ಹುಲ್ಲಹಳ್ಳಿ ಗ್ರಾಮದ ಒಂದು ಅಂಚಿನಲ್ಲಿರುವ ವರದರಾಜ ದೇಗುಲ ಸಾಕಷ್ಟು ವಿಶಾಲವಾದ ಆವರಣವನ್ನು ಹೊಂದಿದೆ. ಆವರಣದೊಳಕ್ಕೆ ಕಾಲಿಡುತ್ತಿದ್ದಂತೆ ಎಡಭಾಗದಲ್ಲಿ ಶಿಲಾಮಂಟಪವೊಂದು ಗೋಚರಿಸುತ್ತದೆ. ವಿಜಯನಗರ ಕಾಲದಲ್ಲಿ ಕಟ್ಟಿರಬಹುದಾದ ಈ ಸೊಗಸಾದ ಉತ್ಸವ ಮಂಟಪವು ಉಸ್ತುವಾರಿಯ ಕೊರತೆ, ಜನರ ಅಲಕ್ಷ್ಯಗಳಿಂದ ಅಷ್ಟಿಷ್ಟು ಭಗ್ನವಾಗಿದ್ದರೂ ಅದರ ಮೂಲಸೌಂದರ್ಯಕ್ಕೆ ಊನವಾಗಿಲ್ಲ. ನಾಲ್ಕೂ ಕಂಬಗಳು ಪುಷ್ಪವಲ್ಲರಿಗಳಿಂದ ಅಲಂಕೃತವಾಗಿದ್ದು ನರಸಿಂಹ, ಸೂರ್ಯ, ವೇಣುಗೋಪಾಲ, ಶ್ರೀರಾಮ, ಹನುಮಂತ, ದ್ವಾರಪಾಲಕ, ಶಿಲಾಸುಂದರಿಯರೇ ಮೊದಲಾದವರು ಪ್ರತಿ ಕಂಬದ ನಾಲ್ಕು ಬದಿಗಳಲ್ಲಿ ವಿರಾಜಮಾನರಾಗಿದ್ದಾರೆ. ಮಂಟಪದ ಸುತ್ತ ಇರಿಸಿದ ಶಿಲೆಗಳಲ್ಲಿ ಯಕ್ಷಾದಿ ಪರಿವಾರದವರು ಕಂಡುಬರುತ್ತಾರೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತಾರನೆಯ ಕಂತು

 

ಮೈಸೂರಿನಿಂದ ಮೂವತ್ತೈದು ಕಿಮೀ ದೂರದಲ್ಲಿರುವ ಹುಲ್ಲಹಳ್ಳಿ ನಂಜನಗೂಡು ತಾಲ್ಲೂಕಿಗೆ ಸೇರಿದೆ. ಇಲ್ಲಿನ ದೇವಾಲಯಗಳು ಹೊಯ್ಸಳರ ಕಾಲಕ್ಕಾಗಲೇ ಪ್ರಸಿದ್ಧಿ ಪಡೆದಿದ್ದುವೆಂದಮೇಲೆ ಸ್ಥಳಪುರಾಣ, ಐತಿಹ್ಯಗಳು ಸಾಕಷ್ಟು ಪ್ರಚುರವಾಗಿರಲೇಬೇಕು. ಶಾಸನ ಬರೆಹಗಳಲ್ಲಿ ಹುಲ್ಲಹಳ್ಳಿಯ ಹೆಸರನ್ನು ಸಂಸ್ಕೃತಕ್ಕೆ ಅನುವಾದಿಸಿ ತೃಣಪುರವೆಂದು ಕರೆದಿದ್ದಾರೆ.

ವರದರಾಜ ದೇವಾಲಯ ಹಾಗೂ ಮಲ್ಲೇಶ್ವರ ದೇವಾಲಯಗಳು ಹುಲ್ಲಹಳ್ಳಿಯ ಪ್ರಮುಖ ದೇಗುಲಗಳು. ಹೊಯ್ಸಳ ವಂಶದ ಕೊನೆಯ ಅರಸ ಮೂರನೆಯ ಬಲ್ಲಾಳನ ಕಾಲ(1291-1342)ದಲ್ಲಿ ತೆರಕಣಾಂಬಿಯ ಪ್ರಾಂತ್ಯದ ಅಧಿಪತಿಯಾಗಿದ್ದ ಕೇತಯನಾಯಕನೆಂಬುವನು ಹುಲ್ಲಹಳ್ಳಿಯ ವರದರಾಜಸ್ವಾಮಿ ದೇವಾಲಯಕ್ಕೆ ಕೇತಂಬಳ್ಳಿಯೆಂಬ ಗ್ರಾಮವನ್ನು ದತ್ತಿಯಾಗಿ ನೀಡಿದನಂತೆ. ಮುಂದೆ ವಿಜಯನಗರದ ಅರಸರೂ ಮೈಸೂರು ಒಡೆಯರೂ ಈ ದೇವಾಲಯದ ಸುಸ್ಥಿತಿಗೆ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ.

ಹುಲ್ಲಹಳ್ಳಿ ಗ್ರಾಮದ ಒಂದು ಅಂಚಿನಲ್ಲಿರುವ ವರದರಾಜ ದೇಗುಲ ಸಾಕಷ್ಟು ವಿಶಾಲವಾದ ಆವರಣವನ್ನು ಹೊಂದಿದೆ. ಆವರಣದೊಳಕ್ಕೆ ಕಾಲಿಡುತ್ತಿದ್ದಂತೆ ಎಡಭಾಗದಲ್ಲಿ ಶಿಲಾಮಂಟಪವೊಂದು ಗೋಚರಿಸುತ್ತದೆ. ವಿಜಯನಗರ ಕಾಲದಲ್ಲಿ ಕಟ್ಟಿರಬಹುದಾದ ಈ ಸೊಗಸಾದ ಉತ್ಸವ ಮಂಟಪವು ಉಸ್ತುವಾರಿಯ ಕೊರತೆ, ಜನರ ಅಲಕ್ಷ್ಯಗಳಿಂದ ಅಷ್ಟಿಷ್ಟು ಭಗ್ನವಾಗಿದ್ದರೂ ಅದರ ಮೂಲಸೌಂದರ್ಯಕ್ಕೆ ಊನವಾಗಿಲ್ಲ. ನಾಲ್ಕೂ ಕಂಬಗಳು ಪುಷ್ಪವಲ್ಲರಿಗಳಿಂದ ಅಲಂಕೃತವಾಗಿದ್ದು ನರಸಿಂಹ, ಸೂರ್ಯ, ವೇಣುಗೋಪಾಲ, ಶ್ರೀರಾಮ, ಹನುಮಂತ, ದ್ವಾರಪಾಲಕ, ಶಿಲಾಸುಂದರಿಯರೇ ಮೊದಲಾದವರು ಪ್ರತಿ ಕಂಬದ ನಾಲ್ಕು ಬದಿಗಳಲ್ಲಿ ವಿರಾಜಮಾನರಾಗಿದ್ದಾರೆ. ಮಂಟಪದ ಸುತ್ತ ಇರಿಸಿದ ಶಿಲೆಗಳಲ್ಲಿ ಯಕ್ಷಾದಿ ಪರಿವಾರದವರು ಕಂಡುಬರುತ್ತಾರೆ. ಗುಡಿಯ ಮುಂದಿನ ಪ್ರಾಚೀನ ಧ್ವಜಸ್ತಂಭದಲ್ಲಿ ಶಂಖಚಕ್ರ ಹಾಗೂ ಹನುಮಗರುಡರ ಉಬ್ಬುಶಿಲ್ಪಗಳಿವೆ.

ಪ್ರದಕ್ಷಿಣಾಪಥವನ್ನು ಕ್ರಮಿಸಿ ಒಳಗುಡಿಯತ್ತ ಬಂದರೆ ಕೊಠಡಿಗಳಲ್ಲಿರಿಸಿದ ಶಿಲ್ಪಗಳಲ್ಲಿ ಆಳ್ವಾರರು, ರಾಮಾನುಜರ ಪ್ರತಿಮೆಗಳಲ್ಲದೆ, ಕಾಳಿಂಗಮರ್ದನ ಕೃಷ್ಣನ ವಿಗ್ರಹವೊಂದು ಗಮನಸೆಳೆಯುತ್ತದೆ. ಒಂಟಿ ಹೆಡೆಯ ಸರ್ಪವನ್ನು ಲೀಲಾಜಾಲವಾಗಿ ಮಣಿಸುತ್ತಿರುವ ಐದಡಿ ಎತ್ತರದ ಮುದ್ದಾದ ಬಾಲಕೃಷ್ಣನ ವಿಗ್ರಹವೂ ಇದೆ.

ಒಳಗುಡಿಗೆ ಬಂದೋಬಸ್ತಾದ ಮರದ ಬಾಗಿಲ ಮೇಲೆ ಅತ್ಯಾಕರ್ಷಕ ಚಿತ್ತಾರ. ಶರಭಶಾರ್ದೂಲಗಳನ್ನೇರಿದ ಲಲನೆಯರು. ಪ್ರಣಯಿಜೋಡಿಗಳ ಶೃಂಗಾರವೈಭವ. ಇಷ್ಟು ಸೊಗಸಾದ ಕಾಷ್ಠಶಿಲ್ಪಗಳಿರುವ ದೇಗುಲದ್ವಾರ ಅಪೂರ್ವವೇ ಸರಿ. ಗರ್ಭಗುಡಿಯ ಎಡಭಾಗದ ಕೋಷ್ಠದಲ್ಲಿ ಯೋಗಭೋಗ ನರಸಿಂಹನ ಭವ್ಯವಾದ ಶಿಲ್ಪವಿದೆ. ಎಡಬಲಗಳಲ್ಲಿ ಪ್ರತ್ಯೇಕಶಿಲ್ಪರೂಪದಲ್ಲಿರುವ ಶ್ರೀದೇವಿ, ಭೂದೇವಿಯರಿಂದ ಸೇವಿತನಾಗಿ ಯೋಗಭಂಗಿಯಲ್ಲಿ ಕುಳಿತ ನರಸಿಂಹನ ಇಂತಹ ವಿಶಿಷ್ಟರೂಪವುಳ್ಳ ಶಿಲ್ಪ ಮತ್ತೆಲ್ಲಿಯಾದರೂ ಇರಬಹುದೋ ತಿಳಿಯದು.

ಮುಖ್ಯಗರ್ಭಗುಡಿಯ ಇಕ್ಕೆಲಗಳಲ್ಲಿರುವ ಆಳೆತ್ತರದ ಜಯವಿಜಯರ ವಿಗ್ರಹಗಳು ಪ್ರಮಾಣಬದ್ಧವೂ ಆಕರ್ಷಕವೂ ಆಗಿವೆ. ಗರ್ಭಗುಡಿಯಲ್ಲಿ ಶಂಖಚಕ್ರಗದಾಲಂಕೃತನಾದ ವರದರಾಜಸ್ವಾಮಿಯ ಶಿಲ್ಪವು ವರದಹಸ್ತ, ಮಂದಹಾಸಗಳಿಂದ ಶೋಭಿಸುತ್ತದೆ. ಇನ್ನೊಂದು ಗರ್ಭಗುಡಿಯಲ್ಲಿ ಲಕ್ಷ್ಮೀದೇವಿಯ ವಿಗ್ರಹವೂ ಬಾಗಿಲಲ್ಲಿ ಚಾಮರಧಾರಿಣಿಯರ ಶಿಲ್ಪಗಳೂ ಗಮನಸೆಳೆಯುತ್ತವೆ.

ಹುಲ್ಲಹಳ್ಳಿಯ ಇನ್ನೊಂದು ಮುಖ್ಯದೇವಾಲಯವೆಂದರೆ ಮಲ್ಲಿಕಾರ್ಜುನ ದೇಗುಲ. ವಿಜಯನಗರ ಕಾಲಕ್ಕೆ ಸೇರಿದ ಗುಡಿಯಿದು. ಬಸವರಾಜ ಒಡೆಯನೆಂಬ ಸ್ಥಳೀಯ ಮಾಂಡಳಿಕನು ಕ್ರಿ.ಶ. 1619ರಲ್ಲಿ ಈ ದೇವಾಲಯಕ್ಕೆ ದತ್ತಿನೀಡಿದ ಬಗೆಗೆ ಶಾಸನದ ಒಕ್ಕಣೆಯಿದೆ. ವರದರಾಜಗುಡಿಯಂತೆಯೇ ಇಲ್ಲಿಯೂ ಎತ್ತರದ ದ್ವಾರಪಾಲಕ ಶಿಲ್ಪಗಳು ಗಮನಸೆಳೆಯುತ್ತವೆ.

ಡಮರು, ತ್ರಿಶೂಲ, ಗದಾಹಸ್ತರಾದ ಶೈವದ್ವಾರಪಾಲಕರ ವಿಗ್ರಹಗಳು ಎಂಟು ಅಡಿಗಳಿಗೂ ಮಿಕ್ಕ ಎತ್ತರದಿಂದ ಭವ್ಯವಾಗಿ ಗೋಚರಿಸುತ್ತವೆ. ಗುಡಿಯ ಒಳಮಂಟಪದಲ್ಲಿರುವ ನಂದಿಯ ವಿಗ್ರಹವೂ ಸೊಗಸಾಗಿದೆ. ಕಂಠಾಭರಣ, ಗಂಟೆ, ಗೊರಸುಗಳ ಅಲಂಕಾರದಿಂದ ಕಣ್ಸೆಳೆಯುವ ನಂದಿ ಒಳಗುಡಿಯ ಶಿವಲಿಂಗಕ್ಕೆ ಅಭಿಮುಖವಾಗಿ ಕುಳಿತಿದೆ. ದೇವಾಲಯದ ಗಾರೆಯ ಗೋಪುರವೂ ಸುಸ್ಥಿತಿಯಲ್ಲಿದೆ.

ಹುಲ್ಲಹಳ್ಳಿಯತ್ತ ಬರುವವರು ನಂಜನಗೂಡು, ಚಾಮರಾಜನಗರಗಳ ದೇವಾಲಯಗಳೇ ಅಲ್ಲದೆ, ಸನಿಹದ ದೇಬೂರು, ಉಮ್ಮತ್ತೂರು, ತಗಡೂರುಗಳಲ್ಲಿರುವ ಪ್ರಾಚೀನ ದೇವಾಲಯಗಳನ್ನೂ ನೋಡಬಹುದು.