ಕವಿತೆಯ ಧ್ಯಾನಕ್ಕೆ ಕೂತಿರುವ ಅವರ ಧ್ಯಾನ ಇನ್ನಷ್ಟು ಸ್ಫುಟಗೊಂಡರೆ ಅವರಿಂದ ಇನ್ನೂ ಅದ್ಭುತವಾದ ಕವಿತೆಗಳನ್ನು ನಾವು ನಿರೀಕ್ಷಿಸಬಹುದು. ಇಲ್ಲಿನ ಬಹುಪಾಲು ಕವಿತೆಗಳು ಈ ಮಾತನ್ನು ಒಪ್ಪುತ್ತವೆ. ಗಪದ್ಯಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿವೆಯಾದರೂ ಪದ್ಯವೇ ಆಗದಿರುವ ಗದ್ಯದ ತುಣುಕುಗಳು ಕಾವ್ಯದ ಭಾಗವಾಗಲಾರವು. ಅಥವಾ ಕಾವ್ಯವೆನ್ನುವ ಸಣ್ಣ ಭ್ರಮೆಯನ್ನು ಹುಟ್ಟಿಸುವಲ್ಲಿಯೂ ಸೋಲುತ್ತವೆ. ಈ ಒಂದು ಎಚ್ಚರಿಕೆ ಕವಿಗಿರಬೇಕಾಗುತ್ತದೆ. ಮತ್ತೆ ಪ್ರಯೋಗದ ದೃಷ್ಟಿಯಿಂದ ಬಳಸುವ ಗದ್ಯಕ್ಕೆ ಸೂಕ್ತವಾದ ಪದಗಳನ್ನು ಪದ್ಯಕ್ಕೆ ಬಳಸುವಾಗ ಪದ್ಯದ ಲಯಕ್ಕೆ, ಸೌಂದರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕಿರುತ್ತದೆ 
ಆಶಾಜಗದೀಶ್ ಅಂಕಣ.

 

ಒಂದು ಎದೆಗೆ ಸಿಕ್ಕವರನ್ನೂ ತಳ್ಳಿ ಬಿಡುವ ಬೇಸರ, ಒಂದು ತಳಮಳ ಕುದಿಯುವ ಅಟ್ಟಿದೊಲೆಯ ಕುದಿ, ಒಂದು ಸಾವಿರ ಮೂಳೆ ಮುರಿದಂತ ನೋವು… ಯಾರಲ್ಲೂ ಹೇಳಲಾಗುತ್ತಿಲ್ಲ… ಎಂಥದೋ ಸಳುಕು ಏನೋ ಅಳುಕು… ಭಯವಾ ಆತಂಕವಾ… ಏನೊಂದು ಅರಿವಾಗದ ಅರವಳಿಕೆ ಚುಚ್ಚಿಸಿಕೊಂಡಂಥ ಸ್ಥಿತಿ…. ಮನದ ಅಳಲು ಅನಾಹತದ ಹಾಡಾಗುತ್ತದೆ… ಯಾರಿಗೂ ಕೇಳಿಸುವುದಿಲ್ಲ.. ಹಾಡು ಹರಳುಗಟ್ಟುತ್ತದೆ… ಒಂದೊಂದೇ ಹರಳು ಕಾವು ಪಡೆದು ಪದಗಳ ಮರಿಯಾಗಿ ಹೊರಬರುತ್ತದೆ… ಅನಾಹತದ ಹಾಡು ಪದಕ್ಕೆ ಪದ ಸೇರಿ ಪದ್ಯವಾಗುತ್ತದೆ… ಅದು ಆ ಭಾವಕ್ಕೊಂದು ಮುಕ್ತಿ.

ಸಮಯ ಸ್ವಲ್ಪ ಹೆಚ್ಚಾದರೂ ಒಲೆಯ ಮೇಲಿನ ಕವಳದ ಹದ ತಪ್ಪುತ್ತದೆ, ತೃಪ್ತಿ ತರುವ ಅಗುಳು ಕಮಟು ಹರಡುವ ಸೀಕಲಾಗುತ್ತದೆ… ಒಂದೊಂದು ಕವಳಕ್ಕೂ ಒಂದೊಂದು ಹದ ಬೇಕು. ನನ್ನಮ್ಮನಿಂದಲೇ ಕಲಿತ ಸಾರನ್ನು ನನಗೆ ಇದುವರೆಗೂ ಅವಳಂತೆ ಮಾಡಲು ಸಾಧ್ಯವಾಗಿಲ್ಲ…. ಅದೇ ಪದಾರ್ಥ, ಅದೇ ರೆಸಿಪಿ, ಅದೇ ವಿಧಾನ… ಬಹುಶಃ ಅವಳ ಕೈಯಲ್ಲೇ ಅಂಥದೊಂದು ರುಚಿ ತುಂಬಿರಬೇಕು… ಈ ಎಲ್ಲಾ ಸಾಧ್ಯತೆಗಳೂ ಎದೆಯ ಹಾಡಿಗಿದೆ…

ನನಗೆ ನನ್ನಮ್ಮ ಕಾಯಿಸಿ ಮಾಡಿದ ತುಪ್ಪದ ಹೊರತು ಯಾವ ತುಪ್ಪವೂ ಇಷ್ಟವಾಗುವುದಿಲ್ಲ. ಆ ಘಮ, ಆ ರುಚಿ ಭೂಮಿಯಲ್ಲೇ ಯಾವ ಅಮೃತಕ್ಕೂ ಬರಲು ಸಾಧ್ಯವಿಲ್ಲ ಎನಿಸುತ್ತಿರುತ್ತದೆ… ಈ ಅತಿಶಯದ ಮಾತಲ್ಲಿ ಅವಳ ಮೇಲಿನ ಪ್ರೀತಿಯ ಪಾಲೆಷ್ಟು.. ತುಪ್ಪದ ಗುಣದ ಪಾಲೆಷ್ಟು.. ನಿಜಕ್ಕೂ ಗೊತ್ತಿಲ್ಲ.. ಅಷ್ಟಕ್ಕೂ ತಿಳಿದೇನಾಗಬೇಕಿದೆ… ಅವೆರೆಡರದ್ದೂ ಅವಿನಾಭಾವ ಸಂಬಂಧದ ಬೆಸುಗೆ. ಬೆಣ್ಣೆಯನ್ನು ಚನ್ನಾಗಿ ತೊಳೆದು ಒಲೆಯ ಮೇಲೆ ಕಾಯಲು ಇಡುತ್ತಾಳೆ, ಅದು ನೊರೆಯಾಗಿ ಉಕ್ಕುವವರೆಗೂ ಕಾಯಬೇಕು, ನಂತರ ನಾಲ್ಕೈದು ಬೆಳ್ಳುಳ್ಳಿಯ ಎಸಳನ್ನು ಹಾಕುತ್ತಾಳೆ, ನಂತರ ಒಂದು ಚಮಚೆ ಕೆಂಪು ಖಾರದ ಪುಡಿ ಹಾಕುತ್ತಾಳೆ… ಎಲ್ಲವೂ ಸೇರಿ ಮತ್ತಷ್ಟು ಕುದ್ದು ಒಂದಾಗಿ ಹದಗೊಂಡಮೇಲೆ ಇಳಿಸುತ್ತಾಳೆ… ತುಪ್ಪವನ್ನು ಮರಳು ಮರಳಾಗಿ ಮಾಡುವುದು ಅವಳ ದೊಡ್ಡ ಕಲೆ… ನಿಜಕ್ಕೂ ಅದು ನನ್ನ ಕೈಗೆ ಇನ್ನೂ ಬಂದಿಲ್ಲ. ಇಲ್ಲಿ ಕಾಣಿಸಿಕೊಳ್ಳುವ ಒಂದೊಂದು ಕ್ರಿಯೆಯಲ್ಲೂ ಬದುಕಿನ ಸಾರವಿದೆ ಅನಿಸುತ್ತದೆ ನನಗೆ. ಅದರ ಹಿಂದೆಯೂ ಅದೆಷ್ಟೋ ಅವ್ಯಕ್ತ ಭಾವಗಳ ತಾಕಲಾಟ… ಸಿಕ್ಕಿದ್ದರ ಕೆಳೆದುಕೊಂಡದ್ದರ ಖುಷಿ ಮತ್ತು ದುಃಖದ ಕಣ್ಣೀರ ಸಂಗಮ… ತುಟಿ ಕೊಂಕಿಸಿ ನಿಡಿದಾದ ನಿಟ್ಟುಸಿರು ಹೊರಬರುವಾಗ ಮೂಗಿನ ಒಳತುದಿಯನ್ನು ಮೀಟುವ ನೋವೊಂದು ಕಣ್ಣಿಂದ ಜಾರಿ ಕಪೋಲ ದಾಟಿ ಕತ್ತಿಗಿಳಿಯುತ್ತದೆ. ಇಲ್ಲಿ ಎಲ್ಲವೂ ಕವಿತೆಯೇ..

ಕವಿತೆ ಹುಟ್ಟುವ ಸುಖ (ಕಷ್ಟವೂ..) ಒಂದು ಬಗೆಯದಾದರೆ ಕವಿತೆ ಒಳಗಿಳಿಯುವ ಸುಖ ಮತ್ತೊಂದು ನಮೂನಿಯದ್ದು. ಒಂದೊಂದೇ ರುಚಿಗ್ರಂಥಿಗಳನ್ನು ತಟ್ಟಿ ತಡವಿ ತಣಿಸುತ್ತಾ ಕವಿತೆಯನ್ನು ಆಸ್ವಾದಿಸುವುದೊಂದು ಅನಿರ್ವಚನೀಯ ಆನಂದ. ಅದರ ಚಪಲಕ್ಕೇ ಮತ್ತಷ್ಟು ಕವಿತೆಗಳನ್ನು ಇಳಿಸಿಕೊಳ್ಳಲು ಹೊರಡುತ್ತೇವೆ. ಅಂತಹುದೇ ಒಂದು ಚಂದದ ಕವಿತೆಗಳ ಗುಚ್ಛ ಈ “ಬರ್ಫದ ಬೆಂಕಿ”. ಇದರ ಒಡತಿ ನಾಗರೇಖಾ ಗಾಂವ್ಕರ್.

“ಆಳಕ್ಕೆ ಅಂಜುವ ಮನಸ್ಸು ಆಳವನ್ನೇ ಮೋಹಿಸುವ ಹಠಕ್ಕೆ ಬೀಳುವುದು. ಒಂದಕ್ಕೊಂದು ವಿರುದ್ಧ ಸಾಂಧ್ರತೆಯನ್ನೇ ಮೈಗೂಡಿಸಿಕೊಂಡಿರುವ ಬರ್ಫವೂ ಬೆಂಕಿಯು ಮನಸ್ಸೆಂಬ ಮಾಂತ್ರಿಕ ಜಗತ್ತಿನಲ್ಲಿ ಒಂದೇ ಕಡೆ ಅವಿರ್ಭಾವಗೊಳ್ಳುವುದು. ಹೀಗೆ ತಾಕಲಾಟದ ಭಾವಗಳೆಲ್ಲ ಮಾತಿಗಿಳಿಯುವ ಕ್ಷಣ ಕವಿತೆ ಕೈ ಹಿಡಿದಾಗ ತಪ್ತ ಮನಸ್ಸಿನ ತಲ್ಲಣಗಳು ಭುಗಿಲೇಳುತ್ತವೆ….” ಎನ್ನುತ್ತಾರೆ ನಾಗರೇಖ.

ಪ್ರೇಮ ಮತ್ತು ಮಸಣಗಳು
ಒಂದೇ ತೊಟ್ಟಿಲಲ್ಲಿ ಜೋಕಾಲಿಯಾಡುತ್ತವೆ
(ಜೋಲಿಯಾಟದ ಜಗತ್ತು)

ಎನ್ನುವ ನಾಗರೇಖಾರ ಸಮತೂಕದ ಮನಸ್ಸು ಅವರ ವ್ಯಕ್ತಿತ್ವದ ಪ್ರತಿಫಲಿತ ಬಿಂಬ. ನಾಗರೇಖಾ ಎಂದಾಕ್ಷಣ ನನಗೆ ನೆನಪಾಗುವುದು ಅವರ ಸರಳ ಸ್ನೇಹ, ಯಾವ ಕೊಂಕು ಇರದ ಮಾತು, ಇಂಗ್ಲೀಷ್ ಸಾಹಿತ್ಯದ ಅವರ ಅಪಾರ ಓದು, ಆ ತಿಳಿವಳಿಕೆಗಿರಬೇಕಾದ ವಿನಯತೆ ಮತ್ತು ಅವರ ನವಿರಾದ ಕವಿತೆ, ಕತೆ, ಲೇಖನ, ಪುಸ್ತಕ ಪರಿಚಯ… ಇತ್ಯಾದಿ ಇತ್ಯಾದಿ. ನಾಗರೇಖಾ ಮೂಲತಃ ಕರಾವಳಿ ಸೀಮೆಯವರು. ಅಂಕೋಲದವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕಿ.

ಅವರೊಂದಿಗೆ ಮಾತನಾಡುವುದೇ ಒಂದು ಚಂದದ ಭಾವಲಹರಿ. ಹಲವಾರು ವಿಷಯಗಳ ಬಗ್ಗೆ ಬಹಳ ನಿರ್ದಿಷ್ಟವಾಗಿ ನಿರರ್ಗಳವಾಗಿ ತಮ್ಮ ವಿಚಾರ ಮಂಡಿಸುವ, ಯಾವ ಹಮ್ಮೂ ತೋರಿಸಿಕೊಳ್ಳದೆ ತಮಗೆ ತಿಳಿದದ್ದನ್ನು ನೇರವಾಗಿ ಹೇಳುವ ಅವರ ಕವಿತೆಗಳೂ ಅವರಂತೆಯೇ…

ಹೊಸ ಸಂಕೇತಗಳಿಗೆ
ಹಳೆಯ ಸನ್ನೆಗಳೇ ಆಳಬಿಂಬಗಳು
(ಆಳವೆಂಬ ಅರಿವು)

ಎಂಬ ಆಳದ ಅರಿವು ಅವರದ್ದು. ನಾಗರೇಖಾರ ಕವಿತೆಗಳು ಅವರ ಅಂತರ್ಮುಖೀ ಚಿಂತನೆಯ ಪರಿಣಾಮ ಎನಿಸುತ್ತವೆ. ಈ ಕವಯಿತ್ರಿ ತನ್ನೊಳಗೆ ತಾನೊಂದು ತ್ರಿಕೋನದ ಗೂಡೊಂದನ್ನು ಕಟ್ಟಿಕೊಂಡು ಧ್ಯಾನಕ್ಕಿಳಿಯುತ್ತಾರೆ ಅನಿಸುತ್ತದೆ. ಮತ್ತೆ ಆಧ್ಯಾತ್ಮ(ಸಮಾಧಿಯೋಗ, ದೇವರೇ, ಸತ್ಯಂ ಶಿವಂ ಸುಂದರಂ , ತ್ರಿಕರಣ ಶುದ್ಧತೆ, ಭವ, ಜ್ಞಾನವಪಾತ್ರೆ, ಸಾಕ್ಷಾತ್ಕಾರ, ಅಲೌಕಿಕದ ಬ್ರಮೆ, ಭಕ್ತಿ… ಇಂತಹ ಇನ್ನಷ್ಟು ಪದಗಳು ಸಾಕ್ಷಿ ಹೇಳುತ್ತವೆ), ಹೆಣ್ಣು ಮತ್ತು ಪ್ರೇಮ ಅವರ ಕವಿತೆಗಳ ಸ್ಥಾಯೀ ಭಾವ. ಸತ್ಯಶೋಧಿಸುವ, ತನಗೆ ತಾನು ಎದುರಾಗಬೇಕಾದ ತನ್ನಂತರಾತ್ಮಕ್ಕೆ ನಿಷ್ಠರಾಗುಳಿವ ಪ್ರಾಮಾಣಿಕತೆಯ ಭಾವವನ್ನು ನಾಗರೇಖಾರ ಕವಿತೆಗಳಲ್ಲಿ ಗುರುತಿಸಬಹುದು. ಭಗವಂತನೆದುರು ನಿಂತಾಗ ಸಾಕ್ಷಾತ್ಕಾರ, ಜ್ಞಾನ, ತ್ರಿಕರಣ ಶುದ್ಧತೆ ಎಂದೆಲ್ಲ ಯೋಚಿಸಬಹುದೇ ವಿನಃ ಸತ್ಯಕ್ಕೆ ಅಪಚಾರ ಮಾಡುವುದು ಎಂಥವರಿಗೂ ಅಸಾಧ್ಯ. ನಾಗರೇಖಾ ಸಹ ಅದಕ್ಕೆ ಹೊರತಲ್ಲ.

ನಾಗರೇಖಾ ತಮ್ಮ ಕವಿತೆಗಳಲ್ಲಿ ಕಟ್ಟಿಕೊಡುವ ಸಣ್ಣ ಸಣ್ಣ ಸೂಕ್ಷ್ಮ ದೃಷ್ಟಿಯ ವಿವರಗಳು ಅಚ್ಚರಿ ಹುಟ್ಟಿಸುತ್ತವೆ. ಜೀವನದ ಹಲವು ಮಜಲುಗಳನ್ನು, ದಿನವೂ ಕಾಣುವ ಕ್ರಿಯೆಗಳನ್ನು ತಮ್ಮ ಕವಿತೆಯ ಭಾಗವಾಗಿಸಿಕೊಳ್ಳುವ ಜಾಣ್ಮೆ ಅವರದ್ದು.

ಬೆಂಕಿಯನ್ನು ಅಂಗೈಯಲ್ಲಿಟ್ಟುಕೊಂಡೆ
ಕಡಲ ಭೋರ್ಗರೆತಕ್ಕೆ ಕಿವುಡಾಗುತ್ತಲೇ
ನಮೆದು ಸಣ್ಣದಾಗುತ್ತಲೇ
ಮತ್ತೆ ಹೊಳಪಿನ ಚುಕ್ಕಿಯನ್ನು
ಹಣೆಯಲ್ಲಿ ಧರಿಸಿ ಸ್ಪಷ್ಟವಾಗುವುದು
ಮಾಗುವುದೆಂದರೆ ಇದೇ ಇರಬೇಕು
( ಮಾಗುವುದೆಂದರೆ ಇದೇ ಇರಬೇಕು)

ನಾಗರೇಖಾರ ಇಂತಹ ಹೆಣ್ದನಿಯ ಕವಿತೆಗಳಲ್ಲಿ ಹೆಣ್ಣಿನ ದಿಟ್ಟತನವನ್ನು ಗುರುತಿಸಬಹುದು. “ಸಂಸ್ಕಾರವೆಂಬ ಅತಿರೇಕದ ಆಯುಧ” ವನ್ನು ತಿರಸ್ಕರಿಸುತ್ತಲೇ ಅದರೊಂದಿಗಿದ್ದೂ ತನ್ನ ತನವನ್ನು ಸ್ಥಾಪಿಸಿಕೊಳ್ಳುವ “ಅವಳ” ಅಸ್ಮಿತೆ ಬೇಕಾದದ್ದು. ಇವುಗಳನ್ನು ಮಹಿಳಾವಾದಿ ಎನ್ನುವುದಕ್ಕಿಂತ ಎಲ್ಲ ಹೆಣ್ಣುಮಕ್ಕಳ ಆಂತರ್ಯ ಎನ್ನಬಹುದು. ಗಂಡು ತನ್ನ ಭಾವವನ್ನು ವ್ಯಕ್ತಪಡಿಸುತ್ತಾನಾದರೆ ಅಷ್ಟೇ ಸಹಜವಾದ ಅಭಿವ್ಯಕ್ತಿಯನ್ನು ಇಲ್ಲಿನ ಕವಿತೆಗಳಲ್ಲಿ ಗಮನಿಸಬಹುದು. ಒಂದರ್ಥದಲ್ಲಿ ವ್ಯವಸ್ಥೆಯನ್ನು, ಹೆಣ್ಣನ್ನು ನೋಡಲಾಗುವ ದೃಷ್ಟಿಯಲ್ಲಿನ ಮೂಲಭೂತವಾದಿತನವನ್ನೂ ತಣ್ಣಗೆ ವಿರೋಧಿಸುತ್ತವೆ ನಾಗರೇಖಾರ ಕವಿತೆಗಳು. ಅದು ಹೆಣ್ಣಾಗಿ ಅವರು ಮಾಡಬಹುದಾದ ಮತ್ತು ಮಾಡಬೇಕಾದ ಕರ್ತವ್ಯವೂ ಹೌದು. ಆದರೆ ವಸ್ತುವಿನ ದೃಷ್ಟಿಯಿಂದ ನಾಗರೇಖಾರ ಕವಿತೆಗಳು ಬಹಳ ವೈವಿಧ್ಯಮಯ ಅಂತಲೇ ಹೇಳಬಹುದು. ಅವರೇ ತಮ್ಮ ಕವಿತೆಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಕೊಡುತ್ತಾ ಅವುಗಳ ಭಿನ್ನ ನೆಲೆಯನ್ನೂ ತಿಳಿಸಿದ್ದಾರೆ.

ನಾಗರೇಖಾ ತಮ್ಮ ಕವಿತೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಚಿತ್ರಗಳು ಕವಿತೆಯೊಂದು ಸುಂದರ, ಕಲಾತ್ಮಕ ಕಾಲಾಕೃತಿಯಂತೆ ಕಾಣುವ ಹಾಗೆ ಮಾಡುತ್ತವೆ.

“ಸಂಸ್ಕಾರವೆಂಬ ಅತಿರೇಕದ ಆಯುಧ” ವನ್ನು ತಿರಸ್ಕರಿಸುತ್ತಲೇ ಅದರೊಂದಿಗಿದ್ದೂ ತನ್ನ ತನವನ್ನು ಸ್ಥಾಪಿಸಿಕೊಳ್ಳುವ “ಅವಳ” ಅಸ್ಮಿತೆ ಬೇಕಾದದ್ದು. ಇವುಗಳನ್ನು ಮಹಿಳಾವಾದಿ ಎನ್ನುವುದಕ್ಕಿಂತ ಎಲ್ಲ ಹೆಣ್ಣುಮಕ್ಕಳ ಆಂತರ್ಯ ಎನ್ನಬಹುದು. ಗಂಡು ತನ್ನ ಭಾವವನ್ನು ವ್ಯಕ್ತಪಡಿಸುತ್ತಾನಾದರೆ ಅಷ್ಟೇ ಸಹಜವಾದ ಅಭಿವ್ಯಕ್ತಿಯನ್ನು ಇಲ್ಲಿನ ಕವಿತೆಗಳಲ್ಲಿ ಗಮನಿಸಬಹುದು. ಒಂದರ್ಥದಲ್ಲಿ ವ್ಯವಸ್ಥೆಯನ್ನು, ಹೆಣ್ಣನ್ನು ನೋಡಲಾಗುವ ದೃಷ್ಟಿಯಲ್ಲಿನ ಮೂಲಭೂತವಾದಿತನವನ್ನೂ ತಣ್ಣಗೆ ವಿರೋಧಿಸುತ್ತವೆ ನಾಗರೇಖಾರ ಕವಿತೆಗಳು.

ಕಪ್ಪು ಬಿಳುಪಿನ ಚಿತ್ರಗಳೇ
ಎದೆಯ ಹಾಳೆಯ ಮೇಲೆ ಒತ್ತಡ ಹೇರಿ
ಅಲ್ಲಲ್ಲಿ ಮಸಕಾಗುತ್ತಾ
ಕೆಲವೊಮ್ಮೆ ಮುದುರಿಕೊಳ್ಳುತ್ತಾ
ತನ್ನಷ್ಟಕ್ಕೆ ಮರೆಯಾಗುತ್ತಾ ಹೋದರೂ
ಪಿಸುಗುಡುತ್ತವೆ ಆಗಾಗ
(ಬರ್ಫದ ಬೆಂಕಿ)

ಬಲೆ ಬೀಸಿದಷ್ಟು ತಪ್ಪಿಸಿಕೊಳ್ಳುವ
ತಿಮಿಂಗಿಲದ ಜಲಕ್ರೀಡೆಯ ತುಂಬಾ
ಅಲ್ಲಿ ಮೇನಕೆಯರು, ರತಿ ರಂಭೆಯರು
ಮತ್ಸ್ಯಕನ್ಯೆಯರ ಮಾದಕ ಲೋಕ
ತೆರೆದುಕೊಂಡರೂ
ಈಕೆ ಬರಿಯ ಹೆಣ್ಣು ಅಷ್ಟೇ
(ಬರ್ಫದ ಬೆಂಕಿ)

ಈಕೆ ಹೆಣ್ಣು ಎನ್ನುವುದು ಅಸ್ಮಿತೆಯ ಋಜುವಾತಾಗದೆ ಸಣ್ಣದೊಂದು ನಿಟ್ಟುಸಿರು ಹುಟ್ಟುವಂತೆ ಮಾಡಿಬಿಡುವುದು ಏನೆಲ್ಲಾ ಯೋಚಿಸುವಂತೆ, ಚಿಂತೆಗೆ ಬೀಳುವಂತೆ ಮಾಡಿಬಿಡುತ್ತದೆ. ಸೀತೆ ದ್ರೌಪದಿಯರಿಂದ ಹಿಡಿದು ಇಂದಿನ ಹೆಣ್ಣುಮಕ್ಕಳವರೆಗೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ ಎನ್ನುವುದು ನೋಯಿಸುತ್ತದೆ.

ಕೈಯಲ್ಲಿ ಕಡೆದಂತೆ ಜೀವನ, ಜೋಲಿಯಾಟದ ಜಗತ್ತು…. ಹೀಗೆ ಅವರ ಒಂದಷ್ಟು ಕವಿತೆಗಳನ್ನು ನೋಡುವಾಗ ಜೀವನದ ಬಗ್ಗೆ ಅವರಿಗೆ ಒಂದು ನಿರೀಕ್ಷೆ ಇದೆ, ಹಾಗೆಯೇ ಜೀವನದ ಬಗ್ಗೆ ಒಂದು ಅರಿವೂ ಇದೆ ಎನ್ನಿಸುತ್ತದೆ. ಇದು ಬಹಳ ಖುಷಿಯ ಸಂಗತಿ. ಕವಿಯಾದವನಿಗೆ ಇದು ಬೇಕು. ನಾಳಿನ ಭರವಸೆಯ ಜೊತೆಗೆ ಏನಾದರೂ ಸರಿ ಎದುರಿಸುವೆ ಎನ್ನುವ ಛಲ ಅದು.

ತೆಕ್ಕೆಯೊಳಗಿಳಿದ ಪದಗಳ
ಉಸಿರೊಳಗೆ ಬಚ್ಚಿಟ್ಟುಕೊಂಡೇ
ಕಾಯ್ದುಕೊಂಡೇ
ಹಾಡು ಹೆಣೆಯುವುದೆಂದರೆ
ರಾತ್ರಿಯಲ್ಲಿ ಹಗಲಿನ ಪಾಳಿ
(ರಾತ್ರಿಯಲ್ಲಿ ಹಗಲಿನ ಪಾಳಿ)

ಆಹಾ ಎಷ್ಟು ಚಂದದ ಸಾಲುಗಳು… ನಾಗರೇಖಾ ಅವರು ವೈವಿಧ್ಯಮಯ ಪದಗಳನ್ನು ಲಾಲಿತ್ಯಪೂರ್ಣವಾಗಿ ಬಳಸುವುದು ಬಹಳ ಇಷ್ಟವಾಗುತ್ತದೆ. ಮತ್ತೆ ಅವರ ರೂಪಕ ಕಟ್ಟುವ ಕಲೆಯೂ ಚಂದ. ಹಿಂದಿನಿಂದಲೂ ಬಳಸಿಕೊಂಡು ಬಂದ ರೂಪೋಪಮೆಗಳು ಇವರ ಕವಿತೆಗಳಲ್ಲಿ ಸ್ಪಷ್ಟ ಮೇಲ್ಪಂಕ್ತಿಗೇರುವುದನ್ನು ಕಾಣಬಹುದು.

ಆಗಲಿ ಬೇಕಾದರೆ ಒಲೆಯ
ನಮೂನೆ ಚಿಮಣಿ ತೊಟ್ಟು
ಧೂಮನಿವಾರಕ ಹೊತ್ತು
ಫ್ಯಾಶನ್ನಿನ ಓವನ್ ಆಗಿ
ಬದಲಾಗದೇ ಇರಲಿ ಉರಿಯ
ಒಡಲು ಅದೇ ಬೆಂಕಿ ಕಡಲು
(ಒಲೆಗಳು ಬದಲಾಗಿವೆ)

ನಿಜ ಇವತ್ತು ಉರಿಯ ಜೊತೆಗೆ ಒಲೆಯೂ ಬದಲಾಗಿದೆ. ಬದಲಾದ ಪರಿಕರಗಳ ಮೂಲಕ ಬದಲಾದ ಒಲೆಯ ಬಗ್ಗೆ ಮಾತನಾಡುವ ಕವಿತೆಗೆ ಉರಿ ತನ್ನ ವಸ್ತ್ರ ಬದಲಿಸಿದ್ದರೂ ಇಂದಿಗೂ ಅದರ ದೇಹ ಬದಲಾಗಿಲ್ಲ ಎನ್ನುವುದು ಗೊತ್ತು. ಒಲೆಯೂ ಸುಡುತ್ತದೆ ಇಂಡಕ್ಷನ್ ಸ್ಟೋವ್ ಕೂಡ ಸುಡುತ್ತದೆ. ಹೆಣ್ಣಿಗೆ ಒಲೆಯೊಂದಿಗಿರುವ ನಂಟಿನಷ್ಟೇ ಸುಡಿಸಿಕೊಳ್ಳುವುದೂ ಸಹ ಅವಳಿಗೆ ಹಳೆಯ ನಂಟೇ. ಸುಡಿಸಿಕೊಂಡೂ ತನ್ನವರಿಗಾಗಿ ಮಿಡಿವ ಅವಳ ಕೋಮಲ ಮನಸ್ಸೂ ಸಹ ಇಂದಿಗೂ ಹಾಗೇ ಇದೆ.

ನಾಗರೇಖಾರ ಹೇಂಟೆಯ ಕವಿತೆ, ಊರುಗೋಲಿನ ಸುತ್ತ, ಗೂಸಬಮ್ಸ್ ನಿರೀಕ್ಷೆಯಲ್ಲಿ, ಆತನ ಕದಪು ತಟ್ಟಿ ಮುತ್ತಿಕ್ಕಿದಾಗಲೆಲ್ಲಾ…. ಹೀಗೆ ಇನ್ನು ಹಲವಾರು ಕವಿತೆಗಳು ಓದಿ ಮುಗಿಸಿದ ಮೇಲೂ ಆಗಾಗ ನೆನಪಾಗಿ ಕಾಡುತ್ತವೆ.

ಕವಿತೆಯ ಧ್ಯಾನಕ್ಕೆ ಕೂತಿರುವ ಅವರ ಧ್ಯಾನ ಇನ್ನಷ್ಟು ಸ್ಫುಟಗೊಂಡರೆ ಅವರಿಂದ ಇನ್ನೂ ಅದ್ಭುತವಾದ ಕವಿತೆಗಳನ್ನು ನಾವು ನಿರೀಕ್ಷಿಸಬಹುದು. ಇಲ್ಲಿನ ಬಹುಪಾಲು ಕವಿತೆಗಳು ಈ ಮಾತನ್ನು ಒಪ್ಪುತ್ತವೆ. ಗಪದ್ಯಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿವೆಯಾದರೂ ಪದ್ಯವೇ ಆಗದಿರುವ ಗದ್ಯದ ತುಣುಕುಗಳು ಕಾವ್ಯದ ಭಾಗವಾಗಲಾರವು. ಅಥವಾ ಕಾವ್ಯವೆನ್ನುವ ಸಣ್ಣ ಭ್ರಮೆಯನ್ನು ಹುಟ್ಟಿಸುವಲ್ಲಿಯೂ ಸೋಲುತ್ತವೆ. ಈ ಒಂದು ಎಚ್ಚರಿಕೆ ಕವಿಗಿರಬೇಕಾಗುತ್ತದೆ. ಮತ್ತೆ ಪ್ರಯೋಗದ ದೃಷ್ಟಿಯಿಂದ ಬಳಸುವ ಗದ್ಯಕ್ಕೆ ಸೂಕ್ತವಾದ ಪದಗಳನ್ನು ಪದ್ಯಕ್ಕೆ ಬಳಸುವಾಗ ಪದ್ಯದ ಲಯಕ್ಕೆ, ಸೌಂದರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕಿರುತ್ತದೆ(ಕಾವ್ಯ ಎನ್ನುವುದೇ ಒಂದು ಭಾಷೆಯ ಸೌಂದರ್ಯ ಸಾಧನ ಹಾಗಾಗಿ…) ಮತ್ತು ಬಳಸುವ ರೂಪಕಗಳು ಆಶಯದ ಪಾತ್ರೆಯ ಆಕಾರವನ್ನು ಪಡೆದಾಗಲೇ ಸಾಕ್ಷಾತ್ ಸಾಕ್ಷಾತ್ಕಾರ… ಕವಿತೆಯ ಭೌತಿಕ ರೂಪವೂ(ಆಕೃತಿ ಮತ್ತು ಭಾಷೆ) ಸಹ ಕವಿತೆಯೊಂದರ ಮೂಲಭೂತ ಅವಶ್ಯಕತೆಯಾಗಿರುತ್ತದೆ. ಈ ಎಲ್ಲ ಎಚ್ಚರಿಕೆಯೂ ನಾಗರೇಖಾರಲ್ಲಿದೆ.

ಈ ಕೃತಿಗೆ ಸುಬ್ರಾಯ ಚೊಕ್ಕಾಡಿಯವರ ಚಂದದ ಮುನ್ನುಡಿ ಇದೆ. ಅವರದಾಗಲೇ ಇಲ್ಲಿನ ಕವಿತೆಗಳನ್ನು ಗಮನಾರ್ಹ ಎಂದು ಶರಾ ಬರೆದಿದ್ದಾರೆ.

ಈಗಾಗಲೇ ತಮ್ಮ ಕವಿತೆಗಳಿಂದ ಭರವಸೆ ಮೂಡಿಸಿರುವ ನಾಗರೇಖಾರವರ ಈ ಸಂಕಲನ ಕಾವ್ಯಮೋಹಿಗಳನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ಕನ್ನಡದ ಹೊಸ ತಲೆಮಾರಿನ ಕವಿತೆಗಳಾಗಿ ಇವುಗಳನ್ನು ಸ್ವಾಗತಿಸಬೇಕಿದೆ.

ಭೂಮಿಯ ಮೇಲಿನ ಜಲ ಚಕ್ರದಂತೆಯೇ ನಮ್ಮ ಬದುಕು ಮತ್ತು ಅದನ್ನು ಪ್ರತಿಫಲಿಸುವ ಕವಿತೆಯೂ… ಮತ್ತೆ ಮತ್ತೆ ಅದದೇ ಸತ್ವ, ಹುಟ್ಟಿ ಸತ್ತು ಮತ್ತೆ ಮತ್ತೆ ಹುಟ್ಟುಗಳ ಸಾವುಗಳ ಉಡುಗೆ ಬದಲಿಸುತ್ತಾ ಹರಿಯುತ್ತದೆ… ಹರಿವ ಕವಿತೆಯ ಆತ್ಮವಂತೂ ಸಾಗರ ಸೇರಿಬಿಡುತ್ತದೆ… ಒಂದೇ ಕ್ಷಣಕ್ಕೆ ಅಗಾಧವೂ ಶೂನ್ಯವೂ ಒಂದೇ ಆಗಿಬಿಡುತ್ತವೆ. ಆದರೆ ಎಷ್ಟು ಚಂದದ ಉಡುಗೆ ನಾವು ಹೊಲೆಯುತ್ತೇವೆ.. ಯಾವ ಉಡುಗೆ ನಮ್ಮಿಂದ ರೂಪ ಪಡೆಯುತ್ತದೆ ಎನ್ನುವುದಷ್ಟೇ ನಮ್ಮ ಪರಿಧಿಯೊಳಗಿನ ಸತ್ಯ..