ಹಾರನಹಳ್ಳಿಯ ಕೇಶವ ದೇಗುಲವು ಮೂರು ಶಿಖರಗಳ ತ್ರಿಕೂಟಾಚಲವಾಗಿದ್ದರೆ, ಸೋಮೇಶ್ವರ ಗುಡಿಯು ಏಕಕೂಟ ದೇವಾಲಯವಾಗಿದೆ, ಒಳಗುಡಿಯ ಮುಂದಿರುವ ಮಂಟಪಕ್ಕೆ ಮೂರು ಕಡೆಗಳಿಂದ ಪ್ರವೇಶದ್ವಾರಗಳಿವೆ. ಬಾಗಿಲ ಅಕ್ಕಪಕ್ಕದಲ್ಲಿ ಕಿರುಗೋಪುರಗಳುಳ್ಳ ಕೋಷ್ಠಗಳಿವೆ. ಒಳಗಿರಬೇಕಿದ್ದ ವಿಗ್ರಹಗಳು ಕಾಣುತ್ತಿಲ್ಲ. ದೇಗುಲವು ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾಗಿದೆ. ಹೊರಬಾಗಿಲ ಮೇಲಿನ ಕೈಪಿಡಿಯಲ್ಲಿ ಗಾರೆಯಿಂದ ಮಾಡಿದ ನಂದಿಯ ಪ್ರತಿಮೆಯನ್ನು ಇರಿಸಿದೆ. ಅಲ್ಲೇ ಕೆಳಗೆ ಕೀರ್ತಿಮುಖದಲ್ಲಿ ಸಪರಿವಾರನಾಗಿರುವ ನಾಟ್ಯಶಿವನ ಶಿಲ್ಪವು ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ಸುತ್ತುಗೋಡೆಯ ಕೆಳಭಾಗದ ಪಟ್ಟಿಕೆಗಳ ಮೇಲೆ ಆನೆ, ಕುದುರೆ, ಮಕರ, ಹಂಸಗಳ ಸಾಲುಗಳಿದ್ದರೂ ನಿಯತವಾಗಿಯೂ ಪೂರ್ಣವಾಗಿಯೂ ಇಲ್ಲ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

 

ಹಾಸನದಿಂದ ಅರಸೀಕೆರೆಗೆ ತೆರಳುವ ಮಾರ್ಗದಲ್ಲಿ ಅರಸೀಕೆರೆಯಿಂದ ಏಳು ಕಿ.ಮೀ. ದೂರದಲ್ಲಿ ಹಾರನಹಳ್ಳಿ ಗ್ರಾಮವಿದೆ. ಹಾರುವನಹಳ್ಳಿ ಎಂಬ ಪೂರ್ವನಾಮವಿದ್ದ ಈ ಊರಿನಲ್ಲಿ ಹೊಯ್ಸಳಕಾಲದ ಎರಡು ಸುಂದರವಾದ ದೇವಾಲಯಗಳಿವೆ. ಊರ ನಡುವೆ ಇರುವ ಕೇಶವ ದೇವಾಲಯ ಹಾಗೂ ಊರಿನ ಇನ್ನೊಂದು ದಿಕ್ಕಿನಲ್ಲಿರುವ ಸೋಮೇಶ್ವರ ದೇವಾಲಯ.

ಹಾರನಹಳ್ಳಿಯ ಈ ಎರಡು ದೇವಾಲಯಗಳೂ ಹೊಯ್ಸಳರ ಎರಡನೆಯ ನರಸಿಂಹನ ಕಾಲದಲ್ಲಿ ನಿರ್ಮಾಣವಾದವು. 1220-1235 ರ ಅವಧಿಯಲ್ಲಿ ರಾಜ್ಯವಾಳಿದ ನರಸಿಂಹ ತನ್ನ ಪೂರ್ವಿಕರಂತೆಯೇ ಬಹು ಪ್ರಭಾವಶಾಲಿ ಅರಸ. ತಮಿಳುನಾಡಿನ ಚೋಳಸಾಮ್ರಾಜ್ಯದ ಅಶಾಂತಿಯನ್ನು ತಡೆಗಟ್ಟಲು ಅಲ್ಲಿಯ ಅರಸರು ಈತನ ನೆರವು ಪಡೆದಿದ್ದರು. ರಾಜರಾಜ ಚೋಳನೆಂಬ ಪ್ರಸಿದ್ಧ ದೊರೆಯು ನರಸಿಂಹನ ಮಗಳನ್ನು ಮದುವೆಯಾಗಿ ಹೊಯ್ಸಳ ಸಾಮ್ರಾಜ್ಯದ ಗೌರವವನ್ನು ಮಿಗಿಲುಗೊಳಿಸಿದ್ದ.

ಹಾರನಹಳ್ಳಿಯ ದೇಗುಲಗಳ ನಿರ್ಮಾಣಕ್ಕೆ ಅನುಮತಿಯಿತ್ತ ರಾಜ ನರಸಿಂಹ ದಾನದತ್ತಿಗಳನ್ನು ನೀಡಿ ಪ್ರೋತ್ಸಾಹಿಸಿದ. ಸೋಮೇಶ್ವರ ದೇವಾಲಯದ ದೆಸೆಯಿಂದ ಈ ಗ್ರಾಮವನ್ನು ಪೂರ್ವದಲ್ಲಿ ಹಿರಿಯ ಸೋಮನಾಥಪುರವೆಂದು ಕರೆಯಲಾಗುತ್ತಿತ್ತು. ವರ್ತಮಾನದಲ್ಲಿ ಕೇಶವ ದೇವಾಲಯವನ್ನು ತನ್ನ ಸುಪರ್ದಿನಲ್ಲಿ ಜೀರ್ಣೋದ್ಧಾರ ಮಾಡಿ ಸುಸ್ಥಿತಿಯಲ್ಲಿಟ್ಟಿರುವ ಇಲಾಖೆಯು, ಅಷ್ಟೇ ಚಾರಿತ್ರಿಕ ಹಾಗೂ ಕಲಾತ್ಮಕ ಮೌಲ್ಯವುಳ್ಳ ಸೋಮೇಶ್ವರ ದೇವಾಲಯದ ಸುವ್ಯವಸ್ಥೆಗೆ ಇನ್ನೂ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ದೇವಾಲಯದ ಭೂಪ್ರದೇಶ ಅಷ್ಟಿಷ್ಟು ಪರಭಾರೆಯಾದಂತಿದೆ; ಗುಡಿಯ ಆವರಣದಲ್ಲಿ ಕಿಡಿಗೇಡಿಗಳ ಚೇಷ್ಟೆ, ಕಸಕಡ್ಡಿ ಹರಡಲು ಅವಕಾಶವಾಗಿದೆ. ಇತ್ತೀಚೆಗೆ ಇಲ್ಲಿ ಕಳ್ಳತನವೂ ಸಂಭವಿಸಿದ ವರದಿಯಾಗಿರುವುದು ಆಡಳಿತ ಯಂತ್ರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಹಾರನಹಳ್ಳಿಯ ಕೇಶವ ದೇಗುಲವು ಮೂರು ಶಿಖರಗಳ ತ್ರಿಕೂಟಾಚಲವಾಗಿದ್ದರೆ, ಸೋಮೇಶ್ವರ ಗುಡಿಯು ಏಕಕೂಟ ದೇವಾಲಯವಾಗಿದೆ, ಒಳಗುಡಿಯ ಮುಂದಿರುವ ಮಂಟಪಕ್ಕೆ ಮೂರು ಕಡೆಗಳಿಂದ ಪ್ರವೇಶದ್ವಾರಗಳಿವೆ. ಬಾಗಿಲ ಅಕ್ಕಪಕ್ಕದಲ್ಲಿ ಕಿರುಗೋಪುರಗಳುಳ್ಳ ಕೋಷ್ಠಗಳಿವೆ. ಒಳಗಿರಬೇಕಿದ್ದ ವಿಗ್ರಹಗಳು ಕಾಣುತ್ತಿಲ್ಲ. ದೇಗುಲವು ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾಗಿದೆ. ಹೊರಬಾಗಿಲ ಮೇಲಿನ ಕೈಪಿಡಿಯಲ್ಲಿ ಗಾರೆಯಿಂದ ಮಾಡಿದ ನಂದಿಯ ಪ್ರತಿಮೆಯನ್ನು ಇರಿಸಿದೆ. ಅಲ್ಲೇ ಕೆಳಗೆ ಕೀರ್ತಿಮುಖದಲ್ಲಿ ಸಪರಿವಾರನಾಗಿರುವ ನಾಟ್ಯಶಿವನ ಶಿಲ್ಪವು ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ಸುತ್ತುಗೋಡೆಯ ಕೆಳಭಾಗದ ಪಟ್ಟಿಕೆಗಳ ಮೇಲೆ ಆನೆ, ಕುದುರೆ, ಮಕರ, ಹಂಸಗಳ ಸಾಲುಗಳಿದ್ದರೂ ನಿಯತವಾಗಿಯೂ ಪೂರ್ಣವಾಗಿಯೂ ಇಲ್ಲ. ಸಾಂಪ್ರದಾಯಕವಾಗಿ ಹೂಬಳ್ಳಿಗಳು, ಪುರಾಣಕಥೆಗಳನ್ನು ಕೆತ್ತಬೇಕಾಗಿರುವ ಪಟ್ಟಿಕೆಗಳು ಸಪಾಟಾಗಿ ಉಳಿದಿವೆ. ದೇಗುಲದ ನಡುಗೋಡೆಯನ್ನು ವಿಭಾಗಿಸಿದ್ದು ಕೆಳಭಾಗದಲ್ಲಿ ಭಿತ್ತಿಶಿಲ್ಪಗಳೂ ಮೇಲುಭಾಗದಲ್ಲಿ ಕಿರುಗೋಪುರ ಕಂಬಗಳೂ ಕಂಡುಬರುತ್ತವೆ.

ತಮಿಳುನಾಡಿನ ಚೋಳಸಾಮ್ರಾಜ್ಯದ ಅಶಾಂತಿಯನ್ನು ತಡೆಗಟ್ಟಲು ಅಲ್ಲಿಯ ಅರಸರು ಈತನ ನೆರವು ಪಡೆದಿದ್ದರು. ರಾಜರಾಜ ಚೋಳನೆಂಬ ಪ್ರಸಿದ್ಧ ದೊರೆಯು ನರಸಿಂಹನ ಮಗಳನ್ನು ಮದುವೆಯಾಗಿ ಹೊಯ್ಸಳ ಸಾಮ್ರಾಜ್ಯದ ಗೌರವವನ್ನು ಮಿಗಿಲುಗೊಳಿಸಿದ್ದ.

ಇಲ್ಲಿರುವ ಭಿತ್ತಿಶಿಲ್ಪಗಳಲ್ಲಿ ಬಹುತೇಕ ವಿಗ್ರಹಗಳು ಕಿಡಿಗೇಡಿಗಳ ಕುಚೇಷ್ಟೆಗೆ ಬಲಿಯಾಗಿ ಮುಖಸೌಂದರ್ಯವನ್ನು ಕಳೆದುಕೊಂಡಿದ್ದರೂ ಶಿಲ್ಪಸ್ವರೂಪವು ಉಳಿದುಕೊಂಡಿದ್ದು ಹೊಯ್ಸಳ ಶಿಲ್ಪಕಲೆಯ ಬೆಡಗನ್ನು ಪರಿಚಯಿಸುವಂತಿವೆ. ಸ್ಥಾನಕ ಶಿವ, ತಾಂಡವಮೂರ್ತಿ, ಭೈರವ, ವೀರಭದ್ರ ಮೊದಲಾದ ಶಿವನ ವಿವಿಧ ರೂಪಗಳನ್ನು ಈ ಭಿತ್ತಿಶಿಲ್ಪಗಳಲ್ಲಿ ಪ್ರದರ್ಶಿಸಲಾಗಿದೆ.

ಹಿರಣ್ಯಕಶಿಪುವನ್ನು ಕೊಲ್ಲುತ್ತಿರುವ ನರಸಿಂಹ, ಸ್ಥಾನಕ (ನಿಂತಿರುವ) ಬ್ರಹ್ಮ, ಗೋವರ್ಧನಧಾರಿ ಕೃಷ್ಣ, ವಿಷ್ಣು, ವೇಣುಗೋಪಾಲ, ಸೀತಾರಾಮಲಕ್ಷ್ಮಣರು – ಹೀಗೆ ಶೈವ ವೈಷ್ಣವ ದೇವತೆಗಳೆಲ್ಲರಿಗೂ ಅಭೇದಸ್ಥಾನವನ್ನು ಕಲ್ಪಿಸಿ ಜನಮನದ ತಾರತಮ್ಯವನ್ನು ಶಮನಗೊಳಿಸಬೇಕೆನ್ನುವ ಹೊಯ್ಸಳರ ಕಾಳಜಿ ಇಲ್ಲೂ ವ್ಯಕ್ತವಾಗಿದೆ. ನಾಟ್ಯಸರಸ್ವತಿ, ಸ್ವರ್ಗದಿಂದ ಪಾರಿಜಾತವನ್ನು ತರಲುಹೊರಟ ಕೃಷ್ಣಸತ್ಯಭಾಮೆರನ್ನು ಹೊತ್ತ ಗರುಡ, ಕೈಲಾಸವನ್ನು ಮೇಲೆತ್ತಿರುವ ರಾವಣ ಮೊದಲಾದವರೂ ಈ ಶಿಲ್ಪಗಳಲ್ಲಿ ಸೇರಿದ್ದಾರೆ.

ದೇಗುಲದ ಶಿಖರವು ಅಲ್ಲಲ್ಲಿ ಘಾಸಿಗೊಂಡಿದ್ದರೂ ಸುಂದರವಾಗಿ ಕಾಣುತ್ತದೆ. ಕೀರ್ತಿಮುಖಗಳೂ, ಹೂಬಳ್ಳಿಯ ಕಿರುಗೂಡುಗಳೂ, ದೇವಾನುದೇವತೆಗಳ ಕಿರುಶಿಲ್ಪಗಳೂ ಈ ಶಿಖರಕ್ಕೆ ಸೊಗಸು ತಂದಿವೆ. ಮುಂಚಾಚಿರುವ ಶುಕನಾಸದಿಂದ ಒಟ್ಟಂದ ಹೆಚ್ಚಿದೆ. ಗರ್ಭಗುಡಿಯ ಹೊರಗೋಡೆಯ ಅಂಚಿಗೆ ಮೂರುದಿಕ್ಕುಗಳಲ್ಲಿ ಗೋಪುರಸಹಿತ ಕಿರುಕೋಷ್ಠಗಳಿವೆ. ಒಳಗುಡಿಯಲ್ಲಿ ನವರಂಗದ ಕಂಬಗಳೂ ಭುವನೇಶ್ವರಿಯೂ ಸಾಮಾನ್ಯ ಅಲಂಕರಣದಿಂದ ಕೂಡಿವೆ. ಶಿವಲಿಂಗವೂ ಅದಕ್ಕೆ ಅಭಿಮುಖವಾಗಿ ಚಿಕ್ಕ ನಂದಿಯ ವಿಗ್ರಹವೂ ಕಂಡುಬರುತ್ತವೆ. ಇವಲ್ಲದೆ ಒಳಗುಡಿಯಲ್ಲಿ ಗಣಪತಿ, ಸರಸ್ವತಿ, ಸುಬ್ರಹ್ಮಣ್ಯ ಸಪ್ತಮಾತೃಕೆಯರು ಹಾಗೂ ವೀರಭದ್ರರ ವಿಗ್ರಹಗಳನ್ನೂ ಕಾಣಬಹುದು.

ಒಂದುಕಡೆ ನಮ್ಮ ನಾಡಿನಲ್ಲಿ ಇಂತಹ ಅನೇಕ ಪ್ರಾಚೀನ ದೇವಾಲಯಗಳಿರುವುದು ಹೆಮ್ಮೆಯ ವಿಷಯವೆಂದು ನಾವು ಭಾವಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ, ಸಂಬಂಧಿಸಿದ ಇಲಾಖೆಯವರಿಗೇನೋ ಅವುಗಳ ನಿರ್ವಹಣೆ ಸುವ್ಯವಸ್ಥೆಗಳನ್ನು ಕುರಿತಂತೆ ಅನೇಕ ಸಮಸ್ಯೆಗಳಿರಬಹುದು. ಆದರೆ, ಪುರಾತನಶಿಲ್ಪಗಳ ಚೌರ್ಯವು ಒಂದು ದೊಡ್ಡದಂಧೆಯಾಗಿ ಪರಿಣಮಿಸಿರುವಾಗ ಇಂತಹ ಸ್ಮಾರಕಗಳಿಗೆ ಪ್ರಾಥಮಿಕ ರಕ್ಷಣೆ, ಭದ್ರತೆಗಳನ್ನು ಕಲ್ಪಿಸಿ ಸಂರಕ್ಷಿಸಿಡಬೇಕಾದುದು ಸರ್ಕಾರದ ಆದ್ಯಕರ್ತವ್ಯ.