ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗುವ ವಸಂತಋತುವಿನ ಮೊದಲ ಭಾಗದಲ್ಲಿ ಅದೇನೊ ಒಂದು ರೀತಿಯ ಕಾಯುವಿಕೆಯಿದೆ. ಮಳೆಗಾಗಿ ಕಾಯುತ್ತಿರುವುದು ಭೂಮಿ, ಪ್ರಾಣಿಪಕ್ಷಿಗಳು ಮತ್ತು ನಾವು ಮನುಷ್ಯರು. ನಮ್ಮ ಕಾಯುವಿಕೆ ಪ್ರಕೃತಿಮಾತೆಗೆ ನಿಧಾನವಾಗಿ ಅರ್ಥವಾಯಿತೇನೊ ಅನ್ನುವಂತೆ ಭಾಸವಾಗುವುದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೀಸುವ ಬಿರುಗಾಳಿಯಿಂದ. ಇದು ಬರಲಿರುವ ಬೇಸಿಗೆಯ ಮಳೆಗಾಲದ ಚಿಹ್ನೆ. ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಮಳೆಗಾಲ. ಇದು ಒಮ್ಮೊಮ್ಮೆ ಫೆಬ್ರವರಿಗೂ ವಿಸ್ತರಿಸಿ ಅಲ್ಲಲ್ಲಿ ಪ್ರವಾಹಗಳು ಹರಿಯುತ್ತವೆ. ಮಾರ್ಚ್ ತಿಂಗಳಿಂದ ಮೇ ವರೆಗೆ ಶರತ್ಕಾಲ. ನಂತರ ಚಳಿಗಾಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ವಸಂತಮಾಸ ಕಾಲಿಟ್ಟಿದೆ ಅಂದರೆ ಹೊಸ ವರ್ಷದಾರಂಭ. ಹಣ್ಣು, ಹೂಗಳ ರಾಶಿ. ಬಣ್ಣಗಳ ಓಕುಳಿ. ಪಕ್ವವಾದ ಹಳೆ ಬೇರುಗಳು, ಹೊಸತನದ ಎಳೆ ಬೇರುಗಳ ಮೇಲೆ ಹೊಸೆದ ಕಾಂಡಗಳ ಮೈಯಲ್ಲಿ ಕಾಂತಿ. ಹೊಸ ಚಿಗುರು. ಆಸ್ಟ್ರೇಲಿಯಾದ ಉತ್ತರ ಭಾಗಗಳಲ್ಲಿ ಮಾವು, ಬೇವು, ಕರಿಬೇವು, ದಾಳಿಂಬೆ, ಮಲ್ಬೆರ್ರಿ, ಸೀಬೆ, ನಿಂಬೆ ಮುಂತಾದ ಹಣ್ಣುಮರಗಳ ತುಂಬಾ ಚಿಗುರು, ಹೊಸಹೂ. ಅವಕ್ಕೆ ಜೇನ್ನೊಣಗಳ ಮುತ್ತಿಗೆ. ದಕ್ಷಿಣ ಭಾಗಗಳಲ್ಲಿ ಸೇಬು, ಪೇರ್ ಇತ್ಯಾದಿ… ಅಲ್ಲಲ್ಲಿ ‘ಫ್ರೂಟ್ ಪಿಕ್ಕಿಂಗ್’ ಆಹ್ವಾನಗಳು ಕಾಣುತ್ತಿವೆ. ಸಾರ್ವಜನಿಕರು ಹಣ್ಣು ತೋಟಗಳಿಗೆ ಹೋಗಿ ಸ್ವಲ್ಪ ಶುಲ್ಕ ಕೊಟ್ಟು ಬೇಕಾದಷ್ಟು ಹಣ್ಣು ಸಂಗ್ರಹಿಸಿ ಒಯ್ಯಬಹುದು. ನಮ್ಮನೆಯಿಂದ ಒಂದು ಗಂಟೆ ಕಾರು ಪ್ರಯಾಣದ ದೂರದಲ್ಲಿರುವ ಸ್ಟ್ರಾಬೆರಿ ಫಾರ್ಮ್‌ಗೆ ಹೋಗುವ ಆಲೋಚನೆಯಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗುವ ವಸಂತಋತುವಿನ ಮೊದಲ ಭಾಗದಲ್ಲಿ ಅದೇನೊ ಒಂದು ರೀತಿಯ ಕಾಯುವಿಕೆಯಿದೆ. ಮಳೆಗಾಗಿ ಕಾಯುತ್ತಿರುವುದು ಭೂಮಿ, ಪ್ರಾಣಿಪಕ್ಷಿಗಳು ಮತ್ತು ನಾವು ಮನುಷ್ಯರು. ನಮ್ಮ ಕಾಯುವಿಕೆ ಪ್ರಕೃತಿಮಾತೆಗೆ ನಿಧಾನವಾಗಿ ಅರ್ಥವಾಯಿತೇನೊ ಅನ್ನುವಂತೆ ಭಾಸವಾಗುವುದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೀಸುವ ಬಿರುಗಾಳಿಯಿಂದ. ಇದು ಬರಲಿರುವ ಬೇಸಿಗೆಯ ಮಳೆಗಾಲದ ಚಿಹ್ನೆ. ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಮಳೆಗಾಲ. ಇದು ಒಮ್ಮೊಮ್ಮೆ ಫೆಬ್ರವರಿಗೂ ವಿಸ್ತರಿಸಿ ಅಲ್ಲಲ್ಲಿ ಪ್ರವಾಹಗಳು ಹರಿಯುತ್ತವೆ. ಮಾರ್ಚ್ ತಿಂಗಳಿಂದ ಮೇ ವರೆಗೆ ಶರತ್ಕಾಲ. ನಂತರ ಚಳಿಗಾಲ.
ಈ ರೀತಿ ಋತುಗಳ ಕುರಿತು ಮೆಲುಕು ಹಾಕುತ್ತಾ, ಒಂದೊಂದು ಋತುವಿನಲ್ಲೂ ಜರುಗುವ ನಿಸರ್ಗದಾಟವನ್ನು ಸಂಗೀತದೊಡನೆ ಜೋಡಿಸಿ ಅದರ ವಿಶಿಷ್ಟ ಅನುಭವವನ್ನು ಉಣಬಡಿಸಿದ್ದು The Rhythmic Sounds of Nature ಅನ್ನುವ ಒಂದು ಅಪರೂಪದ ಕಾರ್ಯಕ್ರಮ. ಈ ಪ್ರಾಯೋಜಿತ ಕಾರ್ಯಕ್ರಮಕ್ಕೆ ಬೆಂಬಲ ಕೊಟ್ಟು ಅದನ್ನು ನಡೆಸಿದ್ದು Brisbane Multicultural Arts Centre. ಇದನ್ನು ಒಂದು ಕಾರ್ಯಕ್ರಮ ಎಂದು ಹೆಸರಿಸುವುದರ ಬದಲು ಒಂದು ಅನುಭವ ಅನ್ನಬಹುದು. ಹೋಗೋಣವೆಂದು ಕಡೆ ಘಳಿಗೆಯಲ್ಲಿ ನಿರ್ಧರಿಸಿ ನಾವು ಈ ಅಪರೂಪದ ಅನುಭವವನ್ನು ಪಡೆದು ಸಂತೃಪ್ತರಾಗಿ ಬಂದೆವು.
ಅಗೋಚರ ಶಕ್ತಿ ನಿರ್ವಹಿಸುವ ನಿಸರ್ಗದಾಟವನ್ನು, ಪ್ರಕೃತಿಯ ಋತುಗಳನ್ನು, ಋತುಮಾಸಗಳಲ್ಲಿ ವಿಧಿವತ್ತಾಗಿ ಜರುಗುವ ವಿದ್ಯಮಾನಗಳನ್ನು ಅಭ್ಯಸಿಸಿ ಅದನ್ನು ಸಂಗೀತಕ್ಕೆ ಅಳವಡಿಸಿದ್ದು Arash Zanganeh ಎಂಬ ಪರ್ಷಿಯನ್ ವಾದ್ಯ ನಿಪುಣ. ಆರಾಷ್ ಇರಾನ್ ದೇಶದವರು. ಅವರ ಸಂಗೀತ ಸಂಯೋಜನೆಗಳಲ್ಲಿ ಪರ್ಷಿಯನ್ ಮತ್ತು ಸೂಫಿ ಸಮ್ಮಿಶ್ರಣದ ಜೊತೆ ಇರಾನಿಯನ್ ಸಮಾಜದ ಜಾನಪದ ಪ್ರಭಾವವಿದೆ. ತನ್ನ ಎಳೆತನದಲ್ಲಿ ತಂದೆ ಮತ್ತು ಅವರ ಸಮುದಾಯದ ಸಂಗೀತ ಪರಂಪರೆ ತನ್ನ ಮೇಲೆ ಆಳ ಪ್ರಭಾವ ಬೀರಿದೆ ಎಂದು ಆರಾಷ್ ಹೇಳಿದ್ದಾರೆ.
ಆರಾಷ್ ಮತ್ತವರ ಕುಟುಂಬ ಆಸ್ಟ್ರೇಲಿಯಾಕ್ಕೆ ವಲಸೆ ಬಂದು ನೆಲೆಸಿ ಈಗ ಕ್ವೀನ್ಸ್‌ಲ್ಯಾಂಡ್‌ನ ನಿವಾಸಿಯಾಗಿದ್ದಾರೆ. ಅವರು ಸಂಗೀತ ಬರಹಗಾರ, ಸ್ಥಳೀಯ ಶೈಕ್ಷಣಿಕ ಸಂಸ್ಥೆಯಲ್ಲಿ ಸಂಗೀತದ ಟೀಚರ್ ಮತ್ತು ಮ್ಯೂಸಿಕ್ ಥೆರಪಿಸ್ಟ್. ಸಮುದಾಯ ಅಭಿವೃದ್ಧಿಯತ್ತ ಕೆಲಸ ಮಾಡುತ್ತಾ ರೆಫ್ಯೂಜಿ ಯುವಜನರಿಗೆ ಸಂಗೀತದ ಮೂಲಕ ಸಾಂತ್ವನ ನೀಡುತ್ತಾ, ಆತ್ಮವಿಶ್ವಾಸ ಹೆಚ್ಚಿಸುತ್ತಾರೆ. ತಮ್ಮದೇ ಆದ ಸಂಗೀತ ತಂಡವನ್ನು, ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ತಮ್ಮ ವಿಶಿಷ್ಟ ಪರ್ಷಿಯನ್-ಸೂಫಿ ಪರಂಪರೆಯ ಸಂಗೀತ ಸಂಭ್ರಮವಿರುವ ಆಲ್ಬಮ್ ಹೊರ ತಂದಿದ್ದಾರೆ.
ಆರಾಷ್ ಅವರ ಈ ಒಂದು ನಿಸರ್ಗ-ಸಂಗೀತದ ಇಡಿಯಾದ ಪ್ರಯತ್ನ ನಡೆದಿದ್ದು ಅವರ ಪಿಎಚ್.ಡಿ ಪದವಿ ವ್ಯಾಸಂಗಕ್ಕೆ. The Rhythmic Sounds of Nature ಅನ್ನುವ ಆಲ್ಬಮ್ ಹುಟ್ಟಿದ್ದು ಬೆಳೆದಿದ್ದು ಮತ್ತು ಬೆಳೆದು ಮರವಾಗಿದ್ದು ಹಲವಾರು ವರ್ಷಗಳ ಪ್ರಯತ್ನದಿಂದ. ಈ ಕನಸನ್ನು ಕಂಡಿದ್ದ ಆರಾಷ್ ಅವರಿಗೆ ಅದನ್ನು ಡಾಕ್ಟರೇಟ್ ಪದವಿ ಅಧ್ಯಯನಕ್ಕೆ ತಕ್ಕಂತೆ ಅಳವಡಿಸಲು ಬೆಂಬಲ ನೀಡಿದ್ದು, ಸಹಾಯ ಮಾಡಿದ್ದು ಅನೇಕ ಮಂದಿ. ಡಾಕ್ಟರೇಟ್ ಡಿಗ್ರಿಯನ್ನು ಪಡೆದು ಅದಕ್ಕಾಗಿ ತಾವು ಸಿದ್ಧಪಡಿಸಿದ ನಿಸರ್ಗ-ಸಂಗೀತವನ್ನು ಸಾರ್ವಜನಿಕರ ಜೊತೆ ಹಂಚಿಕೊಂಡಿದ್ದು ಅವರ ಅವಿರತ ಅಭ್ಯಾಸಕ್ಕೆ ಕಿರೀಟವಿಟ್ಟಂತೆ.

ಇಡೀ ನಿಸರ್ಗದ ಪ್ರಾಣಿಪಕ್ಷಿಗಳ ಕಲರವ ಮಾತು ಮೌನ ಸಂಭಾಷಣೆ, ನೀರು ಹರಿಯುವ ಜುಳುಜುಳು ರಾಗಗಳು, ಮಳೆ ಬೀಳುವ ತಾನ, ಗಾಳಿಯ ಮೊಗೆತ, ಬಿರುಗಾಳಿಯ ಮೊರೆತ, ಮರಗಳ ಹೊಯ್ದಾಟ, ಎಲ್ಲವನ್ನೂ ಆರಾಷ್ ಅವರು ದಾಖಲಿಸಿದ್ದು ಕ್ವೀನ್ಸ್‌ಲ್ಯಾಂಡ್ ಭಾಗವಾದ ಗೋಲ್ಡ್ ಕೋಸ್ಟ್ ಭೂಭಾಗದ ಹಿನ್ನೆಲೆಯಲ್ಲಿರುವ Springbrook National Park ವಲಯದಲ್ಲಿ. ಸತತ ಎರಡು ವರ್ಷಗಳ ಕಾಲ ಈ ವಿಶಾಲವಾದ ಪ್ರಕೃತಿ ಮಡಿಲಲ್ಲಿ ಸುತ್ತಿ, ಪ್ರತಿಯೊಂದೂ ಋತುಮಾನವನ್ನು ಅಭ್ಯಸಿಸಿ, ಅದರ ಪ್ರಾಕೃತಿಕ ಭಾಷೆಯನ್ನು ಅರ್ಥ ಮಾಡಿಕೊಂಡು, ಅದನ್ನು ದಾಖಲಿಸಿದ್ದಾರೆ. ಸಾವಿರಾರು ಫೋಟೋಗಳನ್ನು ಮತ್ತು ನೂರಾರು ವಿಡಿಯೋಗಳನ್ನು ಮಾಡಿಕೊಂಡು, ಅವನ್ನೆಲ್ಲಾ ಡಿಜಿಟಲ್ ರೂಪಕ್ಕೆ ತಂದು, ಅದನ್ನು ಪ್ರೈಮರಿ ಡಾಟಾ ಎಂದು ವಿಂಗಡಿಸಿ ಡಾಕ್ಟರೇಟ್ ಅಧ್ಯಯನಕ್ಕೆ ಹೊಂದಿಸಿದ್ದಾರೆ. ನಂತರ ಆ ಪ್ರೈಮರಿ ಡಾಟಾವನ್ನು ಸೂಫಿ, ಪರ್ಷಿಯನ್ ಮತ್ತು celtic ಸಂಗೀತ ಪ್ರಕಾರಗಳಿಗೆ ಹೊಂದಿಸಿ ಹೊಸ ಸಂಗೀತವನ್ನು ಬರೆದಿದ್ದಾರೆ.
ಹೀಗೆ ಆರಾಷ್ ಅವರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳನ್ನು ಆರು ವಿವಿಧ ವಾದ್ಯಗಳನ್ನು ಬಳಸಿ ಅದನ್ನು ಒಂದು ಮೇಳವನ್ನಾಗಿಸಿ ಪ್ರಸ್ತುತ ಪಡಿಸಿದ್ದಾರೆ. ವಾದ್ಯಗಳಲ್ಲಿ ಇದ್ದದ್ದು ಡಬಲ್ bass, Fiddle, ಕೀಬೋರ್ಡ್, ಮ್ಯಾಂಡೊಲಿನ್, ಬ್ಯಾಂಜೋ, ಟೆನರ್ ಗಿಟಾರ್, bouzouki, ಮತ್ತು ತಮಟೆ, ಪುಟಾಣಿ ಚಂಡೆ ವಾದ್ಯ. ವಾದ್ಯಗಳನ್ನು ನುಡಿಸಿದವರು ಅತ್ಯಂತ ಪರಿಣಿತರು. ಎಲ್ಲರೂ ಆರಾಷ್ ಅವರ ಅಧ್ಯಯನದಲ್ಲಿ ಜೊತೆಯಾಗಿದ್ದವರು. ಹೊಸ ಸಂಗೀತ ಭಾಷ್ಯವನ್ನು ಬರೆಯುವುದಕ್ಕೆ ಎಲ್ಲರ ಪ್ರಯತ್ನವಿದೆ. ಸಹಕಾರವಿದೆ.
ಇವೆಲ್ಲಕ್ಕೂ ಮಿಗಿಲಾಗಿ ಬಂದ ದೊಡ್ಡ ಸಹಾಯ ಮತ್ತು ಸಹಕಾರ ಸಿಕ್ಕಿದ್ದು ಸ್ಥಳೀಯ ಅಬೊರಿಜಿನಲ್ ಸಮುದಾಯದಿಂದ. ಇವರು Springbrook National Park ಹಬ್ಬಿರುವ ಅಬೊರಿಜಿನಲ್ Kombumerri ಪ್ರದೇಶದವರು. ಇವರ ಸಮುದಾಯದ ಹೆಸರು Yugambeh. ಹಾಗಾಗಿ ತಾವುಗಳು Yugambeh ಜನರು ಎಂದು ಗುರುತಿಸಿಕೊಳ್ಳುತ್ತಾರೆ. ಇವರಲ್ಲದೆ, ಇದೇ ಅಗಾಧ ಭೂ ಪ್ರದೇಶದಲ್ಲಿ Bundjalung ಎನ್ನುವ ಜನಸಮುದಾಯದವರೂ ಇದ್ದಾರೆ.
ಆರಾಷ್ ಮತ್ತು ಅವರ ಅಧ್ಯಯನದ ಸೂಪರ್ವೈಸರ್‌ಗಳು Yugambeh ಜನಸಮುದಾಯದ ಹಿರೀಕರಾದ ಆಂಟಿ ಡಾಕ್ಟರ್ ಮೇರಿ ಗ್ರಯಾಮ್ ಅವರ ಮಾರ್ಗದರ್ಶನ ಪಡೆದಿದ್ದಾರೆ. ಅಪಾರ ಸ್ಥಳೀಯ ಅಬೊರಿಜಿನಲ್ ಸಮುದಾಯ ಜ್ಞಾನ ಮತ್ತು ಆ ಭೂಪ್ರದೇಶದ ಪ್ರಾಕೃತಿಕ ಸಂಬಂಧದ ಎಳೆಗಳ ನಾಡಿಬಡಿತವನ್ನು ಆಳವಾಗಿ ತಿಳಿದಿರುವ ಆಂಟಿ ಮೇರಿ ಅವರು ಆರಾಷ್ ಅಧ್ಯಯನದಲ್ಲಿ ಭಾಗಿಯಾಗಿ ತಮ್ಮ Kombumerri ಪ್ರದೇಶದ ಆರು ಪ್ರತ್ಯೇಕ ಪ್ರಾಕೃತಿಕ ಋತುಗಳನ್ನು ಗುರುತಿಸಿದ್ದಾರೆ. ಅವರ ಮಾರ್ಗದರ್ಶನದ ಪ್ರಭಾವದಿಂದ ಆಳವಾದ ಅಂತರ್-ಕೇಳುವಿಕೆ ಮತ್ತು ಸ್ಥಳ-ಗೌರವ ಅನ್ನುವ ದಾರ್ಶನಿಕ ತತ್ವಗಳನ್ನು ಇಡೀ ಅಧ್ಯಯನದಲ್ಲಿ ಅಳವಡಿಸಿಕೊಂಡಿದ್ದಾರೆ.

ಆರಾಷ್ ಅವರು ಈ ಆರು ಋತುಗಳಲ್ಲಿ ಜರುಗುವ ನೈಸರ್ಗಿಕ ಬದಲಾವಣೆಗಳನ್ನು ಹನ್ನೆರೆಡು ಭಾಗಗಳಾಗಿ ಮಾಡಿ ಹನ್ನೆರೆಡು ಸಂಗೀತ ಸಂಯೋಜನೆಗಳನ್ನು ರಚಿಸಿದ್ದಾರೆ. ಪ್ರತಿಯೊಂದು ಸಂಯೋಜನೆಗೂ ಒಂದೊಂದು ಆಸಕ್ತಿ ಹುಟ್ಟಿಸುವ ಹೆಸರಿದೆ. ಉದಾಹರಣೆಗೆ, Goanna, Storm, Mullet, ಇತ್ಯಾದಿ. ಈ ಹೆಸರಿನ ಜೊತೆಗೆ ಹೊಂದುವ ಫೋಟೋಗಳೂ, ವಿಡಿಯೋಗಳು ಇವೆ. ಒಂದೊಂದು ಸಂಯೋಜನೆಯನ್ನು ಪ್ರಸ್ತುತ ಮಾಡುವಾಗ ಸಂಗೀತ ತಂಡದ ಹಿಂದಿದ್ದ ದೊಡ್ಡ ಪರದೆಯ ಮೇಲೆ ಈ ಫೋಟೋಗಳನ್ನು, ವಿಡಿಯೋವನ್ನು ತೋರಿಸುತ್ತಿದ್ದರು. ಒಬ್ಬ ನೃತ್ಯಗಾತಿ ಬಂದು ಮೂರು ಹಾಡುಗಳಿಗೆ ಮಾತ್ರ ಹೊಂದುವಂತೆ ಸೂಫಿ ನೃತ್ಯ ಮಾಡಿದ್ದು ಮತ್ತಷ್ಟು ವಿಶೇಷವಾಗಿತ್ತು. ಮೊದಲೆ ಹೇಳಿದಂತೆ ಇದೊಂದು ಸಂಗೀತ ಕಚೇರಿಯಾಗಲಿಲ್ಲ. ಹಾಡುಗಾರಿಕೆಯೂ ಇರಲಿಲ್ಲ. ಅತ್ಯುತ್ತಮ ಸೂಫಿ-ಪರ್ಷಿಯನ್-Celtic ಪಂಥಗಳ ವಾದ್ಯ ಸಂಗೀತದಿಂದ ನಮ್ಮನ್ನು ಅಲೌಕಿಕ ಅನುಭವಕ್ಕೆ ಒಡ್ಡಿದ್ದರು. ಪ್ರಕೃತಿಯೊಡನೆ ನಾವು ಸಂವಹಿಸುವಂತೆ ಆಗಿತ್ತು. ಮನುಷ್ಯ-ಪೃಕೃತಿ ಸಂಬಂಧದ ಅವಿನಾಭಾವ ಅನುಭವದಲ್ಲಿ ನಾವು ಮಿಂದೆದ್ದೆವು. ಅನೂಚಾನ ನಿಸರ್ಗ ಋತು ಗಾನವು ನಮಗೆ ಸಾಂತ್ವನ ನೀಡಿತ್ತು.
(ಫೋಟೋಗಳು: ಲೇಖಕರವು)

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

