‘ವೃಷಭೇಂದ್ರ ವಿಳಾಸ’ ಕೃತಿಯಲ್ಲಿ ಚಿತ್ರಭಾಗವೇ ಸಿಂಹಪಾಲು ಪಡೆದಿದೆ. ರಂಗಭೂಮಿಯ ಮೇಲೆ ಯಕ್ಷಗಾನವಾಗಲಿ, ನಾಟಕವಾಗಲಿ ಮಾಡಬೇಕಾದ ಕೆಲಸವನ್ನು ಚಿತ್ರಕಲಾವಿದ ಇಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾನೆ. ‘ಶ್ರವ್ಯ-ದೃಶ್ಯ’ ಮಾಧ್ಯಮಗಳೆರಡೂ ಇಲ್ಲಿ ಬೆಸೆದುಕೊಂಡಿವೆ. ಬಣ್ಣಗಳ ಬಳಕೆಯಲ್ಲಿ ಸಂಪ್ರದಾಯದ ನಿಲುವನ್ನೆ ಅನುಸರಿಸಿದ್ದಾರೆ. ಇದೊಂದು ಅಪೂರ್ವವಾದ ಗ್ರಂಥ. ಯಕ್ಷಗಾನ ಸಾಹಿತ್ಯದಲ್ಲಿ ವಿರಳ ಕೃತಿಯಾಗಿದೆ ಎಂಬುದಾಗಿ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆ ಬರೆದಿದ್ದಾರೆ ಡಾ. ಸುಮಂಗಲಾ ಮೇಟಿ.

 

ನಂಜುಂಡ ಭಾಗವತ ವಿರಚಿತ ‘ವೃಷಭೇಂದ್ರ ವಿಳಾಸ’ ಎಂಬ ಗ್ರಂಥವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶ್ರೀಮಠದ ಸಂಗ್ರಹದಲ್ಲಿದ್ದ ಏಕೈಕ ಹಸ್ತಪ್ರತಿಯನ್ನು ಬಳಸಿ ಈ ಕೃತಿಯನ್ನು ಸಂಪಾದಿಸಿ ಕೊಟ್ಟಿದ್ದಾರೆ. ನಾಡಿನ ಶ್ರೇಷ್ಠ ವಿದ್ವಾಂಸರಾದ ಸಾ.ಕೃ ರಾಮಚಂದ್ರರಾವ್ ಅವರು ಬರೆದ ಮುನ್ನುಡಿ ಕೃತಿಗೆ ಸುವರ್ಣದ ಚೌಕಟ್ಟನ್ನು ಒದಗಿಸಿದೆ. ನಾಡಿನ ಶ್ರೇಷ್ಠ ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿಯವರು ಮೌಲಿಕವಾದ ಬೆನ್ನುಡಿಯನ್ನು ಬರೆದಿದ್ದಾರೆ. ಕವಿಯೇ ಇದನ್ನು ‘ಯಕ್ಷಗಾನ ಮಹಾನಾಟಕ’ ಎಂದು ಹೇಳಿಕೊಂಡಿದ್ದಾನೆ.

‘ಸಾಮಾನ್ಯ ಅಕ್ಷರಜ್ಞನೂ ಓದಿ ಹಾಡಿ ಆನಂದಪಡುವ ಹಾಡುಗಬ್ಬ. ನಿರಕ್ಷರರೂ ಅಭಿನಯಿಸಿ ಅರ್ಥಹೇಳಿ, ಹಾರಿ, ಕುಣಿದು, ಮೈಮರೆಯುವ ದೃಶ್ಯ ಕಾವ್ಯ’ ಎಂದು ಮುನ್ನುಡಿಯಲ್ಲಿರುವ ಮಾತು ಸತ್ಯವಾಗಿದೆ. ಈ ಗ್ರಂಥದ ವಿಶೇಷತೆಯೆಂದರೆ ಪದ್ಯಗಳ ಜೊತೆಜೊತೆಗೆ ಚಿತ್ರಗಳು ರಚನೆಗೊಂಡಿವೆ. ಪ್ರತಿ ಪುಟದಲ್ಲೂ ಚಿತ್ರಗಳಿದ್ದು, ಆಕರ್ಷಕ ಬಣ್ಣಗಳಿಂದ ಮನ ಸೆಳೆಯುತ್ತವೆ. ಇಲ್ಲಿ ಚಿತ್ರಗಳಿಗೆ ಪ್ರಥಮ ಸ್ಥಾನವಿದೆ. ನಂತರದ ಸ್ಥಾನ ಪಠ್ಯದ್ದು. ಪ್ರತಿ ಪುಟದಲ್ಲೂ ಚಿತ್ರಗಳು ಇದ್ದು, ಅವುಗಳ ಕೆಳಗೆ, ಮೇಲೆ, ಮಧ್ಯದಲ್ಲಿ ಪಠ್ಯವನ್ನು ಬರೆಯಲಾಗಿದೆ. ಬರವಣಿಗೆ ಚಿತ್ರಕ್ಕೆ ಪೂರಕವಾಗಿದೆ. ಪ್ರತಿಚಿತ್ರವೂ ಪ್ರಸಂಗಗಳ ರಸಾನುಕೂಲತೆಗೆ ಸಾಕ್ಷಿಯಾಗಿ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

ಯಕ್ಷಗಾನ ಮಹಾನಾಟಕವಾದ ಈ ಸಚಿತ್ರಪಠ್ಯವು ನಾಲ್ಕು ವರ್ಣಗಳಲ್ಲಿ ಮುದ್ರಿತವಾಗಿದೆ. 438 ಪುಟಗಳನ್ನು ಹೊಂದಿದ ಈ ಕೃತಿಯಲ್ಲಿ ಚಿತ್ರಭಾಗವೇ ಸಿಂಹಪಾಲು ಪಡೆದಿದೆ. ರಂಗಭೂಮಿಯ ಮೇಲೆ ಯಕ್ಷಗಾನವಾಗಲಿ, ನಾಟಕವಾಗಲಿ ಮಾಡಬೇಕಾದ ಕೆಲಸವನ್ನು ಚಿತ್ರಗಾರ ಇಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾನೆ. ‘ಶ್ರವ್ಯ-ದೃಶ್ಯ’ ಮಾಧ್ಯಮಗಳೆರಡೂ ಇಲ್ಲಿ ಬೆಸೆದುಕೊಂಡಿವೆ. 575 ಚಿತ್ರಗಳು ಇಲ್ಲಿವೆ. 4ಸಂಧಿ, 978 ಪದ್ಯಗಳು, ನಾಲ್ಕಾರು ಸಂಸ್ಕೃತ ಶ್ಲೋಕಗಳು ಇವೆ. ಇದು ಒಂದು ಉತ್ತಮ ದೃಶ್ಯ ಕೃತಿಯೂ, ರಂಗಯೋಗ್ಯವೂ ಆದ ಕೃತಿ ನನಗೆ ಓದುವಾಗ ಅನಿಸಿದೆ.

ಯಕ್ಷಗಾನದ ವೈಶಿಷ್ಟ್ಯವೆನಿಸಿರುವ ಆರ್ಯೆ, ದ್ವಿಪದಿ, ಸೀಸಪದ್ಯ, ಜೋಗುಳ ಪದಗಳು, ಕೇದಾರಗೌಳ, ಬೇಗಡೆ, ದೇಸಿ, ಪುನ್ನಾಗತೋಡಿ, ಶಂಕರಾಭರಣ, ಸೌರಾಷ್ಟ್ರ, ಭೈರವಿ, ಪಂತುವರಾಳಿ, ಕಾಂಭೋದಿ ಮೊದಲಾದ ರಾಗಗಳು, ಏಕತಾಳ, ಅಟ್ಟತಾಳ, ಆದಿತಾಳ, ಝಂಪೆ, ತ್ರಿಪುಟ, ರೂಪಕ ಇತ್ಯಾದಿ ತಾಳಗಳ ಅಭ್ಯಾಸ ಇದರ ಆಧಾರದಲ್ಲಿ ಸಾಧ್ಯ. ಬಣ್ಣಗಳ ಬಳಕೆಯಲ್ಲಿ ಸಂಪ್ರದಾಯದ ನಿಲುವನ್ನೆ ಅನುಸರಿಸಿದ್ದಾರೆ. ಇದೊಂದು ಅಪೂರ್ವವಾದ ಗ್ರಂಥ. ಯಕ್ಷಗಾನ ಸಾಹಿತ್ಯದಲ್ಲಿ ವಿರಳ ಕೃತಿಯಾಗಿದೆ.

(ಡಾ. ಸುಮಂಗಲಾ ಮೇಟಿ)

ಹನ್ನೆರಡನೆಯ ಶತಮಾನ ಅಂದರೆ ಕ್ರಿ.ಶ 1105 ರಿಂದ 1185 ರ ನಡುವೆ ಬದುಕಿ ಬಾಳಿದ ಜಗಜ್ಯೋತಿ ಬಸವಣ್ಣನವರನ್ನು ಕುರಿತ ಕೃತಿ ಇದಾಗಿದೆ. ಸಾಹಿತ್ಯ ಮತ್ತು ವರ್ಣಚಿತ್ರಗಳೆರಡರ ವಿನೂತನ ಪ್ರಯೋಗ ಇಲ್ಲಿದೆ. ಬಸವಣ್ಣನವರ ಇಡೀ ಬದುಕಿನ ಅಂದರೆ ಹುಟ್ಟಿನಿಂದ ಹಿಡಿದು ಐಕ್ಯವಾಗುವ ವರೆಗಿನ ಹಲವಾರು ಪ್ರಸಂಗಗಳು ಇಲ್ಲಿ ಚಿತ್ರಣಗೊಂಡಿವೆ. ಅಲ್ಲದೇ ಪ್ರಾಸಂಗಿಕವಾಗಿ ಅಕ್ಕ ನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಬೊಂತಾದೇವಿ, ಸೂಳೆನಂಬೆಕ್ಕ, ಮೊಲ್ಲೆಬೊಮ್ಮಯ್ಯ, ಸುರಗಿಯ ಚೌಡಯ್ಯ, ಶೂಲದ ಬೊಮ್ಮಯ್ಯ, ಹರಳಯ್ಯ, ಬಾಚರಸ, ಆಯ್ದಕ್ಕಿ ಮಾರಯ್ಯ, ಮೋಳಿಗೆಯ ಮಾರಯ್ಯ, ಶಂಕರ ದಾಸಿಮಯ್ಯ, ಅಲ್ಲಮಪ್ರಭು, ಹಡಪದ ಅಪ್ಪಣ್ಣ, ಸಿದ್ದರಾಮ, ಚೆನ್ನಬಸವಣ್ಣ ಮುಂತಾದ ಶಿವಶರಣರ ವೃತ್ತಿ, ಸ್ವಭಾವಗಳಿಗೆ ತಕ್ಕಂತೆ ವ್ಯಕ್ತಿಚಿತ್ರಣಗಳು ಮೂಢಿಬಂದಿವೆ. ಸಾಂದರ್ಭಿಕವಾಗಿ ‘ಕಾಯಕ-ದಾಸೋಹ’ ನಿರತರಾದ ಶರಣರ ಕಥೆಗಳು ಮೂಢಿಬಂದಿವೆ. ಬಸವಾದಿ ಶಿವಶರಣರು ಬದುಕಿ, ಬಾಳಿದ್ದು ಉತ್ತರಕರ್ನಾಟಕದಲ್ಲಿಯೇ ಆದರೂ, ಇಲ್ಲಿರುವ ಚಿತ್ರಗಳು, ಬಣ್ಣ, ಉಡುಗೆ, ತೊಡುಗೆ, ಹಾವ-ಭಾವ, ಶೈಲಿ ಎಲ್ಲವೂ ಮೈಸೂರಿನದೇ ಆಗಿದೆ.

ಶಬ್ದಗಳಿಗಿಂತ ದೃಶ್ಯ ಎಲ್ಲರ ಮನವನ್ನು ಮುಟ್ಟಬಲ್ಲದು. ಮಾನವನ ಹುಟ್ಟಿನೊಂದಿಗೆ ಕಲೆಯು ಹುಟ್ಟಿದೆ. ಭೌತಿಕ ಮತ್ತು ಆಧ್ಯಾತ್ಮಿಕ ಅಸ್ತಿತ್ವಕ್ಕೆ ಸೌಂದರ್ಯವನ್ನು ತಂದುಕೊಡುವ ಕೆಲಸಗಳೆಲ್ಲವೂ ಕಲಾಕ್ಷೇತ್ರದಲ್ಲಿ ನಡೆದು ಬಂದಿವೆ. ಓದು-ಬರಹ ಬಾರದ ಜನರ ಮನವನ್ನು ತಲುಪುವ ಮಾಧ್ಯಮವೆಂದರೆ ದೃಶ್ಯಮಾಧ್ಯಮ. ಅಂಥ ದೃಶ್ಯಮಾಧ್ಯಮದ ಮೂಲಕ ರಚನೆಗೊಂಡ ಈ ಕೃತಿಯು ಬಸವಣ್ಣನವರು ಹಾಗೂ ಸಮಕಾಲೀನ ಶಿವಶರಣರ ಬದುಕನ್ನು ಸಾಹಿತ್ಯಿಕವಾಗಿ ಅಧ್ಯಯನ ಕೈಗೊಳ್ಳುವ ಸಾಹಿತಿಗಳಿಗೆ, ರೇಖೆಗಳ ಬಾಗುಬಳಕುಗಳು, ವರ್ಣಚಿತ್ರಗಳ ವಿಶ್ಲೇಷಣೆ ಕೈಗೊಳ್ಳುವ ಚಿತ್ರಕಲಾವಿದರಿಗೆ, ರಾಗ-ತಾಳಗಳ ಕುರಿತು ಅಧ್ಯಯನ ಕೈಗೊಳ್ಳುವ ಸಂಗೀತಾಸಕ್ತರಿಗೆ, ಅಲ್ಲಿಯ ಚಿತ್ರಗಳಲ್ಲಿ ಮೂಢಿರುವ ಹಾವ-ಭಾವ, ಭಂಗಿ, ನಟನೆಗಳ ಬಗ್ಗೆ ಅಧ್ಯಯನ ಕೈಗೊಳ್ಳುವ ನಟರಿಗೂ ಒಂದು ಉತ್ತಮ ಆಕರವಾಗಿದೆ. ಹೀಗೆ ಹಲವು ಆಯಾಮಗಳಲ್ಲಿ ಅಧ್ಯಯನಕ್ಕೆ ಒಳಪಡಿಸಬಹುದಾದ ಬಹು ಅಮುಲ್ಯವಾದ ಕೃತಿ ಇದಾಗಿದೆ.

(ಕೃತಿ: ವೃಷಭೇಂದ್ರ ವಿಳಾಸ, ಲೇಖಕರು: ನಂಜುಂಡ ಭಾಗವತ, ಪ್ರಕಾಶಕರು: ಜಗದ್ಗುರು ಶ್ರೀ ಶಿವರಾತ್ರೀಶ್ವರ  ಗ್ರಂಥಮಾಲೆ, ಪುಟಗಳು: 438, ಬೆಲೆ: 2000/-)