ಅಂದ ಹಾಗೆ, ಆ ತೋಟದ ಮನೆಯಲ್ಲಿ ಎಲ್ಲವೂ ಆಹ್ಲಾದಕರವಾಗಿರಲಿಲ್ಲ! ಹಲವಾರು ಹೆದರಿಕೆ ಬರುವ ಸಂಗತಿಗಳೂ ಇದ್ದವು. ಬಯಲುಸೀಮೆಯಲ್ಲಿ ಹುಟ್ಟಿ ಬೆಳೆದಿದ್ದ ನನಗೆ ತುಂಬಾ ಪರಿಚಿತ ಪ್ರಾಣಿಗಳೆಂದರೆ ಮಂಗಗಳು. ನಮ್ಮ ಮೂಲವಾದ ಕುರ್ತಕೋಟಿ, ಕೆಂಪು ಮಂಗಗಳಿಗೆ ಎಷ್ಟು ಪ್ರಸಿದ್ಧ ಅಂದ್ರೆ ಅವಕ್ಕೆ “ಕುರ್ತಕೋಟಿ ಮಂಗ್ಯ” ಅಂತಲೇ ಬ್ರಾಂಡು. ಅದರ ಜೊತೆಗೆ ಹಾವುಗಳನ್ನು ಬಾಲ್ಯದಲ್ಲಿ ಲಕ್ಷ್ಮೇಶ್ವರದಲ್ಲಿದ್ದಾಗ ಆಗೀಗ ನೋಡಿದ್ದೆನಾದರೂ ಅವುಗಳ ಬಗ್ಗೆ ಭಯವಂತೂ ಇದ್ದೆ ಇತ್ತು. ಇಲ್ಲಿ ಅವೆಲ್ಲವುಗಳ ಜೊತೆಗೆ ಇನ್ನೂ ಯಾವುದ್ಯಾವುದೋ ಪ್ರಾಣಿಗಳು ಭೇಟಿ ಕೊಡುತ್ತಿದ್ದವು.
“ಗ್ರಾಮ ಡ್ರಾಮಾಯಣ” ಅಂಕಣದಲ್ಲಿ ಹಳ್ಳಿ ಜೀವನದ ಮತ್ತಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುಪ್ರಸಾದ ಕುರ್ತಕೋಟಿ
ನನಗೆ ಬೆಳಿಗ್ಗೆ ಬೇಗನೆ ಎದ್ದು ರೂಢಿ. ಬೆಂಗಳೂರಿನಲ್ಲಿರುವಾಗ ಎಷ್ಟೋ ಸಲ ಬೆಳಿಗ್ಗೆ ಮೂರು ಗಂಟೆಗೆಲ್ಲ ಎಚ್ಚರವಾಗಿ, ಘನ ಘೋರ ವಿಚಾರಗಳು, ಚಿಂತನೆಗಳೆಲ್ಲ ತಲೆಯಲ್ಲಿ ಶುರುವಾಗಿ ಅವುಗಳನ್ನು ಹೊರ ಹಾಕದ ಹೊರತು ಬೇರೆ ಉಪಾಯವೇ ಇಲ್ಲ ಎಂದೆನಿಸಿ, ಒಂದು ಹಾಳೆಯಲ್ಲೋ, ಡೈರಿಯಲ್ಲೋ ಅಥವಾ ಲ್ಯಾಪ್‌ಟಾಪಿನಲ್ಲಿಯೋ ಗೀಚುತ್ತ(!) ಕೂತುಬಿಡುತ್ತಿದ್ದೆ! ಅವತ್ತೂ ಹಳ್ಳಿಯ ಮನೆಯಲ್ಲಿ ಸೂರ್ಯೋದಯಕ್ಕೆ ಸ್ವಲ್ಪ ಮುಂಚೆ ಎಚ್ಚರವಾಗಿತ್ತು. ನನಗೆ ಸರ್ವಕಾಲಕ್ಕೂ ಪ್ರಿಯವಾದ, ಯಾವುದೇ ಸಮಯದಲ್ಲಿ ಕೊಟ್ಟರೂ ಕುಡಿಯಲು ಇಷ್ಟ ಪಡುವ ಪೇಯ ಚಹಾ ಮಾಡಿಕೊಂಡೆ. ಚಹಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳೂ ನಮ್ಮ ಹೊಸ ಮನೆಯಲ್ಲಿ ಇದ್ದವು. ಹಿಂದಿನ ದಿನ ತಂದಿದ್ದ ಆಕಳ ಶುದ್ಧ ಹಾಲು ಕೂಡ ಇತ್ತು. ಹಳ್ಳಿಗಳಲ್ಲಿ ದೊರೆಯುವ ಹಲವು ಐಶಾರಾಮುಗಳಲ್ಲಿ ತಾಜಾ ಹಾಲಿನ ಪೂರೈಕೆಯೂ ಒಂದು. ಹೆಗಡೆಯವರ ತೋಟದ ಮನೆಯ ಮುಂದೆ, ಹಬೆಯಾಡುತ್ತಿದ್ದ ಚಾ ಕಪ್ಪಿನೊಡನೆ ನಿಂತು ಎದುರಿಗಿದ್ದ ಅಡಿಕೆ ತೋಟವನ್ನು ಬೆರಗು ಕಣ್ಣಿನಿಂದ ಆಸ್ವಾದಿಸುತ್ತಿದ್ದೆ. ಅಲ್ಲಿಯವರೆಗೆ ಎಷ್ಟೋ ಸಲ ಅಡಿಕೆ ತೋಟಗಳನ್ನು ನೋಡಿದ್ದೆನಾದರೂ ಈ ತೋಟದ ಮೆರಗು ಬೇರೆಯೇ ಆಗಿತ್ತು. ಒಟ್ಟಿನಲ್ಲಿ ಅವತ್ತಿನ ಬೆಳಗೇ ವಿಶೇಷವಾಗಿತ್ತು.
ಮೊಟ್ಟ ಮೊದಲ ಬಾರಿ, ಬಾಡಿಗೆಯದೆ ಆದರೂ ನನ್ನದೇ ಅಂತ ಹೇಳಿಕೊಳ್ಳಬಹುದಾದ ತೋಟದ ಮನೆಯ ಮುಂದೆ ನಾನಿದ್ದೆ. 40 ವರ್ಷ ಹಳೆಯ ತೋಟವದು. ಮನೆಯಿಂದ ಕೆಳಗೆ ಸ್ವಲ್ಪ ಆಳದಲ್ಲಿ ಇದೆ. ಹಾಗೆ ಸ್ವಲ್ಪ ಕೆಳ ಮಟ್ಟದಲ್ಲಿ ಇದ್ದರೆ ಅಡಿಕೆ ತೋಟಗಳು ವಿಶೇಷವಾಗಿ ಇರುತ್ತವಂತೆ. ಅಡಿಕೆಗೆ ತುಂಬಾ ಬಿಸಿಲು ಬೇಡ. ಹೀಗಾಗಿ ಮಲೆನಾಡಿನ ಈ ತರಹದ ವಾತಾವರಣವೇ ಅದಕ್ಕೆ ಸೂಕ್ತ. ಅಡಿಕೆಯ ಜೊತೆಗೆ ಬಾಳೆ ಗಿಡಗಳು ಹೇರಳವಾಗಿ ಇದ್ದವು. ಅಡಿಕೆಗೆ ಅವು ಯಾವಾಗಲೂ ಒಳ್ಳೆಯ ಸಂಗಾತಿ. ಹೊಸದಾಗಿ ತೋಟ ಹಚ್ಚುವಾಗ ಕೂಡ ಅಡಿಕೆಯ ಜೊತೆಗೆ ಬಾಳೆ ಹಾಕುತ್ತಾರೆ. ಅದು ಬೇಗನೆ ಬೆಳೆದು ಅಡಿಕೆ ಸಸಿಗಳಿಗೆ ನೆರಳು ನೀಡುತ್ತದೆ. ಚಿಕ್ಕ ಅಡಿಕೆ ಸಸಿಗಳಿಗೆ ಅದು ಅವಶ್ಯಕ. ಅವು ಮೊದಮೊದಲು ತುಂಬಾ ಸೂಕ್ಷ್ಮ ಇರುತ್ತವೆ. ಬಿಸಿಲಿಗೆ ಒಗ್ಗಿಕೊಳ್ಳೋದಕ್ಕೆ ಅವಕ್ಕೆ ಕೆಲವು ವರ್ಷಗಳು ಬೇಕು. ಅದೂ ಅಲ್ಲದೆ ಅಡಿಕೆ ಗಿಡಗಳು ಫಲ ಕೊಡುವವರೆಗೆ ಬಾಳೆಯೇ ರೈತನ ಬಾಳಿಗೆ ಆಧಾರ! ಹೆಚ್ಚುಕಡಿಮೆ ಒಂದು ವರ್ಷದ ಬೆಳೆ ಅದು. ಅಡಿಕೆ, ಬಾಳೆ ಗಿಡಗಳ ಜೊತೆಗೆ ಲಿಂಬು, ಅರಿಶಿನ, ಮೆಣಸು, ಜಾಯಿ ಕಾಯಿ, ಏಲಕ್ಕಿ, ಮೆಣಸಿನಕಾಯಿ ಹೀಗೆ ಹಲವಾರು ಮಿಶ್ರ ಬೆಳೆಗಳು ಅಲ್ಲಿದ್ದವು.
ಶಂಭುಲಿಂಗ ಮಾವ, ಬೆಳಿಗ್ಗೆ ಎದ್ದ ತಕ್ಷಣ ಒಂದು ಚಾ ಕುಡಿದು ಕವಳವನ್ನು ಹಾಕಿಕೊಂಡು (ಉತ್ತರ ಕನ್ನಡದಲ್ಲಿ ಎಲೆ-ಅಡಿಕೆ-ತಂಬಾಕಿಗೆ ಒಟ್ಟಾಗಿ ಕವಳ ಅಂತಾರೆ. ಇನ್ನೂ ಕೆಲವರು ಅದನ್ನು ಬಂದೂಕಿಗೆ ತುಂಬುವ ಮದ್ದು ಅಂತ “ಬಾಯಲ್ಲಿ ಈಡು ತುಂಬಿಕೊಂಡ್ಯನೋ” ಅಂತ ತಮಾಷೆ ಮಾಡ್ತಾರೆ) ಕೊಟ್ಟಿಗೆ ಕೆಲಸಕ್ಕೆ ಹೊರಡುತ್ತಿದ್ದರು. ದಿನಕ್ಕೆ ನಾನು ಗಮನಿಸಿದಂತೆ, ಚಾ ಕುಡಿದಾಗಲೊಮ್ಮೆ, ಆಸರಿಗೆ (ಬೆಳಗಿನ ತಿಂಡಿ) ಕುಡಿದ (ಹೌದು ಆಡು ಭಾಷೆಯಲ್ಲಿ ಹೀಗೆ ಹೇಳುತ್ತಾರೆ!) ಮೇಲೆ, ಊಟದ ನಂತರ, ನಡು ನಡುವೆ ಹಾಗೆ ಸುಮ್ಮನೆ… ಹೆಚ್ಚು ಕಡಿಮೆ ದಿನದಲ್ಲಿ ಹದಿನೈದರಿಂದ ಇಪ್ಪತ್ತು ಕವಳಗಳಾದರೂ ಮಾವನ ಬಾಯಲ್ಲಿ ಜಗಿಯಲ್ಪಡುತ್ತಿದ್ದವೇನೊ. ಅಲ್ಲಿಯ ತುಂಬಾ ಜನರ ಬಾಯಲ್ಲಿ ರಸ-ಕವಳ ಇದ್ದೆ ಇರುತ್ತದೆ. ಅವರಿಗದು ಒಂತರದ ಎನರ್ಜಿ ಕೊಡತ್ತದೇನೋ… ಕವಳ ಹಾಕಿಕೊಳ್ಳದವರು ಅಪರೂಪ… ಅಲ್ಲೊಬ್ಬರು ಇಲ್ಲೊಬ್ಬರು ಇರಬಹುದೇನೋ.
ಹೆಗಡೇರು ತಮ್ಮ ಆಕಳು ಕರುಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವಕ್ಕೆ ಕುಡಿಯಲು ಕೂಡ ಬಿಸಿ ನೀರು ಕೊಡುತ್ತಿದ್ದರು. ಅವು ಮೂಕ ಪ್ರಾಣಿಗಳು ಅವು ಖುಷಿಯಾಗಿದ್ದರೆ ನಾವು ಸುಖವಾಗಿರ್ತೀವಿ ಅನ್ನೋರು.
ನಾನು ಚಾವನ್ನು ಆಕಳು ಅಕ್ಕಚ್ಚು (ಆಕಳಿಗೆ ಕೊಡುವ ದ್ರವ ಆಹಾರ) ಹೀರುವಂತೆಯೇ ಸೊರ ಸೊರ ಹೀರುತ್ತಿದ್ದಾಗಲೇ ಅವರು ಕೊಟ್ಟಿಗೆಯಿಂದ ಹೊರಬಿದ್ದು ನನ್ನ ಬಳಿಯೇ ಬರುವುದು ಕಂಡಿತು. ಏನೋ ಗುರುಪ್ರಸಾದss .. ಚಾ ಮಾಡಿಕೆಂಡ ಕುಡಿತಿದ್ದೆನೋ?.. ನಂಗ ಕರ್ದೆ ಇಲ್ಲೇ ನೀನು.. ಅನ್ನುತ್ತ ತಮಾಷೆ ಮಾಡಿದರು.. ಸ್ನಾನಕ್ಕೆ ಒಲೆ ಹೊತ್ತಿಸಿ ನೀರು ಕಾಸಿಕೊಳ್ಳಲು ನಿನಗೆ ಕಷ್ಟ ಆದ್ರೆ ನಮ್ಮ ಮನೆಯಲ್ಲಿಯೇ ಇಬ್ಬರೂ ಸ್ನಾನ ಮಾಡಿಕೊಳ್ಳಿ ಅಂತಲೂ ಹೇಳಿದರು. ತೋಟದ ಮನೆಯಲ್ಲಿ ಒಲೆ ಇತ್ತು, ಒಣ ಕಟ್ಟಿಗೆಗಳಂತೂ ಹೇರಳವಾಗಿದ್ದವು. ಆದರೂ ಸ್ವಿಚ್ಚು ಹಾಕಿ ನೀರು ಕಾಸಿಕೊಳ್ಳುವ ನಮ್ಮಂತಹ ಪಟ್ಟಣವಾಸಿಗಳಿಗೆ, ಕಟ್ಟಿಗೆಗೆ ಬೆಂಕಿ ಕಚ್ಚಿಸಿ, ಉಫ್ ಉಫ್ ಅಂತ ಊದಿ, ಹೊಗೆಗೆ, ಮೂಗಲ್ಲಿ ಕಣ್ಣಲ್ಲಿ ನೀರು ಹರಿಸಿ, ಬಿಸಿ ನೀರು ಮಾಡಿಕೊಳ್ಳುವುದು ಸ್ವಲ್ಪ ಕುಶಲತೆಯ ಹಾಗೂ ಪರಿಶ್ರಮದ ಕೆಲಸವಾಗಿತ್ತು. ನಾನಿನ್ನೂ ಆ ಕಲೆಯನ್ನು ಕರಗತ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆ. ಇದಕ್ಕಿಂತ ಮೊದಲು ನನ್ನ ಅತ್ತೆಯ ಮನೆಯಲ್ಲಿ ಒಂದೆರಡು ಸಲ ಪ್ರಯತ್ನಿಸಿದ್ದ ಅನುಭವ ಇತ್ತು.
ಆದರೂ ಅವರು ಬಿಸಿ ನೀರು ಬೇಕಾದರೆ ತಮ್ಮ ಮನೆಯಲ್ಲಿ ತೆಗೆದುಕೊಳ್ಳಿ ಅಂತ ಹೇಳಿ “ಇದು ನಿಮ್ಮ ಮನೆ” ಅಂದಿದ್ದು ಬರಿ ಔಪಚಾರಿಕತೆಗೆ ಅಲ್ಲ ಅಂತ ಮತ್ತೆ ನಿರೂಪಿಸುತ್ತಿದ್ದರು. ಅದೊಂದೇ ಅಲ್ಲ ಎಲ್ಲ ವಿಷಯಗಳಲ್ಲೂ ನಮ್ಮ ಕಾಳಜಿ ಮಾಡುತ್ತಿದ್ದರು. ನಮಗೆ ಅಂತಹ ಒಳ್ಳೆಯ ಮನಸ್ಸುಗಳಿರುವ ಮನೆ ಸಿಕ್ಕಿದ್ದು ದೊಡ್ಡ ಅದೃಷ್ಟ!
“ನಿನ್ನೆ ಮಗ ಫೋನ್ ಮಾಡಿದ್ದಾಗ ನಿನ್ ಬಗ್ಗೆ ಎಲ್ಲಾ ಹೇಳ್ತಾ ಇದ್ನಲ್ಲೋ.. ನೀನು ಬೆಂಗಳೂರಲ್ಲಿ ಮಣ್ಣು ಇಲ್ದೆ ಮಾಡೋ ಕೃಷಿ ಬಗ್ಗೆ ಅವನಿಗೆ ಹೆಂಗ್ ತಿಳೀತು ಮಾರಾಯ… ಬರಿ ನಿನ್ನ ಹೆಸರು ಕೇಳಿ ನಿನ್ನ ಜಾತಕಾನೆ ಹೇಳಿ ಬಿಟ್ಟ. ಅವನಿಗೆ ಅದೆಲ್ಲ ಹೆಂಗ್ ಗೊತ್ತಾಗಿರ್ಲಕ್ಕು!?” ಅಂದ್ರು.
ಅವರ ಹಿರಿಯ ಮಗ ಅಮೆರಿಕೆಯಲ್ಲಿ ಇರುತ್ತಾರೆ. ಅವರಿಗೆ ನಾವು ಬಾಡಿಗೆಗೆ ಬಂದ ವಿಷಯ ಹೇಳಿದ್ದರಂತೆ. ಅವರು ಇಂಟರ್ನೆಟ್ ನಲ್ಲಿ ನನ್ನ ಹೆಸರು ಟೈಪ್ ಮಾಡಿ ನನ್ನ ಬಗ್ಗೆ, ಬೆಳೆಸಿರಿಯ ಬಗ್ಗೆಯೆಲ್ಲ ತಿಳಿದುಕೊಂಡು ಅಪ್ಪನಿಗೆ ಹೇಳಿದ್ದರು ಅನ್ಸುತ್ತೆ. ಈಗಿನ ತಂತ್ರಜ್ಞಾನದ ಬಗ್ಗೆ ಅಷ್ಟೆಲ್ಲ ತಲೆ ಕೆಡಿಸಿಕೊಂಡಿರದಿದ್ದ ಹೆಗಡೇರಿಗೆ ಇದೊಂದು ಒಂದು ಅಚ್ಚರಿ ಆಗಿತ್ತು. “ನಾನು ಅಷ್ಟು ವರ್ಲ್ಡ್ ಫೇಮಸ್ಸು ಮಾವ” ಅಂತ ನಾನೂ ತಮಾಷೆ ಮಾಡಿದೆ.
“ನಾಗಭೂಷಣ ಎಲ್ಲಿ .. ಇನ್ನೂ ಎದ್ದ್ನಿಲ್ಲೇ?” ಅಂತ ನಾಗಣ್ಣನ ಬಗ್ಗೆ ವಿಚಾರಿಸಿದರು. ನಾಗಣ್ಣ ಏಳೋದು ಸ್ವಲ್ಪ ತಡವೇ. ಅವರು ಆಗ ತಾನೆ ಕೆಲಸ ಬಿಟ್ಟಿದ್ದರು. ಇನ್ನೂ ಸಾಫ್ಟ್ವೇರ್ ಜೀವನ ಶೈಲಿಯ ಹ್ಯಾಂಗ್ ಓವರ್ ಇತ್ತು ಅನ್ಸುತ್ತೆ. ತೋಟದ್ ಬದಿ ಹೋಗಿ ಬರ್ತಿ ಅಂತ ಮಾವ ತೋಟದ ಒಳಗೆ ಹೊಕ್ಕರು.
ಸ್ವಿಚ್ಚು ಹಾಕಿ ನೀರು ಕಾಸಿಕೊಳ್ಳುವ ನಮ್ಮಂತಹ ಪಟ್ಟಣವಾಸಿಗಳಿಗೆ, ಕಟ್ಟಿಗೆಗೆ ಬೆಂಕಿ ಕಚ್ಚಿಸಿ, ಉಫ್ ಉಫ್ ಅಂತ ಊದಿ, ಹೊಗೆಗೆ, ಮೂಗಲ್ಲಿ ಕಣ್ಣಲ್ಲಿ ನೀರು ಹರಿಸಿ, ಬಿಸಿ ನೀರು ಮಾಡಿಕೊಳ್ಳುವುದು ಸ್ವಲ್ಪ ಕುಶಲತೆಯ ಹಾಗೂ ಪರಿಶ್ರಮದ ಕೆಲಸವಾಗಿತ್ತು. ನಾನಿನ್ನೂ ಆ ಕಲೆಯನ್ನು ಕರಗತ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆ.
ಅಂದ ಹಾಗೆ, ಆ ತೋಟದ ಮನೆಯಲ್ಲಿ ಎಲ್ಲವೂ ಆಹ್ಲಾದಕರವಾಗಿರಲಿಲ್ಲ! ಹಲವಾರು ಹೆದರಿಕೆ ಬರುವ ಸಂಗತಿಗಳೂ ಇದ್ದವು. ಬಯಲುಸೀಮೆಯಲ್ಲಿ ಹುಟ್ಟಿ ಬೆಳೆದಿದ್ದ ನನಗೆ ತುಂಬಾ ಪರಿಚಿತ ಪ್ರಾಣಿಗಳೆಂದರೆ ಮಂಗಗಳು. ನಮ್ಮ ಮೂಲವಾದ ಕುರ್ತಕೋಟಿ, ಕೆಂಪು ಮಂಗಗಳಿಗೆ ಎಷ್ಟು ಪ್ರಸಿದ್ಧ ಅಂದ್ರೆ ಅವಕ್ಕೆ “ಕುರ್ತಕೋಟಿ ಮಂಗ್ಯ” ಅಂತಲೇ ಬ್ರಾಂಡು. ಅದರ ಜೊತೆಗೆ ಹಾವುಗಳನ್ನು ಬಾಲ್ಯದಲ್ಲಿ ಲಕ್ಷ್ಮೇಶ್ವರದಲ್ಲಿದ್ದಾಗ ಆಗೀಗ ನೋಡಿದ್ದೆನಾದರೂ ಅವುಗಳ ಬಗ್ಗೆ ಭಯವಂತೂ ಇದ್ದೆ ಇತ್ತು. ಇಲ್ಲಿ ಅವೆಲ್ಲವುಗಳ ಜೊತೆಗೆ ಇನ್ನೂ ಯಾವುದ್ಯಾವುದೋ ಪ್ರಾಣಿಗಳು ಭೇಟಿ ಕೊಡುತ್ತಿದ್ದವು. ನಮ್ಮ ಮನೆಯ ಹಿತ್ತಲಿನಿಂದ ಮುಂದಕ್ಕೆ ಒಂದು ಬೆಟ್ಟವಿತ್ತು. ಅಲ್ಲಿಂದ ಮುಂದೆ ಕಾಡು. ಹೀಗಾಗಿ ದೊಡ್ಡ ಅಳಿಲು, ಚಿರತೆಗಿಂತ ಸ್ವಲ್ಪ ಸಣ್ಣದಾದ ಗುರ್ಕೆ, ಕಾಡು ಕೋಣಗಳು (ಗಮ್ಯ), ಜೊತೆಗೆ ಬೋನಸ್ ಎಂಬಂತೆ ಇಲಿಗಳು, ಬಾವಲಿಗಳು… ಒಂದೇ ಎರಡೇ! ರಾತ್ರಿ ಮಲಗಿದ್ದಾಗ ಹಂಚಿನ ಮೇಲೆ ಆಗಾಗ ದುಡು ಡುದು ಸದ್ದು ಕೇಳುತ್ತಿತ್ತು. ಮೊದಮೊದಲು ಅದು ಏನಿರಬಹುದು ಅಂತ ತಲೆ ಕೆಡಿಸಿಕೊಂಡೆನಾದರೂ ಆಮೇಲಾಮೇಲೆ ಅದರ ಸದ್ದು ಇಲ್ಲದಿದ್ದರೆ ನಿದ್ದೆ ಬರುತ್ತಿರಲಿಲ್ಲ! ಮತ್ತೊಬ್ಬ ಶಿಷ್ಯ ವಿನೋದ, ಅದು ದೆವ್ವದ್ದೆ ಕಿತಾಪತಿ ಅಂತ ಬಲವಾಗಿ ನಂಬಿದ್ದರು! ತೋಟದಲ್ಲಿಯೇ ಮನೆಯಾದ್ದರಿಂದ ಇವೆಲ್ಲ ಸಾಮಾನ್ಯವಾಗಿದ್ದವು.
ನನಗೆ ಬೇರೆ ಯಾವುದೇ ಪ್ರಾಣಿಗಿಂತ ಹಾವಿನ ಭಯ ತುಂಬಾ ಜಾಸ್ತಿ. ಯಾರಿಗೆ ಭಯ ಇಲ್ಲ!? ಆದರೆ ನಾಗಣ್ಣ ಮಾತ್ರ ಹಾವಿಗೆ ಹೆದರುತ್ತಿರಲಿಲ್ಲ. ಅವರ ಬೆಂಗಳೂರಿನ ಮನೆಯ ಸುತ್ತಲೂ ಎರಡು ನಾಗರ ಹಾವುಗಳು ಮತ್ತೆ ಕೊಳಕಮಂಡಲ ಬರುತ್ತಿದ್ದ ದೃಶ್ಯ ವಿಡಿಯೋ ಮಾಡಿದ್ದನ್ನು ನಮಗೆ ತೋರಿಸಿ ಇನ್ನೂ ಹೆದರಿಸುತ್ತಿದ್ದರು.
“ಸಾರ್, ಕೆರೆ ಹಾವು ಬಂದ್ರೆ ಅವು ಅಟ್ಯಾಕ್ ಮಾಡೋ ತರ ಬರುತ್ತವೆ, ಆದ್ರೆ ನಾವು ಹೆದರಬಾರದು. ನಾಗರ ಹಾವು ಹಾಗೆ ಅಟ್ಯಾಕ್ ಮಾಡಲ್ಲ… ನಮ್ಮ ನಾಯಿ ನಗರ ಹಾವು ಕಚ್ಚಿಸಿಕೊಂಡು ಸತ್ತೆ ಹೋಯ್ತು… ಕೊಳಕು ಮಂಡಲ ಕಡಿದರಂತೂ ಕಡಿದಿರೋ ಭಾಗ ಎಲ್ಲಾ ಕೊಳೆತು ಹೋಗುತ್ತೆ…” ಎಂಬಿತ್ಯಾದಿ ಕತೆಗಳನ್ನು ವಿವರಿಸಿ ಹೇಳೋರು. ನನ್ನ ಪ್ರಕಾರ ನಾಗಣ್ಣ ಪ್ರೊಫೆಸರ್ ಆಗಬೇಕಿತ್ತು. ಅವರು ಕೆಲವು ವಿಷಯಗಳನ್ನು ಎಷ್ಟು ಚೆನ್ನಾಗಿ ಅರಿತುಕೊಂಡು ಕತೆ ರೂಪದಲ್ಲಿ ಹೇಳುತ್ತಿದ್ದರೆಂದರೆ ಕೇಳಲು ತುಂಬಾ ಮಜವಾಗಿರುತ್ತಿತ್ತು. ಹಾವಿನ ವಿಷಯವೊಂದನ್ನು ಬಿಟ್ಟು!
ತೋಟದಲ್ಲಿ ಹಾವುಗಳು ಇದ್ದೆ ಇರುತ್ತವೆ ಎಂಬ ಸಾಮಾನ್ಯ ಜ್ಞಾನ ಇತ್ತಾದರೂ ಅವು ಮನೆಯೊಳಗೆ ಬಂದು ಬಿಟ್ಟರೆ? ಅಂತ ನಾನು ಯಾವಾಗಲೂ ಒಂದು ಅವ್ಯಕ್ತ ಭಯದಲ್ಲೇ ಇದ್ದೆ. “ಅತ್ತೆ ಇಲ್ಲಿ ಹಾವು ಇದ್ದಾವ?” ಎಂಬ ಮೂರ್ಖ ಪ್ರಶ್ನೆಯನ್ನು ಒಂದು ಸಲ ಶಾರದತ್ತೆಗೆ ಕೇಳಿದ್ದೆ.
“ಹಾವು ಸುಮಾರು ಇದ್ದು. ಆದರೆ ಮನೆಯೊಳಗೆ ಬರ್ತಿಲ್ಲೆ. ಒಳಗಿನ ನೆಲ ತುಂಬಾ ಸ್ಮೂತ್ ಇದ್ದು. ಅಲ್ಲಿ ಅದಕ್ಕೆ ಹರಿಯಲು ಸರಿ ಹೋಗ್ತಿಲ್ಲೆ… ಭಯ ಪಡುವ ಅಗತ್ಯ ಇಲ್ಲ” ಅನ್ನುತ್ತಲೇ ಇನ್ನೂ ಹೆದರಿಕೆ ಹುಟ್ಟಿಸಿದ್ದರು!
ಈ ಎಲ್ಲಾ ವಿಷಯಗಳನ್ನೂ ಹೇಗೋ ಅರಗಿಸಿಕೊಂಡು ರಾತ್ರಿ ಮಲಗುತ್ತಿದ್ದೆನಾದರೂ, ನಾಗಣ್ಣನ ಗೊರಕೆ ಶಬ್ದ ಇವೆಲ್ಲಕ್ಕಿಂತ ಭಯಾನಕವಾಗಿ ನನಗೆ ನಿದ್ದೆಯೇ ಬರದಂತಾಯ್ತು. ಅವರಿಗೂ ಅದು ಗೊತ್ತಾಗಿ ನಾನು ಮಲಗಿದ ಮೇಲೆಯೇ ಮಲಗುವ ಅಭ್ಯಾಸ ಶುರು ಮಾಡಿದರು. ಅಂತೂ ಅವರ ಜೊತೆಗೆ ಸಂಸಾರ ಮಾಡಲೇಬೇಕಿತ್ತು. ಹೀಗಾಗಿ ಕ್ರಮೇಣ ಅದನ್ನೂ ರೂಢಿಸಿಕೊಂಡೆ. ನನ್ನ ಗೊರಕೆ ಶಬ್ದ ಅವರಿಗೆ ಕೇಳುತ್ತಿತ್ತಾ? ಛೆ ಛೆ ನಾನು? ಗೊರಕೆ ಹೊಡೆಯೋದೆ? ಚಾನ್ಸೇ ಇಲ್ಲ…
*****
ಇವೆಲ್ಲದರ ಜೊತೆಗೆ ಅಲ್ಲಿ ಇತರ ಸವಲತ್ತುಗಳೂ ಇದ್ದವು. ಹತ್ತಿರದಲ್ಲಿಯೇ society ಇತ್ತು. ಥೇಟು ನಗರದಲ್ಲಿರುವ departmental store ತರಹವೇ ಒಂದು super market ಇತ್ತು. ಸೂರ್ಯನಾರಾಯಣನ ದೇವಸ್ಥಾನವಿತ್ತು. ಮನೆಯಲ್ಲಿ ಇಂಟರ್ನೆಟ್ ಯಾವಾಗಲೂ ಸಿಗುತ್ತಿರಲಿಲ್ಲವಾದರೂ, ಸ್ವಲ್ಪ ಮುಂದೆ ಹೋದರೆ ಸಿಗುತ್ತಿತ್ತು. ನಾನು ಇಲ್ಲಿ ಅದೇ ಸಿಗ್ನಲ್ ಬಳಸಿ ನನ್ನ online ಯೋಗ ತರಬೇತಿ ಪಡೆಯುತ್ತಿದ್ದೆ. ಹಾಗೆ ನೋಡಿದರೆ ಬೆಂಗಳೂರಿನಲ್ಲಿಯೇ ಸಿಗ್ನಲ್ ಗೆ ಎಷ್ಟೊಂದು ಪರದಾಡುತ್ತೇವೆ. ಹಳ್ಳಿಯ ಮನೆಯಲ್ಲಿ ಯೋಗ ಮಾಡುವ ಯೋಗ ಯಾರಿಗುಂಟು ಯಾರಿಗಿಲ್ಲ! ನನ್ನ ಯೋಗ ಗುರುಗಳು ಕ್ಯಾಮೆರಾದಲ್ಲಿ ನನ್ನ background ನೋಡಿ ಗುರುಗಳೇ ಹಳ್ಳಿಗೆ ಹೋಗಿದ್ದೀರಾ ಅಂತ ಕೇಳಿದಾಗಲೆಲ್ಲ ನನ್ನ ಬಗ್ಗೆ ನನಗೆ ಹೆಮ್ಮೆ ಅನಿಸಿಬಿಡೋದು.
ಬೆಂಗಳೂರಿನಲ್ಲಿ ಹೊರಗೆ ಹೋದರೆ ದುಡ್ಡು ಬೇಕೆ ಬೇಕು. ಇಲ್ಲಿ ಅದೂ ಬೇಡ! ಹೆಗಡೆರ ತೋಟದಲ್ಲಿ ಎಲ್ಲಾ ಪುಕ್ಕಟೆ ಸಿಗುತ್ತಿತು. ಒಂದು ಸಲ ಒಂದೆರಡು ಈರುಳ್ಳಿ ಕಡ ಕೇಳಿದರೆ ಅದರ ಜೊತೆಗೆ ಮೆಣಸಿನಕಾಯಿ, ಲಿಂಬೆ ಹಣ್ಣು, ಕರಿಬೇವು, ಬಾಳೆಹಣ್ಣು ಎಲ್ಲ ಸಿಕ್ಕಿತ್ತು! ಮುಂದೆ ಹೋದಂತೆ ಹೊಲದಿಂದ ತಡವಾಗಿ ಬಂದೆವೆಂದರೆ ಮನೆಗೆ ಹೋಗಲು ಬಿಡದೆ ತಮ್ಮ ಮನೆಯಲ್ಲೇ ಊಟ ಮಾಡಿಸಿ ಕಳಿಸಿ ಬಿಡೋರು ಮಾವ.. ಆದರೆ ನಮಗೆ ಮುಜುಗರ ಆಗೋದು. ಯಾವಾಗಲೋ ಒಮ್ಮೆ ಸರಿ. ಅದಕ್ಕೆ ನಾವು ಎರಡು ಹೊತ್ತಿಗೆ ಸಾಲುವಷ್ಟು ಅಡಿಗೆಯನ್ನು ಮಾಡಿಟ್ಟುಕೊಂಡೆ ನಮ್ಮ ಹೊಲಕ್ಕೆ ಹೋಗುತ್ತಿದ್ದೆವು.
ಅಂತೂ ಎಲ್ಲಾ ವ್ಯವಸ್ಥೆಯಾಗಿತ್ತು. ಈಗ ಕೆಲಸ ಮಾಡುವುದೊಂದೇ ಬಾಕಿ ಇತ್ತು. ಮಾಡದೆ ಇರಲು ಯಾವುದೇ ನೆಪಗಳೂ ಇರಲಿಲ್ಲ. ನನ್ನ ಯೋಜನೆಯಂತೆ ನಮ್ಮ ನಾಲ್ಕು ಎಕರೆ ಹೊಲದಲ್ಲಿ ಏನು ಮಾಡಬೇಕು ಅಂತ ನಾನು ಬರೆದಿಟ್ಟುಕೊಂಡಿದ್ದ ಟಿಪ್ಪಣಿಗಳನ್ನು ನೋಡತೊಡಗಿದ್ದೆ…
(ಮುಂದುವರಿಯುವುದು…)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.