು ಕಾಣಬಹುದು. ಸತ್ಯ ಹೇಳಬೇಕೆಂದರೆ ಅವರ ಸಾಲಿಗೆ ನಾನು ಸೇರಿಕೊಳ್ಳುವ ದಿನ ಯಾವಾಗ ಬರುತ್ತದೋ ತಿಳಿಯದು.

ಹಸುಗಳ ಸಾಕಣೆಯಲ್ಲಿ ಯಾವಾಗ ಕೃತಕ ಗರ್ಭಧಾರಣೆಯ ವ್ಯವಸ್ಥೆ ಬಂತೋ, ವರ್ಷಕ್ಕೊಂದರಂತೆ ಹಸುಗಳು ಕರು ಹಾಕತೊಡಗಿದುವು. ಅವುಗಳ ಸಾಕಣೆಯ ಜತನದಲ್ಲಿ ಒಂದೆರಡೇ ವರ್ಷಗಳಲ್ಲಿ ಹಟ್ಟಿ ಹಸುಗಳಿಂದ ತುಂಬಿ ತುಳುಕುತ್ತದೆ. ಹಾಗಾಗಿ ಕೆಲವನ್ನು ಮಾರಾಟ ಮಾಡುವುದು ಅನಿವಾರ್ಯ. ಮಾರದೇ ಎಲ್ಲ ಉಳಿಸಿಕೊಂಡರೆ ಆತ ಅವೆಲ್ಲವನ್ನು ಸಾಕಲು ತನ್ನ ಜಾಗವನ್ನು ಇಂಚು ಇಂಚಾಗಿ ಮಾರಬೇಕಾದೀತು! ಅಂಥ ಪರಿಸ್ಥಿಗೆ ಬಂದವರಿದ್ದಾರೆ ಕೂಡ.

ನಿಜ, ಗೋ ಹತ್ಯೆ ತುಂಬ ವೇದನೆ ತರುತ್ತದೆ ಮನಸ್ಸಿಗೆ. ದನ-ಕರುಗಳ ಮಾರಾಟ ಮಾಡುವ ಆ ದಿನಗಳಲ್ಲಿ ಮನ ಭಾರವಾಗುತ್ತದೆ. ಇವ್ಯಾವುವೂ ಬೇಡ ಅನ್ನಿಸುತ್ತದೆ. ಭಾವನಾತ್ಮಕ ಪ್ರಪಂಚ ಬೇರೆ; ವಾಸ್ತವ ಪ್ರಪಂಚ ಬೇರೆಯೇ. ಹಾಗಾಗಿ ಇಂದಿಗೂ ಕುಂಟುತ್ತ ಏಗುತ್ತ ಸಾಗುತ್ತಿದೆ ನಮ್ಮ ಮನೆಯಲ್ಲಿ ಡೈರಿ.

ಗೋವುಗಳನ್ನು ಮಾಂಸವಾಗಿ ಕೊಲ್ಲುವ ಅಥವಾ ತಿನ್ನುವ ಎಲ್ಲರೂ ಕಟುಕರೆಂದು ಭಾವಿಸಬಾರದು. ನಮ್ಮದಲ್ಲದ ಆಯ್ಕೆಯ ಕಾರಣದಿಂದ ಹುಟ್ಟಿದ ಧರ್ಮದಲ್ಲಿ ಗೋ ಮಾಂಸ ಭಕ್ಷಣೆ ನಿಷಿದ್ಧವೆಂದಾದರೆ, ಅದುವೇ ಅಂತಿಮ ಶಾಸನವಾಗಿ ಎಲ್ಲರ ಮೇಲೆ ಹೇರುವ ಹಕ್ಕು ನಮಗಿಲ್ಲ. ತಳವಾರು ಝಳಪಿಸಿಕೊಂಡು ಕಂಡ ಕಂಡಲ್ಲಿ ಗೋವುಗಳ ಬೇಟೆಯಾಡುತ್ತ ಹೋದಾಗ ನಾವು ವಿರೋಧಿಸುವುದರಲ್ಲಿ ಅರ್ಥವಿದೆ. ಕೇವಲ ಮಾಂಸಕ್ಕಾಗಿಯೇ ದನ ಸಾಕುವ ಮಂದಿ ಇದ್ದರೂ ಇರಬಹುದು. ಅಪ್ಪಟ ಸಸ್ಯಹಾರೀ ಬ್ರಾಹ್ಮಣರು ಕೂಡ ಹೈಬ್ರಿಡ್ ಆಡುಗಳ ಸಾಕಣೆಯನ್ನು, ಕೋಳಿ ಫಾರ್ಮುಗಳನ್ನು, ಸಿಗಡಿ ಕೃಷಿಯನ್ನು ಮಾಡುತ್ತಿರುವ ಮತ್ತು ಅದರಲ್ಲಿ ಯಶಸ್ಸು ಕಂಡ ಉದಾಹರಣೆಗಳೂ ಉಂಟು.  ಇದು  ಬದುಕಿನ ವೈವಿದ್ಯತೆ.

ಹಸುಗಳನ್ನು ತೀವ್ರ ಪೈಶಾಚಿಕ ಬಗೆಯಲ್ಲಿ ಕೊಲ್ಲುತ್ತಾರೆನ್ನುವುದನ್ನು ಅಲ್ಲಗಳೆಯಲಾರೆ. ಮಾಂಸಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವಲ್ಲೂ ಇಂಥದೇ ಪರಮಾವಧಿ ಕ್ರೌರ್ಯ ಇರಬಹುದು. ಕೋಳಿಗಳನ್ನು ಲಾರಿಗಳಲ್ಲಿ ತುಂಬಿ ಸಾಗಿಸುವ ರೀತಿಯನ್ನು ಕಂಡಾಗ, ಕ್ಯಾಬೇಜು ಮಾರಾಟ ಮಾಡಿದಂತೆ ಸೈಕಲ್ಲಿನಲ್ಲಿ ಕೋಳಿಗಳನ್ನು ತಲೆಕೆಳಗಾಗಿ ನೇತು ಹಾಕಿಕೊಂಡು ಮಾರಾಟ ಮಾಡುವ ಹೊಸ ಬಗೆಯನ್ನು ನೋಡಿದಾಗ ಮನಸ್ಸು ಕಲಕುತ್ತದೆ. ಪ್ರಾಣಿ ಹತ್ಯೆ ಬಿಟ್ಟು ಮಾಂಸಾಹಾರವನ್ನು ಜನರು ಎಷ್ಟು ತ್ಯಜಿಸುತ್ತಾರೋ ಅಷ್ಟಷ್ಟು ಒಳ್ಳೆಯದು. ಇದು ಕೂಡ ಒಂದು ಬಗೆಯಲ್ಲಿ ಭಾವನಾತ್ಮಕವಾದ ಸಾಪೇಕ್ಷ ನಿಲುವೇ ಆಗಿದೆ.

ಪ್ರಾಯಶ: ಗೋಹತ್ಯೆ ನಿಷೇಧದ ಕಾನೂನಿಗಿಂತ, ಗೋವುಗಳ ಹತ್ಯೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಕ್ರೌರ್ಯದಲ್ಲಿ, ಸಹನೀಯ ವಿಧಾನಗಳಲ್ಲಿ ಮಾಡುವಂತೆ ಕ್ರಮಗಳನ್ನು ಕೈಗೊಳ್ಳುವುದು ಹೆಚ್ಚು ಸಮಂಜಸವೆಂದು ನನಗೆ ಅನ್ನಿಸುತ್ತದೆ.