Advertisement
ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು: ಜುಲೇಖಾ ಬೇಗಂ ಜೀವನ ವೃತ್ತಾಂತ

ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಟ್ಟೆ ಜಾರಿತೋ ಅಥವಾ ನಾನೇ ಕದಲಿಸಿದೆನೋ ಮಾಂಸವೆಲ್ಲ ತುಂಡುತುಂಡಾಗಿ ಹರಿದುಬಂತು. ಗರ್ಭದಲ್ಲಿ ಭ್ರೂಣದ ಮಾಂಸ ಉಳಿದಿತ್ತೋ ಏನೊ, ‘ನನ್ನನ್ನು ಬೇಡವೆನ್ನುವ ಮೊದಲು ನನ್ನ ಹೇಳಿ-ಕೇಳಿ ಮಾಡಿದ್ದೀಯಾ? ಇಲ್ಲ ತಾನೆ, ಮತ್ತೆ ನಾನೇಕೆ ನಿನ್ನ ಒಪ್ಪಿಗೆ ಕೇಳಲಿ?’ ಎಂಬಂತಿತ್ತು ಆ ಸನ್ನಿವೇಶ. ಹಾರಿದ ಜಾಗದ ಸುತ್ತಲೂ ಮಾಂಸ ಚೂರಾಗಿ ಚೆಲ್ಲಿಬಿದ್ದಿತ್ತು. ಏನೂ ಮಾಡಲಾರದೆ, ತೊಟ್ಟ ಬಟ್ಟೆಯನ್ನೆಲ್ಲ ಹರಡಿ ಅಲ್ಲಿಯೇ ಸುಮ್ಮನೆ ಕುಳಿತೆ. ನೇಪಥ್ಯದಲ್ಲಿ ಪರದೆ ಎಳೆಯುವವರಿಗೂ ಏನಾಗುತ್ತಿದೆ ಎಂದು ಗೊತ್ತಾಗಿತ್ತು. ಬೆಳಕನ್ನು ಆರಿಸಿ, ಪರದೆಯನ್ನು ಎಳೆದೇಬಿಟ್ಟರು.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೈದನೆಯ ಕಂತು

ಮುಟ್ಟಾದ ಸಮಯದಲ್ಲಿ ಒದ್ದಾಡಿಬಿಡುತ್ತಿದ್ದೆ. ಪ್ರಾಕ್ಟೀಸ್ ನಡೆಯುತ್ತಿತ್ತು. ಕಂಪೆನಿ ಆಗಿನ್ನೂ ಆರಂಭವಾಗಿರಲಿಲ್ಲ. ಹೆಸರು ಪಡೆದು, ಪ್ರಸಿದ್ಧಿಯಾದ ಬಳಿಕ ಅವರವರಿಗೆ ಪ್ರತ್ಯೇಕ ಕೋಣೆಗಳನ್ನೊ, ಬಾಡಿಗೆ ಮನೆಗಳನ್ನೋ ನೀಡುತ್ತಾರೆ. ಅಂತೂ ಒಂದೆಡೆ ಉಳಿಯುವುದಕ್ಕೆ ಅವಕಾಶ ಸಿಕ್ಕಿತಲ್ಲಾ ಎಂದು ನಿರಾಳವಾಗಿದ್ದೆ.

ಕಂಪೆನಿಯ ಕಲಾವಿದರಾಗಿದ್ದ ಅಣ್ಣಿಗೇರಿ ಹುಸೇನ್ ಸಾಹೇಬರು ಅಂತರ್ಜಾತೀಯ ವಿವಾಹವಾಗಿದ್ದರು. ಅವರ ಹೆಂಡತಿ ಪಾತ್ರವನ್ನೇನೂ ಮಾಡುತ್ತಿರಲಿಲ್ಲ. ನಾಟಕ ನೋಡಲು ಬರುತ್ತಿದ್ದರಷ್ಟೇ. ನಾನು ತಿಂಗಳ ನೋವಿನ ಸಮಯದಲ್ಲಿ ಪೇಚು ಮೋರೆ ಹಾಕಿ ಕುಳಿತಿದ್ದೆ ಆವತ್ತು. ಕುಳಿತಲ್ಲಿಂದ ನಾನಂತೂ ಕದಲುತ್ತಲೇ ಇರಲಿಲ್ಲ. ನೋಡುವಷ್ಟು ನೋಡಿದ ಮೇಲೆ, ಹುಸೇನ್ ಸಾಹೇಬರ ಹೆಂಡತಿ ಬಂದು, ‘ಗಂಡಸ್ರು ಓಡಾಡೋ ಜಾಗದಾಗ ಹೀಗ್ ಕುಳಿತಿರ್ತಾರೇನು? ಹೂಂ, ಎದ್ ಬಾ’ ಎಂದು ಕೈ ಹಿಡಿದು ಮೇಲೆತ್ತಿದರೆ, ತೊಟ್ಟ ಬಟ್ಟೆಯೆಲ್ಲ ರಕ್ತಮಯ! ತಕ್ಷಣ ಅವಾಕ್ಕಾಗಿ, ಈ ಹುಡುಗಿಗೆ ಇಷ್ಟೂ ಗೊತ್ತಿಲ್ಲವಲ್ಲಾ ಎಂಬಂತೆ ಹಣೆ ಹಣೆ ಚಚ್ಚಿಕೊಳ್ಳುತ್ತಾ, ಎರಡೆರಡು ಬಾರಿ ತಲೆಬಗ್ಗಿಸಿ ಆಚೀಚೆ ನೋಡಿ ಒಳಕರೆದೊಯ್ದರು. ಕಂಡವರು, ಇವರೇನೊ ಕಳ್ಳತನ ಮಾಡುತ್ತಿರಬೇಕು ಎಂದು ಭಾವಿಸಬೇಕು! ಹಾಗಿತ್ತು ಅಂದಿನ ಸ್ಥಿತಿ.

ಸರಿ, ಒಳಬಂದ ಮೇಲೆ ಒಂದು ಕಾಟನ್ ಬಟ್ಟೆಯನ್ನು ಮಡಚಿ, ಅದನ್ನು ಮತ್ತೊಂದು ಬಟ್ಟೆಯ ನಡುವೆ ಇಟ್ಟು, ಸುತ್ತಿ ಕೊಟ್ಟರು. ಈಗಿನ ಕಾಲಕ್ಕಾದರೆ ತರಹೇವಾರಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಸಿಗುತ್ತವೆ. ನ್ಯಾಪ್‌ಕಿನ್‌ ಹೋಗಲಿ, ಒಳ ಉಡುಪನ್ನೂ ನಾವಂದು ತೊಡುತ್ತಿರಲಿಲ್ಲ. ಎರಡೂ ತುದಿಗಳು ಚೂಪಾಗಿ, ನಡುಮಧ್ಯೆ ದಪ್ಪ ಬಟ್ಟೆ ಇಟ್ಟಿದ್ದರಿಂದ, ಅದನ್ನು ನಮ್ಮ ಕಾಲದ ಪ್ಯಾಡ್‌ ಎನ್ನಬಹುದು. ಅದನ್ನು ಲಂಗೋಟಿಯ ರೀತಿ ಧರಿಸಬೇಕಿತ್ತು. ಸೊಂಟಕ್ಕೆ ಕಟ್ಟಿದ ಬಳ್ಳಿಯ ಮುಂಭಾಗ ಮತ್ತು ಹಿಂಭಾಗಕ್ಕೆ ಸಿಕ್ಕಿಸಿಕೊಂಡು, ಎರಡೂ ತುದಿಗೆ ಗಂಟು ಹಾಕಬೇಕು. ಗಂಟು ಹಾಕದಿದ್ದರೆ ಜಾರಬಹುದು ಅಥವಾ ಬೀಳಬಹುದು. ಹೀಗೆಲ್ಲ ಅವರು ಹೇಳುತ್ತಿದ್ದಾಗ, ಇಂತಹ ಮ್ಯಾಜಿಕ್ ಎಲ್ಲ ಇದೆಯಾ? ಎಂದು ಅನಿಸುತ್ತಿತ್ತು. ವಾರಪೂರ್ತಿ ರಕ್ತಸ್ರಾವವಾಗುತ್ತಿತ್ತು. ಆದರೊಂದು ಚೆನ್ನಾಗಿ ಗರಚಿ, ಒಗೆಯುತ್ತಿದ್ದದರಿಂದ ರಕ್ತದ ಕಲೆಯೇ ಉಳಿಯುತ್ತಿರಲಿಲ್ಲ. ಅಂದಹಾಗೆ, ಒಗೆದ ಮುಟ್ಟಿನ ಬಟ್ಟೆಗಳನ್ನು ಯಾರಿಗೂ ಕಾಣದ ಜಾಗದಲ್ಲಿ ಒಣಗಿಸುವುದು ಪರಂಪರೆಯೇ ಆಗಿಬಂದಿತ್ತಲ್ಲಾ!

ಮುಟ್ಟಾದ ಸಮಯದಲ್ಲಿ ಬಣ್ಣ ಹಚ್ಚುವ ಕಾಯಕಕ್ಕೆ ಬಿಡುವಿರಲಿಲ್ಲ. ಆಗ ಆ ವಿನಾಯಿತಿಯೂ ನನಗೆ ಬೇಕಿರಲಿಲ್ಲ. ಪಾತ್ರವಾಗಿ ವೇದಿಕೆ ಏರಿದಾಗ ಎಲ್ಲವೂ ಮರೆತುಬಿಡುವ ಮಾಯಾಲೋಕವದು. ಮುಟ್ಟಿನ ದಿನಗಳಲ್ಲಿ ತೊಡೆಯ ಸಂಧಿಗಳೆಲ್ಲ ನೋಯುತ್ತಿತ್ತು. ಇಲ್ಲವೆಂದೇನೂ ಸುಳ್ಳು ಹೇಳಲಾರೆ. ಆದರೆ, ಪಾತ್ರವಾದಾಗ ನಾನು ಸಂಭ್ರಮಿಸುತ್ತಿದ್ದೆ. ಆ ಸಂಭ್ರಮದ ಎದುರು ಈ ನೋವೆಲ್ಲವೂ ಗೌಣ. ಆ ವಯಸ್ಸಿನಲ್ಲಿ ಮುಟ್ಟಿನ ನೋವನ್ನು ಅರಗಿಸಿಕೊಳ್ಳಲು ತ್ರಾಣವಿತ್ತು ಬಿಡಿ. ಆದರೆ, ಮದುವೆಯಾಗಿ, ಮೂರು ಮಕ್ಕಳನ್ನು ಪಡೆದು, ನಾಲ್ಕನೆಯ ಜೀವ ನನ್ನ ಹೊಟ್ಟೆಯಲ್ಲಿ ಹುಟ್ಟುತ್ತಿದೆ ಎಂದಾಗ ಜೀವ ಸೋತಂಥ ಅನುಭವ! ಆ ನೆನಪುಗಳನ್ನು ನಿಮ್ಮೆದುರು ಮುಚ್ಚಿಡಲಾದಿತೆ?

ಬದುಕು ಬಂಗಾರವಾಯಿತು ಚಲನಚಿತ್ರ ನೋಡಿರಬಹುದು ನೀವೆಲ್ಲ. ಅದಕ್ಕೂ ಮೊದಲು ನಾವದನ್ನು ನಾಟಕವಾಡುತ್ತಿದ್ದೆವು. ಸಿನೆಮಾದಲ್ಲಿ ಮಂಜುಳಾ ಅವರು ನಿರ್ವಹಿಸಿದ್ದ ಪಾತ್ರವನ್ನು ನಾಟಕದಲ್ಲಿ ನಾನಭಿನಯಿಸುತ್ತಿದ್ದೆ. ನಾಟಕಕ್ಕೂ ಸಿನೆಮಾಗೂ ಸಂಭಾಷಣೆಯ ವ್ಯತ್ಯಾಸವಿತ್ತಷ್ಟೇ. ಆ ನಾಟಕದಲ್ಲಿ ಹಳ್ಳಿಮನೆಯ ದೃಶ್ಯವಿದೆ. ಮುಕ್ಕಣ್ಣಯ್ಯ ಊರಿನ ದೊಡ್ಡ ಶ್ರೀಮಂತ. ಅವನ ಮನೆಯೆದುರು ಕುಳಿತುಕೊಳ್ಳುವುದಕ್ಕೆಂದು ಒಂದಷ್ಟು ದೊಡ್ಡ ಕಟ್ಟೆಯಿತ್ತು. ನನ್ನ ಮಾವನ ಪಾತ್ರಧಾರಿ ಆ ಊರ ಗೌಡನಿಗೆ ಬೈಯುವ ಸಂದರ್ಭ. ಅದನ್ನು ಕೇಳಿದ್ದೇ ಸಂತೋಷದಿಂದ, ‘ಒನಸ್ ಮೋರ ಮಾವ, ಒನಸ್ ಮೋರ’ ಎಂದು ದೂರಕ್ಕೆ ಜಿಗಿಯಬೇಕು.

ನನಗಂದು ಗರ್ಭಪಾತ (ಅಬಾರ್ಷನ್) ಆಗಿತ್ತು. ಆಗಲೇ ಹೇಳಿದೆನಲ್ಲಾ, ನಾಲ್ಕನೇ ಮಗು ಅನಿರೀಕ್ಷಿತವಾಗಿ ಜೀವ ತಳೆಯುತ್ತಿದೆ ಎಂದು. ಅದನ್ನು ಸಾಕುತ್ತೇನೆಂಬ ವಿಶ್ವಾಸ ಇರಲಿಲ್ಲ. ಹಾಗಾಗಿ ನಾನೇ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಮುಂದಾಗಿದ್ದೆ. ಆ ದಿನ ಬೆಳಗ್ಗೆ ಒಂಭತ್ತೂವರೆಗೆ ಆಸ್ಪತ್ರೆಯಿಂದ ಆಚೆ ಬಂದದ್ದೆ, ಸಂಜೆ ಏಳಕ್ಕೆ ರಂಗ ಏರಿದ್ದೆ. ಅಂದು ವೈದ್ಯರೂ ನನ್ನ ಜೊತೆಗಿದ್ದರು. ಒಳ ಉಡುಪನ್ನು ಆಗಲೂ ಧರಿಸುತ್ತಿರಲಿಲ್ಲ. ಅದೇ ರೀತಿ, ಬಳ್ಳಿಯ ಆಧಾರ ಪಡೆದ ಬಟ್ಟೆಯಷ್ಟೇ ಧೈರ್ಯಕ್ಕಿದ್ದದ್ದು. ಅದೂ ತಾತ್ಕಾಲಿಕ ಎಂದರಿವಾಯಿತು! ಬಟ್ಟೆ ಜಾರಿತೋ ಅಥವಾ ನಾನೇ ಕದಲಿಸಿದೆನೋ ಮಾಂಸವೆಲ್ಲ ತುಂಡುತುಂಡಾಗಿ ಹರಿದುಬಂತು. ಗರ್ಭದಲ್ಲಿ ಭ್ರೂಣದ ಮಾಂಸ ಉಳಿದಿತ್ತೋ ಏನೊ, ‘ನನ್ನನ್ನು ಬೇಡವೆನ್ನುವ ಮೊದಲು ನನ್ನ ಹೇಳಿ-ಕೇಳಿ ಮಾಡಿದ್ದೀಯಾ? ಇಲ್ಲ ತಾನೆ, ಮತ್ತೆ ನಾನೇಕೆ ನಿನ್ನ ಒಪ್ಪಿಗೆ ಕೇಳಲಿ?’ ಎಂಬಂತಿತ್ತು ಆ ಸನ್ನಿವೇಶ. ಹಾರಿದ ಜಾಗದ ಸುತ್ತಲೂ ಮಾಂಸ ಚೂರಾಗಿ ಚೆಲ್ಲಿಬಿದ್ದಿತ್ತು. ಏನೂ ಮಾಡಲಾರದೆ, ತೊಟ್ಟ ಬಟ್ಟೆಯನ್ನೆಲ್ಲ ಹರಡಿ ಅಲ್ಲಿಯೇ ಸುಮ್ಮನೆ ಕುಳಿತೆ. ನೇಪಥ್ಯದಲ್ಲಿ ಪರದೆ ಎಳೆಯುವವರಿಗೂ ಏನಾಗುತ್ತಿದೆ ಎಂದು ಗೊತ್ತಾಗಿತ್ತು. ಬೆಳಕನ್ನು ಆರಿಸಿ, ಪರದೆಯನ್ನು ಎಳೆದೇಬಿಟ್ಟರು. ಬೇರೆ ಬಟ್ಟೆ ಧರಿಸಿ, ಸುಧಾರಿಸಿ ಬರುವಷ್ಟರಲ್ಲಿ ಹಾಸ್ಯ ನಟರು ಅಭಿನಯಿಸುತ್ತಾ, ನಾಟಕ ಮುಂದುವರೆಸಿದ್ದರು. ಶಕ್ತಿ ಸಂಪೂರ್ಣ ಸೋರಿಹೋದಂತೆ ಅನಿಸುತ್ತಿದ್ದಾದರೂ ನಾಯಕಿಯ ಪಾತ್ರಕ್ಕೆ ಕಲಾವಿದರು ಅಷ್ಟಾಗಿ ಸಿಗುತ್ತಿರಲಿಲ್ಲ. ಹಾಗಾಗಿ ಮತ್ತೆ ವೇದಿಕೆಯೇರಿದೆ.

ಅಂದಿನ ಉತ್ಸಾಹ ಈಗ ಇಲ್ಲ ಎನಿಸುತ್ತದೆ. ಮನೆಯ ಮೆಟ್ಟಿಲುಗಳನ್ನು ಏರುವಾಗ, ಒಂದೇ ಉಸಿರಿನಲ್ಲಿ ಏರಲಾಗುತ್ತಿಲ್ಲ ಯಾಕೆ? ಎಂದು ಕ್ಷಣ ಯೋಚಿಸುತ್ತೇನೆ. ಆಗೆಲ್ಲ ಮಗ ಕರೀಮನಾಡುವ ಮಾತು ನೆನಪಾಗುತ್ತದೆ. ‘ಅಮ್ಮ, ವಯಸ್ಸಾಗಿದೆ ನಿನಗೆ. ಸ್ವಲ್ಪ ಜಾಗ್ರತೆ ಬೇಕು’ ಎಂದು.

ಹಾಂ, ಆಗ ಮಾಂಡ್ರೆ ಕವಿಗಳ ಕಂಪೆನಿಯಲ್ಲಿದ್ದೆ. ಅಪರೂಪಕ್ಕೆ ಗೆಳತಿಯರೆಲ್ಲ ಸೇರಿ ಹೊಳೆಯ ಬಳಿಯಿರುವ ವೆಂಕಟರಮಣ ಸ್ವಾಮಿ ದೇವಸ್ಥಾನ ಮತ್ತು ಸುತ್ತಮುತ್ತ ವಾಕಿಂಗ್ ಹೋಗುತ್ತಿದ್ದೆವು. ಅಂದು ಹಾಗೆ ನಡೆದು ಹೋಗುತ್ತಿರುವಾಗ, ಕಲ್ಲು ತಾಕಿತೆಂದು ನಿಂತೆ. ನಿಧಾನ ನಡಿಗೆಯಲ್ಲಿ ಹಿಂದುಳಿದುಬಿಟ್ಟೆ. ಒಂದಷ್ಟು ಪಡ್ಡೆ ಹುಡುಗರು ಗುಂಪು ಕಟ್ಟಿದ್ದರು. ಅದರಲ್ಲೊಬ್ಬ ಪುಢಾರಿ ಲೈನ್ ಹೊಡೆದ. ಕಾಲುಕೀಳುವಾ ಎಂದರೆ ಕಾಲೇ ಕೈಕೊಟ್ಟಿದೆ! ಕಣ್ಣು, ಬಾಯಿ ಓರೆ ಮಾಡಿ, ತಲೆ ಕೆರೆದುಕೊಂಡು ಅವನನ್ನೇ ದಿಟ್ಟಿಸಿದೆ. ಎದುರಿದ್ದವರಿಗೆ ಹಾಗೆಲ್ಲ ವರ್ತಿಸಿದರೆ ಅಸಹ್ಯ ಹುಟ್ಟುತ್ತದೆ ಎಂದು ತಿಳಿದಿತ್ತು; ನನಗೂ ಅದೆ ಬೇಕಿತ್ತು. ಹೊರಟುನಡೆದರವರು.

ಇದೊಂದು ಉದಾಹರಣೆಯಷ್ಟೇ. ಈ ರೀತಿ ಬೇಕಾದಷ್ಟು ಘಟಿಸಿವೆ. ಅದರಲ್ಲೂ ನಾನು ಮದುವೆಯಾದ ಬಳಿಕ ಬಹಳಷ್ಟಾಗಿವೆ!

ಮುಂದುವರೆಯುವುದು…

(ಹಿಂದಿನ ಕಂತು: ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ…)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ